ಲೈಫ್ ಸ್ಟೈಲ್
ಪ್ರವಾಸ ಕಥನ | ಗೋಕಾಕ್ ನಲ್ಲೊಂದು ಸುತ್ತು..!
Õಪ್ರವಾಸ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಮಗುವಿನಿಂದ ಹಿಡಿದು ಮುದುಕರವರೆಗೆ ಎಲ್ಲರೂ ಪ್ರವಾಸವನ್ನು ಆನಂದಿಸುವವರೇ ಹೆಚ್ಚು. ಅದರಲ್ಲೂ ನಾನು ಒಬ್ಳು ಪ್ರವಾಸ ಪ್ರೇಮಿ. ಪ್ರವಾಸ ಕಥನಗಳೆಂದರೆ ಅಚ್ಚುಮೆಚ್ಚು. ಹಾಗಂತ ನಾ ಏನು ಹೆಚ್ಚು ಪ್ರವಾಸ ಮಾಡಿಲ್ಲ. ನನಗೆ ಪ್ರಕೃತಿಯ ಸೊಬಗು ಹಾಗೂ ಹಳ್ಳಿಯ ಸೊಬಗನ್ನು ಸಂಪೂರ್ಣವಾಗಿ ಅನುಭವಿಸ್ಬೇಕು ಎಂಬ ಮಹಾದಾಸೆ. ನಾ ಹೋಗುವ ಪ್ರವಾಸಕ್ಕೆ ಇಂಥದ್ದೇ ಜಾಗವಾಗಬೇಕು ಎಂಬ ಅಭಿಲಾಶೆ ಏನಿಲ್ಲ. ಬಂಧುಗಳ ಮನೆಗಳನ್ನ ಹೊರತು ಪಡಿಸಿ ಕಾಡಿನ ಬುಡಕಟ್ಟು ಜನಾಂಗ, ಶೋಷಿತರ, ದಲಿತರ ಮನೆಗಳಿಗೆ ಹೋಗಿ ಅವರ ಜೀವನವನ್ನು ಗಮನಿಸುವುದರಲ್ಲಿ ನನಗದು ಹೆಚ್ಚು ಖುಷಿ.
ಆದರೆ ನಗರ ವಾಸಿಯಾದ ನನಗೆ ಹಳ್ಳಿಯ ಸೊಬಗನಾಗಲಿ ಪ್ರಕೃತಿಯ ಸೊಬಗನ್ನಾಗಲಿ ಅನುಭವಿಸುವುದಕ್ಕೆ ಅವಕಾಶಗಳು ದೊರೆಯಲೇ ಇಲ್ಲ. ಪುಸ್ತಕ ಪ್ರೇಮಿಯಾದ ನನಗೆ ಹಳ್ಳಿಯ ವಾತಾವರಣ, ಬಡವರ ಬವಣೆ, ಶೋಷಿತರ ಜೀವನದ ಕುರಿತ ಕಲ್ಪನೆಗಳು ನನಗಿವೆ. ಹೀಗಿರುವಾಗ ನಾನು ವಿಮಾನದಲ್ಲಿ ಹಾರುವುದು ಬಿಡಿ ಅದನ್ನ ಹತ್ತಿರದಿಂದಲೂ ಒಮ್ಮೆಯೂ ನೋಡಿಲ್ಲ; ವೋಲ್ವೋ ಬಸ್ಸಲ್ಲೂ ಕೂತಿಲ್ಲ. ಸ್ಲೀಪಿಂಗ್ ಕೋಚ್ ಬಸ್ಸಿನ ಮೆತ್ತನೆ ಹಾಸಿಗೆಯಲ್ಲೂ ನಿದ್ರಾ ಸುಖ ಅನುಭವಿಸಿಲ್ಲ. ಆದರೆ ಸಾಕಷ್ಟು ಬಾರಿ ರೈಲು ಪ್ರಯಾಣ ಮಾಡಿದ್ದೇನೆ ಅಷ್ಟೇ.
ಅಂತದ್ದೇ ಒಂದು ರೈಲು ಪ್ರಯಾಣ ಮತ್ತೊಮ್ಮೆ ದೊರಕಿತು. ಇಲ್ಲಿಯವರೆಗೂ ಅಪ್ಪ ಅಮ್ಮನನ್ನು ಬಿಟ್ಟು ದೂರದೂರಿಗೆ ಎಲ್ಲಿಯೂ ಹೋಗದ ನಾನು ಮೊದಲ ಬಾರಿಗೆ ಸ್ನೇಹಿತರೊಡನೆ ಕೂಡಿ ಗೋಕಾಕ್ ಕಡೆ ಪ್ರವಾಸ ಹೋಗುತ್ತಿರುವುದು ಮನಸಿಗೆ ಹೆಚ್ಚು ಖುಷಿ ನೀಡಿತು. ಕಾಯುತ್ತಿದ್ದ ಆ ದಿನವೂ ಬಂತು. ಅಪ್ಪ ಅಮ್ಮನಿಗೆ ಟಾಟಾ ಹೇಳಿ ಆಶೀರ್ವಾದವನ್ನು ಪಡೆದುಕೊಂಡು ಮಧ್ಯರಾತ್ರಿ 1.30ಕ್ಕೆ 7 ಜನರ ತಂಡ ಮನೆ ಬಿಟ್ಟೆವೂ. ಅದರಲ್ಲಿ ಶರತ್,ಶಿವರಾಜ್, ಚಂದ್ರಶೇಖರ್ ದೊಡ್ಡಮನಿ, ಗುರುಸ್ವಾಮಿ, ಗೌತಮಿ ಸೇರಿದಂತೆ ಇವರೆಲ್ಲಾ ನನ್ನ ಸೀನಿಯರ್ಸ್ ಆಗಿದ್ದರು. ವಿಶೇಷ ಅಂದ್ರೆ ನಮ್ಮೊಂದಿಗೆ ನನ್ನ ತಂಗಿ ಯುಗಶ್ರೀಯು ಬಂದಿದ್ದಳು. ಟ್ರೈನ್ ತುಂಬಾ ರೆಷ್ ಆಗಿದ್ದರಿಂದ ನಮಗೆ ಕುಳಿತುಕೊಳ್ಳಲು ಸ್ಥಳ ಸಿಗಲಿಲ್ಲ. ಕೊನೆಯ ಭೋಗಿಯಲ್ಲಿ ಸ್ಥಳ ಸಿಕ್ಕಿತು. ಇನ್ನೆನ್ನೂ ನಿದ್ದೆ ಜೋಂಪಿಗೆ ಹೋದ ನಮಗೆ ಯಾರೋ ಬಂದು ಹೊಡೆದು ಎಬ್ಬಿಸಿದ ಹಾಗಾಯ್ತು. ಕಣ್ಣು ಬಿಟ್ಟು ನೋಡಿದರೆ ನಾವು ಹುಬ್ಬಳ್ಳಿಯಲ್ಲಿ ಇದ್ದೆವು.
ರೈಲು ತನ್ನ ಕೊನೆ ಭೋಗಿಯನ್ನ ಕಳಚುವುದರ ಪರಿಣಾಮ ಆ ಭೋಗಿಯನ್ನು ಬಿಟ್ಟು ಬೇರೆಯ ಕಡೆ ಹೋಗಬೇಕಾಯ್ತು ಆದರೆ ಕುಳಿತುಕೊಳ್ಳಲು ಸ್ಥಳ ಸಿಗದೆ ಹೇಗೋ ನಾವು ಮುಂಜಾನೆ 10 ಗಂಟೆಗೆ ಗೋಕಾಕ್ ಸ್ಥಳಕ್ಕೆ ಬಂದಿಳಿದ್ದೆವು. ಕರ್ನಾಟಕದ ಹಲವೆಡೆ ಓಡಾಡಿದ್ದರೂ ಬೆಳಗಾವಿ ಜಿಲ್ಲೆಗೆ ಬಂದದ್ದು ಇದೇ ಮೊದಲು. ಬೆಳಗಾವಿ ಜಿಲ್ಲೆಯಲ್ಲಿ ಎರಡನೇ ಅತೀ ದೊಡ್ಡ ನಗರವಾದ ಗೋಕಾಕ್ ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿದೆ. ಹಚ್ಚ ಹಸಿರು ವಾತಾವರಣ ಹಾಗೂ ಏಸಿಯ ಹಾಗೆ ಸದಾ ಕೂಲ್ ಅಗಿರುವಂತಹ ಸ್ಥಳಕ್ಕೆ ನಮ್ಮನ್ನ ನಾವು ಮೈಗೂಡಿಸಿಕೊಂಡು ನಡೆಯಲಾರಂಭಿಸಿದೇವು.ಗೋಕಾಕ್‍ದಲ್ಲಿಯೂ ಹಳದಿ ಕೆಂಪು ತೋರಣಗಳು, ಬಾವುಟಗಳು ನಮಗೆ ಸ್ವಾಗತ ಕೋರಿದವು.
ತುಂಬಾ ಹಸಿದಿದ್ದ ನಾವು ಅಲ್ಲೇ ಒಂದು ಅಂಗಡಿಯಲ್ಲಿ ಮೆಣಸಿನಕಾಯಿ ಬಜ್ಜಿ, ಪೂರಿ, ಪಲಾವ್ ತಿಂದು ಟೀ ಕುಡಿದು ಗೋಕಾಕ್ ಅರಬ್ಬಿಯ ಕಡೆಗೆ ನಡೆದೆವು. ನಮ್ಮ ರಾಜ್ಯ ಜಲಪಾತಗಳ ತವರೂರು. ಸಿರಿ ಸೌಂದರ್ಯದ ರುದ್ರರಮಣೀಯ ಖಣಜಗಳು ಎಂದರೆ ಇಲ್ಲಿನ ಫಾಲ್ಸ್. ನಿಸರ್ಗ ಪ್ರಿಯರ ಆಕರ್ಷಣಿಯ ಕೇಂದ್ರ ಬಿಂದುವೂ ಹೌದು. ಪ್ರಕೃತಿಯ ಸುಂದರ ತಾಣಗಳಲ್ಲಿ ಒಂದಾದ ಹಾಗೂ ಮಳೆಗಾಲದಲ್ಲಿ ಮೈದುಂಬಿ ಹರಿಯುವುದು ಗೋಕಾಕ್ ಜಲಪಾತದ ವಿಶೇಷ. ಮಳೆಗಾಲ ಇದೀಗ ಪ್ರಾರಂಭವಾದರಿಂದ ನೀರು ತೀರಾ ಕಡಿಮೆ ಇತ್ತು.
ಗೋಕಾಕ್ ಜಲಪಾತವನ್ನು ಪ್ರವೇಶಿಸುತ್ತಿದ್ದಾಗೆ ನಮ್ಮ ಕಣ್ಣಿಗೆ ಕಂಡದ್ದು ಹಳೆಕಾಲದ ಕಾಟನ್ ಮಿಲ್ ಅದು ನೋಡುವುದ್ದಕ್ಕೆ ಡಿಟೋ ಇಂಡಿಯನ್ ಆಕ್ಸ್‍ಫಾರ್ಡ್ ವಿಶ್ವವಿದ್ಯಾನಿಲಯದ ತರನೆ ಇತ್ತು. ಅಲ್ಲಿಂದ ಕೆಳಗಿಳಿದು ಹೋದರೆ ನಮ್ಮ ಕಣ್ಣಿಗೆ ಕಾಣಸಿಗುವುದು ತೂಗು ಸೇತುವೆ.
ಅಪರೂಪದ ತೂಗು ಸೇತುವೆ
ಪೂರ್ವಭಿಮುಖವಾಗಿ ಹರಿಯುವ ಘಟಪ್ರಭೆಗೆ, ದಕ್ಷಿಣೋತ್ತರವಾಗಿ ತಂತಿಯ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಅಪರೂಪದ ತೂಗುವ ತಂತಿಯ ಸೇತುವೆ ಕರ್ನಾಟಕದಲ್ಲಿ ಬೇರಾವ ನದಿಗೂ ನಿರ್ಮಿಸಿಲ್ಲ. ಇದರ ಮೇಲೆ ನಿಂತು ನದಿಯ ಅಂದವನ್ನು ವೀಕ್ಷಿಸುವುದೇ ಒಂದು ಭಾಗ್ಯ. ಈ ಸೇತುವೆಯ ಮೇಲೆ ನಡೆದಾಡುವುದರೊಂದಿಗೆ ಪುಳಕಗೊಳ್ಳುವ ಅವಕಾಶ ಇರುವುದು ಗೋಕಾಕ್ ಜಲಪಾತದಲ್ಲಿ ಮಾತ್ರ.
1 ಮೀ ಅಗಲ, 210ಮೀ (659 ಅಡಿ) ಉದ್ದವಿರುವ ಅಪರೂಪದ ಈ ತಂತಿ ಸೇತುವೆ ಅದ್ಭುತವಾಗಿದೆ. ನದಿಯ ಒಂದು ದಂಡೆಯಿಂದ ಇನ್ನೊಂದು ದಂಡೆಗೆ ಕಾಲ್ನಡಿಗೆಯಲ್ಲಿ ತಲುಪಲು ಈ ತೂಗುಸೇತುವೆ ಸರಳ ದಾರಿಯಾಗಿದೆ. ನದಿಯ ಕಲ್ಲುಬಂಡೆ ಹಾಸಿಗೆಯಿಂದ 14ಮೀ (46 ಅಡಿ) ಎತ್ತರದಲ್ಲಿ ಈ ತೂಗು ಸೇತುವೆ ನಿರ್ಮಿಸಲಾಗಿದ್ದು, ನದಿಯಲ್ಲಿ ಭರ್ತಿ ನೀರು ಬಂದಾಗ ಸೇತುವೆ ಮೇಲಿಂದ ಅಡ್ಡಾಡುವುದೇ ಒಂದು ರಸಘಳಿಗೆ. ಇದರ ಮೇಲೆ ಚಲಿಸುವಾಗ ಹೊಸಬರಾದ ನಮಗೆ ಭಯವಾದದ್ದು ಸಹಜ. ಕೆಳಗೆ ರಭಸದಿಂದ ಹರಿಯುವ ಕತ್ತಿ(ನೀರು ಅತ್ಯಂತ ರಭಸವಾಗಿ ಹರಿಯುವುದರಿಂದ ಕತ್ತಿ ನದಿಯೆಂಬ ಹೆಸರು ಬಂದಿದೆ) ನದಿಯ ಮೇಲಿನ ನಾವೆಯಲ್ಲಿ ಕುಳಿತು ಪ್ರಯಾಣಿಸಿದ ಅನುಭವವಾಗುತ್ತದೆ.
ಇಂತಹ ಸೇತುವೆ ಮೇಲೆ ನಡೆದಾಡುವುದೇ ಒಂದು ಥ್ರಿಲ್. ಇದರ ಮೇಲೆ ನಡೆದುಕೊಂಡು ಹೋಗುವಾಗ ವಾಯುದೇವನೂ ಕೂಡಾ ಒಂದು ಕ್ಷಣ ಎಂತಹ ಮನಸುಗಳಲ್ಲೂ ಭಯದ ವಾತವರಣವನ್ನು ಸೃಷ್ಟಿಸಿಬಿಡುತ್ತಾನೆ. ರಭಸವಾಗಿ ಗಾಳಿ ಬೀಸಿದರೆ ಸಾಕು ಆಯ ತಪ್ಪಿ ಎಲ್ಲಿ ನಾವೇ ಗಾಳಿಯೊಂದಿಗೆ ತೇಲಿಹೋಗುತ್ತೇವೆಯೋ ಎಂಬ ಭಯದಲ್ಲೊಮ್ಮೆ ಚಿಟಾರನೆ ಚಿರುವುಂತಹ ಘಳಿಗೆ ರಸದೌತಣವಾಗಿರುತ್ತದೆ. ಕತ್ತಿಹೊಳೆಯೆಂದೆ ಖ್ಯಾತಿಪಡೆದ ಘಟಪ್ರಭೆ ಬೆಳಗಾವಿ ಜಿಲ್ಲೆಯಲ್ಲಿ ಎರಡನೇ ಅತೀ ದೊಡ್ಡ ನಗರವಾಗಿದ್ದು ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿದೆ. ಘಟಪ್ರಭಾ ನದಿಗೆ ಕತ್ತಿಹೊಳೆ ಎಂದು ಕರೆಯುತ್ತಾರೆ. ತಾಮ್ರಪರ್ಣಿ ಮತ್ತು ಹಿರಣ್ಯಕೇಶಿ ನದಿಗಳು ಘಟಪ್ರಭೆಯನ್ನು ಸೇರುತ್ತವೆ. ಮಳೆಗಾಲದಲ್ಲಿ ಕಾಫಿ ಚಹಾ ವರ್ಣಕ್ಕೆ ತಿರುಗುತ್ತವೆ. ಶ್ವೇತವರ್ಣದಲ್ಲು ತಿಳಿಗೊಂಡು ಹಾಲಿನಂತೆ ನೊರೆ ನೊರೆಯಾಗಿ ಹರಿಯುತ್ತದೆ. ಇದರ ಸೊಬಗನ್ನು ನೋಡಲು ಕಣ್ಣೆರಡು ಸಾಲದು. ನೀರಿನ ರಭಸ, ಹಾಲ್ನೊರೆಯಂತಹ ಬಣ್ಣ, ಗಂಭೀರವಾದಂತಹ ಸದ್ದು, ಹತ್ತಿರದ ಸ್ಥಳಗಳಲ್ಲಿ ತಂಪಾದ ನೀರಿನ ಚಿಕ್ಕ ಚಿಕ್ಕ ಹನಿಗಳ ಸಿಂಚನ ಇವೆಲ್ಲವೂ ಸೇರಿ ನಮ್ಮ ಮನದಲ್ಲಿ ರೋಮಾಂಚನದೊಂದಿಗೆ ತಾಜತನದ ಅನುಭವವನ್ನು ನೀಡುತ್ತಿತ್ತು.
ಇದರ ಸುಂದರತೆ ಮತ್ತು ರಮಣೀಯತೆಯನ್ನು ಅತೀ ಸಮೀಪದಿಂದ ಸವಿಯುವಂತಹ ವಾತವರಣವಿದ್ದು, ಧಬಧಬ ಧರೆಗಿಳಿಯುವ ಭಯಂಕರ ಪ್ರವಾಹದಂತೆ ಘಟಪ್ರಭೆ 84 ಅಡಿ ಎತ್ತರದಿಂದ ಧುಮ್ಮಿಕ್ಕುವ ದೃಶ್ಯವನ್ನು ನೋಡಿಯೇ ಸವಿಯಬಹುದು. ಘಟಪ್ರಭೆ ಭಾರಿ ರಭಸದಿಂದ ಪ್ರಪಾತಕ್ಕೆ ಧುಮುಕುವಾಗ, ಸಿಡಿ ಮದ್ದು ಸಿಡಿದಂತೆ ನೀರು ಝಲ್ಲೆಂದು ಪುಟಿದೇಳುತ್ತದೆ. ಪ್ರಕೃತಿಯ ಆ ಅಗಾಧ ಸೌಂದರ್ಯವನ್ನು ಕಣ್ಣಿಂದ ಕಾಣಬೇಕು ಮತ್ತು ಇಂಪಾದ ಸದ್ದನ್ನು ಕಿವಿಂದ ಆಲಿಸಬೇಕು. ಪ್ರವಾಹದಂತೆ ಧುಮುಕುವ ಘಟಪ್ರಭೆ ನಂತರ ಮಂದಗಮನೆಯಾಗಿ ಮೆಲ್ಲನೆ ಚಲಿಸುವ ಈಕೆಯ ಸೌಂದರ್ಯ ನೋಡುವುದೇ ಸಂಭ್ರಮ.
ಭಾರತದ ನಯಾಗರ ಫಾಲ್ಸ್ ಎಂಬ ಹೆಗ್ಗಳಿಕೆ
ಘಟಪ್ರಭೆಯ ಸುತ್ತಲೂ ಎಲ್ಲಿ ನೋಡಿದರೂ ಹಚ್ಚ ಹಸಿರು. ಬೆಟ್ಟ ಗುಡ್ಡಗಳದ್ದೇ ಕಾರುಬಾರು.
ಇಲ್ಲಿಗೆ ಬರುವ ಪ್ರವಾಸಿಗರನ್ನು ಹಸಿರು ದೇವತೆ ಪ್ರೀತಿಸುವ ಬಗೆಯನ್ನು ಕಂಡು ಇಲ್ಲಿಂದ ಹೊರಡಲು ಮನಸ್ಸಾಗದಷ್ಟು ರಮಣೀಯತೆ ಇಲ್ಲಿದೆ. ನಿಸರ್ಗದ ಸಂಧರತೆಯನ್ನು ಸವಿಯುವುದರೊಂದಿಗೆ ಇಲ್ಲಿ ಐತಿಹಾಸಿಕ ಮಹಾಲಿಂಗೇಶ್ವರನ ದೇವಾಲಯವಿದೆ.
177 ಮೀಟರ್ (581 ಅಡಿ) ಅಗಲದ ಬಂಡೆಗಳಲ್ಲಿ ಮೇಲಿಂದ 52 ಮೀಟರ್ (171 ಅಡಿ) ಆಳದ ಕಂದಕಕ್ಕೆ ಘಟಪ್ರಭಾ ನದಿಯ ನೀರು ಧುಮ್ಮಿಕ್ಕುವುದು ಗೋಕಾಕ್ ಜಲಪಾತದ ವೈಶಿಷ್ಟ್ಯ. ವಿಶಾಲ ಬಂಡೆಗಲ್ಲಿನ ಮೇಲಿಂದ ನೀರು ಧುಮ್ಮಿಕ್ಕುವುದರಿಂದ ಈ ಜಲಪಾತವನ್ನು “ಮಿನಿ ನಯಾಗರಾ” ಎಂದು ಕರೆಯಲಾಗುತ್ತದೆ.
ಮೊದಲ ಬಾರಿಗೆ ವಿದ್ಯುತ್ ಉತ್ಪಾದಿಸಿದ ಕೇಂದ್ರ
ನೀರು ಧುಮ್ಮಿಕ್ಕುವ ಕಂದಕದ ಬಳಿ ಇರುವ ವಿದ್ಯುತ್ ಉತ್ಪಾದನೆ ಕೇಂದ್ರವನ್ನು ಬ್ರಿಟೀಷ್ ಕಾಲದಲ್ಲೇ ನಿರ್ಮಿಸಲಾಗಿದೆ. 1887ರಲ್ಲಿ ಕಾರ್ಯರಂಭ ಮಾಡಿದ್ದು, ರಾಜ್ಯದಲ್ಲೇ ಮೊದಲ ಬಾರಿ ವಿದ್ಯುತ್ ಉತ್ಪಾದಿಸಿದ ಕೇಂದ್ರ ಎಂಬ ಹೆಗ್ಗಳಿಕೆ ಪಡೆದಿದೆ. ತದನಂತರ ಬೆಂಗಳೂರಿನಲ್ಲಿ ಆರಂಭಿಸಲಾಯಿತು.ಮಹಾಲಿಂಗೇಶ್ವರ ದೇವಾಸ್ಥಾನ ಇನ್ನೂ ಈ ಸ್ಥಳದ ಕುತೂಹಲಕಾರಿ ಅಂಶವೆಂದರೆ ಚಾಲುಕ್ಯರ ಕಾಲಕ್ಕೆ ಸೇರಿದ ಸ್ಮಾರಕಗಳು ಇಲ್ಲಿನ ಕಲ್ಲಿನ ಕಣಿವೆಯ ಎರಡೂ ದಂಡೆಗಳಲ್ಲಿ ದೊರೆತಿರುವುದು. ಈ ಸ್ಥಳದ ಮತ್ತೊಂದು ಆಕರ್ಷಣೆ ಎಂದರೆ ಚಾಲುಕ್ಯ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಮಹಾಲಿಂಗೇಶ್ವರನ ದೇವಾಸ್ಥಾನ.
ಟ್ರೆಕ್ಕಿಂಗ್ ಗೆ ಹೇಳಿಮಾಡಿಸಿದ ಸ್ಥಳ
ಗೋಕಾಕ್ ಫಾಲ್ಸ್ ಧುಮ್ಮಿಕ್ಕುವುದ್ದನ್ನು ಕೆಳಗಿನಿಂದ ನೋಡಬೇಕೆಂದರೆ ಸುಮಾರು 2 ರಿಂದ 3 ಕಿ.ಮೀ ಕೆಳಗೆ ನಡೆದುಹೋಗಬೇಕು. ಕರ್ನಾಟಕದ ಕರಾವಳಿ ಮತ್ತು ಮಲೆನಾಡಲ್ಲಿ ಧೋ ಧೋ ಎಂದು ಮಳೆಯಾಗಿ ಒಂದು ಹಂತಕ್ಕೆ ಬಂದು ನಿಂತ ಮೇಲೆ ಟ್ರೆಕ್ಕಿಂಗ್‍ಗೆ ಅಣಿಯಾಗುವಂತಹ ಸಾಹಸಿಗರಿಗೆ ಗೋಕಾಕ್ ಜಲಪಾತ ಹೇಳಿಮಾಡಿಸಿದಂತಹ ಸ್ಥಳವಾಗಿದೆ. ಇಲ್ಲಿ ನಡೆಯುತ್ತ ಹೋದರೆ ಡಿಟೋ 6-5=2 ಮೂವೀಯಲ್ಲಿ ಇರುವಂತಹ ಟ್ರೆಕ್ಕಿಂಗ್‍ನ ಅನುಭವ ನೀಡುತ್ತದೆ. ಆದರೆ ಅಲ್ಲಿ ದೆವ್ವ ಇರುತ್ತೆ ಇಲ್ಲಿ ನಾವೇ ದೆವ್ವಗಳಾಗಿರುತ್ತವೆ. ದೊಡ್ಡ ದೊಡ್ಡ ಬಂಡೆಗಳು, ಜಾರುವಂತಹ ಕಲ್ಲುಗಳು, ತೊರೆಗಳು, ಗಿಡ ಮರಗಳು, ನಮ್ಮ ಧ್ವನಿ ನಮಗೆ ಪಿಸುಗುಡುವಂತಹ ನಿಶಬ್ಧ ವಾತವರಣ ಹೀಗೆ ಇವೆಲ್ಲಾ ಸೇರಿ ಎಂತಹವರಿಗೂ ಪ್ರಕೃತಿ ಮೇಲೆ ಲವ್ ಆಗಿಬಿಡುತ್ತದೆ.
ಗೋಕಾಕ್ ಸ್ಪೇಷಲ್ ಕರದಂಟು
ಗೋಕಾಕ್ ಬಗ್ಗೆ ಇಷ್ಟೇಲ್ಲಾ ಹೇಳಿ ಕರದಂಟನ್ನು ಮರೆಯಲು ಸಾಧ್ಯವೇ? ಬೆಳಗಾವಿಯತ್ತ ಪ್ರಯಾಣ ಬೆಳೆಸಿದರೆ ಅಲ್ಲಿಯ ಕುಂದ ಹಾಗೂ ಗೋಕಾಕ್‍ನ ಕರದಂಟು ಅಥವಾ ಅಂಟುಹುಂಡೆಯನ್ನು ಸವಿಯದೆ ಬಂದವರೆ ಇಲ್ಲ. ಅಂಟು ಹಾಕಿ ತಯಾರಿಸುವ ಈ ಉಂಡೆಯನ್ನು ಕರ(ಕೈ)ದಲ್ಲಿ ಉಂಡೆ ಕಟ್ಟುವುದರಿಂದ ಈ ಹೆಸರು ಬಂದಿರಲೂಬಹುದು ಅಲ್ವಾ? ಅದೇನೆ ಇರಲಿ, ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಕೊಬ್ಬರಿ ತುರಿ, ಗಸಗಸೆ, ಅಂಟು, ಬೆಲ್ಲ, ತುಪ್ಪ ಹೀಗೆ ಇವೆಲ್ಲವನ್ನು ಹಾಕಿ ಮಾಡಿದಂತಹ ಕರದಂಟು ಆರೋಗ್ಯಕರವಾದಂತಹ ತಿನಿಸಾಗಿದೆ. ಈ ಗಿರಮಿಟ್ ಜತೆ ಗೋಕಾಕ್‍ನ ಕರದಂಟನ್ನು ಮೆಲ್ಲುತ್ತ ಭೋರ್ಗರೆಯುವ ಜಲಪಾತ ನೋಡುತ್ತಿದ್ದಾರೆ ನಮ್ಮ ಕಣ್ಣಿಗೆ ಹಬ್ಬವಾಗುವುದರೊಂದಿಗೆ ಬಾಯಿಗೆ ಸಿಹಿಯೂ ಆಗುವುದರಲ್ಲಿ ಸಂಶಯವೇ ಇಲ್ಲ!
ಪ್ರವಾಸಿಗರ ತಾಣ
ನೋಡುಗರ ಆಕರ್ಷಣೀಯ ಕೇಂದ್ರ ಬಿಂದುವಾದ ಗೋಕಾಕ್ ಫಾಲ್ಸ್ ಅನ್ನು ನೋಡಲು ಪಕ್ಕದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ದೂರದೂರದ ಊರಿಂದ ಪ್ರವಾಸಿಗರು ಈ ಸೌಂದರ್ಯವನ್ನು ಸವಿಯಲು ಬರುತ್ತಾರೆ. ಸೆಲ್ಫೀ, ಫೋಟೋ ತೆಗೆಸಿಕೊಳ್ಳುವುದರೊಂದಿಗೆ ಬೆಟ್ಟದ ಇಕ್ಕೆಲ್ಲಗಳಲ್ಲಿ ಜೋಡಿಸಿರುವ ತೂಗು ಸೇತುವೆಯಲ್ಲಿ ಕೇಕೆ ಹೊಡೆದು ಕುಣಿದು ಕುಪ್ಪಳಿಸುತ್ತಾರೆ. ಒಟ್ಟಾರೆಯಾಗಿ ಈ ಸಮಯವೂ ಪ್ರವಾಸಿಗರಿಗೆ ಪ್ರವಾಸ ಮಾಡಲು ಹೇಳಿಮಾಡಿಸಿದಂತಹ ಸ್ಥಳವಾಗಿದೆ.
ಮಾರ್ಗ
ಗೋಕಾಕ್ ಜಲಪಾತ ಬೆಳಗಾವಿಯಿಂದ 58 ಕಿ.ಮೀ. ಹಾಗೂ ಗೋಕಾಕ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿದೆ. ಈ ಜಲಪಾತ ಕೊಲ್ಲಾಪುರದಿಂದ 100 ಕಿ.ಮೀ., ಸಾಂಗ್ಲಿಯಿಂದ 66 ಕಿ.ಮೀ ಪಣಜಿಯಿಂದ 140 ಕಿ.ಮೀ ದೂರದಲ್ಲಿದೆ. ಗೋಕಾಕ್ ರೋಡ್ ಮತ್ತು ಘಟಪ್ರಭಾ ರೈಲ್ವೆ ನಿಲ್ದಾಣಗಳು ಜಲಪಾತದಿಂದ 10 ಕಿ.ಮೀ ಅಂತರದಲ್ಲಿದೆ. ಬೆಳಗಾವಿ, ಗೋಕಾಕ್ ಮತ್ತು ನಗರ ಪ್ರದೇಶಗಳಿಂದ ಜಲಪಾತಕ್ಕೆ ಸಾರಿಗೆ ಸಂಸ್ಥೆಯ ಬಸ್ ಸೌಕರ್ಯ ಇದೆ. ಖಾಸಾಗಿ ವಾಹನಗಳ ಮೂಲಕವೂ ಗೋಕಾಕ್ ಜಲಪಾತದ ಸ್ಥಳ ತಲುಪಬಹುದು.
–ಪ್ರೀತಿ.ಟಿ.ಎಸ್
ಪತ್ರಿಕೋದ್ಯಮ ವಿದ್ಯಾರ್ಥಿನಿ
3ನೇ ಸೆಮಿಸ್ಟರ್
ದಾವಣಗೆರೆ ವಿಶ್ವವಿದ್ಯಾನಿಲಯ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
~ಗೋವರ್ಧನ ನವಿಲೇಹಾಳು
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.
ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ; ಎಚ್ಚರಿಕೆಯೂ ಹೌದು.
ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.
ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.
ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.
ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.
ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.
ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ
ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.
ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.
ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.
ಸುದ್ದಿದಿನ | ವಾಟ್ಸಾಪ್ | 9980346243

ದಿನದ ಸುದ್ದಿ
ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ನಾಲೆಯುದ್ದಕ್ಕೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಅನಧಿಕೃತವಾಗಿ ನೀರು ಎತ್ತುವವರ ಮೋಟಾರ್‌ಗಳನ್ನು ವಶಪಡಿಸಿಕೊಳ್ಳಲಾಗುವುದು.
ಪ್ರಿಪೇಯ್ಡ್ ಆಟೋಗಳನ್ನು ಚಾಲ್ತಿಗೊಳಿಸಿದ್ದು, ಇದಕ್ಕೆ ರೂ.38/-ಶುಲ್ಕ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ3 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ4 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ಅಂಕಣ2 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ4 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ2 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ2 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

