ದಿನದ ಸುದ್ದಿ
ಆತ್ಮಕತೆ | ಹಿಂದಿರುಗಿ ನೋಡುತ್ತಾಽ……
- ರುದ್ರಪ್ಪ ಹನಗವಾಡಿ
ನಮ್ಮೂರು ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮ. ಈಗ ಸುಮಾರು 5000 ಜನಸಂಖ್ಯೆ ಇದ್ದು, ಲಿಂಗಾಯತರು, ಕುರುಬರು, ಬಾರಿಕರು, ತಳವಾರರು, ಬೋವಿಗಳು, ಚಲುವಾದಿಗಳು, ಮಾದಿಗರು ಹಾಗೂ ಮುಸ್ಲಿಮರು ಇದ್ದಾರೆ.
ಲಿಂಗಾಯತರೇ ಬಹುಸಂಖ್ಯಾತರಿರುವ ಈ ಊರಿನಲ್ಲಿ ವೀರಭದ್ರ ದೇವರು, ಹನುಮಂತ ದೇವರು ಮತ್ತು ಗುರಪ್ಪ ದೇವರ ಗುಡಿಗಳು ಇವೆ. ಊರಿಂದಾಚೆ ಉಡಸಲಾಂಭಿಕೆ ಮತ್ತು ಬೇವಿನ ಮರದ ಹತ್ತಿರ ತುಂಬಿದ ಕುಡಿಕೆ ಇಟ್ಟು ಪೂಜಿಸುವ ಹಲವಾರು ದೇವರಿಗೆ `ಅಜ್ಜಿ’, `ಅಜ್ಜಿ ಹಬ್ಬ’ದ ದೇವರು ಎಂದು ಕರೆಯುತ್ತಿದ್ದುದು ನೆನಪು.
ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ವೀರಭದ್ರ ದೇವರ ರಥೋತ್ಸವ. ಆಗ ಊರವರೆಲ್ಲ ತಮ್ಮ ಬಂಧು-ಬಳಗದವರನ್ನೆಲ್ಲಾ ಕರೆದು ಎರಡು ಮೂರು ದಿನಗಳು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ದಿನಗಳಲ್ಲಿ ಪ್ರತಿ ಜಾತಿಕರೂ ತಮ್ಮತಮ್ಮ ಕೆಲಸ ಅಂದರೆ ಚಲುವಾದಿಗಳು ಮ್ಯಾಳ ಮಾಡುವುದು, ಅಗಸರು ಮಡಿ ಹಾಸುವುದು, ತಳವಾರರರು ಊರಿನ ಇತರೆಲ್ಲರನ್ನೂ, ಕರೆದು ಕಳಿಸುವವರನ್ನು ನೋಡಿಕೊಳ್ಳುವುದು ಮಾಡುತ್ತಾರೆ. ಲಿಂಗಾಯತರು ಗರ್ಭಗುಡಿಯ ದೇವರ ಪೂಜೆ, ಪಲ್ಲಕ್ಕಿ ಹೊರುವುದು, ಬೇರೆ ಊರಿಂದ ದೇವರನ್ನು ಹೊತ್ತು ತರುವವರನ್ನು ಇದಿರುಗೊಂಡು ಪುನಃ ಹಬ್ಬ ಮುಗಿದು ಕಳಿಸುವವರೆಗೆ ನೋಡಿಕೊಳ್ಳುವುದು ಇವೇ ಮೊದಲಾದ ಕೆಲಸ ಅವರದಾಗಿತ್ತು.
ಹೀಗೆ ಹಬ್ಬ ನಡೆಯುವುದರ ಜೊತೆಗೆ ಆಸಕ್ತರೆಲ್ಲ ಸೇರಿ ಪೌರಾಣಿಕ ನಾಟಕಗಳಾದ ಕುರುಕ್ಷೇತ್ರ, ರಕ್ತ ರಾತ್ರಿ, ಜಗಜ್ಯೋತಿ ಬಸವೇಶ್ವರ ಮತ್ತು ಖಾದಿ ಸೀರೆ ಹೀಗೆ ಅನೇಕ ಸಾಮಾಜಿಕ ನಾಟಕಗಳನ್ನೂ ಆಡುತ್ತಿದ್ದರು. ಊರ ಜನರೂ ಶಕ್ತಾನುಸಾರ ಪಟ್ಟಿ ನೀಡಿ ಕಲಿಸಿದ ಮಾಸ್ತರನಿಗೂ, ಭಾಗವಹಿಸಿದ ಕಲಾವಿದರಿಗೆ, ವಾದ್ಯಗೋಷ್ಠಿಯವರಿಗೆ ಯಥೋಚಿತ ಸನ್ಮಾನ ಮಾಡುತ್ತಿದ್ದರು. ಇದಕ್ಕೆಲ್ಲ ಪ್ರೋತ್ಸಾಹದ ಮೀಟುಗೋಲಾಗಿ ನಮ್ಮೂರಿನವರೇ ಆಗಿದ್ದ ಕ್ಯಾತನಹಳ್ಳಿ ರುದ್ರಪ್ಪ ಮಾಸ್ತರು ಕಾರಣರಾಗಿದ್ದರು. ಅವರೀಗ ತೀರಿ ಹೋಗಿ, ಟಿ.ವಿ. ಭರಾಟೆಯಲ್ಲಿ ನಾಟಕಗಳ ಗೀಳು ಕಡಿಮೆಯಾಗಿದ್ದರೂ, ನಮ್ಮೂರಲ್ಲಿ ಪ್ರತಿವರ್ಷದಲ್ಲಿ ಎರಡು ಮೂರು ನಾಟಕಗಳನ್ನು ಆಡುವುದು ಮಾತ್ರ ನಿಂತಿಲ್ಲ.
ನಮ್ಮೂರ ಸುತ್ತಮುತ್ತೆಲ್ಲಾ ವೀಳ್ಯದ ಎಲೆ ತೋಟಗಳೇ ತುಂಬಿಕೊಂಡಿವೆ.
ಈ ಊರಲ್ಲೇ ನಮ್ಮ ಅಪ್ಪ ಅವ್ವ ಕೂಡ ಒಂದು ಕೋರಿನ ತೋಟ ಮಾಡಿಕೊಂಡಿದ್ದರು. ಕೋರಿನ ತೋಟವೆಂದರೆ ಭೂಮಾಲೀಕನೊಬ್ಬನಿಂದ ಭೂಮಿ ಪಡೆದು, ಅದರಲ್ಲಿ ವೀಳ್ಯದೆಲೆಯೋ, ಇನ್ನಿತರ ಬೆಳೆಯನ್ನೋ ತೆಗೆದರೆ ಅದರ ಉತ್ಪನ್ನದ ಲಾಭವನ್ನು ಸಮನಾಗಿ ಹಂಚಿಕೊಳ್ಳುವುದು. ಅಂತಹದೊಂದು ತೋಟದಲ್ಲಿ ಅಪ್ಪ ಅವ್ವ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಅಪ್ಪ ಅವ್ವನಿಗೆ ನಾವು ಆರು ಜನ ಮಕ್ಕಳು. ನಮ್ಮೊಟ್ಟಿಗೆ ಇರಬೇಕಾಗಿದ್ದ ಇನ್ನೂ 3-4 ಮಕ್ಕಳು ನಮ್ಮವ್ವನಿಗೆ ಉಳಿದಿರಲಿಲ್ಲ.
ಅಪ್ಪನಿಗೆ ನಮ್ಮವ್ವನನ್ನು ಮದುವೆಯಾಗುವ ಮುಂಚೆಯೇ ಮೊದಲೊಂದು ಮದುವೆಯಾಗಿದ್ದು, ಅವರಿಗೂ 5-6 ಮಕ್ಕಳು ಹುಟ್ಟಿ ಮಕ್ಕಳ್ಯಾರು ಬದುಕದೆ ಕೊನೆ ಹೆರಿಗೆಯಲ್ಲಿ ಮಗು ಮತ್ತು ಬಾಣಂತಿ ಇಬ್ಬರೂ ನಿಧನರಾದರೆಂದೂ, ಆನಂತರ ಅಪ್ಪ ಮರು ಮದುವೆಯ ಮಾತು ಬಂದಾಗ ಆಸಕ್ತಿ ತೋರದೆ ತನ್ನ ಅಣ್ಣನ ಮಗನನ್ನೇ ತನ್ನ ಮಗನೆಂದು ಕಕ್ಕುಲತೆಯಲ್ಲಿ ಮದುವೆಯಾಗುವ ಬಗ್ಗೆ ಚಿಂತಿಸದೆ ತೋಟ ಹೊಲಮನೆಗಳಲ್ಲಿ ದುಡಿಯುತ್ತಾ ಬದುಕು ಸಾಗಿಸುತ್ತಿದ್ದನಂತೆ.
ಇಂತಿಪ್ಪ ಸಂದರ್ಭದಲ್ಲಿ ನಮ್ಮವ್ವನ ಚಿಕ್ಕಪ್ಪ ಮುರಿಗೆಪ್ಪಜ್ಜ ಶಿವಮೊಗ್ಗ ಜಿಲ್ಲೆ, ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾಮದಿಂದ ಯಾವುದೋ ಕಾರಣಕ್ಕೆ ನಮ್ಮ ಊರಿಗೆ ಬಂದಾಗ ನಮ್ಮಪ್ಪನ ಶ್ರಮ ಮತ್ತು ವಾಗತ್ಯದ ಬದುಕು ನೋಡಿ, ಮಾರುಹೋಗಿ ಅಣ್ಣನ ಮಗಳನ್ನು ಈತನಿಗೆ ಕೊಟ್ಟು ಮದುವೆ ಮಾಡಬೇಕೆಂದು ಚಿಂತಿಸಿ, ತನ್ನ ಊರಿಗೆ ಹೋದ ಮೇಲೆ ಅವರಣ್ಣನಿಗೆ ಒಪ್ಪಿಸಿ ನಮ್ಮಪ್ಪನೊಡನೆ ಎರಡನೇ ಸಂಬಂಧವಾಗಿ ಅವ್ವನನ್ನು ಕೊಟ್ಟು ಮದುವೆಯಾಗುವಂತೆ ಮಾಡಿದನೆಂದು ಅವರಿಂದಾಗಿಯೇ ಅಪ್ಪನ ಎರಡನೇ ಮದುವೆ ಆಯಿತೆಂದು ಆಗಾಗ ಮಾತಾಡಿಕೊಳ್ಳುತ್ತಿದ್ದರು.
ನಾನು 1951ರ ಮಾರ್ಚ್ 15ರಂದು ಹುಟ್ಟಿದ್ದೆಂದು ಸರ್ಕಾರಿ ದಾಖಲೆಯಲ್ಲಿದೆ. ಅವ್ವ ನಾನು ಹುಟ್ಟಿದ ಬಗ್ಗೆ ಕೇಳಿದರೆ ಯುಗಾದಿ ಹಬ್ಬ ಮುಂದೆ ಒಂದು ವಾರವೋ ಏನೋ ಇರುವಾಗ ಬ್ರೇಸ್ತವಾರ (ಗುರುವಾರ) ಹುಟ್ಟಿದ್ದೆಂದು ಹೇಳುತ್ತಿದ್ದಳು. ಅಂತೂ ಅದು ಸರಿ ಸುಮಾರು ಮಾರ್ಚ್ ತಿಂಗಳು ಎಂಬುದಾಗಿ ನನ್ನ ಶಾಲಾ ದಾಖಲೆಯಲ್ಲಿರುವುದು ಹುಟ್ಟಿದ ದಿನಕ್ಕೆ ತೀರಾ ದೂರವಾಗಿಲ್ಲವೆನಿಸುತ್ತದೆ.
ನಮ್ಮೂರ ಸಾಮಾಜಿಕ ಸಂಬಂಧಗಳು 1950ರ ದಶಕದಲ್ಲಿನ ನನ್ನ ಬಾಲ್ಯದ ದಿನಗಳಿಂದಲೂ ಅಸಮಾನತೆಯ ಸಂಬಂಧಗಳು ಎಲ್ಲರಿಂದ ಒಪ್ಪಿತವಾಗಿಯೇ ಬಂದವುಗಳು. ಜಾತಿಯ ತಾರತಮ್ಯ ನೀತಿಗಳನ್ನು ಯಾರೂ ಪ್ರಶ್ನಿಸುವ ಪ್ರಶ್ನೆಯೇ ಬರುತ್ತಿರಲಿಲ್ಲ! ಹಳ್ಳಿಯೇ ಒಂದು ಸರ್ಕಾರದಂತೆ ಇದ್ದು ಅಲ್ಲಿನ ಕೊಡುಕೊಳ್ಳುವ ಪ್ರಕ್ರಿಯೆಯು ಸಾಮಾಜಿಕ ಕಟ್ಟುಪಾಡುಗಳಲ್ಲಿಯೇ ನಡೆಯುತ್ತಿದ್ದವು.
ನಮ್ಮೂರಿನ ಚಲುವಾದಿಗಳ ಐದು ಕುಟುಂಬಗಳು ಒಬ್ಬರಿಗೊಬ್ಬರು ಸಂಬಂಧಿಕರಾಗಿದ್ದರು. ಅವರೆಲ್ಲರಿಗೂ ನಮ್ಮ ಅಪ್ಪನೇ ಯಜಮಾನನಾಗಿದ್ದ. ಅದ್ಯಾವುದೋ ಮಾಯದಲ್ಲಿ ಅಪ್ಪ ಅಕ್ಷರಸ್ಥನಾಗಿ ಓದಲು ಬರೆಯಲು ಕಲಿತು ಸಾಮಾನ್ಯ ಲೆಕ್ಕದ ಜ್ಞಾನ ಅವನಿಗಿತ್ತು. ಈ ಕುಟುಂಬದ ಐದೂ ಜನರು ಸೇರಿ ಊರ ಚಾಕರಿ (ಮ್ಯಾಳ) ಮಾಡುತ್ತಿದ್ದರು. ಪ್ರತಿ ಮಂಗಳವಾರ ವೀರಭದ್ರನ ಗುಡಿಗೆ ಹೋಗಿ ಮ್ಯಾಳ ಮಾಡುವುದು. ಅದಕ್ಕೆಲ್ಲ ಪ್ರತಿಯಾಗಿ ಊರ ದೇವಸ್ಥಾನದ ಯಜಮಾನರು, ಕಲ್ಲ ಮರಡಿಯಂತಿದ್ದ ದೇವರ ಹೆಸರಿನಲ್ಲಿದ್ದ ಜಮೀನನ್ನು ಐದೂ ಜನರಿಗೂ ಸುಮಾರು 17 ಎಕರೆ ಹಂಚಿಕೊಟ್ಟಿದ್ದರು. ಅದರಲ್ಲಿ ಮುಕ್ಕಾಲು ಭಾಗ ಉಳುಮೆ ಮಾಡಲು ಮಾತ್ರ ಸಾಧ್ಯವಾಗಿತ್ತು. ಉಳಿದದ್ದು ಕಲ್ಲು ಮರಡಿಯಾಗಿದ್ದು ಕೇವಲ ದನ ಮೇಯಿಸುತ್ತಿದ್ದೆವು. ಅಪ್ಪ ನಮ್ಮ ಪಾಲಿನ ಮೂರು ಎಕರೆಯಷ್ಟನ್ನು ಉಳುಮೆ ಮಾಡಿಕೊಂಡು ಜೋಳ, ಅಲಸಂದೆ, ಸಜ್ಜೆ, ನವಣೆ, ಮೆಣಸಿನಕಾಯಿ, ಟಮೋಟ, ಹುರಳಿ ಇತ್ಯಾದಿಗಳನ್ನು ಒಂದು ಜೊತೆ ಸಣ್ಣ ಎತ್ತಿನ ಜೋಡಿ ಇಟ್ಟುಕೊಂಡು ವ್ಯವಸಾಯ ಮಾಡುತ್ತಿದ್ದನು. ಮನೆಯಲ್ಲಿ ಎಮ್ಮೆ ಕಟ್ಟಿದ್ದನು. ಬಾಲ್ಯದಲ್ಲಿ ನಮಗೆ ಹಾಲು ಮೊಸರಿನ ಊಟ ಇರುತ್ತಿತ್ತು. ಯಾವಾಗಲಾದರೂ ಎಮ್ಮೆ ಗಬ್ಬಾದರೆ (ಗರ್ಭ ಧರಿಸಿದರೆ) ಹಾಲಿನ ಕೊರತೆಯಾಗದಿರಲೆಂದು ಅಪ್ಪ ಆಡುಗಳನ್ನು ಕೂಡ ಸಾಕಿದ್ದನು. ಅವುಗಳ ಹಾಲನ್ನು ದಿನ ಬೆಳಿಗ್ಗೆ ಚಾ ಮಾಡಲು ಮತ್ತು ಉಳಿದದ್ದು ಮೊಸರು ಮಾಡಿ ಉಣ್ಣುತ್ತಿದ್ದೆವು.
ಸ್ವಂತಕ್ಕಿದ್ದ ಸ್ವಲ್ಪ ಒಣಭೂಮಿಯ ಜೊತೆಗೆ ಊರಲ್ಲಿ ಕೋರಿನ ತೋಟ ಮಾಡಿಕೊಂಡು ನಮ್ಮನ್ನೆಲ್ಲ ಹಸಿವಿನ ಬಾಧೆ ತಟ್ಟದಂತೆ ಬೆಳಸುತ್ತಿದ್ದನು. ಜೊತೆಗೆ ಸರ್ಕಾರ 1934ರಲ್ಲಿಯೇ ನಮ್ಮೂರಲ್ಲಿ ಸ್ಥಾಪಿಸಿದ್ದ ಶಾಲೆಗೆ ಮಕ್ಕಳೆಲ್ಲರನ್ನು ಹಾಕಿದ್ದನು.
ಅವ್ವ ನಮ್ಮೂರಿಗೆ ಬಂದು ಅಪ್ಪನೊಂದಿಗೆ ಹೊಂದಿಕೊಳ್ಳಲು ಕಷ್ಟ
ಪಡಬೇಕಾಯಿತು. ಅವ್ವನದು ಅಪ್ಪನಿಗಿಂತ ಸ್ವಲ್ವ ಹೆಚ್ಚು ಅನುಕೂಲವಿದ್ದ ಕುಟುಂಬ. ಅವ್ವನಿಗೆ ಹೊಲ, ಮನಿ, ಕಣ, ಎತ್ತು ಬಂಡಿಗಳಿದ್ದ ಮನೆತನ. ಅವ್ವನ ಅಪ್ಪ ಆಗಿನ ಈಚಲು ಹೆಂಡ ಕುಡಿಯುತ್ತಾ ಪ್ರತಿ ಸಂಜೆ ಜಬರದಸ್ತ್ ಅಡಿಗೆಗಳನ್ನು ಮಾಡಿಸಿಕೊಂಡು ಉಣ್ಣುತ್ತಿದ್ದ ಎಂದು ಅವ್ವ ತೌರಮನೆಯ ಶ್ರೀಮಂತಿಕೆಯನ್ನು ಕೊಚ್ಚುತ್ತಾ ಆಗಾಗ ಮನೆಯಲ್ಲಿ ಜಂಭ ಕೊಚ್ಚಿಕೊಳ್ಳುತ್ತಿದ್ದಳು.
ಅವ್ವ ಮದುವೆಯಾಗಿ ನಮ್ಮೂರಿಗೆ ಬಂದಾಗ ಅಪ್ಪನ ಜೊತೆ ಅಪ್ಪನ ಅಣ್ಣ ರಂಗಪ್ಪಜ್ಜನ ಮಗ ಹಾಲಣ್ಣನಿದ್ದ. ಅಪ್ಪನ ಸಾಂಸಾರಿಕ ನೋವುಗಳ ಸಮಯದಲ್ಲಿ ಮದುವೆ ಬೇಡ, ಅಣ್ಣನ ಮಗನೇ ತನ್ನ ಮಗನೆಂದು ಅವನೊಟ್ಟಿಗೆ ಇದ್ದ. ಮದುವೆಯ ನಂತರ ಹಾಲಣ್ಣನಿಗೂ ಮದುವೆಯಾಗಿದ್ದರಿಂದ ಹೊಂದಾಣಿಕೆ ಕಷ್ಟವಾಗಿರಬೇಕು. ಅಪ್ಪ ಇದ್ದ ಮನೆಯನ್ನು ಹಾಲಣ್ಣನಿಗೆ ಬಿಟ್ಟು, ಓಬಜ್ಜನೆಂಬ ದೂರದ ಸಂಬಂಧಿ ನಮ್ಮೆಲ್ಲರ ಅಚ್ಚುಮೆಚ್ಚಿನ ಅಜ್ಜನ ಮನೆಗೆ ಬಂದಿದ್ದಾರೆ. ಅವಾಗ ಏನೇನು ನಡೆಯಿತೋ ಅಂತೂ ಓಬಜ್ಜನ ಮಾಳಿಗೆ ಮನೆ ನಮ್ಮ ಮನೆಯೆಂಬಂತೆ ಅಪ್ಪ ಅವ್ವ ಜೀವನ ಮಾಡಿ ನಮ್ಮಕ್ಕ ಕೊಟ್ರಮ್ಮ, ಅಣ್ಣ ತಿಪ್ಪಣ್ಣ ಇನ್ನುಳಿದ ತಂಗಿಯರಾದ ರೇವಕ್ಕ, ರತ್ನಕ್ಕ ಮತ್ತು ಮಂಜಕ್ಕ ಇವರು ನನ್ನೊಡನೆ ಹುಟ್ಟಿದವರು. ನನಗೀಗ 70 ವರ್ಷಗಳಾಗಿದ್ದು ಅವರೆಲ್ಲರೂ ಅಲ್ಲಿಂದ ಬೆಳೆದು ಅವರವರ ಗಂಡನ ಮನೆಯಲ್ಲಿ ಹಲವು ಟಿಸಿಲುಗಳಾಗಿ ಬೆಳೆದಿದ್ದಾರೆ. ಅಣ್ಣ ತಿಪ್ಪಣ್ಣ ಊರಿನಲ್ಲಿ ತನ್ನ ಮೂರು ಮಕ್ಕಳು ಮತ್ತು ಮೊಮ್ಮಕ್ಕಳೊಡನೆ ಇದ್ದಾನೆ. ನಾನೂ ಊರನ್ನು 10ನೇ ವಯಸ್ಸಿನಲ್ಲಿಯೇ ಓದಿನ ಕಾರಣದಿಂದ ಬಿಟ್ಟಿದ್ದರೂ ಇಂದಿಗೂ ಅಳಿಸಲಾಗದ ನಂಟಾಗಿ ಉಳಿದುಕೊಂಡು ಬಂದಿದೆ. ಊರ ಎಲೆ ಬಳ್ಳಿ ತೋಟ, ಜೊತೆಗೆ ಬಾಲ್ಯದ ಗೆಳೆಯರ ಒಡನಾಟ ಮತ್ತು ನಾನಲ್ಲಿ ಸ್ಥಾಪಿಸಿರುವ ಕೃಷ್ಣಪ್ಪ ಟ್ರಸ್ಟ್, ನನ್ನೆಲ್ಲಾ ಚಟುವಟಿಕೆಗಳನ್ನು ಊರಿನಿಂದ ರಾಜ್ಯವ್ಯಾಪಿ ವಿಸ್ತಾರಗೊಳಿಸಿದೆ.
ನನ್ನ ಬಾಲ್ಯದಲ್ಲಿನ ನೆನಪುಗಳನ್ನು ಕೆದಕಿದರೆ ನಾನು ನಾಲ್ಕನೇ ತರಗತಿಯವರೆಗೆ ಹನಗವಾಡಿಯಲ್ಲಿಯೇ ಇದ್ದ ಪ್ರಾಥಮಿಕ ಶಾಲೆಯಲ್ಲಿ ಓದಿದೆ. ಆಗಿನ ಅಧ್ಯಾಪಕರುಗಳ ಹೆಸರು ಮತ್ತು ಅವರು ತೋರುತ್ತಿದ್ದ ಪ್ರೀತಿ ಇನ್ನೂ ನನಗೆ ಹಸಿರಾಗಿದೆ. ನಮ್ಮೂರಿನ ಪಕ್ಕದ ಊರು ಬಿಳಸನೂರಿನಿಂದ ಬರುತ್ತಿದ್ದ ಹಾಲಪ್ಪ ಮಾಸ್ತರು, ಬೆಳ್ಳೂಡಿಯಿಂದ ಬರುತ್ತಿದ್ದ ಗುಡ್ಡೆಪ್ಪ ಮಾಸ್ತರು, ಇನ್ನೊಬ್ಬರು ರಾಮತೀರ್ಥದಿಂದ ಬರುತ್ತಿದ್ದ ರಾಮಶೇಷ ಮತ್ತು ಹರಿಹರ ಟೌನ್‌ನಿಂದ ಬರುತ್ತಿದ್ದ ವೆಂಕೋಬರಾವ್ ಅವರುಗಳು ನಮ್ಮ ಬಾಲ್ಯದ ಅಭಿಮಾನದ ಮಾಸ್ತರುಗಳು. ಅವರು ತೊಡುತ್ತಿದ್ದ ಶುಭ್ರವಾದ ಕಚ್ಚೆ ಪಂಚೆ ಮತ್ತು ಅಂಗಿಗಳು ನಮಗೆ ಅಸಾಮಾನ್ಯವಾಗಿ ಕಾಣುತ್ತಿದ್ದವು. ಮಗ್ಗಿ ಹೇಳುವುದು, ತಪ್ಪಿಲ್ಲದೇ ಉಕ್ತ ಲೇಖನ ಬರೆಯುವುದು, ಇವುಗಳಲ್ಲೆಲ್ಲಾ ನಾನು ಸ್ವಲ್ಪ ಚುರುಕಾಗಿದ್ದರಿಂದಲೇ ಏನೋ ಏಟು ತಿನ್ನದೆ, ತಪ್ಪು ಮಾಡಿದ ನನ್ನ ಸಹಪಾಟಿಗಳಿಗೆ ಕಪಾಳಕ್ಕೆ ನನ್ನಿಂದ ಹೊಡೆಸುತ್ತಿದ್ದರು. ನಾನು ಸ್ವಲ್ಪ ಚೌಕಾಸಿಯಿಂದ ಮೆತ್ತಗೆ ಹೊಡೆದಾಗ, ಆಗ ಅವರು ಕಪಾಳಕ್ಕೆ ನನಗೇ ಬಾರಿಸಿ ತೋರಿಸಿದ ಕಾರಣ ಮುಂದಿನವರಿಗೆ ಜೋರಾಗಿ ಏಟು ಕೊಟ್ಟು ಅವರ ಮೂಗಿನಿಂದ ರಕ್ತ ಒಸರಿ ಭಯವಾದ ನೆನಪು ಈಗಲೂ ಹಸಿರಾಗಿದೆ.
ಓದಿನ ಜೊತೆಗೆ ಶಾಲೆಯ ಆವರಣದಲ್ಲಿದ್ದ ಜಾಗದಲ್ಲಿ ಮಡಿಗಳನ್ನು ಮಾಡಿ, ಹತ್ತಿರದಲ್ಲಿದ್ದ ನಮ್ಮೂರ ಹೊಂಡದಿAದ ನೀರು ತಂದು ಸೊಪ್ಪು, ಮೂಲಂಗಿ ಮತ್ತಿತರ ತರಕಾರಿ ಬೆಳೆಯುತ್ತಿದ್ದೆವು. ಅವುಗಳನ್ನು ಕಿತ್ತು ಊರಲ್ಲಿ ಮಾರಿ ಬಂದ ಹಣದಲ್ಲಿ ಶಾಲೆಗೆ ಬೇಕಾದ ಅಟ್ಲಾಸ್, ಗೆರೆ ಹಾಕಲು ಬೇಕಾಗುವ ರೂಲು ದೊಣ್ಣೆ ಮತ್ತು ಶಾಲೆಗೆ ಬೇಕಾದ ವಸ್ತುಗಳನ್ನು ಅಧ್ಯಾಪಕರು ತರುತ್ತಿದ್ದರು. ನಮ್ಮಲ್ಲೆ ಎರಡು ಗುಂಪು ಮಾಡಿ, ಯಾರು ಚೆನ್ನಾಗಿ ತರಕಾರಿ ಬೆಳೆಯುತ್ತಾರೆ ಎಂಬ ಸ್ಪರ್ಧೆ ಕೂಡಾ ಇರುತ್ತಿತ್ತು. ಆಗಿನ ಮೇಷ್ಟರನ್ನು ನೆನಪಿಸಿಕೊಂಡರೆ, ಕೃತಜ್ಞತೆಯ ಭಾವ ಒಸರುತ್ತದೆ. ಶಾಲೆಗೆ ಬರುವ ಮುನ್ನ ಸ್ವಚ್ಛತೆಯ ಬಗ್ಗೆ ಅವರು ನೀಡುತ್ತಿದ್ದ ಆಜ್ಞೆಗಳನ್ನು ಉಲ್ಲಂಘಿಸಿದರೆ ಏಟು ಬೀಳುತ್ತಿದ್ದವು. ಕೈ ಬೆರಳಿನ ಉಗುರು, ಮುಖ ತೊಳೆದು ವಿಭೂತಿ ಧರಿಸುವುದು, ತಲೆ ಮೇಲೆ ಸ್ವಚ್ಚವಾದ ಟೋಪಿ ಇವೆಲ್ಲದರ ಬಗ್ಗೆ ಗಮನಿಸುತ್ತಿದ್ದರು. ಬೆಳಿಗ್ಗೆ 8 ರಿಂದ 10 ಘಂಟೆಯವರೆಗೆ ಮತ್ತೆ ಮಧ್ಯಾಹ್ನ
3 ರಿಂದ ನಡೆಯುತ್ತಿದ್ದ ತರಗತಿಯ ಮಧ್ಯೆ ನಮ್ಮೂರ ಹತ್ತಿರದಲ್ಲಿಯೇ ಹರಿಯುತ್ತಿದ್ದ ಸೂಳೆಕೆರೆ ಹಳ್ಳದಲ್ಲಿ ಗುಂಪಾಗಿ ಹೋಗಿ ಈಜುತ್ತಿದ್ದೆವು. ಮತ್ತೆ ದಂಡೆಯಲ್ಲಿರುತ್ತಿದ್ದ ಬಿಸಿ ಮರಳಲ್ಲಿಗೆ ಬಂದು ಎದೆಗೆ ಮರಳವಚಿಕೊಂಡು ಕಾಲ ಕಳೆಯುತ್ತಿದ್ದೆವು. ಈ ರೀತಿಯಲ್ಲಿ ದಿನವೂ ಹಳ್ಳದಲ್ಲಿ ನಮಗೆ ಈಜಾಡುವುದರ ಬಗ್ಗೆ ಆಕ್ಷೇಪ ಮಾಡುತ್ತಿದ್ದ ಕೆಲವು ಮಕ್ಕಳ ತಂದೆ ತಾಯಂದಿರು ಶಾಲಾ ಮಾಸ್ತರಿಗೆ ಹೇಳಿ ಗದರಿಸಲು ಹೇಳಿದ ಕಾರಣ ನಾವು ದಿನವೂ ಹಾರಾಡುತ್ತಿದ್ದ ಹಳ್ಳದಲ್ಲಿನ ಆಟಗಳಿಗೆ ಮೇಷ್ಟರಿಂದಲೇ ಆಗಾಗ ಕಡಿವಾಣ ಬೀಳುತ್ತಿತ್ತು.
ಹೀಗೆ ನಡೆದ ಪ್ರಾಥಮಿಕ ಶಿಕ್ಷಣದಲ್ಲಿ ನನ್ನ ಸಹಪಾಠಿಗಳಾಗಿದ್ದ ಕಾಯಕದ ರುದ್ರಪ್ಪ, ಶಿವನಳ್ಳಿ ಗಂಗಾಧರ, ಹಲಸಬಾಳು ಜಟ್ಟಪ್ಪ, ದಾವಣಗೆರೆ ನಾಗರಾಜ, ಸಣ್ಣಮನಿ ಜಟ್ಟಪ್ಪ, ಜೋಗಪ್ಪರ ತಿಪ್ಪಣ್ಣ, ಪೂಜಾರ ರುದ್ರಪ್ಪ ಮತ್ತು ಹಾಗೇ ಮೂರು ನಾಲ್ಕು ಹೆಣ್ಣು ಮಕ್ಕಳಿದ್ದರು. ಅವರಲ್ಲಿ ನಮ್ಮೂರಿನವರನ್ನೇ ಮದುವೆಯಾಗಿ ಉಳಿದಿರುವ ದೊಡ್ಡಮನೆ ರ‍್ಯಾವಕ್ಕನನ್ನ ಬಿಟ್ಟರೆ ಉಳಿದವರು ಬೇರೆ ಊರುಗಳಿಗೆ ಮದುವೆಯಾಗಿ ಹೋಗಿ ಮತ್ತೆ ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ನನ್ನ ಸಹಪಾಠಿಗಳಲ್ಲಿ ನನ್ನ ಹೆಸರಿನ ಒಬ್ಬ ಕಾಯಕದ ರುದ್ರಪ್ಪ ಮಾತ್ರ ನನ್ನ ಜೊತೆ ವಿಶೇಷ ಸ್ನೇಹ ಬೆಳೆದಿತ್ತು. ಅವನೂ ನಾನು ಒಟ್ಟಿಗೆ ಪ್ರಾಥಮಿಕ ಶಾಲೆ ಮುಗಿಸಿದ ನಂತರವೂ ಸ್ನೇಹಿತರಾಗಿ ಉಳಿದಿದ್ದೆವು.
ಕಾಯಕದ ರುದ್ರಪ್ಪ ಮತ್ತು ನಾನು ಪ್ರಾಥಮಿಕ ಶಾಲೆಯಲ್ಲಿ ಸಹಪಾಠಿಗಳಾಗಿದ್ದರೂ ಅವನು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಎರಡು ವರ್ಷಗಳ ಹಿಂದೆ ಬಿದ್ದುದರಿಂದ, ನಾನು ಎಂ.ಎ. ಮಾಡುವಾಗ ಆತನ ಬಿ.ಎ. ಪದವಿಯಲ್ಲಿನ ಒಂದೆರಡು ವಿಷಯಗಳನ್ನು ಇನ್ನೂ ಪೂರ್ಣಗೊಳಿಸಬೇಕಿತ್ತು. ಅವನ ಶ್ರಮ ಮತ್ತು ಶ್ರದ್ಧೆಗಳೆಷ್ಟೇ ಇದ್ದರೂ ಊರಲ್ಲಿದ್ದುಕೊಂಡು ಬಿ.ಎ. ಪೂರ್ಣಗೊಳಿಸಲು ಆಗಿರಲಿಲ್ಲ. ಊರಿಗೆ ಹೋದಾಗ ಅವನನ್ನು ಮೈಸೂರಿಗೆ ಕರೆ ತಂದು ಫೇಲಾದ ವಿಷಯಗಳಿಗೆ ಮನೆ ಪಾಠ ಹೇಳಿಸಿಕೊಂಡು ಪಾಸು ಮಾಡುವ ಬಗ್ಗೆ ಯೋಚಿಸಿದೆ. ಆದರೆ ಅವನನ್ನು ಮೈಸೂರಿಗೆ ಕರೆ ತಂದು ಉಳಿದುಕೊಳ್ಳುವ ವ್ಯವಸ್ಥೆ ಮತ್ತು ಅದಕ್ಕಾಗಿ ಖರ್ಚಾಗುವ ಹಣವನ್ನು ಅವನಿಂದ ಭರಿಸಲು ಆಗದ ಮಾತಾಗಿತ್ತು. ಈ ಸಮಸ್ಯೆಯನ್ನು ಪರ‍್ವತಕ್ಕನ ಬಳಿ ಚರ್ಚಿಸಿದಾಗ ಅವರು ಒಂದು ಸಹಾಯದ ಹಸ್ತ ನೀಡಿದರು. ನನ್ನ ಸ್ನೇಹಿತನಿಗೆ ತಿಂಗಳಿಗೆ 300 ರೂಗಳ ಸಂಬಳದಂತೆ ಅವರ ಸಮಾಜಶಾಸ್ತ್ರ ವಿಭಾಗದಲ್ಲಿನ ಪ್ರಾಜೆಕ್ಟ್ನಲ್ಲಿ ಸಹಾಯಕನನ್ನಾಗಿ ನೇಮಿಸಿಕೊಳ್ಳಲು ಒಪ್ಪಿದರು.
ಅದೇನು ಅಷ್ಟು ಹೊರೆಯಾದ ಕೆಲಸವಲ್ಲದ ಕಾರಣ ಅದರ ಜೊತೆಗೆ ಇವರು ಬಿ.ಎ.ಯಲ್ಲಿ ಉಳಿದ ವಿಷಯಗಳ ಬಗ್ಗೆ ತಯಾರಿ ಮಾಡಿಕೊಳ್ಳುವುದು ಎಂದು ತೀರ್ಮಾನಿಸಿ ಅವನನ್ನು ಮೈಸೂರಿಗೆ ಪರ‍್ವತಕ್ಕನ ಮನೆಯ ಹತ್ತಿರದಲ್ಲೇ ರೂಂ ಮಾಡಿ ಉಳಿಸಿದೆನು. ಬಿಡುವಿನ ವೇಳೆಯಲ್ಲಿ ಪರ‍್ವತಕ್ಕನ ಮನೆಯಲ್ಲಿನ ಸಣ್ಣಪುಟ್ಟ ಕೆಲಸ ಕೂಡ ಮಾಡುತ್ತಾ ಪರೀಕ್ಷೆಗೆ ತಯಾರಿ ಮಾಡಿಕೊಂಡು ಫೇಲಾದ ವಿಷಯಗಳನ್ನು ಬರೆದು ಪಾಸು ಮಾಡಿದ. ನನಗೂ ಬಸವಣ್ಯಪ್ಪನಿಗೂ ಪ್ರಾರಂಭದ ದಿನಗಳಲ್ಲಿ ಪರ‍್ವತಕ್ಕನವರ ಮನೆಯಲ್ಲಿ ಹೊಂದಿಕೊಳ್ಳಲು ಹೆಣಗಾಡಿದಂತೆಯೇ ಈ ರುದ್ರಪ್ಪನಿಗೂ ದಿಗಿಲು ಮಾಡಿಕೊಂಡಿದ್ದ ಅವನಿಗೆ `ನಿನ್ನ ಪರೀಕ್ಷೆ ಮುಗಿಯುವ ತನಕ ಇದೆಲ್ಲ ಸಹಿಸಿಕೊಂಡು ಇರಬೇಕು’ ಎಂದು ಸಮಾಧಾನ ಹೇಳುತ್ತಿದ್ದೆ. ಅದರಂತೆ ಮೈಸೂರಲ್ಲಿ ಉಳಿದು ಪರೀಕ್ಷೆ ಬರೆದು ಊರಿಗೆ ಹೋದ.
ನಾನಿನ್ನೂ ನನ್ನ ಅಂತಿಮ ಎಂ.ಎ. ನಲ್ಲಿರುವಾಗಲೇ ಕಾಯಕದ ರುದ್ರಪ್ಪನನ್ನು ಬಿ.ಎ.ಯನ್ನಾದರೂ ಮುಗಿಸಿಕೊಳ್ಳಲಿ ಎಂಬ ಆಸೆ ನನ್ನಲ್ಲಿ ಮೂಡಿತ್ತು. ನಮ್ಮಿಬ್ಬರ ಶಾಲಾ ರಜಾ ದಿನಗಳಲ್ಲಿ ಊರಿನಲ್ಲಿರುವಾಗ ಇಬ್ಬರೂ ಒಟ್ಟಿಗೆ ಇದ್ದು ಅವರಿವರ ತೋಟಗಳಲ್ಲಿ ಕೆಲಸ ಮಾಡುವುದು ನಮಗೆ ಅಭ್ಯಾಸವಾಗಿತ್ತು. ಅದಕ್ಕೆಲ್ಲ ಅವನೇ ನನ್ನ ಗುರುವಾಗಿದ್ದ. ಎಲೆ ಕೊಯ್ಯುವುದು, ಬಳ್ಳಿಕಟ್ಟುವ ಕೆಲಸಗಳಿಗೆ ಮೊದಲಿನಿಂದಲೂ ನಮ್ಮೂರಿನಲ್ಲಿ ಬಹು ಬೇಡಿಕೆಯ ಕೆಲಸಗಳಾಗಿದ್ದವು. ಈಗ್ಯೆ 45-50 ವರ್ಷಗಳ ಹಿಂದೆ ನಾನು ಮತ್ತು ರುದ್ರಪ್ಪ ಇಬ್ಬರೂ ಬೆಳಿಗ್ಗೆ 7 ಘಂಟೆಗೆ ತೋಟಕ್ಕೆ ಹೋಗಿ 10 ಗಂಟೆಯ ವರೆಗೆ ಎಲೆ ಕೊಯ್ದು ಇಬ್ಬರೂ 3 ರೂಗಳನ್ನು ಸಂಪಾದಿಸಿ ನಂತರ 10 ರಿಂದ 5 ರವರೆಗೆ ಬಳ್ಳಿ ಕಟ್ಟಿ ಇಬ್ಬರೂ ತಲಾ 2 ರೂಗಳನ್ನು ಸಂಪಾದಿಸಿ ನಂತರ ಸಂಜೆ ತೆರೆದ ಬಾವಿಯಲ್ಲಿ ಈಜಾಡಿ, ಇಬ್ಬರಲ್ಲೂ ಇದ್ದ ಸೈಕಲ್ ಏರಿ ಮೂರು ಮೈಲು ದೂರದ ಹರಿಹರಕ್ಕೆ ಹೋಗಿ ಕಾರ ಮಂಡಕ್ಕಿ ತಿನ್ನುತ್ತಿದ್ದೆವು. ಅಲ್ಲಿಗೆ ನಮಗೆ ನಾಟಕ ಕಲಿಸುತ್ತಿದ್ದ ರುದ್ರಪ್ಪ ಮಾಸ್ತರು ಕೂಡ ಬರುತ್ತಿದ್ದರು. ಅವರಿಗೆ ನಾವಿಬ್ಬರೂ ಮತ್ತು ಅವರೊಡನೆ ಇದ್ದವರಿಗೆ ಚಾ ಕುಡಿಸಿ ಎಲೆ ಅಡಿಕೆ ಕೊಡಿಸಿ ಕಳಿಸಿದ ನಂತರ ಸಂಜೆ ನಾಟಕ ಕಲಿಯಲು ಊಟ ಮಾಡಿ ಸೇರುತ್ತಿದ್ದೆವು. ಬಹು ಶ್ರಮದಿಂದ ಕಲಿತ ನಾಟಕವನ್ನು ಹೆಚ್.ಎನ್. ಹೂಗಾರ್ ಅವರ `ಕೊಂಡು ತಂದ ಗಂಡ’ವನ್ನು ತಿಂಗಳಾನುಗಟ್ಟಲೆ ಅಭ್ಯಾಸ ಮಾಡಿದ್ದನ್ನು ಬಿಟ್ಟರೆ ಅದನ್ನು ಬಣ್ಣ ಹಚ್ಚಿ ಪ್ರದರ್ಶನ ಮಾಡಲಾಗಲಿಲ್ಲ. ಅದಕ್ಕೆ ಪ್ರಮುಖ ಹೆಣ್ಣು ಪಾತ್ರದಲ್ಲಿದ್ದ ಕೆ. ರುದ್ರಪ್ಪ ಮೈಸೂರಿನಿಂದ ಬಂದು ರಜೆಯಲ್ಲಿ ಊರಲ್ಲಿರುವಾಗಲೇ ಅದಾವ ಮಾಯದ ಕಾಯಿಲೆಯೋ ಬಂದು 2-3 ದಿನಗಳಲ್ಲಿ ತೀರಿಹೋಗಿದ್ದ.
ಬಾಲ್ಯದ ನನ್ನೂರ ಸ್ನೇಹಿತರಲ್ಲಿ ಕಾಯಕದ ರುದ್ರಪ್ಪ ನನಗೆ ಅನೇಕ ವಿಷಯಗಳಲ್ಲಿ ಗುರುವಾಗಿದ್ದ. ಅವನು ತೀರಿಹೋಗಿ 50 ವರ್ಷಗಳೇ ಕಳೆದಿದ್ದರೂ ಅವನೊಡನೆ ಶಾಲೆಯಲ್ಲಿ, ತೋಟಗಳಲ್ಲಿ, ಈಜಾಡುವ ಹಳ್ಳದಲ್ಲಿ ಜೊತೆಗೆ ಇಬ್ಬರೂ ಸೇರಿ, ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಸ್ವಂತ ಖರ್ಚಿಗಾಗಿ ಬೇರೆಯವರ ತೋಟದಲ್ಲಿ, ಕೂಲಿ ಮಾಡುತ್ತ ಇದ್ದೆವು. ಶಾಲೆಯ ಅವಧಿ ಮುಗಿದು ಬಿಡುವಿನ ಸಮಯದಲ್ಲಿ ಸಗಣಿ ಗುಡ್ಡೆ ಹಾಕಿ, ಸಣ್ಣ ತಿಪ್ಪೆ ಮಾಡಿ ನಂತರ ಬೇರೆಯವರಿಗೆ ಅದನ್ನು ಮಾರಿ ಹಣ ಗಿಟ್ಟಿಸುತ್ತಿದ್ದೆವು. ಇದೆಲ್ಲ ನಾವು ಮುಂದೆ ಹೈಸ್ಕೂಲಿನ ನಂತರ ಓದಿನವರೆಗೆ ಹಾಗೆಯೇ ಮುಂದುವರಿದಿತ್ತು.
ಕಾಯಕದ ರುದ್ರಪ್ಪನ ಬಗ್ಗೆ ನನ್ನ ಮನಸ್ಸಿನಲ್ಲಿ ಆಗಾಗ ಮರೆಯಲಾಗದ ಘಟನೆಗಳು ಮರುಕಳಿಸಿ ಆ ಕಾಲಮಾನಕ್ಕೆ ಹೊತ್ತೊಗೆಯುತ್ತಿರುತ್ತದೆ. ಅವನ ಜಾತಿ ಲಿಂಗಾಯತರಲ್ಲಿನ ಕ್ಷೌರಿಕರದು. ನಮ್ಮೂರಲ್ಲಿಯೇ ಕ್ಷೌರಿಕ ವೃತ್ತಿ ಮಾಡುತ್ತಾ ಅವರ ತಂದೆತಾಯಿ ಮತ್ತು ಸಹೋದರರು ಹಾಯಾಗಿದ್ದವರು. ಅದ್ಯಾವುದೋ ಕಾಲಘಟ್ಟದಲ್ಲಿ ಲಿಂಗಾಯತರಲ್ಲಿನ ಒಳ ಪಂಗಡಗಳ ಜಗಳ ಶುರುವಾಗಿ ಇವನ ತಂದೆ ಮತ್ತು ಹಿರಿಯ ಅಣ್ಣಂದಿರನ್ನು ನಮ್ಮೂರಿನ ಕ್ಷೌರಿಕ ಕೆಲಸದಿಂದ ಬಿಡಿಸಿಬಿಟ್ಟರು. ಆಗ ಅವರ ತಂದೆ ಮತ್ತು ಇಬ್ಬರು ಹಿರಿಯ ಅಣ್ಣಂದಿರು ಪಕ್ಕದ ಊರುಗಳಿಗೆ ಕ್ಷೌರಿಕ ಕೆಲಸ ಮಾಡಲು ಬೆಳಗಿನ ಜಾವದಲ್ಲಿ ಎದ್ದು ಹೋಗುತ್ತಿದ್ದರು. ಊರ ಕೆಲಸ ಮಾಡಿಕೊಂಡು ಹಾಯಾಗಿದ್ದ ಅವರಿಗೆ ಆರ್ಥಿಕ ಮುಗ್ಗಟ್ಟು ಬಂದು ಅವರ ತಾಯಿ ಮತ್ತು ಅಕ್ಕ ತಂಗಿಯರೂ ದಿನ ಕೂಲಿ ಕೆಲಸ ಮಾಡುವಂತಾಗಿತ್ತು. ನನ್ನ ಬಾಲ್ಯದ ಸಹಪಾಠಿ ಅನೇಕರಲ್ಲಿ ಕಾಯಕದ ರುದ್ರಪ್ಪ ಮಾತ್ರ ಪ್ರೈಮರಿಯ ನಂತರವೂ, ನಾನು ಬೇರೆ ಬೇರೆ ಊರುಗಳಲ್ಲಿ ಅಭ್ಯಾಸ ಮಾಡುತ್ತಿದ್ದರೂ ಊರಿಗೆ ಬಂದಾಕ್ಷಣ ಸೇರಿಕೊಂಡು ಊರಿನಲ್ಲಿಯೇ ಕಬಡ್ಡಿ, ಕೀಳಾಪಟ್ಟಿ ಮತ್ತಿತರ ಆಟಗಳಲ್ಲಿ ಊರ ಇತರೆ ಹುಡುಗರ ಜೊತೆ ಆಡುತ್ತಿದ್ದೆವು. ಕಬಡ್ಡಿ ಆಡುವ ಸಮಯದಲ್ಲಿ ಆಡುತ್ತಾ ನಾನು ಕಾಲಿನಿಂದ ಲಿಂಗಾಯತರ ಹುಡುಗನಿಗೆ ತಾಗಿಸಿದ್ದಕ್ಕೆ ಚಲುವಾದಿಯವನು ಲಿಂಗಾಯತ ಹುಡುಗನಿಗೆ ಕಾಲು ತಾಗಿಸಬಹುದೆ ಎಂಬ ತಗಾದೆ ಶುರುವಾಗಿ ಗುಡಿ ಮುಂದೆ ಸಣ್ಣ ಜಗಳವಾಗಿತ್ತು. ಆಗ ಅಪ್ಪ ಬಂದು ಊರ ಮುಂದಿನ ಲಿಂಗಾಯತರ ಜೊತೆ ಆಟವಾಡಲು ಹೋಗಬೇಡವೆಂದೂ ಬೇರೆ ಊರುಗಳಲ್ಲಿ ಎಲ್ಲರ ಜೊತೆ ಇದ್ದಂತೆ ನಮ್ಮ ಊರುಗಳಲ್ಲಿ ಇರಲಾಗುವುದಿಲ್ಲ ಎಂದು ತಿಳಿ ಹೇಳಿದ್ದರು. ಆಗ ನನಗೆ ನನ್ನ ಜಾತಿಯ ಹಿನ್ನೆಲೆ ಅರ್ಥವಾಗುತ್ತಾ ಹೋಯಿತು. ಆದರೂ ನನಗೆ ನಾಲ್ಕನೇ ತರಗತಿಯವರೆಗೆ ಊರಿನಲ್ಲಿಯೇ ಓದಿದ್ದರೂ ನನ್ನ ಸಹಪಾಠಿಗಳೆಲ್ಲರೂ ಲಿಂಗಾಯತರಾಗಿದ್ದು, ಅವರಿಗೂ ಅಂತಹ ತಾರತಮ್ಯ ಬದುಕು ಇನ್ನೂ ಅರ್ಥವಾಗದ ದಿನಗಳಾಗಿದ್ದವು.
ನನ್ನ ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಹರಿಹರದ ಸರ್ಕಾರಿ ಕನ್ನಡ ಬಾಲಕರ ಮಾಧ್ಯಮಿಕ ಶಾಲೆಯಲ್ಲಿ ಐದನೇ ತರಗತಿಗೆ ಸೇರಿದೆ. ನನ್ನ ಇತರೆ ಸಹಪಾಠಿಗಳಲ್ಲಿ ಕೆಲವರು ಪಕ್ಕದ ಗ್ರಾಮ ಬೆಳ್ಳೂಡಿಗೂ ಉಳಿದ ಒಂದಿಬ್ಬರು ಹರಿಹರದಲ್ಲಿ ಇತರೆ ಖಾಸಗಿ ಶಾಲೆಗಳಿಗೆ ಸೇರಿಕೊಂಡಿದ್ದರು. ನನ್ನ ಮಾಧ್ಯಮಿಕ ಶಾಲೆಯ ಓದಿನ ಕಾರಣಕ್ಕಾಗಿ ಊರಿನಿಂದ ಹರಿಹರಕ್ಕೆ ದಿನವೂ ಮೂರು ಮೈಲುಗಳ ಓಡಾಟ ಶುರುವಾಯಿತು. ಹರಿಹರದಲ್ಲಿದ್ದ ಸರ್ಕಾರಿ ಹಾಸ್ಟೆಲ್‌ಗೆ ನಾನು ಹತ್ತಿರದ ಊರಿನವನು ಎನ್ನುವ ಕಾರಣದಿಂದ ಮೊದಲು ಸೀಟು ಸಿಗಲಿಲ್ಲ. ಹಾಗಾಗಿ ದಿನವೂ ರೊಟ್ಟಿಯನ್ನು ಕಟ್ಟಿಕೊಂಡು ಐದನೇ ತರಗತಿಗೆ ಊರಿನಿಂದ ಸುಮಾರು ಮೂರು ತಿಂಗಳು ಓಡಾಡುತ್ತಿದ್ದೆ. ಇದೇ ಸಮಯಕ್ಕೆ ನನ್ನ ಅಕ್ಕನ ಗಂಡ ಭಾವ ಕೆಂಚಪ್ಪನವರಿಗೆ ದಾವಣಗೆರೆಯಲ್ಲಿ ಎರಡನೇ ದರ್ಜೆ ಗುಮಾಸ್ತನ ಕೆಲಸ ಸಿಕ್ಕಿತ್ತು. ಅವರು ಹರಿಹರದವರೇ ಆಗಿದ್ದ, ಮಾಜಿ ಸಚಿವರಾದ ಬಿ. ಬಸವಲಿಂಗಪ್ಪನವರ ಸಹೋದರ. ಹರಿಹರ ಪುರಸಭೆಯ ಕೌನ್ಸಿಲರ್ ಆಗಿದ್ದ ಗುರುಬಸಪ್ಪನವರ ಶಿಫಾರಸಿನಿಂದ ನನಗೆ ಹಾಸ್ಟೆಲ್‌ಗೆ ಸೀಟು ಸಿಕ್ಕಿತ್ತು. ಹಾಸ್ಟೆಲ್ ಜೀವನ ನನಗೆ ಹೊಸ ಪ್ರಪಂಚವನ್ನೇ ತೆರೆದಿಟ್ಟಂತಾಗಿತ್ತು.
ಹರಿಹರದಲ್ಲಿನ ಐದನೇ ತರಗತಿಯ ಓದು ಜೊತೆಗೆ ಅಪ್ಪ ಅವ್ವ ಅಣ್ಣ ತಂಗಿಯರ ಬಿಟ್ಟು ಜೊತೆಗೆ ಊರ ಸಂಪರ್ಕವಿಲ್ಲದೆ ಅಪರಿಚಿತ ಹುಡುಗರ ಜೊತೆ ಒಬ್ಬನೇ ಇರುವುದನ್ನು ನೆನಸಿಕೊಂಡು ಆಗ ಅಳು ಬರುವಂತಾಗಿತ್ತು. ಅದೇನೋ ಅಪ್ಪನ ಪ್ರೀತಿಯ ಮಾತುಗಳು ಓದಿನ ಬಗ್ಗೆ ಅವನಿಗಿದ್ದ ಆಸಕ್ತಿ ನನ್ನನ್ನು ಹಾಸ್ಟೆಲ್‌ನಲ್ಲಿ ಇರುವಂತೆ ಮಾಡಿತ್ತು. ಎಷ್ಟೋ ದೂರದ ಹುಡುಗರೆಲ್ಲ ಇದ್ದಾರೆ. ನಿನಗೆ ಹತ್ತಿರದ ನಮ್ಮೂರೇನು ದೂರವೇ ಎಂದು ಅಪ್ಪ ಸಮಾಧಾನ ಹೇಳಿದ್ದ.
ಆಗ ಹಾಸ್ಟೆಲ್‌ನಲ್ಲಿ ಎರಡೊತ್ತಿನ ಊಟ ಬಿಟ್ಟರೆ ಬೇರೇನೂ ವ್ಯವಸ್ಥೆ ಇರಲಿಲ್ಲ. ಅಲ್ಲಿನ ಅಡಿಗೆ ಭಟ್ಟರಾಗಿದ್ದ ವೆಂಕಣ್ಣನ ಪರಿಚಯವನ್ನು ಅಪ್ಪ ಮಾಡಿಕೊಂಡು ನನ್ನ ಬಗ್ಗೆ `ದೇಕರಿಕೆ’ ಮಾಡಲು ಅವರನ್ನು ಕೋರಿದ್ದ. ವೆಂಕಣ್ಣ ಸೊಗಸಾಗಿ ಅಡುಗೆ ಮಾಡುವುದರ ಜೊತೆ ಅಸಾಧ್ಯ ಎಲೆ ಅಡಿಕೆ ಪ್ರಿಯ. ಅಪ್ಪ ಬಂದಾಗಲೆಲ್ಲ ಎರಡು ಮೂರು ಕವಳಿಗೆ ಸೊಗಸಾದ ಎಲೆ ತಂದು ಕೊಡುತ್ತಿದ್ದ. ನನ್ನ ಖರ್ಚಿಗಾಗಿ ಮೂರು ನಾಲ್ಕು ರೂಪಾಯಿಗಳನ್ನು ಅಡಿಗೆ ವೆಂಕಣ್ಣನಿಗೆ ಕೈಗೆ ಕೊಟ್ಟು ಹಸಿವಾದಾಗ ಏನಾದರು ಕೊಂಡು ತಿನ್ನಲು ನನಗೆ ಕೊಡಲು ಹೇಳಿದ್ದ. ಬೆಳಿಗ್ಗೆ 9ಕ್ಕೆ ಉಂಡು ಶಾಲೆಗೆ ಹೋದರೆ ಸಾಯಂಕಾಲ ನಾಲ್ಕಕ್ಕೆ ವಾಪಸ್ ಬಂದಾಗ ಹಸಿವು ಕಾಡುತ್ತಿತ್ತು. ಆಗ ವೆಂಕಣ್ಣನ ಬಳಿ ಚಿಲ್ಲರೆ ಕಾಸನ್ನು ಪಡೆದು ಕಡ್ಲೆ ಬೆಲ್ಲ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದೆ. ಕೆಲವೊಮ್ಮೆ ವೆಂಕಣ್ಣ ಅಪ್ಪ ಕೊಟ್ಟ ಹಣವನ್ನು ಬಳಸಿಕೊಂಡು ದುಡ್ಡಿಲ್ಲದಿದ್ದಾಗ ಹಣ ಕೇಳಿದರೆ ನಾಲ್ಕು ಐದು ಗಂಟೆಗೇನೆ ಅಡುಗೆ ಮಾಡಿಟ್ಟಿದ್ದ ಅವನು ‘ಅನ್ನಸಾರು ಹಾಕಿ ಕೊಡುವೆ, ಅಡುಗೆ ಮನೆಯಲ್ಲಿಯೇ ಕೂತು ಉಣ್ಣು’ ಎಂದು ಹೇಳುತ್ತಿದ್ದ. ಒಂದೆರಡು ಬಾರಿ ಊಟ ಮಾಡಿದ ನಂತರ ನನಗೆ ಎಲ್ಲರ ಕಣ್ಣು ತಪ್ಪಿಸಿ ಉಣ್ಣೋ ಊಟದ ಬಗ್ಗೆ ನನಗೆ ಬೇಸರವಾಗಿ ಅಪ್ಪನಲ್ಲಿ ಹೇಳಿಕೊಂಡೆ. ಆಗ ಅಪ್ಪ ಊರಿನಿಂದ ರೊಟ್ಟಿ ಚಟ್ನಿಪುಡಿಗಳನ್ನು ಗಂಟು ಕಟ್ಟಿ ತಂದು ಕೊಡುತ್ತಿದ್ದ. ತಂದು ಕೊಟ್ಟ ರೊಟ್ಟಿಯಲ್ಲಿ ತಿಂದುಳಿದದ್ದನ್ನು ನನ್ನ ಟ್ರಂಕಿನಲ್ಲಿಟ್ಟರೆ ಹಸಿದ ಹೆಬ್ಬುಲಿಯಂತಿದ್ದ ನನ್ನ ಹಿರಿಯ ಸಹಪಾಠಿಗಳು ಒಂದೇ ದಿನದಲ್ಲಿ ಖಾಲಿ ಮಾಡುತ್ತಿದ್ದರು. ಹಾಗೂ ಹೀಗೂ ಮಾಡಿ ಐದನೇ ತರಗತಿ ಪೂರೈಸೋ ಸಮಯಕ್ಕೆ ನನ್ನ ಅಕ್ಕ ಭಾವ ದಾವಣಗೆರೆಯಲ್ಲಿ ಸರ್ಕಾರಿ ನೌಕರಿಯಲ್ಲಿದ್ದವರಿಗೆ ಶಿವಮೊಗ್ಗ ಜಿಲ್ಲೆ ಸಾಗರಕ್ಕೆ ವರ್ಗವಾಗಿತ್ತು. ಅವರಿಗೂ ಮದುವೆಯಾಗಿ ಆಗಷ್ಟೆ ಒಬ್ಬ ಮಗಳು ಹುಟ್ಟಿದ್ದಳು. ಅದು ಯರ‍್ಯಾರು ತೀರ್ಮಾನಿಸಿದರೋ ಅಂತು ನಾನು ನನ್ನ ಆರನೇ ತರಗತಿಯ ಓದು ಮುಂದುವರೆಸಲು ಸಾಗರದಲ್ಲಿನ ಮಾಧ್ಯಮಿಕ ಶಾಲೆಗೆ ಸೇರಿಕೊಂಡೆ. ಅಕ್ಕ ಭಾವನ ಮನೆಯಲ್ಲಿ ಮಾಧ್ಯಮಿಕ, ಹೈಸ್ಕೂಲ್, ಪಿಯುಸಿ ಮತ್ತು ಪ್ರಥಮ ಬಿ.ಎ. ವರೆಗೆ ಅಂದರೆ ಸುದೀರ್ಘ 8 ವರ್ಷಗಳವರೆಗೆ ಸಾಗರದಲ್ಲಿ ಅಕ್ಕನ ಮನೆಯಲ್ಲಿ ನನ್ನ ಓದು ಸರಾಗವಾಗಿ ಮುಂದುವರೆದಿತ್ತು.
ಮುಂದುವರಿಯುವುದು…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ
ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ,
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ 23ಕ್ಕೆ ಹೆಚ್ಚು ವಿದ್ಯಾರ್ಥಿನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ *ಮಹಬೂಬ್ ಭಾಷಾ* ಆಗ್ರಹಿಸಿದ್ದಾರೆ ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ ಯುವಜನರು ಹಾಗೂ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು, ಸಂವಿಧಾನ ವಿರೋಧಿ ನಡೆ ಹಾಗೂ ಹೋರಾಟವನ್ನು ಹತ್ತಿಕ್ಕು ಹೊನ್ನಾರವಾಗಿದೆ.
ನೀಟ್ ಹಗರಣ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಕಾರ್ಪೊರೇಟರ್ ಶಿಕ್ಷಣ ನೀತಿಗಳ ಕಾರಣ, ಪರೀಕ್ಷೆಯ ಅಕ್ರಮ ವಿರುದ್ಧ ಹೋರಾಟ ಎರಡನೇ ಸ್ವತಂತ್ರ ಸಂಗ್ರಾಯದ ರೀತಿಯಲ್ಲಿ ದೇಶದಿಂದ ವ್ಯಾಪಿಸುತ್ತಿದ್ದು, ಆಳುವ ಸರ್ಕಾರ ರಾಷ್ಟ್ರದ ಭವಿಷ್ಯ ವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದೆಂದು ಹೇಳಿದ್ದಾರೆ.
ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸುದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
ಸುದ್ದಿದಿನ,ದಾವಣಗೆರೆ :ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಂತರ20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ
ರಾಜಿನಾಮೆ ನೀಡಬೇಕು. ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೀತಿ ,ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರಾದ ವಿನಾಯಕ ಬಿ.ಎನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹ ಮಾಡಿದ್ದಾರೆ.
ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ
ಯುವಜನರು, ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು. ಸೊನಮ್ ವಾಂಗ್ಟಕ್ ಅವರನ್ನು ಏಕಾಏಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಸಂವಿಧಾನವಿರೋಧಿ ನಡೆ, ಹೋರಾಟ ಹತ್ತಿಕ್ಕುವ ಹುನ್ನಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀಟ್ ಹಗರಣ, ವಿದ್ಯಾರ್ಥಿಗಳ ಆತ್ಮ ಹತ್ಯೆಗೆ ಕಾರ್ಪೊರೇಟ್ ಶಿಕ್ಷಣ ನೀತಿಗಳು ಕಾರಣ. ನೀಟ್ ಪರೀಕ್ಷೆ ಅಕ್ರಮದ ವಿರುದ್ಧದ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ದೇಶದಾದ್ಯಂತ ವ್ಯಾಪಿಸುತ್ತಿದೆ. ಆಳುವ ಸರ್ಕಾರ ರಾಷ್ಟ್ರದ ಭವಿಷ್ಯವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದು’.ಎಂದು ತಿಳಿಸಿದ್ದಾರೆ.
ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಂದನೆಗಳೊಂದಿಗೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
ಸುದ್ದಿದಿನ,ದಾವಣಗೆರೆ : ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಮಾಯಾಕೊಂಡ ಕ್ಷೇತ್ರವು ನಿಗದಿತ ಅವಧಿಗಿಂತ ಮೊದಲೇ ಗಣತಿ ನಮೂನೆಗಳ ಹಂಚಿಕೆಯನ್ನು ಪೂರ್ಣಗೊಳಿಸಿರುವುದರಿಂದ ಮತ್ತು ಶೇ. 92.31 ರಷ್ಟು ಡಿಜಿಟಲೀಕರಣ ಸಾಧನೆ ಮಾಡಲಾಗಿರುವುದರಿಂದ, ಪ್ರಗತಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದರು.
ಅವರು ಮಂಗಳವಾರ ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿ ದಾವಣಗೆರೆ ಜಿಲ್ಲೆಯ 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕುರಿತು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಒಟ್ಟು 1,97,048 ಮತದಾರರನ್ನು ಹೊಂದಿದ್ದು ಎಲ್ಲಾ 1,97,048 ಗಣತಿ ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ ಇದುವರೆಗೆ ಒಟ್ಟು 1,81,890 ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದ್ದು, ಶೇಕಡಾ 92.31 ರಷ್ಟು ಗುರಿಯನ್ನು ತಲುಪಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (SIR) ಪ್ರಕ್ರಿಯೆಯಲ್ಲಿ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಗಣತಿ ನಮೂನೆಗಳ ಹಂಚಿಕೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಬಿರುಸಿನಿಂದ ಸಾಗಿದ್ದು, ಇನ್ನು ಕೇವಲ 4,165 ಫಾರ್ಮ್‌ಗಳು (ಶೇಕಡಾ 2.11) ಮಾತ್ರ ಡಿಜಿಟಲೀಕರಣಕ್ಕೆ ಬಾಕಿ ಇವೆ ಕ್ಷೇತ್ರದಲ್ಲಿ ಯಾವುದೇ ಹಂಚಿಕೆಯಾಗದ ಫಾರ್ಮ್‌ಗಳು ಬಾಕಿ ಉಳಿದಿಲ್ಲ, ಬಾಕಿ ಉಳಿದಿರುವ ಗಣತಿ ನಮೂನೆಗಳ ಗಣಕೀಕರಣ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಮನೆ ಮನೆ ಭೇಟಿ ಸಂದರ್ಭದಲ್ಲಿ ಇಂದಿನವರೆಗೆ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10,993 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ (ಡೂಪ್ಲಿಕೇಟ್) ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 193 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 5059 ಶಾಶ್ವತ ವಲಸೆ, 3951 ಮರಣ ಪ್ರಕರಣ, 1760 ದ್ವಿಪ್ರತಿ ನಮೂನೆಗಳು ಹಾಗೂ 30 ಇತರೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ರಾಜೇಶ್ ಕುಮಾರ್ ಸಿ ಅವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
-
ದಿನದ ಸುದ್ದಿ6 days agoನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
-
ದಿನದ ಸುದ್ದಿ5 days agoಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ


