ಬಹಿರಂಗ
ಶಿಕ್ಷಕಿಯೊಬ್ಬರು ಹತ್ಯೆಗೀಡಾದಾಗ..!
- ಮೂಲ : ಅವಿಜಿತ್ ಪಾಠಕ್, ಅನುವಾದ : ನಾ ದಿವಾಕರ
ಶಿಕ್ಷಣದ ಚಿಕಿತ್ಸಕ ಗುಣವನ್ನು ಗೌರವಿಸುವವರನ್ನು ರಜನಿ ಬಾಲಾ ಅವರ ಹತ್ಯೆ ವಿಚಲಿತಗೊಳಿಸಲೇಬೇಕು.
ಹಿಂಸೆಯ ಯುಗದಲ್ಲಿ ಸಾವು ಎನ್ನುವುದು ಕೇವಲ ಅಂಕಿಅಂಶಗಳಿಗೆ ಸೇರ್ಪಡೆಯಾಗುವ ಒಂದು ದತ್ತಾಂಶವಾಗಿರುವ ಸಂದರ್ಭದಲ್ಲಿ ರಜನಿ ಬಾಲಾ ಎಂಬ ಶಿಕ್ಷಕಿಯ ಸಾವು ಸಹ ನೆನೆಗುದಿಗೆ ಬೀಳುವುದು ಸಹಜ. ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ 36 ವರ್ಷದ ಶಿಕ್ಷಕಿ ರಜನಿ ಬಾಲಾ ಅವರ ದಾರುಣ ಅಂತ್ಯವೂ ಸಾರ್ವಜನಿಕ ಬದುಕಿನ ವಿಸ್ಮೃತಿಗೆ ಜಾರಿಬಿಡುತ್ತದೆ.
ಏಕೆಂದರೆ ನಮ್ಮ ಮನೋಭಾವ ಮತ್ತು ಆಧ್ಯಾತ್ಮಿಕ ದಾರಿದ್ರ್ಯದ ಪರಿಣಾಮ ನಮ್ಮಲ್ಲಿ ಅನೇಕರು ಮತ್ತೊಂದು ರೀತಿಯ ಹಿಂಸೆಯನ್ನು ಆಹ್ವಾನಿಸುತ್ತಿರುತ್ತೇವೆ. ಭಯೋತ್ಪಾದನೆಯನ್ನು ಎದುರಿಸಲು ಸೇನಾ ಕಾರ್ಯಾಚರಣೆಯನ್ನು ಅಪೇಕ್ಷಿಸುತ್ತಿರುತ್ತೇವೆ. ಆದಾಗ್ಯೂ ಹಿಂಸೆಯು ಶಾಲಾ ಆವರಣವನ್ನು ಪ್ರವೇಶಿಸುವುದನ್ನು ಹೇಗೆ ಅರ್ಥೈಸಲು ಸಾಧ್ಯ ? ತಮ್ಮ ಅಸ್ಮಿತೆಗಳ ಲೋಕದ ಪರಿವೆಯೇ ಇಲ್ಲದ ಶಾಲಾ ಮಕ್ಕಳ ಎದುರಿನಲ್ಲೇ ಅವರ ಆತ್ಮೀಯ ಶಿಕ್ಷಕಿಯೊಬ್ಬರು ಭಯೋತ್ಪಾದಕರಿಂದ ಹತ್ಯೆಗೀಡಾಗುವುದನ್ನು ಹೇಗೆ ಅರ್ಥಮಾಡಿಕೊಳ್ಳುವುದು ?
ಬಹುಶಃ ನಾವು ಶಿಕ್ಷಣದ ಚಿಕಿತ್ಸಕ ಶಕ್ತಿಯ ಮೌಲ್ಯಗಳನ್ನು ಮರೆತೇಬಿಟ್ಟಿದ್ದೇವೆ ಎನಿಸುತ್ತದೆ. ಅಥವಾ ಒಬ್ಬ ಹಿಂದೂ ಬೋಧಕ ಮತ್ತು ಮುಸ್ಲಿಂ ವಿದ್ಯಾರ್ಥಿಗಳ ನಡುವಿನ ಸಂವಹನ ಪ್ರಕ್ರಿಯೆಯಾಗಿ ಶಿಕ್ಷಣದ ಈ ಸಾಧ್ಯತೆಯನ್ನೂ ಮರೆತಿದ್ದೇವೆ ಎನಿಸುತ್ತದೆ. ಭಯೋತ್ಪಾದಕರು ರಜನಿ ಬಾಲಾ ಅವರನ್ನು ಹತ್ಯೆ ಮಾಡಿರುವುದರೊಂದಿಗೇ ಶಿಕ್ಷಣದ ಈ ವಿಮೋಚನೆಯ ಶಕ್ತಿ ಮತ್ತು ಸಾಧ್ಯತೆಗಳನ್ನೂ ಕೊಂದುಹಾಕಿದ್ದಾರೆ.
ಏಕೆಂದರೆ ಮೂಲತಃ ಭಯೋತ್ಪಾದನೆ ಎನ್ನುವುದು ಅಧ್ಯಾತ್ಮದಿಂದ ವಿಮುಖವಾದ, ಅಸ್ತಿತ್ವವನ್ನೇ ನಿರಾಕರಿಸುವಂತಹ ಒಂದು ಕೃತ್ಯ. ಇದು ಭೀತಿಯನ್ನು ಸೃಷ್ಟಿಸುವಂತೆಯೇ ಸಂವಹನದ ಕ್ರಿಯೆಯನ್ನೂ ನಿರಾಕರಿಸುತ್ತದೆ. ಇತರ ಯಾವುದೇ ತೀವ್ರಗಾಮಿ ತತ್ವದಂತೆಯೇ ಭಯೋತ್ಪಾದನೆಯೂ ಸಹ ತನ್ನ ಶತ್ರುಗಳನ್ನು ಗುರುತಿಸುವ ಹಿಂಸಾತ್ಮಕ ರೂಢಮಾದರಿಯೊಂದನ್ನು ಸೃಷ್ಟಿಸಿಕೊಳ್ಳುತ್ತದೆ.
ಆದರೆ, ಸ್ವತಃ ಒಬ್ಬ ಉಪನ್ಯಾಸಕನಾಗಿ ನನಗೆ ರಜನಿ ಬಾಲಾ ಅವರನ್ನು ಮರೆಯಲಾಗುವುದಿಲ್ಲ. ಅಥವಾ “ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆಯಲ್ಲಿ ಪುಲ್ವಾಮಾದಲ್ಲಿ ಇಬ್ಬರು ಜೈಷ್ ಎ ಮುಹಮ್ಮದ್ ಉಗ್ರರನ್ನು ಹತ್ಯೆ ಮಾಡಲಾಯಿತು ” ಎಂಬ ಪ್ರತಿ ನಿರೂಪಣೆಯಿಂದ ನಾನು ಯಾವುದೇ ರೀತಿಯ ಪರಾರ್ಥವಾದ ಸಂತೋಷವನ್ನು ಅನುಭವಿಸುವುದಿಲ್ಲ. ವಾಸ್ತವ ಎಂದರೆ ಈ ಹಿಂಸೆ ಮತ್ತು ಪ್ರತಿ ಹಿಂಸೆಯ ವಿಷ ವರ್ತುಲವು ನಮ್ಮ ಪ್ರಜ್ಞೆ ಮತ್ತಷ್ಟು ಕ್ರೂರವಾಗುವಂತೆ ಮಾಡುತ್ತದೆ.
ಓರ್ವ ಉಪನ್ಯಾಸಕನಾಗಿ ನನಗೆ, ಒಂದು ಅರ್ಥಪೂರ್ಣ ಸಂವಾದದ ಭೂಮಿಕೆಯಾಗಿ ಶಿಕ್ಷಣ ಎನ್ನುವುದು ಮಾನವ ಸಮಾಜ ಕೂಡಿ ಬಾಳುವ ಸಮನ್ವಯತೆಯನ್ನು ಸಾಕಾರಗೊಳಿಸುವ ಪರಮೋಚ್ಚ ಕೊಡುಗೆ ಹಾಗೂ ಶಾಲಾ ಕೊಠಡಿ ಎಂದರೆ ಕೇವಲ ರಣಭೂಮಿಯಲ್ಲದೆ ನಮ್ಮನ್ನು ಹೊಸ ದಿಗಂತಗಳನ್ನು ಬೆಸೆಯಲು ಕೊಂಡೊಯ್ಯುವ ಸಾಧನ ಎಂದೇ ಭಾಸವಾಗುತ್ತದೆ. ನಂಜು ತುಂಬಿದ ಉಗ್ರವಾದಿಗಳಿಗೆ ಅಥವಾ ಕರ್ತವ್ಯನಿರತ ಸೇನೆಗೆ ಇದು ಅರ್ಥವಾಗುವುದಿಲ್ಲ.
ಉದಾಹರಣೆಗೆ ನನ್ನ ತರಗತಿಯಲ್ಲಿ ನಾನು ಪ್ರತಿಭಾವಂತ ಕಾಶ್ಮೀರಿ ಮುಸ್ಲಿಂ ವಿದ್ಯಾರ್ಥಿಗಳನ್ನು ಕಂಡಿದ್ದೇನೆ. ನಾವು ಒಟ್ಟಿಗೇ ಓಡಾಡಿದ್ದೇವೆ, ಕಲಿತಿದ್ದೇವೆ, ತಪ್ಪು ಒಪ್ಪುಗಳನ್ನು ಅರಿತಿದ್ದೇವೆ. ಭಯೋತ್ಪಾದಕರಾಗಲೀ, ಸೇನಾ ಪ್ರವೃತ್ತಿಯ ಪ್ರಭುತ್ವವಾಗಲೀ ಈ ಸಾಧ್ಯತೆಯನ್ನು ಮನಗಾಣಲು ಸಾಧ್ಯವಾಗುವುದಿಲ್ಲ. ಆದುದರಿಂದಲೇ ನನಗೆ, ರಜನಿ ಬಾಲಾ ಅವರ ಹತ್ಯೆಯು, ಶಿಕ್ಷಣದ ಚಿಕಿತ್ಸಕ ಗುಣದ ಬಗ್ಗೆ ವಿಶ್ವಾಸ ಇರುವ ಎಲ್ಲರನ್ನೂ ವಿಚಲಿತಗೊಳಿಸಬೇಕು ಎನಿಸುತ್ತದೆ.
ಮೇ 31ರ ಆ ಆಘಾತಕಾರಿ ಮುಂಜಾನೆಯನ್ನು ಊಹಿಸಿಕೊಳ್ಳಿ. ರಜನಿ ಬಾಲಾ ಆಗತಾನೇ ಶಾಲೆಯನ್ನು ಪ್ರವೇಶಿಸುವುದರಲ್ಲಿದ್ದರು. ಮಕ್ಕಳು ಪ್ರಾರ್ಥನೆಗೆ ನಿಲ್ಲಲು ಸಿದ್ಧವಾಗುತ್ತಿದ್ದರು. ಆ ಸಂದರ್ಭದಲ್ಲೇ ತಮ್ಮ ಶಿಕ್ಷಕಿಯು ಗುಂಡೇಟಿಗೆ ಬಲಿಯಾಗಿ ಸಾಯುವುದನ್ನು ಮಕ್ಕಳು ಕಣ್ಣಾರೆ ನೋಡುತ್ತಾರೆ. ಬಹುಶಃ ಈ ಚರಿತ್ರೆಯ ಬೋಧಕಿ ತರಗತಿಯಲ್ಲಿ ತಮ್ಮ ಜ್ಞಾನವನ್ನು ಹೆಚ್ಚಿಸುತ್ತಾರೆ ಎಂದು ಆ ಮಕ್ಕಳು ಭಾವಿಸಿರಬಹುದು.
ರಜನಿ ಬಾಲಾ ಅವರೂ ಸಹ ಎಲ್ಲ ಶಿಕ್ಷಕಿಯರೂ ಬಯಸುವಂತೆ, ಮಕ್ಕಳಿಗೆ ಪಾಠ ಬೋಧಿಸುವುದರ ಮೂಲಕ, ಖಲೀಲ್ ಗಿಬ್ರಾನ್ ಹೇಳಿರುವಂತೆ “ ನಿಮ್ಮ ಮಕ್ಕಳು ವಾಸ್ತವದಲ್ಲಿ ನಿಮ್ಮ ಮಕ್ಕಳಲ್ಲ ” ಎಂಬ ವಾಸ್ತವವನ್ನು ಮನನ ಮಾಡಿಕೊಳ್ಳುವ ಮಧುರ ಕ್ಷಣಗಳಿಗಾಗಿ ಕಾತುರದಿಂದಿದ್ದಿರಬಹುದು. ಜೀವ ವಿಕಾಸ ಪ್ರಕ್ರಿಯೆಯಲ್ಲಿನ ಶಿಶುಗಳಾಗಿ ಈ ಮಕ್ಕಳು ಕಾಣುತ್ತಾರೆ.
ಆದರೆ ಭಯೋತ್ಪಾದನೆ ಎನ್ನುವುದು ಯಾವುದೇ ಮತಧರ್ಮದ ಸಮವಸ್ತ್ರವನ್ನು ಧರಿಸಿದ್ದರೂ ಅದರಲ್ಲಿ ಧಾರ್ಮಿಕತೆ ಇರುವುದಿಲ್ಲ. ಅದು ಜೀವ ವಿರೋಧಿ. ಅದು ಸಾಮೂಹಿಕ ಆತ್ಮಹತ್ಯೆಯತ್ತ ಚಲಿಸುತ್ತದೆ. ತಮ್ಮ ಮುಂಜಾವಿನ ಪ್ರಾರ್ಥನೆಯನ್ನು ಸಲ್ಲಿಸಲು ಸಜ್ಜಾಗುತ್ತಿದ್ದ ಆ ಸುಂದರ ಮಕ್ಕಳಲ್ಲಿ, ಯಾವುದೇ ಶಿಕ್ಷಕರು ಬಯಸುವಂತೆ, ಕ್ರಿಯಾಶೀಲತೆಯ ಸಾಧ್ಯತೆಗಳು ಇರಲು ಸಾಧ್ಯ. ಅವರಲ್ಲೇ ಹಲವರು ಜಲಾಲುದ್ದಿನ್ ರೂಮಿ ಅವರಂತಹ ಆಧ್ಯಾತ್ಮಿಕ ವ್ಯಕ್ತಿಗಳು ಹೊರಹೊಮ್ಮಲು ಸಾಧ್ಯ. ಅಥವಾ ಶಾಂತಿದೂತ ಮಾರ್ಟಿನ್ ಲೂಥರ್ ಕಿಂಗ್ (ಜೂನಿಯರ್) ಹೊರಹೊಮ್ಮಲು ಸಾಧ್ಯ. ಅಥವಾ ಜಾನ್ ಲೆನ್ನನ್ ಅವರಂತಹ ಅದ್ಭುತ ಗಾಯಕ ಹುಟ್ಟಲು ಸಾಧ್ಯ. ಈ ಸಾಧ್ಯತೆಗಳೇ ಭಯೋತ್ಪಾದಕರಲ್ಲಿ ಭೀತಿ ಉಂಟುಮಾಡುತ್ತದೆ.
ರಜನಿ ಬಾಲಾ ಅವರನ್ನು ಹತ್ಯೆ ಮಾಡುವ ಮೂಲಕ ಭಯೋತ್ಪಾದಕರು ಈ ಮಕ್ಕಳಿಗೆ, ಎಲ್ಲ ಉದಾತ್ತ ಕನಸುಗಳನ್ನು ನಿಕೃಷ್ಟವಾಗಿ ನೋಡುವಂತೆ, ಸಂವಾದ ಮತ್ತು ಸಂವಹನದ ಸ್ಫೂರ್ತಿಯನ್ನು ನಿರಾಕರಿಸುವಂತೆ ಬೋಧಿಸುತ್ತಾರೆ. ನಿಮ್ಮ ಶಿಕ್ಷಕರೇ ನಿಮ್ಮ ಶತ್ರುಗಳು, ನೀವು ಹಿಂಸೆಯನ್ನೇ ಸಹಜ ಎಂದು ಒಪ್ಪಿಕೊಳ್ಳಿ, ಒಂದು ಮುಕ್ತ ಪ್ರಪಂಚವನ್ನು ಸಾಧಿಸಲು ಹಿಂಸೆ ಅನಿವಾರ್ಯ ಮತ್ತು ಅಪೇಕ್ಷಿತ ಎನ್ನುವುದನ್ನು ಒಪ್ಪಿಕೊಳ್ಳಿ ಎಂದು ಬೋಧಿಸಲೆತ್ನಿಸುತ್ತಾರೆ.
ಈ ಮಕ್ಕಳಿಗೆ ಸಮರ್ಪಕವಾಗಿ ಹಿತವಚನ ನೀಡದೆ ಹೋದರೆ, ಉದಾತ್ತ ಮನಸಿನ ಶಿಕ್ಷಕರು ಇವರನ್ನು ಪ್ರೀತಿಸಿ ಪೋಷಿಸದೆ ಹೋದರೆ, ಅವರಲ್ಲಿ ಅನೇಕರು ಭಾವನೆಗಳ ಮತ್ತು ಭಾವೋದ್ರೇಕದ ಬಂಧಿಗಳಾಗಿ ಮಾನಸಿಕವಾಗಿ ಘಾಸಿಗೊಂಡರವಾಗಿಬಿಡುತ್ತಾರೆ. ಉಗ್ರಗಾಮಿಗಳ ಹಿಂಸೆ, ಎನ್ಕೌಂಟರ್ ಹತ್ಯೆಗಳು ಮತ್ತು ನಿರ್ದಿಷ್ಟ ಗುರಿ ಇಟ್ಟ ಕೊಲೆಗಳು ಸಾಂಸ್ಕೃತಿಕ ವಾತಾವರಣವನ್ನು ಕಲುಷಿತಗೊಳಿಸಲಾಗ, ಭಯ ಭೀತಿ ಎಲ್ಲೆಡೆ ವ್ಯಾಪಿಸುತ್ತದೆ, ಅನುಮಾನಗಳ ಹುತ್ತ ಸೃಷ್ಟಿಯಾಗುತ್ತದೆ, ಸಂವಹನ ಪ್ರಕ್ರಿಯೆ ಇಲ್ಲವಾಗುತ್ತದೆ. ಇಂತಹ ವಿಷಮ ಸನ್ನಿವೇಶದಲ್ಲಿ ಶಿಕ್ಷಣವನ್ನು ವಿಮೋಚನೆಗೊಳಿಸುವ ಒಂದು ಪದ್ಧತಿಯನ್ನು ಊಹಿಸಿಕೊಳ್ಳಲು ಸಾಧ್ಯವೇ ?
ರಜನಿಬಾಲಾ ಒಬ್ಬ ಸೆಲೆಬ್ರಿಟಿ ಆಗಿರಲಿಲ್ಲ. ಕಾಶ್ಮೀರದ ಬಹುತೇಕ ಎಲ್ಲ ರಾಜಕೀಯ ನಾಯಕರೂ, ಮೆಹಬೂಬಾ ಮುಫ್ತಿ ಇಂದ ಓಮರ್ ಅಬ್ದುಲ್ಲಾವರೆಗೆ, ಭಯೋತ್ಪಾದಕ ಕೃತ್ಯವನ್ನು ಖಂಡಿಸಿದ್ದರೂ, ಬಹುಬೇಗನೆ ಆಕೆಯನ್ನು ಮರೆತುಬಿಡುತ್ತೇವೆ. ಹೆಚ್ಚೆಂದರೆ ಭಾರತ ಸರ್ಕಾರದ ವತಿಯಿಂದ ಒಂದು ಪತ್ರಿಕಾಗೋಷ್ಟಿ ನಡೆಯಬಹುದು, ಹೊಸ ಅಂಕಿಅಂಶಗಳನ್ನು ಒದಗಿಸಬಹುದು, ಬಂಧಿಸಲ್ಪಟ್ಟ ಭಯೋತ್ಪಾದಕರು, ಕೊಲ್ಲಲ್ಪಟ್ಟ ಉಗ್ರಗಾಮಿಗಳ ಸಂಖ್ಯೆಯನ್ನು ನೀಡಬಹುದು ಮತ್ತು ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವ ಪಾಕಿಸ್ತಾನದ ಬಗ್ಗೆ ಮಾಹಿತಿ ಒದಗಿಸಬಹುದು.
ಅತಿರೇಕದ ರಾಷ್ಟ್ರೀಯತೆಯನ್ನೇ ಅವಲಂಬಿಸಿರುವ ಆಳುವ ಪಕ್ಷವು, ಸಂವಿಧಾನ ಅನುಚ್ಚೇದ 370ರ ರದ್ದತಿಯ ಪರಿಣಾಮವಾಗಿಯೇ ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಬಹುದು. ಏತನ್ಮಧ್ಯೆ ಕಾಶ್ಮೀರಿ ಪಂಡಿತರು ತಮ್ಮನ್ನು ಸುರಕ್ಷಿತ ವಲಯಕ್ಕೆ ರವಾನಿಸದೆ ಹೋದರೆ ತಾವು ಕಣಿವೆಯಿಂದ ಸಾಮೂಹಿಕ ವಲಸೆ ಹೋಗುವುದಾಗಿ ಬೆದರಿಕೆ ಹಾಕಬಹುದು.
ಈ ಘಟನಾವಳಿಗಳ ನಡುವೆ , ರಜನಿ ಬಾಲಾ ಅವರಂತಹ ಅಪರಿಚಿತ ಸರಳ ವ್ಯಕ್ತಿಯ ದುರಂತ ಸಾವು ನಮ್ಮನ್ನು ಏಕಾದರೂ ಬಾಧಿಸಬೇಕು ? ವಾಸ್ತವ ಎಂದರೆ ಭಾರತದ ಮುಖ್ಯವಾಹಿನಿಯಲ್ಲಿ ಹಿತವಲಯದ ನಾಗರಿಕರಿಗೆ ಕಾಶ್ಮೀರ ಒಂದು ಸುಂದರ ಪ್ರವಾಸೀ ತಾಣವಾಗಿಯೇ ಕಾಣುತ್ತದೆ. ದಾಲ್ ಲೇಕ್‌ನಲ್ಲಿ, ಸೋನಾ ಮಾರ್ಕ್‌ನಲ್ಲಿ ತಮ್ಮ ಮಧುರ ಕ್ಷಣಗಳನ್ನು ಆ ಕ್ಷಣದಲ್ಲೇ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳುತ್ತಾ ಆನಂದಿಸುತ್ತಾರೆ.
ಈ ಹಿತವಲಯದ ನಾಗರಿಕರಿಗೆ, ದೆಹಲಿಯಲ್ಲಿ ಕುಳಿತಿರುವ ಉನ್ಮತ್ತ ರಾಷ್ಟ್ರೀಯವಾದಿಗಳು ಕಾಶ್ಮೀರ ಕಣಿವೆಯಲ್ಲಿ ಸಹಜ ಸ್ಥಿತಿ ಇರುವಂತೆ ಕ್ರಮ ಕೈಗೊಳ್ಳುವುದು ಅಪ್ಯಾಯಮಾನವಾಗಿ ಕಾಣುತ್ತದೆ. ನಮ್ಮ ಅಬ್ಬರದ ವಿದ್ಯುನ್ಮಾನ ಸುದ್ದಿವಾಹಿನಿಗಳ ನಿರೂಪಕರು , ಈ ನಂಜಿನ ಯುಗದ ಹೊಸ ಉಪನ್ಯಾಸಕರು , ಕಾಶ್ಮೀರದಲ್ಲಿ ಸಹಜ ಸ್ಥಿತಿಯನ್ನು ಕಾಪಾಡಲು ಇರುವ ಏಕೈಕ ಮಾರ್ಗ ಸೇನಾ ನಿಯಂತ್ರಣವನ್ನು ಹೆಚ್ಚಿಸುವುದು ಅಥವಾ ಇಡೀ ಪ್ರದೇಶವನ್ನು ಬೇಹುಗಾರಿಕೆಗೊಳಪಡಿಸುವುದು, ಎಂದು ವ್ಯಾಖ್ಯಾನಿಸುತ್ತಾರೆ.
ಆದರೆ ರಜನಿ ಬಾಲಾ ವಿಭಿನ್ನ ವ್ಯಕ್ತಿ. ಆಕೆ ತಮ್ಮ ಕಾರ್ಯಕ್ಷೇತ್ರದಲ್ಲಿದ್ದರು. ಸಂಬಾ ಜಿಲ್ಲೆಯ ತಮ್ಮ ಮನೆಯಿಂದ ಹೊರಬಂದು ಕುಲ್ಗಾಮ್‌ನಲ್ಲಿ ಕಳೆದ 14 ವರ್ಷಗಳಿಂದ ಜೀವನ ನಡೆಸುತ್ತಿದ್ದರು. ಮೇಲಾಗಿ ಅವರು ಒಬ್ಬ ಶಿಕ್ಷಕಿ. ಉದ್ದೇಶಿತ ಹತ್ಯೆಗಳು ತೀವ್ರವಾಗುತ್ತಿದ್ದ ವಾತಾವರಣದಲ್ಲಿ ಸಹಜವಾಗಿಯೇ ಸೃಷ್ಟಿಯಾಗಿದ್ದ ಮಾನಸಿಕ ಭೀತಿ ಆಕೆಯನ್ನು ಆವರಿಸಿದ್ದರೂ, ಯಾವುದೇ ಒಬ್ಬ ಶಿಕ್ಷಕಿಯು ಯೋಚಿಸುವಂತೆ, ಮಕ್ಕಳನ್ನು ಕುಸುಮಗಳಂತೆ ವಿಕಸಿಸುವುದನ್ನು ನೋಡಲು, ಪ್ರಕ್ಷುಬ್ಧ ಪ್ರದೇಶದ ಶಾಲೆಯೊಂದರಲ್ಲಿ ಪ್ರೀತಿಯ ಬೀಜಗಳನ್ನು ಬಿತ್ತುವ ಆಲೋಚನೆಯೊಂದಿಗೆ ಆಕೆ ಶಾಲೆಗೆ ಬಂದಿದ್ದರು. ಒಂದು ರೀತಿಯಲ್ಲಿ ಇದು ಅಸಾಧಾರಣ ಸನ್ನಿವೇಶದಲ್ಲಿ ಸಾಧಾರಣವಾದ ಸಂಗತಿಯಾಗಿತ್ತು. ಮೃತ್ಯುವಾಹಕ ಭಯೋತ್ಪಾದಕರು ಆಕೆಯನ್ನು ಹತ್ಯೆ ಮಾಡಿದ್ದರು.
~ ಮೂಲ : ಅವಿಜಿತ್ ಪಾಠಕ್ – ಇಂಡಿಯನ್ ಎಕ್ಸ್‌ಪ್ರೆಸ್ 04-06-2022, ಅನುವಾದ : ನಾ ದಿವಾಕರ
(ಲೇಖಕರು ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಮೂರು ದಶಕಗಳ ಕಾಲ ಸಮಾಜಶಾಸ್ತ್ರವನ್ನು ಬೋಧಿಸಿದ್ದರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
~ಗೋವರ್ಧನ ನವಿಲೇಹಾಳು
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.
ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ; ಎಚ್ಚರಿಕೆಯೂ ಹೌದು.
ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.
ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.
ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.
ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.
ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.
ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ
ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.
ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.
ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.
ಸುದ್ದಿದಿನ | ವಾಟ್ಸಾಪ್ | 9980346243

ದಿನದ ಸುದ್ದಿ
ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ
ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.
ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

-
ದಿನದ ಸುದ್ದಿ3 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ2 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ3 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ3 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ಅಂಕಣ1 day agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ2 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ1 day agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ


