ದಿನದ ಸುದ್ದಿ
ದಾವಣಗೆರೆ | ತರಳಬಾಳು ಶಿವಸೈನ್ಯ ಸಂಘ ರಾಜ್ಯ ಘಟಕದ ಪದಾಧಿಕಾರಿಗಳ ಪದಗ್ರಹಣ
ಸುದ್ದಿದಿನ,ದಾವಣಗೆರೆ:900 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸಾಧು ಸದ್ಧರ್ಮ ವೀರಶೈವ ಸಮಾಜಕ್ಕೆ ಕಷ್ಟ ಅಪರೇಷಗಳನ್ನು ನೀಡಿದಂತವರು ಹಾಗೂ ಭದ್ರವಾದ ನೆಲೆಯನ್ನು, ಸಂಸ್ಕಾರವನ್ನು,ಗಟ್ಟಿತನವನ್ನು ತಂದುಕೊಟ್ಟಂತವರು ಲಿಂ.ತರಳಬಾಳು ಜಗದ್ಗುರು ಶ್ರೀ ಗುರುಶಾಂತರಾಜ ಮಹಾಸ್ವಾಮಿಗಳವರು.
ಸಾಧು ಸದ್ಧರ್ಮ ಸಮಾಜ ಅಸಂಘಟಿತವಾದ ಸಂದರ್ಭದಲ್ಲಿ ಈ ಸಮಾಜವನ್ನು ಒಗ್ಗೂಡಿಸುವ, ಸಮಾಜಕ್ಕೆ ಪ್ರಜ್ಞೆ, ಪಸ್ಟ ರೂಪ ನೀಡಬೇಕು ಎನ್ನುವ ವಿಚಾರಧಾರೆಯಲ್ಲಿ ಸುಸಂಘಟಿತವಾದ ಸಮಾಜ ನಿರ್ಮಾಣ ಮಾಡಬೇಕು ಎಂಬ ನಿಟ್ಟಿನಲ್ಲಿ ಗುರುಶಾಂತರಾಜ ಮಹಾಸ್ವಾಮಿಗಳು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಮಾಜದ ಭಕ್ತರನ್ನು ಸುಶಿಕ್ಷತರನ್ನಾಗಿ ಮಾಡುವುದಲ್ಲದೆ ಸಮಾಜವನ್ನು ಭದ್ರಗೊಳಿಸಿದರು.
ಅದೇ ರೀತಿ ಲಿಂ.ಹಿರಿಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಸಾಧು ಸಮಾಜವನ್ನು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಸದೃಢಗೊಳಿಸಿ ಸಮಾಜ ಬಾಂಧವರು ತಲೆಯೆತ್ತಿ ನಡೆಯುವಂತೆ ಮಾಡಿದ್ದಾರೆ. ಮುಂದುವರೆದು ಇಂದಿನ 21ನೇ ಜಗದ್ಗುರುಗಳವರು ಸಮಾಜವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಹಿಂದೆ ದುಗ್ಗಾಣೆ ಮಠವಾಗಿದ್ದ ನಮ್ಮ ಮಠ ಇಂದು 2000 ಕೋಟಿಯಷ್ಟು ಆಸ್ತಿ ಹೊಂದಿದೆ ಎಂಬುದು ನಮ್ಮ ಸಮಾಜದ ಸದ್ಭಕ್ತರ ಹೃದಯ ಶ್ರೀಮಂತಿಕೆಯನ್ನು ಸಂಸ್ಕಾರವನ್ನು ಉದಾರತೆಯನ್ನು ತೋರಿಸುತ್ತದೆ.
ಇಂತಹ ಶ್ರೀಮಂತ ಸಂಸ್ಕಾರಯುತ ಉದಾರವಾದ ದೊಡ್ಡ ಸಮಾಜಕ್ಕೆ ಪೂರಕವಾದ ಅಂತಹ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಇಂದು ತರಳಬಾಳು ಶಿವಸೈನ್ಯ ಸಂಘ ರಾಜ್ಯ ಘಟಕ ಅಸ್ತಿತ್ವಕ್ಕೆ ಬಂದಿದ್ದು ಅದರ ದೇವ ದೇಶಗಳು ತುಂಬಾ ಉತ್ತಮವಾಗಿವೆ. ಇದು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಅದರಲ್ಲಿ ನಾನು ಗೌರವಾಧ್ಯಕ್ಷನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ವಿಜಯನಗರ ಜಿಲ್ಲೆಯ ಮಹಾಬಲೇಶ್ವರ ಗೌಡರು ತಿಳಿಸಿದರು.
ರೈತ ಮುಖಂಡರಾದ ಹೊನ್ನೂರು ಮುನಿಯಪ್ಪನವರು ಮಾತನಾಡುತ್ತಾ ತರಳಬಾಳು ಶಿವಸೇನೆ ಸಂಘವು ಸಮಾಜದಲ್ಲಿ ತಪ್ಪು ದಾರಿಯಲ್ಲಿ ಹೋಗುವವರನ್ನು ತಿದ್ದುವಂತಹ ಸರಿದಾರಿಗೆ ತರುಹಂತಹ ಕೆಲಸ ಮಾಡಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪನವರು ಮಾತನಾಡುತ್ತಾ ತರಳಬಾಳು ಶಿವಸೈನ್ಯ ಸಂಘವು ಯಾವುದೇ ಸಮಾಜದ ಪ್ರತಿಸ್ಪರ್ಧಿಯಾಗಿ ರೂಪಗೊಂಡಿಲ್ಲ. ಬದಲಾಗಿ ಇದು ನಮ್ಮ ಸಮಾಜವನ್ನು ಮತ್ತಷ್ಟು ಸದೃಢಗೊಳಿಸುವ, ಸಮಾಜಮುಖಿಯಾಗಿ ಕೆಲಸ ಮಾಡುವ, ಉತ್ತಮೋತ್ತಮ ಕೆಲಸ ಮಾಡುವ ನಿಟ್ಟಿನಲ್ಲಿ ರೂಪಗೊಂಡಿದೆ. ನಮ್ಮ ಸಮಾಜದಲ್ಲಿ ಯಾವುದೇ ವ್ಯತ್ಯಾಸಗಳು, ನಿಲುವುಗಳು, ಭಿನ್ನಾಭಿಪ್ರಾಯಗಳು ಇದ್ದರೂ ನಮ್ಮ ಸಮಾಜಕ್ಕೆ ಪಿತಾಮಹಾರೆಂದರೆ ತರಳಬಾಳು ಜಗದ್ಗುರುಗಳೇ ಹೊರತು ಬೇರೆಯವರಲ್ಲ ಎಂಬುದನ್ನು ನಾವೆಲ್ಲ ಮನಗಾಣ ಬೇಕಾಗಿದೆ ಎಂದು ತಿಳಿಸಿದರು.
ನಮ್ಮ ಸಮಾಜ ಹಾಗೂ ಸಂಘವು ತರಳಬಾಳು ಪರಂಪರೆಯ ಗುರುಪೀಠದ ಆದೇಶದಂತೆ ಅದನ್ನು ಚಾಚು ತಪ್ಪದೇ ಪಾಲಿಸಿ ಕೊಂಡು ಬರುವ ಸಂಪ್ರದಾಯವನ್ನು ಹೊಂದಿದೆ. ಅದೇ ರೀತಿ ತರಳಬಾಳು ಶಿವಸೇನೆ ಸಂಘವು ನಡೆದುಕೊಂಡು ಹೋಗಬೇಕೆಂಬುದು ನಮ್ಮ ಆಶಯವಾಗಿದೆ. ಈ ಸಂಘವು ಹೋಬಳಿ ಮಟ್ಟದಿಂದ ಹಿಡಿದು ತಾಲೂಕು,ಜಿಲ್ಲೆ ಗಳಲ್ಲಿ ತನ್ನ ಕಾರ್ಯಕ್ಷೇತ್ರ ಮತ್ತು ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆಯ ಸದಸ್ಯರಾದ ಗಡಿಗುಡಾಳ್ ಮಂಜುನಾಥ್ ರವರು ಮಾತನಾಡುತ್ತ ತರಳಬಾಳು ಶಿವಸೈನ್ಯ ಸಂಘ ರಾಜ್ಯ ಘಟಕ ಇಂದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇದರಿಂದ ಇದರ ಜವಾಬ್ದಾರಿಯು ಕೂಡ ಹೆಚ್ಚಾಗಿದೆ.ಈ ಸಂಘಕ್ಕೆ ಯಾವುದೇ ರೀತಿಯ ಸಹಕಾರ ಬೇಕಾದರೂ ನಾನು ಮಾಡಲು ಸಿದ್ಧ. ಸಂಘವು ನಮ್ಮ ಸಮಾಜದ ಯಾರೇ ಬಂದವರು ಉತ್ತಮ ಉತ್ತಮ ಸಾಧನೆಗಳನ್ನು ಕೆಲಸಗಳನ್ನು ಮಾಡಿದಾಗ ಅವರನ್ನು ಗುರುತಿಸಿ ಬೆಂಬಲಿಸುವ ಬೆನ್ನುತಟ್ಟುವ ಕೆಲಸ ಮಾಡಬೇಕು ಎಂಬ ಅಭಿಪ್ರಾಯ ಹಂಚಿಕೊಂಡರು.
ಸಮಾರಂಭದ ಆರಂಭದಲ್ಲಿ ಶಿವಸೈನ್ಯ ಸಂಘದಲ್ಲಿ ಇದುವರೆಗೂ ಕೆಲಸ ನಿರ್ವಹಿಸಿದಂತ ಪದಾಧಿಕಾರಿಗಳಿಗೆ ಗೌರವಿಸಿ ಸನ್ಮಾನಿಸಿದರು.
ನೂತನವಾಗಿ ಅಸ್ತಿತ್ವಕ್ಕೆ ಬಂದ ತರಳಬಾಳು ಶಿವಸೈನ್ಯ ಸಂಘ ರಾಜ್ಯ ಘಟಕದ ಅಧ್ಯಕ್ಷರಾಗಿ ಶಶಿಧರ ಹೆಮ್ಮನಬೇತೂರು ಗೌರವಾಧ್ಯಕ್ಷರಾಗಿ, ವಿಜಯನಗರ ಜಿಲ್ಲೆಯ ಮಹಾಬಲೇಶ್ವರ ಗೌಡರು ಹಾಗೂ ದಾವಣಗೆರೆಯ ಶ್ರೀನಿವಾಸ್ ಶಿವಗಂಗಾ, ಉಪಾಧ್ಯಕ್ಷರಾಗಿ ಕೆ ಬಿ ಮೋಹನ್ ಸಿರಿಗೆರೆ, ಅಶ್ವಿನ್ ಕೆ ಪಿ ನಿಂಬೆಗುಂದಿ ಶಿಕಾರಿಪುರ ವೀರಣ್ಣ ಮಾಕನೂರು, ಕೆಬಿ ಶ್ರೀಧರ್ ಪಾಟೀಲ್ ಭದ್ರಾವತಿ, ಲಿಂಗರಾಜ್ ಆಗಸನಕಟ್ಟೆ ಹಾಗೂ ಕಾರ್ಯದರ್ಶಿಯಾಗಿ ಬಸವನಗೌಡರು ವಕೀಲರು ವಿಜಯನಗರ, ಕೋಶಾಧ್ಯಕ್ಷರಾಗಿ ಶಿವಕುಮಾರ್ ಡಿಎಂ ಕೋರಟಿಕೆರೆ, ಹೀಗೆ ಒಟ್ಟು 39 ಪದಾಧಿಕಾರಿಗಳು ಪದಗ್ರಹಣವನ್ನು ಸ್ವೀಕರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಕ್ಕರಗೊಳ್ಳದ ಕೆ ಜಿ ಬಸವನಗೌಡರು ವಹಿಸಿದ್ದರು. ಪಿ.ಮಹಾಬಲೇಶ್ವರ ಗೌಡ್ರು, ಬಿ.ವಾಮದೇವಪ್ಪ, ಹೊನ್ನೂರು ಮುನಿಯಪ್ಪ, ರಾಮಗೊಂಡನಹಳ್ಳಿ ಜಯಣ್ಣ, ಬೇತೂರು ಸಂಗನಗೌಡ್ರು, ಮಾಗನೂರು ಉಮೇಶಗೌಡ್ರು, ಯಶವಂತಗೌಡ್ರು, ಶ್ರೀನಿವಾಸ ಶಿವಗಂಗಾ, ಕೆ.ನಾಗಪ್ಪ ಮೇಷ್ಟ್ರು, ಕಂಸಾಗರ ಪಂಚಣ್ಣ, ಬೇತೂರು ರೇವಣಸಿದ್ದಪ್ಪ ಮರಡಿ, ಶಶಿಧರ ಹೆಮ್ಮನಬೇತೂರು, ಶಿವರಾಜ್ ಕಬ್ಬೂರು, ಕಾವಲಹಳ್ಳಿ ಪ್ರಭು, ಶಿವಕುಮಾರ್ ಗಡಿಗುಡಾಳ್ ಮಂಜುನಾಥ್ ಮತ್ತಿತರರು.ಕಾರ್ಯಕ್ರಮದಲ್ಲಿ ಪ್ರಭು ಕಾವಲಹಳ್ಳಿ,ಆರ್ ಜಿ ರುದ್ರೇಶ್, ಬಿಎಸ್ ಪ್ರಕಾಶ್, ಪ್ರಕಾಶ್ ಕಬ್ಬೂರು, ಕುಮಾರ್ ಮಳ್ಳಿಕಟ್ಟೆ, ಬಸವರಾಜ್ ಮುಡೇನಹಳ್ಳಿ, ನರೇಂದ್ರ ರಾಂಪುರ, ಸತೀಶ್ ಸಿರಿಗೆರೆ ಸೇರಿದಂತೆ ಸುಮಾರು 10 ಜಿಲ್ಲೆಗಳಿಂದ 250 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಆರಂಭದಲ್ಲಿ ಸಿ ಜಿ ಜಗದೀಶ್ ಕೂಲಂಬಿ ಸ್ವಾಗತಿಸಿದರು. ಶಿವರಾಜ್ ಕಬ್ಬೂರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸುದ್ದಿದಿನ. ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಾ. ಶಾಮನೂರು ಶಿವಶಂಕರಪ್ಪ ನಿಧನ ; ವೀರಶೈವ ವಿಧಿವಿಧಾನದಂತೆ ಕಲ್ಲೇಶ್ವರ ಮಿಲ್‍ನಲ್ಲಿ ಅಂತ್ಯ ಸಂಸ್ಕಾರ
ಸುದ್ದಿದಿನ,ದಾವಣಗೆರೆ:ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರು ನಿಧನರಾಗಿದ್ದು ಅವರ ಅಂತ್ಯ ಸಂಸ್ಕಾರವು ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ ಸಂಪ್ರದಾಯದಂತೆ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಅಪಾರ ಜನಸ್ತೋಮದೊಂದಿಗೆ ಸೋಮವಾರ ಸಂಜೆ ಜರುಗಿತು.
ಡಾ; ಶಾಮನೂರು ಶಿವಶಂಕರಪ್ಪನವರಿಗೆ 95 ವರ್ಷವಾಗಿದ್ದು ವಯೋಸಹಜ ಅನಾರೋಗ್ಯದಿಂದ ಡಿಸೆಂಬರ್ 14 ರಂದು ನಿಧನ ಹೊಂದಿದ್ದರು. 6 ಭಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಸುಧೀರ್ಘ ರಾಜಕೀಯ ಸೇವೆಯಲ್ಲಿದ್ದ ಇವರು ರಾಜ್ಯ ಸೇರಿದಂತೆ ದಾವಣಗೆರೆಗೆ ಹೊಸ ರೂಪಕೊಟ್ಟಿದ್ದರು.
ಸೋಮವಾರ ಬೆಳಗ್ಗೆ 7.30 ಗಂಟೆಯಿಂದ ಪಾರ್ಥಿವ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರ ವಿವಿಧ ಪೂಜೆ ಪುನಸ್ಕಾರಗಳೊಂದಿಗೆ ವಿಧಿ ವಿಧಾನಗಳು ನಡೆದು, ಮಧ್ಯಾಹ್ನದಿಂದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಸಾವಿರಾರು ಜನರು ಆಗಮಿಸಿ ಸರತಿ ಸಾಲಿನಲ್ಲಿ ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ 3.30 ರಿಂದ ಹೈಸ್ಕೂಲ್ ಮೈದಾನದಿಂದ ಹೊರಟು ಹಳೇ ದಾವಣಗೆರೆ ಮಂಡಿಪೇಟೆ, ಕಾಯಿಪೇಟೆ, ಅರಳಿವೃತ್ತದ ಮೂಲಕ ಕಲ್ಲೇಶ್ವರ ಮಿಲ್‍ಗೆ ಪಾರ್ಥಿವ ಶರೀರ ತಲುಪಿತು. ಸಂಜೆ 4.30 ರಿಂದ ಅಂತಿಮ ವಿಧಿ ವಿಧಾನಗಳು ನಡೆದವು.
ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಉಪ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ಅವರು, ಇಂಧನ ಸಚಿವರಾದ ಕೆ.ಜೆ.ಜಾರ್ಜ್‍ರವರು, ಸಮಾಜ ಕಲ್ಯಾಣ ಸಚಿವರಾದ ಡಾ; ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ, ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ, ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ.ಎಸ್.ಪಾಟೀಲ, ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್ ಸೇರಿದಂತೆ ಶಾಸಕರು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು.
ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ರಾಷ್ಟ್ರಧ್ವಜವನ್ನು ಪಾರ್ಥಿವ ಶರೀರಕ್ಕೆ ಹೊದಿಸಿ ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಲಾಯಿತು. ನಂತರ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿ ಅಂತಿಮವಾಗಿ ಶೋಕ ವ್ಯಕ್ತಪಡಿಸಲಾಯಿತು. ರಾಷ್ಟ್ರಧ್ವಜವನ್ನು ಅವರ ಪುತ್ರರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಸ್ತಾಂತರಿಸಿದರು. ನಂತರ ಸಾಂಪ್ರದಾಯಿಕ ಪೂಜೆ, ವಿಧಿ, ವಿಧಾನಗಳೊಂದಿಗೆ ಪಾರ್ಥಿವ ಶರೀರವನ್ನು ಐಕ್ಯ ಮಂಟಪದಲ್ಲಿ ಇಡಲಾಯಿತು.
ಡಾ; ಶಾಮನೂರು ಶಿವಶಂಕರಪ್ಪನವರ ಪುತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸೊಸೆ ಹಾಗೂ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್, ಇನ್ನಿಬ್ಬರು ಪುತ್ರರಾದ ಎಸ್.ಎಸ್.ಬಕ್ಕೇಶ್, ಎಸ್.ಎಸ್.ಗಣೇಶ್ ಸೇರಿದಂತೆ ಶಾಮನೂರು ಶಿವಶಂಕರಪ್ಪನವರ ಕುಟುಂಬಸ್ಥರು ಅಂತಿಮ ವಿಧಿ ವಿಧಾನದಲ್ಲಿ ಭಾಗವಹಿಸಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಸ್.ಆರ್.ಬೊಮ್ಮಾಯಿ, ಗೃಹ ಸಚಿವರಾದ ಜಿ.ಪರಮೇಶ್ವರ್, ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಕೃಷಿ ಸಚಿವರಾದ ಚಲುವರಾಯಸ್ವಾಮಿ, ಬಿ.ಜೆ.ಪಿ.ಪಕ್ಷದ ರಾಜ್ಯಾದ್ಯಕ್ಷರಾದ ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ಅಂತಿಮ ದರ್ಶನ ಪಡೆದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ4 days agoಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ4 days ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
-
ದಿನದ ಸುದ್ದಿ5 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ5 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ2 days agoಡಾ. ಶಾಮನೂರು ಶಿವಶಂಕರಪ್ಪ ನಿಧನ ; ವೀರಶೈವ ವಿಧಿವಿಧಾನದಂತೆ ಕಲ್ಲೇಶ್ವರ ಮಿಲ್‍ನಲ್ಲಿ ಅಂತ್ಯ ಸಂಸ್ಕಾರ

