Connect with us

ಭಾವ ಭೈರಾಗಿ

ಪರ್ಯಾಯಗಳನ್ನು ಕಾಣಿಸುವ ‘ಓದು’

Published

on

  • ಡಾ.ಎನ್.ಕೆ.ಪದ್ಮನಾಭ

ಗಾಗಲೇ ಆಗಿಹೋದದ್ದರೊಳಗೆ ಗಟ್ಟಿಯಾದದ್ದನ್ನು ಹಿಡಿದಿಟ್ಟು ಇಂದು ಮತ್ತು ನಾಳೆಗಳ ಸಮೃದ್ಧಿಗಾಗಿ ವಿನಿಯೋಗಿಸಿ ದಾಟಿಸುವ ಕಾಲಾಂತರದ ಸಾಂಸ್ಕೃತಿಕ ಜವಾಬ್ದಾರಿ ವಿಮರ್ಶೆಯದ್ದು. ಟೊಳ್ಳುತನದೊಂದಿಗಿನ ಎಲ್ಲ ಬಗೆಯ ಅತಿರೇಕಗಳೊಂದಿಗೆ ಮನುಷ್ಯ ಮುಖಾಮುಖಿಯಾಗಲು ಬೇಕಾಗುವ ಪ್ರಜ್ಞೆಯ ಮಾದರಿ ರೂಪಿಸಿಕೊಳ್ಳುವುದಕ್ಕೆ ಅದು ನೆರವಾಗುತ್ತಲೇ ಇರುತ್ತದೆ. ನೆರವಾಗುತ್ತಲಿರಲೇಬೇಕು.

ಹಾಗೆ ಸಹಾಯಕವಾಗಿ ನಿಲ್ಲುವುದರಲ್ಲಿಯೇ ಅದರ ಹೆಗ್ಗಳಿಕೆ ಇದೆ. ಅದರಲ್ಲೂ ಮನುಷ್ಯ ಅಹಂನ ಕೋಟೆ ಸೃಷ್ಟಿವಿರೋಧಿ ಪ್ರತಿಗಾಮಿ ಶಕ್ತಿಯ ಬೃಹತ್ ಸ್ವರೂಪ ಪಡೆದುಕೊಂಡಾಗ ವಿಮರ್ಶಾತ್ಮಕ ದೃಷ್ಟಿಕೋನದ ಪಾತ್ರ ವೈವಿಧ್ಯಮಯವಾಗುತ್ತದೆ. ವ್ಯಕ್ತಿಗತ ಆತ್ಮೋದ್ಧಾರದ ಕಡೆಗೆ ಚಲಿಸುವ ಮತ್ತು ಆ ಮೂಲಕ ನಿಜದ ಲೋಕಕಲ್ಯಾಣ ಪರಿಕಲ್ಪನೆಯನ್ನು ಪ್ರತಿಯೊಂದು ಕಾಲಘಟ್ಟದಲ್ಲೂ ಜೀವಂತವಾಗಿರಿಸುವ ವೈವಿಧ್ಯಮಯ ಪಾತ್ರ ವಿಮರ್ಶೆಯಿಂದ ನಿರ್ವಹಿಸಲ್ಪಡುತ್ತದೆ.

ಇಂಥದ್ದೊಂದು ಪಾತ್ರಸಾಧ್ಯತೆಯ ಸಮಕಾಲೀನ ಸಾಕ್ಷಿಯಾಗಿ ‘ಬೊಗಸೆಯಷ್ಟು ಓದು’ ಕೃತಿ ಮುಖ್ಯವೆನ್ನಿಸುತ್ತದೆ. ಇದನ್ನು ವಿಮರ್ಶಾ ಕೃತಿ ಎಂದು ಗುರುತಿಸುವುದಕ್ಕಿಂತಲೂ ಎಲ್ಲಾ ಕಾಲಗಳ ಸಾಮಾಜಿಕ ವ್ಯವಸ್ಥೆಯನ್ನು ಚಲನಶೀಲಗೊಳಿಸುವುದಕ್ಕೆ ಬೇಕಾಗುವ ಸಕಾಲಿಕ ಒತ್ತಡ ರೂಪಿಸುವಂಥ ಅಕ್ಷರ ರೂಪಕಾಕೃತಿಯಾಗಿ ನೋಡಬೇಕು. ಇಡೀ ಕೃತಿಯೊಳಗೆ ಸಾಹಿತ್ಯಕ ಸೃಜನಶೀಲತೆ ನಿಕಷಕ್ಕೊಳಪಟ್ಟಿದ್ದರೂ ಮನುಷ್ಯನನ್ನು ಹೊಸತಿನೆಡೆಗೆ ಕರೆದೊಯ್ಯುವ ಒತ್ತಾಸೆಯೇ ಕೇಂದ್ರ ಆಶಯವಾಗಿದೆ.

ಸದ್ಯವನ್ನು ಗೆಲ್ಲುವ ಹಠಕ್ಕಿಂತಲೂ ಅತ್ಯಂತ ಸಹಜವಾಗಿ ಕಾಲವನ್ನು ದಾಟಿಕೊಳ್ಳುವ ಸಂಯಮದ ಕಡೆಗೆ ಹೊರಳಿಸುವ ಅನಿವಾರ್ಯತೆಯನ್ನು ಮನಗಾಣಿಸುವುದರೆಡೆಗೇ ಈ ಆಶಯ ಕೇಂದ್ರೀಕೃತವಾಗಿದೆ. ನಾಳೆಗಳ ಉಜ್ವಲತೆಯು ಮನುಷ್ಯಸಹಜ ವಿಕೃತಿ ಮತ್ತು ಉನ್ಮಾದಗಳಿಂದ ಸಾಧಿತವಾಗುವಂಥದ್ದಲ್ಲ. ಬದಲಾಗಿ ಅಂಥ ಉಜ್ವಲ ಭವಿಷ್ಯ ಇಂದಿನ ಬದುಕಿನ ಸಹಜತೆಯೊಂದಿಗೇ ತಳುಕುಹಾಕಿಕೊಂಡಿದೆ ಎನ್ನುವುದನ್ನು ಅತ್ಯಂತ ಸರಳವಾಗಿ ಒಪ್ಪಿಸುವ ಕ್ರಮವನ್ನು ಇಲ್ಲಿ ಕಾಣಬಹುದು. ಈ ಆಲೋಚನಾಕ್ರಮದೊಂದಿಗೇ ಡಾ.ರಾಜಶೇಖರ ಹಳೆಮನೆ ಅವರು ಸಾಹಿತ್ಯಕ ಕೃತಿಗಳನ್ನು ಚರ್ಚೆಗೆ ಒಳಪಡಿಸಿದ್ದಾರೆ.

ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳುವ ಕೂಪಮಂಡೂಕ ಸ್ಥಿತಿಯನ್ನು ಧಿಕ್ಕರಿಸಿ ಹೊಸತಾದ ಪರ್ಯಾಯಗಳ ಹಾದಿ ಕಾಣಿಸುವ ಲೇಖಕರ ಒಳನೋಟಗಳು ಕೃತಿಯ ಅಂದವನ್ನು ಹೆಚ್ಚಿಸಿವೆ. ಈ ಅಂದ-ಚಂದಕ್ಕೆ ವಿಮರ್ಶಾ ಪರಿಭಾಷೆಯ ವೈಭವೀಕೃತ ಸಿಂಗಾರದ ಹಂಗು ಇಲ್ಲ. ಲೇಖಕರಿಗೆ ಅದು ಮುಖ್ಯವೂ ಅಲ್ಲ. ಅದನ್ನು ಮುಖ್ಯವಾಗಿಸಿಕೊಂಡಿದ್ದಿದ್ದರೆ ಈ ಕೃತಿಯ ಆವರಣ ಭಿನ್ನವಾಗುತ್ತಿರಲಿಲ್ಲ. ಇಡೀ ಕೃತಿಯನ್ನು ಚಲನಶೀಲ ಅಕ್ಷರ ರೂಪಕಾಕೃತಿಯನ್ನಾಗಿ ನೋಡುವಂತೆ ಇಲ್ಲಿಯ ವಿವಿಧ ಅಧ್ಯಾಯಗಳಲ್ಲಿ ಅಡಕವಾಗಿರುವ ವಿವರಣಾತ್ಮಕ ವಿಶ್ಲೇಷಣೆ ಸಹಜ ಒತ್ತಡವನ್ನುಂಟುಮಾಡುತ್ತದೆ.

ವಿವರಣಾತ್ಮಕ ಕ್ರಮದೊಂದಿಗೆ ಕೃತಿಯೊಂದರ ಒಟ್ಟು ಸ್ವರೂಪವನ್ನು ಪರಿಚಯಿಸುವುದರ ಜೊತೆಜೊತೆಗೇ ಒಳಿತು-ಕೆಡಕುಗಳನ್ನು ಪರಾಮರ್ಶಿಸುವ ವೈಯಕ್ತಿಕ ವಿವೇಚನೆಯನ್ನು ಆಯ್ದುಕೊಳ್ಳುವ ಪ್ರೇರಣೆಯಾಗಿ ಮಾರ್ಪಡುವುದರಲ್ಲಿ ಇಲ್ಲಿಯ ವಿಮರ್ಶೆಯ ವಿಶೇಷತೆ ಇದೆ. ವಿವಿಧ ಕಾಲಘಟ್ಟಗಳ ಬರಹಗಾರರು ಮತ್ತು ಅವರ ಸಾಹಿತ್ಯಕ ಕಾಣ್ಕೆಗಳ ಉದ್ದೇಶಪೂರ್ವಕ ಆಯ್ಕೆ ರಾಜಶೇಖರ ಹಳೆಮನೆ ಅವರ ಆದ್ಯತೆಯನ್ನು ಸ್ಪಷ್ಟಪಡಿಸುತ್ತದೆ.

ಹೊಸದನ್ನು ನಿರಾಕರಿಸುವ ಜಡ್ಡುಗಟ್ಟಿದ ಮನಸ್ಥಿತಿಯು ಎಲ್ಲ ಕಾಲಕ್ಕೆದುರಾಗುವ ಸವಾಲು. ಹಳೆಮನೆ ಅವರಿಗೆ ಈ ಕುರಿತಾದ ಸ್ಪಷ್ಟ ಅರಿವಿದೆ. ಹಾಗಾಗಿಯೇ ಚರ್ಚೆಯ ಉದ್ದೇಶಕ್ಕಾಗಿ ಅವರು ಅತ್ಯಂತ ಎಚ್ಚರದಲ್ಲಿ ಕೃತಿಗಳನ್ನು ಆಯ್ದುಕೊಳ್ಳುತ್ತಾರೆ. ಸಾಹಿತ್ಯದ ಮೂಲಕ ಸಾಮಾಜಿಕ ಸ್ಥಿತ್ಯಂತರದ ಉದಾತ್ತ ಆಶಯವನ್ನು ಪ್ರತಿಪಾದಿಸಿದ ವಿವಿಧ ಕಾಲಗಳ ಬರಹಗಾರರ ಕಲಾಕೃತಿಗಳ ಸಹಾಯದೊಂದಿಗೆ ಹೊಸತಿನೊಂದಿಗೆ ನಿಲ್ಲುವ ಚಿಂತನೆಯನ್ನು ಪ್ರಸ್ತುತಪಡಿಸುತ್ತಾರೆ.

ಕಥೆ, ಕವಿತೆ, ಕಾದಂಬರಿಗಳ ಓದು ಕಾಲಕಳೆಯುವುದಕ್ಕಷ್ಟೇ ಅಲ್ಲದೇ ಅದರಾಚೆಗೆ ಮತ್ತಿನ್ನೇನನ್ನೋ ಗೊತ್ತುಮಾಡಿಕೊಂಡು ಅರಿವಿನ ಎತ್ತರ ಪಡೆಯುವುದಕ್ಕೆ ಎಂಬ ಹೊಳಹು ಹೊಳೆಸುವುದಕ್ಕೇ ಅವರು ವಿಮರ್ಶೆಯನ್ನು ಬಳಸಿಕೊಳ್ಳುತ್ತಾರೆ. ಇಡೀ ಕೃತಿಯು ಈ ಅಂಶವನ್ನು ಆಪ್ತವಾಗಿ ಮನಗಾಣಿಸುತ್ತದೆ. ಪಂಪ, ತದನಂತರದ ವಚನಕಾರರು, ಆಧುನಿಕ ಕಾಲದ ಕೃತಿಕಾರರನ್ನು ರಾಜಶೇಖರ ಅವರು ವಿಮರ್ಶೆಗೊಳಪಡಿಸುವಾಗ ಓದುಗರನ್ನು ಅರಿವಿನ ಎತ್ತರದ ಗಮ್ಯಕ್ಕೆ ತಲುಪಿಸುವ ಅಪೇಕ್ಷೆಯನ್ನೇ ಕೇಂದ್ರವಾಗಿಸಿಕೊಳ್ಳುತ್ತಾರೆ.

ನಿರಂಜನ, ಬಸವರಾಜ ಕಟ್ಟೀಮನಿ, ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ, ಲಂಕೇಶ, ಮೂಡ್ನಕೂಡು ಚಿನ್ನಸ್ವಾಮಿ ಇವೆರೆಲ್ಲರ ಸಾಹಿತ್ಯಕ ಕಾಣ್ಕೆಗಳನ್ನು ವಿಶ್ಲೇಷಿಸುವಾಗ ಇದೇ ಕೇಂದ್ರಪ್ರಜ್ಞೆ ಮಹತ್ವದ ಪಾತ್ರನಿರ್ವಹಿಸಿದೆ. ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಚದುರಂಗ, ಅನಂತಮೂರ್ತಿ, ತೇಜಸ್ವಿ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ, ಚಂದ್ರಶೇಖರ ಕಂಬಾರ, ದೇವನೂರು ಮಹಾದೇವ ಮತ್ತಿತರ ಬರಹಗಾರರ ಮೌಲ್ಯವನ್ನು ವರ್ತಮಾನದ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಲೇ ಸಾಹಿತ್ಯದ ಕಾಣ್ಕೆಯ ಪರಂಪರೆಯ ಹೆಜ್ಜೆಗಳು ಭವಿಷ್ಯದಲ್ಲಿ ಯಾವ ರೀತಿಯವಾಗಬೇಕು ಎಂಬುದನ್ನು ಅಧಿಕೃತ ಧ್ವನಿಯಲ್ಲಿ ಪ್ರತಿಪಾದಿಸುವಲ್ಲಿ ರಾಜಶೇಖರ ಯಶಸ್ವಿಯಾಗಿದ್ದಾರೆ.

ವಿಮರ್ಶೆಯ ಕುರಿತಾದ ತಪ್ಪುಕಲ್ಪನೆಯನ್ನು ಹೋಗಲಾಡಿಸುವಲ್ಲಿಯೂ ಈ ಕೃತಿ ನಮಗೆ ನೆರವಾಗುತ್ತದೆ. ಹಿಂದಿನದ್ದನ್ನು ಅತಿಭಾವುಕತೆಯ ನೆಲೆಯಲ್ಲಿ ನೆನಪಿಸಿಕೊಂಡು ಸದ್ಯವನ್ನು ನಿರಾಕರಿಸುವ ಮನಸ್ಥಿತಿಯೊಂದಿಗಿನ ವಿಮರ್ಶೆಯಿಂದ ಪ್ರಯೋಜನವಿಲ್ಲ. ನಾವು ವರ್ತಮಾನದಲ್ಲಿ ಸಂಕುಚಿತತೆಯ ಮಿತಿಯನ್ನು ಮೀರುವುದಕ್ಕೆ ಇಂಥ ಮನಸ್ಥಿತಿಯೊಂದಿಗಿನ ವಿಮರ್ಶೆ ನೆರವಾಗುವುದಿಲ್ಲ. ಹಿಂದಿನದ್ದೆಲ್ಲವೂ ಶ್ರೇಷ್ಠ ಎಂಬ ಅತಿಭಾವುಕ ವ್ಯಸನ ಉಂಟುಮಾಡುವ ಅಪಾಯದಿಂದ ನಮ್ಮನ್ನು ಪಾರುಮಾಡುವುದೇ ನಿಜವಾದ ವಿಮರ್ಶೆ.

ಅತಿಭಾವುಕ ವ್ಯಸನದೊಂದಿಗಿನ ನೋಟ ನಮ್ಮನ್ನು ಮತ್ತಷ್ಟು ಕುಬ್ಜರನ್ನಾಗಿಸುತ್ತದೆ. ಹಿಂದಿನದ್ದರಲ್ಲಿ ನಮ್ಮನ್ನು ಎಚ್ಚರಿಸುವ ಮಾದರಿಗಳೂ ಇವೆ, ಅವುಗಳೊಂದಿಗೆ ಜೊಳ್ಳೂ ಇದೆ ಎಂಬುದನ್ನು ಅತ್ಯಂತ ಸಂಯಮಪೂರ್ಣವಾಗಿ ನಿರೂಪಿಸುವ ಧಾಟಿಯೊಂದಿಗಿನ ಚಿಂತನೆಯು ವಿಮರ್ಶೆಯ ಚಲನಶೀಲತೆಗೆ ಹೊಸ ಆಯಾಮ ನೀಡುತ್ತದೆ.
ಮಹತ್ವದ್ದೇನನ್ನೋ ಕಟ್ಟಿಕೊಟ್ಟಿದ್ದಾರೆ ಎಂಬ ಭ್ರಮೆಯನ್ನು ಸೃಷ್ಟಿಸುವ ಬರಹಗಾರರೂ ಈ ಹಿಂದೆ ಆಗಿಹೋಗಿರುತ್ತಾರೆ. ಅವರೂ ಚರ್ಚೆಯ ವಸ್ತುವಾಗಿರುತ್ತಾರೆ.

ಅಷ್ಟು ಮಾತ್ರಕ್ಕೆ ಭವಿಷ್ಯದ ಚಲನಶೀಲ ಪರಂಪರೆಗೆ ಬೇಕಾಗುವಂಥ ಬರಹಗಾರರಾಗುವುದಿಲ್ಲ. ಆ ಬರಹಗಾರರು ಕಟ್ಟಿಕೊಟ್ಟ ಕೃತಿಗಳ ಮಹತ್ವ ಯಾವ ಕಾರಣಕ್ಕೆ ಪರಿಗಣನೆಗೆ ಒಳಗಾಗಬೇಕು ಎನ್ನುವ ನೆಲೆಯಲ್ಲಿ ವಿಮರ್ಶೆಯು ಸಂವಾದವನ್ನು ರೂಪಿಸಬೇಕಾಗುತ್ತದೆ. ಈ ಸಂವಾದದ ಸಹಾಯದಿಂದಲೇ ವಿಮರ್ಶೆಯು ಚಲನಶೀಲತೆಯ ಪರವಾಗಿ ನಿಲ್ಲಬೇಕಾಗುತ್ತದೆ. ಹಳತಾದುದೆಲ್ಲವೂ ಶ್ರೇಷ್ಠ ಎಂಬ ಮೂಢನಂಬಿಕೆಯ ಬದಲಾಗಿ ಹಳತಿನೊಳಗೆ ಹೊಸದನ್ನು ಶೋಧಿಸಿ ಅದಷ್ಟೇ ಹೊಸಕಾಲದ ಚಲನೆಗೆ ಬೇಕಾಗುವ ಅಂಶ ಎನ್ನುವ ಸ್ಪಷ್ಟತೆ ಕಂಡುಕೊಳ್ಳುವುದಕ್ಕೂ ವಿಮರ್ಶೆ ಅನುವುಮಾಡಿಕೊಡುತ್ತದೆ.

ಈ ಬಗೆಯ ವಿಮರ್ಶೆ ಸಾಮಾನ್ಯ ಓದುಗರೊಳಗೂ ಹೊಸ ಪ್ರಜ್ಞೆ ಹುಟ್ಟುಹಾಕುತ್ತದೆ. ಸಾಹಿತ್ಯವನ್ನು ಪ್ರತಿನಿಧಿಸುವ ಸಮಕಾಲೀನ ಬರಹಗಾರರು ಹೊಸದಾಗಿ ಯೋಚಿಸುವುದಕ್ಕೆ ಪ್ರೇರಣೆಯಾಗಿ ನಿಲ್ಲುತ್ತದೆ. ಸಾಹಿತ್ಯ ವಿದ್ಯಾರ್ಥಿಗಳಷ್ಟೇ ಅಲ್ಲದೇ, ವಿವಿಧ ಕ್ಷೇತ್ರಗಳೊಂದಿಗೆ ಗುರುತಿಸಿಕೊಂಡವರೂ ಪರ್ಯಾಯಗಳ ಬಗ್ಗೆ ಮುಕ್ತ ಮನಸ್ಸು ಹೊಂದುವುದಕ್ಕೆ ಸಹಾಯಕವಾಗುತ್ತದೆ. ರಾಜಶೇಖರ ಹಳೆಮನೆ ಅವರು ತಮ್ಮ ಕೃತಿಯ ಮೂಲಕ ವಿಮರ್ಶೆಗೆ ಈ ಸ್ವರೂಪವೂ ಇದೆ ಎಂಬುದನ್ನು ನೆನಪಿಸಿದ್ದಾರೆ.

ವಿಮರ್ಶಕ ವರ್ತಮಾನದಲ್ಲಿ ಹೇಳಲೇಬೇಕಾದದ್ದಕ್ಕೆ ಈ ಕೃತಿಯ ಶೀರ್ಷಿಕೆಯು ಪೂರಕ ಆವರಣವನ್ನು ಒದಗಿಸಿಕೊಟ್ಟಿದೆ. ತಂತ್ರಜ್ಞಾನದ ಅತಿಯಾದ ಅವಲಂಬನೆಯು ಅತಿಯಾಸೆ, ದುರಾಸೆ, ಅಗತ್ಯಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸುವಿಕೆ, ಸ್ವಾರ್ಥಭಾವವನ್ನು ಸ್ಥಾಯಿಗೊಳಿಸುವ ವಿಚಿತ್ರ ಮನಃಸ್ಥಿತಿಗಳನ್ನು ಸೃಷ್ಟಿಸಿದೆ. ತಾಂತ್ರಿಕತೆಯ ಜೊತೆಗಿನ ವೇಗವನ್ನೇ ನೆಚ್ಚಿಕೊಂಡು ಮುಂದಡಿಯಿಡಬೇಕಾದ ಅನಿವಾರ್ಯತೆಗೆ ಸಿಲುಕಿರುವ ಹೊಸ ಪೀಳಿಗೆಯವರು ಓದಿನ ವ್ಯಾಪ್ತಿ ಪ್ರದೇಶದಿಂದ ಹೊರಗುಳಿದುಬಿಟ್ಟಿದ್ದಾರೆ.

ಅವರನ್ನು ಓದಿನ ವ್ಯಾಪ್ತಿಗೆ ಮತ್ತೆ ಮರಳಿಸುವ ಅಪ್ಪಟ ಕಾಳಜಿಯೊಂದಿಗೆ ಬರೆಯಲ್ಪಟ್ಟ ಈ ಬರಹಗಳಿಗೆ ‘ಬೊಗಸೆಯಷ್ಟು ಓದು’ ಒಟ್ಟಂದವನ್ನು ನೀಡುತ್ತದೆ. ಅತಿಯಾಸೆಯ ಭರಾಟೆಯಲ್ಲಿ ದಾರಿ ತಪ್ಪುವ ಮಕ್ಕಳನ್ನು ಅತ್ಯಂತ ಕಕ್ಕುಲಾತಿಯಿಂದ ಸುಧಾರಿಸುವ ಅಮ್ಮನ ಅಂತಃಕರಣದ ದೃಷ್ಟಿಕೋನ ಈ ಕೃತಿಯೊಳಗೆ ಅಂತಸ್ಥವಾಗಿರುವುದನ್ನು ಶೀರ್ಷಿಕೆ ಧ್ವನಿಸುತ್ತದೆ. ಅಗತ್ಯಕ್ಕಿಂತ ಹೆಚ್ಚಿನದ್ದನ್ನು ಅಪೇಕ್ಷಿಸಿ ಸ್ವಲ್ಪವೇ ಪಡೆಯುವುದಕ್ಕಿಂತ, ಸ್ವಲ್ಪದ್ದರಲ್ಲಿಯೇ ಹೆಚ್ಚಿನದ್ದನ್ನು ಪಡೆದುಕೊಳ್ಳುವ ಆಯಾಮ ವಿಶೇಷವಾದದ್ದು.

ಈ ದೃಷ್ಟಿಯಿಂದ ಕೃತಿಯು ಬೊಗಸೆಯಷ್ಟು ಓದನ್ನು ಸಾಧ್ಯವಾಗಿಸಿಕೊಳ್ಳುತ್ತಾ ಹೆಚ್ಚಿನದ್ದನ್ನು ಪಡೆಯಲು ಪೂರಕವಾಗುತ್ತದೆ. ನೀರಿನ ದಾಹವಾದಾಗ ಬೊಗಸೆಯಷ್ಟು ನೀರು ಕೊಡುವ ಖುಷಿ ಮತ್ತು ಕಸುವು ಹೊಸ ಉತ್ಸಾಹ ಮೂಡಿಸುತ್ತದೆ. ತಂತ್ರಜ್ಞಾನ ಸೃಷ್ಟಿಸುವ ಶೂನ್ಯದ ಮರುಭೂಮಿಯ ಮಧ್ಯೆ ಸಕಾರಾತ್ಮಕ ಪರಂಪರೆ ನೆನಪಿಸುವ ಕೃತಿಯೊಂದರ ಓದಿನ ಅವಕಾಶ ಅಂಥದ್ದೇ ಉತ್ಸಾಹ ನೆಲೆಗೊಳಿಸುತ್ತದೆ.

ಈ ಅವಕಾಶವನ್ನು ಹಳೆಮನೆ ಅವರು ತಮ್ಮ ಕೃತಿಯ ಮೂಲಕ ಒದಗಿಸಿದ್ದಾರೆ. ಸಾಹಿತ್ಯ ವಿಮರ್ಶೆಯು ತನ್ನೊಳಗಿಟ್ಟುಕೊಂಡಿರುವ ಅಗಾಧತೆಯ ಮಗ್ಗಲನ್ನು ಪರಿಚಯಿಸುವ ಹಾಗೆಯೇ ‘ಬೊಗಸೆಯಷ್ಟು ಓದು’ ಇದೆ. ಓದು ಕೇವಲ ಯಾಂತ್ರಿಕವಲ್ಲ. ಅದು ವೈಚಾರಿಕವೂ ಹೌದು. ಬೌದ್ಧಿಕ ಮುನ್ನಡೆ ಸಾಧಿಸುವ ಮಾರ್ಗವೂ ಹೌದು. ಈ ಮಾರ್ಗದ ಬೆಂಬಲದೊಂದಿಗೆ ಸ್ವ-ಅರಿವು ಕಂಡುಕೊಳ್ಳುವ ಮತ್ತು ಆ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂಥ ಸಾಧ್ಯತೆಯ ಜೊತೆಗೇ ಈ ಕೃತಿಯ ಅರ್ಥಧ್ವನಿ ಇದೆ.

ಸುದ್ದಿದಿನ.ಕಾಂ | ವಾಟ್ಸಾಪ್ | 9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending