ದಿನದ ಸುದ್ದಿ
ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ; ಇದು ಅನಿರೀಕ್ಷಿತ ಫಲಿತಾಂಶ ಎಂದ ಕಟಿಲ್
ಸುದ್ದಿದಿನ, ಬೆಂಗಳೂರು : ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಮತಗಳ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆಡಳಿತಾರೂಢ ಬಿಜೆಪಿ ಸೋಲು ಅನುಭವಿಸಿದೆ. ಕಾಂಗ್ರೆಸ್ 136 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತ ಗಳಿಸಿದೆ.
ಬಿಜೆಪಿ 65 ಸ್ಥಾನಗಳಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಯಿತು. ಜೆಡಿಎಸ್ 19, ಇತರರು ನಾಲ್ಕು ಕ್ಷೇತ್ರಗಳಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಈಗಾಗಲೇ ಸಮಾಲೋಚನಾ ಕಾರ್ಯ ಮುಂದುವರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆಡಳಿತಾರೂಢ ಬಿಜೆಪಿಯ ಬಹುತೇಕ ಸಚಿವರು ಪರಾಭವಗೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದಾರೆ. ಕಾಂಗ್ರೆಸ್ನ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಲಕ್ಷ್ಮಣ ಸವದಿ ಸೇರಿದಂತೆ ಗೆಲುವು ಸಾಧಿಸಿದ್ದಾರೆ. ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ಮುಖಂಡ ಡಾ. ಜಿ. ಪರಮೇಶ್ವರ್ ಆಯ್ಕೆಯಾಗಿದ್ದಾರೆ. ಅರಸಿಕೆರೆಯಿಂದ ಕಾಂಗ್ರೆಸ್ನ ಕೆ.ಎಂ. ಶಿವಲಿಂಗೇಗೌಡ ಪುನರಾಯ್ಕೆಯಾಗಿದ್ದಾರೆ.
ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ್, ನಾಗಮಂಗಲದಲ್ಲಿ ಚಲುವರಾಯಸ್ವಾಮಿ, ರಾಮನಗರ ಜಿಲ್ಲೆಯ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಆಯ್ಕೆಯಾಗಿದ್ದಾರೆ.
ನಾಡಿನ ಗಮನ ಸೆಳೆದಿರುವ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ತಮ್ಮ ಸಮೀಪ ಸ್ಪರ್ಧಿ ಬಿಜೆಪಿಯ ವಿ. ಸೋಮಣ್ಣ ಅವರನ್ನು ಸೋಲಿಸಿ, ಜಯಗಳಿಸಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿ ಸಚಿವ ಆರ್. ಅಶೋಕ, ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಗೆಲುವು ಸಾಧಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಅಭ್ಯಥಿ ಜಗದೀಶ್ ಶೆಟ್ಟರ್ ಅವರನ್ನು ಪರಾಭವಗೊಳಿಸಿದ್ದಾರೆ.
ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗ ಶೆಟ್ಟಿ ಆಯ್ಕೆಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ. ದೇಶಪಾಂಡೆ ಆಯ್ಕೆಯಾಗಿದ್ದಾರೆ. ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಪ್ರಚಾರ ಮಾಡದೇ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರನ್ನು, ಆಯ್ಕೆ ಮಾಡುವ ಮೂಲಕ ಜನತೆ ಅಚ್ಚರಿ ಫಲಿತಾಂಶವನ್ನು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪರಾಭವಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದಿಂದ ಬೇಲೂರು ಗೋಪಾಲಕೃಷ್ಣ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ನ ಶಾರದಾ ಪೂರ್ವ ನಾಯಕ್, ಭದ್ರಾವತಿ ಕ್ಷೇತ್ರದಿಂದ ಕಾಂಗ್ರೆಸ್ನ ಸಂಗಮೇಶ್ ಆಯ್ಕೆಯಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಶಿಕಾರಿಪುರದಿಂದ, ಸೊರಬ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಚುನಾಯಿತರಾಗಿದ್ದಾರೆ. ಬೊಮ್ಮಾಯಿ ಸಚಿವ ಸಂಪುಟದ ಸಹೋದ್ಯೋಗಿಗಳಾದ ಡಾ. ಕೆ. ಸುಧಾಕರ್, ಶ್ರೀರಾಮುಲು, ನಾರಾಯಣಗೌಡ, ಗೋವಿಂದ ಕಾರಜೋಳ, ವಿ.ಸೋಮಣ್ಣ, ಜೆ.ಸಿ. ಮಾಧುಸ್ವಾಮಿ, ಆರ್. ಅಶೋಕ ಕನಕಪುರದಿಂದ, ಬಿ.ಸಿ. ಪಾಟೀಲ್, ಎಂ.ಟಿ.ಬಿ. ನಾಗರಾಜ್, ಹಾಲಪ್ಪ ಆಚಾರ್ ಪರಾಭವಗೊಂಡ ಸಚಿವರು.ಬಿಜೆಪಿ ಮುಖಂಡ ಸಚಿವ ಆರಗ ಜ್ಞಾನೇಂದ್ರ ಆಯ್ಕೆಯಾಗಿದ್ದಾರೆ. ಹಾಸನದಿಂದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಪ್ರತಿಸ್ಪರ್ಧಿ ಪ್ರೀತಮ್ ಗೌಡ ಅವರನ್ನು ಪರಾಭವಗೊಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವಕ್ತಾರರು, ಜಯಗಳಿಸಿದ ಅಭ್ಯರ್ಥಿಗಳೆಲ್ಲರೂ ನಾಳೆ ರಾಜಧಾನಿ ಬೆಂಗಳೂರಿಗೆ ಬರುವಂತೆ ಸೂಚನೆ ನೀಡಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಪಕ್ಷದ ಸೋಲಿನ ಹೊಣೆಯನ್ನು ತಾವೆ ಹೊರುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಹಾವೇರಿಯಲ್ಲಿ ತಿಳಿಸಿದ್ದಾರೆ.
ಸಂಘಟನೆ ಕೊರತೆ ಸೇರಿದಂತೆ ಇತರ ಕಾರಣಗಳಿಂದಾಗಿ ಪಕ್ಷಕ್ಕೆ ಸೋಲು ಉಂಟಾಗಿದೆ ಇಂದು ಸಂಜೆ ಬೆಂಗಳೂರಿಗೆ ತೆರಳಿ, ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ನೀಡುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಬಹುಮತ ನೀಡಿದ್ದು, ನಮ್ಮ ಪಕ್ಷ ಪ್ರತಿಪಕ್ಷದಲ್ಲಿ ಕುಳಿತು ಸಮರ್ಪಕ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಪಕ್ಷವಾಗಿ ನಮ್ಮ ಕುಂದು ಕೊರತೆಯನ್ನು ಸರಿದೂಗಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ,ಸಂಘಟಿತವಾಗಿ ಹೋರಾಟ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ ನ ಹಿರಿಯ ಮುಖಂಡ ರಾಹುಲ್ ಗಾಂಧಿ ದೆಹಲಿಯಲ್ಲಿಂದು ಪ್ರತಿಕ್ರಿಯಿಸಿ, ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಬಹುಮತ ನೀಡಿದ್ದಾರೆ. ಅವರ ವಿಶ್ವಾಸ ಉಳಿಸಿಕೊಂಡು ಹೋಗಲು ಪಕ್ಷ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ವಕ್ತಾರ ಜೈರಾಂ ರಮೇಶ್ ಮಾತನಾಡಿ, ಕರ್ನಾಟಕ ವಿಧಾನಸಭಾ ಚುನಾವಣೆ 2024 ರ ಸಂಸತ್ ಚುನಾವಣೆಗೆ ದಿಕ್ಸೂಚಿ ಎಂದು ಹೇಳಿದ್ದಾರೆ.
ಜನತೆ ನೀಡಿದ ತೀರ್ಪನ್ನು ತಾವು ಗೌರವದಿಂದ ಸ್ವೀಕರಿಸುವುದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಪ್ರತಿಕ್ರಿಯಿಸಿ, ಫಲಿತಾಂಶ ಅನಿರೀಕ್ಷಿತ, ಪಕ್ಷಕ್ಕೆ ಹಿನ್ನಡೆಯಾಗಿದೆ. ರಾಜ್ಯವು ಒಳ್ಳೆಯ ವಿರೋಧ ಪಕ್ಷವಾಗಿ ಜವಾಬ್ದಾರಿಯಾಗಿದೆ ಎಂದು ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.
ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗೆ ರಾಜ್ಯಾಧ್ಯಕ್ಷ ಅಭಿನಂದನೆ ಸಲ್ಲಿಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


