ದಿನದ ಸುದ್ದಿ
ದಲಿತ ಯುವತಿ ಅತ್ಯಾಚಾರ-ಕೊಲೆ | ಹೊಳಲ್ಕೆರೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನೆ
ಸುದ್ದಿದಿನ,ಚಿತ್ರದುರ್ಗ -ಹೊಳಲ್ಕೆರೆ : ಮನಿಷಾಳ ಸಾಮೂಹಿಕ ಅತ್ಯಾಚ್ಯಾರ ಹಾಗೂ ಕೊಲೆಗೆ ಸಂಬಂದಿಸಿದಂತೆ ನೇರ ಹೊಣೆಯನ್ನು ಹೊತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಮೃತ ಮನಿಷಾಳ ಕುಟುಂಬಕ್ಕೆ ಯುಪಿ ಸರ್ಕಾರ 1 ಕೋಟಿ ರೂಗಳನ್ನು ಪರಿಹಾರವಾಗಿ ನೀಡಬೇಕು ಮತ್ತು ಕುಟುಂಬದ ಎರಡು ಜನ ಸದಸ್ಯರಿಗೆ ಸರ್ಕಾರಿ ನೌಕರಿಯನ್ನು ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಚಿತ್ರದುರ್ಗ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯ್ಯಪ್ಪ ಆಗ್ರಹಿಸಿದರು.
ಉತ್ತರ ಪ್ರದೇಶದ ಹುತ್ರಾಸ್ ನಗರದ ವಾಸಿಯಾದ ವಾಲ್ಮಿಕಿ ಜನಾಂಗಕ್ಕೆ ಸೇರಿದ 19 ವರ್ಷದ ಮನಿಷಾ ಎಂಬ ಯುವತಿಯ ಮೇಲೆ ನಾಲ್ಕುಜನ ಸವರ್ಣಿಯರ ಯುವಕರಿಂದ ಅತ್ಯಾಚಾರ ನಡೆಸಿ ಕ್ರೂರವಾಗಿ ಕೊಲೆ ಮಾಡಿರುವುದನ್ನು ಖಂಡಿಸಿ ಕಾಮುಕರನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಇಂದು ಹೊಳಲ್ಕೆರೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಉತ್ತರ ಪ್ರದೇಶದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ದಲಿತ ವರ್ಗಕ್ಕೆ ಸೇರಿದ ಮನಿಷಾಳನ್ನು ಸೆಪ್ಟಂಬರ್ 14 ರಂದು ಕ್ರೂರವಾಗಿ ನಾಲ್ಕುಜನ ಯುವಕರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಅವಳ ನಾಲಗೆಯನ್ನು ಕತ್ತರಿಸಿ ಬೆನ್ನುಮೂಳೆಯನ್ನು ಮುರಿದು ಪೈಶಾಚಿಕ ಕೃತ್ಯ ಎಸಗಿದ್ದರೂ ಯುಪಿ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಈ ಪ್ರಕರಣದ ನೇರ ಹೊಣೆಯನ್ನು ಯುಪಿ ಸರ್ಕಾರದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಯನ್ನು ನೀಡಬೇಕು ಇಲ್ಲಾದಿದ್ದರೆ ಪ್ರತಿಭಟನೆಯು ಉಗ್ರ ಸ್ವರೂಪ ತಾಳುತ್ತದೆ ಎಂದು ಜಿಲ್ಲಾ ಸಂಚಾಲಕರಾದ ಕೆಂಗುಂಟೆ ಜಯ್ಯಪ್ಪ ಆಕ್ರೋಶವನ್ನು ವ್ಯಕ್ತಪಡಿಸಿದರು.
ಮನಿಷಾ ತನ್ನ ತಾಯಿಯೊಂದಿಗೆ ಹುಲ್ಲು ಕತ್ತರಿಸಲು ಜಮೀನಿಗೆ ಹೋಗುತಿದ್ದಾಗ ಗ್ರಾಮದ ಮೇಲ್ಜಾತಿಗೆ ಸೇರಿದ ಸಂದೀಪ , ರಾಮು, ಲವಕುಶ , ಮತ್ತು ರವಿ , ಇವರುಗಳು ಮನಿಷಾಳ ಮೇಲೆ ದಾಳಿ ನಡೆಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೆ ಕಾರಣರಾಗಿರುತ್ತಾರೆ. ಇವರುಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಪ್ರತಿಭಟನಕಾರರು ತಾಲೂಕು ಕಚೇರಿ ಎದುರು ಪ್ರತಿಭಟಿಸಿದರು.
ಪೋಲೀಸ್ ಇಲಾಖೆಯು ಅತ್ಯಾಚಾರಕ್ಕೀಡಾದ ಸಂತ್ರಸ್ತೆಯ ಮೃತ ದೇಹವನ್ನು ಪೋಷಕರಿಗೆ ನೀಡದೆ ರಾತ್ರೋರಾತ್ರಿ ಬಲವಂತವಾಗಿ ಪೋಲೀಸರೆ ಶವಸಂಸ್ಕಾರ ಮಾಡಿ ಹೀನ ಕೃತ್ಯ ಎಸಗಿದ್ದಾರೆ ಇಲ್ಲಿನ ಪೋಲಿಸರು ಕಾನೂನನ್ನೂ ಮೀರಿ ನಡೆದುಕೊಂಡಿದ್ದಾರೆ. ಆದರೂ ಸಹ ಇವರುಗಳನ್ನು ಅಮಾನತ್ತು ಮಾಡಿರುವುದಿಲ್ಲಾ, ಈ ಎಲ್ಲಾ ರೀತಿಯ ಪ್ರಕರಣಗಳನ್ನು ಗಮನಿಸಿದರೆ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತಿದೆ, ಶವಸಂಸ್ಕಾರ ಮಾಡಿದ ಎಲ್ಲಾ ಪೋಲೀಸ್ ಅದಿಕಾರಿಗಳನ್ನು ಕೂಡಲೆ ಅಮಾನತು ಮಾಡಬೇಕೆಂದರು.
ಪ್ರತಿಭಟನೆ ಪ್ರಮುಖಾಂಶಗಳು
- ಮನಿಷಾಳ ಅತ್ಯಾಚ್ಯಾರ ಮತ್ತು ಕೊಲೆಗೆ ಸಂಬಮದಿಸಿದಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇರ ಹೊಣೆಯನ್ನು ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು.
- ವಾಲ್ಮೀಕಿ ಜನಾಂಗಕ್ಕೆ ಸೇರಿದ ಮನಿಷಾಳನ್ನು ಬರ್ಬರವಾಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆಗೆ ಕಾರಣರಾದ ಸಂದೀಪ , ರಾಮು, ಲವಕುಶ , ಮತ್ತು ರವಿ ಇವರುಗಳನ್ನು ಗಲ್ಲಿಗೇರಿಸಬೇಕು.
- ಅತ್ಯಾಚ್ಯಾರಕೊಳಗಾದ ಮೃತ ಸಂತ್ರಸ್ಥೆಯಾದ ಮನಿಷಾಳ ಕುಟುಂಬಕ್ಕೆ ಯು,ಪಿ ಸರ್ಕಾರ 1 ಕೋಟಿ ರೂಗಳನ್ನು ಪರಿಹಾರವಾಗಿ ನೀಡಬೇಕು.
- ಮನಿಷಾಳ ಕುಟುಂಬದ ಎರಡು ಜನ ಸದಸ್ಯರಿಗೆ ಸರ್ಕಾರಿ ನೌಕರಿಯನ್ನು ನೀಡಬೇಕು ಎಂದು ಹಕ್ಕೋತ್ತಾಯಗಳನ್ನು ಮಂಡಿಸುತ್ತಾ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿಯನ್ನು ನೀಡಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಕೆಂಗುಂಟೆ ಜಯ್ಯಪ್ಪ , ತಾಲೂಕ್ ಸಂಚಾಲಕಾದ ಪ್ರಸನ್ನಕುಮಾರ್ ದಾಸಿಕಟ್ಟೆ . ಜಿಲ್ಲಾ ಸಂಘಟನ ಸಂಚಾಲಕರುಗಳಾದ ದಿವಾಕರ್ , ಜಿ ಶಿವಪ್ಪ , ಮಂಜಪ್ಪ ವಿಶ್ವನಾಥನಹಳ್ಳಿ , ತಾಲೂಕು ಪದಾದಿಕಾರಿಗಳಾದ ಶ್ರೀನಿವಾಸ್ , ಮಂಜುನಾಥ್ ಉಡುಗೋರೆ ,ರಮೇಶ್ ದುಮ್ಮಿ , ಪ್ರಕಾಶ್ ರಂಗಾಪುರ , ಮಂಜು ಎಮ್ಮಿಗನೂರು ,ತಿಪ್ಪೇಸ್ವಾಮಿ , ನಿಂಗರಾಜ್ ,ವಿಜಯ್ ಕುಮಾರ್, ವಿಜಯ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ
ಯುಪಿ ಪೊಲೀಸರ ದುರ್ವರ್ತನೆ | ಸಿಎಂ ಯೋಗಿ ಆದಿತ್ಯನಾಥ್ ಬೆಲೆ ತೆರಬೇಕಾಗುತ್ತದೆ : ಸಿದ್ದರಾಮಯ್ಯ ಎಚ್ಚರಿಕೆ
https://suddidina.com/daily-news/up-police-and-rahul-gandhi/
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


