ರಾಜಕೀಯ
ಮಹಾರಾಷ್ಟ್ರದ ಹೀನಾಯ ಸೋಲಿನಲ್ಲಿ ಬಟ್ಟಬಯಲಾದ ಬಿಜೆಪಿ-ಆರೆಸ್ಸೆಸ್
- ಈ ಸ್ವಯಂ-ದೋಷಾರೋಪಣೆಯ ಪ್ರಾಜೆಕ್ಟಿನಲ್ಲಿ ಮೂವರು ಉನ್ನತ ಸಂವಿಧಾನಿಕ ವ್ಯಕ್ತಿಗಳು ಕಂಡುಬಂದರು- ರಾಜ್ಯಪಾಲರು, ಭಾರತದ ಪ್ರಧಾನ ಮಂತ್ರಿಗಳು ಮತ್ತು ಭಾರತದ ರಾಷ್ಟ್ರಪತಿಗಳು. ಇಂತಹ ಪ್ರಜಾಪ್ರಭುತ್ವ-ವಿರೋಧಿ ಯೋಜನೆಯನ್ನು ದಕ್ಕಿಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಬಿಜೆಪಿಗೆ ಬಂದದ್ದಾದರೂ ಹೇಗೆ? ಕಳೆದ ವರ್ಷ ಕರ್ನಾಟಕದಲ್ಲಿ ಆದ ಮುಖಭಂಗದಿಂದಲೂ ಬಿಜೆಪಿಯಾಗಲೀ, ಅದರ ಅಧ್ಯಕ್ಷ ಅಮಿತ್ ಷಾರಾಗಲೀ ಬುದ್ಧಿ ಕಲಿಯಲಿಲ್ಲ. ಇನ್ನಷ್ಟು ದೊಡ್ಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಗೃಹಮಂತ್ರಿಯಾದದ್ದು ಈ ಚಾಣಕ್ಯ ಇನ್ನಷ್ಟು ಭಂಡತನದಿಂದ ಹೊಲಸು ಉಪಾಯಗಳನ್ನು ಮಾಡಲು ಧೈರ್ಯ ತುಂಬಿತಷ್ಟೇ. ಈ ಕೊಬ್ಬಿನ ಫಲಿತಾಂಶ ದೇಶದ ಮುಂದಿದೆ. ಮಹಾರಾಷ್ಟ್ರದ ಕುತಂತ್ರಗಳು ಬಿಜೆಪಿಯ ಮತ್ತು ಅದಕ್ಕೆ ನೇತೃತ್ವ ನೀಡಿರುವ ಆರೆಸ್ಸೆಸ್ ಮುಖಂಡರುಗಳ ಪ್ರಜಾಪ್ರಭುತ್ವ-ವಿರೋಧಿ ಮತ್ತು ಸರ್ವಾಧಿಕಾರಶಾಹೀ ಚಾರಿತ್ರ್ಯದ ಬಗ್ಗೆ ಭಾರತದ ಜನತೆಯ ಕಣ್ಣು ತೆರೆಸಬೇಕು.
–ಪ್ರಕಾಶ ಕಾರಟ್
ಫಡ್ನವೀಸ್ ಸರಕಾರದ ಮೂರು ದಿನದ ಕೌತುಕ ಈಗ ಮಾಯವಾಗಿರುವುದರಿಂದ ಈ ಇಡೀ ಹೊಲಸು ಪ್ರಕರಣದಿಂದ ಏನೇನೆಲ್ಲ ಪಾಟಗಳನ್ನು ಕಲಿಯಬಹುದು ಎಂದು ಹಿಂದಿರುಗಿ ನೋಡಬಹುದಾಗಿದೆ.
ನವಂಬರ್ 23ರ ರಾತ್ರಿ ಮತ್ತು 24ರ ಮುಂಜಾನೆ ನಡೆದದ್ದು ಸಂವಿಧಾನ ಮತ್ತು ಪ್ರಜಾಪ್ರಬುತ್ವ ನೀತಿಗಳ ಮೇಲೆ ಒಂದು ನಾಚಿಕೆಗೆಟ್ಟ ಪ್ರಹಾರ. ಮನಸ್ಸನ್ನು ಘಾಸಿಗೊಳಿಸುವ ಸಂಗತಿಯೆಂದರೆ ಈ ಸ್ವಯಂ-ದೋಷಾರೋಪಣೆಯ ಪ್ರಾಜೆಕ್ಟಿನಲ್ಲಿ ಮೂವರು ಉನ್ನತ ಸಂವಿಧಾನಿಕ ವ್ಯಕ್ತಿಗಳು ಕಂಡುಬಂದರು- ರಾಜ್ಯಪಾಲರು, ಭಾರತದ ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳು. ಇವರೆಲ್ಲರೂ ಸಂವಿಧಾನಿಕ ವಿಧಿವಿಧಾನಗಳನ್ನು ಅನುಸರಿಸುವ ಬದಲು ಬಿಜೆಪಿಯ ಆಣತಿಯಂತೆ ಮತ್ತು ಆಳುವ ಪಕ್ಷದ ಹಿತ ಸಾಧಿಸಲು ಕೆಲಸ ಮಾಡಿದರು.
ದೇವೇಂದ್ರ ಫಡ್ನವೀಸರಿಗೆ, ಎನ್‌ಸಿಪಿ ಶಾಸಕಾಂಗ ಪಕ್ಷದ ಮುಖಂಡರಾದ ಅಜಿತ್ ಪವಾರ್ ಕೊಟ್ಟ ಒಂದು ಬೋಗಸ್ ಪತ್ರದ ಆಧಾರದಲ್ಲಿ ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಸ್ವೀಕಾರ ಮಾಡಿಸಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ತನ್ನ ಪಕ್ಷದ ಆಶಯವನ್ನು ಈಡೇರಿಸಲು ತನ್ನ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡರು. ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆಯಲು ಮಧ್ಯರಾತ್ರಿಯಲ್ಲಿ ಅವರು ಶಿಫಾರಸು ಮಾಡಿದ ರೀತಿ ಇದನ್ನು ಮತ್ತಷ್ಟು ಗಹನಗೊಳಿಸಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂಜಾನೆ 5.47ಕ್ಕೆ ಸಂಪುಟ ಮಂಜೂರಾತಿ ಇಲ್ಲದೆ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆಯಲು ಒಪ್ಪಿಗೆಯನ್ನು ಪಡೆದರು. ಇದಕ್ಕಾಗಿ ಅವರು ಭಾರತ ಸರಕಾರ (ವ್ಯವಹಾರ ನಡಾವಳಿ) ನಿಯಮಗಳಲ್ಲಿ, ತುರ್ತು ಸಂದರ್ಭಗಳಲ್ಲಿ ಬಳಸಲೆಂದು ಇರುವ ಅವಕಾಶವನ್ನು ಬಳಸಿಕೊಂಡರು. ಪ್ರಧಾನ ಮಂತ್ರಿಗಳು ಈ ಮಧ್ಯರಾತ್ರಿಯ ರಾಜಕೀಯ ಕ್ಷಿಪ್ರಕ್ರಾಂತಿಯನ್ನು ನಡೆಸಲು ಈ ನಿಯಮವನ್ನು ಬಳಸಲೂ ಹೇಸಲಿಲ್ಲ.
ಅಂತಿಮವಾಗಿ, ಭಾರತದ ರಾಷ್ಟ್ರಪತಿಗಳು ವಿಧಿ ವಿಧಾನಗಳನ್ನು ಸರಿಯಾಗಿ ಅನುಸರಿಸಲಾಗಿದೆಯೇ ಎಂದು ಸ್ವತಃ ಖಾತ್ರಿಪಡಿಸಿಕೊಳ್ಳದೆಯೇ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆಯುವ ಆದೇಶಕ್ಕೆ ಸಹಿ ಹಾಕಿದರು.
ಇವನ್ನೆಲ್ಲ ಮಾಡಿದ್ದು ಸ್ಪಷ್ಟ ಬಹುಮತ ಪಡೆದಿರುವ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರುವ ಅವಕಾಶವನ್ನು ಮೊದಲೇ ಮೊಟಕುಗೊಳಿಸುವುದಕ್ಕಾಗಿ.
ಆದರೆ ಇದೆಲ್ಲ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಎಷ್ಟರ ಮಟ್ಟಿನ ಪ್ರಹಾರ ಮಾಡಲಾಗಿದೆ ಎಂಬುದನ್ನು ವಿವರಿಸುವುದಿಲ್ಲ. ಈ ಪ್ರಜಾಪ್ರಭುತ್ವ-ವಿರೋಧಿ ಯೋಜನೆಯನ್ನು ದಕ್ಕಿಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಬಿಜೆಪಿಗೆ ಬಂದದ್ದಾದರೂ ಹೇಗೆ? ಅದು ದುರಹಂಕಾರದ ಆತ್ಮವಿಶ್ವಾಸ. ಏಕೆಂದರೆ ತನ್ನ ಹಣಬಲವನ್ನು ಮುಂದಿಟ್ಟುಕೊಂಡು ಮತ್ತು ಭ್ರಷ್ಟಾಚಾರದ ಹೂಟವನ್ನು ಬಳಸಿ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷಾಂತರ ಮಾಡಿಸಬಹುದೆಂಬ ಪೂರ್ಣ ವಿಶ್ವಾಸ ಅದಕ್ಕೆ ಇತ್ತು.
ಈ ಮಹಾರಾಷ್ಟ್ರ ಪ್ರಕರಣ ಬಿಜೆಪಿ ರಾಜಕೀಯ ವಿಧೇಯತೆಗಳನ್ನು ಚಿತಾಯಿಸಲು ಭಾರೀ ಕುಳಗಳಿಂದ ಪಡೆದ ಹಣವನ್ನು ಮತ್ತು ಪ್ರಭುತ್ವದ ಸಂಸ್ಥೆಗಳ ಮೂಲಕ ಭೀತಿ ಹುಟ್ಟಿಸುವುದನ್ನು ಎಷ್ಟರ ಮಟ್ಟಿಗೆ ಬಳಸುತ್ತದೆ ಎಂಬುದನ್ನು ಪ್ರಕಟಪಡಿಸಿದೆ. ಅಜಿತ್ ಪವಾರ್ ಪಕ್ಷಾಂತರ ಇದಕ್ಕೆ ಕಣ್ಣುಕುಕ್ಕುವಂತಹ ರುಜುವಾತು. ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾ ಸ್ವೀಕಾರದ 48ಗಂಟೆಗಳ ನಂತರ ಅವರ ವಿರುದ್ಧ ಇದ್ದ ನೀರಾವರಿ ಹಗರಣದ ಒಂಭತ್ತು ಪ್ರಕರಣಗಳಲ್ಲಿ ಆರೋಪಗಳನ್ನು ಭ್ರಷ್ಟಾಚಾರ ನಿಗ್ರಹ ಕಚೇರಿ (ಎಸಿಬಿ) ಕೈಬಿಟ್ಟಿತು. ಈ ಹಿಂದೆ ಒಬ್ಬ ಪ್ರತಿಪಕ್ಷದ ಶಾಸಕನಾಗಿ ದೇವೇಂದ್ರ ಫಡ್ನವೀಸ್ ಈ 70,000 ರೂ.ಗಳ ಹಗರಣದಲ್ಲಿ ಪವಾರ್ ಕೇಂದ್ರವ್ಯಕ್ತಿ ಎಂದು ಆಪಾದಿಸಿದ್ದರು. ಬಿಜೆಪಿ ಪಕ್ಷಾಂತರ ಮಾಡುವ ಪ್ರತಿಯೊಬ್ಬ ಎನ್‌ಸಿಪಿ ಶಾಸಕರಿಗೆ ಅಪಾರ ಮೊತ್ತ ತೆರಲು ಸಿದ್ಧವಾಗಿತ್ತು ಎಂದು ವರದಿಯಾಗಿದೆ.
ಬಿಜೆಪಿ ಕಳೆದ ವರ್ಷ ಕರ್ನಾಟಕದಲ್ಲಿ ಇಂತಹುದೇ ಒಂದು ಹಿನ್ನಡೆಯನ್ನು ಅನುಭವಿಸಿತ್ತು. ರಾಜ್ಯಪಾಲರು ಯೆಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಬೋಧಿಸುವಂತೆ ಅದು ಮಾಡಿತ್ತು. ಆದರೆ ಅವರು 24ಗಂಟೆಗಳೊಳಗೆ ಸದನದಲ್ಲಿ ಬಲಪರೀಕ್ಷೆ ನಡೆಸಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿದಾಗ ರಾಜೀನಾಮೆ ನೀಡಬೇಕಾಯಿತು.
ಆದರೆ ಬಿಜೆಪಿಯಾಗಲೀ, ಅದರ ಅಧ್ಯಕ್ಷ ಅಮಿತ್ ಷಾರಾಗಲೀ ಇದರಿಂದ ಬುದ್ಧಿ ಕಲಿಯಲಿಲ್ಲ ಎಂಬುದು ಸ್ವಯಂವೇದ್ಯ. ಇನ್ನಷ್ಟು ದೊಡ್ಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಗೃಹಮಂತ್ರಿಯಾದದ್ದು ಈ ಚಾಣಕ್ಯ ಇನ್ನಷ್ಟು ಭಂಡತನದಿಂದ ಹೊಲಸು ಉಪಾಯಗಳನ್ನು ಮಾಡಲು ಧೈರ್ಯ ತುಂಬಿತಷ್ಟೇ. ಆದರೆ ಈ ಕೊಬ್ಬಿನ ಫಲಿತಾಂಶ-ಒಂದು ಅವಮಾನಕಾರೀ ಪರಾಭವ.
ಮರುದಿನವೇ ಸದನದಲ್ಲಿ ಬಲಪರೀಕ್ಷೆ ನಡೆಯಬೇಕು ಎಂಬ ಸುಪ್ರಿಂ ಕೋರ್ಟಿನ ಆದೇಶ ಅಸಂವಿಧಾನಿಕ ಮತ್ತು ಅಪ್ರಾತಿನಿಧಿಕ ಸರಕಾರದ ಗುಳ್ಳೆಯನ್ನು ಚುಚ್ಚಿತು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಹಿತದೃಷ್ಟಿಯಿಂದ ನ್ಯಾಯಾಲಯ ಈ ಇಡೀ ಪ್ರಕರಣವನ್ನು ಪರೀಕ್ಷಿಸಬೇಕು ಮತ್ತು ಇದಕ್ಕೆ ಹೊಣೆಗಾರರಾದ ಅಪರಾಧಿಗಳನ್ನು ಬೊಟ್ಟುಮಾಡಿ ತೋರಬೇಕು.
ಭಾರತದ ಜನತೆಗೆ ಮಹಾರಾಷ್ಟ್ರದ ಕುತಂತ್ರಗಳು ಬಿಜೆಪಿಯ ಮತ್ತು ಅದಕ್ಕೆ ನೇತೃತ್ವ ನೀಡಿರುವ ಆರೆಸ್ಸೆಸ್ ಮುಖಂಡರುಗಳ ಪ್ರಜಾಪ್ರಭುತ್ವ-ವಿರೋಧಿ ಮತ್ತು ಸರ್ವಾಧಿಕಾರಶಾಹೀ ಚಾರಿತ್ರ್ಯದ ನಿಜಸ್ವರೂಪ ಕಣ್ಣು ತೆರೆಸಬೇಕು.
ಉದ್ಧವ್ ಥಾಕ್ರೆ ನೇತೃತ್ವದ ಹೊಸ ಸರಕಾರ ಈ ಮೂರು ಪಕ್ಷಗಳ ಮೈತ್ರಿಕೂಟ ನಿರ್ಧರಿಸಿರುವ ಕನಿಷ್ಟ ಸಾಮಾನ್ಯ ಕಾರ್ಯಕ್ರಮದ ಪ್ರಕಾರ ಕೆಲಸ ಮಾಡಬೆಕು. ಮಹಾರಾಷ್ಟ್ರದ ಜನತೆ ಈ ಸರಕಾರದಿಂದ ಅದನ್ನು ನಿರೀಕ್ಷಿಸುತ್ತಾರೆ. ಈ ಸರಕಾರದ ಅಂಗಪಕ್ಷಗಳು ಸೈದ್ಧಾಂತಿಕವಾಗಿ ವಿರುದ್ಧವಾದ ಕಣ್ಣೋಟಗಳನ್ನು ಹೊಂದಿರುವುದರಿಂದ ಇದು ಮತ್ತಷ್ಟು ಮಹತ್ವದ್ದಾಗುತ್ತದೆ.
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್‌ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್‌ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.
ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.
ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್‌ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್‌ನಾಯ್ಕ್.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕನಗೊಂಡನಹಳ್ಳಿಯಲ್ಲಿ ಸ್ವಚ್ಛ ಸಂಕೀರ್ಣ, ಕೂಸಿನ ಮನೆ ಉದ್ಘಾಟನೆ: ಸುಸ್ಥಿರ ಗ್ರಾಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಕಸ ವಿಲೇವಾರಿ ಘಟಕಗಳನ್ನು ಗ್ರಾಮಸ್ಥರೇ ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಗ್ರಾಮಗಳನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಬೇಕು ಎಂದು ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಶುಕ್ರವಾರದಂದು ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛ ಸಂಕೀರ್ಣ ಘಟಕ, ಕೂಸಿನ ಮನೆ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ 39 ಕಸ ವಿಲೇವಾರಿ ಘಟಕಗಳ ಪೈಕಿ, ಕನಗೊಂಡನಹಳ್ಳಿಯಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನೂತನ ಘಟಕ ನಿರ್ಮಿಸಲಾಗಿದೆ. ಇದರ ನಿರ್ವಹಣೆಗಾಗಿ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರೇ ಘಟಕಗಳನ್ನು ನಿರ್ವಹಿಸಿದರೆ ಗ್ರಾಮದ ಆರ್ಥಿಕತೆಗೆ ಬಲ ಬರುತ್ತದೆ. ಇದರ ಜೊತೆಗೆ ಚರಂಡಿ ಸ್ವಚ್ಛತೆಯಲ್ಲೂ ಗ್ರಾಮಸ್ಥರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಮಗಾರಿಗಳ ವಿವರಗಳನ್ನು ತಕ್ಷಣವೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತರ ಉದ್ಘಾಟನೆಗಳು
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂಸದರು ಹೊಸಕೊಳೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ‘ಕೂಸಿನ ಮನೆ’ ಮತ್ತು ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು. ತದನಂತರ ಹಳೆಕೊಳೇನಹಳ್ಳಿಯಲ್ಲಿ ಮೂರು ಹೊಸ ಶಾಲಾ ಕೊಠಡಿಗಳು ಹಾಗೂ ಅಡುಗೆ ಕೊಠಡಿಯನ್ನು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿತ್ತೆ ಮಾಧವ ವಿಠಲರಾವ್, ತಾಲ್ಲೂಕು ಪಂಚಾಯಿತಿ ಇಓ ರಾಮ್ ಭೋವಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ
ಸುದ್ದಿದಿನ,ದಾವಣಗೆರೆ:ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಜ.25 ರಂದು ನಡೆಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಸುಗುಮವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಪ್ರಾಂಶುಪಾಲರು, ಮೇಲ್ವಿಚಾರಕರು, ವೀಕ್ಷಕರೊಂದಿಗೆ ಚರ್ಚಿಸಲು ಆಯೋಜಿಸಿದ್ದ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು .ಮತ್ತು ಪರೀಕ್ಷಾ ವೇಳೆಯಲ್ಲಿ ಯಾವುದೇ ಗೊಂದಲಗಳಿಗೆ ಒಳಗಾಗದೇ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಎಲ್ಲಾ ಕೇಂದ್ರಗಳಿಗೆ ನಿಯೋಜಿಸಿರುವ ಅಧಿಕಾರಿಗಳು ಪರೀಕ್ಷೆಗೆ 45 ನಿಮಿಷ ಮುಂಚಿತವಾಗಿ ಬಂದು ಪರೀಕ್ಷಾ ಕೊಠಡಿಯಲ್ಲಿ ವರದಿ ಸಿದ್ದಪಡಿಸಿಕೊಳ್ಳಬೇಕು. ಹಾಗೂ ಪರೀಕ್ಷೆ ನಡೆಯುವ ಕೊಠಡಿಯ ಒಳಗೆ ವಾಚ್, ಕ್ಯಾಲುಕಿಲೇಟರ್, ಬ್ಲೂಟೂತ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಬರುವಂತಿಲ್ಲ್ಲ. ಪರೀಕ್ಷೆ ಮುಗಿದ ನಂತರ ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್‍ಡೇಟ್ ಮಾಡಿಸಬೇಕು. ಕೊಠಡಿಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಮಾಡಿಸಬೇಕು ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಳನಿವಿಲೋ ದೊರೆಸ್ವಾಮಿ ಮಾತನಾಡಿ, ಜ.25 ರಂದು ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯು ನಗರದ 18 ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಎಲ್ಲಾ ಕೇಂದ್ರಗಳಿಗೂ ಮೇಲ್ವಿಚಾರಕರು, ಮತ್ತು ವೀಕ್ಷಕರನ್ನು ನೇಮಿಸಲಾಗಿದೆ.
ಬೆಳಿಗ್ಗೆ 10.30 ರಿಂದ 12.30 ರವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2.30 ರಿಂದ 4.30 ರವೆರೆಗೆ ಪತ್ರಿಕೆ-2 ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಎಲ್ಲ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರನ್ನೆ ಸಂಪರ್ಕಿಸಿ, ಪ್ರತಿ 24 ಅಭ್ಯರ್ಥಿಗಳಿಗೆ ಒಬ್ಬರು ಕೊಠಡಿ ಮೇಲ್ವಿಚಾರಕರಂತೆ ಅವಶ್ಯವಿರುವಷ್ಟು ಕೊಠಡಿ ಮೇಲ್ವಿಚಾರಕರನ್ನು ನೇಮಿಸಿಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ವಿವರಗಳನ್ನು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮೂಲಕ ಪಡೆಯುವ ವ್ಯವಸ್ಥೆ ಹಾಗೂ ಪರೀಕ್ಷಾ ಕೇಂದ್ರಗಳ ಎಲ್ಲಾ ಕೊಠಡಿಗಳಿಗೆ ಜಾಮರ್ (Jamar) ವ್ಯವಸ್ಥೆ ಮಾಡಲಾಗುವುದು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ನೀಡಲಾಗಿದ್ದು, ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳನ್ನು ತಪಾಸಣೆ ಮಾಡಲು ಪ್ರತಿ ಕೇಂದ್ರಕ್ಕೆ ಅಗತ್ಯವಿರುವಷ್ಟು ಹೋಮ್‍ಗಾರ್ಡ್‍ಗಳನ್ನು ನಿಯೋಜಿಸಬೇಕು. ತಪಾಸಣೆ ಮಾಡುವ ಸಿಬ್ಬಂದಿಗಳಿಗೆ ಸಹಾಯವಾಗುವಂತೆ ಪ್ರತಿ ಕೇಂದ್ರಕ್ಕೆ ಎರಡು ಹ್ಯಾಂಡ್ ಮೆಟಲ್ ಡಿಟೆಕ್ಟರ್‍ಗಳನ್ನು ಒದಗಿಸಲಾಗುವುದು.
ಕಾಲೇಜಿನ ಪ್ರಾಂಶುಪಾಲರನ್ನು ಆಯಾ ಕಾಲೇಜಿಗೆ ಮೇಲ್ವಿಚಾರಕರನ್ನಾಗಿ ನೇಮಿಸಿದ್ದು, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾಣುವಂತೆ ಪರೀಕ್ಷಾ ವೇಳಾಪಟ್ಟಿಯನ್ನು ಅಲ್ಲಲ್ಲಿ ಅಳವಡಿಸಿರಬೇಕು. ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯವಾಗಿ ಗಡಿಯಾರಗಳನ್ನು ಅಳವಡಿಸಬೇಕು. ಪರೀಕ್ಷೆಯಲ್ಲಿ ಅವ್ಯವಹಾರವನ್ನು ತಡೆಯುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದು ಮತ್ತು ಸಮೀಪವಿರುವ ಜೆರಾಕ್ಸ್ ಅಂಗಡಿಗಳನ್ನು ಪೊಲೀಸರ ಸಹಾಯದಿಂದ ಮುಚ್ಚಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ 18 ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಹಾಗೂ ಪರೀಕ್ಷಾ ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ3 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ1 day agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ1 day agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

