ಬಹಿರಂಗ
ಪ್ರತಿರೋಧದ ದನಿಯೂ, ಪ್ರಭುತ್ವದ ನಿಷ್ಕ್ರಿಯತೆಯೂ..!
- ನಾ ದಿವಾಕರ
ಪ್ರತಿರೋಧದ ದನಿಗೆ ಅವಕಾಶವಿಲ್ಲದ ಯಾವುದೇ ರಾಜಕೀಯ ವ್ಯವಸ್ಥೆ ಅಥವಾ ಸಮಾಜ ಶಾಂತಿಯುತವಾಗಿ ಬಾಳಲು ಸಾಧ್ಯವಿಲ್ಲ. ಹಾಗೆಯೇ ಒಂದು ದೇಶದ ರಾಜಕೀಯ ವ್ಯವಸ್ಥೆಯನ್ನು ನಿರ್ವಹಿಸುವ ಅಥವಾ ರಾಜಕೀಯ ಅಧಿಕಾರ ಪೀಠಗಳನ್ನು ಆಕ್ರಮಿಸುವ ಆಳುವ ವರ್ಗಗಳು ಪ್ರತಿರೋಧದ ದನಿಗೆ ಕಿವಿಗೊಡದಿದ್ದರೆ ಅಂತಹ ವ್ಯವಸ್ಥೆ ಕ್ರಮೇಣ ಅರಾಜಕತೆಯತ್ತ ಸಾಗುತ್ತದೆ. ಸಾಮಾಜಿಕ ವಲಯದಲ್ಲಿ ಪ್ರತಿರೋಧಕ್ಕೆ ಅವಕಾಶವೇ ಕೊಡದ ಒಂದು ಸಮಾಜ ತನ್ನ ಅಂತಃಸತ್ವವನ್ನೇ ಕಳೆದುಕೊಂಡು ಜಡಗಟ್ಟುತ್ತದೆ. ಭಾರತೀಯ ಸಮಾಜ ತನ್ನೊಳಗಿನ ಶ್ರೇಣೀಕೃತ ಜಾತಿ ವ್ಯವಸ್ಥೆ, ಜಾತಿ ಶ್ರೇಷ್ಠತೆಯ ವ್ಯಸನ, ಜಾತಿ ಪದ್ಧತಿಯ ಅನಿಷ್ಟಗಳು, ಅಸ್ಪೃಶ್ಯತೆಯಂತಹ ಕ್ರೂರ ಮನೋಭಾವ, ಪಿತೃಪ್ರಧಾನ ಧೋರಣೆ ಇವೆಲ್ಲವನ್ನೂ ಹೊತ್ತುಕೊಂಡಿದ್ದರೂ ಇಂದಿಗೂ ಸಹ ತನ್ನ ಮೂಲ ನೆಲೆಗಳನ್ನು ಉಳಿಸಿಕೊಂಡುಬಂದಿದ್ದರೆ ಅದಕ್ಕೆ ಕಾರಣ ಈ ದೇಶದ ನೆಲದಲ್ಲಿ ಪ್ರಾಚೀನ ಕಾಲದಿಂದಲೂ ಉಗಮಿಸುತ್ತಲೇ ಇರುವ ಪ್ರತಿರೋಧದ ನೆಲೆಗಳು.
ಚಾರ್ವಾಕನಿಂದ ಅಂಬೇಡ್ಕರ್ ವರೆಗೆ ಭಾರತೀಯ ಸಮಾಜದಲ್ಲಿ, ಪ್ರಬಲ ಸಾಮ್ರಾಜ್ಯಗಳು ಅಧಿಪತ್ಯ ಸಾಧಿಸಿದ್ದ ಸಂದರ್ಭದಲ್ಲೂ ಸಹ ಪ್ರತಿರೋಧದ ನೆಲೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ಬಂದಿವೆ. ಇಂದು ನಾವು ಪ್ರಾಚೀನ ನಿರಂಕುಶಾಧಿಕಾರದ ನೆಲೆಗಳನ್ನು ಧ್ವಂಸಗೊಳಿಸಿ ಒಂದು ಪ್ರಜಾಸತ್ತಾತ್ಮಕ ಸಮಾಜೋ ರಾಜಕೀಯ ನೆಲೆಯಲ್ಲಿ ನೆಲೆಸಿದ್ದರೆ ಅದಕ್ಕೆ ಕಾರಣವೂ ಈ ಪ್ರತಿರೋಧದ ನೆಲೆಗಳೇ ಆಗಿವೆ. ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲೂ ಡಾ ಬಿ ಆರ್ ಅಂಬೇಡ್ಕರ್ ಹಲವಾರು ಪ್ರತಿರೋಧಗಳನ್ನು ಎದುರಿಸುತ್ತಲೇ ಅಂತಿಮ ಕರಡು ಸಿದ್ಧಪಡಿಸಿದ್ದರು. ಹಾಗೆಯೇ ಸ್ವಾತಂತ್ರ್ಯ ಪೂರ್ವದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಬಲವಾಗಿದ್ದ ಮೇಲ್ಜಾತಿಗಳ ವಿರುದ್ಧ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಲೇ, ಸಮಸಮಾಜದ ಕನಸುಗಳನ್ನು ಹೊತ್ತ ಸಮಾಜವಾದಿ, ಜಾತ್ಯತೀತ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದರು.
ಇಂದು ನಾವು 21ನೆಯ ಶತಮಾನದ ಮೂರನೆಯ ದಶಕದಲ್ಲಿದ್ದೇವೆ. 73 ವರ್ಷಗಳ ಸ್ವಾತಂತ್ರ್ಯದ ಸವಿ ಅನುಭವಿಸಿದ್ದೇವೆ. 70 ವರ್ಷಗಳ ಕಾಲ ಸಂವಿಧಾನದ ಆಶಯಗಳನ್ನು ಈಡೇರಿಸುವ ಮಾರ್ಗದಲ್ಲಿ ನಡೆದುಬಂದಿದ್ದೇವೆ. ಅಂಬೇಡ್ಕರ್ ಪ್ರತಿಪಾದಿಸಿದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಏನೇ ಸಮಸ್ಯೆಗಳು ಎದುರಾಗಿದ್ದರೂ ಸಮರ್ಥವಾಗಿ ಪರಿಹರಿಸುತ್ತಲೇ ಭಾರತ ಒಂದು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಏಕೆಂದರೆ ಕಾಲದಿಂದ ಕಾಲಕ್ಕೆ ಸರ್ಕಾರಗಳು ಬದಲಾಗುತ್ತಿದ್ದರೂ, ಪ್ರತಿಯೊಂದು ಕಾಲಘಟ್ಟದಲ್ಲೂ ಸಾಮಾಜಿಕ ನ್ಯಾಯಕ್ಕಾಗಿ, ಆರ್ಥಿಕ ಸಮಾನತೆಗಾಗಿ, ಸಾಂಸ್ಕೃತಿಕ ಅಸ್ಮಿತೆ ಮತ್ತು ಅಸ್ತಿತ್ವಕ್ಕಾಗಿ, ಶೋಷಣೆ ಮತ್ತು ದಬ್ಬಾಳಿಕೆಯ ವಿರುದ್ಧ, ಅನ್ಯಾಯದ ವಿರುದ್ಧ, ನಿರಂಕುಶ ಅಧಿಕಾರದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಲೇ ಜನಾಂದೋಲನಗಳು ನಡೆದಿರುವುದನ್ನು ಕಂಡಿದ್ದೇವೆ. ಈ ಪ್ರತಿರೋಧದ ದನಿಗಳೇ ಭಾರತದ ಪ್ರಜಾತಂತ್ರ ವ್ಯವಸ್ಥೆಯ ತಳಹದಿಯನ್ನು ಸುಭದ್ರವಾಗಿರಿಸಿವೆ.
ಆದರೆ ಇಂದು ಈ ತಳಪಾಯ ಶಿಥಿಲವಾಗುತ್ತಿದೆ. ಆಳುವ ವರ್ಗಗಳು ಮತ್ತು ಈ ವರ್ಗವನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಕ್ರಮೇಣ ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಶಿಥಿಲಗೊಳಿಸಲು ಯತ್ನಿಸುತ್ತಲೇ ಇವೆ. ಸಂವಿಧಾನದ ಚೌಕಟ್ಟಿನಲ್ಲೇ ಕಾಯ್ದೆ ಕಾನೂನುಗಳ ತಿದ್ದುಪಡಿ ಮಾಡುವ ಮೂಲಕ, ಜನಾಭಿಪ್ರಾಯವನ್ನು ಸ್ವೇಚ್ಚಾಚಾರದ ಅಧಿಕಾರಕ್ಕೆ ಪರವಾನಗಿ ಎನ್ನುವಂತೆ ಭಾವಿಸಿ, ಪ್ರಜೆಗಳ ಬದುಕಿಗೇ ಸಂಚಕಾರ ತರುವಂತಹ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕರಾಳ ಶಾಸನಗಳಿಂದ ಹಿಡಿದು, ಜನಸಾಮಾನ್ಯರ ಜೀವನೋಪಾಯಕ್ಕೆ ಧಕ್ಕೆ ಉಂಟುಮಾಡುವ ಮಸೂದೆಗಳನ್ನು, ಸಂವಿಧಾನದ ನಿಯಮಗಳನ್ನೂ ಮೀರಿ ಜಾರಿಗೊಳಿಸಲಾಗುತ್ತಿದೆ. ಇಂತಹ ಒಂದು ಪ್ರಯತ್ನವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳಲ್ಲಿ ಕಾಣಬಹುದು.
ಜನವರಿ 26ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಅಹಿತಕರ ಘಟನೆಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಭಾರತದ ಬಹುತೇಕ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು, ಆಳುವ ಪಕ್ಷದ ಬೆಂಬಲಿಗರು, ಪ್ರಜಾತಂತ್ರದ ಮೌಲ್ಯವನ್ನೇ ಅರಿಯದ ಪ್ರಜ್ಞಾವಂತ ನಾಗರಿಕರು ಮತ್ತು ಸಾಂಸ್ಕೃತಿಕ ರಾಷ್ಟ್ರೀಯವಾದದ ಹರಿಕಾರರು, ದೇಶದ ರಾಜಧಾನಿಯೊಳಗೆ ನುಗ್ಗಿ, ಪ್ರತಿಷ್ಠಿತ ಕೆಂಪುಕೋಟೆಯನ್ನು ಆಕ್ರಮಿಸಿ ಅಲ್ಲಿ ತಮ್ಮದೇ ಆದ ಧಾರ್ಮಿಕ ಧ್ವಜವನ್ನು ಹಾರಿಸುವ ಒಂದು ಗುಂಪಿನ ಪ್ರತಿರೋಧವನ್ನು, ಭಯೋತ್ಪಾದಕ ಕೃತ್ಯದಂತೆ ಬಿಂಬಿಸುತ್ತಿರುವುದು ಕಾಣುತ್ತಿದ್ದೇವೆ. ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ ಎಂದು ಹುಯಿಲೆಬ್ಬಿಸುತ್ತಲೇ ಕೆಂಪುಕೋಟೆಯನ್ನು ಪ್ರವೇಶಿಸಿರುವುದೇ ರಾಷ್ಟ್ರದ್ರೋಹದ ಕೃತ್ಯ ಎನ್ನುವಂತೆ ಸುದ್ದಿಮನೆಗಳು ಬಿತ್ತರಿಸುತ್ತಿವೆ. ಈ ಘಟನೆಯ ಸತ್ಯಾಸತ್ಯತೆಗಳು ಏನೇ ಇರಲಿ, ಧ್ವಜ ನೆಟ್ಟವರು ಯಾರೇ ಇರಲಿ, ಅನ್ಯಾಯಕ್ಕೊಳಗಾದ, ನೊಂದ ಮನಸುಗಳ ಪ್ರತಿರೋಧದ ಹಿಂದೆ ಸುಪ್ತ ಆಕ್ರೋಶ ಮಡುಗಟ್ಟಿರುತ್ತದೆ ಎನ್ನುವುದನ್ನು ಈ ಘಟನೆ ನಿರೂಪಿಸುತ್ತದೆ.
ದೆಹಲಿಯಲ್ಲಿ ನಡೆದ ಘಟನೆ ಸರಿಯೋ ತಪ್ಪೋ ಎನ್ನುವುದಕ್ಕಿಂತಲೂ, 60 ದಿನಗಳ ಕಾಲ ಅತ್ಯಂತ ಶಾಂತಿಯುತವಾಗಿ ನಡೆದ ಒಂದು ಜನಾಂದೋಲನ, 150ಕ್ಕೂ ಹೆಚ್ಚು ಸಾವುಗಳ ನಂತರವೂ ತಾಳ್ಮೆ ಸಂಯಮ ಕಳೆದುಕೊಳ್ಳದ ಒಂದು ಆಂದೋಲನ, ಪೊಲೀಸರ ಲಾಠಿ, ಜಲಫಿರಂಗಿ, ಅಶ್ರುವಾಯು ದಾಳಿಯನ್ನು ಸಹಿಸಿಕೊಂಡು ದೃಢಚಿತ್ತದಿಂದ ಮುನ್ನಡೆದ ಒಂದು ಹೋರಾಟ, ಚಳಿ ಮಳೆಯನ್ನೂ ಲೆಕ್ಕಿಸದೆ ಜನರಿಂದಲೇ ಹಣ ಸಂಗ್ರಹಿಸಿ ತನ್ನ ಸ್ವಂತಬಲದಿಂದ ಎರಡು ತಿಂಗಳ ಕಾಲ ನಡೆದ ಚಳುವಳಿ, ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳು ಮುಷ್ಕರ ನಿರತರ ಮುನ್ನಡಿಗೆಯನ್ನು ತಡೆಗಟ್ಟಲು ಸಿಮೆಂಟ್ ಗೋಡೆಗಳನ್ನು, ಮುಳ್ಳು ತಂತಿಗಳನ್ನು, ಜೆಸಿಬಿ ಮತ್ತು ಬೃಹತ್ ಲಾರಿಗಳನ್ನು ಬಳಸಿದರೂ ಕಂಗೆಡದೆ ನಡೆದ ಹೋರಾಟ, ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿ ಬೃಹತ್ ಕಂದಕಗಳನ್ನು ತೋಡಿ ಮುನ್ನಡಿಗೆಗೆ ಅಡ್ಡಿಪಡಿಸಿದರೂ ಧೃತಿಗೆಡದೆ ನಡೆದ ಒಂದು ಹೋರಾಟ, ಹೇಗೆ ಹಿಂಸಾತ್ಮಕವಾಗಲು ಸಾಧ್ಯ ಎನ್ನುವ ಪ್ರಶ್ನೆ ನಮ್ಮನ್ನು ಕಾಡಬೇಕಿದೆ.
ನಿಗದಿತ ಮಾರ್ಗವನ್ನು ಬಿಟ್ಟು, ಒಳಮಾರ್ಗದಿಂದ ದೆಹಲಿಯನ್ನು ಪ್ರವೇಶಿಸಿ, ಪೊಲೀಸರ ಅಡ್ಡಗೋಡೆಗಳನ್ನು ದಾಟಿ ರಾಜಧಾನಿಯನ್ನು ಪ್ರವೇಶಿಸಿ ಕೆಂಪುಕೋಟೆಯ ಮೇಲೆ ನೆರೆದ ಹೋರಾಟಗಾರರೆಲ್ಲರೂ ದೇಶದ್ರೋಹಿಗಳೇನಲ್ಲ. ಅಲ್ಲಿ ಧ್ವಜ ನೆಡುವ ಮೂಲಕ ವಿವಾದ ಮತ್ತು ಗೊಂದಲ ಸೃಷ್ಟಿಸಿದ ವ್ಯಕ್ತಿಯೂ ದೇಶದ್ರೋಹಿಯೇನಲ್ಲ. ರೈತ ಮುಷ್ಕರವನ್ನು ಶಿಥಿಲಗೊಳಿಸಲೆಂದೇ, ದುರ್ಬಲಗೊಳಿಸಲೆಂದೇ ಇಂತಹ ಪಿತೂರಿಗಳನ್ನು ನಡೆಸುವ ರಾಜಕೀಯ ಶಕ್ತಿಗಳು ನಿಜವಾದ ದೇಶದ್ರೋಹಿಗಳು ಅಲ್ಲವೇ ? ಲಕ್ಷಾಂತರ ಜನರ ಪ್ರತಿಭಟನೆಯಲ್ಲಿ ಒಂದು ಸಣ್ಣ ಗುಂಪು ಈ ರೀತಿಯ ಗಲಭೆಯಲ್ಲಿ ತೊಡಗುವುದೂ ಸಹ ಘೋರ ಅಪರಾಧವೇನಲ್ಲ. ಇದು ಸಹಜ ಪ್ರಕ್ರಿಯೆ. ಏಕೆಂದರೆ ಈ ರೈತಾಪಿ ಸಮುದಾಯ ಎರಡು ತಿಂಗಳ ಕಾಲ ತಾಳ್ಮೆಯಿಂದ ನ್ಯಾಯಕ್ಕಾಗಿ ಹೋರಾಡುತ್ತಿದೆ.
ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿದ್ದು ಬಿಜೆಪಿ ಕಾರ್ಯಕರ್ತ, ಬಿಜೆಪಿ ಸಂಸದ ಸನ್ನಿ ಡಯೋಲ್‍ನ ನಿಕಟವರ್ತಿ ಮತ್ತು ಕೇಂದ್ರ ನಾಯಕರಿಗೆ ಸಮೀಪವರ್ತಿಯಾದ ದೀಪ್ ಸಿಧು ಎಂದು ಇದೀಗ ಸಾಬೀತಾಗಿದೆ. ತಾನೇ ಧ್ವಜ ಹಾರಿಸಿದ್ದಾಗಿ ದೀಪ್ ಸಿಧು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಆದರೆ ರಾಷ್ಟ್ರಧ್ವಜಕ್ಕೆ ಯಾವುದೇ ಅಪಮಾನವಾಗಿಲ್ಲ ಎಂದು ಸ್ಪಷ್ಟವಾಗಿದ್ದು, ಭಾರತದ ಧ್ವಜಕ್ಕಿಂತಲೂ ಕೆಳಮಟ್ಟದಲ್ಲೇ ಸಿಖ್ಖರ ಧಾರ್ಮಿಕ ಧ್ವಜವನ್ನು ಹಾರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ದೀಪ್ ಸಿಧು ವಿರುದ್ಧ ದೂರು ದಾಖಲಿಸದ ದೆಹಲಿ ಪೊಲೀಸರು, ಘಟನೆಗೆ ಸಂಬಂಧವೇ ಇಲ್ಲದ 22 ರೈತ ನಾಯಕರ ವಿರುದ್ಧ ಎಫ್‍ಐಆರ್ ದಾಖಲಿಸಿರುವುದು ಈ ಘಟನೆಯ ಹಿಂದಿನ ಹುನ್ನಾರವನ್ನು ತಂತಾನೇ ಬಯಲು ಮಾಡುತ್ತದೆ.
ಇಲ್ಲಿ ನಮ್ಮನ್ನು ಕಾಡಬೇಕಾದ ಪ್ರಶ್ನೆ ಎಂದರೆ, ಎರಡು ತಿಂಗಳ ಕಾಲ ಶಾಂತಿಯುತ ಮುಷ್ಕರ ನಡೆಸಿರುವ 540ಕ್ಕೂ ಹೆಚ್ಚು ರೈತ ಸಂಘಟನೆಗಳು ಗಣರಾಜ್ಯೋತ್ಸವದ ದಿನದಂದೇ ದೆಹಲಿಯಲ್ಲಿ ಎರಡು ಲಕ್ಷ ಟ್ರಾಕ್ಟರ್‍ಗಳ ಪರೇಡ್ ನಡೆಸಲು ತೀರ್ಮಾನಿಸಿದ್ದು ಏಕೆ ? ರೈತರ ಬೇಡಿಕೆ ಮೊದಲನೆ ದಿನದಿಂದಲೂ ಒಂದೇ ಆಗಿದೆ, ಮೂರೂ ಕೃಷಿ ಮಸೂದೆಗಳನ್ನು ಹಿಂಪಡೆಯುವುದು. ಇದರ ಹೊರತಾಗಿ ಮತ್ತಾವುದೇ ರಾಜೀಸೂತ್ರಕ್ಕೆ ತಾವು ಸಿದ್ಧರಾಗಿಲ್ಲ ಎಂದು ರೈತ ಸಂಘಟನೆಗಳು ಸ್ಪಷ್ಟಪಡಿಸುತ್ತಲೇ ಇವೆ. ಕೇಂದ್ರ ಸರ್ಕಾರ ಈ ಬೇಡಿಕೆಗಳಿಗೆ ಮಾತುಕತೆಗಳ ಪ್ರಸ್ತಾವದ ಮೂಲಕ ಸ್ಪಂದಿಸಿದೆಯೇ ಹೊರತು, ಮಾನವೀಯ ಸ್ಪಂದನೆಯನ್ನು ತೋರಿಯೇ ಇಲ್ಲ. 150ಕ್ಕೂ ಹೆಚ್ಚು ರೈತರ ಸಾವಿಗೆ ಒಂದು ಅನುಕಂಪದ ಮಾತನ್ನೂ ಆಡದ ಬೌದ್ಧಿಕ ನಿಷ್ಕ್ರಿಯತೆ ಮತ್ತು ಕ್ರೌರ್ಯವನ್ನು ನಾವು ಕಂಡಿದ್ದೇವೆ. ಇದು ಸಹಜವಾಗಿಯೇ ಮುಷ್ಕರ ನಿರತರಲ್ಲಿ ಆಕ್ರೋಶ ಮೂಡಿಸುತ್ತದೆ.
“ ನಿಮ್ಮ ಬೇಡಿಕೆಗಳನ್ನು ಪರಿಶೀಲಿಸುತ್ತೇವೆ, ಸದ್ಯಕ್ಕೆ ಮಸೂದೆಗಳನ್ನು ಹಿಂಪಡೆಯುತ್ತೇವೆ. ಸಂಸತ್ತಿನಲ್ಲಿ ಚರ್ಚೆಗೊಳಪಡಿಸುವ ಮೂಲಕ, ಕೃಷಿ ತಜ್ಞರು ಮತ್ತು ವಿಜ್ಞಾನಿಗಳೊಡನೆ, ರೈತ ಸಂಘಟನೆಗಳೊಡನೆ ಮಾತುಕತೆ ನಡೆಸಿ ದೇಶದ ರೈತಾಪಿಗೆ ಸಮಧಾನಕರವಾಗಿರುವಂತಹ ಹೊಸ ಮಸೂದೆಯನ್ನು ಜಾರಿಗೊಳಿಸುತ್ತೇವೆ ” ಎನ್ನುವ ಮೂರು ನಾಲ್ಕು ಸಾಂತ್ವನದ ಮಾತುಗಳು ಮುಷ್ಕರವನ್ನು ಕೊನೆಗೊಳಿಸಬಹುದಿತ್ತು. ಗಣರಾಜ್ಯೋತ್ಸವದ ದಿನದಂದೇ ಎರಡು ಲಕ್ಷ ಟ್ರಾಕ್ಟರ್‍ಗಳು ದೇಶದ ರಾಜಧಾನಿಯಲ್ಲಿ ಮೆರವಣಿಗೆ ನಡೆಸುವ ಒಂದು ನಿರ್ಧಾರಕ್ಕೆ ಕೇಂದ್ರ ಸರ್ಕಾರದ ಮಾನವೀಯ, ಸಕಾರಾತ್ಮಕ ಸ್ಪಂದನೆ ತಡೆಒಡ್ಡಬಹುದಿತ್ತು. ಆದರೆ ಪ್ರಜಾತಂತ್ರ ವ್ಯವಸ್ಥೆಯ ಮೂಲ ಆಶಯಗಳನ್ನೇ ಲೆಕ್ಕಿಸದ ಕೇಂದ್ರ ಸರ್ಕಾರ ರೈತರ ಒಕ್ಕೊರಲ ಬೇಡಿಕೆಗಳನ್ನು ನಿರ್ಲಕ್ಷಿಸಿರುವುದೇ ಹೆಚ್ಚು. ಈ ಧೋರಣೆ ಸಣ್ಣ ಪುಟ್ಟ ಗಲಭೆಗಳಿಗೆ, ಅಹಿತಕರ ಘಟನೆಗಳಿಗೆ ಎಡೆಮಾಡಿಕೊಟ್ಟರೆ ಅದರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ಹಬ್ಬದ ದಿನದಂದು ದೇಶವ್ಯಾಪಿ ಆಂದೋಲನವೊಂದು ರೂಪುಗೊಂಡಿರುವುದು ನಿಜಕ್ಕೂ ಅಭೂತಪೂರ್ವ ಬೆಳವಣಿಗೆ. ಭಾರತದಲ್ಲಿ ಪ್ರಜಾತಂತ್ರ ಉಳಿದಿರುವುದಕ್ಕೆ ಸಾಕ್ಷಿಯಾದಂತೆಯೇ ಈ ಜನಾಂದೋಲನ ಈ ದೇಶದ ಆಡಳಿತ ವ್ಯವಸ್ಥೆ ನಿರಂಕುಶತ್ವದೆಡೆಗೆ ಜಾರುತ್ತಿರುವುದಕ್ಕೂ ಸಾಕ್ಷಿಯಾಗಿದೆ. ಹೋರಾಟಗಾರರನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳು, ಟ್ರಾಕ್ಟರ್‍ಗಳನ್ನು ಜಪ್ತಿ ಮಾಡುವುದು, ಉತ್ತರಪ್ರದೇಶದಲ್ಲಿ ಟ್ರಾಕ್ಟರ್‍ಗಳಿಗೆ ಡೀಸೆಲ್ ಸರಬರಾಜು ಸ್ಥಗಿತಗೊಳಿಸುವುದು, ಕರ್ನಾಟಕದಲ್ಲಿ ಬೆಂಗಳೂರಿಗೆ ಹೊರಟಿದ್ದ ಸಾವಿರಾರು ಟ್ರಾಕ್ಟರುಗಳನ್ನು ತಡೆಗಟ್ಟಿರುವುದು, ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸುವ ಮೂಲಕ ಹೋರಾಟಗಾರರಲ್ಲಿ ಭೀತಿ ಹುಟ್ಟಿಸುವುದು ಈ ಎಲ್ಲ ಕ್ರಮಗಳು ನಿರಂಕುಶ ಪ್ರಭುತ್ವದ ಸೂಚನೆಗಳಾಗಿಯೇ ಕಾಣುತ್ತವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪ್ರತಿಭಟನೆಗೆ ಮುಕ್ತ ಅವಕಾಶ ನೀಡಿದ್ದರೆ, ಟ್ರಾಕ್ಟರ್ ಪರೇಡ್‍ಗೆ ಪೂರ್ಣ ಅನುಮತಿ ನೀಡಿದ್ದಲ್ಲಿ ಬಹುಶಃ ಗಲಭೆ ಸಂಭವಿಸುತ್ತಿರಲಿಲ್ಲ. ಅಥವಾ ನಿಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುತ್ತೇವೆ, ಮುಷ್ಕರ ಹಿಂಪಡೆಯಿರಿ ಎಂದು ವಿನಂತಿಸಿದ್ದರೆ ಟ್ರಾಕ್ಟರ್ ಪರೇಡ್ ನಡೆಯುತ್ತಲೇ ಇರಲಿಲ್ಲ. ಎರಡೂ ನೆಲೆಯಲ್ಲಿ ಸರ್ಕಾರಗಳು ವಿಫಲವಾಗಿವೆ. ಬದಲಾಗಿ, ಹೋರಾಟಗಾರರಲ್ಲಿ ಭಯೋತ್ಪಾದಕರನ್ನು, ಖಲಿಸ್ತಾನಿಗಳನ್ನು, ನಗರ ನಕ್ಸಲರನ್ನು ಹುಡುಕಲು ಪ್ರಯತ್ನಿಸಿವೆ. ತಮ್ಮ ಜೀವನೋಪಾಯದ ಮೂಲ ಸೆಲೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಅನ್ನದಾತರನ್ನು ದೇಶದ್ರೋಹಿಗಳೆಂದು ಕರೆಯುವಷ್ಟು ಮಟ್ಟಿಗೆ ನಮ್ಮ ರಾಜಕೀಯ ನಾಯಕರು, ಪಕ್ಷಗಳು ಬೌದ್ಧಿಕ ದಾರಿದ್ರ್ಯ ಪ್ರದರ್ಶಿಸಿವೆ.
ಆಳುವ ವರ್ಗಗಳ ಈ ದುರ್ವರ್ತನೆಗೆ ಪೂರಕವಾಗಿ ವಿದ್ಯುನ್ಮಾನ ಮಾಧ್ಯಮಗಳು ರೈತ ಮುಷ್ಕರವನ್ನು ಬಿಂಬಿಸಿವೆ. ಜನವರಿ 25ರವರೆಗೂ ದೆಹಲಿಯಲ್ಲಿ ಮುಷ್ಕರ ಹೂಡಿದ್ದ ರೈತರ ಸಮಸ್ಯೆಗಳನ್ನಾಗಲೀ, ಬೇಡಿಕೆಗಳನ್ನಾಗಲೀ, ಮುಷ್ಕರದ ಮೂಲ ಸಮಸ್ಯೆಯನ್ನಾಗಲೀ ಕಣ್ಣೆತ್ತಿಯೂ ನೋಡದ ಮಾಧ್ಯಮಗಳು ಹಠಾತ್ತನೆ ತಮ್ಮ ರಾಷ್ಟ್ರವಾದಿ ದೇಶಪ್ರೇಮವನ್ನು ಪ್ರದರ್ಶಿಸಲು ಆರಂಭಿಸಿದ್ದು ಜನವರಿ 26ರಂದು, ಟ್ರಾಕ್ಟರ್ ಪರೇಡ್ ಆರಂಭವಾದ ನಂತರ. ಒಂದು ರೀತಿಯಲ್ಲಿ ಇದು ರೈತ ಮುಷ್ಕರದ ವಿಜಯ ಎಂದೇ ಹೇಳಬಹುದು. ಇಡೀ ದೇಶದ ಗಮನ ಸೆಳೆಯುವಂತಹ ಒಂದು ಜನಾಂದೋಲನ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೆಚ್ಚು ಗೌರವಯುತವಾಗಿ ಕಾಣುತ್ತದೆ. ಕನ್ನಡದ ಸುದ್ದಿಮನೆಗಳ ಪಕ್ಷಪಾತಿ ಧೋರಣೆ ಮತ್ತು ಉತ್ಕಟ-ಉನ್ಮತ್ತ ರಾಷ್ಟ್ರವಾದಿ ದೇಶಪ್ರೇಮದ ಹೊರತಾಗಿಯೂ ರೈತ ಮುಷ್ಕರ ಟಿವಿ ಪರದೆಗಳ ಮೂಲಕ ಮನೆಮನೆ ತಲುಪಿರುವುದು ರೈತರ ದಿಗ್ವಿಜಯವಾಗಿ ಕಾಣುತ್ತದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿರೋಧದ ಧ್ವನಿಗಳಿಗೆ ಕಿವಿಗೊಡುವ ಸಂಯಮ ಇರುವವರು ಅಧಿಕಾರದಲ್ಲಿದ್ದರೆ ಒಂದು ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ . ನೊಂದ ಜನತೆಯ ಹಕ್ಕೊತ್ತಾಯಗಳನ್ನು, ಆಗ್ರಹಗಳನ್ನು ಆಲಿಸಿ, ಪರಿಶೀಲಿಸಿ, ಪರಾಮರ್ಶಿಸಿ, ಶಾಸನ ಸಭೆಗಳಲ್ಲಿ ಜನಪ್ರತಿನಿಧಿಗಳ ನಡುವೆ ಚರ್ಚೆಗೊಳಪಡಿಸಿ ಸಮಸ್ತ ಜನತೆಗೆ ಒಳಿತನ್ನುಂಟುಮಾಡುವ ನೀತಿಗಳನ್ನು, ಯೋಜನೆಗಳನ್ನು ಜಾರಿಗೊಳಿಸುವುದು ಒಂದು ಪ್ರಬುದ್ಧ ಸಂಸದೀಯ ಪ್ರಜಾತಂತ್ರದ ಲಕ್ಷಣ. ದುರಂತ ಎಂದರೆ ಏಳು ದಶಕಗಳ ಸ್ವತಂತ್ರ ಆಳ್ವಿಕೆಯ ನಂತರ ಭಾರತ ಈ ಪ್ರಬುದ್ಧತೆಯನ್ನು ಕಳೆದುಕೊಳ್ಳುತ್ತಿದೆ. ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ ಪೂರ್ಣ ಬಹುಮತ ಗಳಿಸುವುದು ಎಂದರೆ ದೇಶದ ಅತಿ ಹೆಚ್ಚಿನ ಜನಸಂಖ್ಯೆಯನ್ನು ಪ್ರತಿನಿಧಿಸುವುದು ಎಂದರ್ಥವೇ ಹೊರತು, ಸ್ವೇಚ್ಚಾನುಸಾರ ಕಾನೂನುಗಳನ್ನು ರೂಪಿಸಲು ಮುಕ್ತ ಪರವಾನಗಿ ದೊರೆತಂತಲ್ಲ. ಡಾ ಬಿ ಆರ್ ಅಂಬೇಡ್ಕರ್ ಈ ಕುರಿತು ಅನೇಕ ಸಂದರ್ಭಗಳಲ್ಲಿ ಸ್ಪಷ್ಟನೆ ನೀಡುತ್ತಲೇ ಸಂವಿಧಾನ ರಚನೆಯಲ್ಲಿ ತೊಡಗುತ್ತಾರೆ.
ಆದರೆ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ಪಷ್ಟ ಬಹುಮತ ಎನ್ನುವುದು ಸ್ವೇಚ್ಚಾಚಾರದ ಪರವಾನಗಿಯೇ ಆಗಿದೆ. ಕಳೆದ ಆರು ವರ್ಷಗಳಲ್ಲಿ ಈ ಧೋರಣೆ ಸಮೂಹ ಸನ್ನಿಗೊಳಗಾದ ಬೃಹತ್ ಜನಸಮುದಾಯದ ನಡುವೆ ಸ್ವೀಕೃತಿಯನ್ನೂ ಪಡೆದುಬಿಟ್ಟಿದೆ. ಹಾಗಾಗಿಯೇ 150 ಮುಷ್ಕರ ನಿರತ ರೈತರ ಸಾವು, ಲಕ್ಷಾಂತರ ರೈತರ ಒಕ್ಕೊರಲ ದನಿ, ಬೃಹತ್ ಸಂಖ್ಯೆಯ ರೈತಾಪಿಯ ಮೇಲೆ ನಡೆಯುವ ದೌರ್ಜನ್ಯ, ರೈತರ ಬೆನ್ನ ಮೇಲೆ ಬಾಸುಂಡೆ ಬರುವಂತೆ ಬಾರಿಸುವ ಪೊಲೀಸರ ಕ್ರೌರ್ಯ ಎಲ್ಲವೂ ‘ ದೇಶದ ಅಭಿವೃದ್ಧಿಯ ’ ದೃಷ್ಟಿಯಿಂದ ಸ್ವೀಕಾರಾರ್ಹ ಎನಿಸಿಬಿಡುತ್ತವೆ. ಇದು ಹಿತವಲಯದಲ್ಲಿರುವ ಮಧ್ಯಮ ವರ್ಗಗಳನ್ನು ಕಾಡುತ್ತಿರುವ ಒಂದು ದುರ್ವ್ಯಸನ. ಈ ವ್ಯಸನವೇ ದೇಶದಲ್ಲಿ ನಿರಂಕುಶ ಆಳ್ವಿಕೆಗೆ ಸುಭದ್ರ ತಳಪಾಯವನ್ನು ನಿರ್ಮಿಸುತ್ತಿರುವುದನ್ನು ಕಾಣುತ್ತಿದ್ದೇವೆ.
ಮೂರು ಲಕ್ಷ ರೈತರು ಆತ್ಮಹತ್ಯೆಗೆ ಶರಣಾದಾಗ, ಎರಡು ತಿಂಗಳ ಕಾಲ ಚಳಿ ಮಳೆ ಎನ್ನದೆ, ಕೇಳುವವರಿಲ್ಲದೆ ಲಕ್ಷಾಂತರ ರೈತರು ರಸ್ತೆಗಳಲ್ಲೇ ಕುಳಿತು ಪ್ರತಿರೋಧ ವ್ಯಕ್ತಪಡಿಸುವಾಗ, ಈ ಮುಷ್ಕರದ ನಡುವೆಯೇ 150 ರೈತರು ಮೃತಪಟ್ಟಾಗ ಈ ದೇಶಕ್ಕೆ ಅಪಮಾನವಾಗಿದೆ ಎನಿಸಬೇಕಿತ್ತು. ಇದರಲ್ಲೇ ಆಡಳಿತ ವ್ಯವಸ್ಥೆಯ ರಾಷ್ಟ್ರದ್ರೋಹದ ವರ್ತನೆ ಗೋಚರಿಸಬೇಕಿತ್ತು. ದುರಂತ ಎಂದರೆ ಈ ದೇಶದ ಒಂದು ವರ್ಗದ ಜನತೆಗೆ, ಕಾರ್ಪೋರೇಟ್ ನಿಯಂತ್ರಿತ ಮಾಧ್ಯಮಗಳಿಗೆ ಮತ್ತು ಅಧಿಕಾರ ಲಾಲಸೆಯಿಂದ ತಮ್ಮ ಸಭ್ಯತೆ, ಸಂಯಮ, ಸೌಜನ್ಯ ಮತ್ತು ಎಲ್ಲ ಮಾನವೀಯ ಮೌಲ್ಯಗಳನ್ನೂ ಕಳೆದುಕೊಂಡಿರುವ ಜನಪ್ರತಿನಿಧಿಗಳಿಗೆ ಈ ಹೋರಾಟವೇ ದೇಶದ್ರೋಹದ ನಡೆಯಂತೆ ಕಾಣುತ್ತಿದೆ. ಜನಸಾಮಾನ್ಯರ ರಕ್ಷಣೆಗೆ ನಿಲ್ಲಬೇಕಾದ ಸಾಂವಿಧಾನಿಕ ಸಂಸ್ಥೆಗಳಿಗೆ ಇದು ಗಂಭೀರ ವಿಚಾರ ಎನಿಸುತ್ತಲೇ ಇಲ್ಲ.
ಈ ವಿಷಮ ಸನ್ನಿವೇಶದಲ್ಲೇ ಭಾರತದ ರೈತಾಪಿ ತನ್ನ ದಿಗ್ವಿಜಯ ಸಾಧಿಸಿದ್ದಾರೆ. ದೆಹಲಿಯಲ್ಲಿ ನಡೆದ ಗಣತಂತ್ರದಿನದ ಟ್ರಾಕ್ಟರ್ ಪರೇಡ್ ಮತ್ತು ದೇಶದ ರಾಜಧಾನಿಯನ್ನೂ ಸೇರಿದಂತೆ ದೇಶವ್ಯಾಪಿಯಾಗಿ ನಡೆದ ಪ್ರಜೆಗಳ ಜನಗಣರಾಜ್ಯೋತ್ಸವದ ಪ್ರತಿರೋಧದ ನೆಲೆಗಳು ಪ್ರಜಾತಂತ್ರಕ್ಕೆ ಸಂದ ದಿಗ್ವಿಜಯವಾಗಿದೆ. ಕೆಲವು ಅಹಿತಕರ ಘಟನೆಗಳ ನಡುವೆಯೂ ರೈತ ಸಮುದಾಯ ತನ್ನ ಅಂತಿಮ ಗುರಿಗೆ ಬದ್ಧತೆ ತೋರಿ ಶಿಸ್ತು ಸಂಯಮದಿಂದ ವರ್ತಿಸಿರುವುದು, ಈ ದೇಶದ ಜನಸಾಮಾನ್ಯರಲ್ಲಿರುವ ಸಂಯಮ, ತಾಳ್ಮೆಯ ಸಂಕೇತವಾಗಿದೆ. ಹಾಗೆಯೇ ಈ ಹೋರಾಟವನ್ನು ಕ್ರೂರವಾಗಿ ಹತ್ತಿಕ್ಕುವ ಪ್ರಯತ್ನಗಳ ಮೂಲಕ ಪ್ರಭುತ್ವ ಮತ್ತು ಆಳುವ ವರ್ಗಗಳು ಬೆತ್ತಲಾಗಿವೆ. ಸಾರ್ವಭೌಮ ಪ್ರಜೆಗಳ ಹೋರಾಟಗಳನ್ನು ರಾಷ್ಟ್ರದ್ರೋಹದ ಪರಿಭಾಷೆಯಲ್ಲಿ ಅಪಮಾನಿಸುವ ಮೂಲಕ ಮಾಧ್ಯಮಗಳು ಪೂರ್ಣ ಬೆತ್ತಲೆಯಾಗಿವೆ.
ಮುಂಬರುವ ದಿನಗಳಲ್ಲಿ ನಡೆಯಬಹುದಾದ ಜನಪರ ಹೋರಾಟಗಳಿಗೆ ದೆಹಲಿಯಲ್ಲಿನ ರೈತರ ಹೋರಾಟ ಮತ್ತು ದೇಶವ್ಯಾಪಿ ನಡೆಯುತ್ತಿರುವ ಆಂದೋಲನಗಳು ಸ್ಫೂರ್ತಿದಾಯಕವಾಗುವ ಆಶಯದೊಂದಿಗೇ, ಈ ದೇಶದ ಕಾರ್ಮಿಕ ಬಂಧುಗಳು, ಗ್ರಾಮೀಣ ಬಡಜನತೆ, ಶೋಷಿತ ಸಮುದಾಯಗಳು, ಅವಕಾಶವಂಚಿತರು, ಮಹಿಳೆಯರು ಮತ್ತು ಜಾತಿ ದೌರ್ಜನ್ಯವನ್ನು ನಿತ್ಯ ಎದುರಿಸುತ್ತಿರುವ ದಲಿತ ಸಮುದಾಯಗಳು ತಮ್ಮ ಹಕ್ಕೊತ್ತಾಯಗಳೊಂದಿಗೆ ಹೋರಾಟಗಳಿಗೆ ಸಜ್ಜಾಗಬೇಕಿದೆ. ಈ ದೇಶ ನಮ್ಮದು, ಈ ಮಣ್ಣು ನಮ್ಮದು, ಸಂವಿಧಾನ ನಮ್ಮದು, ನಮಗೆ ನಾವೇ ಅರ್ಪಿಸಿಕೊಂಡಿರುವ ಸಂವಿಧಾನದ ಆಶಯಗಳೂ ನಮ್ಮವೇ ಆಗಿದೆ. ಈ ಸಂವಿಧಾನದ ರಕ್ಷಣೆಯಾದರೆ ಮಾತ್ರವೇ ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯ ಎನ್ನುವುದನ್ನು ಇನ್ನಾದರೂ ಮನಗಾಣಬೇಕಿದೆ. ಇತಿಹಾಸದ ಕರಾಳ ಪುಟಗಳು, ಸಮಕಾಲೀನ ಭಾರತದ ಕರಾಳ ಹಾಳೆಗಳು ನಮ್ಮ ಮುಂದಿವೆ, ಕಣ್ತೆರೆದು ನೋಡುವ ಇಚ್ಚಾಶಕ್ತಿ ನಮ್ಮೊಳಗಿದ್ದರೆ ಗೆಲುವು ನಮ್ಮದೇ. ಈ ಆಶಯದೊಂದಿಗೇ ಮುನ್ನಡೆಯಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
- ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
- ಇಂಡಿಯಾ ಗೇಟ್‌ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
- NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
- “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.
CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.
http://Visit : www.suddidina.com
ಇಂಡಿಯಾ ಗೇಟ್‌ನಿಂದ ಮೆರವಣಿಗೆ
ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.
ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.
‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’
ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.
“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.
“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ”
|
ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ
ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.
ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.
ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್‌ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

ದಿನದ ಸುದ್ದಿ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
329 ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ವಿಚಾರಣಾ ನೋಟಿಸ್
-
658 OMR ಕಾರ್ಬನ್ ಶೀಟ್‌ಗಳು FSLಗೆ
-
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ED ಗಂಭೀರ ಆರೋಪ
-
₹70–80 ಲಕ್ಷ ಲಂಚದ ಆರೋಪವೂ ತನಿಖೆಯಲ್ಲಿದೆ
-
ಪ್ರಶ್ನೆಪತ್ರ ಸಿದ್ಧತೆ, ಮುದ್ರಣದ CCTV ದೃಶ್ಯಗಳ ಬಗ್ಗೆಯೂ ಅನುಮಾನ
ಸುದ್ದಿದಿನ,ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯ (ED) ರಾಜ್ಯದ ವಿವಿಧೆಡೆ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಅದರ ಬೆನ್ನಲ್ಲೇ ಅಪರಾಧ ತನಿಖಾ ಇಲಾಖೆ (CID) ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
http://Visit : www.suddidina.com
329 ಅಭ್ಯರ್ಥಿಗಳಿಗೆ ನೋಟಿಸ್ ಏಕೆ?
ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಈಗಾಗಲೇ 658 OMR ಕಾರ್ಬನ್ ಶೀಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಮೂಲ OMR ಉತ್ತರ ಪತ್ರಿಕೆಗಳೊಂದಿಗೆ ಹೋಲಿಕೆ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಅಭ್ಯರ್ಥಿಗಳು ಗುರುತಿಸಿದ್ದ ಉತ್ತರಗಳ ಕಾರ್ಬನ್ ಪ್ರತಿಯಲ್ಲಿ ಮತ್ತು ಮೂಲ OMRನಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ಪರಿಶೀಲಿಸುವುದು ತನಿಖೆಯ ಪ್ರಮುಖ ಭಾಗವಾಗಿದೆ.
ಇದೀಗ 329 ಅಭ್ಯರ್ಥಿಗಳನ್ನೂ ವಿಚಾರಣೆಗೆ ಒಳಪಡಿಸುವ CID ಕ್ರಮ ಪ್ರಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ವಿಚಾರಣೆಯ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ, ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅಥವಾ ಉತ್ತರಗಳ ಮಾಹಿತಿ ಮುಂಚಿತವಾಗಿ ಸಿಕ್ಕಿತೇ, OMR ಉತ್ತರ ಪತ್ರಿಕೆಗಳಲ್ಲಿ ತಿದ್ದುಪಡಿ ನಡೆದಿದೆಯೇ ಎಂಬುದರ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
IAS ಅಧಿಕಾರಿಯತ್ತ ತನಿಖೆಯ ಚಿತ್ತ
ಈ ಪ್ರಕರಣದಲ್ಲಿ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಅವರು ಫೆಬ್ರವರಿ 2024ರಿಂದ ಮಾರ್ಚ್ 2026ರವರೆಗೆ KPSCಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ MSME ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬೆಂಗಳೂರಿನ ನಿವಾಸ ಸೇರಿದಂತೆ ಉತ್ತರ ಪ್ರದೇಶದ ಬರೇಲಿಯಲ್ಲಿರುವ ನಿವಾಸದ ಮೇಲೂ ED ಶೋಧ ನಡೆಸಿದೆ.
ED ಆರೋಪದ ಪ್ರಕಾರ, ಗಂಗ್ವಾರ್ ಅವರು ತಮ್ಮ ಇಬ್ಬರು ಪುತ್ರರಿಗೆ KPSC ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ದೊರಕಿಸಿಕೊಡಲು ವ್ಯಕ್ತಿಯೊಬ್ಬರಿಂದ ಸುಮಾರು ₹1.1 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಆರೋಪ ಇನ್ನೂ ತನಿಖೆಯ ಹಂತದಲ್ಲಿದ್ದು, ಆರೋಪ ಸಾಬೀತಾಗಿಲ್ಲ.
ಪ್ರಶ್ನೆಪತ್ರಿಕೆ ಸಿದ್ಧತೆಯಲ್ಲೂ ಅನುಮಾನ
ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಮುದ್ರಿಸುವ ಪ್ರಕ್ರಿಯೆಗೆ ಸಂಬಂಧಿಸಿದ CCTV ದೃಶ್ಯಾವಳಿಗಳ ಅನುಪಸ್ಥಿತಿಯನ್ನೂ ED ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇಂತಹ ಪ್ರಕ್ರಿಯೆಯಲ್ಲಿ CCTV ದಾಖಲೆಗಳು ಪ್ರಮುಖ ಭದ್ರತಾ ಕ್ರಮವಾಗಿರುವುದರಿಂದ, ಅವುಗಳ ಲಭ್ಯತೆ ಮತ್ತು ನಿರ್ವಹಣೆಯೂ ತನಿಖೆಯ ಪ್ರಮುಖ ಅಂಶವಾಗಿದೆ.
ಇದರ ಜೊತೆಗೆ, ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ₹70–80 ಲಕ್ಷದವರೆಗೆ ಲಂಚ ಕೇಳಲಾಗಿದೆ ಎಂಬ ಆರೋಪಗಳೂ ತನಿಖೆಯಲ್ಲಿವೆ. ಪ್ರಶ್ನೆಪತ್ರಿಕೆ ಸೋರಿಕೆ, OMR ತಿದ್ದುಪಡಿ ಮತ್ತು ನೇಮಕಾತಿ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.
KPSCಯಂತಹ ನೇಮಕಾತಿ ಸಂಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವ ಆರೋಪಗಳಾಗಿರುವುದರಿಂದ, CID ಮತ್ತು ED ತನಿಖೆಯ ಮುಂದಿನ ಹಂತಗಳು ಮಹತ್ವ ಪಡೆದುಕೊಂಡಿವೆ. 329 ಅಭ್ಯರ್ಥಿಗಳ ವಿಚಾರಣೆ, OMR ಕಾರ್ಬನ್ ಶೀಟ್‌ಗಳ FSL ವರದಿ ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆಯ ಬಳಿಕ ಪ್ರಕರಣದ ನಿಜವಾದ ಚಿತ್ರಣ ಇನ್ನಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಮೇಲಿನ ಹಣ, ಅಕ್ರಮ ಮತ್ತು ಅಧಿಕಾರಿಯ ವಿರುದ್ಧದ ಆರೋಪಗಳು ತನಿಖಾ ಸಂಸ್ಥೆಗಳು ಮುಂದಿಟ್ಟಿರುವ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಆರೋಪಗಳೆಂದೇ ಪರಿಗಣಿಸಬೇಕೆಂದು ಕೋರ್ಟ್ ತಿಳಿಸಿದೆ.

ದಿನದ ಸುದ್ದಿ
₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
ರಾಜಾಜಿನಗರದಲ್ಲಿ ಬಿಡಿಎ ಭರ್ಜರಿ ಕಾರ್ಯಾಚರಣೆ: 13,000 ಚದರ ಅಡಿ ಜಾಗ ವಶಕ್ಕೆ
- 13,000 ಚದರ ಅಡಿ ಪ್ರದೇಶ ತೆರವು; ಪೊಲೀಸ್ ಭದ್ರತೆಯಲ್ಲಿ ಬಿಡಿಎ ಕಾರ್ಯಾಚರಣೆ
ನಿವೇಶನ 13 ಮತ್ತು 17ರಲ್ಲಿ ಅನಧಿಕೃತ ನಿರ್ಮಾಣ ತೆರವು; ಪೊಲೀಸ್ ಸಹಕಾರದಲ್ಲಿ ಕಾರ್ಯಾಚರಣೆ
ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣಗಳ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ರಾಜಾಜಿನಗರ ಬಡಾವಣೆಯ ಇಂಡಸ್ಟ್ರೀಯಲ್ ಸಬರ್ಬ್ 2ನೇ ಹಂತದಲ್ಲಿ ಮಹತ್ವದ ತೆರವು ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಸುಮಾರು ₹25 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಾಧಿಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಪೀಣ್ಯ ಗ್ರಾಮದ ಸರ್ವೆ ನಂಬರ್ 79 ಮತ್ತು 70ರಲ್ಲಿ ಬರುವ ಇಂಡಸ್ಟ್ರೀಯಲ್ ಸಬರ್ಬ್, 2ನೇ ಹಂತ, ರಾಜಾಜಿನಗರ ಬಡಾವಣೆಯ ನಿವೇಶನ ಸಂಖ್ಯೆ 13 ಮತ್ತು 17ರಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸುಮಾರು 13,000 ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟಡ ಹಾಗೂ ನಿರ್ಮಾಣಗಳನ್ನು ತೆರವುಗೊಳಿಸಿ, ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ.
http://Visit : www.suddidina.com
ಅನಧಿಕೃತ ನಿರ್ಮಾಣಕ್ಕೆ ಬಿಡಿಎ ಬ್ರೇಕ್:
ಬಿಡಿಎಗೆ ಸೇರಿದ ಅಥವಾ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಜಾಗಗಳಲ್ಲಿ ನಿಯಮಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ತೆರವು ಕಾರ್ಯಾಚರಣೆಯ ಬಳಿಕ ಆಸ್ತಿಯನ್ನು ಪ್ರಾಧಿಕಾರದ ನೇರ ಸುಪರ್ದಿಗೆ ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಗಳ ಸಂರಕ್ಷಣೆಗೆ ಬಿಡಿಎ ಕೈಗೊಳ್ಳುತ್ತಿರುವ ಕ್ರಮಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
ಸುಮಾರು ₹25 ಕೋಟಿ ಮೌಲ್ಯದ ಆಸ್ತಿ ಇರುವುದರಿಂದ, ಈ ಕಾರ್ಯಾಚರಣೆ ನಗರದ ಆಸ್ತಿ ಸಂರಕ್ಷಣೆ ಹಾಗೂ ಅನಧಿಕೃತ ನಿರ್ಮಾಣಗಳ ನಿಯಂತ್ರಣದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ದೊಡ್ಡ ಪ್ರಮಾಣದ ಭೂಮಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ನಡೆಸಿದರೆ ಯಾವುದೇ ಕಾರಣಕ್ಕೂ ಅದನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಈ ಕ್ರಮ ನೀಡಿದೆ.
https://x.com/BDAOfficialGok/status/2092121239175512436?s=20
ಬಹು ಇಲಾಖೆಗಳ ಸಮನ್ವಯದಲ್ಲಿ ಕಾರ್ಯಾಚರಣೆ:
ತೆರವು ಕಾರ್ಯಾಚರಣೆಯನ್ನು ಬಿಡಿಎಯ ವಲಯ ಆಯುಕ್ತರು, ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-1, ಕಾರ್ಯನಿರತ ಆರಕ್ಷಕ ಪಡೆ, ಪಶ್ಚಿಮ ವಿಭಾಗದ ಅಭಿಯಂತರರು ಹಾಗೂ ಸರ್ವೆಯರ್‌ಗಳು ಒಳಗೊಂಡ ತಂಡ ಕೈಗೊಂಡಿತು. ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಸ್ಥಳ ಪರಿಶೀಲನೆ, ನಿರ್ಮಾಣ ತೆರವು ಹಾಗೂ ಜಾಗದ ಸ್ವಾಧೀನ ಪ್ರಕ್ರಿಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಪೂರ್ಣಗೊಳಿಸಿದರು. ಕಾರ್ಯಾಚರಣೆ ಬಳಿಕ ತೆರವುಗೊಳಿಸಲಾದ ಪ್ರದೇಶವನ್ನು ಬಿಡಿಎ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ನಗರದ ಭೂ ಸಂಪತ್ತಿನ ರಕ್ಷಣೆಗೆ ಕಠಿಣ ಹೆಜ್ಜೆ
ಬೆಂಗಳೂರು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಹಾಗೂ ಪ್ರಾಧಿಕಾರಕ್ಕೆ ಸೇರಿದ ಜಾಗಗಳ ಮೇಲೆ ಅಕ್ರಮ ನಿರ್ಮಾಣಗಳು ನಡೆಯದಂತೆ ನಿಗಾ ವಹಿಸುವುದು ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಕೈಗೊಂಡಿರುವ ₹25 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳುವ ಕ್ರಮ, ಅನಧಿಕೃತ ನಿರ್ಮಾಣಗಳ ವಿರುದ್ಧದ ಕಾರ್ಯಾಚರಣೆಗೆ ಮತ್ತಷ್ಟು ಬಲ ನೀಡಿದೆ.
ಬೆಂಗಳೂರು ನಗರದ ಭೂ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಬಿಡಿಎಯ ಈ ತೆರವು ಕಾರ್ಯಾಚರಣೆ, ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳು ಮುಂದುವರಿಯುವ ಸಾಧ್ಯತೆ ಇದೆ.

-
ಅಂತರಂಗ7 days agoಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
-
ದಿನದ ಸುದ್ದಿ7 days agoಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
-
ದಿನದ ಸುದ್ದಿ4 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ2 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ11 hours agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ
-
ದಿನದ ಸುದ್ದಿ12 hours agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ
-
ದಿನದ ಸುದ್ದಿ12 hours agoಅಂತರ್ಜಾತಿ ವಿವಾಹದ ಬೆನ್ನಲ್ಲೇ ದೇವಸ್ಥಾನ ನೌಕರ ಅಮಾನತು? ಜಾತಿ ತಾರತಮ್ಯದ ಆರೋಪ!
-
ದಿನದ ಸುದ್ದಿ12 hours agoಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅಡ್ಡಬಂದ ವಾಹನ ತಪ್ಪಿಸಲು ಹೋಗಿ ಅವಘಡ !







