ಬಹಿರಂಗ
ಯುದ್ಧೋನ್ಮಾದದ ನಡುವೆ ನಾಗರಿಕ ಪ್ರಜ್ಞೆಯ ಜಾಗೃತಿ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2019/03/No-war-suddidina-666.jpg&description=ಯುದ್ಧೋನ್ಮಾದದ ನಡುವೆ ನಾಗರಿಕ ಪ್ರಜ್ಞೆಯ ಜಾಗೃತಿ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2019/03/No-war-suddidina-666.jpg&description=ಯುದ್ಧೋನ್ಮಾದದ ನಡುವೆ ನಾಗರಿಕ ಪ್ರಜ್ಞೆಯ ಜಾಗೃತಿ', 'pinterestShare', 'width=750,height=350'); return false;" title="Pin This Post">
- ನಾ ದಿವಾಕರ
ಕೋವಿದನ ರಣಕೇಕೆ, ಕೊರೋನಾದ ರಣಾಂಗಣ ಮತ್ತು ಸೂರ್ಯ ಗ್ರಹಣದ ಪ್ರಳಯಾಂತಕ ಆಕ್ರಮಣದ ಸುದ್ದಿಗಳು ತೆರೆಮರೆಗೆ ಸರಿದು ಇದೀಗ ಕನ್ನಡ ಸುದ್ದಿಮನೆಗಳಲ್ಲಿ ಚೀನಾ ಬಂದು ಕುಳಿತಿದೆ.
ಗಡಿ ಪ್ರದೇಶದಲ್ಲಿ ಚೀನಾ ಮತ್ತು ಭಾರತದ ಘರ್ಷಣೆ ನಡೆದು ತಹಬಂದಿಗೆ ಬಂದಿದ್ದು, ಉಭಯ ರಾಷ್ಟ್ರಗಳ ರಾಜಕೀಯ, ಸೇನಾ ನಾಯಕರು, ರಾಜತಾಂತ್ರಿಕ ಅಧಿಕಾರಿಗಳು ಮಾತುಕತೆಯಲ್ಲಿ ತೊಡಗಿದ್ದರೂ ಇತ್ತ ಕನ್ನಡದ ಸುದ್ದಿಮನೆಗಳಲ್ಲಿ ಯುದ್ಧದ ಸಿದ್ಧತೆ ಇನ್ನೂ ನಿಂತಿಲ್ಲ. ಜನತೆಗೆ ದೇಶದಲ್ಲಿ ನಡೆಯುವ ವಿದ್ಯಮಾನಗಳನ್ನು ಸುದ್ದಿಯ ಮೂಲಕ ಮುಟ್ಟಿಸುವ ತಮ್ಮ ಪ್ರಾಥಮಿಕ ಕರ್ತವ್ಯವನ್ನೇ ಮರೆತಂತಿರುವ ಸುದ್ದಿಮನೆಗಳು ಈಗ ಬಹುತೇಕ ಒಂದು ಪಕ್ಷದ ವಕ್ತಾರರಂತೆ ವರ್ತಿಸುತ್ತಿರುವುದು ದುರಂತ.
ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ದೇಶದ ಬಗ್ಗೆ ಗೌರವ, ಕಾಳಜಿ, ವಿಶ್ವಾಸ ಮತ್ತು ನಂಬಿಕೆಯನ್ನು ಹೊಂದಿರುತ್ತಾನೆ. ರಾಜಕೀಯ ಪರಿಭಾಷೆಯ ಅಥವಾ ಸಾಂಸ್ಕೃತಿಕ ರಾಜಕಾರಣದ ಪರಿಭಾಷೆಯ ಪ್ರೇಮ, ಭಕ್ತಿ ಮತ್ತು ಉನ್ಮಾದಗಳನ್ನು ಬದಿಗಿಟ್ಟು ನೋಡಿದಾಗ ಜನಸಾಮಾನ್ಯರ ಈ ಭಾವನೆ ಸ್ಪಷ್ಟವಾಗಿ ಕಾಣುತ್ತದೆ.
ನಾನು ಭಾರತೀಯ ಎಂದು ಎದೆತಟ್ಟಿ ಹೇಳಿಕೊಳ್ಳುವುದು ಭಾವನಾತ್ಮಕವಾಗಿ ಗಮನ ಸೆಳೆಯಬಹುದು. ಆದರೆ ಈ ರೀತಿಯ ಸ್ವಯಂ ಘೋಷಣೆಯ ಅನಿವಾರ್ಯತೆ ಸೃಷ್ಟಿಯಾಗುವುದು ನೈತಿಕ ಅವಸಾನದ ಸಂಕೇತ. ಸಾಪೇಕ್ಷ ನೆಲೆಯಲ್ಲಿ ಸೃಷ್ಟಿಯಾಗುವ ಈ ಸ್ವಘೋಷಣಾ ಪ್ರವೃತ್ತಿ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಅಸ್ಮಿತೆಗಳ ಚೌಕಟ್ಟಿಗೆ ಸಿಲುಕಿ ವಿಭಜಕ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತದೆ.
ಗಡಿಯಲ್ಲಿ ದೇಶ ಕಾಯುವ ಯೋಧರು ನಾಗರಿಕ ಸಮಾಜದ ನಡುವೆ ಸದಾ ನೆಲೆಸಿರುತ್ತಾರೆ. ಈ ಯೋಧರ ನಿತ್ಯ ಬವಣೆ, ಚಳಿ ಗಾಳಿಯೆನ್ನದೆ ಹಗಲಿರುಳೆನ್ನದೆ ದೇಶದ ರಕ್ಷಣೆಗಾಗಿ ಜೀವ ಪಣಕ್ಕಿಟ್ಟು ಹೋರಾಡಲು ಸಜ್ಜಾಗಿರುವ ಈ ಜೀವಿಗಳು ಸಮಾಜದ ಹಿತವಲಯದ ಕೂಸುಗಳಲ್ಲ ಎನ್ನುವ ಪರಿಜ್ಞಾನ ನಮ್ಮಲ್ಲಿದ್ದರೆ ನಾವು ಯೋಧರನ್ನು ಭಾವನಾತ್ಮಕ ನೆಲೆಯಲ್ಲಿ ನೋಡುವುದಿಲ್ಲ.
ಮಡಿದ ಮೇಲೆ ಹುತಾತ್ಮರಾಗಿ ಜನಮಾನಸದಲ್ಲಿ ನೆಲೆಸುವ ಯೋಧರು ಸೇವೆಯಿಂದ ನಿವೃತ್ತರಾಗಿ ಸಮಾಜದ ನಡುವೆ ಬದುಕು ಸವೆಸುವ ಸಂದರ್ಭದಲ್ಲಿ ಯಾವ ನೆಲೆಯಲ್ಲಿ ನಿಲ್ಲುತ್ತಾರೆ ಎಂದು ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮ ಸಮಾಜದ ಮತ್ತೊಂದು ಮುಖ ಪರಿಚಯವಾಗಲು ಸಾಧ್ಯ.
ಆಧುನಿಕ ನಾಗರಿಕ ಪ್ರಪಂಚದಲ್ಲಿ ಸಾಂಕೇತಿಕ ಅಭಿವ್ಯಕ್ತಿಗೆ ಎಷ್ಟು ಮಾನ್ಯತೆ ದೊರೆಯುವುದೋ ಅಷ್ಟೇ ಮಾನ್ಯತೆ ವ್ಯಕ್ತಿಯ ಬಾಹ್ಯ ಚಹರೆ ಮತ್ತು ಈ ಚಹರೆಗೆ ಒಂದು ಅಸ್ಮಿತೆಯನ್ನು ನೀಡುವ ಪೋಷಾಕುಗಳಿಗೂ ದೊರೆಯುತ್ತದೆ. ಸಮವಸ್ತ್ರವನ್ನು ಕಳಚಿಟ್ಟ ಯೋಧರ ಬದುಕನ್ನು ಒಮ್ಮೆ ನೋಡಿದರೆ ಈ ವಾಸ್ತವದ ಅರಿವಾಗುತ್ತದೆ.
ಏಕೆ ಹೀಗೆ ಎಂದು ಯೋಚಿಸಿದಾಗ ನಾವು ಯುದ್ಧ ಸನ್ನಿವೇಶದ ನೈಜ ಚಿತ್ರಣದತ್ತ ಗಮನಹರಿಸಬೇಕಾಗುತ್ತದೆ. ಯುದ್ಧ ಎಂದರೆ ಕೇವಲ ಮಾರಣಾಂತಿಕ ಶಸ್ತ್ರಾಸ್ತ್ರಗಳ ಪೈಪೋಟಿ ಅಲ್ಲ ಎನ್ನುವ ವಾಸ್ತವವನ್ನು ನಾಗರಿಕ ಸಮಾಜ ಅರ್ಥಮಾಡಿಕೊಳ್ಳದೆ ಹೋದರೆ ಬಹುಶಃ ನಾಗರಿಕತೆಯೇ ಅಳಿಸಿಹೋಗುತ್ತದೆ.
ಈ ದುರಂತ ವಾಸ್ತವದ ಕಥನವನ್ನು ನಾವು, ವೀರ ಸೇನಾನಿಗಳ ಅನುಭವದಿಂದಲೇ ಗ್ರಹಿಸಬೇಕಿದೆ. ಸೇನೆ ಎಂದ ಕೂಡಲೇ ಮೈನವಿರೇಳುವಂತೆ ಮಾತನಾಡುವುದು , ರೋಮಾಂಚನವಾದಂತೆ ವರ್ತಿಸುವುದು, ದೇಶಭಕ್ತಿಯ ಉನ್ಮಾದದಲ್ಲಿ ತೇಲುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಹೀಗೆ ಮಾಡುವುದರಿಂದಲೇ ನಮಗೆ ಹೆಣಗಳನ್ನು ಎಣಿಸುವ ಚಾಳಿ ಕರಗತವಾಗಿದೆ.
ಗಡಿಯಲ್ಲಿ ಮಡಿದ ಪ್ರತಿಯೊಬ್ಬ ಯೋಧ ನಮ್ಮೊಳಗಿನ ಮಾನವ ಪ್ರಜ್ಞೆಯನ್ನು ಬಡಿದೆಬ್ಬಿಸಿ ನಾಗರಿಕತೆಯ ರಕ್ಷಣೆಗೆ ಬದ್ಧರಾಗುವಂತೆ ಮಾಡಬೇಕು. ಆದರೆ ಉನ್ಮಾದದ ಪರಿಸ್ಥಿತಿಯಲ್ಲಿ ಈ ಪ್ರತಿಯೊಂದು ಸಾವು ಪ್ರತೀಕಾರದ ಕ್ರೋಧವನ್ನು ಬೆಳೆಸುತ್ತದೆ. ಈ ಕ್ರೌರ್ಯವೇ ಉರುಳಿದ ತಲೆಗಳಿಗಾಗಿ ಹಾತೊರೆಯುವಂತೆ ಮಾಡುತ್ತದೆ.
ನಾವು ಬಯಸುವುದಾದರೂ ಏನನ್ನು ? ನಮ್ಮ ದೇಶದ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದ್ದರೆ ನಾವು ಯುದ್ಧ ಬಯಸುವುದಿಲ್ಲ, ಶಾಂತಿ ಬಯಸುತ್ತೇವೆ. ಆದರೆ ಮತ್ತಾವುದೋ ರಾಷ್ಟ್ರ ನಮ್ಮ ದೇಶದ ಮೇಲೆ ಆಕ್ರಮಣ ನಡೆಸಿದಾಗ ಮನಸು ವಿಚಲಿತವಾಗುತ್ತದೆ. ಆತಂಕ ಹೆಚ್ಚಾಗುತ್ತದೆ. ಅನಿಶ್ಚಿತತೆ ಕಾಡುತ್ತದೆ. ನಾಳಿನ ಚಿಂತೆ ಕಾಡುತ್ತದೆ.
ಏಕೆಂದರೆ ಯುದ್ಧ ಎನ್ನುವುದು ಸಮಾಜದ ಬಹುಸಂಖ್ಯೆಯ ಜನರಿಗೆ ಸಾವು ಬದುಕಿನ ಪ್ರಶ್ನೆಯಾಗುತ್ತದೆ. ಇದು ಹಿತವಲಯದಲ್ಲಿರುವವರಿಗೆ ಅರ್ಥವಾಗುವುದಿಲ್ಲ. ಗಡಿಯಲ್ಲಿ ದೇಶದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿರುವ ಯೋಧರು ಈ ಅನಿಶ್ಚಿತತೆಯನ್ನು ಪ್ರತಿಕ್ಷಣವೂ ಎದುರಿಸುತ್ತಿರುತ್ತಾರೆ ಎನ್ನುವ ಪರಿಜ್ಞಾನವೂ ಸಮಾಜಕ್ಕೆ ಇರಬೇಕು.
ಈ ಪರಿಜ್ಞಾನ ಸಮಾಜದಲ್ಲಿ ಇದ್ದರೆ ಆಳುವ ವರ್ಗಗಳು ಆದಷ್ಟೂ ಮಟ್ಟಿಗೆ ತಮ್ಮ ಪರಾಕ್ರಮದ ಧೋರಣೆಯನ್ನು ಬದಿಗಿಟ್ಟು ಸ್ನೇಹಸೇತುವೆಗಳನ್ನು ನಿರ್ಮಿಸುವುದರಲ್ಲಿ ತೊಡಗುತ್ತವೆ. ಎರಡನೆ ಮಹಾಯುದ್ಧದ ನಂತರದಲ್ಲಿ ಅನೇಕ ರಾಷ್ಟ್ರಗಳು ಈ ನೀತಿಯನ್ನು ಪಾಲಿಸಲು ಸಜ್ಜಾಗಿದ್ದವು.
ಯಾವುದೇ ಹೊರ ದೇಶಗಳಿಗೆ ತನ್ನ ಸೇನೆಯ ನೆರವು ನೀಡುವುದಿಲ್ಲ ಎನ್ನುವ ನೀತಿಗೂ ಬದ್ಧವಾಗಿದ್ದವು. ಜಪಾನ್ ಇಂದಿಗೂ ಬದ್ಧವಾಗಿದೆ. ಏಕೆಂದರೆ ಯೋಧರು ಹರಕೆಯ ಕುರಿಗಳಾಗಬಾರದು, ಆಪದ್ಭಾಂಧವರಾಗಬೇಕು. ದುರಂತ ಎಂದರೆ ಸಾಮ್ರಾಜ್ಯಶಾಹಿಯ ವಿಸ್ತರಣೆಯ ರಾಜಕಾರಣದಲ್ಲಿ ಯೋಧರು ಬಲಿಪೀಠಕ್ಕೆ ಸಿದ್ಧರಾಗಿರುವ ಹರಕೆಯ ಕುರಿಗಳಂತೆಯೇ ಕಾಣುತ್ತಾರೆ.
ಈ ಧೋರಣೆಯೇ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳನ್ನು ಶಸ್ತ್ರಾಸ್ತ್ರಗಳ ಭಂಡಾರಗಳನ್ನಾಗಿ ಮಾಡಿದೆ. ವಿಶ್ವದ ದೊಡ್ಡಣ್ಣ ಈ ಶಸ್ತ್ರಾಸ್ತ್ರಗಳ ಪೈಪೋಟಿಗೆ ಹರಾಜು ಮಾರುಕಟ್ಟೆಯಂತೆ ಕಾರ್ಯ ನಿರ್ವಹಿಸುತ್ತದೆ. ಬಂಡವಾಳ ವ್ಯವಸ್ಥೆ ಬಿಕ್ಕಟ್ಟಿಗೆ ಸಿಲುಕಿದಾಗಲೆಲ್ಲಾ ಯಾವುದೋ ಎರಡು ರಾಷ್ಟ್ರಗಳ ನಡುವೆ ಘರ್ಷಣೆ ಸಂಭವಿಸುತ್ತದೆ. ಯುದ್ಧದ ಕಾರ್ಮೋಡಗಳು ಕವಿಯುತ್ತವೆ.
ಕೊಂಚ ಮಟ್ಟಿಗೆ ಕಾಳಗವೂ ನಡೆಯುತ್ತದೆ. ನಂತರ ಶಾಂತಿ ಪ್ರಕ್ರಿಯೆ ಜಾರಿಯಾಗುತ್ತದೆ. ಈ ನಡುವೆ ಕೋಟ್ಯಂತರ ರೂಗಳ ಶಸ್ತ್ರಾಸ್ತ್ರ ಖರೀದಿಯ ಭರಾಟೆ ಸದ್ದಿಲ್ಲದೆ ನಡೆದಿರುತ್ತದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಆರೋಗ್ಯ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ವಲಯಗಳಿಗಿಂತಲೂ ರಕ್ಷಣಾ ವಲಯಕ್ಕೇ ಹೆಚ್ಚಿನ ಹಣಕಾಸು ಒದಗಿಸುವುದನ್ನು ಈ ಹಿನ್ನೆಲೆಯಲ್ಲೇ ನೋಡಬೇಕು.
ಇದೀಗ ಭಾರತ ಮತ್ತು ಚೀನಾದ ನಡುವೆ ಏರ್ಪಟ್ಟಿರುವ ಸಂಘರ್ಷದ ವಾತಾವರಣವೂ ಕೆಲವು ದಿನಗಳಲ್ಲಿ ತಿಳಿಯಾಗುತ್ತದೆ. ಏಕೆಂದರೆ ಬಂಡವಾಳ ವ್ಯವಸ್ಥೆಯ ಉಳಿವಿಗೆ ಯುದ್ಧ ಎಷ್ಟು ಅಗತ್ಯವೋ ಯುದ್ಧೋನ್ಮಾದವೂ ಅಷ್ಟೇ ಅಗತ್ಯ. ಕೊರೋನಾದಿಂದ ಉಂಟಾಗುತ್ತಿರುವ ಆತಂಕಕಾರಿ ವಿದ್ಯಮಾನಗಳನ್ನೂ ನಿರ್ಲಕ್ಷಿಸುವಷ್ಟು ಮಟ್ಟಿಗೆ ಯುದ್ಧೋನ್ಮಾದ ನಾಗರಿಕ ಸಮಾಜವನ್ನು ಆವರಿಸಿಬಿಡುತ್ತದೆ.
ಒಂದೆರಡು ಸಾವುಗಳು ನಮ್ಮನ್ನು ಜಾಗೃತಗೊಳಿಸುತ್ತವೆ, ಹುತಾತ್ಮ ಯೋಧರು ನಮ್ಮೊಳಗಿನ ಸುಪ್ತ ಕಳಕಳಿಯನ್ನು ಬಡಿದೆಬ್ಬಿಸುತ್ತಾರೆ. ಆಳುವ ವರ್ಗಗಳು ಸೃಷ್ಟಿಸುವ ದೇಶಪ್ರೇಮದ ಉನ್ಮಾದ ಸಮಸ್ತ ಜನತೆಯನ್ನು ಆವರಿಸುತ್ತದೆ. ಅಷ್ಟರೊಳಗೆ ಶಾಂತಿ ಮಾತುಕತೆಗಳು ಮುಗಿದು ಗಡಿಯಲ್ಲಿ ಯಥಾಸ್ಥಿತಿ ಮರಳುತ್ತದೆ.
ಹುತಾತ್ಮರಾದ ಯೋಧರು ಕೆಲವು ದಿನಗಳ ಬಳಿಕ ನಮ್ಮ ಸ್ಮರಣೆಯಿಂದ ದೂರವಾಗಿಬಿಡುತ್ತಾರೆ. ಭಾರತವೇ ಆಗಲೀ, ಚೀನಾ-ಪಾಕಿಸ್ತಾನ ಆಗಲೀ ಅಥವಾ ಇತರ ಯಾವುದೇ ದೇಶವಾಗಲೀ ಇಂತಹ ಲಕ್ಷಾಂತರ ಯೋಧರನ್ನು ಕಳೆದುಕೊಳ್ಳುತ್ತಲೇ ತಮ್ಮ ಭೌಗೋಳಿಕ ಅಸ್ಮಿತೆಯನ್ನು ರಕ್ಷಿಸಿಕೊಂಡುಬಂದಿವೆ. ಈ ಭೌಗೋಳಿಕ ಅಸ್ಮಿತೆಯ ರಕ್ಷಣೆಗೆ ದೇಶದ ಪ್ರತಿಯೊಬ್ಬ ನಾಗರಿಕರೂ ತಮ್ಮ ಕೊಡುಗೆ ಸಲ್ಲಿಸುತ್ತಲೇ ಇರುತ್ತಾರೆ.
ಒಂದು ದೇಶದ ರಕ್ಷಣೆಗೆ ಗಡಿಯಲ್ಲಿನ ಯೋಧರು ಶಸ್ತ್ರಾಸ್ತ್ರಗಳೊಡನೆ ಹೋರಾಡುತ್ತಾರೆ ಆಂತರಿಕವಾಗಿ ರೈತರು, ಕೃಷಿ ಕಾರ್ಮಿಕರು, ಶ್ರಮಜೀವಿಗಳು ತಮ್ಮ ಬಾಹುಗಳನ್ನು ಬಳಸಿ ನಿತ್ಯ ಹೋರಾಟದಲ್ಲಿ ತೊಡಗಿರುತ್ತಾರೆ. ಈ ಶ್ರಮಜೀವಿಗಳ ಬೆವರು ಗಡಿಯಲ್ಲಿನ ಯೋಧರ ಉಸಿರಾಗುತ್ತದೆ. ಯೋಧರ ಉಸಿರು ಶ್ರಮಜೀವಿಗಳ ಬದುಕಿಗೆ ನೆರಳಾಗುತ್ತದೆ.
ಒಂದು ಸಂವೇದನಾಶೀಲ ಸಮಾಜದಲ್ಲಿ ಈ ಶ್ರಮ, ಬೆವರು, ನೆತ್ತರು ಮತ್ತು ಪರಿಶ್ರಮದ ಮೌಲ್ಯಗಳನ್ನು ಮಾನವೀಯ ನೆಲೆಯಲ್ಲಿ ನೋಡಲಾಗುತ್ತದೆ. ಸಂವೇದನೆಯೇ ಇಲ್ಲದ ಸಮಾಜದಲ್ಲಿ ಭಾವನಾತ್ಮಕ ನೆಲೆಯಲ್ಲಿ ನೋಡಲಾಗುತ್ತದೆ. ಭಾರತ ಈ ವಿರೋಧಾಭಾಸವನ್ನು ಎದುರಿಸುತ್ತಿದೆ.
ರಾಷ್ಟ್ರೀಯತೆಯ ಉನ್ಮಾದಕ್ಕೆ ಬಲಿಯಾಗಿರುವ ಒಂದು ವರ್ಗ, ಒಂದು ಬೃಹತ್ ಸಮುದಾಯ ಮತ್ತು ಒಂದು ಪೀಳಿಗೆ ಇಂದು ರಾಷ್ಟ್ರದ ಪರಿಕಲ್ಪನೆಯೇ ಇಲ್ಲದೆ, ದೇಶ ಎಂದರೇನು ಎಂಬುದನ್ನೇ ತಿಳಿಯದೆ ಮುನ್ನಡೆಯುತ್ತಿದೆ. ಈ ಪ್ರಜೆಗಳಿಗೆ ಯುದ್ಧ ಎನ್ನುವುದು ರಾಷ್ಟ್ರೀಯ ಅಸ್ಮಿತೆಯ ಪ್ರಶ್ನೆಯಾಗಿ ಕಾಣುತ್ತದೆ. ಆದರೆ ವಿನಾಶದ ಮಾರ್ಗದಲ್ಲಿ ಅಸ್ಮಿತೆಗಳು ತಂತಾನೇ ಭಸ್ಮವಾಗಿಹೋಗುತ್ತವೆ ಎನ್ನುವ ಪ್ರಜ್ಞೆ ಇವರಲ್ಲಿ ಕಾಣುವುದಿಲ್ಲ.
ಹಾಗಾಗಿಯೇ ಕೊರೋನಾದಂತಹ ಮಾರಣಾಂತಿಕ ಪಿಡುಗಿನ ನಡುವೆಯೂ ಯುದ್ಧ ಬಯಸುವ ಮನಸುಗಳು ಮೆರೆದಾಡುತ್ತಿವೆ. ಯಾವುದೇ ಶಸ್ತ್ರಾಸ್ತ್ರ ಬಳಸದೆಯೇ ಲಕ್ಷಾಂತರ ಶ್ರಮಜೀವಿಗಳನ್ನು ಸಾವಿನ ಕೂಪಕ್ಕೆ ತಳ್ಳುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ. ಕೊರೋನಾ ಭಾರತದ ಜನಸಾಮಾನ್ಯರ ಬದುಕಿನ ಅನಿಶ್ಚಿತತೆಯನ್ನು ಹೆಚ್ಚಿಸುತ್ತಿರುವ ಸಂದರ್ಭದಲ್ಲೇ ಬಂಡವಾಳ ವ್ಯವಸ್ಥೆಯ ನೀತಿಗಳು ಬದುಕಿನ ನಾಳೆಗಳ ಮುಂದೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.
ಯಾವುದೇ ಶಸ್ತ್ರಾಸ್ತ್ರಗಳಿಲ್ಲದೆಯೇ ಕೋಟ್ಯಂತರ ಪ್ರಜೆಗಳ ಬದುಕು ವಿನಾಶದತ್ತ ಸಾಗುವ ಸಂದರ್ಭವನ್ನು ಎದುರು ನೋಡುತ್ತಿದ್ದೇವೆ. ಬದುಕಬೇಕಾದವರ ಸಾವು ನಮ್ಮನ್ನು ವಿಚಲಿತಗೊಳಿಸುತ್ತಿಲ್ಲ. ಸಾವಿನ ಹೊಸ್ತಿಲಲ್ಲಿರುವವರ ಬದುಕು ನಮ್ಮನ್ನು ಜಾಗೃತಗೊಳಿಸುತ್ತಿಲ್ಲ.
ಈ ವಿರೋಧಾಭಾಸಗಳ ನಡುವೆಯೇ, ವಿತಂಡವಾದಗಳ ನಡುವೆಯೇ ನಾವು ನವ ಉದಾರವಾದ ಮತ್ತು ಜಾಗತೀಕರಣವನ್ನು ಒಪ್ಪಿಕೊಂಡು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಉನ್ಮಾದಕ್ಕೆ ಶರಣಾಗುತ್ತಿದ್ದೇವೆ. ಔದ್ಯಮಿಕ ಬಂಡವಾಳ ಪ್ರಧಾನವಾಗಿದ್ದ ಕಾಲದಲ್ಲಿ, ಭಾರತ ವಸಾಹತು ಆಳ್ವಿಕೆಯಲ್ಲಿದ್ದ ಸಂದರ್ಭದಲ್ಲಿ ಗಾಂಧಿ ಅನುಸರಿಸಿದ ಸ್ವದೇಶಿ ಮಾದರಿ ಇಂದಿನ ಡಿಜಿಟಲ್ ಯುಗದಲ್ಲಿ ಸಾಧ್ಯವಾಗುವುದಿಲ್ಲ ಎನ್ನುವುದನ್ನು ಅರ್ಥಶಾಸ್ತ್ರ ಬಲ್ಲವರಿಗೆ ಹೇಳಬೇಕಿಲ್ಲ.
ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಶಪಥದ ಹಿಂದೆ ವಸ್ತುನಿಷ್ಠ ಅವಲೋಕನಕ್ಕಿಂತಲೂ ಕ್ಷಣಿಕ ಆಕ್ರೋಶ ಮತ್ತು ಉನ್ಮಾದವೇ ಹೆಚ್ಚಾಗಿರುವುದರಿಂದ ಬಹಿಷ್ಕೃತ ಉತ್ಪನ್ನಗಳು ಸಾಪೇಕ್ಷವಾಗಿಬಿಡುತ್ತವೆ. ಇಲ್ಲಿ ಜಾಗತಿಕ ಬಂಡವಾಳ ವ್ಯವಸ್ಥೆ ನಿರ್ವಹಿಸುವ ಪಾತ್ರವನ್ನು ಗಮನಿಸದೆ ಹೋದರೆ ಭಾರತದ ಶ್ರಮಜೀವಿಗಳು ಬಾಣಲೆಯಿಂದ ಬೆಂಕಿಗೆ ಬೀಳುವುದು ಶತಃಸಿದ್ಧ.
ಭಾರತ ಎನ್ನಲಾಗುವ ಭೌಗೋಳಿಕ ಪ್ರದೇಶ ಈ ದೇಶದ ಸಾರ್ವಭೌಮ ಪ್ರಜೆಗಳಿಗೆ ಸೇರಿದ ಸ್ವತ್ತು. ಈ ಭೂಪ್ರದೇಶದ ರಕ್ಷಣೆಗಾಗಿ ಯೋಧರು ಪ್ರಾಣ ತೆರುತ್ತಾರೆ, ಆಂತರಿಕವಾಗಿ ಕೋಟ್ಯಂತರ ಶ್ರಮಜೀವಿಗಳು ದೇಶದ ಮುನ್ನಡೆಗೆ ಬೆವರು ಸುರಿಸಿ ದುಡಿಯುತ್ತಾರೆ. ಬೆರಳೆಣಿಕೆಯಷ್ಟು ಜನರು ಈ ಶ್ರಮದ ಫಲಾನುಭವಿಗಳಾಗಿ ಅಭೇದ್ಯ ಕೋಟೆಗಳಲ್ಲಿ ಐಷಾರಾಮಿ ಬದುಕು ನಡೆಸುತ್ತಾರೆ.
ಬೆವರು ಸುರಿಸಿ ದುಡಿಯುವ ಜನತೆಗೆ ತಮ್ಮ ದೇಶದ ಮೇಲೆ ನಡೆಯುವ ಆಕ್ರಮಣದ ಬಗ್ಗೆ ಪೂರ್ಣ ಮಾಹಿತಿ ಪಡೆಯುವ ಹಕ್ಕು ಇರುತ್ತದೆ. ಇದು ಪ್ರಜಾತಂತ್ರದ ನಿಯಮ. ಭಾರತದ ಸುದ್ದಿಮನೆಗಳಿಗೆ, ಆಡಳಿತ ವ್ಯವಸ್ಥೆಗೆ ಈ ಸೂಕ್ಷ್ಮದ ಪರಿಜ್ಞಾನ ಇರಬೇಕಿತ್ತು. ಇಲ್ಲ ಎನ್ನುವುದು ಸ್ಪಷ್ಟ.
ಈ ಪರಿಜ್ಞಾನ ಇದ್ದಿದ್ದಲ್ಲಿ ಟಿವಿ ಪರದೆಯ ಮೇಲೆ ಉಭಯ ದೇಶಗಳ ಶಸ್ತ್ರಾಸ್ತ್ರಗಳ ಎಣಿಕೆ ಮಾಡುತ್ತಾ ಉರುಳಿದ ತಲೆಗಳನ್ನು ಎಣಿಸುತ್ತಿರಲಿಲ್ಲ. ಭಾರತೀಯ ಸೇನೆಯ ಶಕ್ತಿ ಸಾಮರ್ಥ್ಯವನ್ನು ಪರದೆಯ ಮೇಲೆ ಬಿಂಬಿಸುತ್ತಾ ತುಲನಾತ್ಮಕ ವಿಶ್ಲೇಷಣೆ ಮಾಡುವ ಸುದ್ದಿಮನೆಯ ಸಂಪಾದಕರಿಗೆ ಯುದ್ಧ ಎನ್ನುವುದು ಕೇವಲ ಗಡಿಯಲ್ಲಿ ನಡೆಯುವ ಕಸರತ್ತು ಅಲ್ಲ, ಮನುಕುಲವನ್ನು ವಿನಾಶದ ಅಂಚಿಗೆ ಕೊಂಡೊಯ್ಯುವ ಮಸಲತ್ತು ಎನ್ನುವ ಪರಿವೆ ಇರಬೇಕು.
ನಮ್ಮಲ್ಲಿ ಎಷ್ಟು ಅಣ್ವಸ್ತ್ರಗಳಿವೆ ಎಂದು ಯೋಚಿಸುವ ಮುನ್ನ ಒಂದು ಪರಮಾಣು ಬಾಂಬ್ ಇಡೀ ವಿಶ್ವವನ್ನೇ ನೆಲಸಮ ಮಾಡುತ್ತದೆ ಎನ್ನುವ ಅಲ್ಪ ಜ್ಞಾನವೂ ಸುದ್ದಿಮನೆಗಳ ಸಂಪಾದಕರಿಗೆ ಇರಬೇಕಲ್ಲವೇ ? ವಂದಿಮಾಗಧ ಪ್ರವೃತ್ತಿಗೂ ಒಂದು ಇತಿಮಿತಿ ಇರಬೇಕಲ್ಲವೇ ? ಸೇನಾ ಸಾಮರ್ಥ್ಯವನ್ನು ಬಹಿರಂಗವಾಗಿ ಬಿತ್ತರಿಸಲು ಸುದ್ದಿಮನೆಗಳಿಗೆ ಅನುಮತಿ ನೀಡಿದವರಾದರೂ ಯಾರು ? ಇದು ನಮ್ಮ ದೇಶದ ಗೋಪ್ಯತೆಯನ್ನು ಬಯಲು ಮಾಡಿದಂತಾಗುವುದಿಲ್ಲವೇ ?
ಪರದೆಯ ಮೇಲೆ ಬಿತ್ತರಿಸುವ ಹಾಲಿವುಡ್/ಬಾಲಿವುಡ್ ಚಿತ್ರಗಳ ದೃಶ್ಯಗಳು ವೀಕ್ಷಕರ ಮೈನವಿರೇಳಿಸುತ್ತವೆ. ಉನ್ಮಾದ ಹೆಚ್ಚಿಸುತ್ತವೆ. ಈ ಉನ್ಮಾದಕ್ಕೆ ಸುಲಭ ತುತ್ತಾಗುವ ಒಂದು ವರ್ಗ ಸಾವು ನೋವುಗಳನ್ನು ಅನಿವಾರ್ಯ ಕರ್ಮ ಎಂದು ಸ್ವೀಕರಿಸುವ ಮಟ್ಟಕ್ಕೆ ಯುದ್ಧೋನ್ಮಾದಕ್ಕೆ ಬಲಿಯಾಗಿಬಿಡುತ್ತದೆ. ಆದರೆ ಈ ಸಾವು ನೋವುಗಳೊಡನೆ ದೇಶ ನಲುಗಿಹೋಗುತ್ತದೆ.
ಯುದ್ಧ ಅನಿವಾರ್ಯವೇ ಆದರೆ ಸಂಭವಿಸಿಯೇ ತೀರುತ್ತದೆ ಏಕೆಂದರೆ ಆಳುವ ವರ್ಗಗಳಿಗೆ ಯುದ್ಧರಂಗದಿಂದಾಚೆಗಿನ ಪ್ರಪಂಚ ಕಾಣುವುದಿಲ್ಲ. ನಮಗೆ ಕಾಣುತ್ತದೆ. ಕಳೆದ ಒಂದು ಶತಮಾನದಲ್ಲಿ ಮಾನವ ಸಮಾಜ ಸಾಕಷ್ಟು ಯುದ್ಧಗಳನ್ನು, ಸಾವುನೋವುಗಳನ್ನು ಕಂಡಿದೆ. ಆದರೆ ಸ್ನೇಹದಿಂದಿರುವುದನ್ನು ಕಲಿತಿಲ್ಲ.
ಚೀನಾ, ರಷ್ಯಾ, ಅಮೆರಿಕ ಮತ್ತು ಇತರ ಬಂಡವಾಳಶಾಹಿ ಪಶ್ಚಿಮ ರಾಷ್ಟ್ರಗಳಿಗೆ ಯುದ್ಧಭೂಮಿಯೂ ಒಂದು ಮಾರುಕಟ್ಟೆ ಇದ್ದಂತೆ. ಈ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಶವಗಳು ಜಾಗತಿಕ ಸಂತೆಯ ಕಚ್ಚಾವಸ್ತುಗಳಂತೆ ಕಾಣುತ್ತವೆ. ಇರಾನ್, ಇರಾಕ್, ಕೊಲ್ಲಿ ರಾಷ್ಟ್ರಗಳು, ಆಫ್ರಿಕಾದ ದೇಶಗಳು, ಭಾರತ ಪಾಕಿಸ್ತಾನ ಮುಂತಾದ ದೇಶಗಳು ಈ ಹರಾಜು ಮಾರುಕಟ್ಟೆಯಲ್ಲಿ ಬೆತ್ತಲಾಗಿಬಿಡುತ್ತವೆ.
ಆಧುನಿಕ ಯುದ್ಧ ಪರಂಪರೆಯಲ್ಲಿ ಶಸ್ತ್ರಾಸ್ತ್ರಗಳು ಕೆಲವು ಸಾವಿರ ಜೀವ ಹರಣ ಮಾಡಿದರೆ ಮಾರುಕಟ್ಟೆಯ ತಂತ್ರಗಳು ಕೋಟ್ಯಂತರ ಜನರ ಬದುಕನ್ನು ನಾಶಪಡಿಸುತ್ತವೆ. ಯುದ್ಧ ಮತ್ತು ಯುದ್ಧೋನ್ಮಾದ ಈ ಮಾರುಕಟ್ಟೆ ತಂತ್ರಗಳ ಒಂದು ಅವಿಭಾಜ್ಯ ಅಂಗ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳುವುದು ಕ್ಷೇಮ.
ಬಂಡವಾಳ ವ್ಯವಸ್ಥೆ ಮತ್ತು ಅಧಿಕಾರ ರಾಜಕಾರಣದ ವಕಾಲತ್ತು ವಹಿಸಿರುವ ಭಾರತದ ಸುದ್ದಿಮನೆಗಳಿಗೆ ಈ ಸೂಕ್ಷ್ಮಗಳ ಪರಿವೆ ಇಲ್ಲ ಎನ್ನುವುದು ಸ್ಪಷ್ಟ. ಇದ್ದರೂ ಅದೇ ಮಾರುಕಟ್ಟೆಯ ಅನಿವಾರ್ಯತೆಗಳು ಸುದ್ದಿಮನೆಗಳ ಪ್ರಜ್ಞೆಯನ್ನು ಕಲುಷಿತಗೊಳಿಸುತ್ತವೆ. ಆದರೆ ನಾಗರಿಕರಾದ ನಾವು ಜೀವ ಮತ್ತು ಸಾವಿನ ನಡುವೆ ಆಯ್ಕೆ ಮಾಡುವ ಅನಿವಾರ್ಯತೆಗೆ ಸಿಲುಕಿದ್ದೇವೆ.
ಈ ಸಂದಿಗ್ಧ ಪರಿಸ್ಥಿತಿಯಲ್ಲೇ ಸುದ್ದಿಮನೆಗಳು ಯುದ್ಧೋನ್ಮಾದ ಸೃಷ್ಟಿಸುತ್ತಿರುವುದು ಈ ದೇಶದ ದುರಂತ. ಆದರೆ ನಾಗರಿಕ ಪ್ರಜ್ಞೆ ಜಾಗೃತವಾದರೆ ಸ್ನೇಹಸೇತುವೆಗಳನ್ನು ನಿರ್ಮಿಸುವುದು ಕಷ್ಟವೇನಲ್ಲ. ದೇಶದಲ್ಲಿ ಸ್ನೇಹ ಭಾವ ಅಂತರ್ಗತವಾಗಿದ್ದರೆ ಸ್ನೇಹದಲ್ಲಿ ದೇಶಗಳು ಸಮ್ಮಿಳಿತಗೊಳ್ಳುತ್ತವೆ. ಇದು ಮಾನವತೆಯ ಪ್ರಶ್ನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್ನ ನಷ್ಟ ಅಪಾರ. ಲೆಬನಾನ್ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್ಎಚ್ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್ನ ಮಕ್ಕಳ ಸಾವುಗಳು, ಇಸ್ರೇಲ್ನ ಗಾಯಗೊಂಡ ಕುಟುಂಬಗಳು, ಗಲ್ಫ್ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಕ್ಷೇತ್ರ ಪುನರ್ವಿಂಗಡಣೆ ಮಸೂದೆ ; ಬಿಜೆಪಿ ಷಡ್ಯಂತ್ರ ಬಯಲು : ಕವಿತಾ ಚಂದ್ರಶೇಖರ್ ಕಿಡಿ
-
ದಿನದ ಸುದ್ದಿ6 days agoಎಸ್ಎಸ್ಎಲ್ಸಿ ಫಲಿತಾಂಶ| ಗುರುಕುಲ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ; ಶೇ. 98 ಅಂಕಗಳೊಂದಿಗೆ ಮದಿಹಾ ಅಗ್ರಸ್ಥಾನ
-
ದಿನದ ಸುದ್ದಿ15 hours agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಸುಗಮ ಮತ ಎಣಿಕೆಗೆ ಸಜ್ಜು

