Connect with us

ದಿನದ ಸುದ್ದಿ

ನಿಮ್ಮ ಸರ್ಕಾರಕ್ಕೆ ಕನಿಷ್ಠ ಶೂ, ಸಾಕ್ಸ್, ಸೈಕಲ್‍ಗಳನ್ನೂ ನೀಡಲಾಗದಷ್ಟು ದರಿದ್ರ ಬಂದಿದೆಯೆ? : ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿರುದ್ಧ ಸಿದ್ದರಾಮಯ್ಯ ಕಿಡಿ

Published

on

ಸುದ್ದಿದಿನ ಡೆಸ್ಕ್ : ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ನೀಡುವ ವಿಚಾರದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ನೀಡಿರುವ ಹೇಳಿಕೆ ಅಮಾನವೀಯ. ಅವರ ಮಾತುಗಳು ಬೇಜವಾಬ್ದಾರಿತನ ಹಾಗೂ ಕ್ರೂರತನದಿಂದ ಕೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಚುನಾವಣೆಗಳು ಹತ್ತಿರ ಬಂದಂತೆಲ್ಲ ಬಿಜೆಪಿಗೆ ಸುಳ್ಳು ಹೇಳುವ ದೆವ್ವ ಮೈಮೇಲೆ ಹತ್ತಿ ಕುಣಿಯಲಾರಂಭಿಸುತ್ತದೆ. ತಾವು ಮಾತನಾಡಬೇಕಾದರೆ ಕನಿಷ್ಠ ಮಟ್ಟದ ಪ್ರಜ್ಞೆ, ಲಜ್ಜೆ, ನೈತಿಕತೆ ಇವ್ಯಾವುಗಳೂ ಇಲ್ಲದಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ಅದರ ಭಾಗವಾಗಿ ಕಲ್ಬುರ್ಗಿಯಲ್ಲಿ ನಿನ್ನೆ ಬಿ.ಸಿ ನಾಗೇಶ್ ಅವರು ಮಾತನಾಡಿದ್ದಾರೆ.

‘ಮಕ್ಕಳು ಶಾಲೆಗೆ ಬರುವುದು ಕಲಿಯುವುದಕ್ಕೆ ಹೊರತು, ಶೂ ಸಾಕ್ಸ್ ಹಾಕಿಕೊಳ್ಳುವುದಕ್ಕೆ ಅಲ್ಲ’ ಎಂದು ಸಚಿವರು ಹೇಳಿದ್ದಾರೆ. ನಾನು ನಾಗೇಶ್ ಅವರನ್ನು ಕೇಳಬಯಸುತ್ತೇನೆ, ನಿಮ್ಮ ಮಕ್ಕಳಾಗಲಿ ಅಥವಾ ನೀವಾಗಲಿ ಎಂದಾದರೂ ಕಾಲಿಗೆ ಚಪ್ಪಲಿ ಇಲ್ಲದೆ ಓಡಾಡಿದ ಅನುಭವ ಇದೆಯೆ, ಅದರ ಅವಮಾನ, ಕೀಳರಿಮೆಗಳನ್ನು ಅನುಭವಿಸಿದ ಉದಾಹರಣೆಗಳಿವೆಯೆ?

ಕಾನ್ವೆಂಟ್ ಸ್ಕೂಲಿಗೆ ಹೋಗುವ ಮಕ್ಕಳು ಶುಭ್ರ ಬಟ್ಟೆ, ಟೈ, ಕಾಲಿಗೆ ಶೂ, ಸಾಕ್ಸ್ ಹಾಕಿಕೊಂಡು ನಡೆದಾಡುವುದನ್ನು ನೋಡಿದಾಗ ಅದೇ ಬೀದಿಯಲ್ಲಿ, ಅದೇ ಹಳ್ಳಿಯಲ್ಲಿ ಆಟವಾಡುವ ಬಡವರ ಮಕ್ಕಳು ಬರಿಗಾಲಲ್ಲಿ, ಹರಿದ ಬಟ್ಟೆಯಲ್ಲಿದ್ದರೆ ನಿಮಗೆ ಏನೂ ಅನ್ನಿಸುವುದಿಲ್ಲವೆ? ಅಥವಾ ಆ ಕಷ್ಟದಲ್ಲಿರುವ ಮಕ್ಕಳಿಗೆ ಏನನ್ನಿಸುತ್ತದೆ ಎಂಬ ಅರಿವಾದರೂ ಇದೆಯೆ ನಿಮಗೆ? ಅವರು ಹಾಗೆಯೆ ಬರಿಗಾಲಿನಲ್ಲಿ ಇರಬೇಕೆಂದು ರಾಷ್ಟ್ರ ಭಕ್ತಿಯ ಬಗ್ಗೆ ಮಾತನಾಡುವ ಸಂಘ ನಿಮಗೆ ಹೇಳಿಕೊಟ್ಟಿದೆಯೆ? ಹೇಳಿಕೊಟ್ಟಿರಲು ಸಾಧ್ಯವಿದೆ. ಶೂದ್ರರ ಬಳಿ ವಿದ್ಯೆ, ಹಣ, ಅಧಿಕಾರಗಳು ಇರಬಾರದೆಂಬ ಕಾರಣಕ್ಕೆ ತಾನೆ ಈ ಸಂಘ ಹುಟ್ಟಿಕೊಂಡು ನಮ್ಮ ಮಕ್ಕಳ ಮೆದುಳಿಗೆ ವಿಷ ಹಾಕುತ್ತಿರುವುದು.

ದಲಿತರು, ಅಲೆಮಾರಿಗಳು, ಹಿಂದುಳಿದವರ ಹಾಗೂ ಎಲ್ಲ ಜಾತಿಯ ಬಡವರ ಮಕ್ಕಳಿಗೆ ಸಣ್ಣ ಸ್ವಾಭಿಮಾನ ಇರಲಿ, ಕಲಿಯುವ, ಶಾಲೆಗೆ ಹೋಗುವ ಹುಮ್ಮಸ್ಸು ಬರಲಿ ಎಂಬ ಕಾರಣಕ್ಕೆ ನಾವು ಮಕ್ಕಳ ಸ್ನೇಹಿಯಾದ ಯೋಜನೆಗಳನ್ನು ಜಾರಿಗೆ ತಂದಿದ್ದೆವು. ನಿಮ್ಮ ಸರ್ಕಾರಕ್ಕೆ ಮಕ್ಕಳಿಗೆ ಕೊಡಬೇಕಾದ್ದನ್ನು ಕೊಡುವ ಯೋಗ್ಯತೆ ಇಲ್ಲದಿದ್ದರೆ ಅವರನ್ನು ಹಂಗಿಸುವ ಸಾಹಸ ಮಾಡಬೇಡಿ.

ನಿಮ್ಮ ಸರ್ಕಾರಕ್ಕೆ ಕನಿಷ್ಠ ಶೂ, ಸಾಕ್ಸ್, ಸೈಕಲ್‍ಗಳನ್ನೂ ನೀಡಲಾಗದಷ್ಟು ದರಿದ್ರ ಬಂದಿದೆಯೆ? ಹಾಗಿದ್ದರೆ ನಾಡಿನ ಬಡವನೊಬ್ಬನಿಂದಲೂ ವರ್ಷಕ್ಕೆ 1 ಲಕ್ಷ ರೂಪಾಯಿಗಳಷ್ಟು ತೆರಿಗೆಯನ್ನು ಮೋದಿ ಸರ್ಕಾರ ಮತ್ತು ಬೊಮ್ಮಾಯಿಯವರ ಸರ್ಕಾರಗಳು ವಸೂಲಿ ಮಾಡುತ್ತಿವೆಯೆಂದು ಪತ್ರಿಕೆಗಳು ಸಮೀಕ್ಷೆ ಮಾಡಿದ್ದವು. ಹಾಗೆ ಬಡವರಿಂದ ದೋಚಿಕೊಂಡ ತೆರಿಗೆ ಹಣವನ್ನು ಏನು ಮಾಡುತ್ತಿದ್ದೀರಿ? 40 ಪರ್ಸೆಂಟ್ ಕಮಿಷನ್ ಸರ್ಕಾರಕ್ಕೆ ಮಕ್ಕಳ ಶಿಕ್ಷಣವನ್ನೂ ನೋಡಿಕೊಳ್ಳುವ ಯೋಗ್ಯತೆ ಇಲ್ಲದ ಮೇಲೆ ನೀವು ಯಾರ ಸುಖಕ್ಕಾಗಿ ಸರ್ಕಾರ ನಡೆಸುತ್ತಿದ್ದೀರಿ? ನಿಮಗೆ ಸಣ್ಣ ಕಾಳಜಿಯೇನಾದರೂ ಇದ್ದರೆ ಹೀಗೆಲ್ಲ ಮಾತನಾಡಲು ಸಾಧ್ಯವೆ?

ನಮ್ಮ ಸರ್ಕಾರದ ಅವಧಿಯಲ್ಲಿ 7905 ಪ್ರಾಥಮಿಕ ಶಾಲಾ ಶಿಕ್ಷಕರು, 1689 ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಮಾಡಿದ್ದೆವು. ಜೊತೆಗೆ 10000 ಪಧವೀಧರ ವಿಷಯವಾರು ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಗ್ರಂಥ ಪಾಲಕರ ನೇಮಕಾತಿಯು ಅಂತಿಮಗೊಳಿಸುವ ಹಂತಕ್ಕೆ ಬಂದಿತ್ತು. ಇದರಿಂದಾಗಿ ಒಟ್ಟು 20,000 ಶಿಕ್ಷಕರ ನೇಮಕಾತಿ ಮಾಡಿದಂತಾಗಿತ್ತು. ಇದರ ಜೊತೆಗೆ ನಮ್ಮ ಅವಧಿಯಲ್ಲಿ 20,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೆವು.

ನಮ್ಮ ಅವಧಿಯಲ್ಲಿ 1763 ಪಿಯು ಕಾಲೇಜುಗಳ ಉಪನ್ಯಾಸಕರನ್ನು ನೇಮಕಾತಿ ಮಾಡಿದ್ದೆವು.
ನಮ್ಮ ಸರ್ಕಾರ 47 ಲಕ್ಷ ಮಕ್ಕಳಿಗೆ ಸಮವಸ್ತ್ರ, ಶೂ ಮತ್ತು ಸಾಕ್ಸ್ ಹಾಗೂ 5 ಲಕ್ಷ ಮಕ್ಕಳಿಗೆ ಬೈಸಿಕಲ್ ನೀಡಿದ್ದೆವು. ನಾವು ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದಕ್ಕಾಗಿಯೆ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದು ವಾರದಲ್ಲಿ 5 ದಿನ ಕೆನೆಭರಿತ ಹಾಲನ್ನು ನೀಡಿದ್ದೆವು.

ನಾವು ಕೈಗೊಂಡ ಕ್ರಮಗಳಿಂದಾಗಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಮತ್ತು ಎನ್‍ಸಿಇಆರ್‌‌ಟಿ ಯು ರಾಜ್ಯದ ಶಾಲೆಗಳಲ್ಲಿ 3,5,8 ನೇ ತರಗತಿಗಳಲ್ಲಿ ಕಲಿಯುತ್ತಿದ್ದ 1.29 ಲಕ್ಷ ವಿದ್ಯಾರ್ಥಿಗಳಿಗೆ ನಡೆಸಿದ ರಾಷ್ಟ್ರೀಯ ಸಾಧನೆ ಸಮೀಕ್ಷೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲೆ ಇತ್ತು.

ನಾವು ಮಕ್ಕಳ ಶಿಕ್ಷಣಕ್ಕಾಗಿಯೆ 1400 ಕ್ಕೂ ಹೆಚ್ಚು ಹಾಸ್ಟೆಲ್‍ಗಳು, ಆಶ್ರಮ ಶಾಲೆಗಳು, ಮತ್ತು ವಸತಿ ಶಾಲೆಗಳನ್ನು ನಿರ್ಮಿಸಿದ್ದೆವು. ಬಿಜೆಪಿ ಸರ್ಕಾರ ಎಷ್ಟನ್ನು ನಿರ್ಮಿಸಿದೆ ಎಂಬುದನ್ನು ನಾಡಿಗೆ ತಿಳಿಸಬೇಕು.

ನಮ್ಮ ಸರ್ಕಾರದ ಅವಧಿಯಲ್ಲಿ ನನ್ನ ಮಾಹಿತಿಯ ಪ್ರಕಾರ 71,279 ಕೊಠಡಿಗಳ ನವೀಕರಣ, ಪುನರ್ ನವೀಕರಣ ಕಾರ್ಯಗಳನ್ನು ಮಾಡಿ ಮುಗಿಸಿದ್ದೆವು. ಈ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ಬಿಡುಗಡೆ ಮಾಡುವೆ.
ಬಿಜೆಪಿ ಸರ್ಕಾರ ಎಷ್ಟು ಜನ ಶಿಕ್ಷಕರನ್ನು ನೇಮಕ ಮಾಡಿದೆ? ಎಷ್ಟು ಜನ ಮಕ್ಕಳಿಗೆ ಸೈಕಲ್ ನೀಡಿದೆ? ಎಷ್ಟು ಶಾಲೆಗಳನ್ನು, ವಸತಿ ಶಾಲೆಗಳನ್ನು ನಿರ್ಮಿಸಿದೆ ಎಂದು ಹೇಳಬೇಕು. ಮಕ್ಕಳಿಗೆ ಶೂ, ಸಾಕ್ಸ್, ಪುಸ್ತಕ, ಸೈಕಲ್ ಅಷ್ಟೆ ಅಲ್ಲ ಸಮರ್ಪಕವಾಗಿ ವಿದ್ಯಾರ್ಥಿ ವೇತನಗಳನ್ನೂ ಬಿಜೆಪಿ ಸರ್ಕಾರಕ್ಕೆ ನೀಡಲು ಸಾಧ್ಯವಾಗಿಲ್ಲ.

ನಮ್ಮ ಸರ್ಕಾರ ತೆಗೆದುಕೊಂಡ ಕ್ರಮಗಳಿಂದ ಮಕ್ಕಳ ಅಪೌಷ್ಟಿಕತೆ ಕಡಿಮೆಯಾಗಿತ್ತು. ಶಾಲೆಗಳ ಹಾಜರಾತಿ ಹೆಚ್ಚಿತ್ತು. ಆದರೆ ಈಗ ಸರ್ಕಾರವೆ ಹೈ ಕೋರ್ಟಿಗೆ ಸಲ್ಲಿಸಿರುವ ವರದಿ ಪ್ರಕಾರ ಸುಮಾರು 10.12 ಲಕ್ಷ ಮಕ್ಕಳು ಶಾಲೆಯಿಂದ ಹೊರಗೆ ಇದ್ದಾರೆ. ಈ ಮಕ್ಕಳ ಭವಿಷ್ಯವೇನಾಗಬಹುದು ಎಂದು ಸರ್ಕಾರ ಯೋಚಿಸಿದೆಯೆ?

ಆಡಳಿತ ಪಕ್ಷದಲ್ಲಿರುವ ಸಚಿವರು ವಿರೋಧ ಪಕ್ಷಗಳಿಗೆ ಪ್ರಶ್ನೆ ಕೇಳುವುದಲ್ಲ. ಸರ್ಕಾರದ ಕೆಲಸಗಳು ಉತ್ತರ ನೀಡುವಂತೆ ಇರಬೇಕೆ ಹೊರತು, ಮಂತ್ರದಿಂದ ಮಾವಿನ ಉದುರಿಸಲು ಸಾಧ್ಯವಿಲ್ಲ.

ಅಷ್ಟಕ್ಕೂ ಶಿಕ್ಷಣ ಸಚಿವರಿಗೆ ಕಾಳಜಿ, ಬದ್ಧತೆ ಇದ್ದರೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯಲ್ಲಿ 2008 ರಿಂದ ಇದುವರೆಗೆ ಏನೇನಾಗಿದೆ? ಯಾವ ಸಾಧನೆಗಳಾಗಿವೆ ಎಂಬ ಕುರಿತು ಹಾಗೂ ಈ 14 ವರ್ಷಗಳಲ್ಲಿ ಸದರಿ ಇಲಾಖೆಯಲ್ಲಿ ಖರ್ಚು ಮಾಡಿದ ಪ್ರತಿ ಪೈಸೆಗೂ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಬೇಕೆಂದು ಆಗ್ರಹಿಸುತ್ತೇನೆ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಇರುವ ಎಲ್ಲ ಹಿಂದಿನ ಯೋಜನೆಗಳನ್ನು ಮುಂದುವರೆಸಬೇಕು, ಶೂ, ಸಾಕ್ಸ್, ಸೈಕಲ್, ಹಾಲು, ಸಮವಸ್ತ್ರ, ಪುಸ್ತಕ, ವ್ಯವಸ್ಥಿತ ಕೊಠಡಿಗಳನ್ನು ಕೂಡಲೆ ಒದಗಿಸಬೇಕು, ಪ್ರವಾಹ, ಅತಿವೃಷ್ಟಿಯಿಂದ ಹಾನಿಯಾದ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಿಸುವ ಕೆಲಸ ಇನ್ನೂ ಆಗಿಲ್ಲ, ಅವುಗಳನ್ನು ಶೀಘ್ರವಾಗಿ ಪುನರ್ ‌ನಿರ್ಮಿಸಬೇಕು. ಖಾಲಿ ಇರುವ ಎಲ್ಲ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.

ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ

Published

on

ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ‌ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ‌. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending