ಲೈಫ್ ಸ್ಟೈಲ್
ಕ್ಷಯರೋಗ; ಒಂದು ಸವಾಲು
ಕ್ಷಯರೋಗ (Tuberculosis) ಎನ್ನುವುದು ಜನಸಾಮಾನ್ಯರಲ್ಲಿ ಕೇಳಲ್ಪಡುವ ಒಂದು ಸಾಮಾನ್ಯ ಸಾಂಕ್ರಾಮಿಕ ಖಾಯಿಲೆ. ಒಬ್ಬರಿಂದೊಬ್ಬರಿಗೆ ಸುಲಭವಾಗಿಯೇ ಹರಡುವ ಈ ಖಾಯಿಲೆ, ಇಡೀ ಪ್ರಪಂಚದಲ್ಲಿ, ಅದರಲ್ಲೂಭಾರತದಲ್ಲಿ ಆರೋಗ್ಯ ಕ್ಷೇತ್ರದ ಅತೀ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ. ಕಾರಣ, ಬೇರೆ ಯಾವುದೇ ಸಾಂಕ್ರಾಮಿಕ ರೋಗಕ್ಕಿಂತ ಅತೀ ಹೆಚ್ಚು ಜನರನ್ನು ಮರಣಕ್ಕೀಡು ಮಾಡುವ ಖಾಯಿಲೆ ಇದಾಗಿದೆ.
2014 ನೇ ಸಾಲಿನ ಅಂಕಿಅಂಶಗಳಲ್ಲಿ ಹೇಳುವುದಾದರೆ ಭಾರತದಲ್ಲಿ 28.4ಲಕ್ಷ ಜನಪ್ರತಿವರ್ಷ ಕ್ಷಯರೋಗಕ್ಕೀಡಾಗುತ್ತಿದ್ದಾರೆ ಹಾಗೂ 5.1ಲಕ್ಷ ರೋಗಿಗಳು ಮರಣಕ್ಕೀಡಾಗುತ್ತಿದ್ದಾರೆ. ಇನ್ನೂ ಸೂಕ್ಷ್ಮವಾಗಿ ಹೇಳುವುದಾದರೆ ಭಾರತದಲ್ಲಿ ಪ್ರತಿದಿನ 6000ಕ್ಕೂ ಅಧಿಕ ಜನ ಕ್ಷಯರೋಗಕ್ಕೆ ತುತ್ತಾಗುತ್ತಿದ್ದಾರೆ ಮತ್ತು 600ಕ್ಕೂ ಹೆಚ್ಚು ರೋಗಿಗಳು ಸಾಯುತ್ತಿದ್ದಾರೆ ಅಂದರೆ ಪ್ರತೀ 5 ನಿಮಿಷಗಳಿಗೆ 2 ರೋಗಿಗಳು ಮರಣಕ್ಕೀಡಾಗುತ್ತಿದ್ದಾರೆ.
ಕ್ಷಯರೋಗವು ಮೈಕೊಬ್ಯಾಕ್ಟೀರಿಯಂ ಟ್ಯೂಬರ್ಕುಲೊಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಮುಖ್ಯವಾಗಿ ಶ್ವಾಸಕೋಶಗಳಿಗೆ ಹಾನಿಮಾಡುವ ಈ ಖಾಯಿಲೆ, ಮುಂದೆ ಇತರ ಅಂಗಾಂಗಗಳಿಗೂ ಹಾನಿ ಮಾಡಬಲ್ಲದು.
ಸೋಂಕು ಹರಡುವ ರೀತಿ: ಕೆಮ್ಮು, ಸೀನು ಅಥವಾ ಉಗುಳಿನಲ್ಲಿರುವ ಹನಿಗಳೊಳಗಿರುವ ರೋಗಾಣು ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತದೆ.
ಶ್ವಾಸಕೋಶ ಕ್ಷಯರೋಗದ ಗುಣಲಕ್ಷಣಗಳು
- 2 ವಾರಗಳಿಗೂ ಹೆಚ್ಚು ಕೆಮ್ಮು
- 2ವಾರಗಳಿಗೂ ಹೆಚ್ಚು ಜ್ವರ
- ತೂಕ ಕಡಿಮೆಯಾಗುವುದು
ಕಫದಲ್ಲಿ ರಕ್ತ ಎದೆಯ ಎಕ್ಸ್‍ರೇದಲ್ಲಿ ಯಾವುದೇ ಅಸ್ವಾಭಾವಿಕ ಲಕ್ಷಣ
ಕ್ಷಯದ ಪರಿಣಾಮಗಳು
- ಮೊದಮೊದಲು ಶ್ವಾಸಕೋಶಗಳಿಗಷ್ಟೇ ಸೀಮಿತವಾಗಿ ಶುರುವಾಗುವ ಕ್ಷಯ, ಮುಂದೆ ಮಿದುಳು, ಬೆನ್ನುಮೂಳೆ, ಸಣ್ಣಕರುಳು, ದೊಡ್ಡಕರುಳು, ಹೀಗೆ ವಿವಿಧ ಅಂಗಾಂಗಗಳಿಗೆ ಹರಡಬಲ್ಲದು.
- ಹೆಚ್.ಐ.ವಿ. ಸೋಕು ಇರುವ ವ್ಯಕ್ತಿಗಳಿಗೆ ಸುಲಭವಾಗಿ ಈ ಸೋಂಕು ಅಂಟಿಕೊಂಡು, ವ್ಯಕ್ತಿಯ ರೋಗನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ.
- ಜೊತೆಯಲ್ಲಿ ಅಪೌಷ್ಟಿಕತೆಯೂ ಇದ್ದಲ್ಲಿ, ರೋಗಾಣು ಬೇಗನೇ ಎಲ್ಲಾ ಅಂಗಾಂಗಗಳನ್ನು ಆವರಿಸಿಕೊಳ್ಳುತ್ತದೆ.
ಕಂಡು ಹಿಡಿಯುವ ವಿಧಾನ
- ಕಫ ಪರೀಕ್ಷೆ
- ಎಕ್ಸ್‍ರೇ
- ರಕ್ತ ಪರೀಕ್ಷೆ
ಚಿಕಿತ್ಸೆ: ಕ್ಷಯರೋಗದ ಚಿಕಿತ್ಸೆಯಲ್ಲಿ ಮುಖ್ಯವಾಗಿ 5 ರೀತಿಯ ಧಾತುಗಳನ್ನೊಳಗೊಂಡ ಮಾತ್ರೆಗಳನ್ನು ನೀಡಲಾಗುತ್ತದೆ
- ಐಸೊನಿಯಾಝಿಡ್
- ರಿಫಾಂಪಿಸಿನ್
- ಪೈರಝಿನಮೈಡ್
- ಎಥಾಂಬುಟಾಲ್
- ಸ್ಟ್ರೆಪ್ಟೊಮೈಸಿನ್
ಈ ಎಲ್ಲಾ ಮಾತ್ರೆಗಳನ್ನು ವಿವಿಧ ಕಾಂಬಿನೇಷನ್‍ಗಳಲ್ಲಿ ಪ್ರತಿದಿನದಂತೆ ಸೇವಿಸಬೇಕಾಗುತ್ತದೆ.
ಕ್ಷಯರೋಗಿಗಳನ್ನು ಚಿಕಿತ್ಸಾ ನಿಟ್ಟಿನಲ್ಲಿ ಮುಖ್ಯವಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.
- ಹೊಸದಾಗಿ ಕಂಡುಹಿಡಿಯಲ್ಪಟ್ಟ ರೋಗಿಗಳು: ಇವರು 2+4 ತಿಂಗಳು, ಒಟ್ಟು 6 ತಿಂಗಳ ಕಾಲ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ
- ಮೊದಲು ಚಿಕಿತ್ಸೆ ಪಡೆದಿದ್ದ ರೋಗಿಗಳು: ಇವರು 2+1+5 ತಿಂಗಳು, ಒಟ್ಟು 8 ತಿಂಗಳ ಕಾಲ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ
ಆದರೆ ಈ ಸುದೀರ್ಘ ಚಿಕಿತ್ಸಾ ಅವಧಿಗೆ ಕೆಲ ರೋಗಿಗಳು ಒಗ್ಗಿಕೊಳ್ಳದೆ ಮಧ್ಯದಲ್ಲೇ ಕೈಬಿಡುವ ಸಾಧ್ಯತೆಗಳಿರುತ್ತವೆ. ಪರಿಣಾಮ ಈ ಮೇಲೆ ತಿಳಿಸಿರುವ ಮಾತ್ರೆಗಳಿಗೆ ದೇಹದಲ್ಲಿ ಪ್ರತಿರೋಧ ಬೆಳೆದು ಈ ಮೇಲಿನ ಯಾವುದೇ ಮಾತ್ರೆಗಳಿಗೂ ರೋಗಿ ಸ್ಪಂದಿಸದೇ ಹೋಗುವ ಸಂದರ್ಭಗಳೂ ಇರುತ್ತವೆ. ಇದಕ್ಕೆ Multidrug resistant TB and XDR TB ಎಂದು ಕರೆಯಲಾಗುತ್ತದೆ. ಅಂಥ ಸಂದರ್ಭಗಳಲ್ಲಿ ಈ ಮಾತ್ರೆಗಳ ಜೊತೆಗೆ ಇನ್ನೂ ಹೆಚ್ಚಿನ ಇಂಜೆಕ್ಟೆಬಲ್ ಧಾತುಗಳನ್ನೂ ನೀಡಲಾಗುತ್ತದೆ. ಆದರೆ ಆ ಚಿಕಿತ್ಸಾ ಅವಧಿ 18 ರಿಂದ 24 ತಿಂಗಳ ವರೆಗೂ ವಿಸ್ತಾರವಾಗುವ ಸಾಧ್ಯತೆಗಳೂ ಇರುತ್ತವೆ.
- ಕ್ಷಯದ ಜೊತೆಗೆ ಸುಲಭವಾಗಿ ಕೆಲವೊಂದು ಖಾಯಿಲೆಗಳು ಬಹುಬೇಗ ಆವರಿಸಿಕೊಳ್ಳುತ್ತವೆ. ಅವೆಂದರೆ,
- ಹೆಚ್‍ಐವಿ ಸೋಂಕು: ಶೇ.80 ರಷ್ಟು ಸಂದರ್ಭಗಳಲ್ಲಿ ಹೆಚ್‍ಐವಿ – ಕ್ಷಯರೋಗ ಪರಸ್ಪರ ಹೊಂದಿಕೊಂಡು (Co-infection) ಒಂದನ್ನೊಂದು ಬಹುಬೇಗ ಆವರಿಸಿಕೊಳ್ಳುತ್ತವೆ.
- ಮಧುಮೇಹ
- ಅಪೌಷ್ಟಿಕತೆ
ಕ್ಷಯ ಬರದಂತೆ ತಡೆಗಟ್ಟಲು ಕ್ರಮಗಳು
- ಕ್ಷಯ ಹೊಂದಿರುವ ರೋಗಿಗಳೊಡನೆ ಸಂಪರ್ಕದಿಂದ ದೂರ ಇರುವುದು. ಒಂದು ವೇಳೆ ಆ ರೀತಿ ಉಂಟಾದರೆ ತಕ್ಷಣವೇ ವೈದ್ಯರ ಸಲಹೆ ಪಡೆದು, ಅವಶ್ಯಕತೆಯಿದ್ದರೆ ಚಿಕಿತ್ಸೆಯನ್ನೂ ಶುರು ಮಾಡುವುದು.
- ಕೈಗಳ ಮತ್ತು ದೇಹದ ಸ್ವಚ್ಛತೆ ಕಾಪಾಡಿಕೊಳ್ಳುವುದು
ಮಾಂಸಾಹಾರಿ ಸೇವಿಸುವವರು, ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿಕೊಂಡು ಸೇವಿಸಬೇಕು. - ಧೂಮಪಾನ, ಮದ್ಯಪಾನಗಳಿಗೆ ಕಡಿವಾಣ ಹಾಕಬೇಕು.
- ಆಗಾಗ್ಗೆ ಉಸಿರಾಟ ತೊಂದರೆ ಇರುವವರು ವೈದ್ಯರ ಬಳಿ ಸಮಾಲೋಚನೆ ಪಡೆದು ಬಹುಬೇಗ ಸೂಕ್ತ ಚಿಕಿತ್ಸೆ ಪಡೆಯಬೇಕು
- ಪ್ರಮುಖವಾಗಿ ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಮತ್ತು ನೀರು ಸೇವಿಸುವುದು
ಕ್ಷಯ ಹೊಂದಿರುವವರು ಅನುಸರಿಸಬೇಕಾದ ಅಂಶಗಳು - ಕ್ಷಯರೋಗಿ ಎಂದು ಗೊತ್ತಾದ ದಿನದಿಂದಲೇ ಅದನ್ನು ಅರಿತುಕೊಂಡು ವೈದ್ಯರ ಸಲಹೆ ಮೇರೆಗೆ ಚಾಚೂತಪ್ಪದೆ ಸಮಯಕ್ಕೆ ಸರಿಯಾಗಿ ಅವಧಿ ಮುಗಿಯುವವರೆಗೂ ಪ್ರತಿದಿನವೂ ಔಷಧಗಳನ್ನು ಸೇವಿಸಲು ಮಾನಸಿಕವಾಗಿ ಸಿದ್ಧರಾಗಬೇಕು
- ಕ್ಷಯ ಬರದಂತೆ ತಡೆಗಟ್ಟಲು ಮೇಲೆ ನೀಡಿರುವ ಕ್ರಮಗಳನ್ನು ಅನುಸರಿಸುವುದು
ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗು ಎರಡಕ್ಕೂ ಕರ್ಚೀಫ್‍ನಿಂದ ಮರೆಮಾಡಿಕೊಳ್ಳಬೇಕು. - ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯ ಜೊತೆ ಇರುವಾಗ ಅಥವಾ ವ್ಯವಹರಿಸುವಾಗ ಅವರಿಗೆ ರೋಗ ಹರಡದಂತೆ ಗಮನ ಹರಿಸುವುದು ಪ್ರತಿ ರೋಗಿಯ ಆದ್ಯ ಕರ್ತವ್ಯ.
- ಚಿಕಿತ್ಸೆ ಶುರು ಮಾಡಿದ ಸ್ವಲ್ಪ ದಿನಗಳಾದ ಮೇಲೆ ಕೆಲವೊಮ್ಮೆ ಆ ಮಾತ್ರೆಗಳಿಂದಲೂ ಅಡ್ಡಪರಿಣಾಮಗಳಾಗುವುದುಂಟು. ಅದಕ್ಕೆ ವೈದ್ಯರನ್ನು ದೂಷಿಸದೇ, ಸೂಕ್ತ ಸಮಾಲೋಚನೆ ಪಡೆಯುವುದು.
ಚಿಕಿತ್ಸಾ ಗುರಿ
ವಿಶ್ವ ಆರೋಗ್ಯ ಸಂಸ್ಥೆಯು 2020ರ ವೇಳೆಗೆ 2015ರಲ್ಲಿದ್ದ ಕ್ಷಯರೋಗಿಗಳ ಸಂಖ್ಯೆಯಲ್ಲಿ ಶೇ.35 ಹಾಗೂ ಕ್ಷಯದಿಂದ ಸಂಭವಿಸುವ ಪ್ರಮಾಣದಲ್ಲಿ ಶೇ.20ರಷ್ಟು ಕಡಿಮೆ ಮಾಡುವ ಹಾಗೂ 2035ರ ವೇಳೆಗೆ ಕ್ರಮವಾಗಿ ಶೇ.95 ಹಾಗೂ ಶೇ.90ರಷ್ಟು ಕಡಿಮೆ ಮಾಡುವ ಗುರಿ (End TB Strategy)ಹೊಂದಿದೆ. ಇವೆಲ್ಲವನ್ನು ಸಾಧಿಸಬೇಕಾದರೆ ಈ ಮೇಲೆ ತಿಳಿಸಿರುವ ಎಲ್ಲಾ ಅಂಶಗಳನ್ನು ಗಮನದಲ್ಲಿಡಬೇಕಿರುವುದು ಅತ್ಯವಶ್ಯಕ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಕಣ
Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?
‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.
ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:
ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.
ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?
ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.
‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?
ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.
ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.
ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ದಿನದ ಸುದ್ದಿ
ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಗೃಹ ಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.
ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243






