Connect with us

ಬಹಿರಂಗ

ಮತಾಂತರ ನಿಷೇಧ ಕಾಯ್ದೆ : ಅಸಾಂವಿಧಾನಿಕ ಶಾಸನ ಮಾನವೀಯ ಜಗತ್ತಿಗೆ ಮಾನವ ಸೌಹಾರ್ದತೆಗೆ ಮತ ಅನಿವಾರ್ಯವಲ್ಲ ನಿಮಿತ್ತ ಮಾತ್ರ

Published

on

ಸಾಂದರ್ಭಿಕ ಚಿತ್ರ
  • ನಾ ದಿವಾಕರ

ಒಂದು ಸ್ವಸ್ಥ ಸಮಾಜಕ್ಕೆ ಬೇಕಾಗಿರುವುದು ಪರಸ್ಪರ ಸೌಹಾರ್ದಯುತವಾಗಿ ಬಾಳಲು ಅನುಕೂಲವಾದಂತಹ ಮನುಜ ಸಂಬಂಧಗಳು. ಮನುಜ ಸಂಬಂಧಗಳನ್ನು ನಿರ್ಮಿಸಲು ಬೇಕಿರುವುದು ಪರಸ್ಪರ ವಿಶ್ವಾಸ ಮತ್ತು ನಂಬಿಕೆ. ಈ ನಂಬಿಕೆಗಳನ್ನು ರೂಢಿಸಿಕೊಳ್ಳಲು ಬೇಕಿರುವುದು ಮಾನವ ಪ್ರಜ್ಞೆ. ಇದನ್ನು ಹೊರತಾದ ಯಾವುದೇ ಅಸ್ಮಿತೆಗಳು ಮಾನವ ಜಗತ್ತಿಗೆ ಅನಗತ್ಯವಾದುದು. ಹಾಗೆಯೇ ಒಂದು ಮತ ಅಥವಾ ಧರ್ಮ ಅಥವಾ ಜಾತಿ, ಪಂಥ, ಪಂಗಡ ಇತ್ಯಾದಿ.

ಆದರೂ ಮಾನವ ಸಮಾಜ ತನ್ನ ಸಾಂಸ್ಥಿಕ, ಸಾಮುದಾಯಿಕ, ಜನಾಂಗೀಯ ಅಸ್ಮಿತೆಗಳಿಂದಾಚೆಗೆ ಬದುಕುವುದನ್ನೇ ಕಲಿತಿಲ್ಲ ಎನ್ನುವುದು ನಮ್ಮ ಕಣ್ಣೆದುರಿನ ವಾಸ್ತವ. ಮಾನವ ಸಮಾಜವೇ ರೂಪಿಸಿಕೊಂಡ ಒಂದು ನಿರ್ದಿಷ್ಟ ಮತ, ಹಿಂದೂ-ಇಸ್ಲಾಂ-ಕ್ರೈಸ್ತ ಇತ್ಯಾದಿ, ತನ್ನ ಸಾಂಸ್ಥಿಕ ಸ್ವರೂಪವನ್ನು ಗಟ್ಟಿಗೊಳಿಸುವ ಹಾದಿಯಲ್ಲಿ ಮಾನವೀಯ ಸ್ಪರ್ಶವನ್ನೇ ಕಳೆದುಕೊಂಡು ಅಸ್ಮಿತೆಗಳ ಶರಮಂಚದ ಮೇಲೆ ಆಸೀನರಾಗಿಬಿಡುತ್ತವೆ.

ಈ ಅಸ್ಮಿತೆಗಳ ಚೌಕಟ್ಟಿನಲ್ಲೇ ಹುಟ್ಟಿ ಬೆಳೆದು ತಮ್ಮ ವ್ಯಕ್ತಿಗತ ನಂಬಿಕೆಗಳನ್ನು ರೂಢಿಸಿಕೊಳ್ಳುವ ಮನುಷ್ಯನಿಗೆ ಮತ ಅಥವಾ ಧರ್ಮ ಎನ್ನುವುದು ಒಂದು ಸಾಂತ್ವನದ ನೆಲೆಯಾಗಿ ಮಾತ್ರವೇ ನೆರವಾಗುತ್ತದೆ. ನಿತ್ಯ ಜೀವನದ ಸಂಕಷ್ಟಗಳನ್ನು ಮರೆಯಲು, ತನ್ನ ಬದುಕಿನ ಹತಾಶೆ ಮತ್ತು ಆತಂಕಗಳನ್ನು ಹೋಗಲಾಡಿಸಿಕೊಳ್ಳಲು ಮನುಷ್ಯ ಜೀವಿಗೆ ತನ್ನ ವ್ಯಾಪ್ತಿಗೆ ನಿಲುಕದ ಅತೀತ ಶಕ್ತಿಯ ಮೊರೆ ಹೋಗುವುದು ಅನಿವಾರ್ಯವಲ್ಲವಾದರೂ, ಹಲವಾರು ಸಂದರ್ಭಗಳಲ್ಲಿ ಅವಶ್ಯಕವಾಗಿಬಿಡುತ್ತದೆ.

ಬಡತನದ ಬೇಗುದಿ, ಹಸಿವು, ಸಾಮಾಜಿಕ ತಾರತಮ್ಯ , ದೌರ್ಜನ್ಯ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಜಾತಿ ಶ್ರೇಷ್ಠತೆಯಿಂದ ಪೋಷಿಸಲ್ಪಡುವ ಅಸ್ಪೃಶ್ಯತೆ ತಳಸಮುದಾಯಗಳ ಬದುಕಿನ ಹಾದಿಗೆ ಮುಳ್ಳುಗಳಾಗಿಯೇ ಕಾಣುತ್ತದೆ. ಈ ಸಾಮಾಜಿಕ ಅನ್ಯಾಯಗಳ ಚೌಕಟ್ಟಿನಲ್ಲೇ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಮತ್ತು ಘನತೆಯ ಬದುಕಿನ ಹಕ್ಕಿನಿಂದ ವಂಚಿತನಾಗುವ ವ್ಯಕ್ತಿ ಅಥವಾ ಸಮುದಾಯ, ಜನ್ಮದಾರಭ್ಯ ಒದಗಿಬಂದ ಮತ ಅಥವಾ ಧರ್ಮದ ನೆಲೆಗಳನ್ನು ತೊರೆದು ಮತ್ತೊಂದು ನೆಮ್ಮದಿಯ ತಾಣವನ್ನು ಅರಸುವುದು ಒಂದು ಸಹಜ ಸ್ವಾಭಾವಿಕ ಪ್ರಕ್ರಿಯೆ.

ಇಂದು ವ್ಯಾಪಕ ಚರ್ಚೆ ಮತ್ತು ವಿವಾದಕ್ಕೊಳಗಾಗಿರುವ ಮತಾಂತರದ ಪ್ರಶ್ನೆಯನ್ನೂ ಹೀಗೆಯೇ ನೋಡಬೇಕಿದೆ. ಸಾಂವಿಧಾನಿಕವಾಗಿ ಒದಗಿಸಲಾಗಿರುವ ವ್ಯಕ್ತಿಸ್ವಾತಂತ್ರ್ಯದೊಂದಿಗೇ ಭಾರತದ ಪ್ರಜೆಗಳಿಗೆ ತಮ್ಮ ಆಯ್ಕೆಯನುಸಾರ ಯಾವುದೇ ಮತವನ್ನು ಅನುಸರಿಸುವ ಸ್ವಾತಂತ್ರ್ಯವನ್ನೂ ನೀಡಲಾಗಿದೆ. ಸಂವಿಧಾನದ ಮೂರನೆಯ ಪರಿಚ್ಚೇದದಲ್ಲಿ ಮೂಲಭೂತ ಹಕ್ಕುಗಳನ್ನು ಪ್ರಸ್ತಾಪಿಸಲಾಗಿದೆ.

ಸಂವಿಧಾನ ವಿಧಿ 25 ರಿಂದ 28ರವರೆಗಿನ ನಿಯಮಗಳು ಭಾರತದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ಧರ್ಮವನ್ನು ಪಾಲಿಸುವ, ಅನುಸರಿಸುವ, ಪ್ರಚಾರ ಮಾಡುವ ಮತ್ತು ಆಚರಿಸುವ ಹಕ್ಕನ್ನು ನೀಡುತ್ತದೆ. ಸಾರ್ವಜನಿಕ ಸುವ್ಯವಸ್ಥೆಯನ್ನು, ನೈತಿಕತೆಯನ್ನು ಮತ್ತು ಆರೋಗ್ಯಕರ ವಾತಾವರಣವನ್ನು ಕಾಪಾಡಿಕೊಳ್ಳುವುದು ಈ ನಿಟ್ಟಿನಲ್ಲಿ ಅವಶ್ಯವಾಗಿರುತ್ತದೆ. ಅಂದರೆ ಯಾವುದೇ ವ್ಯಕ್ತಿಗೆ ತನ್ನ ವ್ಯಕ್ತಿಗತ ಬದುಕಿನಲ್ಲಿ ತನ್ನ ಮತವನ್ನು ತೊರೆದು ಮತ್ತೊಂದು ಮತವನ್ನು ಆಚರಿಸುವ ಹಕ್ಕು ಇರುತ್ತದೆ. ಈ ಸಾಂವಿಧಾನಿಕ ಹಕ್ಕು ಇಂದು ಮತಾಂತರದ ಪ್ರಶ್ನೆಯಾಗಿ ಪರಿಣಮಿಸಿದೆ.

ಮತಾಂತರ ಮತ್ತು ರಾಜಕಾರಣ

1960ರ ದಶಕದಿಂದಲೂ ಭಾರತದಲ್ಲಿ ಮತಾಂತರ ಒಂದು ರಾಜಕೀಯ ಚೌಕಟ್ಟಿನಲ್ಲೇ ಚರ್ಚೆಗೊಳಗಾಗುತ್ತಿದೆ. ಜನಸಾಮಾನ್ಯರ ಬದುಕಿನಲ್ಲಿ ಯಾವುದೇ ಪ್ರಕ್ಷುಬ್ಧತೆ ಉಂಟುಮಾಡದ ಈ ವಿದ್ಯಮಾನ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡುತ್ತದೆ. ಬಿಜೆಪಿ ಸರ್ಕಾರಗಳಿಗೆ ಮತ್ತು ಸಂಘಪರಿವಾರಕ್ಕೆ ತಮ್ಮ ಹಿಂದುತ್ವ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಮತಾಂತರದ ಪ್ರಶ್ನೆ ಒಂದು ಪ್ರಬಲ ಅಸ್ತ್ರವಾಗಿದೆ. “ ಅವಿದ್ಯಾವಂತ, ಬಡ ಹಿಂದೂಗಳು ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕೆ ಬಲಿಯಾಗಿ ಅನ್ಯಧರ್ಮಗಳನ್ನು ಸ್ವೀಕರಿಸುತ್ತಿದ್ದಾರೆ.

ಹಾಗಾಗಿ ಇತರ ರಾಜ್ಯಗಳಲ್ಲಿನ ಮತಾಂತರ ನಿಷೇಧ ಕಾಯ್ದೆಗಳನ್ನು ಪರಾಮರ್ಶಿಸಿ ರಾಜ್ಯದಲ್ಲೂ ಅಂತಹುದೇ ಕಾಯ್ದೆಯನ್ನು ಜಾರಿಗೊಳಿಸಬೇಕು ” ಎಂದು ಭಾಜಪದ ಮಂತ್ರಿಗಳೊಬ್ಬರು 2009ರಲ್ಲೇ ಹೇಳಿದ್ದುಂಟು. ಈಗ ಬೊಮ್ಮಾಯಿ ಸರ್ಕಾರ ಇಂತಹ ಕಾಯ್ದೆಯೊಂದನ್ನು ಜಾರಿಗೊಳಿಸಲು ಮುಂದಾಗಿದೆ.

ಕ್ರೈಸ್ತ ಮಿಷನರಿಗಳು ಬಲವಂತವಾಗಿ, ಪ್ರಲೋಭನೆಗಳನ್ನೊಡ್ಡಿ, ಆಸೆ ಆಮಿಷಗಳನ್ನು ತೋರಿಸಿ ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲದಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕೆಲವು ಮತೀಯ ಕಾವಲುಪಡೆಗಳ ಉನ್ಮತ್ತ ಭಾವನೆ ಮತ್ತು ಅಭಿಪ್ರಾಯಗಳನ್ನೇ ಅಂತಿಮ ಸತ್ಯ ಎಂದೆಣಿಸುವುದು ಪ್ರಸ್ತುತ ಸನ್ನಿವೇಶಕ್ಕೆ ಕಾರಣವಾಗಿದೆ. “ಮತಾಂತರವನ್ನು ಒಪ್ಪಬಹುದು ಆದರೆ ಬಲವಂತದ ಮತಾಂತರ ಒಪ್ಪಲಾಗುವುದಿಲ್ಲ” ಎಂಬ ಉದಾರವಾದಿ ಚಿಂತನೆಗೂ ಸಾಕಷ್ಟು ಮೆರುಗು ನೀಡುವಲ್ಲಿ ಪ್ರಸ್ತುತ ಬೆಳವಣಿಗೆಗಳು ಸಹಕಾರಿಯಾಗಿವೆ.

ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಮತ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಪಾಲಿಸುವ ಸಂವಿಧಾನಾತ್ಮಕ ಹಕ್ಕು ಇರುವುದಾದರೂ, ಸಂವಿಧಾನವನ್ನು ಒಪ್ಪಿರುವ ರಾಜಕೀಯ ಪಕ್ಷಗಳೇ ಮತಾಂತರದ ವಿರುದ್ಧ ಸಮರ ಸಾರುತ್ತಿರುವುದು ಮತನಿರಪೇಕ್ಷ ಸಂವಿಧಾನಕ್ಕೆ ದ್ರೋಹ ಬಗೆದಂತಾಗಿದೆ.

ಸ್ವಾತಂತ್ರ್ಯಪೂರ್ವದಲ್ಲೂ ಸಹ, 1936ರಲ್ಲಿ ರಾಯ್‍ಘರ್, 1942ರಲ್ಲಿ ಸರಗುಜಾ, 1946ರಲ್ಲಿ ಉದಯ್‍ಪುರ ಸಂಸ್ಥಾನಗಳು ಮತಾಂತರ ನಿಷೇದ ಕಾಯ್ದೆಯನ್ನು ಜಾರಿಗೊಳಿಸಿದ್ದನ್ನು ದಾಖಲಿಸಲಾಗಿದೆ. ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲನೆಯದಾಗಿ ಧರ್ಮ ಪರಿವರ್ತನೆಯ ವಿರುದ್ಧ ಶಾಸನ ಜಾರಿಗೊಳಿಸಿದ್ದು ಒರಿಸ್ಸಾದಲ್ಲಿ, 1967ರ ಒರಿಸ್ಸಾ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ಮೂಲಕ.

ಈ ಕಾಯ್ದೆಯಲ್ಲಿ “ ಯಾವುದೇ ವ್ಯಕ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ ಮತ್ತೊಬ್ಬ ವ್ಯಕ್ತಿಯನ್ನು, ಪ್ರಲೋಭನೆಯನ್ನು ಒಡ್ಡಿ, ಬಲಾತ್ಕಾರ ಮಾಡಿ ಅಥವಾ ಮೋಸ ಮಾಡಿ, ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಪರಿವರ್ತಿಸುವಂತಿಲ್ಲ ” ಎಂದು ಹೇಳಲಾಗಿದೆ. ತದನಂತರ ಇದೇ ಹಾದಿಯನ್ನು ಅನುಸರಿಸಿ ಮಧ್ಯಪ್ರದೇಶ-1968, ಅರುಣಾಚಲಪ್ರದೇಶ-1978, ಗುಜರಾತ್-2003, ಛತ್ತಿಸ್‍ಗಢ್-2003, ರಾಜಸ್ತಾನ-2005, ಹಿಮಾಚಲ ಪ್ರದೇಶ-2006 ಮತ್ತು ತಮಿಳುನಾಡು-2002 ರಲ್ಲಿ ಇದೇ ರೀತಿಯ ಶಾಸನವನ್ನು ಜಾರಿಗೊಳಿಸಿದ್ದವು. ಈಗ ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದು ಇದು ಮೂಲತಃ ಮುಸ್ಲಿಂ ಯುವಕರ ಮೇಲೆ ಗುಂಪು ಹಲ್ಲೆ ನಡೆಸಲು ಮತೀಯ ಕಾವಲುಪಡೆಗಳಿಗೆ ಮುಕ್ತ ಅವಕಾಶ ನೀಡಿದಂತಾಗಿದೆ. ತಮಿಳುನಾಡಿನಲ್ಲಿ 2004ರಲ್ಲಿ ಈ ಕಾಯ್ದೆಯನ್ನು ಹಿಂಪಡೆಯಲಾಯಿತು.

1950ರಲ್ಲಿ ಸಂವಿಧಾನವನ್ನು ಅನುಷ್ಟಾನಗೊಳಿಸಿದ ಸಂದರ್ಭದಲ್ಲಿ ಸಂವಿಧಾನದ ವಿಧಿ 25ರ ಅಡಿ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತನ್ನದೇ ಆದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ, ಪಾಲಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಮಾನ್ಯ ಮಾಡಲಾಯಿತು. ಹಾಗಾಗಿ ಈ ರಾಜ ಸಂಸ್ಥಾನಗಳ ಶಾಸನಗಳು ಅನೂರ್ಜಿತವಾದವು. ಆದಾಗ್ಯೂ ಹೆಚ್ಚು ಸಂಖ್ಯೆಯ ಆದಿವಾಸಿಗಳನ್ನೊಳಗೊಂಡಿದ್ದ ಮಧ್ಯ ಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ವ್ಯಾಪಕವಾಗಿ ಕಾರ್ಯನಿರತವಾಗಿದ್ದ ಕ್ರೈಸ್ತ ಮಿಷನರಿಗಳ ಚಟುವಟಿಕೆಗಳ ಬಗ್ಗೆ ಗುಮಾನಿ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ಸರ್ಕಾರವು ಮಿಷನರಿಗಳ ಕಾರ್ಯವೈಖರಿಯ ಮೇಲೆ ನಿಗಾವಹಿಸಲು ಸಮಿತಿಯೊಂದನ್ನು ನೇಮಿಸಿತ್ತು.

ಸಮಿತಿಯು ತನ್ನ ವರದಿಯಲ್ಲಿ ವಿದೇಶದಿಂದ ಹರಿದುಬರುವ ಹಣದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ್ದು, ಸಮಾಜ ಸೇವೆ ಮತ್ತು ದಾನಶೀಲತೆಯ ಹೆಸರಿನಲ್ಲಿ ದುರುಪಯೋಗ ನಡೆಯಬಹುದೆಂದು ಶಂಕೆ ವ್ಯಕ್ತಪಡಿಸಿತ್ತು. ಈ ಸಮಿತಿಯ ವರದಿಯೇ ಒರಿಸ್ಸಾದ ಕಾಯ್ದೆಗೆ ತಳಹದಿಯಾಗಿ ಪರಿಣಮಿಸಿತ್ತು. ಕರ್ನಾಟಕದ ಕಾಯ್ದೆಗೂ ಇದೇ ತಳಹದಿಯಾಗಿದೆ.

ಮತಾಂಧ ಪಡೆಗಳು ಮತ್ತು ಮತಾಂತರ

ಪ್ರಸ್ತುತ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಥವಾ ಸಂಘಪರಿವಾರ ಹೇಳುವ ಮಟ್ಟಿಗೆ ಮತಾಂತರ ನಡೆಯುತ್ತಿಲ್ಲ. ಆದರೆ ಕೈಯ್ಯಲ್ಲಿ ಬೈಬಲ್ ಹಿಡಿದು ಓಡಾಡುವುದೇ ಮಹಾಪರಾಧವಾಗಿರುವುದಂತೂ ಸತ್ಯ. ಕೋಲಾರದ ಶ್ರೀನಿವಾಸಪುರದಲ್ಲಿ ಕರಪತ್ರ ಹಂಚುತ್ತಿದ್ದ ಕ್ರೈಸ್ತರ ಮೇಲೆ ಮತೀಯ ಕಾವಲುಪಡೆಗಳು ದಾಳಿ ನಡೆಸಿವೆ. ಇತ್ತೀಚೆಗೆ ಬೇಲೂರಿನಲ್ಲೂ ಪ್ರಾರ್ಥನಾ ಸಭೆಯೊಂದರ ಮೇಲೆ ದಾಳಿ ನಡೆಸಲಾಗಿತ್ತು. ಧರ್ಮ ಬೋಧನೆಗೆ ಮತ್ತು ಪ್ರಚಾರಕ್ಕೆ ಸಂವಿಧಾನದಲ್ಲಿ ಅವಕಾಶವಿದೆ.

ಈ ಬೋಧನೆಯ ಮೂಲಕ ಮತಾಂತರಕ್ಕೆ ಬಲವಂತ ಮಾಡುವುದನ್ನು ನಿರ್ಬಂಧಿಸಲಾಗಿದೆ. ಆದರೆ ಈ ಬಲವಂತದ ಮತಾಂತರದ ಅರ್ಥ ಏನೆಂದು ತಿಳಿಯಬೇಕಲ್ಲವೇ ? ಕ್ರೈಸ್ತ ಮತ ಪ್ರಚಾರಕರ ಬೋಧನೆಗೆ ಶರಣಾಗಿ ತಮ್ಮ ಮೂಲ ಮತವನ್ನು ತ್ಯಜಿಸುವವರಿಗೆ ಸಂವಿಧಾನ ಆ ಹಕ್ಕನ್ನು ನೀಡಿದೆಯಲ್ಲವೇ ? ಇದನ್ನು ನಿರ್ಬಂಧಿಸುವುದೆಂದರೆ ಅದು ಸಾಂವಿಧಾನಿಕ ವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ.

ಆದರೆ ಕರ್ನಾಟಕದಲ್ಲಿ ಮತಾಂತರ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ ಎನ್ನಲು ಯಾವುದೇ ಪುರಾವೆಗಳಿಲ್ಲ. ಕ್ರೈಸ್ತ ಧರ್ಮ ಪ್ರಚಾರಕರು ಗ್ರಾಮಗಳಲ್ಲಿ, ಆದಿವಾಸಿ ಹಾಡಿಗಳಲ್ಲಿ ತಮ್ಮ ಧರ್ಮ ಪ್ರಚಾರ ಮಾಡಿದ ಮಾತ್ರಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದಾರೆಂದು ಭಾವಿಸುವುದೂ ತರವಲ್ಲ. ಹಾಗೆ ನೋಡಿದರೆ ಧರ್ಮ ಪ್ರಚಾರ ಕಾರ್ಯವನ್ನು ಎಲ್ಲ ಧರ್ಮಗಳೂ ಕೈಗೊಳ್ಳುತ್ತವೆ. ಹಿಂದೂ ಧರ್ಮದ ಪ್ರಚಾರಕರೂ ಪ್ರವಚನಗಳನ್ನು ನೀಡುತ್ತಲೇ ಇರುತ್ತಾರೆ.

ದಿನಬೆಳಗಾದರೆ ಟಿವಿ ವಾಹಿನಿಗಳಲ್ಲಿ ಪ್ರವಚನಗಳ ಹೊಳೆಯೇ ಹರಿಯುತ್ತದೆ. ಇವೆಲ್ಲವನ್ನೂ ಮತಾಂತರದ ಪ್ರಯತ್ನಗಳೆಂದು ಭಾವಿಸಲು ಸಾಧ್ಯವೇ ? ಅಥವಾ ಕ್ರೈಸ್ತರು ಕೈಗೊಳ್ಳುವ ಪ್ರಚಾರ ಮಾತ್ರ ಮತಾಂತರ ಪ್ರೇರಿತ ಎಂದು ಭಾವಿಸಲು ಸಾಧ್ಯವೇ ? ಇನ್ನು ಮೂವತ್ತು ವರ್ಷಗಳಲ್ಲಿ ಭಾರತ ಕ್ರೈಸ್ತ ಅಥವಾ ಮುಸಲ್ಮಾನ ರಾಷ್ಟ್ರವಾಗುತ್ತದೆ, ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ ಎಂದು ಸಂಘಪರಿವಾರ ಮೂವತ್ತು ವರ್ಷಗಳಿಂದ ಹೇಳುತ್ತಲೇ ಬರುತ್ತಿದೆ. ಹುಯಿಲೆಬ್ಬಿಸುತ್ತಿದೆ. ಪರಿವಾರದ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿಯ ಪ್ರಚಾರವೂ ಒಂದು ಅಸ್ತ್ರವಷ್ಟೆ.

2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಕ್ರೈಸ್ತರ ಜನಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. 2001ರಲ್ಲಿ ಶೇ 1.91 (11.42 ಲಕ್ಷ) ಇದ್ದುದು 2011ರಲ್ಲಿ ಶೇ 1.87 (10.09 ಲಕ್ಷ)ಕ್ಕೆ ಇಳಿದಿದೆ. ಜನಸಂಖ್ಯಾ ಪ್ರಮಾಣದ ಹೆಚ್ಚಳದ ಪ್ರಮಾಣ ಕ್ರೈಸ್ತರಲ್ಲಿ ಶೇ 15.54ರಷ್ಟಿದೆ. ಮುಸಲ್ಮಾನರ ಜನಸಂಖ್ಯೆ 2001ರಲ್ಲಿ ಶೇ 12.12ರಷ್ಟಿದ್ದುದು (64.63 ಲಕ್ಷ) 2011ರಲ್ಲಿ ಶೇ 12.91ಕ್ಕೆ (78.93 ಲಕ್ಷ) ಏರಿದೆ. ಮುಸ್ಲಿಮರ ಜನಸಂಖ್ಯಾ ಹೆಚ್ಚಳದ ಪ್ರಮಾಣ ಇದೇ ಅವಧಿಯಲ್ಲಿ ಶೇ 29.52ರಿಂದ ಶೇ 24.60ಕ್ಕೆ ಇಳಿದಿದೆ. ಅಂದರೆ ಭಾರತ ಪಾಕಿಸ್ತಾನವಾಗುತ್ತದೆ, ಮುಸ್ಲಿಮರು, ಕ್ರೈಸ್ತರು ಬಹುಸಂಖ್ಯಾತರಾಗುತ್ತಾರೆ ಎಂಬ ಹುರುಳಿಲ್ಲದ ಪ್ರಚಾರಗಳನ್ನು ಈ ಅಧಿಕೃತ ಅಂಕಿಅಂಶಗಳೇ ಅಲ್ಲಗಳೆಯುತ್ತವೆ ಅಲ್ಲವೇ ?

ಭಾರತದ ಸಂದರ್ಭದಲ್ಲಿ ಮತಾಂತರ ಎಂಬ ಪದ ಬಳಕೆಯಲ್ಲೇ ಸಮಸ್ಯೆ ಕಾಣುತ್ತದೆ. ಹಿಂದೂ ಎಂದು ಹೇಳಲಾಗುವ ಮತ ಮೂಲತಃ ಹಲವು ಜಾತಿಗಳ ಒಕ್ಕೂಟವೇ ಹೊರತು ಒಂದು ನಿರ್ದಿಷ್ಟ ಸಾಂಸ್ಥಿಕ ಸ್ವರೂಪವನ್ನು ಹೊಂದಿಲ್ಲ. ಈ ಸಾಂಸ್ಥಿಕತೆಯನ್ನು ರೂಪಿಸಲು ಸಂಘಪರಿವಾರ ಪ್ರಯತ್ನಿಸುತ್ತಿದೆ. ಅಂಬೇಡ್ಕರ್ ಮತಾಂತರಕ್ಕೆ ಎರಡು ಕಾರಣಗಳನ್ನು ನೀಡುತ್ತಾರೆ. ಮೊದಲನೆಯದು ಅಸ್ತಿತ್ವಕ್ಕೆ ಸಂಬಂಧಿಸಿದ್ದು, ಎರಡನೆಯದು ಆಧ್ಯಾತ್ಮಿಕವಾದದ್ದು. ಅಸ್ತಿತ್ವಕ್ಕೆ ಸಂಬಂಧಿಸಿದಂತೆ ದಲಿತರು ನಿತ್ಯ ಎದುರಿಸುತ್ತಿರುವ ದೌರ್ಜನ್ಯ, ತಾರತಮ್ಯ, ಅಸ್ಪೃಶ್ಯತೆಯ ಅಪಮಾನ ಮುಂತಾದುವನ್ನು ಅಂಬೇಡ್ಕರ್ ಉದಾಹರಣೆಯಾಗಿ ನೀಡುತ್ತಾರೆ. ಇದನ್ನು ಅವರು ವರ್ಗ ಸಂಘರ್ಷ ಎಂದೇ ಭಾವಿಸುತ್ತಾರೆ.

“ ಅದು ಎರಡು ವ್ಯಕ್ತಿಗಳು ಅಥವಾ ಗುಂಪುಗಳ ನಡುವಿನ ಸಂಘರ್ಷವಲ್ಲ. ಅದು ಎರಡು ವರ್ಗಗಳ ನಡುವಿನ ಸಂಘರ್ಷ. ಒಬ್ಬ ವ್ಯಕ್ತಿ ಮತ್ತೊಬ್ಬನ ಮೇಲೆ ದಬ್ಬಾಳಿಕೆ ಅಥವಾ ಅನ್ಯಾಯ ಮಾಡುವುದಲ್ಲ. ಒಂದು ವರ್ಗ ಮತ್ತೊಂದರ ಮೇಲೆ ಮಾಡುವ ಅನ್ಯಾಯ. ಈ ಸಂಘರ್ಷಗಳನ್ನು ಗಮನಿಸಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ. ನೀವು ಮೇಲ್ವರ್ಗದವರೊಡನೆ ಸಮಾನತೆಯನ್ನು ಅಪೇಕ್ಷಿಸಿದಾಗ ಸಂಘರ್ಷ ಉಂಟಾಗುತ್ತದೆ. ನೀವು ನ್ಯಾಯಕ್ಕಾಗಿ ಆಗ್ರಹಿಸುವ ನಿಮ್ಮ ವರ್ತನೆಯೇ ಅವರ ಆಕ್ರೋಶಕ್ಕೆ ಕಾರಣವಾಗುತ್ತದೆ.ಇದು ಅವರ ಅಹಂಗೆ ಚ್ಯುತಿ ಉಂಟುಮಾಡುತ್ತದೆ.” “ ಸ್ಪೃಶ್ಯರು ಮತ್ತು ಅಸ್ಪೃಶ್ಯರ ನಡುವಿನ ಸಂಘರ್ಷ ನಿರಂತರವಾದುದು, ಶಾಶ್ವತವಾದುದು, ಏಕೆಂದರೆ ಅವರ ಪ್ರಕಾರ ನಿಮಗೆ ಕೆಳಸ್ತರದ ಸ್ಥಾನ ಕಲ್ಪಿಸಿರುವ ಧರ್ಮ ಸನಾತನವಾದುದು ಅದನ್ನು ಬದಲಾಯಿಸಲಾಗುವುದಿಲ್ಲ ” ಎಂದು ಅಂಬೇಡ್ಕರ್ ಹೇಳುತ್ತಾರೆ. ಈ ಹಿನ್ನೆಲೆಯಲ್ಲೇ ಅಂಬೇಡ್ಕರ್ ದಲಿತರ ಮತಾಂತರದ ಅಪೇಕ್ಷೆಯನ್ನು ಅಸ್ತಿತ್ವದ ಸಮಸ್ಯೆ ಎಂದೇ ಗುರುತಿಸುತ್ತಾರೆ.

ಹಿಂದೂ ವ್ಯಕ್ತಿ ಮತಾಂತರ ಹೊಂದಿದರೆ ಅವರು ಜಿಗಿಯುವುದು ಮತದಿಂದದ ಮತಕ್ಕೆ ಅಲ್ಲ, ಒಂದು ಜಾತಿಯಿಂದ ಜಾತಿಯ ಸೋಂಕಿಲ್ಲದ ಮತಕ್ಕೆ. ಮರುಮತಾಂತರವಾದರೆ ಅವರು ತಮ್ಮ ಮೊದಲ ಗೂಡಿಗೇ ಮರಳಬೇಕಲ್ಲವೇ ? ಹಿಂದೂ ಮತಕ್ಕೆ ಮರಳುವವರನ್ನು ಎಲ್ಲಿ ಕೂರಿಸುತ್ತಾರೆ ? ಮತ್ತದೇ ಮೂಲ ಜಾತಿಯ ವೃಕ್ಷಗಳಡಿ ಅಲ್ಲವೇ ? ಇಲ್ಲಿ ವ್ಯಕ್ತಿಗತವಾಗಿ ತನ್ನ ಆರ್ಥಿಕ ಸ್ಥಾನಮಾನಗಳಿಗನುಗುಣವಾಗಿ ಅಸ್ಪೃಶ್ಯತೆ, ತಾರತಮ್ಯ ಎದುರಿಸದಿದ್ದರೂ ಸಾಮುದಾಯಿಕವಾಗಿ ಇದು ಇದ್ದೇ ಇರುತ್ತದೆ. ಇದನ್ನು ಹೇಗೆ ಅರ್ಥೈಸುವುದು ? ಇಂದಿಗೂ ನಮ್ಮ ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆಯ ಹಿನ್ನೆಲೆಯಲ್ಲಿ ಇದನ್ನು ನೋಡಿದಾಗ, ಅಸ್ಪೃಶ್ಯ ಸಮುದಾಯಗಳು ತಮ್ಮ ನೆಲೆಯನ್ನು “ ಹಿಂದೂ ” ಎಂದು ಪರಿಭಾವಿಸಲಾಗುವ ಮತದ ಚೌಕಟ್ಟಿನಲ್ಲಿ ಏಕೆ ಕಂಡುಕೊಳ್ಳಬೇಕು. ಕೊಪ್ಪಳದ ದೇವಾಲಯಕ್ಕೆ ಎಂಟು ವರ್ಷದ ಹಸುಳೆ ಪ್ರವೇಶಿಸಿದ್ದಕ್ಕೆ ಬಹಿಷ್ಕಾರ ಹಾಕಿ ದಂಡ ವಿಧಿಸಿದ ಒಂದು ಸಮಾಜಕ್ಕೆ, ಅದೇ ಅಸ್ಪೃಶ್ಯರನ್ನು ನಮ್ಮೊಡನೆ ಇರಿ ಎಂದು ಹೇಳುವ ನೈತಿಕತೆ ಹೇಗಿರಲು ಸಾಧ್ಯ ?

ಅಸ್ಪೃಶ್ಯತೆ, ಜಾತಿ ದೌರ್ಜನ್ಯ, ತಾರತಮ್ಯ ಮತ್ತು ಅಪಮಾನಗಳಿಂದ ವಿಮುಕ್ತಿ ಪಡೆಯುವ ಒಂದು ಸಾರ್ವತ್ರಿಕ ಪ್ರಕ್ರಿಯೆಯಾಗಿ ಮತಾಂತರವೂ ನಡೆಯುತ್ತದೆ. ಹಾಗಾಗಿಯೇ ನಮ್ಮ ಸಂವಿಧಾನದಲ್ಲೂ ಇದಕ್ಕೆ ನಿರ್ಬಂಧಿತ ಅವಕಾಶವನ್ನು ಕಲ್ಪಿಸಲಾಗಿದೆ. ಬಲವಂತದ ಮತಾಂತರ, ಆಮಿಷ ಪ್ರಲೋಭನೆಗಳ ಮೂಲಕ ಮಾಡುವ ಮತಾಂತರವನ್ನು ನಿಷೇಧಿಸುವ ಮುನ್ನ ಸರ್ಕಾರ ಈ ಪದಗಳ ವ್ಯಾಪ್ತಿ ಮತ್ತು ಸ್ಪಷ್ಟವಾದ ಅರ್ಥವನ್ನು ಜನತೆಗೆ ತಿಳಿಸಬೇಕಿದೆ.

ಅವಕಾಶವಂಚಿತರಿಗೆ ಶಿಕ್ಷಣ ನೀಡುವುದು, ಹಸಿದವರಿಗೆ ಅನ್ನ ನೀಡುವುದು, ನೆಲೆಯಿಲ್ಲದವರಿಗೆ ಸೂರು ಒದಗಿಸುವುದು ಆಮಿಷ ಎನಿಸಿಕೊಳ್ಳುವುದಿಲ್ಲ. ಮತ ಮತ್ತು ಧರ್ಮಗಳ ಪರಿಧಿಯಿಂದಾಚೆಗೆ ಇವು ಮಾನವೀಯ ಸಂವೇದನೆಯ ಮಾರ್ಗಗಳಾಗುತ್ತವೆ. ಬಿಜೆಪಿ ಸರ್ಕಾರ ಈ ಪದಗಳ ನಿಷ್ಕರ್ಷೆಯ ಅಧಿಕಾರವನ್ನು ಭಜರಂಗದಳ, ಹಿಂದೂ ಸೇನೆಯಂತ ಮತೀಯ ಕಾವಲುಪಡೆಗಳಿಗೆ ನೀಡುವ ಮೂಲಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವ ಮುಕ್ತ ಅವಕಾಶವನ್ನು ಕಲ್ಪಿಸಿದೆ.

ಈಗ ರಾಜ್ಯ ಸಂಸ್ಕೃತಿ ಇಲಾಖೆಯ ಸಚಿವರು ಲವ್ ಜಿಹಾದ್ ನಿಷೇಧ ಮಸೂದೆಯನ್ನೂ ಮಂಡಿಸುವುದಾಗಿ ಹೇಳಿದ್ದಾರೆ. ಲವ್ ಜಿಹಾದ್ ಒಂದು ಕಪೋಲ ಕಲ್ಪಿತ ಪರಿಕಲ್ಪನೆ ಎಂದು ನ್ಯಾಯಾಲಯಗಳೇ ಹೇಳಿವೆ. ಎರಡು ವಿಭಿನ್ನ ಮತಗಳ ಯುವಕ-ಯುವತಿ ಒಟ್ಟೊಟ್ಟಿಗೆ ಓಡಾಡುವುದೂ ಕಷ್ಟವಾಗುವಂತಹ ಪರಿಸ್ಥಿತಿ ಕರಾವಳಿಯಲ್ಲಿ ಉದ್ಭವಿಸಿದೆ. ಮುಸ್ಲಿಂ ಮತಾಂಧರೂ ಸಹ ಇಂತಹ ದಾಳಿಗಳನ್ನು ನಡೆಸುತ್ತಿದ್ದಾರೆ. ಜಾತಿ, ಮತ, ಧರ್ಮ ಮತ್ತು ಸಾಮುದಾಯಿಕ ಅಸ್ಮಿತೆಗಳನ್ನು ದಾಟಿದ ಮನುಜ ಸಂಬಂಧವೂ ಒಂದಿದೆ ಎಂಬ ಸಾಮಾನ್ಯ ಪರಿಜ್ಞಾನವನ್ನೂ ಕಳೆದುಕೊಂಡಿರುವ ಒಂದು ಸಮಾಜದಲ್ಲಿ ಮಾತ್ರ ಈ ರೀತಿಯ ಘಟನೆಗಳು ಸಂಭವಿಸಲು ಸಾಧ್ಯ. 12ನೆಯ ಶತಮಾನದ ಬಸವಣ್ಣನ ಕಾಲದಲ್ಲಿದ್ದ ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯ ಅಪಮಾನಗಳು ಇಂದಿಗೂ ಪ್ರಚಲಿತವಾಗಿವೆ ಎಂದರೆ ನಾವು ನಾಚಿಕೆಯಿಂದ ತಲೆತಗ್ಗಿಸಬೇಕಲ್ಲವೇ ? ಅಂದು ನಡೆದ ಮತಾಂತರದ ಪ್ರಕ್ರಿಯೆಯೇ ಇಂದೂ ನಡೆಯುತ್ತಿದೆ ಎಂದರೆ ಅದನ್ನು ಒಪ್ಪಿಕೊಳ್ಳಬೇಕಲ್ಲವೇ ?

ವಿಶ್ವದ ಶ್ರೇಷ್ಠ ಸಂವಿಧಾನವನ್ನು ಹೊಂದಿರುವ ಭಾರತದಲ್ಲಿ ಅಸ್ಪೃಶ್ಯತೆಯಂತಹ ಅಮಾನುಷ ಆಚರಣೆಯನ್ನು ಇನ್ನೂ ಜೀವಂತವಾಗಿರಿಸಿರುವ ಭಾರತೀಯ ಸಮಾಜ ಮನುಜ ಸಂಬಂಧಗಳನ್ನು ಜಾತಿ-ಮತ-ಧರ್ಮದ ಹಂಗಿಲ್ಲದೆ ಬೆಸೆಯುವ ನಿಟ್ಟಿನಲ್ಲಿ ಮುನ್ನಡೆಯುವ ಸಂಕಲ್ಪ ಮಾಡಬೇಕಿದೆ. ಆದರೆ ಮತಾಂತರ ನಿಷೇಧದಂತಹ ಅಸಾಂವಿಧಾನಿಕ ಶಾಸನಗಳನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಸರ್ಕಾರಗಳು ಈ ಮುನ್ನಡೆಯ ಹಾದಿಗಳಿಗೆ ಮುಳ್ಳು ಬೇಲಿಗಳನ್ನು ನಿರ್ಮಿಸುತ್ತಿದೆ. ನಮ್ಮ ಸಂವಿಧಾನದ ಶ್ರೇಷ್ಠತೆ ಇರುವುದು ಈ ಸಮನ್ವಯ ಮತ್ತು ಸೌಹಾರ್ದತೆಯಲ್ಲಿ, ಇದನ್ನು ಕಾಪಾಡಲು ಮತ ಮತ್ತು ಧರ್ಮ ನಿಮಿತ್ತ ಮಾತ್ರ, ಮಾನವೀಯ ಸ್ಪಂದನೆ ಮತ್ತು ನೈತಿಕ ಮೌಲ್ಯಗಳು ಮುಖ್ಯವಾಗುತ್ತವೆ. ಹಿಂದೂ ಎನ್ನಲಾಗುವ ಮತಾಚರಣೆಯಲ್ಲಿ ಮತ್ತು ವೈದಿಕಶಾಹಿಯ ಧಾರ್ಮಿಕ ಚಿಂತನೆಗಳಲ್ಲಿ ಈ ಮನುಜ ಕೇಂದ್ರಿತ ನೈತಿಕತೆ ಇಲ್ಲದ ಹೊರತು ಮತಾಂತರವನ್ನು ನಿರ್ಬಂಧಿಸುವ ನೈತಿಕ ಹಕ್ಕೂ ಇರುವುದಿಲ್ಲ.

ಮತೀಯ ಸೌಹಾರ್ದತೆಯ ಸಹಬಾಳ್ವೆಯ ಹಾದಿಗಳನ್ನು ಹಾಳುಗೆಡಹುವ ಮತಾಂಧ ಶಕ್ತಿಗಳಿಗೆ ಮತ್ತಷ್ಟು ಪ್ರಚೋದನ ನೀಡುವ ಮತಾಂತರ ನಿಷೇಧ ಕಾಯ್ದೆ ಅಸಾಂವಿಧಾನಿಕವಷ್ಟೇ ಅಲ್ಲ, ಅನೈತಿಕವೂ ಹೌದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ

Published

on

ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು  ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.

ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

Continue Reading

ಅಂತರಂಗ

ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ

Published

on

~ ಡಾ. ಸುಜಾತಾ ಚಲವಾದಿ

ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.

ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.

ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.

ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.

ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.

ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.

ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.

ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.

1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.

ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.

ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.

ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.

26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.

ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು

Published

on

ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.

ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.

ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.

ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.

ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.

——————————————————————-

ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?

ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.

ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?

ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.

ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?

ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.

ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?

ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.

ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.

ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?

ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)

ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?

ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)

ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?

ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.

ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?

ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.

ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending