Connect with us

ರಾಜಕೀಯ

ಅನರ್ಹತೆಯ “Extrapolation”

Published

on

  • ರಾಜಾರಾಮ್ ತಲ್ಲೂರ್

15ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆ ಫಲಿತಾಂಶ ಎಷ್ಟರ ಮಟ್ಟಿಗೆ ಆಳುವ ಸರ್ಕಾರದ ಪರವಾಗಿ “ಟೇಲರ್ ಮೇಡ್” ಇದೆಯೆಂದರೆ, ಬಿಜೆಪಿ ನಿರ್ಧಾರಕ ಗೆಲುವು ಸಾಧಿಸಿದೆ. ಗೋಕಾಕ , ಕೆ ಆರ್ ಪೇಟೆ, ಚಿಕ್ಕಬಳ್ಳಾಪುರಗಳಲ್ಲಿ ಮಾತ್ರ ಗೆದ್ದ ಅಭ್ಯರ್ಥಿಗೆ 50%ಗಿಂತ ಕಡಿಮೆ ಮತ ಬಂದಿದೆ ಅರ್ಥಾತ್ ಎದುರು ಪಕ್ಷಗಳ ಮತ ಚದುರಿಹೋಗಿ ಬಿಜೆಪಿ ಗೆದ್ದಿದೆ.

ಉಳಿದ ಕ್ಷೇತ್ರಗಳಲ್ಲಿ ಎಲ್ಲೆಡೆ ಬಿಜೆಪಿಯದು ನಿರ್ಧಾರಕ ಜಯ. ಅಥಣಿ (59.83), ಕಾಗವಾಡ್ (54.18), ಯೆಲ್ಲಾಪುರ (60.22), ಹಿರೇಕೆರೂರು (58.99), ರಾಣೆಬೆನ್ನೂರು (55.52), ವಿಜಯನಗರ(55.42), ಕೆ ಆರ್ ಪುರ (62.99), ಯಶವಂತಪುರ (50.86), ಮಹಾಲಕ್ಷ್ಮಿ ಲೇಔಟ್ (58.65).

ಗೋಕಾಕ (48.97), ಕೆ ಆರ್ ಪೇಟೆ (39.41), ಚಿಕ್ಕಬಳ್ಳಾಪುರ (48.53) ಗಳಲ್ಲಿ ಮಾತ್ರ ಬಿಜೆಪಿಗೆ 50%ಗಿಂತ ಕಡಿಮೆ ಮತ ಬಿದ್ದಿದ್ದೆಯಾದರೂ ಸೋತ ಅಭ್ಯರ್ಥಿಗಿಂತ ಕ್ರಮವಾಗಿ 29,006; 9731ಮತ್ತು 34801 ಮತಗಳ ಅಂತರದ ಜಯ ಸಿಕ್ಕಿದೆ. ಬಿಜೆಪಿ ಬಂಡಾಯ ಅಭ್ಯರ್ಥಿ ಗೆದ್ದಿರುವ ಹೊಸಕೋಟೆ (41.43)ಯಲ್ಲಿ, ಒಮ್ಮತದ ಅಭ್ಯರ್ಥಿ ಆಗಿರುತ್ತಿದ್ದರೆ ದೊಡ್ಡ ಜಯ ಬಿಜೆಪಿಗೆ ಸಿಗುತ್ತಿತ್ತು.

ಕಾಂಗ್ರೆಸ್ ಗೆದ್ದಿರುವ ಹುಣಸೂರು (50.45), ಶಿವಾಜಿನಗರ (53) ಕ್ಷೇತ್ರಗಳಲ್ಲಿ ಆ ಪಕ್ಷಕ್ಕೆ ಬಹುತೇಕ ನಿರ್ಣಾಯಕ ಜಯವೇ ಸಿಕ್ಕಿದೆ. ಆದರೆ ಇವೆರಡೂ ಸ್ಥಳೀಯ ರಾಜಕಾರಣದ ಒಳಸುಳಿಯ ಜಯಗಳೇ.

ಒಟ್ಟಿನಲ್ಲಿ ಫಲಿತಾಂಶ ಬಿಜೆಪಿಗೆ ಒಂದು ಕಂತಿನ ಸವಾಲು ಗೆದ್ದು ಎರಡನೇ ಕಂತಿನ (ಅಂದರೆ ಗೆದ್ದವರೊಂದಿಗೆ ಅಧಿಕಾರ ಹಂಚಿಕೊಳ್ಳುವ) ಸವಾಲಿನ ಬಾಗಿಲು ತೆರೆದಿದೆ. ಇತ್ತ ಕಾಂಗ್ರೆಸ್ ಗೆ ನೀವು ಸುಧಾರಿಸದಿದ್ದರೆ ನಿಮ್ಮನ್ನು ಮೂಸುವವರಿಲ್ಲ ಎಂಬ ಸ್ಪಷ್ಟ ಸಂದೇಶ ಕೊಟ್ಟಿದೆ. ಬಣರಾಜಕಾರಣ, ಲಾಭರಾಜಕಾರಣಗಳನ್ನು ಬಿಟ್ಟು ಸಿದ್ಧಾಂತ -ಸೇವೆಯ ರಾಜಕಾರಣಕ್ಕೆ ಹಿಂದಿರುಗದಿದ್ದರೆ ಕಾಂಗ್ರೆಸ್ ಪ್ರಸ್ತುತತೆ ಉಳಿಸಿಕೊಳ್ಳುವುದು ಸದ್ಯದ ಸ್ಥಿತಿಯಲ್ಲಿ ಕಷ್ಟ ಇದೆ.

ಕುದುರೆ ವ್ಯಾಪಾರದಂತಹ ಅಪ್ರಜಾತಾಂತ್ರಿಕ ಸಂಗತಿಯೊಂದನ್ನು “ಚುನಾವಣಾ ಇಷ್ಯೂ” ಆಗಿ ಹೊಂದಿದ್ದೂ ಮತದಾರರನ್ನು ಒಲಿಸಿಕೊಳ್ಳಲಾಗದಿರುವ ಕಾಂಗ್ರೆಸ್ಸಿಗೆ ಅದು ತಲುಪಿರುವ ದುರ್ಬಲ ಸ್ಥಿತಿ ಎಷ್ಟು ಆಳವಾಗಿದೆ ಎಂದು ಈ ಚುನಾವಣೆ ಮನದಟ್ಟು ಮಾಡಿಕೊಟ್ಟಿದೆ.

ದುಡ್ಡನ್ನು ದುಡ್ಡಿನಿಂದಲೇ ಎದುರಿಸುವ ಕಾಂಗ್ರೆಸ್ ತಂತ್ರವೇ ಈವತ್ತು ಕಾಂಗ್ರೆಸ್ ಪಕ್ಷವನ್ನು ಈ ಸ್ಥಿತಿಗೆ ದೂಡಿದೆ. ಹಳೆಯ ಕಾಂಗ್ರೆಸ್ಸಿನ ತಳಮಟ್ಟದ ಸೇವೆ ರಾಜಕಾರಣ ಈವತ್ತು ದುರ್ಬೀನು ಹಾಕಿ ಹುಡುಕಿದರೂ ಸಿಗುತ್ತಿಲ್ಲ. ಹೊಸ ದುಡ್ಡಿನ ರಾಜಕಾರಣಿಗಳು ಇಂದು ಕಾಂಗ್ರೆಸ್ ಜೊತೆಗಿಲ್ಲ. ಹಾಗಾಗಿ ಇಂದು ಕಾಂಗ್ರೆಸ್, ಅವರು ದುಡ್ಡು ಚೆಲ್ಲಿ ಗೆದ್ದರು ಎಂದು ಅಲವತ್ತುಕೊಂಡರೆ ಅದಕ್ಕೆ ಕೇಳುಗರು ಉಳಿದಿಲ್ಲ.

JDS ತನ್ನ ಕ್ಷಣಿಕ ಲಾಭಗಳಿಗಾಗಿ ರಾಜ್ಯದ ಒಟ್ಟು ಹಿತಾಸಕ್ತಿಗಳನ್ನು ಕಡೆಗಣಿಸದಿದ್ದರೆ ನಿರ್ಣಾಯಕ ಶಕ್ತಿಯಾಗಿ ನಿಲ್ಲುತ್ತಿತ್ತು. ಅದು ಅವಕಾಶ ಸಿಕ್ಕಾಗಲೆಲ್ಲ ಅದನ್ನು ಕೈಚೆಲ್ಲಿ ಈವತ್ತಿನ ಸ್ಥಿತಿ ತಲುಪಿದೆ.

ಇಷ್ಟಾಗಿ ಬಿಜೆಪಿ, ತನ್ನ ಪೂರ್ಣಾವಧಿಯನ್ನು ಬೇರೇನೂ ಗದ್ದಲ ಇಲ್ಲದೆ ಯಶಸ್ವಿಯಾಗಿ ಪೂರೈಸೀತೇ ಎಂಬುದೊಂದೇ ಈಗ ಉಳಿದಿರುವ ಕುತೂಹಲ.

ಇದಿಷ್ಟು ಈವತ್ತಿನ ಚುನಾವಣಾ ಫಲಿತಾಂಶಕ್ಕೆ ನನ್ನ ಆಬ್ಸರ್ವೇಷನ್ ಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಶ್ವೇತಪತ್ರ ಹೊರಡಿಸಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ

Published

on

ಸುದ್ದಿದಿನ, ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಯೋಜನೆಯ ಫಲ ಎಷ್ಟು ಜನರಿಗೆ ಲಭ್ಯವಾಗಿದೆ, ಆರ್ಥಿಕವಾಗಿ ಎಷ್ಟು ಹೊರೆಬಿದ್ದಿದೆ, ಇದುವರೆಗೆ ಫಲಾನುಭವಿಗಳ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.

ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲವಾಗಿದೆ, ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಈ ಬಗ್ಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಂಚಾಯತ್ ರಾಜ್ ಇಲಾಖೆ ಜತೆ ಕೆಲಸ ಮಾಡಲು ಬಂಧುತ್ವ ಫೌಂಡೇಷನ್ ಸಿದ್ಧ : ಅಧ್ಯಕ್ಷ ರಾಘು ದೊಡ್ಡಮನಿ

Published

on

ಸುದ್ದಿದಿನ, ದಾವಣಗೆರೆ : ಮಕ್ಕಳ ವಿಷೇಶ ಗ್ರಾಮ ಸಭೆಯ ಮೂಲಕ ಜಿಲ್ಲೆಯ ಮಕ್ಕಳ ಶಿಕ್ಷಣ, ರಕ್ಷಣೆ ಹಾಗೂ ಅವರ ಹಕ್ಕು ಬಾಧ್ಯತೆಗಳಿಗಾಗಿ ಪಂಚಾಯತ್ ರಾಜ್ ಇಲಾಖೆಯ ಜತೆ ಕೆಲಸ ಮಾಡಲು ನಮ್ಮ ಬಂಧುತ್ವ ಫೌಂಡೇಷನ್ ಸಿದ್ಧವಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ರಾಘು ದೊಡ್ಡಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ರೂಪಿಸಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇದೇ ತಿಂಗಳ 14 ರಿಂದ ಜನವರಿ 24 ರವರೆಗೆ 10 ವಾರಗಳ ಮಕ್ಕಳ ಸ್ನೇಹಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಲಾಗಿದೆ.

ಈ ಅಭಿಯಾನವು ಗ್ರಾಮ ಪಂಚಾಯಿತಿಗಳನ್ನು ಮಕ್ಕಳ ಸ್ನೇಹಿಯಾಗಿಸಲು ಪಂಚಾಯತ್ ರಾಜ್ ಇಲಾಖೆ ಈ ಮೂಲಕ ದಾಪುಗಾಲಿಟ್ಟಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳು ತಮ್ಮ ಸದಸ್ಯರು ಹಾಗೂ ಸ್ಥಳೀಯ ಶಾಲೆಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಈ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ವಿಷೇಶ ಗ್ರಾಮ ಸಭೆ ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.

ಮಕ್ಕಳ ವಿಷೇಶ ಗ್ರಾಮ ಸಭೆಯು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿಗಳು, ಶಾಲೆ, ಶಾಲಾ ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆ ಅಲ್ಲವೇ ಎಂದು ಯಾರು ಸಹ ನಿರ್ಲಕ್ಷ್ಯ ತೋರುವಂತಿಲ್ಲ. ಸಾಮಾನ್ಯ ಗ್ರಾಮ ಸಭೆಗಳಿಗಿರುವಷ್ಟು ಪ್ರಾಮುಖ್ಯತೆ ಈ ಮಕ್ಕಳ ಸಭೆಗೂ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳೊಂದಿಗೆ ಜಾಹಿರಾತು ದರ ನಿಗದಿ ಸಭೆ

Published

on

ಸುದ್ದಿದಿನ,ದಾವಣಗೆರೆ : 2024 ರಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ ಗಳಲ್ಲಿ ಪ್ರಚಾರ ಮಾಡಲು ನಿಗದಿ ಮಾಡಿರುವ ಜಾಹಿರಾತು ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನವೆಂಬರ್ 10 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.

ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ರಾಜ್ಯ ಮಟ್ಟದ ಪತ್ರಿಕೆಗಳು, ಸ್ಥಳೀಯ, ಪ್ರಾದೇಶಿಕ, ವಾರಪತ್ರಿಕೆ, ಕೇಬಲ್ ಟಿ.ವಿ.ಗಳಲ್ಲಿ ನೀಡುವ ಚುನಾವಣಾ ಜಾಹಿರಾತುಗಳಿಗೆ ಅನ್ವಯಿಸುವ ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಲಾಯಿತು.

ಚುನಾವಣಾ ಸಂದರ್ಭದಲ್ಲಿ ಎಂಸಿಎಂಸಿ ಸಮಿತಿಯು ಕಾರ್ಯನಿರ್ವಹಿಸಲಿದ್ದು ಇದರ ಎಲ್ಲಾ ಮೇಲ್ವಿಚಾರಣೆ ನಡೆಸಲಿದೆ. ಅಭ್ಯರ್ಥಿಗಳು ನೀಡುವ ಜಾಹಿರಾತು ವೆಚ್ಚವು ಸಹ ಅಭ್ಯರ್ಥಿಗಳಿಗೆ ವೆಚ್ಚಕ್ಕೆ ನಿಗದಿಪಡಿಸಿರುವ ಮೊತ್ತದಲ್ಲಿ ಸೇರಲಿದೆ ಎಂದು ಪಕ್ಷಗಳ ಮುಖಂಡರಿಗೆ ಮನವರಿಕೆ ಮಾಡಿದರು.

ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಸಿ.ರಾಘವೇಂದ್ರ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ಚುನಾವಣಾ ತಹಶೀಲ್ದಾರ್ ಅರುಣ್ ಎಸ್.ಕಾರ್ಗಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending