Connect with us

ರಾಜಕೀಯ

ಜೈ ಹಿಂದ್, ಜೈ ಕರ್ನಾಟಕ

Published

on

ಪ್ರಾಥಮಿಕ ಶಾಲಾ ದಿನಗಳು ನೆನಪಾಗುತ್ತಿವೆ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮತ್ತು ರಾಜ್ಯೋತ್ಸವ ದಿನಗಳಂದು ನಮ್ಮೊಳಗೆ ಎಲ್ಲಿಲ್ಲದ ಹುಮ್ಮಸ್ಸು ರೂಪುಗೊಳ್ಳುತ್ತಿತ್ತು. ಭಾಷಣ, ಗಾಯನ ಹೀಗೆ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದವು. ಮುಖ್ಯವಾಗಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಗೆಲ್ಲುವ ತವಕವಿರುತ್ತಿತ್ತು. ಆ ದಿನಗಳಲ್ಲಿ ಅಪ್ಪ ಬರೆದುಕೊಡುತ್ತಿದ್ದ ಎರಡು ಪುಟಗಳ ಭಾಷಣವನ್ನು ಓದಿಕೊಳ್ಳಬೇಕಾಗುತ್ತಿತ್ತು. ಅವರು ಅದರೊಳಗಿನ ತಿರುಳನ್ನು ಹೇಳಿಕೊಡುತ್ತಿದ್ದರು. ಅದನ್ನಷ್ಟೇ ತಿಳಿದುಕೊಂಡು ಭಾಷಣದ ವೇಳೆ ಆ ಕ್ಷಣಕ್ಕೆ ವ್ಯಕ್ತಪಡಿಸಬೇಕು ಎಂದು ಸಲಹೆ ನೀಡುತ್ತಿದ್ದರು. ಆದರೆ, ನಾವು ಆ ಪ್ರತಿಯೊಳಗಿನ ಪ್ರತಿ ವಾಕ್ಯ, ಪದಗಳನ್ನು ಉರುಹೊಡೆದು ನೆನಪಿನಲ್ಲಿರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದೆವೇ ಹೊರತು ಅವರು ಹೇಳಿದ ಹಾಗೆ ಇಡೀ ಪ್ರತಿಯಲ್ಲಿನ ಮಹತ್ವದ ಅಂಶಗಳನ್ನು ಮನನ ಮಾಡಿಕೊಳ್ಳುತ್ತಿರಲಿಲ್ಲ. ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹ, ನಾನೇ ಮೊದಲ ಬಹುಮಾನ ಗೆಲ್ಲಬೇಕು ಎಂಬ ಆಸೆಯೇನೋ ಇರುತ್ತಿತ್ತು. ಆ ಕ್ಷಣಕ್ಕೆ ಉರುಹೊಡೆದ ಪದ, ವಾಕ್ಯಗಳು ನೆನಪಾಗದಿದ್ದರೆ ಎಂಬ ಭಯವೂ ಇತ್ತು. ಇದರ ಮಧ್ಯೆಯೂ ಖುಷಿ ನೀಡುತ್ತಿದ್ದ ಸಂಗತಿ ಎಂದರೆ ಭಾಷಣವು ಕೊನೆಗೊಳ್ಳುವ ಸಂದರ್ಭದಲ್ಲಿ ನಾವು ದೊಡ್ಡ ಧ್ವನಿಯಲ್ಲಿ ಹೇಳುತ್ತಿದ್ದ ‘ಜೈ ಹಿಂದ್, ಜೈ ಕರ್ನಾಟಕ’ ಉದ್ಘೋಷ. ಕೊನೆಗೂ ಭಾಷಣ ಮುಗಿಯಿತು ಎಂಬ ನಿರಾಳ ಭಾವವೂ ಸೇರಿ ಆ ಧ್ವನಿಗೆ ಶಕ್ತಿ ಬರುತ್ತಿತ್ತು.

ಮೊದಲ ಪುಟದಲ್ಲಿ ಉಲ್ಲೇಖಿಸಲ್ಪಟ್ಟ ವಾಕ್ಯ, ಪದಗಳು ಸುಲಭವಾಗಿ ನೆನಪಾಗುತ್ತಿದ್ದವು. ಆದರ್ಶ ವ್ಯಕ್ತಿತ್ವಗಳ ಹೆಸರುಗಳನ್ನು ಕ್ರಮಾನುಗತವಾಗಿ ಪ್ರಸ್ತುತಪಡಿಸುತ್ತಿದ್ದೆವು. ಆದರೆ, ತದನಂತರದ ಪುಟದ ವಾಕ್ಯಗಳನ್ನು ಹೇಳುವಾಗ ದ್ವಂದ್ವವಾಗುತ್ತಿತ್ತು. ಭಾಷಣ ಪ್ರತಿಯ ವಿಚಾರಗಳನ್ನು ಸಂಪೂರ್ಣವಾಗಿ ಗೊತ್ತುಮಾಡಿಕೊಳ್ಳದೇ ಕೇವಲ ಉರುಹೊಡೆದ ಕಾರಣಕ್ಕೇ ಈ ಸಮಸ್ಯೆ ಎಂಬುದು ಆಮೇಲೆ ಮನದಟ್ಟಾಯಿತು. ಹಾಗೆ ಮನದಟ್ಟಾದರೂ ಉರುಹೊಡೆದು ಓದಿಕೊಳ್ಳುವ ರೂಢಿಗತ ಅಭ್ಯಾಸ ಬಹುದಿನಗಳ ಕಾಲ ಮುಂದುವರೆದಿತ್ತು. ತೊದಲು ಮಾತು ಪರಿಪೂರ್ಣತೆಯ ಹಂತ ತಲುಪುವವರೆಗಿನ ಅವಧಿ, ನಮ್ಮೊಳಗೆ ಭಾಷೆಯ ಆಕೃತಿಗಳು ಆವರಿಸಿಕೊಳ್ಳುವ ರೀತಿ, ಆ ಮೂಲಕ ನಮಗೆ ಹರಿದುಬರುವ ಮಾಹಿತಿ, ಜ್ಞಾನ – ಇವೆಲ್ಲವೂ ಪ್ರಾಥಮಿಕ ಶಾಲಾ ದಿನಗಳಲ್ಲಿ ಕ್ರಮೇಣ ಅರಿವಿಗೆಟುಕಿದ್ದವು. ನಮ್ಮ ಗಮನವೆಲ್ಲವೂ ಶಾಲೆ, ತರಗತಿ, ಟೀಚರ್ಸ್, ಸ್ನೇಹಿತರು, ಆಟ, ರಜೆಗಳು ಆರಂಭವಾಗುವ ತಿಂಗಳು, ಓದುವ ಅವಧಿಯ ನಂತರ ಆಟಕ್ಕೆ ಹೋಗುವ ಕುತೂಹಲದ ಕಡೆಗೇ ಕೇಂದ್ರೀಕೃತವಾಗಿರುತ್ತಿತ್ತು. ರಾಜಕೀಯವು ಬಾಲ್ಯದ ಪ್ರಜ್ಞೆಯ ಆವರಣದ ಆಚೆಗೇ ಇರುತ್ತಿತ್ತು.

ಈಗ ಹಾಗಲ್ಲ. ಪ್ರಾಥಮಿಕ ಹಂತದಿಂದಲೇ ಶಿಕ್ಷಣದ ಭಾಷೆ ಯಾವುದಾಗಿರಬೇಕು ಎನ್ನುವುದನ್ನು ವಿವೇಚನಾರಹಿತವಾಗಿ ನಿರ್ಧರಿಸಿಬಿಡುವ ವಿಚಿತ್ರ ರಾಜಕಾರಣವು ಮಕ್ಕಳ ಕಲಿಕೆಯ ಸ್ವಾತಂತ್ರ್ಯದ ಮೇಲೆ ದಾಳಿಗೈಯ್ಯುತ್ತಿದೆ. ತರಗತಿಯೊಳಗೆ ಪಠ್ಯವಾಗಿ ಕಲಿಯಲ್ಪಡುವ ಸಂಗತಿಗಳು ರಾಜಕೀಯ ಬಣ್ಣ ಪಡೆಯುತ್ತಿವೆ. ಮೇಷ್ಟ್ರು ಹಾಜರಾತಿ ದೃಢೀಕರಿಸಿಕೊಳ್ಳಲು ನಮ್ಮ ಹೆಸರು ಕೂಗಿದ ತಕ್ಷಣ ಎಸ್ ಸರ್, ಪ್ರೆಸೆಂಟ್ ಸರ್, ಇದೀನಿ ಸಾರ್ ಎಂದು ಪ್ರತಿಕ್ರಿಯಿಸುವ ಸ್ವಾತಂತ್ರ್ಯವನ್ನು ಅಧಿಕಾರ ರಾಜಕಾರಣ ಕಿತ್ತುಕೊಳ್ಳುವುದರ ಕಡೆಗೆ ಆಸಕ್ತಿ ತೋರುತ್ತಿದೆ. ಯಾರು ಹೇಳಲಿ ಬಿಡಲಿ, ಮೇರಾ ಭಾರತ್ ಮಹಾನ್ ಎಂಬ ಹೆಮ್ಮೆಯ ಭಾವವು ರಾಷ್ಟ್ರೀಯ ಉತ್ಸವಗಳ ಮೂಲಕ ಮಕ್ಕಳಲ್ಲಿ ಮೇಳೈಸಿರುತ್ತದೆ. ನಮ್ಮ ನೆಲ, ಜಲದ ಕುರಿತಾದ ಅಭಿಮಾನವನ್ನು ಅಷ್ಟು ಸುಲಭವಾಗಿ ನಮ್ಮಿಂದ ದೂರಮಾಡಲಾಗದು. ಎಸ್ ಸರ್, ಪ್ರೆಸೆಂಟ್ ಸರ್ ಎನ್ನುವ ಬದಲು ಜೈ ಹಿಂದ್ ಹೇಳಬೇಕು ಎನ್ನುವ ಆಡಳಿತಾತ್ಮಕ ನಿಯಮಾವಳಿ ರೂಪಿಸಿ ಅನುಷ್ಠಾನಕ್ಕೆ ತರುವ ಪ್ರಯತ್ನ ರಾಷ್ಟ್ರದ ಕುರಿತಾದ ಅಭಿಮಾನ ಮತ್ತು ಹೆಮ್ಮೆಯ ಭಾವದ ಸಹಜತೆಯನ್ನು ಒಡೆಯುತ್ತದೆ.

ಶಿಕ್ಷಣವು ವಿದ್ಯಾರ್ಥಿಕೇಂದ್ರಿತವಾಗಿರಬೇಕೇ ಹೊರತು ಅಧಿಕಾರಕೇಂದ್ರಿತ ಅತಾರ್ಕಿಕ ನಿರ್ಧಾರಗಳ ತಿವಿತಕ್ಕೀಡಾಗಬಾರದು. ಪ್ರಾಥಮಿಕ, ಪ್ರೌಢ, ಕಾಲೇಜು, ಸ್ನಾತಕೋತ್ತರ – ಹೀಗೆ ಒಂದೊಂದು ಹಂತದಲ್ಲೂ ವಿದ್ಯಾರ್ಥಿಗಳ ಕಲಿಕೆಯು ಹೊಸ ಆಯಾಮ ಪಡೆದುಕೊಳ್ಳುತ್ತಿರುತ್ತದೆ. ವಿದ್ಯಾರ್ಥಿಗಳಿಗೆ ಒಳಿತು-ಕೆಡಕುಗಳ ವಿವೇಚನೆಯು ಹಂತಹಂತವಾಗಿಯೇ ಜೊತೆಯಾಗುತ್ತಾ ಹೋಗುತ್ತದೆ. ಶಿಕ್ಷಕರು, ಪಠ್ಯ ಮತ್ತು ಹಿರಿಯರ ಸಾಂದರ್ಭಿಕ ಮಾತುಗಳ ನೆರವಿನೊಂದಿಗೆ ಅವರು ವಿವೇಚನೆಯನ್ನು ತಮ್ಮದಾಗಿಸಿಕೊಳ್ಳುತ್ತಿರುತ್ತಾರೆ. ಇಂಥ ವಿವೇಚನೆಯನ್ನು ಗಟ್ಟಿಗೊಳಿಸುವ ಹಾಗೆಯೇ ಶಿಕ್ಷಣವು ಪುನರ್‍ಸ್ವರೂಪವನ್ನು ಪಡೆದುಕೊಳ್ಳುತ್ತಿರಬೇಕು. ಈ ಸಾಧ್ಯತೆಯು ಎಷ್ಟು ಬೇಗ ಅನುಷ್ಠಾನಗೊಳ್ಳುತ್ತದೋ ಅಷ್ಟೇ ತೀವ್ರಗತಿಯಲ್ಲಿ ಶಿಕ್ಷಣ ವಲಯದಲ್ಲಿನ ಸುಧಾರಣೆಯ ಪ್ರಕ್ರಿಯೆ ಚಾಲ್ತಿಗೆ ಬರುತ್ತದೆ. ಈ ವಿಷಯದಲ್ಲಿ ಅಧ್ಯಾಪಕವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರ ಪ್ರತಿಕ್ರಿಯೆಗಳನ್ನು ಆಧರಿಸಿಯೇ ಶಾಸಕಾಂಗ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಣ ಇಲಾಖೆಯನ್ನು ಪ್ರತಿನಿಧಿಸುವ ಉನ್ನತ ಹಂತದ ಅಧಿಕಾರಿಗಳು ಈ ವಿಷಯದಲ್ಲಿ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.

ಇಂಥ ಇಚ್ಛಾಶಕ್ತಿಯು ಬೆರಳೆಣಿಕೆಯ ಅಧಿಕಾರಿಗಳಲ್ಲಿ ಮಾತ್ರ ಇದೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಅಧಿಕಾರಿಗಳ ನಿರ್ಲಿಪ್ತ ದೃಷ್ಟಿಕೋನವು ಶಾಸಕಾಂಗವನ್ನು ಪ್ರತಿನಿಧಿಸುವ ರಾಜಕಾರಣಿಗಳ ಅತಾರ್ಕಿಕ ನಿರ್ಧಾರ ಮತ್ತು ಲಾಬಿಗಳಿಗೆ ಶಿಕ್ಷಣ ವಲಯವು ಮಣಿಯಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ದೂರಗಾಮಿ ಪರಿಣಾಮಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಅಮೂಲ್ಯ ವಾರ್ಷಿಕ ಯೋಜನೆಗಳನ್ನು ರೂಪಿಸುವ ಬದಲು ಅವರು ಯಥಾಸ್ಥಿತಿಯನ್ನಷ್ಟೇ ಮುಂದುವರೆಸುತ್ತಿದ್ದಾರೆ. ಈ ಬಗೆಯ ತಮ್ಮ ಮಿತಿಯು ಚರ್ಚೆಗೊಳಗಾಗುತ್ತಿದೆ ಎಂಬ ಸುಳಿವು ಸಿಕ್ಕಾಕ್ಷಣವೇ ಜನಪ್ರಿಯ ಧಾಟಿಯ ವಿವಾದಗಳಿಗೆ ಸರಕು ಒದಗಿಸಬಲ್ಲ ವಿವೇಚನಾರಹಿತ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಲಾಭದ ಹಸಿವಿನಿಂದ ಬಳಲುವ ಸುದ್ದಿಮಾಧ್ಯಮಗಳಿಗೆ ಬಂಡವಾಳ ದುಡಿಯುವ ವಿವಾದದ ಸರಕನ್ನು ಒದಗಿಸುತ್ತಾರೆ. ಪರ ಮತ್ತು ವಿರೋಧಗಳ ಭಾವಾವೇಶದ ಗದ್ದಲದಲ್ಲಿ ಶಿಕ್ಷಣ ವಲಯದಲ್ಲಿ ಕಾಣಲೇಬೇಕಾದ ಸುಧಾರಣೆಯ ಹೆಜ್ಜೆಗಳ ವಿಸ್ತøತ ಚರ್ಚೆಯೇ ನಡೆಯುವುದಿಲ್ಲ. ಆ ಚರ್ಚೆಯಿಲ್ಲದೇ ಇಡೀ ವೃತ್ತಾಂತ ಕೊನೆಗೊಳ್ಳುತ್ತದೆ. ಜನರೂ ಆ ಕ್ಷಣದ ವಿವಾದಾತ್ಮಕ ಸಂಗತಿಯನ್ನು ಮರೆತುಬಿಡುತ್ತಾರೆ. ಚುನಾವಣೆ ಹತ್ತಿರವಾದಾಗ ಇಂಥದ್ದೇ ವಿವಾದೋದ್ಯಮದ ಲಾಭದ ಹವಣಿಗೆಯ ಭಾವೋನ್ಮಾದದ ವಿಷಯಗಳು ಮುನ್ನೆಲೆಗೆ ಬರುತ್ತವೆ.

ತರಗತಿಯಲ್ಲಿರುವ ಮಕ್ಕಳು ಮೇಷ್ಟ್ರು ಹೆಸರು ಹೇಳಿದಾಗ ಎಸ್ ಸರ್ ಎನ್ನುವ ಬದಲು ಜೈಹಿಂದ್ ಎಂದು ಹೇಳಬಹುದು. ಅದು ಕ್ರಿಯೆಯೊಂದಕ್ಕೆ ದಕ್ಕುವ ನಿರ್ದಿಷ್ಟ ಪ್ರತಿಕ್ರಿಯೆಯಾಗುತ್ತದಷ್ಟೇ. ನನ್ನ ಹೆಸರು ಹೇಳಿದ ತಕ್ಷಣ ನಾನು ಕ್ಲಾಸ್‍ನಲ್ಲಿದ್ದೇನೆ ಎಂಬುದನ್ನು ಸ್ಪಷ್ಟಪಡಿಸುವುದಕ್ಕೆ ಎಸ್ ಸರ್ ಅಥವಾ ಪ್ರೆಸೆಂಟ್ ಸರ್ ಎನ್ನುವ ಪ್ರತಿಕ್ರಿಯೆ ಬಳಕೆಯಾಗುತ್ತದೆ. ಗುರುಗಳು ಹೆಸರು ಕೂಗುವುದು, ವಿದ್ಯಾರ್ಥಿಗಳು ಓಗೊಡುವುದು – ಇವೆರಡೂ ತರಗತಿಯಲ್ಲಿ ನಡೆಯುವ ಅತ್ಯಂತ ಸಹಜ ಆಡಳಿತಾತ್ಮಕ ಕ್ರಿಯೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಭಾವುಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಕ್ರಿಯೆಯನ್ನಾಗಿಯೂ ಇದನ್ನು ನೋಡಬಹುದು. ರೆಗ್ಯುಲರ್ ಆಗಿ ತರಗತಿಗೆ ಹಾಜರಾಗುವ ವಿದ್ಯಾರ್ಥಿ ಎಸ್ ಸರ್ ಎಂದು ಹೇಳದಿದ್ದರೆ ಶಿಕ್ಷಕರಿಗೆ ಕಸಿವಿಸಿಯಾಗುತ್ತದೆ. ಯಾಕೆ ಬಂದಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ತರಗತಿಗೆ ಚಕ್ಕರ್ ಹೊಡೆಯುವುದನ್ನೇ ಪ್ರವೃತ್ತಿಯಾಗಿಸಿಕೊಂಡವರ ಕುರಿತೂ ಕಾಳಜಿ ಇರುತ್ತದೆ. ಅವರು ಎಷ್ಟೋ ದಿನಗಳ ನಂತರ ಹಾಜರಾಗಿ ಎಸ್ ಸರ್ ಎಂದಾಗ ಪ್ರೀತಿಯಿಂದ ಗದರಿ ಇನ್ಮೇಲಿಂದ ರೆಗ್ಯುಲರ್ ಆಗಿ ಕ್ಲಾಸ್ ಅಟೆಂಡ್ ಆಗಬೇಕು ಎಂದು ಹೇಳುತ್ತಾರೆ. ಇಂಥದ್ದೊಂದು ಶೈಕ್ಷಣಿಕ ಬಾಂಧವ್ಯದ ಆಯಾಮವಿರುವ ಈ ಕ್ರಿಯೆಯನ್ನು ಆಡಳಿತಾತ್ಮಕ ನಿಯಮ ಮತ್ತು ದೇಶಪ್ರೇಮದ ಪರಿಧಿಯ ಕಡ್ಡಾಯ ಆವರಣದೊಳಗೆ ತರುವುದು ಮಕ್ಕಳ ವಿವೇಚನೆಯ ಯಾನದ ಸಕಾರಾತ್ಮಕತೆಯ ದೃಷ್ಟಿಯಿಂದ ಅಪಾಯಕಾರಿ ಎಂದೆನ್ನಿಸುತ್ತದೆ.

ಹಿಂದೆಲ್ಲಾ ಪೆನ್ನು, ನೋಟ್ ಬುಕ್‍ಗಳ ಮೇಲೆ ಕಾಣಿಸಿಕೊಳ್ಳುತ್ತಿದ್ದ ‘ಮೇರಾ ಭಾರತ್ ಮಹಾನ್’ ಎಂಬ ಒಕ್ಕಣೆಯು ನಮ್ಮೊಳಗೆ ಹೆಮ್ಮೆ ಮೂಡಿಸುತ್ತಿತ್ತು. ನಾವು ಕ್ಲಾಸ್‍ನಲ್ಲಿ ಕೇಳಿಸಿಕೊಳ್ಳುತ್ತಿದ್ದ ಉದಾತ್ತ ಯೋಚನೆಗಳು, ಆದರ್ಶ ವ್ಯಕ್ತಿತ್ವಗಳ ಕೊಡುಗೆಗಳ ಬಗ್ಗೆ ತಿಳಿದುಕೊಂಡ ಸಂದರ್ಭದಲ್ಲಿ ಈ ಒಕ್ಕಣೆ ಕಾಣಿಸಿಕೊಂಡಾಗ ನಮ್ಮೊಳಗಿನ ಹೆಮ್ಮೆಯ ಭಾವ ಇಮ್ಮಡಿಗೊಳ್ಳುತ್ತಿತ್ತು. ಇದನ್ನು ನೋಡಲೇಬೇಕೆಂಬ, ಹೆಮ್ಮೆಯ ಭಾವ ಮೂಡಿಸಿಕೊಳ್ಳಲೇಬೇಕು ಎನ್ನುವ ಕಡ್ಡಾಯ ನಿಯಮವಿರಲಿಲ್ಲ. ಆದಾಗ್ಯೂ ಇದು ನಮ್ಮೊಳಗೆ ಆಪ್ತವಾಗಿ ಬೆರೆತುಹೋಗಿತ್ತು. ಉಳಿದೆಲ್ಲ ದೇಶಗಳಿಗಿಂತ ನಮ್ಮ ದೇಶ ಮಹಾನ್ ಎನ್ನುವ ಭಾವ ಅತ್ಯಂತ ಸಂಯಮಪೂರ್ಣವಾಗಿ ನಮ್ಮ ಪ್ರಜ್ಞೆಯೊಳಗೆ ಮೇಳೈಸಿತ್ತು. ಹೆಮ್ಮೆ ಪಟ್ಟುಕೊಳ್ಳುವಂಥ ದೇಶದಲ್ಲಿ ಸಮಸ್ಯೆಗಳೂ ಇವೆ, ಅವುಗಳ ನಿವಾರಣೆಯ ಕಡೆಗೆ ಕಾಳಜಿಪೂರ್ವಕ ಹೆಜ್ಜೆಗಳನ್ನಿಡುತ್ತಲೇ ಇಡೀ ದೇಶವನ್ನು ಮಹಾನ್ ಅಗಿಸುವ ಉದಾತ್ತ ಪ್ರಯತ್ನಗಳ ಕಡೆಗೆ ಗಮನವಿರಬೇಕು ಎಂಬ ಎಚ್ಚರವನ್ನೂ ರೂಢಿಸಿತ್ತು. ಅಧಿಕಾರ ರಾಜಕಾರಣದ ಮೊಗಸಾಲೆಯಿಂದ ಹೊರಟ ನಿರ್ದಿಷ್ಟ ನಿಲುವು ಆಡಳಿತಾತ್ಮಕ ತೀರ್ಮಾನವಾಗಿ ತರಗತಿಗಳ ಒಳಗೆ ಪ್ರವೇಶಿಸಿ ಮಕ್ಕಳಿಂದ ದೇಶದ ಬಗ್ಗೆ ಜೈಕಾರ ಮೊಳಗಬೇಕು ಎಂಬ ಕಾರ್ಯಸೂಚಿ ಅನುಷ್ಠಾನಗೊಂಡರೆ ಅದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕುಚಿತ ಗೋಡೆಗಳನ್ನು ಸೃಷ್ಟಿಸಬಹುದು. ಅಂಥ ಗೋಡೆಗಳು ಸೃಷ್ಟಿಯಾದರೆ ತರಗತಿಯ ವಿವೇಚನಾತ್ಮಕ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ.

ಜೈಹಿಂದ್ ಎಂಬ ಪ್ರತಿಕ್ರಿಯೆ ಕಡ್ಡಾಯವಾಗಿ ಅನುಷ್ಠಾನಗೊಂಡರೆ ಅದರಲ್ಲಿ ತಪ್ಪು ಹುಡುಕುವುದೇಕೆ? ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂಬ ನಾಡಗೀತೆ ಕಡ್ಡಾಯವಾಗಿ ಶಾಲಾ-ಕಾಲೇಜುಗಳ ಆರಂಭಕ್ಕಿಂತ ಮುನ್ನ ಮೊಳಗುತ್ತಿರುವಾಗ ಇದಕ್ಕೆ ಆಕ್ಷೇಪವೇಕೆ? ಎಂಬ ಪ್ರಶ್ನೆಗಳು ಎದುರಾಗಬಹುದು. ಕುವೆಂಪು ವಿರಚಿತ ಈ ನಾಡಗೀತೆಯು ಕಡ್ಡಾಯ ಪಾಲನೆಯ ನಿಯಮದೊಂದಿಗೆ ಮೊಳಗುವುದಕ್ಕೂ ಜೈಹಿಂದ್ ಎಂಬ ಪ್ರತಿಕ್ರಿಯೆಯು ತರಗತಿಯ ಒಳಗೆ ವ್ಯಕ್ತವಾಗುವುದಕ್ಕೂ ವ್ಯತ್ಯಾಸವಿದೆ. ನಾಡಗೀತೆಯ ಧ್ವನಿಸುರುಳಿ ಶಾಲಾ-ಕಾಲೇಜುಗಳ ಆವರಣದಲ್ಲಿ ಮೊಳಗುವಾಗ ಅದರೊಳಗಿನ ವೈವಿಧ್ಯಮಯ ಸದಾಶಯಗಳ ಸಾಲುಗಳು ವಿದ್ಯಾರ್ಥಿಗಳ ವಿವೇಚನೆಯನ್ನು ವಿಸ್ತರಿಸುತ್ತಿರುತ್ತವೆ. ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಈ ದೇಶದ ವೈಶಿಷ್ಟ್ಯತೆಯನ್ನು ಮನದಟ್ಟು ಮಾಡಿಕೊಡುತ್ತವೆ. ಅಷ್ಟೇ ಅಲ್ಲ, ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಈ ನೆಲವನ್ನು ನೋಡುವ ಸೌಜನ್ಯವನ್ನು ನಮ್ಮದಾಗಿಸಿಕೊಳ್ಳುವ ಒತ್ತಾಸೆ ಮೂಡಿಸುತ್ತವೆ. ಜೈ ಹಿಂದ್ ಎನ್ನುವ ಪ್ರತಿಕ್ರಿಯೆಯು ಕ್ಷಣಾರ್ಧದಲ್ಲಿ ಭಾರತದ ಪರವಾದ ಜಯಕಾರ ಹೇಳುವ ಮಹತ್ವದ ಸಂದರ್ಭವನ್ನು ಸೃಷ್ಟಿಸಬಹುದು. ಆದರೆ, ಈ ಜಯಕಾರದ ಸಾಂದಭಿರ್ಕತೆಯು ನಕಾರಾತ್ಮಕ ದೃಷ್ಟಿಕೋನಗಳಿಗೆ ಪ್ರಚೋದನೆಯನ್ನು ನೀಡಿ ಭಾರತವೇ ಗ್ರೇಟ್ ಎಂಬ ಶ್ರೇಷ್ಠತೆಯ ವ್ಯಸನದ ಸಂಕುಚಿತತೆಯನ್ನು ಬಿತ್ತಿಬಿಡಬಹುದು. ಉಳಿದೆಲ್ಲ ದೇಶಗಳ ವಿಶೇಷತೆಯನ್ನು ಅಲ್ಲಗಳೆಯುವ ವಿತಂಡವಾದಿ ಸ್ವಭಾವವನ್ನು ನೆಲೆಗೊಳಿಸಿಬಿಡಬಹುದು. ತರಗತಿ ಇಂಥ ಸಂಕುಚಿತತೆಯ ಮೂಲನೆಲೆಯಾಗಬಾರದು ಎಂಬ ವಿವೇಕ ರಾಜಕೀಯ ಪಕ್ಷಗಳು ಮತ್ತು ಅಧಿಕಾರ ಕೇಂದ್ರಗಳನ್ನು ಪ್ರತಿನಿಧಿಸುವವರೊಳಗಿರಬೇಕು. ಈ ವಿವೇಕ ಇಲ್ಲದಿರುವುದರಿಂದಲೇ ಅಧಿಕಾರರೂಢ ಪಕ್ಷಗಳು ಶಿಕ್ಷಣ ವಲಯವನ್ನು ತಮ್ಮ ರಾಜಕೀಯ ಲಾಭದ ಕಾರ್ಯತಂತ್ರದ ಭಾಗವಾಗಿ ನೋಡುತ್ತವೆ. ವಿರೋಧ ಪಕ್ಷಗಳೂ ಅದನ್ನು ರಾಜಕೀಯ ವಿವಾದ ಉಂಟುಮಾಡುವುದಕ್ಕಷ್ಟೇ ಬಳಸಿಕೊಂಡುಬಿಡುತ್ತವೆ. ತಾತ್ವಿಕ ಚರ್ಚೆ ಹುಟ್ಟುಹಾಕಿ ಗಮನಾರ್ಹ ಶೈಕ್ಷಣಿಕ ಬದಲಾವಣೆಯ ಚಿಂತನೆಯನ್ನು ಕೊಡುಗೆಯನ್ನಾಗಿ ನೀಡುವುದಿಲ್ಲ.

ಚುನಾವಣೆ ಸನ್ನಿಹಿತವಾಗುತ್ತಿರುವಾಗ ಜನಪ್ರಿಯವೆನ್ನಿಸುವ ಭಾವುಕ ಸಂಗತಿಗಳನ್ನು ಶಿಕ್ಷಣ ಕ್ಷೇತ್ರಕ್ಕೆ ತಳುಕುಹಾಕಿ ತೀರ್ಮಾನಗಳನ್ನು ಘೋಷಿಸುವ ಅವಸರದ ಪ್ರವೃತ್ತಿಯ ಬದಲು ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಹಂತದವರೆಗಿನ ಶೈಕ್ಷಣಿಕ ಕಲಿಕೆ ಮತ್ತು ತರಗತಿಗಳ ಸ್ವರೂಪವನ್ನು ಬದಲಾಯಿಸುವುದರ ಬಗ್ಗೆ ರಚನಾತ್ಮಕ ಚಿಂತನೆ ಹೊಳೆಸಿಕೊಳ್ಳಬೇಕಿದೆ. ಶಾಸಕಾಂಗ ಮತ್ತು ಕಾರ್ಯಾಂಗ ದೂರದರ್ಶಿತ್ವದ ಶ್ರದ್ಧೆಯೊಂದಿಗೆ ಇಂಥ ಕಾರ್ಯವನ್ನು ನಿರ್ವಹಿಸಬೇಕಿದೆ. ಹಳ್ಳಿಗಳಲ್ಲಿ ಶಾಲೆಗಳಿಲ್ಲ. ಶಾಲೆಗಳಿದ್ದರೂ ಶಿಕ್ಷಕರಿಲ್ಲ. ಶಿಕ್ಷಕರಿದ್ದರೂ ಅವರಿಗೆ ಉನ್ನತಾಧಿಕಾರಿ ವಲಯದಿಂದ ಹರಿದುಬರುವ ಆದೇಶಗಳ ಒತ್ತಡದ ಉಸಿರುಗಟ್ಟುವ ಪರಿಸ್ಥಿತಿ. ಮೂಲಭೂತ ಸೌಕರ್ಯಗಳಿಲ್ಲದ ಸ್ಥಿತಿಯಲ್ಲಿ ತರಗತಿಯನ್ನು ನಿರ್ವಹಿಸುವ ಅನಿವಾರ್ಯತೆ. ಹಳ್ಳಿ ರಾಜಕಾರಣದ ವಿಚಿತ್ರ ಸಿಕ್ಕುಗಳಲ್ಲಿ ಬಂಧಿಯಾಗುತ್ತಲೇ, ಮಾನಸಿಕವಾಗಿ ನರಳುತ್ತಲೇ ಪಾಠ ಮಾಡಬೇಕಾದ ಸಂದಿಗ್ಧತೆ. ಹೆಚ್ಚು ಸಂಖ್ಯೆಯಲ್ಲಿ ಮಕ್ಕಳಿರುವ ತರಗತಿಯನ್ನು ನಿಭಾಯಿಸುವ ಸವಾಲು. ಆಡಳಿತಾತ್ಮಕ ಕಿರಿಕಿರಿಗಳ ಭಾರದಲ್ಲಿ ಶಿಕ್ಷಕರ ಬೌದ್ಧಿಕ ಶಕ್ತಿ ನಲುಗುತ್ತಿದೆ. ಖಾಸಗಿ ಶಾಲೆ-ಕಾಲೇಜುಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸರ್ಕಾರಿ ಶಾಲೆಗಳಲ್ಲಿ ಕಲಿಯಲು ಬರುವ ಮಕ್ಕಳ ಶಿಕ್ಷಣದ ಸಾಧ್ಯತೆಗಳಿಗೆ ವ್ಯಾಪಕ ಆದ್ಯತೆ ಸಿಗುತ್ತಲೇ ಇಲ್ಲ. ಮೌಲಿಕ ಕಲಿಕೆ, ವೃತ್ತಿಪರ ಅವಕಾಶಗಳು ಮತ್ತು ಅಭಿವೃದ್ಧಿ – ಈ ಮೂರೂ ಅಂಶಗಳನ್ನು ಆಧರಿಸಿದ ಸಮಗ್ರ ನೀತಿಯನ್ನು ರೂಪಿಸಿ ವ್ಯವಸ್ಥಿತ ಅನುಷ್ಠಾನ ಸಾಧ್ಯವಾಗಿಸಬೇಕು. ಹಾಗಾದಾಗ ಮಾತ್ರ ಶಿಕ್ಷಣ, ಶಿಕ್ಷಕರು, ತರಗತಿ ಮತ್ತು ವಿದ್ಯಾರ್ಥಿಗಳು ಚುನಾವಣಾ ಅಖಾಡದ ಕಾರ್ಯತಂತ್ರಗಳಿಗೆ ಬಲಿಯಾಗುವುದಿಲ್ಲ. ಪ್ರತಿ ಚುನಾವಣೆಯೂ ಶಿಕ್ಷಣ ರಂಗದ ಸಬಲೀಕರಣದ ಚಿಂತನೆಗಳಿಗೆ ವೇದಿಕೆಯನ್ನು ಒದಗಿಸಬೇಕು. ಚಿಂತನೆಯ ಮಾದರಿ ಲಭ್ಯವಾಗುತ್ತಿರಬೇಕು. ಅದಕ್ಕನುಗುಣವಾಗಿ ತರಗತಿಗಳು ಪ್ರಬುದ್ಧ ನೆಲೆಗಳಾಗಿ ಪರಿವರ್ತಿತವಾಗಬೇಕು. ಇಡೀ ಶಿಕ್ಷಣ ವಲಯವು ದೇಶದ ಉಜ್ವಲ ಭವಿಷ್ಯಕ್ಕೆ ನೆರವಾಗುವ ಅಮೂಲ್ಯ ಸಂಪನ್ಮೂಲವಾಗಬೇಕು.

-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ

ಕಳಪೆ ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ : ಸಿಎಂ ಸಿದ್ದರಾಮಯ್ಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಹುಬ್ಬಳ್ಳಿ : ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ ಪತ್ರ ಬರೆಯಲಾಗಿದ್ದು, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮಹದಾಯಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ತಯಾರಿದ್ದರೂ, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ದೊರೆತಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.

ಬರಗಾಲ ಘೋಷಿತ ಪ್ರದೇಶಗಳಿಗೆ ಪರಿಹಾರ ಒದಗಿಸಲು ಇರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ಬರಗಾಲ ಘೋಷಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುಡಿಯುವ ನೀರು, ಬಿತ್ತನೆಗೆ ನೆರವು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ನೆರವು ಬರಬೇಕಿದೆ ಎಂದು ಹೇಳಿದರು. ವಿದ್ಯಾವಿಕಾಸ ಯೋಜನೆಯಡಿ ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿದ್ದು, ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ಮಕ್ಕಳಿಗೆ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿರುವ ಬಗ್ಗೆ ತನಿಖೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಳಪೆ ಬಟ್ಟೆ ನೀಡಿರುವುದಕ್ಕೆ ಪಾವತಿಯೂ ಆಗಿರುವುದರಿಂದ, ಸಂಬಂಧಪಟ್ಟವರನ್ನು ಇದಕ್ಕೆ ಜವಾಬ್ದಾರರನ್ನಾಗಿಸಬೇಕೆಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸಂಬಂಧಪಟ್ಟವರಿಂದ ಪಾವತಿಸಲಾಗದ ಮೊತ್ತವನ್ನು ಮರುಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ 34 ಸಾವಿರ ಕೋಟಿ ರೂಪಾಯಿ ಮೀಸಲು : ಸಚಿವ ಡಾ.ಎಚ್.ಸಿ.ಮಹದೇವಪ್ಪ

Published

on

ಸುದ್ದಿದಿನ, ಹುಬ್ಬಳ್ಳಿ: ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಶೇಷ ಘಟಕ ಯೋಜನೆಯಡಿ ಒಟ್ಟು 34ಸಾವಿರ ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಪರಿಶಿಷ್ಟ ಜಾತಿಗೆ 24 ಸಾವಿರ ಕೋಟಿ ರೂಪಾಯಿ, ಪಂಗಡಕ್ಕೆ 8ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. 40 ಇಲಾಖೆಗಳಿಗೆ ಮೀಸಲಿಡಲಾಗಿದೆ. ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವ ಕುರಿತು ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ವಿಶೇಷ ಘಟಕ ಯೋಜನೆಯ ಹಣವನ್ನು ಇತರೆ ಯಾವುದೇ ವಿಭಾಗಕ್ಕೂ ಬಳಕೆ ಮಾಡುವುದಿಲ್ಲ. ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ ಆಯವ್ಯಯದಲ್ಲಿ ಮೀಸಲಿಟ್ಟಿರುವ ಹಣವನ್ನು ವಿನಿಯೋಗಿಸಲಾಗುವುದು ಎಂದು ಡಾ.ಮಹದೇವಪ್ಪ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆಗಸ್ಟ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್‌ಟಿ ಮೊತ್ತ ಎಷ್ಟು ಗೊತ್ತಾ?!

Published

on

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಒಟ್ಟು 1 ಲಕ್ಷ 59 ಸಾವಿರದ 69 ಕೋಟಿ ರೂಪಾಯಿ ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ.

35 ಸಾವಿರದ 794ಕೋಟಿ ರೂಪಾಯಿ ಕೇಂದ್ರೀಯ ಜಿಎಸ್‌ಟಿ, 83ಸಾವಿರದ 251 ಕೋಟಿ ರೂಪಾಯಿ ಸಮಗ್ರ ಸರಕು ಮತ್ತು ಸೇವಾ ತೆರಿಗೆ ಇದು ಒಳಗೊಂಡಿದೆ. 37 ಸಾವಿರದ 581 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆಗೆ ಹಾಗೂ 31 ಸಾವಿರದ 408ಕೋಟಿ ರೂಪಾಯಿಗಳನ್ನು ಸಮಗ್ರ ಸರಕು ಮತ್ತು ಸೇವಾ ತೆರಿಗೆ ಯಿಂದ ರಾಜ್ಯ ಸರಕು ಮತ್ತು ಸೇವಾ ತೆರಿಗೆಗೆ ಸರ್ಕಾರ ಇತ್ಯರ್ಥ ಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ4 days ago

ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ...

ದಿನದ ಸುದ್ದಿ4 days ago

ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ

ಸುದ್ದಿದಿನ ಡೆಸ್ಕ್ : ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ಸಮಿತಿ ತೀರ್ಪಿನ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಮುಂದಿನ...

ದಿನದ ಸುದ್ದಿ4 days ago

ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ

ಸುದ್ದಿದಿನ, ಬಳ್ಳಾರಿ : ಸಿರಿಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಸವನಪೇಟೆ) ಮುಖ್ಯ ಗುರುಗಳಾದ ಶ್ರೀಮತಿ ಸುಮಂಗಳಾ ಮೇಟಿಯವರು 2023-24 ನೇ ಸಾಲಿನ ಬಳ್ಳಾರಿ ಜಿಲ್ಲಾ...

ದಿನದ ಸುದ್ದಿ5 days ago

ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್

ಸುದ್ದಿದಿನ, ಬೆಂಗಳೂರು : ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಕನ್ನಡ ಹಾಗೂ ವಿವಿಧ ರೈತಪರ ಸಂಘಟನೆಗಳು ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಬಂದ್‌ಗೆ ಕರೆಕೊಟ್ಟಿವೆ....

ದಿನದ ಸುದ್ದಿ2 weeks ago

ಪರಿಸರ ಗಣೇಶ ಚತುರ್ಥಿ ಆಚರಣೆ | ಪಿಓಪಿ ಮೂರ್ತಿ ಸಂಪೂರ್ಣ ನಿಷೇಧ : ಜಿಲ್ಲಾಧಿಕಾರಿ ಡಾ. ವೆಂಕಟೇಶ್

ಸುದ್ದಿದಿನ,ದಾವಣಗೆರೆ : ಗಣೇಶ ಚತುರ್ಥಿಯಲ್ಲಿ ಪಿಓಪಿ ಗಣೇಶ ಮೂರ್ತಿ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದ್ದು ಮಣ್ಣಿನಲ್ಲಿ ಮಾಡಿದ ಹಾಗೂ ಬೆಲ್ಲದ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡುವ ಮೂಲಕ ಪರಿಸರ...

ದಿನದ ಸುದ್ದಿ3 weeks ago

ಸೆ. 14 ರಿಂದ 21 ರವರೆಗೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ

ಸುದ್ದಿದಿನ,ದಾವಣಗೆರೆ : ಪ್ರಸಕ್ತ ಸಾಲಿನ ಜಿಲ್ಲೆಯ ಆರು ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ತಾಲ್ಲೂಕುವಾರು ಆಯೋಜಿಸಲಾಗಿದೆ. ಸೆಪ್ಟೆಂಬರ್ 14 ರಂದು ಹರಿಹರ ತಾಲ್ಲೂಕಿಗೆ ಸಂಬಂಧಿಸಿದಂತೆ ರಾಜನಹಳ್ಳಿಯ ಶ್ರೀ...

ದಿನದ ಸುದ್ದಿ3 weeks ago

ಕಳಪೆ ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಹುಬ್ಬಳ್ಳಿ : ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ...

ದಿನದ ಸುದ್ದಿ3 weeks ago

ರೈತರಿಗೆ ಬಾಕಿ ಇದ್ದ ಪರಿಹಾರ ಹಣ ಬಿಡುಗಡೆ

ಸುದ್ದಿದಿನ, ಉ.ಕ: ಉತ್ತರ ಕರ್ನಾಟಕದ ಕಲ್ಬುರ್ಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನೆಟೆ ರೋಗದಿಂದ ಕಳೆದ ಸಾಲಿನಲ್ಲಿ ತೊಗರಿ ಬೆಳೆ ಹಾನಿಯಿಂದ ನಷ್ಟ ಅನುಭವಿಸಿದ್ದ ರೈತರಿಗೆ ಬಾಕಿ...

ದಿನದ ಸುದ್ದಿ3 weeks ago

ನಾಡಿನ ಹಲವು ಕ್ಷೇತ್ರಗಳಿಗೆ ತರಳಬಾಳು ಹಿರಿಯ ಶ್ರೀಗಳ ಕೊಡುಗೆ ಅಪಾರ: ಡಾ. ನಾ ಲೋಕೇಶ ಒಡೆಯರ್

ಸುದ್ದಿದಿನ,ದಾವಣಗೆರೆ : ಹಿರಿಯ ಶ್ರೀ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳುವರು ಕಟ್ಟಿ ಬೆಳಸಿದ ಸಂಸ್ಥೆ ಮತ್ತು ತಮ್ಮ ಆದರ್ಶ ವ್ಯಕ್ತಿತ್ವದ ಮೂಲಕ ಪೂಜ್ಯರು ಇಂದಿಗೂ ಎಂದೆಂದಿಗೂ...

ದಿನದ ಸುದ್ದಿ3 weeks ago

ಪರಿಶಿಷ್ಟ ಸಮುದಾಯಗಳ ಮೇಲೆ ಜಾತಿ ದೌರ್ಜನ್ಯ ಪ್ರಕರಣ; ಇಲಾಖೆಗಳ ನಡುವೆ ಸಮನ್ವಯದಿಂದ ಕಾರ್ಯನಿರ್ವಹಿಸಿ : ಅಧಿಕಾರಿಗಳಿಗೆ ಸಿಎಂ ಸೂಚನೆ

ಸುದ್ದಿದಿನ,ಬೆಂಗಳೂರು : ಪರಿಶಿಷ್ಟ ಸಮುದಾಯಗಳ ಮೇಲೆ ನಡೆಯುವ ಜಾತಿ ದೌರ್ಜನ್ಯ ಪ್ರಕರಣಗಳನ್ನು ತಗ್ಗಿಸುವುದರ ಜೊತೆಗೆ ದಾಖಲಾದ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ಪೊಲೀಸ್, ಕಾನೂನು, ಸಮಾಜ ಕಲ್ಯಾಣ ಸೇರಿದಂತೆ...

Trending