ದಿನದ ಸುದ್ದಿ
ಕರುನಾಡಿನ ಸಂತ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಬಗ್ಗೆ ನಿಮಗೆಷ್ಟು ಗೊತ್ತು..?
- ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ ಜಿಲ್ಲೆ.
12ನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಏರಿದ ಶೂನ್ಯ ಸಿಂಹಾಸನವನ್ನು 300 ವರ್ಷಗಳ ನಂತರ ಎಡೆಯೂರಿನ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಏರಿದರು. ಅಂಥ ಶೂನ್ಯ ಸಿಂಹಾಸನ ಪರಂಪರೆಯ ಡಂಬಳ-ಗದಗ ತೋಂಟದಾರ್ಯ ಮಠದ 19ನೇ ಪೀಠಾಧಿಪತಿಯಾಗಿ ಜ.ಡಾ. ಸಿದ್ಧಲಿಂಗ ಸ್ವಾಮೀಜಿ, 1974 ಜುಲೈ 29 ರಂದು ಅಧಿಕಾರ ವಹಿಸಿಕೊಂಡಿದರು.ಅಂದಿನಿಂದಲೇ ವೈಚಾರಿಕತೆಗೆ ಹೆಚ್ಚು ಒತ್ತು ಕೊಟ್ಟಿದ್ದ ಶ್ರೀಗಳು, ಕೋಮು ಸೌಹಾರ್ದ, ಮೂಢನಂಬಿಕೆ ವಿರುದ್ಧ ಹೋರಾಡುವ ಜೊತೆಗೆ ಕನ್ನಡ ನಾಡು, ನುಡಿಗೆ ಅಪಾರ ಸೇವೆ ಸಲ್ಲಿಸಿ ಅಜರಾಮರಾಗಿದ್ದಾರೆ ಜೊತೆಗೆ ಹತ್ತಾರು ಚಳುವಳಿಗಳಲ್ಲಿ ಮುಂದಾಳತ್ವವನ್ನು ವಹಿಸಿ ಕೊಳ್ಳುವ ಮೂಲಕ ನಾಡಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ.ಈ ನಿಟ್ಟಿನಲ್ಲಿ ಸ್ವಾಮಿಜೀ ವಿವಿಧ ವಲಯದಲ್ಲಿ ಹೋರಾಟ ಮಾಡಿರುವ ವಿಚಾರಗಳು ತಮ್ಮ ಮುಂದೆ ತರುವ ಸಣ್ಣ ಪ್ರಯತ್ನ ಮಾಡಲಾಗಿದೆ.
ಗೋಕಾಕ್ ಚಳವಳಿ
ಗೋಕಾಕ ವರದಿ ಜಾರಿಗೆ ಬರಲಿ ಎಂಬ ಘೋಷಣೆಯೊಂದಿಗೆ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಧಾರವಾಡದಲ್ಲಿ 1982 ಏಪ್ರಿಲ್ 4ರಂದು ಹೋರಾಟ ಆರಂಭಿಸಿತು. ಆದರೆ ತೋಂಟದ ಶ್ರೀಗಳು ಅದಕ್ಕೂ ಮುನ್ನವೇ (15.2.1982) ಗೋಕಾಕ ವರದಿ ಜಾರಿಗೆ ತರುವ ಸಲುವಾಗಿ ಹೋರಾಟಕ್ಕೆ ಸಿದ್ಧರಾಗಿ, ಕನ್ನಡಕ್ಕೆ ಅಗ್ರ ಪೂಜೆ ಎಂಬುದನ್ನು ಸಾಬೀತುಪಡಿಸಿ. ಜಾತಿ, ಮತ, ಪಂಥ ಬೇಧಗಳನ್ನು ಬದಿಗೊತ್ತಿ ಉಗ್ರ ಹೋರಾಟ ಪ್ರಾರಂಭಿಸಿ ಎಂದು ಕರೆ ಕೊಟ್ಟಿದ್ದರು.
ಮುಂದೆ ಗೋಕಾಕ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೇ, 1982ರ ಜೂನ್ 28ರಂದು ಶಿವಾನುಭವದಲ್ಲಿ ಗೋಕಾಕ ಚಳವಳಿಯ ವಿಜಯೋತ್ಸವ ಆಚರಣೆಗೆ ತೋಂಟದ ಶ್ರೀಗಳು ಕಾರಣರಾದರು.ಇನ್ನು
ಗೋಕಾಕ ವರದಿ ಜಾರಿಗೆ ಸಂಬಂಧಿಸಿದಂತೆ ಮೀನಮೇಷ ಎಣಿಸುತ್ತಿದ್ದ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಅವರನ್ನು ತೋಂಟದ ಶ್ರೀಗಳು ಟೀಕಿಸಿದಂತೆ ಕನ್ನಡ ಅನುಷ್ಠಾನವನ್ನು ಗಂಭೀರವಾಗಿ ಪರಿಗಣಿಸದ ಜೆ.ಎಚ್. ಪಟೇಲ ಸರಕಾರವನ್ನೂ ಟೀಕಿಸಿದ್ದರು.
1997ರಂದು ಶ್ರೀಮಠದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ ಕನ್ನಡ ಅನುಷ್ಠಾನ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗದೇ ಇರಲು ಸರಕಾರ ಕಾರಣವಲ್ಲ ಎಂದಿದ್ದರು. ಪಟೇಲರ ಹೇಳಿಕೆಯನ್ನು ತೀಕ್ಷ್ಣವಾಗಿ ಖಂಡಿಸಿದ್ದ ಶ್ರೀಗಳು, ಕನ್ನಡ ಅನುಷ್ಠಾನದ ವಿಷಯದಲ್ಲಿ ಸರಕಾರ ಗಂಭೀರವಾಗಿ ವರ್ತಿಸುತ್ತಿಲ್ಲ ಎಂದು ತಿರುಗೇಟು ನೀಡಿದ್ದರು ಎನ್ನುವುದು ಸತ್ಯ.
ಶಾಸ್ತ್ರೀಯ ಸ್ಥಾನಮಾನಕ್ಕೆ ಹೋರಾಟ
ಜಗತ್ತಿನ ಪ್ರಬುದ್ಧ ಭಾಷೆಗಳಲ್ಲಿ ಒಂದಾಗಿರುವ, 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂದು ತೋಂಟದ ಶ್ರೀಗಳು ಹೋರಾಟ ನಡೆಸಿದ್ದರು. ಉತ್ತರ ಕರ್ನಾಟಕದ ಬಂಡಾಯದ ನೆಲ ನರಗುಂದದಲ್ಲಿ 2007 ಜನವರಿ 9 ರಂದು ನಾಡಿನ ಹಲವು ಮಠಾಧೀಶರೊಂದಿಗೆ ಪಾದಯಾತ್ರೆ ನಡೆಸಿ ಗಮನ ಸೆಳೆದಿದ್ದರು.ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಡಾ. ನಂಜುಂಡಪ್ಪ ವರದಿ ಅನುಷ್ಠಾನ ಒಂದೇ ದಾರಿ ಎಂದು ತೋಂಟದ ಶ್ರೀಗಳು ಪ್ರಬಲವಾಗಿ ಪ್ರತಿಪಾದಿಸಿದ್ದರು ಎನ್ನುವುದು ನಾಡಿಗೆ ಗೊತ್ತಿರುವ ಸಂಗತಿ.
ಶಿಕ್ಷಣ ಪ್ರೀತಿ
ಶಿಕ್ಷ ಣ ಪಡೆಯುವದು ಕೇವಲ ಜ್ಞಾನಾರ್ಜನೆಗೆ ಮಾತ್ರವಾಗದೆ, ಅದು ಉದ್ಯೋಗ ದೊರಕಿಸಿಕೊಡಲು ಸಹಾಯವಾಗಬೇಕು ಎಂಬ ಉದ್ದೇಶದಿಂದ ಡಂಬಳದಲ್ಲಿ 1983 ರಲ್ಲಿ ವೃತ್ತಿ ತರಬೇತಿ ಕೇಂದ್ರ( ಐಟಿಐ) ತೆರೆದು ಗ್ರಾಮೀಣ ವಿದ್ಯಾರ್ಥಿಗಳು ಉದ್ಯೋಗಸ್ಥರಾಗಲು ಮುನ್ನುಡಿ ಬರೆದರು. ಹಾಗೆ ಹೈಸ್ಕೂಲ್, ಮತ್ತು ಗದಗ ಇತರ ಕಡೆಗೆ ವೈದ್ಯಕೀಯ ಎಂಜಿನಿಯರಿಂಗ್ ಕಾಲೇಜು, ಡಿಪ್ಲೋಮಾ, ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿವರೆಗೂ ನಿರಂತರ ಶಿಕ್ಷಣ ದಾಸೋಹ ನಡೆದಿದೆ.
ವೈಚಾರಿಕ ಪಾದಯಾತ್ರೆ / ಪ್ರಗತಿಪರ ಚಿಂತಕರು :
ಮಠಕ್ಕೆ ಬಂದ ಶ್ರೀಗಳು 1971 ರಿಂದ1981 ರವರೆಗೆ 10 ವರ್ಷಗಳ ಕಾಲ ಗದುಗಿನ ತೋಂಟದಾರ್ಯ ಮಠದಿಂದ ಡಂಬಳದವರೆಗೆ ಪ್ರತಿ ಅಮಾವಾಸ್ಯೆಗೆ ಪಾದಯಾತ್ರೆ ಕೈಗೊಂಡರು. ಇದು ವೈಚಾರಿಕತೆ ಹಿನ್ನೆಲೆಯಲ್ಲಿ ಭಕ್ತರ ಮೇಲೆ ಪರಿಣಾಮ ಬೀರಿತು. ಶ್ರೀಗಳ ಪಾದಯಾತ್ರೆ ಬಗ್ಗೆ ಕುತೂಹಲ ತಾಳಿದ ಅನೇಕ ಭಕ್ತರು ಕೂಡಾ ಹಿಂದಿನ ರಾತ್ರಿ ಗದಗ ಮಠದಲ್ಲಿ ವಾಸ್ತವ್ಯ ಮಾಡಿ ನಂತರ ಅವರ ಜತೆಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಶ್ರೀಗಳು ಡಂಬಳ ಪ್ರವೇಶ ಮಾಡುತ್ತಿದ್ದಂತೆ ಭಕ್ತರು ಅದರಲ್ಲಿಯೂ ಬಂಡಿ ಮನೆತನದ ಡೊಳ್ಳು ಬಾರಿಸುವ ಕಲಾವಿದರು, ಇತರ ಭಕ್ತರು ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದರು. ಇದರಿಂದ ಶ್ರೀಗಳು ಭಕ್ತರೊಂದಿಗೆ ಭಾವನಾತ್ಮಕವಾಗಿ ಬೆರೆಯುವಂತಾಯಿತು. ಗದಗನ ಕೌತಾಳ ವೀರಪ್ಪ ಸೇರಿದಂತೆ ಇತರರು ಕಾಯಂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು.ಡಂಬಳದಲ್ಲಿ ಶಿವಾನುಭವ ಕಾರ್ಯಕ್ರಮದಲ್ಲಿ ಡೊಳ್ಳಿನ ಹಾಡುಗಳಿಗೆ ವಿಶೇಷ ಪ್ರಾಧಾನ್ಯತೆ ಕೊಡುವ ಸ್ವಾಮಿಗಳು ಕುಸ್ತಿ ಪಟುಗಳು, ಕಲಾವಿದರು, ಸಾಹಿತಿಗಳು, ಪತ್ರಕರ್ತರು, ಪ್ರಗತಿಪರ ಚಿಂತಕರ ಸ್ನೇಹ ಜೀವಿಗಳಾಗಿದ್ದರು.
ಆಡು ಮುಟ್ಟದ ಗಿಡ ಇಲ್ಲ ಅವರು ಅರಿಯದ ವಿಷಯವೇ ಇರಲಿಲ್ಲ, ಅದನ್ನೆ ಭಕ್ತರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸರಕಾರಕ್ಕೆ ನೇರವಾಗಿ ತಮ್ಮ ಉಕ್ಕಿನ ಕಂಠದಿಂದ ಚಾಟಿ ಬೀಸುತ್ತಿದ್ದರು.ಡಂಬಳ ಮೂಲ ಪರಂಪರೆಯಂತೆ ಪ್ರತಿ ವರ್ಷ ಫೆಬ್ರುವರಿ ತಿಂಗಳಲ್ಲಿ ಜರುಗುವ ತೋಂಟದಾರ್ಯ ಜಾತ್ರೆಯಲ್ಲಿ ರಥ ಸಾಗುವ ಮುನ್ನ ತೇರಿನ ನಾಲ್ಕು ಗಾಲಿಗೆ ಅನ್ನ ಇಟ್ಟು ನಂತರ ತೇರು ಸಾಗುತ್ತಿತ್ತು, 1970 ರಲ್ಲಿ ಮಠಕ್ಕೆ ಪಟ್ಟಾಧಿಕಾರಿಯಾಗಿ ಬಂದ ವರ್ಷವೇ ಗಾಲಿಗೆ ಅನ್ನ ಹಾಕುವುದನ್ನು ಬಿಡಿಸಿದರು. ನೂರಾರು ಜನರು ತಿನ್ನುವ ಅನ್ನ ನೆಲಕ್ಕೆ ಹಾಕಿ ತುಳಿದುಕೊಂಡು ರಥೋತ್ಸವ ಮಾಡಿದರೆ ಏನು ಸಾರ್ಥಕ ಎಂಬುದನ್ನು ಭಕ್ತರಿಗೆ ಮನವರಿಕೆ ಮಾಡಿಕೊಟ್ಟರು. ಅದನ್ನು ಭಕ್ತರು ಒಪ್ಪಿ ಗಾಲಿಗೆ ಅನ್ನ ಇಡುವ ಪದ್ಧತಿ ಬಿಡಲಾಯಿತು.
ಗ್ರಾಮದೊಳಗೆ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಸ್ವಾಮಿಗಳು ಕುಳಿತುಕೊಳ್ಳಲು ಒಪ್ಪದೆ ಭಕ್ತರ ಮಧ್ಯೆ ನಡೆದುಕೊಂಡು ಬರಲು ಇಚ್ಛೆ ಪಟ್ಟರು, ಭಕ್ತರು ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದರೂ ಮನುಷ್ಯರ ಮೇಲೆ ಮನುಷ್ಯ ಕುಳಿತುಕೊಳ್ಳುವದು ಮಹಾಪರಾಧ ಎಂದು ಅದನ್ನು ನಿರಾಕರಿಸಿದರು ಜೊತೆಗೆ ಅಡ್ಡಪಲ್ಲಕ್ಕಿ ನಿರಾಕರಣೆ ಮಾಡುವ ಮೂಲಕ ನಾಡಿಗೆ ಸೌಹಾರ್ದ ನಡುಗೆಗೆ ಕಾರಣಿಭೊತರಾದರು.
ಹಿಂದಿನಿಂದಲೂ ಬಂದಿರುವ ಕಂಧಾಚಾರ, ಮೌಢ್ಯ, ಮತ್ತು ಜಾತಿಯ ಜಾಡ್ಯವನ್ನು ಬಿಡಿಸಿ ಮಠದಲ್ಲಿ ಹರಿಜನ, ಹಿಂದುಳಿದ ಎಲ್ಲ ವರ್ಗದ ಭಕ್ತರಿಗೆ ಮುಕ್ತ ಪ್ರವೇಶ ಕೊಡಿಸುವ ಮೂಲಕ ಜಾತ್ಯತೀತತೆ ಮೆರೆದರು.
ಕಾಯಕಯೋಗಿ ಶ್ರೀಗಳು
ಡಾ.ಸಿದ್ಧ್ದಲಿಂಗ ಸ್ವಾಮಿಗಳು ಮಠಕ್ಕೆ ಸ್ವಾಮಿಗಳಾಗಿ ಬಂದಾಗ ಮಠದ ಪರಿಸ್ಥಿತಿ ಅಷ್ಟು ಸರಿಯಾಗಿರಲಿಲ್ಲ, ಮಠದಲ್ಲಿ ಏನೂ ಇರಲಿಲ್ಲ, ಜಮೀನುಗಳು ಕೂಡಾ ಪಾಳು ಬಿದ್ದು ಬೆಳೆಯುತ್ತಿರಲಿಲ್ಲ. ಧೃತಿಗೆಡದ ಸ್ವಾಮಿಗಳು ಸ್ವತಃ ಮಡಿ ಹೊಲ, ಮಾನೆ ಹೊಲ ಇತರ ಹೊಲಗಳಲ್ಲಿ ಕೃಷಿಯಲ್ಲಿ ತೊಡಗಿದರು. ಮಠದ ಜಿ.ವಿ.ಹಿರೇಮಠ ಮತ್ತು ಡಂಬಳ ಭಕ್ತರೊಂದಿಗೆ ಮಠದ ಬೆಳವಣಿಗೆ ಕುರಿತು ಚರ್ಚಿಸಿದರು. ಬರಗಾಲದ ಬವಣೆಯಲ್ಲಿ ಕೃಷಿ ಮಾಡಲು ಆಗುವುದಿಲ್ಲ ಎಂದು ಭಕ್ತರು ಹೇಳಿದರೂ ಇರುವ ಜಮೀನಿನನ್ನು ದುರಸ್ತಿಗೊಳಿಸಲು ಮುಂದಾದರು.
ಬರುವ ಕಜ್ಜಾಯದಿಂದ ಮಠದಲ್ಲಿರುವವರು ಊಟ ಮಾಡುತ್ತ ಸ್ವತಃ ಸ್ವಾಮಿಗಳು ಮಡಿ ಹೊಲದಲ್ಲಿ ಕೊಳವೆಬಾವಿ ತೋಡಿಸಿದರು. ನಂತರ ಗ್ರಾಮದಲ್ಲಿರುವ ಹಾಳು ಮಣ್ಣು ಹೊಲಕ್ಕೆ ಹೇರಿಸಿ ದ್ರಾಕ್ಷಿ, ದಾಳಿಂಬೆ ಬೆಳೆಯಲು ಮುಂದಾದರು. ಕೃಷಿಯಲ್ಲಿ ಅಭಿವೃದ್ಧಿ ಕಾಣುತ್ತಿದ್ದಂತೆ ಮಠದ ಜೀರ್ಣೋದ್ಧಾರ ಮಾಡಿದರು.
ಮಠದ ಆವರಣದಲ್ಲಿದ್ದ ಗೋಬರ್ ಗ್ಯಾಸ್ ಅನಿಲ ಘಟಕದ ಸೆಗಣಿಯನ್ನು ಸ್ವತಃ ಸ್ವಚ್ಛಗೊಳಿಸುತ್ತಿದ್ದರು.
ಇನ್ನು ಕಪ್ಪತಗುಡ್ಡಕ್ಕೆ ಧಕ್ಕೆ ತರುವ ಹಳ್ಳಿಗುಡಿ ಬಳಿ ಸ್ಥಾಪಿಸಲು ಉದ್ದೇಶಿಸಿದ ಬೃಹತಾಕಾರದ ವಿದೇಶಿ ಕಂಪನಿ ಪೋಸ್ಕೋ ಉಕ್ಕಿನ ಕಾರ್ಖಾನೆ ಇಲ್ಲಿಂದ ಕಾಲ್ಕಿಳಲು ಜ.ಡಾ.ತೋಂಟದ ಸಿದ್ದಲಿಂಗ ಸ್ವಾಮಿಗಳೇ ಮೊದಲು ಧ್ವನಿ ಎತ್ತಿದ್ದು. 2008ರಲ್ಲಿ ವಿಜಯ ಕರ್ನಾಟಕದಲ್ಲಿ ಪ್ರಥಮ ಸಂದರ್ಶನ ನೀಡಿದ ಸ್ವಾಮಿಗಳು ಯಾವುದೇ ಕಾರಣಕ್ಕೆ ಪೋಸ್ಕೋ ಸ್ಥಾಪನೆಯಾಗಿ ಇಲ್ಲಿಯ ರೈತರು ಬೀದಿ ಪಾಲಾಗುವುದಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಹಾಗೆ ಈ ಸಂದರ್ಭದಲ್ಲಿ ಕೆಲವರು ಪೋಸ್ಕೋ ಪರವಾಗಿ ಹೋರಾಟ ನಡೆಯಿಸಿ ಸ್ವಾಮಿಗಳ ವಿರುದ್ಧವೂ ಪ್ರತಿಭಟಿಸಿದರು. ಅದರ ಬಗ್ಗೆ ಗಮನ ಕೊಡದೆ ಮುಂಡರಗಿ ತಾಲೂಕಿನ ರೈತರ ಮತ್ತು ಜನರ ಸ್ಥಿತಿ ಮತ್ತೊಂದು ಸೊಂಡೂರು ಆಗಬಾರದು ಎಂದಿದ್ದರು. ಹಾಗೆ ಕಪ್ಪತಗುಡ್ಡ ನಾಶವಾದರೆ ಈ ಭಾಗದ ಜನರ ಬದುಕೇ ನಾಶವಾದಂತೆ ಎಂದು ಕಪ್ಪತಗುಡ್ಡ ಸಂರಕ್ಷಣೆಗೆ ಒತ್ತಾಯಿಸಿ ಗದುಗಿನಲ್ಲಿ ನಡೆಸಿದ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಸರಕಾರ ಮಣಿಯುವಂತೆ ಮಾಡಿದ್ದರು.
ಜನರಲ್ಲಿ ಕಾಯಕ ಪ್ರೀತಿ ಹೆಚ್ಚಿಸಲು ಜಾತ್ರೆ ವೇಳೆಯಲ್ಲಿ ಹೈನುಗಾರಿಕೆ, ಹಗ್ಗ ಹೊಸೆಯುವ, ನೇಗಿಲು ಹೊಡೆಯುವ, ರಾಸುಗಳ ಸ್ಪರ್ಧೆ, ಬೆಳೆ ಕ್ಷೇತ್ರೋತ್ಸವ, ವಿವಿಧ ತಳಿಗಳ ಪರಿಚಯ ಜತೆಗೆ ಎತ್ತು ಮತ್ತು ಗೋವುಗಳ ರಕ್ಷ ಣೆ ಮಾಡಿದರು. ಮಠಕ್ಕೆ ಬರುವ ಬಡ ಕುಟುಂಬಗಳಿಗೆ ಜೀವನ ನಡೆಸಲು ಉಚಿತ ಆಕಳುಗಳನ್ನು ಕೊಟ್ಟಿದ್ದಾರೆ.
ಪರಿಸರ ಪ್ರೇಮಿ ಶ್ರೀ
ಡಂಬಳ, ಡೋಣಿ, ತಾಂಡಾ, ಅತ್ತಿಕಟ್ಟಿ, ದಿಂಡೂರ, ಕಡಕೋಳ ಇತರ ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಕಪ್ಪತಗುಡ್ಡ ಅಳಿವು ಉಳಿವು ಎಂಬ ಜನಜಾಗೃತಿ ಕಾರ್ಯಕ್ರಮವನ್ನು ಪರಿಸರ ವೇದಿಕೆ ಸಹಯೋಗದಲ್ಲಿ ಆಯೋಜಿಸಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ಹಾಗೆ ಪರಿಸರ ಕ್ಷೇತ್ರದಲ್ಲಿ ಸೇವೆ ಸಲ್ಲಿಸದವರಿಗೆ ಪ್ರತಿ ವರ್ಷ ಪ್ರಶಸ್ತಿ ಕೂಡಾ ಶ್ರೀ ಮಠದ ವತಿಯಿಂದ ಕೊಡುವ ಪದ್ಧತಿ ಜಾರಿಗೆ ತಂದಿದ್ದರು.
ಮೌಢ್ಯದ ಅಂಧಾಕಾರವನ್ನು ತೊಲಗಿಸಿದ ತೋಂಟದ ಶ್ರೀ
ತೋಂಟದ ಸಿದ್ದಲಿಂಗ ಸ್ವಾಮೀಜಿ ಜನಸಾಮಾನ್ಯರ ಸ್ವಾಮಿಗಳಾಗಿ ಬೆರೆತರು. ಶರಣ ಮತ್ತು ಕಾಯಕ ಸಂಸ್ಕೃತಿ ತಳಹದಿ ಮೇಲೆ ಇತರರಿಗೆ ಮೇಲ್ಪಂಕ್ತಿಯಾಗಿದ್ದರು. ಪಲ್ಲಕ್ಕಿಯಲ್ಲಿ ಕುಳಿತು ಕೇವಲ ಬೋಧನೆಗೆ, ಆಶೀರ್ವಚನಕ್ಕೆ ಸೀಮಿತಗೊಳ್ಳದೆ ಡಂಬಳದಲ್ಲಿ ಪ್ರತಿ ಅಮಾಸ್ಯೆಗೆ ವಚನಾನುಭವ ಮಾಡುವ ಮೂಲಕ ಭಕ್ತರು ಮಠಕ್ಕೆ ಬರುವಂತೆ ಪ್ರೇರೇಪಿಸುತ್ತಿದ್ದರು.
ಜನಸಾಮಾನ್ಯರ ಆಡುಭಾಷೆಯ ಅವರ ನೇರ ಭಾಷಣ ಭಕ್ತರ ಮೇಲೆ ಪರಿಣಾಮ ಬೀರಿತು. ಹೀಗಾಗಿ ಅವರು ಜನಸಾಮಾನ್ಯರ ಸ್ವಾಮೀಜಿ ಎನ್ನಿಸಿಕೊಂಡರು ಎನ್ನುವುದು ಸುಳ್ಳಲ್ಲ. ಮೌಢ್ಯ ಮತ್ತು ಕಂದಾಚಾರಗಳಿಂದ ಆಗುವ ತೊಂದರೆ ಮತ್ತು ಶೋಷಿತರನ್ನು ಮೇಲೆತ್ತುವ ಬಗ್ಗೆ ಕಾಳಜಿ ವಹಿಸಿದಂತೆ ಭಕ್ತರು ಶ್ರೀಗಳಿಗೆ ಹತ್ತಿರವಾದರು.
ಅಡ್ಡ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆ ಮಾಡಿಕೊಳ್ಳುವದನ್ನು ತ್ಯಜಿಸಿ ಪಲ್ಲಕ್ಕಿಯಲ್ಲಿ ವಚನ ಕಟ್ಟು ಇರಿಸಿ ಪಾದಯಾತ್ರೆಯಲ್ಲಿ ಹೋಗುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು ಹಾಗೆ ಪಲ್ಲಕ್ಕಿ ಹೊರುವವರು ಮನುಷ್ಯರೇ ಎಂದು ಪ್ರೀತಿ ತೋರಿ ಎಲ್ಲರೂ ಸಮಾನರು, ಜಾತಿ ಪದ್ಧತಿ ಅಳಸಿ ಹೋಗಬೇಕು ಎಂಬುದನ್ನು ಪದೇ ಪದೇ ಹೇಳುತ್ತಿದ್ದರು.ಹಾಗಾಗಿ ಅವರ ನೇರ ಮತ್ತು ನಿಷ್ಠುರ ನುಡಿಗಳು ನಮ್ಮನ್ನು ಸದಾ ಜಾಗೃತಿ ಇಡುವಂತೆ ಮಾಡಿವೆ.
ವೈಚಾರಿಕ ಕ್ರಾಂತಿಗೆ ಮುನ್ನುಡಿ ಬರೆದ ಶ್ರೀಗಳು:
ಕೇವಲ ಮಠದ ಚಿಂತನೆಗಳಿಗೆ ಸೀಮಿತವಾಗದೆ. ಬಸವಾದಿ ಶರಣರ ವೈಚಾರಿಕ ವಿಚಾರಗಳನ್ನು ನಾಡಿನ ಜನರಿಗೆ ಮುಟ್ಟಿಸುವ ಕಾಯಕದಲ್ಲಿ ನಿರಂತರಾಗಿದ್ದರು.ಜೊತೆಗೆ ಮಠದಲ್ಲಿ ಜರುಗುತ್ತೀರುವ ಜಾತ್ರೆ ಕುರಿತು ಅವರ ದೃಷ್ಟಿ ಕೋನ ಬದಲಾವಣೆಯಾಗಿತ್ತು.ಬದಲಾವಣೆ ತರುವ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಶ್ರೀಗಳು ಮುಂದಾಗಿದರು ಮತ್ತು ಯಶಸ್ವಿಯಾದರೂ ಎನ್ನಬಹುದು. ಅವರು ಹೇಳಿದ ಮಾತುಗಳು ಹೀಗಿವೆ.
ಜಾತ್ರೆ ಎಂದರೆ ಮೋಜು ಮಜಲು ಮಾಡುವದಲ್ಲ, ಉತ್ತತ್ತಿ ಬಾಳೆ ಹಣ್ಣು ಎಸೆಯುವದು ಅಲ್ಲ ಅದೊಂದು ಜನರ ಭಾವೈಕ್ಯತೆ ಬೆಸೆಯುವಂತಾಗಬೇಕು, ಎಲ್ಲ ಜಾತಿ ವರ್ಗದವರು ಒಟ್ಟಾಗಬೇಕು ಎಂದು ಪ್ರತಿ ವರ್ಷ ಆಚರಿಸುವ ಜಾತ್ರಾ ಮಹೋತ್ಸವಕ್ಕೆ ಎಲ್ಲ ಸಮುದಾಯದವರನ್ನು ಒಳಗೊಂಡ ಜಾತ್ರಾ ಸಮಿತಿ ಮಾಡಿ ಪ್ರತಿ ವರ್ಷ ಒಂದೊಂದು ಸಮುದಾಯದವರನ್ನು ಅಧ್ಯಕ್ಷ ರನ್ನಾಗಿ ಆ ಮೂಲಕ ಸಮಿತಿ ಸದಸ್ಯರು ಕೂಡಿಕೊಂಡು ಭಕ್ತರಿಂದ ದೇಣಿಗೆ ಸಂಗ್ರಹಿಸಿ ಭಕ್ತರೇ ನಿರ್ವಹಿಸುವ ಜಾತ್ರೆಯಾಗಬೇಕು ಶ್ರೀಗಳು ಬಯಸಿದರು ಎನ್ನುವುದು ನಾವ್ಯಾರು ಮರೆಯುವಂತಿಲ್ಲ.
ಇದಲ್ಲದೆ ಪ್ರತಿ ವರ್ಷ ಜಾತ್ರೆ ನಿಮಿತ್ತ ಎಲ್ಲರೂ ಕೋಮು ಸೌಹಾರ್ಧತೆಯ ಭಾವೈಕ್ಯತೆ ಭಾವನೆಯಿಂದ ಎಲ್ಲರನ್ನೂ ಕೂಡಿಸುವ ಹೊಸ ಪರಂಪರೆಗೆ ನಾಂದಿ ಹಾಡಿದರು.ಜೊತೆಗೆ ಜಾತ್ರೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವ ಪರಿಪಾಠ ಜಾರಿಗೆ ತಂದಿದ್ದರು. ಜಾತ್ರೆ ಹೊಸ ಸ್ವರೂಪ ಪಡೆದು ಎಲ್ಲ ಸಮುದಾಯದ ಬಂಧುಗಳು ಒಟ್ಟಾಗಿ ಕುಳಿತುಕೊಂಡು ಊಟ ಮಾಡುವ ರೊಟ್ಟಿ ಜಾತ್ರೆ ವಿಶೇಷ ಮಹತ್ವ ಪಡೆದು ರಾಜ್ಯಾದ್ಯಂತ ರೊಟ್ಟಿ ಜಾತ್ರೆಗೆ ಜನಸಾಮಾನ್ಯರು ಆಗಮಿಸುವಂತಾಯಿತು ಮತ್ತು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಸ್ನೇಹಿತರೆ.
ಹೀಗೆ ಶ್ರೀಗಳು ಹೊಸ ವೈಚಾರಿಕ ಕ್ರಾಂತಿಯ ಪರಿಕಲ್ಪನೆ ಮುನ್ನುಡಿ ಬರೆದಿದ್ದಾರೆ ಮತ್ತು ನೈಜತೆ ಮೈಗೂಡಿಸಿಕೊಂಡು ಸೋಹಂ ಎಂದೆನಿಸದೆ ದಾಸೋಹ ಎಂದೆನಿಸಯ್ಯ ಎಂಬ ಶರಣರ ಉಕ್ತಿಯಂತೆ ಕಾಯಕ ಮಾಡಿರುತ್ತಾರೆ.ಜ್ಞಾನದಾಸೋಹದ ಜತೆಗೆ ಪುಸ್ತಕ ದಾಸೋಹ ಹಾಗೂ ಕನ್ನಡ ಉಳಿವಿಗಾಗಿ ಸದಾ ಜಾಗೃತರಾಗಿ ಮುಂಚುಳಿಯಲ್ಲಿ ತೊಡಗಿಸಿಕೊಂಡಿದರ ಫಲವಾಗಿ ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸಿರುವ (ಹೋರಾಟ ರೂಪಿಸಿದ) ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ.
ಇವುಗಳಲ್ಲದೆ ದಲಿತರು, ಹಿಂದುಳಿದ ಅದರಲ್ಲಿಯೂ ಲಂಬಾಣಿ ಸಮುದಾಯದವರ ಮೇಲೆ ವಿಶೇಷ ಪ್ರೀತಿ ಮತ್ತು ಕಾಳಜಿ ಹೊಂದಿದ ಕಾರಣ ದಿಂಡೂರ ಭಾಗದ ಅನೇಕ ಬಡ ಲಂಬಾಣಿ ಕುಟುಂಬದ ಮಕ್ಕಳನ್ನು ದತ್ತು ತೆಗೆದುಕೊಂಡು ಶಾಲೆ ಕಾಲೇಜುಗಳಲ್ಲಿ ಓದಿಸಿದಾರೆ. ಇನ್ನು ಮಠದ ವತಿಯಿಂದ ದೇವದಾಸಿಯರಿಗೆ ಮದುವೆ ಮಾಡಿಸಿ ವೈಚಾರಿಕ ಕ್ರಾಂತಿಗೆ ಸಾಕ್ಷಿಯಾಗಿದರು.
ಇನ್ನು ಆರಂಭದಲ್ಲಿ ಭಕ್ತರ ಮನೆಗೆ ಜೋಳಿಗೆ ಹಿಡಿದುಕೊಂಡು ಬಿಕ್ಷೆ ಬೇಡುವ ಬದಲು ಮಠದ ಜಮೀನುಗಳಲ್ಲಿ ಸ್ವತ: ಕಾಯಕ ಮಾಡಿ, ಭಕ್ತರೊಂದಿಗೆ ಬೆರೆತು ಸ್ವತ: ಭಕ್ತರಿಗೆ ಉಣಬಡಿಸುತ್ತಿದರು. ಭಕ್ತರು, ಸ್ವಾಮಿಗಳ ನಡುವೆ ಭಿನ್ನ ಸಲ್ಲದು ಎಂಬ ಭಾವ ಹೊಂದಿದ ಕಾರಣ ಸ್ವಾಮಿಗಳು ಬಹುಬೇಗ ಭಕ್ತರ ಮನದಲ್ಲಿ ಬೇರೂರಿದರು.
ಗೌರವ ನುಡಿ
ಗೋಕಾಕ ಚಳವಳಿ, ನಂಜುಡಪ್ಪ ವರದಿ ಅನುಷ್ಠಾನ, ಪೋಸ್ಕೋ ವಿರೋಧಿ ಹೋರಾಟ, ಕಳಸಾ-ಬಂಡೂರಿ/ಮಹದಾಯಿ ಹೋರಾಟ, ಕಪ್ಪತಗುಡ್ಡ ರಕ್ಷಣೆ ಜೊತೆಗೆ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ತೋಂಟದ ಶ್ರೀಗಳು ನಡೆಸಿದ ಹೋರಾಟ ಈಗ ಇತಿಹಾಸದ ಪುಟ ಸೇರಿವೆ.ಹಾಗೆ ಹಳೆ ಗೊಡವೆಯಂತಿದ್ದ ಮಠವನ್ನು ಆಧುನಕಿರಣಗೊಳಿಸಿ, ವಿಶಾಲವಾದ ತೋಂಟದಾರ್ಯ ಕಲಾಭವನ ನಿರ್ಮಾಣಗೊಂಡು ವಿವಾಹ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವ ಭವನ ನಿರ್ಮಾಣ ಮಾಡಿದರು.
ಹೀಗೆ ಇನ್ನು ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಸಹ ಮಾಡಿರುತ್ತಾರೆ.ಹೀಗಾಗಿ
ಕನ್ನಡದ ಜಗದ್ಗುರುವಾಗಿ ಬೆಳಗಿದ ಡಂಬಳ-ಗದಗ ತೋಂಟದಾರ್ಯ ಮಠದ ಜ.ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿಗಳು ಈ ಕನ್ನಡ ನೆಲದ ಯುಗ ಪುರುಷ, ಕನ್ನಡ ತಾಯಿ ಜೋಗುಳ ಎದೆಯೊಳಗಿಳಿಸಿಕೊಂಡ ಕರುನಾಡಿನ ಸಂತನಾಗಿ, ದೇಶ ಕಂಡ ಅಪರೂಪದ ಪ್ರಗತಿಪರ ಸ್ವಾಮಿಗಳಾಗಿ ನಮ್ಮೆಗೆಲ್ಲರಿಗೂ ಪ್ರೇರಣೆದಾಯಕರಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್‌ಕಿಟ್‌ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.
ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.
ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಇಲಾಖಾ ತನಿಖೆ ನಡೆಸದೆ ಕಾಲ ವಿಳಂಬ ಮಾಡುತ್ತಿರುವ ಚಿತ್ರದುರ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ 06 ಅರ್ಜಿ ಸಲ್ಲಿಸಿ, ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗಗಳಿಗೆ ಬಿಡುಗಡೆಯಾದ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿದ್ದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ಸದರಿ ಪ್ರಕರಣವನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿದ್ದರು.
ನಿಯಮಾನುಸಾರ ಇಲಾಖೆ ತನಿಖೆ ನಡೆಸದೆ ಕಾಲ ವಿಳಂಬ ಮಾಡುವ ಉದ್ದೇಶದಿಂದ 6 ತಾಲ್ಲೂಕು ಉಪ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಆದೇಶ ಹೊರಡಿದ್ದು, ಇದರಂತೆ ವಕೀಲ ಡಾ.ಕೆ.ಎ.ಓಬಳಪ್ಪ ಇವರು ಎಲ್ಲಾ ಉಪವಿಭಾಗಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿದಾಗ ದಾಖಲೆಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ.
ಈ ಬಗ್ಗೆ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಿದರೂ ನಿರ್ಲಕ್ಷö್ಯ ತೋರಿದ ಕಾರಣ, ಕರ್ತವ್ಯ ಲೋಪದ ಅಡಿಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ1 day agoದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

