Connect with us

ರಾಜಕೀಯ

ಮೌನ ಜೀವಿಯ ತತ್ವವೂ ಆಂದೋಲನಜೀವಿಯ ಸತ್ವವೂ

Published

on

  • ನಾ ದಿವಾಕರ

ಮಾನವನ ಉಗಮ ಮತ್ತು ಅಭ್ಯುದಯದ ಇತಿಹಾಸವನ್ನು ಅರಿತಿರುವ ಯಾರಿಗೇ ಆದರೂ ಒಂದು ಅಂಶ ತಿಳಿದಿರಲೇಬೇಕು. ಅದೇನೆಂದರೆ, ಮಾನವನಲ್ಲಿ ಸ್ವಾಭಾವಿಕವಾದ ಆಂದೋಲನದ ತುಡಿತ ಮತ್ತು ಸಂವೇದನೆ ಇಲ್ಲದೆ ಹೋಗಿದ್ದಲ್ಲಿ ಬಹುಶಃ ಮನುಕುಲ ಶಿಲಾಯುಗದಿಂದ ಒಂದು ಹೆಜ್ಜೆಯೂ ಮುಂದೆ ಚಲಿಸಲಾಗುತ್ತಿರಲಿಲ್ಲ.

ತನಗೆ ಹಸಿವಾಗುವುದನ್ನು ಹೇಳಲಾರದೆ ರಚ್ಚೆ ಹಿಡಿಯುವ ಎಳೆ ಕೂಸಿನ ಅಳು ಸಹ ಒಂದು ರೀತಿಯ ಆಂದೋಲನವೇ. ಅಂಬೆಗಾಲಿನ ಹಂತವನ್ನು ದಾಟಿ ಹೆಜ್ಜೆ ಹಾಕಲು ಕಲಿಯುವ ಹಸುಳೆ ಬೀಳುತ್ತಾ, ಏಳುತ್ತಾ , ಗಾಯ ಮಾಡಿಕೊಳ್ಳುತ್ತಾ ನಡೆಯುವ ಪ್ರಕ್ರಿಯೆಯೂ ಒಂದು ರೀತಿಯ ಆಂತರಿಕ ಆಂದೋಲನವೇ. ಅಂದರೆ, ಮಾನವ ತನ್ನ ಅಭ್ಯುದಯದ ಹಾದಿಯಲ್ಲಿ ಸ್ಥಾಪಿತ ನೆಲೆಯ ವಿರುದ್ಧ ಬಂಡಾಯ ಹೂಡುತ್ತಲೇ ತನ್ನ ಮುನ್ನಡೆ ಸಾಧಿಸಲೆತ್ನಿಸುತ್ತಾನೆ.

ತನಗೆ ನ್ಯಾಯಯುತವಾಗಿ ದಕ್ಕಬೇಕಾಗಿರುವುದನ್ನು, ತನ್ನಿಂದ ಕಸಿದುಕೊಳ್ಳಲಾಗಿರುವುದನ್ನು, ತನಗೆ ವಂಚಿಸಲಾಗಿರುವುದನ್ನು ಮತ್ತು ತನ್ನ ಸ್ವಾಭಾವಿಕ ಹಕ್ಕುಗಳನ್ನು ಸಾಧಿಸಲು ಮನುಷ್ಯ ವ್ಯಕ್ತಿಗತ ನೆಲೆಯಲ್ಲಿ, ಸಾಮುದಾಯಿಕ ನೆಲೆಯಲ್ಲಿ, ಸಾಂಘಿಕ ನೆಲೆಯಲ್ಲಿ ವೈಯಕ್ತಿಕವಾಗಿ, ಸಾಮುದಾಯಿಕವಾಗಿ, ಸಾಂಸ್ಥಿಕವಾಗಿ ಆಂದೋಲನಗಳ ಮೂಲಕವೇ ಪ್ರಯತ್ನಿಸುತ್ತಾ ಬಂದಿದ್ದಾನೆ.

ಮಾನವ ಸಮಾಜ ಇಂದು ಪ್ರಜಾತಂತ್ರ, ಗಣತಂತ್ರ, ಸಂವಿಧಾನ, ಕಾನೂನು ಕಟ್ಟಳೆ ಮುಂತಾದ ನಾಗರಿಕ ಸಮಾಜದ ರೀತಿ ರಿವಾಜುಗಳನ್ನು ರೂಢಿಸಿಕೊಂಡು, ಮೈಗೂಡಿಸಿಕೊಂಡು ನಡೆದು ಬಂದಿದ್ದರೆ ಅದರ ಹಿಂದೆ ಶತಮಾನಗಳಿಂದಲೂ ನಡೆದು ಬಂದ ಜನಾಂದೋಲನಗಳಿವೆ, ಚಳುವಳಿಗಳ ಇತಿಹಾಸವಿದೆ, ಪ್ರತಿರೋಧ ಪ್ರತಿಭಟನೆಯ ಪರಂಪರೆ ಇದೆ.

ಗುಲಾಮಗಿರಿಯ ವಿರುದ್ಧ ಮೊಟ್ಟಮೊದಲ ಬಾರಿಗೆ ದಂಗೆಯೆದ್ದು, ಪ್ರತಿರೋಧದ ಪಂಜುಗಳನ್ನು ತನ್ನ ಮುಂದಿನ ಹಲವು ಶತಮಾನಗಳ ಪೀಳಿಗೆಗೆ ಬಿಟ್ಟು ಹೋದ ಸ್ಪಾರ್ಟಕಸ್ ನಿಂದ ಹಿಡಿದು ಇತ್ತೀಚಿನ ರೈತ ಮುಷ್ಕರದವರೆಗೆ ಮಾನವ ಸಮಾಜ ಜನಾಂದೋಲನಗಳ ಮೂಲಕವೇ, ವೈಯಕ್ತಿಕ/ಸಾಂಘಿಕ ಪ್ರತಿಭಟನೆ, ಪ್ರತಿರೋಧ, ಬಂಡಾಯಗಳ ಮೂಲಕವೇ ತನ್ನ ವಿಕಾಸವನ್ನು ಕಂಡಿದೆ.

ಬಹುಶಃ ಈ ಇತಿಹಾಸದ ವಿಭಿನ್ನ ಕಾಲಘಟ್ಟಗಳಲ್ಲಿ, ವಿಭಿನ್ನ ನೆಲೆಗಳಲ್ಲಿ ಈ ಪ್ರತಿರೋಧದ ದನಿಗಳು ದಾಖಲಾಗದೆ ಹೋಗಿದ್ದರೆ 21ನೆಯ ಶತಮಾನದ ಮನುಕುಲ ಶಿಲಾಯುಗದ ಅಥವಾ ಗುಲಾಮಿ ಸಮಾಜದಲ್ಲೇ ಉಳಿದುಬಿಡುತ್ತಿತ್ತು.

ಆಂದೋಲನಗಳ ಮೂಲಕ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿ ನಾಗರಿಕ ಸಮಾಜದ ವಿಕಸನಕ್ಕೆ ಕಾರಣವಾಗುವ ಮನುಷ್ಯರನ್ನು ಒಂದು ‘ ತಳಿ ’ ಎಂದು ಮೂದಲಿಸುವ, ಆಂದೋಲನಜೀವಿಗಳು ಎಂದು ಹೀಗಳೆಯುವ ಪ್ರಧಾನಮಂತ್ರಿಗಳು ಇತಿಹಾಸದ ಪುಟಗಳನ್ನು ಒಮ್ಮೆಯಾದರೂ ತಿರುವಿಹಾಕುವುದು ಒಳಿತು.

ಆಂದೋಲನಜೀವಿಗಳ ಈ ತಳಿ ತನ್ನ ಜೀವವಂತಿಕೆಯನ್ನು ಕಾಪಾಡಿಕೊಂಡು ಬಂದಿರುವುದರಿಂದಲೇ ಇಂದು ಭಾರತದಲ್ಲಿ ಒಂದು ಸಂವಿಧಾನ, ಪ್ರಜಾತಂತ್ರ ಮತ್ತು ಸಮಾನತೆಯ ಕನಸುಗಳು ಜೀವಂತವಾಗಿವೆ.

ಈ ತಳಿಯ ಇತಿಹಾಸ ಮತ್ತು ಪರಂಪರೆ ಮನುಕುಲದ ಇತಿಹಾಸದಷ್ಟೇ ಹಳೆಯದು, ಅಷ್ಟೇ ಅಮೂಲ್ಯವಾದುದಲ್ಲವೇ ? ಟಿಪ್ಪುಸುಲ್ತಾನನಿಂದ ಆರಂಭವಾಗಿ, 1857ರ ಸ್ವಾತಂತ್ರ್ಯ ಸಂಗ್ರಾಮವನ್ನು ಹಾದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಜೀವ, ಜೀವನ, ಜೀವನೋಪಾಯ ಎಲ್ಲವನ್ನೂ ಕಳೆದುಕೊಂಡ ಲಕ್ಷಾಂತರ ಜೀವಿಗಳು ಈ ತಳಿಗೇ ಸೇರಿದವರು.

ದುರಂತ ಎಂದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂತತಿಯನ್ನು ಪ್ರತಿನಿಧಿಸದ ಒಂದು ಪೀಳಿಗೆ ಇಂದು ದೇಶ ಮತ್ತು ದೇಶಪ್ರೇಮದ ನಿಷ್ಕರ್ಷೆ ಮಾಡುತ್ತಿದೆ. ಈ ಪೀಳಿಗೆಯ ಕೂಸುಗಳು ಆಂದೋಲನಜೀವಿಗಳನ್ನು ಅಪಮಾನಿಸುತ್ತಿವೆ.

ಬುದ್ಧನ ಸಾತ್ವಿಕ ಆಂದೋಲನದಿಂದ ಅಂಬೇಡ್ಕರರ ತಾತ್ವಿಕ ಪ್ರಜಾಂದೋಲನದವರೆಗಿನ ಹೆಜ್ಜೆಗುರುತುಗಳನ್ನು ಗಮನಿಸಿದ್ದರೆ ಅಥವಾ ಶತಮಾನಗಳ ಅಸಮಾನತೆ ಮತ್ತು ತಾರತಮ್ಯಗಳ ಪಳೆಯುಳಿಕೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಭಾರತೀಯ ಸಮಾಜದಲ್ಲಿನ ಚಾರಿತ್ರಿಕ ಪ್ರತಿರೋಧದ ದನಿಗಳನ್ನು, ಹೋರಾಟಗಳನ್ನು, ಜನಾಂದೋಲನಗಳನ್ನು ಗಮನಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರು ‘ ತಳಿ ’ ಎನ್ನುವ ಪದ ಬಳಸುವ ಬದಲು ಪರಂಪರೆ, ನಾಗರಿಕತೆ ಎಂಬ ಮೌಲಿಕ ಪದವನ್ನು ಬಳಸುತ್ತಿದ್ದರು.

ಅಸ್ಪೃಶ್ಯತೆ, ಬಾಲ್ಯ ವಿವಾಹ ಮುಂತಾದ ಅನಿಷ್ಟ ಪದ್ಧತಿಗಳನ್ನು ಇಂದಿಗೂ ಜೀವಂತವಾಗಿರಿಸಿಕೊಂಡು ಬಂದಿರುವ ಭಾರತೀಯ ಸಮಾಜದಲ್ಲಿ ಆಂದೋಲನ ನಾಗರಿಕತೆಯ ಒಂದು ಭಾಗವಾಗಿ ಬೆಳೆದುಬಂದಿರುವುದನ್ನು ಅರಿತಿದ್ದರೆ ‘ ಆಂದೋಲನಜೀವಿ ’ ಎನ್ನುವ ಲೇವಡಿಯ ಮಾತುಗಳು ಹೊರಬರುತ್ತಿರಲಿಲ್ಲ.

ನಿಜ, ಭಾರತದಲ್ಲಿ ‘ ಅಂದೋಲನಜೀವಿಗಳ ’ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ, ಜಾತಿ ತಾರತಮ್ಯ ಮತ್ತು ದೌರ್ಜನ್ಯಗಳ ವಿರುದ್ಧ, ಮಹಿಳೆಯರ ಘನತೆಗಾಗಿ, ಹೆಣ್ತನದ ರಕ್ಷಣೆಗಾಗಿ, ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯದ ವಿರುದ್ಧ, ಸಾಮಾಜಿಕ ಅನ್ಯಾಯಗಳ ವಿರುದ್ಧ ಆಂದೋಲನಜೀವಿಗಳ ಒಂದು ಪರಂಪರೆಯೇ ಇಲ್ಲಿ ಬೆಳೆದುಬಂದಿದೆ.

ಬಸವಣ್ಣನಿಂದ ಅಂಬೇಡ್ಕರ್ ವರೆಗೆ ಈ ಪರಂಪರೆ ಬೆಳೆಯುತ್ತಲೇ ಬಂದಿದೆ. ಮಾರ್ಕ್ಸ್, ಲೆನಿನ್, ಮಾವೋ, ಫುಲೆ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್ ಹೀಗೆ ಮಹಾನ್ ಚಿಂತಕರ ಸಂತತಿ ಮತ್ತು ವಿಚಾರಧಾರೆ ಈ ಪರಂಪರೆಯನ್ನು ಪೋಷಿಸುತ್ತಾ ಬಂದಿದೆ.

ಇದು ಯಾವುದೇ ವೈಜ್ಞಾನಿಕ ಪ್ರಯೋಗಾಲಯದಲ್ಲಿ ಸೃಷ್ಟಿಸಿದ ತಳಿ ಅಲ್ಲ. ಇದು ಶತಮಾನಗಳ ಅನ್ಯಾಯಗಳ ವಿರುದ್ಧ ಜನಮಾನಸದ ನಡುವೆ ಸೃಷ್ಟಿಯಾಗಿರುವ ಸಂಘರ್ಷದ ಪರಂಪರೆಗಳು, ಹೋರಾಟದ ವಾಹಿನಿಗಳು, ಜನಾಂದೋಲನದ ಸಾಗರಗಳು.

ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ನಂತರ ವಿಶ್ವದ ಅತ್ಯುತ್ತಮ ಸಂವಿಧಾನವನ್ನು ರಚಿಸಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಾಧಿಸುವ ನಿಟ್ಟಿನಲ್ಲಿ 73 ವರ್ಷಗಳ ಸ್ವತಂತ್ರ ಅಡಳಿತ ನಡೆಸಿದ ನಂತರವೂ ಭಾರತದಲ್ಲಿ ಆಂದೋಲನಜೀವಿಗಳು ಸಕ್ರಿಯರಾಗಿದ್ದರೆ ಅದು ಆಡಳಿತ ವ್ಯವಸ್ಥೆ ಮತ್ತು ಆಳುವ ವರ್ಗಗಳು ನಾಚಿಕೆಪಡಬೇಕಾದ ವಿಚಾರ.

ಸಂವಿಧಾನದ ಆಶಯದಂತೆ ಸಮಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ, ಶೋಷಣೆ ಮುಕ್ತ, ದೌರ್ಜನ್ಯ ಮುಕ್ತ, ಭ್ರಷ್ಟಾಚಾರ ಮುಕ್ತ, ಸಂವೇದನಾಶೀಲ ಸಮಾಜ ನಿರ್ಮಾಣಕ್ಕಾಗಿ ಈ ದೇಶದ ಆಳುವ ವರ್ಗಗಳು, ರಾಜಕೀಯ ಪಕ್ಷಗಳು ಸಂವಿಧಾನ ಬದ್ಧತೆ ಮತ್ತು ಪ್ರಜಾತಂತ್ರ ನಿಷ್ಠೆಯಿಂದ ಶ್ರಮಿಸಿದ್ದರೆ ಬಹುಶಃ ಆಂದೋಲನಜೀವಿಗಳೂ ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಪ್ರತಿಭಟನೆ, ಪ್ರತಿರೋಧ, ಮುಷ್ಕರ, ಧರಣಿ ಮುಂತಾದ ಸಂಘರ್ಷಗಳಲ್ಲಿ ಕಳೆಯುತ್ತಿರಲಿಲ್ಲ.

1970ರ ದಶಕದ ರೈಲ್ವೆ ಮುಷ್ಕರದಿಂದ 2020ರ ರೈತ ಮುಷ್ಕರದವರೆಗೆ, ನೆಲ್ಲಿ ಹತ್ಯಾಕಾಂಡದಿಂದ ಶಹೀನ್ ಭಾಗ್‍ವರೆಗೆ, ಮಥುರಾ ಅತ್ಯಾಚಾರ ಪ್ರಕರಣದಿಂದ ಹಥ್ರಾಸ್‍ವರೆಗೆ, ತುರ್ತುಪರಿಸ್ಥಿತಿಯಿಂದ ಈ ಕ್ಷಣದವರೆಗೆ ಈ ದೇಶದ ಹಾದಿ ಬೀದಿಗಳಲ್ಲಿ ನಡೆದ ಹೋರಾಟಗಳನ್ನು, ನ್ಯಾಯಾಂಗದ ಅಂಗಳದಲ್ಲಿ ನಡೆದ ಸಂಘರ್ಷಗಳನ್ನು ಗಮನಿಸಿದರೆ ಭಾರತದ ಆಳುವ ವರ್ಗಗಳು ‘ ಆಂದೋಲನಜೀವಿಗಳನ್ನು ’ ಹೇಗೆ ತುದಿಗಾಲಲ್ಲಿ ನಿಲ್ಲಿಸಿವೆ ಎಂದು ಅರ್ಥವಾಗುತ್ತದೆ.

ಶಿಕ್ಷಣ ಹಕ್ಕು, ಆಹಾರ ಹಕ್ಕು, ಅರಣ್ಯ ಹಕ್ಕು, ಮಾಹಿತಿ ಹಕ್ಕು ಹೀಗೆ ಸಾರ್ವಭೌಮ ಪ್ರಜೆಗಳ ಜೀವನ ಮತ್ತು ಜೀವನೋಪಾಯಕ್ಕೆ ಅತ್ಯವಶ್ಯವಾದ ಹಕ್ಕುಗಳನ್ನು ಸಾಂವಿಧಾನಿಕವಾಗಿ ಪ್ರಜೆಗಳಿಗೆ ಒದಗಿಸಲು ಈ ದೇಶಕ್ಕೆ ಆರು ದಶಕಗಳು ಬೇಕಾದವು. ಈ ಎಲ್ಲ ಹಕ್ಕುಗಳೂ ಆಳುವವರ ಔದಾರ್ಯದಿಂದ ಪಡೆದಿದ್ದಲ್ಲ, ಜನಪರ ಸಂಘಟನೆಗಳ, ಜನಾಂದೋಲನಗಳ ಅವಿರತ ಶ್ರಮ, ಹೋರಾಟ ಮತ್ತು ನ್ಯಾಯಯುತ ಪ್ರಯತ್ನಗಳ ಫಲವಾಗಿ ಪಡೆದದ್ದು.

ಪ್ರತಿಭಟನೆ ಮತ್ತು ಪ್ರತಿರೋಧ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಯಂತ್ರವನ್ನು ಸುಸ್ಥಿತಿಯಲ್ಲಿಡಲು ನೆರವಾಗುವ ಪ್ರಬಲ ಅಸ್ತ್ರಗಳು. ಸರ್ವಾಧಿಕಾರಿ, ನಿರಂಕುಶ ವ್ಯವಸ್ಥೆಯಲ್ಲಿ ದಾಸ್ಯದಿಂದ ಮುಕ್ತಿಪಡೆಯಲು ಇರುವ ಮಾರ್ಗಗಳು. ಜಗತ್ತಿನ ಇತಿಹಾಸದಲ್ಲಿ ಅನೇಕಾನೇಕ ಸರ್ವಾಧಿಕಾರಿಗಳು, ನಿರಂಕುಶ ಪ್ರಭುಗಳು ಜನಾಂದೋಲನಗಳಿಗೆ ಮಣಿದು ಪದತ್ಯಾಗ ಮಾಡಿರುವುದನ್ನು ಕಂಡಿದ್ದೇವೆ, ಇಂದಿಗೂ ಕಾಣುತ್ತಿದ್ದೇವೆ.

1990 ದಶಕದಲ್ಲಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಮ್ಯುನಿಸ್ಟ್ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದು, ಹಿಂದೂ ರಾಷ್ಟ್ರ ಎಂಬ ಹೆಗ್ಗಳಿಕೆಯಿದ್ದ ನೇಪಾಲದಲ್ಲಿ ರಾಜಪ್ರಭುತ್ವವನ್ನು ಕೊನೆಗೊಳಿಸಿದ್ದು ಜನಾಂದೋಲನಗಳೇ ಅಲ್ಲವೇ ? ಭಾರತದಲ್ಲಿ ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಕೊನೆಗೊಳಿಸಿದ್ದೂ ಜನಾಂದೋಲನವೇ ಅಲ್ಲವೇ ?

ಈ ಆಂದೋಲನಜೀವಿಗಳು ಇಲ್ಲದೆ ಹೋಗಿದ್ದರೆ ಭಾರತ ಮತ್ತು ವಿಶ್ವ ಹೇಗಿರುತ್ತಿತ್ತು ? ಈ ಪ್ರಶ್ನೆ ಒಂದು ಘಳಿಗೆ ಮನದಲ್ಲಿ ಸುಳಿದಿದ್ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ‘ ಅಂದೋಲನಜೀವಿ ’ ಪದವನ್ನು ಅವಹೇಳನಕಾರಿಯಾಗಿ ಬಳಸುತ್ತಿರಲಿಲ್ಲ.

ಇಂದು ಭಾರತ ಕವಲು ಹಾದಿಯಲ್ಲಿದೆ. ಇಂದಿನ ಭಾರತ ತನ್ನ ಸ್ಥಾಪಿತ ಮಾನವೀಯ ನೆಲೆಗಳಿಂದ ವಿಮುಖವಾಗುತ್ತಿದೆ, ಶತಮಾನಗಳ ಬಹುಸಂಸ್ಕೃತಿಯ ನೆಲೆಗಳನ್ನು ಅಲ್ಲಗಳೆಯುತ್ತಿದೆ, ಈ ದೇಶದ ಅಂತಃಸತ್ವವನ್ನು ಕಾಪಾಡಿಕೊಂಡು ಬಂದಿರುವ ಜನಸಂಸ್ಕೃತಿಗಳನ್ನು ನಿರಾಕರಿಸುತ್ತಿದೆ, ಸಮಾಜೋ ಸಾಂಸ್ಕೃತಿಕ ನೆಲೆಯಲ್ಲಿ ಚಾರಿತ್ರಿಕವಾಗಿ ನೆಲೆಗೊಂಡಿರುವ ಭ್ರಾತೃತ್ವದ ನೆಲೆಗಳನ್ನು ನಾಶಪಡಿಸುತ್ತಿದೆ, ಮತ್ತೊಂದೆಡೆ ಈ ದೇಶದ ಬಹುಸಂಖ್ಯಾತ ಜನತೆಯನ್ನು ಶೋಷಣೆಗೊಳಪಡಿಸುತ್ತಲೇ ಬ್ರಾಹ್ಮಣ್ಯದ ಅಧಿಕಾರಶಾಹಿ ನೆಲೆಗಳಿಗೆ ಮರುಜನ್ಮ ಕಲ್ಪಿಸುತ್ತಿದೆ.

ನವ ಭಾರತ ಪ್ರಾಚೀನ ಮನುಸ್ಮೃತಿಯ ಪರಂಪರೆಯನ್ನು ಪುನರ್ ಸ್ಥಾಪಿಸುವತ್ತ ಧಾವಿಸುತ್ತಿದೆ. ಸ್ವತಂತ್ರ ಭಾರತ ಶಿಲ್ಪಿಗಳ ಸುಂದರ ಕನಸುಗಳನ್ನು ಭಗ್ನಗೊಳಿಸಿ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೊಸಕಿಹಾಕುವತ್ತ ದಾಪುಗಾಲು ಹಾಕುತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲೇ ಕಳೆದ ಎರಡು ವರ್ಷಗಳಲ್ಲಿ ಪ್ರಬಲ ಜನಾಂದೋಲನಗಳು ರೂಪುಗೊಳ್ಳುತ್ತಿವೆ, ಆಂದೋಲನಜೀವಿಗಳೂ ಹೆಚ್ಚಾಗುತ್ತಿದ್ದಾರೆ.

ದೇಶದ ಶ್ರಮಜೀವಿಗಳನ್ನು, ದುಡಿಯುವ ವರ್ಗಗಳನ್ನು ಶಾಶ್ವತವಾಗಿ ಗುಲಾಮಗಿರಿಗೆ ದೂಡುವ ಕಾರ್ಮಿಕ ಸಂಹಿತೆಗಳು, ಸಮಸ್ತ ರೈತಾಪಿಯನ್ನು ಕಾರ್ಪೋರೇಟ್ ಗುಲಾಮಗಿರಿಗೆ ಒಳಪಡಿಸುವ ಮೂರು ಕರಾಳ ಕೃಷಿ ಮಸೂದೆಗಳು, ದೇಶದ ಅವಕಾಶವಂಚಿತ ಜನಸಮುದಾಯಗಳನ್ನು ಮತ್ತು ಶೋಷಿತರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹೊಸ ಶಿಕ್ಷಣ ನೀತಿ, ಶತಮಾನಗಳಿಂದ ಈ ದೇಶದಲ್ಲಿ ನೆಲೆಸಿರುವ ಜನಸಮುದಾಯಗಳನ್ನು ಹೊರದಬ್ಬುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ ಆರ್ ಸಿ ಕಾಯ್ದೆ, ಸಂವಿಧಾನ ಈ ದೇಶದ ಸಾರ್ವಭೌಮ ಪ್ರಜೆಗಳಿಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಯುಎಪಿಎ ಎನ್ನುವ ಕರಾಳ ಶಾಸನ, ಸಂವಿಧಾನದ ಕನಸಿನ ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುವ ಆಡಳಿತ ನೀತಿಗಳು ಇವೆಲ್ಲವೂ ಆಂದೋಲನಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ಸಹಜವೇ ಅಲ್ಲವೇ “ ದೇಶ ಎಂದರೆ ಮಣ್ಣಲ್ಲವೋ ಮನುಷ್ಯರು ” ಎಂಬ ಕವಿವಾಣಿ ನಿಜ ಅಲ್ಲವೇ ?

ದೇಶದ ಆಡಳಿತ ನಿರ್ವಹಿಸುವವರ ನೈತಿಕ ನೆಲೆ ಪರಿಶುದ್ಧವಾಗಿರಬೇಕು, ವ್ಯಕ್ತಿಗತ ಹಿನ್ನೆಲೆ ದೋಷಮುಕ್ತವಾಗಿರಬೇಕು, ವೈಯಕ್ತಿಕ ನೆಲೆ ಪ್ರಾಮಾಣಿಕವಾಗಿರಬೇಕು. ಹೀಗಿದ್ದಾಗ ಮಾತ್ರ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಕಾಪಾಡಲು ಸಾಧ್ಯ. ಸಾರ್ವಭೌಮ ಪ್ರಜೆಗಳ ಅಮೂಲ್ಯ ಮತಗಳನ್ನು ಪಡೆದು ವಿಧಾನಸಭೆ, ಸಂಸತ್ತನ್ನು ಪ್ರವೇಶಿಸುವ ಜನಪ್ರತಿನಿಧಿಗಳು ತಮ್ಮ ನಾಲಿಗೆಯ ಮೇಲೆ ಹಿಡಿತ ಕಳೆದುಕೊಂಡರೆ ಶಾಸನಸಭೆಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ.

ಇತ್ತೀಚಿನ ದಿನಗಳಲ್ಲಿ ಇದನ್ನು ಗಮನಿಸುತ್ತಲೇ ಬಂದಿದ್ದೇವೆ. ಗುಂಡಿಟ್ಟು ಕೊಲ್ಲುವವರು, ತಲೆ ಕಡಿಯುವವರು, ಸಮುದ್ರಕ್ಕೆ ಎಸೆಯುವವರು, ಕೈಕಾಲು ಕತ್ತರಿಸುವವರು ಅಧಿಕಾರಪೀಠಗಳನ್ನು ಅಲಂಕರಿಸುತ್ತಿದ್ದಾರೆ. ಶಾಸನಸಭೆಗಳ ಅಂಗಳದಲ್ಲಿ ಸಚ್ಚಾರಿತ್ರ್ಯದ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗುತ್ತಿರುವಂತೆಲ್ಲಾ, ಸಭ್ಯ ನಡತೆ, ಸೌಜನ್ಯಯುತ ಮಾತು, ಸಂವೇದನಾಶೀಲ ವರ್ತನೆ ಮತ್ತು ಮಾನವೀಯ ಧೋರಣೆ ಕ್ಷೀಣಿಸುವುದು ಸಹಜ. ಈ ದುರಂತ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ.

ಈ ಮೌಲ್ಯರಹಿತ ಭೂಮಿಕೆಯ ಮೇಲೆ ನಿಂತು, ತಮ್ಮ ಹಕ್ಕುಗಳಿಗಾಗಿ, ಅಸ್ಮಿತೆ ಅಸ್ತಿತ್ವಗಳಿಗಾಗಿ , ತಮ್ಮ ಭವಿಷ್ಯಕ್ಕಾಗಿ ಹೋರಾಡುವ ಪ್ರಜೆಗಳನ್ನು ‘ ಆಂದೋಲನಜೀವಿಗಳು ’ ಎಂದು ಮೂದಲಿಸುವುದು ಪ್ರಧಾನಮಂತ್ರಿಗಳ ಸ್ಥಾನಕ್ಕೆ ಶೋಭೆ ತರುವಂತಹುದಲ್ಲ.

ಪ್ರಧಾನಿಗಳ ಈ ಹೇಳಿಕೆ ಕೊರೋನಾಗಿಂತಲೂ ಶೀಘ್ರವಾಗಿ ವ್ಯಾಪಿಸಿದ್ದು ತೆಲಂಗಾಣದ ಮುಖ್ಯಮಂತ್ರಿ ಹೋರಾಟನಿರತ ಮಹಿಳೆಯರನ್ನು ನಾಯಿಗಳಿಗೆ ಹೋಲಿಸಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುತ್ತಿದ್ದ ಕೆ ಚಂದ್ರಶೇಖರ್ ರಾವ್ ತಮ್ಮ ಹಕ್ಕೊತ್ತಾಯಗಳಿಗಾಗಿ ಮನವಿ ಸಲ್ಲಿಸಲು ನೆರೆದಿದ್ದ ಮಹಿಳೆಯರನ್ನು ಉದ್ದೇಶಿಸಿ “ ನೀವು ಈಗ ಅರ್ಜಿ ಸಲ್ಲಿಸಿದ್ದೀರಿ ಈಗ ಇಲ್ಲಿಂದ ಹೊರಡಿ, ನೀವು ಇಲ್ಲಿಯೇ ಇರಲು ಬಯಸಿದರೆ ಮೌನದಿಂದಿರಿ.

ಅನಗತ್ಯವಾಗಿ ನೀವು ಏಟು ತಿನ್ನಬೇಕಾಗುತ್ತದೆ. ನಿಮ್ಮಂತಹ ಸಾಕಷ್ಟು ಜನರನ್ನು ನೋಡಿದ್ದೇವೆ, ಅಮ್ಮಾ , ನಿಮ್ಮಂತಹ ನಾಯಿಗಳು ಸಾಕಷ್ಟಿವೆ ಇಲ್ಲಿಂದ ಹೊರಡಿ ” ಎಂದು ಹೇಳಿದ್ದಾರೆ.(ಟೈಮ್ಸ್ ಆಫ್ ಇಂಡಿಯಾ-11-2-21). ಲಕ್ಷಾಂತರ ಆಂದೋಲನಜೀವಿಗಳ ಹೋರಾಟದ ಫಲಾನುಭವಿಯಾಗಿ ಅಧಿಕಾರಪೀಠದಲ್ಲಿರುವ ಓರ್ವ ಮುಖ್ಯಮಂತ್ರಿಯ ಕಣ್ಣಿಗೆ ಇಂದಿನ ಆಂದೋಲನಜೀವಿಗಳು ನಾಯಿಗಳಂತೆ ಕಾಣುತ್ತಾರೆ. ಇದು ಈ ದೇಶದ ದುರಂತ.

ಭಾರತದ ಸಂವಿಧಾನವನ್ನು ಮುನ್ನಡೆಸಿಕೊಂಡು ಹೋಗುವವರು ತಮ್ಮ ನಡತೆ, ಧೋರಣೆ, ಚಾರಿತ್ರ್ಯ ಮತ್ತು ಸದ್ಗುಣಗಳ ಮೂಲಕ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿದ್ದರೆ ಮಾತ್ರ ಈ ದೇಶದಲ್ಲಿ ಪ್ರಜಾತಂತ್ರ ಉಳಿಯಲು ಸಾಧ್ಯ ಎನ್ನುವುದನ್ನು ಇನ್ನಾದರೂ ನಾವು ಅರ್ಥಮಾಡಿಕೊಳ್ಳಬೇಕಿದೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇಂತಹ ಉದಾತ್ತ ಚಿಂತನೆಯ ನಾಯಕರು ಇದ್ದುದರಿಂದಲೇ ಭಾರತ ತನ್ನ ಮೌಲ್ಯಗಳನ್ನು ಕೊಂಚಮಟ್ಟಿಗಾದರೂ ಉಳಿಸಿಕೊಂಡುಬಂದಿದೆ. ಸರ್ಕಾರದ ಆಡಳಿತ ನೀತಿಗಳ ವಿರುದ್ಧ, ಜನಸಾಮಾನ್ಯರ ಸಾಂವಿಧಾನಿಕ ಹಕ್ಕುಗಳಿಗಾಗಿ ದನಿ ಎತ್ತುವ, ಹೋರಾಡುವ ಪ್ರಜೆಗಳನ್ನು ‘ ಆಂದೋಲನಜೀವಿಗಳು ’ ಎಂದು ಮೂದಲಿಸುವ ಒಂದು ಸರ್ಕಾರ ಈ ಮೌಲ್ಯಗಳನ್ನು ಸಂರಕ್ಷಿಸಲು ಸಾಧ್ಯವೂ ಇಲ್ಲ, ಅರ್ಹವೂ ಅಲ್ಲ.

ಈ ವಿಕೃತ ಮನಸ್ಥಿತಿಯ ಆಡಳಿತವ ವ್ಯವಸ್ಥೆಯಲ್ಲೇ “ ಭಾರತದ ಪ್ರಜೆಗಳಾದ ನಾವು,,, ನಮಗೆ ನಾವೇ ಅರ್ಪಿಸಿಕೊಂಡಿರುವ ” ಸಂವಿಧಾನವನ್ನು ರಕ್ಷಿಸಲು ನಿರಂತರ ಆಂದೋಲನಗಳ ಹೊಸ ಯುಗವನ್ನು ಪ್ರವೇಶಿಸಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯ 5 ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷದ ವಯೋಮಿತಿಯ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ (Mandatory Biometric Update) ಮಾಡಿಸಲು ಜಿಲ್ಲಾಡಳಿತವು ವಿಶೇಷ ಅವಕಾಶ ಕಲ್ಪಿಸಿದೆ. ಜಿಲ್ಲೆಯ ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಸೆಪ್ಟೆಂಬರ್ 30, 2026 ರವರೆಗೆ ಈ ಸೇವೆಯು ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ.

ಆಧಾರ್ ನಿಯಮಗಳ ಪ್ರಕಾರ, ಮಕ್ಕಳಿಗೆ 5 ಮತ್ತು 15 ವರ್ಷ ತುಂಬಿದಾಗ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಈ ನವೀಕರಣದಿಂದ ಶಾಲಾ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ವಿದ್ಯಾರ್ಥಿ ವೇತನ ಹಾಗೂ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ.

ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಮತ್ತು ಪೂರಕ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜಿಲ್ಲೆಯ ಎಲ್ಲಾ ಪೋಷಕರು ಈ ಜವಾಬ್ದಾರಿಯನ್ನು ಅರಿತು, ನಿಗದಿತ ಅವಧಿಯೊಳಗೆ ತಮ್ಮ ಮಕ್ಕಳ ಆಧಾರ್ ನವೀಕರಿಸುವ ಮೂಲಕ ಸರ್ಕಾರದ ಯೋಜನೆಗಳು ತಲುಪಲು ಸಹಕರಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು

Published

on

~ಗೋವರ್ಧನ ನವಿಲೇಹಾಳು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಖಾಲಿಯಾದ ಈ ಕ್ಷೇತ್ರವು ಕುಟುಂಬದ ರಾಜಕೀಯ ಉತ್ತರಾಧಿಕಾರ, ಅಲ್ಪಸಂಖ್ಯಾತರ ಅಸಮಾಧಾನ ಮತ್ತು ಪಕ್ಷಾಂತರದ ಆರೋಪಗಳ ನಡುವೆ ತೀವ್ರ ಸ್ಪರ್ಧೆಯನ್ನು ಕಂಡಿತು. ಸುಮಾರು 5,708 ಮತಗಳ ಅಂತರದಿಂದ ಗೆದ್ದ ಸಮರ್ಥ್ ಅವರು ಶಾಮನೂರು ಕುಟುಂಬದ ಮೂರನೇ ಪೀಳಿಗೆಯ ಪ್ರತಿನಿಧಿಯಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ಗೆಲುವು ಕಾಂಗ್ರೆಸ್‌ಗೆ ಸಂತೋಷದ ಸುದ್ದಿಯಾದರೂ, ಎಸ್‌ಡಿಪಿಐ ಪಡೆದ ಗಣನೀಯ 18,975 ಮತಗಳು ಮತ್ತು ಬಿಜೆಪಿಯ ತೀವ್ರ ಪೈಪೋಟಿ ರಾಜಕೀಯ ಸಮೀಕರಣಗಳಲ್ಲಿ ಹೊಸ ತಿರುವುಗಳನ್ನು ಸೂಚಿಸುತ್ತವೆ.

ಈ ಉಪಚುನಾವಣೆಯು ಕೇವಲ ಕ್ಷೇತ್ರೀಯ ಘಟನೆಯಾಗಿರದೆ, ಕರ್ನಾಟಕ ರಾಜಕೀಯದಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್, ಕುಟುಂಬ ರಾಜಕೀಯ ಮತ್ತು ಪ್ರತಿಪಕ್ಷದ ತಂತ್ರಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಯಿತು. ಶಾಮನೂರು ಕುಟುಂಬದ ದೀರ್ಘಕಾಲದ ಸೇವೆಯನ್ನು ಜನರು ಮೆಚ್ಚಿದ್ದರೂ, ಕಾಂಗ್ರೆಸ್‌ನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಣೆಯಿಂದಾಗಿ ಉಂಟಾದ ಅಸಮಾಧಾನವು ಎಸ್‌ಡಿಪಿಐಗೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ತೀವ್ರ ಪ್ರಚಾರ ನಡೆಸಿದ್ದರೂ, ಕಾಂಗ್ರೆಸ್‌ನ ಅಭಿವೃದ್ಧಿ ಕಾರ್ಯಗಳು ಮತ್ತು ಐದು ಗ್ಯಾರಂಟಿಗಳ ಪ್ರಭಾವವು ಗೆಲುವಿಗೆ ನೆರವಾಯಿತು. ಆದರೆ ಈ ಗೆಲುವು ಸುಲಭವಾಗಿರಲಿಲ್ಲ; ಅದು ಎಲ್ಲಾ ಪಕ್ಷಗಳಿಗೂ ಪಾಠವನ್ನು ಕಲಿಸುತ್ತದೆ.

ಸಮರ್ಥ್ ಶಾಮನೂರು ಅವರ ಮುಂದಿನ ನಡೆ

ಕಿರಿಯ ವಯಸ್ಸಿನಲ್ಲಿ (ದೇಶದ ಎರಡನೇ ಅತಿ ಕಿರಿಯ ಶಾಸಕರಾಗಿ) ಗೆದ್ದ ಸಮರ್ಥ್ ಅವರು ತಮ್ಮ ಅಜ್ಜರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿಯಲ್ಲಿದ್ದಾರೆ. ಮುಂದಿನ ನಡೆಯು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರೀಕರಣಗೊಳ್ಳಬೇಕು. ದಾವಣಗೆರೆಯಂತಹ ನಗರ-ಗ್ರಾಮೀಣ ಮಿಶ್ರ ಕ್ಷೇತ್ರದಲ್ಲಿ ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವುದು ಮುಖ್ಯ. ಶಾಮನೂರು ಕುಟುಂಬದ ಹೆಸರು ಅಭಿವೃದ್ಧಿಗೆ ಸಮಾನವಾಗಿದೆ; ಇದನ್ನು ಮುಂದುವರಿಸಿ, ಎಲ್ಲಾ ಸಮುದಾಯಗಳ ನಡುವೆ ಸೇತುವೆಯಾಗಬೇಕು.

ವಿಶೇಷವಾಗಿ ಅಲ್ಪಸಂಖ್ಯಾತರ ಅಸಮಾಧಾನವನ್ನು ನಿವಾರಿಸುವುದು ಅಗತ್ಯ. ಟಿಕೆಟ್ ವಿವಾದದ ನಂತರ ಉಂಟಾದ ಬಿರುಕುಗಳನ್ನು ತುಂಬುವ ಮೂಲಕ ಏಕತೆಯ ಸಂದೇಶ ನೀಡಬೇಕು. ಯುವಕರಾಗಿರುವುದರಿಂದ ಆಧುನಿಕ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪಾರದರ್ಶಕ ಆಡಳಿತದ ಮೂಲಕ ಹೊಸ ಚಿಂತನೆ ತರಬಹುದು. ರಾಜಕೀಯದಲ್ಲಿ ವೈಯಕ್ತಿಕ ದಾಳಿ ಬದಲು ನಿರ್ಮಾಣಾತ್ಮಕ ವಿಮರ್ಶೆಯನ್ನು ಪ್ರೋತ್ಸಾಹಿಸುವುದು ಅವರ ಯಶಸ್ಸಿಗೆ ಕಾರಣವಾಗುತ್ತದೆ. ಜನಸಂಪರ್ಕವನ್ನು ನಿರಂತರವಾಗಿ ಉಳಿಸಿಕೊಂಡು, ಕ್ಷೇತ್ರದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತುತಪಡಿಸುವುದು ಅವರ ಮುಂದಿನ ಗುರಿಯಾಗಬೇಕು. ಗೆಲುವು ಕುಟುಂಬದ ಆಸ್ತಿಯಲ್ಲ, ಜನರ ವಿಶ್ವಾಸದ ಫಲ; ಇದನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲು.

ಬಿಜೆಪಿಯ ಮುಂದಿನ ಸವಾಲುಗಳು

ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನ ಒಳಜಗಳಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಬಿಜೆಪಿಗೆ ಸವಾಲುಗಳು ಹಲವು: ಮೊದಲನೆಯದು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ನಡುವೆ ವಿಶ್ವಾಸಾರ್ಹತೆಯನ್ನು ಕಟ್ಟುವುದು. ಧ್ರುವೀಕರಣದ ತಂತ್ರಗಳು ಸೀಮಿತ ಯಶಸ್ಸು ನೀಡುತ್ತವೆ ಎಂಬುದು ಈ ಫಲಿತಾಂಶ ಸೂಚಿಸುತ್ತದೆ.

ಕ್ಷೇತ್ರದಲ್ಲಿ ಸ್ಥಳೀಯ ನಾಯಕರನ್ನು ಬಲಪಡಿಸುವುದು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನಸಂಪರ್ಕ ಹೆಚ್ಚಿಸುವುದು ಅಗತ್ಯ. ರಾಜ್ಯ ಮಟ್ಟದಲ್ಲಿ ಪ್ರತಿಪಕ್ಷದ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಮುಂದಿನ ಚುನಾವಣೆಗಳಲ್ಲಿ ನೆರವಾಗುತ್ತದೆ. ಈ ಗೆಲುವು ಕಾಂಗ್ರೆಸ್‌ಗೆ ಎಚ್ಚರಿಕೆಯಾಗಿದ್ದರೆ, ಬಿಜೆಪಿಗೆ ಕ್ರಿಯಾಶೀಲತೆಯ ಅಗತ್ಯವನ್ನು ತೋರಿಸುತ್ತದೆ.

ಎಸ್‌ಡಿಪಿಐ ಮುಂದಿನ ಸವಾಲು

ಎಸ್‌ಡಿಪಿಐ ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಪಡೆದು ತನ್ನ ಉಪಸ್ಥಿತಿಯನ್ನು ಸಾಬೀತುಪಡಿಸಿದೆ. ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಂ ಸಮುದಾಯದ ಅಸಮಾಧಾನವನ್ನು ಬಳಸಿಕೊಂಡು ತನ್ನ ಮತಬ್ಯಾಂಕ್‌ನ್ನು ವಿಸ್ತರಿಸಿದೆ. ಆದರೆ ಇದು ಸವಾಲುಗಳನ್ನೂ ತಂದಿದೆ. ಮುಂದೆ ಎಸ್‌ಡಿಪಿಐಗೆ ಬ್ರಾಡ್ ಆಪೀಲ್ ಅಗತ್ಯ – ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಆರ್ಥಿಕ-ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಉದ್ಯೋಗದಂತಹ ವಿಷಯಗಳಲ್ಲಿ ಎಲ್ಲರಿಗೂ ಸ್ಪಂದಿಸುವ ಧೋರಣೆ ಬೆಳೆಸಬೇಕು.

ಚುನಾವಣಾ ಅನಿಯಮಗಳ ಆರೋಪಗಳು ಮತ್ತು ಮುಖ್ಯ ಪಕ್ಷಗಳ ನಡುವಿನ ತಂತ್ರಗಳ ನಡುವೆ ಸಿಲುಕದೆ, ಸ್ವತಂತ್ರ ರಾಜಕೀಯವನ್ನು ಬಲಪಡಿಸುವುದು ಮುಖ್ಯ. ದೀರ್ಘಕಾಲದ ಯಶಸ್ಸಿಗೆ ಸಮುದಾಯಗಳ ನಡುವಿನ ಸೇತುವೆಯಾಗುವುದು ಅಗತ್ಯ; ಇಲ್ಲದಿದ್ದರೆ ಮತ ವಿಭಜನೆಯ ಆರೋಪಗಳು ಮುಂದುವರಿಯುತ್ತವೆ.

ಈ ಫಲಿತಾಂಶವು ಭಾರತೀಯ ಜನತಂತ್ರದ ಜೀವಂತತೆಯನ್ನು ತೋರಿಸುತ್ತದೆ. ಗೆಲುವು ಸಂಭ್ರಮಿಸುವುದರ ಜೊತೆಗೆ, ಸೋಲಿನಿಂದ ಪಾಠ ಕಲಿಯುವುದು ಎಲ್ಲಾ ಪಕ್ಷಗಳ ಕರ್ತವ್ಯ. ಸಮರ್ಥ್ ಶಾಮನೂರು ಅವರು ತಮ್ಮ ಯುವಕರ ಉತ್ಸಾಹ ಮತ್ತು ಕುಟುಂಬ ಪರಂಪರೆಯನ್ನು ಸಂಯೋಜಿಸಿ, ಎಲ್ಲಾ ವರ್ಗಗಳ ಜನರ ಸೇವೆಗೆ ಮುಂದಾಗಬೇಕು. ಕಾಂಗ್ರೆಸ್ ಅಂತರ್ಗತ ಏಕತೆಯನ್ನು ಬಲಪಡಿಸಬೇಕು. ಬಿಜೆಪಿ ಮತ್ತು ಎಸ್‌ಡಿಪಿಐ ತಮ್ಮ ತಂತ್ರಗಳನ್ನು ಪುನರ್ ಪರಿಶೀಲಿಸಿ, ಜನಕೇಂದ್ರಿತ ರಾಜಕೀಯಕ್ಕೆ ಮರಳಬೇಕು.

ದಾವಣಗೆರೆ ದಕ್ಷಿಣದ ಜನರು ಅಭಿವೃದ್ಧಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಹೊಸ ಶಾಸಕರು ಈ ನಿರೀಕ್ಷೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. ರಾಜಕೀಯವು ಸೇವೆಯಾಗಬೇಕೇ ವಿನಾ ಕುಟುಂಬ ಅಥವಾ ಸಮುದಾಯ ದ್ವೇಷದ ಆಟವಾಗಬಾರದು. ಈ ಉಪಚುನಾವಣೆಯ ಪಾಠಗಳು ರಾಜ್ಯದ ಭವಿಷ್ಯದ ಚುನಾವಣೆಗಳಿಗೆ ದಾರಿ ತೋರಿಸುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಸುಗಮ ಮತ ಎಣಿಕೆಗೆ ಸಜ್ಜು 

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯನ್ನು ಸುಗಮ, ಪಾರದರ್ಶಕ ಮತ್ತು ಅತ್ಯಂತ ಸುರಕ್ಷಿತವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಸಮನ್ವಯದಿಂದ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅವರು ನಿರ್ದೇಶನ ನೀಡಿದರು.

ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯ  ಮತ ಎಣಿಕೆ ಪ್ರಕ್ರಿಯೆ ಕುರಿತು ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಕಾರ್ಯವು ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯುವ ದೃಷ್ಟಿಯಿಂದ, ಮತ ಎಣಿಕೆ ಕೇಂದ್ರದ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ‘ವಾಹನ ಮುಕ್ತ ವಲಯ’  ಎಂದು ಘೋಷಿಸಲಾಗಿದೆ, ಎಣಿಕೆ ಕೇಂದ್ರದ ಗೇಟ್‌ನಿಂದ ಸುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಅಲ್ಲಿ ಸಿಆರ್‌ಪಿಸಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಕೇಂದ್ರದ ಸುತ್ತಲೂ  ಮೂರು ಹಂತದ ಸಮನ್ವಯ ಭದ್ರತಾ ವ್ಯವಸ್ಥೆಯನ್ನು (Three-tier coordinating security system) ಅಳವಡಿಸಲಾಗುವುದು.  ಮತ ಎಣಿಕೆ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗದಂತೆ ಮತ್ತು ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಅನುಮತಿ ಪಡೆದ ವಾಹನಗಳನ್ನು ಹೊರತುಪಡಿಸಿ ಉಳಿದ ಯಾವುದೇ ಖಾಸಗಿ ವಾಹನಗಳ ಪ್ರವೇಶವನ್ನು ಈ ವಲಯದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಸೂಚನೆ ನೀಡಿದರು.

ಮತ ಎಣಿಕೆ ಕೇಂದ್ರದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆಯ ವತಿಯಿಂದ ಪರ್ಯಾಯ ಸಂಚಾರ ಮಾರ್ಗಗಳನ್ನು ಗುರುತಿಸಲಾಗಿದೆ. ವಾಹನ ಸವಾರರು ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಿ, ನಿಗದಿಪಡಿಸಿದ ಪರ್ಯಾಯ ರಸ್ತೆಗಳನ್ನು ಬಳಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮತ ಎಣಿಕೆ ಸಿಬ್ಬಂದಿ ಮತ್ತು ಅಭ್ಯರ್ಥಿಗಳಿಗೆ ಪ್ರತ್ಯೇಕ ವಾಹನ ಪಾಸ್‌ಗಳನ್ನು ವಿತರಿಸಲಾಗುವುದು. ಎಪಿಎಂಸಿ ಆವರಣ ಹಾಗೂ ಬಿಆರ್‌ಸಿ  ಕಾಲೇಜು ಮೈದಾನದಲ್ಲಿ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಿಬ್ಬಂದಿಗಳ ಮೊಬೈಲ್‌ಗಳನ್ನು ಸುರಕ್ಷಿತವಾಗಿ ಇರಿಸಲು ಪ್ರತ್ಯೇಕ ಕೌಂಟರ್ ತೆರೆದು, ಟೋಕನ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ಮತ ಎಣಿಕೆ ಕಾರ್ಯಕ್ಕೆ ಯಾವುದೇ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಣಿಕೆ ಕೇಂದ್ರದ ಮೇಲ್ಛಾವಣಿ ಮತ್ತು ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕೂಡಲೇ ಮರುಪರಿಶೀಲಿಸುವಂತೆ ಲೋಕೋಪಯೋಗಿ ಹಾಗೂ ಬೆಸ್ಕಾಂ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.

ಮಳೆಯಿಂದಾಗಿ ಎಣಿಕೆ ಕೇಂದ್ರದ ಒಳಗೆ ನೀರು ಸೋರದಂತೆ ಹಾಗೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಲೋಕೋಪಯೋಗಿ ಹಾಗೂ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ವ್ಯವಸ್ಥೆ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮತ ಎಣಿಕೆಯು ಪಾರದರ್ಶಕತೆ ಮತ್ತು ಭದ್ರತೆಯ ದೃಷ್ಟಿಯಿಂದ ಕೇಂದ್ರದಾದ್ಯಂತ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಕಾರ್ಯಕ್ಷಮತೆ ಹಾಗೂ ದೃಶ್ಯೀಕರಣ ವ್ಯಾಪ್ತಿಯನ್ನು ಅಧಿಕಾರಿಗಳು ಪರಿಶೀಲಿಸಿಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಪ್ರತಿಯೊಂದು ಎಣಿಕೆ ಟೇಬಲ್ ಹಾಗೂ ಮತಯಂತ್ರಗಳನ್ನು ತರುವ ಹಾದಿಯಲ್ಲಿ ಯಾವುದೇ ‘ಬ್ಲೈಂಡ್ ಸ್ಪಾಟ್’ ಇಲ್ಲದಂತೆ ಕ್ಯಾಮೆರಾಗಳ ಕವರೇಜ್ ಇರಬೇಕು. ಸಿಸಿಟಿವಿ ದೃಶ್ಯಾವಳಿಗಳು ಅಡೆತಡೆಯಿಲ್ಲದೆ ಚಿತ್ರೀಕರಣಗೊಳ್ಳುತ್ತಿರುವುದನ್ನು ತಾಂತ್ರಿಕ ತಂಡವು ದೃಢಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಮತ ಎಣಿಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಏಜೆಂಟರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆಯ ವತಿಯಿಂದ ಒಬ್ಬ ನುರಿತ ವೈದ್ಯರನ್ನೊಳಗೊಂಡ ವೈದ್ಯಕೀಯ ತಂಡವನ್ನು ನಿಯೋಜಿಸಬೇಕು. ತುರ್ತು ಸಂದರ್ಭ ಎದುರಾದಲ್ಲಿ ತಕ್ಷಣದ ಚಿಕಿತ್ಸೆಗಾಗಿ ಅಗತ್ಯ ಔಷಧೋಪಚಾರಗಳೊಂದಿಗೆ ಸುಸಜ್ಜಿತ ಅಂಬುಲೆನ್ಸ್ ಸೇವೆಯನ್ನು ಸ್ಥಳದಲ್ಲಿ ಸದಾ ಸಿದ್ಧವಾಗಿರಿಸಬೇಕು ಎಂದು ತಿಳಿಸಿದರು.

ಅಗ್ನಿಶಾಮಕ ಇಲಾಖೆಯು ಮತ ಎಣಿಕೆ ಕೇಂದ್ರದ ಒಳಾಂಗಣ ಮತ್ತು ಹೊರಾಂಗಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಯಾವುದೇ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರದ ಆವರಣದಲ್ಲಿ ಅಗ್ನಿಶಾಮಕ ವಾಹನಗಳನ್ನು (Fire Engines) ನಿಯೋಜಿಸಬೇಕು ಹಾಗೂ ಅಗ್ನಿಶಾಮಕ ಉಪಕರಣಗಳು ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಮತ ಎಣಿಕೆ ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವಂತೆ ತಿಳಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಭದ್ರತೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಹೆಚ್.ಟಿ. ಅವರು ಮಾತನಾಡಿ, ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ವ್ಯಾಪಕ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಕೇಂದ್ರದ ಸುತ್ತಮುತ್ತ ಸಶಸ್ತ್ರ ಮೀಸಲು ಪಡೆ ಹಾಗೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ವಹಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಅನಧಿಕೃತ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಉಪವಿಭಾಗಾಧಿಕಾರಿ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಚುನಾವಣಾಧಿಕಾರಿ ಸಂತೋಷ್‌ ಕುಮಾರ್‌, ಮಹಾನಗರ ಪಾಲಿಕೆ ಆಯುಕ್ತೆ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತ ಗೌಡರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರ ಉದಯ್‌ , ಬೆಸ್ಕಾಂ , ಕೆ.ಎಸ್.ಆರ್.ಟಿ.ಸಿ , ಆಗ್ನಿಶಾಮಕ ದಳ , ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending