Connect with us

ಬಹಿರಂಗ

ಪ್ರತಿರೋಧದ ದನಿಯೂ, ಪ್ರಭುತ್ವದ ನಿಷ್ಕ್ರಿಯತೆಯೂ..!

Published

on

ಸಾಂದರ್ಭಿಕ ಚಿತ್ರ
  • ನಾ ದಿವಾಕರ

ಪ್ರತಿರೋಧದ ದನಿಗೆ ಅವಕಾಶವಿಲ್ಲದ ಯಾವುದೇ ರಾಜಕೀಯ ವ್ಯವಸ್ಥೆ ಅಥವಾ ಸಮಾಜ ಶಾಂತಿಯುತವಾಗಿ ಬಾಳಲು ಸಾಧ್ಯವಿಲ್ಲ. ಹಾಗೆಯೇ ಒಂದು ದೇಶದ ರಾಜಕೀಯ ವ್ಯವಸ್ಥೆಯನ್ನು ನಿರ್ವಹಿಸುವ ಅಥವಾ ರಾಜಕೀಯ ಅಧಿಕಾರ ಪೀಠಗಳನ್ನು ಆಕ್ರಮಿಸುವ ಆಳುವ ವರ್ಗಗಳು ಪ್ರತಿರೋಧದ ದನಿಗೆ ಕಿವಿಗೊಡದಿದ್ದರೆ ಅಂತಹ ವ್ಯವಸ್ಥೆ ಕ್ರಮೇಣ ಅರಾಜಕತೆಯತ್ತ ಸಾಗುತ್ತದೆ. ಸಾಮಾಜಿಕ ವಲಯದಲ್ಲಿ ಪ್ರತಿರೋಧಕ್ಕೆ ಅವಕಾಶವೇ ಕೊಡದ ಒಂದು ಸಮಾಜ ತನ್ನ ಅಂತಃಸತ್ವವನ್ನೇ ಕಳೆದುಕೊಂಡು ಜಡಗಟ್ಟುತ್ತದೆ. ಭಾರತೀಯ ಸಮಾಜ ತನ್ನೊಳಗಿನ ಶ್ರೇಣೀಕೃತ ಜಾತಿ ವ್ಯವಸ್ಥೆ, ಜಾತಿ ಶ್ರೇಷ್ಠತೆಯ ವ್ಯಸನ, ಜಾತಿ ಪದ್ಧತಿಯ ಅನಿಷ್ಟಗಳು, ಅಸ್ಪೃಶ್ಯತೆಯಂತಹ ಕ್ರೂರ ಮನೋಭಾವ, ಪಿತೃಪ್ರಧಾನ ಧೋರಣೆ ಇವೆಲ್ಲವನ್ನೂ ಹೊತ್ತುಕೊಂಡಿದ್ದರೂ ಇಂದಿಗೂ ಸಹ ತನ್ನ ಮೂಲ ನೆಲೆಗಳನ್ನು ಉಳಿಸಿಕೊಂಡುಬಂದಿದ್ದರೆ ಅದಕ್ಕೆ ಕಾರಣ ಈ ದೇಶದ ನೆಲದಲ್ಲಿ ಪ್ರಾಚೀನ ಕಾಲದಿಂದಲೂ ಉಗಮಿಸುತ್ತಲೇ ಇರುವ ಪ್ರತಿರೋಧದ ನೆಲೆಗಳು.

ಚಾರ್ವಾಕನಿಂದ ಅಂಬೇಡ್ಕರ್ ವರೆಗೆ ಭಾರತೀಯ ಸಮಾಜದಲ್ಲಿ, ಪ್ರಬಲ ಸಾಮ್ರಾಜ್ಯಗಳು ಅಧಿಪತ್ಯ ಸಾಧಿಸಿದ್ದ ಸಂದರ್ಭದಲ್ಲೂ ಸಹ ಪ್ರತಿರೋಧದ ನೆಲೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ಬಂದಿವೆ. ಇಂದು ನಾವು ಪ್ರಾಚೀನ ನಿರಂಕುಶಾಧಿಕಾರದ ನೆಲೆಗಳನ್ನು ಧ್ವಂಸಗೊಳಿಸಿ ಒಂದು ಪ್ರಜಾಸತ್ತಾತ್ಮಕ ಸಮಾಜೋ ರಾಜಕೀಯ ನೆಲೆಯಲ್ಲಿ ನೆಲೆಸಿದ್ದರೆ ಅದಕ್ಕೆ ಕಾರಣವೂ ಈ ಪ್ರತಿರೋಧದ ನೆಲೆಗಳೇ ಆಗಿವೆ. ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲೂ ಡಾ ಬಿ ಆರ್ ಅಂಬೇಡ್ಕರ್ ಹಲವಾರು ಪ್ರತಿರೋಧಗಳನ್ನು ಎದುರಿಸುತ್ತಲೇ ಅಂತಿಮ ಕರಡು ಸಿದ್ಧಪಡಿಸಿದ್ದರು. ಹಾಗೆಯೇ ಸ್ವಾತಂತ್ರ್ಯ ಪೂರ್ವದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಬಲವಾಗಿದ್ದ ಮೇಲ್ಜಾತಿಗಳ ವಿರುದ್ಧ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಲೇ, ಸಮಸಮಾಜದ ಕನಸುಗಳನ್ನು ಹೊತ್ತ ಸಮಾಜವಾದಿ, ಜಾತ್ಯತೀತ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದರು.

ಇಂದು ನಾವು 21ನೆಯ ಶತಮಾನದ ಮೂರನೆಯ ದಶಕದಲ್ಲಿದ್ದೇವೆ. 73 ವರ್ಷಗಳ ಸ್ವಾತಂತ್ರ್ಯದ ಸವಿ ಅನುಭವಿಸಿದ್ದೇವೆ. 70 ವರ್ಷಗಳ ಕಾಲ ಸಂವಿಧಾನದ ಆಶಯಗಳನ್ನು ಈಡೇರಿಸುವ ಮಾರ್ಗದಲ್ಲಿ ನಡೆದುಬಂದಿದ್ದೇವೆ. ಅಂಬೇಡ್ಕರ್ ಪ್ರತಿಪಾದಿಸಿದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಏನೇ ಸಮಸ್ಯೆಗಳು ಎದುರಾಗಿದ್ದರೂ ಸಮರ್ಥವಾಗಿ ಪರಿಹರಿಸುತ್ತಲೇ ಭಾರತ ಒಂದು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಏಕೆಂದರೆ ಕಾಲದಿಂದ ಕಾಲಕ್ಕೆ ಸರ್ಕಾರಗಳು ಬದಲಾಗುತ್ತಿದ್ದರೂ, ಪ್ರತಿಯೊಂದು ಕಾಲಘಟ್ಟದಲ್ಲೂ ಸಾಮಾಜಿಕ ನ್ಯಾಯಕ್ಕಾಗಿ, ಆರ್ಥಿಕ ಸಮಾನತೆಗಾಗಿ, ಸಾಂಸ್ಕೃತಿಕ ಅಸ್ಮಿತೆ ಮತ್ತು ಅಸ್ತಿತ್ವಕ್ಕಾಗಿ, ಶೋಷಣೆ ಮತ್ತು ದಬ್ಬಾಳಿಕೆಯ ವಿರುದ್ಧ, ಅನ್ಯಾಯದ ವಿರುದ್ಧ, ನಿರಂಕುಶ ಅಧಿಕಾರದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಲೇ ಜನಾಂದೋಲನಗಳು ನಡೆದಿರುವುದನ್ನು ಕಂಡಿದ್ದೇವೆ. ಈ ಪ್ರತಿರೋಧದ ದನಿಗಳೇ ಭಾರತದ ಪ್ರಜಾತಂತ್ರ ವ್ಯವಸ್ಥೆಯ ತಳಹದಿಯನ್ನು ಸುಭದ್ರವಾಗಿರಿಸಿವೆ.

ಆದರೆ ಇಂದು ಈ ತಳಪಾಯ ಶಿಥಿಲವಾಗುತ್ತಿದೆ. ಆಳುವ ವರ್ಗಗಳು ಮತ್ತು ಈ ವರ್ಗವನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಕ್ರಮೇಣ ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಶಿಥಿಲಗೊಳಿಸಲು ಯತ್ನಿಸುತ್ತಲೇ ಇವೆ. ಸಂವಿಧಾನದ ಚೌಕಟ್ಟಿನಲ್ಲೇ ಕಾಯ್ದೆ ಕಾನೂನುಗಳ ತಿದ್ದುಪಡಿ ಮಾಡುವ ಮೂಲಕ, ಜನಾಭಿಪ್ರಾಯವನ್ನು ಸ್ವೇಚ್ಚಾಚಾರದ ಅಧಿಕಾರಕ್ಕೆ ಪರವಾನಗಿ ಎನ್ನುವಂತೆ ಭಾವಿಸಿ, ಪ್ರಜೆಗಳ ಬದುಕಿಗೇ ಸಂಚಕಾರ ತರುವಂತಹ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕರಾಳ ಶಾಸನಗಳಿಂದ ಹಿಡಿದು, ಜನಸಾಮಾನ್ಯರ ಜೀವನೋಪಾಯಕ್ಕೆ ಧಕ್ಕೆ ಉಂಟುಮಾಡುವ ಮಸೂದೆಗಳನ್ನು, ಸಂವಿಧಾನದ ನಿಯಮಗಳನ್ನೂ ಮೀರಿ ಜಾರಿಗೊಳಿಸಲಾಗುತ್ತಿದೆ. ಇಂತಹ ಒಂದು ಪ್ರಯತ್ನವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳಲ್ಲಿ ಕಾಣಬಹುದು.

ಜನವರಿ 26ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಅಹಿತಕರ ಘಟನೆಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಭಾರತದ ಬಹುತೇಕ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು, ಆಳುವ ಪಕ್ಷದ ಬೆಂಬಲಿಗರು, ಪ್ರಜಾತಂತ್ರದ ಮೌಲ್ಯವನ್ನೇ ಅರಿಯದ ಪ್ರಜ್ಞಾವಂತ ನಾಗರಿಕರು ಮತ್ತು ಸಾಂಸ್ಕೃತಿಕ ರಾಷ್ಟ್ರೀಯವಾದದ ಹರಿಕಾರರು, ದೇಶದ ರಾಜಧಾನಿಯೊಳಗೆ ನುಗ್ಗಿ, ಪ್ರತಿಷ್ಠಿತ ಕೆಂಪುಕೋಟೆಯನ್ನು ಆಕ್ರಮಿಸಿ ಅಲ್ಲಿ ತಮ್ಮದೇ ಆದ ಧಾರ್ಮಿಕ ಧ್ವಜವನ್ನು ಹಾರಿಸುವ ಒಂದು ಗುಂಪಿನ ಪ್ರತಿರೋಧವನ್ನು, ಭಯೋತ್ಪಾದಕ ಕೃತ್ಯದಂತೆ ಬಿಂಬಿಸುತ್ತಿರುವುದು ಕಾಣುತ್ತಿದ್ದೇವೆ. ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ ಎಂದು ಹುಯಿಲೆಬ್ಬಿಸುತ್ತಲೇ ಕೆಂಪುಕೋಟೆಯನ್ನು ಪ್ರವೇಶಿಸಿರುವುದೇ ರಾಷ್ಟ್ರದ್ರೋಹದ ಕೃತ್ಯ ಎನ್ನುವಂತೆ ಸುದ್ದಿಮನೆಗಳು ಬಿತ್ತರಿಸುತ್ತಿವೆ. ಈ ಘಟನೆಯ ಸತ್ಯಾಸತ್ಯತೆಗಳು ಏನೇ ಇರಲಿ, ಧ್ವಜ ನೆಟ್ಟವರು ಯಾರೇ ಇರಲಿ, ಅನ್ಯಾಯಕ್ಕೊಳಗಾದ, ನೊಂದ ಮನಸುಗಳ ಪ್ರತಿರೋಧದ ಹಿಂದೆ ಸುಪ್ತ ಆಕ್ರೋಶ ಮಡುಗಟ್ಟಿರುತ್ತದೆ ಎನ್ನುವುದನ್ನು ಈ ಘಟನೆ ನಿರೂಪಿಸುತ್ತದೆ.

ದೆಹಲಿಯಲ್ಲಿ ನಡೆದ ಘಟನೆ ಸರಿಯೋ ತಪ್ಪೋ ಎನ್ನುವುದಕ್ಕಿಂತಲೂ, 60 ದಿನಗಳ ಕಾಲ ಅತ್ಯಂತ ಶಾಂತಿಯುತವಾಗಿ ನಡೆದ ಒಂದು ಜನಾಂದೋಲನ, 150ಕ್ಕೂ ಹೆಚ್ಚು ಸಾವುಗಳ ನಂತರವೂ ತಾಳ್ಮೆ ಸಂಯಮ ಕಳೆದುಕೊಳ್ಳದ ಒಂದು ಆಂದೋಲನ, ಪೊಲೀಸರ ಲಾಠಿ, ಜಲಫಿರಂಗಿ, ಅಶ್ರುವಾಯು ದಾಳಿಯನ್ನು ಸಹಿಸಿಕೊಂಡು ದೃಢಚಿತ್ತದಿಂದ ಮುನ್ನಡೆದ ಒಂದು ಹೋರಾಟ, ಚಳಿ ಮಳೆಯನ್ನೂ ಲೆಕ್ಕಿಸದೆ ಜನರಿಂದಲೇ ಹಣ ಸಂಗ್ರಹಿಸಿ ತನ್ನ ಸ್ವಂತಬಲದಿಂದ ಎರಡು ತಿಂಗಳ ಕಾಲ ನಡೆದ ಚಳುವಳಿ, ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳು ಮುಷ್ಕರ ನಿರತರ ಮುನ್ನಡಿಗೆಯನ್ನು ತಡೆಗಟ್ಟಲು ಸಿಮೆಂಟ್ ಗೋಡೆಗಳನ್ನು, ಮುಳ್ಳು ತಂತಿಗಳನ್ನು, ಜೆಸಿಬಿ ಮತ್ತು ಬೃಹತ್ ಲಾರಿಗಳನ್ನು ಬಳಸಿದರೂ ಕಂಗೆಡದೆ ನಡೆದ ಹೋರಾಟ, ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿ ಬೃಹತ್ ಕಂದಕಗಳನ್ನು ತೋಡಿ ಮುನ್ನಡಿಗೆಗೆ ಅಡ್ಡಿಪಡಿಸಿದರೂ ಧೃತಿಗೆಡದೆ ನಡೆದ ಒಂದು ಹೋರಾಟ, ಹೇಗೆ ಹಿಂಸಾತ್ಮಕವಾಗಲು ಸಾಧ್ಯ ಎನ್ನುವ ಪ್ರಶ್ನೆ ನಮ್ಮನ್ನು ಕಾಡಬೇಕಿದೆ.

ನಿಗದಿತ ಮಾರ್ಗವನ್ನು ಬಿಟ್ಟು, ಒಳಮಾರ್ಗದಿಂದ ದೆಹಲಿಯನ್ನು ಪ್ರವೇಶಿಸಿ, ಪೊಲೀಸರ ಅಡ್ಡಗೋಡೆಗಳನ್ನು ದಾಟಿ ರಾಜಧಾನಿಯನ್ನು ಪ್ರವೇಶಿಸಿ ಕೆಂಪುಕೋಟೆಯ ಮೇಲೆ ನೆರೆದ ಹೋರಾಟಗಾರರೆಲ್ಲರೂ ದೇಶದ್ರೋಹಿಗಳೇನಲ್ಲ. ಅಲ್ಲಿ ಧ್ವಜ ನೆಡುವ ಮೂಲಕ ವಿವಾದ ಮತ್ತು ಗೊಂದಲ ಸೃಷ್ಟಿಸಿದ ವ್ಯಕ್ತಿಯೂ ದೇಶದ್ರೋಹಿಯೇನಲ್ಲ. ರೈತ ಮುಷ್ಕರವನ್ನು ಶಿಥಿಲಗೊಳಿಸಲೆಂದೇ, ದುರ್ಬಲಗೊಳಿಸಲೆಂದೇ ಇಂತಹ ಪಿತೂರಿಗಳನ್ನು ನಡೆಸುವ ರಾಜಕೀಯ ಶಕ್ತಿಗಳು ನಿಜವಾದ ದೇಶದ್ರೋಹಿಗಳು ಅಲ್ಲವೇ ? ಲಕ್ಷಾಂತರ ಜನರ ಪ್ರತಿಭಟನೆಯಲ್ಲಿ ಒಂದು ಸಣ್ಣ ಗುಂಪು ಈ ರೀತಿಯ ಗಲಭೆಯಲ್ಲಿ ತೊಡಗುವುದೂ ಸಹ ಘೋರ ಅಪರಾಧವೇನಲ್ಲ. ಇದು ಸಹಜ ಪ್ರಕ್ರಿಯೆ. ಏಕೆಂದರೆ ಈ ರೈತಾಪಿ ಸಮುದಾಯ ಎರಡು ತಿಂಗಳ ಕಾಲ ತಾಳ್ಮೆಯಿಂದ ನ್ಯಾಯಕ್ಕಾಗಿ ಹೋರಾಡುತ್ತಿದೆ.

ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿದ್ದು ಬಿಜೆಪಿ ಕಾರ್ಯಕರ್ತ, ಬಿಜೆಪಿ ಸಂಸದ ಸನ್ನಿ ಡಯೋಲ್‍ನ ನಿಕಟವರ್ತಿ ಮತ್ತು ಕೇಂದ್ರ ನಾಯಕರಿಗೆ ಸಮೀಪವರ್ತಿಯಾದ ದೀಪ್ ಸಿಧು ಎಂದು ಇದೀಗ ಸಾಬೀತಾಗಿದೆ. ತಾನೇ ಧ್ವಜ ಹಾರಿಸಿದ್ದಾಗಿ ದೀಪ್ ಸಿಧು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಆದರೆ ರಾಷ್ಟ್ರಧ್ವಜಕ್ಕೆ ಯಾವುದೇ ಅಪಮಾನವಾಗಿಲ್ಲ ಎಂದು ಸ್ಪಷ್ಟವಾಗಿದ್ದು, ಭಾರತದ ಧ್ವಜಕ್ಕಿಂತಲೂ ಕೆಳಮಟ್ಟದಲ್ಲೇ ಸಿಖ್ಖರ ಧಾರ್ಮಿಕ ಧ್ವಜವನ್ನು ಹಾರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ದೀಪ್ ಸಿಧು ವಿರುದ್ಧ ದೂರು ದಾಖಲಿಸದ ದೆಹಲಿ ಪೊಲೀಸರು, ಘಟನೆಗೆ ಸಂಬಂಧವೇ ಇಲ್ಲದ 22 ರೈತ ನಾಯಕರ ವಿರುದ್ಧ ಎಫ್‍ಐಆರ್ ದಾಖಲಿಸಿರುವುದು ಈ ಘಟನೆಯ ಹಿಂದಿನ ಹುನ್ನಾರವನ್ನು ತಂತಾನೇ ಬಯಲು ಮಾಡುತ್ತದೆ.

ಇಲ್ಲಿ ನಮ್ಮನ್ನು ಕಾಡಬೇಕಾದ ಪ್ರಶ್ನೆ ಎಂದರೆ, ಎರಡು ತಿಂಗಳ ಕಾಲ ಶಾಂತಿಯುತ ಮುಷ್ಕರ ನಡೆಸಿರುವ 540ಕ್ಕೂ ಹೆಚ್ಚು ರೈತ ಸಂಘಟನೆಗಳು ಗಣರಾಜ್ಯೋತ್ಸವದ ದಿನದಂದೇ ದೆಹಲಿಯಲ್ಲಿ ಎರಡು ಲಕ್ಷ ಟ್ರಾಕ್ಟರ್‍ಗಳ ಪರೇಡ್ ನಡೆಸಲು ತೀರ್ಮಾನಿಸಿದ್ದು ಏಕೆ ? ರೈತರ ಬೇಡಿಕೆ ಮೊದಲನೆ ದಿನದಿಂದಲೂ ಒಂದೇ ಆಗಿದೆ, ಮೂರೂ ಕೃಷಿ ಮಸೂದೆಗಳನ್ನು ಹಿಂಪಡೆಯುವುದು. ಇದರ ಹೊರತಾಗಿ ಮತ್ತಾವುದೇ ರಾಜೀಸೂತ್ರಕ್ಕೆ ತಾವು ಸಿದ್ಧರಾಗಿಲ್ಲ ಎಂದು ರೈತ ಸಂಘಟನೆಗಳು ಸ್ಪಷ್ಟಪಡಿಸುತ್ತಲೇ ಇವೆ. ಕೇಂದ್ರ ಸರ್ಕಾರ ಈ ಬೇಡಿಕೆಗಳಿಗೆ ಮಾತುಕತೆಗಳ ಪ್ರಸ್ತಾವದ ಮೂಲಕ ಸ್ಪಂದಿಸಿದೆಯೇ ಹೊರತು, ಮಾನವೀಯ ಸ್ಪಂದನೆಯನ್ನು ತೋರಿಯೇ ಇಲ್ಲ. 150ಕ್ಕೂ ಹೆಚ್ಚು ರೈತರ ಸಾವಿಗೆ ಒಂದು ಅನುಕಂಪದ ಮಾತನ್ನೂ ಆಡದ ಬೌದ್ಧಿಕ ನಿಷ್ಕ್ರಿಯತೆ ಮತ್ತು ಕ್ರೌರ್ಯವನ್ನು ನಾವು ಕಂಡಿದ್ದೇವೆ. ಇದು ಸಹಜವಾಗಿಯೇ ಮುಷ್ಕರ ನಿರತರಲ್ಲಿ ಆಕ್ರೋಶ ಮೂಡಿಸುತ್ತದೆ.

“ ನಿಮ್ಮ ಬೇಡಿಕೆಗಳನ್ನು ಪರಿಶೀಲಿಸುತ್ತೇವೆ, ಸದ್ಯಕ್ಕೆ ಮಸೂದೆಗಳನ್ನು ಹಿಂಪಡೆಯುತ್ತೇವೆ. ಸಂಸತ್ತಿನಲ್ಲಿ ಚರ್ಚೆಗೊಳಪಡಿಸುವ ಮೂಲಕ, ಕೃಷಿ ತಜ್ಞರು ಮತ್ತು ವಿಜ್ಞಾನಿಗಳೊಡನೆ, ರೈತ ಸಂಘಟನೆಗಳೊಡನೆ ಮಾತುಕತೆ ನಡೆಸಿ ದೇಶದ ರೈತಾಪಿಗೆ ಸಮಧಾನಕರವಾಗಿರುವಂತಹ ಹೊಸ ಮಸೂದೆಯನ್ನು ಜಾರಿಗೊಳಿಸುತ್ತೇವೆ ” ಎನ್ನುವ ಮೂರು ನಾಲ್ಕು ಸಾಂತ್ವನದ ಮಾತುಗಳು ಮುಷ್ಕರವನ್ನು ಕೊನೆಗೊಳಿಸಬಹುದಿತ್ತು. ಗಣರಾಜ್ಯೋತ್ಸವದ ದಿನದಂದೇ ಎರಡು ಲಕ್ಷ ಟ್ರಾಕ್ಟರ್‍ಗಳು ದೇಶದ ರಾಜಧಾನಿಯಲ್ಲಿ ಮೆರವಣಿಗೆ ನಡೆಸುವ ಒಂದು ನಿರ್ಧಾರಕ್ಕೆ ಕೇಂದ್ರ ಸರ್ಕಾರದ ಮಾನವೀಯ, ಸಕಾರಾತ್ಮಕ ಸ್ಪಂದನೆ ತಡೆಒಡ್ಡಬಹುದಿತ್ತು. ಆದರೆ ಪ್ರಜಾತಂತ್ರ ವ್ಯವಸ್ಥೆಯ ಮೂಲ ಆಶಯಗಳನ್ನೇ ಲೆಕ್ಕಿಸದ ಕೇಂದ್ರ ಸರ್ಕಾರ ರೈತರ ಒಕ್ಕೊರಲ ಬೇಡಿಕೆಗಳನ್ನು ನಿರ್ಲಕ್ಷಿಸಿರುವುದೇ ಹೆಚ್ಚು. ಈ ಧೋರಣೆ ಸಣ್ಣ ಪುಟ್ಟ ಗಲಭೆಗಳಿಗೆ, ಅಹಿತಕರ ಘಟನೆಗಳಿಗೆ ಎಡೆಮಾಡಿಕೊಟ್ಟರೆ ಅದರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ಹಬ್ಬದ ದಿನದಂದು ದೇಶವ್ಯಾಪಿ ಆಂದೋಲನವೊಂದು ರೂಪುಗೊಂಡಿರುವುದು ನಿಜಕ್ಕೂ ಅಭೂತಪೂರ್ವ ಬೆಳವಣಿಗೆ. ಭಾರತದಲ್ಲಿ ಪ್ರಜಾತಂತ್ರ ಉಳಿದಿರುವುದಕ್ಕೆ ಸಾಕ್ಷಿಯಾದಂತೆಯೇ ಈ ಜನಾಂದೋಲನ ಈ ದೇಶದ ಆಡಳಿತ ವ್ಯವಸ್ಥೆ ನಿರಂಕುಶತ್ವದೆಡೆಗೆ ಜಾರುತ್ತಿರುವುದಕ್ಕೂ ಸಾಕ್ಷಿಯಾಗಿದೆ. ಹೋರಾಟಗಾರರನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳು, ಟ್ರಾಕ್ಟರ್‍ಗಳನ್ನು ಜಪ್ತಿ ಮಾಡುವುದು, ಉತ್ತರಪ್ರದೇಶದಲ್ಲಿ ಟ್ರಾಕ್ಟರ್‍ಗಳಿಗೆ ಡೀಸೆಲ್ ಸರಬರಾಜು ಸ್ಥಗಿತಗೊಳಿಸುವುದು, ಕರ್ನಾಟಕದಲ್ಲಿ ಬೆಂಗಳೂರಿಗೆ ಹೊರಟಿದ್ದ ಸಾವಿರಾರು ಟ್ರಾಕ್ಟರುಗಳನ್ನು ತಡೆಗಟ್ಟಿರುವುದು, ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸುವ ಮೂಲಕ ಹೋರಾಟಗಾರರಲ್ಲಿ ಭೀತಿ ಹುಟ್ಟಿಸುವುದು ಈ ಎಲ್ಲ ಕ್ರಮಗಳು ನಿರಂಕುಶ ಪ್ರಭುತ್ವದ ಸೂಚನೆಗಳಾಗಿಯೇ ಕಾಣುತ್ತವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪ್ರತಿಭಟನೆಗೆ ಮುಕ್ತ ಅವಕಾಶ ನೀಡಿದ್ದರೆ, ಟ್ರಾಕ್ಟರ್ ಪರೇಡ್‍ಗೆ ಪೂರ್ಣ ಅನುಮತಿ ನೀಡಿದ್ದಲ್ಲಿ ಬಹುಶಃ ಗಲಭೆ ಸಂಭವಿಸುತ್ತಿರಲಿಲ್ಲ. ಅಥವಾ ನಿಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುತ್ತೇವೆ, ಮುಷ್ಕರ ಹಿಂಪಡೆಯಿರಿ ಎಂದು ವಿನಂತಿಸಿದ್ದರೆ ಟ್ರಾಕ್ಟರ್ ಪರೇಡ್ ನಡೆಯುತ್ತಲೇ ಇರಲಿಲ್ಲ. ಎರಡೂ ನೆಲೆಯಲ್ಲಿ ಸರ್ಕಾರಗಳು ವಿಫಲವಾಗಿವೆ. ಬದಲಾಗಿ, ಹೋರಾಟಗಾರರಲ್ಲಿ ಭಯೋತ್ಪಾದಕರನ್ನು, ಖಲಿಸ್ತಾನಿಗಳನ್ನು, ನಗರ ನಕ್ಸಲರನ್ನು ಹುಡುಕಲು ಪ್ರಯತ್ನಿಸಿವೆ. ತಮ್ಮ ಜೀವನೋಪಾಯದ ಮೂಲ ಸೆಲೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಅನ್ನದಾತರನ್ನು ದೇಶದ್ರೋಹಿಗಳೆಂದು ಕರೆಯುವಷ್ಟು ಮಟ್ಟಿಗೆ ನಮ್ಮ ರಾಜಕೀಯ ನಾಯಕರು, ಪಕ್ಷಗಳು ಬೌದ್ಧಿಕ ದಾರಿದ್ರ್ಯ ಪ್ರದರ್ಶಿಸಿವೆ.

ಆಳುವ ವರ್ಗಗಳ ಈ ದುರ್ವರ್ತನೆಗೆ ಪೂರಕವಾಗಿ ವಿದ್ಯುನ್ಮಾನ ಮಾಧ್ಯಮಗಳು ರೈತ ಮುಷ್ಕರವನ್ನು ಬಿಂಬಿಸಿವೆ. ಜನವರಿ 25ರವರೆಗೂ ದೆಹಲಿಯಲ್ಲಿ ಮುಷ್ಕರ ಹೂಡಿದ್ದ ರೈತರ ಸಮಸ್ಯೆಗಳನ್ನಾಗಲೀ, ಬೇಡಿಕೆಗಳನ್ನಾಗಲೀ, ಮುಷ್ಕರದ ಮೂಲ ಸಮಸ್ಯೆಯನ್ನಾಗಲೀ ಕಣ್ಣೆತ್ತಿಯೂ ನೋಡದ ಮಾಧ್ಯಮಗಳು ಹಠಾತ್ತನೆ ತಮ್ಮ ರಾಷ್ಟ್ರವಾದಿ ದೇಶಪ್ರೇಮವನ್ನು ಪ್ರದರ್ಶಿಸಲು ಆರಂಭಿಸಿದ್ದು ಜನವರಿ 26ರಂದು, ಟ್ರಾಕ್ಟರ್ ಪರೇಡ್ ಆರಂಭವಾದ ನಂತರ. ಒಂದು ರೀತಿಯಲ್ಲಿ ಇದು ರೈತ ಮುಷ್ಕರದ ವಿಜಯ ಎಂದೇ ಹೇಳಬಹುದು. ಇಡೀ ದೇಶದ ಗಮನ ಸೆಳೆಯುವಂತಹ ಒಂದು ಜನಾಂದೋಲನ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೆಚ್ಚು ಗೌರವಯುತವಾಗಿ ಕಾಣುತ್ತದೆ. ಕನ್ನಡದ ಸುದ್ದಿಮನೆಗಳ ಪಕ್ಷಪಾತಿ ಧೋರಣೆ ಮತ್ತು ಉತ್ಕಟ-ಉನ್ಮತ್ತ ರಾಷ್ಟ್ರವಾದಿ ದೇಶಪ್ರೇಮದ ಹೊರತಾಗಿಯೂ ರೈತ ಮುಷ್ಕರ ಟಿವಿ ಪರದೆಗಳ ಮೂಲಕ ಮನೆಮನೆ ತಲುಪಿರುವುದು ರೈತರ ದಿಗ್ವಿಜಯವಾಗಿ ಕಾಣುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿರೋಧದ ಧ್ವನಿಗಳಿಗೆ ಕಿವಿಗೊಡುವ ಸಂಯಮ ಇರುವವರು ಅಧಿಕಾರದಲ್ಲಿದ್ದರೆ ಒಂದು ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ . ನೊಂದ ಜನತೆಯ ಹಕ್ಕೊತ್ತಾಯಗಳನ್ನು, ಆಗ್ರಹಗಳನ್ನು ಆಲಿಸಿ, ಪರಿಶೀಲಿಸಿ, ಪರಾಮರ್ಶಿಸಿ, ಶಾಸನ ಸಭೆಗಳಲ್ಲಿ ಜನಪ್ರತಿನಿಧಿಗಳ ನಡುವೆ ಚರ್ಚೆಗೊಳಪಡಿಸಿ ಸಮಸ್ತ ಜನತೆಗೆ ಒಳಿತನ್ನುಂಟುಮಾಡುವ ನೀತಿಗಳನ್ನು, ಯೋಜನೆಗಳನ್ನು ಜಾರಿಗೊಳಿಸುವುದು ಒಂದು ಪ್ರಬುದ್ಧ ಸಂಸದೀಯ ಪ್ರಜಾತಂತ್ರದ ಲಕ್ಷಣ. ದುರಂತ ಎಂದರೆ ಏಳು ದಶಕಗಳ ಸ್ವತಂತ್ರ ಆಳ್ವಿಕೆಯ ನಂತರ ಭಾರತ ಈ ಪ್ರಬುದ್ಧತೆಯನ್ನು ಕಳೆದುಕೊಳ್ಳುತ್ತಿದೆ. ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ ಪೂರ್ಣ ಬಹುಮತ ಗಳಿಸುವುದು ಎಂದರೆ ದೇಶದ ಅತಿ ಹೆಚ್ಚಿನ ಜನಸಂಖ್ಯೆಯನ್ನು ಪ್ರತಿನಿಧಿಸುವುದು ಎಂದರ್ಥವೇ ಹೊರತು, ಸ್ವೇಚ್ಚಾನುಸಾರ ಕಾನೂನುಗಳನ್ನು ರೂಪಿಸಲು ಮುಕ್ತ ಪರವಾನಗಿ ದೊರೆತಂತಲ್ಲ. ಡಾ ಬಿ ಆರ್ ಅಂಬೇಡ್ಕರ್ ಈ ಕುರಿತು ಅನೇಕ ಸಂದರ್ಭಗಳಲ್ಲಿ ಸ್ಪಷ್ಟನೆ ನೀಡುತ್ತಲೇ ಸಂವಿಧಾನ ರಚನೆಯಲ್ಲಿ ತೊಡಗುತ್ತಾರೆ.

ಆದರೆ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ಪಷ್ಟ ಬಹುಮತ ಎನ್ನುವುದು ಸ್ವೇಚ್ಚಾಚಾರದ ಪರವಾನಗಿಯೇ ಆಗಿದೆ. ಕಳೆದ ಆರು ವರ್ಷಗಳಲ್ಲಿ ಈ ಧೋರಣೆ ಸಮೂಹ ಸನ್ನಿಗೊಳಗಾದ ಬೃಹತ್ ಜನಸಮುದಾಯದ ನಡುವೆ ಸ್ವೀಕೃತಿಯನ್ನೂ ಪಡೆದುಬಿಟ್ಟಿದೆ. ಹಾಗಾಗಿಯೇ 150 ಮುಷ್ಕರ ನಿರತ ರೈತರ ಸಾವು, ಲಕ್ಷಾಂತರ ರೈತರ ಒಕ್ಕೊರಲ ದನಿ, ಬೃಹತ್ ಸಂಖ್ಯೆಯ ರೈತಾಪಿಯ ಮೇಲೆ ನಡೆಯುವ ದೌರ್ಜನ್ಯ, ರೈತರ ಬೆನ್ನ ಮೇಲೆ ಬಾಸುಂಡೆ ಬರುವಂತೆ ಬಾರಿಸುವ ಪೊಲೀಸರ ಕ್ರೌರ್ಯ ಎಲ್ಲವೂ ‘ ದೇಶದ ಅಭಿವೃದ್ಧಿಯ ’ ದೃಷ್ಟಿಯಿಂದ ಸ್ವೀಕಾರಾರ್ಹ ಎನಿಸಿಬಿಡುತ್ತವೆ. ಇದು ಹಿತವಲಯದಲ್ಲಿರುವ ಮಧ್ಯಮ ವರ್ಗಗಳನ್ನು ಕಾಡುತ್ತಿರುವ ಒಂದು ದುರ್ವ್ಯಸನ. ಈ ವ್ಯಸನವೇ ದೇಶದಲ್ಲಿ ನಿರಂಕುಶ ಆಳ್ವಿಕೆಗೆ ಸುಭದ್ರ ತಳಪಾಯವನ್ನು ನಿರ್ಮಿಸುತ್ತಿರುವುದನ್ನು ಕಾಣುತ್ತಿದ್ದೇವೆ.

ಮೂರು ಲಕ್ಷ ರೈತರು ಆತ್ಮಹತ್ಯೆಗೆ ಶರಣಾದಾಗ, ಎರಡು ತಿಂಗಳ ಕಾಲ ಚಳಿ ಮಳೆ ಎನ್ನದೆ, ಕೇಳುವವರಿಲ್ಲದೆ ಲಕ್ಷಾಂತರ ರೈತರು ರಸ್ತೆಗಳಲ್ಲೇ ಕುಳಿತು ಪ್ರತಿರೋಧ ವ್ಯಕ್ತಪಡಿಸುವಾಗ, ಈ ಮುಷ್ಕರದ ನಡುವೆಯೇ 150 ರೈತರು ಮೃತಪಟ್ಟಾಗ ಈ ದೇಶಕ್ಕೆ ಅಪಮಾನವಾಗಿದೆ ಎನಿಸಬೇಕಿತ್ತು. ಇದರಲ್ಲೇ ಆಡಳಿತ ವ್ಯವಸ್ಥೆಯ ರಾಷ್ಟ್ರದ್ರೋಹದ ವರ್ತನೆ ಗೋಚರಿಸಬೇಕಿತ್ತು. ದುರಂತ ಎಂದರೆ ಈ ದೇಶದ ಒಂದು ವರ್ಗದ ಜನತೆಗೆ, ಕಾರ್ಪೋರೇಟ್ ನಿಯಂತ್ರಿತ ಮಾಧ್ಯಮಗಳಿಗೆ ಮತ್ತು ಅಧಿಕಾರ ಲಾಲಸೆಯಿಂದ ತಮ್ಮ ಸಭ್ಯತೆ, ಸಂಯಮ, ಸೌಜನ್ಯ ಮತ್ತು ಎಲ್ಲ ಮಾನವೀಯ ಮೌಲ್ಯಗಳನ್ನೂ ಕಳೆದುಕೊಂಡಿರುವ ಜನಪ್ರತಿನಿಧಿಗಳಿಗೆ ಈ ಹೋರಾಟವೇ ದೇಶದ್ರೋಹದ ನಡೆಯಂತೆ ಕಾಣುತ್ತಿದೆ. ಜನಸಾಮಾನ್ಯರ ರಕ್ಷಣೆಗೆ ನಿಲ್ಲಬೇಕಾದ ಸಾಂವಿಧಾನಿಕ ಸಂಸ್ಥೆಗಳಿಗೆ ಇದು ಗಂಭೀರ ವಿಚಾರ ಎನಿಸುತ್ತಲೇ ಇಲ್ಲ.

ಈ ವಿಷಮ ಸನ್ನಿವೇಶದಲ್ಲೇ ಭಾರತದ ರೈತಾಪಿ ತನ್ನ ದಿಗ್ವಿಜಯ ಸಾಧಿಸಿದ್ದಾರೆ. ದೆಹಲಿಯಲ್ಲಿ ನಡೆದ ಗಣತಂತ್ರದಿನದ ಟ್ರಾಕ್ಟರ್ ಪರೇಡ್ ಮತ್ತು ದೇಶದ ರಾಜಧಾನಿಯನ್ನೂ ಸೇರಿದಂತೆ ದೇಶವ್ಯಾಪಿಯಾಗಿ ನಡೆದ ಪ್ರಜೆಗಳ ಜನಗಣರಾಜ್ಯೋತ್ಸವದ ಪ್ರತಿರೋಧದ ನೆಲೆಗಳು ಪ್ರಜಾತಂತ್ರಕ್ಕೆ ಸಂದ ದಿಗ್ವಿಜಯವಾಗಿದೆ. ಕೆಲವು ಅಹಿತಕರ ಘಟನೆಗಳ ನಡುವೆಯೂ ರೈತ ಸಮುದಾಯ ತನ್ನ ಅಂತಿಮ ಗುರಿಗೆ ಬದ್ಧತೆ ತೋರಿ ಶಿಸ್ತು ಸಂಯಮದಿಂದ ವರ್ತಿಸಿರುವುದು, ಈ ದೇಶದ ಜನಸಾಮಾನ್ಯರಲ್ಲಿರುವ ಸಂಯಮ, ತಾಳ್ಮೆಯ ಸಂಕೇತವಾಗಿದೆ. ಹಾಗೆಯೇ ಈ ಹೋರಾಟವನ್ನು ಕ್ರೂರವಾಗಿ ಹತ್ತಿಕ್ಕುವ ಪ್ರಯತ್ನಗಳ ಮೂಲಕ ಪ್ರಭುತ್ವ ಮತ್ತು ಆಳುವ ವರ್ಗಗಳು ಬೆತ್ತಲಾಗಿವೆ. ಸಾರ್ವಭೌಮ ಪ್ರಜೆಗಳ ಹೋರಾಟಗಳನ್ನು ರಾಷ್ಟ್ರದ್ರೋಹದ ಪರಿಭಾಷೆಯಲ್ಲಿ ಅಪಮಾನಿಸುವ ಮೂಲಕ ಮಾಧ್ಯಮಗಳು ಪೂರ್ಣ ಬೆತ್ತಲೆಯಾಗಿವೆ.

ಮುಂಬರುವ ದಿನಗಳಲ್ಲಿ ನಡೆಯಬಹುದಾದ ಜನಪರ ಹೋರಾಟಗಳಿಗೆ ದೆಹಲಿಯಲ್ಲಿನ ರೈತರ ಹೋರಾಟ ಮತ್ತು ದೇಶವ್ಯಾಪಿ ನಡೆಯುತ್ತಿರುವ ಆಂದೋಲನಗಳು ಸ್ಫೂರ್ತಿದಾಯಕವಾಗುವ ಆಶಯದೊಂದಿಗೇ, ಈ ದೇಶದ ಕಾರ್ಮಿಕ ಬಂಧುಗಳು, ಗ್ರಾಮೀಣ ಬಡಜನತೆ, ಶೋಷಿತ ಸಮುದಾಯಗಳು, ಅವಕಾಶವಂಚಿತರು, ಮಹಿಳೆಯರು ಮತ್ತು ಜಾತಿ ದೌರ್ಜನ್ಯವನ್ನು ನಿತ್ಯ ಎದುರಿಸುತ್ತಿರುವ ದಲಿತ ಸಮುದಾಯಗಳು ತಮ್ಮ ಹಕ್ಕೊತ್ತಾಯಗಳೊಂದಿಗೆ ಹೋರಾಟಗಳಿಗೆ ಸಜ್ಜಾಗಬೇಕಿದೆ. ಈ ದೇಶ ನಮ್ಮದು, ಈ ಮಣ್ಣು ನಮ್ಮದು, ಸಂವಿಧಾನ ನಮ್ಮದು, ನಮಗೆ ನಾವೇ ಅರ್ಪಿಸಿಕೊಂಡಿರುವ ಸಂವಿಧಾನದ ಆಶಯಗಳೂ ನಮ್ಮವೇ ಆಗಿದೆ. ಈ ಸಂವಿಧಾನದ ರಕ್ಷಣೆಯಾದರೆ ಮಾತ್ರವೇ ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯ ಎನ್ನುವುದನ್ನು ಇನ್ನಾದರೂ ಮನಗಾಣಬೇಕಿದೆ. ಇತಿಹಾಸದ ಕರಾಳ ಪುಟಗಳು, ಸಮಕಾಲೀನ ಭಾರತದ ಕರಾಳ ಹಾಳೆಗಳು ನಮ್ಮ ಮುಂದಿವೆ, ಕಣ್ತೆರೆದು ನೋಡುವ ಇಚ್ಚಾಶಕ್ತಿ ನಮ್ಮೊಳಗಿದ್ದರೆ ಗೆಲುವು ನಮ್ಮದೇ. ಈ ಆಶಯದೊಂದಿಗೇ ಮುನ್ನಡೆಯಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ಸಂವಿಧಾನ ನಿತ್ಯದ ಪಾಠವಾಗಲಿ..!

Published

on

  • ಸನಾವುಲ್ಲ ನವಿಲೇಹಾಳ್

ನಾನು ಮೊದಲು ಎರಡು ವಿಷಯಗಳನ್ನು ನಿಮಗೆ ನೆನಪಿಸಲು ಬಯಸುತ್ತೇನೆ,ಒಂದು;ಆಗಸ್ಟ್ -09-2018 ರಂದು ದೆಹಲಿಯ ಜಂತರ್ ಮಂತರ್ ಎಂಬಲ್ಲಿ ದುಷ್ಟ ಬುದ್ದಿಯ ಕೆಲವರು ಸಂವಿಧಾನದ ಪ್ರತಿಯನ್ನು ಸುಟ್ಟುಹಾಕಿದರು.

ಎರಡನೆಯದು; ಕರ್ನಾಟಕ ವಿಧಾನ ಸಭೆಯ ಚುನಾವಣ ಪ್ರಚಾರದ ವೇಳೆ ಕೇಂದ್ರ ಮಂತ್ರಿಯೊಬ್ಬರು ‘ಸಂವಿಧಾನವನ್ನು ಬದಲಾಯಿಸಬೇಕು,ಅದಕ್ಕಾಗಿ ನಾವು ಅಧಿಕಾರಕ್ಕೆ ಬಂದಿದ್ದೇವೆ, ಎಂದು ಭಾಷಣಮಾಡಿ ವಿವಾದವೆಬ್ಬಿಸಿದರು.

ನಾವು ಈ ಎರೆಡು ಘಟನೆಗಳನ್ನ ಒಟ್ಟಿಗೆಯಿಟ್ಟು ನೋಡಿದಾಗ ಇಂದು ನಾವು ಅಂಬೇಡ್ಕರ್ ಅವರ ಜನ್ಮದಿನವನ್ನು ಯಾವ ಆಶಯಗಳೊಂದಿಗೆ ಆಚರಿಸಬೇಕು, ಎಂಬ ಪ್ರಶ್ನೆ ನಮ್ಮ ಕಣ್ಣಮುಂದೆ ಬರುತ್ತದೆ. ಸಂವಿಧಾನವನ್ನು ಬದಲಾಯಿಸುವುದು ಬೇರೆ ,ತಿದ್ದುಪಡಿ ಮಾಡುವುದು ಬೇರೆ. 368 ನೆ ವಿಧಿಯಲ್ಲಿ ಸಂವಿಧಾನ ತಿದ್ದುಮಾಡುವ ಅವಕಾಶ ಕಲ್ಪಿಸಲಾಗಿದೆ, ನಾವು ಸಂವಿಧಾನ ಬದಲಾಯಿಸುತ್ತೇವೆ ಎಂಬ ಮಾತಿನಲ್ಲಿ ತಿದ್ದುಪಡಿ ಮಾಡುವ ಅಪೇಕ್ಷೆಯಿಲ್ಲ.

ಈ ತರಹದ ಮಾತುಗಳು ಜನರ ಅಸಹನೆ ಸ್ಪೋಟಗೊಳ್ಳುವಲ್ಲಿ ಸಹಕಾರಿಯಾಗುತ್ತವೆ ಎಂಬುದಕ್ಕೆ ದೆಹಲಿಯಲ್ಲಿ ಸಂವಿಧಾನ ಪ್ರತಿಸುಟ್ಟ ಘಟನೆ ಸಾಕ್ಷಿಯಾಗುತ್ತದೆ. ಅಂಬೇಡ್ಕರ್ ಅವರ 130 ನೆ ಜನ್ಮದಿನದ ಈ ಸಂದರ್ಭದಲ್ಲಿ ಸಂವಿಧಾನ ನಮಗೆ ಎಷ್ಟರ ಮಟ್ಟಿಗೆ ತಿಳಿದಿದೆ ಎಂದು ನಮ್ಮನ್ನು ನಾವೆ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ, ಈಗ ನನ್ನ ಕಣ್ಣೆದರಿಗೆ ಇರುವ ಬಹುಪಾಲು ಜನರು ಸ್ವತಂತ್ರ ನಂತರ ಅಥವಾ ಸಂವಿಧಾನ ಹುಟ್ಟಿದ ನಂತರ ಹುಟ್ಟಿದವರಿರಬಹುದು ಎಂದು ಭಾವಿಸಿದ್ದೇನೆ.

ಹಾಗಾಗಿ ನಮ್ಮ ದೇಶಕ್ಕೆ ಈ ತೆರೆನಾದ ಸಂವಿಧಾನ ಬೇಕು ಎಂಬ ಅಂಬೇಡ್ಕರ್ ಅವರ ದನಿಯ ಹಿಂದಿನ ಅನುಭವ ಮತ್ತು ಸಂಕಟ ನಮಗ್ಯಾರಿಗೂ ಇರಲಾರದು, ಇದನ್ನು ಅರ್ಥಮಾಡಿಕೊಳ್ಳ ಬೇಕಾದರೆ ನಾವು ಅಂಬೇಡ್ಕರ್ ಅವರ ಬದುಕನ್ನ ಅಧ್ಯಾಯನ ಮಾಡಬೇಕಾಗಿದೆ,ನಂತರ ಸಂವಿಧಾನ ನಮಗೆ ಅರ್ಥವಾಗ ಬಹುದು.

ಅನೇಕ ನಾಯಕರ, ಜನಸಾಮನ್ಯರ,ಹುತಾತ್ಮರ ತ್ಯಾಗ ಬಲಿದಾನದ ಸಾಕಾರದಿಂದ 1947 ಆಗಷ್ಟ್ 15 ರಂದು ಸಿಕ್ಕ ಸ್ವತಂತ್ರದ ಆಶಯವನ್ನು ಸಾಕಾರಗೊಳಿಸಲು,1950-ಜನವರಿ 26 ರಂದು ನಮ್ಮ ದೇಶದಲ್ಲಿ ಸಂವಿಧಾನ ಜಾರಿಗೆ ತರಲಾಯಿತು.
ಒಂದು ದೇಶದ ಸಂವಿಧಾನವೆಂದರೆ ಅದು ಆ ದೇಶದ ಪವಿತ್ರ ಗ್ರಂಥವೆ ಸರಿ, ಸಂವಿಧಾನವನ್ನು ಅಪಮಾನಿಸುವುದು ದೇಶವನ್ನು ಅಪಮಾನಿಸಿದಂತೆ, ಯಾವುದಾದರೂ ಒಂದು ಸಮಾರಂಭದಲ್ಲಿ ಸೇರಿರುವ ಜನರಿಗೆ ಎಷ್ಟು ಮನೆಗಳಲ್ಲಿ ಭಗವದ್ಗೀತೆ ಇದೆ ಅಂತ ನಾನು ಪ್ರಶ್ನೆಕೇಳಿದರೆ, ಕೆಲವು ಹಿಂದೂ ಸ್ನೇಹಿತರು ಕೈ ಎತ್ತಬಹುದು.

ಎಷ್ಟು ಮನೆಗಳಲ್ಲಿ ಕುರಾನ್ ಇದೆ ಎಂದರೆ ಕೆಲವು ಮುಸ್ಲೀಂ ಸ್ನೇಹಿತರು ಕೈ ಎತ್ತ ಬಹುದು, ಅಥವಾ ಕೆಲವು ಮುಸ್ಲೀಂ ಭಾಂದವರು ನಮ್ಮ ಮನೆಯಲ್ಲಿ ಭಗವದ್ಗೀತೆ ಇದೆ ಎನ್ನಬುದು, ಕೆಲವು ಹಿಂದೂ ಬಾಂಧವರು ನಮ್ಮ ಮನೆಯಲ್ಲಿ ಕುರಾನ್ ಇದೆ ಎನ್ನಬಹುದು, ಆದರೆ ಯಾರ ಮನೆಯಲ್ಲಿ ಸಂವಿಧಾನದ ಪ್ರತಿ ಇದೆ ಎಂದು ಕೇಳಿದರೆ ಬಹುಷ್ಯ ಯಾರು ಕೈ ಎತ್ತಲಿಕ್ಕಿಲ್ಲ ಅನ್ನಿಸುತ್ತೆ.

ನಾನು ಮೇಲೆ ಹೇಳುವಾಗ ಸಂವಿಧಾನವನ್ನು ಒಂದು ದೇಶದ ಪವಿತ್ರ ಗ್ರಂಥ ಎಂದು ಹೇಳಿದೆ ಆಗೆಂದ ತಕ್ಷಣ ಅದನ್ನು ಜನರು ಒಂದು ಬಟ್ಟೆಯಲ್ಲಿ ಸುತ್ತಿ ಯಾರಿಗೂ ಸಿಗದ ಹಾಗೆ ಇಡುವ ಅಪಾಯ ಇದೆ, ಹಾಗಾಗಿ ನನ್ನ ವಾಖ್ಯವನ್ನ ಬದಲಿಸುತ್ತೇನೆ, ‘ಸಂವಿಧಾನ ಅದೊಂದು ಮಹತ್ವದ ಗ್ರಂಥ’. ಬೇಕಾದರೆ ಅವರ ಅವರ ಧರ್ಮಗ್ರಂಥಗಳನ್ನ ಬಟ್ಟೆಯಲ್ಲಿ ಸುತ್ತಿಡಲಿ, ಆದರೆ ಸಂವಿಧಾನದಂತ ಮಹತ್ವದ ಗ್ರಂಥವನ್ನು ನಿಮ್ಮ ಮನೆಯವರೆಲ್ಲರಿಗೂ ಕೈಗೆಟುಕುವಂತೆ ಇಟ್ಟು ಓದಿಸುವ ಕೆಲಸ ಮಾಡಿ.

ಸಂವಿಧಾನದ ಪ್ರತಿ ಪುಟಗಳು ಹರಿದು ಹೋಗುವಂತೆ ಓದಿ,ಅದರ ತಾತ್ವಿಕ ನೆಲೆ ಏನು ಎಂಬುದನ್ನು ಎಲ್ಲಾ ಧರ್ಮ,ಜಾತಿಯವರು ಅರ್ಥೈಸಿಕೊಂಡು ಬದುಕಿದರೆ ಮಾತ್ರ ನಾವು ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಿಕ್ಕೆ ಮತ್ತಷ್ಟು ಯೋಗ್ಯತೆಯನ್ನ ಪಡೆದುಕೊಳ್ಳುತ್ತೇವೆ.
ನಮಗೆ ಇವತ್ತು ಆತಂಕದ ವಿಷಯ ಏನು ಅಂತ ಹೇಳಿದರೆ ‘ಯುವ ಜನತೆಯನ್ನು ದಿಕ್ಕುಗೆಡಿಸುವ ಪ್ರಯತ್ನ ಇಂದು ವ್ಯವಸ್ಥಿತವಾಗಿ ನಡೆಯುತ್ತಿದೆ’.

ನಮ್ಮನ್ನು ಮುನ್ನಡೆಸಬೇಕಾದ ಸಂವಿದಾನವನ್ನು ನಾವು ಕಪಾಡಿಕೊಳ್ಳಬೇಕಾದ ಸಂದರ್ಭಬಂದಿರುವಂತದ್ದು,ಮತ್ತು ಸಂವಿಧಾನವು ಪ್ರತಿಪಾದಿಸಿದ ಬಹುತ್ವ ಭಾರತೀಯತೆಯ ತತ್ವಕ್ಕೆ ಧಕ್ಕೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ’. ಬಹುತ್ವ ಭಾರತ ಎಂದರೆ ಒಂದು ದೇಶದದೊಳಗಿನ ಎಲ್ಲಾ ಧರ್ಮಿಯರನ್ನು, ಸಮುದಾಯಗಳನ್ನು ಸಮಾನತೆ, ಸಮತೆಯಿಂದ ಕಾಣಬೇಕು ಎಂಬುದು ಸಂವಿಧಾನದ ಆಶಯವಾಗಿದೆ, ಆದರೆ ಇಂದು ಹಿಂದುತ್ವದ ಹೆಸರಿನಲ್ಲಿ ಕೆಲವರು ಅನ್ಯಧರ್ಮದ ನಿಂದನೆಯನ್ನ ಮಾಡುವುದನ್ನು ಕಾಣುತ್ತಿದ್ದೇವೆ.

ಇಸ್ಲಾಂ ಧರ್ಮದ ಹೆಸರಿನಲ್ಲಿ ಕೆಲವರು ಅಮಾನವೀಯವಾಗಿ ನಡೆದುಕೊಳ್ಳುವುದನ್ನ ಕಾಣುತ್ತಿದ್ದೇವೆ, ‘ಸರ್ವೆಜನ ಸುಖಿನೋ ಭವಂತೋ’ ಅನ್ನೊ ಭಗವದ್ಗೀತೆ ಮಾತಿಗೆ ಅಪಮಾನವಾಗುತ್ತಿದೆ. ‘ನಮ್ಮ ಮನೆಯ ಪಕ್ಕದ ಮನೆಯವನು ಯಾವ ಧರ್ಮಿಯನೆ ಆಗಿರಲಿ ಅವನ ಹಸಿವು ಕಷ್ಟಗಳಿಗೆ ಸ್ಪಂದಿಸಬೇಕು’ ಎನ್ನುವ ಕುರಾನ್ ನ ಮಾತಿಗೆ ಅಪಮಾನ ಮಾಡುತ್ತಿದ್ದೇವೆ.

ಇಂತವರಿಂದ ಸಂವಿಧಾನದ ಆಶಯಗಳಿಗೆ ಧಕ್ಕೆಯಿದೆ, ಎರೆಡು ಧರ್ಮದ ಇಂತಹ ಕೆಲವರಿಂದ ಹಲವು ಒಳ್ಳೆಮನಸುಗಳಿಗೆ ಮುಜುಗರದ ಬದುಕು ಎದುರುಗೊಳ್ಳುತ್ತದೆ.
ಅಂಬೇಡ್ಕರ್ ಕೊಟ್ಟ ಸಂವಿಧಾನ ನಮಗೆ ಜಾತ್ಯಾತೀತವಾಗಿ, ಸಮಾನತೆಯಿಂದ, ಸಮತೆಯಿಂದ,ಸಹೋಧರತೆಯಿಂದ ಬದುಕುವುದನ್ನು ಕಲಿಸುತ್ತದೆ.

ಇದು ಅಂಬೇಡ್ಕರ್ ಅವರು ನಮಗೆ ಸಂವಿಧಾನದ ರೂಪದಲ್ಲಿ ಎಲ್ಲಾ ಧರ್ಮಗಳ ಆಚೆಯಿರುವ ‘ಮಾನವಧರ್ಮ’ವನ್ನು ಕೊಟ್ಟಿರುವಂತದ್ದು, ಮನುಷ್ಯರನ್ನ ಮನುಷ್ಯರಂತೆ ಕಾಣುವುದನ್ನು ಕಲಿಸಿರುವಂತದ್ದನ್ನು ನಾವು ಅರ್ಥೈಸಿಕೊಂಡು ನಡೆಯಬೇಕಾಗಿದೆ.

ಅಂಬೇಡ್ಕರ್ ಅವರಿಗೆ ಈ ತರದ ಆಲೋಚನೆ ಕೇವಲ ಶಕ್ಷಣದಿಂದ ಬಂದದ್ದಲ್ಲ ಸ್ವತ: ಅವರು ಇದನ್ನೆಲ್ಲಾ ತಮ್ಮ ಜೀವನದಲ್ಲಿ ಅನುಭವಿಸಿದ್ದರಿಂದ ಬಂದಿರುವಂತದ್ದು, ‘ಮನುಧರ್ಮ’ದಲ್ಲಿದ್ದಂತ ಸಾಮಾಜಿಕ, ಧಾರ್ಮಿಕ, ಆಚರಣೆಗಳಿಂದ ನೋವುಂಡವರು ಅಂಬೇಡ್ಕರ್ ಅವರು.

ಹಾಗಾಗಿ ಇಂತಹ ಒಂದು ವ್ಯವಸ್ಥೆಯ ವಿರುದ್ದ ತಿರುಗಿಬಿದ್ದು ತಾನು ಅನುಭವಿಸಿದ ಸಂಕಟ,ನೋವು,ಅವಮಾನಗಳು ನನ್ನ ಮುಂದಿನ ತಲೆಮಾರು ಅನುಭವಿಸಭಾರದು ಎಂಬುದು ಅಂಬೇಡ್ಕರ್ ಅವರ ಕನಸ್ಸಾಗಿತ್ತು. ಆದರೆ ಇವತ್ತು ನಾವು ಯಾವ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇವೆಂದು ಆಲೋಚಿಸಿದರೆ ಅಂದಿನ ಆಚರಣೆ,ಸಂಪ್ರದಾಯ,ಧಾರ್ಮಿಕ ನಂಬಿಕೆಗಳ ವಿರುದ್ದ ತಿರುಗಿಬೀಳಲು ಅಂಬೇಡ್ಕರ್ ಅವರ ಹೋರಾಟ ಎಷ್ಟು ಮುಖ್ಯವಾಗಿತ್ತೊ, ಇಂದು ಅವರು ಕೊಟ್ಟ ಸಂವಿಧಾನ ನಮಗೆ ಅಷ್ಟೆ ಮುಖ್ಯವಾಗಿದೆ ಮತ್ತು ಪ್ರಸ್ತುತವಾಗಿದೆ.

1931-ಆಗಷ್ಟ್-14 ನೆ ತಾರೀಕು ಅಂಬೇಡ್ಕರ್ ಅವರು ಮಹತ್ಮಗಾಂಧಿಯವರನ್ನ ಭೇಟಿಮಾಡಿದ ಸಂದರ್ಭದಲ್ಲಿ ತುಂಬಾ ಮನನೊಂದು ಹೀಗೆ ಹೇಳಿದರಂತೆ: ‘ನನಗೆ ಒಂದು ತಾಯ್ನಾಡಿಲ್ಲ ಅಂತ ನಾನು ಹೇಳಲು ಹಿಂಜರಿಯುವುದಿಲ್ಲ ಏಕೆಂದರೆ ನನ್ನನ್ನು ಅತ್ಯಂತ ಕೀಳಾಗಿ ಕಾಣುವ ಈ ನಾಡನ್ನು, ನನ್ನನ್ನೆ ಅತ್ಯಂತ ಕೀಳಾಗಿ ಕಾಣುವ ಈ ಧರ್ಮವನ್ನು ನನ್ನ ನಾಡು,ನನ್ನ ಧರ್ಮ ಅಂತ ಒಪ್ಪಲು ನನಗೆ ಆಗುವುದಿಲ್ಲ ಅಂತ ವಿಷಾದಿಸುತ್ತೇನೆ.

ಒಂದು ವೇಳೆ ಈ ಕಾರಣಕ್ಕೆ ನನ್ನನ್ನು ದೇಶದ್ರೋಹಿ ಅಂತ ಕರೆಯುವುದಾದರೆ ಅದಕ್ಕೆ ನನ್ನ ವಿಷಾದ ಇಲ್ಲ.ಯಾಕೆಂದರೆ ನನ್ನನ್ನು ದೇಶದ್ರೋಹಿಯಾಗಿ ಮಾಡಿದ್ದು ಈ ನಾಡು.’ ಎಂದು ಹೇಳಿದರು. ಇದು ಅಂಬೇಡ್ಕರ್ ಅವರ ಸ್ವಾಭಿಮಾನದ ನುಡಿಗಳೆ ಸರಿ. ಅಂದು ಆಚರಣೆಯಲ್ಲಿದ್ದಂತ ವರ್ಣ ವ್ಯೆವಸ್ಥೆಯಿಂದ ಅವರು ಅನುಭವಿಸಿದ ಯಾತನೆ ಅವರನ್ನ ಹೀಗೆ ಮಾತನಾಡುವಂತೆ ಮಾಡಿತ್ತು.

ಈ ಎಲ್ಲಾ ಕಾರಣಗಳಿಂದಾಗಿ ಬಹುಷ್ಯ ಅಂಬೇಡ್ಕರ್ ಅವರು 1956 ಅಕ್ಟೋಬರ್ 14 ರಂದು ಬೌದ್ಧಧರ್ಮವನ್ನು ಸ್ವೀಕಾರ ಮಾಡ್ತಾರೆ. ಅದೆ ಧರ್ಮದಲ್ಲಿ 1956 ಡಿಸೆಂಬರ್ 06 ರಂದು ಅಂಬೇಡ್ಕರ್ ಅವರು ಪರಿನಿರ್ವಾಣವಾಗುತ್ತಾರೆ. ನಮ್ಮ ದೇಶಕ್ಕೆ ಸಂವಿಧಾನದಂತ ಮಾಹಾನ್ ಕೊಡುಗೆ ಕೊಟ್ಟ ಅಂಬೇಡ್ಕರ್ ಅವರಿಗೆ ಭಾರತ ರತ್ನ ಸಿಗೋದಿಕ್ಕೆ 1989/90 ರ ವರೆಗೆ ಕಾಯಬೇಕಾಯಿತು.

ಡಾ. ಬಿ.ಆರ್.ಅಂಬೇಡ್ಕರ್ ಅವರು ಕೇವಲ ಅಸ್ಪøಶ್ಯರ, ದಲಿತರ,ಹೇಳ್ಗೆಗೆ ಮಾತ್ರವಲ್ಲದೆ,ಮಹಿಳೆಯರ ,ಸರ್ಕಾರಿ ನೌಕರರ,ಖಾಸಗಿ ನೌಖರರ,ಕಾರ್ಮಿಕರ,ರೈತರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ, ಬಹಳ ಮುಖ್ಯವಾಗಿ ನಮ್ಮ ದೇಶ ಮುನ್ನಡೆಯಲು ಒಳ್ಳೆ ಸಂವಿಧಾನವನ್ನು ಕೊಟ್ಟಿದ್ದಾರೆ ಸಂವಿಧಾನದ ಬಗ್ಗೆ ಇಂದು ತೀರ ಅವಶ್ಯಕವಾಗಿ ಜನರಿಗೆ ಸರಳ ಹಾಗೂ ಸ್ಪಷ್ಟ ಮಾಹಿತಿಕೊಡುವ ಅಗತ್ಯವಿದೆ, ಅದು ನಮಗೆ ನಿತ್ಯದ ಪಾಠವಾಗಬೇಕಿದೆ, ಪ್ರಾರ್ಥನೆಯಾಗಬೇಕಿದೆ, ಮಂತ್ರವಾಗಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಜ್ಯೋತಿಬಾ ಎಂಬ ದೀವಿಗೆ ತೋರಿದ ದಾರಿ ನಮ್ಮದಾಗಲಿ

Published

on

  • ಸುರೇಶ ಎನ್ ಶಿಕಾರಿಪುರ

ಇಂದು ದೇಶ ದುರಾತ್ಮರ ಕಯ್ಯಲ್ಲಿ ಸಿಲುಕಿದೆ. ದುರಾತ್ಮರ ಉರವಣಿಗೆಯಲ್ಲಿ ಮಹಾತ್ಮರ ವಿಚಾಧಾರೆಗಳು ಮೂಲೆಗುಂಪಾಗಿವೆ. ಫುಲೆ ಜನಿಸಿದ್ದು ಮಹಾರಾಷ್ಟ್ರಾದ ಕಟಗುಣದಲ್ಲಿ. 1827 ರಲ್ಲಿ ಫುಲೆ ಜನಿಸಿ ಬೆಳೆಯುತ್ತಿದ್ದ ಕಾಲ ಜಾತಿ ವ್ಯವಸ್ಥೆಯು ಅತ್ಯಂತ ಬಿಗಿಯಾಗಿ ತನ್ನೆಲ್ಲ ವಿಕಾರಗಳನ್ನು ಮೆರೆಯುತ್ತಿದ್ದ ವಿಷಮ ಕಾಲ.

ಫುಲೆಯವರು ಜನಿಸುವುದಕ್ಕೆ ಕೇವಲ ಒಂಬತ್ತು ವರ್ಷಗಳ ಹಿಂದೆ ಅಂದರೆ 1818 ರಲ್ಲಿ ಮರಾಠಾ ಪೇಶ್ವೆಗಳ ಸಾಮ್ರಾಜ್ಯ ಬ್ರಿಟೀಷರಿಗೆ ಸೋತು ಮಂಡಿ ಊರಿತ್ತು ಪತನವಾಗಿತ್ತು. ಆದರೆ ವರ್ಣಾಶ್ರಮ ವ್ಯವಸ್ಥೆಯ ಮಹಾ ಪೋಷಕರಾಗಿದ್ದ ಪೇಶ್ವೆಗಳು ಹುಟ್ಟುಹಾಕಿದ್ದ ನಿಕೃಷ್ಟ ಜಾತಿ ವ್ಯವಸ್ಥೆ ಬಿಗಿಯಾಗೇ ಇತ್ತು.

ಬೆಳೆಯುತ್ತ ಬೆಳೆಯುತ್ತಾ ಸಮಾಜದ ಶೋಷಣೆಗಳ ಎಲ್ಲಾ ಮುಖಗಳನ್ನೂ ಕಂಡುಕೊಂಡ ಜ್ಯೋತಿಭಾ ಆ ವ್ಯವಸ್ಥೆಯನ್ನು ಮುರಿದು ಹಾಕುವ ಹಾದಿಯಲ್ಲಿ ಕ್ರಮಿಸಿ ಸಮ ಸಮಾಜದ ನಡುವೆ ರ್ಮಿತಿಗಾಗಿ ಹೋರಾಡಿದ್ದು ಒಂದು ಬಗೆಯ ಸ್ವಾತಂತ್ರ ಹೋರಾಟವೇ ಆಗಿತ್ತು‌. ಪೇಶ್ವೆಗಳು ನಿರ್ಮಿಸಿ ಹೋಗಿದ್ದ ಶ್ರೇಣೀಕೃತ ಸಮಾಜ ಅಮಾನುಷವಾಗಿತ್ತು‌.

ಅಂತಹ ಕಾಲಘಟ್ಟದಲ್ಲೇ ಅದಕ್ಕೆ ಎದುರಾಗಿ ನಿಲ್ಲುವುದೆಂದರೆ ಅದು ಮೈಮೇಲೆ ಉರುಳುವ ದೊಡ್ಡ ಬಂಡೆಯನ್ನು ತಡೆದು ನಿಲ್ಲಿಸಿಕೊಳ್ಳುವ ಸಾಹಸ. ಫುಲೆ ಆ ಬೃಹತ್ ಬಂಡೆಯನ್ನು ತಡೆದು ನಿಲ್ಲಿಸಿಕೊಂಡರು ಮಾತ್ರವಲ್ಲ ಅದು ಪಾರ್ಶ್ವಕ್ಕೆ ದೂಡಿ ಉರುಳಿಸಿದರು. ಅದು ಈಗ ಉರುಳುತ್ತಲೇ ಇದೆ. ಉರುಳುವ ಜಾತಿ ಬೂತದ ಬಂಡೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಪುರೋಹಿತರು ತಮ್ಮ ಜನಿವಾರಗಳನ್ನು ಬೀಸಿ ಹೋರಾಡುತ್ತಿದ್ದಾರೆ.

ಜ್ಯೋತಿಬಾ ಫುಲೆ ಈ ದೇಶದ ದಲಿತರ ಶೂದ್ರರ ಹಿಂದುಳಿದವರ ಮಕ್ಕಳ ಹಾಗೂ ಹೆಣ್ಣುಮಕ್ಕಳ ಶಿಕ್ಷಣದ ಹರಿಕಾರ. ಅಸ್ಟೇ ಅಲ್ಲ ಈ ದೇಶದ ಮಹಾನ್ ರೈತ ನಾಯಕ. ರೈತ ಚಳುವಳಿಯನ್ನು ಕಟ್ಟಿ ಇಂದಿನ ಎಲ್ಲಾ ರೈತ ಸಂಘಟನೆಗಳಿಗೆ ಸ್ಫೂರ್ತಿಯಾದ ನಾಯಕ.

ಒಂದು ಕಾಲದಲ್ಲಿ ಮೇಲ್ಜಾತಿಯ ಪಾರಂಪರಿಕ ಸ್ವತ್ತಾಗಿದ್ದ ಶಿಕ್ಷಣ ಇಂದು ಒಂದು ಲಾಭದಾಯಕ ವ್ಯಾಪಾರವಾಗಿ ಖಾಸಗಿ ವ್ಯವಸ್ಥೆಯ ಕಪಿ ಮುಷ್ಠಿಯಲ್ಲಿ ಸಿಲುಕಿ ಬಡವರ ಮಕ್ಕಳಿಗೆ ದುಡಿವ ಶ್ರಮಿಕರು ದಲಿತರುಗಳು ಗ್ರಾಮೀಣ ಪ್ರದೇಶದ ಮಕ್ಕಳು ಆದಿವಾಸಿಗಳ ಮಕ್ಕಳು ಅಲೆಮಾರಿಗಳ ಗಿರಿಜನರ ಮಕ್ಕಳುಗಳಿಗೆ ನಿಲುಕಲಾರದ ಸ್ಥಿತಿ ತಲುಪಿರುವಾಗ.

ಸರ್ಕಾರಿ ಶಾಲೆಗಳೆಲ್ಲ ಬಾಗಿಲು ಮುಚ್ಚಿ ಶೋಷಿತರ ಮಕ್ಕಳು ಅತ್ತ ಖಾಸಗಿ ಎಂಬ ದುಬಾರಿ ಶಾಲೆಗೆ ಸೇರಲಾಗದೆ ಸರ್ಕಾರಿಶಾಲೆಗಳನ್ನೂ ಕಳೆದುಕೊಂಡು ಮತ್ತದೇ ಕೂಲಿಗಳಾಗುವ ನಿರಕ್ಷರಕುಕ್ಷಿಗಳಾಗುವ ಹಂತ ತಲುಪಿರುವಾಗ ಇಲ್ಲಿಗೆ ನೂರೈವತ್ತು ಅರವತ್ತು ವರ್ಷಗಳ ಹಿಂದೆಯೇ ತನ್ನ ಪತ್ನಿಯನ್ನು ಓದಿಸಿ ಆಕೆಯಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನಡೆಸಿದ ಹೋರಾಟ ಭಾರತದ ಚರಿತ್ರೆಯ ಒಂದು ಮಹಾ ಅಧ್ಯಾಯ.

ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರದವ್ವನನ್ನು ದೇಶಕ್ಕೆ ಕೊಟ್ಟ ಮಹಾತ್ಮ ಜ್ಯೋತಿಬಾ. ಒಬ್ಬ ಗಂಡ ತನ್ನ ಹೆಂಡತಿಯನ್ನು ತನ್ನ ಸಮಾನಕ್ಕೆ ನೆಡೆಸಿಕೊಳ್ಳುವ ಗೌರವಿಸುವ ಆಕೆಯ ಹಾದಿಗೆ ಹೂವಾಗುವ ಜೀವವಾಗುವ ಹಾಗೂ ಆ ಸಾಧನೆ ತನ್ನದೆಂದು ಹೇಳಿಕೊಳ್ಳದ ನಿರಪೇಕ್ಷ ನಾಯಕ ಪತಿ ಈ ದೇಶದಲ್ಲಿ ಯಾರಾದರು ಇದ್ದರೆ ಅದು ಜ್ಯೋತಿಬಾ ಫುಲೆ ಮಾತ್ರ.

ಆ ಕಾಲದ ಅವರ ಶಿಕ್ಷಣ ಸೇವೆ ಸಾವಿರಾರು ವರ್ಷಗಳ ಕಾಲ ಪುರೋಹಿತಶಾಹಿ ಮತ್ತು ಪ್ರಭುತ್ವ ಪೋಷಿಸಿದ್ದ ವ್ಯವಸ್ಥೆಯನ್ನು ಅಲುಗಾಡಿಸಲು ಆರಂಭಿಸಿದ್ದಕ್ಕೆ ದಂಪತಿಗಳಿಗೆ ಉಪಟಗಳು ತಪ್ಪಲಿಲ್ಲ. ಕೊಲ್ಲುವ ಸಂಚುಗಳು ಮೇಲಿಂದ ಮೇಲೆ ನಡೆದೇ ಇದ್ದವು‌. ಅಂಗುಲಿಮಾಲನೆಂಬ ಕೊಲೆಗಾರನ ಮುಂದೆ ನಿಂತು ತನ್ನ ಶಾಂತ ಮುಖ, ಪ್ರೇಮ ತುಂಬಿದ ಕಣ್ಣುಗಳು, ಮಮತೆ ಸೂಸುವ ಮಾತುಗಳಿಂದ ಸೆಳೆದು ಆತನನ್ನು ಕ್ರೂರಾತ್ಮನಿಂದ ಪುಣ್ಯಾತ್ಮನನ್ನಾಗಿಸಿದ ಬುದ್ಧದೇವನಂತೆ, ತಮ್ಮನ್ನು ಕೊಲ್ಲಲು ಬಂದ ಅಗಂತುಕರ ಮನಸನ್ನೇ ಕರಗಿಸಿ ಅವರನ್ನು ಉದ್ಧರಿಸಿದ ಜ್ಞಾನ ಮಾರ್ಗದಲ್ಲಿ ನಡೆಸಿದ ಮಹಾತ್ಮರು ಫುಲೆ ದಂಪತಿಗಳು.

ಇಂದು ಸಂಘಪರಿವಾರ ಹಾಗೂ ಅದರ ಹಿಡಿತದಲ್ಲಿರುವ ರಾಜಕೀಯ ಪಕ್ಷಗಳು ಅದರಲ್ಲೂ ಮಹಾರಾಷ್ಟ್ರಾದ ಬಲಪಂಥೀಯ ರಾಜಕಾರಣ ಉಸಿರಾಡುವುದೇ ಶಿವಾಜಿ ಮಹಾರಾಜನ ಹೆಸರಲ್ಲಿ. ತಳ ಸಮುದಾಯದ ಶಿವಾಜಿಯನ್ನು ಹಿಂದುತ್ವದ ಮುಖವಾಣಿಯಾಗಿಸಿಕೊಂಡು ರಾಜಕೀಯ ಅಧಿಕಾರ ಹಿಡಿದು ಮತ್ತದೇ ಧಾರ್ಮಿಕ ವ್ಯವಸ್ಥೆಯನ್ನು ನಿರ್ಮಿಸಲು ಹೊರಟಿರುವವರು ಶಿವಾಜಿಯನ್ನು ಒಂದು ಕಾಲಕ್ಕೆ ಇನ್ನಿಲ್ಲದಂತೆ ಕಾಡಿದ ಅವಮಾನಿಸಿದದ್ದರು ಎಂಬುದು ಈಗ ಯಾರ ಸ್ಮೃತಿಯಲ್ಲೂ ಇಲ್ಲ.

ಅದೂ ಹೋಗಲಿ ಮುಸುಕು ಮುಸುಕಾಗಿದ್ದ ಛತ್ರಪತಿ ಶಿವಾಜಿ ಮಹಾರಾಜನ ಇತಿಹಾಸವನ್ನು ಕಾಲಗರ್ಭದಲ್ಲಿ ಹುದುಗಿಹೋಗಿದ್ದ ಆತನ ಸಮಾದಿಯನ್ನು ಶೋಧಿಸಿ ಹೊರ ಗೆಡಹಿದವರು ಇದೇ ಜ್ಯೋತಿಬಾ ಫುಲೆ. ಮಹಾರಾಷ್ಟ್ರದ ಮಹಾ ಚಾರಿತ್ರಿಕ ಪುರುಷನನ್ನು ಅವನ ನಿಜ ಇತಿಹಾಸವನ್ನು ಬೆಳಕಿಗೆ ತಂದು ಮರಾಠರು ಇಂದು ಆತನ ಹೆಸರಲ್ಲಿ ಬೀಗುವಂತೆ ಆದದ್ದು ಅವರಿಗೊಬ್ಬ ಸ್ವಾಭಿಮಾನದ ನಾಯಕನ್ನು ಕೊಟ್ಟವರೂ ಅವರೇ‌‌.

ಗೆದ್ದಿಲು ಕಟ್ಟಿದ ಹುತ್ತದಲ್ಲಿ ಹಾವು ಹೊಕ್ಕುವಂತೆ ಈಗ ಶಿವಾಜಿ ಹಿಂದೂ ರಾಜಕಾರಣದ ದಾಳವಾಗಿಹೋದ. ಆತ ನಿಜ ಇತಿಹಾಸ ಹೊರ ಗೆಡಹಿದ ಗೋವಿಂದ ಪನ್ಸಾರೆಯವರನ್ನು ಗುಂಡು ಹೊಡೆದು ಕೊಂದರು. ಈಗ ನಿಜ ಶಿವಾಜಿ ಜನಮನ ತಲುಪುತ್ತಿದ್ದಾನೆ‌.

ಇನ್ನು ರೈತ ಚಳುವಳಿಯ ವಿಚಾರಕ್ಕೆ ಬರೋಣ. ಭಾರತ ಸ್ವಾತಂತ್ರ ಪೂರ್ವದಿಂದಲೂ ಸ್ವಾತಂತ್ರಾ ನಂತರವೂ ಅನೇಕ ರೈತ ಚಳುವಳಿಗಳನ್ನು ಕಂಡಿದೆ. ಆಂಗ್ಲ ಪ್ರಭುತ್ವ ಹಾಗೂ ಭಾರತೀಯ ಪ್ರಭುತ್ವ ಎರಡೂ ಸಹ ರೈತ ಚಳುವಳಿಗಳನ್ನು ಎದುರುಗೊಂಡಿವೆ. ರೈತ ಹೋರಾಟಕ್ಕೆ ಈ ದೇಶದಲ್ಲಿ ದೀರ್ಘವಾದ ಇತಿಹಾಸವಿದೆ.

ಜ್ಯೋತಿಭಾ ರೈತ ಚಳುವಳಿಯ ನೇತಾರರು‌. ಜಮೀನುದಾರಿ ಪದ್ದತಿ, ಜಹಗೀರುದಾರಿ, ಇನಾಂದಾರಿಗಳು ಜೀವಂತವೂ ಅತ್ಯಂತ ಬಲಿಷ್ಠವೂ ಆಗಿದ್ದು ಧರ್ಮ ಮತ್ತು ಜಾತಿ ವ್ಯವಸ್ಥೆಯ ಆಧಾರ ಸ್ಥಂಭಗಳಾಗಿದ್ದ ಕಾಲದಲ್ಲಿ ರೈತ ವಿಮೋಚನೆಗಾಗಿ ನಡೆಸಿದ ಹೋರಾಟ ಇಂದಿನ ಎಲ್ಲ ಹೋರಾಟಗಳಿಗೆ, ಭೂ ಸುಧಾರಣೆಗಳಿಗೆ ಸ್ಫೂರ್ತಿಯಾಗಿದೆ‌. ಜ್ಯೋತಿಬಾ ಜಮೀನ್ದಾರಿ ಪದ್ಧತಿ ಕೊನೆಯಾಗಬೇಕೆಂದು.

ಸಾಮಂತಶಾಹಿ ಮತ್ತು ಸಾಹುಕಾರಿ ಪದ್ದತಿ ನಾಶವಾಗಬೇಕು ಹಾಗೂ ರೈತನ ದುಡಿಮೆಯ ಪ್ರತಿಫಲ ರೈತನಲ್ಲಿಯೇ ಉಳಿಯಬೇಕು. ಹೊಸ ವೈಜ್ಞಾನಿಕ ಕೃಷಿ ಪದ್ದತಿ ಜಾರಿಗೆ ಬರಬೇಕು ಎಂದು ಹೋರಾಟ ಹೂಡಿದ್ದರು. ಈಗ ಏನಾಗಿದೆ? ಈಗ ಈ ದೇಶದ ರೈತ ಬೀದಿಗೆ ಬಂದು ಬಿಸಿಲು ಚಳಿ ಮಳೆ ಎನ್ನದೆ ರೋದಿಸುತ್ತಿದ್ದಾನೆ. ಭೂಮಿ ದುಡಿಸಿಕೊಳ್ಳುವವರ ಕಯ್ಯಿಂದ ಈಗಲೂ ಹೆಚ್ಚಿನ ಪಾಲು ದುಡಿಯವವರಿಗೆ ಸಿಕ್ಕೇ ಇಲ್ಲ.

ಆದರೆ ಮತ್ತೆ ರೈತರ ಭೂಮಿಯನ್ನು ಕಾನೂನು ಎಂಬ ಅಸ್ತ್ರದಿಂದ ಕಬಳಿಸಿ ಬಂಡವಾಳಗಾರರಿಗೆ ನೀಡಲು ಹೊರಟಿರುವ ಸರ್ಕಾರವಿದೆ. ಭೂ ಸ್ವಾಧೀನ ಕಾಯ್ದೆ, ಭೂ ಮಿತಿ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕಾಯ್ದೆ ಹೀಗೆ ಹತ್ತು ಹಲವಾರು ಕಾಯ್ದೆಗಳು ರೈತನನ್ನು ನಟ್ಟ ನಡುವೆ ನಿಲ್ಲಿಸಿಕೊಂಡು ಸುತ್ತಲೂ ಕೋವಿ ಹಿಡಿದು ನಿಂತ ನರಹಂತಕರಂತೆ ಸುತ್ತುವರೆದಿವೆ.

ಜ್ಯೋತಿಬಾ ಅಂದು ಯಾವ ಪೇಶ್ವೆ ಸಂತತಿಯನ್ನು ಪ್ರತಿರೋಧಿಸಿ ಮಹಿಳೆಯರನ್ನೂ ಸೇರಿ ಎಲ್ಲಾ ಶೋಷಿತದ ಸಮುದಾಯಗಳ ಪರವಾಗಿ ಹೋರಾಡಿದ್ದರೂ ಅದೇ ಪೇಶ್ವೆಗಳ ಉತ್ತರಾಧಿಕಾರಿಗಳು ಕಾಲಕ್ಕೆ ತಕ್ಕಂತೆ ವೇಷ ಬದಲಿಸಿಕೊಂಡು ಶತಮಾನಗಳ ಕಾಲ ನಡೆಸಿದ್ದ ಎಲ್ಲಾ ಅಮಾನುಷ ದೌರ್ಜನ್ಯಗಳನ್ನು ಈಗ ಮತ್ತೆ ಎಸಗುತ್ತಿದ್ದಾರೆ.

ಅದಕ್ಕೆ ಅಷ್ಟೇ ಬಲವಾದ ಪ್ರತಿರೋಧವೂ ಎದುರಾಗಿದೆ. ಈ ಹೊತ್ತು ಅಂದು ಜ್ಯೋತಿಬಾ ಫುಲೆ ನಡೆಸಿದ್ದ ಹೋರಾಟ ಸ್ಫೂರ್ತಿಯಾಗಲಿ. ಪುರೋಹಿತಶಾಹಿ ನವ ಬಂಡವಾಳಶಾಹಿ ಕೊನೆಯಾಗಲಿ. ಜ್ಯೋತಿಬಾ ಎಂಬ ದೀವಿಗೆ ತೋರಿದ ದಾರಿ ನಮ್ಮದಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಜ್ಯೋತಿರಾವ್ ಫುಲೆ : ವಸಾಹತು ಮತ್ತು ಮೇಲ್ವರ್ಗಗಳ ಪ್ರಾಬಲ್ಯವನ್ನು ಪ್ರಶ್ನಿಸಿಸುವ ನೆಲೆಗಳು

Published

on

  • ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಶಿವಮೊಗ್ಗ

ಜ್ಯೋತಿರಾವ್ ಫುಲೆಯವರ ಚಿಂತನೆಗಳನ್ನು ಸಬಾಲ್ಟರ್ನ್ ಓದು ಕಣ್ನೋಟದಲ್ಲಿಟ್ಟು ನೋಡುವ ಕೆಲವು ಅಧ್ಯಯನಗಳು ಈಗಾಗಲೇ ಬಂದಿರುತ್ತವೆ. ಆದರೆ ಫುಲೆಯವರ ಚಿಂತನೆಯ ಸಾಧ್ಯತೆಗಳನ್ನು ಗುರುತಿಸುವುದಕ್ಕಿಂತ, ಅವುಗಳಲ್ಲಿ ಅಡಗಿರುವ ಎಪಿಸ್ಟಮಾಲಜಿಕಲ್ ಬಿಕ್ಕಟ್ಟುಗಳನ್ನು ಹಾಗೂ ತಾತ್ವಿಕ ಸಮಸ್ಯೆಗಳನ್ನು ಬಿಡಿಸಿ ನೋಡುವ ಪ್ರಯತ್ನವನ್ನು ಈ ಅಧ್ಯಯನಗಳಲ್ಲಿ ಮಾಡಲಾಗಿದೆ.

ಹಾಗೂ ವಸಾಹತು ಪ್ರಭುತ್ವಕ್ಕೆ ಫುಲೆಯವರು ನಿಷ್ಠರಾಗಿದ್ದರು ಎಂಬ ಆರೋಪವನ್ನು ಇವರ ಮೇಲೆ ಹೇರಲಾಗಿದೆ. ಅದೇನೆಯಿರಲಿ, ‘ಬ್ರಾಹ್ಮಣಾಚ ಕಸಬ್ (1869), ‘ಗುಲಾಮಗಿರಿ (1873) ಮೊದಲಾದ ತಮ್ಮ ಬರಹಗಳಲ್ಲಿ ಫುಲೆಯವರು, ‘ಶೂದ್ರ-ಅತಿಶೂದ್ರ’ ಪ್ರಜ್ಞೆಯನ್ನು ಎಚ್ಚರಗೊಳಿಸುವ ಅತ್ಯಂತ ಮಹತ್ವದ ಕೆಲಸವನ್ನು ಇವರು ಮಾಡಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಸಬಾಲ್ಟರ್ನ್ ಓದಿನ ಪ್ರಾಥಮಿಕ ಕಣ್ನೋಟವೇ ಸಮೂಹ ಮತ್ತು ವ್ಯಕ್ತಿಪ್ರಜ್ಞೆಯನ್ನು ಜಾಗ್ರತಗೊಳಿಸುವುದು ಮತ್ತು ಆ ಮೂಲಕ ಅವರಲ್ಲಿ ಅವರವರ ಅಸ್ಮಿತೆ, ಅಸ್ತಿತ್ವ ಹಾಗೂ ರಾಜಕೀಯ ನಿಲುವುಗಳನ್ನು ಗುರುತಿಸುವ ಬಗೆಯಾಗಿರುತ್ತದೆ. ಏಕೆಂದರೆ, ಸಬಾಲ್ಟರ್ನ್ ಸಮೂಹಗಳೆಂದು ಇವತ್ತು ನಾವು ಗುರುತಿಸುವ ಬಹುತೇಕ ಸಮೂಹಗಳು ಪ್ರೀ-ಪೊಲಿಟಿಕಲ್ ನೆಲೆಯಲ್ಲಿರುತ್ತವೆ.

ಇಂತಹ ನಿಲುವುಗಳನ್ನು ಪಲ್ಲಟಗೊಳಿಸುವ ಅತ್ಯಂತ ಮಹತ್ವದ ಕೆಲಸವು ಈ ಸಬಾಲ್ಟರ್ನ್ ಪ್ರಜ್ಞೆಯನ್ನು ಎಚ್ಚರಗೊಳಿಸುವ ಮೂಲಕ ನೆರವೇರುತ್ತವೆ ಎಂಬುದು ಗಮನಾರ್ಹ. ಇಂತಹವೊಂದು ಮಹತ್ವದ ಕೆಲಸವನ್ನು ಫುಲೆಯವರು ಮಾಡಿರುತ್ತಾರೆ ಅನ್ನುವುದು ವಿಶೇಷ. 19ನೇ ಶತಮಾನದ ಕಾಲ ಮತ್ತು ಚಾರಿತ್ರಿಕ ನಿಲುವುಗಳು ಕೇವಲ ‘ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತದಲ್ಲಿದ್ದವು. ಈ ನಿಲುವು ಇವತ್ತಿಗೂ ಬದಲಾಗಿರುವುದಿಲ್ಲ.

ಇದೊಂದು ತಪ್ಪು ನಡೆಯೆಂದು ನಾನು ವಾದಿಸಲಾರೆ, ಆದರೆ ರಾಷ್ಟ್ರೀಯತೆಯ ಕಲ್ಪನೆಯು ಈ ದೇಶದ ಎಲ್ಲ ಸಮೂಹಗಳನ್ನು ಒಳ್ಗೊಂಡಿರುವ ಬಗೆಯಾಗಿ ಇವತ್ತಿಗೂ ಮುಂದೆ ಬರಲಿಲ್ಲ. ಹೊರತಾಗಿ ತಾರತಮ್ಯ ಮತ್ತು ಅಸಮಾನ ರಚನೆಗಳನ್ನೇ ನಿರಂತರಗೊಳಿಸುವ ಬಗೆಯಾಗಿ, ಇವತ್ತಿಗೂ ಇದು ಮುಂದುವರೆದಿದೆ. ಹಾಗಾಗಿ ಫುಲೆಯವರ ಚಿಂತನೆಗಳು ಸಬಾಲ್ಟರ್ನ್ ಅಧ್ಯಯನ ಸನ್ನಿವೇಶದಲ್ಲಿ ಮಹತ್ವವನ್ನು ಪಡೆಯುತ್ತವೆ.

ಪರಿಣಾಮವಾಗಿ, ಫುಲೆಯವರ ತಿಳುವಳಿಕೆಗಳಲ್ಲಿ, ಈಗಾಗಲೇ ಚರಿತ್ರೆ, ಸಂಸ್ಕೃತಿ ಚಿಂತನೆಗಳಲ್ಲಿ ನೆಲೆನಿಂತಿರುವ ಏಕಾಕೃತಿಯ ನಿಲುವುಗಳಿಗೆ ಬದಲಾಗಿ, ಈ ದೇಶದ ಬಹುತ್ವದ ಸಾಮಾಜಿಕ, ಸಾಂಸ್ಕೃತಿಕ ವಿನ್ಯಾಸಗಳನ್ನು ಗುರುತಿಸುವ ಇರಾದೆಯನ್ನು ಕಾಣುತ್ತೇವೆ. ಅಂದರೆ ಶೂದ್ರ, ಅತಿಶೂದ್ರ ಪ್ರಜ್ಞೆಯ ಮೂಲಕ ಚರಿತ್ರೆಯೊಳಗೆ ಹುದುಗಿರುವ ಹಿಂಸೆ ಮತ್ತು ಯಜಮಾನಿಕೆಯ ವಿನ್ಯಾಸಗಳನ್ನು ಇವರು ಗುರುತಿಸಿರುತ್ತಾರೆ.

ದಿಟ, ಫುಲೆಯವರು ತಳ/ದಲಿತ/ಶೂದ್ರ ಸಮೂಹಗಳಲ್ಲಿ ಸಬಾಲ್ಟರ್ನ್ ಪ್ರಜ್ಞೆಯನ್ನು ಬೆಳೆಸುವಲ್ಲಿ ಸಫಲವಾಗಲಿಲ್ಲ ಎಂಬ ಆರೋಪಗಳನ್ನು ಮಾಡಲಾಗುತ್ತದೆ. ವಸಾಹತು ಪ್ರಭುತ್ವದ ಪ್ರಾಬಲ್ಯ ಮತ್ತು ಅಧಿಕಾರದ ಹಂಗಿನಲ್ಲಿದ್ದ ಸನ್ನಿವೇಶದಲ್ಲಿ ಫುಲೆಯವರು ರೂಪಿಸಿದ ಈ ಚಿಂತನೆಗಳಿಗೆ ಬಹದೊಡ್ಡ ವ್ಯಾಪ್ತಿಯಿದೆ. ಏಕೆಂದರೆ ಚಾರಿತ್ರಿಕ ವಾಸ್ತವಗಳು ಕೇವಲ ರಾಜಕೀಯವಾಗಿ ಮಾತ್ರ ಒಗ್ಗೂಡಿರುತ್ತವೆ ಹಾಗೂ ಪಳಗಿರುತ್ತವೆ ಎಂಬ ದಿಟವನ್ನು ನಾವು ಗಮನಿಸಬೇಕು.

‘ಸತ್ಯಶೋಧಕ ಸಮಾಜ’ದ ಮೂಲಕ ನಮ್ಮ ಬಹು ಸಮೂಹಗಳ ಸಾಮಾಜಿಕ ವಿನ್ಯಾಸಗಳಲ್ಲಿ ಹುದುಗಿರುವ ಪ್ರಾಬಲ್ಯ ಮತ್ತು ಅಧೀನತೆಯ ಸಂಬಂಧಗಳ ಮೂಲಗಳನ್ನು ಹುಡುಕುವ ಮಹತ್ವದ ಕೆಲಸವನ್ನೂ ಇವರು ಕೈಗೊಂಡಿದ್ದರು. ಎರಡು ಬಗೆಯಲ್ಲಿ ಸಮೂಹಗಳ ಪ್ರಜ್ಞೆಯನ್ನು ಎಚ್ಚರಗೊಳಿಸುವ ನಿಲುವುಗಳನ್ನು ಸತ್ಯಶೋಧಕ ಸಮಾಜದ ಮೂಲಕ ನೆರವೇರಿಸಲಾಗುತಿತ್ತು.

ಒಂದು ಶಿಕ್ಷಣ ಮತ್ತೊಂದು ಸಾಮಾಜಿಕ-ರಾಜಕೀಯ ಪ್ರಜ್ಞೆ ಎಂದು ಈ ನಿಲುವುಗಳನ್ನು ಗುರುತಿಸಬಹುದು. ಈ ಎರಡೂ ನಿಲುವುಗಳು ಸಮೂಹಗಳ ಪ್ರತಿನಿಧೀಕರಣದ ಅಯಾಮಗಳನ್ನು ಖಚಿತಗೊಳಿಸುವುದಕ್ಕೇ ಅತ್ಯಂತ ಒತ್ತಾಸೆಯಾಗಿದ್ದವು. ರಾಜಕೀಯ-ಸಾಮಾಜಿಕ ಹಾಗೂ ನಮ್ಮ ಚರಿತ್ರೆಯನ್ನು ಕಟ್ಟಿಕೊಳ್ಳುವುದಕ್ಕೆ ಅಗತ್ಯವಾದ ಬಂಡಾಯದ ಮಾದರಿಗಳು ಫುಲೆಯವರ ಚಿಂತನೆಗಳಲ್ಲಿ ನಿಚ್ಚಳವಾಗಿ ಮೂಡಿಬಂದಿರುತ್ತವೆ.

ಅಂಬೇಡ್ಕರ್ ಅವರ ಪ್ರಭಾವ ಹಾಗೂ ಆಲೋಚನೆಗಳ ಪರಿಣಾಮವಾಗಿ, ಭಾರತ/ಕರ್ನಾಟಕದಲ್ಲಿ ಪ್ರತಿರೋಧದ ಮಾದರಿಗಳನ್ನು ಮರು ವಿನ್ಯಾಸಗೊಳಿಸುವ ನಡೆಗಳು ಅತ್ಯಂತ ತೀವ್ರವಾಗಿ ನಡೆದಿರುವುದನ್ನು ನಾವು ಕಾಣುತ್ತೇವೆ. ದಿಟ, ಕರ್ನಾಟಕದ ಸಾಹಿತ್ಯ ಚರಿತ್ರೆಗಳನ್ನು ಗಮನಿಸಿದರೆ, ಹಲವು ಬಗೆಯ ಪ್ರತಿರೋಧದ ಮಾದರಿಗಳನ್ನು ನಾವು ಗುರುತಿಸುತ್ತೇವೆ.

ಆದರೆ ಪ್ರಜಾಪ್ರಭುತ್ವದ ಸನ್ನಿವೇಶದಲ್ಲಿಯೂ ತಳ-ದಲಿತ-ಶೂದ್ರ ಸಮೂಹಗಳು ಯಾವ ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತವೆ ಎಂಬುದನ್ನು ಮನಗಂಡಾಗ, ಅಂಬೇಡ್ಕರ್ ಮತ್ತು ಫುಲೆಯವರಂತವರು ರೂಪಿಸಿದ ಚಿಂತನೆಯ ಮಾದರಿಗಳು, ನಮ್ಮ ಸದ್ಯದ ಚರಿತ್ರೆ, ರಾಜಕಾರಣಗಳು ರೂಪಿಸುವ ಏಕಾಕೃತಿಯ ಮಾದರಿಗಳಿಗೆ ಪ್ರತಿರೋಧವನ್ನು ಒಡ್ಡುವಲ್ಲಿ ಸಂಘಟನೆಗಳು ಹೇಗೆ ಬೆಳೆದುಬಂದವು ಎಂಬುದನ್ನು ಕುರಿತು ಯೋಚಿಸುವ ಜರೂರಿದೆ.

ಇಲ್ಲಿ ಇವತ್ತು ನಾವು ಚರ್ಚಿಸುತ್ತಿರುವ ಪ್ರತಿರೋಧದ ಈ ಮಾದರಿಗಳು ಸಾಮಾಜಿಕ ಮತ್ತು ರಾಜಕೀಯ ನೆಲೆಯಿಂದ ಪ್ರೇರಣೆಗಳನ್ನು ಪಡೆದಿರುತ್ತವೆ. ಸಾಮಾಜಿಕ ಪ್ರೇರಣೆಗಳು ರಾಜಕೀಯ ನೆಲೆಯಿಂದ ಪ್ರತಿರೋಧದ ಮಾದರಿಗಳನ್ನು ರೂಪಿಸುವುದಕ್ಕೆ ಕಾರಣವಾಗಿರುವಂತೆ, ಹಾಗೇನೇ ರಾಜಕೀಯ ಪ್ರೇರಣೆಗಳು ಸಾಮಾಜಿಕವಾಗಿ ಸಂಘಟನೆಗೊಳ್ಳಲೂ ಕಾರಣವಾಗಿರುತ್ತವೆ.

ಅಂದರೆ, ಇವುಗಳ ನಡುವೆ ಅದಲು-ಬದಲು ಮಾಡಿಯೂ ನೋಡುವ ಸಾಧ್ಯತೆ ಇದೆ ಎಂಬಂಶವನ್ನು ನಾವಿಲ್ಲಿ ಮನಗಾಣಬೇಕಿದೆ. ಈ ದೆಸೆಯಲ್ಲಿ ಪ್ರತಿರೋಧದ ಮಾದರಿಗಳನ್ನು ಚರ್ಚಿಸುವುದಾದರೆ, 1970ರ ದಶಕದಲ್ಲಿ, ಕರ್ನಾಟಕದಲ್ಲಿ ಮುಂಚೂಣಿಗೆ ಬಂದಂತಹ ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ (ಬಿ, ಕೃಷ್ಣಪ್ಪ,) ಹಾಗೂ ‘ಬೂಸಾ ಚಳುವಳಿ’ಗಳ (ಬಿ.ಬಸವಲಿಂಗಪ್ಪನವರು) ಪರಿಣಾಮಗಳನ್ನು ಕುರಿತು ಇವತ್ತು ಯೋಚಿಸಿಬೇಕಿದೆ.

ಆದರೆ ಇವುಗಳ ಬಗೆಗೆ ಇವತ್ತು ನಾವು ಹಲವು ರೀತಿಯ ಫಲಿತಗಳನ್ನು ಕಾಣುತ್ತೇವೆ. ಆದರೆ ಈ ಸಂಘಟನೆಗಳು ಹುಟ್ಟು ಹಾಕಿರುವ ವೈಚಾರಿಕ ವಿನ್ಯಾಸಗಳು ಮಾತ್ರ ಹಲವು ಸಾಮಾಜಿಕ-ರಾಜಕೀಯ ಪಲ್ಲಟಗಳಿಗೆ ಕಾರಣವಾಗಿರುತ್ತವೆ. ಅಂದ ತಕ್ಷಣವೇ, ಇವತ್ತು ಈ ಸಂಘಟನೆಯೊಳಗೆ ಏರ್ಪಟ್ಟಿರುವ ಬಿರುಕುಗಳನ್ನು ಮಾತ್ರ ದೊಡ್ಡದಾಗಿ ಬೆಟ್ಟುಮಾಡಿ ತೋರಿಸುವ ಧೋರಣೆಗಳನ್ನು ನೋಡುತ್ತೇವೆ.

ಆದರೆ ಈ ಸಂಘಟನೆಗಳು ಉಂಟುಮಾಡಿರುವ ಪರಿಣಾಮಗಳು ನಗಣ್ಯವಾಗುತ್ತವೆ ಮತ್ತು ಚಾರಿತ್ರಿಕವಾಗಿ ಸೋಲೊಪ್ಪುವ ನೆಲೆಗಳಿಗೆ ಇವುಗಳನ್ನು ಗುರಿಮಾಡುತ್ತೇವೆ. ಇದಕ್ಕೆ ಎರಡು ಬಗೆಯ ಕಾರಣಗಳನ್ನು ಇಲ್ಲಿ ಕಂಡುಕೊಳ್ಳಬಹುದು. ಇಂತಹ ಸಂಘಟನೆಗಳ ತಾತ್ವಿಕತೆ ಮತ್ತು ಪರಿಕರಗಳ ವಿನ್ಯಾಸದಲ್ಲಿಯೇ ಲೋಪಗಳಿವೆ ಎಂಬುದು ಒಂದು ಕಾರಣವಾದರೆ, ಮತ್ತೊಂದು ಕಾರಣವು, ಈ ಸಂಘಟನೆಯೊಳಗೆ ಸೇರಿರುವ ಜಾತಿ ಮತ್ತು ಒಳಪಂಗಡಗಳ ನಡುವಣ ಅಧಿಕಾರ ಸಂಬಂಧದ ನೆಲೆಗಳು ಎಂದೇ ಹೇಳಬಹುದಾಗಿದೆ.

ಏಕೆಂದರೆ, ರಾಜಕೀಯ ಅಧಿಕಾರದ ಮೇಲಾಟದಲ್ಲಿ ಎದುರಾಗುವ ಪರಿಣಾಮಗಳು ಎಂತಹವು ಎಂಬುದನ್ನು ಇವತ್ತು ಊಹಿಸುವುದಕ್ಕೂ ಕಷ್ಟ. ಇವತ್ತು ಇಡೀ ಭಾರತದುದ್ದಕ್ಕೂ ಕಾಣುವ ರಾಜಕೀಯ ಧೃವೀಕರಣದ ಮಾದರಿಗಳನ್ನು ನೋಡಿದರೆ, ಈ ಕಷ್ಟದ ಹಿಂದಿನ ನೆಲೆಗಳು ನಮಗೆ ನಿಚ್ಚಳವಾಗಿ ತೋರುತ್ತವೆ. ಯಾವ ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ ನಿಲುವುಗಳನ್ನು ವಿರೋಧಿಸಲೆಂದು ಈ ಸಂಘಟನೆಗಳು ಹುಟ್ಟಿಕೊಂಡಿದ್ದವೋ ಅದನ್ನೆಲ್ಲ ಮರೆತು ಅಧಿಕಾರದ ಅಧೀನತೆಗೆ ಒಳಗಾಗುತ್ತಿವೆ.

ಅಂದರೆ ಇದು ದಲಿತ ಮತ್ತು ಹಿಂದುಳಿದ ಸಮೂಹಗಳಿಗೆ ಅಧಿಕಾರವನ್ನು ನಿರಾಕರಿಸುವುದಲ್ಲ. ಬದಲಾಗಿ, ಯಾರು ಇದುವರೆಗೂ ಅಧಿಕಾರ ಕೇಂದ್ರಗಳಲ್ಲಿ ನೆಲೆಗೊಂಡು, ತಳ-ದಲಿತ-ಶೂದ್ರ ಸಮೂಹಗಳನ್ನು ಶೋಷಣೆಗೆ ಈಡು ಮಾಡಿದ್ದವೋ, ಅಂತಹ ಸಮೂಹಗಳು ರೂಪಿಸುವ ರಾಜಕೀಯ ಅಧಿಕಾರಕ್ಕೆ ಈ ಎಲ್ಲ ತಳ-ದಲಿತ-ಶೂದ್ರ ಸಮೂಹಗಳು ಅಸ್ತ್ರಗಳಾಗಿ ಬಳಕೆಯಾಗುತ್ತವೆ.

ಇವರಿಗೆ ಅಧಿಕಾರವೆಂಬುದು ಮಾಧ್ಯಮವಾಗಬೇಕು ಮತ್ತು ಸಾಮಾಜಿಕ ಸ್ವಾಯತ್ತತೆಯನ್ನು ತಂದುಕೊಡುವ ಸಾಮಾಜಿಕ ವಿನ್ಯಾಸವಾಗಬೇಕು. ಈ ಕಾರಣದಿಂದ ಈ ಎಲ್ಲ ಸಬಾಲ್ಟರ್ನ್ ಸಮೂಹಗಳಿಗೆ ಇವತ್ತು ಬೇಕಾಗಿರುವುದು ಹೊಸ ಸಾಮಾಜಿಕ ವ್ಯವಸ್ಥೆಯೇ ಹೊರತು, ಕೇವಲ ಅಧಿಕಾರವಲ್ಲ.

ಅಂದರೆ, ಸಾಮಾಜಿಕ ರಚನೆಯಲ್ಲಿಯೇ ಶೋಷಣೆಯ ಮಾದರಿಗಳನ್ನು ಅಡಕಗೊಳಿಸುವಂತೆ, ಈ ಹೊಸ ಸಾಮಾಜಿಕ ವ್ಯವಸ್ಥೆಯಲ್ಲಿಯೇ, ಎಲ್ಲ ತಳ-ದಲಿತ-ಶೂದ್ರ ಸಮೂಹಗಳು ಹಸನಾಗಿ ಬದುಕುವುದಕ್ಕೆ ಬೇಕಾದ ಅಧಿಕಾರ ಮತ್ತು ಜ್ಞಾನಶಿಸ್ತುಗಳನ್ನು ನೆಲೆಗೊಳಿಸುವ ಅಗತ್ಯವಿದೆ. ಈಗಾಗಲೇ ಹೇಳಿದಂತೆ, ಚರಿತ್ರೆ, ಮೀಮಾಂಸೆಗಳಂತಹ ಜ್ಞಾನಶಿಸ್ತುಗಳನ್ನು ರೂಪಿಸುವ ನಿಟ್ಟಿನಲ್ಲಿ ಹೋರಾಟಗಳು ಇಲ್ಲವೇ ಚಳವಳಿಗಳು ತಲೆಯೆತ್ತಬೇಕಿದೆ.

ಇವುಗಳು ಕೇವಲ ರಾಜಕೀಯ ಸರಿತನ ಇಲ್ಲವೇ ಕಾನೂನುಗಳನ್ನು ಜಾರಿಗೊಳಿಸುವುದಷ್ಟಕ್ಕೆ ಮಾತ್ರ ಸೀಮಿತಗೊಳ್ಳುವುದು ಸರಿಯಾದ ನಿಲುವಲ್ಲ.
ಅದೇನೇ ಇರಲಿ, ದಲಿತ ಸಂಘರ್ಷ ಸಮಿತಿ ಮತ್ತು ಬೂಸಾ ಚಳುವಳಿಗಳು ಸಾಂಸ್ಕೃತಿಕ ಮೀಮಾಂಸೆ, ಚರಿತ್ರೆ, ರಾಜಕೀಯ ತತ್ವಗಳ ಮೂಲಭೂತವಾದವನ್ನು ಪಲ್ಲಟಗೊಳಿಸುವ ಕೆಲಸವನ್ನು ಮಾಡಿರುವುದನ್ನು ಮರೆಯುವಂತಿಲ್ಲ.

ಆದರೆ ಇವುಗಳು ಬೌದ್ಧಿಕ ಸ್ವಾಯತ್ತತೆಯನ್ನು ರೂಪಿಸುವಷ್ಟು ಬಲವಾಗಿ ಬೆಳೆದಿಲ್ಲವೆಂಬುದು ಕೂಡ ಅಷ್ಟೇ ದಿಟವಾದ ಸಂಗತಿಯಾಗಿದೆ. ಈಚೆಗೆ ನಡೆದ ಚಲೋ-ಉಡುಪಿಯಂತಹ ಹೋರಾಟಗಳೂ ಒಂದು ರಾಜಕೀಯ ಪರಿಣಾಮವನ್ನು ಬೀರಿರುತ್ತವೆ. ಆದರೆ ಈ ಪರಿಣಾಮವು ಕೇವಲ ಒಂದು ಚಾರಿತ್ರಕ ಬೆಳವಣಿಗೆಯಾಗಿ ಇರುತ್ತದೆಯೇ ಹೊರತು ಈಗಾಗಲೇ ಅಸ್ತಿತ್ವದಲ್ಲಿರುವ ಯಾವುದೇ ಬಗೆಯ ಚಾರಿತ್ರಿಕ ತಿಳಿವು ಮತ್ತು ನಂಬಿಕೆಗಳನ್ನು ಪಲ್ಲಟಗೊಳಿಸುವಲ್ಲಿ ಅತ್ಯಂತ ಪ್ರಬಲವಾದ ವಿದ್ಯಮಾನವಾಗುವುದಿಲ್ಲ.

ಏಕೆಂದರೆ ತಳ-ದಲಿತ-ಶೂದ್ರ-ಅಲ್ಪಸಂಖ್ಯಾತ ಸಮೂಹಗಳನ್ನು ಒಟ್ಟಾಗಿ ರಾಜಕೀಯ ಮತ್ತು ಸಾಮಾಜಿಕ ಶಕ್ತಿಯನ್ನಾಗಿ ಪ್ರದರ್ಶಿಸುವುದಕ್ಕೆ ಬೇಕಾದ ಸಿದ್ಧತೆಗಳು ನಮ್ಮಲ್ಲಿ ಇನ್ನೂ ಸಜ್ಜುಗೊಂಡಿಲ್ಲ. ಇಂತಹ ವ್ಯವಸ್ಥೆಯು ಎರಡು ಬಗೆಯಲ್ಲಿ ನೆರವೇರುತ್ತದೆ. ಒಂದು ಬೌದ್ಧಿಕ ನೆಲೆಯಿಂದ ಮತ್ತೊಂದು ಸಾಮಾಜಿಕ-ರಾಜಕೀಯ ನೆಲೆಯಿಂದ ಎಂದು ಹೇಳಬಹುದು. ಇವೆರಡೂ ಪೂರಕವಾಗಿ ನಡೆಯುವ ಅವಶ್ಯಕತೆ ಇರುತ್ತದೆ.

ಕೇವಲ ಬೌದ್ಧಿಕ ಇಲ್ಲವೇ ರಾಜಕೀಯ ಹೋರಾಟಗಳಿಂದ ನಮ್ಮ ಸಾಮಾಜಿಕ-ರಾಜಕೀಯ ವ್ಯವಸ್ಥೆಗಳನ್ನು ರೂಪಾಂತರಿಸುವ ಕೆಲಸವು ನಡೆಯಲಾರದು. ಬೌದ್ಧಿಕತೆ ಎಂಬುದು ಪರಮಸತ್ಯವಲ್ಲ ದಿಟ. ಆದರೆ ಬೌದ್ಧಿಕ ಕ್ರಿಯಾಶೀಲತೆಯು ನಮ್ಮ ಪ್ರಜ್ಞೆಯನ್ನು ಎಚ್ಚರಿಸಬಲ್ಲದು ಅನ್ನುವುದು ಮಾತ್ರ ದಿಟ. ಆದರೆ ಕರ್ನಾಟಕ ಇಲ್ಲವೇ ಒಟ್ಟಾರೆ ಭಾರತದಲ್ಲಿ ‘ನಿನ್ನೆಗಳ ಮರುರಚನೆ’ಯಲ್ಲಿ ಹುದುಗಿರುವ ತಾತ್ವಿಕ ಲೋಪಗಳಿಂದ, ಈ ಬೌದ್ಧಿಕತೆ ಎಂಬುದು ಕೇವಲ ಶೈಕ್ಷಣಿಕ ಕಸರತ್ತಾಗಿ ಕಂಡುಬಂದಿದೆ. ಹಾಗಾಗಿ ಕರ್ನಾಟಕದ ನಿನ್ನೆಗಳ ಮರುರಚನೆಯ ವಿನ್ಯಾಸಗಳನ್ನು ಕುರಿತು ಇಂದು ವಿಶ್ಲೇಷಿಸುವ ಜರೂರಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending