Connect with us

ದಿನದ ಸುದ್ದಿ

ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಥಮ ಕುಂದುಕೊರತೆ ಸಭೆ |ಸಿಂದಗಿ ತಾಲೂಕಿನ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ :‌ ಸಚಿವೆ ಶಶಿಕಲಾ ಜೊಲ್ಲೆ

Published

on

ಸುದ್ದಿದಿನ,ವಿಜಯಪುರ : ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರಣ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅವರ ಉಪಸ್ಥಿತಿಯಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲೆಯ ಸಿಂದಗಿಯಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಕುಂದುಕೊರತೆ ಸಭೆಗೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಸ್ಪಂದನೆ ದೊರೆತಿದೆ.

ಸಿಂದಗಿ ಸಾತವಿರೇಶ್ವರ ಸಭಾಂಗಣದಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ದೀಪ ಬೆಳಗಿಸಿ ಮಾತನಾಡಿ ಕೊರೋನಾ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಗಿದ್ದರೂ ಕೂಡ ಜಿಲ್ಲೆಯ ತಾಲೂಕಾವಾರು ಸಾರ್ವಜನಿಕ ಕುಂದುಕೊರತೆ ಸಭೆಗಳನ್ನು ಹಮ್ಮಿಕೊಳ್ಳುವ ದಿಸೆಯಲ್ಲಿ ಇದೇ ಪ್ರಥಮ ಬಾರಿಗೆ ಸಿಂದಗಿಯಲ್ಲಿ ಕುಂದುಕೊರತೆ ಸಭೆಯನ್ನು ಏರ್ಪಡಿಸಿದ್ದು, ಮಹಿಳೆಯರು, ಹಿರಿಯ ನಾಗರೀಕರು, ವಿಶೇಷ ಚೇತನರು, ರೈತರು ಸೇರಿದಂತೆ ಎಲ್ಲಾ ವರ್ಗದ ಜನರಿಂದ ಕುಂದುಕೊರತೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಸುಮಾರು 76 ಅರ್ಜಿಗಳಿಗೆ ತಕ್ಷಣ ಪರಿಹಾರ ಕಲ್ಪಿಸಿದ್ದು, ಇನ್ನುಳಿದ ಅರ್ಜಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ | ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು..!

ಸರ್ಕಾರವನ್ನೇ ಜನರ ಹತ್ತಿರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ರೂಪಿಸಿ ಬಡವರ, ರೈತರ, ವಿಕಲಚೇತನರ ಹಾಗೂ ಹಿರಿಯ ನಾಗರೀಕರು, ಮಹಿಳೆಯರು ಮತ್ತು ಮಕ್ಕಳ ಜೀವನವನ್ನು ಸುಧಾರಿಸುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದು, ಪ್ರತಿ ತಿಂಗಳು ಜಿಲ್ಲಾಧಿಕಾರಿಗಳು ಈ ಅರ್ಜಿಗಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಲಿದ್ದಾರೆ ಎಂದು ಹೇಳಿದರು.

ಅತೀವೃಷಿ ಭೀಮಾ ಮತ್ತು ಡೋಣಿ ನದಿಗೆ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಗಮನ ನೀಡಲಾಯಿತು. ಕೋವಿಡ್ ಹಿನ್ನೆಲೆ ಸ್ವಲ್ಪ ವಿಳಂಬವಾಗಿದ್ದರೂ ಸಾರ್ವಜನಿಕ ಕುಂದುಕೊರತೆಗಳಿಗೆ ಸ್ಪಂದಿಸಲು ಈ ಸಭೆ ಆಯೋಜಿಸಿದ್ದು ನಿರೀಕ್ಷೆಗೂ ಮೀರಿ ಸಾರ್ವಜನಿಕರು ಆಗಮಿಸಿ ತಮ್ಮ ಆಹವಾಲುಗಳನ್ನು ಸಲ್ಲಿಸುತ್ತಿದ್ದಾರೆ.

ಸಮಸ್ಯೆಗಳ ಪರಿಹಾರಕ್ಕಾಗಿ ಇಲ್ಲಿಗೆ ಆಗಮಿಸಿದ್ದು ಅಲ್ಲಮಪ್ರಭು ವಚನ ಬೆಟ್ಟದ ನೆಲ್ಲಿಕಾಯಿ ಹಾಗೂ ಸಮುದ್ರದೊಳಗಿನ ಉಪ್ಪಿಗೂ ಎತ್ತಣದೆತ್ತಣ ಸಂಬಂಧವಯ್ಯಾ ಎಂದು ಹೇಳಿ ದೀನದಲಿತರ ಸಂಕಷ್ಟದಲ್ಲಿರುವ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಲು ತಾವು, ಅಧಿಕಾರಿಗಳು ಬಂದಿರುವುದಾಗಿ ಸಚಿವರು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ರಸ್ತೆ, ಮನೆ ಸೇರಿದಂತೆ ಇನ್ನೀತರ ಸೌಕರ್ಯ ಕಲ್ಪಿಸುವ ದಿಸೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಬಡಜನರ ಸಮಸ್ಯೆಗಳಿಗೆ ಸ್ಪಂದಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ಹೇಳಿದರು. ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್, ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸಿದರು.

ಇಂದು ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಕುಡಿಯುವ ನೀರು, ವಿದ್ಯುತ್, ಪುನರ್ ವಸತಿ, ರಸ್ತೆಗಳ ದುರಸ್ತಿ, ಸಿಂದಗಿ ಪಟ್ಟಣದ ಒಳಚರಂಡಿ ಸಮಸ್ಯೆ ನಿವಾರಣೆ, ಬೀದಿ ದನಗಳನ್ನು ನೋಂದಾಯಿತ ಗೋಶಾಲೆಗಳಿಗೆ ಕಳುಹಿಸುವ ಒಂದು ವಾರದ ಮುಂಚೆ ನೋಟಿಸ್ ಜಾರಿಗೊಳಿಸಿ ಮಾಲೀಕರಿಗೆ ಸೂಕ್ತ ತಿಳುವಳಿಕೆ ನೀಡಿ ರವಾನಿಸಬೇಕು. ಪಟ್ಟಣದಲ್ಲಿ ವಿದ್ಯುತ್ ದೀಪ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಅರ್ಜಿಗಳು ಸಲ್ಲಿಕೆಯಾಗಿದ್ದು, 80 ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದೆ ಎಂದು ಹೇಳಿದರು.

ತಾಲೂಕಿನ ಸ್ಮಶಾನ ಭೂಮಿ, ಅಂಗನವಾಡಿಗಳ ಸ್ಥಳಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಮಳೆಗೆ ಬಿದ್ದ ಮನೆಗಳ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಿಂದಗಿ ಪಟ್ಟಣದಲ್ಲಿ ರಸ್ತೆ, ಚರಂಡಿ ವ್ಯವಸ್ಥೆ, ವಿದ್ಯುತ್ ದೀಪಗಳ ಸುಧಾರಣೆ ಬಗ್ಗೆ ಪರಿಶೀಲನೆ ಮತ್ತು ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ತಾಲೂಕಿನ ಕೆರೆ, ಹಳ್ಳ, ಸೇತುವೆಗಳ ಹತ್ತಿರದ ರಸ್ತೆ ಸಮಸ್ಯೆಗಳನ್ನು ನಿಗದಿತ ಸಮಯದೊಳಗೆ ಪರಿಹರಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ, ತಹಶೀಲ್ದಾರ ಸಂಜೀವ ದಾಸರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ, ಪುರಸಭೆ ಅಧ್ಯಕ್ಷ ಶ್ರೀ ಮನಗೂಳಿ, ಜಿ,ಪಂ, ತಾಲೂಕು ಪಂಚಾಯತ್ ಅಧ್ಯಕ್ಷರು, ಸದಸ್ಯರು, ಉಪಾಧ್ಯಕ್ಷರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.

ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ

Published

on

ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ‌ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ‌. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending