ದಿನದ ಸುದ್ದಿ
ಭಾರತದ ಸಂವಿಧಾನ ದಿನದ ಮಹತ್ವ
- ಸಿದ್ದು.ಮಮದಾಪೂರ, ವಿಜಯಪುರ
ಭಾರತದ ಸಂವಿಧಾನ ಇಡೀ ಪ್ರಪಂಚದ ಗಮನವನ್ನೇ ಸೆಳೆದಿರುವುದು ನಮಗೆ ಹೆಮ್ಮೆ ತರುವ ವಿಷಯ. ಸಂವಿಧಾನ ಎಂಬುವುದು ಜೀವನದ ಪ್ರಮುಖ ಘಟ್ಟ, ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳುವುದು ಹಾಗೂ ಸಂವಿಧಾನಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ.
ಭಾರತದ ಆಡಳಿತ ವ್ಯವಸ್ಥೆ ಸಂವಿಧಾನದ ಮೇಲೆ ಅವಲಂಬಿತವಾಗಿದ್ದು, ದೇಶ ಅತೀ ವೇಗದಲ್ಲಿ ಆರ್ಥಿಕ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ, ಮುಂತಾದ ಎಲ್ಲಾ ರಂಗಗಳಲ್ಲಿಯೂ ಬೆಳೆಯುತ್ತಿರಲು ಸಂವಿಧಾನ ಬಹುಮುಖ್ಯ ಪಾತ್ರ ವಹಿಸುತ್ತಿದೆ.
ಸಂವಿಧಾನದ ಮಹತ್ವದ ತಿಳಿಯಬೇಕು
ಭಾರತ ಸಂವಿಧಾನವು ಜಗತ್ತಿನಲ್ಲಿನ ಅತಿ ದೊಡ್ಡ ಸಂವಿಧಾನ ಎಂದು ಹೇಳಲಾಗುತ್ತದೆ. ಇದು ಸದ್ಯ 448 ವಿಧಿಗಳು 12 ಪರಿಚ್ಛೇದಗಳು 101 ತಿದ್ದುಪಡಿಗಳನ್ನು ಹೊಂದಿದೆ. ಇಂತಹ ಬೃಹತ್ ಸಂವಿಧಾನವು ಜನೆವರಿ 26 1950 ರಂದು ಇದನ್ನು ಜಾರಿಗೆ ತರಲಾಯಿತು. ಆ ದಿನವನ್ನು ಗಣರಾಜ್ಯ ದಿನ ಎಂದು ಗೊಷಿಸಲಾಯಿತು.
ಆದರೆ ಇದಕ್ಕೂ ಮುಂಚೆ ನವಂಬರ್ 26 ರಂದು ಸಂಸತ್ತಿನ ಶಾಸನ ಸಭೆಯಲ್ಲಿ ಅಂಬೇಡ್ಕರರು ಸಂವಿಧಾನವನ್ನು ಮಂಡಿಸಿ ಮಾತನಾಡಿದ ದಿನವನ್ನೇ ಈಗ ಸಂವಿಧಾನದ ದಿನ ಎಂದು ಆಚರಿಸಲಾಗುತ್ತಿದೆ. ಅಂಬೇಡ್ಕರರವರು ಅಂದು ನವಂಬರ್ 26ರಂದು ಶಾಸನ ಸಭೆಯಲ್ಲಿ ಮಾತನಾಡುತ್ತಾ “ಜನವರಿ 26, 1950ರಂದು ನಾವು ವೈರುಧ್ಯಗಳ ಬದುಕಿಗೆ ಕಾಲಿಡಲಿದ್ದೇವೆ.
ರಾಜಕೀಯದಲ್ಲಿ, ನಮಗೆ ಸಮಾನತೆಯಿರುತ್ತದೆ ಆದರೆ ಸಾಮಾಜಿಕ ಹಾಗೂ ಆರ್ಥಿಕ ಸಂರಚನೆಗಳಲ್ಲಿ ಅಸಮಾನತೆಯಿರುತ್ತದೆ; ಒಬ್ಬ ಮನುಷ್ಯ ಒಂದು ಮೌಲ್ಯ ಎಂಬ ತತ್ವವನ್ನು ನಿರಾಕರಿಸುತ್ತಲೇ ಹೋಗುತ್ತಿರುತ್ತೇವೆ. ಈ ವೈರುಧ್ಯಗಳ ಬದುಕನ್ನು ಎಷ್ಟು ದಿನ ಹೀಗೇ ಮುಂದುವರೆಸಿಕೊಂಡು ಹೋಗುತ್ತೇವೆ? ನಮ್ಮ ಸಾಮಾಜಿಕ ಮತ್ತು ಆರ್ಥಿಕ ಬದುಕಿನಲ್ಲಿ ಸಮಾನತೆಯ ನಿರಾಕರಣೆಯನ್ನು ಎಷ್ಟು ದಿನ ಹೀಗೇ ಮುಂದುವರೆಸುತ್ತೇವೆ?
ಬಹಳ ಕಾಲ ಹೀಗೇ ಇದು ಮುಂದುವರೆಯಿತೆಂದರೆ ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನೇ ತೊಂದರೆಗೆ ಸಿಲುಕಿಸುತ್ತಿದ್ದೇವೆ ಎಂದೇ ಅರ್ಥ. ನಾವು ಆದಷ್ಟು ಬೇಗನೇ ಈ ವೈರುಧ್ಯವನ್ನು ನಿವಾರಿಸಿಕೊಳ್ಳಬೇಕು. ಇಲ್ಲವಾದರೆ ಅಸಮಾನತೆಯಿಂದ ನರಳುತ್ತಿರುವವರು ಈ ಸಂವಿಧಾನ ರಚನಾ ಸಭೆಯು ಇಷ್ಟು ಶ್ರಮವಹಿಸಿ ಕಟ್ಟಿರುವ ಪ್ರಜಾಪ್ರಭುತ್ವದ ಸೌಧವನ್ನೇ ಪುಡಿಗಟ್ಟಿಬಿಡುತ್ತಾರಷ್ಟೆ” ಎನ್ನುವ ಎಚ್ಚರಿಕೆಯನ್ನು ಅಂಬೇಡ್ಕರ್ ರವರು ಶಾಸನ ಸಭೆಯ ಮುಂದೆ ಇಡುತ್ತಾರೆ.
ಆದ್ದರಿಂದ ಸರ್ಕಾರವು ಈ ದಿನವನ್ನು ಸ್ಮರಣಿಯ ಗೊಳಿಸುವ ಸಲುವಾಗಿ ಭಾರತ ಸರ್ಕಾರವು 2015 ರಲ್ಲಿ ಅಂಬೇಡ್ಕರರ 125ನೇ ಜನ್ಮೊತ್ಸವದ ಆಚರಣೆಯ ಸಂಧರ್ಭದಲ್ಲಿ ನವಂಬರ್ 19 ರಂದು ತನ್ನ ಗೆಜೆಟ್ನಲ್ಲಿ ನವಂಬರ್ 26 ನ್ನು ಸಂವಿಧಾನ ದಿವಸ್ ಎಂದು ಪ್ರಕಟಣೆಯನ್ನು ಹೊರಡಿಸಿತು.ಅಂದಿನಿಂದ ಇದನ್ನು ಸಂವಿಧಾನದ ಮಹತ್ವ ಮತ್ತು ಅಂಬೇಡ್ಕರರ ವಿಚಾರಧಾರೆಗಳನ್ನು ಜನರಲ್ಲಿ ಬಿತ್ತುವ ನಿಟ್ಟಿನಲ್ಲಿ ಈ ದಿನವನ್ನು ಸರ್ಕಾರ ಅಧಿಕೃತವಾಗಿ ಆಚರಿಸುತ್ತಾ ಬರುತ್ತಿದೆ.ಇದಕ್ಕೂ ಮೊದಲು ಈ ದಿನವನ್ನು ಕಾನೂನು ದಿನ ಎಂದು ಸಹ ಆಚರಿಸಲಾಗುತಿತ್ತು.
ಪ್ರಧಾನಿ ಮೋದಿಯವರು 2015 ರ ಅಂಬೇಡ್ಕರ್ ರವರ ವರ್ಷಪೂರ್ತಿ ಆಚರಣೆಗೆ ಚಾಲನೆಯನ್ನು ಮುಂಬೈನ ಅಂದು ಮಿಲ್ಸ್ ಕಂಪೌಂಡ್ ನಲ್ಲಿ ಅವರ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿಸುವದರ ಮೂಲಕ ಚಾಲನೆ ನೀಡಿದರು. ಈ ದಿನದಂದು ಸರ್ಕಾರವು ಪ್ರತಿ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ವಿಧ್ಯಾರ್ಥಿಗಳಿಗೆ ಓದಿಸಲಾಗುತ್ತದೆ. ಆದರೆ ಈ ವರ್ಷ ಕೋವಿಡ್ 19 ಕೊರೊನಾ ರೋಗದಿಂದ ಇರುವುದರಿಂದ ಸರ್ಕಾರಿ ಇಲಾಖೆಯಲ್ಲಿ ಆಚರಣೆ ಮಾಡಲು ಆದೇಶ ನೀಡಿದೆ…
ಭಾರತ ಸಂವಿಧಾನದ ಸ್ವಾರಸ್ಯಗಳಿವು..!
- ಭಾರತದಲ್ಲಿ ಸಂವಿಧಾನವನ್ನು 1949ರ ನವೆಂಬರ್ 26ರಂದು ಸ್ವೀಕರಿಸಲಾಯಿತು. ಇದು 1950ರ ಜನವರಿ 26ರಂದು ಅನುಷ್ಠಾನಕ್ಕೆ ಬಂತು.
- ಭಾರತದ ಸಂವಿಧಾನವು ಟೈಪ್ ಮಾಡಿರುವುದಲ್ಲ ಅಥವಾ ಮುದ್ರಿತವೂ ಅಲ್ಲ. ಅದನ್ನು ಕೈಯಲ್ಲಿ ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ.
- ಭಾರತ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಇದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿದೆ.
- ಭಾರತ ಸಂವಿಧಾನವನ್ನು ಬೇರೆ ಕಡೆಗಳಿಂದ ಪಡೆದ ಅಂಶಗಳ ಚೀಲ ಎಂದು ಕರೆಯಲಾಗುತ್ತಿದೆ.
- ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಪಡೆಯಲಾಗಿದೆ.
- ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ಪಡೆಯಲಾಗಿದೆ.
- ರಾಜ್ಯ ನಿರ್ದೇಶನ ತತ್ವಗಳು ಐರ್ಲೆಂಡ್ ಸಂವಿಧಾನದ ಕೊಡುಗೆ
ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್‍ನಿಂದ ಎರವಲು ಪಡೆಯಲಾಗಿದೆ. - ಇದು ವಿಶ್ವದ ಯಾವುದೇ ಸ್ವತಂತ್ರ್ಯ ದೇಶಗಳ ಅತಿ ಉದ್ದವಾದ ಸಂವಿಧಾನವಾಗಿದೆ.
- ಭಾರತದ ಸಂವಿಧಾನದಲ್ಲಿ 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳಿವೆ.
- ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳೆಯರು.
- ಇದರ ಕರಡನ್ನು 1949ರ ನವೆಂಬರ್‍ನಲ್ಲಿ ಸಲ್ಲಿಸಲಾಯಿತು. ಸಲ್ಲಿಕೆ ಬಳಿಕ ಅದನ್ನು ಪೂರ್ಣಗೊಳಿಸಲು ಮೂರು ವರ್ಷ ಬೇಕಾಯಿತು.
- ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲ 284 ಮಂದಿ ಸದಸ್ಯರು 1950ರ ಜನವರಿ 24ರಂದು ಈ ದಾಖಲೆಗೆ ಸಹಿ ಮಾಡಿದರು.
- 1950ರ ಜನವರಿ 26ರಂದು ಇದು ಅಸ್ತಿತ್ವಕ್ಕೆ (ಜಾರಿಗೆ ) ಬಂತು.ಭಾರತದ ರಾಷ್ಟ್ರಲಾಂಛನವನ್ನೂ ಅದೇ ದಿನ (ಜ.26) ಅಳವಡಿಸಿಕೊಳ್ಳಲಾಯಿತು.
- ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲೊಂದು ಎಂದು ಹೇಳಲಾಗಿದೆ. ಏಕೆಂದರೆ ಇದಕ್ಕೆ ಕಾಲಕಾಲಕ್ಕೆ ತಿದ್ದುಪಡಿ ತರಬಹುದು.
ನಮ್ಮ ದೇಶದಲ್ಲಿ ಅಭಿವೃದ್ಧಿ ಸಾಧಿಸಲು, ನಮ್ಮ ಸಂವಿಧಾನ ಭಾತೃತ್ವ, ಸಹೋದರತೆ, ಸಮಾನತೆಯ ನೆಲೆಯಿಂದ ಕೂಡಿದೆ. ಮಹಿಳೆಯರು, ದಲಿತರು, ಬುಡಕಟ್ಟು ಸಮುದಾಯ ಸೇರಿ ಎಲ್ಲ ವರ್ಗೀಯ ಜನರು ತಲೆ ಎತ್ತಿ ಬದುಕಲು ಸಂವಿಧಾನ ಅವಕಾಶ ಕಲ್ಪಸಿಕೊಟ್ಟಿದೆ.
ಸಂವಿಧಾನ ಧ್ವನಿ ಇರದವರಿಗೆ, ಧ್ವನಿಯಾಗುವ ಮೂಲಕ ಅವರ ಹಕ್ಕುಗಳನ್ನು ತಂದುಕೊಟ್ಟಿದೆ. ಇಂಥ ಸಂವಿಧಾನ ಕೊಡುಗೆಯಾಗಿ ನೀಡಿದ ಡಾ| ಅಂಬೇಡ್ಕರ ಅವರಿಗೆ ಭಾರತೀಯರಾದ ನಾವೆಲ್ಲ ಸದಾ ಋಣಿಯಾಗಿರಬೇಕು. ದೇಶದಲ್ಲಿ ಹಲವಾರು ಜಾತಿ, ಧರ್ಮ, ಮತ, ಪಂಗಡಗಳಿದ್ದರೂ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸ್ವತಂತ್ರವಾಗಿ ಸಂತಸದಿಂದ ಬದುಕಲು ಸಂವಿಧಾನವೇ ಕಾರಣವಾಗಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್ ಕುಣಿಗಲ್ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್. ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್. ಎನ್ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್ ಹಿರಿಯಡಕ ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ ʼಬಾವಿಗೆ ಬಿದ್ದರೂʼ, ಒಟ್ಟು ಈ ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.
ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.
ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.
ಕವಿತೆ ಸ್ಪರ್ಧೆ ಫಲಿತಾಂಶ
ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.
ಫೈಜ್ನಟ್ರಾಜ್ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.
ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


