Connect with us

ದಿನದ ಸುದ್ದಿ

ವೃತ್ತಿಧರ್ಮವನ್ನೂ ನಾಶ ಮಾಡುವ ದ್ವೇಷ ರಾಜಕಾರಣ

Published

on

  • ನಾ ದಿವಾಕರ

ಭಾರತದ ಪ್ರಜಾತಂತ್ರ ವ್ಯವಸ್ಥೆ ನಾಲ್ಕೂ ದಿಕ್ಕುಗಳಿಂದ ಸವಾಲುಗಳನ್ನು ಎದುರಿಸುತ್ತಿದೆ. ಆಡಳಿತ ವ್ಯವಸ್ಥೆಯ ನಾಲ್ಕೂ ಸ್ತಂಭಗಳು ಶಿಥಿಲವಾಗುತ್ತಿರುವಂತೆ ಭಾಸವಾಗುತ್ತಿದೆ. ನ್ಯಾಯಾಂಗದ ಮೂಲಕ ಈ ದೇಶದ ಸಾಮಾನ್ಯ ಪ್ರಜೆಗಳು ಕೊಂಚ ಉಸಿರಾಡುತ್ತಿದ್ದರೂ ಕೆಲವು ಸಂದರ್ಭಗಳಲ್ಲಿ ನ್ಯಾಯಾಂಗವೂ ಮುಂಚಿನಂತಿಲ್ಲ ಎಂದೆನಿಸಿದರೆ ಅಚ್ಚರಿಯೇನಿಲ್ಲ.

ಇದು ಇಂದಿನ ಸಮಸ್ಯೆಯೂ ಅಲ್ಲ. ಅಧಿಕಾರ ರಾಜಕಾರಣದ ಒತ್ತಡಗಳು ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಪರಂಪರೆಗೆ ಐದು ದಶಕಗಳ ಇತಿಹಾಸವಿದೆ. ಒಂದೇ ವ್ಯತ್ಯಾಸ ಎಂದರೆ ಮೂರು ನಾಲ್ಕು ದಶಕಗಳ ಹಿಂದೆ ಇದ್ದಂತಹ ದಕ್ಷ, ನಿಷ್ಪಕ್ಷಪಾತ, ದಿಟ್ಟ ನ್ಯಾಯಮೂರ್ತಿಗಳನ್ನು ಇಂದು ಕಾಣುವುದು ವಿರಳ. ಶಾಸಕಾಂಗ ಮತ್ತು ಕಾರ್ಯಾಂಗಗಳು ಭ್ರಷ್ಟ ಹಾದಿ ಹಿಡಿದಿರುವ ಒಂದು ಶಿಥಿಲವಾಗುತ್ತಿರುವ ವ್ಯವಸ್ಥೆಯಲ್ಲಿ ಇದು ಸಹಜ ಪ್ರಕ್ರಿಯೆಯೇನೋ ಎನಿಸುತ್ತದೆ.

ಪ್ರಜಾತಂತ್ರ ವ್ಯವಸ್ಥೆ ಶಿಥಿಲವಾಗುತ್ತಿರುವ ಸಂದರ್ಭದಲ್ಲಿ, ಸಂವಿಧಾನ ಮತ್ತು ಪ್ರಜಾತಂತ್ರ ಮೌಲ್ಯಗಳ ಉಲ್ಲಂಘನೆಯಾಗುತ್ತಿರುವ ಹೊತ್ತಿನಲ್ಲಿ ಪ್ರಜೆಗಳಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆ ಮೂಲತಃ ಮಾಧ್ಯಮಗಳ ಮೇಲಿರುತ್ತದೆ. 1970ರ ದಶಕದಲ್ಲಿ ಮತ್ತು ಸ್ವತಂತ್ರ ಭಾರತದ ಆರಂಭದ ದಿನಗಳಲ್ಲೂ ಸಹ ಭಾರತದ ಸುದ್ದಿ ಮಾಧ್ಯಮಗಳು ಈ ಜವಾಬ್ದಾರಿಯನ್ನು ನಿಭಾಯಿಸಿವೆ.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಂವಹನ ಮಾಧ್ಯಮದ ವ್ಯಾಪ್ತಿ ಸೀಮಿತವಾಗಿದ್ದ ಸಂದರ್ಭದಲ್ಲೂ ಮಾಧ್ಯಮಗಳು , ಪತ್ರಿಕೆಗಳು ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದನ್ನು ಸ್ಮರಿಸಬಹುದು. ಆಗಲೂ ಭಾರತದ ಸುದ್ದಿಮನೆಗಳು ಉದ್ಯಮಿಗಳ, ಪ್ರಬಲ ಮೇಲ್ಜಾತಿಗಳ ಮತ್ತು ಕೆಲವು ರಾಜಕೀಯ ನಾಯಕರ ಒಡೆತನದಲ್ಲೇ ಇದ್ದವು.

ಆದರೆ ವೃತ್ತಿ ಧರ್ಮದ ಬಗ್ಗೆ ಪ್ರಜ್ಞೆಯೂ ಇತ್ತು. ಹಾಗಾಗಿ ಆಡಳಿತ ವ್ಯವಸ್ಥೆಯ ಓರೆಕೋರೆಗಳನ್ನು ತಿದ್ದುವ ಕೆಲಸವನ್ನು ಮಾಡುತ್ತಿದ್ದವು. ಇದಕ್ಕೆ ಮೂಲ ಕಾರಣ ಪತ್ರಿಕಾ ಸಂಪಾದಕರಿಗೆ ವೃತ್ತಿ ನಿಷ್ಠೆಯಷ್ಟೇ ಸಂವಿಧಾನ ನಿಷ್ಠೆಯೂ ಇತ್ತು. ಇಂದು ಇದು ಮರೆಯಾಗುತ್ತಿದೆ.

ಇಂದು ಮಾಧ್ಯಮಗಳ ನಿಷ್ಠೆ ಅಧಿಕಾರ ಪೀಠಗಳತ್ತ ವಾಲುತ್ತಿರುವ ಸಂದರ್ಭದಲ್ಲೇ ಮಾಧ್ಯಮ ಸ್ವಾತಂತ್ರ್ಯದ ಹರಣವೂ ನಡೆಯುತ್ತಿದೆ. ಏಕೆಂದರೆ ಬಹುಪಾಲು ಮಾಧ್ಯಮ ಸಮೂಹಗಳು, ಸುದ್ದಿಮನೆಗಳು, ಮುದ್ರಣ ಮಾಧ್ಯಮಗಳು ತಮ್ಮ ಜನಪರ ಮುಖವಾಡವನ್ನು ಸಂಪೂರ್ಣವಾಗಿ ಕಳಚಿಹಾಕಿಬಿಟ್ಟಿವೆ.

ಜಾಹೀರಾತಿನ ಪ್ರಲೋಭನೆ, ಅಧಿಕಾರ ಪೀಠಕ್ಕೆ ಹತ್ತಿರವಾಗುವ ಹಪಹಪಿ, ಸೌಲಭ್ಯ ಸವಲತ್ತುಗಳ ಆಮಿಷ ಮತ್ತು ಉದ್ದಿಮೆಯ ಅಳಿವು ಉಳಿವು ಇವೆಲ್ಲವೂ ಮಾಧ್ಯಮ ಸಂಹಿತೆಗಳನ್ನು ಬುಡಮೇಲು ಮಾಡುತ್ತಿವೆ. ಇದಾವುದರ ಗೊಡವೆಯೂ ಇಲ್ಲದೆ ಉಳಿಯಲು ಪ್ರಯತ್ನಿಸುವ ಮಾಧ್ಯಮಗಳ ವ್ಯಾಪ್ತಿ ಸಂಕುಚಿತವಾಗುತ್ತಲೇ ಹೋಗುತ್ತದೆ.

ಹೊಂದಾಣಿಕೆಯ ಸೂತ್ರ, ರಾಜಿ ಸೂತ್ರ ಮತ್ತು ಎಲ್ಲರನ್ನೂ ಮೆಚ್ಚಿಸುವ ಸೂತ್ರಗಳು ಪತ್ರಿಕೆಗಳ ಸ್ವರೂಪವನ್ನೇ ವಿರೂಪಗೊಳಿಸಿರುವುದನ್ನೂ ನೋಡಿದ್ದೇವೆ. ಈ ಹಂತದಿಂದ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಮಾಧ್ಯಮ ಲೋಕ ಇಂದು ಸಂಪೂರ್ಣವಾಗಿ ರಾಜಕೀಯ ಬಂದಿಯಾಗಿದೆ. ಔದ್ಯಮಿಕ ಹಿತಾಸಕ್ತಿಯ ನೆಲೆಯಲ್ಲಿ ರಾಜಕೀಯ ಗುಂಪುಗಳೊಡನೆ ಬೆರೆತುಹೋಗಿದೆ.

ಈ ವಿಷಮ ಸ್ಥಿತಿಯಲ್ಲಿಯೇ ಸಾಂಸ್ಕೃತಿಕ ರಾಷ್ಟ್ರೀಯತೆ ಪೋಷಿಸುತ್ತಿರುವ ದ್ವೇಷ ರಾಜಕಾರಣ ಎಲ್ಲ ಕ್ಷೇತ್ರಗಳನ್ನು, ಎಲ್ಲ ಹಂತಗಳಲ್ಲೂ ಆವರಿಸುತ್ತಿದೆ. ಬಹುಪಕ್ಷೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ದ್ವೇಷ ಸಹಜ. ಸ್ವತಂತ್ರ ಭಾರತದ ಮೊದಲ ನಾಲ್ಕು ದಶಕಗಳಲ್ಲಿ ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದವು, ಭಿನ್ನಮತ ಇತ್ತು, ಪರ ವಿರೋಧದ ನೆಲೆಗಳಿದ್ದವು. ಆದರೆ ರಾಜಕೀಯ ದ್ವೇಷ ಹೆಚ್ಚಾಗಿ ಇರಲಿಲ್ಲ.

ಅಧಿಕಾರ ರಾಜಕಾರಣದ ಚೌಕಟ್ಟಿನಲ್ಲೇ ಇದ್ದ ಸೈದ್ಧಾಂತಿಕ ಭಿನ್ನಮತಗಳನ್ನೂ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳುವ ಒಂದು ಸ್ವಸ್ಥ ಆಡಳಿತ ವ್ಯವಸ್ಥೆಯನ್ನೂ ನಾವು ಕಂಡಿದ್ದೇವೆ. ಶಾಸನ ಸಭೆಗಳಲ್ಲಿ ನಡೆಯುತ್ತಿದ್ದ ಚರ್ಚೆಗಳು, ವಿರೋಧ ಪಕ್ಷಗಳ ವಾಗ್ದಾಳಿ ಮತ್ತು ಆಡಳಿತಾರೂಢ ಪಕ್ಷದ ಸಂಯಮ ಇವೆಲ್ಲವೂ ಒಂದು ಸ್ವಸ್ಥ ರಾಜಕೀಯ ವ್ಯವಸ್ಥೆಯನ್ನು ನಿರ್ಮಿಸಿದ್ದವು.

ಆದರೆ ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣದ ಆಕ್ರಮಣದ ನಂತರ ಭಾರತದ ರಾಜಕೀಯ ನಕ್ಷೆಯೇ ಬದಲಾಗಿದೆ. ಜಾತಿ ಆಧಾರಿತ, ಮತಧರ್ಮ ಆಧಾರಿತ ರಾಜಕಾರಣ ಹೆಚ್ಚು ಪ್ರಬಲವಾಗುತ್ತಿರುವಂತೆಲ್ಲಾ ರಾಜಕೀಯ ದ್ವೇಷವೂ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಬಲಪಂಥೀಯ ರಾಜಕಾರಣ ಪೋಷಿಸುತ್ತಿರುವ ಸಾಂಸ್ಕೃತಿಕ ರಾಜಕಾರಣ ದ್ವೇಷ ರಾಜಕಾರಣವನ್ನೂ ಪೋಷಿಸುತ್ತಿದೆ.

ಬಹುತ್ವ ಮತ್ತು ಬಹುಸಂಸ್ಕೃತಿಯನ್ನೇ ಮೈಗೂಡಿಸಿಕೊಂಡು ಒಂದು ಬೃಹತ್ ದೇಶವಾಗಿ ರೂಪುಗೊಂಡಿರುವ ಭಾರತದಲ್ಲಿ ಇಂದು ಸಾಂಸ್ಕೃತಿಕ ವೈವಿಧ್ಯತೆಯೇ ನಿರಂತರ ಹಲ್ಲೆಗೊಳಗಾಗಿದೆ. ಒಂದು ರಾಷ್ಟ್ರ, ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿಯ ವಿಕೃತ ಚಿಂತನೆ ಈಗ ಒಂದು ರಾಜಕೀಯ ಪಕ್ಷ, ಒಂದೇ ಚುನಾವಣೆಯವರೆಗೂ ವಿಸ್ತರಿಸಿದೆ.

ಈ ಸಂದರ್ಭದಲ್ಲೇ ಭಾರತದ ಸಾಂವಿಧಾನಿಕ ಸಾಂಸ್ಥಿಕ ನೆಲೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿವೆ. ಅಪರಾಧದ ನಿಷ್ಕರ್ಷೆ ಇಂದು ಈ ಸಾಂಸ್ಥಿಕ ನೆಲೆಗಳಿಂದ ಹೊರತಾಗಿ, ರಾಜಕೀಯ ಅಧಿಕಾರ ಕೇಂದ್ರಗಳಲ್ಲಿ ನಡೆಯುತ್ತಿದೆ. ಅಪರಾಧಿಗಳಿಗೆ ನೀಡುವ ಶಿಕ್ಷೆಯೂ ಸಹ ಈ ಅಧಿಕಾರ ಕೇಂದ್ರಗಳ ಅಣತಿಯಂತೆ ನಿರ್ಧಾರವಾಗುತ್ತಿದೆ.

ಭ್ರಷ್ಟಾಚಾರ ಮುಕ್ತ ಭಾರತ, ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಪರಿಕಲ್ಪನೆಗಳನ್ನು ವೈಭವೀಕರಿಸುತ್ತಲೇ ಏಕಪಕ್ಷ ಆಡಳಿತವನ್ನು ಗಟ್ಟಿಗೊಳಿಸುವ ಪ್ರಯತ್ನಗಳ ನಡುವೆಯೇ ವ್ಯವಸ್ಥೆ ಇನ್ನೂ ಭ್ರಷ್ಟವಾಗುತ್ತಿದ್ದರೆ ಅದಕ್ಕೆ ಕಾರಣವನ್ನು ಇಲ್ಲಿ ಗುರುತಿಸಬಹುದು. ಇಂದು ಎಂತಹುದೇ ಭ್ರಷ್ಟ ರಾಜಕಾರಣಿ ಆಡಳಿತಾರೂಢ ಪಕ್ಷದೊಡನೆ ಗುರುತಿಸಿಕೊಳ್ಳುವುದರ ಮೂಲಕ ನಿರಪರಾಧಿಯಾಗಿ ಮುಕ್ತಿಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.

ಇದರ ನಡುವೆಯೇ ಅಪರಾಧ ಮುಕ್ತ ರಾಜಕಾರಣದ ಬಗ್ಗೆ ಯಾವುದೇ ಪಕ್ಷವೂ ಮಾತನಾಡದಿರುವುದನ್ನೂ ಗಮನಿಸಬೇಕಿದೆ. ವಿರೋಧಿ ದನಿಗಳನ್ನು ದಮನಿಸಲು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬಳಸುತ್ತಿರುವ ಕ್ರೂರ ಮಾರ್ಗಗಳಿಗೆ ಈಗಾಗಲೇ ಹಲವು ಚಿಂತಕರು ಬಲಿಯಾಗಿದ್ದಾರೆ. ನೂರಾರು ಜನರು ಯಾವುದೇ ಅಪರಾಧ ಎಸಗದೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಗುರುತರ ಅಪರಾಧಗಳನ್ನು ಎಸಗಿರುವಂತಹ ವ್ಯಕ್ತಿಗಳು ಅಧಿಕಾರ ಪೀಠಗಳನ್ನು ಅಲಂಕರಿಸಿದ್ದಾರೆ.

ಈ ವಿಡಂಬನೆಯ ನಡುವೆಯೇ ರಾಜಕೀಯೇತರ ಶಕ್ತಿಗಳು, ಸಂವಿಧಾನೇತರ ಸಂಸ್ಥೆಗಳು ಮತ್ತು ಸಂಘಟನೆಗಳು ಈ ದೇಶದ ಜನಸಾಮಾನ್ಯರ ಅಭಿಪ್ರಾಯ/ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಆಕ್ರಮಣ ನಡೆಸುತ್ತಿವೆ. ಇತ್ತೀಚೆಗೆ ಖ್ಯಾತ ಸಾಹಿತಿ, ವಿಚಾರವಾದಿ, ಚಿಂತಕ ಪ್ರೊ ಕೆ ಎಸ್ ಭಗವಾನ್ ಅವರ ಮೇಲೆ ವಕೀಲೆಯೊಬ್ಬರು ಹೈಕೋರ್ಟ್ ಆವರಣದಲ್ಲೇ ಹಲ್ಲೆ ನಡೆಸಿ ಮಸಿ ಎಸೆದಿರುವುದನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ.

ಇದು ಅಭಿಪ್ರಾಯ ಸ್ವಾತಂತ್ತ್ಯವನ್ನು ಹತ್ತಿಕ್ಕುವ ಮತ್ತೊಂದು ಕ್ರೂರ ವಿಧಾನ. ಇತ್ತೀಚಗೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಪ್ರೊ ಭಗವಾನ್ ತಮ್ಮ ರಾಮ ಮಂದಿರ ಏಕೆ ಬೇಡ ಎಂಬ ಕೃತಿಯಲ್ಲಿ ಮೂಲ ವಾಲ್ಮೀಕಿ ರಾಮಾಯಣದ ಕೆಲವು ಸಾಲುಗಳನ್ನು ಉದ್ಧರಿಸಿದ್ದಾರೆ. ವಾಲ್ಮೀಕಿ ರಾಮಾಯಣದ ರಾಮನ್ನು ಕುರಿತಂತೆ ವ್ಯಾಖ್ಯಾನ ಮಾಡಿದ್ದಾರೆ.

ಒಬ್ಬ ಸಂಶೋಧಕರಾಗಿ, ಸಾಹಿತಿಯಾಗಿ ಪ್ರೊ ಭಗವಾನ್ ಅವರಿಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಇದು ಸಾಂವಿಧಾನಿಕ ಹಕ್ಕು ಸಹ ಹೌದು. ಪ್ರೊ ಭಗವಾನ್ ಅವರ ಉಲ್ಲೇಖಗಳು ಮತ್ತು ಅಭಿಪ್ರಾಯಗಳು ಪ್ರಶ್ನಾರ್ಹ ಎನಿಸಿದರೆ ಅದನ್ನು ನ್ಯಾಯಾಲಯದ ಮೂಲಕ ಪ್ರಶ್ನಿಸಬಹುದು. ಅವರ ವಿರುದ್ಧ ಮೊಕದ್ದಮೆಯನ್ನೂ ದಾಖಲಿಸಲಾಗಿದೆ.

ಈ ಮೊಕದ್ದಮೆಯ ವಿಚಾರಣೆ ಸಂದರ್ಭದಲ್ಲೇ ವಕೀಲೆ ಮೀರ ರಾಘವೇಂದ್ರ ಭಗವಾನ್ ಅವರ ಮೇಲೆ ಮಸಿ ಎರಚಿ ಹಲ್ಲೆ ನಡೆಸಿದ್ದಾರೆ. ನ್ಯಾಯಾಲಯದ ಅವರಣದಲ್ಲಿ, ಪೊಲೀಸ್ ಸುರಕ್ಷತೆಯನ್ನು ಹೊಂದಿದ್ದ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಹಲ್ಲೆ ನಡೆಯುವುದು ನಮ್ಮ ಕಾನೂನು ವ್ಯವಸ್ಥೆಯ ದೌರ್ಬಲ್ಯವನ್ನು ತೋರುತ್ತದೆ. ಈ ಹಿಂದೆ ದೆಹಲಿಯ ಕೋರ್ಟ್ ಆವರಣದಲ್ಲಿ ಕನ್ಹಯ್ಯ ಕುಮಾರ್ ಅವರ ಮೇಲೆ ವಕೀಲರು ಹಲ್ಲೆ ನಡೆಸಿದ್ದರು.

ಆ ಪ್ರಕರಣದಲ್ಲಿ ವಕೀಲರಿಗೆ ಶಿಕ್ಷೆಯಾಗಬೇಕಿತ್ತು. ಈವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ. ನ್ಯಾಯಾಲಯಗಳ ಆವರಣದಲ್ಲಿ ಈ ರೀತಿಯ ಘಟನೆಗಳು ಸಂಭವಿಸುವುದು, ನ್ಯಾಯ ವ್ಯವಸ್ಥೆಯನ್ನು ಕಾಪಾಡಬೇಕಾದ ವಕೀಲರೇ ಇಂತಹ ಪುಂಡಾಟಿಕೆಯಲ್ಲಿ ತೊಡಗುವುದು ಶಿಕ್ಷಾರ್ಹ ಅಪರಾಧ ಎಂದು ಕಾನೂನು ರೂಪಿಸಬೇಕಿತ್ತು. ಆದರೆ ಇಂತಹ ಪ್ರಕರಣಗಳು ನಡೆಯುತ್ತಲೇ ಇದ್ದರೂ ಭಾರತದ ನ್ಯಾಯ ವ್ಯವಸ್ಥೆ ಮೌನ ಪ್ರೇಕ್ಷಕನಂತಾಗಿರುವುದು ದುರಂತ.

ವಕೀಲೆ ಮೀರ ರಾಘವೇಂದ್ರ ಅವರನ್ನು ಓರ್ವ ವ್ಯಕ್ತಿಯನ್ನಾಗಿ ನೋಡಲಾಗದು. ಇದು ಸಾಂಸ್ಥಿಕ ದಬ್ಬಾಳಿಕೆಯ ವ್ಯಕ್ತಿ ಸ್ವರೂಪವಷ್ಟೇ. ಇಂದು ವೈಚಾರಿಕತೆಯೇ ವ್ಯವಸ್ಥಿತವಾಗಿ ಹಲ್ಲೆಗೊಳಗಾಗುತ್ತಿದೆ. ಸಾಹಿತಿ, ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯ ಅಧಿಕಾರ ರಾಜಕಾರಣದ ಸಾಂಸ್ಥಿಕ ಒತ್ತಡಗಳಿಗೆ ಮಣಿಯಬೇಕಾದ ಸನ್ನಿವೇಶ ಎದುರಾಗಿದೆ.

ಮತ್ತೊಂದೆಡೆ ಯಾವುದೇ ಕಾನೂನು ಭೀತಿ ಇಲ್ಲದೆ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ವ್ಯಕ್ತಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವುದು ನಡೆಯುತ್ತಲೇ ಇದೆ. ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ ವ್ಯವಸ್ಥಿತವಾಗಿ ಬೇರೂರಿರುವ ಮತಾಂಧತೆ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆ ಈ ಧೋರಣೆಗೆ ಮತ್ತಷ್ಟು ಪುಷ್ಟಿ ನೀಡುತ್ತದೆ.

ಹಾಸ್ಯ ಕಲಾವಿದನ ಒಂದು ಜೋಕ್, ಒಂದು ಕಲಾಕೃತಿ, ಒಂದು ಸಿನಿಮಾ, ಒಂದು ಹಾಡು ಎಲ್ಲವೂ ಯಾವುದೋ ಒಂದು ಸಂಘಟನೆಯಿಂದ ನಿಬಂಧನೆಗೆ ಒಳಗಾಗುತ್ತಿದೆ. ಮೀರ ರಾಘವೇಂದ್ರ ಇಂತಹ ಒಂದು ಸಾಂಸ್ಥಿಕ/ಸಂಘಟಿತ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ.

ಪ್ರೊ ಭಗವಾನ್ ಅವರ ಮೇಲೆ ನ್ಯಾಯಾಲಯದ ಆವರಣದಲ್ಲೇ ಹಲ್ಲೆ ನಡೆಸಿರುವ ಮೀರ ರಾಘವೇಂದ್ರ ಅವರ ವಿರುದ್ಧ ಹೈಕೋರ್ಟ್ ಸ್ವಪ್ರೇರಣೆಯಿಂದ ಮೊಕದ್ದಮೆ ದಾಖಲಿಸಬಹುದಿತ್ತು. ಆದರೆ ಇತ್ತೀಚೆಗೆ ನ್ಯಾಯ ವ್ಯವಸ್ಥೆ ಇಂತಹ ಘಟನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ. ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ, ಧರ್ಮ ರಕ್ಷಣೆಯ ಹೆಸರಿನಲ್ಲಿ ಸಾಹಿತಿ ಕಲಾವಿದರ ಮೇಲೆ ನಡೆಯುವ ಈ ರೀತಿಯ ಹಲ್ಲೆಗಳು ಸೃಜನಶೀಲತೆಯನ್ನೇ ಹಾಳುಮಾಡುತ್ತವೆ.

ವಾಲ್ಮೀಕಿಯ ರಾಮನನ್ನು ಡಾ ಬಿ ಆರ್ ಅಂಬೇಡ್ಕರ್ ಸೇರಿದಂತೆ ಹಲವು ಚಿಂತಕರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಈ ರೀತಿಯ ವಿಮರ್ಶಾತ್ಮಕ ಸಾಹಿತ್ಯದ ಮೂಲಕವೇ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳು ಇಂದಿಗೂ ತಮ್ಮ ಅಂತಃಸತ್ವವನ್ನು ಉಳಿಸಿಕೊಂಡುಬಂದಿವೆ. ಸಾಂಸ್ಕೃತಿಕ ರಾಜಕಾರಣವನ್ನು ಪ್ರತಿನಿಧಿಸುವವರಿಗೆ ಈ ಸಾಹಿತ್ಯಕ ಆಯಾಮದ ಪರಿಜ್ಞಾನವೂ ಇರುವುದಿಲ್ಲ. ಏಕೆಂದರೆ ಈ ಪಕ್ಷ ಸಂಘಟನೆಗಳಿಗೆ ಮಹಾಕಾವ್ಯ ಮತ್ತು ಪೌರಾಣಿಕ ವ್ಯಕ್ತಿಗಳು ರಾಜಕೀಯ ಬಂಡವಾಳವಾಗಿ ಮಾತ್ರವೇ ಕಾಣಲು ಸಾಧ್ಯ.

ಈ ಘಟನೆಯನ್ನು ಖಂಡಿಸಬೇಕಾದ ರಾಜಕೀಯ ನಾಯಕರು ಮೌನ ವಹಿಸುತ್ತಾರೆ. ಭಗವಾನ್ ಪಾಕಿಸ್ತಾನದಲ್ಲಿದ್ದಿದ್ದರೆ ತಲೆ ಕಡಿಯಲಾಗುತ್ತಿತ್ತು ಎಂದು ಹೇಳುವ ಸಿ ಟಿ ರವಿ ಅವರಂತಹ ರಾಜಕೀಯ ನಾಯಕರು ಯಾವ ರೀತಿಯ ಮಾರ್ಗದರ್ಶನ ನೀಡಬಲ್ಲರು ಎಂದು ಯೋಚಿಸಬೇಕಿದೆ. ಇವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದವರು.

ಅಭಿಪ್ರಾಯ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ, ಭಿನ್ನ ಅಭಿಪ್ರಾಯವನ್ನು ಪ್ರಶ್ನಿಸುವ ಅಧಿಕಾರವನ್ನೂ ನೀಡಿದೆ. ಆದರೆ ದೈಹಿಕವಾಗಿ ಹಲ್ಲೆ ನಡೆಸುವ ಅಧಿಕಾರ ಯಾರಿಗೂ ಇರುವುದಿಲ್ಲ. ನ್ಯಾಯ ವ್ಯವಸ್ಥೆಯ ಮೌಲ್ಯಗಳನ್ನು ಕಾಪಾಡಬೇಕಾದ್ದು ವಕೀಲ ವೃತ್ತಿಯಲ್ಲಿರುವವರ ವೃತ್ತಿ ಧರ್ಮ. ಆದರೆ ಈ ವೃತ್ತಿ ಧರ್ಮ ಭ್ರಷ್ಟವಾಗಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ.

ಮೈಸೂರಿನ ವಿಶ್ವವಿದ್ಯಾಲಯದ ಅವರಣದಲ್ಲಿ ಕಳೆದ ವರ್ಷ ನಡೆದ ಘಟನೆಗಳ ಸಂದರ್ಭದಲ್ಲಿ ಆರೋಪಿಯ ಪರ ವಕಾಲತ್ತು ವಹಿಸುವ ವಕೀಲರನ್ನು ಬಹಿಷ್ಕರಿಸುವ ಮಟ್ಟಿಗೆ ವಕೀಲರ ಸಂಘ ಬೌದ್ಧಿಕವಾಗಿ ದಿವಾಳಿಯಾಗಿದೆ. ವಕೀಲರು, ಪೊಲೀಸರು, ಸೈನಿಕರು ಮತ್ತು ಇತರ ವೃತ್ತಿಪರರಿಗೆ ಮೂಲತಃ ಸಾಂವಿಧಾನಿಕ ಮೌಲ್ಯಗಳ ಪರಿವೆ, ಪರಿಜ್ಞಾನ ಇರಬೇಕಾಗುತ್ತದೆ.

ವಕೀಲರು ಧರಿಸುವ ಕರಿ ಕೋಟು, ಪೊಲೀಸರು ಧರಿಸುವ ಸಮವಸ್ತ್ರ ಮತ್ತು ಪದಕಗಳು, ಆಯಾ ವೃತ್ತಿಗೆ ಪ್ರವೇಶಿಸುವಾಗ ಮಾಡುವ ಪ್ರಮಾಣ ವಚನ ಇವೆಲ್ಲವೂ ಈ ದೇಶದ ಸಂವಿಧಾನ ರಕ್ಷಣೆಗೆ ಬದ್ಧವಾಗಿರುವುದಕ್ಕೆ ಸೂಚಕಗಳು. ಆದರೆ ಅಧಿಕಾರ ರಾಜಕಾರಣದ ಭ್ರಷ್ಟ ಮಾರ್ಗಗಳು ಈ ಸಾಂಸ್ಥಿಕ ನೆಲೆಗಳನ್ನೂ ಶಿಥಿಲಗೊಳಿಸುತ್ತಿರುವುದನ್ನು ಕಳೆದ ಐದಾರು ವರ್ಷಗಳಲ್ಲಿ ನೋಡುತ್ತಲೇ ಬಂದಿದ್ದೇವೆ.

ನಾಳೆ ಮೀರ ರಾಘವೇಂದ್ರ ಅವರಿಗೆ ಶಿಕ್ಷೆಯಾಗಬಹುದು ಅಥವಾ ಈಗಾಗಲೇ ಸನ್ಮಾನ, ಹಾರ ತುರಾಯಿಗಳ ನಡುವೆ ಮೆರೆಯುತ್ತಿರುವ ಆಕೆ ಅಧಿಕಾರ ರಾಜಕಾರಣದ ಫಲಾನುಭವಿಯೂ ಆಗಬಹುದು. ಆದರೆ ಆಕೆಯ ಮನಸ್ಥಿತಿ ಇಂದು ಎಲ್ಲ ಸಾಂಸ್ಥಿಕ ನೆಲೆಗಳನ್ನೂ ಪ್ರವೇಶಿಸಿದೆ, ಈ ಮನಸ್ಥಿತಿಯ ಹಿಂದೆ ಒಂದು ಸಾಂಸ್ಥಿಕ ಶಕ್ತಿ ಇದೆ, ಸಂಘಟನಾತ್ಮಕ ಒಳಹರಿವು ಇದೆ.

ಈ ಸಾಂಸ್ಥಿಕ ಶಕ್ತಿಯನ್ನು ಜನಸಾಮಾನ್ಯರ ನಡುವೆ ಪರಿಚಯಿಸಿ, ಜೀವಂತಿಕೆಯೊಂದಿಗೆ ಉಳಿಸಲು ನಮ್ಮ ವಿದ್ಯುನ್ಮಾನ ಮಾಧ್ಯಮಗಳು ತುದಿಗಾಲಲ್ಲಿ ನಿಂತಿವೆ. ಇದು ನಮ್ಮ ಮುಂದಿರುವ ದುರಂತ ಮತ್ತು ನಾವು ಎದುರಿಸುತ್ತಿರುವ ಸವಾಲು. ಸಾಂಸ್ಕೃತಿಕ ರಾಷ್ಟ್ರೀಯತೆಯ ಮತಾಂಧ ರಾಜಕಾರಣ ಬೇರೂರುತ್ತಾ ಹೋದಂತೆ ಭಾರತದ ಸಾಹಿತಿಗಳು ತಮ್ಮೊಳಗಿನ ಕಥೆಗಾರನನ್ನು, ಕವಿಯನ್ನು, ಕಾದಂಬರಿಕಾರನನ್ನು, ಕಲಾವಿದರು ತಮ್ಮೊಳಗಿನ ಕಲಾವಿದನನ್ನು, ಗಾಯಕರು ತಮ್ಮೊಳಗಿನ ಹಾಡುಗಾರರನ್ನು ಕೊಲ್ಲುತ್ತಲೇ ಹೋಗಬೇಕಾದ ಸನ್ನಿವೇಶ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಪೆರುಮಾಳ್ ಮುರುಗನ್ ನಮ್ಮ ನಡುವೆ ಜೀವಂತ ಸಾಕ್ಷಿಯಾಗಿದ್ದಾರೆ.

ನ್ಯಾಯಾಂಗ, ಕಾನೂನು ಪಾಲನೆ, ಮತ್ತು ಮಾಧ್ಯಮ ಈ ಮೂರೂ ಕ್ಷೇತ್ರಗಳಲ್ಲಿ ವೃತ್ತಿಧರ್ಮದ ಪರಿಕಲ್ಪನೆಯೇ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ, ಇಂತಹ ಬೆಳವಣಿಗೆಯ ವಿರುದ್ಧ ದನಿ ಎತ್ತದಿದ್ದರೆ ಬಹುಶಃ ಭಾರತದ ಪ್ರಜಾತಂತ್ರ ವ್ಯವಸ್ಥೆ ಮತ್ತು ಬಹುಸಂಸ್ಕೃತಿಯ ನೆಲೆಗಳು ಶಾಶ್ವತವಾಗಿ ವಿನಾಶದತ್ತ ಸಾಗುವ ಸಾಧ್ಯತೆಗಳೇ ಹೆಚ್ಚು.

ಈ ಸಂದರ್ಭದಲ್ಲಿ ಭಗವಾನ್ ಏಕಾಂಗಿಯಲ್ಲ ಎನ್ನುವ ಸಂದೇಶವನ್ನು ಸಾರುತ್ತಲೇ, ಮತ್ತೊಬ್ಬ ಪೆರುಮಾಳ್ ಮುರುಗನ್ ಸೃಷ್ಟಿಯಾಗದಂತೆ ಎಚ್ಚರವಹಿಸಬೇಕಿದೆ. ಗೌರಿ, ಕಲಬುರ್ಗಿ, ಪನ್ಸಾರೆ, ಧಬೋಲ್ಕರ್ ಅವರಂತೆ ಮತ್ತಷ್ಟು ಬೌದ್ಧಿಕ ಚೇತನಗಳು ನಿರ್ಗಮಿಸದಂತೆ ಎಚ್ಚರವಹಿಸಬೇಕಿದೆ. ಬದಲಾಗುತ್ತಿರುವ ಭಾರತದಲ್ಲಿ, ಆತ್ಮನಿರ್ಭರ ಭಾರತದಲ್ಲಿ ಪ್ರಜಾತಂತ್ರ ಮತ್ತು ಸಂವಿಧಾನವನ್ನು ಪ್ರೀತಿಸುವ, ಗೌರವಿಸುವ ಮನಸುಗಳ ಮುಂದಿರುವ ಮುಖ್ಯ ಸವಾಲು ಇದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಚಾಲನೆ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ರೂ. ವೆಚ್ಚದಲ್ಲಿ ಒಟ್ಟು 49 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ದಾವಣಗೆರೆ ನಗರ ಸಮಗ್ರ ಅಭಿವೃದ್ಧಿ ಹೊಂದಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಭಾನುವಾರ ನಗರದ ಪಿಜಿ ಬಡಾವಣೆಯ ಡಾ.ಎಂ.ಸಿ.ಮೋದಿ ರಸ್ತೆಯಲ್ಲಿ ಮಹಾನಗರಪಾಲಿಕೆಯ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಶಿಲನ್ಯಾಸ ನೆರವೇರಿಸುವ ಮೂಲಕ ಚಾಲನೆ ನೀಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 1500 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 10 ನಗರಪಾಲಿಕೆಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಯಡಿಯೂರಪ್ಪ ನಾಯಕತ್ವದಲ್ಲಿ ಈಗಾಗಲೇ ಹಲವು ಯೋಜನೆ ನೆರವೇರಿದೆ.

ಕೇಂದ್ರ ಸರ್ಕಾರವು ರಾಜ್ಯದ ಹಲವು ಯೋಜನೆಗಳಿಗೆ ಹೆಚ್ಚಾಗಿ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದ್ದು, ಈ ಕುರಿತು ವಾಣಿಜ್ಯ ಮತ್ತು ಕೈಗಾರಿಕ ಸಚಿವರಾದ ಪಿಯೂಷ್ ಗೋಯಲ್ ಜೊತೆ ಮಾತನಾಡಿದ್ದೇನೆ ಎಂದ ಅವರು,
ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ 8 ರಿಂದ 10 ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೆಗಾ ಟೆಕ್ಸ್‍ಟೈಲ್ ಪಾರ್ಕ್‍ಗಳನ್ನು ಮಾಡಬೇಕು.

ಹಾಗೂ ರಾಜ್ಯಕ್ಕೆ 3 ಮೆಗಾ ಟೆಕ್ಸ್‍ಟೆಲ್ ಆಗಬೇಕು. ಆಟೋ ಮೊಬೈಲ್ ಕ್ಷೇತ್ರಗಳಲ್ಲಿ ಕ್ಲಸ್ಟರ್ ಹೆಚ್ಚಿಗೆ ಮಾಡಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಹಂತ ಹಂತವಾಗಿ ಇವುಗಳನ್ನು ಸಾಕಾರ ಮಾಡುವ ಭರವಸೆ ಹೊಂದಿದ್ದೇನೆ ಎಂದು ಹೇಳಿದರು.

ಅಮೃತ ಗ್ರಾಮಗಳ ಯೋಜನೆಯಡಿ ಹಲವು ಹಣಕಾಸಿನ ಯೋಜನೆಗಳನ್ನು ರೂಪಿಸಿ ಕೆಲಸ ಮಾಡಿದಾಗ ಹೆಚ್ಚುವರಿಯಾಗಿ ಪ್ರತೀ ಗ್ರಾಮ ಪಂಚಾಯಿತಿಗೆ ರೂ.25 ಲಕ್ಷ ಅನುದಾನ ಸಿಗಲಿದೆ. ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರೈತರು ರೇಷ್ಮೆ ಕೃಷಿಯನ್ನು ಅಭಿವೃದ್ಧಿ ಪಡಿಸಿದ್ದು, ಶ್ರೇಷ್ಠ ಗುಣಮಟ್ಟದ ರೇಷ್ಮೆ ಬೆಳೆಯುತ್ತಿದ್ದು, ವಿದೇಶದಿಂದ ಆಮದಾಗುವ ರೇಷ್ಮೆಗೆ ಸರಿಸಮಾನವಾಗಿದ್ದರಿಂದ ಹೆಚ್ಚಿನ ಬೇಡಿಕೆಯಿದೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿಯೊಂದಿಗೆ ಹಲವಾರು ಕಾಮಗಾರಿಗಳನ್ನು ಒಂದೆ ಕಡೆ ಮಾಡಿದ್ದು, ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಎಸ್.ಸಿ.ಎಸ್.ಪಿ (ಪರಿಶಿಷ್ಟ ಜಾತಿ)ಯಡಿ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಗೆ 360 ಲಕ್ಷ ರೂ., ಕಾಮಗಾರಿಗಳಿಗೆ 1440 ಲಕ್ಷ ರೂ., ಹಾಗೂ ಟಿಎಸ್‍ಪಿ (ಪರಿಶಿಷ್ಟ ಪಂಗಡ) ದಡಿ ಪೌರಕಾರ್ಮಿಕರಿಕರ ಗೃಹ ಭಾಗ್ಯ ಯೋಜನೆಗೆ 146.10 ಲಕ್ಷ ರೂ., ಕಾಮಗಾರಿಗಳಿಗೆ 584.40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇನ್ನೂ ಸಾಮಾನ್ಯ ಕಾಮಗಾರಿಗಳಿಗೆ 5469.50 ಲಕ್ಷ ರೂ. ಮೀಸಲಿಡಲಾಗಿದೆ ಎಂದರು.

ಮಹಾನಗರ ಪಾಲಿಕೆಯ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 10 ಉದ್ಯಾನವನಗಳು, 2 ಕಾಲೇಜುಗಳಿಗೆ ಪರಿಕರ ಒದಗಿಸುವುದು, 74.995 ಕಿ.ಮೀ ಸಿ.ಸಿ. ಚರಂಡಿ ನಿರ್ಮಾಣ, 03.750 ಕಿ.ಮೀ ಒಳಚರಂಡಿ ನಿರ್ಮಾಣ, 18.551 ಕಿ.ಮೀ ಡಾಂಬಾರ್ ರಸ್ತೆ, 17.932 ಕಿ.ಮೀ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಎ.ಶಿವಯೋಗಿ ಸ್ವಾಮಿ, ಮಹಾನಗರಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ರಿಷ್ಯಂತ್, ಮಹಾನಗರಪಾಲಿಕೆ ಉಪಮೇಯರ್ ಸೌಮ್ಯ ನರೇಂದ್ರಕುಮಾರ್, ನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್, ಕೆ.ಟಿ.ವೀರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜಿಲ್ಲೆಯ 582 ಕೇಂದ್ರಗಳಲ್ಲಿ ಬೃಹತ್ ಲಸಿಕಾ ಮೇಳ ; ನಗರದಲ್ಲಿ ವ್ಯಾಕ್ಸಿನೇಷನ್ ವೀಕ್ಷಿಸಿದ ಸಂಸದರು

Published

on

ಸುದ್ದಿದಿನ,ದಾವಣಗೆರೆ : ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ದಾವಣಗೆರೆ ನಗರದಲ್ಲಿ ಶುಕ್ರವಾರ ವಿದ್ಯಾನಗರದ ಶಿವ ಪಾರ್ವತಿ ದೇವಸ್ಥಾನದಲ್ಲಿ ಏರ್ಪಡಿಸಿದ ಬೃಹತ್ ಲಸಿಕಾ ಮೇಳದ ಅಂಗವಾಗಿ ನಡೆದ ಲಸಿಕಾಕರಣ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಭಾಗವಹಿಸಿ, ಫಲಾನುಭವಿಗಳ ಯೋಗಕ್ಷೇಮ ವಿಚಾರಿಸಿದರು.

ಜಿಲ್ಲೆಯಾದ್ಯಂತ ಶುಕ್ರವಾರದಂದು ಬೃಹತ್ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದ್ದು, ನಗರದ ಮೋತಿವೀರಪ್ಪ ಕಾಲೇಜು ಹಾಗೂ ಸೂಪರ್ ಮಾರ್ಕೆಟ್ ಕೇಂದ್ರಗಳಲ್ಲಿ ಸಂಸದರೊಂದಿಗೆ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮುಂತಾದ ಅಧಿಕಾರಿಗಳು ಭೇಟಿ ನೀಡಿ ಲಸಿಕೆ ಮೇಳದಲ್ಲಿ ಪಾಲ್ಗೊಂಡು, ಲಸಿಕೆ ಕಾರ್ಯಕ್ರಮ ವೀಕ್ಷಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಪ್ರಪಂಚದಲ್ಲೇ ಅತೀ ದೊಡ್ಡ ವ್ಯಾಕ್ಸಿನೇಷನ್ ಮೇಳ ಇದಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಸರ್ಕಾರ ಜನರ ಹಿತಕ್ಕೆ ಬದ್ಧವಾಗಿದೆ ಎಂದರು.

ಜಿಲ್ಲೆಯ 195 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಪಟ್ಟಣ ಪಂಚಾಯಿತಿ, ನಗರ ಸಭೆ, ವ್ಯಾಪ್ತಿಯಲ್ಲಿ 5 ರಿಂದ 6 ಕಡೆ ಕೋವಿಡ್ ನಿರೋಧಕ ಲಸಿಕೆ ಹಾಕಲಾಗುತ್ತಿದ್ದು, ದಾವಣಗೆರೆ ನಗರದ ಒಟ್ಟು 57 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ನಗರದ 45 ವಾರ್ಡ್ ಹಾಗೂ ಸಿ.ಜಿ. ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 200 ರಿಂದ 500 ಜನರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ ಒಂದೇ ದಿನ ಒಟ್ಟು 01 ಲಕ್ಷ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಈಗಾಗಲೇ 10 ಲಕ್ಷದ 52 ಸಾವಿರ ಜನರಿಗೆ ಲಸಿಕೆ ನೀಡಲಾಗಿದ್ದು, 11.5 ಲಕ್ಷದ ಗುರಿ ಸಾಧಿಸಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದರು.

ನಗರದ ದೊಗ್ಗಳ್ಳಿ ಕಾಂಪೌಡ್‍ಗೆ ಭೇಟಿ

ನಗರದ ದೊಗ್ಗಳ್ಳಿ ಕಾಂಪೌಡ್‍ಗೆ ಭೇಟಿ ನೀಡಿ, ಅಲ್ಲಿಯ ಕೊಳಚೆ ಪ್ರದೇಶವನ್ನು ವೀಕ್ಷಿಸಿದ ಸಂಸದರು, ಅಲ್ಲಿಯ ಜನರಿಗೆ ಕೊಳಚೆ ಪ್ರದೇಶದಲ್ಲಿ ಓಡಾಡಲು ಅವ್ಯವಸ್ಥೆಯಾಗುತ್ತಿದೆ. ಮಳೆಗಾಲದಲ್ಲಿ ನೀರು ಶೇಖರಣೆಯಾಗಿ ಸುತ್ತ-ಮುತ್ತಲಿನ ಪ್ರದೇಶ ಮಲಿನಗೊಂಡಿದ್ದು, ಜನ-ಜೀವನ ಜೀವಿಸಲು ಕಷ್ಟಕರವಾಗಿದೆ. ಕೂಡಲೇ ಈ ಸ್ಥಳವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಸುವ್ಯವಸ್ಥಿತ ರಸ್ತೆ ಹಾಗೂ ಯುಜಿಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದರು.

ಈ ವೇಳೆ ಮಹಾನಗರ ಪಾಲಿಕೆಯ ಮಹಾಪೌರ ಎಸ್.ಟಿ.ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಡಿಹೆಚ್‍ಒ ಡಾ.ನಾಗರಾಜ್, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಸೆ.30 ರಂದು ಬೃಹತ್ ಲೋಕ್‍ಅದಾಲತ್

Published

on

ಸುದ್ದಿದಿನ,ದಾವಣಗೆರೆ : ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ ಹಾಗೂ ಜಗಳೂರು ನ್ಯಾಯಾಲಯಗಳ ಆವರಣದಲ್ಲಿ ಸೆಪ್ಟಂಬರ್ 30 ರಂದು ಮೆಗಾ ಲೋಕ್ ಅದಾಲತ್ ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್‍ರವರು ಲೋಕ್ ಅದಾಲತ್ ಮೂಲಕ ಅತೀ ಹೆಚ್ಚು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಬಯಸಿದ್ದು, ಈಗ ಮತ್ತೊಮ್ಮೆ ಪ್ರಾಧಿಕಾರವು ಸೆ.30 ರಂದು ಮೆಗಾ ಲೋಕ್ ಅದಾಲತ್ ಮೂಲಕ ಅತೀ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ. ಹೀಗಾಗಿ ಜಿಲ್ಲೆಗಳಲ್ಲಿರುವ ಎಲ್ಲಾ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಮೆಗಾ ಲೋಕ್ ಅದಾಲತ್‍ನ್ನು ಸೆ. 30 ರಂದು ಆಯೋಜಿಸಲಾಗಿದೆ.

ಮೆಗಾ ಲೋಕ್ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಮೆಗಾ ಲೋಕ್ ಅದಾಲತ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. ರಾಜಿಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಎಂ.ಎಂ.ಡಿ.ಆರ್ ಕಾಯ್ದೆಯಡಿಯ ಪ್ರಕರಣಗಳನ್ನು ಮೆಗಾ ಲೋಕ್ ಅದಾಲತ್ ನಲ್ಲಿ ಪರಿಹರಿಸಿಕೊಳ್ಳಬಹುದು.

ವೈವಾಹಿಕ ಕುಟುಂಬ ನ್ಯಾಯಾಲಯದ ಪ್ರಕರಣಗಳು (ವಿಚ್ಚೇದನ ಹೊರತುಪಡಿಸಿ), ಪಿಂಚಣಿ ಪ್ರಕರಣಗಳು, ವೇತನ ಭತ್ಯೆ ಸಂಬಂಧಿಸಿದ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕೆ ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು.

ಕೋವಿಡ್-19 ಸೋಂಕಿನಿಂದ ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಆರ್ಥಿಕ ಸಂಕಷ್ಟದಿಂದ ಹೊರಬರಲು ಅವಕಾಶವಿದೆ. ನ್ಯಾಯಾಲಯದ ಸಂಪೂರ್ಣ ಶುಲ್ಕವನ್ನು ಮರುಪಾವತಿ ಮಾಡಲಾಗುವುದು. ಕಕ್ಷಿಗಾರರು ಭೌತಿಕವಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು.

ಕಳೆದ ಆ.14 ರಂದು ಜರುಗಿದ ಮೆಗಾ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯಲ್ಲಿ 8050 ಪ್ರಕರಣಗಳು ಇತ್ಯರ್ಥಗೊಂಡು 13.88 ಕೋಟಿ ರೂ. ಗಳ ಪರಿಹಾರ ಒದಗಿಸಲಾಗಿದೆ. ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಜೀವ ವಿಮಾ ನಿಗಮ ಅಧಿಕರಿಗಳು, ವಕೀಲರು, ಎಂ.ವಿ.ಸಿ ಪ್ರಕರಣದ ಅರ್ಜಿದಾರ ವಕೀಲರುಗಳು, ಭೂ ವಿಜ್ಞಾನ ಇಲಾಖೆ, ಬ್ಯಾಂಕ್ ಅಧಿಕಾರಿಗಳು, ಶಿಕ್ಷಣ ಇಲಾಖೆ ಸೇರಿದಂತೆ ಲೋಕ್ ಅದಾಲತ್ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಸಾರ್ವಜನಿಕರು ಮೆಗಾ ಲೋಕ್ ಅದಾಲತ್ ನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಹಳೆಯ ನ್ಯಾಯಾಲಯ ಸಂಕಿರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಾವಣಗೆರೆ ಇವರನ್ನು ದೂ.ಸ:08192-296364, ತಾಲ್ಲೂಕು ಕಾನೂನು ಸೇವಾ ಸಮಿತಿಗಳಾದ ಹರಿಹರ 08192-296885, ಹೊನ್ನಾಳಿ 08188-251732, ಚನ್ನಗಿರಿ 08189-229195 ಮತ್ತು ಜಗಳೂರು 08196-227600 ಇವರನ್ನು ಸಂಪರ್ಕಿಸಬಹುದೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹಾಗೂ ಹಿರಿಯ ಸಿವಿಲ್ ನ್ಯಾಯಾದೀಶರಾದ ಪ್ರವೀಣ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending