ರಾಜಕೀಯ
ಬಳ್ಳಾರಿ ಲೋಕಸಭಾ ಉಪ ಚುನಾವಣೆ : ಕಾಂಗ್ರೆಸ್ ನ ಉಗ್ರಪ್ಪ ಹಾಗೂ ಬಿಜೆಪಿಯ ಶಾಂತಾ ಅವರ ಆಸ್ತಿ ವಿವರ ನೋಡಿ..!
ಸುದ್ದಿದಿನ ಡೆಸ್ಕ್ : ಬಳ್ಳಾರಿ ಲೋಕಸಭಾ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪ ಆಸ್ತಿ ವಿವರ ಹೀಗಿದೆ.
ಚರಾಸ್ಥಿ ಚಿರಾಸ್ಥಿ ಸೇರಿ ಒಟ್ಟು : 15.38 ಕೋಟಿ,
4.57 ಕೋಟಿ ಸಾಲ,4.2 ಲಕ್ಷ ನಗದು ಹಣ,
33 ಲಕ್ಷ ರೂಪಾಯಿ ಮೌಲ್ಯದ ಕಾರು,100 ಗ್ರಾಮ್ ಚಿನ್ನ,1.86.80.512 ವೈಯಕ್ತಿಕ ಚರಾಸ್ತಿ,
ಪಾವಗಡದಲ್ಲಿ 15.14 ಎಕರೆ ಕೃಷಿ ಜಮೀನು
2.5 ಎಕರೆ ಕೃಷಿಯೇತರ ಜಮೀನು,52 ಲಕ್ಷ ಮೌಲ್ಯದ ಸ್ಥಿರಾಸ್ತಿ,1.04 ಕೋಟಿ ವೈಯಕ್ತಿಕ ಸಾಲ ಹೊಂದಿದ್ದಾರೆ.
ಪತ್ನಿ ಮಂಜುಳಾ ಹೆಸರಿನಲ್ಲಿ 1 ಕೆಜಿ 400 ಗ್ರಾಮ್ ಬಂಗಾರ,16 ಕೆಜಿ ಬೆಳ್ಳಿ, 22.33.066 ರೂಪಾಯಿ ಮೌಲ್ಯದ ಚರಾಸ್ತಿ,ಬೆಂಗಳೂರಿನ ಹೆಚ್ ಎಸ್ಸಾರ್ ಲೇ ಔಟ್ ನ ಮನೆ ಸೇರಿದಂತೆ 7.5 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ,91.80 ಲಕ್ಷ ರೂಪಾಯಿ ಸಾಲ ಹೊಂದಿದ್ದಾರೆ.
ಮಗ ನಿತಿನ್ ಕುಮಾರ್ ಹೆಸರಿನಲ್ಲಿ 250 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ.2.74.67.404 ರೂಪಾಯಿ ಮೌಲ್ಯದ ಚರಾಸ್ತಿ ,ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3.9 ಎಕರೆ ಜಮೀನು ಮತ್ತು ನಿವೇಶನ ಹೊಂದಿದ್ದಾರೆ.
ಒಟ್ಟು 2.30 ಕೋಟಿ ಮೌಲ್ಯದ ಸ್ಥಿರಾಸ್ತಿ
2.50 ಕೋಟಿ ಸಾಲ, ಮಗಳು ದೀಪಿಕಾ ಹೆಸರಿನಲ್ಲಿ 19.25.868 ರೂಪಾಯಿ ಮೌಲ್ಯದ ಚರಾಸ್ತಿ ಇದ್ದು 10 ಲಕ್ಷ ರೂಪಾಯಿ ಸಾಲ ಇದೆ.
ಬಳ್ಳಾರಿ ಲೋಕಸಭಾ ಉಪ ಚುನಾವಣೆ ಬಿಜೆಪಿ ಜೆ ಶಾಂತಾ ಆಸ್ತಿ ವಿವರ
ಶಾಂತಾ ಅವರ ಕುಟುಂಬದ ಒಟ್ಟು ಚರಾಸ್ತಿ ಮತ್ತು ಸ್ಥಿರಾಸ್ತಿ : 6.53.78.528 ರೂಪಾಯಿ ಮೌಲ್ಯ.ಶಾಂತಾ, ಪತಿ ಮತ್ತು ಪುತ್ರಿ ಹೆಸರಿನಲ್ಲಿ 12.69 ಲಕ್ಷ ರೂಪಾಯಿ ನಗದು ಹಣವಿದ್ದು,ಶಾಂತಾ ಅವರ ಹೆಸರಿನಲ್ಲಿ 17.24 ಲಕ್ಷ ರೂಪಾಯಿ ಮೌಲ್ಯದ ಒಂದು ಕಾರು,
1 ಕೆಜಿ 116 ಗ್ರಾಂ ಚಿನ್ನ, 70.21.474 ರೂಪಾಯಿ ಮೌಲ್ಯದ ಚರಾಸ್ತಿ,60 ಲಕ್ಷ 20 ಸಾವಿರ ರೂಪಾಯಿ ಮೌಲ್ಯದ ಸ್ಥಿರಾಸ್ತಿ,1.07.188 ರೂಪಾಯಿ ಸಾಲ ಹೊಂದಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಕುರುಬ ಎಸ್ ಟಿ ಹೋರಾಟ | ಪಾದಯಾತ್ರೆಯಲ್ಲಿ ಕಾಗಿನೆಲೆ ಶ್ರೀ ಸರ್ಕಾರಕ್ಕೆ ಕೊಟ್ರು ಡೆಡ್ ಲೈನ್..!

ಸುದ್ದಿದಿನ, ದಾವಣಗೆರೆ : ರಾಜ್ಯ ಸರ್ಕಾರಕ್ಕೆ ಒಂದರ ಮೇಲೊಂದು ತಲೆ ನೋವು ಶುರುವಾಗ್ತಿದೆ. ಒಂದು ಕಡೆ ಪಂಚಮಸಾಲಿ ಹೋರಾಟ, ಮತ್ತೊಂದೆಡೆ ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ ಆಗ್ರಹ. ಕಾಗಿನೆಲೆ ಶ್ರೀ ಗಳ ನೇತೃತ್ವದಲ್ಲಿ ಹೊರಟಿರುವ ಪಾದಯಾತ್ರೆ ಬೆಣ್ಣೆನಗರಿಗೆ ಬಂದು ತಲುಪಿದ್ದು, ಮೊದಲ ಭಾರೀಗೆ ಸರ್ಕಾರಕ್ಕೆ ಕಾಗಿನೆಲೆ ಶ್ರೀಗಳು ಖಡಕ್ ವಾರ್ನಿಂಗ್ ನೀಡುವ ಡೆಡ್ ಲೈನ್ ನೀಡಿದ್ದಾರೆ.
ಆ ಒಂದು ಪಾದಯಾತ್ರೆಯಲ್ಲಿ ಕೇಳಿದ್ದು ಒಂದೇ ಘೋಷಣೆ ವಾಕ್ಯ ಬೇಕೆ ಬೇಕು ಎಸ್ ಟಿ ಬೇಕು, ಬೇಕೆ ಬೇಕು ಎಸ್ ಟಿ ಬೇಕು. ಹೌದು., ಸಾಗರೋಪಾದಿಯಲ್ಲಿ ಜನ ಆ ಒಬ್ಬ ಸ್ವಾಮಿಜಿ ಜೊತೆ ಕೈಗೊಡಿಸಿದ್ದರು, ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಸದ್ಯ ತೀವ್ರ ಸ್ವರೂಪ ಪಡೆದುಕೊಂಡಿದೆ.
ಮಕರ ಸಂಕ್ರಾಂತಿಗೆ ಸೂರ್ಯ ತನ್ನ ದಿಕ್ಕು ಬದಲಿಸುವಂತೆ ನಿರಂಜನಾನಂದಪುರಿ ಸ್ವಾಮೀಜಿ ಕುರುಬ ದಿಕ್ಕು ಬದಲಿಸುವ ಪಣ ತೊಟ್ಟಿದ್ದಾರೆ. ಅದಕ್ಕೆ ಜನವರಿ ೧೫ ರಂದೆ ಹಾವೇರಿಯ ಕಾಗಿನೆಲೆ ಪೀಠದಿಂದ ಪಾದಯಾತ್ರೆ ಆರಂಭಿಸಿದ್ದು ಸದ್ಯ ಪಾದಯಾತ್ರೆ ದಾವಣಗೆರೆಗೆ ಬಂದು ತಲುಪಿದೆ, ಡೊಳ್ಳು ಕುಣಿತ, ಕುಂಬಮೇಳದ ಸ್ವಾಗತದೊಂದಿಗೆ ಜನರು ಸಾಗರೋಪಾದಿಯಲ್ಲಿ ಬಂದು ಜೈ ಎಂದಿದ್ದು, ಇದು ಎಸ್ ಟಿ ಹೋರಾಟಕ್ಕೆ ಮತ್ತುಷ್ಟು ಬಲ ನೀಡಿದೆ.
ಈ ವೇಳೆ ಹೋರಾಟವನ್ನುದ್ದೇಶಿಸಿ ಮಾತನಾಡಿದ ಕಾಗಿನೆಲೆ ಶ್ರೀ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನಮ್ಮ ಎಸ್ ಟಿ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಶಾಂತಿಯುತವಾಗಿ ನಡೆಯುತ್ತಿದೆ. ಒಂದು ವೇಳೆ ನಮ್ಮ ಹೋರಾಟಕ್ಕೆ ಸರಿಯಾದ ಬೆಲೆ ಸಿಗದೆ ಹೋದಲ್ಲಿ ನಮ್ಮ ಹೋರಾಟ ತೀವ್ರಗೊಳ್ಳಲಿದೆ, ಟಗರು ಗುದ್ದಿದರೆ ಸಂಸತ್ ಭವನ ನಡುಗಲಿದೆ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಸೇರಿದ್ದು ಪಾದಯಾತ್ರೆಗೆ ಮತ್ತಷ್ಟು ಶಕ್ತಿ ತುಂಬಿತು.. ಇನ್ನೂ ಸಮಾವೇಶಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ಆಗಮಿಸಿ, ಸಿದ್ದರಾಮಯ್ಯ ವಿರುದ್ದ ಗುಡುಗಿದ್ರು, ಸಿದ್ದರಾಮಯ್ಯ ಕೇವಲ ನಾಲ್ಕು ಜಿಲ್ಲೆಗೆ ಶಿಫಾರಸ್ಸು ಮಾಡಿದ್ರು, ಈಗ ನಾವು ಇಡೀ ಕರ್ನಾಟಕಕ್ಕೆ ST ಕೇಳುತ್ತಿದ್ದೇವೆ, ಕೈಮುಗಿದು ಕೇಳುತ್ತೇನೆ ಇದರಲ್ಲಿ ರಾಜಕೀಯ ಮಾಡಬೇಡಿ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ನವರಿಗೆ ಟಾಂಗ್ ಕೊಟ್ರು.
|ನಿರಂಜನಾನಂದಪುರಿ ಸ್ವಾಮೀಜಿ, ಕನಕಗುರು ಪೀಠ
ಒಟ್ಟಾರೆ ಈಗಾಗಲೇ ಸಂಪುಟ ವಿಸ್ತರಣೆಯಿಂದ ಇಕ್ಕಟ್ಟಿನಲ್ಲಿ ಸಿಲುಕಿರುವ ಸರ್ಕಾರಕ್ಕೆ ಇದೀಗ ST ಹೋರಾಟ ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಅದರಲ್ಲೂ ಆಡಳಿತ ಪಕ್ಷದವರೆ ಆದ ಕೆಎಸ್ ಈಶ್ವರಪ್ಪ, ಎಂ ಟಿಬಿ ನಾಗರಾಜ್, ಆರ್ ಶಂಕರ್, ಎಚ್ ವಿಶ್ವನಾಥ್ ಹೋರಾಟಕ್ಕೆ ದುಮುಕಿದ್ದು, ಸರ್ಕಾಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
| ಕೆ.ಎಸ್. ಈಶ್ವರಪ್ಪ, ಸಚಿವರು
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಾಷ್ಟ್ರೀಯ ತನಿಖಾ ದಳದಿಂದ ಸಮನ್ಸ್ ಪಡೆದಿದ್ದ ಖಾಲ್ಸಾ ಏಡ್ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ..!

ಸುದ್ದಿದಿನ,ನವದೆಹಲಿ: ಕಳೆದ ಎರಡು ತಿಂಗಳಿಂದ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆನ್ನೆಲುಬುನಂತಿರುವ ಖಾಲ್ಸಾ ಏಡ್ ಎಂಬ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ 2021ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದೆ.
ಜ. 16ರಂದು ಈ ಸಂಸ್ಥೆಗೆ ದೇಣಿಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಶ್ನಿಸಿ ರಾಷ್ಟ್ರೀಯ ತನಿಖಾ ದಳವು ಸಮನ್ಸ್ ನೀಡಿತ್ತು.ಕೆನಡಾದ ಸಂಸದರಾದ ಉಪಲ್ ಅವರು ಖಾಲ್ಸಾ ಸಂಸ್ಥೆಯನ್ನು ನಾಮನಿರ್ದೇಶನಕ್ಕೆ ಮನವಿ ಮಾಡಿ ಜ. 14ರಂದು ಪತ್ರ ಬರೆದಿದ್ದರು.
ಇಂಗ್ಲೆಂಡಿನ ಮೂಲದ ಖಾಲ್ಸಾ ಏಡ್ ಸಂಸ್ಥೆ 1999ರಲ್ಲಿ ರವೀಂದರ್ ಸಿಂಗ್ ಅವರಿಂದ ಸ್ಥಾಪನೆಯಾಯಿತು. ಸಿಖ್ ಸಮುದಾಯದ ಈ ಸಂಸ್ಥೆಯು ನಿಧಾನವಾಗಿ ವಿಶ್ವದಾದ್ಯಂತ ತನ್ನ ಸೇವಾ ಚಟುವಟಿಕೆಗಳನ್ನು ವಿಸ್ತರಿಸಿ ತು. ”ಮನುಕುಲವನ್ನು ಒಂದೆಂದು ಭಾವಿಸಿ, ಮಾನವೀಯತೆಯ ಸೇವೆ” ಮಾಡುವುದು ಈ ಸಂಸ್ಥೆಯ ಧ್ಯೇಯ.
ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ನಿರಂತರವಾಗಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಖಾಲ್ಸಾ ಏಡ್, ಪ್ರವಾಹ ಸೇರಿದಂತೆ ಯಾವುದೇ ರೀತಿಯ ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಎಲ್ಲ ರೀತಿಯ ನೆರವನ್ನು ಒದಗಿಸಿದೆ.
ಇಲ್ಲಿ ಉಲ್ಲೇಖಿಸಬಹುದಾದ ಕೆಲವು ನೆರವಿನ ಚಟುವಟಿಕೆಗಳು ಇಂತಿವೆ
- 1999ರ ಟರ್ಕಿ ಭೂಕಂಪದ ವೇಳೆ ಸಂತ್ರಸ್ತರಿಗೆ ಮೂಲ ಸೌಕರ್ಯ.
- 2000ದಲ್ಲಿ ಒರಿಸಾದಲ್ಲಿ ಚಂಡಮಾರುತದಿಂದ ಉಂಟಾದ ಅನಾಹುತದ ರಕ್ಷಣಾ ಕಾರ್ಯಕ್ಕೆ ಸ್ವಯಂ ಸೇವಕರ ರವಾನೆ
- ಆಫ್ಘಾನಿಸ್ತಾನದಲ್ಲಿ 2003ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಉಪಕರಣ ಹಾಗೂ ಆರ್ಥಿಕ ನೆರವು.
- 2016ರಲ್ಲಿ ಲಂಡನ್ನಲ್ಲಿ ಉಂಟಾದ ಪ್ರವಾಹದಿಂದಾಗಿ ಸಂತ್ರಸ್ತರಿಗೆ ಶಿಬಿರಗಳ ಸ್ಥಾಪನೆ ಮತ್ತು ನೆರವು.
- ಬಾಂಗ್ಲಾ-ಮಯನ್ಮಾರ್ ಗಡಿಯಲ್ಲಿದ್ದ ರೊಹಿಂಗ್ಯಾ ನಿರಾಶ್ರಿತರಿಗೆ ಸೇವೆ.
2018ರಲ್ಲಿ ಇಡೀ ಕೇರಳವನ್ನು ನಡುಗಿಸಿದ ಪ್ರವಾಹದ ವೇಳೆ ಅತಿ ದೊಡ್ಡ ನೆರವಿನ ಕಾರ್ಯವನ್ನು ನಡೆಸಿದ ಹೆಗ್ಗಳಿಕೆ ಖಾಲ್ಸಾ ಸಂಸ್ಥೆಯದ್ದು.
ಈಗ ಪಂಜಾಬಿನಿಂದ ಆರಂಭವಾಗಿ ಕೃಷಿ ನೀತಿಗಳ ವಿರುದ್ಧ ನಡೆಯುತ್ತಿರುವ ಭಾರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಒದಗಿಸಿದ್ದು, ಬಟ್ಟೆ, ಊಟ, ವೈದ್ಯಕೀಯ ನೆರವು ಸೇರಿದಂತೆ ಎಲ್ಲ ರೀತಿಯಲ್ಲೂ ಬೆಂಬಲಕ್ಕೆ ನಿಂತಿದ್ದೆ. ಸರ್ಕಾರ ವಿರುದ್ಧದ ಹೋರಾಟಕ್ಕೆ ಈ ರೀತಿಯಲ್ಲಿ ಬೆನ್ನಿಗೆ ನಿಂತ ಕಾರಣಕ್ಕೆ ಭಯೋತ್ಪಾದಕ ಸಂಸ್ಥೆ ಎಂದು ದೂಷಿಸಿದ್ದು ಅಲ್ಲದೆ, ವಿಚಾರಣೆಗೆ ಕರೆದಿತ್ತು. ಆದರೆ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮ ನಿರ್ದೇಶನಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ವಿಚಾರಣೆ ಮುಂದೂಡಿದೆ.
ಕೃಪೆ | ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲಜ್ಜೆಗೆಟ್ಟ ರಾಜಕಾರಣಕ್ಕೆ ಕರ್ನಾಟಕವೇ ತವರು..!

- ನಾ ದಿವಾಕರ
ಮೂರು ನಾಲ್ಕು ದಶಕಗಳ ಹಿಂದೆ ಉತ್ತರ ಭಾರತದ ಹಲವು ರಾಜ್ಯಗಳು ‘ ಆಯಾರಾಂ ಗಯಾರಾಂ ’ ಪಕ್ಷಾಂತರ ರಾಜಕಾರಣದಿಂದ ಕಲುಷಿತಗೊಂಡು ಕಂಗೆಟ್ಟಿದ್ದ ಸಂದರ್ಭದಲ್ಲಿ ಕರ್ನಾಟಕ ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿತ್ತು. ಅಧಿಕಾರಸ್ಥ ರಾಜಕಾರಣಿಗಳ ಉತ್ತರದಾಯಿತ್ವದ ಪ್ರಜ್ಞೆ ಮತ್ತು ಕೊಂಚ ಮಟ್ಟಿನ ಪ್ರಾಮಾಣಿಕತೆ ರಾಜ್ಯ ರಾಜಕಾರಣದಲ್ಲಿ ಹೊಸ ಅಲೆ ಸೃಷ್ಟಿಸಿತ್ತು.
ಪಕ್ಷಾಂತರ, ಭಿನ್ನಮತೀಯ ರಾಜಕಾರಣ, ಪಕ್ಷಭೇದ ಮತ್ತು ಹೊಸ ಪಕ್ಷಗಳ ಸ್ಥಾಪನೆ ಇವೆಲ್ಲದರ ನಡುವೆಯೇ ರಾಜ್ಯದಲ್ಲಿ, ಅಧಿಕಾರ ಪೀಠದಲ್ಲಿರುವವರು ‘ ನೈತಿಕ ಹೊಣೆ ’ ಎನ್ನುವ ಪದಗಳ ಅರ್ಥವನ್ನು ಬಲ್ಲವರಾಗಿದ್ದರು. ಅಪವಾದಗಳಿಂದ ಮುಕ್ತವಾದ ರಾಜಕಾರಣ ಅಸಾಧ್ಯವೇ ಆದರೂ ತಮ್ಮ ಮೇಲಿನ ಅಪವಾದಗಳನ್ನು ಸ್ವೀಕರಿಸಿ, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಒಂದು ಪರಂಪರೆಗೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಸಾಕ್ಷಿಯಾಗಿದ್ದರು.
ಅಬ್ದುಲ್ ನಜೀರ್ ಸಾಬ್ ಅವರಂತಹ ನಿಸ್ಪೃಹ, ಪ್ರಾಮಾಣಿಕ, ಸರಳ ಸಜ್ಜನಿಕೆಯ ರಾಜಕಾರಣಿಯೊಬ್ಬರು ಈ ನೆಲದ ಮೇಲೆ ಓಡಾಡಿದ್ದರು ಎನ್ನುವುದು ಹೆಮ್ಮೆಯ ವಿಚಾರ. ಆದರೆ ಇಂತಹ ಒಂದು ವ್ಯಕ್ತಿತ್ವ ಕೇವಲ ಮೂರು ನಾಲ್ಕು ದಶಕಗಳ ಒಳಗೆ ಪ್ರಾಚೀನ ಶಿಲಾಶಾಸನದಂತೆ ಕಾಣುತ್ತಿರುವುದು ದುರಂತ.
ನಜೀರ್ ಸಾಬ್ ಮೂರು ನಾಲ್ಕು ಪೀಳಿಗೆಯ ರಾಜಕಾರಣಿಗಳಿಗೆ ಪ್ರೇರಣೆಯಾಗಬೇಕಿತ್ತು, ಸ್ಪೂರ್ತಿಯಾಗಬೇಕಿತ್ತು. ಆದರೆ ಅವರ ಒಡನಾಟದಲ್ಲಿದ್ದವರೂ ಇಂದು ಭ್ರಷ್ಟ ಮಾರ್ಗಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ, ನವ ಉದಾರವಾದದ ಕಾರ್ಪೋರೇಟ್ ರಾಜಕಾರಣ ನಮ್ಮ ದೇಶದ ರಾಜಕೀಯ ವಾತಾವರಣವನ್ನು ಎಷ್ಟು ಕಲುಷಿತಗೊಳಿಸಿದೆ ಎಂದು ಅರ್ಥವಾಗುತ್ತದೆ.
ಭಾರತದ ರಾಜಕಾರಣದಲ್ಲಿ ಪ್ರಾಮಾಣಿಕತೆ ಮತ್ತು ಸತ್ಯಸಂಧತೆಯೂ ಇತ್ತು ಎನ್ನುವುದು ಬಹುಶಃ ಮುಂದಿನ ಪೀಳಿಗೆಗೆ ಪುರಾಣ ಕಥನದಂತೆ ಕಾಣುತ್ತದೆ. ನಿಜ, ದೇಶ ಬದಲಾಗಿದೆ, ಜನರೂ ಬದಲಾಗಿದ್ದಾರೆ, ಹಾಗೆಯೇ ರಾಜಕಾರಣಿಗಳೂ ಬದಲಾಗಿದ್ದಾರೆ. ಆದರೆ ರಾಜಕೀಯ ರಂಗದಲ್ಲಿ ಉಂಟಾಗಿರುವ ಬದಲಾವಣೆ ದೇಶವನ್ನು ವಿನಾಶದತ್ತ ಕೊಂಡೊಯ್ಯುವಂತೆ ಕಾಣುತ್ತಿದೆ.
ಪಂಚಾಯತ್ ವ್ಯವಸ್ಥೆಗೆ ಒಂದು ಸ್ಪಷ್ಟ ಕಾಯಕಲ್ಪ ನೀಡಿದ ಕರ್ನಾಟಕದಲ್ಲಿ ನಾವು ಗ್ರಾಮ ಪಂಚಾಯತ್ ಸ್ಥಾನಗಳು ಹರಾಜಾಗುತ್ತಿರುವುದನ್ನು ಇತ್ತೀಚೆಗಷ್ಟೇ ನೋಡಿದ್ದೇವೆ. ಜನಪ್ರತಿನಿಧಿ ಎನ್ನುವ ಪದ ಅಧಿಕಾರ ಕೇಂದ್ರಗಳಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಹರಾಜು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವ ಒಂದು ವಿಕೃತ ಪರಂಪರೆಗೆ ಕರ್ನಾಟಕವೇ ಪ್ರಧಾನ ಭೂಮಿಕೆಯಾಗಿರುವುದು ವಿಪರ್ಯಾಸ ಎನಿಸಿದರೂ ಸತ್ಯ.
ತತ್ವ, ಸಿದ್ಧಾಂತ ಮತ್ತು ಜನಸೇವೆ ಈ ಮೂರೂ ಉದಾತ್ತ ಚಿಂತನೆಗಳಿಗೆ ಎಂದೋ ತಿಲಾಂಜಲಿ ಕೊಟ್ಟಿರುವ ರಾಜ್ಯ ರಾಜಕಾರಣದಲ್ಲಿ ಇಂದು ಉಳಿದಿರುವುದು ಅಧಿಕಾರ ರಾಜಕಾರಣ ಮಾತ್ರ ಎನ್ನುವುದೂ ಅಷ್ಟೇ ಸತ್ಯ. ಏಕೆಂದರೆ ನವ ಉದಾರವಾದ ಮತ್ತು ಹಣಕಾಸು ಬಂಡವಾಳ ಊರ್ಜಿತವಾಗಲು ಬೇಕಿರುವುದು ಒಂದು ಪ್ರಬಲ ಸರ್ಕಾರ ಮತ್ತು ಶಿಥಿಲ ವಿರೋಧ.
ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಇದನ್ನು ಸಾಧಿಸಲಾಗಿದೆ. ಹಾಗಾಗಿಯೇ ರಾಜ್ಯದ ರೈತರ ಪಾಲಿಗೆ ಮರಣಶಾಸನವಾಗಲಿರುವ ಕೃಷಿ ಮಸೂದೆ, ಎಪಿಎಂಸಿ ಕಾಯ್ದೆಯ ತಿದ್ದುಪಡಿ, ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳ ವಿರುದ್ಧ ಒಂದು ಪ್ರಬಲ ರಾಜಕೀಯ ಹೋರಾಟ ರೂಪುಗೊಳ್ಳುತ್ತಿಲ್ಲ.
ಗೋಮಾಂಸ ಸೇವನೆಯ ಹಕ್ಕು ಬಾಧ್ಯತೆಗಳನ್ನು ಕುರಿತು ನಡೆಯುತ್ತಿರುವಷ್ಟು ರಾಜಕೀಯ ಚರ್ಚೆಗಳು, ವಾಗ್ವಾದಗಳು, ಗೋ ಹತ್ಯೆ ನಿಷೇಧದಿಂದ ರೈತಾಪಿಯ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ನಡೆಯುತ್ತಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ.
ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿಯಿಂದ ಕೃಷಿ ಭೂಮಿ ಉದ್ಯಮಿಗಳ ವಶವಾಗುವ ಅಪಾಯವನ್ನು ರೈತ ಸಂಘಟನೆಗಳು ಗ್ರಹಿಸಿವೆಯಾದರೂ, ರಾಜ್ಯದ ವಿರೋಧ ಪಕ್ಷಗಳು ಒಂದು ಸ್ಪಷ್ಟ ನಿಲುವು ತಳೆಯುವಲ್ಲಿ ವಿಫಲವಾಗಿವೆ. ಮಣ್ಣಿನ ಮಕ್ಕಳ ಪಕ್ಷ ಎಂಬ ಹೆಗ್ಗಳಿಕೆಯೊಂದಿಗೇ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಜಾತ್ಯತೀತ ಜನತಾ ದಳ ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿಗೆ ಬೆಂಬಲ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳ ಬಗ್ಗೆ ಮೌನ ವಹಿಸಿದೆ.
ಈ ನಡುವೆಯೇ ಕರ್ನಾಟಕದ ರಾಜಕಾರಣ ಅಕ್ಷರಶಃ ಹರಾಜು ಮಾರುಕಟ್ಟೆಯಂತಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇತ್ತೀಚಿನ ಕೆಲವು ಬೆಳವಣಿಗೆಗಳು ಈ ಮಾರುಕಟ್ಟೆ ರಾಜಕಾರಣವನ್ನು ನಡುಬೀದಿಯಲ್ಲಿ ಬೆತ್ತಲಾಗಿ ನಿಲ್ಲಿಸಿಬಿಟ್ಟಿದೆ.
2008ರ ನಂತರದಲ್ಲಿ ನವ ಉದಾರವಾದಿ ಮಾರುಕಟ್ಟೆ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಎದುರಿಸಿದ ಬಿಕ್ಕಟ್ಟಿಗೂ, ಭಾರತದ ರಾಜಕಾರಣದಲ್ಲಿ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳ ನೇರ ಪಾಲ್ಗೊಳ್ಳುವಿಕೆಗೂ ನೇರ ಸಂಬಂಧ ಇರುವುದನ್ನು ಈ ಮಾರುಕಟ್ಟೆ ರಾಜಕಾರಣದಲ್ಲಿ ಗುರುತಿಸಬಹುದು. ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಸಾಂವಿಧಾನಿಕ ನಿಯಮ, ಬದ್ಧತೆಗಳನ್ನು ಗಾಳಿಗೆ ತೂರಿ ರಾಜಕೀಯ ಪಕ್ಷಗಳು ಶಾಸಕರನ್ನು ಖರೀದಿಸಲು ಮುಂದಾಗಿದ್ದೂ ಸಹ ಈ ಬಿಕ್ಕಟ್ಟಿನ ನಂತರದಲ್ಲೇ ಎನ್ನುವುದನ್ನೂ ಗಮನಿಸಬೇಕು.
ಜನಸಾಮಾನ್ಯರು ಸುಸ್ಥಿರ ಸರ್ಕಾರ ಬಯಸುತ್ತಾರೆ, ಸುಭದ್ರ ಆಡಳಿತ ಅಪೇಕ್ಷಿಸುತ್ತಾರೆ ಆದರೆ ಒಂದೇ ಪಕ್ಷದ ಸ್ಪಷ್ಟ ಬಹುಮತದ ರಾಜಕೀಯ ಅಧಿಕಾರ ಜನಾಭಿಪ್ರಾಯದ ಒತ್ತಾಸೆಯಲ್ಲ. ಇದು ಮಾರುಕಟ್ಟೆಯ ಅನಿವಾರ್ಯತೆ. ಈ ಅನಿವಾರ್ಯತೆಯನ್ನು ಜನಾಭಿಪ್ರಾಯವಾಗಿ ರೂಪಿಸುವ ಹೊಣೆಯನ್ನು ಕಾರ್ಪೋರೇಟ್ ನಿಯಂತ್ರಿತ ಸುದ್ದಿ ಮಾಧ್ಯಮಗಳು ವಹಿಸಿಕೊಂಡಿವೆ.
ಇದರ ಪರಿಣಾಮ, ಕರ್ನಾಟಕದಲ್ಲಿ ‘ ಅನರ್ಹರ ರಾಜಕಾರಣ ’ ಎನ್ನುವ ಹೊಸ ಪರಿಕಲ್ಪನೆ ಹುಟ್ಟಿಕೊಂಡಿದೆ. ಒಂದು ಪಕ್ಷದಿಂದ ಆಯ್ಕೆಯಾಗಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಅನರ್ಹ ಪಟ್ಟ ಪಡೆದು, ಅನರ್ಹರಾಗಿಯೇ ಮತ್ತೊಂದು ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಅಧಿಕಾರ ಪೀಠಕ್ಕೆ ಸನಿಹವಾಗುವ ಒಂದು ಅನಿಷ್ಟ ಪರಂಪರೆಗೆ ರಾಜ್ಯದ ಹಲವು ಅನುಭವಿ ರಾಜಕಾರಣಿಗಳೇ ಸ್ಪಷ್ಟ ಬುನಾದಿ ಹಾಕಿರುವುದು ದುರಂತವಾದರೂ ಸತ್ಯ. ಈ ಬೆಳವಣಿಗೆಯ ಹಿಂದೆ ಮಾರುಕಟ್ಟೆಯ ಶಕ್ತಿ ಇರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ.
ಈ ನಡುವೆಯೇ ರಾಜ್ಯದ ಲಜ್ಜೆಗೆಟ್ಟ ರಾಜಕಾರಣ ಪರಾಕಾಷ್ಠೆ ತಲುಪಿದೆ. 17 ಮಂದಿ ಅನರ್ಹ ಶಾಸಕರ ಬಲದಿಂದ ಸರ್ಕಾರ ರಚಿಸಿದ ಬಿಜೆಪಿ ಮತ್ತು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅಸ್ಮಿತೆಗಳನ್ನೂ ಮಾರಿಕೊಂಡು ಬಿಕರಿಯಾಗಿರುವ ಶಾಸಕರು ರಾಜ್ಯ ಶಾಸನಸಭೆಯನ್ನು ತರಕಾರಿ ಮಾರುಕಟ್ಟೆಯಂತೆ ಬಳಸುತ್ತಿದ್ದಾರೆ. ಸಚಿವ ಪದವಿ, ನಿಗಮ ಮಂಡಲಿ ಅಧ್ಯಕ್ಷ ಪದವಿ ಇಲ್ಲದೆ ಹೋದರೆ ಈ ಜನ ನಾಯಕರ ಜನಸೇವೆಯೇ ಸ್ಥಗಿತವಾಗಿಬಿಡುತ್ತದೆ.
‘ಜನಸೇವೆಯೇ ಜನಾರ್ಧನ ಸೇವೆ’ ಎನ್ನುವ ಘೋಷವಾಕ್ಯ ಎಂದೋ ಮೂಲೆಗೆ ಸೇರಿದ್ದು ಇಂದು ಧನಾರ್ಜನೆಯೇ ಜನಸೇವೆಯ ಗುರಿಯಾಗಿರುವುದು ಸ್ಪಷ್ಟ. ಗ್ರಾಮಪಂಚಾಯತ್ ಮಟ್ಟದಲ್ಲಿ ಸ್ಥಾನಗಳೇ ಹರಾಜು ಹಾಕಲ್ಪಟ್ಟರೆ, ರಾಜ್ಯ ಸರ್ಕಾರದಲ್ಲಿ ಸಚಿವ ಪದವಿ ಹರಾಜು ಹಾಕಲಾಗುತ್ತಿದೆ. ಒಂದು ರಹಸ್ಯ ಸಿ ಡಿ ಇಡೀ ರಾಜ್ಯ ರಾಜಕಾರಣವನ್ನು ಬೆತ್ತಲಾಗಿಸುತ್ತಿದೆ. ಶಾಸಕರನ್ನು ಖುಲ್ಲಂಖುಲ್ಲಾ ಖರೀದಿಸುವ ಪ್ರಕ್ರಿಯೆಗೆ ಆಪರೇಷನ್ ಕಮಲ ಹೆಸರಿನಲ್ಲಿ ಚಾಲನೆ ನೀಡಿದ ಬಿಜೆಪಿಯ ನಾಯಕತ್ವ ಇಂದಿನ ಹದಗೆಟ್ಟ ಪರಿಸ್ಥಿಗೆ ಸಂಪೂರ್ಣ ಹೊಣೆ ಹೊರಬೇಕಿದೆ.
17 ಶಾಸಕರನ್ನು ಬಿಜೆಪಿಗೆ ತರಲು ನೂತನ ಸಚಿವ ಯೋಗೇಶ್ವರ್ 9 ಕೋಟಿ ರೂ ಸಾಲ ಮಾಡಿದ್ದಾರೆ ಎಂದು ಮತ್ತೋರ್ವ ಮಾಜಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅಂದರೆ ಈ ಶಾಸಕರ ನಿಷ್ಠೆಯನ್ನು ಖರೀದಿಸಲು ಹಣಕಾಸು ವ್ಯವಹಾರ ನಡೆದಿದೆ ಎನ್ನುವುದು ಸ್ಪಷ್ಟವಾಗುತ್ತದೆ. 9 ಕೋಟಿ ರೂ ಸಾಲ ಮಾಡುವ ವ್ಯಕ್ತಿ 90 ಕೋಟಿ ರೂ ಖರ್ಚು ಮಾಡುವ ಸಾಮರ್ಥ್ಯ ಹೊಂದಿರುತ್ತಾನೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ನಿಷ್ಠೆಯಿಂದ ಪವಿತ್ರ ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಿ ಶಾಸನಸಭೆಗೆ ಕಳುಹಿಸುವ ಶಾಸಕರು ಈ ರೀತಿ ಬಿಕರಿಯಾಗುವುದೇ ಪ್ರಜಾತಂತ್ರ ಮೌಲ್ಯಗಳಿಗೆ ಅಪಚಾರ ಎಸಗಿದಂತಲ್ಲವೇ ? ಈ ಕನಿಷ್ಠ ಪ್ರಜ್ಞೆ ರಾಜಕಾರಣಿಗಳಲ್ಲಿ ಇರುವುದಿಲ್ಲ ಏಕೆಂದರೆ ಅವರ ದೃಷ್ಟಿ ಅಧಿಕಾರ ಪೀಠದ ಮೇಲಿರುತ್ತದೆ. ಆದರೆ ಪ್ರಜ್ಞಾವಂತ ನಾಗರಿಕರಲ್ಲಿ ಈ ಪ್ರಜ್ಞೆ ಇರಬೇಕಲ್ಲವೇ ?
ಮುಖ್ಯಮಂತ್ರಿ ಯಡಿಯೂರಪ್ಪ ಬ್ಲಾಕ್ಮೇಲ್ ರಾಜಕಾರಣಕ್ಕೆ ಬಲಿಯಾಗಿದ್ದಾರೆ ಎಂದು ನಿರೂಪಿಸಲು ತಮ್ಮ ಬಳಿ ಇರುವ ರಹಸ್ಯ ಸಿ ಡಿ ಒಂದನ್ನು ಗುರಾಣಿಯಂತೆ ಬಳಸುತ್ತಿರುವ ಬಸನಗೌಡ ಪಾಟಿಲ್ ಯತ್ನಾಳ್ ಅವರಿಗೆ ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದಿದ್ದಲ್ಲಿ ಈ.
ಸಿ ಡಿಯನ್ನು ಎಂದೋ ಸಾರ್ವಜನಿಕರ ಮುಂದೆ ಬಹಿರಂಗಪಡಿಸುತ್ತಿದ್ದರು. ತಮ್ಮ ಸ್ವಾರ್ಥ ಸಾಧನೆಗೆ ‘ಯಾರೂ ನೋಡಲಾಗದಂತಹ’ ಸಿ ಡಿ ಒಂದನ್ನು ಅಸ್ತ್ರವನ್ನಾಗಿ ಬಳಸುವುದು ಹೊಲಸು ರಾಜಕಾರಣವಲ್ಲವೇ ? ಒಂದು ವೇಳೆ ಯತ್ನಾಳ್ ಅವರ ಬೇಡಿಕೆಗಳು ಈಡೇರಿದರೆ ಈ
ಸಿ ಡಿಯಲ್ಲಿ ಇರಬಹುದಾದ ಅವ್ಯವಹಾರಗಳ ದಾಖಲೆಗಳು ಶಾಶ್ವತವಾಗಿ ಭೂಗತವಾಗಿಬಿಡುತ್ತವೆ ಅಲ್ಲವೇ ?
ಸಿ ಡಿ ರಾಜಕಾರಣ, ರೆಸಾರ್ಟ್ ರಾಜಕಾರಣ ಮತ್ತು ಬ್ಲಾಕ್ಮೇಲ್ ರಾಜಕಾರಣ ಈ ಮೂರೂ ವಿದ್ಯಮಾನಗಳ ಹಿಂದೆ ಕಾರ್ಪೋರೇಟ್ ಬಂಡವಾಳ, ಕರಾಳ ದಂಧೆಯ ಕಪ್ಪುಹಣ ಮತ್ತು ಮಾರುಕಟ್ಟೆ ಮಾಫಿಯಾದ ಛಾಯೆ ಇರುವುದನ್ನು ಗಮನಿಸದೆ ಹೋದರೆ ಬಹುಶಃ ಮುಂದಿನ ದಿನಗಳಲ್ಲಿ ಚುನಾವಣೆಗಳೇ ಒಂದು ಹಾಸ್ಯ ಪ್ರಹಸನವಾಗಿಬಿಡುತ್ತದೆ. ಇಡೀ ಪ್ರಜಾತಂತ್ರ ವ್ಯವಸ್ಥೆಯನ್ನು ಮಾರುಕಟ್ಟೆ ಶಕ್ತಿಗಳು ಆಕ್ರಮಿಸುತ್ತವೆ.
ಜನರು ಜನಪ್ರತಿನಿಧಿಗಳಿಗೆ ಮತ ನೀಡಿದರೆ, ಧನಿಕರು ಧನಪ್ರತಿನಿಧಿಗಳನ್ನು ಶಾಸನ ಸಭೆಗಳಿಗೆ ಕಳಿಸುತ್ತಾರೆ. ಏಕಂದರೆ ಹಣಕಾಸು ಬಂಡವಾಳಿಗರ ಹೂಡಿಕೆಗೆ ವಂದಿಮಾಗಧರ ಬೃಹತ್ ಪಡೆಯ ಅವಶ್ಯಕತೆ ಇರುತ್ತದೆ. ಕೇಂದ್ರ ಸರ್ಕಾರದ ಕೃಷಿ ಮಸೂದೆಗಳು ಇದಕ್ಕೊಂದು ಸ್ಪಷ್ಟ ಉದಾಹರಣೆ. 101 ರೈತರ ಸಾವಿಗೆ ಕನಿಷ್ಠ ಅನುಕಂಪ ತೋರುವುದಕ್ಕೂ ಮುಂದಾಗದ ನರೇಂದ್ರ ಮೋದಿ ಸರ್ಕಾರ ಮಾರುಕಟ್ಟೆ ಶಕ್ತಿಗಳ ಕಬಂಧ ಬಾಹುಗಳಲ್ಲಿ ಸಿಲುಕುವ ಒಂದು ಚುನಾಯಿತ ಸರ್ಕಾರ ಹೇಗಿರುತ್ತದೆ ಎನ್ನುವುದನ್ನು ನಿರೂಪಿಸಿದೆ.
ಈ ಹಿನ್ನೆಲೆಯಲ್ಲೇ ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಬೇಕಿದೆ. ಮೊದಲು ಶಾಸಕರಲ್ಲಿ ಎರಡೇ ಪ್ರಭೇದಗಳಿದ್ದವು. ಹಾಲಿ ಮತ್ತು ಮಾಜಿ. ಈಗ ಅರ್ಹ-ಅನರ್ಹ, ಸಂತೃಪ್ತ-ಅತೃಪ್ತ, ಮೂಲ-ವಲಸಿಗ ಹೀಗೆ ಹಲವು ಪ್ರಭೇದಗಳು ಹುಟ್ಟಿಕೊಂಡಿವೆ.
ಈ ಗೊಂದಲದ ನಡುವೆ ‘ ಪ್ರಾಮಾಣಿಕ ಶಾಸಕ ’ ರ ಸಂತತಿಯೇ ನಶಿಸುತ್ತಿದೆ. ‘ ಜನಪರ ಕಾಳಜಿ ’ ಮತ್ತು ‘ ಜನ ಸೇವೆ ’ ಎಂಬ ಪರಿಕಲ್ಪನೆಗಳು ಹರಾಜು ಮಾರುಕಟ್ಟೆಯಲ್ಲಿ ಬಿಕರಿಯಾಗುವ ಕಚ್ಚಾ ವಸ್ತುಗಳಾಗಿದ್ದು, ಇವೆರಡರ ಪರಿವೆಯೇ ಇಲ್ಲದ ನಾಯಕರಿಗೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆ ನಿಗದಿಯಾಗುತ್ತದೆ. 17 ಶಾಸಕರನ್ನು ಒಂದುಗೂಡಿಸಲು 9 ಕೋಟಿ ರೂ ಖರ್ಚು ಮಾಡುವ ಒಂದು ವ್ಯವಸ್ಥೆಗೆ ಇದೂ ಒಂದು ಕಾರಣ.
ಕೆಂಗಲ್ ಹನುಮಂತಯ್ಯನವರಿಂದ ಜೆ ಹೆಚ್ ಪಟೇಲ್ ವರೆಗಿನ ಒಂದು ರಾಜಕೀಯ ಪರಂಪರೆ ಪ್ರಾಚೀನ ವ್ಯವಸ್ಥೆಯ ಪಳೆಯುಳಿಕೆಯಂತೆ ಕಂಡುಬಂದರೆ, ಈ ಅಧಃಪತನದ ಹಿಂದೆ ಮಾರುಕಟ್ಟೆ ಬಂಡವಾಳ ಮತ್ತು ಅಧಿಕಾರ ರಾಜಕಾರಣದ ಹಂಬಲ ಪ್ರಬಲ ಶಕ್ತಿಗಳಾಗಿ ಕಂಡುಬರುತ್ತವೆ.
ಈ ನಡುವೆ ರಾಜ್ಯ ರಾಜಕಾರಣದಲ್ಲಿ ಸದಾ ಕೇಳಿಬರುತ್ತಿದ್ದ ಮೌಲ್ಯ, ತತ್ವ , ಸಿದ್ಧಾಂತ ಮತ್ತು ಸಾಂವಿಧಾನಿಕ ಬದ್ಧತೆ ಮುಂತಾದ ಪದಗಳು ಇತಿಹಾಸದ ಕಸದಬುಟ್ಟಿ ಸೇರಿಬಿಟ್ಟಿವೆ. ಈ ಹೊಲಸು ರಾಜಕಾರಣಕ್ಕೆ ಕರ್ನಾಟಕವೇ ತವರು ಎನ್ನುವುದು ಚರಿತ್ರೆಯ ದೊಡ್ಡ ದುರಂತ. ಆದರೆ ಇದು ವಾಸ್ತವ.
ಈ ಪರಿಸ್ಥಿತಿಗೆ ಯಾರು ಕಾರಣ ? ಪ್ರಜ್ಞೆ ಕಳೆದುಕೊಂಡಿರುವ ನಾಗರಿಕರೋ ಸ್ವಂತಿಕೆ ಕಳೆದುಕೊಂಡಿರುವ ರಾಜಕಾರಣಿಗಳೋ ? ನಜೀರ್ ಸಾಬ್ ಕೇಳ್ತಿದಾರೆ, ಉತ್ತರ ಕೊಡಿ !
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ4 days ago
ಕಿಸಾನ್ ಸಮ್ಮಾನ್ನಡಿ 9 ಕೋಟಿ ರೈತರಿಗೆ 1.34 ಲಕ್ಷ ಕೋಟಿ ರೂ. ಸಹಾಯಧನ : ಅಮಿತ್ ಶಾ
-
ದಿನದ ಸುದ್ದಿ5 days ago
ದಾವಣಗೆರೆ | ಜ.18 ರಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಶಂಕುಸ್ಥಾಪನೆ ಹಾಗೂ ನೂತನ ತಾತ್ಕಾಲಿಕ ಬಸ್ ನಿಲ್ದಾಣದ ಉದ್ಘಾಟನೆ
-
ದಿನದ ಸುದ್ದಿ7 days ago
ಅಪಘಾತ | ಗೋವಾಕ್ಕೆ ಹೊರಟಿದ್ದ ದಾವಣಗೆರೆ ಲೇಡಿಸ್ ಕ್ಲಬ್ ನ 13 ಮಂದಿ ದುರ್ಮರಣ
-
ಭಾವ ಭೈರಾಗಿ5 days ago
ಕವಿತೆ | ಎದೆಯಾಚೆಗಿನ ತಲ್ಲಣ
-
ದಿನದ ಸುದ್ದಿ3 days ago
ಹುಬ್ಬಳ್ಳಿ- ಧಾರವಾಡ ಬೈಪಾಸ್ ರಸ್ತೆಯಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ನಿತೇಶ ಪಾಟೀಲ
-
ದಿನದ ಸುದ್ದಿ4 days ago
ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಂದ ಸಂಗೀತ ನೃತ್ಯ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಜಗಳೂರು | ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಸಮಿತಿಯಿಂದ ದೇವರ ಎತ್ತುಗಳಿಗೆ ಮೇವು ಸಂಗ್ರಹಣೆ
-
ದಿನದ ಸುದ್ದಿ4 days ago
ಸಂತೇಬೆನ್ನೂರು | ರಾಷ್ಟ್ರಪತಿ ಪದಕ ಪ್ರಶಸ್ತಿ ವಿಜೇತ ನಿವೃತ್ತ ಎ.ಸಿ.ಪಿ ರುದ್ರಪ್ಪ ಎಮ್ ಎನ್. ಅವರಿಗೆ ಗ್ಯಾಲಕ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಭಿನಂದನಾ ಕಾರ್ಯಕ್ರಮ