ದಿನದ ಸುದ್ದಿ
ಪ್ರಿಯ ತೇಜಸ್ವಿ..!
ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ‘ ಕಾದಂಬರಿಯ ಬಗ್ಗೆ ಪಿ.ಲಂಕೇಶ್ ಬರೆದಿರುವ ಲೇಖನ ಇದು. ಈ ಲೇಖನ ಬರೆಯುವ ಹಿಂದಿನ ದಿನ ಕನ್ನಡ ‘ಓರಾಟಗಾರರು‘ ಲಂಕೇಶ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಘಾಸಿ ಮಾಡಿದ್ದರು. ದೈಹಿಕ ನೋವನ್ನು ನಿವಾರಿಸುವ ಉದಕದಂತೆ ‘ಕರ್ವಾಲೋ‘ ಕಾದಂಬರಿ ಒದಗಿಬಂದು, ಲಂಕೇಶರು ವಿಮರ್ಶೆಯ ಗದ್ಯಕ್ಕೂ ಕಾವ್ಯ ಸ್ಪರ್ಶ ನೀಡಿ ಬರೆದಿದ್ದು, ಓದುಗರನ್ನು ಸೆಳೆಯುತ್ತದೆ. ಕರ್ವಾಲೋ ಕಾದಂಬರಿಯ ಓದು ಲಂಕೇಶರಿಗೆ ದೈಹಿಕ ನೋವನ್ನು ನೀಗಿಸಿತೆಂದರೆ ಅಕ್ಷರ ಥೆರಪಿ ದೊಡ್ಡದೇ ನಿಜ.
ಪ್ರಿಯ ತೇಜಸ್ವಿ,
‘ಕನ್ನಡದ ಉಟ್ಟು ಓರಾಟಗಾರ’ರ ಕೆಲಸದಿಂದಾಗಿ ನನ್ನ ಮೈಯಲ್ಲಿ ಸರಿಯಿಲ್ಲದೆ ನಿಮಗೆ ಈ ಕಾಗದ ಬರೆಯುವುದು ತಡವಾಯಿತು. (ಆಗತಾನೆ ವಾಟಾಳ್ ನಾಗರಾಜ್ ಕಡೆಯವರಿಂದ ಲಂಕೇಶ್ ರ ಮೇಲೆ ಹಲ್ಲೆಯಾಗಿತ್ತು) ಹೊಡೆತದಿಂದಾಗಿ ಮೈಕೈ ನೋವಾಗಿ ಮಲಗಿದ್ದಾಗ ಕೂಡ ನನ್ನ ಕೋಣೆಯ ತುಂಬ ನಗೆ ಹಬ್ಬಿತ್ತು. ನನ್ನನ್ನು ನೋಡಿದವರು ಅಚ್ಚರಿ ಪಡುವ ರೀತಿಯಲ್ಲಿ ಗೆಲುವಾಗಿದ್ದೆ. ಇದಕ್ಕೆ ಕಾರಣ ನಿಮ್ಮ ಪುಸ್ತಕ ‘ಕರ್ವಾಲೋ.’
ನಿಮ್ಮ ಈ ‘ಕರ್ವಾಲೋ.’ ಕಾದಂಬರಿಯ ಮೇಲೆ ಒಳ್ಳೆಯ ವಿಮರ್ಶಕರು ಒಳ್ಳೊಳ್ಳೆಯ ವಿಮರ್ಶೆ ಬರೆಯಲಿದ್ದಾರೆ ಎಂಬ ಬಗ್ಗೆ ಅನುಮಾನವಿಲ್ಲ. ನನಗೆ ಓದಿದೊಡನೆ ಅನ್ನಿಸಿದ್ದನ್ನು ಬರೆಯುತ್ತಿದ್ದೇನೆ. ನನ್ನ ಸಂತೋಷವನ್ನು ನಮ್ಮ ಓದುಗರೂ ಪಡೆಯಲೆಂಬ ಕಾರಣಕ್ಕೆ ಇದನ್ನು ಅಚ್ಚು ಮಾಡುತ್ತಿದ್ದೇನೆ.
ನಿಮ್ಮ ಕಾದಂಬರಿಯಲ್ಲಿ ತುಂಬ ಒಳ್ಳೆಯದೆಂದು ಹೊಳೆದದ್ದು ನಿಮ್ಮ ತಮಾಷೆ ಮತ್ತು ಈ ತಮಾಷೆಯ ಮೂಲಕವೇ ನೀವು ನಿಜವಾಗಿಸುವ ಮನುಷ್ಯರು.
ನಮ್ಮ ಈ ಕೊಳೆತು ಹೋಗಿರುವ ಸಮಾಜದಲ್ಲಿ ಎಲ್ಲೆಲ್ಲೋ ಇದ್ದು ತಮ್ಮ ಜೀವನ ಸಾಗಿಸುವ, ತಮ್ಮ ಕೈಲಾದ್ದು ಮಾಡುವ ಮಂದಣ್ಣ ಮತ್ತು ಕರ್ವಾಲೋಗಳು ನಿಮ್ಮ ತಮಾಷೆಯನ್ನು ತೂರಿ ನಮ್ಮ ಮನಸ್ಸು ಕಲಕುತ್ತಾರೆ.
ಒಂದು ಕಡೆ ಮಂದಣ್ಣನಿದ್ದಾನೆ. ಹುಳಹುಪ್ಪಟೆಗಳನ್ನು ಹುಡುಕುತ್ತ ಹಿಡಿಯುತ್ತ ಹೋಗುವ ಈತನ ಪ್ರಕಾರ ಈತನ ಜೀವನದ ಏಕ ಮಾತ್ರ ಗುರು ‘ಮೇರೇಜ್’ ಆಗುವುದು. ಎಲ್ಲೆರೆದುರು ಮದುವೆಯಾಗಿ ಫೋಟೋ ಹಿಡಿಸಿಕೊಂಡು ನಾಲ್ಕೈದು ಮಕ್ಕಳು ಮಾಡುವ ಸದುದ್ದೇಶ ಉಳ್ಳ ಈತ ‘ಮೇರೇಜ್’ನಲ್ಲೇ ವಿಫಲ. ಹಳ್ಳಿಯ ಸಾಮಾನ್ಯ ಅಪಾಪೋಲಿಯಂತೆ ಕಾಣುವ ಈತನ ಸರಳ ಆಶೆಗಳು ಇವನ ಆಳದ ಮುಗ್ಧತೆಯನ್ನು ತೋರುತ್ತವೆ.
ಈ ಮುಗ್ಧತೆಯೊಂದಿಗೇ ಈತನನ್ನು ಇವನಿಗೆ ಗೊತ್ತಿಲ್ಲದಂತೆಯೇ ಸೆಳೆಯುವ ಪ್ರಕೃತಿಯ ಬಗೆಗಿನ ಕುತೂಹಲ ಇದೆ. ಈ ಕುತೂಹಲದಿಂದಾಗಿ ಈತ ಅತ್ಯಂತ ಅಕಾಡೆಮಿಕ್ ಆಗಿ ಕಾಣುವ ಮಾನವತಾವಾದಿ ಕರ್ವಾಲೋ ಎಂಬ ಫ್ರೊಫೆಸರ್ ಗೆ ಗೆಳೆಯನಾಗಿದ್ದಾನೆ.
ಕರ್ವಾಲೋವನ್ನು ನೀವು ಚಿತ್ರಿಸಿರುವ ರೀತಿಯಲ್ಲಿ ನಿಮ್ಮ ಪ್ರತಿಭೆ ಚೆನ್ನಾಗಿ ಕಾಣುತ್ತದೆ. ಮಂಗಳೂರರು ಕಡೆಯ ಬಡ ಪಾದ್ರಿಯಂತಿರುವ ಈತ ನೀವು ಸಂಶಯದಿಂದ ನೋಡುವ ಮತ್ತು ನಿಮ್ಮ ಆಳದಲ್ಲಿರುವ ಸಂಶೋಧಕನಿಗೆ ಸಂಕೇತವಾಗಿದ್ದಾನೆ. ಈ ಕರ್ವಾಲೋ ಕೂಡ ಮಂದಣ್ಣನಂತೆ ಹುಳಹುಪ್ಪಟೆ ಪ್ರಾಣಿಗಳನ್ನು ಕಂಡು ಅಭ್ಯಾಸ ಮಾಡುವ ಮನುಷ್ಯ.
ಈತನ ಶಿಸ್ತು ಜೀವನದ ಹುಚ್ಚು ಹೊಳೆಗೆ ಹಾಕಿದ ಅಣೆಕಟ್ಟಿನಂತಿದೆ. ಪ್ರಕೃತಿಯ ಲಕ್ಷೋಪಲಕ್ಷ ಜೀವಿಗಳ ಬಗ್ಗೆ ಕುತೂಹಲ ತೋರುತ್ತ ಮೇಲ್ನೋಟಕ್ಕೆ ಒಣಕಲು ಮನುಷ್ಯನಂತೆ ಕಾಣುವ ಈತನಲ್ಲಿ ಮಾನವೀಯತೆ ಇದೆ. ನಿಮ್ಮ ಮಂದಣ್ಣನ ಬಗೆಗಿನ ಹಾಸ್ಯದ ಹಿಂದೆ ಹರಿಯುವ ಪ್ರೀತಿಯಂತೆಯೇ ಈ ಕರ್ವಾಲೋನ ಶಿಸ್ತಿನ ಹಿಂದೆ ಹರಿಯುವ ಅದಮ್ಯ ಕುತೂಹಲ ನನ್ನನ್ನು ಹರ್ಷದಿಂದ ಅಲ್ಲಾಡಿಸಿದ ಅಂಶ.
ನನಗೆ ಈ ಕಾದಂಬರಿ ನಾಲ್ಕು ಮುಖ್ಯ ಕಾರಣಕ್ಕೆ ತುಂಬ ಚೆನ್ನಾಗಿದೆ. ಮೊದಲನೆಯದಾಗಿ ನೀವು ಬರೀ ಹಂಜಿಪುಟ್ಟಿ ಎಂಬಂಥ ಹಾಸ್ಯಶೈಲಿಯಲ್ಲಿ ಬರೆಯುತ್ತ, ರೇಗುತ್ತ, ತಡವರಿಸುತ್ತಾ ಮನುಷ್ಯರ ಜೀವನವನ್ನು ಚಿತ್ರಿಸುವ ಬಗೆ. ಲಕ್ಷ್ಮಣ, ಮಂದಣ್ಣ, ಕರಿಯಣ್ಣ, ಯಂಕ್ಟ ಮುಂತಾದವರು ನಿಮ್ಮ ಶೈಲಿಯ ಮೂಲಕ ಜೀವ ಪಡೆಯುತ್ತಾರೆ. ನಿಮ್ಮ ಭಾವನೆಯ ಏರಿಳಿತಗಳ ನಡುವೆ ಈ ಜನ ಎದ್ದು ಓಡಾಡತೊಡಗುತ್ತಾರೆ.
ಕೋಟ್ಯಂತರ ವರ್ಷಗಳ ಹಿಂದಿನಿಂದ ಇರುವ ಪ್ರಾಣಿಗಳನ್ನು ಹುಡುಕುತ್ತ ನೀವು ನಿಮ್ಮ ಸುತ್ತಣ ವಿವಿಧ ಮಟ್ಟದ ಜನರ ಹಲಬಗೆಯ ವಿಕಾಸ ಅಥವಾ ವಿಕಾಸಗೊಳ್ಳದಿರುವಿಕೆಯನ್ನು ಚಿತ್ರಿಸುವುದು. ನೀವು ನೋಡುವ ವ್ಯಕ್ತಿಗಳ ರೂಪ ಈ ಕಾದಂಬರಿಯ ವರ್ಟಿಕಲ್ ಮತ್ತು ಹಾರಿಜಾಂಟಲ್ ಗುಣ ತೋರುತ್ತದೆ. ಇದು ಎರಡನೆಯ ಅಂಶ.
ಮೂರನೆಯದಾಗಿ ನೀವು ತೋರುವ ಪ್ರಜ್ಞೆಯ ವಿಸ್ತಾರ ಮತ್ತು ಸಂಶೋಧನೆಯ ಸಂಭ್ರಮ. ಹೊಟ್ಟೆಪಾಡಿಗೆ ಪ್ರಾಣಿಶಾಸ್ತ್ರ ಕಲಿತು ‘ಸಂಶೋಧಿಸುವ’ ಜನರು ಈ ನಿಮ್ಮ ಕಾದಂಬರಿಯ ಸಂದರ್ಭದಲ್ಲಿ ಹಾಸ್ಶಾಸ್ಪದ ಅನ್ನಿಸುತ್ತಾರೆ.
ಆಮೇಲೆ ನಮ್ಮಲ್ಲಿ ಕೇವಲ ಸೋಷಲಿಸ್ಟನೊಬ್ಬ ಮಾತ್ರ ವರ್ಣಿಸಬಲ್ಲಂಥ ಅನೇಕ ಜಾತಿ ಜನ, ವರ್ಗಗಳನ್ನು ತಿಳಿದುಕೊಂಡು ಚಿತ್ರಿಸುವ, ಅತ್ಯಂತ ತೀವ್ರ ಆಸಕ್ತಿ ಮತ್ತು ಪ್ರೇಮದಿಂದ ಮಾತ್ರ ಕೈಗೂಡುವ ಗ್ರಹಿಕೆ. ಈ ಜೇಬುಗಳ್ಳನೆನ್ನಿಸಿಕೊಂಡ ಸಾಬರ ಪ್ಯಾರ ಹೇಗೆ ನಿಮ್ಮ ಮಾನವೀಯತೆಯಲ್ಲಿ ಮಗುವಾಗಿ ಹೊಂದಿಹೋಗುತ್ತಾನೆ!
ಎಲ್ಲಕ್ಕಿಂತ ಮುಖ್ಯವಾಗಿ ಪ್ರಕೃತಿಯ ಬಗ್ಗೆ ನಿಮಗಿರುವ ನಿಲುವು. ಈ ಕಾದಂಬರಿಯ ನಾಯಕ ಕೆಲವೊಮ್ಮೆ ಬೇಸರಗೊಂಡು ತನ್ನ ತೋಟ ಮಾರಿ ಪೇಟೆ ಸೇರಲು ತೀರ್ಮಾನಿಸುತ್ತಾನೆ. ಆದರೆ ಈ ಪ್ರಕೃತಿ ಅವನನ್ನು ಬಿಡುವುದಿಲ್ಲ.
ಮಂದಣ್ಣನೆಂಬ ಮನುಷ್ಯನ ಪ್ರಕೃತಿಯಿಂದ ಹಿಡಿದ ಹಾರುವ ಓತಿಕಾಟದ ಪ್ರಕೃತಿ ವಿಕಾಸದವರೆಗೆ ಈ ಅಪಾರ ಕುತೂಹಲ ಹಬ್ಬಿದೆ. ಕಾರಂತ, ಕುವೆಂಪು ತರುವಾಯ ಪ್ರಕೃತಿಯನ್ನು ಇಷ್ಟು ಆಳವಾಗಿ ಪ್ರೀತಿಸುವ ಮತ್ತು ಅದಕ್ಕೆ ತಕ್ಕ ಕಾರಣಗಳುಳ್ಳ ವ್ಯಕ್ತಿ ನೀವೇ ಎಂದು ಕಾಣುತ್ತದೆ. ಈ ಇಡೀ ಕಾದಂಬರಿ ಪ್ರಕೃತಿಯ ಅಗಾಧ ಕೌತುಕಕ್ಕೆ ಹಿಡಿದ ಕನ್ನಡಿಯಾಗಿದೆ.
ಮೇಲಿನ ಮಾತುಗಳನ್ನು ಕಷ್ಟಪಟ್ಟು ಬರೆಯುತ್ತಿದ್ದೇನೆ. ದಿನದಿನಕ್ಕೆ ನಮ್ಮ ಜನರ ಬದುಕು ಕ್ರೂರವೂ ಅರ್ಥಹೀನವೂ ಆಗುತ್ತಿದೆ. ನಮ್ಮ ಹಾಸ್ಯ, ಟೀಕೆಗಳನ್ನು ಮೀರಿದ ರಾಕ್ಷಸರ ಬೆಳವಣಿಗೆ ನಮ್ಮ ಎಲ್ಲ ಒಳ್ಳೆಯದಕ್ಕೆ ಸವಾಲಾಗುತ್ತಿದೆ. ನಮ್ಮ ಜನ ತಮ್ಮ ಹಳ್ಳಿ, ಪರಿಸರಕ್ಕೆ ಮೀರಿದ ದುಷ್ಟ ಶಕ್ತಿಗಳ ಗುಲಾಮರಾಗುತ್ತಿದ್ದಾರೆ. ಈ ಮಟ್ಟದಲ್ಲಿ ನೋಡಿದಾಗ ನಿಮ್ಮಂಥ ಬಹುಮುಖ್ಯ ಬರಹಗಾರರ ಲೇಖನಗಳು ಕೂಡ ಎಲ್ಲೋ ರೊಮ್ಯಾಂಟಿಕ್ ಅನ್ನಿಸುತ್ತಾ ಹೋತುತ್ತವೆ.
ಬೇಸರ ಪಡಬೇಡಿ. ಎಲ್ಲಾ ಸರಿಹೋದೀತು. ನಾನು ಕೂಡ ಕೆಲವೊಮ್ಮೆ ಈ ಮಂದಣ್ಣನಂತಿದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಂಡಿದ್ದೇನೆ.
-ಪಿ.ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೀಲು ಮತ್ತು ಮೂಳೆ ಚಿಕಿತ್ಸೆ ; ರೋಬೋಟಿಕ್ ಮತ್ತು ಮಿನಿಮಲಿ ಇನ್ನೇಸಿವ್ ಸರ್ಜರಿಗಳಲ್ಲಿ ಮಹತ್ವದ ಬದಲಾವಣೆ : ಡಾ.ಲೋಕೇಶ್ ಎ. ವೀರಪ್ಪ
ಸುದ್ದಿದಿನ,ದಾವಣಗೆರೆ:ವಯೋಸಹಜವಾಗಿ ಕಂಡುಬರುವ ಮೊಣಕಾಲು, ಸೊಂಟ, ಭುಜ ಮತ್ತು ಕ್ರೀಡಾ ಸಂಬಂಧಿತ ಸಂಧಿ ಸಮಸ್ಯೆಗಳಿಗೆ ಸಮಯೋಚಿತ ಚಿಕಿತ್ಸೆ ಮತ್ತು ನೂತನ ಶಸ್ತ್ರಚಿಕಿತ್ಸಾ ತಂತ್ರಜ್ಞಾನಗಳು ಹೇಗೆ ಸಹಾಯವಾಗುತ್ತಿವೆ ಹಾಗೂ ಈ ಚಿಕಿತ್ಸೆಗಳು ನೋವು ಕಡಿಮೆ ಮಾಡುವುದರ ಜೊತೆಗೆ, ರೋಗಿಗಳು ಮತ್ತೆ ಸ್ವತಂತ್ರವಾಗಿ ನಡೆಯಲು, ದಿನನಿತ್ಯದ ಚಟುವಟಿಕೆಗಳಿಗೆ ಮರಳಲು ಮತ್ತು ಆತ್ಮವಿಶ್ವಾಸದಿಂದ ಬದುಕಲು ನೆರವಾಗುತ್ತಿವೆ ಎಂದು ಮಣಿಪಾಲ್ ಆಸ್ಪತ್ರೆಯ ಮೂಳೆ ಮತ್ತು ಕೀಲು ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಟೆಂಟ್ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಲೋಕೇಶ್ ಎ. ವೀರಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು
‘ಆರೋಗ್ಯಕರ ವಯೋವೃದ್ಧತೆ: ಅಸ್ತಿ ಸಮಸ್ಯೆಗಳ ನಿರ್ವಹಣೆ ಮತ್ತು ಪರಿಣಾಮಕಾರಿ ಚಿಕಿತ್ಸಾ ವಿಧಾನಗಳು ಕುರಿತು ಮೂಳೆ ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿದರು.
ಇಂದಿನ ದಿನಗಳಲ್ಲಿ ಮೊಣಕಾಲು, ಸೊಂಟ ಮತ್ತು ಭುಜ ಸಂಧಿ ಸಮಸ್ಯೆಗಳು, ವಿಶೇಷವಾಗಿ ವಯೋವೃದ್ಧರಲ್ಲಿ ಹೆಚ್ಚುತ್ತಿವೆ. ‘ಇಂದು ಜನರು ಕೇವಲ ನೋವು ನಿವಾರಣೆಯನ್ನು ಮಾತ್ರ ಬಯಸುವುದಿಲ್ಲ. ಅವರು ಸುಲಭವಾಗಿ ನಡೆಯಲು, ಮೆಟ್ಟಿಲೇರಲು, ಮತ್ತೆ ಕೆಲಸಕ್ಕೆ ಹೋಗಲು, ಪ್ರವಾಸ ಮಾಡಲು ಮತ್ತು ಚುರುಕಿನ ಜೀವನವನ್ನು ಮುಂದುವರಿಸಲು ಬಯಸುತ್ತಾರೆ,” ಎಂದು ಹೇಳಿದರು.
“ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಟೆಂಟ್ ಶಸ್ತ್ರಚಿಕಿತ್ಸೆ ಅಸ್ತಿ ಚಿಕಿತ್ಸೆಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ರೋಗಿಯ ದೇಹರಚನೆಗೆ ಅನುಗುಣವಾಗಿ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ನಿಖರವಾಗಿ ಯೋಜಿಸಲು ಈ ತಂತ್ರಜ್ಞಾನ ಸಹಕಾರಿಯಾಗಿದೆ. ಇದರಿಂದ ಇಂಪ್ಲಾಂಟ್‌ಗಳ ಸರಿಯಾದ ಅಳವಡಿಕೆ, ಉತ್ತಮ ಜಾಯಿಂಟ್ ಅಲೈನ್‌ಮೆಂಟ್ ಮತ್ತು ಸಹಜ ಚಲನೆಯ ಸಾಧ್ಯತೆ ಹೆಚ್ಚುತ್ತದೆ. ರೋಗಿಗಳಿಗೆ ಕಡಿಮೆ ರಕ್ತಸ್ರಾವ, ಕಡಿಮೆ ಶಸ್ತ್ರಚಿಕಿತ್ಸೆತರ ನೋವು, ವೇಗವಾದ ಚೇತರಿಕೆ ಹಾಗೂ ಬೇಗನೆ ಸಾಮಾನ್ಯ ಜೀವನಕ್ಕೆ ಮರಳುವ ಅವಕಾಶ ದೊರೆಯುತ್ತದೆ. ಮೊಣಕಾಲು ಮತ್ತು ಸೊಂಟದ ಸಂಪೂರ್ಣ ಅಥವಾ ಭಾಗಶಃ ಜಾಯಿಂಟ್ ಬದಲಾವಣೆ (TKR/PKR) ಶಸ್ತ್ರ ಚಿಕಿತ್ಸೆಗಳಲ್ಲಿ ಈ ತಂತ್ರಜ್ಞಾನ ಉತ್ತಮ ಫಲಿತಾಂಶ ನೀಡುತ್ತಿದೆ,” ಎಂದರು.
“ಇದರ ಜೊತೆಗೆ ಭುಜದ ಆರ್ಥೋಸ್ಕೋಪಿ ಅಥವಾ ‘ಕೀಹೋಲ್ ಸರ್ಜರಿ’ಯಂತಹ ಅತ್ಯಾಧುನಿಕ ಚಿಕಿತ್ಸೆಗಳಲ್ಲಿಯೂ ಉತ್ತಮ ಫಲಿತಾಂಶಗಳನ್ನು ಕಾಣುತ್ತಿದ್ದೇವೆ. ಭುಜದ ಡಿಪ್ಲೊಕೇಶನ್ (ಭುಜದ ಕೀಲಿನ ಸರಿತ) ರೋಟೇಟರ್ ಕಫ್ (ಹರಿದ ಭುಜದ ಮಾಂಸ ಖಂಡ) ಗಾಯಗಳು, ಫೋಜನ್ ಶೋಲ್ಡರ್ (ಭುಜದ ಬಿಗಿತ) ಮೊದಲಾದ ಸಮಸ್ಯೆಗಳು ಬಹಳ ಸಾಮಾನ್ಯವಾಗಿದ್ದು, ಸಮಯಕ್ಕೆ ಚಿಕಿತ್ಸೆ ಪಡೆಯದೇ ಇದ್ದರೆ ದೈನಂದಿನ ಚಟುವಟಿಕೆಗಳ ಮೇಲೆಯೇ ಪರಿಣಾಮ ಬೀರುತ್ತವೆ. ಈಗ ಮಿನಿಮಲ್ಲಿ ಇನ್ನೇಸಿವ್ ಸರ್ಜರಿಸ್ ಅಂದರೆ ಅತಿ ಸಣ್ಣ ಕಟ್ ಮೂಲಕ ಮಾಡುವ ಈ ಶಸ್ತ್ರಚಿಕಿತ್ಸೆಗಳು ರೋಗಿಗಳಿಗೆ ಕಡಿಮೆ ನೋವು ಹಾಗೂ ವೇಗವಾದ ಚೇತರಿಕೆಯನ್ನು ನೀಡುತ್ತಿವೆ, ಎಂದು ತಿಳಿಸಿದರು.
ಇದೇ ವೇಳೆ, ಸಂಕೀರ್ಣ ಪೆಲ್ವಿಕ್ ಟ್ರಾಮಾ ಶಸ್ತ್ರಚಿಕಿತ್ಸೆಗಳು, ‘ಕಪ್ ಅಂಡ್ ಬಾಲ್’ ಜಾಯಿಂಟ್ ಸಂಬಂಧಿತ ಪ್ರೊಸೀಜರ್‌ಗಳು, ಹಾಗು ಮೊಣಕಾಲು, ಅಂಕಲ್ ಮತ್ತು ಮೊಣಕೈಗೆ ಸಂಬಂಧಿಸಿದ ಮಿನಿಮಲಿ ಇನ್ನೇಸಿವ್ ಕೀಹೋಲ್ ಶಸ್ತ್ರಚಿಕಿತ್ಸೆಗಳ ಕುರಿತು ಕೂಡ ಅವರು ಮಾಹಿತಿ ಹಂಚಿಕೊಂಡರು.
ಇವುಗಳ ಪ್ರಮುಖ ಉದ್ದೇಶ ರೋಗಿಗಳ ಚಲನವಲನವನ್ನು ಪುನಃಸ್ಥಾಪಿಸಿ, ಅವರನ್ನು ಆತ್ಮವಿಶ್ವಾಸದಿಂದ ದಿನನಿತ್ಯದ ಬದುಕಿಗೆ ಮರಳಿಸುವುದಾಗಿದೆ ಎಂದು ಹೇಳಿದರು.
ಸಂವಾದದ ವೇಳೆ ವೈದ್ಯರು, ದಾವಣಗೆರೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಅನೇಕ ರೋಗಿಗಳು ಸಂಕೀರ್ಣ ಅಸ್ಥಿ ಚಿಕಿತ್ಸೆಗಳು ಹಾಗೂ ಅತ್ಯಾಧುನಿಕ ಜಾಯಿಂಟ್ ಕೇರ್‌ಗಾಗಿ ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ನಿರಂತರವಾಗಿ ಭೇಟಿ ನೀಡುತ್ತಿರುವುದಾಗಿ ತಿಳಿಸಿದರು.
ಈ ದೀರ್ಘಕಾಲದ ವಿಶ್ವಾಸವನ್ನು ಗುರುತಿಸಿಕೊಂಡಿರುವ ಆಸ್ಪತ್ರೆ, ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳು, ವಿಶೇಷ ಅಸ್ಥಿ ತಜ್ಞರ ಸೇವೆಗಳು ಮತ್ತು ಪುನಶ್ವೇತನ ಚಿಕಿತ್ಸೆಯನ್ನು ಮಧ್ಯ ಕರ್ನಾಟಕದ ಜನರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಬದ್ಧತೆಯನ್ನು ಪುನರುಚ್ಛರಿಸಿತು. “ನಮ್ಮ ಉದ್ದೇಶ ಕೇವಲ ಶಸ್ತ್ರಚಿಕಿತ್ಸೆ ನಡೆಸುವುದಲ್ಲ; ಜನರು ಮತ್ತೆ ಸ್ವತಂತ್ರವಾಗಿ ನಡೆಯಲು, ತಮ್ಮ ಜೀವನಶೈಲಿಗೆ ಮರಳಲು ಮತ್ತು ಸುಖಕರ ವಯೋವೃದ್ಧತೆಯನ್ನು ಅನುಭವಿಸಲು ಸಹಾಯ ಮಾಡುವುದಾಗಿದೆ,” ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಇದೇ 22 ರಂದು ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026 ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಬೆಂಗಳೂರಿನ ಜಿಎಂಕೆ ಎಡು ಟೆಕ್ ರಾಜ್ಯದ ಸಮಸ್ತ ಖಾಸಗಿ ಅನುದಾನರಹಿತ ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಣ ಕ್ಷೇತ್ರದ ಆಸಕ್ತರಿಗಾಗಿ ನಾಳೆ (ಮೇ22) ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ “ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026″ ಎಂಬ ವಿಶಿಷ್ಟ ಮತ್ತು ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷ ಕೊಟ್ರೇಶ್ ಅವರು ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳು ಹಾಗೂ ಆಡಳಿತಾತ್ಮಕ ಸವಾಲುಗಳಿಗೆ ಪರಿಹಾರ ಮತ್ತು ಕಾನೂನುಬದ್ದ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಕಡ್ಡಾಯ ಭೂ-ಪರಿವರ್ತನೆ, ಕಟ್ಟಡ ಮತ್ತು ಅಗ್ನಿ ಸುರಕ್ಷತಾ ನಿಯಮಗಳು, RTE ಸಂಬಂಧಿತ ವಿಷಯಗಳು, ಶಾಲಾ ಕಟ್ಟಡಗಳಿಗೆ ಆಸ್ತಿ ತೆರಿಗೆ, ESI, PF, GRATUITY, LWF ಹಾಗೂ ಕಾರ್ಮಿಕ ಕಾನೂನುಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುತ್ತದೆ ಎಂದರು.
ಇದಲ್ಲದೆ, ರಾಜ್ಯದಲ್ಲಿ ಯಶಸ್ವಿಯಾಗಿ 10 ವರ್ಷ ಹಾಗೂ 25 ವರ್ಷ ಪೂರೈಸಿರುವ ಖಾಸಗಿ ಶಾಲೆಗಳಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದ ಹೊಸ ತಂತ್ರಜ್ಞಾನಗಳು, ಆಡಳಿತಾತ್ಮಕ ಪರಿಹಾರಗಳು, ಕಾನೂನು ಸಲಹೆಗಳು ಹಾಗೂ ಶಿಕ್ಷಣ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಕುರಿತು ತಿಳಿದುಕೊಳ್ಳಲು ಇದು ಅತ್ಯುತ್ತಮ ವೇದಿಕೆಯಾಗಿದ್ದು, ರಾಜ್ಯದ ಎಲ್ಲಾ ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಣಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ Ours ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.
ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.
4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoಬ್ಯಾಕ್ಲಾಗ್ ನಿಯಮಾವಳಿ ಉಲ್ಲಂಘನೆ ; ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಕರಿಚಣ್ಣನವರ್ ವಿರುದ್ಧ ಲೋಕಾಗೆ ದೂರು
-
ಅಂಕಣ5 days agoನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ
-
ದಿನದ ಸುದ್ದಿ5 days agoಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೆ ಅಕ್ರಮ ಸಾಗಾಣಿಕೆ ; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲು..!?
-
ದಿನದ ಸುದ್ದಿ7 days ago‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು
-
ದಿನದ ಸುದ್ದಿ5 days agoಕೆ. ಶಿವರಾಜಕುಮಾರ್ ಅವರಿಗೆ ಪಿಎಚ್ ಡಿ ಪದವಿ
-
ದಿನದ ಸುದ್ದಿ4 days agoಶಿಕ್ಷಕರು, ವಾರ್ಡನ್ಗಳಿಗೆ ಪೋಕ್ಸೊ ಕಾಯ್ದೆ ತರಬೇತಿ ನೀಡಿ
-
ದಿನದ ಸುದ್ದಿ3 days agoಲೋಕಾಯುಕ್ತ ಪೋಲಿಸ್ ಇನ್ಸ್ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು

