ರಾಜಕೀಯ
ವೈವಿಧ್ಯತೆಯ ದಾರ್ಶನಿಕ ಶ್ರೇಷ್ಠತೆ

ಪ್ರಾಥಮಿಕ ಪ್ರೌಢಶಾಲಾ ದಿನಗಳು ನೆನಪಾಗುತ್ತಿವೆ. ಸ್ವಾತಂತ್ರ್ಯೋತ್ಸವ, ಗಣ ರಾಜ್ಯೋತ್ಸವ, ರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ, ಪ್ರಾದೇಶಿಕ ಮಹತ್ವದ ದಿನಗಳಂದು ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಹೆಮ್ಮೆಯ ಸಂಗತಿಯಾಗಿತ್ತು. ಪ್ರಥಮ ಬಹುಮಾನ ಗೆಲ್ಲುವುದರ ಕಡೆಗೆ ಸ್ಪರ್ಧಿಗಳ ಉತ್ಸಾಹ ಕೇಂದ್ರೀಕೃತವಾಗಿರುತ್ತಿತ್ತು. ಹಿರಿಯರು ನಮಗಾಗಿ ಬರೆದುಕೊಡುತ್ತಿದ್ದ ಭಾಷಣದ ಪ್ರತಿಗಳನ್ನು ಓದಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆವು. ವಾಕ್ಪಟುತ್ವ, ಭಾಷಿಕ ಸಮಗ್ರತೆಯ ಗುಣಲಕ್ಷಣಗಳು ಅವುಗಳಲ್ಲಿ ಅಡಕವಾಗಿರುತ್ತಿದ್ದವು. ಪದಗಳ ವಿಶೇಷ ಅರ್ಥಗಳು ಗೊತ್ತಿರದಿದ್ದರೂ ಉರು ಹೊಡೆದು ಭಾಷಣವನ್ನು ಒಪ್ಪಿಸುವುದರ ಕಡೆಗೇ ನಮ್ಮ ಗಮನವಿರುತ್ತಿತ್ತು. ಬೆಳೆಯುತ್ತಿದ್ದ ಹಾಗೆ ಧ್ವನಿಯ ಏರಿಳಿತ ಮತ್ತು ಅರ್ಥವತ್ತಾದ ಪ್ರಸ್ತುತಪಡಿಸುವಿಕೆಯ ಮಹತ್ವವನ್ನು ತಿಳಿಸಿಕೊಟ್ಡ ನಂತರ ಆ ರೀತಿ ಯೋಚಿಸಲಾರಂಭಿಸಿದೆವು.
ಸ್ವಾತಂತ್ರ್ಯ ಹೋರಾಟ, ಭಾರತದ ವೈವಿಧ್ಯಮಯ ಸಂಸ್ಕೃತಿ, ಭಾವೈಕ್ಯತೆಯ ಶ್ರೇಷ್ಠತೆಯ ಮೌಲ್ಯಗಳು ನಮ್ಮನ್ನು ಹೆಚ್ಚಾಗಿ ಪ್ರಭಾವಿಸಿದ್ದವು. ಆಮೇಲಾಮೇಲೆ ಭಾಷಣವೆಂದರೆ ಭಾವನಾತ್ಮಕವಾಗಿ ಮಾತನಾಡಿ ಭಾಷಾ ಪ್ರೌಢಿಮೆ ಮೆರೆಯುವುದಲ್ಲ ಎಂಬುದು ಮನದಟ್ಟಾಗತೊಡಗಿತು. ಈಗಾಗಲೇ ಆಗಿಹೋದ ದಾರ್ಶನಿಕ ನಾಯಕರ ಬಗ್ಗೆ ಮಾತನಾಡುವಾಗಲೆಲ್ಲಾ ಅಭಿಮಾನಕ್ಕಿಂತ ಅವರ ಕೊಡುಗೆಗಳ ಸಾರ್ವಕಾಲಿಕ ಶಕ್ತಿಯನ್ನೇ ಗಣನೆಗೆ ತೆಗೆದುಕೊಂಡಾಗಲಷ್ಟೇ ಭಾಷಣಕ್ಕೆ ಸಮಗ್ರತೆ ದಕ್ಕುತ್ತಿತ್ತು. ಯಾರಾದರೂ ಭಾವುಕ ಆವೇಶ, ಭಾಷೆಯ ಅತಿರಂಜಕತೆಯನ್ನು ನೆಚ್ಚಿಕೊಂಡು ಮಾತನಾಡಿದರೆ ಅವರಿಗೆ ಅಂಕಗಳು ಸಿಗುತ್ತಿರಲಿಲ್ಲ. ಬಹುಮಾನವೂ ಲಭಿಸುತ್ತಿರಲಿಲ್ಲ. ಬದಲಾಗಿ ತೀರ್ಪುಗಾರರು ಅಂಥವರನ್ನು ಕರೆದು ಪೂರಕ ಮಾಹಿತಿ, ನಿದರ್ಶನಗಳಿಲ್ಲದೇ ಭಾಷಣ ಸೊರಗುತ್ತದೆ ಎಂದು ತಿಳಿಸುತ್ತಿದ್ದರು. ಭಾವುಕ ಭಾಷಿಕ ಅಬ್ಬರವು ಹುಸಿ ಅಭಿಮಾನವನ್ನು ಉಂಟುಮಾಡುತ್ತದೆಯೇ ಹೊರತು ಅದು ಚಿಂತನೆ ಬಿತ್ತುವುದಿಲ್ಲ ಎಂಬ ಕಿವಿಮಾತು ಹೇಳುತ್ತಿದ್ದರು. ನಂತರ ಭಾಷಣ ಸ್ಪರ್ಧೆ ಏರ್ಪಡುವ ಹೊತ್ತಿಗೆ ಅಂಥವರು ಬದಲಾಗುತ್ತಿದ್ದರು. ಈಗ ಇಂಥ ಮಾರ್ಗದರ್ಶನ ಲಭ್ಯವಾಗುತ್ತಿದ್ದರೂ ಬದಲಾದ ಕಾಲಘಟ್ಟದ ರಾಜಕಾರಣ ದೇಶದಾದ್ಯಂತ ರೂಪಿಸುತ್ತಿರುವ ಹುಸಿ ಅಭಿಮಾನದ ಅಲೆಯ ಹೊಡೆತದ ಪರಿಣಾಮಗಳು ಅಂಥ ಸಕಾರಾತ್ಮಕತೆಯ ಪ್ರಭಾವವನ್ನು ಮೊಟಕುಗೊಳಿಸುತ್ತಿವೆ. ನಾಯಕತ್ವದ ಧಾಟಿ, ಭಾಷಣ ವೈಖರಿ, ಭಾಷೆಯ ಬಳಕೆ, ಅತಿಭಾವುಕತೆಯ ಪ್ರದರ್ಶನ ತಂತ್ರಗಾರಿಕೆ, ಪಕ್ಷಪಾತಿ ಧೋರಣೆ, ಸ್ವಹಿತಾಸಕ್ತಿ ರಕ್ಷಿಸಿಕೊಳ್ಳುವ ರಹಸ್ಯ ಕಾರ್ಯಸೂಚಿಗಳೇ ನಾಯಕರೆನ್ನಿಸಿಕೊಳ್ಳುವವರ ಪ್ರಭಾವವನ್ನು ವಿಸ್ತರಿಸುತ್ತಿವೆ. ಅಂಥವರ ಮಾತುಗಳನ್ನು ಕೇಳಿ ಪ್ರಭಾವಕ್ಕೊಳಗಾಗುವವರು ಅವರ ಭಾಷಣ ಶೈಲಿಯನ್ನೇ ವಾಕ್ಪಟುತ್ವದ ಶ್ರೇಷ್ಠ ಉದಾಹರಣೆ ಎಂದುಕೊಳ್ಳುತ್ತಿದ್ದಾರೆ. ಆ ಭಾಷಿಕ ವೈಭವೀಕರಣವನ್ಮೇ ನೆಚ್ಚಿಕೊಂಡು ಮಾತುಗಳೆಂದರೆ ಹೀಗೆಯೇ ಇರಬೇಕು ಎಂದು ತಲೆದೂಗುತ್ತಿದ್ದಾರೆ. ಹೀಗೆ ಕೇಳುವವರಿದ್ದಾರೆ ಎಂದುಕೊಳ್ಳುವ ಅಂಥವರು ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನಗಳಲ್ಲಿ ಯಶಸ್ಸು ಕಾಣುತ್ತಲೇ ಇದ್ದಾರೆ. ಅಧಿಕಾರದಲ್ಲಿ ಉಳಿದುಕೊಳ್ಳುವ ತಮ್ಮ ಮನೋಭಿಲಾಷೆಯನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಅತ್ಯಂತ ಎಚ್ಚರದಲ್ಲಿ ಈಡೇರಿಸಿಕೊಳ್ಳುತ್ತಿದ್ದಾರೆ.
ಆಡಳಿತ ಯಂತ್ರವನ್ನು ಬಳಸಿಕೊಂಡು ಸಕಾರಾತ್ಮಕ ಇತಿಹಾಸಕ್ಕೆ ತದ್ವಿರುದ್ಧವಾದ ಸುಳ್ಳುಗಳನ್ನು ಹರಿಬಿಡುವ ಹುನ್ನಾರಗಳೊಂದಿಗೆ ನಾಯಕರೆನ್ನಿಸಿಕೊಂಡವರು ಗುರುತಿಸಿಕೊಂಡಿದ್ದಾರೆ. ಈಗಾಗಲೇ ಆಗಿಹೋದ ನಾಯಕರನ್ನು ನೆನಪಿಸಿಕೊಳ್ಳುವ ಕೃತಕ ನಿಷ್ಠೆಯ ಭಾವುಕತೆಯ ಆವರಣದಲ್ಲಿ ಈ ಸುಳ್ಳುಗಳನ್ನು ಚಾಣಾಕ್ಷಯುತವಾಗಿ ಪ್ರತಿಷ್ಠಾಪಿಸುತ್ತಿದ್ದಾರೆ. ಇದಕ್ಕಾಗಿ ಅವರು ಭಾಷೆಯ ನಮ್ಯಗುಣವನ್ನೇ ಉಪಯೋಗಿಸಿಕೊಂಡು ಅಪಭ್ರಂಶಗೊಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರಜಾಸತ್ತಾತ್ಮಕ ತಾರ್ಕಿಕ ಪ್ರತಿರೋಧದ ವಿರುದ್ಧ ಆಕ್ರಾಮಕವಾದ ಭಾಷೆಯ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ನಾವೆಲ್ಲಾ ಭಾರತವನ್ನು ವಿವಿಧತೆಯಲ್ಲಿ ಏಕತೆ ಸಾಧಿಸಿಕೊಂಡ ದೇಶ ಎಂದು ಗ್ರಹಿಸಿದ್ದೆವು. ಹಿರಿಯರು ಇಂಥದ್ದೊಂದು ವೈವಿಧ್ಯಮಯ ಅಸ್ಮಿತೆಯನ್ನು ಪರಿಚಯಿಸಿ ನಮ್ಮ ತಿಳುವಳಿಕೆಗೆ ಭಿನ್ನ ಸಂಸ್ಕಾರವನ್ಮು ಒದಗಿಸಿದ್ದರು. ಆಗಿನ ಗ್ರಹಿಕೆಯು ದೇಶಾಭಿಮಾನದ ಹುಸಿ ವೇಷವನ್ನು ತೊಟ್ಟಿರಲಿಲ್ಲ. ಸೋಗಲಾಡಿತನದ ಹೆಮ್ಮೆಯ ಭಾವಾವೇಷವನ್ನು ಹೊದ್ದುಕೊಂಡಿರಲಿಲ್ಲ. ಬದಲಾಗಿ ಆ ಗ್ರಹಿಕೆಯು ಅಪ್ಪಟ ವಾಸ್ತವವಾದಿ ನೆಲೆಗಟ್ಟಿನಲ್ಲಿ ನಮ್ಮೊಳಗೆ ಅಂತರ್ಗತವಾಗಿತ್ತು. ಈಗ ಅಂಥ ಗ್ರಹಿಕೆಯ ಮೌಲಿಕ ವ್ಯಕ್ತಿಗತ ಸ್ವಯಂಸಂವಿಧಾನವನ್ನು ಧ್ವಂಸಗೊಳಿಸುವ ಭಾಷಿಕ ಅತಿರೇಕದ ಪ್ರಯತ್ನಗಳೇ ಶ್ರೇಷ್ಡ ಎಂದೆನ್ನಿಸುವ ಹಾಗೆ ಬಿಂಬಿತವಾಗುತ್ತಿವೆ. ಭಾಷಣ ಮತ್ತು ಬರಹದ ವಿವಿಧ ರೂಪಗಳು ಈ ಅಂಶವನ್ನು ಸಾಬೀತುಪಡಿಸುತ್ತಿವೆ. ವಿವಿಧತೆಯ ಒಟ್ಟಂದವನ್ಮು ಕಲುಷಿತಗೊಳಿಸುವುದರೊಂದಿಗೆ ಅಂಥ ಪ್ರಯತ್ನದ ಹಾದಿಯಲ್ಲಿ ಯುವಸಮೂಹ ಸಾಗುವಂತೆ ಭಾಷಿಕ ಹುನ್ನಾರದ ನೆರವಿನೊಂದಿಗೇ ಪ್ರಚೋದಿಸಲಾಗುತ್ತಿದೆ.
ವಿವಿಧತೆಯ ಜಾಗದಲ್ಲಿ ಏಕಭಾರತದ ಪರಿಕಲ್ಪನೆಯ ನಿಧಾನ ವಿಷವನ್ನು ಉಣಬಡಿಸಲಾಗುತ್ತಿದೆ. ಅತ್ಯಾಕರ್ಷಕ ಪುಟವಿನ್ಯಾಸ, ವರ್ಣರಂಜಿತ ಅಕ್ಷರಗಳು, ಜನಪ್ರಿಯ ಸೆಲೆಬ್ರಿಟಿಗಳ ವಯ್ಯಾರದ ನುಡಿಗಳು, ಇಂಥವುಗಳೊಂದಿಗಿನ ಜಾಹಿರಾತು, ಸುದ್ದಿ ಬಿಂಬಗಳು ಆ ವಿಷವನ್ನು ರವಾನಿಸುತ್ತಿವೆ. ಜನರು ಇರಿಸಿಕೊಂಡ ವಿಶ್ವಾಸವನ್ನು ಭಗ್ನಗೊಳಿಸುತ್ತಿವೆ. ವಿವಿಧತೆಯನ್ನು ಉಳಿಸಿಕೊಂಡು ಏಕತೆಯನ್ನು ಸಾಧಿಸುವುದೇ ಆಡಳಿತದ ಪರಮ ಗುರಿಯಾಗಬೇಕು. ವಿವಿಧತೆಗಳ ಸೌಂದರ್ಯದ ಪ್ರಾಬಲ್ಯವಿಲ್ಲದ ಏಕತೆ ಅರ್ಥವಂತಿಕೆ ಕಳೆದುಕೊಳ್ಳುತ್ತದೆ. ವೈವಿಧ್ಯತೆ ಇದ್ದಾಗಲೇ ಭಾರತ ಸರ್ವಜನಾಂಗದ ಶಾಂತಿಯ ತೋಟವಾಗುತ್ತದೆ. ಏಕಭಾರತ ಕಟ್ಟುವ ಗುಂಗಿನಲ್ಲಿ ಈ ತೋಟಕ್ಕೆ ನುಗ್ಗಿ ಸಾಂಸ್ಕೃತಿಕ ವೈವಿಧ್ಯ ಫಸಲನ್ನು ಧ್ವಂಸಗೊಳಿಸದರೆ ದೇಶ ಸಶಕ್ತವಾಗುವುದಿಲ್ಲ.ಈ ನೆಲದ ಮಣ್ಣು ವೈವಿಧ್ಯಮಯ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಶಾಲೆ- ಕಾಲೇಜುಗಳಲ್ಲಿ ಅನುರಣನಗೊಳ್ಳುವ ನಾಡಗೀತೆಯನ್ನು ಮತ್ತೆ ಓದಿಕೊಳ್ಳಬೇಕಿದೆ. ಹಾಡಿನ ರಾಗಮಾಧುರ್ಯದಂತೆಯೇ ನಾಡಗೀತೆಯ ಪ್ರತಿಯೊಂದು ಸಾಲು ರಚಿತವಾಗಿದೆ. ‘ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಸಾಲುಗಳ ವೈಚಾರಿಕ ಸೌಂದರ್ಯವನ್ನು ಅರ್ಥೈಸಿಕೊಳ್ಳಬೇಕಿದೆ. ಈ ದೇಶದ ವೈವಿಧ್ಯದ ಸೌಂದರ್ಯವನ್ನು ವಿಶಿಷ್ಠವಾಗಿ ಹಿಡಿದಿಟ್ಡ ಕುವೆಂಪು ಅವರ ವೈಚಾರಿಕ ಪ್ರಜ್ಞೆಯನ್ನು ಆಪ್ತವಾಗಿಸಿಕೊಳ್ಳಬೇಕಿದೆ.
–ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಶ್ವೇತಪತ್ರ ಹೊರಡಿಸಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ

ಸುದ್ದಿದಿನ, ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಯೋಜನೆಯ ಫಲ ಎಷ್ಟು ಜನರಿಗೆ ಲಭ್ಯವಾಗಿದೆ, ಆರ್ಥಿಕವಾಗಿ ಎಷ್ಟು ಹೊರೆಬಿದ್ದಿದೆ, ಇದುವರೆಗೆ ಫಲಾನುಭವಿಗಳ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲವಾಗಿದೆ, ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಈ ಬಗ್ಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಂಚಾಯತ್ ರಾಜ್ ಇಲಾಖೆ ಜತೆ ಕೆಲಸ ಮಾಡಲು ಬಂಧುತ್ವ ಫೌಂಡೇಷನ್ ಸಿದ್ಧ : ಅಧ್ಯಕ್ಷ ರಾಘು ದೊಡ್ಡಮನಿ

ಸುದ್ದಿದಿನ, ದಾವಣಗೆರೆ : ಮಕ್ಕಳ ವಿಷೇಶ ಗ್ರಾಮ ಸಭೆಯ ಮೂಲಕ ಜಿಲ್ಲೆಯ ಮಕ್ಕಳ ಶಿಕ್ಷಣ, ರಕ್ಷಣೆ ಹಾಗೂ ಅವರ ಹಕ್ಕು ಬಾಧ್ಯತೆಗಳಿಗಾಗಿ ಪಂಚಾಯತ್ ರಾಜ್ ಇಲಾಖೆಯ ಜತೆ ಕೆಲಸ ಮಾಡಲು ನಮ್ಮ ಬಂಧುತ್ವ ಫೌಂಡೇಷನ್ ಸಿದ್ಧವಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ರಾಘು ದೊಡ್ಡಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ರೂಪಿಸಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇದೇ ತಿಂಗಳ 14 ರಿಂದ ಜನವರಿ 24 ರವರೆಗೆ 10 ವಾರಗಳ ಮಕ್ಕಳ ಸ್ನೇಹಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಲಾಗಿದೆ.
ಈ ಅಭಿಯಾನವು ಗ್ರಾಮ ಪಂಚಾಯಿತಿಗಳನ್ನು ಮಕ್ಕಳ ಸ್ನೇಹಿಯಾಗಿಸಲು ಪಂಚಾಯತ್ ರಾಜ್ ಇಲಾಖೆ ಈ ಮೂಲಕ ದಾಪುಗಾಲಿಟ್ಟಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳು ತಮ್ಮ ಸದಸ್ಯರು ಹಾಗೂ ಸ್ಥಳೀಯ ಶಾಲೆಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಈ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ವಿಷೇಶ ಗ್ರಾಮ ಸಭೆ ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಮಕ್ಕಳ ವಿಷೇಶ ಗ್ರಾಮ ಸಭೆಯು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿಗಳು, ಶಾಲೆ, ಶಾಲಾ ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆ ಅಲ್ಲವೇ ಎಂದು ಯಾರು ಸಹ ನಿರ್ಲಕ್ಷ್ಯ ತೋರುವಂತಿಲ್ಲ. ಸಾಮಾನ್ಯ ಗ್ರಾಮ ಸಭೆಗಳಿಗಿರುವಷ್ಟು ಪ್ರಾಮುಖ್ಯತೆ ಈ ಮಕ್ಕಳ ಸಭೆಗೂ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳೊಂದಿಗೆ ಜಾಹಿರಾತು ದರ ನಿಗದಿ ಸಭೆ

ಸುದ್ದಿದಿನ,ದಾವಣಗೆರೆ : 2024 ರಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ ಗಳಲ್ಲಿ ಪ್ರಚಾರ ಮಾಡಲು ನಿಗದಿ ಮಾಡಿರುವ ಜಾಹಿರಾತು ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನವೆಂಬರ್ 10 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ರಾಜ್ಯ ಮಟ್ಟದ ಪತ್ರಿಕೆಗಳು, ಸ್ಥಳೀಯ, ಪ್ರಾದೇಶಿಕ, ವಾರಪತ್ರಿಕೆ, ಕೇಬಲ್ ಟಿ.ವಿ.ಗಳಲ್ಲಿ ನೀಡುವ ಚುನಾವಣಾ ಜಾಹಿರಾತುಗಳಿಗೆ ಅನ್ವಯಿಸುವ ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಎಂಸಿಎಂಸಿ ಸಮಿತಿಯು ಕಾರ್ಯನಿರ್ವಹಿಸಲಿದ್ದು ಇದರ ಎಲ್ಲಾ ಮೇಲ್ವಿಚಾರಣೆ ನಡೆಸಲಿದೆ. ಅಭ್ಯರ್ಥಿಗಳು ನೀಡುವ ಜಾಹಿರಾತು ವೆಚ್ಚವು ಸಹ ಅಭ್ಯರ್ಥಿಗಳಿಗೆ ವೆಚ್ಚಕ್ಕೆ ನಿಗದಿಪಡಿಸಿರುವ ಮೊತ್ತದಲ್ಲಿ ಸೇರಲಿದೆ ಎಂದು ಪಕ್ಷಗಳ ಮುಖಂಡರಿಗೆ ಮನವರಿಕೆ ಮಾಡಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಸಿ.ರಾಘವೇಂದ್ರ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ಚುನಾವಣಾ ತಹಶೀಲ್ದಾರ್ ಅರುಣ್ ಎಸ್.ಕಾರ್ಗಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ5 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ21 hours ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ3 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು
-
ದಿನದ ಸುದ್ದಿ8 hours ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ