ರಾಜಕೀಯ
ಕೇಜ್ರಿವಾಲ್ ಮತ್ತು ದೆಹಲಿ ಗಲಭೆ
- ವಿ.ನಟರಾಜ್
ದೆಹಲಿಯ ಮತೀಯ ಗಲಭೆಗಳ ನಿರ್ವಹಣೆಯ ವಿಚಾರದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಅಸಹಾಯಕತೆಯನ್ನು ಪ್ರದರ್ಶಿಸಿರುವ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಬಗ್ಗೆ ಬಹುತೇಕ ಗೆಳೆಯರು ಧಿಡೀರನೆ ಭ್ರಮನಿರಸನಗೊಂಡಿದ್ದಾರೆ.
ಮತೀಯ ಗಲಭೆ ವಿಚಾರದಲ್ಲಿ ಮೋದಿ-ಶಾ ಜೋಡಿಯ ‘ಎಂದಿನ ಸಂವೇದನಾಶೂನ್ಯತೆ’ಯನ್ನು, ಅದರಲ್ಲಿಯೂ ವಿಶೇಷವಾಗಿ ಕಾಶ್ಮೀರದ ವಿಚಾರದಲ್ಲಿ ತಾನು ಭಲೇ ಭಲೇ ಉಕ್ಕಿನ ಮನುಷ್ಯ ಎಂದು ಸಾಬೀತು ಪಡಿಸಿರುವುದಾಗಿ ತೊಡೆ ತಟ್ಟುತ್ತಿದ್ದ ಗೃಹ ಸಚಿವ ಅಮಿತ್ ಶಾ, ದೆಹಲಿ ಗಲಭೆಯ ವಿಚಾರದಲ್ಲಿ ಬೇಕೆಂದೇ ಬೆನ್ನುಮೂಳೆ ಕಳೆದುಕೊಂಡ ಬಗ್ಗೆ ಹೆಚ್ಚಿನ ತಕರಾರು ಪ್ರಗತಿಪರರಿಗೂ ಇದ್ದಂತಿಲ್ಲ.
ಯಾಕೆಂದರೆ, ಇಂಥದ್ದನ್ನೆಲ್ಲಾ ಈ ಜೋಡಿಯ ಆಡಳಿತ ಕಾಲದಲ್ಲಿ ನೋಡಲು ಬಹುಶಃ ಎಲ್ಲ ಪ್ರಗತಿಪರರೂ ಮಾನಸಿಕವಾಗಿ ಸಿದ್ಧರಾಗಿದ್ದಂತಿದೆ. ಆದರೆ, ಕೇಜ್ರಿವಾಲ್ ಕೂಡಾ ಇಷ್ಟು ಬೇಗನೇ ಮತೀಯಗಲಭೆಗಳಂತಹ ಗಂಭೀರ ವಿಷಯದಲ್ಲಿ ಶುದ್ಧಾತಿಶುದ್ಧ ರಾಜಕಾರಣಿಯಾಗಿ ಹೊರಹೊಮ್ಮುತ್ತಾರೆ, ಆಪ್ ನ ದೆಹಲಿ ರಾಜಕಾರಣಿಗಳು ರಂಗೋಲಿ ಕೆಳಗೆ ತೂರುವಂತಹ ಮಾತುಗಳನ್ನು ಆಡತೊಡಗುತ್ತಾರೆ ಎನ್ನುವುದನ್ನು ಬಹುತೇಕ ಗೆಳೆಯರು ನಿರೀಕ್ಷಿಸಿರಲಿಲ್ಲ.
ಇದೀಗ ದೇಶದ್ರೋಹ ಪ್ರಕರಣದಲ್ಲಿ ಜೆಎನ್ಯು ಮಾಜಿ ಮುಖಂಡ ಕನ್ಹಯ್ಯ ಕುಮಾರ್ ಹಾಗೂ ಸಂಗಡಿಗರ ವಿರುದ್ಧ ದೇಶದ್ರೋಹದ ಪ್ರಕರಣದ ವಿಚಾರಣೆಗೆ ದೆಹಲಿ ಸರ್ಕಾರ ಅನುಮತಿ ನೀಡಿರುವುದು ಸಹ ಅನೇಕರಿಗೆ ಅಚ್ಚರಿ ಉಂಟುಮಾಡಿದೆ. ದೆಹಲಿ ಗಲಭೆಯ ವಿಚಾರದಲ್ಲಿ ಆಪ್ ನ ಧೋರಣೆಯನ್ನು ಖಂಡಿಸಿದ್ದ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಪರೋಕ್ಷವಾಗಿ ಕೇಜ್ರಿ ಸರ್ಕಾರ ಚಾಟಿ ಬೀಸಿದೆಯೇ ಎನ್ನುವ ಅನುಮಾನ ಮೇಲುನೋಟಕ್ಕೇ ಗೋಚರಿಸುತ್ತಿದೆ.
ದೆಹಲಿ ಮತೀಯ ಗಲಭೆಗಳ ಮೊದಲ ಮೂರು ದಿನ ಆಪ್ ವರ್ತಿಸಿದ ರೀತಿ ಹೇಗಿತ್ತೆಂದರೆ, ಇಂತಹದ್ದೊಂದು ಗಲಭೆ ಸಂಭವಿಸಿದರೆ ಮಾತ್ರ ದೆಹಲಿ ಸರ್ಕಾರದ ಕೆಳಗೆ ಪೊಲೀಸ್ ಇಲಾಖೆ ಹಾಗೂ ಆ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆ ಬರಬೇಕು ಎನ್ನುವ ತನ್ನ ವಾದಕ್ಕೆ ಬಲ ಬರುತ್ತದೆ ಎನ್ನುವಂತಿತ್ತು. ಕೇಜ್ರಿವಾಲ್ ಅವರಂತೂ ‘ಹೆಚ್ಚುವರಿ’ ಅಸಹಾಯಕತೆಯನ್ನೇ ತಮ್ಮ ಮೇಲೆ ಆವಾಹಿಸಿಕೊಂಡವರಂತೆ ‘ಪೊಲೀಸ್ ಇಲಾಖೆ ನಮ್ಮ ಬಳಿ ಇಲ್ಲ’, ಎನ್ನುವುದನ್ನು ಸಾರಿ ಸಾರಿ ಹೇಳುವಂತೆ ಪ್ರತಿಕ್ರಿಯಿಸಿದರು.
ಇಂತಹದ್ದೊಂದು ‘ಚಾಲಾಕಿತನದ ರಾಜಕಾರಣ’ವನ್ನು ಕೇಜ್ರಿವಾಲ್ ಯಾವತ್ತಿದ್ದರೂ ಪ್ರದರ್ಶಿಸುತ್ತಾರೆ ಎನ್ನುವುದು ಅವರ ಹೋರಾಟಗಳನ್ನು ಹತ್ತಿರದಿಂದ ಗಮನಿಸಿದವರಿಗೆ ತಿಳಿಯದ ವಿಷಯವೇನಲ್ಲ. ಎಷ್ಟಾದರೂ ಕೇಜ್ರಿವಾಲ್ ಇಂದಿನ ಪೀಳಿಗೆ ಬಯಸುವ ಫಟಾಫಟ್ ಕಾರ್ಪೊರೆಟ್ ಮಾದರಿ ರಾಜಕಾರಣವನ್ನು ಅನುಸರಿಸುತ್ತಾ ಅಡಳಿತಾತ್ಮಕ ವಿಷಯಗಳ ಮೂಲಕ ಅಂಕಗಳಿಸುವ ರಾಜಕಾರಣಿಯೇ ಹೊರತು ಸೈದ್ಧಾಂತಿಕವಾಗಿ ಗಟ್ಟಿಯಾದ, ದಿಟ್ಟ ಹೆಜ್ಜೆಯನ್ನು ಇಡಬಹುದಾದ ರಾಜಕಾರಣಿ ಅಲ್ಲ.
ಈ ಬಗ್ಗೆ ತಕರಾರು ತೆಗೆಯ ಬಯಸುವವರ ವಾದಗಳಿಗೆ ಕೇಜ್ರಿವಾಲ್ ರ ಈವರೆಗಿನ ನಡೆಗಳಲ್ಲಿ ಹೆಚ್ಚಿನ ಸಾಕ್ಷ್ಯಗಳೂ ಸಿಗುವುದಿಲ್ಲ. ಕೇಜ್ರಿ ಹೀಗೇಕೆ ಎಂದು ಕಾರಣ ಹುಡುಕುತ್ತಾ ಹೊರಟವರಿಗೆ, ಇದೆಲ್ಲದರ ಬೀಜಗಳು ಇರುವುದು ಅವರನ್ನು ಅಧಿಕಾರ ರಾಜಕಾರಣದ ಕೇಂದ್ರಕ್ಕೆ ತಂದ “ಭ್ರಷ್ಟಾಚಾರದ ವಿರುದ್ಧ”ದ ಹೋರಾಟದಲ್ಲಿ ಎನ್ನುವುದನ್ನು ಇಲ್ಲಿ ಮತ್ತೊಮ್ಮೆ ನೆನಪಿಸಬೇಕಾಗುತ್ತದೆ.
ಭ್ರಷ್ಟಾಚಾರದ ವಿರುದ್ಧದ ಹೋರಾಟ ಎನ್ನುವ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ನಡೆದ ‘ದೆಹಲಿ ಕೇಂದ್ರಿತ’ ಹೋರಾಟವನ್ನು ಬಿಜೆಪಿ ಹೈಜಾಕ್ ಮಾಡದಂತೆ ಕೇಜ್ರಿವಾಲ್ ತಡೆದರು ಎನ್ನುವುದನ್ನು ಹೊರತುಪಡಿಸಿದರೆ, ಅವರು ಭ್ರಷ್ಟಾಚಾರದ ಹೋರಾಟವನ್ನು ಮತೀಯವಾದಿ ಮನಸ್ಸುಗಳನ್ನು ದೂರವಿಟ್ಟು ಕಟ್ಟಿದರು ಎಂದು ಯಾರೂ ಎದೆತಟ್ಟಿ ಹೇಳಲಾರರು.
ಒಂದೆಡೆ ಕಾಂಗ್ರೆಸ್ನ ಅಹಿಂದ ವೋಟ್ ಬ್ಯಾಂಕ್, ಮತ್ತೊಂದೆಡೆ ಬಿಜೆಪಿಯ ಮತೀಯವಾದಿ ರಾಜಕಾರಣ ಈ ಎರಡರಿಂದ ಸೈದ್ಧಾಂತಿಕವಾಗಿ ಸಮಾನಾಂತರವಾಗಿ ಇದ್ದುಕೊಂಡು ತಮ್ಮದೇ ಆದ ವೋಟ್ ಬ್ಯಾಂಕ್ ರೂಪಿಸಿಕೊಳ್ಳುವುದು ಸುದೀರ್ಘ ಅವಧಿಯನ್ನು, ಶ್ರಮವನ್ನು ಬೇಡುವಂತಹ ರಾಜಕಾರಣ ಎನ್ನುವುದನ್ನು ಅರಿತಿದ್ದ ಕೇಜ್ರಿವಾಲ್, ಫಟಾಫಟ್ ರಾಜಕಾರಣಕ್ಕೆ ಮೊರೆ ಹೋದರು.
ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸುಲಭಕ್ಕೆ ‘ವೋಟು ಕೀಳುವ’ ರಾಜಕಾರಣಕ್ಕೆ ತಮ್ಮನ್ನು ಮುಡಿಪಾಗಿಟ್ಟುಕೊಂಡರು. ಕೇಜ್ರಿವಾಲ್ ಭ್ರಷ್ಟಾಚಾರದ ವಿರುದ್ಧ ಮಾತನಾಡಿದಷ್ಟೇ ಉತ್ಸಾಹದಿಂದ ಸಾಮಾಜಿಕ ನ್ಯಾಯ, ಮತೀಯ ಸಾಮರಸ್ಯದಂತಹ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಈ ವಿಚಾರಗಳು ಬಂದಾಗ ಪ್ರಗತಿಪರರ ಮನಸ್ಸಿಗೆ ನೋವಾಗದಂತೆ ಎಚ್ಚರಿಕೆ ವಹಿಸುತ್ತಾರಾದರೂ, ಸ್ಥಳೀಯ ರಾಜಕಾರಣದಲ್ಲಿ ತಮ್ಮನ್ನು ಬೆಂಬಲಿಸುವ ಮೂಲತಃ ಬಿಜೆಪಿಯ ಮತದಾರರ ಆಕ್ರೋಶವನ್ನು ಕಟ್ಟಿಕೊಳ್ಳುವಷ್ಟು ದೂರಕ್ಕೆ ಅವರೆಂದೂ ಹೋಗುವುದಿಲ್ಲ. ಒಂದು ವೇಳೆ ಹೋದರೂ, ಅವಕಾಶ ನೋಡಿ ಚಕ್ಕನೆ ಹಿಂದಕ್ಕೆ ಪಲ್ಟಿ ಹೊಡೆದು ಬಿಡುತ್ತಾರೆ!
ಈ ವಿಷಯದಲ್ಲಿ ಅವರೊಬ್ಬ ಉತ್ತಮ ‘ಅಕ್ರೋಬ್ಯಾಟ್’. ಕೇಜ್ರಿವಾಲ್ ಅವರನ್ನು ಮುಂದೆ ಬಿಟ್ಟುಕೊಂಡ ಹಿಂದೆ ಓಡುವುದೆಂದರೆ ಅದೊಂದು ದುಸ್ಸಾಹಸವೇ ಸರಿ. ಕೇಜ್ರಿ, ಯಾವಾಗ ಛಕ್ಕನೆ ಲೇನ್ ಬದಲಿಸಿ ಹಿಂದಕ್ಕೆ ತಿರುಗಿ ಓಡಿಬಿಡುತ್ತಾರೋ ಹೇಳಲುಬಾರದು! ಹಾಗಾಗಿಯೇ, ಅವರ ಈ ವರಸೆಗಳನ್ನು ಕಂಡಾಗ, ಸದಾಕಾಲ ಅಧಿಕಾರದ ಕೇಂದ್ರದಲ್ಲಿರಲು ಅತ್ತಿಂದಿತ್ತ ಲಾಗ ಹಾಕುವ ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರ ಸುಧಾರಿತ ಆವೃತ್ತಿಯಂತೆ ಕೇಜ್ರಿ ಭಾಸವಾಗುತ್ತಾರೆ!
ಬಿಜೆಪಿಯನ್ನು ವಿರೋಧಿಸುವ ಕಟ್ಟರ್ ಕಾಂಗ್ರೆಸ್ಸಿಗರು ಹಾಗೂ ಸಮಾಜವಾದಿಗಳಿಗೆ, ಅದೇ ರೀತಿ, ಕಾಂಗ್ರೆಸ್ ಹಾಗೂ ಸಮಾಜವಾದಿಗಳನ್ನು ಕಂಡರೆ ಉರಿದುಬೀಳುವ ಉಗ್ರ ಹಿಂದುತ್ವವಾದಿಗಳಿಗೆ ಕೇಜ್ರಿವಾಲ್ ಒಂದು ತಂಗುದಾಣದಂತೆ. ಹೇಗಾದರೂ ಸರಿ ತಮ್ಮ ವೋಟು ಕಾಂಗ್ರೆಸ್ಸಿಗೆ ಹೋಗಬಾರದು ಎಂದು ಬಯಸುವವರು, ಎಷ್ಟಾದರೂ ಸರಿ, ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಇಚ್ಛಿಸುವವರು ಕೇಜ್ರಿವಾಲ್ ರ ಪರಿಣಾಮಕಾರಿ ಆಡಳಿತ ಶೈಲಿಗೆ ಜೈಕಾರ ಹಾಕಿ ಅವರಿಗೆ ಮತ ನೀಡುತ್ತಾರೆ. ಹೀಗೆ ತಮಗೆ ಯಾವುದೇ ಸೈದ್ಧಾಂತಿಕ ಬಲದ ಸಹಾಯವಿಲ್ಲದೆ ಹರಿದುಬರುವ ಮತಗಳಿಂದಾಗಿ, ಕೇಜ್ರಿಯವರು ಯಾವತ್ತೂ ಹ್ಯಾಪಿಯೇ!
ಸೈದ್ಧಾಂತಿಕವಾಗಿ ಪೊಳ್ಳಾದರೂ ಸಹ ಇದು ಅಧಿಕಾರದ ಪಡಸಾಲೆಯಲ್ಲಿ ಬಹುಕಾಲ ಉಳಿಯುವ ವಾಸ್ತವ ರಾಜಕಾರಣದ ತಂತ್ರ ಎನ್ನುವುದನ್ನು ಅವರ ಅರ್ಥ ಮಾಡಿಕೊಂಡು, ಜೀರ್ಣಿಸಿಕೊಂಡಿದ್ದಾರೆ. ಪಾಪ, ಇದಾವುದರ ಅರಿವಿಲ್ಲದೆ, ಕೇಜ್ರಿ ಅವರಲ್ಲಿ ನೆಹರು ಪ್ರಣೀತ ಅಭಿವೃದ್ಧಿ ಮಾದರಿಯನ್ನು, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನಿರೀಕ್ಷಿಸಲು ಹೊರಟವರು ಭ್ರಮನಿರಸನಕ್ಕೆ ಒಳಗಾಗುತ್ತಾರೆ…
ಇನ್ನು, ಈ ಭ್ರಷ್ಟಾಚಾರದ ವಿರುದ್ಧದ ಹೋರಾಟ ಎನ್ನುವ ಪರಿಕಲ್ಪನೆ ಇಂದು ಬಹುತೇಕವಾಗಿ ಅವಕಾಶವಾದಿ ರಾಜಕಾರಣದ ಸರಕಾಗಿಬಿಟ್ಟಿದೆ. ಇದು ಎಲ್ಲರನ್ನೂ ಒಳಗೊಳ್ಳುವ, ‘ರಾಜಕೀಯ ಚಲಾವಣೆ’ಯ ಹೋರಾಟ ಎನ್ನುವ ಕಾರಣಕ್ಕೆ ಸುಲಭಕ್ಕೆ ನಮ್ಮ ಅನೇಕ ಭರವಸೆಯ ನಾಯಕರು ಗೊತ್ತಿದ್ದೋ, ಗೊತ್ತಿಲ್ಲದೆಯೋ, ಉದ್ದೇಶಪೂರ್ವಕವಾಗಿಯೋ, ದುರುದ್ದೇಶಪೂರ್ವಕವಾಗಿಯೋ ಇದಕ್ಕೆ ಜೋತು ಬೀಳುತ್ತಾರೆ. ವಿಪರ್ಯಾಸವೆಂದರೆ, ಭ್ರಷ್ಟಾಚಾರವನ್ನು ಅಸಾಮರ್ಥ್ಯದೊಂದಿಗೂ, ಅಸಾಮರ್ಥ್ಯವನ್ನು ಮೀಸಲಾತಿಯೊಂದಿಗೂ, ಮೀಸಲಾತಿಯನ್ನು ಮೇಲ್ಜಾತಿ ವಿರೋಧಿ ರಾಜಕಾರಣದೊಂದಿಗೂ ಚಕಚಕನೆ ಜೋಡಿಸಿ ಬಿಡುವ ದುರಾಲೋಚನಾ ಪ್ರವಾಹವೊಂದನ್ನು ಈ ದೇಶದಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.
ಈ ಪ್ರವಾಹದ ಚಾಲಕಶಕ್ತಿಯಾಗಿರುವ ವರ್ಗವು ಯಾವುದೇ ಬಗೆಯ ಸಾಮಾಜಿಕ ಅಸಮಾನತೆಯ ಬಗ್ಗೆ ಅಪ್ಪಿತಪ್ಪಿಯೂ ಬಾಯಿಬಿಡುವುದಿಲ್ಲ, ಬದಲಿಗೆ, ಭ್ರಷ್ಟಾಚಾರದ ಬಗ್ಗೆ ಮಾತ್ರ ಉದ್ದುದ್ದ ಭಾಷಣ ಬಿಡುತ್ತದೆ. ನಿರುದ್ಯೋಗ, ಕುಸಿದಿರುವ ಆರ್ಥಿಕತೆ, ಹೆಚ್ಚುತ್ತಿರುವ ಸಾಮಾಜಿಕ ಉದ್ವಿಗ್ನತೆ, ಕಂದಾಚಾರ, ಮೌಢ್ಯಗಳ ವಿರುದ್ಧ ಇದಕ್ಕೆ ಪ್ರತಿಭಟಿಸುವ ಇರಾದೆ ಇರುವುದಿಲ್ಲ. ಮತೀಯವಾದದ ಬಗ್ಗೆಯಂತೂ ತುಟಿ ಬಿಚ್ಚುವುದೇ ಇಲ್ಲ. ಹೀಗಾಗಿಯೇ ಈ ಬಗೆಯ ಹೋರಾಟಗಳು ಬಹುತೇಕ ಬಾರಿ ಸಂವಿಧಾನ ವಿರೋಧಿಗಳಿಗೆ ಶಕ್ತಿಯನ್ನು ತುಂಬಿವೆ!
ಅಂದಹಾಗೆ, ಕೊನೆಯದಾಗಿ, ಕಾಶ್ಮೀರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ತಿಂಗಳುಗಟ್ಟಲೆ ಮೊಬೈಲ್ ಹಾಗೂ ಇಂಟರ್ನೆಟ್ ಸೇವೆಗಳನ್ನು ಬಂದ್ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ ದೆಹಲಿಯಲ್ಲಿ ಸಾಲು ಸಾಲು ಹೆಣಗಳು ಉರುಳಿದರೂ ಇಂತಹ ನಿರ್ಧಾರ ಕೈಗೊಳ್ಳಲಿಲ್ಲ! ಕೇವಲ ಒಂದು ವಾರ ಕಾಲವಾದರೂ ದೆಹಲಿಯಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ಸೇವೆಗಳನ್ನು ಕೇಂದ್ರ ಸರ್ಕಾರ ಬಂದ್ ಮಾಡಲಿಲ್ಲವೇಕೆ? ಮೊದಲೇ ಕುಸಿದು ಕೂತಿರುವ ಅರ್ಥಿಕತೆಯ ಈ ಸಂದರ್ಭದಲ್ಲಿ ದೇಶದ ಯಾವುದೇ ಮೊಟ್ರೋ ನಗರಿಯಲ್ಲಿ ಇಂಟರ್ನೆಟ್ ಸೇವೆಯನ್ನು ಬ್ಯಾನ್ ಮಾಡುವುದು ಕೇಂದ್ರ ಸರ್ಕಾರಕ್ಕೆ ಸಾಧ್ಯವೇ? ಇಲ್ಲ. ಕಾಶ್ಮೀರದ ಪ್ರಯೋಗವನ್ನೇನಾದರೂ ದೇಶದ ಇತರೆಡೆ ಮಾಡಿದರೆ ಅದರಿಂದ ದೇಶದ ಆರ್ಥಿಕತೆಗೆ ಎಂತಹ ಹೊಡೆತ ಬೀಳಬಹುದು ಎನ್ನುವುದು ಅದಕ್ಕೆ ಗೊತ್ತು. ಹಾಗಾಗಿಯೇ ಅಂತಹ ದುಸ್ಸಾಹಸಕ್ಕೆ ಕೈ ಹಾಕಲು ಹೋಗುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ದಿನದ ಸುದ್ದಿ
ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 8 ಬಹು ಟ್ರ್ಯಾಕಿಂಗ್ (Multi-Tracking) ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಸೆ.09) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ.
http://Visit : www.suddidina.com
ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವು ಬರೋಬ್ಬರಿ 1,200 ಕಿಲೋಮೀಟರ್ಗಳಷ್ಟು ವಿಸ್ತರಣೆಯಾಗಲಿದೆ. ಇದರಿಂದ 6,900ಕ್ಕೂ ಹೆಚ್ಚು ಗ್ರಾಮಗಳಿಗೆ ಸುಧಾರಿತ ಸಂಪರ್ಕ ಸಿಗಲಿದ್ದು, ರೈಲುಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಗಣನೀಯವಾಗಿ ಹೆಚ್ಚಾಗಲಿದೆ.
ಯಾವೆಲ್ಲ ಯೋಜನೆಗಳಿಗೆ ಅನುಮೋದನೆ?
ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:
1. ಅರಾಕೋಣಂ-ರೇಣಿಗುಂಟಾ ಮತ್ತು ವೈಟ್ಫೀಲ್ಡ್-ಬಂಗಾರಪೇಟೆ ನಡುವೆ 3 ಮತ್ತು 4ನೇ ಮಾರ್ಗ: ಇದು ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅತ್ಯಂತ ಮಹತ್ವದ ಯೋಜನೆಯಾಗಿದೆ.
2. ಸಿಕಂದರಾಬಾದ್-ಕಾಜಿಪೇಟೆ ನಡುವೆ ಮಲ್ಟಿ ಟ್ರ್ಯಾಕಿಂಗ್: ತೆಲಂಗಾಣದ ಪ್ರಮುಖ ಮಾರ್ಗದ ದಟ್ಟಣೆ ಕಡಿಮೆ ಮಾಡಲಿದೆ.
3. ಹೊಸೂರು-ಓಮಲೂರು, ಸೇಲಂ-ಕರೂರ್-ದಿಂಡಿಗಲ್ ಜೋಡಿ ಹಳಿ ಯೋಜನೆ: ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಸಂಪರ್ಕವನ್ನು ಬಲಪಡಿಸಲಿದೆ.
4. ಖರಗ್ಪುರ-ಝಾರ್ಸುಗುಡ ಮತ್ತು ಕತ್ನಿ-ಪೆಂದ್ರ ರಸ್ತೆ ನಡುವೆ 4ನೇ ಮಾರ್ಗ ಮತ್ತು ಬಿಲಾಸ್ಪುರ್-ಪೆಂದ್ರ ರಸ್ತೆ ನಡುವೆ 3ನೇ ಮಾರ್ಗ: ಛತ್ತೀಸ್ಗಢ, ಒಡಿಶಾ, ಮಧ್ಯಪ್ರದೇಶದ ಕಲ್ಲಿದ್ದಲು ಮತ್ತು ಖನಿಜ ಸಾಗಣೆಗೆ ಸಹಕಾರಿಯಾಗಲಿದೆ.
ಈ ಎಲ್ಲಾ ಯೋಜನೆಗಳು ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್ಗಢ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಳ್ಳಲಿವೆ.
ಕರ್ನಾಟಕಕ್ಕೆ ಏನು ಲಾಭ?
ಈ ಬಹು ಟ್ರ್ಯಾಕಿಂಗ್ ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಕೈಗಾರಿಕೆಗಳಿಗೆ ಅನುಕೂಲ: ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಾದ ಖನಿಜ ಸಾಗಿಸಲು ವಾಡಿ-ತಂದೂರು, ಮೋಟುಮಾರಿ-ವಿಷ್ಣುಪುರಂ ಮಾರ್ಗದಲ್ಲಿನ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಹೂಟಗಿ, ಕೂಡಗಿ, ಯಾದ್ಲಾಪುರ, ಬಳ್ಳಾರಿ ಮತ್ತು ಯರಮರಸ್ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆ ಇನ್ನಷ್ಟು ವೇಗ ಮತ್ತು ಸುಲಭವಾಗಲಿದೆ.
ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಟ್ಟಣೆ ಕಡಿಮೆ: ವೈಟ್ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ ಉದ್ದದ 3 ಮತ್ತು 4ನೇ ಮಾರ್ಗವು ಅತ್ಯಂತ ದಟ್ಟಣೆಯ ಮನ್ಮಾಡ-ಹುಬ್ಬಳ್ಳಿ-ಬೆಂಗಳೂರು-ಜೋಳರಪೇಟೆ ವಿಭಾಗದಡಿ ಬರುತ್ತದೆ. ಇದು ಬೆಂಗಳೂರು-ಚೆನ್ನೈ ನಡುವಿನ ರೈಲು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.
ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಉತ್ತೇಜನ: ಹೊಸೂರು-ಓಮಲೂರು ಜೋಡಿ ಹಳಿ ಮಾರ್ಗದಿಂದ ಕನ್ಯಾಕುಮಾರಿ, ರಾಮೇಶ್ವರಂನಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಣೆಯೂ ವೇಗವಾಗಲಿದೆ.ಒಟ್ಟಾರೆಯಾಗಿ, ಈ ಯೋಜನೆಗಳು ಕೇವಲ ರೈಲು ಮಾರ್ಗಗಳ ವಿಸ್ತರಣೆಯಷ್ಟೇ ಅಲ್ಲ, ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ದಿನದ ಸುದ್ದಿ
ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಶತಕದ ಸಂಭ್ರಮವನ್ನು ಆಚರಿಸಲು ರಾಜ್ಯ ಸರ್ಕಾರವು `ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಎಂಬ ವಿಶೇಷ ಮತ್ತು ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮವು ನಾಳೆ ಅಂದರೆ 2026ನೇ ಸೆಪ್ಟೆಂಬರ್ 10ರ ಗುರುವಾರ ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಪ್ರತಿಷ್ಠಿತ ಬ್ಯಾಂಕ್ವೇಟ್ ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರದ ನೂರು ದಿನಗಳ ಸಾಧನೆ, ಜನಪರ ಯೋಜನೆಗಳ ಅನುಷ್ಠಾನ ಮತ್ತು ಮುಂದಿನ ಅಭಿವೃದ್ಧಿಯ ದೂರದೃಷ್ಟಿಯನ್ನು ಜನರ ಮುಂದಿಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಗಣ್ಯರ ದಂಡು, ಸಿದ್ದರಾಮಯ್ಯರಿಂದ ಉದ್ಘಾಟನೆ:
ಈ ಶತದಿನೋತ್ಸವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಮತ್ತು ನಾಯಕತ್ವದ ನಿರಂತರತೆಯನ್ನು ಸಂಕೇತಿಸುತ್ತದೆ.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್, ರಾಜ್ಯ ಸಂಪುಟದ ಎಲ್ಲಾ ಸಚಿವರು, ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
http://Visit : www.suddidina.com
ಫಲಾನುಭವಿಗಳೊಂದಿಗೆ ನೇರ ಸಂವಾದ – ಕಾರ್ಯಕ್ರಮದ ಪ್ರಮುಖ ಆಕರ್ಷಣೆ
ಈ ಕಾರ್ಯಕ್ರಮದ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಮುಖ್ಯಮಂತ್ರಿಗಳೊಂದಿಗೆ ಫಲಾನುಭವಿಗಳ ನೇರ ಸಂವಾದ. ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳು ಈ ವೇದಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ದೃಢ ಕರ್ನಾಟಕದ ಸಂಕಲ್ಪ
ಶತಕದ ಪಥ – ಪ್ರಗತಿಯ ರಥ100 ದಿನಗಳು.. ಇದು ಕೇವಲ ಆರಂಭವಷ್ಟೇ. ಜನರ ಆಶಯಗಳಿಗೆ ಸ್ಪಂದಿಸಿ, ರಾಜ್ಯದ ಸಮಗ್ರ ಅಭಿವೃದ್ಧಿಗೆ ವೇಗ ನೀಡುವ ಸಂಕಲ್ಪದೊಂದಿಗೆ ಕಳೆದ 100 ದಿನಗಳಲ್ಲಿ ಹಲವು ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ, ಉದ್ಯೋಗ, ತಂತ್ರಜ್ಞಾನ, ಮೂಲಸೌಕರ್ಯ, ಶಿಕ್ಷಣ, ಕೃಷಿ ಹಾಗೂ… pic.twitter.com/NDViSWw6LV
— DK Shivakumar (@DKShivakumar) September 10, 2026
ಕೇವಲ ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ, ಸಮಾಜದ ವಿವಿಧ ವರ್ಗಗಳ ಶ್ರಮಿಕರು ಮತ್ತು ಕಾರ್ಮಿಕರು ಕೂಡ ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿಕರು, ಆಟೋ ಚಾಲಕರು, ಹಮಾಲಿಗಳು, ಗಿಗ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರು ತಮ್ಮ ಬದುಕಿನಲ್ಲಿ ಸರ್ಕಾರದ ಯೋಜನೆಗಳಿಂದ ಆಗಿರುವ ಬದಲಾವಣೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಮುಕ್ತವಾಗಿ ಮಾತನಾಡಲಿದ್ದಾರೆ.
100 ದಿನಗಳಲ್ಲಿ ಸರ್ಕಾರವು ಕೈಗೊಂಡಿರುವ ಜನಪರ ನಿರ್ಧಾರಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ಆಡಳಿತದಲ್ಲಿ ತಂದಿರುವ ಪಾರದರ್ಶಕತೆಯ ಬಗ್ಗೆ ಈ ವೇದಿಕೆಯಲ್ಲಿ ಚರ್ಚೆ ನಡೆಯಲಿದೆ. ಸರ್ಕಾರದ ಸಾಧನೆಗಳನ್ನು ಕೇವಲ ಭಾಷಣದ ಮೂಲಕವಲ್ಲ, ಬದಲಾಗಿ ಫಲಾನುಭವಿಗಳ ಬಾಯಿಂದಲೇ ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ದಿನಗಳಲ್ಲಿ ದೃಢ ಕರ್ನಾಟಕ’ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದ ಮುಂದಿನ 5 ವರ್ಷಗಳ ಕಾರ್ಯಯೋಜನೆ ಮತ್ತು ರೂಪುರೇಷೆಗಳನ್ನು ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.




