Connect with us

ದಿನದ ಸುದ್ದಿ

ಆನೆಯನ್ನು ಕುಣಿಯಲು ಆಹ್ವಾನಿಸಿದ ಡ್ರ್ಯಾಗನ್ : ಪಿ ಚಿದಂಬರಂ ಅವರ ವಿಶೇಷ ಬರಹ

Published

on

ಳೆದ ವಾರವಷ್ಟೇ ನಾವು ಭಾರತದ ಭೌಗೋಳಿಕ ಪ್ರದೇಶಗಳ ಬಗ್ಗೆ ಇನ್ನಷ್ಟು ತಿಳಿದುಕೊಂಡೆವು. ನಮಗೇ ಗೊತ್ತಿಲ್ಲದೆ ದೇಶದ ಭೂಪಟದಲ್ಲಿರುವ ಊರುಗಳ ಹೆಸರನ್ನು ಕೇಳಿದ್ದೆವು. ಗಲ್ವಾನ್ ಕಣಿವೆ, ಪ್ಯಾಂಗೋಂಗ್, ಗೊರ್ಗಾ ಇವೇ ಮೊದಲಾದ ಸ್ಥಳಗಳ ಬಗ್ಗೆ ನಾವು ಯಾವತ್ತಾದರೂ ಹುಡುಕಿದ್ದೆವಾ? ಈ ಪ್ರದೇಶಗಳ ಹೆಸರು ಇನ್ಮುಂದೆ ನಮಗೆ ಬಾಯಿ ಪಾಠವಾಗಲಿದೆ.

ಒಳನುಸುಳುವಿಕೆ

ಭಾರತ-ಚೀನಾ ನಡುವಿನ ಸಂಬಂಧ ಹಳಸಿರುವುದನ್ನು ಮೇ 5ರಂದು ಪ್ಯಾಂಗಾಂಗ್ ಟಿಎಸ್ಒನಲ್ಲಿ ನಡೆದ ಘರ್ಷಣೆಯಿಂದ ಅರಿಯಬಹುದು. ಈದಿನದವರೆಗೂ ಉಭಯ ದೇಶಗಳ ನಡುವಿನ ಸಂಘರ್ಷ ಮುಂದುವರಿಯುತ್ತಲೇ ಬಂದಿದೆ. ಆದರೆ, ಚೀನಾ ಸೇನೆ ಭಾರತದ ಭೂಪ್ರದೇಶದೊಳಗೆ ಬಂದಿದೆ ಎಂಬುದನ್ನು ಸರ್ಕಾರ ಒಪ್ಪಿಕೊಳ್ಳಲು ಸಿದ್ಧವಿಲ್ಲ.

ಚೀನಾ ಸೇನಯು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗುಲ್ವಾನ್, ಪ್ಯಾಂಗಾಂಗ್ ಟಿಎಸ್ಒ ಹಾಗೂ ಲಡಾಖ್ನ ಗೊರ್ಗಾ ಪ್ರದೇಶಕ್ಕೆ ನುಗ್ಗಿದೆ. ಲಡಾಖ್ನಲ್ಲಿರುವ ಗಲ್ವಾನ್, ಸಿಕ್ಕಿಂನ ನಕು ಲಾ ಪ್ರದಶಗಳನ್ನು ಈವರೆಗೆ ಚೀನಾ ವಿವಾದಿತ ಪ್ರದೇಶ ಎಂದು ಘೋಷಿಸಿಲ್ಲ. ಈ ಹಿಂದೆ ಈ ಪ್ರದೇಶಗಳಿಗಾಗಿ ಯಾವಾಗಲೂ ಭಾರತ- ಚೀನಾ ನಡುವೆ ಬಿಕ್ಕಟ್ಟು ಉದ್ಭವಿಸಿಲ್ಲ. ಇದರಿಂದ ತಿಳಿದುಬರುವ ಒಂದೇ ವಿಷಯವೆಂದರೆ ಚೀನಾ ತನ್ನ ವಿವಾದಿತ ಪ್ರದೇಶಗಳನ್ನು ವಿಸ್ತರಿಸುತ್ತಾ ಬರುತ್ತಿದೆ.

ಉಭಯ ದೇಶಗಳ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಈ ಬೃಹತ್ ಪ್ರದೇಶವನ್ನು ತನ್ನದೆಂದು ಚೀನಾ ತನ್ನದೆಂದು ಹೇಳಿಕೊಂಡರೆ, ಭಾರತ ತನ್ನದೆಂದು ಹೇಳಿಕೊಳ್ಳುತ್ತಿದೆ. ಇದೇ ಮೊದಲಬಾರಿಗೆ ಉಭಯ ದೇಶಗಳ ಸೇನಾ ಮುಖ್ಯಸ್ಥರ ನಡುವೆ ನಡೆಯುತ್ತಿದ್ದ ಶಾಂತಿ ಮಾತುಕತೆ ವಿಶೇಷ ರಾಜತಾಂತ್ರಿಕ ಪ್ರತಿನಿಧಿಗಳ ನಡುವೆ ನಡೆದಿದೆ.

ಪೂರ್ಣ ಪ್ರಮಾಣದ ಯುದ್ಧವಲ್ಲ

ಭಾರತ ಹಾಗೂ ಚೀನಾ ಪೂರ್ಣ ಪ್ರಮಾಣದ ಯುದ್ಧ ಮಾಡಲು ಈಗ ಸಿದ್ಧವಾಗಿವೆ ಎಂದು ನಂಬುವುದು ಕಷ್ಟ. ಈ ಸಮಯದಲ್ಲಿ ಗಡಿ ಸಮಸ್ಯೆ ಒಂದು ತಲೆನೋವೇ ಹೊರತು ಇನ್ನೇನೂ ಅಲ್ಲ. ಉಭಯ ದೇಶಗಳ ನಡುವಿನ ಗಡಿ ಬಿಕ್ಕಟ್ಟನ್ನು ನೋಡುವುದಾದರೆ 1962ರಲ್ಲಿ ನಡೆದ ಪೂರ್ಣ ಪ್ರಮಾಣದ ಯುದ್ಧ ನೆನಪಾಗುತ್ತದೆ. ಆ ಸಮಯದಿಂದ ಆಗಾಗ್ಗೆ ಗಡಿ ಸಮಸ್ಯೆ ಸೃಷ್ಟಿಯಾಗುತ್ತಲೇ ಇದೆ.

ಆದರೆ, ಮಾತುಕತೆಯಲ್ಲೇ ಅದು ಮುಗಿದುಹೋಗುತ್ತಿದೆ. ಈಗ ಕೊರೊನಾ ವಿರುದ್ಧ ಹೋರಾಡುತ್ತಿರುವ ಎರಡು ದೇಶಗಳು 2020-21ರ ವಿತ್ತೀಯ ವರ್ಷದಲ್ಲಿ ಆರ್ಥಿಕ ಸಮಸ್ಯೆ ಎದುರಿಸುವ ಭೀತಿಯಲ್ಲಿವೆ. ಹಾಗಾಗಿ ಎರಡೂ ದೇಶಗಳೂ ವಿಶ್ವದ ಯಾವುದೇ ದೇಶವನ್ನು ಎದುರುಹಾಕಿಕೊಳ್ಳದೇ ಶಾಂತ ರೀತಿಯಲ್ಲಿ ಇತ್ಯರ್ಥಮಾಡಿಕೊಳ್ಳಲು ನಿರ್ಧರಿಸುತ್ತವೆ.

ಚೀನಾಗೆ ತನ್ನ ಮಿಲಿಟರಿ ಸಾಮರ್ಥ್ಯದ ಬಗ್ಗೆ ಅಗಾಧವಾದ ವಿಶ್ವಾಸವಿದೆ. ಹಾಗೆಯೇ ಭಾರತಕ್ಕೂ ಕೂಡ. ಭಾರತ 1962ರಲ್ಲಿ ಶಸ್ತ್ರಾಸ್ತ್ರಗಳು, ಸೈನಿಕರ ಕೊರತೆ ಎದುರಿಸುತ್ತಿತ್ತು. ಆಗ ಚೀನಾ ಯುದ್ಧದಲ್ಲಿ ಗೆದ್ದಿದೆ ಎಂದು ಸ್ಪಷ್ಟವಾಗಿ ಹೇಳಿಕೊಂಡಿತ್ತು.
ಆದರೆ, ಇದೀಗ ಆ ಪರಿಸ್ಥಿತಿ ಇಲ್ಲ. ಚೀನಾದ ಸೇನಾ ತಜ್ಞರ ಪ್ರಕಾರ ಈಗಿರುವ ಪರಿಸ್ಥಿತಿಯಲ್ಲಿ ಚೀನಾ ಪೂರ್ಣ ಪ್ರಮಾಣದ ಯುದ್ಧ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಿನ್ನಾಭಿಪ್ರಾಯಗಳು-ಬಿಕ್ಕಟ್ಟು

ಭಾರತ ಚೀನಾ ನಡುವೆ ಜೂನ್ 6ರಂದು ಮಾತುಕತೆ ನಡೆದಿದೆ. ಆದರೆ, ಎರಡೂ ದೇಶಗಳ ರಾಜತಾಂತ್ರಿಕ ಪ್ರತಿನಿಧಿಗಳ ನಡುವೆ ಭಿನ್ನಾಭಿಪ್ರಾಯಗಳಿರುವುದು ಸ್ಪಷ್ಟವಾಗಿದೆ. ಈ ಭಿನ್ನಾಭಿಪ್ರಾಯಗಳೇ ಬಿಕ್ಕಟ್ಟಾಗಿ ಪರಿಣಮಿಸಿವೆ. ಮೇ.5ರಂದು ಲಡಾಖ್ನಲ್ಲಿ ಬಿಕ್ಕಟ್ಟು ಉದ್ಭವಿಸುವ ಮುನ್ನವೂ ಇದೇ ರೀತಿ ಭಿನ್ನಾಭಿಪ್ರಾಯಗಳಿದ್ದವು. ಆದರೆ ಆ ಪೈಕಿ ಗಲ್ವಾನ್ ಹಾಗೂ ನಕು ಲಾ ಪಾಸ್ ಸೇರ್ಪಡೆಗೊಂಡಿರಲಿಲ್ಲ.

ಗಡಿ ಬಿಕ್ಕಟ್ಟಿಗಿಂತ ವ್ಯಾಪಾರವೇ ಹೆಚ್ಚಾಯಿತಾ?
2018ರಲ್ಲಿ ವುಹಾನ್ ಹಾಗೂ 2019ರಲ್ಲಿ ಮಹಾಬಲಿಪುರಂನಲ್ಲಿ ಬಿಟ್ಟರೆ ಮೋದಿ ಹಾಗೂ ಕ್ಸಿ ಜಿನ್ಪಿಂಗ್ ಅವರು ಇನ್ಯಾವುದೇ ಮಾತುಕತೆಯಲ್ಲಿ ಪಾಲ್ಗೊಳ್ಳಲಿಲ್ಲ. ಭಾರತ, ಚೀನಾ ಎರಡೂ ದೇಶಗಳು ಮಾತುಕತೆ ವ್ಯಾಪಾರಕ್ಕಷ್ಟೇ ಸೀಮಿತವಾಗಿತ್ತೇ ಹೊರತು ಅದರ ಹೊರತಾದ ಇನ್ಯಾವುದೇ ಪ್ರಗತಿ ಸಾಧಿಸಲಿಲ್ಲ.

ಚೀನಾಗೆ ತನ್ನ ಉತ್ಪನ್ನಗಳ ಮಾರಾಟಕ್ಕೆ ಭಾರತದಂತಹ ದೇಶ ಬೇಕಾಗಿತ್ತು. ಭಾರತಕ್ಕೂ ಕಡಿಮೆ ಬೆಲೆಯಲ್ಲಿ ಅಗತ್ಯ ಉತ್ಪನ್ನಗಳನ್ನು ಪೂರೈಸಲು ಚೀನಾ ನೆರವು ಬೇಕಾಗಿತ್ತು. ಎರಡು ದೇಶಗಳ ನಡುವಿನ ಮಾತುಕತೆ ವ್ಯಾಪಾರಕ್ಕಷ್ಟೇ ಸೀಮಿತವಾಗಿ ಅದು ಗಡಿ ಬಿಕ್ಕಟ್ಟನ್ನು ತಲುಪಲಿಲ್ಲ. ಈ ಮಧ್ಯೆ ಚೀನಾ ತನ್ನ ರಾಜಕೀಯ ಪ್ರಭಾವ ಬೀರಲು ನೇಪಾಳವನ್ನು ಬಳಸಿಕೊಂಡರೆ, ಆರ್ಥಿಕತೆ ಬಿಗಿಗೊಳಿಸಲು ಶ್ರೀಲಂಕಾವನ್ನು ನೆಲೆಯಾಗಿಸಿಕೊಂಡಿತು.

ಈ ಪ್ರಕ್ರಿಯೆಯಲ್ಲಿ ಭಾರತವನ್ನು ಚೀನಾ ಕಡೆಗಣಿಸಿತು. ಭಾರತ ಈ ಮಧ್ಯೆ ಮಾಲ್ಡೀವ್ಸ್ ಜೊತೆಗಿನ ತನ್ನ ಸಂಬಂಧವನ್ನು ಗಟ್ಟಿಗೊಳಿಸಿಕೊಂಡಿತು. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತನ್ನ ಪ್ರದೇಶದಲ್ಲಿ ಅಕ್ರಮವಾಗಿ ಸಂಚರಿಸುತ್ತಿರುವುದನ್ನು ಭಾರತ ಆಕ್ಷೇಪಿಸುತ್ತಲೇ ಇದೆ ಆದರೆ, ಚೀನಾ ಅದಕ್ಕೆ ಕ್ಯಾರೆ ಎನ್ನುತ್ತಿಲ್ಲ.

ಡಿಸ್ಪಾಂಗ್ ಅಥವಾ ದೋಕ್ಲಾಮ್?

ಭಾರತ ಹಾಗೂ ಚೀನಾ ಶಾಂತಿಯುತವಾಗಿ ಮಾತುಕತೆ ನಡೆಸಬೇಕೆಂದರೆ ಚೀನಾ ಮೇ 5ರಂದು ಅತಿಕ್ರಮಿಸಿಕೊಂಡಿರುವ ಭಾರತದ ಭೂಪ್ರದೇಶದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು. (ಸ್ಟೇಟಸ್ ಕ್ಯೂ ಆಂಟೆ- ಅಂತಿಮ ನಿರ್ಧಾರಬರುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವುದು) ಹಾಗೇನಾದರೂ ಆದರೆ ಚೀನಾಗಿಂತ ಪರಮಸುಖಿ ಇನ್ನೊಬ್ಬರಿಲ್ಲ. 2013ರಲ್ಲಿ ಡಿಸ್ಪಾಂಗ್ ಹಾಗೂ 2017ರಲ್ಲಿ ದೊಕ್ಲಾಮ್ನಲ್ಲಿ ಆಗಿದ್ದು ಅದೇ. ನಾನು ಹೇಳುವುದನ್ನು ಬರೆದಿಟ್ಟುಕೊಳ್ಳಿ, ಡ್ರ್ಯಾಗನ್ ಮತ್ತು ಆನೆ ಎರಡೂ ಗಲ್ವಾನ್, ಹಾಟ್ ಸ್ಪ್ರಿಂಗ್ಸ್ ಮತ್ತು ಪ್ಯಾಂಗಾಂಗ್ ಟಿಎಸ್ಓನಲ್ಲಿ ಪರಸ್ಪರ ಗುರಾಯಿಸುತ್ತಿವೆ.

ಹಾಗೆ ನೋಡಿದರೆ ಮೋದಿ ಹಾಗೂ ಕ್ಸಿ ಜಿನ್ಪಿಂಗ್ ಅವರು ಕೆಲವು ಸಾಮ್ಯತೆಗಳನ್ನು ಹೊಂದಿದ್ದಾರೆ. ಇಬ್ಬರೂ ನಾಯಕರನ್ನು ಬದಲಾಯಿಸುವುದು ಅಸಾಧ್ಯ. ಮೋದಿ ಅವರು ಮುಂದಿನ ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸುವುದು ಸ್ಪಷ್ಟ. ಆದರೆ, ಕ್ಸಿ ಅವರು ಪಿಎಲ್ಎ ಪಕ್ಷದ ಪಾಲಿಟ್ ಬ್ಯೂರೊ ಬೆಂಬಲಿಸುವವರೆಗೆ ಮಾತ್ರ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಎರಡೂ ದೇಶಗಳಲ್ಲಿ ನಾಯಕರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದರೂ ಅವರು ಅದನ್ನು ಕಡೆಗಣಿಸುತ್ತಿದ್ದಾರೆ.

ಭಾರತ ಹಾಗೂ ಚೀನಾದಲ್ಲಿ ಪ್ರತ್ಯೇಕ ಕಾನೂನುಗಳಡಿ ಆಳಲ್ಪಟ್ಟಿವೆ. ಯಾವುದೇ ಸಂದರ್ಭದಲ್ಲಿ ಸರ್ಕಾರವನ್ನು ಬೆಂಬಲಿಸುವ ಸಂಪ್ರದಾಯವನ್ನು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದೆ. ಅದೇ ಬೆಂಬಲದಿಂದ ಮೋದಿ ಅವರು ಭಾರತ-ಚೀನಾ ನಡುವಿನ ಬಿಕ್ಕಟ್ಟನ್ನು ಇತ್ಯರ್ಥ ಮಾಡಿಕೊಳ್ಳುತ್ತಾರೆ. ಆದರೆ, ಗಡಿಯಲ್ಲಿ ಏನಾಗುತ್ತಿದೆ ಎಂಬ ಪಾರದರ್ಶಕತೆಯನ್ನು ಮೋದಿ ಅವರು ಕಾಪಾಡಿಕೊಳ್ಳಬೇಕು. ವಾಸ್ತವ ಸ್ಥಿತಿ ಏನಿದೆಯೋ ಅದನ್ನು ದೇಶದ ಜನರಿಗೆ ತಿಳಿಸಬೇಕು.

ಈ ಚದುರಂಗದ ಆಟದಲ್ಲಿ ಚೀನಾ ರಹಸ್ಯವನ್ನು ಕಾಯ್ದುಕೊಂಡಿದೆ. ಅದರ ಫಲ ಇನ್ನಷ್ಟು ರಹಸ್ಯವಾಗಿಯೇ ಉಳಿಯಲಿದೆ.

ಕೃಪೆ: pchidambaram.in, Indian express
Twitter @Pchidambaram_IN

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ಭದ್ರ ಬುನಾದಿ: ಗಂಗಾಧರಸ್ವಾಮಿ ಜಿ.ಎಂ

Published

on

ಸುದ್ದಿದಿನ,ದಾವಣಗೆರೆ:ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟಿರುವ ಮಹಾನ್ ಶಕ್ತಿ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಅಭಿಪ್ರಾಯಪಟ್ಟರು.

ಅವರು ಇಂದು (ಎ.14) ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ದಾವಣಗೆರೆ ಮಹಾನಗರ ಪಾಲಿಕೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಪಾಟಿಸಿ ನಂತರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

3000 ವರ್ಷಗಳ ಇತಿಹಾಸವಿರುವ ನಮ್ಮ ಸಮಾಜದಲ್ಲಿ, ಬ್ರಿಟಿಷರ ಆಳ್ವಿಕೆಯ ನಂತರವೂ ದೇಶದ ಸಮಗ್ರ ಜನತೆಗೆ ಸಮಾನತೆಯನ್ನು ಕಲಿಸಿಕೊಟ್ಟವರು ಬಾಬಾಸಾಹೇಬ್ ಅಂಬೇಡ್ಕರ್. ಮನುಷ್ಯನಿಗೆ ಮೆದುಳು ಮತ್ತು ಆತ್ಮ ಎಷ್ಟು ಮುಖ್ಯವೋ, ದೇಶಕ್ಕೆ ಸಂವಿಧಾನವು ಅಷ್ಟೇ ಮುಖ್ಯ. ವಿಶೇಷವಾಗಿ 32ನೇ ವಿಧಿಯು ಸಂವಿಧಾನದ ಆತ್ಮವಿದ್ದಂತೆ ,ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿದ್ದು, ಅವರ ಬೌದ್ಧಿಕ ಸಾಮರ್ಥ್ಯವೇ ಇಂದಿನ ಸಂವಿಧಾನಕ್ಕೆ ಬಲ ತುಂಬಿದೆ ಎಂದು ಅವರು ವಿವರಿಸಿದರು.

ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದಕ್ಕಷ್ಟೇ ಶಿಕ್ಷಣ ಪಡೆಯಬಾರದು. ಬದಲಾಗಿ, ಸ್ವತಂತ್ರ ಆಲೋಚನೆ ಮತ್ತು ಸಮಾಜದ ಹಕ್ಕುಗಳನ್ನು ಕಾಪಾಡಿಕೊಳ್ಳುವ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಅಂಬೇಡ್ಕರ್ ಮತ್ತು ಅಬ್ದುಲ್ ಕಲಾಂ ಅವರಂತಹ ಮಹನೀಯರು ನಮಗೆ ಪ್ರೇರಣೆಯಾಗಬೇಕು. ಬದ್ಧತೆ ಮತ್ತು ಪ್ರಯತ್ನವಿದ್ದರೆ ಯಾರೂ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು.

ನಾವೆಲ್ಲರು ಸಂವಿಧಾನವನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳಬೇಕು, ಕನಿಷ್ಠ 12 ರಿಂದ 18 ರವರೆಗಿನ ಪರಿಚ್ಛೇದಗಳನ್ನು ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಹಿಂದೆ ವಚನಕಾರರು ರಚಿಸಿದ ವಚನೆಗಳೆ ಸಂವಿಧಾನದ ಆಶಯಗಳು ಆಗಿವೆ, ವಿದೇಶಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಇಲ್ಲ, ಆದರೆ ಭಾರತದಲ್ಲಿ ಸ್ವಾತಂತ್ರ್ಯ ನಂತರ ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸಲಾಗಿದೆ, ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ವೈಚಾರಿಕ ಜಾಗೃತಿ ಮೂಡಿಸಲು ಅಂಬೇಡ್ಕರ್, ಬಸವಣ್ಣ ಮತ್ತು ಗಾಂಧೀಜಿಯವರ ತತ್ವಗಳ ಬಗ್ಗೆ ಉಪನ್ಯಾಸಗಳನ್ನು ಹಮ್ಮಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲ್ ರಾವ್ ಅವರು “ಶಿಕ್ಷಣವು ಸಮಾಜದ ಪ್ರಗತಿಗೆ ಪ್ರಮುಖ ಅಸ್ತ್ರ”. ಕಡು ಬಡತನ ಮತ್ತು ಸಾಮಾಜಿಕ ಅಸಮಾನತೆಯ ನಡುವೆಯೂ ಅಂಬೇಡ್ಕರ್ ಅವರು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಬದಲಾವಣೆ ತಂದರು. ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾದ ಭಾರತದ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರ ಶ್ರಮವನ್ನು ನಾವು ಮರೆಯುವಂತಿಲ್ಲ, ಸಂವಿಧಾನವು ಕೇವಲ ಕಾನೂನಿನ ದಾಖಲೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಬದುಕಿನ ಸ್ಫೂರ್ತಿ ಎಂದರು.

ಸಮಾಜದಲ್ಲಿನ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಬಾಬಾಸಾಹೇಬರು ಪಟ್ಟ ಶ್ರಮ ಹಾಗೂ ಅವರು ಬರೆದ ‘ಜಾತಿ ವಿನಾಶ’ ಕೃತಿಯ ಮಹತ್ವದ ಬಗ್ಗೆ ತಿಳಿಸಿದರು. ಹುಲಿ ಹಾಲಿನ್ನು ಕುಡಿದವನು ಎಷ್ಟು ಬಲಶಾಲಿಯಾಗಿರುತ್ತೇನೋ ಶಿಕ್ಷಣ ಪಡೆದವನು ಅಷ್ಟೇ ಬಲಶಾಲಿಯಾಗುತ್ತಾನೆ. ಪ್ರತಿಯೊಬ್ಬರೂ ಶಿಕ್ಷಣಕ್ಕೆ ಒತ್ತು ನೀಡಿ, ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವಂತೆ ಕರೆ ನೀಡಿದರು.

ಚುನಾವಣೆ ನೀತಿ ಸಂಹಿಗೆ ಜಾರಿಯಲ್ಲಿರುವ ಹಿನ್ನೆಲೆಯ್ಲಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು, ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಅವರು ಬೋದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೆಳ್ಳಿರಥಕ್ಕೆ ಚಾಲನೆ ನೀಡಿದರು. ಬೆಳ್ಳಿ ರಥವು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಗಾಂಧಿವೃತ್ತ ಜಯದೇವ ವೃತ್ತದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಹೆಚ್.ಟಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ಮತ್ತು ಉಪಕಾರ್ಯದರ್ಶಿ ಮಮತ ಗೌಡರ್, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಧ ಮಕ್ಕಳ ವಸತಿ ಶಾಲೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿಗೆ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ 1 ನೇ ತರಗತಿ (6ವರ್ಷ) ಯಿಂದ 10ನೇ ತರಗತಿ (16ವರ್ಷ) ವರೆಗೆ ಅಂಧ ಹೆಣ್ಣು ಮತ್ತು ಗಂಡು ಮಕ್ಕಳಿಗೆ ದಾಖಲಾತಿಯು ಪ್ರಾರಂಭವಾಗಿದೆ.

ಈ ಶಾಲೆಯಲ್ಲಿ ಅಂಧ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ವಸತಿಯುತ ಶಾಲೆಯಾಗಿರುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಿಗದಿಪಡಿಸಿರುವ ಸಾಮಾನ್ಯ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣವನ್ನೇ ಇಲ್ಲಿಯೂ ಭೋದಿಸುವುದರ ಜೊತೆಗೆ ಬೈಲ್ ಲಿಪಿಯನ್ನು ಅಳವಡಿಸಿಲಾಗಿದೆ.

ಶೈಕ್ಷಣಿಕ ಅವಧಿಯಲ್ಲಿ ಅಂಧ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಾದ Daily Living Skills(DLS), ಯೋಗ, ದೈಹಿಕ ಶಿಕ್ಷಣ, ಸಂಗೀತ, ಡ್ಯಾನ್ಸ್ ಚಲನ-ವಲನ ತರಬೇತಿ, ಕಂಪ್ಯೂಟರ್ ತರಬೇತಿ, ಒಳಾಂಗಣ ಹಾಗೂ ಹೊರಾಂಗಣ ಆಟಗಳು, ಬ್ರೈಲ್ ಪುಸ್ತಕಗಳು, ಶಾಲಾ ಸಮವಸ್ತ್ರ, ಕಲಿಕಾ ಉಪಕರಣಗಳು, ವೈದ್ಯಕೀಯ ತಪಾಸಣೆಗಳು, ಕರಕುಶಲ ಕಾರ್ಯ ಚಟುವಟಿಕೆಗಳನ್ನು ಕಳಿಸಲಾಗುವುದು.

ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿರುವ ದೃಷ್ಟಿ ವಿಕಲಚೇತನ ಮಕ್ಕಳು ಕಂಡು ಬಂದಲ್ಲಿ ಅವರ ಪೋಷಕರಿಗೆ ನಮ್ಮ ಶಾಲೆಯ ಬಗ್ಗೆ ಮಾಹಿತಿ ನೀಡಿ ಶೇ.40 ಕ್ಕಿಂತ ಹೆಚ್ಚಿನ ದೃಷ್ಟಿದೋಷ ಹೊಂದಿರುವ ಮಕ್ಕಳು ನಮ್ಮ ಸರ್ಕಾರಿ ಶಾಲೆಗೆ ದಾಖಲಾಗುವಂತೆ ಮಾಡಿ ವಿಕಲಚೇತನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಾಲೆಯ ಮುಖ್ಯೋಪಾಧ್ಯಾಯರು, ಅಧೀಕ್ಷರಾದ ಗಂಗಾಧರಪ್ಪ.ಹೆಚ್.ಎನ್ ಮೊ.ಸಂ: 9984534883, 08182-250442 ಸಂಪರ್ಕಿಸಬಹುದೆAದು ಇಲಾಖೆಯ ಅಧೀಕ್ಷಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending