ದಿನದ ಸುದ್ದಿ
ಶರಾವತಿ ಉಳಿಸಿ | ಶರಾವತಿ ನದಿ ಎಂಬುದು ಮಲೆನಾಡಿನ ನಾಡಿ ಮಿಡಿತ
ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ
ಮಾನ್ಯರೇ ,
ಶರಾವತಿ ನದಿ ಎಂಬುದು ಮಲೆನಾಡಿನ ನಾಡಿ ಮಿಡಿತ. ಮಲೆನಾಡಿನ ಬದುಕಿನ ಜೊತೆ ಹಾಸುಹೊಕ್ಕಾಗಿರುವ ಮತ್ತು ಮಲೆನಾಡಿನ ಹೆಗ್ಗುರುತಾಗಿ ಬೆಳೆದುಬಂದಿರುವ ಜೀವನದಿ ಅದು. ಅದು ಸೃಷ್ಟಿಸುವ ಜೋಗ ಜಲಪಾತದ ಸೌಂದರ್ಯದಂತೆಯೇ ಅದರ ಹೆಸರೇ ನಮಗೆ ಒಂದು ಐಡೆಂಟಿಟಿಯನ್ನು ತಂದುಕೊಟ್ಟಿದೆ. ಸಾಲು ಸಾಲು ಜಲಾಶಯಗಳು ಮುಳುಗಿಸಿದ ಬದುಕಿನ ಹೊರತಾಗಿಯೂ ಅದರೊಂದಿಗೆ ಮಲೆನಾಡಿನ ಮಣ್ಣಿನಮಕ್ಕಳು ಹೊಂದಿರುವ ಕಳ್ಳುಬಳ್ಳಿಯ ಸಂಬಂಧ ಕಡಿದುಕೊಂಡಿಲ್ಲ. ಹಾಗಾಗಿ ಇದು ಅಮ್ಮ-ಮಕ್ಕಳ ಅನುಬಂಧ.
ಆದರೆ, ಇಂತಹ ನಮ್ಮೆಲ್ಲರ ಬದುಕಿನ ಭಾಗವಾಗಿರುವ ನದಿಗೆ ಈಗ ಅಪಾಯ ಬಂದೊದಗಿದೆ. ಆ ನದಿಯ ಲಿಂಗನಮಕ್ಕಿ ಅಣೆಕಟ್ಟೆಯಿಂದ ಸುಮಾರು 400 ಕಿ.ಮೀ ದೂರದ ಬೆಂಗಳೂರಿಗೆ ನೀರು ಒಯ್ಯುವ ಕುರಿತ ತ್ಯಾಗರಾಜ್ ಸಮಿತಿ ವರದಿಯ ಪ್ರಕಾರ, ಯೋಜನೆಯ ಡಿಪಿಆರ್(ವಿಸ್ತೃತ ಯೋಜನಾ ವರದಿ) ತಯಾರಿಸುವಂತೆ ರಾಜ್ಯ ಸರ್ಕಾರದ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಾಗೆ ನೋಡಿದರೆ, 2010ರಷ್ಟು ಹಿಂದೆಯೇ ಈ ಬಗ್ಗೆ ಯೋಚಿಸಿದ್ದ ಅಂದಿನ ರಾಜ್ಯ ಸರ್ಕಾರ, ತ್ಯಾಗರಾಜ್ ನೇತೃತ್ವದಲ್ಲಿ ಒಂಭತ್ತು ಮಂದಿ ತಜ್ಞರ ಸಮಿತಿ ರಚಿಸಿ, ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮೂಲಕಗಳ ಕುರಿತು ವರದಿ ನೀಡುವಂತೆ ಸೂಚಿಸಿತ್ತು. ಸಾಕಷ್ಟು ನೀರು ಲಭ್ಯವಿರುವ ಮತ್ತು ಅಂತಾರಾಜ್ಯ ವಿವಾದಗಳಿಲ್ಲದ ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನದಿ ನೀರನ್ನು ಒಯ್ಯುವುದು ಮತ್ತು ಹಂತಹಂತವಾಗಿ ಶರಾವತಿ ಕಣಿವೆಯ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿ ಸಂಪೂರ್ಣ ನೀರನ್ನು ಬೆಂಗಳೂರು ಮೈಸೂರು ಭಾಗದ ಹಲವು ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡಬಹುದು ಎಂದು ಸಮಿತಿ 2013ರ ತನ್ನ ವರದಿಯಲ್ಲಿ ಹೇಳಿತ್ತು.
ಇದೀಗ ಮಾನ್ಯ ಉಪಮುಖ್ಯಮಂತ್ರಿಗಳ ಪ್ರಸ್ತಾಪದೊಂದಿಗೆ ಆ ವರದಿಯನ್ನೇ ಮುಂದಿಟ್ಟುಕೊಂಡು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿರುವುದು ಸ್ಪಷ್ಟ.
ಆದರೆ, ಮಲೆನಾಡಿಗರಾಗಿ, ಲಿಂಗನಮಕ್ಕಿಯೂ ಸೇರಿದಂತೆ ಶರಾವತಿ ಕಣಿವೆಯ ಸರಣಿ ಜಲಾಶಯಗಳಿಗಾಗಿ ನಮ್ಮ ಮನೆಮಠ, ಆಸ್ತಿಪಾಸ್ತಿ ಕಳೆದುಕೊಂಡು, ಬೀದಿಗೆ ಬಿದ್ದಿರುವ ಮುಳುಗಡೆ ಸಂತ್ರಸ್ತರಾಗಿ, ಮಲೆನಾಡು ವ್ಯಾಪ್ತಿಯಲ್ಲಿದ್ದೂ ತೀವ್ರ ಬರ ಮತ್ತು ಕುಡಿಯುವ ನೀರಿನ ಹಾಹಾಕಾರ ಎದುರಿಸುತ್ತಿರುವ ನದಿ ತಟದ ನತದೃಷ್ಟರಾಗಿ, ಈ ಯೋಜನೆಗೆ ನಮ್ಮ ಸಂಪೂರ್ಣ ವಿರೋಧ ಇದೆ.
12 ಸಾವಿರ ಕೋಟಿ ರೂಪಯಿ ಬೃಹತ್ ಮೊತ್ತದ ಯೋಜನೆಯ ಹಿಂದೆ ಯಾವುದೇ ವೈಜ್ಞಾನಿಕ, ಕಾರ್ಯಸಾಧುವಾದ ಯೋಚನೆ, ಚಿಂತನೆ ಇರದೆ, ಕೇವಲ ರಾಜಕೀಯ ಲಾಭ ಮತ್ತು ಸಾರ್ವಜನಿಕ ಹಣವನ್ನು ಲೂಟಿ ಹೊಡೆಯುವ ಲೆಕ್ಕಾಚಾರ ಇದರ ಹಿಂದಿದೆ ಮತ್ತು ಪರಿಸರ ಮತ್ತು ಮಲೆನಾಡಿನ ಜನಜೀವನದ ಮೇಲು ಉಂಟಾಗಬಹುದಾದ ಪರಿಣಾಮದ ಕಾರಣದಿಂದಾಗಿ ಇಂತಹ ಮೂರ್ಖತನದ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕು ಮತ್ತು ಮೂಲಭೂತವಾಗಿ ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕಾಗಿಯೇ ನಿರ್ಮಾಣವಾಗಿರುವ ಶರಾವತಿ ಕಣಿವೆಯ ಲಿಂಗನಮಕ್ಕಿ ಮತ್ತಿತರ ಜಲಾಶಯಗಳ ನೀರನ್ನು ಆ ಉದ್ದೇಶಕ್ಕಲ್ಲದೆ ಅನ್ಯ ಉದ್ದೇಶಕ್ಕೆ ಬಳಸುವುದೇ ಆದರೆ, ನದಿ ತಟದಲ್ಲೇ ಕುಡಿಯುವ ನೀರಿನ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಜನರಿಗೆ ಮತ್ತು ಕಣಿವೆಯ ಜಲವಿದ್ಯುತ್ ಯೋಜನೆಗಳಿಂದ ಸಂತ್ರಸ್ತರಾಗಿ ಸೂಕ್ತ ಪರಿಹಾರವೂ ಕಾಣದೆ, ಅಲ್ಲಲ್ಲಿ ಬರಪೀಡಿತ ಒಣಭೂಮಿ ಬೇಸಾಯ ಮಾಡಿಕೊಂಡಿರುವ ಸಂತ್ರಸ್ತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಈ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ, ಮಲೆನಾಡಿನ ಸಾಕ್ಷಿಪ್ರಜ್ಞೆಯಂತಿರುವ ಹಿರಿಯ ಸಾಹಿತಿ ಮತ್ತು ಶರಾವತಿ ಕಣಿವೆಯ ಬದುಕನ್ನು ಕಂಡುಂಡ ಶ್ರೀಯುತ ನಾ. ಡಿಸೋಜ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದೆ.
ಮಾನ್ಯರ ನೇತೃತ್ವದಲ್ಲಿ ಸಾಗರದಲ್ಲಿ 22-06-19ರಂದು ನಡೆದ ಒಕ್ಕೂಟದ ಮೊದಲ ಸಮಾಲೋಚನಾ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳ ಪ್ರಸ್ತಾಪವನ್ನು ವಿರೋಧಿಸಿ, ಮಲೆನಾಡಿನಾದ್ಯಂತ ದಿಟ್ಟ ಹೋರಾಟ ನಡೆಸುವ ಮತ್ತು ಸರ್ಕಾರಕ್ಕೆ ನಮ್ಮ ಆಕ್ರೋಶ ವ್ಯಕ್ತಪಡಿಸುವ ಮಾರ್ಗವಾಗಿ ಜುಲೈ 10ರಂದು ಸಂಪೂರ್ಣ ಶಿವಮೊಗ್ಗ ಜಿಲ್ಲಾ ಬಂದ್ ನಡೆಸುವ ಕುರಿತು ನಿರ್ಧರಿಸಲಾಯಿತು.
ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ಕೇವಲ ಶರಾವತಿ ಕಣಿವೆಯ ಜನರ ಸಮಸ್ಯೆ ಅಲ್ಲ. ಇದು ಇಡೀ ಮಲೆನಾಡಿನ ಜೀವ ಪರಿಸರ ಮತ್ತು ಜನಜೀವನದ ಭವಿಷ್ಯದ ಪ್ರಶ್ನೆ. ಹಾಗಾಗಿ ಸರ್ಕಾರದ ವಿವೇಚನಾಹೀನ ಯೋಜನೆಯ ಭವಿಷ್ಯದ ಗಂಭೀರ ಪರಿಣಾಮಗಳನ್ನು ಅರಿತು ಇಡೀ ಮಲೆನಾಡಿನ ಜನ ಈ ಹೋರಾಟಕ್ಕೆ ದನಿಗೂಡಿಸಬೇಕಿದೆ.
ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಸಮಸ್ತ ಜನತೆ ಈ ಹೋರಾಟಕ್ಕೆ ಬೆಂಬಲ ನೀಡಿ, ಜುಲೈ 10ರ ಬಂದ್ ಬೆಂಬಲಿಸಬೇಕಾಗಿ ಒಕ್ಕೂಟ ಮನವಿ ಮಾಡುತ್ತದೆ. ಜಿಲ್ಲೆಯ ಧಾರ್ಮಿಕ ಮಠ-ಮಾನ್ಯಗಳ ಮುಖಂಡರು ಮತ್ತು ಮಠಾಧೀಶರು, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಮುಖಂಡರು, ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು, ಆಟೋ ಚಾಲಕರ ಸಂಘ, ಬಸ್ ಮಾಲೀಕರ ಸಂಘ, ಸರಕು ಸಾಗಣೆ ವಾಹನ ಮಾಲೀಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ- ಸಂಸ್ಥೆಗಳು, ಸರ್ಕಾರಿ ನೌಕರರ ಸಂಘ, ಅಡಿಕೆ ಮಂಡಿ ಮಾಲೀಕರ ಸಂಘ ಮತ್ತು ಅಡಿಕೆ ಬೆಳೆಗಾರರ ಸಂಘಟನೆಗಳು, ಅಂಗಡಿ ಮುಂಗಟ್ಟು ಮಾಲೀಕರು, ವ್ಯಾಪಾರಸ್ಥರು ಮತ್ತು ಹೋಟೆಲ್ ಉದ್ಯಮಿಗಳು, ವಿದ್ಯಾರ್ಥಿ ಸಂಘಟನೆಗಳು, ವಿವಿಧ ಜಾತಿ- ಜನಾಂಗ ಸಂಘಟನೆಗಳು, ಮುಖ್ಯವಾಗಿ ಜಿಲ್ಲೆಯ ಇಡೀ ಮಾಧ್ಯಮ ಸ್ನೇಹಿತರು ಸದುದ್ದೇಶದದ ಮತ್ತು ಪಕ್ಷಾತೀತವಾದ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಒಕ್ಕೂಟ ಕೋರುತ್ತದೆ.
ಸರ್ಕಾರ ಸಂಪೂರ್ಣ ತನ್ನ ಪ್ರಸ್ತಾವನೆಯಿಂದ ಹಿಂದೆ ಸರಿದು, ತ್ಯಾಗರಾಜ್ ಸಮಿತಿ ವರದಿಯನ್ನು ಅಧಿಕೃತವಾಗಿ ತಿರಸ್ಕರಿಸಬೇಕು ಮತ್ತು ಭವಿಷ್ಯದಲ್ಲಿ ಕೂಡ ಶರಾವತಿ ನದಿ ಕಣಿವೆಯ ನೀರನ್ನು ಕಣಿವೆ ವ್ಯಾಪ್ತಿ ಹೊರಗಿನ ಬಳಕೆಗೆ ಮುಂದಾಗುವುದಿಲ್ಲ ಎಂದು ಭರವಸೆ ನೀಡಬೇಕು ಎಂಬ ಹಕ್ಕೊತ್ತಾಯಕ್ಕೆ ದನಿಗೂಡಿಸಬೇಕು ಎಂದು ಮನವಿ ಮಾಡುತ್ತದೆ.
ಹಕ್ಕೊತ್ತಾಯಗಳು
- ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪವನ್ನು ಸಾರಾಸಗಟಾಗಿ ಕೈಬಿಡಬೇಕು ಮತ್ತು ತ್ಯಾಗರಾಜ್ ವರದಿಯನ್ನು ಅಧಿಕೃತವಾಗಿ ತಿರಸ್ಕರಿಸಬೇಕು.
- ಶರಾವತಿ ಕಣಿವೆಯ ಆಸುಪಾಸಿನ ವಿವಿಧ ಯೋಜನೆಗಳ ಸಂತ್ರಸ್ತರು ಸೇರಿದಂತೆ ಆ ಭಾಗದ ಕುಡಿಯುವ ನೀರು ಮತ್ತು ಒಣ ಭೂಮಿಗೆ ನೀರಾವರಿ ಒದಗಿಸಲು ಜಲಾಶಯದ ನೀರು ಬಳಕೆಗೆ ಆದ್ಯತೆ ನೀಡಬೇಕು. ಈ ಕುರಿತು ಸರ್ಕಾರ ಕೂಡಲೇ ಡಿಪಿಆರ್ ತಯಾರಿಸಲು ಆದೇಶ ನೀಡಬೇಕು.
ಸಹಿಗಳು:
ಡಾ. ನಾ ಡಿಸೋಜಾ, ಹಿರಿಯ ಸಾಹಿತಿಗಳು (ಗೌರವಾಧ್ಯಕ್ಷರು),ಪ್ರೊ. ಶ್ರೀಕಂಠ ಕೂಡಿಗೆ ಚಿಂತಕರು,ಶಂಕರ್ ಶರ್ಮಾ, ಇಂಧನ ತಜ್ಞರು,
ಹರ್ಷಕುಮಾರ್ ಕುಗ್ವೆ,ಶಶಿ ಸಂಪಳ್ಳಿ,ಎಚ್ ಬಿ ರಾಘವೇಂದ್ರ,ಜಿ ಟಿ ಸತ್ಯನಾರಾಯಣ ಕರೂರು,
ಅಜಯ್ ಶರ್ಮಾ,ವಿನ್ಸೆಂಟ್ ರೋಡ್ರಿಗಸ್,ಕನ್ನಪ್ಪ ಈಡಿಗ,ತಾರಾಮೂರ್ತಿ,
ಇತರರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ
ಸುದ್ದಿದಿನ,ದಾವಣಗೆರೆ:ಫೆಬ್ರವರಿ 23 ರಿಂದ 27 ರವರೆಗೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆ ಪ್ರಯಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ದೊಡ್ಡಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪ, ವಿರಕ್ತಮಠ ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರ-1, ಎಸ್.ಕೆ.ಪಿ ರಸ್ತೆಯ ಎಸ್.ವಿ.ಎಸ್.ಶಾಲೆ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘ, ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಈ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ -2025ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳಿಗೆ ಆಕ್ಷೇಪಣೆ, ತಕರಾರು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
ತಿರಸ್ಕೃತಗೊಂಡ ಅರ್ಜಿಗಳ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ, ಮಾರ್ಚ್ 13 ರೊಳಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಪೂರಕ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾರ‍್ವಾಮಿ.ಜಿ.ಎಂ.ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.
‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)
AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.
ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್‌ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.
ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.
ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.
ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ3 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ5 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ3 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
-
ದಿನದ ಸುದ್ದಿ8 hours agoಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ8 hours agoದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ

