ಲೈಫ್ ಸ್ಟೈಲ್
ಮುದ್ರಾ ಯೋಗದಿಂದ ಆರೋಗ್ಯಭಾಗ್ಯ..!
ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳಾವುವೆಂದರೆ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ. ಅದೇ ರೀತಿ ನಮ್ಮ ಶರೀರವು ಸಹ ಪಂಚತತ್ವಗಳಿಂದಾಗಿದೆ. ಯಾವಾಗ ಈ ಪಂಚತತ್ವಗಳು ಸಮತೋಲನದಲ್ಲಿರುತ್ತವೆಯೋ ಆಗ ನಾವು ಆರೋಗ್ಯದಿಂದಿರುತ್ತೇವೆ. ಯಾವಾಗ ಸಮತೋಲನ ಕಳೆದುಕೊಳ್ಳತ್ತೇವೆಯೋ ಆಗ ನಮಗೆ ಅನಾರೋಗ್ಯದಿಂದ ರೋಗಗಳು ತಲೆದೋರುತ್ತವೆ. ಈ ಪಂಚತತ್ವಗಳನ್ನು ಸಮತೋಲನದಲ್ಲಿ ಕಾಪಾಡುವುದೇ ಮುದ್ರಾಯೋಗದ ಉದ್ದೇಶವಾಗಿದೆ.
ಮುದ್ರೆಗಳನ್ನು ಯೋಗದ ಅಂಶವೆಂದು ಪರಿಗಣಿಸಲಾಗಿದೆ. ಕೈಯ ಅಂಗುಷ್ಠದೊಂದಿಗೆ ಇತರ ಬೆರಳುಗಳನ್ನು ಸಂಯೋಜಿಸಿ ಮಾಡುವ ಭಂಗಿಗಳನ್ನು ಹಸ್ತಮುದ್ರೆಗಳೆನ್ನುವರು. ಈ ಮುದ್ರೆಗಳಿಂದ ಆರೋಗ್ಯವನ್ನು ಸಂವರ್ಧಿಸಿ, ಸಂರಕ್ಷಿಸಬಹುದಾಗಿರುತ್ತದೆ.
ನಮ್ಮ ಶರೀರದಿಂದ ಇಲೆಕ್ಟ್ರೊ ಮ್ಯಾಗ್ನೆಟಿಕ್ ಪವರ್ ಅಥವಾ ವಿದ್ಯುತ್ ಕಾಂತೀಯ ಅಲೆಗಳು, ಸತತವಾಗಿ ಹೊರಹೊಮ್ಮುತ್ತಿರುತ್ತವೆ. ಈ ಚೈತನ್ಯ ಶಕ್ತಿಯು ಕೈ ಬೆರಳುಗಳ ತುದಿ, ಮೂಗು, ತುಟಿ, ಕಿವಿ ಮತ್ತು ಕಾಲುಬೆರಳುಗಳ ತುದಿಯಿಂದ ಸದಾ ಹೊರಹೊಮ್ಮುತ್ತಿರುತ್ತವೆ. ಮುದ್ರಾಯೋಗವನ್ನು ಕೈಬೆರಳುಗಳಿಂದ ಮಾಡುವ ಮೂಲಕ, ಈ ಚೈತನ್ಯ ಶಕ್ತಿಯನ್ನು ಬಂಧಿಸಿ ಶರೀರಕ್ಕೆ ಮರುಕಳಿಸುವಂತೆ ಮಾಡಿ, ಪಂಚತತ್ವಗಳನ್ನು ಸಮತೋಲನವಾಗಿ ಇಟ್ಟುಕೊಳ್ಳಬಹುದಾಗಿರುತ್ತದೆ.
ನಮ್ಮ ಶರೀರದಲ್ಲಿರುವ ಪಂಚ ತತ್ವಗಳಾದ ಆಕಾಶ, ವಾಯು, ಅಗ್ನಿ, ಪೃಥ್ವಿ, ಜಲ ಇವುಗಳು ಇಡೀ ಶರೀರದಲ್ಲಿ ಸಂಚರಿಸುತ್ತಿದ್ದು, ಪ್ರತಿ ತತ್ವದ ಪ್ರಾಬಲ್ಯವು ವಿಶಿಷ್ಟ ಭಾಗದಲ್ಲಿವೆ.
ತತ್ವ ,ದೇಹದ ಭಾಗ, ಬೆರಳುಗಳ ಸಂಬಂಧ
• ಅಗ್ನಿ ತತ್ವ – ನಾಭಿಯಿಂದ ಎದೆಯವರೆಗೆ ಹೆಬ್ಬೆರಳು
• ವಾಯು ತತ್ವ -ಮೂಗಿನಿಂದ ಎದೆಯವರೆಗೆ – ತೋರು ಬೆರಳು
• ಆಕಾಶ ತತ್ವ – ಶಿರಸ್ಸು-ಮಧ್ಯದ ಬೆರಳು
• ಪೃಥ್ವಿ ತತ್ವ – ಅಂಗಾಲಿನಿಂದ ಮಂಡಿಗಳವರೆಗೆ- ಉಂಗುರದ ಬೆರಳು
• ಜಲ ತತ್ವ – ಮಂಡಿಗಳಿಂದ ನಾಭಿಯವರೆಗೆ – ಕಿರಿ ಬೆರಳು
ಮುದ್ರೆಗಳನ್ನು ಮಾಡುವುದು ಹೇಗೆ?
• ಹೆಬ್ಬೆರಳಿನೊಂದಿಗೆ ಇತರ ಬೆರಳುಗಳ ತುದಿಯನ್ನು ಜೋಡಿಸಿದಾಗ, ಆಯಾ ತತ್ವವು ಸಮತೋಲನದಲ್ಲಿರುತ್ತದೆ.
• ಹೆಬ್ಬೆರಳಿನ ಬುಡದ ಕೆಳಗೆ ಇತರ ಬೆರಳುಗಳ ತುದಿ ಜೋಡಿಸಿದಾಗ, ಆಯಾ ತತ್ವವು ಕಡಿಮೆ ಆಗುತ್ತದೆ.
• ಹೆಬ್ಬೆರಳಿನ ತುದಿಯು ಇತರ ಬೆರಳುಗಳ ಬುಡಕ್ಕೆ ತಾಗಿಸಿದಾಗ, ಆಯಾ ತತ್ವವು ಹೆಚ್ಚುತ್ತದೆ.
• ಮುದ್ರೆಗಳನ್ನು ಮಾಡುವಾಗ ಬೆರಳಿನ ತುದಿಭಾಗಗಳ ಸ್ಪರ್ಶ ಮಾತ್ರ ಆದರೆ ಸಾಕು. ಒತ್ತು ಕೊಡುವ ಅವಶ್ಯಕತೆ ಇಲ್ಲ. ಇತರ ಬೆರಳುಗಳನ್ನು ಸಾಕಷ್ಟು ನೇರವಾಗಿಡಬೇಕು.
• ಇದನ್ನು ಎಲ್ಲಾ ವಯಸ್ಸಿನವರು ಮಾಡಬಹುದು, ಇದನ್ನು ಮಾಡಲು ಸಮಯ, ದಿಕ್ಕು, ಆಸನಗಳ ಬಂಧನವಿಲ್ಲ.ಮುದ್ರೆ ಮಾಡುವಾಗ ಕೈಗಳನ್ನು ಮೇಲ್ಮುಖವಾಗಿಡಬೇಕು.
ಮುದ್ರೆಗಳು ವೆಚ್ಚವಿಲ್ಲದ ಚಿಕಿತ್ಸೆ, ಸ್ವತಃ ಮಾಡುವ ಚಿಕಿತ್ಸೆ. ಎಲ್ಲಾ ರೀತಿಯ ಕಾಯಿಲೆಗಳಿಗೂ ಮುದ್ರೆಗಳಿಂದ ಚಿಕಿತ್ಸೆ ಮಾತ್ರವಲ್ಲ, ನಮ್ಮಲ್ಲಿನ ರೋಗ ಪ್ರತೀಕಾರಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದೊಂದು ಔಷಧಿರಹಿತವಾದ ಚಿಕಿತ್ಸೆ. ಇದರಲ್ಲಿ ಔಷಧಿಯ ಸೈಡ್ ಎಫೆಕ್ಟ್‍ಗಳಿಲ್ಲದೆ ಆರೋಗ್ಯವನ್ನು ಸರಿಪಡಿಸಬಹುದು.
ಮುದ್ರಾಯೋಗವನ್ನು ಯಾರು ಬೇಕಾದರು ಮಾಡಬಹುದು, ಎಲ್ಲಾ ಪ್ರಕಾರದ ರೋಗಗಳನ್ನು ನಿವಾರಿಸಿಕೊಳ್ಳಬಹುದು. ಮುದ್ರಾ ಯೋಗ ಮಾಡುವುದರ ಜೊತೆಗೆ ನಂಬಿಕೆ, ವಿಶ್ವಾಸ ಮತ್ತು ತಾಳ್ಮೆ ಇದ್ದರೆ ಮಾತ್ರ ಪರಿಣಾಮಕಾರಿ. ಬಹು ಮುಖ್ಯವಾದ ಕೆಲವು ಮುದ್ರೆಗಳನ್ನು ಮಾಡುವ ವಿಧಾನ ಹಾಗೂ ಅದರ ಉಪಯೋಗಗಳು
1 ಜ್ಞಾನ ಮುದ್ರೆ
ಹೆಬ್ಬೆರಳಿನ ತುದಿ ಮತ್ತು ತೋರು ಬೆರಳಿನ ತುದಿಯನ್ನು ಸ್ಪರ್ಶಿಸಿದಾಗ ಜ್ಞಾನಮುದ್ರೆ ಆಗುತ್ತದೆ.ಇದು ಏಕಾಗ್ರತೆ ಹೆಚ್ಚಿಸುತ್ತದೆ, ನಿದ್ರ್ರಾಹೀನತೆ, ತಲೆನೋವು, ಕೋಪದ ಸಮಸ್ಯೆ, ಮರೆವು ಪರಿಹರಿಸುತ್ತದೆ. ಮುಖ್ಯವಾಗಿ ಮತಿಮಾಂದ್ಯತೆ ನೀಗುತ್ತದೆ (ರಾತ್ರಿ ಇಡೀ ಮುದ್ರೆಗೆ ಟೇಪ್ ಹಾಕಿಡಬೇಕು). ಸ್ಮರಣ ಶಕ್ತಿ ಚುರುಕಾಗುತ್ತದೆ.
2 ಆಕಾಶ ಮುದ್ರೆ
ಹೆಬ್ಬೆರಳಿನ ತುದಿ ಮತ್ತು ಮಧ್ಯದ ಬೆರಳಿನ ತುದಿಯನ್ನು ಸ್ಪರ್ಶಿಸಿದಾಗ ಆಕಾಶ ಮುದ್ರೆ ಆಗುತ್ತದೆ. ಹೃದಯದ ಯಾವುದೇ ಸಮಸ್ಯೆಯಿದ್ದರೂ, ಈ ಮುದ್ರೆಯಿಂದ ಶಮನವಾಗುತ್ತದೆ. ಕಿವಿಯ ತೊಂದರೆ ಸರಿಪಡಿಸುತ್ತದೆ. ಎಲುಬುಗಳನ್ನು ಗಟ್ಟಿಮುಟ್ಟಾಗಿಡುತ್ತದೆ. ಮೈಗ್ರೇನ್ ತಲೆನೋವುವನ್ನು ಸರಿಪಡಿಸುತ್ತದೆ. ಶರೀರದಲ್ಲಿನ ವಿಷದ್ರವ್ಯಗಳನ್ನು ಹೊರ ಹಾಕಿ ಶರೀರ ಶುದ್ಧವಾಗಿದುತ್ತದೆ.
3 ಪೃಥ್ವಿ ಮುದ್ರೆ
ಹೆಬ್ಬೆರಳಿನ ತುದಿ ಮತ್ತು ಬೆರಳಿನ ತುದಿ ಸ್ಪರ್ಶಿಸಿದಾಗ ಪೃಥ್ವಿ ಮುದ್ರೆ ಆಗುತ್ತದೆ.
ಜ್ವರ ಬರದಂತೆ ಕಾಪಾಡುತ್ತದೆ/ಜ್ವರ ಇದ್ದರೆ ಅದನ್ನು ಇಳಿಸುತ್ತದೆ. ಈ ಮುದ್ರೆಯು ರಕ್ತದ ಚಲನೆ ಹೆಚ್ಚಿಸುತ್ತದೆ. ಇದು ನಮ್ಮ ದೇಹದ ಎಲುಬು ಮತ್ತು ಸ್ನಾಯುಗಳ ಬಲವರ್ಧಿಸುತ್ತದೆ. ತ್ವಚೆಯ ಕಾಂತಿ ಹೆಚ್ಚುಸುತ್ತದೆ. ಬಾವು, ಹುಣ್ಣು ಸರಿಪಡಿಸುತ್ತದೆ. ತಲೆಗೂದಲು ಉದುರುತ್ತ್ತಿದ್ದರೆ, ನೆರೆಯುತ್ತಿದ್ದರೆ ಸರಿಪಡಿಸುತ್ತದೆ.
4 ವರುಣ ಮುದ್ರೆ
ಹೆಬ್ಬೆರಳಿನೊಂದಿಗೆ ಕಿರುಬೆರಳಿನ ತುದಿ ಸ್ಪರ್ಶಿಸಿದಾಗ ವರುಣ ಮುದ್ರೆ ಆಗುತ್ತದೆ.
ಈ ಮುದ್ರೆಯು ನಮ್ಮ ದೇಹದಲ್ಲಿರುವ ನೀರಿನ ಅಂಶವನ್ನು ಸಮತೋಲನದಲ್ಲಿ ಇಡುತ್ತದೆ. ನಮ್ಮ ದೇಹದ ಸೌಂದರ್ಯ ಹೆಚ್ಚಿಸುತ್ತದೆ. ನಮ್ಮ ಚರ್ಮಕ್ಕೆ ಕಾಂತಿ ನೀಡುತ್ತದೆ, ಏಕೆಂದರೆ ದೇಹದಲ್ಲಿರುವ ನೀರಿನ ಅಂಶಕ್ಕೆ ಚಾಲನೆ ನೀಡಿ ಅದು ಚರ್ಮವನ್ನು ಪೋಷಿಸುತ್ತದೆ. ಅನೀಮಿಯಾ ಆಗಿ ರಕ್ತ ಕಡಿಮೆ ಆದಾಗ ಸರಿಪಡಿಸುತ್ತದೆ. ಮೂರ್ಛೆ ರೋಗವನ್ನು ಸರಿಪಡಿಸಬಹುದಾಗಿದೆ.
ಎರಡು ಬೆಟ್ಟಿನ ಮುದ್ರೆಗಳು
5 ಆಪಾನ ಮುದ್ರೆ
ಹೆಬ್ಬೆಟ್ಟಿನ ತುದಿಯೊಂದಿಗೆ ಮಧ್ಯದ ಬೆರಳಿನ ತುದಿ ಮತ್ತು ಉಂಗುರ ಬೆರಳಿನ ತುದಿ ಸ್ಪರ್ಶ ಮಾಡಿದಾಗ ಅಪಾನ ಮುದ್ರೆ ಆಗುತ್ತದೆ.
ಹೊಟ್ಟೆಯ ನೋವು, ಉಬ್ಬರಿಸಿದರೆ ಶಮನಗೊಳ್ಳುತ್ತದೆ. ಮೂಲವ್ಯಾಧಿ, ಮಧುಮೇಹದ ಕಾಯಿಲೆ ಸರಿಪಡಿಸುತ್ತದೆ. ಕೈಕಾಲು, ಹೊಟ್ಟೆ, ಎದೆ ಉರಿಗಳನ್ನು ಶಮನಗೊಳಿಸುತ್ತದೆ. ಹಲ್ಲು ನೋವು, ವಸಡು ರೋಗಗಳನ್ನು ಗುಣಪಡಿಸುತ್ತದೆ.
6 ಪ್ರಾಣ ಮುದ್ರೆ
ಹೆಬ್ಬೆಟ್ಟಿನ ತುದಿಯೊಂದಿಗೆ ಉಂಗುರ ಬೆರಳಿನ ತುದಿ ಮತ್ತು ಕಿರಿಬೆರಳಿನ ತುದಿ ಸ್ಪರ್ಶ ಮಾಡಿದಾಗ ಪ್ರಾಣ ಮುದ್ರೆ ಆಗುತ್ತದೆ.
ಈ ಮುದ್ರೆಯು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸಿ, ದೃಷ್ಟಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಆಯಾಸವನ್ನು ಹೋಗಲಾಡಿಸಿ ಹೆಚ್ಚು ಉಲ್ಲಾಸದಿಂದ ಇರಲು ನೆರವಾಗುತ್ತದೆ. ಶರೀರಕ್ಕೆ ಬೇಕಾದ ಎ, ಬಿ, ಸಿ, ಡಿ, ಇ ಮತ್ತು ಕೆ ವಿಟಾಮಿನ್‍ಗಳನ್ನು ಪೂರೈಸುತ್ತದೆ. ಅತ್ತಿ ಮುಖ್ಯವಾದ ವಿಷಯವೆಂದರೆ ಯಾವುದೇ ಚಿಕಿತ್ಸೆಗೋಸ್ಕರ ಮಾಡಿದ ಮುದ್ರೆಯ ಜೊತೆಗೆ ಈ ಮುದ್ರೆ ಮಾಡಿದರೆ, ಚಿಕಿತ್ಸೆ ಬಹುಬೇಗ ಫಲಿಸುತ್ತದೆ.
7 ವಾಯು ಮುದ್ರೆ
ತೋರುಬೆರಳಿನ ತುದಿಯನ್ನು ಹೆಬ್ಬೆಟ್ಟಿನ ಬುಡಕ್ಕೆ ತಾಗಿಸಿ ಹೆಬ್ಬೆಟ್ಟನ್ನು ತೋರು ಬೆರಳಿನ ಬೆನ್ನಿನ ಮೇಲೆ ಇಡಬೇಕು ಆಗ ಅದು ವಾಯು ಮುದ್ರೆ ಆಗುತ್ತದೆ. ಈ ಮುದ್ರೆಯು ನಮ್ಮ ದೇಹದಲ್ಲಿನ ಗಾಳಿಯನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಶರೀರದ ಹಲವು ಭಾಗಗಳಲ್ಲಿ ವಾಯುವು ಹೆಚ್ಚಾಗಿ ನೋವುಗಳು ಬರುತ್ತವೆ. ವಾಯು ಮುದ್ರೆ ಮಾಡುವುದರಿಂದ ಎಲ್ಲಾ ನೋವನ್ನು ಶಮನಗೊಳಿಸಿಕೊಳ್ಳಬಹುದು.
8 ಸೂರ್ಯ ಮುದ್ರೆ
ಉಂಗುರ ಬೆರಳಿನ ತುದಿಯನ್ನು ಹೆಬ್ಬೆಟ್ಟಿನ ಬುಡಕ್ಕೆ ತಾಗಿಸಿ, ಹೆಬ್ಬೆಟ್ಟನ್ನು ಉಂಗುರ ಬೆರಳಿನ ಬೆನ್ನಿನ ಮೇಲೆ ಇರಿಸಬೇಕು. ಆಗ ಅದು ಸೂರ್ಯ ಮುದ್ರೆ ಆಗುತ್ತದೆ.
ಬೊಜ್ಜು ಕರಗಿಸಬಹುದು. ರಕ್ತದಲ್ಲಿ ಕೊಲೇಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಶರೀರದಲ್ಲಿ ಉಷ್ಣಾಂಶ ಕಡಿಮೆ ಆದಾಗ ಈ ಮುದ್ರೆ ಮಾಡುವುದರಿಂದ ದೇಹದ ಉಷ್ಣಾಂಶ ಹೆಚ್ಚುತ್ತದೆ.
ಸೌಮ್ಯ ಅಶೋಕ್
ಬೆಂಗಳೂರು

ದಿನದ ಸುದ್ದಿ
5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ ಹಣ ಜಮೆಯಾಗಿಲ್ಲ, ಹಾಗಾದರೆ ನನ್ನ ಖಾತೆಗೆ ಇನ್ನೂ ಬಡ್ಡಿ ಸಿಗುತ್ತದೆಯೇ ಅಥವಾ ನನ್ನ ಹಣ ಹಾಗೆಯೇ ಉಳಿದುಕೊಳ್ಳುತ್ತದೆಯೇ?’ ಎಂಬುದು ಆ ಪ್ರಶ್ನೆ. ಈ ಪ್ರಶ್ನೆಗೆ ಇಪಿಎಫ್‌ಒ ನೇರವಾಗಿ ನೀಡಿರುವ ಉತ್ತರ – ಹೌದು, ಖಂಡಿತವಾಗಿಯೂ ಬಡ್ಡಿ ಸಿಗುತ್ತದೆ’.ಪಿಎಫ್‌ಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವರಲ್ಲಿರುವ ತಪ್ಪು ಕಲ್ಪನೆ. ಆದರೆ ವಾಸ್ತವವೇ ಬೇರೆ.
http://Visit : www.suddidina.com
3 ವರ್ಷಗಳ ಹಳೆಯ ನಿಯಮದ ಅಸಲಿ ಸತ್ಯವೇನು?
ಈ ಗೊಂದಲಕ್ಕೆ ಕಾರಣ 2016ಕ್ಕಿಂತ ಮೊದಲು ಇದ್ದ ನಿಯಮ. ಹಳೆಯ ನಿಯಮದ ಪ್ರಕಾರ, ಒಂದು ಪಿಎಫ್ ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ವಂತಿಗೆ ಜಮೆಯಾಗದಿದ್ದರೆ, ಅದನ್ನು `ನಿಷ್ಕ್ರಿಯ ಖಾತೆ’ (Inoperative Account) ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅಂತಹ ಖಾತೆಗೆ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಲಕ್ಷಾಂತರ ಖಾತೆದಾರರ ಹಣಕ್ಕೆ ಬಡ್ಡಿ ಸಿಗದೆ ನಷ್ಟವಾಗುತ್ತಿತ್ತು.ಆದರೆ ಚಂದಾದಾರರ ಹಿತದೃಷ್ಟಿಯಿಂದ ಇಪಿಎಫ್‌ಒ 2016 ರಲ್ಲಿ ಈ ನಿಯಮಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ಹೊಸ ಮತ್ತು ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ನಿಯಮಿತವಾಗಿ ಚಕ್ರಬಡ್ಡಿ (Compounding Interest) ಜಮೆಯಾಗುತ್ತಲೇ ಇರುತ್ತದೆ. ನೀವು ಕೆಲಸದಲ್ಲಿದ್ದರೂ, ಇಲ್ಲದಿದ್ದರೂ ಇದು ಅನ್ವಯಿಸುತ್ತದೆ.
ಉದಾಹರಣೆ:
ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಒಬ್ಬ ವ್ಯಕ್ತಿ ತಮ್ಮ 40ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮ ಪಿಎಫ್ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿಯನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದುಕೊಳ್ಳಿ. ಅವರು ಮುಂದಿನ 5 ವರ್ಷಗಳ ಕಾಲ ಅಂದರೆ 45ನೇ ವಯಸ್ಸಿನವರೆಗೆ ಯಾವುದೇ ಹಣವನ್ನು ಜಮೆ ಮಾಡದಿದ್ದರೂ, ಅವರ ಖಾತೆಯಲ್ಲಿರುವ ಆ 10 ಲಕ್ಷ ರೂಪಾಯಿಗೆ ಇಪಿಎಫ್‌ಒ ಪ್ರತಿ ವರ್ಷ ಘೋಷಿಸುವ ಬಡ್ಡಿ ದರದಂತೆ (ಪ್ರಸ್ತುತ 8.25%) ಬಡ್ಡಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಇದು ಅವರಿಗೆ 58 ವರ್ಷ ತುಂಬುವವರೆಗೆ ಅಂದರೆ ಇನ್ನೂ 13 ವರ್ಷಗಳ ಕಾಲ ನಿರಂತರವಾಗಿ ಸಿಗುತ್ತದೆ. ಅದೇ ರೀತಿ 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟವರಿಗೆ 58 ವರ್ಷದವರೆಗೆ 8 ವರ್ಷಗಳ ಕಾಲ ಬಡ್ಡಿ ಸಿಗುತ್ತದೆ.
ಈ ಒಂದು ತೆರಿಗೆ ನಿಯಮವನ್ನು ಮಾತ್ರ ಮರೆಯಬೇಡಿ!
ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ ಎಂಬುದು ಖುಷಿಯ ವಿಚಾರವೇ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ಎಚ್ಚರಿಕೆಯಿದೆ. ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಪಿಎಫ್ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ನೀವು ಕೆಲಸ ಬಿಟ್ಟ ನಂತರ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆಯು `ಇತರ ಮೂಲಗಳಿಂದ ಬಂದ ಆದಾಯ’ (Income from Other Sources) ಎಂದು ಪರಿಗಣಿಸುತ್ತದೆ. ಆದ್ದರಿಂದ ಆ ಬಡ್ಡಿಯ ಮೊತ್ತವನ್ನು ನೀವು ನಿಮ್ಮ ವಾರ್ಷಿಕ ಆದಾಯದಲ್ಲಿ ತೋರಿಸಿ, ನಿಮ್ಮ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.
ಖಾತೆದಾರರು ಏನು ಮಾಡಬೇಕು?
1. ಕೆಲಸ ಬದಲಾಯಿಸಿದ್ದರೆ: ಹಳೆಯ ಕಂಪನಿಯ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಬದಲು, ನಿಮ್ಮ ಯುಎಎನ್ (UAN) ಮೂಲಕ ಹೊಸ ಕಂಪನಿಯ ಖಾತೆಗೆ ವರ್ಗಾವಣೆ (Transfer) ಮಾಡಿಕೊಳ್ಳಿ. ಇದರಿಂದ ನಿಮ್ಮ ಸೇವಾ ಅವಧಿ ನಿರಂತರವಾಗಿರುತ್ತದೆ.
2. ವೃತ್ತಿ ವಿರಾಮದಲ್ಲಿದ್ದರೆ: 58 ವರ್ಷದವರೆಗೆ ಹಣ ಸುರಕ್ಷಿತವಾಗಿ ಬೆಳೆಯುತ್ತದೆ. ಆದರೆ ನಿಮಗೆ ತುರ್ತು ಅಗತ್ಯವಿಲ್ಲದಿದ್ದರೆ, ಹೆಚ್ಚಿನ ಆದಾಯಕ್ಕಾಗಿ ಬೇರೆಡೆ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು.
3. 58 ವರ್ಷದ ನಂತರ: ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣವನ್ನು ಹಿಂಪಡೆಯದಿದ್ದರೆ ಮಾತ್ರ ಆ ಖಾತೆಯನ್ನು ಮತ್ತೆ `ನಿಷ್ಕ್ರಿಯ’ ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ.ಆದ್ದರಿಂದ 5 ವರ್ಷದಿಂದ ಹಣ ಜಮೆಯಾಗದಿದ್ದರೂ ಚಿಂತಿಸಬೇಕಿಲ್ಲ, ನಿಮ್ಮ ಪಿಎಫ್ ಹಣ ಇಪಿಎಫ್‌ಒ ನಲ್ಲಿ ಸುರಕ್ಷಿತವಾಗಿ ಬಡ್ಡಿಯೊಂದಿಗೆ ಬೆಳೆಯುತ್ತಿದೆ.

ದಿನದ ಸುದ್ದಿ
ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
ಸುದ್ದಿದಿನ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಇರುವುದಿಲ್ಲ. ಖಾಸಗಿ ರೈಡ್-ಹೇಲಿಂಗ್ ಆ್ಯಪ್‌ಗಳಾದ ಓಲಾ, ಉಬರ್, ರ‍್ಯಾಪಿಡೋ ನಂತಹ ಆ್ಯಪ್‌ಗಳಲ್ಲೇ ನೇರವಾಗಿ ಬಿಎಂಟಿಸಿ ಬಸ್‌ಗಳ ಲೈವ್ ಲೋಕೇಶನ್ ಟ್ರ್ಯಾಕ್ ಮಾಡಲು ಮತ್ತು ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಮಹತ್ವದ ಸೇವೆಯು ಇದೇ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
http://Visit : www.suddidina.com
ಈ ಕುರಿತು ಮಾಹಿತಿ ನೀಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ, ನಾವು ಹಲವು ಖಾಸಗಿ ರೈಡ್ ಅಗ್ರಿಗೇಟರ್ ಕಂಪನಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಇದಕ್ಕಾಗಿ ಶೀಘ್ರದಲ್ಲೇ ಒಂದು ಸಾಮಾನ್ಯ ಮಾನದಂಡದ ಒಪ್ಪಂದವನ್ನು (Standard Agreement) ಜಾರಿಗೆ ತರಲಿದ್ದೇವೆ. ಈ ಒಪ್ಪಂದದ ನಿಯಮಗಳಿಗೆ ಬದ್ಧರಾಗುವ ಯಾವುದೇ ಖಾಸಗಿ ಕಂಪನಿಯು ಬಿಎಂಟಿಸಿಯ ಲೈವ್ ಡೇಟಾವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಇದರಿಂದ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ. ಕ್ಯಾಬ್ ಅಥವಾ ಆಟೋಗಳಿಂದ ಇಳಿದು ಮುಂದಿನ ಪ್ರಯಾಣಕ್ಕೆ ಬಸ್ ಹಿಡಿಯುವವರಿಗೆ ಇದು ಅತ್ಯಂತ ಸಹಕಾರಿಯಾಗಲಿದೆ ಎಂದು ಹೇಳಿದರು.
ನಮ್ಮ ಬಿಎಂಟಿಸಿ 2.0′ ಆ್ಯಪ್‌ನಲ್ಲಿ ಏನಿದೆ ಹೊಸತು?
ಖಾಸಗಿ ಆ್ಯಪ್‌ಗಳ ಜೊತೆ ಡೇಟಾ ಹಂಚಿಕೊಳ್ಳುವುದರ ಜೊತೆಗೆ, ಬಿಎಂಟಿಸಿ ತನ್ನ ಸ್ವಂತ ಮೊಬೈಲ್ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸುತ್ತಿದೆ. ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0′ ಅನ್ನು ಮುಂದಿನ ವಾರದ ಅಂತ್ಯದೊಳಗೆ ಲೋಕಾರ್ಪಣೆಗೊಳಿಸಲಾಗುವುದು. ಈ ಹಿಂದೆ ಆ್ಯಪ್ ಕುರಿತು ಪ್ರಯಾಣಿಕರು ನೀಡಿದ್ದ ದೂರುಗಳು ಮತ್ತು ತಾಂತ್ರಿಕ ದೋಷಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ. ಹೊಸ ಆ್ಯಪ್‌ನಲ್ಲಿ ಬಿಎಂಟಿಸಿ ನೆಟ್‌ವರ್ಕ್‌ನಲ್ಲಿ ಸಂಚರಿಸುವ ಪ್ರತಿಯೊಂದು ಬಸ್‌ನ ಲೈವ್ ಲೋಕೇಶನ್ ಅತ್ಯಂತ ನಿಖರವಾಗಿ ಲಭ್ಯವಾಗಲಿದೆ. ಪ್ರಸ್ತುತ ಬಿಎಂಟಿಸಿ ಬಳಿ 1,771 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಒಟ್ಟು 6,938 ಬಸ್‌ಗಳಿವೆ. ಪ್ರತಿದಿನ ಸರಾಸರಿ 6,200 ಬಸ್‌ಗಳು ನಗರದಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ.
ಸಾರಿಗೆ ಸಚಿವರ ಮಹತ್ವದ ಸಭೆ ಮತ್ತು ನಿರ್ದೇಶನ:
ವಿಧಾನಸೌಧದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
200 ಹೊಸ ಮಿನಿ ಬಸ್‌ಗಳ ಖರೀದಿ:
ಮೆಟ್ರೋ ಫೀಡರ್ ಸೇವೆ ಹಾಗೂ ನಗರದ ಕಿರಿದಾದ ರಸ್ತೆಗಳ ಸಂಪರ್ಕಕ್ಕಾಗಿ 200 ಹೊಸ 7 ಮೀಟರ್ ಉದ್ದದ ಮಿನಿ ಡೀಸೆಲ್ ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ನಿರ್ಧರಿಸಿದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಕಿರಿದಾದ ರಸ್ತೆಗಳಲ್ಲಿ ಈ ಚಿಕ್ಕ ಬಸ್‌ಗಳು ಸುಲಭವಾಗಿ ಸಂಚರಿಸಬಲ್ಲವು. ಸದ್ಯ 9 ಮತ್ತು 12 ಮೀಟರ್ ಉದ್ದದ 255 ಬಸ್‌ಗಳು ಮೆಟ್ರೋ ಫೀಡರ್ ಆಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ನಾಲ್ಕು ನಿಗಮಗಳಿಗೆ 1,000 ಬಸ್ ಖರೀದಿ ಯೋಜನೆಯ ಭಾಗವಾಗಿ ಈ ಖರೀದಿ ನಡೆಯಲಿದೆ. ಮುಂದಿನ 6 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್ ಲೈನ್‌ನ 6 ನಿಲ್ದಾಣಗಳು ಸೇರಿದಂತೆ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆ ವಿಸ್ತರಿಸಲು ಬಿಎಂಆರ್‌ಸಿಎಲ್ ಮತ್ತು ಸಂಚಾರ ಪೊಲೀಸರ ಜೊತೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ.
ಎಸಿ ಬಸ್ ಸೇವೆ ಹೆಚ್ಚಳಕ್ಕೆ ಸೂಚನೆ:
ಪಿಎಂ ಇ-ಡ್ರೈವ್ ಯೋಜನೆಯಡಿ ಬರಲಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ಪೈಕಿ 200 ಮಿನಿ ಎಸಿ ಇ-ಬಸ್‌ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಓಡಿಸುವಂತೆ ಸಚಿವರು ಸೂಚಿಸಿದ್ದಾರೆ. ಐಟಿ ಕಂಪನಿ ಉದ್ಯೋಗಿಗಳು ಖಾಸಗಿ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೇರೇಪಿಸಲು ಐಟಿ ಪಾರ್ಕ್‌ಗಳ ಮಾರ್ಗಗಳಲ್ಲಿ ಎಸಿ ಬಸ್ ಸೇವೆ ಹೆಚ್ಚಿಸಲು ಮತ್ತು ಐಟಿ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಎಲ್ಲಾ ನಿಗಮಗಳಲ್ಲಿ ಆದಾಯ ಸೋರಿಕೆ ತಡೆದು ಅನಗತ್ಯ ವೆಚ್ಚ ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವರು ಸೂಚಿಸಿದ್ದಾರೆ.

ದಿನದ ಸುದ್ದಿ
EV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ
ಸುದ್ದಿದಿನ,ಬೆಂಗಳೂರು: ರಾಜ್ಯವು ಇವಿ ನೋಂದಣಿಯಲ್ಲಿ ದೇಶದಲ್ಲೇ ಪ್ರಮುಖ ಸ್ಥಾನ ಪಡೆದಿದ್ದು, ಶುದ್ಧ ಚಲನೆಗೆ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಹಾಗೂ ವಿಶ್ವ ಇವಿ ದಿನದ ಸಂದರ್ಭದಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುನ್ನಡೆ ಸಾಧಿಸಿರುವುದು ಶ್ಲಾಘನೀಯ.
http://Visit : www.suddidina.com
ಕರ್ನಾಟಕವು ಒಟ್ಟು ಇವಿ ನೋಂದಣಿಯಲ್ಲಿ 3ನೇ ಸ್ಥಾನ ಪಡೆದಿದ್ದು, e-2W (ಎಲೆಕ್ಟ್ರಿಕ್ ಎರಡು ಚಕ್ರ ವಾಹನ) ಮತ್ತು e-4W (ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನ) ನೋಂದಣಿಯಲ್ಲಿ 2ನೇ ಸ್ಥಾನ ಪಡೆದಿದೆ. ಇದು ರಾಜ್ಯದ ಜನರು ಎಲೆಕ್ಟ್ರಿಕ್ ವಾಹನಗಳನ್ನು ಸ್ವೀಕರಿಸುವ ಪ್ರಮಾಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. 2027 ಹಣಕಾಸು ವರ್ಷದಲ್ಲಿ EV ಪ್ರವೇಶ ಪ್ರಮಾಣ 14.67% ಆಗಿದ್ದು, ಇದು ದೇಶದ ಮಟ್ಟದಲ್ಲಿ ಗಮನಾರ್ಹ ಸಾಧನೆಯಾಗಿದೆ.
ರಾಜ್ಯದ ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಬೆಸ್ಕಾಂ ನೊಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಚಾರ್ಜಿಂಗ್ ಸೌಲಭ್ಯ, ಹಾಗೂ ಶುದ್ಧ ಚಲನೆಗೆ ಅಗತ್ಯವಾದ ತಂತ್ರಜ್ಞಾನವನ್ನು ಒದಗಿಸುವಲ್ಲಿ ಬೆಸ್ಕಾಂ ಪ್ರಮುಖ ಪಾತ್ರವಹಿಸಿದೆ.
ಕರ್ನಾಟಕ ಸರ್ಕಾರವು ಶುದ್ಧ ಚಲನೆಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವಿ ಖರೀದಿಗೆ ಪ್ರೋತ್ಸಾಹಕ ಯೋಜನೆಗಳು, ಚಾರ್ಜಿಂಗ್ ಮೂಲಸೌಕರ್ಯ ವಿಸ್ತರಣೆ, ಹಾಗೂ ಹಸಿರು ತಂತ್ರಜ್ಞಾನವನ್ನು ಉತ್ತೇಜಿಸುವ ಕ್ರಮಗಳು ಇವಿ ಕ್ರಾಂತಿಗೆ ಬಲ ನೀಡಿವೆ.
ಇವಿ ಬಳಕೆಯ ಹೆಚ್ಚಳದಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದು, ಇಂಧನ ಅವಲಂಬನೆ ಕಡಿಮೆಯಾಗುವುದು ಹಾಗೂ ಶುದ್ಧ ಶಕ್ತಿಯ ಬಳಕೆ ಹೆಚ್ಚಾಗುವುದು. ಇದು ಕರ್ನಾಟಕವನ್ನು ಹಸಿರು ರಾಜ್ಯವಾಗಿ ರೂಪಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.
ವಿಶ್ವ ಇವಿ ದಿನದ ಅಂಗವಾಗಿ, ಕರ್ನಾಟಕವು ತನ್ನ ಸಾಧನೆಗಳನ್ನು ಹಂಚಿಕೊಂಡು, ಮುಂದಿನ ದಿನಗಳಲ್ಲಿ ಶುದ್ಧ ಚಲನೆಗೆ ಇನ್ನಷ್ಟು ಬಲ ನೀಡಲು ಬದ್ಧವಾಗಿದೆ. ಇವಿ ಕ್ರಾಂತಿಯ ಮೂಲಕ ಕರ್ನಾಟಕವು ಭಾರತದ ಭವಿಷ್ಯವನ್ನು ಹಸಿರು ಮತ್ತು ಶಾಶ್ವತ ದಿಕ್ಕಿನಲ್ಲಿ ಮುನ್ನಡೆಸುತ್ತಿದೆ.

-
ದಿನದ ಸುದ್ದಿ5 days agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ4 days agoರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
-
ದಿನದ ಸುದ್ದಿ4 days agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ4 days agoಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
-
ದಿನದ ಸುದ್ದಿ5 days ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ5 days agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ5 days agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
-
ದಿನದ ಸುದ್ದಿ5 days agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್










