ರಾಜಕೀಯ
ಭಾರತದ ಸಂವಿಧಾನದ ಏಕೈಕ ಶಿಲ್ಪಿ, ಸಂವಿಧಾನದ ಪಿತಾಮಹ ಡಾ ಅಂಬೇಡ್ಕರ್
- ಅಲ್‌ಮೆಯಿಡಾ ಗ್ಲಾಡ್‌ಸನ್
ಭಾರತದ ಸಂವಿಧಾನದ ಏಕೈಕ ಶಿಲ್ಪಿ, ಸಂವಿಧಾನದ ಪಿತಾಮಹ ಡಾ ಅಂಬೇಡ್ಕರ್ ಮಾತ್ರ ಯಾಕೆಂದರೆ 395 ವಿಧಿಗಳು, 8 ಅನುಚ್ಛೇದಗಳು, 22 ಭಾಗಗಳು, ಒಂದು ಲಕ್ಷಕ್ಕಿಂತಲೂ ಹೆಚ್ಚು ಶಬ್ದಗಳು ಹಾಗೂ ಇನ್ನೂರಕ್ಕಿಂತ ಹೆಚ್ಚು ಪುಟಗಳ ಸಂವಿಧಾನವನ್ನು ರಚಿಸುವಲ್ಲಿ ಡಾ ಅಂಬೇಡ್ಕರ್ ಪಟ್ಟ ಶ್ರಮ, ವ್ಯಯಿಸಿದ ಸಮಯ ಎಲ್ಲರಿಗಿಂತಲೂ ಹೆಚ್ಚು.
ಸಂವಿಧಾನ ಕರಡು ಸಮಿತಿಯ ಸದಸ್ಯರಾಗಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಕೆ ಎಮ್ ಮುನ್ಶಿಯಂಥ ಘಟಾನುಘಟಿಗಳು ಇದ್ದರೂ, ಸಮಿತಿಯ ಅಧ್ಯಕ್ಷರನ್ನಾಗಿ ಆರಿಸಿದ್ದು ಬಾಬಾಸಾಹೇಬರನ್ನು ಅವರ ಸಾಮರ್ಥ್ಯ ಹಾಗೂ ಅಗಾಧವಾದ ಜ್ಞಾನದಾಧರದಲ್ಲಿ. ಸಂವಿಧಾನ ಕರಡು ಸಮಿತಿಯಲ್ಲಿ ಬಾಬಾಸಾಹೇಬರ ಜೊತೆ ಇನ್ನೂ ಆರು ಜನರಿದ್ದರು. ಆದರೆ ಕಾರಾಣಾಂತರಗಳಿಂದ ಕರಡು ಸಮಿತಿಯ ಹೆಚ್ಚಿನ ಸದಸ್ಯರು ಸಂವಿಧಾನ ರಚನೆಯಲ್ಲಿ ಭಾಗವಹಿಸಲೇ ಇಲ್ಲ. ಒಬ್ಬರು ತೀರಿಹೋದರು, ಇನ್ನೊಬ್ಬರು ಅಮೇರಿಕಾಕ್ಕೆ ಹೋದರೆ, ಮತ್ತೋರ್ವರು ತಮ್ಮ ರಾಜ್ಯದ ವಿಷಯಗಳಲ್ಲೇ ತಲ್ಲೀನರಾದರು. ಇನ್ನಿಬ್ಬರು ಅನಾರೋಗ್ಯದ ನಿಮಿತ್ತ ದೆಹಲಿ ಕಡೆ ಬರಲೇ ಇಲ್ಲ. ಹೀಗಾಗಿ ಇಡೀ ಸಂವಿಧಾನವನ್ನು ರಚಿಸುವ ಸಂಪೂರ್ಣ ಜವಾಬ್ದಾರಿ ಬಾಬಾಸಾಹೇಬರ ಹೆಗಲಿಗೇ ಬಿತ್ತು. ಸುಮಾರು ಎರಡೂವರೆ ವರುಷಗಳ ಕಾಲ ನಡೆದ ಸಂವಿಧಾನ ರಚನೆ, ನವೆಂಬರ್ 26, 1949ರಂದು ಸಂವಿಧಾನ ಸಭೆಯ ಅನುಮೋದನೆ ಪಡೆಯುವ ಮೊದಲು ಸುಮಾರು 2500 ಬಾರಿ ತಿದ್ದುಪಡಿಗೆ ಒಳಗಾಗಿತ್ತು. ಕೊನೆಗೆ ಈ ಸಂವಿಧಾನ ಅನುಮೋದನೆಯಾದಾಗ ಅದು ಜಗತ್ತಿನ ಅತೀ ದೊಡ್ಡ ಸಂವಿಧಾನವೆಂದು ಪರಿಗಣಿಸಲ್ಪಟ್ಟಿತ್ತು. ಸದ್ಯಕ್ಕೆ ನಮ್ಮ ಸಂವಿಧಾನ ಜಗತ್ತಿನ ಎರಡನೆಯ ಅತೀ ದೊಡ್ಡ ಸಂವಿಧಾನ. ಮೊದಲನೆಯ ಸ್ಥಾನದಲ್ಲಿ ಈವಾಗ ಅಲ್ಬೇನಿಯಾದ ಸಂವಿಧಾನ ಇದೆ.
ನಮ್ಮ ದೇಶ ಯಾವುದೇ ದೇಶದ ಸಂವಿಧಾನದ ಕಾಪಿ-ಪೇಸ್ಟ್ ಅಲ್ಲ ಸಂಘಿಗಳು ಹೇಳುವಂತೆ. ಹೌದು ಬ್ರಿಟನ್, ಅಮೇರಿಕಾ, ಐರ್ಲೆಂಡ್, ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ, ಯುಎಸ್‍ಎಸ್‍ಆರ್ ಮುಂತಾದ ದೇಶಗಳ ಸಂವಿಧಾನಗಳ ಪ್ರಭಾವ ನಮ್ಮ ಸಂವಿಧಾನದ ಮೇಲೂ ಇದೆ. ಆದರೆ ಅಲ್ಲಿಂದ ಕಾಪಿಯಾಗಿಲ್ಲ ಬದಲಾಗಿ ಅವುಗಳ ಕೆಲ ಆಶಯಗಳನ್ನು ಮೂಲಾಧಾರವಾಗಿಟ್ಟು, ಭಾರತದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ, ಭೌಗೋಳಿಕ, ಭಾಷಿಕಾ ವಿವಿಧತೆಗಳಿಗೆ ಅನುಸಾರವಾಗಿ ಭಾರತದ ಸಂವಿಧಾನವನ್ನು ರಚಿಸಲಾಗಿದೆ.
ಸಂವಿಧಾನ ಕರಡು ಸಮಿತಿಯ ಸದಸ್ಯರಾಗಿದ್ದವರು ಬಾಬಾಸಾಹೇಬ್ ಅಂಬೇಡ್ಕರ್, ಗೋಪಾಲಸ್ವಾಮಿ ಅಯ್ಯಂಗಾರ್, ಕೃಷ್ಣಸ್ವಾಮಿ ಅಯ್ಯರ್, ಕೆಎಮ್ ಮುನ್ಶಿ, ಸಯ್ಯದ್ ಮಹಮೂದ್ ಸಾ’ದುಲ್ಲಾ, ಬಿ ಎಲ್ ಮಿಟ್ಟರ್, ಡಿ ಪಿ ಖೈತಾನ್. (ಮಿಟ್ಟರ್ ಅವರ ಅನಾರೋಗ್ಯದ ಕಾರಣದಿಂದ ಸಮಿತಿಯಿಂದ ಹೊರಗುಳಿದಾಗ ನಮ್ಮ ಮೈಸೂರಿನ ಮಾಧವ ರಾವ್ ಅವರ ಜಾಗಕ್ಕೆ ಆಯ್ಕೆಯಾಗಿದ್ದರೆ, ಡಿ ಪಿ ಖೈತಾನ್ 1948ರಲ್ಲಿ ತೀರಿಹೋದ ಕಾರಣ ಅವರ ಜಾಗಕ್ಕೆ ಟಿ ಟಿ ಕೃಷ್ಣಮಾಚಾರಿ ಆಯ್ಕೆಯಾಗಿದ್ದರು). ಭಾರತದ ಸಂವಿಧಾನ ನವೆಂಬರ್ 26, 1949ರಂದು ಸಂವಿಧಾನ ಸಭೆಯ ಅನುಮೋದನೆ ಪಡೆದಾಗ ಸಂವಿಧಾನ ಸಭೆಯನ್ನುದ್ದೇಶಿಸಿ ಮಾತಾನಾಡಿದ ಟಿ ಟಿ ಕೃಷ್ಣಮಾಚಾರಿ ಹೀಗೆಂದಿದ್ದಾರೆ “ಕರಡು ರಚನಾ ಸಮಿತಿಗೆ ಈ ಸಂವಿಧಾನ ಸಭೆ ಏಳು ಜನರನ್ನು ನೇಮಿಸಿತ್ತು. ಅದರಲ್ಲಿ ಒಬ್ಬರು ರಾಜೀನಾಮೆ ಕೊಟ್ಟಾಗ ಅವರ ಜಾಗಕ್ಕೆ ಇನ್ನೋರ್ವರ ಆಯ್ಕೆಯಾಯಿತು. ಒಬ್ಬರು ತೀರಿಹೋದರು, ಒಬ್ಬರು ಅಮೇರಿಕಾಕ್ಕೆ ಹೋದರೆ, ಮತ್ತೊಬ್ಬ ಸದಸ್ಯರು ತಾವು ಪ್ರತಿನಿಧಿಸುತ್ತಿದ್ದ ರಾಜ್ಯದ ವಿಷಯಗಳಲ್ಲೇ ತಲ್ಲೀನರಾಗಿದ್ದರೆ, ಇನ್ನಿಬ್ಬರು ದೆಹಲಿಯಿಂದ ದೂರವಿದ್ದು, ಅವರ ಅನಾರೋಗ್ಯದ ಕಾರಣದಿಂದ ಸಂವಿಧಾನ ರಚನೆಯಲ್ಲಿ ಭಾಗವಹಿಸಲಿಲ್ಲ. ಹೀಗಾಗಿ ಸಂವಿಧಾನವನ್ನು ರಚಿಸುವ ಸಂಪೂರ್ಣ ಜವಾಬ್ದಾರಿ ಡಾ ಅಂಬೇಡ್ಕರ್ ಅವರ ಹೆಗಲಿಗೆ ಬಿತ್ತು. ಈ ಜವಾಬ್ದಾರಿಯನ್ನು ಸಮರ್ಪಕವಾಗಿ ಹಾಗೂ ಪ್ರಶಂಸನೀಯ ರೀತಿಯಲ್ಲಿ ನಿಭಾಯಿಸಿದಕ್ಕಾಗಿ ನಾವೆಲ್ಲರೂ ಅವರಿಗೆ ಋಣಿಯಾಗಿರಬೇಕೆಂದು ನನ್ನ ಅಭಿಪ್ರಾಯ.”
ಭಾರತದ ಪ್ರಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಸಂವಿಧಾನ ಸಭೆಯ ಡಿಬೇಟ್‍ನಲ್ಲಿ ಒಂದೊಮ್ಮೆ ಹೀಗೆಂದಿದ್ದರು. “ಅಧ್ಯಕ್ಷನ ಸ್ಥಾನದಲ್ಲಿದ್ದು ಕರಡು ರಚನೆ ಸಮಿತಿಯ ದೈನಂದಿನ ಕೆಲಸಗಳನ್ನು ನಾನು ಬಲು ಹತ್ತಿರದಿಂದ ನೋಡಿದ್ಡೇನೆ. ಹಾಗಾಗಿ ಬೇರೆಯರವರಿಗಿಂತ ಹೆಚ್ಚಾಗಿ ಸಂವಿಧಾನ ಕರಡು ರಚನೆ ಸಮಿತಿಯ ಸದಸ್ಯರು ಹಾಗೂ ಪ್ರತ್ಯೇಕವಾಗಿ ಸಮಿತಿ ಅಧ್ಯಕ್ಷರು ಎಷ್ಟೊಂದು ಶೃದ್ಧೆ ಹಾಗೂ ಚೈತನ್ಯದಿಂದ ಈ ಸಂವಿಧಾನವನ್ನು ರಚಿಸಿದ್ದಾರೆ ಎಂದು ನನಗೆ ತಿಳಿದಿದೆ. ಅಂಬೇಡ್ಕರ್ ಅವರನ್ನು ಕರಡು ಸಮಿತಿಗೆ ಆಯ್ಕೆ ಮಾಡಿ, ತದನಂತರ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕಿಂತ ಹೆಚ್ಚಿನ ಒಳ್ಳೆಯ ಕೆಲಸವನ್ನು ನಾವು ಮಾಡಿಲ್ಲ.”
ಹೀಗಾಗಿ ಬಾಬಾಸಾಹೇಬ್ ಕೊಟ್ಟ ಸಂವಿಧಾನದ ಕಾರಣದಿಂದಲೇ ಇವತ್ತು ಐಎಎಸ್ ಆಫೀಸರ್ ಆಗಿರುವ ಶಿಕ್ಷಣಾ ಇಲಾಖೆಯ ಅಧಿಕಾರಿ ಉಮಾಶಂಕರ್ ಸಂವಿಧಾನ ರಚನೆಯ ಬಗ್ಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಆಗಿರುವುದು ಪ್ರಮಾದವಲ್ಲ ಬಟ್ ಅಪರಾಧ. ಸಂವಿಧಾನದ ಕಾರಣದಿಂದಲೇ ಇಂಥ ಉನ್ನತ ಹುದ್ದೇಗೇರಿರುವ ವ್ಯಕ್ತಿಗಳು ಮನಸ್ಸಿನಲ್ಲಿ ಇಷ್ಟೊಂದು ಕೊಳಕನ್ನು ಹಾಗೂ ನೀಚತನವನ್ನು ತುಂಬಿಸಿಕೊಂಡಿದ್ದಾರೆಂದರೆ ಅವರು ಸಂವಿಧಾನದ ಪಾಲಕರಾಗಿರಲು ಸಾಧ್ಯವೇ ಇಲ್ಲ. ಇವರನ್ನು ಕೇವಲ ಅಮಾನತ್ತುಗೊಳಿಸಿದರೆ ಸಾಕಾಗೋಲ್ಲ ಬದಲಾಗಿ ಅವರನ್ನು ಸೇವೆಯಿಂದ ವಜಾ ಮಾಡಬೇಕು. ಸಂವಿಧಾನದ ನೆರಳಿನಡಿಯಲ್ಲಿ ಕುಳಿತು ತಮ್ಮ ರಾಜಕೀಯ ಹಾಗೂ ವ್ಯಯಕ್ತಿಕ ಸಿದ್ದಾಂತಗಳನ್ನು ಪ್ರತಿಪಾದಿಸುವ ಬದಲು ನೇರವಾಗಿ ಸೇವೆಗೆ ರಾಜೀನಾಮೆ ಕೊಟ್ಟು ಹೊರಬಂದು ತಮಗೆ ಬೇಕಾದ ರಾಜಕೀಯ ಪಕ್ಷವನ್ನು ಸೇರಲಿ. ಹಾಗಾಗಿ ಉಮಾಶಂಕರ್ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ತನಕ ಪಟ್ಟು ಸಡಿಲಿಸದೆ ಹೋರಾಡಬೇಕು. ನಮ್ಮ ಬ್ಯೂರೋಕ್ರಸಿಯಲ್ಲಿ ತುಂಬಿರುವ ಇಂಥ ನೀಚರನ್ನು ಗುರುತಿಸಿ ಹೊರಗಟ್ಟಿಲ್ಲವೆಂದರೆ ಮುಂದೊಂದು ದಿನ ಇವರೇ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡೋಡು ಗ್ಯಾರಂಟಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್ಲೈನ್ ಕೌನ್ಸಿಲಿಂಗ್ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.
ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.
ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ದಿನದ ಸುದ್ದಿ
ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 8 ಬಹು ಟ್ರ್ಯಾಕಿಂಗ್ (Multi-Tracking) ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಸೆ.09) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ.
http://Visit : www.suddidina.com
ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವು ಬರೋಬ್ಬರಿ 1,200 ಕಿಲೋಮೀಟರ್ಗಳಷ್ಟು ವಿಸ್ತರಣೆಯಾಗಲಿದೆ. ಇದರಿಂದ 6,900ಕ್ಕೂ ಹೆಚ್ಚು ಗ್ರಾಮಗಳಿಗೆ ಸುಧಾರಿತ ಸಂಪರ್ಕ ಸಿಗಲಿದ್ದು, ರೈಲುಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಗಣನೀಯವಾಗಿ ಹೆಚ್ಚಾಗಲಿದೆ.
ಯಾವೆಲ್ಲ ಯೋಜನೆಗಳಿಗೆ ಅನುಮೋದನೆ?
ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:
1. ಅರಾಕೋಣಂ-ರೇಣಿಗುಂಟಾ ಮತ್ತು ವೈಟ್ಫೀಲ್ಡ್-ಬಂಗಾರಪೇಟೆ ನಡುವೆ 3 ಮತ್ತು 4ನೇ ಮಾರ್ಗ: ಇದು ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅತ್ಯಂತ ಮಹತ್ವದ ಯೋಜನೆಯಾಗಿದೆ.
2. ಸಿಕಂದರಾಬಾದ್-ಕಾಜಿಪೇಟೆ ನಡುವೆ ಮಲ್ಟಿ ಟ್ರ್ಯಾಕಿಂಗ್: ತೆಲಂಗಾಣದ ಪ್ರಮುಖ ಮಾರ್ಗದ ದಟ್ಟಣೆ ಕಡಿಮೆ ಮಾಡಲಿದೆ.
3. ಹೊಸೂರು-ಓಮಲೂರು, ಸೇಲಂ-ಕರೂರ್-ದಿಂಡಿಗಲ್ ಜೋಡಿ ಹಳಿ ಯೋಜನೆ: ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಸಂಪರ್ಕವನ್ನು ಬಲಪಡಿಸಲಿದೆ.
4. ಖರಗ್ಪುರ-ಝಾರ್ಸುಗುಡ ಮತ್ತು ಕತ್ನಿ-ಪೆಂದ್ರ ರಸ್ತೆ ನಡುವೆ 4ನೇ ಮಾರ್ಗ ಮತ್ತು ಬಿಲಾಸ್ಪುರ್-ಪೆಂದ್ರ ರಸ್ತೆ ನಡುವೆ 3ನೇ ಮಾರ್ಗ: ಛತ್ತೀಸ್ಗಢ, ಒಡಿಶಾ, ಮಧ್ಯಪ್ರದೇಶದ ಕಲ್ಲಿದ್ದಲು ಮತ್ತು ಖನಿಜ ಸಾಗಣೆಗೆ ಸಹಕಾರಿಯಾಗಲಿದೆ.
ಈ ಎಲ್ಲಾ ಯೋಜನೆಗಳು ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್ಗಢ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಳ್ಳಲಿವೆ.
ಕರ್ನಾಟಕಕ್ಕೆ ಏನು ಲಾಭ?
ಈ ಬಹು ಟ್ರ್ಯಾಕಿಂಗ್ ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಕೈಗಾರಿಕೆಗಳಿಗೆ ಅನುಕೂಲ: ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಾದ ಖನಿಜ ಸಾಗಿಸಲು ವಾಡಿ-ತಂದೂರು, ಮೋಟುಮಾರಿ-ವಿಷ್ಣುಪುರಂ ಮಾರ್ಗದಲ್ಲಿನ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಹೂಟಗಿ, ಕೂಡಗಿ, ಯಾದ್ಲಾಪುರ, ಬಳ್ಳಾರಿ ಮತ್ತು ಯರಮರಸ್ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆ ಇನ್ನಷ್ಟು ವೇಗ ಮತ್ತು ಸುಲಭವಾಗಲಿದೆ.
ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಟ್ಟಣೆ ಕಡಿಮೆ: ವೈಟ್ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ ಉದ್ದದ 3 ಮತ್ತು 4ನೇ ಮಾರ್ಗವು ಅತ್ಯಂತ ದಟ್ಟಣೆಯ ಮನ್ಮಾಡ-ಹುಬ್ಬಳ್ಳಿ-ಬೆಂಗಳೂರು-ಜೋಳರಪೇಟೆ ವಿಭಾಗದಡಿ ಬರುತ್ತದೆ. ಇದು ಬೆಂಗಳೂರು-ಚೆನ್ನೈ ನಡುವಿನ ರೈಲು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.
ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಉತ್ತೇಜನ: ಹೊಸೂರು-ಓಮಲೂರು ಜೋಡಿ ಹಳಿ ಮಾರ್ಗದಿಂದ ಕನ್ಯಾಕುಮಾರಿ, ರಾಮೇಶ್ವರಂನಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಣೆಯೂ ವೇಗವಾಗಲಿದೆ.ಒಟ್ಟಾರೆಯಾಗಿ, ಈ ಯೋಜನೆಗಳು ಕೇವಲ ರೈಲು ಮಾರ್ಗಗಳ ವಿಸ್ತರಣೆಯಷ್ಟೇ ಅಲ್ಲ, ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.




