ಬಹಿರಂಗ
ಮೇಲ್ಜಾತಿಗೆ ನೀಡಿದ 10% ಮೀಸಲಾತಿ ಲಿಂಗಾಯತರು, ಒಕ್ಕಲಿಗರನ್ನೂ ಒಳಗೊಂಡಂಡಂತೆ ಇಡೀ ಹಿಂದುಳಿದ ವರ್ಗಗಳಿಗೆ ಮಾಡಿದ ಚಾರಿತ್ರಿಕ ಅನ್ಯಾಯ..!

ನಿನ್ನೆ ಸಂಜೆ ಪತ್ರಿಕೆಗೆ ಕಳಿಸಬೇಕಾದ ಎಲ್ಲಾ ಸುದ್ದಿಗಳನ್ನು ಕಳಿಸಿ ವಾಟ್ಸಾಪು, ಫೇಸ್ಬುಕ್ಕು ಅಂತ ಹರಟೆ ಶುರು ಮಾಡುವ ಹೊತ್ತಿಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಫೋನ್ ಮಾಡಿದರು. ಸ್ವಲ್ಪ ಬೇಸರ, ಆತಂಕ, ಆಶ್ಚರ್ಯ, ಜಿಗುಪ್ಸೆ, ಸಿಟ್ಟುಗಳ ಮಿಶ್ರಣದಂತಿದ್ದವು ಅವರ ಮಾತುಗಳು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮೇಲ್ಜಾತಿಗಳಿಗೆ ನೀಡಿದ ಶೇಕಡ 10ರಷ್ಟು ಮೀಸಲಾತಿ ಅವರ ಈ ಕೋಪ-ಬೇಸರಕ್ಕೆ ಕಾರಣವಾಗಿತ್ತು. ಇಂತಹದ್ದೊಂದು ಪ್ರಸ್ತಾಪ ಬಂದ ಕೂಡಲೇ ಇದನ್ನು ವಿರೋಧಿಸಿ ಇಡೀ ದೇಶಾದ್ಯಂತ ಹಿಂದುಳಿದ ವರ್ಗಗಳ ಹೋರಾಟಗಳು ಭುಗಿಲೇಳುತ್ತವೆ ಎಂದು ಅವರು ನಿರೀಕ್ಷಿಸಿದ್ದರು. ಆದರೆ, ತಮಗೇನೂ ಆಗೇ ಇಲ್ಲವೆಂಬಂತೆ ಎಲ್ಲರೂ ಸುಮ್ಮನಾಗಿಬಿಟ್ಟಿರುವುದು ಅವರ ಆತಂಕಕ್ಕೆ ಕಾರಣವಾಗಿತ್ತು. ಹಿಂದುಳಿದ ವರ್ಗಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತೇವೆಂದು ಅಬ್ಬರಿಸಿ ಬೊಬ್ಬಿಡುವ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳೂ ಇದಕ್ಕೆ ಮೌನ ಸಮ್ಮತಿ ಸೂಚಿಸಿದ್ದು ಅವರ ದುಗುಡವನ್ನುಹೆಚ್ಚಿಸಿತ್ತು. ಹೆಚ್ಚೂ ಕಮ್ಮಿ ಅರ್ಧ ಗಂಟೆ ಅವರ ಜೊತೆ ಮಾತಾಡಿದ ಮೇಲೆ ನನಗೂ ಅದರ ಬಗ್ಗೆ ಸ್ವಲ್ಪ ಸ್ಪಷ್ಟತೆ ಸಿಕ್ಕಿತು. ಅವರೊಂದಿಗಿನ ಸಂಭಾಷಣೆಯ ಸಾರ, ನಾನೂ ಒಂದಿಷ್ಟು ಕೆದಕಿ ತೆಗೆದ ಮಾಹಿತಿ ಸೇರಿಸಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ನಾನು ಮೊಟ್ಟ ಮೊದಲು ಮಾಡಿದ ಕೆಲಸ ಎಂದರೆ ಈ ವಿಷಯವಾಗಿ ಪಾರ್ಲಿಮೆಂಟಿನಲ್ಲಿ ಅಂಗೀಕಾರವಾದ ಮೂಲ ಸಂವಿಧಾನ ತಿದ್ದುಪಡಿ ಮಸೂದೆಯನ್ನು (THE CONSTITUTION (ONE HUNDRED AND TWENTY-FOURTH AMENDMENT) BILL, 2019) ಹುಡುಕಿ ತೆಗೆದು ಓದಿದ್ದು. ಇದು ನಮ್ಮ ಸಂವಿಧಾನಕ್ಕೆ ಮಾಡುತ್ತಿರುವ 124ನೇ ತಿದ್ದುಪಡಿ. ಇದರ ಮೂಲಕ ಸಂವಿಧಾನದ 15ನೇ ವಿಧಿಯಲ್ಲಿ ಈಗಾಗಲೇ 5 ಕ್ಲಾಸುಗಳಿದ್ದು ಅದರಲ್ಲಿ ಈಗ 6ನೇ ಕ್ಲಾಸನ್ನು ಸೇರಿಸಲಾಗಿದೆ. ಅದರ ಸಾರಾಂಶ ಹೀಗಿದೆ:
‘(6) Nothing in this article or sub-clause (g) of clause (1) of article 19 or clause (2) of article 29 shall prevent the State from making,—
(a) any special provision for the advancement of any economically weaker sections of citizens other than the classes mentioned in clauses (4) and (5); and
(b) any special provision for the advancement of any economically weaker sections of citizens other than the classes mentioned in clauses (4) and (5) in so far as such special provisions relate to their admission to educational institutions including private educational institutions, whether aided or unaided by the State, other than the minority educational institutions referred to in clause (1) of article 30, which in the case of reservation would be in addition to the existing reservations and subject to a maximum of ten per cent. of the total seats in each category.
ಜೊತೆಗೆ ಸಂವಿಧಾನದ 16ನೇ ವಿಧಿಗೂ ತಿದ್ದುಪಡಿ ಮಾಡಲಾಗಿದ್ದು ಅಲ್ಲೂ ಹೆಚ್ಚೂ ಕಮ್ಮಿ ಇದೇ ಸಾರಾಂಶವಿದೆ.
ಮೇಲಿನ ಈ ಪ್ಯಾರಾಗಳ ಸಾರಾಂಶ ಏನೆಂದರೆ, ಸಂವಿಧಾನದ 4 ಮತ್ತು 5ನೇ ಕ್ಲಾಸುಗಳಲ್ಲಿರುವ ಸಮುದಾಯಗಳನ್ನು ಹೊರತುಪಡಿಸಿ ಉಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡ 10ರಷ್ಟು ಮೀಸಲಾತಿ ನೀಡುವುದಕ್ಕೆ ಪ್ರಭುತ್ವಕ್ಕೆ ಯಾವುದೇ ಅಡ್ಡಿಯಿಲ್ಲ.
ಸಂವಿಧಾನದ 4 ಮತ್ತು 5ನೇ ವಿಧಿಯಲ್ಲಿರುವ ಸಮುದಾಯಗಳನ್ನು ಹೊರತುಪಡಿಸಿ ಎಂದಾಕ್ಷಣ ಆ ಸಮುದಾಯಗಳು ಯಾವವು ಎಂಬ ಪ್ರಶ್ನೆ ಹುಟ್ಟಿತು. ಅದನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ನಮ್ಮ ಸಂವಿಧಾನದ ಪುಟಗಳನ್ನು ತಿರುವಿ ಹಾಕಿದೆ. ಆ ಸಮುದಾಯಗಳು ಎಂದರೆ ಅನುಸೂಚಿತ ಜಾತಿಗಳು (SCs), ಅನುಸೂಚಿತ ಬುಡಕಟ್ಟುಗಳು (STs) ಮತ್ತು ಹಿಂದುಳಿದ ವರ್ಗಗಳು (OBCs). ಅಂದರೆ ಈ ಮೂರು ವಿಭಾಗಗಳ ಸಮುದಾಯಗಳನ್ನು ಹೊರತುಪಡಿಸಿ ಉಳಿದವರಿಗೆ ಈ ಶೇಕಡ 10% ಮೀಸಲಾತಿ ಸೌಲಭ್ಯ ದೊರಕಲಿದೆ ಎಂದಾಯಿತು.
ಇಲ್ಲಿಯ ತನಕ ಅನುಸೂಚಿತ ಜಾತಿಗಳಿಗೆ, ಅನುಸೂಚಿತ ಬುಡಕಟ್ಟುಗಳಿಗೆ ಮತ್ತು ಇತರ ಹಿಂದುಳಿದ ವರ್ಗಗಳಿಗೆ ನೀಡಲಾದ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡ 50%. ಇದು Reserved ಕ್ಯಟಗರಿ. ಹಿಂದುಳಿದವರಿಗೆ ನೀಡಲಾಗುವ ಮೀಸಲಾತಿಯ ಪ್ರಮಾಣವನ್ನು ಶೇಕಡ 50%ಕ್ಕಿಂತ ಹೆಚ್ಚು ಮಾಡಬಾರದು ಎಂದು ಸುಪ್ರೀಂ ಕೋರ್ಟು ಆದೇಶವಿದೆ.
ಉಳಿದ 50% ಜನರಲ್ ಕ್ಯಟಗರಿಗೆ ಮೀಸಲು. ಇಲ್ಲಿ ಜನರಲ್ ಕ್ಯಟಗರಿ ಎಂದರೆ Unreserved ಅಥವಾ It is open to all ಎಂದರ್ಥ. Reserved ಕ್ಯಟಗರಿಯಲ್ಲಿ ಯಾವ ಯಾವ ಸಮುದಾಯಕ್ಕೆ ಎಷ್ಟೆಷ್ಟು ಮೀಸಲಾತಿ ನೀಡಲಾಗಿದೆಯೋ ಆ ಸಮುದಾಯವಷ್ಟೇ ಅದನ್ನು ಬಳಸಲು ಸಾಧ್ಯ. ಬೇರೆ ಸಮುದಾಯಗಳು ಆ ಮೀಸಲಾತಿಗೆ ಕೈಹಾಕುವಂತಿಲ್ಲ. Unreserved ಅಥವಾ Open ಕ್ಯಟಗರಿಯು ಅದರ ಹೆಸರೇ ಸೂಚಿಸುವಂತೆ ಯಾರು ಬೇಕಾದರೂ ಸ್ಪರ್ಧಿಸಿ ಮೆರಿಟ್ ಆಧಾರದಲ್ಲಿ ಸೀಟು/ಹುದ್ದೆ ಪಡೆದುಕೊಳ್ಳಬಹುದು. ಅಂದರೆ, ಎಸ್ಸಿ, ಎಸ್ಟಿ, ಓಬಿಸಿಯವರೂ ಈ unreserved ಅಥವಾ ಜನರಲ್ ಕ್ಯಟಗರಿಯಲ್ಲಿ ಸ್ಪರ್ಧಿಸಿ ಮೆರಿಟ್ ಆಧಾರದಲ್ಲಿ ಸೀಟು/ಹುದ್ದೆ ಪಡೆದುಕೊಳ್ಳಬಹುದು.
ಯಾವುದಾದರೂ ಹುದ್ದೆಗಳನ್ನು ಭರ್ತಿಮಾಡುವಾಗ ಮೊದಲು ಜನರಲ್ ಕ್ಯಟಗರಿಯ ಹುದ್ದೆಗಳನ್ನು ತುಂಬಲಾಗುತ್ತದೆ. ಅಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದವರು, ಮುಂದುವರೆದವರು ಎಲ್ಲರನ್ನೂ ಮೆರಿಟ್ ಆಧಾರದಲ್ಲಿ ತೂಗಿ ಆಯ್ಕೆ ಮಾಡಲಾಗುತ್ತದೆ. ಜನರಲ್ ಕ್ಯಟಗರಿಯಲ್ಲಿ ಆಯ್ಕೆಯಾಗುವಷ್ಟು ಮೆರಿಟ್ ಇಲ್ಲದ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಮಂದಿಯನ್ನು ಅವರವರ ಕ್ಯಟಗರಿಗೆ ಮೀಸಲಿಟ್ಟಿರುವ ಹುದ್ದೆಗಳಿಗೆ ಪರಿಗಣಿಸಲಾಗುತ್ತದೆ.
ಈಗ ಕೇಂದ್ರ ಸರ್ಕಾರ ಮಾಡುತ್ತಿರುವ ಕೆಲಸ ಏನೆಂದರೆ, ಜನರಲ್ ಅಥವಾ Unreserved ಕ್ಯಟಗರಿಯಿಂದ ಶೇಕಡ 10ರಷ್ಟುನ್ನು ತೆಗೆದು ಅದನ್ನು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳಿಗೆ ಸೇರಿರದ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ನೀಡಲು ಹೊರಟಿದೆ. ಅಂದರೆ, ಸಾರಾಂಶದಲ್ಲಿ Unreserved ಅಥವಾ ಜನರಲ್ ಕ್ಯಟಗರಿಯ ಪ್ರಮಾಣ ಶೇಕಡ 50ರಿಂದ ಶೇಕಡ 40ಕ್ಕೆ ಇಳಿಯುತ್ತದೆ ಹಾಗೂ Reserved ಪ್ರಮಾಣ ಶೇಕಡ 50 ರಿಂದ ಶೇಕಡ 60ಕ್ಕೆ ಏರುತ್ತದೆ.
ಇಲ್ಲೊಂದು ಪ್ರಶ್ನೆ ಏಳುತ್ತದೆ. ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯ ಒಟ್ಟು ಪ್ರಮಾಣ ಶೇಕಡ 50ಕ್ಕಿಂತ ಹೆಚ್ಚು ಆಗಬಾರದು ಎಂದು ಸುಪ್ರೀಂ ಕೋರ್ಟು ನೀಡಿರುವ ತೀರ್ಪಿನ ಉಲ್ಲಂಘನೆಯಾಗುವುದಿಲ್ಲವೆ ಎಂದು. ಕೇಂದ್ರ ಕಾನೂನು ಮಂತ್ರಿ ರವಿಶಂಕರ್ ಪ್ರಸಾದ ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಮೀಸಲಾತಿಯ ಪ್ರಮಾಣ ಶೇಕಡ 50ಕ್ಕಿಂತ ಹೆಚ್ಚಿರಬಾರದು ಎಂದು ಸಂವಿಧಾನವೇನೂ ಹೇಳಿಲ್ಲ, ಅದನ್ನು ಹೇಳಿದ್ದು ಕೋರ್ಟು ಎಂಬುದು ಅವರ ವಾದ. ಅಲ್ಲದೇ ಸುಪ್ರೀಂ ಕೋರ್ಟು ಹೇಳಿದ್ದು “ಹಿಂದುಳಿದ ವರ್ಗಗಳಿಗೆ (ಎಸ್ಸಿ, ಎಸ್ಟಿ, ಮತ್ತು ಇತರ ಹಿಂದುಳಿದ ವರ್ಗಗಳು ಒಳಗೊಂಡಂತೆ) ನೀಡಲಾಗುವ ಮೀಸಲಾತಿ ಪ್ರಮಾಣ ಶೇಕಡ 50ಕ್ಕಿಂತ ಹೆಚ್ಚಿರಬಾರದು ಎಂದಿದೆ. ಈಗ ನೀಡುತ್ತಿರುವ ಶೇಕಡ 10ರಷ್ಟು ಮೀಸಲಾತಿ ಅವರಿಗಲ್ಲ. ಅದು ಮುಂದುವರೆದವರಿಗಾಗಿ, ಮುಂದುವರಿದ ಸಮುದಾಯಗಳ ಬಡವರಿಗಾಗಿ. ಹಾಗಾಗಿ, ಅದು ಸುಪ್ರೀಂ ಕೋರ್ಟಿನ ಉಲ್ಲಂಘನೆಯಾಗುವುದಿಲ್ಲ ಎಂದೂ ಕೆಲವರು ವಾದಿಸುತ್ತಾರೆ. ಆದರೆ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡಾ 50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದಾದರೂ ಅಂತಿಮವಾಗಿ ಸುಪ್ರೀಂ ಕೋರ್ಟಿನ ನ್ಯಾಯಿಕ ವಿಮರ್ಶೆಯನ್ನು ಸಂಸತ್ತು ತಳ್ಳಿಹಾಕಿದ ಸಂಭವವೂ ಇಲ್ಲದಿಲ್ಲ.
ಸಾರಾಂಶದಲ್ಲಿ ಮೀಸಲಾತಿಯ ಪ್ರಮಾಣ ಶೇಕಡ 60 ಹಾಗೂ ಜನರಲ್ ಕ್ಯಟಗರಿಯ ಪ್ರಮಾಣ ಶೇಕಡ 40 ಆದಂತೆ ಆಗುತ್ತದೆ. ಈಗ ಶೇಕಡ 60ರಷ್ಟು ಮೀಸಲಾತಿಯಲ್ಲಿ ಯಾವ ಯಾವ ಸಮುದಾಯಕ್ಕೆ ಎಷ್ಟು ಸಿಗುತ್ತದೆ ಎಂಬುದನ್ನು ನಾವು ಕಂಡುಕೊಳ್ಳಬೇಕು. ಇದನ್ನು ಮೀಸಲಾತಿಯನ್ನು ನಿಗದಿ ಮಾಡುವ ಅಧಿಕಾರ ರಾಜ್ಯಗಳಿಗೂ ಇರುವುದರಿಂದ ನಾವು ಯಾವುದಾದರೊಂದು ರಾಜ್ಯವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಈ ವಿಷಯವನ್ನು ಇನ್ನಷ್ಟು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ನಮ್ಮ ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಇಲ್ಲಿ ಮೀಸಲಾತಿಯ ಪ್ರಮಾಣ ಈ ಕೆಳಗಿನಂತಿದೆ:
SCs: 15%
STs: 3%
OBC:32% (ಕ್ಯಟಗರಿ 1: 4% + ಕ್ಯಟಗರಿ 2A: 15% + ಕ್ಯಟಗರಿ 2B: 4% + ಕ್ಯಟಗರಿ 3A: 4% + ಕ್ಯಟಗರಿ 3B: 5% = 32%)
ಒಟ್ಟು: 50%
ಜನರಲ್: 50%
ಈಗ ಮೀಸಲಾತಿಯ ಪ್ರಮಾಣ ಶೇಕಡ 60ಕ್ಕೆ ಏರಿದ ನಂತರ ಅದು ಈ ಕೆಳಗಿನಂತೆ ಆಗಲಿದೆ.
SCs: 15%
STs: 3%
OBC: 32% (ಕ್ಯಟಗರಿ 1: 4% +ಕ್ಯಟಗರಿ 2A: 15% +ಕ್ಯಟಗರಿ 2B: 4% + ಕ್ಯಟಗರಿ 3A: 4% + ಕ್ಯಟಗರಿ 3B: 5% = 32%)
ಈ ಮೇಲಿನ ವರ್ಗಗಳನ್ನು ಹೊರತುಪಡಿಸಿದ ಬಡವರಿಗೆ (ಅರ್ಥಾತ್ ನಮ್ಮ ರಾಜ್ಯದಲ್ಲಿ ಬ್ರಾಹ್ಮಣರಿಗೆ): 10%
ಒಟ್ಟು: 60%
ಜನರಲ್: 40%
ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ನಮ್ಮಲ್ಲಿ ಸಾಮಾನ್ಯವಾಗಿ SC ಯಾರು, ST ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, OBC ಯಾರು ಎಂಬುದರ ಬಗ್ಗೆ ಬಹಳಷ್ಟು ಸಾಮಾನ್ಯ ಜನರಿಗೆ ಗೊಂದಲಗಳಿವೆ. ಉದಾಹರಣೆಗೆ, ಬಹಳಷ್ಟು ಲಿಂಗಾಯತರು, ಒಕ್ಕಲಿಗರು ತಾವು OBC ಕ್ಯಟಗರಿಗೆ ಸೇರಿದವರೆಂದು, ತಮಗೂ ಮೀಸಲಾತಿ ಸೌಕರ್ಯ ಕಲ್ಪಿಸಲಾಗಿದೆ ಎಂಬುದನ್ನು ಮರೆತು ತಾವು ಮುಂದುವರಿದವರು ಅಥವಾ ಮೇಲ್ವರ್ಗದವರು ಎಂದು ಭಾವಿಸಿದ್ದಾರೆ. ವಾಸ್ತವದಲ್ಲಿ ಸಾಮಾಜಿಕವಾಗಿ ಅವರು ಮೇಲ್ಜಾತಿಗಳೇ ಆಗಿದ್ದರೂ ಕಾನೂನಿನಡಿಯಲ್ಲಿ ಅವರೂ ಕೂಡ OBC ಕ್ಯಟಗರಿಗೆ ಸೇರಿದ್ದು ಅವರಿಗೂ ಮೀಸಲಾತಿ ಸೌಕರ್ಯವಿದೆ. ಇದನ್ನೇ ಸಾರಾಂಶೀಕರಿಸಿ ಹೇಳುವುದಾದರೆ, ಕರ್ನಾಟಕದ ಮಟ್ಟಿಗೆ SC, ST ಮತ್ತು ಬ್ರಾಹ್ಮಣರನ್ನು ಹೊರತುಪಡಿಸಿದರೆ ಲಿಂಗಾಯತರು, ಒಕ್ಕಲಿಗರು, ಕುರುಬರು, ಈಡಿಗರು ಮುಂತಾದ ಉಳಿದೆಲ್ಲಾ ಸಮುದಾಯಗಳು OBCಯಲ್ಲಿ ಬರುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮ ಮೀಸಲಾತಿ ಕೋಸ್ಟಕವನ್ನು ಜಾತಿ ಆಧಾರಿತವಾಗಿ ತಯಾರಿಸೋಣ.
- ಮಾದಿಗರು, ಹೊಲೆಯರು/ಚಲವಾದಿಗಳು, ಲಂಬಾಣಿ, ಭೋವಿ/ವಡ್ಡರ್ ಇತ್ಯಾದಿ 101 ಸಮುದಾಯಗಳಿಗೆ (SC) 15% ಮೀಸಲಾತಿ.
- ಬೇಡರು/ನಾಯಕರು/ವಾಲ್ಮಿಕಿ, ಹಕ್ಕಿಪಿಕ್ಕಿ, ಜೇನುಕುರುಬ, ಕಾಡುಕುರುಬ, ಕೊರಗ, ಮಲೆಕುಡಿಯ, ಇತ್ಯಾದಿ 49 ಸಮುದಾಯಗಳಿಗೆ (STs) 3% ಮೀಸಲಾತಿ.
- ಕ್ಯಟಗರಿ 1 ರಲ್ಲಿರುವ ಬೆಸ್ತ, ಉಪ್ಪಾರ, ಗೊಲ್ಲ, ಬೋಯಿ, ಬೋವಿ, ಕುಣಬಿ, ಬುಡಬುಡಕಿ, ದಲಿತ ಕ್ರೈಸ್ತ, ಮೊದಲಾದ 95 ಪ್ರಮುಖ ಜಾತಿಗಳು ಮತ್ತು ಅದರ ಅಡಿಯಲ್ಲಿರುವ 285 ಉಪಜಾತಿಗಳಿಗೆ (ಕೆಲವು ಕಡೆ ಸಂವಾದಿ ಪದಗಳು) 4% ಮೀಸಲಾತಿ.
- ಕ್ಯಟಗರಿ 2A ಅಡಿಯಲ್ಲಿ ಬರುವ ಅಗಸ, ದೇವಾಡಿಗ, ಈಡಿಗ, ಕುಂಬಾರ, ಕುರುಬ, ವಿಶ್ವಕರ್ಮ, ತಿಗಳ, ದೇವಾಂಗ, ಮೊದಲಾದ 102 ಪ್ರಮುಖ ಜಾತಿಗಳು ಮತ್ತು ಅದರ ಅಡಿಯಲ್ಲಿಬರುವ 282 ಉಪಜಾತಿಗಳಿಗೆ 15% ಮೀಸಲಾತಿ.
- ಕ್ಯಟಗರಿ 2Bಯಲ್ಲಿ ಬರುವ ಮುಸ್ಲೀಮರಿಗೆ 4% ಮೀಸಲಾತಿ.
- ಕ್ಯಟಗರಿ 3Aನಲ್ಲಿ ಬರುವ ಒಕ್ಕಲಿಗರು/ಗೌಡರು, ಕೊಡಗರು ಮತ್ತು ಬಲಿಜ ಎಂಬ ಮೂರು ಪ್ರಮುಖ ಜಾತಿಗಳು ಮತ್ತು ಅದರ ಅಡಿಯಲ್ಲಿ ಬರುವ 42 ಉಪಜಾತಿಗಳಿಗೆ ಸೇರಿ 4% ಮೀಸಲಾತಿ.
- ಕ್ಯಟಗರಿ 3Bನಲ್ಲಿ ಬರುವ ವೀರಶೈವ ಲಿಂಗಾಯತರು, ಮರಾಠರು, ಕ್ರಿಶ್ಚಿಯನ್ನರು, ಬಂಟರು, ಜೈನರು ಮತ್ತು ಸತನಿ ಎಂಬ ಆರು ಜಾತಿಗಳು ಹಾಗೂ ಅದರ ಅಡಿಯಲ್ಲಿ ಬರುವ 30 ಉಪಜಾತಿಗಳಿಗೆ (ಈ ಉಪಜಾತಿಗಳಲ್ಲಿ ಲಿಂಗಾಯತರ ಉಪಜಾತಿಗಳು ಬರುತ್ತವೆ – ಹೆಳವ, ಅಂಬಿಗ, , ಮಡಿವಾಳ, ಕುಂಬಾರ, ಕುರುಬ ಭಜಂತ್ರಿ, ಅಕ್ಕಸಾಲಿಗ/ಬಡಿಗ, ಮೇದಾರ ಇತ್ಯಾದಿಗಳು) 5% ಮೀಸಲಾತಿ.
- ಈ ಮೇಲಿನ ವರ್ಗಗಳನ್ನು ಹೊರತುಪಡಿಸಿದ ಬಡವರಿಗೆ, ಅಂದರೆ ನಮ್ಮ ರಾಜ್ಯದಲ್ಲಿ ಬ್ರಾಹ್ಮಣರಿಗೆ 10% ಮೀಸಲಾತಿ.
ಈ ವಿವರಣೆಯನ್ನು ಏಕೆ ಕೊಡಬೇಕಾಯಿತು ಎಂದರೆ ಇಂದು ಬ್ರಾಹ್ಮಣರಿಗೆ ಕೊಡುತ್ತಿರುವ 10% ಮೀಸಲಾತಿಯನ್ನು ಬಲವಾಗಿ ಸಮರ್ಥಿಸುತ್ತಿರುವವರಲ್ಲಿ ಬಹುತೇಕರು ಸಮಾಜದಲ್ಲಿ ಮೇಲ್ಪದರದಲ್ಲಿರುವ ಆದರೆ ಕಾನೂನಿನಲ್ಲಿ OBC ಯಲ್ಲಿರುವ ಒಕ್ಕಲಿಗರು ಮತ್ತು ಲಿಂಗಾಯತರು. ಅವರು ತಮ್ಮ ತಮ್ಮ ಕ್ಯಟಗರಿಗಳಾದ 3A ಮತ್ತು 3Bಯನ್ನೊಮ್ಮೆ ನೋಡಿ, ಕರ್ನಾಟಕದ ಜನಸಂಖ್ಯೆಯಲ್ಲಿ ತಮ್ಮ ಜನಸಂಖ್ಯೆ ಎಷ್ಟಿದೆ ಮತ್ತು ತಮಗೆ ಎಷ್ಟು ಮೀಸಲಾತಿ ಕೊಡಲಾಗಿದೆ ಎಂಬುದನ್ನು ಗಮನಿಸಿ ಅದನ್ನು ಬ್ರಾಹ್ಮಣರ ಜನಸಂಖ್ಯೆಗೆ ಮತ್ತು ಅವರಿಗೆ ಈಗ ಕೊಟ್ಟಿರುವ ಮೀಸಲಾತಿಯೊಂದಿಗೆ ಹೋಲಿಸಿಕೊಳ್ಳಬೇಕು.
ಕ್ಯಟಗರಿ 3A ಅಡಿಯಲ್ಲಿ ಬರುವ ಒಕ್ಕಲಿಗರು, ಕೊಡಗರು, ಬಲಿಜ ಮತ್ತು ಇತರ ಉಪಜಾತಿಗಳು ಸೇರಿ ಕರ್ನಾಟಕ ಜನಸಂಖ್ಯೆಯ ಶೇಕಡ 15 ರಷ್ಟಾಗುತ್ತಾರೆ. ಅವರಿಗೆ ಸಿಗುತ್ತಿರುವುದು ಕೇವಲ 4% ಮೀಸಲಾತಿ.
ಕ್ಯಟಗರಿ 3Bನಲ್ಲಿ ಬರುವ ಲಿಂಗಾಯತರು, ವೀರಶೈವರು, ಕುಂಬಾರರು, ಭಜಂತ್ರಿಗಳು, ಅಕ್ಕಸಾಲಿಗರು/ವಿಶ್ವಕರ್ಮರು, ಮೇದಾರರು, ಕ್ರಿಶ್ಚಿಯನ್ನರು, ಮರಾಠರು, ಬಂಟರು, ಜೈನರು ಎಲ್ಲಾ ಸೇರಿದರೆ ಕರ್ನಾಟಕದ ಜನಸಂಖ್ಯೆಯ ಶೇಕಡ 18ರಷ್ಟಾಗಿಬಿಡುತ್ತಾರೆ. ಅವರಿಗೆ ಸಿಗುತ್ತಿರುವುದು ಕೇವಲ 5% ಮೀಸಲಾತಿ.
ಆದರೆ, ಕರ್ನಾಟಕದ ಜನಸಂಖ್ಯೆಯ ಶೇಕಡ 3 ರಷ್ಟಿರುವ ಅಥವಾ ಅದಕ್ಕಿಂತ ಕಡಿಮೆ ಇರುವ ಬ್ರಾಹ್ಮಣರಿಗೆ ಸಿಗುತ್ತಿರುವುದು 10% ಮೀಸಲಾತಿ!
ಇಷ್ಟೂ ಅರ್ಥವಾಗದಿದ್ದರೆ ಹೇಗೆ?
ಇನ್ನು ಜನರಲ್ ಕ್ಯಟಗರಿ 50% ನಿಂದ 40%ಗೆ ಇಳಿದಿದ್ದರ ಬಗ್ಗೆ ಮಾತನಾಡೋಣ. ಇಲ್ಲಿಯ ತನಕ ಜನರಲ್ ಕ್ಯಟಗರಿಯಲ್ಲಿ ಸಿಂಹಪಾಲು ಪಡೆಯುತ್ತಾ ಬಂದಿರುವವರು ಬ್ರಾಹ್ಮಣರೇ. ಅದರ ನಂತರದ ಸ್ಥಾನದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಬರುತ್ತಾರೆ. ದಲಿತರಿಗೆ ಮತ್ತು OBC ಒಳಗಿನ ಹಿಂದುಳಿದಿರುವ ವರ್ಗಗಳು ಜನರಲ್ ಕ್ಯಟಗರಿಯಲ್ಲಿ ಸ್ಪರ್ಧಿಸಿ ಸ್ಥಾನಗಳನ್ನು ಪಡೆಯುವುದು ಅಪರೂಪ. ಈಗ ಜನರಲ್ ಕ್ಯಟಗರಿಯಿಂದ 10% ಬ್ರಾಹ್ಮಣರ ಕ್ಯಟಗರಿಗೆ ಹೋಗಿದ್ದರಿಂದ ಉಳಿದ 40% ನಲ್ಲಿಯೇ ಮತ್ತೆ ಎಲ್ಲರೂ ಮತ್ತೆ ಗುದ್ದಾಡಬೇಕು. ಈಗ ಅಸಲಿಗೆ ಏನಾಗುತ್ತದೆ ಎಂದರೆ, ಇತ್ತ ಈ 40%ನಲ್ಲಿಯೂ ಬ್ರಾಹ್ಮಣರು ಸಿಂಹಪಾಲು ಪಡೆಯುತ್ತಾರೆ, ಅತ್ತ 10% ಮೀಸಲಾತಿಯಂತೂ ಅವರಿಗೇ ಮೀಸಲು.
ಒಂದು ಸರಳ ಅಂಕಗಣಿತದವನ್ನು ನೋಡೋಣ.
ಕರ್ನಾಟಕದಲ್ಲಿ 100 ತಹಶೀಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪರಿಭಾವಿಸಿಕೊಳ್ಳೋಣ. ಅದಕ್ಕೆ ಈ ಹೊಸ ಮೀಸಲಾತಿಯನ್ನು ಅನ್ವಯಿಸಿದರೆ ಈ ಕೆಳಗಿನಂತೆ ಹಂಚಿಕೆ ಮಾಡಬೇಕಾಗುತ್ತದೆ.
- ಮಾದಿಗ, ಹೊಲೆಯ/ಚಲವಾದಿ, ಲಂಬಾಣಿ, ಭೋವಿ/ವಡ್ಡರ್ ಇತ್ಯಾದಿ 101 ಸಮುದಾಯಗಳಿಗೆ (SCs): 15 ಸ್ಥಾನಗಳು
- ಬೇಡರು/ನಾಯಕರು/ವಾಲ್ಮಿಕಿ, ಹಕ್ಕಿಪಿಕ್ಕಿ, ಜೇನು ಕುರುಬ, ಕಾಡುಕುರುಬ, ಕೊರಗ, ಮಲೆಕುಡಿಯ, ಇತ್ಯಾದಿ 49 ಸಮುದಾಯಗಳಿಗೆ (STs): 3 ಸ್ಥಾನಗಳು
- ಕ್ಯಟಗರಿ 1 ರಲ್ಲಿರುವ 95 ಪ್ರಮುಖ ಜಾತಿಗಳು ಮತ್ತು ಅದರ ಅಡಿಯಲ್ಲಿರುವ 285 ಉಪಜಾತಿಗಳಿಗೆ (ಕೆಲವು ಕಡೆ ಸಂವಾದಿ ಪದಗಳು): 4 ಸ್ಥಾನಗಳು.
- ಕ್ಯಟಗರಿ 2A ಅಡಿಯಲ್ಲಿ ಬರುವ 102 ಪ್ರಮುಖ ಜಾತಿಗಳು ಮತ್ತು ಅದರ ಅಡಿಯಲ್ಲಿ ಬರುವ 282 ಉಪಜಾತಿಗಳಿಗೆ ಸೇರಿ: 15ಸ್ಥಾನಗಳು
- ಕ್ಯಟಗರಿ 2Bಯಲ್ಲಿ ಬರುವ ಮುಸ್ಲೀಮರಿಗೆ: 4 ಸ್ಥಾನಗಳು
- ಕ್ಯಟಗರಿ 3Aನಲ್ಲಿ ಬರುವ ಒಕ್ಕಲಿಗರು/ಗೌಡರು, ಕೊಡಗರು ಮತ್ತು ಬಜಿಜ ಎಂಬ ಮೂರು ಪ್ರಮುಖ ಜಾತಿಗಳು ಮತ್ತು ಅದರ ಅಡಿಯಲ್ಲಿ ಬರುವ 42 ಉಪಜಾತಿಗಳಿಗೆ: 4 ಸ್ಥಾನಗಳು.
- ಕ್ಯಟಗರಿ 3Bನಲ್ಲಿ ಬರುವ ವೀರಶೈವ ಲಿಂಗಾಯತರು, ಮರಾಠರು, ಕ್ರಿಶ್ಚಿಯನ್ನರು, ಬಂಟರು, ಜೈನರು ಮತ್ತು ಸತನಿ ಎಂಬ ಆರು ಜಾತಿಗಳು ಹಾಗೂ ಅದರ ಅಡಿಯಲ್ಲಿ ಬರುವ 30 ಉಪಜಾತಿಗಳು – ಹೆಳವ, ಅಂಬಿಗ, , ಮಡಿವಾಳ, ಕುಂಬಾರ, ಕುರುಬ ಭಜಂತ್ರಿ, ಅಕ್ಕಸಾಲಿಗ/ಬಡಿಗ, ಮೇದಾರ ಇತ್ಯಾದಿಗಳು – ಇವರೆಲ್ಲರಿಗೆ ಸೇರಿ: 5 ಸ್ಥಾನಗಳು.
- ಬ್ರಾಹ್ಮಣರಿಗೆ: 10 ಸ್ಥಾನಗಳು.
ಇದುವರೆಗಿನ ಜನರಲ್ ಕ್ಯಟಗರಿಯ ಉಪಯೋಗದ ಅನುಭವವನ್ನು ನೋಡಿದರೆ ಅಲ್ಲಿ ಉಳಿಯುವ 40 ಸ್ಥಾನಗಳ ಪೈಕಿ 25 ಸ್ಥಾನಗಳು ಬ್ರಾಹ್ಮಣರಿಗೆ ಹೋಗುತ್ತವೆ, 10 ಸ್ಥಾನಗಳಲ್ಲಿ ಲಿಂಗಾಯತರು, ಒಕ್ಕಲಿಗರು ಮತ್ತು ಸಾಪೇಕ್ಷವಾಗಿ ಮುಂದುವರೆದಿರುವ ಇತರ ಸಮುದಾಯಗಳ ಪಾಲಾಗುತ್ತವೆ. ಉಳಿದ 10 ಸ್ಥಾನಗಳನ್ನು SC, ST ಮತ್ತು ಇತರ OBC ಅಭ್ಯರ್ಥಿಗಳು ಪಡೆದುಕೊಳ್ಳುತ್ತಾರೆ.
ಅಂತಿಮವಾಗಿ 100 ತಹಶೀಲ್ದಾರರ ಪೈಕಿ:
ಕನಿಷ್ಠ 35 ತಹಶೀಲ್ದಾರರು ಬ್ರಾಹ್ಮಣರಾಗಿರುತ್ತಾರೆ (ಅವರ ಜನಸಂಖ್ಯೆ ಕೇವಲ 3% ಇದ್ದರೂ); 10 ತಹಶೀಲ್ದಾರರು ಲಿಂಗಾಯತರು, ಬಂಟರು, ಕ್ರಿಶ್ಚಿಯನ್ನರು, ಮರಾಠರ ಸಮುದಾಯಗಳಿಗೆ ಸೇರಿರುತ್ತಾರೆ (ಅವರ ಜನಸಂಖ್ಯಾ ಪ್ರಮಾಣ ಶೇಕಡ 18 ಆಗಿದ್ದರೂ); 10 ತಹಶೀಲ್ದಾರರು ಒಕ್ಕಲಿಗರು, ಕೊಡಗರು, ಬಲಿಜರು ಆಗಿರುತ್ತಾರೆ (ಅವರ ಜನಸಂಖ್ಯಾ ಪ್ರಮಾಣ ಶೇಕಡ 15 ರಷ್ಟಾಗಿದ್ದರೂ); 6 ತಹಶೀಲ್ದಾರರು ಮುಸ್ಲೀಮರಾಗಿರುತ್ತಾರೆ (ಅವರ ಜನಸಂಖ್ಯಾ ಪ್ರಮಾಣ ಶೇಕಡ 16ರಷ್ಟಿದ್ದರೂ); 18 ತಹಶೀಲ್ದಾರರು ಮಾದಿಗರು, ಹೊಲೆಯರು/ಚಲವಾದಿಗಳು, ಬೋವಿಗಳು/ವಡ್ಡರು ಆಗಿರುತ್ತಾರೆ (ಅವರ ಜನಸಂಖ್ಯಾ ಪ್ರಮಾಣ ಶೇಕಡ 20ರಷ್ಟು ಇದ್ದಾಗ್ಯೂ); 5 ತಹಶೀಲ್ದಾರರು ವಾಲ್ಮಿಕಿ/ ಬೇಡರು ಮತ್ತು ಇತರ ಬುಡಕಟ್ಟು ಜನರಾಗಿರುತ್ತಾರೆ; 6 ತಹಶೀಲ್ದಾರರು ಕುರುಬರಾಗಿರುತ್ತಾರೆ; ಉಳಿದ ಸಮುದಾಯಗಳಿಗೆ ಸೇರಿದ ತಹಶೀಲ್ದಾರರು 10 ಜನ ಇರುತ್ತಾರೆ.
ಈ 10% ಮೀಸಲಾತಿ ಬರದೇ ಹೋಗಿದ್ದರೆ ಬ್ರಾಹ್ಮಣರಿಗೆ 10 ಸ್ಥಾನಗಳು ಕಡಿಮೆ ಸಿಗುತ್ತಿದ್ದವು ಹಾಗೂ ಅವು ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ, ಕುರುಬ ಮತ್ತಿತರ ಹಿಂದುಳಿದ ವರ್ಗಗಳ ಪಾಲಾಗುತ್ತಿದ್ದವು.
ಪ್ರತಿಷ್ಠಿತ ಪತ್ರಿಕೆಗಳನ್ನೂ ಒಳಗೊಂಡಂತೆ ಎಲ್ಲಾ ಮಾಧ್ಯಮಗಳು ಈ ವಿಷಯವನ್ನು ತಪ್ಪಾಗಿ ವರದಿ ಮಾಡಿದವು ಎಂದು ನನಗನ್ನಿಸುತ್ತದೆ. ಏಕೆಂದರೆ ಎಲ್ಲಾ ಪತ್ರಿಕೆಗಳು ವರದಿ ಮಾಡಿದ್ದು “ಆರ್ಥಿಕವಾಗಿ ಹಿಂದುಳಿದ ಜನರಲ್ ಕ್ಯಟಗರಿಯ ಜನರಿಗೆ ಶೇಕಡ 10% ಮೀಸಲಾತಿ” ಎಂದು. ಇಲ್ಲಿ ಜನರಲ್ ಕ್ಯಟಗರಿ ಎಂದರೆ ಯಾರು? ಜನರಲ್ ಕ್ಯಟಗರಿಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಸಮುದಾಯಗಳ ಎಲ್ಲಾ ಜನರೂ ಬರುತ್ತಾರೆ ತಾನೆ? ಜನರಲ್ ಕ್ಯಟಗರಿ ಎಂದರೆ ಹೊಲೆಯರು, ಮಾದಿಗರು, ಲಂಬಾಣಿಗಳು, ಮುಸ್ಲೀಮರು, ಲಿಂಗಾಯತರು, ಒಕ್ಕಲಿಗರು, ಕುರುಬರು, ಬೇಡರು, ಬ್ರಾಹ್ಮಣರು ಎಲ್ಲರಿಗೂ ಸೇರಿದ್ದು ತಾನೆ? ಹಾಗಿದ್ದರೆ ಅವರಿಗೂ ಈ 10%ನಲ್ಲಿ ಮೀಸಲಾತಿ ಸಿಗುತ್ತದೆಯೆ? ಪಾರ್ಲಿಮೆಂಟಿನಲ್ಲಿ ಪಾಸಾದ ಮಸೂದೆಯ ಪ್ರಕಾರ ಇಲ್ಲ. ಅದರ ಪ್ರಕಾರ SC, ST ಮತ್ತು ಲಿಂಗಾಯತ ಮತ್ತು ಒಕ್ಕಲಿಗರನ್ನೂ ಒಳಗೊಂಡ OBC ಕ್ಯಟಗರಿಯ ಜನರನ್ನು ಹೊರತುಪಡಿಸಿ ಜನರಲ್ ಕ್ಯಟಗರಿಯಲ್ಲಿರುವ ಮಂದಿಗೆ ಮಾತ್ರ ಮೀಸಲು. ಇವರೆಲ್ಲರನ್ನು ಹೊರತುಪಡಿಸಿದ ಜನರಲ್ ಕ್ಯಟಗರಿ ಎಂದರೆ ಕರ್ನಾಟಕದಲ್ಲಿ ಬ್ರಾಹ್ಮಣರು ಮಾತ್ರ. ಅಂದರೆ ಅವರಿಗೆ ಮಾತ್ರ ಈ 10% ಮೀಸಲು.
ಕೊನೆಯದಾಗಿ, ಆ ಐಎಎಸ್ ಅಧಿಕಾರಿ ಎತ್ತಿದ ಮೂಲ ಪ್ರಶ್ನೆಗೆ ಬರೋಣ. ಇಷ್ಟೆಲ್ಲಾ ದೊಡ್ಡ ಮಟ್ಟದ ಅನ್ಯಾಯವಾಗುತ್ತಿದ್ದರೂ ದೇಶಾದ್ಯಂತ ಪ್ರತಿರೋಧ ಏಕೆ ಭುಗಿಲೇಳುತ್ತಿಲ್ಲ?
ನನಗನ್ನಿಸಿದ ಮಟ್ಟಿಗೆ ಇದರಲ್ಲಿ ಎರಡು ಅಂಶಗಳು ಕೆಲಸ ಮಾಡಿವೆ. ಮೊದಲನೆಯದು, ಈಗಾಗಲೇ ಮೀಸಲಾತಿ ಪಡೆಯುತ್ತಿರುವ ದಲಿತರು, ಲಂಬಾಣಿಗಳು, ವಡ್ಡರು, ಬೇಡರು, ಕುರುಬರು, ಮುಸ್ಲೀಮರು, ಲಿಂಗಾಯತರು, ಒಕ್ಕಲಿಗರಿಗೆ ಯಾವ ತೊಂದರೆಯೂ ಆಗುವುದಿಲ್ಲ, ಅವರಿಗೆ ನೀಡಿರುವ ಮೀಸಲಾತಿಯಲ್ಲಿ ಎಳ್ಳಷ್ಟನ್ನೂ ಕಿತ್ತುಕೊಳ್ಳುವುದಿಲ್ಲ ಎಂದು ಹೇಳಲಾಗಿದೆ. ಅದು ನಿಜ ಕೂಡ. ನಮ್ಮ ಮೀಸಲಾತಿಗೇನೂ ತೊಂದರೆಯಾಗಿಲ್ಲವಲ್ಲ ಅಂತ ಈ ಸಮುದಾಯಗಳು ಮತ್ತು ಅವುಗಳ ನಾಯಕರು ಸುಮ್ಮನಾಗಿದ್ದಾರೆ.
ಎರಡನೆಯದಾಗಿ, ಮೇಲ್ಜಾತಿಯ ಬಡವರಿಗೆ ಅಥವಾ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಲಾಗುತ್ತಿದೆ ಎಂದು ಬಿಂಬಿಸಲಾಗಿದೆ. ಬಡವರು ಅಂದಾಗ ಅವರಿಗೂ ಕೂಡ ಸೌಲಭ್ಯ ದೊರಕಲಿ ಬಿಡು ಎಂಬ ಭಾವನೆ ಮೂಡಿರುವುದಕ್ಕೆ ಸಾಕು. ಇನ್ನೊಂದೆಡೆ ಮೇಲ್ಜಾತಿಯ ಬಡವರಿಗೆ ಅಂದಾಕ್ಷಣ ಸಮಾಜದಲ್ಲಿ ವಾಸ್ತವದಲ್ಲಿ ಮೇಲ್ಜಾತಿಗಳೇ ಆಗಿರುವ ಲಿಂಗಾಯತರು ಮತ್ತು ಒಕ್ಕಲಿಗರು ತಮಗೂ ಇದರಲ್ಲಿ ಪಾಲು ಸಿಗುತ್ತೆ ಎಂಬ ಭ್ರಮಿಸಿರಲಿಕ್ಕೂ ಸಾಧ್ಯವಿದೆ.
ಸಾರಾಂಶ ಇಷ್ಟೆ. ಅತ್ಯಂತ ಮುಂದುವರಿದ ಹಾಗೂ ಜನಸಂಖ್ಯೆಯಲ್ಲಿ ತೀರಾ ಕಡಿಮೆ ಇರುವ ಜಾತಿಯೊಂದಕ್ಕೆ ಅತ್ಯಂತ ಹಿಂದುಳಿದ ಜಾತಿಗಳಿಗಿಂತಲೂ, ಜನಸಂಖ್ಯೆಯಲ್ಲಿ ಅತ್ಯಂತ ಹೆಚ್ಚಿರುವ ಜಾತಿಗಳಿಗಿಂತಲೂ ಹೆಚ್ಚಿನ ಮೀಸಲಾತಿಯನ್ನು ಒದಗಿಸಲಾಗಿದೆ. ಮೇಲಾಗಿ ಈ ಜಾತಿಯಲ್ಲಿ ಇರುವ ಬಡವರ ಸಂಖ್ಯೆಗಿಂತಲೂ ಹೆಚ್ಚು ಮೀಸಲಾತಿಯನ್ನು ನೀಡಲಾಗಿದೆ. ಇದು ಸಾಮಾಜಿಕ ನ್ಯಾಯ ನೀತಿಯ ಅಣಕವಾಗುತ್ತದೆ. ಮೀಸಲಾತಿ ಉದ್ದೇಶ ಏನಾಗಿದೆಯೋ ಅದನ್ನೇ ಅಪಹಾಸ್ಯ ಮಾಡಿದಂತಾಗುತ್ತದೆ.
ಮೋದಿ ಸರ್ಕಾರದ ಈ ನಿರ್ಣಯದಿಂದ ತಾವು ಕಳೆದುಕೊಂಡಿದ್ದೇನು ಎಂಬುದು ಲಿಂಗಾಯತರಿಗೆ, ಒಕ್ಕಲಿಗರಿಗೆ, ಕುರುಬರಿಗೆ, ಮುಸ್ಲೀಮರಿಗೆ, ದಲಿತರಿಗೆ, ಬೇಡರಿಗೆ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಈಗಲೂ ಅರ್ಥವಾಗದಿದ್ದರೆ ಯಾರೇನು ಮಾಡೋಕಾಗುತ್ತದೆ?
– ಕುಮಾರ್ ಬುರಡಿಕಟ್ಟಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಭಾರತದ ಜನಸಂಖ್ಯೆ ವರವೋ..? ಶಾಪವೋ..?

- ಅಂಬಿಕಾ. ಕೆ
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಬೆಂಗಳೂರು ವಿಶ್ವವಿದ್ಯಾಲಯ
ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.
ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.
ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.
ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.
ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.
ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ

- ವೆನ್ನೆಲಾ ಕೆ.
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು
ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.
ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.
ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.
ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.
ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.
ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ
ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!

- ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ ಚಿಂತಕರು, ಬೆಂಗಳೂರು
ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.
ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.
ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.
ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.
ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.
ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.
ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ3 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ2 days ago
ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ