ಅಂತರಂಗ
ಆತ್ಮಕತೆ | ಅಪ್ಪನ ಮೈಸೂರು ಭೇಟಿ ಸಾವು – ನೋವು
- ರುದ್ರಪ್ಪ ಹನಗವಾಡಿ
ನಾನು ಮೈಸೂರಿನಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿರುವುದರ ಬಗ್ಗೆ ತಿಳಿದ ನಮ್ಮೂರಲ್ಲಿ ಎಲ್ಲರಿಗೂ ಸಂತೋಷವಾಗಿತ್ತು. ಅತ್ಯಂತ ಸಂತೋಷಗೊಂಡಿದ್ದ ಅಪ್ಪನನ್ನು ನಾನು ಮೈಸೂರಿಗೆ ಕರೆದುಕೊಂಡು ಬಂದು ಒಮ್ಮೆ ತೋರಿಸಬೇಕೆಂದು ಯೋಚಿಸಿದ್ದೆ. ಅಪ್ಪನು ಓಡಾಡಲು ಶಕ್ತಿ ಇದ್ದ ಕಾಲದಲ್ಲಿ ಎಲೆ ವ್ಯಾಪಾರಕ್ಕಾಗಿ ಧಾರವಾಡ, ಕಂಪ್ಲಿ, ಗಂಗಾವತಿ, ಹೊಸಪೇಟೆ, ಹರಿಹರ, ದಾವಣಗೆರೆ ಸಂತೆಗಳಲ್ಲಿ ಓಡಾಡುತ್ತಿದ್ದನು. ಇತ್ತೀಚೆಗೆ ಅವರಿಗೆ ಇದ್ದ ಕೆಮ್ಮು ದಮ್ಮುಗಳಿಂದ ಹೊರ ಊರುಗಳಿಗೆಲ್ಲೂ ಹೋಗುತ್ತಿರಲಿಲ್ಲ. ಅಪ್ಪನ ಹೆಚ್ಚಾದ ವಯಸ್ಸಿನ ಕಾರಣದಿಂದಲೇ ಹರಿಹರದಲ್ಲಿ ಹೈಸ್ಕೂಲಿಗೆ ಸೇರಿದ್ದ ಅಣ್ಣ ತಿಪ್ಪಣ್ಣನನ್ನು ಶಾಲೆ ಬಿಡಿಸಿ ತೋಟದ ಕೆಲಸಕ್ಕೆ ಹಾಕಿಕೊಂಡಿದ್ದ. ಹಾಗಾಗಿ ಈಗೆಲ್ಲ ಸಂತೆಗಳಿಗೆ ಅಣ್ಣನನ್ನೇ ಕಳಿಸುತ್ತಿದ್ದ.
ನಾನು ಮೈಸೂರಿನಲ್ಲಿ ಮತ್ತೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪುನಃ ನನ್ನ ಉಪನ್ಯಾಸಕ ಹುದ್ದೆಯನ್ನು ವಿಶ್ವವಿದ್ಯಾಲಯ ಮುಂದುವರೆಸಿತು. ಈ ನಡುವೆ ಪಾಲ್ ಇ ಸೈಮನ್ಸ್ ಅವರ ಪ್ರಾಜೆಕ್ಟ್ ಪೂರ್ಣಗೊಂಡಿತ್ತು. ಹಾಗಾಗಿ ಅವರು ವಾಪಸ್ ಅಮೇರಿಕೆಗೆ ಹೊರಟುಹೋದರು. ಹೋಗುವ ಮುನ್ನ ತಮ್ಮಲ್ಲಿದ್ದ ರ‍್ಯಾಲೀ ಬೈಸಿಕಲ್ ಮತ್ತು ಆರಾಮವಾಗಿ ಕೂರಲು ತೆಗೆದುಕೊಂಡಿದ್ದ `ಇಸೀ ಚೇರ್’ನ್ನು ನನಗೆ ಇಟ್ಟುಕೊಳ್ಳಲು ಹೇಳಿದರು. ಉಳಿದಂತೆ ತನ್ನೆಲ್ಲ ವಸ್ತುಗಳನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿಕೊಳ್ಳಲು ನಾನು ಸಹಕರಿಸಿದೆ.
ಈ ಸಮಯಕ್ಕಾಗಲೇ ಮಹೇಶ ರಾಜ್ಯಶಾಸ್ತçದಲ್ಲಿ ಎಂ.ಎ. ಮುಗಿಸಿದ್ದ. ಅವನು ಮುಂದೆ ಕಾನೂನು ವ್ಯಾಸಂಗ ಮಾಡಲು ಮೈಸೂರಿನಲ್ಲಿಯೇ ಇರುವ ತೀರ್ಮಾನ ಮಾಡಿದ್ದ. ಹಾಗಾಗಿ ಹಾಲಿ ಇದ್ದ ಮನೆಯನ್ನು ನಾನು ಬಿಟ್ಟು
ಕೆ.ಜಿ. ಕೊಪ್ಪಲಲ್ಲಿ ನಾನು ಅವನೂ ಸೇರಿ ಬಾಡಿಗೆ ಮನೆ ಮಾಡಿದೆವು. ನಂತರದಲ್ಲಿ ನಮ್ಮ ಊರಿನಲ್ಲಿ ಪಿಯುಸಿ ಪಾಸು ಮಾಡಿ ಊರಲ್ಲಿದ್ದ ಬಾರಿಕರ ಮಾಂತೇಶಿ, ಐನೇರ ಮುಕ್ತಾಯಕ್ಕ ಇವರುಗಳು ಕೂಡ ಮೈಸೂರಿಗೆ ಬಂದು ಓದು ಮುಂದುವರೆಸಲು ನನ್ನ ಸಹಾಯ ಕೋರಿದ್ದರು. ನಾನು ಅವರನ್ನೂ ಸಹ ನನ್ನ ಜೊತೆಗೆ ಮೈಸೂರಿಗೆ ಕರೆತಂದು, ಮುಕ್ತಾಯಕ್ಕನಿಗೆ ಸರಸ್ವತಿಪುರಂನಲ್ಲಿ ಸಣ್ಣ ಬಾಡಿಗೆ ಮನೆ ಮಾಡಿಕೊಟ್ಟು ಮಾಂತೇಶಿಗೆ ಮಹಾರಾಜ ಕಾಲೇಜಿನಲ್ಲಿ ಮತ್ತು ಬಿ.ಸಿ.ಎಂ. ಹಾಸ್ಟೆಲ್‌ನಲ್ಲಿ ಸೀಟು ಕೊಡಿಸಿ ಬಿ.ಎ. ಮುಂದುವರೆಸಲು ಅವಕಾಶ ಮಾಡಿಕೊಟ್ಟೆ. ಈ ನಡುವೆ ನಾನು ಊರಿಗೆ ಹೋದಾಗ ನನ್ನ ಅವ್ವನ ತಂಗಿ ಮಗ ಸಿರಿಗೇರಿ ರಾಮಣ್ಣ ಬಿ.ಎ. ಪದವಿ ಕೋರ್ಸು ಮುಗಿಸಿ ಕೆಲವು ವಿಷಯಗಳಲ್ಲಿ ಫೇಲಾಗಿ ತನ್ನ ಊರಿನಲ್ಲಿದ್ದ. ಅವನನ್ನು ಕೂಡ ಮೈಸೂರಿಗೆ ಕರೆದುಕೊಂಡು ಬಂದು ನಾವಿದ್ದ ಮನೆಯಲ್ಲಿಟ್ಟುಕೊಂಡು, ಬಾಕಿ ಉಳಿದ ವಿಷಯಗಳಿಗಾಗಿ ಟ್ಯೂಷನ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದೆ. ನಂತರ ಬಿ.ಎ. ಪಾಸು ಮಾಡಿಕೊಂಡು ಮುಂದೆ ಕೆ.ಇ.ಬಿ.ಯಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ.
ಕೆ.ಜಿ. ಕೊಪ್ಪಲ ಮನೆಯಲ್ಲಿ ನಾನು ಮಹೇಶ ಅಧಿಕೃತ ಬಾಡಿಗೆದಾರರಾದರೂ ಅನಧಿಕೃತವಾಗಿ ವಿದ್ಯಾರ್ಥಿ ಬಳಗ ಮತ್ತು ನಿರುದ್ಯೋಗಿಗಳ ಬಳಗದ ಸದಸ್ಯರು ಯಾರಾದರೊಬ್ಬರು ಇರುತ್ತಿದ್ದರು. ನಮ್ಮಿಬ್ಬರಿಗೆ ಅಡಿಗೆ ಮಾಡಿಡಲು ಒಪ್ಪಿಕೊಂಡಿದ್ದ ಶಿವಪ್ಪ ಎನ್ನುವ ಅಡಿಗೆಯವನು ನಮ್ಮಲ್ಲಿ ದಿನವೂ ಏರುಪೇರಾಗುತ್ತಿದ್ದ ಸಂಖ್ಯೆ ಮತ್ತು ಹೊಲೆ ಮಾದಿಗರೆಗೆಲ್ಲ ನಾನು ಅಡಿಗೆ ಮಾಡುವುದಿಲ್ಲ ಎಂದು ಹೇಳಿ ಹೊರಟು ಹೋಗಿದ್ದ. ಈ ನಡುವೆ ಹಾಸ್ಟೆಲ್‌ನಲ್ಲಿ ಸೀಟು ಸಿಗುವವರೆಗೆ ಮಾಂತೇಶಿ ಮತ್ತು ರಾಮಣ್ಣನೇ ತೋಚಿದಂತೆ ಅಡುಗೆ ಮಾಡುತ್ತಿದ್ದರು. ಅದನ್ನೇ ಎಲ್ಲರೂ ಹಂಚಿ ಉಣ್ಣುತ್ತಿದ್ದೆವು. ಇದನ್ನೆಲ್ಲ ನೆನಪಿಸಿಕೊಳ್ಳುವ ಸಮಯಕ್ಕೆ ರಾಮಣ್ಣ ಮತ್ತು ಮಾಂತೇಶಿ ಇಬ್ಬರೂ ತೀರಿಕೊಂಡಿದ್ದಾರೆ. ಮುಕ್ತಾಯಕ್ಕ ಹೊಳೆ ದಾಟಿದ ಮನುಷ್ಯ ಸ್ವಭಾವದಂತೆ ಗುರ್ತಿಲ್ಲದವರಂತೆ ದಾವಣಗೆರೆಯಲ್ಲಿ ಅರಾಮ ಇದ್ದಾಳೆ.
ಇದೇ ಸಮಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಇಂದಿರಾ ಗಾಂಧಿ ಅವರ ಬಗ್ಗೆ ಅಲಹಾಬಾದ್ ಕೈಕೋರ್ಟ್ ನೀಡಿದ ತೀರ್ಪಿನಂತೆ ಪಾರ್ಲಿಮೆಂಟ್ ಸದಸ್ಯತ್ವವನ್ನು ರದ್ದುಗೊಳಿಸಿದ ಕಾರಣ ದೇಶದಾದ್ಯಂತ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆಯಿಂದಾಗಿ ಧಾರವಾಡದಲ್ಲಿದ್ದು ಪತ್ರಿಕೆ ನಡೆಸುತ್ತಿದ್ದ ರಾಜಶೇಖರ ಕೋಟಿ ಕೂಡ ಮೈಸೂರಿಗೆ ಬಂದಿದ್ದರು ಹಾಗೂ ನಮ್ಮ ಈ ಬಾಡಿಗೆ ಮನೆಯ ಗೌರವಾನ್ವಿತ ಸದಸ್ಯರಾಗಿದ್ದರು.
ನನಗೆ ಬರುತ್ತಿದ್ದ 600ರೂಗಳ ಸಂಬಳ ಮತ್ತು ಮಹೇಶನ ಊರಿನಿಂದ ಬರುತ್ತಿದ್ದ ಅಕ್ಕಿ ಮತ್ತು ಸಾಂಬಾರು ಪದಾರ್ಥಗಳು ಸೇರಿಕೊಂಡು ಎಲ್ಲರಿಗೂ ಊಟ-ತಿಂಡಿಗಳು ಸಾಧಾರಣವಾಗಿ ನಡೆಯುತ್ತಿದ್ದವು. ಬಿ.ಎ. ಮತ್ತು ಎಂ.ಎ.ಗಳಲ್ಲಿ ಹಾಸ್ಟೆಲ್‌ನಲ್ಲಿನ ಸೊಗಸಾದ ಊಟ ನಂತರ ಪಾಲ್ ಸೈಮನ್ಸ್ ಜೊತೆ ಅಡಿಗೆ ಭಟ್ಟನ ಕೈರುಚಿ ನೋಡಿದ್ದ ನನಗೆ ಇಲ್ಲಿನ ಅನಿಶ್ಚಿತವಾದ ಊಟೋಪಚಾರಗಳನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೇನು? ನಮ್ಮ ಮಿತ್ರ ಬಳಗದ ಬೆಚ್ಚಗಿನ ಸೆಳೆತಗಳು ಇದನ್ನೆಲ್ಲ ಮೀರಿ ಒಬ್ಬರಿಗೊಬ್ಬರು ಸಹಕರಿಸಿಕೊಂಡು ಕಾಲ ಹಾಕುತ್ತಿದ್ದೆವು.
ದಸರಾ ರಜೆ ಬಂದು ಊರಿಗೆ ಹೋದಾಗ ಅಪ್ಪನನ್ನು ಒಮ್ಮೆ ಮೈಸೂರಿಗೆ ಕರೆತಂದು ದಸರಾ ಹಬ್ಬ ಮತ್ತು ನಮ್ಮ ಕಾಲೇಜು ತೋರಿಸಬೇಕೆಂಬ ಆಸೆಯಾಯಿತು. ಈ ಬಾರಿ ದಸರೆಯಲ್ಲಿ ಊರಿಗೆ ಹೋದಾಗ ಸೈಕಲ್ ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ನಮ್ಮ ಅಜ್ಜಿ (ಅಪ್ಪನ ತಾಯಿ) ಪಕ್ಕೀರಜ್ಜಿಯ ಹೆಸರಿಗಿದ್ದ ಹಳ್ಳದಾಚೆಗಿನ ಹೊಲದಲ್ಲಿನ ಬೆಳೆ ನೋಡಲು ಹೋಗಿದ್ದೆವು. ಅಣ್ಣ ಸರಿಯಾಗಿ ಕೆಲಸ ಮಾಡದೆ ಎಲ್ಲಾ ಕಡೆ ನಿರೀಕ್ಷಿತ ಉತ್ಪಾದನೆ ಇಲ್ಲವೆಂದು ನನ್ನ ಬಳಿ ಅಪ್ಪ ಅಲವತ್ತುಕೊಂಡಿದ್ದ. ಅವನೂ ಆಗ ತಾನೆ ಓದುವುದನ್ನು ಬಿಟ್ಟು ತೋಟದ ಕೆಲಸಗಳಲ್ಲಿ ತೊಡಗಿದ್ದರಿಂದಲೋ ಏನೋ ವ್ಯವಸಾಯದಲ್ಲಾಗಲೀ, ತೋಟ ಮಾಡುವುದರಲ್ಲಾಗಲೀ, ಅಪ್ಪನ ನಿರೀಕ್ಷಿತ ಮಟ್ಟದ ಕೆಲಸಗಾರನಾಗಿರಲಿಲ್ಲ. ಅದಕ್ಕೆ ನಮ್ಮವ್ವನ ಕಟಿಪಿಟಿಯೂ ಕಾರಣವಾಗಿತ್ತು. ನಮ್ಮ ಸೈಕಲ್ ಸವಾರಿ ಮುಗಿದು ಮನೆಗೆ ಬಂದಾಗ ಮೈಸೂರು ದಸರಾ ನೋಡಲು ಕರೆದುಕೊಂಡು ಹೋಗುವ ತೀರ್ಮಾನ ಅಪ್ಪನಿಗೆ ಹೇಳಿ ಒಪ್ಪಿಸಿದೆ. ನಂತರ ರೈಲಿನಲ್ಲಿ ಮಾರನೇ ದಿನ ಅಪ್ಪನೊಡನೆ ಮೈಸೂರಿಗೆ ಪ್ರಯಾಣ ಬೆಳೆಸಿದೆ.
ಮೈಸೂರು ನಗರ ದಸರಾ ಹಬ್ಬದ ಸಂಭ್ರಮದಲ್ಲಿ ಗಿಜುಗುಡುತ್ತಿತ್ತು. ವಿದ್ಯುತ್ ಅಲಂಕಾರದಿಂದ ಶೃಂಗಾರಗೊಂಡಿದ್ದರಿಂದ ಚಾಮುಂಡೇಶ್ವರಿ ಬೆಟ್ಟ, ಸಂಜೆ ವೇಳೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ನಮ್ಮ ಕಾಲೇಜನ್ನು ಎಲ್ಲಾ ತೋರಿಸಿದೆ. ನಾನು ಈಗ್ಗೆ 2-3 ವರ್ಷಗಳ ಹಿಂದೆ ಇಲ್ಲಿಯೇ ಓದಿ ಈಗ ಅಲ್ಲಿಯೇ ಮೇಷ್ಟರಾಗಿ ಕೆಲಸ ಮಾಡುತ್ತಿರುವುದನ್ನು ಕಣ್ಣಾರೆ ಕಂಡ ಅಪ್ಪ ಖುಷಿಗೊಂಡಿದ್ದ. ಅರಮನೆ, ಚಾಮುಂಡಿ ಬೆಟ್ಟ, ನಮ್ಮ ಕಾಲೇಜು, ಎಲ್ಲ ನೋಡಿದ ಅಪ್ಪ `ನಾನಿನ್ನು ಸತ್ತರೂ ಚಿಂತೆಯಿಲ್ಲ, ನೀನೊಂದು ದಡ ಸೇರಿದೆ’ ಎಂದು ಹೇಳಿ ಪುಳಕಗೊಂಡಿದ್ದ. ಮಾರನೇ ದಿನ ಸಂಜೆ ಕೃಷ್ಣರಾಜ ಸಾಗರ ಅಣೆಕಟ್ಟು ವೀಕ್ಷಣೆಗೆ ಹೋಗುವ ಮಾತಾಡಿದಾಗ ಅವನು ಆಸಕ್ತಿ ತೋರಲಿಲ್ಲ. ಹಾಗಾಗಿ ಅವನನ್ನು ರಾಮನಗರದಲ್ಲಿದ್ದ ಅಕ್ಕನ ಮನೆಗೆ ಬಸ್ಸಿನಲ್ಲಿ ಹತ್ತಿಸಿ ಕಳಿಸಿದೆ.
ದೇಶಾದಾದ್ಯಂತ ತುರ್ತು ಪರಿಸ್ಥಿತಿ, ದೇವರಾಜ ಅರಸರ 20 ಅಂಶದ ಕಾರ್ಯಕ್ರಮಗಳು, ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಜೆಪಿ ಅವರು ಸೇರಿದಂತೆ ವಿರೋಧ ಪಕ್ಷಗಳ ಧುರೀಣರನ್ನು ಬಂಧಿಸಿ ಜೈಲಿನಲ್ಲಿಡುವಂತಾದ ವಿಷಯಗಳ ಚರ್ಚೆ ನಮ್ಮ ಕೆ.ಜಿ.ಕೊಪ್ಪಲ ಮನೆಯಲ್ಲಿ ನಡೆಯುತ್ತಿತ್ತು. ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ವಿದ್ಯಾರ್ಥಿಗಳಿಂದ ಆಗಾಗ ನಡೆಯುತ್ತಿದ್ದ ಮುಷ್ಕರಗಳಾಗಲಿ, ವಿದ್ಯಾರ್ಥಿ ಸಂಘದ ಚುನಾವಣೆಗಳಾಗಲೀ ನಡೆಯದೆ, ಎಲ್ಲರೂ ಬೆದರಿದಂತೆ, ಸ್ವಯಂ ನಿಯಂತ್ರಿತರಾದವರಂತೆ ಕೆಲಸ ಮಾಡುವ ವಾತಾವರಣ, ಶೈಕ್ಷಣಿಕ ಮತ್ತು ಸರ್ಕಾರಿ ಕಛೇರಿಗಳಲ್ಲಿ ಮೂಡಿದಂತೆ ತೋರುತ್ತಿತ್ತು.
ಅಪ್ಪನನ್ನು ಊರಿಗೆ ಕಳಿಸಿ, ನಂತರದ ದಿನಗಳಲ್ಲಿ ಓದು, ತರಗತಿಗಳ ಪಾಠ ಮತ್ತು ಸಮಾಜವಾದಿ ಯುವಜನ ಸಭಾ, ಲೋಹಿಯಾ, ಅಂಬೇಡ್ಕರ್ ಚಿಂತನೆಗಳ ಕಡೆ ವಾಲಿಕೊಂಡಿದ್ದೆ. ಅಪ್ಪನಿಗೆ 80-85 ವರ್ಷಗಳಾಗಿರಬಹುದು. ಆಗಿದ್ದರೂ ಎಂದೂ ಮನೆಯಲ್ಲಿ ಕೂತು ವಿಶ್ರಾಂತಿ ಪಡೆಯುವ ಪರಿಪಾಟ ಅಪ್ಪನಿಗಿರಲಿಲ್ಲ. ಬೆಳಿಗ್ಗೆ ಎದ್ದು ದನಕರುಗಳ ಕೊಟ್ಟಿಗೆಯ ಕಸವನ್ನು ತಿಪ್ಪೆಗೆ ಹಾಕಿ, ಚಾ ಕುಡಿದು ತೋಟಕ್ಕೆ ಹೋದರೆ ಮತ್ತೆ ಬರುವುದು ರಾತ್ರಿಗೆ, ಬಂದು ಬಿಸಿನೀರಿನಲ್ಲಿ ಸ್ನಾನ ಮಾಡಿ ಊಟ ಮಾಡಿದರೆ ಅವನ ದಿನಚರಿ ಮುಗಿಯುತ್ತಿತ್ತು. ಯಾರಾದರೂ ಊರಿನಿಂದಲೋ ಇಲ್ಲ ನಮ್ಮ ಚಿಕ್ಕಪ್ಪಂದಿರಾಗಿದ್ದ ನಾಗಪ್ಪ, ಮಹಾದೇವಪ್ಪ ಮತ್ತು ಭೀಮಪ್ಪ ಇವರುಗಳು ಏನಾದರೂ ಮಾತಾಡೋ ನೆಪದಲ್ಲಿ ಸಂಜೆ ಸೇರಿಕೊಂಡರೆ ಸಾರಾಯಿ ಸಮಾರಾಧನೆ ಆಗಿ ಊಟ ಮಾಡುತ್ತಿದ್ದರು. ಇಲ್ಲ ಊರಲ್ಲಿನ ಲಿಂಗಾಯತ ಸ್ನೇಹಿತರಲ್ಲಿ ವಾರಕ್ಕೋ 15ದಿನಗಳಿಗೊಮ್ಮೆಯೋ ಗೌಪ್ಯವಾಗಿ ನಮ್ಮಲ್ಲಿನ ಕೋಣೆಯೊಂದರಲ್ಲಿ ಕೂತು ಪಾರ್ಟಿ ಮಾಡುತ್ತಿದ್ದರು. ಅವ್ವ ಲೊಟಗುಡುತ್ತಾ ಜೋಳದ ಹಪ್ಪಳವನ್ನೋ ಇಲ್ಲ ಮನೆಯಲ್ಲಿದ್ದ ಮೊಟ್ಟೆಗಳನ್ನು ಹುರಿದು ಅವರ ಪಾರ್ಟಿಗೆ ನೆಂಚಿಗೆ ಮಾಡಿ ಕೊಡುತ್ತಿದ್ದಳು.
ಅಪ್ಪನ ಅಣ್ಣ ರಂಗಪ್ಪಜ್ಜ ಇದ್ದು, ಅವನು ಮದುವೆಯಾಗಿ, ಮಕ್ಕಳು ಮನಿ ಎಂತೆಲ್ಲಾ ಆದ ಮೇಲೆ ಖಾವಿ ಧರಿಸಿ ಸಾಧುವಾಗಿದ್ದ. ಅವನು ಊರ ಹೊರಗಿನ ಗೋಮಾಳದಲ್ಲಿ ನಮ್ಮಜ್ಜಿ ಫಕ್ಕೀರಜ್ಜಿಯನ್ನು ಸಮಾಧಿ ಮಾಡಿದ್ದು. ಅಲ್ಲಿಯೇ ಒಂದು ವಿಶಾಲ ಗುಡಿಸಲು ಕಟ್ಟಿಕೊಂಡು, ದಿನವೂ ಅಜ್ಜಿಯ ಸಮಾಧಿಯನ್ನು ಪೂಜೆ ಮಾಡಿಕೊಂಡು, ನಮ್ಮ ಊರಿನ ಲಿಂಗಾಯತರ ಮನೆಯಿಂದ ಕಂತೆ ಭಿಕ್ಷೆ ಎತ್ತಿ ಅದರಲ್ಲಿಯೇ ಊಟ ಮಾಡಿಕೊಂಡಿದ್ದ. ಕ್ರಮೇಣ ಎಲ್ಲ ಜನರೂ ಸಾಧು ರಂಗಜ್ಜನ ಮಠ ಎಂದು ಗುರುತಿಸುತ್ತಿದ್ದರು. ಊರಿನ ಲಿಂಗಾಯತರು ಮತ್ತು ಇತರೆ ಜಾತಿಯ ಪ್ರಮುಖರೆಲ್ಲ ಶ್ರಾವಣಮಾಸದಲ್ಲಿ ದೇವಿಪುರಾಣವನ್ನೋ, ಭಜನೆಯನ್ನೋ ಮಾಡುತ್ತಾ ಕೊನೆಯಲ್ಲಿ ಕರಿಯ ಕೊಳವೆಯಂತಹ ವುದರಲ್ಲಿ ಸಾಂಬ್ರಾಣಿಯಂತಹದನ್ನು ನಾದಿ ಚಿಲುಮೆಯಲ್ಲಿ ತುಂಬಿ ಒಂದು ತುದಿಯಲ್ಲಿ ಬಟ್ಟೆಯನ್ನು ಸುತ್ತಿ ಎಡಗೈಯಲ್ಲಿ ಒಂದು ವಿಶೇಷ ಸ್ಟೈಲ್‌ನಲ್ಲಿ ಹಿಡಿದು ಜೋರಾಗಿ ದಮ್ಮು ಎಳೆಯುತ್ತಿದ್ದರು. ಬಲಕ್ಕೊ ಎಡಕ್ಕೊ ಕೂತವನೊಬ್ಬನು ಕಡ್ಡಿ ಗೀರಿ ಬೆಂಕಿ ಹಚ್ಚಿದರೆ ಉಸಿರು ಬಿಗಿ ಹಿಡಿದು ಎಳದಾಗ ರೈಲ್ವೆ ಉಗಿ ಬಂಡಿ ಹೊಗೆ ಉಗುಳಿದಂತೆ, ಮೂಗು ಬಾಯಿಯಿಂದ ಪುಂಖಾನುಪುಂಖವಾಗಿ ಹೊಗೆ ಹೊರಬರುತ್ತಿತ್ತು. ಹಾಗೆ ಎಳೆದವನು ಮತ್ತೊಬ್ಬನಿಗೆ ಭಯ ಮಿಶ್ರಿತ ಭಕ್ತಿಯಿಂದ ನಮಸ್ಕರಿಸಿ `ಗುರುವೇ ತಿಪ್ಪೇಶಾ’ ಎಂಬ ಉದ್ಘಾರದೊಂದಿಗೆ ಕೊಡುತ್ತಿದ್ದನು. ಆತನೂ ಸೇದಿ ಭಗವಂತನ ಕೃಪೆ, ದೇವಿಯ ಮಹಾತ್ಮೆ ಎಂದೇನೇನೋ ಮಾತಾಡಿಕೊಳ್ಳುತ್ತಿದ್ದರು. ಈ ಪಾರ್ಟಿಯಲ್ಲಿ ಅಪ್ಪನೂ ಆಗಾಗ ಅಲ್ಲಿ ಸೇರಿಕೊಳ್ಳುತ್ತಿದ್ದನು. ನಾವೆಲ್ಲ ಕೆಲವು ಹುಡುಗರು ನಮ್ಮ ಕೇರಿಯಿಂದ ಪ್ರಸಾದದ ಆಸೆಗಾಗಿ ಅಲ್ಲಿಗೆ ಹೋಗುತ್ತಿದ್ದೆವು. ಏಕೆಂದರೆ ಪ್ರತಿ ಭಜನೆ ಮುಗಿದಾಕ್ಷಣ ಪೂಜೆಗಾಗಿ ಒಡೆದ ತೆಂಗಿನ ಕಾಯಿಯ ಹಸಿ ಕೊಬ್ಬರಿಯ ಚೂರುಗಳು, ಜೊತೆಗೆ ಕತ್ತರಿಸಿದ ಬಾಳೆಯ ಹಣ್ಣು ಮಂಡಕ್ಕಿ ಕಾರ ಎಲ್ಲ ಸೇರಿಸಿ ಎಲ್ಲರಿಗೂ ಹಂಚುತ್ತಿದ್ದರು.
ಮಠದ ರಂಗಪ್ಪಜ್ಜ ನಮಗೆ ಸ್ವಂತ ಅಪ್ಪನ ಅಣ್ಣ, ದೊಡ್ಡಪ್ಪನಾಗಿದ್ದವರು ಎನ್ನುವ ವಿಷಯ ನಮಗಾರಿಗೂ ನಮ್ಮ ಬಾಲ್ಯ ಕಳೆಯುವವರೆಗೂ ಗೊತ್ತೇ ಇರಲಿಲ್ಲ. ನಾನು ಮತ್ತೆ ನಮ್ಮ ಕೇರಿಯ ಕಡೆಮನೆ ತಿಪ್ಪಣ್ಣ, ಕರಿಬಸಪ್ಪ, ಕುಬೇರ ಜೋಗಪ್ಪ ತುಂಗಣ್ಣ ಸಂಜೆ 4-5 ಗಂಟೆಯ ಸಮಯಕ್ಕೆ ಮಠದ ಕಡೆಗೆ ಹೋಗಿ ಅಲ್ಲಿಯೇ ಇದ್ದ ಬಾವಿಯಿಂದ ನೀರು ಸೇದಿ ಮಠದಲ್ಲಿನ ಗಿಡಬಳ್ಳಿಗಳಿಗೆ ಹೊಯ್ಯುತ್ತಿದ್ದವು. ನೀರು ಸೇದಿ ಹಾಕಿದ ನಾಟಕ ಮುಗಿದ ಮೇಲೆ ಎಲ್ಲರಿಗೂ ಅಲ್ಲಿದ್ದ ಮಣ್ಣಿನ ಮುಚ್ಚಳಗಳಲ್ಲಿ ಊರಲ್ಲಿನ ಕಂತೆ ಭಿಕ್ಷೆಯಲ್ಲಿ ತಂದ ರೊಟ್ಟಿ ಮತ್ತು ಎಲ್ಲರ ಮನೆಯ ಸಾರನ್ನು ಒಂದೇ ಮಡಕೆಯಲ್ಲಿ ಕುದಿಸಿಟ್ಟದ್ದನ್ನು ಬಡಿಸುತ್ತಿದ್ದರು. ಅದನ್ನೆಲ್ಲ ನಾವು ತುಂಬಾ ಖುಷಿಯಿಂದ ಉಣ್ಣುತ್ತಿದ್ದೆವು. ನಂತರ ಎಲ್ಲ ಮಣ್ಣಿನ ಮುಚ್ಚಳದಂತಿದ್ದ ತಟ್ಟೆಯನ್ನು ತೊಳೆದಿಟ್ಟು ಅವರ ಕಾಲಿಗೆ ನಮಸ್ಕರಿಸಿ ಮನೆಗೆ ಹೋಗುತ್ತಿದ್ದೆವು. ನಮ್ಮಲ್ಲೆಲ್ಲ ದೊಡ್ಡವನಾಗಿದ್ದ ಕಡೆಮನೆ ತಿಪ್ಪಣ್ಣನೇ ನಮ್ಮ ಎಲ್ಲರನ್ನೂ ಕೂಡಿಸಿ ಕರೆದುಕೊಂಡು ಹೋಗುತ್ತಿದ್ದ. ಎಲ್ಲರಿಗೂ ಬೇರೆ ಬೇರೆ ನೀಡಿದ ಮೇಲೆ ಮಠದೊಳಗೆ ಅಜ್ಜ ಹೋಗುತ್ತಿದ್ದರು. ನಮಗೆ ನೀಡಿದ ರೊಟ್ಟಿಯಲ್ಲಿ ಕಡೆಮನೆ ತಿಪ್ಪಣ್ಣನಿಗೆ ಹೆಚ್ಚುವರಿಯಾಗಿ ತನಗೆ ಕೊಡುವುದರ ಬಗ್ಗೆ ಬಂದವರಿಗೆಲ್ಲ ಮೊದಲೇ ಕೊಡುವಂತೆ ತಾಕೀತು ಮಾಡಿರುತ್ತಿದ್ದ. ಕೆಲವು ಸಮಯ ತಟ್ಟೆಗಳು ಕಡಿಮೆ ಇದ್ದುದರಿಂದ ಒಂದೇ ತಟ್ಟೆಯಲ್ಲಿ ಇಬ್ಬರು ಅಥವಾ ಮೂವರು ಕೂತು ಉಣ್ಣುವುದಾದರೆ, ನಮಗೆ ಸಾಕೆಂದು ಮೊದಲೇ ಎದ್ದು ಅವನಿಗೆ ಹೆಚ್ಚಿನ ರೊಟ್ಟಿ ಉಣ್ಣಲು ಅವಕಾಶ ಮಾಡಿಕೊಡಬೇಕಾಗಿತ್ತು. ಹಾಗೆ ಮಾಡದಿದ್ದರೆ ನಾಳೆ ಮತ್ತೆ ನಿಮ್ಮನ್ನು ಇಲ್ಲಿಗೆ ಕರೆತರುವುದಿಲ್ಲ ಎನ್ನೋ ಧಮಕಿ ಹಾಕುತ್ತಿದ್ದ. ಅವನು ನಮ್ಮೆಲ್ಲರಿಗಿಂತಲೂ 2-3 ವರ್ಷಕ್ಕೂ ಹಿರಿಯವನು, ನಮ್ಮ ಚಿಕ್ಕಪ್ಪ ಭೀಮಪ್ಪನ ಮಗನಾಗಿದ್ದ ಅವರಿಗೆ ಮನೆಯಲ್ಲಿ ಆರೇಳು ಹೆಣ್ಣು ಮಕ್ಕಳ ನಂತರ ಹುಟ್ಟಿದ ಕಾರಣ ಇವನಿಗೆ ಯಾವ ಕೆಲಸವನ್ನೂ ಹೇಳುತ್ತಿರಲಿಲ್ಲ. ವಿಶೇಷವಾಗಿ ಬುಗುರಿ, ಚಿನ್ನಿ ದಾಂಡು, ಕೀಳಾಪಟ್ಟಿ ಆಟಗಳಲ್ಲಿ ನಮಗೆ ಗುರುವಾಗಿದ್ದವನು. ಆದರೆ ಊರ ಎಲ್ಲರ ದೃಷ್ಟಿಯಲ್ಲಿ ದಂಡಪಿಂಡ ಎಂಬಂತೆ ಅವನನ್ನು ಅವರ ಮನೆಯವರೂ ಸೇರಿದಂತೆ ಊರಿನಲ್ಲಿ ಜನ ಪರಿಗಣಿಸಿದ್ದರು. ಆದರೀಗ ಒಂದು ದಂಡನ್ನೇ ಕಟ್ಟುವಷ್ಟು ಮಕ್ಕಳನ್ನು, ಮೊಮ್ಮಕ್ಕಳನ್ನು ಪಡೆದು ದುಡಿಮೆ ಮಾಡಿಕೊಂಡು ಹಾಯಾಗಿದ್ದಾನೆ. ಊರಲ್ಲಿರುವಾಗಲೆಲ್ಲ ನನ್ನನ್ನು ಸೆಳೆದುಕೊಂಡಿದ್ದ ಅವನು ನಂತರದ ದಿನಗಳಲ್ಲಿ ಸಣ್ಣ ವ್ಯತ್ಯಾಸದಿಂದ ದೂರವಾಗಿದ್ದಾನೆ. ಈಗ ಮತ್ತೆ ಕರೆದು ಮಾತಾಡಿಸಬೇಕೆಂದು ನೆನಪಾದಾಗ ಅನ್ನಿಸುತ್ತಿದೆ.
ಅಜ್ಜನ ಗುಡಿಸಲು ಅರ್ಥಾತ್ ಮಠ ಸುಮಾರು ಅರ್ಧ ಎಕರೆಯಲ್ಲಿ ಸುತ್ತ ಬೇಲಿಯ ಮಧ್ಯದಲ್ಲಿನ ಅಜ್ಜಿ ಸಮಾದಿಗೆ ಮತ್ತು ಅಜ್ಜಯ್ಯ ಇರುವಿಕೆಗೆ ತೆಂಗಿನ ಗರಿ ಮತ್ತು ಭತ್ತದ ಹುಲ್ಲಿನ ಮುಚ್ಚಳಿಕೆಯಿಂದ ಗಾಳಿ ಬಿಸಿಲು ಮಳೆಗಳಿಂದ ರಕ್ಷಣೆ ಪಡೆದಿತ್ತು. ಆಗಾಗ ಅಜ್ಜಯ್ಯ ಮಠ ಕಟ್ಟುತ್ತೇನೆಂದು ಹಣ ಸಂಗ್ರಹದಲ್ಲಿ ತೊಡಗಿದ್ದರೆಂದು, ಅಪ್ಪ ಮನೆಯಲ್ಲಿ ಮಾತಾಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ದೊಡ್ಡಪ್ಪ ಮನೆಗೆ ಬಂದರೆ ಅವರಿಗೆ ವಿಶೇಷವಾಗಿ ಪಾದಪೂಜೆ ಮಾಡಿ ಆ ನೀರನ್ನೆಲ್ಲ ಮನೆಯ ಎಲ್ಲ ದಿಕ್ಕುಗಳಿಗೂ ಪ್ರೋಕ್ಷಿಸುತ್ತಿದ್ದರು. ಹಾಗೆ ನಮ್ಮಲ್ಲಿನ ಇತರೆ ನಾಲ್ಕು ಚಲವಾದಿ ಮನೆತನದವರೂ ಕರೆದು ಪಾದಪೂಜೆ ಮಾಡುತ್ತಿದ್ದರು. ನಮ್ಮೂರ ಹತ್ತಿರದ ಕಡ್ಲಬಾಳ ಊರಿನ ತೇರಿಗೆ ಮತ್ತು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ರಥೋತ್ಸವಕ್ಕೆ ಹೋಗಿ ವಾರಗಟ್ಟಲೇ ಅಲ್ಲಿದ್ದು, ಅನೇಕ ಇತರೆ ಸಾಧು ಸಂತರ ಸಂಗಡದಲ್ಲಿ ಭಜನೆ ಮತ್ತು ಗಾಂಜಾ ಸೇವನೆ ಮಾಡುತ್ತಿದ್ದುದರ ಬಗ್ಗೆ ಅವರ ಜೊತೆ ಹೋಗಿ ಬಂದವರು ಆಗಾಗ ಮಾತಾಡಿಕೊಳ್ಳುತ್ತಿದ್ದರು.
ಈ ರೀತಿಯಲ್ಲಿ ಇದ್ದ ದೊಡ್ಡಪ್ಪ ನಾನು ಸಾಗರದ ಹೈಸ್ಕೂಲಿನಲ್ಲಿ ಓದುವ ಸಮಯದಲ್ಲಿ ಒಂದೆರಡು ದಿನಗಳ ಅಸ್ವಸ್ಥತೆಯಿಂದ ಹರಿಹರದ ಹತ್ತಿರವಿರುವ ಗುತ್ತೂರಿನ ಗುರು ಬಸಜ್ಜನ ಮಠದಲ್ಲಿ ತೀರಿಹೋಗಿದ್ದರು. ಅಲ್ಲಿಯ ಮಠದಲ್ಲಿಯೇ ಅವರ ಸಮಾಧಿ ಮಾಡಿದ್ದಾರೆ. ಅದೇ ಮಠದಲ್ಲಿ ನನ್ನ ಗುರುಗಳಾಗಿದ್ದ
ಪ್ರೊ. ಬಿ. ಕೃಷ್ಣಪ್ಪನವರು ಮತ್ತವರ ತಂಗಿ ಹಾಲಮ್ಮ ತಮ್ಮ ಬಾಲ್ಯದ ದಿನಗಳಲ್ಲಿ ಗಿಡಗಳಿಗೆ ನೀರು ಹಾಕುವುದು, ಹೂ ಕೀಳುವ ಸೇವೆ ಮಾಡುತ್ತಿದ್ದರು ಎಂಬುದನ್ನು ಕೃಷ್ಣಪ್ಪನವರ ತಂಗಿ ಹಾಲಜ್ಜಿ ಆಗಾಗ ನಮ್ಮೂರಿಗೆ ಬಂದಾಗ ಜ್ಞಾಪಿಸಿಕೊಳ್ಳುತ್ತಿದ್ದರು. ಅಪ್ಪನ ಅಣ್ಣ ಈ ರೀತಿಯ ಜೀವನ ಸಾಗಿಸುತ್ತಾ ಕಾಲವಾದರೆ ಅಪ್ಪ ಒಂದಲ್ಲವೆಂದರೂ ಎರಡು ಮದುವೆಯಾಗಿ, ಮ್ಯಾಳ ಮಾಡುತ್ತಾ ಅವರೆಲ್ಲರಿಗೂ ನಾಯಕನಾಗಿ, ಮಾಡಿದ ಹೊಲಮನಿ ಕೆಲಸಗಳಲ್ಲಿ ಸೈ ಎನಿಸಿಕೊಂಡು, ನಾನು ಎಂ.ಎ. ಮಾಡಿ ಅಧ್ಯಾಪಕನಾಗಿರುವವರೆಗೆ ಬದುಕಿದ್ದೇ ಒಂದು ಪವಾಡ. ಸದಾ ಕೆಲಸದಲ್ಲಿ ತೊಡಗಿರುತ್ತಿದ್ದ ಅಪ್ಪ ಸಣ್ಣಪುಟ್ಟ ಖಾಯಿಲೆಗಳಿಗೆ ಜಗ್ಗುತ್ತಿರಲಿಲ್ಲ ಯವ್ವನದ ಕಾಲಘಟ್ಟದಲ್ಲಿ ಎಲೆ ಅಡಿಕೆ ತಂಬಾಕು ಬೀಡಿ ಸೇದುತ್ತಿದ್ದ ಅಪ್ಪ ನಂತರದ ದಿನಗಳಲ್ಲಿ ಕೆಮ್ಮು ದಮ್ಮುಗಳ ಕಾಟದಿಂದ ಅವನ್ನೆಲ್ಲ ಬಿಟ್ಟು ಬಿಟ್ಟಿದ್ದನು. ನಾನು ಕೆಲಸಕ್ಕೆ ಸೇರಿ ಊರಿಗೆ ಹೋದಾಗ ಅವ್ವನಿಗೆ, ಓಬಜ್ಜನಿಗೆ, ಅಪ್ಪನಿಗೆ ವಿಶೇಷವಾಗಿ ಸಣ್ಣ ಮೊತ್ತದ ಹಣ ಕೊಡಲು ಹೋದಾಗಲೆಲ್ಲ `ನನಗ್ಯಾಕೆ ಕೊಡುತ್ತೀ, ನಿಮ್ಮವ್ವನಿಗೇ ಕೊಡು’ ಎಂದು ಹೇಳಿ ಸುಮ್ಮನಾಗುತ್ತಿದ್ದ. ಇಂತಹ ಅಪ್ಪನನ್ನು ನಾನು ಅಧ್ಯಾಪಕನಾಗಿ ಕೆಲಸಕ್ಕೆ ಸೇರಿದ ಒಂದು ವರ್ಷ ತುಂಬಿದ ದಿನ (4.12.1975)ರಲ್ಲಿ ನಾನು ಎರಡನೇ ಬಿ.ಎ. ಕ್ಲಾಸ್ ರೂಮ್‌ನಲ್ಲಿ ಪಾಠ ಮಾಡುವಾಗ ತಂತಿ ಸಂದೇಶದಲ್ಲಿ ಅಪ್ಪ ತೀರಿದ ಸುದ್ದಿ ಹೊತ್ತು ತಂದಿತ್ತು. ಅಂದಿಗೆ ಸಂಬಳ ಬಂದು 4 ದಿನಗಳಾಗಿದ್ದರೂ ಎಲ್ಲಾ ಬಟವಾಡೆ ಮಾಡಿ ನನ್ನಲ್ಲಿ 50ರೂಗಳು ಮಾತ್ರ ಜೇಬಿನಲ್ಲಿದ್ದವು. ನೇರ ರಮಾವಿಲಾಸ್ ರಸ್ತೆಯಲ್ಲಿದ್ದ ಮಯೂರ ಪ್ರಿಂರ‍್ಸ್ನಲ್ಲಿಗೆ ಹೋಗಿ ಪಿ. ಮಲ್ಲೇಶ್ ಅವರಿಂದ 100 ರೂಗಳ ಸಾಲ ಪಡೆದು ನಾನು ಮತ್ತು ನನ್ನ ಕಾಲೇಜಿನಲ್ಲಿಯೇ ಓದುತ್ತಿದ್ದ ನಮ್ಮೂರಿನ ಹುಡುಗ ಮಾಂತೇಶಿಯನ್ನು ಕರೆದುಕೊಂಡು ರಾತ್ರಿಯ ಬಸ್ ಹತ್ತಿ ಬೆಳಗಿನ ಜಾವಕ್ಕೆ ಊರಿಗೆ ಬಂದು ಸೇರಿದೆ. ಅಪ್ಪನ ಸೋತ ಮುಖನೋಡಿ ನಾನು ತೀವ್ರ ಮೌನಕ್ಕೆ ಜಾರಿದೆ. ಎಂದೂ ಏನಲೇ ಎಂದು ಗದರಿಸದೆ ತನ್ನೆಲ್ಲ ಶಕ್ತಿ ಮೀರಿದ ದುಡಿಮೆಯಿಂದ, ಪ್ರೀತಿಯಿಂದ ನಮ್ಮನ್ನು ಸಾಕಿದ ಅಪ್ಪ, ಅವನ ಜೀವನದ ಹೋರಾಟಕ್ಕೆ ಅಂತ್ಯ ಹಾಡಿದ್ದ. ನಮ್ಮೆಲ್ಲರನ್ನು ತಿದ್ದಿ ಬೆಳೆಸಿ ಬದುಕಲು ನಮಗೆ ಅನುವು ಮಾಡಿ ಇಹಲೋಕದ ವ್ಯಾಪಾರ ಮುಗಿಸಿದ್ದ ಅಪ್ಪನ ನೆನಪು ನನ್ನ ಮನಸ್ಸಿನಾಳದಲ್ಲಿ ದಿನವೂ ಸ್ಫೂರ್ತಿಯಾಗಿ, ಸಾಮಾನ್ಯ ನ್ಯಾಯದ ದೊಂದಿಯಾಗಿ ಅನುರಣಿಸುತ್ತಿರುತ್ತಾನೆ.
ನಾನು ಕೆ.ಜಿ. ಕೊಪ್ಪಲಿನ ಮನೆಯಿಂದ ಮಹಾರಾಜ ಕಾಲೇಜಿಗೆ ಹೋಗಿ ಬರುತ್ತಿದ್ದೆ. ಬಿಡುವಿನ ವೇಳೆಯಲ್ಲಿ ನಾನು ಮಹೇಶ ಇತರೆ ಸ್ನೇಹಿತರು ಜೆಪಿ ಚಳುವಳಿ ನವನಿರ್ಮಾಣ ಕ್ರಾಂತಿ, ಜಾತಿ ವಿನಾಶ ಸಮ್ಮೇಳನ, ಬೂಸಾ ಚಳುವಳಿಗಳಲ್ಲಿ ಭಾಗವಹಿಸಿದ್ದೆವು. ಈ ಎಲ್ಲ ಸಂಘಟನೆಗಳ ಮೂಲ ಹೋರಾಟಗಾರರು ಮೈಸೂರಿನಲ್ಲಿದ್ದ ಎಂ.ಡಿ. ನಂಜುಂಡಸ್ವಾಮಿ, ಪಿ. ಮಲ್ಲೇಶ್, ಕೆ. ರಾಮದಾಸ್, ಮಾದೇವ, ಭಕ್ತ, ರಾಜಶೇಖರ ಕೋಟಿ, ರಾಮದೇವ ರಾಕೆ, ನಂಜುಂಡೇ ಗೌಡ, ಗೋವಿಂದಯ್ಯ, ಶಂಕರಲಿಂಗಪ್ಪ, ಗೊಟ್ಟಿಗೆರೆ ಶಿವರಾಜು, ಇಂದೂಧರ ಹೊನ್ನಾಪುರ, ದೇವನೂರ ಶಿವಮಲ್ಲು, ವಿಶ್ವವಿದ್ಯಾಲಯದ ಗಂಗೋತ್ರಿಯಿಂದ ಪ್ರೊ. ರಾಮಲಿಂಗಂ, ಕೆ.ಎಂ. ಜಯರಾಮಯ್ಯ, ಹೊರೆಯಾಲ ದೊರೆಸ್ವಾಮಿ, ಚಂದ್ರಶೇಖರ ತಾಳ್ಯ, ಎಲ್ಲರೂ ಇದೇ ಪೂರ್ಣಾವಧಿ ಕೆಲಸವೆಂಬಂತೆ ತೊಡಗಿಸಿಕೊಂಡಿದ್ದರು. ಹಾಗೆಯೇ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇಂತಹ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ `ಮ್ಯಾನ್ ಕೈಂಡ್’, `ಬಂಡಾಯ’, `ಶೋಷಿತ’, `ನರ’, `ಪಂಚಮ’ ಎಂಬ ಅಕಾಲಿಕ ಪತ್ರಿಕೆಗಳನ್ನು ಅಸಾಧ್ಯ ಹಣಕಾಸಿನ ತೊಂದರೆಗಳ ನಡುವೆಯೂ ಹೊರ ತರುತ್ತಿದ್ದರು.
ಆ ದಿನಗಳಲ್ಲಿ ಇಂತಹದೇ ಪತ್ರಿಕೆಯಲ್ಲಿ ನಮ್ಮೂರಿನಲ್ಲಿ ನಡೆದ ಹಿಂದುಳಿದ ಜಾತಿಯ ಹುಡುಗಿಯೊಬ್ಬಳನ್ನು ಲಿಂಗಾಯತರ ಹುಡುಗನೊಬ್ಬ ಕೆಣಕಿದ ಬಗ್ಗೆ ನಾನು ಊರಿಗೆ ಹೋದಾಗ ತಿಳಿಯಿತು. ಈ ಕೃತ್ಯ ಎಸಗಿದವನನ್ನು ಯಾರೂ ವಿಚಾರಿಸುವಂತಿರಲಿಲ್ಲ. ಹುಡುಗಿಯ ಕಡೆಯವರು ಯಾರೂ ಅದನ್ನು ಪ್ರಶ್ನಿಸಲೂ ಇಲ್ಲ. ಇದೆಲ್ಲ ಗೊತ್ತಾದ ನಾನು ನರ ಬಂಡಾಯದ ಪತ್ರಿಕೆಗೆ ಬರೆದು ಪ್ರಕಟಿಸಿದ್ದೆ. ಆ ಪ್ರತಿಗಳನ್ನು ಮಾಂತೇಶಿ ಊರಿಗೆ ತೆಗೆದುಕೊಂಡು ಹೋಗಿ ಊರಲ್ಲೆಲ್ಲಾ ಹಂಚಿದನು. ವಿಷಯ ತಿಳಿದ ಊರಿನ ಪ್ರಮುಖರು, ಈ ರುದ್ರಪ್ಪ ಊರ ಮಾನ ಹರಾಜು ಹಾಕಿದ ಎಂದೆಲ್ಲ ಕೂಗಾಡಿದ್ದರು.
`ಅವನು ಊರಿಗೆ ಬರಲಿ ವಿಚಾರಿಸುತ್ತೇವೆ’ ಎಂದೆಲ್ಲಾ ಕೂಗಾಡಿದರು. ನಾನು ತಿಂಗಳೊಪ್ಪತ್ತಿನಲ್ಲಿ ಊರಿಗೆ ಹೋದಾಗ ಯಾರೂ ಆ ಬಗ್ಗೆ ಮಾತಾಡಲಿಲ್ಲ. ಮುಖ್ಯ ಕಾರಣ ಬರೆದುದೆಲ್ಲ ನಿಜವಾದ ಘಟನೆಯಾಗಿತ್ತು. ಮತ್ತೆ ಹೆಚ್ಚು ಕೆದಕಿದರೆ ತಮಗೆ ಇದು ಅವಮಾನದ ಘಟನೆಯ ಮರು ಪ್ರಸ್ತಾಪವಾಗಿ ವಿಪರೀತಕ್ಕೆ ಹೋಗಬಹುದೆಂದು ಸುಮ್ಮನಾಗಿದ್ದರು. ಹೀಗೆ ನಾನು ಮೈಸೂರಲ್ಲಿದ್ದಾಗ ಊರ ಘಟನೆಗಳಿಗೆ ಸ್ಪಂದಿಸುತ್ತಾ ಇರುವುದು ಮೈಸೂರಿನಲ್ಲಿದ್ದ ಪ್ರಗತಿಪರ ಸಂಘಟನೆಗಳ ಮತ್ತು ವಿಚಾರವಂತರ ಒಡನಾಟವೇ ಅದಕ್ಕೆ ಕಾರಣವಾಗಿತ್ತು ಎಂಬುದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಮುಂದುವರಿಯುವುದು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243



