ದಿನದ ಸುದ್ದಿ
ಈ ಹೋರಾಟ ಚಾರಿತ್ರಿಕ ಮತ್ತು ನಿರ್ಣಾಯಕ
- ನಾ ದಿವಾಕರ
ಭಟ್ಟಂಗಿ ಮಾಧ್ಯಮಗಳು, ವಂದಿಮಾಗಧ ಪತ್ರಿಕೋದ್ಯಮಿಗಳು, ನಿಷ್ಕ್ರಿಯ ಮತ್ತು ನಿರ್ವೀರ್ಯ ಸುದ್ದಿಮನೆಗಳು, ಗೋಸುಂಬೆ ರಾಜಕೀಯ ನಾಯಕರು, ಸಮಯಸಾಧಕ ಪ್ರಾದೇಶಿಕ ಪಕ್ಷಗಳು ಮತ್ತು ನಿರ್ಲಜ್ಜ ಆಡಳಿತ ವ್ಯವಸ್ಥೆ – ಇವಿಷ್ಟೂ ಅಧ್ವಾನಗಳ ನಡುವೆ ಡಿಸೆಂಬರ್ 8 2020 ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ದಿನವಾಗಿ ಹೊರಹೊಮ್ಮಲು ಸಜ್ಜಾಗಿದೆ.
ಕಳೆದ ಹಲವು ತಿಂಗಳುಗಳಿಂದ ದೇಶದ ರೈತ ಸಮುದಾಯದಲ್ಲಿ ಮಡುಗಟ್ಟಿದ್ದ ಆಕ್ರೋಶ ಮತ್ತು ನೋವು ಒಮ್ಮೆಲೆ ಹೊರಚೆಲ್ಲುತ್ತಿರುವುದನ್ನು ದೆಹಲಿಯಲ್ಲಿ ಮತ್ತು ದೇಶದ ಎಲ್ಲ ರಾಜ್ಯಗಳಲ್ಲೂ ಕಾಣುತ್ತಿದ್ದೇವೆ. ತನ್ನ ತೋಳ್ಬಲದಿಂದ ಮತ್ತು ಸಮೂಹ ಸನ್ನಿಯ ಉನ್ಮಾದದ ಮೂಲಕ ರೈತ ಹೋರಾಟವನ್ನು ನಿಷ್ಕ್ರಿಯಗೊಳಿಸಬಹುದು ಎಂಬ ಭ್ರಮೆಗೊಳಗಾಗಿದ್ದ ನರೇಂದ್ರ ಮೋದಿ ಸರ್ಕಾರಕ್ಕೆ ದಿಕ್ಕುತೋಚದಂತಾಗಿದೆ.
ರೈತರ ಮುಷ್ಕರ ಏಕೆ ಇಷ್ಟು ಯಶಸ್ವಿಯಾಗಿದೆ, ಹೇಗೆ ಇಷ್ಟು ದಿಟ್ಟತನದಿಂದ ಮುಂದುವರೆದಿದೆ ಎನ್ನುವ ಜಿಜ್ಞಾಸೆ ಎಲ್ಲರನ್ನೂ ಕಾಡುತ್ತಿರಬಹುದು. ಏಕೆಂದರೆ ಭಾರತದಲ್ಲಿ ಮುಷ್ಕರಗಳು, ಪ್ರತಿಭಟನೆಗಳು ಇತಿಹಾಸವನ್ನೇ ಸೃಷ್ಟಿಸಿರುವ ಸಂದರ್ಭಗಳನ್ನು ನೋಡಿದ್ದೇವೆ. ಬ್ಯಾಂಕ್ ನೌಕರರೂ ಒಂದು ಕಾಲಘಟ್ಟದಲ್ಲಿ ಮೂರು ದಿನಗಳ ಮುಷ್ಕರ ನಡೆಸಿದ್ದರು. 1970ರ ದಶಕದ ರೈಲ್ವೆ ನೌಕರರ ಮುಷ್ಕರ ಚಾರಿತ್ರಿಕವಾಗಿತ್ತು. ಕೋಲಾರ ಚಿನ್ನದ ಗಣಿ ಕಾರ್ಮಿಕರು ದಿನಗಟ್ಟಲೆ ಮುಷ್ಕರ ನಡೆಸಿದ ದೃಷ್ಟಾಂತವಿದೆ. ಆದರೆ ಕಳೆದ ಮೂರು ದಶಕಗಳಲ್ಲಿ, ಎಲ್ಲ ರೀತಿಯ ಹೋರಾಟ, ಚಳುವಳಿ, ಪ್ರತಿಭಟನೆಗಳು ತಾತ್ವಿಕ ಅಂತ್ಯ ಕಾಣುವಲ್ಲಿ ವಿಫಲವಾಗಿರುವ ನಿದರ್ಶನಗಳೇ ಹೆಚ್ಚು.
ಆದರೆ ಈ ಬಾರಿಯ ಮುಷ್ಕರ ನಿರ್ಣಾಯಕ ಹಂತ ತಲುಪುತ್ತಿರುವಂತೆ ತೋರುತ್ತಿದೆ. ನವಂಬರ್ 26ರ ಕಾರ್ಮಿಕ ಮುಷ್ಕರವೂ ಅಭೂತಪೂರ್ವ ಯಶಸ್ಸು ಕಂಡಿದ್ದನ್ನು ಗಮನಿಸಬಹುದು. ದೆಹಲಿಯಲ್ಲಿ ನೆರೆದಿರುವ ಲಕ್ಷಾಂತರ ರೈತರ ಪ್ರತಿರೋಧದ ಧ್ವನಿ ಒಂಟಿದನಿಯಾಗಬಹುದು ಎನ್ನುವ ಆಳುವ ವರ್ಗಗಳ ನಿರೀಕ್ಷೆ ಹುಸಿಯಾಗಿದೆ. ರೈತಾಪಿಯ ನೋವಿನ ದನಿಗೆ ಇಡೀ ದೇಶವೇ ಮಿಡಿಯುತ್ತಿದೆ. ಎಲ್ಲ ವರ್ಗಗಳ ಜನರೂ ಸ್ಪಂದಿಸುತ್ತಿದ್ದಾರೆ.
ಮೊಟ್ಟಮೊದಲ ಬಾರಿಗೆ ಬ್ಯಾಂಕ್ ಅಧಿಕಾರಿಗಳ ಸಂಘಗಳು ಈ ರೀತಿಯ ಒಂದು ಸಾರ್ವಜನಿಕ ಮುಷ್ಕರಕ್ಕೆ ಬೆಂಬಲಿಸಿ ಜಂಟಿ ಹೇಳಿಕೆ ನೀಡಿವೆ. ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರು ರೈತಾಪಿಯೊಡನೆ ಐಕಮತ್ಯ ಪ್ರದರ್ಶಿಸಿದ್ದಾರೆ. ಬಿಎಸ್‍ಎನ್‍ಎಲ್ ನೌಕರರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷ ರಾಜಕಾರಣದ ದಾಸ್ಯದ ಸಂಕೋಲೆಗಳಲ್ಲಿ ಬಂಧಿಸಲ್ಪಟ್ಟಿರುವವರನ್ನು ಹೊರತುಪಡಿಸಿ ಎಲ್ಲ ಪ್ರಜ್ಞಾವಂತ ಪ್ರಜೆಗಳೂ ಭಾರತದ ರೈತಾಪಿಯೊಡನೆ ಕೈಜೋಡಿಸುತ್ತಿರುವುದೇ ಇಂದಿನ ಮುಷ್ಕರಕ್ಕೆ ತಾತ್ವಿಕ ಸ್ಪರ್ಶ ನೀಡಿದೆ.
ಈ ಮುಷ್ಕರಕ್ಕೆ ಬೆಂಬಲ ಹೆಚ್ಚಾಗಿರುವುದಕ್ಕಿಂತಲೂ ಇದನ್ನು ವಿಫಲಗೊಳಿಸಲು ಕೇಂದ್ರ ಸರ್ಕಾರ ಮತ್ತು ಅದರ ಮಾಧ್ಯಮ ಮಿತ್ರರು ನಡೆಸಿರುವ ಅಪಪ್ರಚಾರವೇ ಮುಷ್ಕರದ ಸಾರ್ಥಕತೆಯನ್ನು ಬಿಂಬಿಸುತ್ತದೆ. ನಿಜ, ಪ್ರಸ್ತುತ ಮುಷ್ಕರದಲ್ಲಿ ಎಲ್ಲ ರಾಜ್ಯಗಳ ರೈತ ಸಮುದಾಯ ಸಂಪೂರ್ಣವಾಗಿ ಪಾಲ್ಗೊಂಡಿಲ್ಲ. ಇದು ಕೇವಲ ಶ್ರೀಮಂತ ರೈತರ, ಭೂಮಾಲಿಕರ ಪರ ಇರುವ ಮುಷ್ಕರ ಎಂಬ ಆರೋಪವೂ ಇದೆ. ಸಣ್ಣ ಮತ್ತು ಅತಿ ಸಣ್ಣ ರೈತರ ಹಿತಾಸಕ್ತಿಯನ್ನು ಪ್ರತಿನಿಧಿಸಲಾಗುತ್ತಿಲ್ಲ ಎನ್ನುವ ಆರೋಪವೂ ಇದೆ. ಈ ಸೂಕ್ಷ್ಮ ದರ್ಶಕ ಮಸೂರಗಳನ್ನು ಬಳಸುವವರಿಗೆ ಭಾರತದ ಕೃಷಿ ವ್ಯವಸ್ಥೆಯ ಸ್ವರೂಪವೇ ಅರ್ಥವಾಗಿಲ್ಲ ಎಂದು ಹೇಳಬೇಕಾದೀತು.
ಭಾರತದಲ್ಲಿ ಶೇ 86 ರಷ್ಟು ರೈತರು ಸಣ್ಣ ಹಿಡುವಳಿದಾರರು, ಐದು ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿರುವವರು. ಈ ರೈತಾಪಿಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಸ್ವಾಮಿನಾಥನ್ ಆಯೋಗ ಕೇಂದ್ರ ಸರ್ಕಾರ ಹಲವಾರು ಶಿಫಾರಸುಗಳನ್ನು ಮಾಡಿದೆ. ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ನಗರೀಕರಣ ಪ್ರಕ್ರಿಯೆಯಿಂದಲೇ ಈ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಅಲ್ಪ ಪ್ರಮಾಣ ಭೂಮಿಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಇಂದು ನಡೆಯುತ್ತಿರುವ ಮುಷ್ಕರದಲ್ಲಿ ಈ ರೈತರ ದನಿ ಕೇಳಿಸುತ್ತಿದ್ದೆಯೇ ಎಂಬ ಪ್ರಶ್ನೆಯೇ ಅಸಂಬದ್ಧವಾದದ್ದು. ಏಕೆಂದರೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಮಸೂದೆಗಳು ರೈತರ ಅಸ್ತಿತ್ವಕ್ಕೇ ಸಂಚಕಾರ ತರುವಂತಹ ಕಾಯ್ದೆಗಳು.
ಭಾರತದಲ್ಲಿ ಜಾರಿಗೆ ತಂದಿರುವ ಭೂ ಸುಧಾರಣಾ ಕ್ರಮಗಳು ಮತ್ತು ಹಸಿರು ಕ್ರಾಂತಿ ಮೂಲತಃ ದೊಡ್ಡ ರೈತರಿಗೆ ನೆರವಾಗಿರುವುದೇ ಹೆಚ್ಚು ಎನ್ನುವುದು ಸತ್ಯ. ಭಾರತದ ಆಳುವ ವರ್ಗಗಳಿಗೆ ಇಲ್ಲಿನ ಊಳಿಗಮಾನ್ಯ ವ್ಯವಸ್ಥೆಯನ್ನು ಸಂಪೂರ್ಣ ಹೋಗಲಾಡಿಸುವ ಇರಾದೆ ಅಂದಿಗೂ ಇರಲಿಲ್ಲ, ಇಂದಿಗೂ ಇಲ್ಲ.
ಇಂದು ದೇಶವನ್ನು ಕಾಡುತ್ತಿರುವ ಅರೆ ಊಳಿಗಮಾನ್ಯ ವ್ಯವಸ್ಥೆ ಕೃಷಿಕ ಸಮುದಾಯದಲ್ಲೇ ಸಮಾಜೋ ಆರ್ಥಿಕ ತಾರತಮ್ಯ ಮತ್ತು ಅಂತರಗಳನ್ನು ಹಿಗ್ಗಿಸುತ್ತಿರುವುದನ್ನೂ ಗಮನಿಸಬಹುದು. ಸಣ್ಣ ರೈತರು ಮತ್ತು ಭೂಮಾಲಿಕರ ನಡುವಿನ ಸಂಘರ್ಷವೂ ಹಲವು ಸಂದರ್ಭಗಳಲ್ಲಿ ತಾರಕಕ್ಕೇರಿರುವುದನ್ನೂ ಕಂಡಿದ್ದೇವೆ. ಈ ಸಂಘರ್ಷದ ನೆಲೆಯಲ್ಲೇ ಸೂಕ್ಷ್ಮವಾಗಿ ಗಮನಿಸಿದಾಗ ಭೂಹೀನ ಕೃಷಿಕರು ಮತ್ತು ಕೃಷಿ ಕಾರ್ಮಿಕರು ಸಂಪೂರ್ಣವಾಗಿ ಅವಕಾಶವಂಚಿತರಾಗಿರುವುದನ್ನೂ ಗಮನಿಸಬಹುದು.
ಜಾಗತೀಕರಣದ ನಂತರ, 1991 ರಿಂದ 2004ರ ಅವಧಿಯಲ್ಲಿ ದೇಶದಲ್ಲಿ ಭೂ ಹೀನ ಕುಟುಂಬಗಳ ಸಂಖ್ಯೆ ಶೇ 12ರಷ್ಟು ಹೆಚ್ಚಾಗಿರುವುದನ್ನು ಗಮನಿಸಿದರೆ, ನವ ಉದಾರವಾದಿ ಯುಗದಲ್ಲಿ ನಗರೀಕರಣ, ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಗ್ರಾಮೀಣ ವಲಸೆಯ ಪ್ರಕ್ರಿಯೆಗಳು ಹೇಗೆ ಕೃಷಿ ಸಮುದಾಯವನ್ನು ಅಂಚಿಗೆ ತಳ್ಳುವುದಕ್ಕೆ ಕಾರಣವಾಗಿದೆ ಎನ್ನುವುದನ್ನು ಗ್ರಹಿಸಬಹುದು. ಭಾರತದಲ್ಲಿ ಒಟ್ಟು ಶೇ 38ರಷ್ಟು ಕೃಷಿ ಕುಟುಂಬಗಳು ಭೂಹೀನರಾಗಿವೆ. ದೊಡ್ಡ ಹಿಡುವಳಿದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪಂಜಾಬ್ ನಲ್ಲಿ ಶೇ 45ರಷ್ಟು ಭೂಹೀನ ಕುಟುಂಬಗಳಿವೆ. ದಕ್ಷಿಣದ ರಾಜ್ಯಗಳಲ್ಲಿ ಇದರ ಪ್ರಮಾಣ ಶೇ 50ಕ್ಕಿಂತಲೂ ಹೆಚ್ಚಾಗಿದೆ.
ಎಪಿಎಂಸಿ ಕಾರ್ಯನಿರ್ವಹಣೆಯಲ್ಲಿದ್ದ ದೋಷಗಳನ್ನು ಸರಿಪಡಿಸುವುದು ಸರ್ಕಾರದ ಆದ್ಯತೆಯಾಗಬೇಕಿತ್ತು. ಆದರೆ ಗುತ್ತಿಗೆ ಕೃಷಿಗೆ ಅವಕಾಶ ನೀಡುವ ಮೂಲಕ ಕಾರ್ಪೋರೇಟ್ ದಲ್ಲಾಳಿಗಳಿಗೆ ರೈತರ ಭೂಮಿ ಮತ್ತು ಬೆಳೆ ಎರಡರ ಮೇಲೂ ಅಧಿಪತ್ಯ ಸಾಧಿಸಲು ಮುಕ್ತ ಅವಕಾಶ ನೀಡಲಾಗುತ್ತಿದೆ.
ರೈತರು ಬೆಳೆಯುವ ಬೆಳೆ, ಬೆಳೆಯ ಪ್ರಮಾಣ ಮತ್ತು ಕೊಳ್ಳುವ ಬೆಲೆ ಇವೆಲ್ಲವನ್ನೂ ಪೂರ್ವನಿರ್ಧರಿತ ಒಪ್ಪಂದದ ಮೂಲಕ ಕಾರ್ಪೋರೇಟ್ ಉದ್ಯಮಿಗಳು ನಿರ್ಧರಿಸುತ್ತಾರೆ. ಭಾರತದಲ್ಲಿ ಎಷ್ಟು ರೈತರಿಗೆ ಈ ಮಾರುಕಟ್ಟೆ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ? ಎಪಿಎಂಸಿ ವ್ಯವಸ್ಥೆಯಲ್ಲಿ ದಲ್ಲಾಳಿಗಳ ಉಪಟಳ ಹೆಚ್ಚಾಗಿತ್ತು ಎನ್ನುವುದು ವಾಸ್ತವ. ಆದರೆ ನೂತನ ಕೃಷಿ ಕಾಯ್ದೆಗಳು ಗುತ್ತಿಗೆ ಕೃಷಿ ಪದ್ಧತಿಯ ಮೂಲಕ ಕಾರ್ಪೋರೇಟ್ ದಲ್ಲಾಳಿಗಳಿಗೆ ಮುಕ್ತ ಅವಕಾಶ ಒದಗಿಸುತ್ತಿದೆ.
ಮತ್ತೊಂದೆಡೆ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಬಳಕೆಯಾಗುವ ಕೃಷಿ ಉತ್ಪನ್ನಗಳನ್ನು ಅವಶ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆಯ ಮೂಲಕ ಮುಕ್ತಗೊಳಿಸಲಾಗುತ್ತಿದೆ. ಆಹಾರ ಧಾನ್ಯಗಳು, ಬೇಳೆ ಕಾಳುಗಳು, ಈರುಳ್ಳಿ, ಆಲೂಗಡ್ಡೆ, ಅಡುಗೆ ಎಣ್ಣೆ ಮತ್ತು ಎಣ್ಣೆ ಬೀಜ ಇವೆಲ್ಲವೂ ಅವಶ್ಯ ವಸ್ತುಗಳ ಪರಿಧಿಯಿಂದ ಹೊರತಾಗುತ್ತವೆ.
ಈ ಪದಾರ್ಥಗಳನ್ನು ಸಗಟು ಮಾರುಕಟ್ಟೆಯಲ್ಲಿ ಖರೀದಿಸಿ ದಾಸ್ತಾನು ಮಾಡುವ ಸಾಮಥ್ಯ ಇರುವ ಕಾರ್ಪೋರೇಟ್ ಉದ್ಯಮಿಗಳು, ಮಾರುಕಟ್ಟೆಯಲ್ಲಿ ಈ ಪದಾರ್ಥಗಳ ಬೆಲೆಗಳನ್ನೂ ನಿಯಂತ್ರಿಸಲು ಸುಲಭವಾಗುತ್ತದೆ. ಒಂದೆಡೆ ಬೆಳೆಯನ್ನು ನಿಯಂತ್ರಿಸುವ ಕಾರ್ಪೋರೇಟ್ ಉದ್ಯಮಗಳು ಮತ್ತೊಂದೆಡೆ ಮಾರುಕಟ್ಟೆ ಬೆಲೆಯನ್ನೂ ನಿರ್ಧರಿಸುತ್ತವೆ. ಶ್ರೀಮಂತ ರೈತರು ಕೊಂಚಮಟ್ಟಿಗೆ ಈ ಪ್ರಹಾರವನ್ನು ಸಹಿಸಿಕೊಳ್ಳಬಹುದಾದರೂ, ಸಣ್ಣ ಮತ್ತು ಅತಿಸಣ್ಣ ರೈತರು ನಶಿಸಿಹೋಗುತ್ತಾರೆ. ತಮ್ಮ ಭೂಮಿಯನ್ನೂ ಕಳೆದುಕೊಳ್ಳುತ್ತಾರೆ.
ಈಗಿರುವ ಅರೆ ಊಳಿಗಮಾನ್ಯ ವ್ಯವಸ್ಥೆಯಲ್ಲೇ ಸಣ್ಣ ಹಿಡುವಳಿದಾರರು , ಭೂ ಹೀನರು ಮತ್ತು ಕೃಷಿ ಕಾರ್ಮಿಕರು ಸುಸ್ಥಿರ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ಮೂರು ದಶಕಗಳಲ್ಲಿ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಹೆಚ್ಚಾಗಿರುವುದಕ್ಕೂ ಇದೇ ಕಾರಣ ಎನ್ನುವುದೂ ಸ್ಪಷ್ಟ. ಲಾಕ್ ಡೌನ್ ಸಂದರ್ಭದಲ್ಲಿ ಇದರ ಪ್ರಾತ್ಯಕ್ಷಿಕೆಯನ್ನೇ ನೋಡಿದ್ದೇವೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಮುಷ್ಕರವನ್ನು ಗಮನಿಸಿದಾಗ ಇದು ಸಮಸ್ತ ಭಾರತೀಯರನ್ನು ಪ್ರತಿನಿಧಿಸುವ ಮುಷ್ಕರ ಎನಿಸುವುದಿಲ್ಲವೇ ? ನಗರಗಳ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಪೋರೇಟ್ ಉದ್ಯಮಿಗಳು ತೋರುವ ಆಮಿಷಗಳಿಗೆ ಬಲಿಯಾಗಿ ತಮ್ಮ ಅಲ್ಪ ಭೂಮಿಯನ್ನೂ ಕಳೆದುಕೊಂಡಿರುವ ನಿದರ್ಶನಗಳು ನಮ್ಮ ಮುಂದೆ ಹೇರಳವಾಗಿವೆ. ಹೊಸ ಮಸೂದೆಗಳು ಈ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತವೆ.
ಕನಿಷ್ಟ ಬೆಂಬಲ ಬೆಲೆಯನ್ನು ರದ್ದುಪಡಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ, ನೂತನ ಕಾಯ್ದೆಯಲ್ಲಿ ಈ ಭರವಸೆಯ ಅಂಶವನ್ನು ಕಾಣಲಾಗುತ್ತಿಲ್ಲ. ಎಪಿಎಂಸಿ ಮತ್ತು ಮಂಡಿ ಪದ್ಧತಿಯೂ ಕ್ರಮೇಣ ಇಲ್ಲವಾಗುತ್ತದೆ. ರೈತರು ತಮ್ಮ ಫಸಲನ್ನು ಮಾರಾಟ ಮಾಡಲು ಕಾರ್ಪೋರೇಟ್ ಉದ್ಯಮಿಗಳನ್ನೇ ಅವಲಂಬಿಸಬೇಕಾಗುತ್ತದೆ.
ಕೃಷಿ ಭೂಮಿಯ ಮೇಲೆ ತಮ್ಮ ಹಿಡಿತ ಸಾಧಿಸುವ ಕಾರ್ಪೋರೇಟ್ ವಲಯ ಮಾರುಕಟ್ಟೆಗೆ ಅವಶ್ಯವಾದ ಪದಾರ್ಥಗಳನ್ನು ಬೆಳೆಯಲು ಮುಂದಾಗುತ್ತವೆ. ಜನಸಾಮಾನ್ಯರ ನಿತ್ಯ ಬದುಕಿಗೆ ಅವಶ್ಯವಾದ ವಸ್ತುಗಳನ್ನು ಉತ್ಪಾದಿಸುವುದಿಲ್ಲ. ಇದು ಜನಸಾಮಾನ್ಯರನ್ನು ಬಾಧಿಸುವುದಿಲ್ಲವೇ ? ಈ ಬೆಳವಣಿಗೆಗಳು ನೇರವಾಗಿ ಕೃಷಿಗೆ ಸಂಬಂಧವಿಲ್ಲದ ನಗರ ಮತ್ತು ಪಟ್ಟಣ ಕೇಂದ್ರಿತ ಜನತೆಯನ್ನು ಬಾಧಿಸುವುದಿಲ್ಲವೇ ?
ಭೂ ಹೀನರ, ಕೃಷಿ ಕಾರ್ಮಿಕರ ಮತ್ತು ಗ್ರಾಮೀಣ ಬಡಜನತೆಯ ಸಮಸ್ಯೆಗಳು ಈ ಮಸೂದೆಗಳಿಂದ ಪರಿಹಾರವಾಗುವುದೇ ? ಇನ್ನೂ ಬಿಗಡಾಯಿಸುತ್ತವೆ. ಏಕೆಂದರೆ ಕೃಷಿಕರಿಗೇ ತಮ್ಮ ಅಹವಾಲು ಸಲ್ಲಿಸುವ ಸಾಂಸ್ಥಿಕ ನೆಲೆಗಳು ಇಲ್ಲವಾಗುತ್ತವೆ. ಗುತ್ತಿಗೆ ಕೃಷಿ ವ್ಯವಸ್ಥೆಯಲ್ಲಿ ಫಸಲನ್ನು ಕೊಳ್ಳುವವನೇ ನ್ಯಾಯ ನಿರ್ಣಯ ಮಾಡುವ ಅಧಿಕಾರವನ್ನೂ ಹೊಂದಿರುತ್ತಾನೆ.
ಸರ್ಕಾರಗಳು, ಆಡಳಿತ ವ್ಯವಸ್ಥೆ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡು ದೇಶದ ಸಮಸ್ತ ರೈತ ಸಮುದಾಯವನ್ನು ಕಾರ್ಪೋರೇಟ್ ಮರ್ಜಿಗೆ ಒಳಪಡಿಸುತ್ತದೆ. ಈ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಾದರೆ ಭರಿಸುವವರು ಯಾರು ? ಈ ಮಸೂದೆಗೆ ಅವಕಾಶ ನೀಡಿದರೆ ಕ್ರಮೇಣ ಸಾರ್ವಜನಿಕ ಪಡಿತರ ವ್ಯವಸ್ಥೆಯೂ ಇಲ್ಲವಾಗುತ್ತದೆ. ಏಕೆಂದರೆ ಸರ್ಕಾರ ಕೃಷಿ ಫಸಲನ್ನು ಖರೀದಿಸಿ, ದಾಸ್ತಾನು ಮಾಡಿ, ಬಡ ಜನತೆಗೆ ವಿತರಿಸುವ ಹೊಣೆಯಿಂದ ಮುಕ್ತವಾಗುತ್ತದೆ. ಇದು ಜನಸಾಮಾನ್ಯರನ್ನು ಬಾಧಿಸುವುದಿಲ್ಲವೇ ?
ದೆಹಲಿಯಲ್ಲಿ ನೆರೆದಿರುವ ಲಕ್ಷಾಂತರ ರೈತರ ನಡುವೆ ಖಲಿಸ್ತಾನಿಗಳು, ದಲ್ಲಾಳಿಗಳು, ದೇಶದ್ರೋಹಿಗಳು, ನಗರ ನಕ್ಸಲರು ಮತ್ತು ರಾಜಕೀಯ ವಿರೋಧಿಗಳನ್ನು ಗುರುತಿಸುವ ಮುನ್ನ, ಪ್ರಜ್ಞಾವಂತ ಜನತೆ ತಮ್ಮನ್ನು ಮುಷ್ಕರದ ಒಂದು ಭಾಗವಾಗಿ ಗುರುತಿಸಿಕೊಂಡರೆ ಉಜ್ವಲ ಭವಿಷ್ಯವನ್ನು ಕಾಣಲು ಸಾಧ್ಯ.
ಏಕೆಂದರೆ ನವ ಉದಾರವಾದಿ ಆರ್ಥಿಕ ನೀತಿಗಳು ಬೆಟ್ಟದಿಂದ ಉರುಳುವ ಹೆಬ್ಬಂಡೆಯಂತೆ ಎಲ್ಲವನ್ನೂ ಇಲ್ಲವಾಗಿಸುತ್ತದೆ. 1991ರಲ್ಲಿ ಕೈಗಾರಿಕೆಗಳಿಂದ ಆರಂಭವಾದ ಮಾರಾಟ ಪ್ರಕ್ರಿಯೆ ಈಗ ಕೃಷಿ ಭೂಮಿಯವರೆಗೂ ತಲುಪಿದೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿದಾಗ ನಿರ್ಲಿಪ್ತರಾಗಿದ್ದ ಬ್ಯಾಂಕ್, ವಿಮೆ, ಸಾರಿಗೆ ಮತ್ತು ದೂರ ಸಂಪರ್ಕ ಕ್ಷೇತ್ರದ ನೌಕರರು ಈಗ ತಮ್ಮ ಅಡಿಪಾಯವೇ ಕುಸಿಯುತ್ತಿರುವುದನ್ನು ಮನಗಾಣುತ್ತಿದ್ದಾರೆ.
ಕೃಷಿ ಮಸೂದೆಯೂ ಹೀಗೆಯೇ ಬಾಧಿಸುತ್ತದೆ. ಇಂದು ನೀರಾವರಿ ಸೌಲಭ್ಯ ಇರುವ, ಬಲಾಢ್ಯ ರೈತರನ್ನು ಬಾಧಿಸುವ ಕೃಷಿ ನೀತಿ ಮುಂದಿನ ದಿನಗಳಲ್ಲಿ ಸಣ್ಣ ರೈತರನ್ನು ನಿರ್ನಾಮ ಮಾಡುತ್ತದೆ. ಕೃಷಿ ಕಾರ್ಮಿಕರನ್ನು ನಿರ್ಗತಿಕರನ್ನಾಗಿ ಮಾಡುತ್ತದೆ. ನಗರೀಕರಣ ಪ್ರಕ್ರಿಯೆ ಚುರುಕುಗೊಂಡ ಸಂದರ್ಭದಲ್ಲೇ ತಮ್ಮ ಭೂಮಿಯನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತರಾಗದ ಬೃಹತ್ ರೈತ ಸಮುದಾಯ ಇಂದು ಕಂಗಾಲಾಗಿರುವುದನ್ನು ಗಮನಿಸುತ್ತಲೇ ಇದ್ದೇವೆ. ಹೊಸ ಕೃಷಿ ಮಸೂದೆಗಳು ಈ ರೈತ ಸಮುದಾಯವನ್ನು ಮತ್ತಷ್ಟು ಅಂಚಿಗೆ ತಳ್ಳುತ್ತವೆ. ಈ ಕಾರಣಕ್ಕಾಗಿಯೇ ಸಮಸ್ತ ರೈತ ಸಮುದಾಯ ಇಂದಿನ ಮುಷ್ಕರಕ್ಕೆ ದನಿಗೂಡಿಸುತ್ತಿದೆ.
ಇದು ಕೇವಲ ರೈತರ ಪ್ರಶ್ನೆ ಎನ್ನುವ ನಿರ್ಲಕ್ಷ್ಯ ಭಾರತದ ಹಿತವಲಯದ ಮಧ್ಯಮ ವರ್ಗಗಳಿಗೆ ಅಪಾಯಕಾರಿಯಾಗುತ್ತದೆ. ದೇಶದ ಆರ್ಥಿಕತೆಯ ಬೆನ್ನೆಲುಬು ಕಾರ್ಪೋರೇಟ್ ವಶವಾಗುತ್ತಿದೆ. ಔದ್ಯಮಿಕ ವಲಯ ಈಗಾಗಲೇ ಕಾರ್ಪೋರೇಟ್ ವಶದಲ್ಲಿದೆ. ಹಣಕಾಸು ಕ್ಷೇತ್ರ ಕ್ರಮೇಣ ಜಾರಿ ಹೋಗುತ್ತಿದೆ.
ನಾವು ಚುನಾಯಿಸುವ ಸರ್ಕಾರಗಳು ಈ ಎಲ್ಲ ಕಾರ್ಪೋರೇಟ್ ವ್ಯವಹಾರಗಳನ್ನು ನಿರ್ವಹಿಸುವ ಒಂದು ಪ್ರಬಂಧಕ ಸಂಸ್ಥೆಯಾಗಿಬಿಡುತ್ತದೆ. ಇಡೀ ಅರ್ಥವ್ಯವಸ್ಥೆ ಮಾರುಕಟ್ಟೆ ವಶವಾಗುತ್ತದೆ. ಈ ಅವ್ಯವಸ್ಥೆಯ ನಡುವೆಯೇ ನಾವು ಭಾರತವೆಂಬೋ ದೇಶದಲ್ಲಿ ದೇಶಪ್ರೇಮ, ದೇಶಭಕ್ತಿಯ ಭಜನೆ ಮಾಡುತ್ತಾ ಮತ್ತೊಮ್ಮೆ ಔದ್ಯಮಿಕ ಜಗತ್ತಿನ ದಾಸ್ಯಕ್ಕೊಳಗಾಗಬೇಕಾಗುತ್ತದೆ. ಸ್ವಾತಂತ್ರ್ಯ ಪೂರ್ವದ ಪರಿಸ್ಥಿತಿಗೆ ಮರಳುತ್ತೇವೆ.
ಹಾಗಾಗಿಯೇ ಈ ಮುಷ್ಕರ ನಿರ್ಣಾಯಕವಾಗುತ್ತದೆ. ಚಾರಿತ್ರಿಕ ಎನಿಸಿಕೊಳ್ಳುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆಯಡಿ ವಿವಿಧ ಯೋಜನೆಗಳಾದ ಸಾಫ್ಟ್ ಸೀಡ್ ಕ್ಯಾಪಿಟಲ್, ಶೇ.60 ರಷ್ಟು ಸಹಾಯಧನ ಸಾಲ ಶುಲ್ಕ ಮರುಪಾವತಿ ಮತ್ತು ವಿದ್ಯುಚ್ಚಕ್ತಿ ಸಹಾಯಧನ ಯೋಜನೆಯಡಿ ಅರ್ಹ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಈಗಾಗಲೇ ಬ್ಯಾಂಕಿನಿಂದ ಸಾಲ ಪಡೆದು ಘಟಕಗಳನ್ನು ಸ್ಥಾಪಿಸಿರುವ ಅರ್ಹ ಉದ್ದಿಮೆದಾರರು ಹಾಗೂ ಬ್ಯಾಂಕ ಸಾಲ ಪಡೆದು ಉದ್ದಿಮೆ ಸ್ಥಾಪಿಸಲು ಇಚ್ಚಿಸಿರುವ ಉದ್ದಿಮೆದಾರರು ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಪಿ.ಬಿ ರಸ್ತೆ ದಾವಣಗೆರೆ ಇವರನ್ನು ಸಂಪರ್ಕಿಸಬಹುದೆಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ದಿನದ ಸುದ್ದಿ
ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
- ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
- ಇಂಡಿಯಾ ಗೇಟ್‌ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
- NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
- “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.
CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.
http://Visit : www.suddidina.com
ಇಂಡಿಯಾ ಗೇಟ್‌ನಿಂದ ಮೆರವಣಿಗೆ
ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.
ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.
‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’
ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.
“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.
“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ”
|
ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ
ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.
ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.
ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್‌ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

ದಿನದ ಸುದ್ದಿ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
329 ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ವಿಚಾರಣಾ ನೋಟಿಸ್
-
658 OMR ಕಾರ್ಬನ್ ಶೀಟ್‌ಗಳು FSLಗೆ
-
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ED ಗಂಭೀರ ಆರೋಪ
-
₹70–80 ಲಕ್ಷ ಲಂಚದ ಆರೋಪವೂ ತನಿಖೆಯಲ್ಲಿದೆ
-
ಪ್ರಶ್ನೆಪತ್ರ ಸಿದ್ಧತೆ, ಮುದ್ರಣದ CCTV ದೃಶ್ಯಗಳ ಬಗ್ಗೆಯೂ ಅನುಮಾನ
ಸುದ್ದಿದಿನ,ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯ (ED) ರಾಜ್ಯದ ವಿವಿಧೆಡೆ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಅದರ ಬೆನ್ನಲ್ಲೇ ಅಪರಾಧ ತನಿಖಾ ಇಲಾಖೆ (CID) ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
http://Visit : www.suddidina.com
329 ಅಭ್ಯರ್ಥಿಗಳಿಗೆ ನೋಟಿಸ್ ಏಕೆ?
ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಈಗಾಗಲೇ 658 OMR ಕಾರ್ಬನ್ ಶೀಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಮೂಲ OMR ಉತ್ತರ ಪತ್ರಿಕೆಗಳೊಂದಿಗೆ ಹೋಲಿಕೆ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಅಭ್ಯರ್ಥಿಗಳು ಗುರುತಿಸಿದ್ದ ಉತ್ತರಗಳ ಕಾರ್ಬನ್ ಪ್ರತಿಯಲ್ಲಿ ಮತ್ತು ಮೂಲ OMRನಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ಪರಿಶೀಲಿಸುವುದು ತನಿಖೆಯ ಪ್ರಮುಖ ಭಾಗವಾಗಿದೆ.
ಇದೀಗ 329 ಅಭ್ಯರ್ಥಿಗಳನ್ನೂ ವಿಚಾರಣೆಗೆ ಒಳಪಡಿಸುವ CID ಕ್ರಮ ಪ್ರಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ವಿಚಾರಣೆಯ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ, ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅಥವಾ ಉತ್ತರಗಳ ಮಾಹಿತಿ ಮುಂಚಿತವಾಗಿ ಸಿಕ್ಕಿತೇ, OMR ಉತ್ತರ ಪತ್ರಿಕೆಗಳಲ್ಲಿ ತಿದ್ದುಪಡಿ ನಡೆದಿದೆಯೇ ಎಂಬುದರ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
IAS ಅಧಿಕಾರಿಯತ್ತ ತನಿಖೆಯ ಚಿತ್ತ
ಈ ಪ್ರಕರಣದಲ್ಲಿ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಅವರು ಫೆಬ್ರವರಿ 2024ರಿಂದ ಮಾರ್ಚ್ 2026ರವರೆಗೆ KPSCಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ MSME ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬೆಂಗಳೂರಿನ ನಿವಾಸ ಸೇರಿದಂತೆ ಉತ್ತರ ಪ್ರದೇಶದ ಬರೇಲಿಯಲ್ಲಿರುವ ನಿವಾಸದ ಮೇಲೂ ED ಶೋಧ ನಡೆಸಿದೆ.
ED ಆರೋಪದ ಪ್ರಕಾರ, ಗಂಗ್ವಾರ್ ಅವರು ತಮ್ಮ ಇಬ್ಬರು ಪುತ್ರರಿಗೆ KPSC ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ದೊರಕಿಸಿಕೊಡಲು ವ್ಯಕ್ತಿಯೊಬ್ಬರಿಂದ ಸುಮಾರು ₹1.1 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಆರೋಪ ಇನ್ನೂ ತನಿಖೆಯ ಹಂತದಲ್ಲಿದ್ದು, ಆರೋಪ ಸಾಬೀತಾಗಿಲ್ಲ.
ಪ್ರಶ್ನೆಪತ್ರಿಕೆ ಸಿದ್ಧತೆಯಲ್ಲೂ ಅನುಮಾನ
ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಮುದ್ರಿಸುವ ಪ್ರಕ್ರಿಯೆಗೆ ಸಂಬಂಧಿಸಿದ CCTV ದೃಶ್ಯಾವಳಿಗಳ ಅನುಪಸ್ಥಿತಿಯನ್ನೂ ED ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇಂತಹ ಪ್ರಕ್ರಿಯೆಯಲ್ಲಿ CCTV ದಾಖಲೆಗಳು ಪ್ರಮುಖ ಭದ್ರತಾ ಕ್ರಮವಾಗಿರುವುದರಿಂದ, ಅವುಗಳ ಲಭ್ಯತೆ ಮತ್ತು ನಿರ್ವಹಣೆಯೂ ತನಿಖೆಯ ಪ್ರಮುಖ ಅಂಶವಾಗಿದೆ.
ಇದರ ಜೊತೆಗೆ, ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ₹70–80 ಲಕ್ಷದವರೆಗೆ ಲಂಚ ಕೇಳಲಾಗಿದೆ ಎಂಬ ಆರೋಪಗಳೂ ತನಿಖೆಯಲ್ಲಿವೆ. ಪ್ರಶ್ನೆಪತ್ರಿಕೆ ಸೋರಿಕೆ, OMR ತಿದ್ದುಪಡಿ ಮತ್ತು ನೇಮಕಾತಿ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.
KPSCಯಂತಹ ನೇಮಕಾತಿ ಸಂಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವ ಆರೋಪಗಳಾಗಿರುವುದರಿಂದ, CID ಮತ್ತು ED ತನಿಖೆಯ ಮುಂದಿನ ಹಂತಗಳು ಮಹತ್ವ ಪಡೆದುಕೊಂಡಿವೆ. 329 ಅಭ್ಯರ್ಥಿಗಳ ವಿಚಾರಣೆ, OMR ಕಾರ್ಬನ್ ಶೀಟ್‌ಗಳ FSL ವರದಿ ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆಯ ಬಳಿಕ ಪ್ರಕರಣದ ನಿಜವಾದ ಚಿತ್ರಣ ಇನ್ನಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಮೇಲಿನ ಹಣ, ಅಕ್ರಮ ಮತ್ತು ಅಧಿಕಾರಿಯ ವಿರುದ್ಧದ ಆರೋಪಗಳು ತನಿಖಾ ಸಂಸ್ಥೆಗಳು ಮುಂದಿಟ್ಟಿರುವ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಆರೋಪಗಳೆಂದೇ ಪರಿಗಣಿಸಬೇಕೆಂದು ಕೋರ್ಟ್ ತಿಳಿಸಿದೆ.

-
ಅಂತರಂಗ7 days agoಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
-
ದಿನದ ಸುದ್ದಿ7 days agoಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
-
ದಿನದ ಸುದ್ದಿ4 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ2 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ11 hours agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ
-
ದಿನದ ಸುದ್ದಿ12 hours agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ
-
ದಿನದ ಸುದ್ದಿ13 hours agoಅಂತರ್ಜಾತಿ ವಿವಾಹದ ಬೆನ್ನಲ್ಲೇ ದೇವಸ್ಥಾನ ನೌಕರ ಅಮಾನತು? ಜಾತಿ ತಾರತಮ್ಯದ ಆರೋಪ!
-
ದಿನದ ಸುದ್ದಿ12 hours agoಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅಡ್ಡಬಂದ ವಾಹನ ತಪ್ಪಿಸಲು ಹೋಗಿ ಅವಘಡ !





