Connect with us

ಲೈಫ್ ಸ್ಟೈಲ್

ಜಾನುವಾರುಗಳ ಗೆರಸಲು(ಕಾಲು-ಬಾಯಿ ಜ್ವರ) ರೋಗವೂ,.. ಕರುವುಗಲ್ಲಮ್ಮ ದೇವತೆಯೂ..

Published

on

ರೈತರ ಮಕ್ಕಳು ದಯಮಾಡಿ ಈ ಲೇಖನವನ್ನು ತಪ್ಪದೇ ಓದಿರಿ…

  • ಡಾ.ವಡ್ಡಗೆರೆ ನಾಗರಾಜಯ್ಯ

ಮ್ಮದು ರೈತಾಪಿ ಕುಟುಂಬ. ಕೃಷಿ ಕೆಲಸ ಮತ್ತು ಕರಾವಿಗಾಗಿ ನಮ್ಮ ಮನೆಯಲ್ಲಿ ಸದಾ ಒಂದು ಜೊತೆ ನಾಟಿ ಹಸುಗಳು ಮತ್ತು ಕರುಗಳು ಇರುತ್ತಿದ್ದವು. ಅವುಗಳನ್ನು ನಾವು ಸಾಕುತ್ತಿದ್ದೆವು ಎಂಬುದಕ್ಕಿಂತಲೂ ಆ ‘ಜೀವಧನ’ಗಳು ನಮ್ಮನ್ನು ಸಾಕುತ್ತಿದ್ದವು ಎಂದು ಹೇಳಿದರೆ ಸರಿಯಾದೀತು. ಜಾನುವಾರುಗಳನ್ನು ನಮ್ಮ ಪೂರ್ವಿಕರು ‘ಜೀವಧನ’ ಎಂದು ಕರೆದಿರುವುದು ಅನ್ವರ್ಥಕವಾಗಿದೆ.

ಜೀವಧನ ಎಂದರೆ ಜೀವಂತ ಹಣ! ಈ ಜೀವಧನಗಳು ಜೀವಂತ ಹಣ ಮಾತ್ರವಾಗಿರದೆ ಹಣಕ್ಕಿಂತಲೂ ಮಿಗಿಲಾಗಿ ನಮ್ಮ ಜೀವಭಾವದೊಂದಿಗೆ ನಂಟು ಬೆಸೆದುಕೊಂಡಿರುತ್ತಿದ್ದವು. ಜಾನುವಾರುಗಳನ್ನು ನೋಟುಗಳ ರೂಪದ ಆರ್ಥಿಕ ದೃಷ್ಟಿಯಿಂದ ನೋಡುವುದೇ ಅಮಾನವೀಯ ಅನ್ನಿಸುತ್ತದೆ.

ಪುರಾತನ ಕಾಲದ ಚೇಗಿದ ಮರವೊಂದನ್ನು ನಾವು ಹಣದ ರೂಪದಲ್ಲಿ ಬೆಲೆಕಟ್ಟಲು ಹೋದರೆ, ಆ ಮರವು ಇಷ್ಟೂ ದೀರ್ಘ ವರ್ಷಗಳ ಕಾಲ ನೀಡಿದ ನೆರಳು, ಒದಗಿಸಿದ ಆಶ್ರಯ, ಕಣ್ಮನಗಳಿಗೆ ತಂಪು ತುಂಬಿದ ಸೌಂದರ್ಯ, ಪಸರಿಸಿದ ಗಾಳಿಗಮಲು, ಕರುಣಿಸಿದ ಹಣ್ಣುಹಂಪಲು ಮುಂತಾದವುಗಳಿಗೆ ಯಾವ ಬೆಲೆ ಕಟ್ಟಲು ಸಾಧ್ಯ?

ದನಕರು ಕುರಿಮೇಕೆ ಕೋಳಿಗಳನ್ನು ಸಾಕುತ್ತಾ ಅವುಗಳೊಂದಿಗೆ ನಾವು ಬದುಕು ಕಟ್ಟಿಕೊಂಡಿದ್ದೆವು. ಅವುಗಳು ಖಾಯಿಲೆ-ಕಸಾಲೆ ಮುಂತಾದ ಕಾರಣಗಳಿಂದ ಅಕಾಲ ಮರಣಕ್ಕೀಡಾದರೆ ನಮ್ಮದೇ ಕಳ್ಳುಬಳ್ಳಿಯನ್ನು ಕಳೆದುಕೊಂಡಂತೆ ತೀವ್ರ ದುಃಖ ನಮ್ಮನ್ನು ಆವರಿಸುತ್ತಿತ್ತು.

ಜಾನುವಾರುಗಳಿಗೆ ಬಾಧಿಸುವ ಗೆರಸಲು ರೋಗ (ಕಾಲು – ಬಾಯಿ ಜ್ವರ), ಕುಂದು, ಚಪ್ಪೆರೋಗ ಮುಂತಾದವು ಕಾಣಿಸಿಕೊಂಡರಂತೂ ನಮ್ಮ ಕರುಳು ಬಾಯಿಗೆ ಬಂದಂತೆ ನಡುಗಿಹೋಗುತ್ತಿದ್ದೆವು. ಅವುಗಳ ನರಳಾಟ ನೋಡಿ ಕಣ್ಣೀರಾಕುತ್ತಿದ್ದ ನನ್ನ ಅಪ್ಪ, ಊಟ ನೀರು ನಿದ್ದೆ ಎಲ್ಲವನ್ನೂ ಬಿಟ್ಟು ಒದ್ದಾಡುತ್ತಿದ್ದ. ತನಗೆ ತೋಚಿದ ಗಿಡಮೂಲಿಕೆ ಮುಂತಾದ ಮುದ್ದುಗಳನ್ನು ಬಳಸುವುದರ ಜೊತೆಗೆ, ರೋಗಪೀಡಿತ ದನಗಳಿಗೆ ನಾಟಿ ಔಷಧ ನೀಡುವ ಪಂಡಿತರನ್ನು ಹುಡುಕಾಡಿಕೊಂಡು ಅಲೆದಾಡುತ್ತಿದ್ದ.

ತಿಗಳರ ಬೈಲಪ್ಪ, ಬುಡ್ಡೆ ಈರಣ್ಣ, ಮಂತ್ರವಾದಿ ವೆಂಕಟಸ್ವಾಮಯ್ಯ, ಬಡಗಿ ಮುದ್ಧಣ್ಣ ಮುಂತಾದ ಪಂಡಿತರು ನಮ್ಮೂರ ದನಗಳಿಗೆ ನಾಟಿಮದ್ದು ನೀಡುತ್ತಿದ್ದರು. ನಾಟಿಮದ್ದು ಕೊಡಿಸುವುದರ ಜೊತೆಗೆ ಇಂಗ್ಲೀಷ್ ಔಷಧವನ್ನೂ ಕೊಡಿಸಬೇಕೆಂದು ಆಲೋಚಿಸುತ್ತಿದ್ದ ನಾನು, ನಮ್ಮೂರಿನಲ್ಲಿಯೇ ಇದ್ದ ಪಶುಸಂಗೋಪನೆ ಇಲಾಖೆಯ ಸರ್ಕಾರಿ ಪಶು ಚಿಕಿತ್ಸಾಲಯದ ‘ದನಿನ ಡಾಕ್ಟರ್’ ಡಾ.ಹುಲಿಯಪ್ಪನ ಬರುವಿಕೆಗಾಗಿ ದಾರಿ ಕಾಯುತ್ತಾ ಆಸ್ಪತ್ರೆಯ ಬಾಗಿಲಲ್ಲಿ ನಿಲ್ಲುತ್ತಿದ್ದೆ.

ಪುಟಗೋಸಿ ಬಿಗಿಮಾಡಿಕೊಂಡು ಲಾಡಿದಾರದಲ್ಲಿಯೋ ಉಡುದಾರದಲ್ಲಿಯೋ ಕಟ್ಟಿಕೊಂಡಿದ್ದ ಪುಡಿಕಾಸನ್ನು ಔಷಧ ಇಂಜೆಕ್ಷನ್ ಪೌಡರ್ ಮುಂತಾದವುಗಳಿಗಾಗಿ ಅಪ್ಪ ಸುರಿಯುತ್ತಿದ್ದ. ಅಮ್ಮನೂ ತನ್ನ ಕೂಲಿನಾಲಿಯ ದುಡ್ಡನ್ನು ಎಲೆಅಡಕೆಯ ಸಂಚಿಯಿಂದ ತೆಗೆದು ಕೊಡುತ್ತಿದ್ದಳು. ದಿಕ್ಕುದೇವರುಗಳಿಗೆಲ್ಲಾ ಕಾಸಿನ ಮುಡುಪು ಕಟ್ಟಿ ಹರಕೆ ಹೊರುತ್ತಿದ್ದಳು.

ವಿಶೇಷವಾಗಿ ಮುದುಗೆರೆ ಸಪ್ಪಲಮ್ಮ ಹಾಗೂ ಮಚ್ಚೇನಹಳ್ಳಿ(ದನಿನ) ಮಾರಮ್ಮ ದೇವರ ಹೆಸರುಗಳಲ್ಲಿ ಹರಿಷಿಣದ ಬಟ್ಟೆಯಲ್ಲಿ ಮುಡುಪು ಕಟ್ಟಿದ ಕಾಸನ್ನು ದೇವರ ಪಟದ ಮುಂದಿನ ಮೊಳೆ ಅಥವಾ ನಿಲದ(ನೆಲುವು) ನೇಕೆಹುರಿಗಳಿಗೆ ಗಂಟು ಹೂಡುತ್ತಿದ್ದಳು.ಸ್ಥಳೀಯ ದೇವರ ಗುಡಿಗಳಿಗೆ ಹೋಗಿ ಪೂಜೆ ಮಾಡಿಸಿ ತೆಂಗಿನಕಾಯಿಯ ತೀರ್ಥವನ್ನು ದನಗಳ ಮೈಮೇಲೆ, ನಮಗೆ ಮತ್ತು ಕೊಟ್ಟಿಗೆಗೆ ಚುಮುಕಿಸಿ ಎಲ್ಲರ ಹಣೆಗಳಿಗೂ ಬೊಟ್ಟಿಕ್ಕುತ್ತಿದ್ದಳು.

ಗೆರಸಲು ರೋಗ ಅಥವಾ ಕಾಲು- ಬಾಯಿ ಜ್ವರ ಎಂಬ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಒಂದು ರೋಗಗ್ರಸ್ತ ರಾಸಿನಿಂದ ಇನ್ನೊಂದು ಆರೋಗ್ಯವಂತ ರಾಸಿಗೆ ನೇರ ಸಂಪರ್ಕದಿಂದಲೂ, ಮೂತ್ರ ಗಂಜಳದ ವಾಸನೆ ತುಂಬಿಕೊಂಡ ಗಾಳಿಯ ಮೂಲಕವೂ ಹರಡಿಕೊಂಡು ಇಡೀ ಊರಿನ ಜಾನುವಾರುಗಳಿಗೆ ಅತೀ ಶೀಘ್ರವಾಗಿ ಹಬ್ಬಿಬಿಡುತ್ತಿತ್ತು.

ಕಲುಷಿತಗೊಂಡ ಮೇವು ಮತ್ತು ಮಲೆತ ನೀರನ್ನು ಸೇವಿಸುವುದರ ಮೂಲಕವೂ ಗೆರಸಲು ರೋಗಾಣುಗಳು ಹರಡುತ್ತವೆಂಬ ವೈಜ್ಞಾನಿಕ ತಿಳಿವಳಿಕೆ ಇರದಿದ್ದ ನಮ್ಮ ಪೂರ್ವಿಕರು, ಇವೆಲ್ಲವೂ ದೇವರುಗಳೇ ತಂದೊಡ್ಡುವ ದೊಡ್ಡ ರೋಗಗಳೆಂದು ನಂಬಿದ್ದರು.

ನಮ್ಮದು ಚಿಕ್ಕ ಮನೆ. ದನಗಳ ಗ್ವಾಂದಿಗೆ ಎದುರಿನಲ್ಲಿಯೇ ನಾವು ರಾತ್ರಿ ಹೊತ್ತು ಮಲಗಿರುತ್ತಿದ್ದೆವು. ದನಗಳು ಒಮ್ಮೊಮ್ಮೆ ಹಾಯ್ದಾಡುತ್ತಾ ಕೊಂಬುಗಳಿಂದ ಬಡಿದಾಡಿಕೊಂಡರೆ ಸಾಕು ಅಪ್ಪ ದಡಕ್ಕನೆ ಎದ್ದು ಕೂರುತ್ತಿದ್ದ. ಹಾಯ್ದಾಡುವ ದನಗಳನ್ನು ನಾವು ಸಾಕಿದ್ದೇ ಅಪರೂಪ. ನಮ್ಮ ಮನೆಯಲ್ಲಿದ್ದದ್ದು ಹಸುಮಕ್ಕಳಂತಹ ದನಗಳು.

ನಾನು ಒಮ್ಮೊಮ್ಮೆ ನೇರವಾಗಿ ಹಸುವಿನ ಕೆಚ್ಚಲಿಗೆ ಬಾಯಿಹಾಕಿ ಹಾಲು ಕುಡಿಯುತ್ತಿದ್ದೆನು. ನಮ್ಮ ಮನೆಯಲ್ಲಿದ್ದ ದನಗಳು ಅಂತಹ ಸಾಧುಜೀವಿಗಳಾಗಿದ್ದವು. ಇಂಥಾ ಹಸುಗಳಿಗೆ ಗೆರಸಲು ರೋಗ ತಗುಲಿದಾಗ ರೋಗಗ್ರಸ್ತ ರಾಸಿನಲ್ಲಿ ಮೊದಲಿಗೆ ತೀವ್ರ ಜ್ವರ ಕಾಣಿಸುಕೊಂಡು ಮೇವು ತಿನ್ನುವುದನ್ನು ನಿಲ್ಲಿಸಿಬಿಡುತ್ತಿತ್ತು. ಬಾಯಲ್ಲಿ ನೊರೆ ಎಂಜಲು ಸುರಿಸಿಕೊಂಡು ಮೂಗಿನಲ್ಲಿ ಸಿಂಬಳ ಸುರಿಸಿಕೊಂಡು ನೀರನ್ನೂ ಕೂಡಾ ಮುಟ್ಟದೆ ಮೈಕೂದಲು ಮುಳ್ಳೆದ್ದು ನಿಂತುಬಿಡುತ್ತಿತ್ತು.

ನಾವು ಹಾಲಿಂಡುವ ಮಾತಿರಲಿ ಕರುವಿಗೂ ಹಾಲೂಡುವುದನ್ನು ನಿಲ್ಲಿಸುತ್ತಿದ್ದ ಹಸುವಿಗೆ ನೋಡನೋಡುತ್ತಲೇ ಕಾಲು ಕುಂಟು ಬೀಳುತ್ತಿತ್ತು. ಮುಸುಡಿಯ ಮೇಲೆ ಚಿಕ್ಕ ಚಿಕ್ಕ ಗುಳ್ಳೆಗಳೆದ್ದು ಆ ಗುಳ್ಳೆಗಳೊಡೆದು ಬಾಯಿಯ ಜೊಲ್ಲು ವಾಸನೆ ನಮ್ಮ ಮನೆ ತುಂಬಾ ಹರಡಿಕೊಳ್ಳುತ್ತಿತ್ತು. ನನ್ನ ಅಪ್ಪನು ಹಸುವಿನ ಬಾಯಿಯನ್ನು ಭದ್ರವಾಗಿ ಹಿಡಿದು ಕೈಗಳಿಂದ ಮುಸುಡಿಯನ್ನು ವಸಡುಗಳನ್ನೂ ಅಗಲವಾಗಿ ತೆಗೆದು ಬಾಯಿಯ ಮತ್ತು ನಾಲಗೆಯ ಹುಣ್ಣುಗಳನ್ನು ಗಮನಿಸುತ್ತಿದ್ದ.

ವಸಡು ನಾಲಗೆ ಮುಸುಡಿಯ ಮೇಲೆಲ್ಲಾ ಅಲ್ಸರ್ ಬೊಬ್ಬೆಗಳೆದ್ದು ಈರುಳ್ಳಿ ಪೊರೆ ತೆಗೆದಂತೆ ಅಲ್ಸರ್ ಪೊರೆಯುದುರಿದ ಜಾಗಗಳೆಲ್ಲಾ ಕೆಂಪಗೆ ಕಾಣಿಸುತ್ತಿದ್ದವು. ಚಿಕ್ಕ ಮಕ್ಕಳಾಗಿದ್ದ ನಾವು, ನಮ್ಮ ಹಸುವಿಗೆ ಒದಗಿದ ಪಾಡನ್ನು ಕಂಡು ಮನೆ ತುಂಬಾ ಅಳುತ್ತಿದ್ದೆವು. ನಾವು ಎಷ್ಟೇ ಪ್ರಯತ್ನಸಿದರೂ ಆ ಹಸು ಮೇವು ತಿನ್ನಲು ನೀರು ಕುಡಿಯಲು ನಿರಾಕರಿಸುತ್ತಿತ್ತು. ಪಾದಗಳ ಗೊರಸಿನ ಸೀಳುಗಳಲ್ಲಿಯೂ ಹುಣ್ಣುಗಳಾಗಿ ನೊಣ ಸೊಳ್ಳೆ ಜೀರುಂಡೆಗಳು ಕುಳಿತು ಹುಣ್ಣುಗಳು ದೊಡ್ಡ ವ್ರಣಗಳಾಗಿ ಹುಳುಗಳು ಬೀಳುತ್ತಿದ್ದವು. ಕೆಲವೊಮ್ಮೆ ಮೊಲೆತೊಟ್ಟು ಮತ್ತು ಕೆಚ್ಚಲಿಗೂ ಗುಳ್ಳೆಗಳು ಹಬ್ಬುತ್ತಿದ್ದವು.

ಅಪ್ಪನು ಬೆಟ್ಟ ಗುಡ್ಡ ಬಯಲು ಅಲೆದಾಡಿ ಲೋಳೆಸರ (ಆಲೋವೆರಾ) ತಂದು ಬೆಂಬೂದಿಯಲ್ಲಿ ಸುಟ್ಟು, ಹಿಂಡಿ ತೆಗೆದ ರಸವನ್ನು ದನಗಳ ಬಾಯಿ ನಾಲಗೆ ವಸಡು ಗೊರಸುಗಳ ಮೇಲೆ ಸವರಿ ಬಿಳಿ ಪಾವುಡದಲ್ಲಿ ಒರೆಸುತ್ತಿದ್ದ. ಗೊರಸಿನ ಗಾಯಗಳನ್ನು ಬಿಸಿನೀರಿನಲ್ಲಿ ತೊಳೆದು, ಸೀಳುಗಳಿಗೆ ಹೊಂಗೆಣ್ಣೆ, ಹಿಪ್ಪೆ ಎಣ್ಣೆ ಅಥವಾ ಬೇವಿನೆಣ್ಣೆ ಸುರಿಯುತ್ತಿದ್ದೆವು ಕೋಳಿಪುಕ್ಕ ಅಥವಾ ಗರಿಕೆ ಎಸಳನ್ನು ಬೇವಿನೆಣ್ಣೆಯಲ್ಲಿ ಅದ್ದಿ ಸೀಳುಸೀಳಿಗೂ ಹಚ್ಚಿದರೆ ನೊಣ ಕೂರುತ್ತಿರಲಿಲ್ಲ.

ಗುಡಾಣದಲ್ಲಿ ಬಿಸಿನೀರು ಕಾಯಿಸಿ ಮೈತೊಳೆಯುತ್ತಿದ್ದೆವು. ಬಲು ಎಚ್ಚರದಿಂದ ದನದ ಕೊಟ್ಟಿಗೆಯಲ್ಲಿ ತೆಂಗಿನ ಗರಿಗಳಿಗೆ ಬೆಂಕಿ ಹಚ್ಚಿ ಧಗಧಗಿಸುವ ಜ್ವಾಲೆಯ ಮೇಲೆ ಬೇವಿನಸೊಪ್ಪು ಲಕಲಿಸೊಪ್ಪು ತಂಗಡಿಸೊಪ್ಪು ಕಕ್ಕೆಸೊಪ್ಪು ಮುಂತಾದ ನಾಲ್ಕಾರು ಬಗೆಯ ಹಸಿರು ತೊಪ್ಪಲು ಹಾಕಿ ಉರಿಸಿ ಹೊಗೆ ತುಂಬಿಸಿ, ಹಸಿರೆಲೆ ಹೊಗೆಯ ಕಾವಿನಲ್ಲಿ ದನಗಳನ್ನು ನಿಲ್ಲಿಸುತ್ತಿದ್ದೆವು.

ಗೆರಸಲು ರೋಗದಿಂದ ನಮ್ಮ ಹಸುಗಳು ನರಳುವಾಗ ಅಮ್ಮನು ಮೂರ್ನಾಲ್ಕು ಸೇರಿನಷ್ಟು ಹುರುಳಿಕಾಳನ್ನು ನೀರಿನಲ್ಲಿ ನೆನೆಸಿ, ರುಬ್ಬು ಗುಂಡಿನಿಂದ ರುಬ್ಬಿ ಹುರುಳಿಕಾಳಿನ ಹಾಲನ್ನು ಸೋಸಿಕೊಡುತ್ತಿದ್ದಳು. ಕೆಲವೊಮ್ಮೆ ರಾಗಿ ಅಂಬಲಿಯನ್ನು ಕಾಯಿಸಿ ತಂದುಕೊಡುತ್ತಿದ್ದಳು. ಅಪ್ಪ ಅದೆಲ್ಲವನ್ನೂ ಬಿದಿರಿನ ಗೊಟ್ಟದಿಂದ ದನಗಳಿಗೆ ಕುಡಿಸುತ್ತಿದ್ದ. ಸ್ವಲ್ಪ ಚೇತರಿಕೆ ಕಾಣಿಸಿದಾಗ ಹಸಿ ಹುಲ್ಲು, ಹುರುಳಿ ಹೊಟ್ಟು, ತೊಗರಿ ಹೊಟ್ಟು, ಅವರೆ ಹೊಟ್ಟು, ಸಾವೆ ಹುಲ್ಲು, ಆರಕದ ಹುಲ್ಲು, ಕೊರಲೆ ಹುಲ್ಲು ಮುಂತಾದ ಮೆತ್ತನೆ ಮೇವನ್ನು ತಿನ್ನಿಸುತ್ತಿದ್ದ.

ನಾನು ನನ್ನ ಅಕ್ಕ ಮತ್ತು ತಮ್ಮಂದಿರು ಹಸಿ ಹುಲ್ಲನ್ನು ಹೊಲಮಾಳದಲ್ಲಿ ಕಿತ್ತು ತರುತ್ತಿದ್ದೆವು. ಅಂತೂ ಇಂತೂ ನಾಟಿಮದ್ದು, ಇಂಗ್ಲೀಷ್ ಮದ್ದು, ದೇಶಿಜ್ಞಾನದ ಚಿಕಿತ್ಸೆ, ಮೆತ್ತನೆಯ ಮೇವು ಮುಂತಾದ ಆರೈಕೆಗಳು ಫಲಿಸಿ ನಮ್ಮ ದನಗಳು ಮತ್ತೆ ಹೊಸ ಜೀವಕಳೆ ತುಂಬಿಕೊಳ್ಳುತ್ತಿದ್ದವು.ನಮ್ಮ ಮುಖದಲ್ಲೂ ನಗು ತರಿಸಿ ಬದುಕಿಗೆ ಕಳೆ ತುಂಬುತ್ತಿದ್ದವು.

ಇಲ್ಲಿ ನನ್ನದೇ ಅನುಭವಗಳನ್ನು ದಾಖಲಿಸಲು ನನಗೆ ಪ್ರೇರಣೆ ನೀಡಿದ್ದು ನಾನು ಇತ್ತೀಚೆಗೆ ಸಂಶೋಧಿಸಿದ ಒಂದು ಜಾನಪದ ಸ್ಥಳಪುರಾಣ.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ದೇವರತೋಪು ಎಂಬ ಗ್ರಾಮದಲ್ಲಿರುವ ಕರುವುಗಲ್ಲಮ್ಮ ಎಂಬ ಗೋಕಲ್ಲನ್ನು ಕುರಿತ ಈ ಸ್ಥಳಪುರಾಣವು ಹದಿಮೂರು ಶತಮಾನಗಳಷ್ಟು ಹಿಂದಕ್ಕೆ ಸರಿಯುತ್ತದೆ. ಜಯಮಂಗಲಿ ನದಿಯ ತಟದಲ್ಲಿರುವ ದೇವರತೋಪು ಗ್ರಾಮದ ಪುರಾತನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಅಂಗಳದಲ್ಲಿರುವ ಕರುವುಗಲ್ಲು ಆ ಊರಿನ ಹುಟ್ಟಿನ ಕಥೆಯನ್ನು ಹೇಳುತ್ತದೆ.

ಸೀಮಾಂಧ್ರದ ರಾಯಲಸೀಮಾ ಕರ್ನೂಲು ಜಿಲ್ಲೆಯ ಆಹೋಬಲಂ ಮೂಲದ ವೈಷ್ಣವ ಪಂಥೀಯ ಕಾಪುರೆಡ್ಡಿ ಸಮುದಾಯದ ಕೆಲವು ಕುಟುಂಬಗಳು ಆರು ಎತ್ತಿನ ಬಂಡಿಗಳನ್ನು ಕಟ್ಟಿಕೊಂಡು ದಕ್ಷಿಣ ಮಾರ್ಗವಾಗಿ ಮಧುಗಿರಿ ಸೀಮೆಗೆ ವಲಸೆ ಬಂದರು. ಕಡಪ – ಕದಿರಿ ಮಾರ್ಗವಾಗಿ ಪಿನಾಕಿನಿ ನದಿಯ ತೋಳುಗಳನ್ನಿಡಿದು ತಮ್ಮ ವಲಸೆ ದಾರಿಯನ್ನು ಮುಂದುವರೆಸಿ ನಡೆಯುತ್ತಿರುವಾಗ ಪಿನಾಕಿನಿಯು ಮೈದುಂಬಿದಳು.

ಕುಲದೇವತೆಯಾದ ಆಹೋಬಲ ನರಸಿಂಹಸ್ವಾಮಿಯ ಹೆಸರೆತ್ತಿ ಪೂಜಿಸಿದ ಅವರು, ಪಿನಾಕಿನಿಯನ್ನು ಪ್ರಾರ್ಥಿಸಲು ಮೈದುಂಬಿ ಹರಿಯುತ್ತಿದ್ದ ಅವಳು ಬಂಡಿಜಾಡಿನಷ್ಟು ಓಣಿಯನ್ನು ಬಿಟ್ಟು ಹರಿದಳು. ಬಂಡಿಗಳು ಸಾಗಲು ಬಂಡಿಜಾಡಿನಷ್ಟು ಅಗಲ ಅವಕಾಶ ನೀಡಿದ ಪಿನಾಕಿನಿಗೆ ಕೈಮುಗಿದು ಪ್ರಯಾಣ ಮುಂದುವರೆಸಿದ ಕಾಪುರೆಡ್ಡಿಗಳು ದೊಡ್ಡದಾಳವಟ್ಟ ಎಂಬ ಊರಿನ ಸಮೀಪಕ್ಕೆ ಬಂದು ತಲುಪಿದಾಗ ಸಂಜೆಯಾಗಿತ್ತು.

ಬಂಡಿಗೆ ಹೂಡಿದ್ದ ಬಿಳಿ ಎತ್ತೊಂದು ಸತ್ತ ಕಾರಣ ಬಿಳಿ ಎತ್ತುಗಳ ಬಂಡಿಗಳಲ್ಲಿದ್ದ ಕುಟುಂಬದವರೆಲ್ಲರೂ ಅಲ್ಲಿಯೇ ಹಳ್ಳದ ದಿಡ್ಡೆಯಲ್ಲಿ ನೆಲೆಸಬೇಕೆಂದು ಹಾಗೂ ಕರಿ ಎತ್ತಿನ ಬಂಡಿಗಳ ಕುಟುಂಬಗಳು ತಮ್ಮ ಪ್ರಯಾಣವನ್ನು ಮುಂದಕ್ಕೆ ಬೆಳೆಸಬೇಕೆಂದು ತೀರ್ಮಾನಿಸಲಾಯಿತು. ಬಿಳಿ ಎತ್ತಿನ ಬಂಡಿಯ ಕುಟುಂಬಗಳು ಅಲ್ಲಿಯೇ ನೆಲೆಸಿ ತಮ್ಮ ಕುಲದೇವತೆ ನರಸಿಂಹಸ್ವಾಮಿಯ ಗುಡಿಯನ್ನು ಕಟ್ಟಿಕೊಂಡರು.

ಕರಿ ಎತ್ತಿನ ಬಂಡಿಯಲ್ಲಿದ್ದ ಕಾಪುರೆಡ್ಡಿ ಕುಟುಂಬದವರು ಕೊಡಿಗೇನಹಳ್ಳಿ ಹತ್ತಿರದ ತೋಪಿಗೆ ಬಂದಾಗ ಜಯಮಂಗಲಿಯು ಮೈದುಂಬಿ ಹರಿಯುತ್ತಿದ್ದಳು. ಆ ರಾತ್ರಿ ಅಲ್ಲಿಯೇ ಒಲೆಗುಂಡು ಹೂಡಿ ಅಟ್ಟುಂಡು ಬೆಳಗಾದಾಗ ಪ್ರಯಾಣ ಮುಂದುವರಿಸಲೆಂದು ಬಂಡಿಹೂಡಲು ಹೋದಾಗ ಕರಿ ಎತ್ತೊಂದು ತಾನು ಕಳೆದುಕೊಂಡ ಬಿಳಿ ಎತ್ತನ್ನು ನೆನೆದು ದುಃಖಿಸುತ್ತಾ ಮೇವು ನೀರು ಸೇವಿಸುವುದನ್ನು ನಿರಾಕರಿಸಿತು.

ಜ್ವರ ಬಂದು ಬಂಡಿಯ ನೊಗಕ್ಕೆ ಹೆಗಲು ಕೊಡಲೊಪ್ಪದೆ ಪಡಾವು ಮಲಗಿಬಿಟ್ಟಿತು. ಆಗ ಬಿಳಿ ಎತ್ತಿನ ನೆನಪಿಗಾಗಿ ಬೆಣಚುಕಲ್ಲಿನ ಬಿಳಿ ಗೋಕಲ್ಲನ್ನು ತಂದು ನಿಲ್ಲಿಸಲು ದುಃಖ ಮರೆತ ಆ ಎತ್ತು ಲವಲವಿಕೆಯಿಂದ ಮೇವುಕಚ್ಚಿ ನೊಮರು ಹಾಕಿತು. ಮೈದುಂಬಿ ಹರಿಯುತ್ತಿದ್ದ ಜಯಮಂಗಲಿ ನದಿಯ ದಂಡೆಯಲ್ಲಿ ತಮ್ಮ ಕುಲದೇವತೆಯಾದ ಲಕ್ಷ್ಮೀನರಸಿಂಹಸ್ವಾಮಿಯ ಹೆಸರೆತ್ತಿ ಪೂಜಿಸಿ ಅವನಿಗೊಂದು ಗುಡಿಯನ್ನು ಕಟ್ಟಿ ಅಲ್ಲಿಯೇ ನೆಲೆಸಿದರು.

ಮುಂದೆ ಕರಿ ಎತ್ತು ತೀರಿಕೊಂಡಾಗ ಅದನ್ನು ಅಲ್ಲಿಯೇ ಸಮಾಧಿ ಮಾಡಿದರು. ಅಂದು ಸಮಾಧಿಗುಡ್ಡೆಯ ಗುರುತಿಗೆ ನೆಟ್ಟ ಗೋಕಲ್ಲು ಅಂದಿನಿಂದಲೂ ಕರುವುಗಲ್ಲಮ್ಮ ಎಂಬ ಹೆಸರಿನಲ್ಲಿ ಪೂಜಿಸಲ್ಪಡುತ್ತಿದೆ. ಇಲ್ಲಿನ ಸುತ್ತೇಳು ಊರುಗಳ ರೈತಾಪಿಗಳು ತಮ್ಮ ಜಾನುವಾರುಗಳಿಗೆ ಶ್ರೇಯಸ್ಕರವಾಗಲೆಂದು ಹಾಗೂ ಜಾನುವಾರುಗಳಿಗೆ ರೋಗರುಜಿನಗಳು ಬಂದಾಗ ಈ ಗೋಕಲ್ಲಿಗೆ ಹರಕೆ ಹೊತ್ತು ಪೂಜಿಸುತ್ತಿದ್ದಾರೆ. ಕರಿ ಗೋಕಲ್ಲಿನ ಪಕ್ಕದಲ್ಲಿಯೇ ಬಿಳಿ ಗೋಕಲ್ಲು ಕೂಡಾ ಇದೆ. ಇದು ಸ್ಥಳಪುರಾಣ.

ದಕ್ಷಿಣ ಕರ್ನಾಟಕದ ಬಹುತೇಕ ಊರುಗಳಲ್ಲಿ ಕರುವುಗಲ್ಲಮ್ಮ ಹೆಸರಿನಿಂದ ಪೂಜಿಸುವ ಗೋಕಲ್ಲುಗಳಿವೆ. ಜಾನುವಾರುಗಳಿಗೆ ಗೆರಸು ರೋಗ (ಕಾಲು – ಬಾಯಿ ಜ್ವರ) ಬಂದಾಗ, ಪ್ರತಿ ಕುಟುಂಬದ ರೈತರು ಕರುವುಗಲ್ಲಮ್ಮನ ಮೇಲೆ ಕೊಡಗಟ್ಟಲೆ ನೀರು ಸುರಿದು ಪೂಜಿಸುತ್ತಾರೆ. ನೀರು ಹರಿದ ದಾರಿಗುಂಟ ಬುರುದೆಯಲ್ಲಿ ತಮ್ಮ ಜಾನುವಾರುಗಳನ್ನು ಮೂರು ಸುತ್ತು ಓಡಾಡಿಸುತ್ತಾರೆ.

ಆಶ್ಚರ್ಯವೆಂಬಂತೆ ಗೊರಸಿನ ಸಂದಿಯಲ್ಲಿ ಹುಣ್ಣುಗಳಾಗಿ ಹುಳು ತುಂಬಿದ ಗೋಪಾದಗಳು ಬುರುದೆ ತುಂಬಿಕೊಂಡು ಹುಳು-ಹುಣ್ಣು ನೀಗಿಕೊಂಡು ಗೆಲುವಾಗುತ್ತಿದ್ದವು. ಮುಸುಡಿಮೂತಿ ನಾಲಗೆಯ ಹುಣ್ಣುಗಳೂ ವಾಸಿಯಾಗಿ ಮೇವು ತಿಂದು ಲವಲವಿಕೆಯಿಂದ ನೊಮರು ಹಾಕುತ್ತಿದ್ದವು. ಪಶು ಸಂಗೋಪನೆ ಇಲಾಖೆಯ ‘ದನಿನ ಡಾಕ್ಟರ್’ ದೇವತೆಗಳಿಗೂ ಸ್ಥಳೀಯ ನಾಟಿಔಷಧಿ ಪಂಡಿತ ದೇವತೆಗಳಿಗೂ ನಮಸ್ಕಾರ. ಈಗಿನ ಖಾಯಿಲೆ ಮತ್ತು ದೇವರ ಸ್ವರೂಪ ಬೇರೆ ಬೇರೆಯೇ ಆಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹಿರಿಯ ನಾಗರಿಕರಿಗಿರುವ ಸರ್ಕಾರಿ ಸೌಲಭ್ಯಗಳೇನು..? ; ಮಾಹಿತಿಗೆ ಸಂಪರ್ಕಿಸಿ

Published

on

ಸುದ್ದಿದಿನ,ದಾವಣಗೆರೆ:ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ವತಿಯಿಂದ ಹಾಗೂ ಇತರೆ ಇಲಾಖೆಗಳಿಂದ ಹಿರಿಯ ನಾಗರಿಕರಿಗೆ ದೊರೆಯುತ್ತಿರುವ ಸೌಲಭ್ಯಗಳ ಅರಿವು ಮೂಡಿಸುವ ಮತ್ತು ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುವ ಉದ್ದೇಶದಿಂದ ತಾಲ್ಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ಹಿರಿಯ ನಾಗರಿಕರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಬಹುದು.

ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ವಿವರ:ಹೊನ್ನಾಳಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಶೈಲಜಾ ಕೆ.ಎಂ. ಮೊ.ಸಂ: 9482158005, ಚನ್ನಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಕೆ ಸುಬ್ರಮಣ್ಯಂ ಮೊ.ಸಂ: 9945738141, ಜಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಎಂ ಕೆ ಶಿವನಗೌಡ ಮೊ.ಸಂ: 9902105734 ಹರಿಹರ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಶಶಿಕಲಾ ಟಿ. ಮೊ.ಸಂ: 9945458058, ದಾವಣಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಚನ್ನಪ್ಪ. ಬಿ ಮೊ.ಸಂ: 9590829024 ಸಂಪರ್ಕಿಸಬೇಕೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ|| ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇವರೇ ನೋಡಿ ಟ್ವೀಟ್ಟರ್, ಪೇಸ್ಬುಕ್ ಮೀಮ್ಸ್ ಸ್ಟಾರ್ ಕ್ಸೇವಿಯರ್ ಉರ್ಫ್ ಓಂಪ್ರಕಾಶ್

Published

on

  • ~ ಸಿದ್ದು ಸತ್ಯಣ್ಣನವರ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದವರಿಗೆ ನೋಡಿದ ಕೂಡಲೇ ನಗು ಉಕ್ಕಿಸಿ, ಉಲ್ಲಸಿತಗೊಳಿಸುವ ಕ್ಸೇವಿಯರ್ ಮೀಮ್ಸ್ ಗಳ ಪರಿಚಯ ಇದ್ದೇ ಇರುತ್ತದೆ. ಕ್ಸೇವಿಯರ್ ಎಂದರೆ ಯಾರು? ಎಂದು ಹೆಸರೇಳಿದರೆ ಗೊತ್ತಾಗದಿರುವವರು ಅವರ ಫೋಟೊ ನೋಡಿದರೆ ಕೂಡಲೇ ಮುಖದ ಮೇಲೆ ನಗು ಮೂಡಿರುತ್ತದೆ.

ತುಂಟ ಕಾಮೆಂಟ್ ಹಾಗೂ ಹಾಸ್ಯದ ತಿರುಳುಗಳ ಪೋಸ್ಟ್ ಮೂಲಕ ಗಮನ ಸೆಳೆಯುವ‌ ಕ್ಸೇವಿಯರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಸ್ಯಪ್ರಜ್ಞೆಯಿಂದ ಸಾಕಷ್ಟು ಪ್ರಸಿದ್ಧ. ಕ್ಸೇವಿಯರ್ ಹೆಸರಿನಿಂದ ಜನಪ್ರಿಯರಾದ ಇವರ ನಿಜವಾದ ಹೆಸರು ಓಂಪ್ರಕಾಶ್. ಅಸಂಖ್ಯ ಟ್ವೀಟರ್, ಫೇಸ್ಬುಕ್ ಪ್ರೋಫೈಲ್ ಗಳಲ್ಲಿ ಓಂಪ್ರಕಾಶ್ ಅವರ ಫೋಟೊ ಕ್ಸೇವಿಯರ್ ಎಂದೇ ಹಂಚಲ್ಪಟ್ಟಿದೆ.

ಮೀಮ್ಸ್ ಸ್ಟಾರ್ ಎಂದೇ ಪ್ರಖ್ಯಾತರಾಗಿರುವ ಇವರು ಮಧ್ಯವಯಸ್ಕ ಭಾರತೀಯರು ಹೆಚ್ಚಾಗಿ ಇಷ್ಟಪಡುವ ದಪ್ಪಮೀಸೆಯ ಫೋಟೊ ಹೊಂದಿರುವ ಪ್ರೋಫೈಲ್ ಮೂಲಕ ಟ್ವೀಟ್ಟರ್ ಮತ್ತು ಫೇಸ್ಬುಕ್ಕಿನ ಸಾಕಷ್ಟು ಟ್ರೋಲ್, ಮೀಮ್ ಪೇಜುಗಳಲ್ಲಿ ಕಾಣಸಿಗುತ್ತಾರೆ. ಕ್ಸೇವಿಯರ್ ಅಂಕಲ್, ಕ್ಸೇವಿಯರ್ ಮೀಮ್ಸ್, ಕ್ಸೇವಿಯರ್ ಪಾಂಡಾ, ಕ್ಸೇವಿಯರ್ ಮಿಮ್ ಬಾಯ್ ಹೀಗೆ ಇವರ ಹೆಸರಿನ ಮೂಲಕ ಸಾವಿರಾರು ಮೀಮ್ಸ್ ಮೇಕಿಂಗ್ ಪ್ರೋಫೈಲ್ ಗಳು ಲಕ್ಷಾಂತರ ಹಿಂಬಾಲಕರನ್ನು ಹೊಂದಿವೆ. ಮೀಮ್ಸ್ ಗಾಗಿಯೇ ವಿನ್ಯಾಸಗೊಳಿಸಲಾಗಿರುವ, ವಿದೇಶಗಳಲ್ಲೂ ಕೋಟ್ಯಂತರ ಜನರು ಹಿಂಬಾಲಿಸುವ 9gag ಎಂಬ ವೆಬ್ಸೈಟಿನಲ್ಲಿ ಇವರ ಸಾಕಷ್ಟು ಮೀಮ್ಸ್ ಗಳು ಜನಪ್ರಿಯವಾಗಿವೆ. ಫೇಸ್ಬುಕ್, ಟ್ವಿಟ್ಟರ್ ಬಳಸುವವರಿಗೆ ಕ್ಸೇವಿಯರ್ ಹಾಸ್ಯಪ್ರಜ್ಞೆ ಎಂಥದ್ದು ಎಂಬುದನ್ನ ಕೇಳಿದರೆ ನಗುವೇ ಅವರ ಉತ್ತರವಾಗಿರುತ್ತದೆ ಎಂಬುದಕ್ಕೆ ಸಹ ಚೆಂದದ ಮೀಮ್ ಒಂದಿದೆ.

ಕಾನ್ಪುರ ಐಐಟಿ ಸಿಬ್ಬಂದಿಯಾದ ಓಂಪ್ರಕಾಶ್ ಅವರು ಅಲ್ಲಿನ ಭೌತಶಾಸ್ತ್ರ ವಿಭಾಗದ ತಾಂತ್ರಿಕ ಮೇಲ್ವಿಚಾರಕ ಹುದ್ದೆಯಲ್ಲಿದ್ದಾರೆ. ಕ್ಸೇವಿಯರ್ ಎಂದು ಅವರು ಪ್ರಸಿದ್ಧರಾಗಲು ಕಾರಣ ಅವರ ಅಪರಿಮಿತ ಹಾಸ್ಯಪ್ರಜ್ಞೆಯ ‘ಪಕಾಲು ಪಾಪಿಟೋ’ ಎಂಬ ಕಾಲ್ಪನಿಕ ಗುಮಾಸ್ತನ ಪಾತ್ರವನ್ನು ಸೃಷ್ಟಿಸಿದ್ದಕ್ಕಾಗಿ. ಆ ಗುಮಾಸ್ತನ ಮೊದಲ ಟ್ವೀಟ್ ಟ್ವೀಟ್ಟರಿನಲ್ಲಿ ಹೆಚ್ಚುಕಡಿಮೆ 18 ಸಾವಿರ ರೀಟ್ವೀಟ್ ಆಗಿತ್ತು.

ಟ್ವೀಟ್ಟರ್ ನಿಯಮಗಳ ತಾಂತ್ರಿಕ ಕಾರಣಗಳಿಂದ ಸುಮಾರು ಲಕ್ಷ ಹಿಂಬಾಲಕರಿದ್ದ ಈ ಅಕೌಂಟ್ ಸ್ಥಗಿತಗೊಂಡಿತು. ನಂತರ ಕಾಮಿಕ್ ಮೀಮ್ ಗಳಿಂದ ಆರಂಭದಲ್ಲಿ ಪ್ರಸಿದ್ಧರಾಗಿದ್ದ ಓಂಪ್ರಕಾಶ್ ಅವರು ಕೊನೆಗೆ ಕ್ಸೇವಿಯರ್ ಹೆಸರಿನ ಮೂಲಕ ಮೀಮ್ ಪ್ರಿಯರಿಗೆ ಮನೆಮಾತಾದರು. ಓಂಪ್ರಕಾಶ್ ಅವರು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕ್ರಮವಾಗಿ 1.4 ಮಿಲಿಯನ್ ಹಾಗೂ 3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ‘ಪಕಾಲು ಪಾಪಿಟೋ’ ಅಕೌಂಟ್ ತಾಂತ್ರಿಕವಾಗಿ ಸ್ಥಗಿತಗೊಂಡ ಕಾರಣ ಕ್ಸೇವಿಯರ್ ಎಂಬ ಹೆಸರಿನ ತಮಾಷೆಯ ಮೀಮ್ಸ್ ಮೂಲಕ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟ್ಟರ್ ಎಲ್ಲ ಕಡೆಗಳಲ್ಲಿ ಕಾಣಿಸುತ್ತಾರೆ. ( ಸಿದ್ದು ಸತ್ಯಣ್ಣನವರ್ ಅವರ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending