ನೆಲದನಿ
ನುಡಿಯ ಒಡಲು -04 | ಭಾಷಾ ವೈವಿಧ್ಯತೆಯನ್ನು ಕಾಪಾಡುವುದೆಂದರೇನು?
- ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಭಾಗ -02
ಭಾಷೆಯನ್ನು ಮನುಷ್ಯನ ಅಂತಸ್ಥ ಸ್ವಭಾವದ ಅಭಿವ್ಯಕ್ತಿಯನ್ನಾಗಿ ನೋಡುವ ತಾತ್ವಿಕತೆ ಇವತ್ತು ಪ್ರಬಲವಾಗಿದೆ. ಇದು ಭಾಷೆಯ ಗುಣವನ್ನು ಹೇಳುತ್ತದೆ ಹೊರತು ಯಾವುದೇ ನಿರ್ದಿಷ್ಟ ಭಾಷೆಗೆ ಮಾತ್ರ ಇದನ್ನು ಅನ್ವಯಿಸಿ ಹೇಳಿಲ್ಲ. ಎಲ್ಲ ಮಾನವ ಸಹಜ ಭಾಷೆಗಳು ವೈಶ್ವಿಕ ವ್ಯಾಕರಣವನ್ನೇ (ಯುನಿವರ್ಸಲ್ ಗ್ರ್ಯಾಮರ್) ನೆಲೆಯಾಗಿಸಿಕೊಂಡಿರುತ್ತವೆ. ಈ ಸಾಮಾನ್ಯ ಗ್ರಹಿಕೆಯನ್ನು ಭಾಷಿಕ ಪರಿಕಲ್ಪನೆಗಳು ಮತ್ತು ಭಾಷೆಯ ರಾಚನಿಕ ಸಂಕೀರ್ಣತೆಯ ಪ್ರಮಾಣವನ್ನಾಗಿ ನೋಡಲಾಗುತ್ತದೆ.
ಹಾಗಾದರೆ, ಭಾಷೆಯ ತಳಹದಿಯೇ ವಿಶ್ವಾತ್ಮಕತೆಯಾದರೆ, ಚಿಂತನೆಯ ತಳಹದಿಯೂ ವಿಶ್ವಾತ್ಮಕವೇ? ಎಂಬ ಸಹಜ ಪ್ರಶ್ನೆಯೊಂದು ಇಲ್ಲಿ ಎದುರಾಗುತ್ತದೆ. ಏಕೆಂದರೆ, ನಮ್ಮ ಚಿಂತನಾಧಾರೆಯನ್ನು ನಮ್ಮ ತಾಯ್ನುಡಿ ರೂಪಿಸುತ್ತದೆ ಎಂದು ಬಲವಾಗಿ ವಾದಿಸಲಾಗಿದೆ. ‘ಮನುಷ್ಯರೆಲ್ಲರೂ ಒಂದೇ ಬಗೆಯಲ್ಲಿ ಯೋಚಿಸಬಲ್ಲರು’ ಎನ್ನುವ ತಾತ್ವಿಕ ಅಭಿಪ್ರಾಯಕ್ಕೆ ವಿರುದ್ಧವಾದ ನಂಬಿಕೆ ಇದಾಗಿದೆ. ಇದಕ್ಕೆ ಕಾರಣವೇನೆಂದರೆ ಸಾಂಸ್ಕ್ರುತಿಕ ವ್ಯತ್ಯಾಸಗಳು ಅತ್ಯಂತ ಆಳವಾಗಿ ಭಾಷೆಯೊಳಗೆ ನೆಲೆಗೊಂಡಿರುತ್ತವೆ ಎನ್ನುವುದಾಗಿದೆ. ಈ ದೇಶಿ ರಾಜಕಾರಣವನ್ನು ನಮ್ಮ ಇಡೀ ಭಾಷಿಕ ಪರಿಸರದೊಳಗೆ ಹೇಗೆ ಒಂದು ಮಾರ್ಗಸೂಚಿಯನ್ನಾಗಿ ಅಳವಡಿಸಲಾಗುತ್ತದೇ? ಎನ್ನುವುದೇ ಈ ವಾದದ ಹಿಂದಿನ ಸವಾಲು.
ಲೋಕವನ್ನು ಅರಿಯುವ, ಗ್ರಹಿಸುವ ಹಾಗೂ ಲೋಕದ ಕುರಿತು ಚಿಂತಿಸುವ ಬಗೆಗಳ ಮೇಲೆ ಭಾಷೆ ತನ್ನ ಪ್ರಭಾವವನ್ನು ಬೀರುತ್ತದೆ ಎನ್ನುವ ವಾದವನ್ನೂ ಇದು ಬಲಪಡಿಸುತ್ತದೆ. ಈ ಮೂಲಕ ಭಾಷೆ, ಸಂಸ್ಕ್ರುತಿ ಮತ್ತು ಚಿಂತನೆಗಳ ನಡುವೆ ಮಹತ್ವದ ನಂಟಸ್ತಿಕೆಯನ್ನು ಏರ್ಪಡಿಸಲಾಗಿದೆ. ಏಕೆಂದರೆ ಸಂಸ್ಕ್ರುತಿ ಪ್ರತಿದಿನದ ಬದುಕು ಎಂದಾದರೆ, ಭಾಷೆ ಪ್ರತಿದಿನದ ಮಾತು ಆಗಿರುತ್ತದೆ.
ಹಾಗಾಗಿ ಒಂದನ್ನೊಂದು ಪರಸ್ಪರ ಪ್ರಭಾವಿಸುವ ವಿನ್ಯಾಸವೊಂದು ರೂಪುಗೊಳ್ಳುತ್ತದೆ. ಆದರೆ ಸಾಂಸ್ಕ್ರುತಿಕ ಪ್ರಭಾವಗಳು ಅತ್ಯಂತ ಗಾಢವಾಗಿ ಎದ್ದು ಕಾಣುವುದು ಸಂಗೀತ ಅಭಿರುಚಿ, ಲೈಂಗಿಕತೆಯ ಬಗೆಗಿನ ಸಂವೇದನೆಗಳು ( ಮೋರ್ಸ್), ಉಡಿಗೆ ತೊಡಿಗೆಯ ವಿನ್ಯಾಸಗಳು ಎಂಬಿತ್ಯಾದಿ ಹೊರಮೈ ವಿನ್ಯಾಸಗಳಲ್ಲಿ ಮಾತ್ರ ನೋಡಲಾಗುತ್ತದೆ. ನುಡಿಯನ್ನೂ ಈ ವಿನ್ಯಾಸಗಳಲ್ಲಿ ಒಂದನ್ನಾಗಿ ಪರಿಗಣಿಸಬಹುದೇ? ಇಲ್ಲವೇ ನುಡಿಯನ್ನು ಇಡೀ ಸಂಸ್ಕ್ರುತಿಯ ನಿರ್ಮಿತಿಯನ್ನಾಗಿ (ಆರ್ಟಿಫ್ಯಾಕ್ಟ್) ನೋಡಬಹುದೇ? ಅಥವಾ ಇದೊಂದು ನಿಸರ್ಗದತ್ತವಾದ ನೆಲೆಯೇ? ಎಂಬ ಪ್ರಶ್ನೆಗಳೂ ಇಲ್ಲಿ ತಲೆಯೆತ್ತುತ್ತವೆ.
ಏಕೆಂದರೆ ‘ಜನಾಂಗೀಯ ಪ್ರಜ್ಞೆ’ (ಎತ್ನೋಗ್ರಾಫಿಕ್ ಸೆನ್ಸ್)ಯನ್ನು ರೂಪಿಸಲು ನುಡಿ ಮತ್ತು ಸಂಸ್ಕ್ರುತಿಯನ್ನು ಬಳಸಲಾಗುತ್ತದೆ. ಬಹುತೇಕ ಸನ್ನಿವೇಶದಲ್ಲಿ ಹೀಗೆ ಪ್ರಶ್ನಿಸುವ ಬಗೆಯೇ ಅಚ್ಚರಿಯ ಸಂಗತಿಯಾಗಿ ಕಾಣಬಹುದು. ಏಕೆಂದರೆ ಭಾಷೆ ಸಾಂಸ್ಕ್ರುತಿಕ ಆಚರಣೆಯೇ ಹೊರತು ಅದು ಸಾಂಸ್ಕ್ರುತಿಕ ಹುಸಿತನವಲ್ಲ ಎನ್ನುವ ನಂಬಿಕೆ ಬಲವಾಗಿರುತ್ತದೆ. ಇಲ್ಲಿ ಮತ್ತೊಂದು ಮಹತ್ವದ ಸಂಗತಿಯನ್ನು ನೋಡಬಹುದು ಅದೇನೆಂದರೆ, ಒಂದು ವೇಳೆ ಭಾಷೆಯನ್ನು ಮನಸ್ಸಿನ ಬಿಂಬವಾಗಿಯೇ ಪರಿಗಣಿಸಿದರೆ, ಅದರಲ್ಲಿ ನಾವು ಯಾವ ಪ್ರತಿಫಲನವನ್ನು ಕಾಣುತ್ತೇವೆ. ಅಂದರೆ ಮಾನವ ಸ್ವಭಾವವೋ? ಇಲ್ಲವೇ ನಮ್ಮ ಸಮೂಹಗಳ ಸಾಂಸ್ಕ್ರುತಿಕ ಆಚರಣೆಯೋ?
ದಿಟ, ಜಗತ್ತಿನಾದ್ಯಂತ ಭಾಷೆಗಳು ಭಿನ್ನಪ್ರಭೇದಗಳಿಂದ ಕೂಡಿರುತ್ತವೆ. ಹಾಗಂತ ಪ್ರತಿಯೊಂದು ಮಗುವೂ ಆಯಾ ಭಾಷೆಗೆ ಅನುಗುಣವಾದ ಕಸುವನ್ನು ಹೊಂದಿರಲಾರದು. ಪ್ರತೀ ಮಗು ಆಕಸ್ಮತ್ತಾಗಿ ಆಯಾ ಸಮುದಾಯದ ನುಡಿಯನ್ನು ಪಡೆದುಕೊಳ್ಳುತ್ತದೆ/ಕಲಿಯುತ್ತದಯೇ ಹೊರತು ಆಯಾ ನುಡಿ ಸಮುದಾಯದ ವಂಶವಾಹಿನಿಯನ್ನು ಅದು ಹುಟ್ಟಿನಿಂದ ಪಡೆದಿರುವುದಿಲ್ಲ. ಮಗುವಿನಲ್ಲಿ ಜೈವಿಕವಾಗಿ ಅಂತಸ್ಥವಾಗಿರುವುದು ನುಡಿ ಕಸುವು ಮಾತ್ರ. ಅದು ಯಾವುದೇ ನಿರ್ದಿಷ್ಟ ನುಡಿಗೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ.
ಹಾಗಾಗಿ ವೈಶ್ವಿಕ ವ್ಯಾಕರಣ ಎನ್ನುವುದು ಸಾರ್ವತ್ರಿಕ ಕಲ್ಪನೆಯಾಗಿದೆ. ಇದಕ್ಕೆ ಪ್ರಾದೇಶಿಕತೆ ಪ್ರಾಪ್ತವಾಗುವುದು ಭಾಷಿಕ ಭಿನ್ನಪ್ರಭೇದಗಳಿಂದ ಮಾತ್ರ. ಭಾಷೆಗಳ ನಡುವಣ ವ್ಯತ್ಯಾಸಗಳು ಎರಡು ನೆಲೆಯಲ್ಲಿ ಏರ್ಪಡುತ್ತವೆ. ಒಂದು ಬಳಕೆಗೆ ಸಂಬಂಧಿಸಿದರೆ, ಮತ್ತೊಂದು ರಚನೆಗೆ ಸಂಬಂಧಿಸಿದ ಬಗೆಯಾಗಿದೆ. ನುಡಿಗಳ ನಡುವಣ ರಾಚನಿಕ ಭಿನ್ನತೆಗಳನ್ನು ವಿಕಲ್ಪಗಳೆಂದು ಮತ್ತು ಬಳಕೆಗೆ ಸಂಬಂಧಿಸಿದ ಸಂಗತಿಗಳು ಸಾಂಸ್ಕ್ರುತಿಕವೂ ಹಾಗೂ ಪ್ರ್ಯಾಗ್ಮಾಟಿಕ್ ಆಯಾಮದಿಂದಲೂ ಕೂಡಿರುತ್ತವೆ.
ಹಾಗಾಗಿ ಪರಿಕಲ್ಪನೆಗಳಿಗೆ ಭಿನ್ನ ಹೆಸರು, ಸೂಚಕಗಳನ್ನು ಆಯಾ ಭಾಷಿಕರು ಆಯ್ಕೆ ಮಾಡಿಕೊಳ್ಳುವ ವಿಧಾನವನ್ನೇ, ನುಡಿಗಳ ನಡುವಣ ಪ್ರಮುಖ ವ್ಯತ್ಯಾಸಗಳನ್ನಾಗಿ ಗುರುತಿಸಲಾಗುತ್ತದೆ. ಈ ಒಂದೊಂದು ಸೂಚಕ ಇಲ್ಲವೇ ಹೆಸರು ಆಯಾ ಸಾಂಸ್ಕ್ರುತಿಕ ಅನಕೂಲತೆಗಳಿಗೆ ಹೊರತಾದ ಯಾವುದೇ ಬಗೆಯ ಕ್ಲೇಮ್ ಈ ಇಡೀ ಭಾಷಿಕ ಪ್ರಕ್ರಿಯೆಯೊಳಗೆ ಇರುವುದಿಲ್ಲ. ಮೇಲಾಗಿ ಈ ಯಾವುದೇ ಸೂಚಕ ಇಲ್ಲವೇ ಹೆಸರು ಆಯಾ ಸಂಸ್ಕ್ರುತಿಯೊಳಗೆಯೇ ನಿಚ್ಚಳವಾಗಿ ರೂಪುಗೊಂಡಿರುತ್ತದೆ ಹೊರತು, ಆಯಾ ವಸ್ತುವಿನ ಸ್ವರೂಪ/ಸ್ವಭಾವವನ್ನು ಯಥೇಚ್ಛವಾಗಿ ಸೂಚಿಸುವುದಿಲ್ಲ. ವಸ್ತುಗಳು ದಿಟದಲ್ಲಿ ಒಂದೇ ಬಗೆಯಲ್ಲಿರುತ್ತವೆ. ಕೊನೆಪಕ್ಷ, ಆಯಾ ವಾಸ್ತವದ ಗ್ರಹಿಕೆಯಲ್ಲಾದರೂ ಒಂದೇ ಬಗೆಯಲ್ಲಿರುತ್ತವೆ.
ಪ್ರತಿಯೊಂದು ಸಂಸ್ಕ್ರುತಿಯು ತಾನು ಬಯಸಿದಂತೆ, ತನ್ನದೇ ನುಡಿಯೊಳಗೆ ಪರಿಕಲ್ಪನೆಗಳನ್ನು ನೆಲೆಗೊಳಿಸಿಕೊಳ್ಳಲು ಮುಕ್ತವಾಗಿರುತ್ತದೆ. ಆದರೆ ಈ ಪರಿಕಲ್ಪನೆಗಳನ್ನು ರೂಪಿಸಿದ ಸೂಚಕಗಳ ಹಿಂದೆ ಅವುಗಳನ್ನು ರೂಪಿಸಿದವರ ಧೋರಣೆಗಳಿರುತ್ತವೆ. ಉದಾ.ಗೆ ಸಾಮಾಜಿಕ ತಾರತಮ್ಯವನ್ನು ಸೂಚಿಸುವ ಎಷ್ಟೊಂದು ಪದಗಳು ನಮ್ಮ ನುಡಿಯೊಳಗೆ ನೆಲೆನಿಂತಿವೆ. ಇದಕ್ಕೆ ಹೊರತಾಗಿಯೂ, ಒಂದೊಂದು ನುಡಿಯಲ್ಲಿಯೂ ತನ್ನದೇ ವಿಶೇಷ ಪದಕೋಶ ಮತ್ತು ಪದಸೂಚಕಗಳು ಇರುತ್ತವೆ.
ಉದಾ.ಗೆ ಜರ್ಮನ್ ಮತ್ತು ಫ್ರೆಂಚ್ ನುಡಿಗಳಲ್ಲಿ ಇಂಗ್ಲಿಶಿನ ‘ಮೈಂಡ್’ ಎಂಬ ಪದಕ್ಕೆ ಸಾಟಿಯಾದ ಪದವಿಲ್ಲ. ಹಾಗಂತ ಈ ಪರಿಕಲ್ಪನೆಯೇ ಈ ನುಡಿಗಳಲ್ಲಿ ಇಲ್ಲವೆಂದಲ್ಲ. ಹಾಗೂ ಝೆಫ್ಟಿಶ್ ಎನ್ನುವ ನುಡಿಯಲ್ಲಿ ಇಂಗ್ಲಿಶಿನ ಬಹುವಚನ ಸರ್ವನಾಮ ‘ವೀ’ ಎಂಬುದಕ್ಕೆ ಸಮನಾದ ಸರ್ವನಾಮವಿಲ್ಲ. ಆದರೆ ಈ ಕಲ್ಪನೆಯನ್ನು ಸೂಚಿಸುವ ವಿಭಿನ್ನ ಸರ್ವನಾಮ ರೂಪಗಳು ಈ ನುಡಿಯಲ್ಲಿವೆ. ‘ವೀ’ಗೆ ಸಂವಾದಿಯಾಗಿ ‘ಕಿತ’ (ಟು ಆಫ್ ಅಸ್ ಎಂದು ಅರ್ಥ. ಅಂದರೆ, ಮೀ ಆ್ಯಂಡ್ ಯು ಎಂದು), ‘ಕಿಮಿ’ (ಮೀ ಆ್ಯಂಡ್ ಸಮ್‍ಒನ್‍ಎಲ್ಸ್ ಬಟ್ ನಾಟ್ ಯು ಎಂದು ಅರ್ಥ) ಹಾಗೂ ‘ಟಯೋ’ (ಮೀ ಆ್ಯಂಡ್ ಯು ಆ್ಯಂಡ್ ಸಮ್‍ಒನ್‍ಎಲ್ಸ್ ಎಂದು ಅರ್ಥ) ಎಂಬ ಮೂರು ಭಿನ್ನ ರೂಪಗಳಿವೆ. ಈ ‘ವೀ’ ಎಂಬ ಸರ್ವನಾಮಕ್ಕೆ ತಮಿಳಿನಲ್ಲಿ ‘ನಮ್ಮ್’ ಮತ್ತು ‘ನಾಂಗ್’ ಎನ್ನುವ ಎರಡು ರೂಪಗಳಿವೆ. ಆದರೆ ಕನ್ನಡದಲ್ಲಿ ‘ನಾವು’ ಎನ್ನುವ ಒಂದೇ ರೂಪ ಇವತ್ತು ಬಳಕೆಯಲ್ಲಿದೆ.
ಸಮುದಾಯಗಳ ಸಂಸ್ಕ್ರುತಿಯ ಮೂಲಭೂತ ವಿನ್ಯಾಸಗಳನ್ನಾಗಿ ಇಂತಹ ಕೆಲವು ಕೋರ್ ವ್ಯಾಲ್ಯೂಗಳನ್ನು ಗುರುತಿಸಲಾಗುತ್ತದೆ. ಈ ಮೌಲ್ಯಗಳನ್ನು ಪ್ರತೀ ಸಮುದಾಯದ ಸಂಸ್ಕ್ರುತಿಯನ್ನು ಬಿಂಬಿಸುವ ಮೂಲಭೂತ ಅಂಶಗಳಲ್ಲಿ ಒಂದೆಂದು ಮಾನ್ಯಮಾಡಲಾಗುತ್ತದೆ.
ಮತ್ತು ಆಯಾ ಸಮೂಹಗಳ ಸಾಂಕೇತಿಕ ಪ್ರಾತಿನಿಧ್ಯತೆ ಹಾಗೂ ಸದಸ್ಯತ್ವವನ್ನು ಪಡೆದುಕೊಳ್ಳಲೂ ಈ ಮೌಲ್ಯಗಳನ್ನು ಪರಿಗಣಿಸಲಾಗುತ್ತದೆ (ಸ್ಮೋಲಿಕ್ಜ್ ಜೆ, 1981:76). ಏಕೆಂದರೆ, ಈ ಕೋರ್ ಮೌಲ್ಯಗಳ ಸಿದ್ಧಾಂತವು ಸಮೂಹಗಳನ್ನು ವಿಶಷ್ಟ, ಜನಾಂಗೀಯ, ಧಾರ್ಮಿಕ, ಸಾಂಸ್ಕ್ರುತಿಕ ಸಮುದಾಯಗಳನ್ನಾಗಿ ಬಲಪಡಿಸಲು ಒತ್ತಾಸೆಯಾಗುತ್ತದೆ ಎಂಬ ವಾದವನ್ನು ಸಮಾಜಶಾಸ್ತ್ರಜ್ಞ ಸೋಲ್ಮಿಕ್ಜ್. ಜೆ (1999) ಅತ್ಯಂತ ಬಲವಾಗಿ ಮಂಡಿಸುತ್ತಾನೆ. ಸಮೂಹಗಳ ಅಸ್ಮಿತೆಯನ್ನು ಗುರುತಿಸುವಲ್ಲಿ ಸಾಂಸ್ಕ್ರುತಿಕ ವಿನ್ಯಾಸಗಳು ಅತ್ಯಂತ ನಿರ್ಣಾಯಕ ಮತ್ತು ವಿಶಿಷ್ಟವೆಂದು ಪರಿಗಣಿಸಿದಾಗಲೆಲ್ಲಾ ಈ ವಾದವು ನೆರವಾಗುತ್ತದೆ.
ನುಡಿ ಮತ್ತು ಜನಾಂಗಗಳ ನಡುವಿನ ನಂಟಸ್ತಿಕೆಯನ್ನು ವಿವರಿಸಲು ಸ್ಮೋಲಿಕ್ಜ್ ವಿಭಿನ್ನ ಜನಾಂಗಗಳ ಮಾದರಿಗಳನ್ನು ಉಲ್ಲೇಖಿಸುತ್ತಾನೆ (1981:76-81). ಯಾವುದೇ ಜನಾಂಗೀಯತೆಯ ಸಾಮಾಜಿಕ ಅಂತಸ್ತನ್ನು ಸೂಚಿಸಲು ಈ ಕೋರ್ ಮೌಲ್ಯವನ್ನು ಸಂಸ್ಕ್ರುತಿಯ ಅತ್ಯಂತ ಮಹತ್ವದ ಗುಣವೆಂದು ಬಣ್ಣಿಸಲಾಗುತ್ತದೆ. ಮುಖ್ಯವಾಗಿ ತಾಯ್ನುಡಿಯ ಪರಿಕಲ್ಪನೆಯನ್ನು ಬಲಪಡಿಸುವಲ್ಲಿ ಇಂತಹ ತಾತ್ವಿಕ ಚೌಕಟ್ಟುಗಳು ಪುಷ್ಟಿ ನೀಡುತ್ತವೆ.
ಅಂದರೆ, ಸಂಸ್ಕ್ರುತಿಯನ್ನು ನುಡಿಯೊಂದರ ಸಾಂಕೇತಿಕ ವಿನ್ಯಾಸವನ್ನಾಗಿ ಇದನ್ನು ಮುಂಚೂಣೆಗೆ ತರಲಾಗುತ್ತದೆ. ನುಡಿಕೇಂದ್ರಿತ ಆರಾಧನೆಯ ಮಾದರಿಯನ್ನು ಇಲ್ಲಿ ನಿಚ್ಚಳವಾಗಿ ಕಾಣುತ್ತೇವೆ. ನುಡಿಯೊಂದನ್ನು ಜ್ಞಾನ ಪ್ರಸಾರಣದ ನೆಲೆಯನ್ನಾಗಿ ರೂಪಿಸುವ ಬದಲು ಭಾವನಾತ್ಮಕ ವಿದ್ಯಮಾನವಾಗಿ ಕಲ್ಪಿಸಲಾಗುತ್ತದೆ. ನುಡಿ ಬೆಳವಣಿಗೆ ಎಂಬುದು ಆಯಾ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ರೂಪಿಸಲು ಹೇಗೆ ಮತ್ತು ಎಷ್ಟು ನೆರವಾಗುತ್ತದೆ ಅನ್ನುವುದನ್ನು ಆಧರಿಸುತ್ತದೆ.
ಹಾಗಾಗಿ ಅಸ್ಮಿತೆ ಎನ್ನುವುದು ಕೇವಲ ಸಂವಹನ ಮಾಧ್ಯಮಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲ. ಅದು ನಮ್ಮ ಬದುಕಿನ ಅನುಭವಗಳು, ನಮ್ಮ ಹಾಗೂ ಮುಂದಿನ ತಲೆಮಾರುಗಳ ಸ್ವಾಯತ್ತ ಬದುಕಿನ ದಾರಿಗಳನ್ನು ರೂಪಿಸುವ ಬಗೆಯೂ ಆಗಿರುತ್ತದೆ. ಈ ಚಹರೆಗಳು ಮತ್ತು ತಿಳಿವಿನ ವಿನ್ಯಾಸಗಳು ಆಯಾ ಸಮುದಾಯದ ನುಡಿಯೊಡನೆ ಬೆರೆತುಗೊಂಡಿರುತ್ತವೆ. ಇವುಗಳು ಆಯಾ ನುಡಿಯಲ್ಲಿಯೇ ಅಂತಸ್ಥವಾಗಿರುತ್ತವೆ ಎಂದು ನಾನು ಹೇಳಲಾರೆ.
ಆದರೆ ಸಮೂಹಗಳ ವಿಮೋಚನೆ, ನಿಯಂತ್ರಣ ಹಾಗೂ ಸ್ವಾಯತ್ತತೆಯ ರಚನೆಗಳು ಆಯಾ ನುಡಿಯಲ್ಲಿ ನೆಲೆಗೊಂಡಿರುತ್ತವೆ. ಆದ್ದರಿಂದ ನುಡಿ ಒಂದು ಹಕ್ಕಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವಾಯತ್ತತೆಯನ್ನು ಪಡೆದಿರುತ್ತದೆ. ಸಬಾಳ್ವೆಯನ್ನು ವಿರೋಧಿಸುವ, ಪ್ರತಿಪಾದಿಸುವ ಮತ್ತು ಕಂಡರಿಸುವ ವಿದ್ಯಮಾನವಾಗಿರುತ್ತದೆ. ಕನ್ನಡ ಸಮುದಾಯಗಳಲ್ಲಿ ಶೋಷಣೆಗೆ ಒಳಗಾಗಿರುವ ಸಮೂಹಗಳು ಬೇರೊಂದು ನುಡಿಯ ಮೂಲಕ ತಮ್ಮ ಸರ್ವಸ್ವತಂತ್ರ ಅಸ್ಮಿತೆಯನ್ನು ಪಡೆಯಲು ಹೇಗೆ ಸಾಧ್ಯ? ಇಂತಹದೊಂದು ವಿದ್ಯಮಾನ ಇದುವರೆಗೂ ಜರಿಗಿರುವುದಿಲ್ಲ. ಮಾನವರ ಅದಮ್ಯ ಚೈತನ್ಯ ಒಂದು ಪ್ರತ್ಯೇಕ ನೆಲೆಯಲ್ಲ.
ದಿಟ, ಬದುಕಿನ ಆಚರಣೆಗಳಿಗೂ ನುಡಿಗೂ ಯಾವುದೇ ಸಾವಯವ ನಂಟಸ್ತಿಕೆ ಇಲ್ಲವಾದರೂ ಅವುಗಳು ಒಂದು ಮತ್ತೊಂದನ್ನು ನೆಮ್ಮಿಕೊಂಡಿರುತ್ತದೆ. ಹಾಗಾಗಿ ನುಡಿಯೊಳಗಿನ ಬಹುತ್ವ ಅದು ಸಾಂಸ್ಕ್ರುತಿಕ ಬಹುತ್ವವಾಗಿ ತೋರುತ್ತದೆ. ನುಡಿ ಚೈತನ್ಯ, ನುಡಿ ಮಾನ್ಯತೆ ಮತ್ತು ನುಡಿ ಅಸ್ಮಿತೆಗಳು ಏರ್ಪಡುವುದು ಕೇವಲ ಸಮೂಹಗಳ ಚೈತನ್ಯವಾಗಿ ಮೈದಾಳುತ್ತವೆ. ಒಂದುವೇಳೆ, ಇಂತಹ ಸಮುದಾಯ ತನ್ನದೇ ನುಡಿ ಜಾಯಮಾನಗಳಿಂದ ಕಳಚಿಕೊಂಡು, ಬೆರೊಂದು ನುಡಿ ಸಮುದಾಯದಲ್ಲಿ ಐಕ್ಯವಾದರೆ, ಆ ಸಮುದಾಯದ ಅಸ್ಮಿತೆಯ ರಚನೆಗಳು ಯಾವವು? ಏಕೆಂದರೆ, ಆ ಸಮುದಾಯದ ಸಾಂಸ್ಕ್ರುತಿಕ ಕುರುಹುಗಳು ಇಲ್ಲವೇ ಆಚರಣೆಗಳು, ಈಗಾಗಲೇ ಇದು ಐಕ್ಯಗೊಂಡ ನುಡಿಯ ವ್ಯಾಪ್ತಿಯೊಳಗೆ ಸೇರಿಕೊಳ್ಳಲು ಸಾಧ್ಯವಿಲ್ಲ.
ಸಾಮಾಜಿಕ ಆಚರಣೆಗಳು ಮತ್ತು ಸಂವಹನ ಮಾದರಿಗಳು ಪ್ರತ್ಯೇಕವಾಗಿ ವ್ಯವಹರಿಸುತ್ತವೆಯೇ? ಅಂದರೆ ಸಮುದಾಯಗಳ ನೆನಪು ಹಾಗೂ ಲೋಕಗ್ರಹಿಕೆಗಳು ಅವರ ತಿಳಿವಿನ ಮಾದರಿಗಳಾಗದೇ ಹೋದರೆ, ಆ ಸಮೂಹಗಳ ಅಸ್ತಿತ್ವ, ಅಸ್ಮಿತೆ, ಪ್ರಜ್ಞೆಯ ಚಹರೆಗಳು ಹೇಗೆ ಮೈಪಡೆಯುತ್ತವೆ? ಜನಾಂಗಗಳಿಗೆ ತಮ್ಮ ಬೇರುಗಳನ್ನು ನೆಲೆಗೊಳಿಸುವುದಕ್ಕೆ ತಮ್ಮದೇ ನುಡಿಯ ಅವಶ್ಯಕತೆ ಇರುತ್ತದೆ. ಸಮುದಾಯವೊಂದು ನುಡಿರಹಿತ ಅಸ್ತಿತ್ವವನ್ನು ಹೊಂದಿದ ಕಡೆಯಲ್ಲ ಪರಾಧೀನವಾಗಿರುತ್ತದೆ.
ಚರಿತ್ರೆ, ರಾಷ್ಟ್ರೀಯತೆ ಹಾಗೂ ರಾಜಕೀಯ ಅಧಿಕಾರದಂತಹ ನಿಲುವುಗಳನ್ನು ಕುರಿತು ನಾನು ಮಾತ್ನಾಡುತ್ತಿಲ್ಲ. ಬದಲಾಗಿ ಬದುಕಿನ ಅರಿವು-ತಿಳಿವುಗಳನ್ನು ಪ್ರಮಾಣಗೊಳಿಸುವ ಮಾನದಂಡಗಳನ್ನು ನಮ್ಮದೇ ನುಡಿಯ ಮೂಲಕ ಪಡೆಯಲು ಸಾಧ್ಯವೇ ಹೊರತು ಈ ವಿನ್ಯಾಸಗಳನ್ನು, ಬೇರೊಂದು ನುಡಿಯಲ್ಲಿ ಸಂಚಿತವಾಗಿರುವ ತಿಳಿವಿನಿಂದಲ್ಲ. ಪದಗಳ ಎರವಲು ಇಲ್ಲವೇ ಅನುಭವಗಳ ಅನುವಾದದಿಂದ ನುಡಿಯೊಂದು ಬೆಳೆಯುತ್ತದೆ ಎನ್ನುವ ಕಲ್ಪನೆಯೇ ಅತ್ಯಂತ ಸಂಕುಚಿತ ಕಣ್ನೋಟದಿಂದ ಕೂಡಿದೆ.
ಹೌದು, ಇಂಗ್ಲಿಶು ನುಡಿ ಮುನ್ನೂರ ಅರವತ್ತಕ್ಕೂ ಹೆಚ್ಚು ನುಡಿಗಳಿಂದ ಪದಗಳನ್ನು ಎರವಲು ಪಡೆದಿದೆ. ಹಾಗಂತ, ಅದು ತನ್ನ ಜಾಯಮಾನವನ್ನೇ ಕಳಿಚಿಕೊಂಡು, ಈ ಎಲ್ಲ ನುಡಿಗಳ ಜಾಯಮಾನಕ್ಕೆ ಒಗ್ಗಿಕೊಂಡಿದೆ ಎಂದಲ್ಲ. ಬೇರೆ ನುಡಿಗಳ ತಾತ್ವಿಕ ಮತ್ತು ಜ್ಞಾನ ಮೀಮಾಂಸೆಗಳನ್ನು ಇಂಗ್ಲಿಶಿಗೆ ಅನುವಾದ ಮಾಡುವುದರ ಹಿಂದಿನ ಉದ್ದೇಶ ಕೇವಲ ಆ ನುಡಿಯ ಬೆಳವಣಿಗೆಗೆ ಸೀಮಿತವಾಗಿಲ್ಲ.
ಇದು ಜಿಯೋ-ಪಾಲಿಟಿಕ್ಸ್‍ಗೆ ಸಂಬಂಧಿಸಿದ ಇಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವ ವಿಧಾನ ಮಾತ್ರ. ಅಂತರ್ರಾಷ್ಟ್ರೀಯ ಸಂವಹನ ಮಾಧ್ಯಮವಾಗಿ ಇಂಗ್ಲಿಶು ವ್ಯವಹರಿಸುವುದರಿಂದ ಈ ಎರವಲು ಮತ್ತು ಅನುವಾದ ಪ್ರಕ್ರಿಯೆಗಳು ಯಥೇಚ್ಛವಾಗಿ ನಡೆಯುತ್ತವೆ.
ಇದನ್ನು ಸಾರಸಗಟಾಗಿ ಕನ್ನಡ ನುಡಿಯ ಪ್ರಗತಿ ಮತ್ತು ಜ್ಞಾನ ಮೀಮಾಂಸೆಗಳ ಬೆಳವಣಿಗೆಯ ಸೂಚಕವನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ. ಗ್ರೀಕ್, ಸಂಸ್ಕ್ರುತ, ಪರ್ಶಿಯನ್ ಮೊದಲಾದ ನುಡಿಗಳಲ್ಲಿ ಮೈದಾಳಿದ ಪುರಾಣ, ಶಾಸ್ತ್ರಗಳು ಮತ್ತು ಮೀಮಾಂಸೆಗಳನ್ನು ಎಲ್ಲಿಂದ ಎರವಲು ಪಡೆಯಲಾಯಿತು ಮತ್ತು ಯಾವ ನುಡಿಗಳಿಂದ ಅನುವಾದ ಮಾಡಲಾಯಿತು ಎಂಬುದೆಲ್ಲ ವಿಸ್ಮಯವೇ ಸರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ3 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ5 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ1 day agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
-
ಅಂಕಣ10 hours agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ


