Connect with us

ದಿನದ ಸುದ್ದಿ

ದಾವಣಗೆರೆ | ಇದೇನು ಸ್ಮಾರ್ಟ್ ಸಿಟಿಯೋ? ಕೊಚ್ಚೆ ಗುಂಡಿಯೋ? : ಎಸ್.ಓ.ಜಿ ಕಾಲೋನಿ ಜನರ ಅಳಲು

Published

on

ಎಸ್ ಓ ಜಿ ಕಾಲೋನಿ ಕಸದ ರಾಶಿ

ಪ್ರೀತಿ.ಟಿ.ಎಸ್

ಎಸ್.ಓ.ಜಿ. ಕಾಲೋನಿಯಿಂದ ಎಸ್.ಎಸ್.ಆಸ್ಪತ್ರೆಗೆ ಸಾಗುವ ರಸ್ತೆ ಬದಿಯಲ್ಲಿ ದುರಸ್ತಿ ಕಾಣದ ಚರಂಡಿಗಳು, ಅಲ್ಲಲ್ಲಿ ಕಸದ ರಾಶಿ, ಪೊದೆಗಳು ಬೆಳೆದು ಹಾವು-ಹುಪ್ಪಡಿಗಳ ಕಾಟ. ಬೀದಿ ದೀಪಗಳು ಇಲ್ಲದಿರುವಂತಹ, ತಗ್ಗು ಗುಂಡಿ ಇರುವ ರಸ್ತೆಗಳು.ಇದು ಕಂಡು ಬಂದದ್ದು ಸ್ಮಾರ್ಟ್ ಸಿಟಿ ದಾವಣಗೆರೆಯ ಎಸ್.ಓ.ಜಿ. ಕಾಲೋನಿಯಲ್ಲಿ.

ಈ ರಸ್ತೆಯ ಮೇಲೆ ಸಾರ್ವಜನಿಕರು ಓಡಾಡುವಾಗ ಪಕ್ಕದಲ್ಲಿಯೇ ಕಸದ ರಾಶಿ, ಅದರಿಂದ ಬೀರುವ ದುರ್ವಾಸನೆ, ಬೀದಿ ನಾಯಿ ಹಾಗೂ ಹಾವುಗಳ ಉಪಟಳ ಇಂತಹ ಸಮಸ್ಯೆಗಳಿಂದಾಗಿ ಇಲ್ಲಿನ ಸ್ಥಳೀಯ ನಿವಾಸಿಗರು ಕಿರಿ ಕಿರಿ ಅನುಭವಿಸುತ್ತಿದ್ದಾರೆ.
ಪ್ರತಿದಿನ ಕಸ ವಿಲೇವಾರಿ ವಾಹನ ಸ್ಥಳದಲ್ಲಿ ಸಂಚರಿಸಿದರೂ ಸಿಬ್ಬಂದಿಗಳು ಬೀದಿಗಳಿಗೆ ಹೋಗಿ ಕಸ ಸಂಗ್ರಹಿಸುವುದಿಲ್ಲ. ವಾರಕ್ಕೆ 2 ಬಾರಿ ಕಸ ಸಂಗ್ರಹಿಸಿ ಬೇಜವಾಬ್ದಾರಿ ತೋರುತ್ತಿದ್ದಾರೆ. ಇದರಿಂದಾಗಿ ಅಲ್ಲಿರುವ ನಿವಾಸಿಗಳು ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಕಸದ ವಿಲೇವಾರಿಯಲ್ಲಿ ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದ್ದು, ಕಸ ವಿಲೇವಾರಿ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಆ ವಾರ್ಡ್‍ನಲ್ಲಿ ಸಂಗ್ರಹಿಸಲಾದ ಕಸವನ್ನು ಸಿಬ್ಬಂದಿಗಳು ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಸಮೀಪದಲ್ಲಿಯೇ ಸುರಿದು ಕೆಲವು ದಿನಗಳಿಗೊಮ್ಮೆ ಸುಡುತ್ತಾರೆ. ಈ ಸ್ಥಳದ ಸುತ್ತಮುತ್ತ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ತೋಟಗಾರಿಕೆ ಇಲಾಖೆ ಹಾಗೂ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಿದ್ದು ಅದರಿಂದ ಉತ್ಪತ್ತಿಯಾಗುವ ಹೊಗೆಯಿಂದ ತಮ್ಮ ಕಾರ್ಯ ನಿರ್ವಹಿಸದೆ ತೊಂದರೆ ಅನುಭವಿಸುವಂತಾಗಿದೆ.
ನಗರದಲ್ಲಿ ಅಲ್ಲಲ್ಲಿ ಕಂಟೇನರ್‍ಗಳ ವ್ಯವಸ್ಥೆ ಇಲ್ಲದಿರುವುದರಿಂದ, ಸಾರ್ವಜನಿಕರು ತಮ್ಮ ಮನೆಯ ಕಸವನ್ನು ವಿಲೇವಾರಿ ಮಾಡಲು ಅಲ್ಲಲ್ಲಿ ಕಸ ಹಾಕುತ್ತಾರೆ. ಇದರ ಪರಿಣಾಮ ಅಕ್ಕಪಕ್ಕದ ಮನೆಯ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಅಧಿಕಾರಶಾಹಿ ಮತ್ತು ಜನಪ್ರತಿನಿಧಿಗಳು ಹಿಂದೇಟು ಹಾಕಿರುವುದು ಎದ್ದು ಕಾಣುತ್ತದೆ.

ಸಾಂಕ್ರಾಮಿಕ ರೋಗದ ಭೀತಿ

ಇದು ಮಳೆಗಾಲದ ಸಮಯವಾದರಿಂದ, ಇಂತಹ ಸಮಯದಲ್ಲಿ ಕಸದ ಜತೆ ಮತ್ತಷ್ಟು ನೀರು ನಿಂತು ಕೊಳೆತು ಹುಳು ಹುಪ್ಪಡಿಗಳು ಹೆಚ್ಚಾಗುತ್ತಿವೆ. ಇದು ಸಾಂಕ್ರಾಮಿಕ ರೋಗಕ್ಕೆ ಹೇಳಿ ಮಾಡಿದ ಋತುಮಾನವಾಗಿದೆ. ಆದರಿಂದ ಇಲ್ಲಿ ಸಂಗ್ರಹವಾದ ಕಸವನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಕಸದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ, ಡೆಂಗ್ಯೂ ಸೇರಿದಂತೆ ಇನ್ನಿತರ ಕಾಯಿಲೆಗೆ ಅನುವು ಮಾಡಿಕೊಡಲು ಸಹಕಾರಿಯಾಗುತ್ತದೆ. ಆದ್ದರಿಂದ ಕೂಡಲೇ ಚರಂಡಿ, ರಸ್ತೆ ಮೇಲಿನ ಕಸದ ರಾಶಿಯನ್ನು ಸ್ವಚ್ಛ ಮಾಡುವಲ್ಲಿ ಪಾಲಿಕೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯದ ಸಾಮ್ರಾಜ್ಯ

ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಎಷ್ಟೋ ಪ್ರಯತ್ನಗಳು ನಡೆದರೂ ಪ್ಲಾಸ್ಟಿಕ್ ಬಳಕೆ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದನ್ನು ಈ ಕಸದ ರಾಶಿಯ ಮೂಲಕ ಸಾಕ್ಷಿ ಸಮೇತ ತೋರಿಸಬಹುದು. ಹೆಚ್ಚಿನ ಪಾಲು ಪ್ಲಾಸ್ಟಿಕ್ ಚೀಲಗಳು, ಒಡೆದ ಗಾಜಿನ ಬಾಟಲಿ ಚೂರುಗಳು, ನೀರು ಕುಡಿದು ಬಿಸಾಡಿದ ಬಾಟಲಿಗಳು ಇಲ್ಲಿ ಕಂಡು ಬರುತ್ತವೆ.

ಜಾನುವಾರು ಜೀವಕ್ಕೆ ತುತ್ತು

ಕಸದ ರಾಶಿಯಲ್ಲಿ ಪ್ಲಾಸ್ಟಿಕ್‍ನ ಪ್ರಮಾಣವೇ ಜಾಸ್ತಿ ಇರುವುದರಿಂದ ದನ ಕರುಗಳ ಸಾವಿಗೆ ಇದು ಒಂದು ಕಾರಣವಾಗಿ ಪರಿಣಮಿಸಿದೆ. ಏಕೆಂದರೆ ಈ ಪ್ಲಾಸ್ಟಿಕ್ ವಸ್ತುಗಳ ಮಧ್ಯೆ ಇರುವ ಆಹಾರ ಪದಾರ್ಥ ತಿನ್ನಲು ಬರುವ ಪ್ರಾಣಿಗಳು ತಮ್ಮ ಜೀವ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.

ಶೀಘ್ರವೇ ಕ್ರಮ ಅಗತ್ಯ

ಕಸ ವಿಲೇವಾರಿ ಮಾಡಲು ನಗರಸಭೆ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಹೆಚ್ಚಿನ ಪೌರಕಾರ್ಮಿಕರನ್ನು ಬಳಸಿಕೊಂಡು ಹಾಗೂ ಸಣ್ಣ-ಪುಟ್ಟ ಕಸವನ್ನು ತುಂಬುವ ಗಾಡಿಗಳ ಮೂಲಕ ನಗರದ ವಿವಿಧ ಭಾಗಗಳಲ್ಲಿರುವ ಕಸದ ಗುಂಪುಗಳನ್ನು ಕಡಿಮೆ ಮಾಡಬೇಕಿದೆ.

ಮಹಾನಗರ ಪಾಲಿಕೆ ಅಧಿಕಾರಿಗಳು ಸಮಸ್ಯೆಯನ್ನು ಅರಿತುಕೊಂಡು ಈಗಲೇ ಎಚ್ಚೆತ್ತುಕೊಂಡು, ಪರಿಹಾರವನ್ನು ಒದಗಿಸಬೇಕು. ಇದರಲ್ಲಿ ಸಾರ್ವಜನಿಕರ ಪಾತ್ರವೂ ಮುಖ್ಯ. ಕೇವಲ ಅಧಿಕಾರಿಗಳು ಹಾಗೂ ಪಾಲಿಕೆಯನ್ನು ದೂಷಿಗಳನ್ನಾಗಿ ಮಾಡುವ ಮೊದಲು ಸಾರ್ವಜನಿಕರು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಅರಿತರೆ ಆಡಳಿತ ವರ್ಗವನ್ನು ದೂರುವುದು ತಪ್ಪುತ್ತದೆ. ನಾವು ಇರುವ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ.

ನಿವಾಸಿಗಳ ಅಭಿಪ್ರಾಯ

• ಕಸ ವಿಲೇವಾರಿ ಮಾಡುವಲ್ಲಿ ನಗರಪಾಲಿಕೆಯವರು ಸರಿಯಾದ ಕ್ರಮವನ್ನು ಕೈಗೊಳ್ಳದೇ ಬೇಜವಾಬ್ದಾರಿ ಮಾಡುತ್ತಿದ್ದಾರೆ. ಸುತ್ತಮುತ್ತ ಸ್ಥಳಗಳಿಂದ ಸಂಗ್ರಹಿಸಲ್ಪಟ್ಟ ಕಸವನ್ನು ಬಸ್ ಡಿಪೋ, ತೋಟಗಾರಿಕೆ ಇಲಾಖೆ, ಎನ್.ಎಸ್.ಎಸ್ ಆಫೀಸ್ ಬಳಿಯೇ ಸಂಗ್ರಹಿಸಿಟ್ಟು ಕೆಲವು ದಿನಗಳಿಗೊಮ್ಮೆ ಸುಡುತ್ತಾರೆ. ಇದರಿಂದ ದುರ್ವಾಸನೆಯ ಜೊತೆಗೆ ಸುಟ್ಟಾಗ ಬರುವ ಹೊಗೆಯಿಂದ ಕೆಲಸ ಮಾಡಲು ಕಿರಿಕಿರಿ ಅನಿಸುತ್ತದೆ. ತೋಟಗಾರಿಕೆ ಅಡಿಯಲ್ಲಿ ಬೆಳೆದ ಅನೇಕ ಮರಗಳ ವಿನಾಶವೂ ಆಗುತ್ತಿದೆ. ಚರಂಡಿಗಳಲ್ಲಿ ನಿಂತ ನೀರಿನಿಂದ ಸೊಳ್ಳೆಗಳ ಹಾವಳಿಯೂ ಜಾಸ್ತಿ ಆಗಿದೆ.

| ಬಿ.ಎಸ್.ವೀರಭದ್ರಪ್ಪ, ಟೈಯರ್ ಪ್ಲಾಂಟ್ ಪ್ರಭಾರ

• ಪೌರಕಾರ್ಮಿಕರು ಪ್ರತಿ ದಿನ ಬಂದರು ಸಹ ಹೋಟೆಲ್‍ಗಳಲ್ಲಿ ಟೀ ಕುಡಿದು, ಹರಟೆ ಹೊಡೆಯುತ್ತಾ ಸಮಯ ವ್ಯರ್ಥ ಮಾಡುತ್ತಾರೆ. ಅವರಿಗೆ ಸರ್ಕಾರ ಸಂಬಳ ನೀಡಿದರು ಸಹ ಸಾರ್ವಜನಿಕರಿಗೆ ಹಣ ಕೇಳಿ ಕಾಟ ನೀಡುತ್ತಾರೆ. ವಾರಕ್ಕೆರಡು ಬಾರಿ ಮಾತ್ರ ತಮ್ಮ ಕೆಲಸ ನಿರ್ವಹಿಸುತ್ತಾರೆ.

| ಗೌತಮ್, ಸ್ಥಳಿಯ ನಿವಾಸಿ

• ಏರಿಯಾದಲ್ಲಿ ಅಲ್ಲಲ್ಲಿ ಕಸವನ್ನು ಹಾಕುತ್ತಿದ್ದು ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಇದರ ತಡೆಗೆ ಫಾಗಿಂಗ್ ಮಾಡಬೇಕು. ಪಾಲಿಕೆ ವಾಹನಗಳು ದಿನನಿತ್ಯ ಬರಬೇಕು. ಪೌರಕಾರ್ಮಿಕರು ನಿರ್ಲಕ್ಷ್ಯ ತಾಳದೆ ನಿತ್ಯ ಕೆಲಸ ಮಾಡುವಲ್ಲಿ ಮೇಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.

| ರಿಯಾಜ್, ಸ್ಥಳೀಯ ನಿವಾಸಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ

Published

on

ಸುದ್ದಿದಿನ,ದಾವಣಗೆರೆ:ಫೆಬ್ರವರಿ 23 ರಿಂದ 27 ರವರೆಗೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆ ಪ್ರಯಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ದೊಡ್ಡಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪ, ವಿರಕ್ತಮಠ ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರ-1, ಎಸ್.ಕೆ.ಪಿ ರಸ್ತೆಯ ಎಸ್.ವಿ.ಎಸ್.ಶಾಲೆ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘ, ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಈ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ -2025ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳಿಗೆ ಆಕ್ಷೇಪಣೆ, ತಕರಾರು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.

ತಿರಸ್ಕೃತಗೊಂಡ ಅರ್ಜಿಗಳ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ, ಮಾರ್ಚ್ 13 ರೊಳಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಪೂರಕ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾರ‍್ವಾಮಿ.ಜಿ.ಎಂ.ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

Published

on

ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.

ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)

AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.

ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್‌ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.

ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.

ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.

ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending