Connect with us

ದಿನದ ಸುದ್ದಿ

ಆತ್ಮಕತೆ | ಹಾಸ್ಟೆಲ್‌ನಲ್ಲಿ ಜಾತಿ ಜಗಳ

Published

on

ಸಾಂದರ್ಭಿಕ ಚಿತ್ರ
  • ರುದ್ರಪ್ಪ ಹನಗವಾಡಿ

ನಾನು ಮೈಸೂರಿಗೆ ಬಂದು ಮಹಾರಾಜ ಕಾಲೇಜ್ ಹಾಸ್ಟೆಲ್ ಸೇರಿಕೊಂಡಾಗ ತಡವಾಗಿ ಸೇರಿಕೊಂಡವರಿಗೆ ಎರಡು ಮೂರು ಜನರಿರುವ ರೂಂಗಳನ್ನು ಅಲಾಟ್ ಮಾಡುತ್ತಿದ್ದರು. ನಮಗೆ ರೂಂ ನಂ. ಎ4 ಎಂಬಲ್ಲಿ ನಾಲ್ಕು ಜನರಿಗೆ ನಾನು ಮತ್ತು ಎಲ್. ರವೀಂದ್ರ, ಎರಡನೇ ಬಿ.ಎ.ಯವರಾಗಿದ್ದವರು.

ವೈ. ಮಹೇಶ ಮೊದಲ ಬಿ.ಎ. ಮತ್ತು ಪಿಯುಸಿಗೆ ಸೇರಿದ್ದ ಮುರಳೀಧರ ಇದ್ದೆವು. ರವೀಂದ್ರ ಸದಾ ಹಿಂದಿ ಹಾಡಿನ ಭಕ್ತನಾಗಿದ್ದು ರಾಜೇಶ್ ಖನ್ನಾನ ಹೇರ್ ಸ್ಟೈಲ್‌ನಲ್ಲಿ ಟಾಕುಟೀಕಾಗಿ ತರಗತಿಗೆ ಬರುತ್ತಿದ್ದ. ಮುರಳಿ ಹತ್ತಿರದ ಇಲವಾಲ ಊರಿನವನಾಗಿದ್ದರಿಂದ ದಿನವೂ ಅವರ ಊರಿನಿಂದ ಪರಿಚಯಸ್ಥರು ಬಂದು ಸಂಜೆ ವೇಳೆಯಲ್ಲಿ ಹೊರಗೆ ಹೋಗುತ್ತಿದ್ದ. ನಾನು ಮತ್ತು ಮಹೇಶ ಇಬ್ಬರೇ ಒಬ್ಬರಿಗೊಬ್ಬರು ಹತ್ತಿರವಾಗಿದ್ದೆವು. ಸಭೆ ಸಮಾರಂಭಗಳಿಗೆ ಮತ್ತು ಸಮಾಜವಾದಿ ಯುವ ಜನ ಸಭಾ ಕೆಲಸಗಳಿಗೆ ಜೊತೆಯಲ್ಲಿಯೇ ಹೋಗುತ್ತಿದ್ದೆವು.

ಮಹಾರಾಜ ಕಾಲೇಜ್ ಹಾಸ್ಟೆಲ್‌ವೊಂದು ಸಾರ್ವಜನಿಕ ಹಾಸ್ಟೆಲ್ ಆಗಿದ್ದು ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೆ ಅವಕಾಶವಿತ್ತಾದರೂ, ಸ್ಥಳೀಯ ಒಕ್ಕಲಿಗ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇರುತ್ತಿತ್ತು. ಪರಿಶಿಷ್ಟ ಜಾತಿ / ಪಂಗಡಗಳಿಗೆ ಸಾಕಷ್ಟು ವಿದ್ಯಾರ್ಥಿಗಳಿದ್ದರೂ ಯಾರೂ ತಮ್ಮ ಜಾತಿ ಗುಂಪುಗಳಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ನಾನು ವಿಶೇಷವಾಗಿ 300 ಕಿ.ಮೀ. ದೂರದಿಂದ ಬಂದವನಾಗಿ ನನಗೆ ಪರಿಚಿತರು, ಜಾತಿಗರು ಯಾರೂ ಗೊತ್ತಿರಲಿಲ್ಲ.

ನನ್ನ ರೂಮ್‌ಮೇಟ್‌ಗಳಲ್ಲಿ ಮಹೇಶ ಮತ್ತು ಮುರಳಿ ಒಕ್ಕಲಿಗರಾಗಿದ್ದರು. ರವೀಂದ್ರ ಕೂಡ ಪರಿಶಿಷ್ಟ ಜಾತಿಯವನಾಗಿದ್ದರೂ ಅವರ ತಂದೆ ಆಗಿನ ಕಾಲದ ಅರಣ್ಯ ಇಲಾಖೆಯಲ್ಲಿ ಆರ್.ಎಫ್.ಓ. ಆಗಿದ್ದರಿಂದ ಅವನ ಸಾಮಾಜಿಕ ಹಿನ್ನೆಲೆ ಗೊತ್ತಾಗುತ್ತಿರಲಿಲ್ಲ. ನಾನು ದಾವಣಗೆರೆ ಕಡೆಯವ ಮತ್ತು ಹೆಸರು ರುದ್ರಪ್ಪ ಎಂಬೀ ಕಾರಣದಿಂದ ಯಾರೋ ಲಿಂಗಾಯತರವನಿರಬೇಕೆಂದು ನನ್ನ ಬಗ್ಗೆ ಏನೂ ತಿಳಿಯದವರು ಭಾವಿಸಿದ್ದರು.

ಮಹಾರಾಜಾ ಕಾಲೇಜ್ ಹಾಸ್ಟೆಲ್‌ನಲ್ಲಿನ ಊಟ ಬಹಳ ಅದ್ದೂರಿಯಾಗಿಯೇ ಇರುತ್ತಿತ್ತು. ಬೆಳಿಗ್ಗೆ ಕಾಫಿ, ಟೀ ನಂತರ 9 ರಿಂದ 11 ಗಂಟೆಯವರೆಗೆ ಊಟ, ಮಧ್ಯಾಹ್ನ 1 ರಿಂದ 2ಕ್ಕೆ ತಿಂಡಿ, ರಾತ್ರಿಗೆ 8 ರಿಂದ ಊಟವಿರುತ್ತಿತ್ತು. ಮಾಂಸಹಾರಕ್ಕೆ ಪ್ರತ್ಯೇಕವಾದ ಮೆಸ್ ಇದ್ದು, ಅಲ್ಲಿ ವಾರದಲ್ಲಿ 5 ದಿನಗಳು ಮಾಂಸಾಹಾರ ಇರುತ್ತಿತ್ತು. ಸಸ್ಯಾಹಾರಿ ಮೆಸ್‌ನಲ್ಲಿ ಮಜ್ಜಿಗೆ ಹುಳಿ, ತೊವೆ, ತುಪ್ಪ, ಮೊಸರು, ಬಾಳೆಹಣ್ಣುಗಳಿರುತ್ತಿದ್ದವು. ವಾರದ ಮತ್ತು ತಿಂಗಳ ಕೊನೆಯಲ್ಲಿ ವಿಶೇಷವಾದ ಊಟಗಳು ಇರುತ್ತಿದ್ದವು. ಅದಕ್ಕಾಗಿ ಹೊರಗಿನ ಸ್ನೇಹಿತರನ್ನು ಆಹ್ವಾನಿಸಬಹುದಿತ್ತು.

ಇಂತಹ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿಗಳು ಮೈಸೂರಿನ ಅಶೋಕಪುರಂ ಗೆಳೆಯರನ್ನು ಆಹ್ವಾನಿಸಿದ್ದರು. ಒಕ್ಕಲಿಗ ವಿದ್ಯಾರ್ಥಿಗಳೂ ಕೂಡ ಕೆ.ಜಿ. ಕೊಪ್ಪಲ ವಿದ್ಯಾರ್ಥಿಸ್ನೇಹಿತರನ್ನು ಆಹ್ವಾನಿಸಿದ್ದರು. ಊಟದ ಹಾಲ್‌ನಲ್ಲಿ ಮೊದಲ ಬ್ಯಾಚ್‌ನಲ್ಲಿಯೇ ಊಟ ಮಾಡುವ ಧಾವಂತದಲ್ಲಿ ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗ ವಿದ್ಯಾರ್ಥಿಗಳಲ್ಲಿ ಊಟಕ್ಕೆ ಕೂರುವ ಸೀಟಿನ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿತ್ತು. ಊಟದ ಸೀಟಿಗಾಗಿ ಆದ ಗಲಾಟೆ ಅಲ್ಲಿಗೆ ಮುಗಿಯದೆ ಹೊರಗಿನ ರೌಡಿಗಳನ್ನು ಕರೆತಂದು ಎಸ್.ಸಿ. ವಿದ್ಯಾರ್ಥಿಗಳಲ್ಲಿ ಒಬ್ಬೊಬ್ಬರನ್ನೂ ಗುರುತಿಸುತ್ತಾ ಥಳಿಸಿದರು.

ಎಸ್.ಸಿ. ಹುಡುಗರನ್ನು ಕಂಡರೆ ಜಾತಿವಾದಿ ಕೆಲವು ಒಕ್ಕಲಿಗ ವಿದ್ಯಾರ್ಥಿಗಳು ತಾವು ಪ್ರತಿ ತಿಂಗಳೂ ಹಣ ಪಾವತಿಸುತ್ತಿದ್ದು, ಎಸ್.ಸಿ. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬಂದ ಹಣದಲ್ಲಿ ಬಿಟ್ಟಿ ಕೂಳು ತಿಂದು ಕೊಬ್ಬಿದ್ದಾರೆ ಎನ್ನುವ ಧೋರಣೆ ಅವರಲ್ಲಿತ್ತು. ಬಳೆ ಶ್ರೀನಿವಾಸ, ನಂಜಪ್ಪ ಮತ್ತು ಗೋವಿಂದ ಎಂಬ ಮೂವರು ಕಾಲೇಜಿನ ವಿದ್ಯಾರ್ಥಿಗಳಾಗಿದ್ದರೂ, ರೌಡಿಗಳಂತೆ ವರ್ತಿಸುತ್ತಿದ್ದರು. ಮೈಸೂರು ಜಿಲ್ಲೆಯ ಹತ್ತಿರದ ಹಳ್ಳಿಗರಾಗಿದ್ದರಿಂದ ಸದಾ ವಿದ್ಯಾರ್ಥಿಗಳಲ್ಲದವರ ಜೊತೆ ಹಾಸ್ಟೆಲ್ ಒಳಗೆ ಇದ್ದ ಸೋಮಾರಿ ಕಟ್ಟೆಯಲ್ಲಿ ಕೂತು ಹರಟುತ್ತಿದ್ದರು.

ಈ ರೀತಿ ಕರೆತಂದ ರೌಡಿಗಳಲ್ಲಿ ಒಬ್ಬ ನನ್ನನ್ನು ಹೊಡೆಯಲು ಬಂದು ಇನ್ನೇನು ಏಟು ಕೊಡುವುದರಲ್ಲಿದ್ದ. ಅಷ್ಟರಲ್ಲೇ ಅಲ್ಲಿದ್ದ ಗೋವಿಂದ `ಲೇ ಅವನು ಎಸ್.ಸಿ. ಅಲ್ಲ, ಲಿಂಗಾಯತ ಬಿಡ್ರೊ’ ಎಂದು ಕೂಗಿದ. ಹಾಗಾಗಿ ನಾನು ಏಟು ಬೀಳುವುದನ್ನು ತಪ್ಪಿಸಿಕೊಂಡು ರೂಮ್‌ಗೆ ಹೋಗಿ ಬಚಾವಾಗಿದ್ದೆ. ನಂತರದ ದಿನಗಳಲ್ಲಿ ನನ್ನ ಜಾತಿ ಅವನಿಗೆ ತಿಳಿದು ತನ್ನ ಅಂದಿನ ದಿನದ ತಪ್ಪಿನ ಅರಿವಾಗಿತ್ತು.

ಇದೆಲ್ಲ ಆಗಿ ಕೆಲವು ದಿನಗಳಲ್ಲಿ ಮಳವಳ್ಳಿ ತಾಲ್ಲೂಕಿನ ದಲಿತರಾಗಿದ್ದ ರಾಜಕಾರಣಿ ಮಾಜಿ ಮಂತ್ರಿ ಮಲ್ಲಿಕಾರ್ಜುನ ಸ್ವಾಮಿ ಆಗ ಸಿಂಡಿಕೇಟ್ ಸದಸ್ಯರಾಗಿದ್ದು, ಕಾಲೇಜ್ ಹಾಸ್ಟೆಲ್‌ನಲ್ಲಿದ್ದ ವಿಶೇಷವಾಗಿ ಏಟು ತಿಂದಿದ್ದ ಹುಡುಗರನ್ನು ನೋಡಲು ವಾರ್ಡನ್ ಶಿವಲಿಂಗಯ್ಯನವರ ಜೊತೆ ಬಂದಿದ್ದರು. ಆಗ ನನ್ನನ್ನು ಸಹ ಕರೆಸಿ ವಿಚಾರಿಸಿ ಚೆನ್ನಾಗಿ ಓದುವ ಬಗ್ಗೆ ಬುದ್ಧಿ ಮಾತು ಹೇಳಿದ್ದರು. ಆದರೆ ನಮ್ಮ ರೂಮ್‌ನಲ್ಲಿ ಮಹೇಶನಾಗಲೀ ಮುರಳಿಯಾಗಲೀ ಜಾತಿಕೂಪದ ಜಗಳಗಳಿಂದ ದೂರ ಇದ್ದರು. ಮತ್ತೆ ನಾನು ಎಂ.ಎ.ನಲ್ಲಿ ಗಂಗೋತ್ರಿಯ ಪಿ.ಜಿ. ಹಾಸ್ಟೆಲ್ ಸೇರಿದಾಗ ಅಲ್ಲಿಯೂ ಒಕ್ಕಲಿಗ ವಿದ್ಯಾರ್ಥಿಗಳಲ್ಲಿನ ಕೆಲವರು ದಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಬ್ರಾಹ್ಮಣರೆಂದು ಹಂಗಿಸುತ್ತಿದ್ದರು.

ನಾನೊಮ್ಮೆ ಬೀರು ಬಾಟಲಿಯಲ್ಲಿ ಕುಡಿಯಲು ನೀರು ತುಂಬಿಕೊಳ್ಳಲು ಹೋಗುವಾಗ `ಇವರಿಗೆ ಬಿಟ್ಟಿ ಊಟದ ಜೊತೆ ಸರ್ಕಾರ ಬೀರು ಕೂಡ ಕೊಡುತ್ತದೆ ನೋಡ್ರೋ ಎಂದು ವ್ಯಂಗ್ಯವಾಗಿ ಮಾತಾಡುತ್ತಿದ್ದನ್ನು ನಾನು ಮಹದೇವನಿಗೆ ಹೇಳಿದ್ದೆ. ಅವನು ಮುಂದೊAದು ದಿನ ಪೂರ್ಣಚಂದ್ರ ತೇಜಸ್ವಿ ಅವರಿಗೆ ತಿಳಿಸಿದ ಕಾರಣ ಅವರು ಹಾಸ್ಟೆಲ್‌ನಲ್ಲಿದ್ದ ಕೆಲವು ಒಕ್ಕಲಿಗ ಹುಡುಗರನ್ನು ಕರೆಸಿ ಚೆನ್ನಾಗಿ ಬೈದು ಕಳಿಸಿದ್ದರಂತೆ. ಆ ನಂತರದ ದಿನಗಳಲ್ಲಿ ಅವರೆಲ್ಲ ನಮ್ಮನ್ನು ಕಂಡರೆ ಕೃತಕ ಗೌರವ ತೋರುತ್ತಿದ್ದರು. ನಂತರ ಎಂ.ಎ. ಮುಗಿಯುವವರೆಗೆ ಮತ್ತಾವ ಜಾತಿ ಜಗಳದ ಸೋಂಕು ಹಾಸ್ಟೆಲ್‌ನಲ್ಲಿ ಮರುಕಳಿಸಲಿಲ್ಲ.

ಮೈಸೂರಿನಲ್ಲಿ ಓದಲು ಮಹಾರಾಜಾ ಕಾಲೇಜು ನಂತರ ಗಂಗೋತ್ರಿಯಲ್ಲಿ ಎಂ.ಎ. ಮಾಡಲು ಸಿಕ್ಕ ಅವಕಾಶದ ಜೊತೆಗೆ ಸಿಕ್ಕ ಹಾಸ್ಟೆಲ್ ಸೌಲಭ್ಯಗಳು, ಜೊತೆಗೆ ಅನೇಕ ಹಿನ್ನೆಲೆಯ ಸ್ನೇಹಿತರ ಬಳಗ ದೊರಕಲು ಅವಕಾಶವಾಯಿತು. ಶೈಕ್ಷಣಿಕ ಶಿಕ್ಷಣದ ಜೊತೆಗೆ ಹಲವು ಹಿನ್ನೆಲೆಯ ವಿದ್ಯಾರ್ಥಿಗಳ ಪರಿಚಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬಹುದೊಡ್ಡ ಬುನಾದಿಯಾಯಿತು. ಅದಕ್ಕೆಲ್ಲ ಕಾರಣರಾದವರನ್ನು ಸದಾ ನೆನೆಯದಿರಲಾರೆ.

ಮುಂದುವರಿಯುವುದು…

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಏಪ್ರಿಲ್-ಮೇ ನಲ್ಲಿ 26 ಬಾಲ್ಯ ವಿವಾಹ ಪ್ರಕರಣಗಳು ದಾಖಲು : ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 26 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 25 ನ್ನು ತಡೆಗಟ್ಟಿ 2 ಪ್ರಕರಣಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ. ಎಲ್ಲಾದರೂ ಬಾಲ್ಯ ವಿವಾಹ ಕಂಡು ಬಂದಲ್ಲಿ, ಅಂತಹ ಪೋಷಕರ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿ ಪರಿಶೀಲನಾ ಸಭೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಲ್ಯವಿವಾಹ ಒಂದು ಸಾಮಾಜಿಕ ಪಿಡೂಗಾಗಿದ್ದು, ಇದನ್ನು ತಡೆಗಟ್ಟಲು ವ್ಯಾಪಕವಾಗಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಇನ್ನಿತರೆ ಇಲಾಖೆಗಳಿಂದ ಬರುವ ಜುಲೈ ತಿಂಗಳಲ್ಲಿ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಅಭಿಯಾನದ ರೀತಿ ಆಯೋಜಿಸಲು ಸೂಚಿಸಿದರು.

ಕಾರ್ಮಿಕರ ಮಕ್ಕಳು, ತಾಂಡಾಗಳಲ್ಲಿ ಮತ್ತು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಕುಟುಂಬಗಳಲ್ಲಿ ಹೆಚ್ಚಾಗಿ ಬಾಲ್ಯ ವಿವಾಹಗಳು ವರದಿಯಾಗುತ್ತಿರುವುದರಿಂದ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳಿಂದ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಅಧಿಕಾರಿಗಳು ನರೇಗಾ ಕೂಲಿ ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿ, ಬಾಲ್ಯವಿವಾಹ ನಡೆಯದೆ ಇರುವ ಮತ್ತು ಹದಿಹರೆಯದ ಬಾಲಕಿಯರು, ಗರ್ಭಿಣಿ ಆಗದೆ ಇರುವಂತಹ ಪ್ರಕರಣಗಳನ್ನು ಗಮನದಲ್ಲಿ ಇಟ್ಟುಕೊಂಡು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಗ್ರಾಮ ಪಂಚಾಯಿತಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮಾ. ಕರೆಣ್ಣವರ್ ಮಾತನಾಡಿ ಮಕ್ಕಳ ಬಾಲ್ಯ ವಿವಾಹದಿಂದಾಗುವ ಪರಿಣಾಮಗಳ ಬಗ್ಗೆ ತಿಳಿಸಬೇಕು. ಬಾಲ್ಯ ವಿವಾಹ ಮಾಡುವುದರಿಂದ ಉಂಟಾಗುವ ಕಾನೂನಾತ್ಮಕ ತೊಡಕುಗಳ ಬಗ್ಗೆ ಪೋಷಕರಲ್ಲಿ ಮನವರಿಕೆ ಮಾಡಿಕೊಡಬೇಕೆಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್ ಮಾತನಾಡಿ ಪ್ರಸಕ್ತ ಸಾಲಿನಲ್ಲಿ 2024 ರ ಏಪ್ರಿಲ್, ಮೇ ತಿಂಗಳಲ್ಲಿ ಒಟ್ಟು 26 ದೂರುಗಳು ಬಂದಿದ್ದು, ಅವುಗಳಲ್ಲಿ 25 ಬಾಲ್ಯವಿವಾಹಗಳನ್ನು ತಡೆದು 2 ಪ್ರಕರಣಗಳಲ್ಲಿ ಕೋರ್ಟ್‍ನಿಂದ ತಡೆಯಾಜ್ಞೆ ಪಡೆಯಲಾಗಿದೆ. 1 ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಬಾಲ ನ್ಯಾಯ ಮಂಡಳಿಯಲ್ಲಿ ಹಿಂದಿನ 54, ಹೊಸದಾಗಿ 20 ಸೇರಿ 74, ಇದರಲ್ಲಿ 11 ಖುಲಾಸೆಯಾಗಿವೆ. ಪೋಕ್ಸೊದಡಿ 10 ಪ್ರಕರಣಗಳಿದ್ದು 2 ಖುಲಾಸೆಯಾಗಿ 8 ಬಾಕಿ ಇವೆ. ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ 61 ಹಾಗೂ ಬಾಲಕರ ಬಾಲ ಮಂದಿರದಲ್ಲಿ 32 ಮಕ್ಕಳಿದ್ದಾರೆ. ಇದರಲ್ಲಿ ಅನಾಥ ಮಕ್ಕಳು, ಏಕಪೋಷಕ ಮಕ್ಕಳು, ಇಬ್ಬರು ಪೋಷಕರಿರುವ ಮಕ್ಕಳು ಇದ್ದಾರೆ ಎಂದು ತಿಳಿಸಿದರು.

ಜಿ.ಪಂ. ಉಪಕಾರ್ಯದರ್ಶಿ ಕೃಷ್ಣನಾಯ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9989346243

Continue Reading

ದಿನದ ಸುದ್ದಿ

ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾ ವ್ಯಾಪ್ತಿಯಲ್ಲಿ 206 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಪ್ರಸ್ತುತ ಖಾಲಿ ಇರುವ 16 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆ ನೇಮಕ ಮಾಡಿಕೊಳ್ಳಲು ಜೂ.29 ರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳು : ರಾಜಗೊಂಡನಹಳ್ಳಿ , ಬೇತೂರು, ಕೊಂಡಜ್ಜಿ, ಹೆಬ್ಬಾಳು , ಕಬ್ಬಳ, ಉಕ್ಕಡಗಾತ್ರಿ, ಹಳೆಬಾತಿ, ಪಾಂಡೋಮಟ್ಟಿ, ಕಂದನಕೋವಿ, ಕಕ್ಕರಗೊಳ್ಳ, ಬನ್ನಿಕೋಡು, ವಡೆಯರಹತ್ತೂರು, ಓಬನ್ನನಹಳ್ಳಿ(ನರಗನಹಳ್ಳಿ), ದೊಡ್ಡಬ್ಬಿಹೆರೆ, ಅಣಜಿ, ಗುಡಾಳು ಇಲ್ಲಿ ಖಾಲಿ ಇರುತ್ತವೆ.

ಆಸಕ್ತ ಆಭ್ಯರ್ಥಿಗಳು ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ವೆಬ್‍ಸೈಟ್ davanagere.nic.in ಮೂಲಕ ಅರ್ಜಿ ಸಲ್ಲಿಸಿ ನಂತರ ಸ್ವೀಕೃತಿ ಪತ್ರದ ಪ್ರತಿಯೊಂದಿಗೆ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾ ಪಂಚಾಯತ್ ಕಚೇರಿ ಆಡಳಿತ ವಿಭಾಗದ ಕೊಠಡಿ ಸಂ.25 ಗೆ ಜುಲೈ 20 ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಖ್ಯೆ 08192-226655 ಗೆ ಕರೆ ಮಾಡುವುದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪುಸ್ತಕ ಬಹುಮಾನ ; ಜಾನಪದ ಕೃತಿಗಳ ಆಹ್ವಾನ

Published

on

ಸುದ್ದಿದಿನಡೆಸ್ಕ್ : ಕರ್ನಾಟಕ ಜಾನಪದ ಅಕಾಡೆಮಿಯು 2022ನೇ ಸಾಲಿನ ಜನವರಿ 01 ರಿಂದ ಡಿಸೆಂಬರ್31ರವರೆಗೆ ಹಾಗೂ 2023ನೇ ಸಾಲಿನ ಜನವರಿ 01 ರಿಂದ ಡಿಸೆಂಬರ್31ರವರೆಗೆ ಪ್ರಥಮ ಆವೃತ್ತಿಯಲ್ಲ ಮುದ್ರಣಗೊಂಡಿರುವ ಕನಿಷ್ಠ 150 ಪುಟಗಳಿಗೂ ಮೇಲ್ಪಟ್ಟಿರುವ ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ-ವಿಮರ್ಶೆ-ಸಂಶೋಧನೆ ಹಾಗೂ ಜನಪದ ಸಂಕೀರ್ಣ ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುತ್ತಿದ್ದು, ಕೃತಿಗಳನ್ನು ಆಹ್ವಾನಿಸಿದೆ.

ಆಸಕ್ತ ಲೇಖಕರು/ಪ್ರಕಾಶಕರು/ಸಂಪಾದಕರು 4 ಕೃತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಜುಲೈ 20 ರೊಳಗಾಗಿ ತಲುಪುವಂತೆ ಖುದ್ದಾಗಿ ಅಥವಾ ಅಂಚೆ/ಕೊರಿಯರ್ ಮೂಲಕ ಕಳುಹಿಸಿಕೊಡುವಂತೆ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ಕಚೇರಿಯನ್ನು ಖುದ್ದಾಗಿ ಅಥವಾ ಅಥವಾ ದೂ.ಸಂ.: 080-22215509 ನ್ನು ಸಂಪರ್ಕಿಸುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending