ದಿನದ ಸುದ್ದಿ
ಅಪ್ಪನ ಹರಕು ಕೋಟು..! : ಅಂಬೇಡ್ಕರ್ ನೆನಪಿಸಿಕೊಂಡ ತಂದೆಯ ಚಿತ್ರಗಳು
01
ನನ್ನ ವಿಷಯದಲ್ಲಿ ಎರಡು ಮೂರು ಸಂಗತಿಗಳನ್ನು ಮಾತ್ರ ನಿಶ್ಚಿತವಾಗಿ ಹೇಳುವುದಕ್ಕೆ ಆಗುತ್ತದೆ. ರಾಜಪುತಾನದ ಮಹೂ ಮುಕ್ಕಾಮಿನಲ್ಲಿ ನಾನು ಜನಿಸಿದೆ. ಹಾಗಾಗಿ ಕೊಂಕಣದೊಂದಿಗೆ ನನಗೆ ಯಾವುದೇ ಸಂಬಂಧವೂ ಇಲ್ಲ. ನನ್ನ ತಂದೆಯವರು ಕೊಂಕಣದವರೇ, ಆದರೆ ಉದ್ಯೋಗದ ಕಾರಣದಿಂದ ಅವರು ರಾಜಪುತಾನಕ್ಕೆ ಹೋಗಬೇಕಾಯಿತು.
ಆಗ ನನ್ನ ಜನನವು ಮಹೂನಲ್ಲಿ ಮುಕ್ಕಾಮು ಮಾಡಿದ್ದಾಗ ಆಯಿತು ಎಂಬುದನ್ನು ಮಾತ್ರ ಖಚಿತವಾಗಿ ಹೇಳಬಹುದು. ಮತ್ತೊಂದು ಸಂಗತಿಯೆಂದರೆ, ನನ್ನ ಜನನವು ಸರಿಯಾಗಿ ಹನ್ನೆರಡು ಹೊಡೆದಾಗಲೇ ಆದುದು. ಆ ಸಮಯದಲ್ಲಿ ನನ್ನ ತಂದೆಯವರು ಕೆಲಸದ ಮೇಲೆ ಇದ್ದರು.
ಇತ್ತ ನನ್ನ ತಾಯಿಯವರ ಬಾಣಂತಿತನವು ನಡೆದಿತ್ತು , ನನ್ನ ಪಿಂಡವು ಬಹಳ ದೊಡ್ಡದಾಗಿತ್ತು. ನನ್ನ ತಾಯಿಯವರಿಗೆ ಹೆರಿಗೆಯಲ್ಲಿ ಬಹಳ ತೊಂದರೆಯಾಯಿತು ಎಂಬುದಾಗಿ ಹೇಳುತ್ತಾರೆ. ನನ್ನ ತಂದೆಯವರಿಗೆ ಚಿಂತೆಯಾಗುತ್ತಿತ್ತು. ಆದರೆ ಕೊನೆಗೆ ದಾದಿಯು ಬಂದು ಅವರಿಗೆ ಹೇಳಿದಳು “ಮನೆಗೆ ಹೋಗು, ನಿನಗೆ ಗಂಡು ಮಗ ಜನಿಸಿದ್ದಾನೆ”
ನನ್ನ ತಂದೆಯವರ ಮನೆಯನ್ನು ಧರ್ಮಾಸನ ಎಂದು ಕರೆಯಬಹುದು. ನನ್ನ ತಂದೆಯವರು ವಿದ್ಯೆಯ ಭಕ್ತರೂ ಆಗಿದ್ದರು . ಹಾಗೆಯೇ ಅವರು ಧರ್ಮವನ್ನು ಪ್ರೀತಿಸುತ್ತಿದ್ದರು . ನಾನು ಚಿಕ್ಕವನಾಗಿರುವಾಗಲೇ ರಾಮಾಯಣ , ಮಹಾಭಾರತ ಇತ್ಯಾದಿ ಎಲ್ಲಾ ಗ್ರಂಥಗಳನ್ನು ಅವರು ಪಾರಾಯಣ ಮಾಡಿಸುತ್ತಿದ್ದರು . ರಾಮಾಯಣ , ಮಹಾಭಾರತಗಳನ್ನು ಓದಿದ ಕಾರಣ ನನ್ನ ಮನಸ್ಸಿನ ಮೇಲೆ ಬಹಳ ಪರಿಣಾಮವು ಉಂಟಾಗಿದ್ದಿತು.
ನನ್ನ ತಂದೆಯವರು ನನಗೆ ಹೇಳುತ್ತಿದ್ದರು , “ನಾವು ಬಡವರಾಗಿದ್ದೇವೆ ಎಂದುಕೊಂಡು ಮಂಕಾಗಿರುವ ಕಾರಣವಿಲ್ಲ , ನೀನು ಏಕೆ ವಿದ್ವಾಂಸನಾಗಲು ಸಾಧ್ಯವಿಲ್ಲ? ” ಒಮ್ಮೆ ನಾನು ಯಾವುದೋ ಒಂದು ಪರೀಕ್ಷೆಯಲ್ಲಿ ಪಾಸಾಗಿದ್ದೆನು, ಆಗ ನನ್ನ ಓಣಿಯಲ್ಲಿದ್ದ ಜನರು ನನ್ನ ತಂದೆಯವರಿಗೆ ಇಷ್ಟವಿಲ್ಲದೆ ಇದ್ದರೂ ದಾದಾ ಕೇಳುಸ್ಕರ ಅವರ ಸಹಾಯದಿಂದ ನನಗೆ ಸತ್ಕಾರ ಮಾಡುವುದೆಂದು ನಿರ್ಧರಿಸಿದರು.
ಆಗ ನನ್ನ ತಂದೆ ಹೇಳುತ್ತಿದ್ದರು , “ ಸತ್ಕಾರ ಮಾಡುವುದು ಬೇಡ , ಮಕ್ಕಳಿಗೆ ಹೀಗೆ ಸತ್ಕಾರ ಮಾಡಿದರೆ ಅವರಿಗೆ ನೇತಾರನಾಗಿದ್ದೇನೆ ಎಂಬುದಾಗಿ ಜಂಭ ಬರುತ್ತದೆ” ಎನ್ನುತ್ತಿದ್ದರು. ಆ ಹೊತ್ತಿನಲ್ಲಿ ಕೊನೆಗೂ ನನಗೆ ಸತ್ಕಾರವನ್ನು ಮಾಡಲಾಯಿತು. ಆಗ ದಾದಾ ಕೇಳುಸ್ಕರ ಅವರು ನನಗೆ ಬುದ್ಧನ ಚರಿತ್ರೆಯ ಒಂದು ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.
ಆ ಪುಸ್ತಕವನ್ನು ಓದಿದ ನಂತರ ನನ್ನಲ್ಲಿ ಯಾವುದೋ ಒಂದು ರೀತಿಯ ನಿರಾಳ ಭಾವನೆಯ ಬೆಳಕು ಬಂದಂತೆ ಆಯಿತು, ಮಾರುತಿ, ಸೀತಾ, ರಾಮ ಇವರೆಲ್ಲರೂ ವನವಾಸಕ್ಕೆ ಹೋದರು, ಧೋಬಿಯೊಬ್ಬನು ಏನೋ ಮಾತನಾಡಿದ ಎಂಬ ಕಾರಣದಿಂದ ಸೀತೆಯ ತ್ಯಾಗ, ಕೃಷ್ಣನ ಹದಿನಾರು ಸಾವಿರ ಹೆಂಡತಿಯರು ಎಂಬ ಸಂಗತಿ ಏನೋ ಭಯಂಕರವೆನಿಸುತ್ತಿತ್ತು. ಈ ವಿಚಾರಗಳು ನನ್ನ ಮನಸ್ಸನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಆಗಲಿಲ್ಲ .
ಆದರೆ ಬುದ್ಧನ ಧರ್ಮದ ಆ ಅಧ್ಯಯನದಿಂದ ನನಗೆ ಹೆಚ್ಚು ಅಭ್ಯಾಸ ಮಾಡಬೇಕು ಎಂದು ಅನ್ನಿಸಿತು. ನನ್ನ ಮನಸ್ಸಿನ ಮೇಲೆ ಆ ಧರ್ಮದ ಹಿಡಿತವು ಖಾಯಂ ಆಗಿ ಉಳಿಯಿತು. ನನ್ನ ಮನಸ್ಸಿನಲ್ಲಿ ಈಗ ಇಂತಹದ್ದೊಂದು ನಿರ್ಧಾರವಾಗಿದೆ, – ಜಗತ್ತಿನ ಕಲ್ಯಾಣವನ್ನು ಕೇವಲ ಬೌದ್ದಧರ್ಮವು ಮಾತ್ರವೇ ಮಾಡುವುದಕ್ಕೆ ಸಾಧ್ಯ , ಹಿಂದೂ ಜನರಿಗೆ ತಮ್ಮ ರಾಷ್ಟ್ರವನ್ನು ಎಚ್ಚರಗೊಳಿಸುವುದು ಬೇಕಿದ್ದರೆ ಬುದ್ಧ ಧರ್ಮವನ್ನು ಸ್ವೀಕಾರ ಮಾಡಬೇಕು ಎಂಬುದಾಗಿ ನಾನು ಯಾವಾಗಲೂ ಹೇಳುತ್ತಲೇ ಬಂದಿದ್ದೇನೆ.
(ಸಂ: 20, ಪುಟ ಸಂಖ್ಯೆ: 676 ರಿಂದ 684 )
02
ಮುಂಬೈಯಲ್ಲಿ
1938 ರ ಡಿಸೆಂಬರ್ 12ರಂದು
ಅಸ್ಪೃಶ್ಯ ವಿದ್ಯಾರ್ಥಿಗಳ ಪರವಾಗಿ ಏರ್ಪಡಿಸಲಾದ ‘ಮುಂಬೈ ಅಸ್ಪೃಶ್ಯ ವಿದ್ಯಾರ್ಥಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅಂಬೇಡ್ಕರರು ವಿದ್ಯಾರ್ಥಿಗಳ ಕುರಿತು ಮಾತನಾಡುವಾಗ ತನ್ನ ತಂದೆಯನ್ನು ನೆನಪಿಸಿಕೊಳ್ಳುತ್ತಾರೆ.
“ನಿಮ್ಮಲ್ಲಿ ಹಲವರು ವಿವಾಹಿತರಾಗಿರಬೇಕು. ಮತ್ತೆ ಹಲವರು ಮದುವೆಯಾದವರೂ ಇದ್ದಿರಬಹುದು. ಆದರೆ ಮದುವೆಯ ನಂತರ ನೀವೇನು ಮಾಡಲಿದ್ದೀರಿ? ಈ ವಿಷಯದಲ್ಲಿ ನಿಮ್ಮ ಮೇಲೆ ಗುರುತರವಾದ ಜವಾಬ್ದಾರಿಯಿದೆ. ನಾನು ನನ್ನ ತಂದೆಯದೇ ಉದಾಹರಣೆ ನೀಡುತ್ತೇನೆ. ಅವರಿಗೆ ಒಟ್ಟೂ 14 ಮಕ್ಕಳು ಜನಿಸಿದವು. ಅವರಲ್ಲಿ ನಾನು 11ನೇ ರತ್ನ. ಆದರೆ ನಾನು ಎಲ್‌ಪಿನ್‌ಸ್ಟನ್ ಕಾಲೇಜಿಗೆ ಹೋದಾಗ ನನ್ನ ಸ್ಥಿತಿ ಹೇಗಿತ್ತು ಅಂತೀರಾ? ನನ್ನ ಕಾಲಲ್ಲಿ ಪಾದರಕ್ಷೆಯಿರಲಿಲ್ಲ.
ನಾನು ದರಿಸಿದ್ದು ಮಂಜರಪಾಟದಂತಹ ತೆಳು ಶರ್ಟು ಮತ್ತು ಅಪ್ಪನ ಹರಕು ಕೋಟು!! ನೀವು ಎಲಿಪನ್‌ಸ್ಟನ್ ಕಾಲೇಜಿಗೆ ಹೋದಿರಿ ಎಂದರೆ ಅಲ್ಲಿ ನಿಮಗೆ ಮುಲ್ಲರ್ ಸಾಹೇಬರ ಚಿತ್ರ ಕಾಣಿಸುತ್ತದೆ. ಅವರು ನನಗೆ ಕೊನೆಯ ಎರಡು ವರ್ಷ ಶರ್ಟು ನೀಡಿದರು. ನಾನು ಯೋಚಿಸುತ್ತಿದ್ದೆ. ಅಪ್ಪನಿಗೆ 14ರ ಬದಲು 4 ಮಕ್ಕಳು ಹುಟ್ಟಿದ್ದರೆ ಎಂಥ ಸುಖ ಸಿಗುತ್ತಿತ್ತಲ್ಲ ಎಂದು ‘ನನ್ನ ಈ ದುಃಖಕ್ಕೆ ಅಪ್ಪನೇ ಕಾರಣನಾಗಿದ್ದ.
ನಾನೊಮ್ಮೆ ಕಾಲೇಜಿಗೆ ಹೋಗುವಾಗ ರೇಲ್ವೆ ಪಾಸನ್ನು ಮನೆಯಲ್ಲೇ ಮರೆತೆ. ಅದೇ ದಿನ ಪಾಸಿನ ತಪಾಸಣೆ ನಡೆದಿತ್ತು. ಟಿಕೇಟು ಸ್ವೀಕರಿಸುವ ಮಾಸ್ತರ ನನ್ನನ್ನು ತಡೆದು ನಿಲ್ಲಿಸಿದ. ಹತ್ತಿರವಂತೂ ದಮ್ಮಡಿಯಿಲ್ಲ. ನಾಲ್ಕು ಗಂಟೆಯವರೆಗೆ ಚರ್ಚ್ಗೇಟಿನ ಸ್ಟೇಶನ್ನಿನಲ್ಲಿ ಕೂತೇ ಇರಬೇಕಾಯಿತು. ಬಳಿಕ ಕೈಶಿಣಿ ಎಂಬ ಸಹಪಾಠಿ ಅಲ್ಲಿಗೆಬಂದ. ‘ಏನೋ, ಇಲ್ಲೇಕೆ ಕುಳಿತಿರುವೆ?’ ಎಂದು ಕೇಳಿದ. ನಾನು ಅವನಿಗೆ ಎಲ್ಲ ವಿಷಯ ಹೇಳಿದೆ. ಅವನು ನಾಲ್ಕಾಣೆ ತುಂಬಿ ನನ್ನ ಬಿಡುಗಡೆ ಮಾಡಿದ ಬಳಿಕ ಟಿಕೇಟ ತೆಗೆಸಿ ಮನೆಗೆ ಮರಳಿ ಕಳಿಸಿದ.
ಈ ಕಾರಣಕ್ಕಾಗಿ ನಾನಗೆ ಅಪ್ಪನ ಮೇಲೆ ಕೋಪವಿದೆ. ಏಕೆಂದರೆ ಅವರು ತಮ್ಮ ಜವಾಬ್ದಾರಿಯನ್ನು ಮರೆತರು. ಅಪ್ಪ ತಪ್ಪಿದಾಗ ಅವರಿಗೆ ಅದನ್ನು ಹೇಳುವುದು ತಪ್ಪೇನಲ್ಲ ಎಂದು ನನಗೆ ಅನಿಸುತ್ತದೆ. ಈಗ ನಿಮ್ಮ ಮೇಲೆ ಈ ಜವಾಬ್ದಾರಿಯಿದೆ. ಅದೇ ರೀತಿ ಮಹಿಳೆಯರ ಮೇಲೂ ಇದೆ. ನಾನು ಕೇವಲ ಪುರುಷರಿಗಾಗಿ ಮಾತ ಹೇಳುತ್ತಿಲ್ಲ. ಮಹಿಳೆಯರೂ ಸಹ ತಮ್ಮ ಜವಾಬ್ದಾರಿಯನ್ನು ಅರಿಯಬೇಕು.
(ಸಂ:19-ಪು:722)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ದಿನದ ಸುದ್ದಿ
ವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
ಸುದ್ದಿದಿನ,ಬೆಂಗಳೂರು:ಕೋಡಿಪಾಳ್ಯದಲ್ಲಿರುವ ವಿಶ್ವ ವೆಂಕಟೇಶ್ವರ ವಿದ್ಯಾಧಾನ ಕೇಂದ್ರದ ವಿರುದ್ಧ ಪಕ್ಕದಲ್ಲಿರುವ ವಿಠಲ ರುಕ್ಮಿಣಿ ಮಠದಿಂದ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿ ಸಂಸ್ಥೆಯ ಹೆಸರಿಗೆ ಧಕ್ಕೆ ತರುವ ಹುನ್ನಾರ ಕಳೆದ 3 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಗಂಭೀರ ಆರೋಪ ಮಾಡಿದೆ.
ಕೇವಲ 20 ವಿದ್ಯಾರ್ಥಿಗಳಿಂದ ಆರಂಭವಾದ ಈ ಸಂಸ್ಥೆಯು ಇಂದು ವಿವಿಐಎಸ್ ಶಾಲೆ, ಕೆಬಿಸಿ ಪಿಯು ಕಾಲೇಜು ಮತ್ತು ವಿವಿ ಪದವಿ ಕಾಲೇಜುಗಳನ್ನು ಹೊಂದಿದೆ. ಬಡ ಕೂಲಿ ಕಾರ್ಮಿಕರು ಮತ್ತು ವಲಸೆ ಕುಟುಂಬಗಳ 600ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪದವಿ ಕಾಲೇಜು ಆರಂಭಿಸಲು ಪಕ್ಕದಲ್ಲಿರುವ ವಿಠಲ ರುಕ್ಮಿಣಿ ಮಠದ ಖಾಲಿ ಕಟ್ಟಡವನ್ನು 5 ವರ್ಷಗಳ ಅವಧಿಗೆ ಬಾಡಿಗೆಗೆ ಪಡೆಯಲಾಗಿತ್ತು. ವಿಠಲಗಿರಿಧಾಮದ ಮಠಾಧೀಶರಾದ ಶ್ರೀ ನಿರ್ಮಲಾನಂದ ಪುರಿ ಅವರು ಪ್ರತಿ ವರ್ಷ 5% ಬಾಡಿಗೆ ಹೆಚ್ಚಳದ ಷರತ್ತಿನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.
ಸಂಸ್ಥೆಯ ಅಧ್ಯಕ್ಷರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ, ಖಾಲಿ ಇದ್ದ ದೊಡ್ಡ ಕೊಠಡಿಗಳಿಗೆ ವಿಭಜನೆ, ಬಾಗಿಲುಗಳನ್ನು ಅಳವಡಿಸಿ, ಫರ್ನಿಚರ್ ತುಂಬಿ ತರಗತಿಗಳನ್ನು ಆರಂಭಿಸಿದರು. ಕಳೆದ 7 ವರ್ಷಗಳಿಂದ ಈ ಕಟ್ಟಡದಲ್ಲಿಯೇ ತರಗತಿಗಳು ನಡೆಯುತ್ತಿದ್ದು, ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದೇ ಮಠದ ಮತ್ತೊಂದು ಭಾಗವನ್ನು “ಟಾಮ್ ಅಂಡ್ ಜೆರ್ರಿ” ವಿಶೇಷ ಮಕ್ಕಳ ಶಾಲೆಗೆ ಬಾಡಿಗೆಗೆ ನೀಡಲಾಗಿದೆ.
ಆದರೆ ಕಳೆದ 3 ವರ್ಷಗಳಿಂದ ಶ್ರೀ ನಿರ್ಮಲಾನಂದ ಪುರಿ ಮತ್ತು ಅವರ ಹಿಂಬಾಲಕರು ಶೈಕ್ಷಣಿಕ ವಾತಾವರಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕಾಲೇಜಿನ ಸಿಬ್ಬಂದಿಯ ಮೇಲೆ ಅವಾಚ್ಯ ಶಬ್ದಗಳ ಪ್ರಯೋಗ, ಪರೀಕ್ಷಾ ಸಮಯದಲ್ಲಿ ಸ್ವಾಮೀಜಿಯ ಹಿಂಬಾಲಕರು ಕಾಲೇಜಿನ ಒಳಗೆ ನುಗ್ಗಿ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಂಡು ತಪ್ಪು ಮಾಹಿತಿ ಹರಡುವ ಮೂಲಕ ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆಡಳಿತ ಮಂಡಳಿ ದೂರಿದೆ.
ಇದರ ಜೊತೆಗೆ ಇನ್ನೊಂದು ಗಂಭೀರ ಆರೋಪ ಕೇಳಿಬಂದಿದೆ. ವಿಠಲ ರುಕ್ಮಿಣಿ ಮಠದ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನನ್ನು *”ಗೋಶಾಲೆ ಮತ್ತು ವೃದ್ಧಾಶ್ರಮ”*ಕ್ಕಾಗಿ ಮಂಜೂರು ಮಾಡಲಾಗಿದೆ. ಆದರೆ ಮಂಜೂರಾದ ಉದ್ದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಈ ಜಮೀನನ್ನು ವಾಣಿಜ್ಯ ಉದ್ದೇಶಕ್ಕಾಗಿ ಹಂತಹಂತವಾಗಿ ಬಾಡಿಗೆಗೆ ನೀಡಲಾಗುತ್ತಿದೆ.
ಸಭಾಂಗಣದಲ್ಲಿದ್ದ ದೇವರ ಮೂರ್ತಿಯನ್ನು ಸಹ ಹಣಕ್ಕಾಗಿ ಬೇರೆ ಕಡೆಗೆ ವರ್ಗಾಯಿಸಿ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆ. ಸರ್ಕಾರವು ಈ ಜಾಗವನ್ನು ಗೋಶಾಲೆ ಮತ್ತು ವೃದ್ಧಾಶ್ರಮ ನಡೆಸುವುದಕ್ಕೆ ಮಂಜೂರು ಮಾಡಿದ್ದರೂ, ಇಲ್ಲಿ ಯಾವುದೇ ಗೋಶಾಲೆ ಅಥವಾ ವೃದ್ಧಾಶ್ರಮ ನಡೆಯುತ್ತಿಲ್ಲ. ಮಠದ ಆಸ್ತಿಯನ್ನು ಸ್ವಾಮೀಜಿ ಮತ್ತು ಅವರ ಹಿಂಬಾಲಕರು ಕಮರ್ಷಿಯಲ್ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಆಡಳಿತ ಮಂಡಳಿಯ ಆರೋಪ.
ಈ ಬೆಳವಣಿಗೆಯಿಂದಾಗಿ ಕಾಲೇಜಿನಲ್ಲಿ ಓದುತ್ತಿರುವ ನೂರಾರು ಬಡ ವಿದ್ಯಾರ್ಥಿಗಳ ಭವಿಷ್ಯ ಪ್ರಶ್ನಾರ್ಥಕವಾಗಿದೆ. ಕಂದಾಯ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ತನಿಖೆ ನಡೆಸಿ ಮಠದ ಸ್ವಾಮೀಜಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಆಡಳಿತ ಮಂಡಳಿ ಮತ್ತಷ್ಟು ಆರೋಪಿಸಿರುವ ಪ್ರಕಾರ, ಮಠದ ಸ್ವಾಮೀಜಿ ಸಾರ್ವಜನಿಕವಾಗಿ “ಮಠದ ಆಸ್ತಿಯನ್ನು ಸರ್ಕಾರದಿಂದ 54 ಲಕ್ಷ ರೂ.ಗೆ ಖರೀದಿ ಮಾಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ. ಅವರ ಮೇಲೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಒಬ್ಬ ವೃದ್ಧ ಮಹಿಳೆಯನ್ನು ಮೋಸ ಮಾಡಿ ಸೈಟ್ ಕಬಳಿಕೆ ಮಾಡಿ ಬೇರೊಬ್ಬರಿಗೆ ಮಾರಾಟ ಮಾಡಲಾಗಿದೆ. ಅಲ್ಲದೆ ಒಬ್ಬ ವೈದ್ಯರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ನೀಡುವುದಾಗಿ ಹೇಳಿ 10 ಲಕ್ಷ ರೂ. ಟೋಕನ್ ಹಣ ಪಡೆದು, ಹಣ ಹಿಂತಿರುಗಿಸದೆ ಸಮಸ್ಯೆ ಮಾಡಿದ ಪ್ರಕರಣವೂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. “ಹಣಕ್ಕಾಗಿ ಕಾವಿ ಧರಿಸಿ ಸಮಾಜಕ್ಕೆ ನಾಚಿಕೆ ತರುವ ಕೆಲಸ ಮಾಡುತ್ತಿದ್ದಾರೆ” ಎಂದು ಆಡಳಿತ ಮಂಡಳಿ ಆರೋಪಿಸಿದೆ.
~ವರದಿ: ಪವನ್ ಕಲ್ಯಾಣ್ ಡಿ.ಜಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಸುದ್ದಿದಿನ,ದಾವಣಗೆರೆ: ಅಪರೂಪದ ಲಿವರ್ (ಯಕೃತ್ತಿನ) ಟ್ಯೂಮರ್ನಿಂದ ಬಳಲುತ್ತಿದ್ದ 56 ವರ್ಷದ ಮಹಿಳೆಗೆ ಇಲ್ಲಿನ ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸುಮಾರು ಆರು ಗಂಟೆಗಳ ಕಾಲ ನಡೆದ ಈ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ, ವೈದ್ಯರು ಟ್ಯೂಮರ್ (ಗಡ್ಡೆ) ಯನ್ನುಸಂಪೂರ್ಣವಾಗಿ ತೆಗೆದುಹಾಕುವುದರ ಜೊತೆಗೆ ಲಿವರ್ನ ಆರೋಗ್ಯಕರ ಭಾಗಗಳಿಗೆ ಯಾವುದೇ ಹಾನಿಯಾಗದಂತೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಮೂಲದ ಈ ಮಹಿಳೆ, ಬೊಜ್ಜಿನ ಸಮಸ್ಯೆಯ ಜೊತೆಗೆ ಟೈಪ್-2 ಮಧುಮೇಹ ಮತ್ತು ಹೈಪೋಥೈರಾಯ್ಡಿಸಮ್ (ಥೈರಾಯ್ಡ್ ಸಮಸ್ಯೆ) ದಂತಹ ಕಾಯಿಲೆಗಳಿಂದಲೂ ಬಳಲುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ನಿರಂತರ ಹೊಟ್ಟೆನೋವು ಹಾಗೂ ಹಸಿವಾಗದಿರುವ ಸಮಸ್ಯೆಯಿಂದ ಅವರು ಒದ್ದಾಡುತ್ತಿದ್ದರು. ಇದಕ್ಕಾಗಿ ಸ್ಥಳೀಯ ಕ್ಲಿನಿಕ್ಗಳು ಮತ್ತು ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿನ ತಪಾಸಣೆಯಲ್ಲಿ ಅವರಿಗೆ ಲಿವರ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು.
ಸರಿಯಾದ ಚಿಕಿತ್ಸೆ ಸಿಗದೆ ಕಾಯಿಲೆ ಉಲ್ಬಣಗೊಂಡಿದ್ದಾಗ, ಅವರ ಪರಿಚಿತರೊಬ್ಬರು ದಾವಣಗೆರೆಯ ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ಗೆ ಭೇಟಿ ನೀಡಿ, ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಆರ್.ಕೆ. ಹನುಮಂತ ನಾಯ್ಕ್ ಅವರನ್ನು ಸಂಪರ್ಕಿಸಲು ಸಲಹೆ ನೀಡಿದರು. ಮೊದಲ ತಪಾಸಣೆಯ ನಂತರ, ಮಹಿಳೆಯನ್ನು ಸ್ಕ್ಯಾನಿಂಗ್ ಮತ್ತು ಇತರ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಈ ವೇಳೆ ಅವರ ಲಿವರ್ನ ಎಡಭಾಗದ (ಲೆಫ್ಟ್ ಲೋಬ್) ಆಳದಲ್ಲಿ ಗಡ್ಡೆಯೊಂದು ಬೆಳೆದಿರುವುದು ಕಂಡುಬಂತು. ಹೆಚ್ಚಿನ ಪರೀಕ್ಷೆಗಳ ನಂತರ ಇದು ‘ಇಂಟ್ರಾಹೆಪಾಟಿಕ್ ಚೋಲಾಂಜಿಯೋಕಾರ್ಸಿನೋಮ’ (intrahepatic cholangiocarcinoma) ಎಂಬ ಕಾಯಿಲೆ ಎಂದು ದೃಢಪಟ್ಟಿತು. ಈ ಹಿಂದೆಯೇ ಅವರಿಗೆ ಈ ಕಾಯಿಲೆ ಇರುವುದು ಪತ್ತೆಯಾಗಿದ್ದರೂ, ಶಸ್ತ್ರಚಿಕಿತ್ಸೆಯಲ್ಲಿನ ಸಂಕೀರ್ಣತೆಯ ಕಾರಣದಿಂದಾಗಿ ಹಿಂದಿನ ವೈದ್ಯರು ಅದನ್ನು ತೆಗೆದುಹಾಕಲು ಹಿಂದೇಟು ಹಾಕಿದ್ದರು.
ಸುಮಾರು 95 ಕೆ.ಜಿ ತೂಕವಿದ್ದ ಆ ಮಹಿಳೆ ಬೊಜ್ಜು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರಿಂದ, ಇಂತಹ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಅತ್ಯಂತ ಅಪಾಯಕಾರಿಯಾಗಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ, ಈ ರೋಗಿಯು ಶಸ್ತ್ರಚಿಕಿತ್ಸೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ಹೃದಯ ಮತ್ತು ಶ್ವಾಸಕೋಶದ ವಿವರವಾದ ಪರೀಕ್ಷೆಗಳನ್ನು ನಡೆಸಿದರು.
ಈ ಸವಾಲಿನ ಪ್ರಕರಣವನ್ನು ಕೈಗೆತ್ತಿಕೊಂಡ ಡಾ. ಹನುಮಂತ ನಾಯ್ಕ್ ಮತ್ತು ಅವರ ತಂಡ, ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಲು ಸುಮಾರು ಆರು ಗಂಟೆಗಳ ಕಾಲ ಶ್ರಮಿಸಿತು. ಇದರ ಜೊತೆಗೆ ಸಾಕಷ್ಟು ಆರೋಗ್ಯಕರ ಲಿವರ್ ಸರಿಯಾಗಿ ಕಾರ್ಯನಿರ್ವಹಿಸುವಂತೆಯೂ ನೋಡಿಕೊಂಡಿತು. ಈ ಶಸ್ತ್ರಚಿಕಿತ್ಸೆಯು ಪಿತ್ತಕೋಶದ (ಗಾಲ್ ಬ್ಲಾಡರ್) ಜೊತೆಗೆ ಲಿವರ್ನ II, III, IVa ಮತ್ತು IVb ಭಾಗಗಳನ್ನು ತೆಗೆದುಹಾಕುವ ದೊಡ್ಡ ಶಸ್ತ್ರಚಿಕಿತ್ಸೆಯನ್ನು (ಮೇಜರ್ ಲೆಫ್ಟ್ ಹೆಪಟೆಕ್ಟಮಿ) ಒಳಗೊಂಡಿತ್ತು. ಈ ಪ್ರಕ್ರಿಯೆಯಲ್ಲಿ ಮಧ್ಯದ ಹೆಪಾಟಿಕ್ ರಕ್ತನಾಳವನ್ನು ಅತ್ಯಂತ ಎಚ್ಚರಿಕೆಯಿಂದ ರಕ್ಷಿಸಲಾಯಿತು.
ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯು ಅತ್ಯಂತ ತ್ವರಿತವಾಗಿ ಚೇತರಿಸಿಕೊಂಡರು. ಶಸ್ತ್ರಚಿಕಿತ್ಸೆ ಮುಗಿದ ಆರು ಗಂಟೆಗಳಲ್ಲೇ ದ್ರವಾಹಾರ ಸೇವಿಸಲು ಆರಂಭಿಸಿದ ಅವರು, ಕ್ರಮೇಣ ಮೃದುವಾದ ಆಹಾರವನ್ನು ಸೇವಿಸುವ ಹಂತಕ್ಕೆ ತಲುಪಿದರು. ಅವರ ಆರೋಗ್ಯ ಸ್ಥಿರವಾಗಿದ್ದರಿಂದ ಕೇವಲ ಐದು ದಿನಗಳಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದ ಡಾ. ಆರ್. ಕೆ. ಹನುಮಂತ ನಾಯ್ಕ್, “ಟ್ಯೂಮರ್ನ ಗಾತ್ರ ಮತ್ತು ಅದು ಇದ್ದ ಜಾಗ, ಅದರ ಜೊತೆಗೆ ರೋಗಿಯ ಬೊಜ್ಜು ಮತ್ತು ಇತರ ವೈದ್ಯಕೀಯ ಸಮಸ್ಯೆಗಳಿಂದಾಗಿ ಇದು ತಾಂತ್ರಿಕವಾಗಿ ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸೆಯಾಗಿತ್ತು. ಆರೋಗ್ಯಕರ ಲಿವರ್ ಅನ್ನು ಉಳಿಸಿಕೊಂಡು ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ ಎಚ್ಚರಿಕೆಯ ಮೌಲ್ಯಮಾಪನ, ಶಸ್ತ್ರಚಿಕಿತ್ಸೆಯ ನಿಖರವಾದ ಯೋಜನೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ವ್ಯವಸ್ಥಿತ ಆರೈಕೆಯು ಈ ಯಶಸ್ಸಿಗೆ ಕಾರಣವಾಯಿತು” ಎಂದು ತಿಳಿಸಿದರು.
ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಕೇಂದ್ರದ ಫೆಸಿಲಿಟಿ ಡೈರೆಕ್ಟರ್ ಶ್ರೀ ಸುನಿಲ್ ಭಂಡಾರಿಗಲ್ ಮಾತನಾಡಿ, “ಹೆಚ್ಚಿನ ಅಪಾಯದಲ್ಲಿದ್ದ ರೋಗಿಗೆ ಇಂತಹ ಸಂಕೀರ್ಣವಾದ ಲಿವರ್ ಟ್ಯೂಮರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿಭಾಯಿಸಿರುವುದು ನಮ್ಮ ಶಸ್ತ್ರಚಿಕಿತ್ಸಾ ತಂಡದ ಪರಿಣತಿ ಮತ್ತು ವಿವಿಧ ವಿಭಾಗಗಳ ವೈದ್ಯರ ಸಂಯೊಜನೆ ಆರೈಕೆಯ (multidisciplinary care) ಮಹತ್ವವನ್ನು ತೋರಿಸುತ್ತದೆ. ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಸುಧಾರಿತ, ಸಕಾಲಿಕ ಮತ್ತು ರೋಗಿ-ಕೇಂದ್ರಿತ ಚಿಕಿತ್ಸೆಯನ್ನು ಒದಗಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ” ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ6 days agoಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
-
ದಿನದ ಸುದ್ದಿ6 days agoಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
-
ದಿನದ ಸುದ್ದಿ3 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ1 day agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

