ಬಹಿರಂಗ
ಜಾತ್ರೆ-ಸಂತೆಯ ಬಯಲಲಿ ಮತಾಂಧತೆಯ ಕರಾಳ ನೆರಳು
ಮಂದಿರ ಮಸೀದಿ ಶಾಲೆಗಳನ್ನು ದಾಟಿ ಮತಾಂಧತೆ ಜನದಟ್ಟಣೆಯ ಸಂತೆಕಟ್ಟೆಗೆ ಬಂದು ನಿಂತಿದೆ
- ನಾ ದಿವಾಕರ
ಕೋಮುವಾದದ ಕ್ಯಾನ್ವಾಸ್ ದೊಡ್ಡದು. ಈ ಜನವಿರೋಧಿ ಮನಸ್ಥಿತಿಯನ್ನು ಸಮಾಜದ ಅಂತರಂಗದಲ್ಲೇ ಸೃಷ್ಟಿಸುವ ಮತೀಯವಾದ ಮತ್ತು ಮತಾಂಧತೆಯ ಬೇರುಗಳು ಆಳಕ್ಕಿಳಿದಷ್ಟೂ ಮನುಜ ಸಮಾಜವನ್ನು ದ್ವೇಷದ ಬೃಹತ್ ವೃಕ್ಷಗಳು ಆವರಿಸುತ್ತಲೇ ಹೋಗುತ್ತವೆ.
ಜನಸಾಮಾನ್ಯರ ನಿತ್ಯ ಜೀವನದಲ್ಲಿ ಕನಿಷ್ಠ ಮಟ್ಟದ ಗಮನ ಸೆಳೆಯಬೇಕಾದ ಜಾತಿ, ಮತ, ಧರ್ಮದ ಆಚರಣೆಗಳು, ಸಮಾಜ ನಿರ್ಮಾಣದ ಮುಖ್ಯ ಭೂಮಿಕೆಯಾಗಿ ಪರಿವರ್ತನೆಯಾದಾಗ ಈ ಅಸ್ಮಿತೆಗಳ ಬೇರುಗಳು ಜನರ ಮನಸ್ಥಿತಿಯನ್ನೂ ಸಂಕುಚಿತಗೊಳಿಸುತ್ತಲೇ ಹೋಗುತ್ತದೆ. ಹೀಗೆ ಸಂಕುಚಿತಗೊಂಡ ಮನಸುಗಳೇ ಮತೀಯ ಶಕ್ತಿಗಳು ಬಿತ್ತುವ ದ್ವೇಷದ ಬೀಜಗಳಿಗೆ ಫಲವತ್ತಾದ ಭೂಮಿಕೆಯಾಗುತ್ತವೆ.
ತಮ್ಮ ಬದುಕು, ಬವಣೆ, ಸಂಕಷ್ಟಗಳೆಲ್ಲಕ್ಕೂ ಇಡೀ ಸಮಾಜವನ್ನು ನಿಯಂತ್ರಿಸುವ ಒಂದು ಕ್ರೂರ ಅರ್ಥವ್ಯವಸ್ಥೆ ಮತ್ತು ಈ ಕ್ರೌರ್ಯವನ್ನು ಸಮರ್ಥಿಸಿಕೊಂಡೇ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವಂತಹ ಮತ ಧರ್ಮಗಳ ಸಾಂಸ್ಥಿಕ ನೆಲೆಗಳು ಮೂಲ ಕಾರಣ ಎಂಬ ಸುಡುವಾಸ್ತವವನ್ನು ಜನರು ಅರ್ಥಮಾಡಿಕೊಳ್ಳದ ಹೊರತು ಈ ದ್ವೇಷ ಬೀಜಗಳಿಂದ
ಮೊಳಕೆಯೊಡೆಯುವ ಸಸಿಗಳನ್ನು ಕಿತ್ತೊಗೆಯಲಾಗುವುದಿಲ್ಲ. ಭಾರತದಲ್ಲಿ ಕೋಮುವಾದ ಮತ್ತು ಮತೀಯ ದ್ವೇಷದ ಬೀಜಗಳಿಗೆ ಶತಮಾನದಷ್ಟು ಇತಿಹಾಸವಿದೆ. ಹಿಂದೂ-ಮುಸ್ಲಿಂ ಸಮೀಕರಣವನ್ನು ಬದಿಗಿಟ್ಟು ನೋಡಿದಾಗಲೂ, ಈ ದೇಶದ ಇತಿಹಾಸದಲ್ಲಿ ಒಂದು ಇಡೀ ಜನಾಂಗ. ಅಸ್ಪೃತೆಯಂತಹ ಹೀನ ಆಚರಣೆಯಿಂದ ಇಂದಿಗೂ ಅಗೋಚರವಾಗಿ ಬಹಿಷ್ಕೃತವಾಗಿಯೇ ಬದುಕುತ್ತಿದೆ.
ಜನಸಮುದಾಯಗಳ ಮೇಲೆ ತನ್ನದೇ ಆದ ವಾರಸುದಾರಿಕೆ ಮತ್ತು ಹಕ್ಕೊತ್ತಾಯಗಳನ್ನು ಹೇರುತ್ತಾ, ಉತ್ತರದಾಯಿತ್ವ ಇಲ್ಲದ ಒಂದು ಶೋಷಕ ವ್ಯವಸ್ಥೆಯನ್ನು ಹೇರುವ ಮೂಲಕ ಭಾರತದ ವೈದಿಕಶಾಹಿ ಪರಂಪರೆಯು ಜಾತಿ ವ್ಯವಸ್ಥೆಯಂತಹ ಒಂದು ಕ್ರೂರ ಪೆಡಂಭೂತವನ್ನು ಸೃಷ್ಟಿಸಿದೆ.
ಮನುಷ್ಯನ ಹುಟ್ಟಿನ ಮೂಲದಿಂದಲೇ ಸೃಷ್ಟಿಸಲಾಗುವ ಕಂದರಗಳು ಅಂತಿಮ ಪಯಣದವರೆಗೂ ಮುಂದುವರೆಯುವಂತಹ ಒಂದು ವಿಕೃತ ವ್ಯವಸ್ಥೆಗೆ ಭಾರತೀಯರಾದ ನಾವು ಒಗ್ಗಿಹೋಗಿದ್ದೇವೆ. ತಮ್ಮ ಪಯಣ ಮುಗಿಸಿ ಇಹಲೋಕ ತ್ಯಜಿಸಿದ ನಂತರವೂ ತುಳಿತಕ್ಕೊಳಗಾದ, ಬಹಿಷ್ಕೃತ ಸಮುದಾಯದ ಜೀವಗಳು ಪತ್ಯೇಕತೆಯ ಶಿಕ್ಷೆಯನ್ನು ಅನುಭವಿಸಬೇಕಾದ ಒಂದು ದುರಂತ ಸನ್ನಿವೇಶವನ್ನು ಇಂದಿಗೂ ಭಾರತ ಎದುರಿಸುತ್ತಿದೆ.
ಸಾಮಾಜಿಕ ಬದುಕಿನ ಮತ್ತು ಸಾಂಸ್ಕೃತಿಕ ಹೆಜ್ಜೆಗಳ ಪ್ರತಿ ಹಂತದಲ್ಲೂ ಅನ್ಯರನ್ನು ಸೃಷ್ಟಿಸುತ್ತಾ ‘ ನಮ್ಮವರೆಂಬ ’ ಭದ್ರಕೋಟೆಗಳನ್ನು ನಿರ್ಮಿಸುವ ಒಂದು ಕ್ರೂರ ಜಾತಿ ವ್ಯವಸ್ಥೆ ಅತಿಮಾನುಷ ಶಕ್ತಿಗಳನ್ನು ಆರಾಧಿಸುತ್ತಲೇ ಸಮಾಜದ ಗರ್ಭದಲ್ಲಿ ಅಮಾನುಷತೆಯ ಬೀಜಗಳನ್ನು ಬಿತ್ತುತ್ತಾ ಬಂದಿದೆ.
ಈ ಭದ್ರಕೋಟೆಗಳೊಳಗೆ ತಮ್ಮದೇ ಆದ ಹಿತವಲಯವನ್ನು ಸೃಷ್ಟಿಸಿಕೊಳ್ಳುವ ಪ್ರತಿಯೊಂದು ಜಾತಿ ಸಮುದಾಯವೂ ಅನ್ಯ ಜಾತಿಯನ್ನು ಕೀಳೆಂದು ಭಾವಿಸುತ್ತಾ ಶೋಷಣೆಗೊಳಪಡಿಸುವುದು ಇಲ್ಲಿನ ಜಾತಿ ವ್ಯವಸ್ಥೆಯ ವೈಶಿಷ್ಟ್ಯ. ಭಾರತೀಯ ಸಮಾಜದಲ್ಲಿ ಶತಮಾನಗಳಿಂದ ತಮ್ಮ ಅಸ್ತಿತ್ವ ಕಂಡುಕೊಂಡಿರುವ ಜನಸಮುದಾಯಗಳು ತಮ್ಮ ಮತಶ್ರದ್ಧೆ ಮತ್ತು ಧಾರ್ಮಿಕ ಆಚರಣೆಗಳ ಕಾರಣಕ್ಕಾಗಿಯೇ ಈ ‘ ಅನ್ಯವರ್ಗ’ಕ್ಕೆ ಸೇರಿಬಿಡುತ್ತವೆ.
ಜಾತಿ ವ್ಯವಸ್ಥೆಯ ದೌರ್ಜನ್ಯಗಳಿಗೆ, ಅಸ್ಪೃಶ್ಯತೆಯಂತಹ ಅಮಾನುಷ ಹೀನ ಪದ್ಧತಿಗೆ ಕುರುಡಾಗಿರುವ ಸಮಾಜದಲ್ಲಿ ಈ ‘ ಅನ್ಯವರ್ಗ’ವನ್ನು ಸೃಷ್ಟಿಸುವುದು ಬಹಳ ಸುಲಭ ಎನ್ನುವುದನ್ನು ಈ ದೇಶದ ಸಾಂಸ್ಕೃತಿಕ ರಾಷ್ಟ್ರೀಯತೆಯ ರಾಜಕಾರಣ ನಿರೂಪಿಸಿದೆ.
ಇಡೀ ಸಮಾಜವನ್ನು ತನ್ನ ಬೌದ್ಧಿಕ ಆಧಿಪತ್ಯಕ್ಕೊಳಪಡಿಸುವ ಮೂಲಕ ಸಾಂಸ್ಕೃತಿಕ ನೆಲೆಯಲ್ಲಿ, ಸಾಮಾಜಿಕಾರ್ಥಿಕ ನೆಲೆಯಲ್ಲಿ ಪಾರಮ್ಯ ಸಾಧಿಸಲೆತ್ನಿಸುವ ಬಹುಸಂಖ್ಯಾವಾದದ ರಾಜಕೀಯ ಶಕ್ತಿಗಳು ಇಂದು ಈ ದೇಶದ ದಲಿತರನ್ನೂ, ಅಲ್ಪಸಂಖ್ಯಾತರನ್ನೂ, ಮಹಿಳೆಯರನ್ನೂ ಮತ್ತು ಅವಕಾಶವಂಚಿತ ಜನಸಮುದಾಯಗಳನ್ನೂ ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿಸುವ ಪ್ರಯತ್ನ ಮಾಡುತ್ತಿವೆ.
ಈ ರಾಜಕೀಯ ಶಕ್ತಿಗಳನ್ನು ಹಿಂದುತ್ವ ರಾಜಕಾರಣ ಪ್ರಧಾನವಾಗಿ ಪ್ರತಿನಿಧಿಸುತ್ತದೆ. ಆದರೆ ಹಿಂದುತ್ವವನ್ನು ತಾತ್ವಿಕವಾಗಿ ಒಪ್ಪದ ರಾಜಕೀಯ ಶಕ್ತಿಗಳೂ ಸಹ ತಮ್ಮ ಸ್ಪಷ್ಟ ಧೋರಣೆಯನ್ನು ವ್ಯಕ್ತಪಡಿಸದೆ ಇರುವುದು ವಾಸ್ತವ.
ಈ ದ್ವೇಷ ರಾಜಕಾರಣದ ಒಂದು ಆಯಾಮವನ್ನು ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೇ ಮಾರಕವಾಗುವಂತಹ ಹಿಜಾಬ್ ವಿವಾದದಲ್ಲಿ ಕಂಡಿದ್ದೇವೆ. ಸಾಂವಿಧಾನಿಕ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣದ ಹಕ್ಕು ಮತ್ತು ಆದ್ಯತೆ, ಈ ಮೂರು ವಿಚಾರಗಳಲ್ಲಿ ಶಿಕ್ಷಣದ ಹಕ್ಕುಗಳಿಗಿಂತಲೂ ಧಾರ್ಮಿಕ ಸ್ವಾತಂತ್ರ್ಯವೇ ಪ್ರಧಾನವಾಗುವಂತಹ ಒಂದು ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿಸಲಾಗಿದೆ.
ಶಾಲಾ ವ್ಯಾಸಂಗ ಮಾಡುವ ಎಳೆ ವಯಸ್ಸಿನ ಹೆಣ್ಣು ಮಕ್ಕಳು ಇಂದು ಮತೀಯವಾದದ ರಾಜಕೀಯ ಮೇಲಾಟಗಳಿಗೆ ಬಲಿಯಾಗುತ್ತಿರುವುದನ್ನು ಕಂಡೂ ಕಾಣದಂತಿದ್ದೇವೆ. ಸಮಾಜದಲ್ಲಿ ಢಾಳಾಗಿ ಕಾಣುತ್ತಿರುವ ಈ ಅಸೂಕ್ಷ್ಮತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಜಾಸತ್ತಾತ್ಮಕ ಧ್ವನಿಗಳು ಸದ್ದು ಮಾಡಬೇಕಿದೆ. ಆದರೆ ಮತಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆಗಳೇ ಪ್ರಧಾನವಾಗಿ ಸದ್ದುಮಾಡುತ್ತಿದೆ.
ಈ ಸಂದರ್ಭದಲ್ಲೇ ಕೆಲವು ಹಿಂದೂ ಮೂಲಭೂತವಾದಿ ಸಂಘಟನೆಗಳು ಮುಸ್ಲಿಂ ಸಮುದಾಯದ ಆರ್ಥಿಕ ಬೆನ್ನೆಲುಬನ್ನು ಮುರಿಯುವ ಪ್ರಯತ್ನದಲ್ಲಿ ತೊಡಗಿವೆ. ಶಾಲಾವಲಯದಲ್ಲಿ ಸೌಹಾರ್ದ ವಾತಾವರಣವನ್ನು ಕಲುಷಿತಗೊಳಿಸಿ, ಮತಾಂಧತೆಯ ಮಾಲಿನ್ಯ ಹರಡಿದ ನಂತರ ಈಗ ಮತಾಂಧರ ದೃಷ್ಟಿ ಈ ದೇಶದ ಬಹುತ್ವ ಸಂಸ್ಕೃತಿಯ ಮೂಲ ಸೆಲೆ ಎಂದೇ ಹೇಳಬಹುದಾದ ಜಾತ್ರೆಗಳ ಮೇಲೆ ಬಿದ್ದಿದೆ.
ಭಾರತದಲ್ಲಿ ಜಾತ್ರೆಗಳಿಗೆ ಒಂದು ವಿಶಿಷ್ಟ ಸ್ಥಾನ ಇದೆ. ವೈದಿಕಶಾಹಿಯಿಂದ ಮುಕ್ತವಾದ ಶೂದ್ರ ಸಮುದಾಯದ ದೇವಾನುದೇವತೆಗಳೇ ಪ್ರಧಾನವಾಗಿರುವ ಸಾವಿರಾರು ಜಾತ್ರೆ, ರಥೋತ್ಸವಗಳು ಭಾರತದಲ್ಲಿ ನಡೆಯುತ್ತಲೇ ಇರುತ್ತವೆ. ಜನಪದ ಸಂಸ್ಕೃತಿಯಿಂದ ಉಗಮಿಸಿರುವ ನೂರಾರು ದೇವತೆಗಳು ಜನಸಾಮಾನ್ಯರ, ವಿಶೇಷವಾಗಿ ದುಡಿಯುವ ಜನತೆಯ ಸಾಂತ್ವನದ ನೆಲೆಗಳಾಗಿ ಕಂಡುಬರುತ್ತವೆ.
ತಮ್ಮ ಬದುಕಿನ ಸಂಕಷ್ಟಗಳಿಗೆ ಸಾಂತ್ವನ ಹೇಳುವ ಸಾಂಸ್ಕೃತಿಕ ನೆಲೆಗಳಾಗಿ ಈ ದೈವಗಳನ್ನು ಕಾಣುವ ಪರಿಶಿಷ್ಟ ಸಮುದಾಯಗಳು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ತಮ್ಮ ಸಾಮಾಜಿಕ-ಸಾಂಸ್ಕೃತಿಕ ಸೌಹಾರ್ದತೆಯನ್ನೂ ಸಾರುತ್ತಾ ಬಂದಿವೆ.
ಭಾರತದ ಬಹುತ್ವ ಸಂಸ್ಕೃತಿಯನ್ನು ಮತ್ತಾವ ಕ್ಷೇತ್ರದಲ್ಲಿ ಕಾಣಲಾಗದಿದ್ದರೂ, ಈ ಜಾತ್ರೆಗಳಲ್ಲಿ ಕಾಣಬಹುದು. ಜಾತಿ, ಮತ, ಧರ್ಮ, ಪಂಥ ಮತ್ತು ಭಾಷಿಕ ಅಸ್ಮಿತೆಗಳನ್ನೂ ಮರೆತು, ಸಾಮಾಜಿಕ ಅಂತಸ್ತು ಮತ್ತು ಸ್ಥಾನಮಾನಗಳನ್ನೂ ಬದಿಗೊತ್ತಿ, ಇಡೀ ಗ್ರಾಮ ಸಮುದಾಯ ಒಂದಾಗಿ ಆಚರಿಸುವ ಈ ಜಾತ್ರೆಗಳಲ್ಲಿ ಈ ದೇಶದ ಅಲ್ಪಸಂಖ್ಯಾತರೂ ಅವಿಭಾಜ್ಯ ಅಂಗವಾಗಿಯೇ ನಡೆದುಬಂದಿದ್ದಾರೆ.
ಪುರಿ ಜಗನ್ನಾಥ ದೇವಾಲಯದಿಂದ ಮೈಸೂರಿನ ಚಾಮುಂಡೇಶ್ವರಿಯವರಿಗೆ, ಕೋಲಾರದ ಕೋಲಾರಮ್ಮನಿಂದ ಕೊಲ್ಲೂರು ಮೂಕಾಂಬಿಕೆಯವರೆಗೆ ಈ ಶ್ರದ್ಧೆ ಮತ್ತು ನಂಬಿಕೆಗಳು ಸಾಮುದಾಯಿಕ, ಧಾರ್ಮಿಕ ಅಸ್ಮಿತೆಗಳ ಚೌಕಟ್ಟುಗಳನ್ನು ಭೇದಿಸಿ ಸೌಹಾರ್ದತೆಯ ದ್ಯೋತಕವಾಗಿ ಬೆಳೆದುಬಂದಿವೆ.
ಭಾರತದ ಉದ್ದಗಲಕ್ಕೂ ಕಂಡುಬರುವ ಸ್ಥಳೀಯ ನಂಬಿಕೆಗಳನ್ನಾಧರಿಸಿದ ಆಚರಣೆಗಳು ಜಾತ್ರೆಗಳ ರೂಪದಲ್ಲಿ, ಉತ್ಸವ, ರಥೋತ್ಸವದ ರೂಪದಲ್ಲಿ ಮತ್ತು ಸಾಮೂಹಿಕ ಹಬ್ಬಗಳ ರೂಪದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿವೆ. ವೈದಿಕ ಪರಂಪರೆಯ ಶ್ರೇಷ್ಠತೆಯ ಅಹಮಿಕೆ, ತಾರತಮ್ಯದ ಆಚರಣೆಗಳು ಮತ್ತು ಪಾರಮ್ಯದ ಹಂಗಿಲ್ಲದೆ ಬೆಳೆದುಬಂದಿರುವ ಈ ಜನಪದೀಯ ಸಾಂಸ್ಕೃತಿಕ ನೆಲೆಗಳು ಆಧುನಿಕ ಕಾಲಘಟ್ಟದಲ್ಲೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ಬಂದಿವೆ.
ಸ್ಥಳೀಯ ಗ್ರಾಮ ದೇವತೆಗಳು, ಜನಪದೀಯ ಸಾಂಸ್ಕೃತಿಕ ವ್ಯಕ್ತಿ ಮತ್ತು ಘಟನೆಗಳು ಇಂತಹ ಜಾತ್ರೆಗಳಿಗೆ ಒಂದು ಸಾಂಸ್ಕೃತಿಕ ಸಮನ್ವಯದ ಬುನಾದಿಯನ್ನು ಒದಗಿಸುತ್ತಲೇ ಬಂದಿವೆ. ಭಾರತದ ಉಳಿದೆಲ್ಲಾ ಬೌದ್ಧಿಕ ವಲಯದಲ್ಲಿ ಆದಂತೆಯೇ ಈ ಜನಪದೀಯ ನೆಲೆಗಳಲ್ಲೂ ವೈದಿಕ ಪರಂಪರೆಯೇ ಆವರಿಸಿ, ಆಕ್ರಮಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದರ ಮೂಲ ಕಾರಣಗಳನ್ನು ಶೋಧಿಸಬೇಕಿದೆ.
ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ಸಾಂಸ್ಕೃತಿಕ ಸಮನ್ವಯದ ನೆಲೆಗಳಲ್ಲೂ ಜಾತಿ, ಮತ, ಪಂಥೀಯ ಗೋಡೆಗಳನ್ನು ನಿರ್ಮಿಸುವ ಪ್ರಯತ್ನವನ್ನು ಕೆಲವು ಮತಾಂಧ ಸಂಘಟನೆಗಳು ಮಾಡುತ್ತಿರುವುದು ಚಿಂತೆಗೀಡುಮಾಡುವ ವಿಚಾರವಾಗಿದೆ. ಬಹುತ್ವ ಭಾರತದ ಸಮನ್ವಯ ಸಂಸ್ಕೃತಿಯ ಮೂಲ ಸೆಲೆಯಂತೆ ಕಾಣುವ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿರುವ ಜಾತ್ರೆಗಳು ಮತ್ತು ಸಂತೆಮಾಳಗಳು ಇಂದಿಗೂ ಸಹ ಜನಸಮುದಾಯಗಳ ನಡುವೆ ಇರಬಹುದಾದ ತಾರತಮ್ಯದ ಗೋಡೆಗಳನ್ನು ಕೆಡವುತ್ತಾ ಒಂದು ಸೌಹಾರ್ದಯುತ ಸಮಾಜವನ್ನು ಕಟ್ಟುವುದರಲ್ಲಿ ನಿರತವಾಗಿವೆ.
ಈ ಮಾರುಕಟ್ಟೆ ತಾಣಗಳು ಶ್ರೀಮಂತಿಕೆಯಲ್ಲಿ ಮೆರೆಯುವ ಬಂಡವಳಿಗ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಬದಲಾಗಿ ತಮ್ಮ ನಿತ್ಯ ಬದುಕಿನ ಜೀವನೋಪಾಯದ ಮಾರ್ಗಗಳನ್ನು ಕಲ್ಪಿಸಿಕೊಳ್ಳುವ ತಾಣಗಳಾಗಿರುತ್ತವೆ. ಈ ಜಾತ್ರೆಗಳಲ್ಲಿ, ಸಂತೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ಯಾವುದೇ ಸಮುದಾಯದ ವ್ಯಕ್ತಿಗಾದರೂ ಅದು ಜೀವನೋಪಾಯದ ಮಾರ್ಗವಾಗಿರುತ್ತದೆಯೇ ಹೊರತು, ಬಂಡವಾಳಶೇಖರಣೆ ಅಥವಾ ಲಾಭ ಗಳಿಕೆಯ ದಂಧೆ ಆಗಿರುವುದಿಲ್ಲ. ಹಾಗಾಗಿಯೇ ಮಾರುಕಟ್ಟೆಯ ಸಹಜ ಪೈಪೋಟಿಯ ನಡುವೆಯೇ ಸಂತೆಗಳಲ್ಲಿ, ಜಾತ್ರೆಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ನಡೆಸುವವರ ನಡುವೆ ಒಂದು ಸಮನ್ವಯದ, ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಿರುತ್ತದೆ.
ಇಂತಹ ಒಂದು ಸಾಂಸ್ಕೃತಿಕ ಸಮನ್ವಯದ ವಾತಾವರಣವನ್ನು ಕಲುಷಿತಗೊಳಿಸಲು, ಮತಾಂಧತೆಯ ವಿಷಾನಿಲವನ್ನು ಹರಡುತ್ತಿರುವುದು ದುರಂತ. ಮೂಲತಃ ಶೂದ್ರಾದಿ ದೇವಾನುದೇವತೆಗಳು ಮತ್ತು ಜನಪದೀಯ ನಂಬಿಕೆಗಳನ್ನಾಧರಿಸಿದ ಈ ಜಾತ್ರೆಗಳಲ್ಲಿ ತನ್ನ ಬೇರುಗಳನ್ನು ಹರಡಲು ಯತ್ನಿಸುತ್ತಿರುವ ವೈದಿಕಶಾಹಿ ಪರಂಪರೆ ಅಲ್ಲಿ ತನ್ನದೇ ಆದ ಮಡಿವಂತಿಕೆ, ಪ್ರತ್ಯೇಕತೆ, ಶ್ರೇಷ್ಠತೆಯ ವ್ಯಸನಗಳನ್ನು ಪಸರಿಸಲು ಪ್ರಯತ್ನಿಸುತ್ತಿದೆ.
ಇದರ ಒಂದು ಭಾಗವಾಗಿಯೇ ಕೆಲವು ಹಿಂದೂ ಸಂಘಟನೆಗಳು, ಜಾತ್ರೆಗಳಲ್ಲಿ ಮುಸಲ್ಮಾನರ ಅಂಗಡಿ ಮುಗ್ಗಟ್ಟುಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸುತ್ತಿವೆ. ಮತೀಯ ಆಲೋಚನೆ ಮತ್ತು ಮತಾಂಧತೆಯಿಂದ ಮುಕ್ತವಾಗಿರುವ ಒಂದು ಸಮನ್ವಯದ ನೆಲದಲ್ಲಿ ಮತಾಂಧತೆಯ ವಿಷಬೀಜಗಳನ್ನು ಬಿತ್ತುವ ಮೂಲಕ, ಜನಸಮುದಾಯಗಳ ನಡುವೆ ತಾರತಮ್ಯದ, ಪ್ರತ್ಯೇಕತೆಯ ಗೋಡೆಗಳನ್ನು ನಿರ್ಮಿಸುವ ಇಂತಹ ಪ್ರಯತ್ನಗಳನ್ನು ಪ್ರಜ್ಞಾವಂತ ಸಮಾಜ ವಿರೋಧಿಸಲೇಬೇಕಿದೆ.
ದೇಶ ಸ್ವತಂತ್ರವಾಗಿ ಏಳು ದಶಕಗಳು ಕಳೆದರೂ ಇಂದಿಗೂ ದೇವಾಲಯದ ಆವರಣಗಳಲ್ಲಿ ಸಹಪಂಕ್ತಿ ಭೋಜನವನ್ನು ಕಾಣಲಾಗದ ದುರಂತ ಸನ್ನಿವೇಶವನ್ನು ನಾವು ನೋಡುತ್ತಿದ್ದೇವೆ. ದೇವಸ್ಥಾನಗಳಲ್ಲಿ, ಪೂಜಾ ಸ್ಥಳಗಳಲ್ಲಿ ಅಸ್ಪೃಶ್ಯತೆಯ ಆಚರಣೆಯೂ ಇಂದಿಗೂ ಜಾರಿಯಲ್ಲಿದೆ. ಅನ್ನ ಉಣ್ಣುವ ಜಾಗದಲ್ಲಿ ಪ್ರತ್ಯೇಕತೆಯ ಗೋಡೆಗಳನ್ನು ಕಟ್ಟುವುದರಲ್ಲಿ ನಿಷ್ಣಾತವಾಗಿರುವ ಶಕ್ತಿಗಳೇ ಇಂದು ಅನ್ನ ಸಂಪಾದಿಸುವ ಜಾಗಗಳಲ್ಲೂ ಬೇಲಿಗಳನ್ನು ನಿರ್ಮಿಸಲು ಮುಂದಾಗುತ್ತಿವೆ. ಜಾತ್ರೆಗಳಲ್ಲಿ ಮುಸಲ್ಮಾನರ ಅಂಗಡಿ ಮುಗ್ಗಟ್ಟುಗಳನ್ನು ನಿಷೇಧಿಸುವ ಆಗ್ರಹದ ಹಿಂದೆ, ಸಮನ್ವಯ ಸಂಸ್ಕೃತಿಯನ್ನು ಭಂಗಗೊಳಿಸುವ, ಸಾಂಸ್ಕೃತಿಕ ಸೌಹಾರ್ದತೆಯನ್ನು ಕದಡುವ ಕುತಂತ್ರ ಇರುವುದನ್ನು ಗಮನಿಸಬೇಕಿದೆ.
ಈ ಸಮನ್ವಯ ಸಂಸ್ಕೃತಿಯನ್ನು ಹಿಂದೂಗಳ ಜಾತ್ರೆಗಳಲ್ಲಿ ಕಾಣುವಂತೆಯೇ, ಕ್ರೈಸ್ತರ ಹಲವು ಹಬ್ಬ, ಉತ್ಸವಗಳಲ್ಲಿ, ಮುಸಲ್ಮಾನರ ಉರುಸ್, ಮೊಹರಂ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಕಾಣುತ್ತಲೇ ಬಂದಿದ್ದೇವೆ. ಜನಸಾಮಾನ್ಯರ ಬದುಕಿನ ಒಂದು ಭಾಗವಾಗಿಯೇ ಬೆಳೆದುಬಂದಿರುವ ಸ್ಥಳೀಯ ಮಾರುಕಟ್ಟೆಗಳು ಸದಾ ಸಮನ್ವಯತೆಯೊಂದಿಗೇ ನಡೆದುಬಂದಿವೆ. ಮದುವೆ, ಮುಂಜಿ, ನಾಮಕರಣ, ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಸಣ್ಣ ವ್ಯಾಪಾರದ ವಲಯ ಎಲ್ಲ ಮತ ಧರ್ಮಗಳನ್ನೂ ಪ್ರತಿನಿಧಿಸುತ್ತಲೇ ಬಂದಿದೆ. ಹೂ ಮಾರುವವರಿಂದ ಹಿಡಿದು, ಪೂಜಾ ಸಾಮಗ್ರಿಯನ್ನು ಮಾರುವವರವರೆಗೆ, ಧಾರ್ಮಿಕ ಆಚರಣೆಗಳ ಉಪಕರಣಗಳನ್ನು ಒದಗಿಸುವವರೆಗೆ, ಈ ಸಾಂಸ್ಕೃತಿಕ ಸಮನ್ವಯವನ್ನು ವ್ಯಾಪಾರಿ ವಲಯ ಕಾಪಾಡಿಕೊಂಡುಬಂದಿದೆ.
ಈ ಸಮನ್ವಯದ ನಡುವೆಯೇ ತಲೆದೋರುವ ಅಸ್ಪೃಶ್ಯತೆಯಂತಹ ಹೀನ ಆಚರಣೆಗಳನ್ನು ನಮ್ಮ ಸಮಾಜ ನಿರ್ಲಕ್ಷಿಸುತ್ತಾ ಬಂದಿರುವುದನ್ನೂ ಈ ಸಂದರ್ಭದಲ್ಲಿ ಮರೆಯುವಂತಿಲ್ಲ. ದೇವಸ್ಥಾನಗಳಲ್ಲಿ ಸಹಪಂಕ್ತಿ ಭೋಜನವನ್ನು ನಿರಾಕರಿಸುವ, ಮಡೆ ಸ್ನಾನದಂತಹ ಸಾಂಸ್ಕೃತಿಕ ದೌರ್ಜನ್ಯವನ್ನು ಪ್ರೋತ್ಸಾಹಿಸುವ ಒಂದು ಕ್ರೂರ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ತಾರತಮ್ಯದ ನೆಲೆಗಳು ಇಂದು ವಿಸ್ತೃತ ನೆಲೆಯಲ್ಲಿ ಅನಾವರಣಗೊಳ್ಳುತ್ತಿವೆ. ಈ ತಾರತಮ್ಯದ ನೆಲೆಗಳನ್ನು ಮತಾಂಧ ಶಕ್ತಿಗಳು ಆಕ್ರಮಿಸಿಕೊಂಡಷ್ಟೂ ಸಾಮಾಜಿಕ ಸೌಹಾರ್ದತೆ ನಾಶವಾಗುತ್ತಲೇ ಹೋಗುತ್ತದೆ. ಹಿಂದುತ್ವ ರಾಜಕಾರಣದ ಏಕಮುಖಿ ಸಂಸ್ಕೃತಿಯನ್ನು ಹೇರುವ ಹುನ್ನಾರಗಳಿಗೆ ಪೂರಕವಾಗಿಯೇ ಈ ಆಕ್ರಮಣಗಳೂ ನಡೆಯುತ್ತಿರುವುದು ಸ್ಪಷ್ಟ.
ಮಾರುಕಟ್ಟೆ ಆರ್ಥಿಕತೆಯ ದೃಷ್ಟಿಯಿಂದಲೂ ಮುಸಲ್ಮಾನರ ವ್ಯಾಪಾರ ನಿಷೇಧಿಸುವ ಪ್ರಯತ್ನಗಳು ಹಲವು ಪಲ್ಲಟಗಳಿಗೆ ಕಾರಣವಾಗುತ್ತವೆ. ಮುಸಲ್ಮಾನರ ಅಂಗಡಿಯಲ್ಲಿ ಬಿಕರಿಯಾಗುವ, ವಿನಿಮಯವಾಗುವ ಪದಾರ್ಥಗಳ ಹಿಂದೆ ಹಲವು ಹಿಂದೂ, ಕ್ರೈಸ್ತ ಸಮುದಾಯಗಳ ಶ್ರಮವೂ ಇರುತ್ತದೆ. ಬಿಕರಿಯಾಗುವ ಪದಾರ್ಥಗಳು ಮೂಲತಃ ಮಾನವ ಶ್ರಮದಿಂದ ಉತ್ಪಾದಿತವಾಗಿರುತ್ತವೆ. ಈ ಉತ್ಪಾದನೆಯ ಪ್ರಕ್ರಿಯೆಯಲ್ಲಿನ ಶ್ರಮವನ್ನು ಜಾತಿ, ಮತ, ಧರ್ಮದ ನೆಲೆಯಲ್ಲಿ ವಿಂಗಡಿಸಲು ಸಾಧ್ಯವಾಗುವುದೂ ಇಲ್ಲ.
ಆದರೆ ಒಂದು ನಿರ್ದಿಷ್ಟ ಮತದ ವ್ಯಾಪಾರಿಗಳಿಗೆ ನಿರ್ಬಂಧ ಹೇರುವುದರಿಂದ, ಉತ್ಪಾದನಾ ವಲಯದ ಸರಾಗ ವಹಿವಾಟುಗಳೂ ಪ್ರಕ್ಷುಬ್ಧವಾಗುತ್ತವೆ ಎಂಬ ವಾಸ್ತವವನ್ನು ನಾವು ಗ್ರಹಿಸಬೇಕಿದೆ. ರೇಷ್ಮೆ ಗೂಡು ತಯಾರಿಸುವವರು ಹಿಂದೂ ಆಗಿದ್ದರೆ, ನೂಲು ತೆಗೆಯುವವರು ಮುಸ್ಲಿಂ ಆಗಿರುತ್ತಾನೆ. ಸೀರೆ ನೇಯುವವನು ನೇಕಾರನಾಗಿರುತ್ತಾನೆ ಅದನ್ನ ಒಬ್ಬ ಮಾರ್ವಾಡಿಯೋ, ವೈಶ್ಯನೋ, ಮುಸಲ್ಮಾನನೋ ಮಾರಾಟ ಮಾಡುತ್ತಾನೆ. ಈ ಶ್ರಮಶಕ್ತಿಯ ವಾಹಿನಿಯೇ ಸಮಾಜದಲ್ಲಿ ಸಮನ್ವಯತೆ, ಸೌಹಾರ್ದತೆಯನ್ನು ಸಂರಕ್ಷಿಸಲು ಸಾಧ್ಯ.
ತಮ್ಮ ಶ್ರಮಶಕ್ತಿಯ ಮೂಲಕ ಸಮಾಜದ ವಿಭಿನ್ನ ಸಮುದಾಯಗಳನ್ನು ಬೆಸೆಯುವ ದುಡಿಯುವ ವರ್ಗಗಳಲ್ಲಿ ಜಾತಿ, ಮತ, ಧರ್ಮ ಅಥವಾ ಪಂಥೀಯ ಪ್ರಜ್ಞೆಯನ್ನು ಬೆಳೆಸುವುದರ ಬದಲು, ವರ್ಗಪ್ರಜ್ಞೆಯನ್ನು ಬೆಳೆಸಲು ಯತ್ನಿಸಿದ್ದರೆ ಬಹುಶಃ ಭಾರತ ಈ ದುಸ್ಥಿತಿಗೆ ತಲುಪುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ.
ತಮ್ಮ ಸಾಂಸ್ಕೃತಿಕ ಬೇರುಗಳನ್ನು ಅರಿತು, ತಮ್ಮ ಶ್ರಮಾಧಾರಿತ ಬದುಕಿನ ಮಾರ್ಗಗಳನ್ನು ಹಸನುಗೊಳಿಸುತ್ತಾ, ಜಾತಿ, ಮತ, ಧರ್ಮಗಳ ವಿಷಬೀಜಗಳನ್ನು ಕಿತ್ತೊಗೆದು ಬಹುತ್ವ ಭಾರತದ ಸಮನ್ವಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಈ ದೇಶದ ದುಡಿಯುವ ವರ್ಗಗಳ ಮೇಲಿದೆ.
ಜಾತಿ-ವರ್ಗ ತಾರತಮ್ಯಗಳಿಂದ ಹೊರತಾದ, ದೌರ್ಜನ್ಯಗಳಿಂದ ಮುಕ್ತವಾದ, ಅಸ್ಪೃಶ್ಯತೆ ಮತ್ತು ಪ್ರತ್ಯೇಕತೆಯಂತಹ ಹೀನ ಆಚರಣೆಗಳಿಂದಮುಕ್ತವಾದ,ಮತೀಯತೆ-ಮತಾಂಧತೆಯಂತಹ ವಿಷವಲಯದಿಂದ ಮುಕ್ತವಾದ, ಒಂದು ಮಾನವೀಯ ವಾತಾವರಣವನ್ನು ಸೃಷ್ಟಿಸುವ ಮೂಲಕ, ಇಂದು ಬಿತ್ತಲಾಗುತ್ತಿರುವ ಮತಾಂಧತೆಯ ವಿಷಬೀಜಗಳನ್ನು ನಿರ್ವೀರ್ಯಗೊಳಿಸಲು ಮುನ್ನಡೆಯಬೇಕಿದೆ. ಆಗಲೇ ಕರ್ನಾಟಕ ಅಥವಾ ಭಾರತ “ ಸರ್ವ ಜನಾಂಗದ ಶಾಂತಿಯ ತೋಟ” ಆಗಲು ಸಾಧ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ
ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.
ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243



