ದಿನದ ಸುದ್ದಿ
ಆತ್ಮಕತೆ | ಪಾರ‍್ವತಕ್ಕ ಮತ್ತು ಸರಳ ಮದುವೆ
- ರುದ್ರಪ್ಪ ಹನಗವಾಡಿ
ಜೂನ್ 1974ರ ಸಮಯ, ನಾನು ಎಂ.ಎ. ಪರೀಕ್ಷೆ ಮುಗಿದು ಫಲಿತಾಂಶ ಬಂದ ನಂತರ ಪರ‍್ವತಕ್ಕ ಸೋಷಿಯಾಲಜಿ ವಿಭಾಗದಲ್ಲಿ ನನಗೆ ಸಂಶೋಧಕ ಸಹಾಯಕನ ಹುದ್ದೆ ನೀಡುವುದಾಗಿ ಮೊದಲು ಸುಳಿವು ನೀಡಿದ್ದರು. ಈ ನಡುವೆ ಬಸವಣ್ಯಪ್ಪ ಎಂ.ಎ.ನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಅವನಿಗೆ ತಮ್ಮ ವಿಭಾಗದಲ್ಲಿಯೇ ಇದ್ದ ಸಾಮಾಜಿಕ ಸಂಶೋಧನಾ ಘಟಕದಲ್ಲಿ ಸಹಾಯಕ ನಿರ್ದೇಶಕನ ಹುದ್ದೆ ನೀಡಿದ್ದರು. ಪಾರ‍್ವತಕ್ಕನೇ ಅದಕ್ಕೆ ವಿಭಾಗದಲ್ಲಿ ನಿರ್ದೇಶಕರು. ಇಡೀ ಪ್ರಾಜೆಕ್ಟ್ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಸೋಷಿಯಾಲಜಿ ವಿಷಯದಲ್ಲಿ, ಎಂ.ಎ. ಮಾಡಿದ ಸತ್ಯನಾರಾಯಣ, ನಾರಾಯಣಾಚಾರ್ ಮತ್ತು ಚಂದ್ರಯ್ಯ, ಗಾಯತ್ರಿ ದೇವಿ ಮತ್ತು ಮೈಸೂರಿನಲ್ಲಿಯೇ ಎಂ.ಎ. ಸೋಷಿಯಾಲಜಿ ಮಾಡಿದ ರೇಖಾ ಸುಬ್ಬಯ್ಯ ಇವರುಗಳಿದ್ದರು. ಬಸವಣ್ಯಪ್ಪ ಹಾಸ್ಟೆಲ್‌ನಲ್ಲಿದ್ದವನು ಅಲ್ಲಿನ ಅನಾನುಕೂಲಗಳಿಂದಾಗಿ ಪಾರ‍್ವತಮ್ಮನವರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದನು. ನನ್ನ ತರಗತಿಗಳು ಮುಗಿದು ಅವನ ಪ್ರಾಜೆಕ್ಟ್ ಕೆಲಸ ಮುಗಿದ ನಂತರ ನಮ್ಮ ಹಾಸ್ಟೆಲ್‌ಗೆ ಬಂದು ಸಮಯ ಕಳೆಯುತ್ತಿದ್ದ.
ಈ ನಡುವೆ ಎಂ.ಎ. ಸೋಷಿಯಾಲಜಿ ವಿದ್ಯಾರ್ಥಿನಿಯಾಗಿದ್ದ ಸುಮಿತ್ರ ಬಾಯಿ ಮತ್ತವರ ತಂಗಿ ಉಮಾಬಾಯಿ ಅವರುಗಳು ಪಾರ‍್ವತಕ್ಕನ ಮನೆಗೆ ಆಗಾಗ ಬಂದು ನಮ್ಮೆಲ್ಲರಿಗೂ ಪರಿಚಯವಾಗಿದ್ದರು. ಸುಮಿತ್ರ ಬಾಯಿಯವರು ಆಗ ತಾನೆ ಸೋಷಿಯಾಲಜಿಯಲ್ಲಿ ಎಂ.ಎ. ಮುಗಿಸಿ ಮಹಾರಾಜ ಸಂಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅದಕ್ಕೆಲ್ಲ ಪರ‍್ವತಕ್ಕನವರ ವಿಶೇಷ ಮಾರ್ಗದರ್ಶನ ಮತ್ತು ಶಿಫಾರಸ್ಸು ಕಾರಣವಾಗಿತ್ತು. ಅವರ ತಂಗಿ ಉಮಾ ಕೂಡ ಗಂಗೋತ್ರಿಯಲ್ಲಿ ರಾಜ್ಯಶಾಸ್ತ್ರ, ಎಂ.ಎ. ವ್ಯಾಸಂಗ ಮಾಡುತ್ತ, ಗಂಗೋತ್ರಿ ಹಾಸ್ಟೆಲ್‌ನಲ್ಲಿ ಉಳಿದಿದ್ದಳು. ಪರ‍್ವತಕ್ಕನ ಮನೆಗೆ ಆಗಾಗ ಅವರ ಅಕ್ಕನ ಜೊತೆ ಬರುತ್ತಿದ್ದ ಉಮಾ ಬಸವಣ್ಯಪ್ಪನಿಗೆ ಪರಿಚಯವಾಗಿ ಅವಳು ಎಂ.ಎ. ಅಂತಿಮ ವರ್ಷವಿದ್ದಾಗಲೇ ಗಂಗೋತ್ರಿ ಕ್ಯಾಂಟೀನ್ ಹಾಗೂ ವಿಶಾಲವಾಗಿದ್ದ ಕ್ಯಾಂಪಸ್‌ನಲ್ಲಿ ಇಬ್ಬರೂ ತಿರುಗಾಡುತ್ತಿದ್ದರು. ಈ ಜೋಡಿ ಕಡೆಗೊಂದು ದಿನ ನನ್ನ ಮುಂದೆ ಪ್ರೀತಿಯಲ್ಲಿರುವ ಸುದ್ದಿ ತಿಳಿಸಿದರು. ಬಸವಣ್ಯಪ್ಪ ಆಗಲೇ ಉದ್ಯೋಗಿಯಾಗಿ ಸಂಪಾದಿಸುತ್ತಿದ್ದನು. ಉಮಾ ಇನ್ನೂ ಅಂತಿಮ ವರ್ಷದ ಪರೀಕ್ಷೆ ಬರೆದಿರಲಿಲ್ಲ. ನಾನೂ ಕೂಡ ನನ್ನ ಪರೀಕ್ಷೆಯ ತಯಾರಿಯಲ್ಲಿದ್ದೆ. ಈ ವಿಷಯವನ್ನು ಪರ‍್ವತಕ್ಕನ ಮುಂದೆ ಪ್ರಸ್ತಾಪಿಸಲು ಯಾರಿಗೂ ಧರ‍್ಯವಿರಲಿಲ್ಲ. ಮೊದಲು ಪರೀಕ್ಷೆಗಳು ಮುಗಿಯಲಿ ಎಂದು ನಾವುಗಳು ಕಾಯುತ್ತಾ ಇದ್ದೆವು.
ನಾನು ಊರಿನಿಂದ ಕರೆದುಕೊಂಡು ಬಂದಿದ್ದ ನನ್ನ ಹೆಸರಿನವನೇ ಆಗಿದ್ದ ರುದ್ರಪ್ಪನಿಗೆ ಪರ‍್ವತಕ್ಕ ನಿರ್ದೇಶಿಸುತ್ತಿದ್ದ ವಿಭಾಗದಲ್ಲಿ ಸಂಶೋಧನಾ ಪ್ರಾಜೆಕ್ಟ್ನಲ್ಲಿ ಸಹಾಯಕನಾಗಿ ಅರೆಕಾಲಿಕ ಹುದ್ದೆ ನೀಡಿದ್ದರು. ಅವನು ಬಿ.ಎ. ನಲ್ಲಿ ಉಳಿಸಿಕೊಂಡಿದ್ದ ಇತರೆ ವಿಷಯಗಳನ್ನು ಪುನಃ ಪರೀಕ್ಷೆ ಬರೆದು ಬಿ.ಎ. ಮುಗಿಸಿದ್ದ. ಪಾರ‍್ವತಕ್ಕನ ಮನೆಯ ಹತ್ತಿರದಲ್ಲಿ ಪ್ರತ್ಯೇಕ ರೂಂ ಮಾಡಿಕೊಂಡಿದ್ದರೂ ಹೆಚ್ಚು ಸಮಯ ಪರ‍್ವತಕ್ಕನ ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದನು. ಅವನಿಗೆ ದೊರಕಿಸಿಕೊಟ್ಟಿದ್ದ ಕೆಲಸ ಅವನ ಬಿ.ಎ. ಡಿಗ್ರಿ ಪೂರ್ಣಗೊಳಿಸಲು ಸಹಾಯ ಮಾಡಿತ್ತು. ನನ್ನ ಎಂ.ಎ. ಪರೀಕ್ಷೆ ಇನ್ನು ಮುಂದೆ ಒಂದು ತಿಂಗಳು ಇದೆ ಎನ್ನುವಾಗಲೇ ಅವನು ಪರೀಕ್ಷೆ ಮುಗಿಸಿಕೊಂಡು ಊರಿಗೆ ಹೋಗಿದ್ದ.
ಈ ನಡುವೆ ತನ್ನ ಬಿ.ಎ. ಪರೀಕ್ಷೆ ಮುಗಿಸಿ ಊರಿಗೆ ಹೊರಟಿದ್ದ ಕಾಯಕದ ರುದ್ರಪ್ಪನನ್ನು ಕಳಿಸಲು, ಹೊರಟ ದಿನ ನಾನು ಸಂಜೆ ದೊಡ್ಡ ಗಡಿಯಾರದ ಹತ್ತಿರದಿಂದ ಹೊರಡುತ್ತಿದ್ದ. ಪ್ರೈವೇಟ್ ಬಸ್ ಹತ್ತಿಸಿದೆ. ಹತ್ತಿದವನು ಬಸ್ ಇನ್ನೂ ಹೊರಡಲು ಸಮಯವಿರುವುದನ್ನು ತಿಳಿದು ಇಳಿದು ಬಂದು ಹತ್ತಿರದಲ್ಲಿಯೇ ಇದ್ದ ಅಂಗಡಿಯೊಂದರಲ್ಲಿ ಸಿಹಿ ಚಾಕಲೇಟ್ ತಂದು ನನಗೆ ಕೊಟ್ಟ. ನಮ್ಮೂರಿಂದ ಈಗ ಇಬ್ಬರೂ ಗ್ರಾಜ್ಯುಯೇಟ್‌ಗಳಾದವೆಂದೂ, `ಇನ್ನು ನಮ್ಮನ್ನು ಹಿಡಿಯುರ‍್ಯಾರು’ ಎಂದು ಬೀಗುತ್ತಾ ಅವನು ಊರ ಕಡೆ ಬಸ್‌ನಲ್ಲಿ ಹೊರಟಿದ್ದ. ಇತ್ತ ನಾನು ಹಾಸ್ಟೆಲ್‌ಗೆ ಹಿಂತಿರುಗಿದ್ದೆ. ಆದರೆ ಅದೇ ನಮ್ಮ ಕೊನೆಯ ಭೇಟಿಯೆಂದು ನಾವಿಬ್ಬರೂ ಅಂದುಕೊಂಡಿರಲಿಲ್ಲ. ಊರಿಗೆ ಹೋದ ಒಂದು ವಾರದೊಳಗೆ, ನನ್ನ ಪರೀಕ್ಷೆಯ ಮಧ್ಯೆಯೇ ಅವನ ಸಾವಿನ ಸುದ್ದಿ ಬಂದು ನನ್ನನ್ನು ಅಘಾತಗೊಳಿಸಿತ್ತು. ಇಷ್ಟೊಂದು ಪೇಚಾಡಿ ಬಿ.ಎ. ಮಾಡಿದ ಅವನು ಡಿಗ್ರಿ ಪಡೆಯುವ ಮುನ್ನ ಪ್ರಪಂಚದಿಂದಲೇ ಇಲ್ಲವಾಗಿದ್ದ. ವಿದ್ಯಾಭ್ಯಾಸದ ನಿರ್ಣಾಯಕ ಘಟ್ಟ ತಲುಪಿ ನಮ್ಮದೇ ಸುಖದ ಭಾವಾವೇಶದ ಲೋಕದಲ್ಲಿ ಮುಳುಗಿದ್ದ ನನಗೆ ಅವನ ಸಾವು ಮಾತ್ರ ಎಂದೂ ಮರೆಯಲಾಗದ ಏಟು ನೀಡಿತ್ತು.
ಪಾರ‍್ವತಕ್ಕನ ಪರಿಚಯವಾಗಿ ನಾಲ್ಕು ವರ್ಷಗಳೇ ಕಳೆದಿದ್ದರೂ ಅವರ ಪ್ರೀತಿ ಮತ್ತು ಸಿಟ್ಟಿಗೆ ಕಾರಣಗಳನ್ನು ತಿಳಿಯಲು ನಮಗಿನ್ನೂ ಸಾಧ್ಯವಾಗಿರಲಿಲ್ಲ. ಅವರನ್ನು ಅವರ ವಿದ್ಯಾರ್ಥಿಗಳನೇಕರು ಹೊಗಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ನಾವೇನಾದರೂ ಅವರಿಗೆ, ಅವರ ವಿದ್ಯಾರ್ಥಿಗಳ ಭಟ್ಟಂಗಿತನದ ಬುದ್ದಿಯ ಬಗ್ಗೆ ಹೇಳಿದರೆ ಸುತಾರಾಮ್ ಒಪ್ಪುತ್ತಿರಲಿಲ್ಲ. ಅವರು ಮನಸ್ಸಿನಲ್ಲಿ ಒಮ್ಮೆ ರೂಪಿಸಿಕೊಂಡ ತೀರ್ಮಾನಗಳನ್ನು ಯಾವುದೇ ಕಾರಣಕ್ಕೂ ಸಾಮಾನ್ಯವಾಗಿ ಬದಲಾಯಿಸಿಕೊಳ್ಳಲು ತಯಾರಿರುತ್ತಿರಲಿಲ್ಲ. ಮನೆಯಲ್ಲಿರುವಾಗ ರಾಜ್ಯದ ರಾಜಕಾರಣ ಮತ್ತು ಇತರೆ ಸಾಮಾಜಿಕ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೆವು. ಕಡೆಗೆ ಅವರ ತೀರ್ಮಾನಗಳಿಗೆ ಒಪ್ಪದಿದ್ದಾಗ ನಿಮಗೇನೂ ಗೊತ್ತಿಲ್ಲ ಎಂದು ಹೇಳಿ ಮುಗಿಸುತ್ತಿದ್ದರು. ಅವರ ವಾದ ವಿವಾದಗಳು ಏನೇ ಇದ್ದರೂ ನನಗೆ, ಬಸವಣ್ಯಪ್ಪನಿಗೆ ನಮ್ಮ ಊರಿನಿಂದ ಕರೆತಂದಿದ್ದ ಕಾಯಕದ ರುದ್ರಪ್ಪನಿಗೆ ಕಾಣದ ಊರಿನಲ್ಲಿ ಆಶ್ರಯ ನೀಡಿ ನಮ್ಮ ವಿದ್ಯಾಭ್ಯಾಸವನ್ನು ಪೂರೈಸಿಕೊಂಡು ಬೆಳೆಯಲು ಸಹಾಯ ಮಾಡಿ ತಾಯಿಯಂತೆ ನೋಡಿಕೊಂಡರೆಂದು ಹೇಳಿದರೆ ಅದು ಬರಿ ಮಾತಲ್ಲ.
ಪರ‍್ವತಕ್ಕನಿಗೆ ತನ್ನ ವಿದ್ಯಾಭ್ಯಾಸದ ಓಟದಲ್ಲಿ ದೊರೆತ ಜಯಗಳ ನಂತರ ದೊರಕಿದ ಹುದ್ದೆಗಳ ಭರಾಟೆಯಲ್ಲಿ ಮದುವೆಯಾಗಲು ಸಮಯವೇ ಸಿಗಲಿಲ್ಲವೆಂದು ನಾನು ಬಸವಣ್ಯಪ್ಪ ಮಾತಾಡಿಕೊಳ್ಳುತ್ತಿದ್ದೆವು. ಪರಿಶಿಷ್ಟ ಜಾತಿಯ ಹೆಣ್ಣುಮಗಳೊಬ್ಬಳು ಬಿ.ಎ. (ಆರ‍್ಸ್) ಮತ್ತು ಎಂ.ಎ. ಗಳಲ್ಲಿ ರ‍್ಯಾಂಕ್‌ಗಳನ್ನು ಗಳಿಸುತ್ತಾ ಇಂಗ್ಲೆಂಡ್ ದೇಶದಿಂದ ಪಿಹೆಚ್.ಡಿ. ಪಡೆದು, ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಆ ಕಾಲದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪ್ರಾಧ್ಯಾಪಕರಾದದ್ದು ಮತ್ತು ಅದರ ಮುಖ್ಯಸ್ಥರಾಗಿದ್ದು ಕೂಡಾ ಸಾಮಾನ್ಯದ ಸಂಗತಿಯಾಗಿರಲಿಲ್ಲ. ಇಷ್ಟೆಲ್ಲ ಸಾಧನೆಗಳ ಮಧ್ಯೆ ಮದುವೆಯಾಗಲಿಲ್ಲ ಏಕೆ, ಏನು ಕಾರಣ ಎಂಬ ವಿಷಯಕ್ಕೆ ನಾವ್ಯಾರೂ ಎಂದೂ ಕೈಹಾಕಿರಲಿಲ್ಲ. ಬೇರೆ ಯಾರೆಲ್ಲಾ ಯಾಕೆ ಮದುವೆಯಾಗಿಲ್ಲವೆಂದು ಕೇಳಿದರೆ ಅವರು ಅತ್ತ ಕಡೆ ಗಮನ ಹರಿಸುವುದಕ್ಕೆ ಪುರುಸೊತ್ತಾಗಲಿಲ್ಲ ಎಂದು ಹೇಳಿ ಬಿಡುತ್ತಿದ್ದೆವು. ಆದರೆ ಅವರು ತಮ್ಮ ವಿಭಾಗದಲ್ಲಿಯಾಗಲೀ, ಬೇರೆಯ ಕಡೆಯಾಗಲೀ ಯಾರಾದರೂ ಮದುವೆಯಾಗುವವರ ಬಗ್ಗೆ ಅಥವಾ ಪ್ರೀತಿ ಪ್ರೇಮಗಳ ಘಟನೆಗಳನ್ನು ಚರ್ಚಿಸುವಾಗ ಅವರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿಯೇ ಬಸವಣ್ಯಪ್ಪನ ಮದುವೆಗೆ ಕೂಡಾ ಮೊದಲು ಸಮ್ಮತಿ ನೀಡಿ ನಂತರ ವಿರೋಧಿಸಿದರು. ಆದರೆ ಸದಾ ಹೊಗಳುತ್ತಿದ್ದ ಸುಮಿತ್ರಬಾಯಿ ಮತ್ತು ಅವರ ಇನ್ನೊಬ್ಬ ವಿದ್ಯಾರ್ಥಿನಿ ಇಂದಿರಾ ಅವರುಗಳ ಬಗ್ಗೆ ಹೆಚ್ಚು ಮೆದುವಾಗಿದ್ದು ಅವರಿಬ್ಬರಿಗೂ ಉದ್ಯೋಗ ದೊರಕುವಲ್ಲಿ ಎಲ್ಲ ರೀತಿಯ ಅನುಕೂಲ ಮಾಡಿ ವಿಶ್ವವಿದ್ಯಾಲಯದಲ್ಲಿಯೇ ನೌಕರಿ ಸಿಗುವಂತೆ ನೋಡಿಕೊಂಡರು.
ನಮ್ಮ ಚನ್ನಗಿರಿ ತಾಲ್ಲೂಕಿನ ಕಡೆಯ ಇನ್ನೊಬ್ಬ ಸಮಾಜಶಾಸ್ತ್ರದ ವಿದ್ಯಾರ್ಥಿ ಓ. ನಾಗೇಂದ್ರಪ್ಪ ಎಂ.ಎ. ವಿದ್ಯಾರ್ಥಿ ನಮಗೆ ಒಂದು ವರ್ಷ ಜ್ಯೂನಿಯರ್ ಆಗಿದ್ದ ಅವನು, ನಮ್ಮ ಪಿ.ಜಿ. ಹಾಸ್ಟೆಲ್‌ನಲ್ಲಿಯೇ ಇದ್ದು ಸಮಾಜಶಾಸ್ತ್ರ ಓದುತ್ತಿದ್ದ. ಅವನು ಪರ‍್ವತಕ್ಕ ಕ್ಲಾಸಿನಲ್ಲಿ ದಲಿತ ಹುಡುಗರಿಗೆ ಇಂಗ್ಲಿಷ್‌ನಲ್ಲಿ ಪ್ರಶ್ನೆಗಳನ್ನು ಕೇಳಿ ಅವರು ತಡಬಡಾಯಿಸಿದಾಗ ಮತ್ತಷ್ಟು ಬೈಯ್ಯುವ ಬಗ್ಗೆ ಬಂದು ನನ್ನ ಬಳಿ ಹೇಳುತ್ತಿದ್ದ. ಸಾಲದ್ದಕ್ಕೆ ಅವನಿಗೆ ಆಗಲೇ ಮದುವೆ ಬೇರೆ ಆಗಿತ್ತು. ಇನ್ನೊಬ್ಬ ಮಹಾದೇವ ಎಂಬ ವಿದ್ಯಾರ್ಥಿ ಅತ್ಯಂತ ಸೊಗಸಾಗಿ ಜಾನಪದ ಹಾಡುಗಳನ್ನು ಹಾಡಿ ಜನಾನುರಾಗಿಯಾಗಿದ್ದ. ಜೊತೆಗೆ ಆಗಲೇ ಪ್ರೀತಿಯ ಗುಂಗಿನಲ್ಲಿ ಹುಡುಗಿಯೊಬ್ಬಳ ಜೊತೆ ಓಡಾಡುವುದು ಅವರಿಗೆ ಗೊತ್ತಾಗಿತ್ತು. ಆ ಕಾರಣದಿಂದ ಎಂ.ಎ. ಕೊನೆಯ ವರ್ಷದಲ್ಲಿ ಅವನಿಗೆ ಮೂರನೇ ದರ್ಜೆ ಪಡೆಯುವಂತಾಗಿದ್ದೆಂದು ಮಾತಾಡಿಕೊಳ್ಳುತ್ತಿದ್ದರು. ಆದರೆ ಓ. ನಾಗೇಂದ್ರಪ್ಪ ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸದಿದ್ದರೂ ಇತರೆ ಚಟುವಟಿಕೆಗಳಲ್ಲಿ ಮುಂದಿದ್ದ. ಪರ‍್ವತಕ್ಕನ ಈ ನಡವಳಿಕೆಯನ್ನು ಸೂಕ್ಷö್ಮವಾಗಿ ಗಮನಿಸಿ, ಅಂದಾಜಿಸಿಕೊಂಡು ಅವರನ್ನು ಮೆಚ್ಚಿಸಲು ಒಂದು ನಾಟಕವನ್ನೇ ಆಡಿದ್ದ. ಅದರ ತುಣುಕನ್ನು ನೀವೂ ಓದಿ ನೋಡಿ.
‘ಮೇಡಂ ನಾನು ಮೊನ್ನೆ ಊರಿಗೆ ಹೋಗಿದ್ದೆ, ಆಗ ನಮ್ಮ ತಾಯಿಗೆ, ನಿಮ್ಮ ಬಗ್ಗೆ ಎಲ್ಲ ವಿಷಯ ಹೇಳಿದಾಗ, ಅವರು ತೋಟದಲ್ಲಿನ ಬಾಳೆಗೊನೆ ಮತ್ತು ಎರಡು ಸೇರು ಬೆಣ್ಣೆ ತೆಗೆದುಕೊಂಡು ಹೋಗಿ ಕೊಡು, ಅವರು ಕೂಡ ನಮ್ಮ ಕಡೆಯವರು ಎಂದು ಬೇರೆ ಹೇಳುತ್ತೀಯಾ’ ಎಂದು ತಮ್ಮ ಅವ್ವ ಕೊಟ್ಟರು ಎಂದು ಕಥೆ ಕಟ್ಟಿದ್ದು. ತಂದಿರುವುದನ್ನು ದಯವಿಟ್ಟು ತೆಗೆದುಕೊಳ್ಳಬೇಕೆಂದು ಅವರ ಮನೆಗೆ ತಂದು ಕೊಟ್ಟಿದ್ದನು. ಅವನು ತಂದುಕೊಟ್ಟ ಬೆಣ್ಣೆ, ಬಾಳೆಗೊನೆ ಬಂದಾದ ಮೇಲೆ ಅವನ ಬಗ್ಗೆ ಒಂದು ರೀತಿಯ ಮೊದಲಿನ ಕಾಠಿಣ್ಯತೆ ಕರಗಿ, ಸ್ವಲ್ಪ ಉದಾರಿಗಳಾದರು. ಈ ರೀತಿಯ ನಾಟಕವನ್ನು ವರ್ಷದಲ್ಲಿ ಒಂದೆರಡು ಬಾರಿ ಮಾಡಿ ಅವರಿಂದ ಕ್ಲಾಸಿನಲ್ಲಿ ಆಗುತ್ತಿದ್ದ ಅವಮಾನದಿಂದ ಪಾರಾಗಿದ್ದ ಹಾಗೂ ಎಂ.ಎ.ನಲ್ಲಿ ಎರಡನೇ ದರ್ಜೆಯಲ್ಲಿ ಪಾಸಾಗಿದ್ದ.
ಅವನಿಗೆ ನಾನು ಇದೇನು ನೀನು ನಿಜವಾಗಿಯೂ ನಿನ್ನ ಊರಿನಿಂದ ತಂದ ಬಾಳೆಗೊನೆಯೆ ಎಂದು ಹಾಸ್ಟೆಲ್‌ನಲ್ಲಿ ಕೇಳಿದಾಗ ನಿಜ ಸಂಗತಿಯನ್ನು ಬಿಚ್ಚಿಟ್ಟಿದ್ದ. ‘ಏನ್ಮಾಡ್ತೀಯಪ್ಪ ಎಸ್‌ಸಿಗಳನ್ನ ಕಂಡ್ರೆ ನಿಮ್ಮ ಮೇಡಂಗೆ ಆಗಲ್ಲ, ಮದುವೆಯಾದವರನ್ನ ಕಂಡ್ರೆ ಇನ್ನೂ ಆಯಮ್ಮನಿಗೆ ಆಗಲ್ಲ. ನಾನು ಮದುವೆಯಾಗಿರುವ ಎಸ್‌ಸಿ ಬೇರೆ, ಏನಾದರೂ ಮಾಡಿ ಈ ಸಂಕಷ್ಟ ದಿಂದ ಪಾರಾಗಲು, ನಾನು ದೇವರಾಜ ಮಾರುಕಟ್ಟೆಯಿಂದ ಕೊಂಡು ಊರಿಂದ ತಂದವು ಎಂದು ಹೇಳಿ ನಾಟಕ ಮಾಡಿದೆ, ಈಗ ಅಷ್ಟರಮಟ್ಟಿಗೆ ನನ್ನ ಕಷ್ಟ ಪರಿಹಾರವಾಗಿದೆ’ ಎಂದು ಅಲವತ್ತುಕೊಂಡಿದ್ದನು. ಹೀಗೆ ಪರ‍್ವತಕ್ಕನ ಅಪಾರ ಸಾಧನೆಗಳ ಜೊತೆಗೆ ಸಾಮಾನ್ಯ ವಿಷಯಗಳಲ್ಲಿ ಯಾರಾದರೂ ಹೊಗಳಿದರೆ, ಅವರನ್ನು ಪೂರ್ತಿ ಮಾಫಿ ಮಾಡಿ ಸಹಾಯ ಮಾಡುತ್ತಿದ್ದರು. ಇಲ್ಲವಾದರೆ ಸಾಮಾನ್ಯರಂತೆ ಸೇಡಿಗೆ ಬಿದ್ದು ತೊಂದರೆ ಕೂಡ ಕೊಡುವ ಮಟ್ಟಕ್ಕೆ ಇಳಿಯುತ್ತಿದ್ದರು.
ಅವರ ವ್ಯಕ್ತಿತ್ವದಲ್ಲಿನ ಈ ಕೊರತೆಯಿಂದಾಗಿಯೇ ಅವರ ಶೈಕ್ಷಣಿಕ ಮಟ್ಟ ಎಷ್ಟೇ ಔನ್ನತ್ಯದಲ್ಲಿದ್ದರೂ, ಸಾರ್ವಜನಿಕರೊಡನೆ ಅವರಿಗಿದ್ದ ಸಿಡುಕಿನ ನಡವಳಿಕೆಯಿಂದಾಗಿ ಯೂನಿವರ್ಸಿಟಿಯ ಪ್ರೊಫೆಸರ್ ಆಗಿದ್ದನ್ನು ಬಿಟ್ಟರೆ ಮುಂದೆ ಬೇರೇನೂ ಆಗಲಿಲ್ಲ. ಅವರಿಗಿಂತ ಶೈಕ್ಷಣಿಕವಾಗಿ ಕಡಿಮೆ ಇದ್ದವರು ಅನೇಕ ರೀತಿಯ ಪ್ರತಿಷ್ಠಿತ ಹುದ್ದೆಗಳಿಗೇರಿದ್ದರು.
ಇಂತಹ ಘಟನೆಗಳನ್ನೆಲ್ಲಾ ದಿನವೂ ನೋಡಿ ಅನುಭವಿಸುತ್ತಿರುವ ಸಮಯದಲ್ಲಿಯೇ ಬಸವಣ್ಯಪ್ಪ ಉಮಾಳನ್ನು ಮದುವೆಯಾಗುವ ಬಗ್ಗೆ ಪರ‍್ವತಕ್ಕನಿಗೆ ತಿಳಿಸಿದ. ಆಶ್ರ‍್ಯಕರ ಬೆಳವಣಿಗೆಯಂತೆ, ಬೇರೆಲ್ಲಾ ಮಾತಾದ ನಂತರ ಉಮಾಳನ್ನು ಪರ‍್ವತಕ್ಕ ದತ್ತು ಪಡೆದು ಬಸವಣ್ಯಪ್ಪನಿಗೆ ಮದುವೆ ಮಾಡಿಸುವುದಾಗಿ ಇವರೇ ತೀರ್ಮಾನಿಸಿದರು. ಸುಮಿತ್ರಾ ಬಾಯಿ, ಉಮಾ ಅವರ ತಂದೆ ಆಗಿನ ಕಾಲಕ್ಕೆ ಕೇಂದ್ರ ಸರ್ಕಾರ ಸ್ವಾಮ್ಯದ ರೈಲ್ವೆಯಲ್ಲಿ ಸ್ಟೇಷನ್ ಮಾಸ್ಟರ್ ಹುದ್ದೆಯಲ್ಲಿದ್ದರು. ಅವರದೊಂದು ದೊಡ್ಡ ಕುಟುಂಬ. ಉಮಾ ಮದುವೆಯಾದರೆ ನಂತರದಲ್ಲಿರುವ ಇನ್ನೂ 2-3 ಹೆಣ್ಣುಮಕ್ಕಳ ಮದುವೆ ಚಿಂತೆಯ ಜೊತೆಗೆ ಇದೊಂದು ಅಂತರ ಜಾತೀಯ ಮದುವೆಯ ಕಾರಣಕ್ಕೆ ಅವರ ಅಪ್ಪ ಅಮ್ಮ ಒಪ್ಪಿರಲಿಲ್ಲ. ಅದಕ್ಕಾಗಿಯೇ ಪರ‍್ವತಮ್ಮನವರು ಮುಂದೆ ನಿಂತು ಮದುವೆ ನಿರ್ವಹಿಸುವುದೆಂದು ಮದುವೆಯ ಚರ್ಚೆ ಬಂದಾಗ ತೀರ್ಮಾನವಾಯಿತು.
ನಂತರದ ದಿನಗಳಲ್ಲಿ ಉಮಾ ಆಗಾಗ ಪಾರ‍್ವತಕ್ಕನವರ ಮನೆಗೆ ಬಂದು ಹೋಗುವ ಸಂದರ್ಭದಲ್ಲಿ ಉಮಾ ಮತ್ತು ಪಾರ‍್ವತಕ್ಕನಿಗೆ ಸರಿಯಾದ ರೀತಿಯ ಹೊಂದಿಕೆಯಾಗದೆ ಮೊದಲು ಮದುವೆಗೆ ಒಪ್ಪಿದ್ದರೂ ದಿಢೀರನೆ ನಿರ್ಧಾರ ಬದಲಿಸಿ, ಅವಳನ್ನು ಮದುವೆಯಾಗುವುದು ಬೇಡ ಎಂದು ಬಸವಣ್ಯಪ್ಪನಿಗೆ ಹೇಳಿ ಒಪ್ಪಿಸಲು ನೋಡಿದರು. ಆದರೆ ಉಮಾ ಮತ್ತು ಬಸವಣ್ಯಪ್ಪ ಆ ಬಗ್ಗೆ ಇಬ್ಬರೂ ದೃಢ ನಿರ್ಧಾರ ತೆಗೆದುಕೊಂಡಾಗಿತ್ತು. ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಬಸವಣ್ಯಪ್ಪನ ಮದುವೆಯ ರಾಯಬಾರಿಗಳಾಗಿ ನಾನೂ, ಆಲನಹಳ್ಳಿ ಕೃಷ್ಣ, ಆಗ ತಾನೇ ಧಾರವಾಡದಿಂದ ಮೈಸೂರಿಗೆ ಬಂದಿದ್ದ ರಾಜಶೇಖರ ಕೋಟಿ ಮತ್ತು ಪ್ರಜಾವಾಣಿಯಲ್ಲಿ ಕೆಲಸದಲ್ಲಿದ್ದ ಹೊಸಹಳ್ಳಿ ಶಿವರಾಂ ನಾವೆಲ್ಲ ಉಮಾಳ ಊರಾದ ಮಂಡ್ಯದಲ್ಲಿದ್ದ ಅವರ ತಂದೆಯ ಮನೆಗೆ, ಅಲ್ಲಿನ ಪುರಸಭೆಯ ಅಧ್ಯಕ್ಷರಾಗಿದ್ದ ಹೊನ್ನಯ್ಯನವರ ಮುಖಾಂತರ ಉಮಾ ಅವರ ತಂದೆಯ ಬಳಿಗೆ ಹೆಣ್ಣು ಕೇಳುವ ಪ್ರಸ್ತಾಪ ಮಾಡಿದೆವು. ಅವರ ತಂದೆ ನಮ್ಮ ಜಾತಿಯಲ್ಲದ ಜಾತಿಕನಿಗೆ ಹೆಣ್ಣು ಕೊಡಲು ತಯಾರಿಲ್ಲವೆಂದು ಕಡ್ಡಿ ಮುರಿದಂತೆ ತಿಳಿಸಿದರು. ಬಸವಣ್ಯಪ್ಪ ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪಾಸಾದ ವಿಚಾರವಾದಿ ವ್ಯಕ್ತಿ ಹಾಗೂ ನನ್ನ ಒಬ್ಬ ಒಳ್ಳೆಯ ಸ್ನೇಹಿತ, ಅವನಿಗೆ ನಿಮ್ಮ ಮಗಳನ್ನು ಕೊಟ್ಟರೆ ಅವರಿಬ್ಬರೂ ಸುಖವಾಗಿರುವರೆಂದು ವಾದಿಸಿದೆ. ಜೊತೆಗೆ ಜಾತಿ ವ್ಯವಸ್ಥೆಯ ವಿರುದ್ಧ ನಾವೆಲ್ಲ ಇರಬೇಕೆಂದಾಗ, `ನಾನೇನು ಜಾತಿ ಹೋಗಬೇಕೆಂದು ಮಕ್ಕಳನ್ನು ಹಡೆದಿಲ್ಲವೆಂದು’ ಅದೇ ಮಾತು ಹೇಳಿ ಮುಗಿಸಿದ್ದರು. ಕಡೆಗೆ ನೀವು ಸಹಕರಿಸಿದರೂ ಸರಿ, ವಿರೋಧಿಸಿದರೂ ಸರಿಯೆ ಮದುವೆಯನ್ನು ನಾವು ಮಾಡಲು ತಯಾರಿ ನಡೆಸಿರುವುದಾಗಿ ತಿಳಿಸಿ ಅವರ ಮನೆಯಿಂದ ಹೊರಬಂದಿದ್ದೆವು. ಮೈಸೂರಿನ ಹಿರಿಯ ಸಮಾಜವಾದಿ ಚಿಂತಕ, ಹೃದಯವಂತ ವಕೀಲರಾದ ಟಿ.ಎನ್. ನಾಗರಾಜ್ ಅವರ ಬಳಿ ಹೋಗಿ ರಿಜಿಸ್ಟರ್ ಮದುವೆಯಾಗುವ ಬಗ್ಗೆ ಚರ್ಚಿಸಿ ದಿನವೊಂದನ್ನು ನಿಗದಿಪಡಿಸಿ ಮೈಸೂರು ಸಬ್‌ರಿಜಿಸ್ಟಾçರ್ ಕಛೇರಿಯಲ್ಲಿ ರಿಜಿಸ್ಟರ್ ಮಾಡಿಸಿದೆವು. ಅವರ ಮದುವೆಯ ನಂತರ ಸಂಭ್ರಮದ ಸಂತೋಷ ಕೂಟವನ್ನು ದಾಸ್ ಪ್ರಕಾಶ್ ಹೋಟೆಲ್‌ನಲ್ಲಿ ಆಪ್ತ ಗೆಳೆಯರಿಗಾಗಿ ವ್ಯವಸ್ಥೆ ಮಾಡಿದ್ದೆವು. ಮೈಸೂರಿನ ಹಿರಿಯ ಸಮಾಜವಾದಿಗಳು ಡಾ. ಯು.ಆರ್. ಅನಂತಮೂರ್ತಿ, ಪ್ರೊ. ರಾಮಲಿಂಗಂ, ರಾಜಶೇಖರ ಕೋಟಿ, ಮಹಾದೇವ, ಭಕ್ತ, ಅರ್ಕೇಶ್, ಮಹೇಶ, ಉಮಾಳ ಅಕ್ಕ ಸುಮಿತ್ರಾಬಾಯಿ ಎಲ್ಲರೂ ಸಂಭ್ರಮದಲ್ಲಿ ಭಾಗವಹಿಸಿದ್ದೆವು. ಪರ‍್ವತಕ್ಕನವರ ಅಭಿಪ್ರಾಯದ ವಿರುದ್ಧ ಬಸವಣ್ಯಪ್ಪ ಉಮಾಳನ್ನು ಮದುವೆಯಾದ ಕಾರಣ ಅವನಿಗೆ ನೀಡಿದ್ದ ಸಹಾಯಕ ನಿರ್ದೇಶಕರ ಹುದ್ದೆಯಿಂದ ಅವನನ್ನು ಬಿಡುಗಡೆಗೊಳಿಸಿದ್ದರು. ನನಗೂ ಅಲ್ಲೇ ಕೆಲಸ ನೀಡುವರೆಂದು ಹೇಳಿದ ಮಾತನ್ನು ಮಾನ್ಯ ಮಾಡಲು ಒಪ್ಪಲಿಲ್ಲ. ಅವನು ಮದುವೆ ಮಾಡಿಕೊಂಡು ನಿರುದ್ಯೋಗಿಯಾಗಿದ್ದ. ನಾನು ಅವನನ್ನು ಬೆಂಬಲಿಸಿದ ಕಾರಣಕ್ಕೆ ಕೆಲಸದ ನಿರೀಕ್ಷೆಯಲ್ಲಿದ್ದ ನನಗೆ ಕೆಲಸ ನೀಡಲು ನಿರಾಕರಿಸಿದ್ದರು.
ನನಗೆ ಸ್ನೇಹಿತನೊಬ್ಬನ ಪ್ರೀತಿಗೆ ನೀರೆರದ ತೃಪ್ತಿಯಲ್ಲಿದ್ದೆ. ಕೆಲಸದ ಹುಡುಕಾಟದಲ್ಲಿದ್ದು ಇಲ್ಲಿಯೇ ಇರಲು ಆಗುವುದಿಲ್ಲ ಎಂದು ತೀರ್ಮಾನಿಸಿದೆ. ಮೈಸೂರಿನಿಂದ ಊರಿಗೆ ಹೋಗುವ ಸಲುವಾಗಿ ನಮ್ಮ ರೂಂನಲ್ಲಿಟ್ಟಿದ್ದ ಸಣ್ಣಪುಟ್ಟ ವಸ್ತುಗಳನ್ನು ಜೋಡಿಸಿಕೊಂಡು, ಸಂಜೆ ಪರ‍್ವತಕ್ಕನ ಮನೆಯಲ್ಲಿದ್ದ ನನ್ನ ಹಳೆಯ ಟ್ರಂಕ್ ತೆಗೆದುಕೊಂಡು ಬರಲು ಹೋದೆ. ಅವರು ನಾವೆಲ್ಲ ಅವರ ಮಾತಿಗೆ ಓಗೊಡದೆ ಮದುವೆ ಮಾಡಿ ಮುಗಿಸಿದ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡು ವ್ಯಗ್ರಗೊಂಡಿದ್ದರು. ನಮ್ಮವನಾಗಿದ್ದ ನೀನು ಬಸವಣ್ಯಪ್ಪನಿಗೆ ಸಪೋರ್ಟ್ ಮಾಡಿದೆ. ಎಂದು ಹೇಳುತ್ತಾ ಭಾವುಕರಾದರು. ಅವರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಇನ್ನು ಅವರಿಗೆ ನನ್ನ ಯಾವ ವಿವರಣೆಗಳೂ ಸಹ್ಯವಾಗುವುದಿಲ್ಲ ಎಂದು ಸುಮ್ಮನಿದ್ದೆ. ನಂತರ ನಾನು ನಮ್ಮ ಊರಿಗೆ ಹೋಗುತ್ತಿರುವುದಾಗಿ ಹೇಳಿ ಹೊಸಿಲು ದಾಟುತ್ತಿದ್ದಾಗ ನಿಮ್ಮ ಪ್ರೊ. ಮಾದಯ್ಯನವರು ಬರಲು ಹೇಳಿದ್ದಾರೆ ಹೋಗಿ ನಾಳೆ ನೋಡು ಎಂದು ಹೇಳಿದರು.
ಬಸವಣ್ಯಪ್ಪ-ಉಮಾರ ಮದುವೆ ನಂತರ ಊರಕಡೆ ಹೊರಟಿದ್ದ ನನಗೆ ಪರ‍್ವತಕ್ಕ ನಮ್ಮ ವಿಭಾಗದ ಪ್ರೊ. ಮಾದಯ್ಯನವರನ್ನು ನೋಡಲು ಹೇಳಿದಂತೆ, ಅವರ ಚೇಂಬರ್‌ನಲ್ಲಿ ಮಾರನೆಯ ದಿನ ಹೋಗಿ ನೋಡಿದೆ. ಅವರಿಗೆ ನನ್ನ ಮತ್ತು ಬಸವಣ್ಯಪ್ಪನ ಸ್ನೇಹ ಮತ್ತು ಆಗಿರುವ ಮದುವೆ ಅದರಲ್ಲೂ ಮೈಸೂರಿನ ಗಣ್ಯವ್ಯಕ್ತಿಗಳ ಭಾಗವಹಿಸುವಿಕೆ ಎಲ್ಲಾ ತಿಳಿದಿತ್ತು. ಸ್ವತಃ ಪ್ರೊ. ಎಂ. ಮಾದಯ್ಯನವರು ವಿದೇಶದಲ್ಲಿಯೇ ಅಂತರ ಜಾತಿ ವಿವಾಹವಾಗಿ ಬಂದವರು. ವಿದೇಶಿ ಹೆಂಡತಿಗೆ ಮತ್ತೆ ಮಠಗಳಲ್ಲಿ ಲಿಂಗ ಕಟ್ಟಿಸಿ ಲಿಂಗಾಯತರಲ್ಲಿ ಒಪ್ಪಿತರಾಗಿದ್ದವರು. ಅವರು`ಪಾರ‍್ವತಕ್ಕನವರು ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವವರು. ಮುಂದೆ ವಿ.ಸಿ. ಮತ್ತು ಅದಕ್ಕೂ ಹೆಚ್ಚಿನ ಹುದ್ದೆಗಳಿಗೆ ಏರುತ್ತಾರೆ. ನೀನಿನ್ನು ವಿದ್ಯಾರ್ಥಿ ಅವರ ಸಹಾಯ ನಿನಗೆ ಬೇಕಾಗುತ್ತದೆ ಆದ್ದರಿಂದ ಅವರಿಂದ ದೂರ ಹೋಗುವುದು ಜಾಣತನವಲ್ಲ ಎಂದೆಲ್ಲ ಹೇಳಿ ನಿನಗೆ ಅವರ ಡಿಪಾರ್ಟ್ಮೆಂಟ್‌ನಲ್ಲಿ ಕೆಲಸ ಕೊಡುತ್ತಾರೆ ನಾಳೆ ಹೋಗಿ ನೋಡು’ ಎಂದು ನನಗೆ ಹೇಳಿದರು. ನನ್ನ ಎಂ.ಎ. ವಿದ್ಯಾಭ್ಯಾಸ ಮುಗಿದು ಸಂತೋಷ ಪಡಬೇಕಾದ ದಿನಗಳಲ್ಲಿ ಹೆಚ್ಚು ದ್ವಂದ್ವಗಳಲ್ಲಿ ಸಿಲುಕಿಕೊಂಡ ಅನುಭವವಾಗಿತ್ತು.
ಮಾರನೇ ದಿನ ನಾನು ಮತ್ತೆ ಪರ‍್ವತಕ್ಕನವರ ಡಿಪಾರ್ಟ್ಮೆಂಟ್‌ಗೆ ಭೇಟಿ ಮಾಡಲು ಹೋದಾಗ ನನ್ನ ರಿಸಲ್ಟ್ ಬಂದ ಮಾರನೇ ದಿನದಿಂದಲೇ ಕೆಲಸಕ್ಕೆ ಹಾಜರಾಗುವಂತೆ ರಿಪೋರ್ಟ್ ಮಾಡಿಸಿಕೊಂಡರು. ನನ್ನ ತಳಮಳ ತಾತ್ಕಾಲಿಕವಾಗಿ ಶಮನಗೊಂಡಿತ್ತು. ನನ್ನ ಎರಡು ಮೂರು ದಿನಗಳಲ್ಲಿನ ಅನಿಶ್ಚತೆಯೊಂದು ಅಂದು ಕೊನೆಗೊಂಡಿತ್ತು. ಓದಿನ ಕರ್ತವ್ಯ ಮುಗಿದು ಈಗ ಹೊಸ ಪ್ರಾಜೆಕ್ಟ್ವೊಂದರ ಕೆಲಸಕ್ಕೆ ಸೇರಿದ್ದೆ. ಮೊದಲೇ ಇದ್ದ 5-6 ಜನರೊಡನೆ ಕೂತು ಸರ್ವೆ ಮಾಡಿ ತಂದ ಉತ್ತರಗಳನ್ನು ಕೋಡ್ ಶೀಟ್‌ನಲ್ಲಿ ದಾಖಲಿಸಬೇಕಾಗಿತ್ತು. ದಿನಕ್ಕೆ ಯಾರು ಎಷ್ಟು ಶೀಟ್ ತುಂಬಿಸಿದ್ದಾರೆ ಎನ್ನುವುದನ್ನು ನಿರ್ದೇಶಕರು ವಾರದಲ್ಲಿ ಎರಡು ಮೂರು ಬಾರಿ ರಿವ್ಯೂ ಕೂಡ ಮಾಡುತ್ತಿದ್ದರು. ಪ್ರಾರಂಭದಲ್ಲಿ ನಿಧಾನಗತಿಯ ನನ್ನ ಕೆಲಸಕ್ಕೆ ಅಸಮಾಧಾನಗೊಂಡಿದ್ದರು. ನಂತರದ ದಿನಗಳಲ್ಲಿ ಅದೇ ಕೆಲಸವನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಯಿತು.
ಮದುವೆಯಾಗಿ ಕೆಲಸ ಕಳೆದುಕೊಂಡಿದ್ದ ಬಸವಣ್ಯಪ್ಪನಿಗೆ ಹುಣಸೂರಿನ ಪ್ರೈವೇಟ್ ಕಾಲೇಜಿನಲ್ಲಿ ಕೆಲಸ ಸಿಕ್ಕು ಅವನು ಅಲ್ಲಿ ಸಂಸಾರ ಹೂಡಿದ್ದ. ಒಳ್ಳೆಯ ಅಧ್ಯಾಪಕನೆಂದು ಹೆಸರು ಕೂಡಾ ಮಾಡಿದ್ದ. ನಾನು ಸೋಷಿಯಾಲಜಿ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ಬಸವಣ್ಯಪ್ಪನ ಸ್ನೇಹವನ್ನು ತೊರೆಯುತ್ತೇನೆ ಎಂದು ಭಾವಿಸಿದ್ದ ಪಾರ‍್ವತಕ್ಕನಿಗೆ ನಿರಾಶೆಯಾಗಿತ್ತು.
ಹುಣಸೂರಿನಿಂದ ಆಗಾಗ ಮೈಸೂರಿಗೆ ಬಸವಣ್ಯಪ್ಪ ಬಂದಾಗ ನಾನು ಎದ್ದು ಹೊರ ಹೋಗಿ ಕ್ಯಾಂಟೀನ್‌ನಲ್ಲಿ ಕೂತು ಮಾತಾಡಿಕೊಂಡು ಕಳಿಸುತ್ತಿದ್ದೆ. ಅವನ ಸ್ನೇಹವನ್ನು ಮುಂದುವರಿಸುವುದು ಪರ‍್ವತಕ್ಕನಿಗೆ ಸಹಮತವಿಲ್ಲವೆಂಬಂತೆ ಅವರು ಮಾತಾಡುತ್ತಿದ್ದರು. ಒಂದು ಕಡೆ ಸ್ನೇಹ ಇನ್ನೊಂದು ಕಡೆ ಸಹಾಯ ಹಸ್ತ ನೀಡಿದ ನಮ್ಮವ್ವನ ಜೊತೆ ಓದಿದ ಪಾರ‍್ವತಕ್ಕ ನಮಗೆಲ್ಲ ಸಹಾಯ ಮಾಡಿದವರು. ಷೇಕ್ಸ್ಪಿಯರ್ ನಾಟಕದ ಹ್ಯಾಮ್ಲೆಟ್‌ನ ಮಾನಸಿಕ ಹೊಯ್ದಾಟದಂತಾಗಿತ್ತು ನನ್ನ ಸ್ಥಿತಿ.
ಈ ಹೊಯ್ದಾಟದಲ್ಲಿರುವಾಗಲೇ ನಾನು ನಮ್ಮ ಊರಿಗೆ ಹೋಗಿದ್ದೆ. ಆಗತಾನೆ ಸಾರ್ವತ್ರಿಕ ಚುನಾವಣೆಗಳು ನಡೆದು ನಮ್ಮೂರಿನ ಸಿದ್ಧವೀರಪ್ಪನವರು ಅರಸು ಅವರ ಸಂಪುಟದಲ್ಲಿ ಸಚಿವರಾಗಿದ್ದರು. ನಾನು ಮಂತ್ರಿಗಳಾದ ಸಿದ್ದವೀರಪ್ಪನವರನ್ನು ಭೇಟಿ ಮಾಡುವ ಬಗ್ಗೆ, ಊರಿನಲ್ಲಿ ವಿಚಾರಿಸಿ ಮಾತಾಡಿದೆ. ಸಿದ್ದವೀರಪ್ಪನವರ ತಮ್ಮನ ಮಗ ಬಸವಂತಪ್ಪ ಊರಲ್ಲಿ ಒಂದು ಸಣ್ಣ ಕಿರಾಣಿ ಅಂಗಡಿ ಜೊತೆ ಟೀ ಕೂಡ ತಯಾರಿಸುತ್ತಿದ್ದ. ನಾವೆಲ್ಲ ಟೀ ಕುಡಿದು ಅವನ ಅಂಗಡಿಯಲ್ಲಿ ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಿದ್ದೆವು. ಸಿದ್ದವೀರಪ್ಪನವರನ್ನು ನೋಡಲು ಬೆಂಗಳೂರಿಗೆ ಹೋಗುವ ಬಗ್ಗೆ ಊರಲ್ಲಿ ನಾಟಕ ಹೇಳಿಕೊಡುತ್ತಿದ್ದ ರುದ್ರಪ್ಪ ಮಾಸ್ತರು ಮತ್ತು ಬಸವಂತಪ್ಪ ನನ್ನ ಜೊತೆ ಬೆಂಗಳೂರಿಗೆ ಬರುವುದಾಗಿ ಒಪ್ಪಿದರು. ನಾನೂ ತಡಮಾಡದೆ ಮಾರನೆ ದಿನ ಅವರನ್ನು ಕರೆದುಕೊಂಡು ಬೆಂಗಳೂರಿನ ಜಯನಗರದಲ್ಲಿದ್ದ ಸಿದ್ದವೀರಪ್ಪನವರ ಮನೆ ತಲುಪಿದೆವು. ಅವರನ್ನು ಕಂಡು ನಾನು, ನನ್ನ ತಂದೆಯ ನೆನಪು ಮಾಡಿ ನಂತರ ನಾನು ಎಂ.ಎ. ಅರ್ಥಶಾಸ್ತ್ರದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಾಸಾಗಿರುವ ಸುದ್ದಿ ಕೇಳಿ ತುಂಬಾ ಸಂತೋಷಪಟ್ಟರು. ಅಲ್ಲಿಂದಲೇ ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿದ್ದ ಡಿ.ವಿ. ಅರಸು ಅವರಿಗೆ ಫೋನ್ ಮಾಡಿದರು. ನನಗೆ ಹೋಗಿ ಅವರನ್ನು ಭೇಟಿ ಮಾಡಲು ಸೂಚಿಸಿದರು. ನಾವೆಲ್ಲರೂ ನಮಸ್ಕರಿಸಿ ನನ್ನೊಡನೆ ಬಂದಿದ್ದ ರುದ್ರಪ್ಪ ಮಾಸ್ತರ್ ಮತ್ತು ಬಸವಂತಪ್ಪನನ್ನು ಊರಿಗೆ ಕಳಿಸಿ ನಾನು ಮೈಸೂರಿಗೆ ಬಂದೆ. ಸೋಮವಾರ ಕಳೆದು ಮಂಗಳವಾರದ ಮಧ್ಯಾಹ್ನ ಕ್ರಾಫರ್ಡ್ ಹಾಲ್‌ನ ಬಲ ಭಾಗದಲ್ಲಿದ್ದ ರಿಜಿಸ್ಟಾ್ರ್ ಚೇಂಬರ್‌ಗೆ ಹೋಗಿ ನನ್ನ ಪರಿಚಯ ಮಾಡಿಕೊಂಡೆ. ನನ್ನನ್ನು ಕೂರಲು ಹೇಳಿದ ಅವರು ಕೇಸ್ ವರ್ಕರ್‌ರನ್ನು ಬರಹೇಳಿ ಆದೇಶವನ್ನು ಟೈಪ್ ಮಾಡಿ ತರಲು ಹೇಳಿದರು. ಅರ್ಧ ಗಂಟೆಯಲ್ಲಿ ಮೈಸೂರು ಮಹಾರಾಜ ಕಾಲೇಜಿಗೆ ಸ್ಥಳೀಯ ಅಭ್ಯರ್ಥಿಯಾಗಿ ಉಪನ್ಯಾಸಕ ಹುದ್ದೆಗೆ ನೇಮಕ ಮಾಡಿದ ಆದೇಶ ನನ್ನ ಕೈಯಲ್ಲಿ ಇತ್ತು. ಇಂದು ಮಂಗಳವಾರ ನಾಳೆ ಹೋಗಿ ರಿಪೋರ್ಟ್ ಮಾಡಿಕೊಳ್ಳುತ್ತೇನೆಂದು ಹೇಳುತ್ತಿದ್ದಂತೆ ನೋ.. ನೋ.. ಈಗಲೇ ಹೋಗಿ ರಿಪೋರ್ಟ್ ಮಾಡಿಕೊ ಎಂದು ಅಲ್ಲಿಂದಲೇ ಮಹಾರಾಜಾ ಕಾಲೇಜಿಗೂ ಫೋನ್ ಮಾಡಿ ತಿಳಿಸಿದರು. ಆಗಷ್ಟೆ ವಿದ್ಯಾರ್ಥಿದೆಸೆ ಮುಗಿಸಿ 3-4 ತಿಂಗಳ ಸಂಶೋಧಕ ಸಹಾಯಕನ ಹುದ್ದೆ ಮಾಡಿಕೊಂಡಿದ್ದ ನನಗೆ ನಿಂತ ಗಳಿಗೆಯಲ್ಲಿ ಉಪನ್ಯಾಸಕ ಹುದ್ದೆಯ ಆದೇಶ ನೋಡಿ ನನ್ನನ್ನು ನಾನೇ ನಂಬದಂತಾಗಿದ್ದೆ. ಈಗ್ಗೆ ನಾನು ಎರಡು ವರ್ಷಗಳ ಹಿಂದೆಯಷ್ಟೇ ನಾನು ಓದಿಕೊಂಡಿದ್ದ ಕಾಲೇಜಿಗೆ ಉಪನ್ಯಾಸಕ ಹುದ್ದೆಯ ಆದೇಶ ಹಿಡಿದು ಕಾಲೇಜಿಗೆ ಹೋದೆ. ನನ್ನನ್ನು ನೋಡಿದ ಅಲ್ಲಿನ ಕಛೇರಿ ಸೂಪರಿಂಟೆಂಡ್ ಮತ್ತು ಪ್ರಿನ್ಸಿಪಾಲರು ಮೊದಲಿಗೆ ನನ್ನನ್ನು ಯಾರೋ ವಿದ್ಯಾರ್ಥಿ ಎಂದೇ ಭಾವಿಸಿದ್ದರು. ನನ್ನಲ್ಲಿದ್ದ ಆದೇಶವನ್ನು ತೋರಿಸಿ ದಿನಾಂಕ 4.12.1974ರಂದು ಮಧ್ಯಾಹ್ನ ಉಪನ್ಯಾಸಕ ಹುದ್ದೆಗೆ ಹಾಜರಾಗಿದ್ದೆ.
ಮುಂದುವರಿಯುವುದು…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ದಿನದ ಸುದ್ದಿ
ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.
ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.
“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.
ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.
ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.
ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ನೂತನ ವಿಜ್ಞಾನ ಸಭಾಂಗಣದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಮ್.ಸಿ.ಎ) ಹಾಗೂ ಕಂಪ್ಯೂಟರ್ ಸೈನ್ಸ್ (ಎಮ್.ಎಸ್ಸಿ) ವಿಭಾಗಗಳ ಸಂಯುಕ್ತಾಶ್ರಯದಲ್ಲಿ “ಸಂಶೋಧನಾ ಸಮಸ್ಯೆಯನ್ನು ಗುರುತಿಸುವ ವಿವಿಧ ವಿಧಾನಗಳು, ಹೊಸ ಸಂಶೋಧನಾ ಕಲ್ಪನೆಗಳ ಸೃಷ್ಟಿ ಹಾಗೂ ಟೈಯರ್-1 ಸಂಶೋಧನಾ ಲೇಖನಗಳ ಬರಹದ ಪ್ರಮುಖ ಅಂಶಗಳು” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ, ಗುಣಮಟ್ಟದ ಸಂಶೋಧನೆಯೇ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ ಮತ್ತು ಜಾಗತಿಕ ಮಾನ್ಯತೆಯ ಮೂಲಾಧಾರವಾಗಿದೆ ಎಂದು ಹೇಳಿದರು.
ಸಂಶೋಧನೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಾಗಬಾರದು, ಅದು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವ ದಿಕ್ಕಿನಲ್ಲಿ ಸಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಪ್ರಕಟಣೆಗಳು ವಿಶ್ವವಿದ್ಯಾಲಯದ ಸಂಶೋಧನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯು ಕೆ ಮಾಂಚೆಸ್ಟರ್‌ನ ‘ಯೂನಿವರ್ಸಿಟಿ ಆಫ್ ಸ್ಯಾಲ್‌ಫೋರ್ಡ್’ನ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಡಾ. ಶಿವಕುಮಾರ ಪಿ. ಮಾತನಾಡಿ, ಸಂಶೋಧನಾ ಸಮಸ್ಯೆ ಗುರುತಿಸುವಿಕೆ, ಸಂಶೋಧನಾ ಅಂತರ (Research Gap) ಪತ್ತೆ, ಸಾಹಿತ್ಯ ಸಮೀಕ್ಷೆ, ಪ್ರಯೋಗಾತ್ಮಕ ವಿನ್ಯಾಸ (Experimental Design), ಟೈಯರ್-1 ಜರ್ನಲ್ ಲೇಖನ ಬರಹ, ಪ್ರಕಟಣಾ ನೈತಿಕತೆ ಹಾಗೂ ವಿಮರ್ಶಕರ ಅಭಿಪ್ರಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
“ಒಂದು ಉತ್ತಮ ಸಂಶೋಧನಾ ಲೇಖನದ ಯಶಸ್ಸು ಅದರ ಹೊಸತನ, ವೈಜ್ಞಾನಿಕ ವಿಧಾನ ಮತ್ತು ಸ್ಪಷ್ಟವಾದ ಪ್ರಸ್ತುತೀಕರಣದಲ್ಲಿ ಅಡಗಿದೆ. ಸಂಶೋಧಕರು ಗುಣಮಟ್ಟದ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪ್ರಕಟಣೆಗೆ ಸಿದ್ಧರಾಗಬೇಕು,” ಎಂದು ಅವರು ಕರೆ ನೀಡಿದರು.
ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳ ಅಧ್ಯಾಪಕರು ಭಾಗವಹಿಸಿದ್ದರು. ಪೋಸ್ಟರ್ ಪ್ರಸೆಂಟೇಷನ್‌ಗಳು, ಸಂವಾದಾತ್ಮಕ ಚರ್ಚೆಗಳು ಮತ್ತು ಸಂಶೋಧನಾ ಲೇಖನ ಬರಹದ ಪ್ರಾಯೋಗಿಕ ಮಾರ್ಗದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಭವಿಷ್ಯದಲ್ಲೂ ಇಂತಹ ಕಾರ್ಯಾಗಾರಗಳ ಸರಣಿಯನ್ನು ಆಯೋಜಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಲಸಚಿವ ಶ್ರೀ ಎಸ್. ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಡಾ. ಸಿ. ಕೆ. ರಮೇಶ್, ಡಾ. ಬಸವಣ್ಣ ಎಮ್. ಅಧ್ಯಕ್ಷರು, ಎಮ್.ಸಿ.ಎ ವಿಭಾಗ, ಡಾ. ಚಂದ್ರಕಾಂತ ಎನ್. ಅಧ್ಯಕ್ಷರು, ಕಂಪ್ಯೂಟರ್ ಸೈನ್ಸ್ ವಿಭಾಗ, ಹಣಕಾಸು ಅಧಿಕಾರಿ ಡಾ. ಆರ್. ಶಶಿಧರ್ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ಅಂತರಂಗ2 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ3 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
-
ದಿನದ ಸುದ್ದಿ2 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್


