ದಿನದ ಸುದ್ದಿ
ಪೂನಾ ಒಪ್ಪಂದಕ್ಕೆ 92 ವರ್ಷ
- ಮಲ್ಕುಂಡಿ ಮಹದೇವ ಸ್ವಾಮಿ
“ಅಂಬೇಡ್ಕರ್ ಜೀ ನಮ್ಮ ತಂದೆ ‘ಮುಳುಗುತ್ತಿದ್ದಾರೆ’ ಅವರ ಪ್ರಾಣ ಉಳಿಸಿ” ದೇವದಾಸ್ ಗಾಂಧಿ.
“ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ” ಡಾ. ಅಂಬೇಡ್ಕರ್.
ಅಂದು ಅಕೋಲದಲ್ಲಿ ಗಾಂಧಿಜೀ ತಂಗಿದ್ದರು. ಅಲ್ಲಿಗೆ ಕೆಲವು ಅಂಬೇಡ್ಕರ್ ಅನುಯಾಯಿಗಳು ಬಂದು ಗಾಂಧಿಯವರನ್ನು ಭೇಟಿಯಾಗಿ, ಕೆಲವು ಪ್ರಶ್ನೆಗಳನ್ನು ಕೇಳಿದರು. “ಗಾಂಧೀಜಿಯವರೇ, ಕೆಲವರು ತಿಲಕರನ್ನು ದೇವರೆಂದು ಪೂಜಿಸುವಂತೆ, ಅಂಬೇಡ್ಕರರನ್ನು ದೇವರೆಂದು ಪೂಜಿಸಬಹುದೇ….? ಗಾಂಧೀಜಿಯವರು ಉತ್ತರಿಸುತ್ತಾ, ಪೂಜಿಸಬಹುದು. ಪೂಜಿಸುವವರಿಗೆ ಈ ಹಕ್ಕಿದೆ. ಅಂಬೇಡ್ಕರರನ್ನು ನಾನು ಮೆಚ್ಚುತ್ತೇನೆ. ನಾನು ಅವರ ದೃಷ್ಟಿಕೋನಗಳಿಂದ ಭಿನ್ನವಾಗಿದ್ದೇನೆ ಆದರೆ ಅವರು ಧೈರ್ಯಶಾಲಿ ಎಂದು ಒಪ್ಪಿಕೊಳ್ಳುತ್ತೇನೆ. ಧೈರ್ಯಶಾಲಿ ಪುರುಷ ಕೂಡ ತಪ್ಪು ಮಾಡುತ್ತಾನೆ. ನಾನು ನನ್ನನ್ನು ಧೈರ್ಯಶಾಲಿ ಎಂದು ಸ್ವತಹ ನಿರ್ಧರಿಸಿಕೊಳ್ಳುತ್ತೇನೆ ಮತ್ತು ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ” ಎಂದರು.
ತಿಲಕರನ್ನು ದೇವರೆಂದು ಭಾವಿಸಿದ್ದ ಗಾಂಧೀಜಿಗೆ ಪ್ರಶ್ನಿಸಿದ ಅಂಬೇಡ್ಕರ್ ಅನುಯಾಯಿಗಳು ಪೂನಾ ಒಪಂದದಿಂದಾದ ಅನ್ಯಾಯದ ಸಿಟ್ಟನ್ನು ತೋಡಿಕೊಂಡರು. ಮತ್ತು ಈ ಒಪ್ಪಂದ ಇನ್ನು ಮುಂದಿನ ಪೀಳಿಗೆಯೂ ಪ್ರಶ್ನಿಸುವ ಅಧಿಕಾರವನ್ನು ಶಾಶ್ವತವಾಗಿ ಕಿತ್ತುಕೊಂಡಿತು ಎಂಬ ಮತ್ತೊಂದು ಸಿಟ್ಟುಕೂಡ ಅಲ್ಲಡಗಿತ್ತು. ನೀವು ಪ್ರಶ್ನಿಸುವವರಾಗಿದ್ದರೇ ಈ ಪ್ರಸಂಗದ ವಿಶ್ಲೇಷಣೆಯನ್ನು ನಿಮಗೇ ಬಿಡುತ್ತೇನೆ.
ರಾಮ್ಸೆ ಮೆಕ್ ಡೊನಾಲ್ಡ್ ರವರಿಗೆ ಆಗಸ್ಟ್ 18 ಗಾಂಧಿಜೀ ಪತ್ರ ಬರೆದು ಬ್ರಿಟಿಷ್ ರ ಕೋಮುವಾರು ತೀರ್ಪನ್ನು ಕಟುವಾಗಿ ಟೀಕಿಸಿದ್ದರು. ಮತ್ತು ತಮ್ಮ ಅಸಮ್ಮತಿಯನ್ನು ತೋರಿದರು. ಸೆಪ್ಟೆಂಬರ್ 9 ಬ್ರಿಟಿಷರು ಗಾಂಧೀಜಿ ಯವರ ನಿರ್ಧಾರವನ್ನು ನಿರಾಕರಿಸಿದ ಕಾರಣ. ಆ ಸೋಮವಾರ ಎಲ್ಲಾ ನಾಯಕರು ಜಮಾಯಿಸಿ ಅಂಬೇಡ್ಕರರನ್ನು ಕೇಳಿದಾಗ: ” ಗಾಂಧೀಜಿ ಅವರಿಗಾಗಿ ಇಂತಹ ಮಹಾತ್ಯಾಗ ಮಾಡಲಾರೆ ” ಎಂದರು. ಮರುದಿನ ಮಹಾತ್ಮಗಾಂಧಿಜೀಯವರು ಆ ಮಾವಿನ ತೋಪಿನಲ್ಲಿ ಉಪವಾಸಕ್ಕೆ ಕುಳಿತರು.
ಉಪವಾಸದ 3 ದಿನಗಳ ನಂತರ ಅಂಬೇಡ್ಕರ್ ಅವರಿಗೆ ಎಲ್ಲಾ ಕಡೆಯಿಂದ ಬೆದರಿಕೆ ಕರೆಗಳು ಬರಲು ಆರಂಭಿಸಿದವು. ಕೆಲವು ಗೂಂಡಾಗಳು ನೇರವಾಗಿ ಅಂಬೇಡ್ಕರರನ್ನು ಪ್ರಶ್ನಿಸಿದ್ದರು. ಬಹುತೇಕ ಎಲ್ಲ ಪತ್ರಿಕೆಗಳು ಗಾಂಧಿಯವರನ್ನು ಬೆಂಬಲಿಸುತ್ತಿವೆ ಮತ್ತು ಅಂಬೇಡ್ಕರರನ್ನು ವಿರೋಧಿಸುತ್ತಿವೆ. ಅವರ ರಕ್ತದ ಒತ್ತಡ ಹೆಚ್ಚುತ್ತಿದೆ.
ಉದ್ರಿಕ್ತತೆ ಹೆಚ್ಚಾಯಿತು, ಅಂಬೇಡ್ಕರ್ ಖಳನಾಯಕ, ದೇಶದ್ರೋಹಿ, ಭಾರತವನ್ನು ಛಿದ್ರಗೊಳಿಸಲು ಬಯಸಿದ ವ್ಯಕ್ತಿ, ಗಾಂಧಿಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ ವ್ಯಕ್ತಿ. ಟ್ಯಾಗೋರ್, ನೆಹರು ಮತ್ತು ಸಿ. ರಾಜಗೋಪಾಲಾಚಾರಿ ಸೇರಿದಂತೆ ಗರಂ ದಾಲ್ (ಉಗ್ರಗಾಮಿಗಳು) ಹಾಗೂ ನರಮ್ ದಾಲ್ (ಮಿತವಾದಿಗಳು) ರಾಜಕೀಯ ಭಾರೀ ತೂಕ ಗಾಂಧಿಯ ಕಡೆ ತೂಗಿತು. ಆದರೂ ಅಂಬೇಡ್ಕರ್ ರದು ಅದೇಮಾತು.
“ನಾನು ನನ್ನ ಆದ್ಯ ಕರ್ತವ್ಯಕ್ಕೆ ದ್ರೋಹ ಬಗೆಯಲಾರೆ ಮತ್ತು ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ನ್ಯಾಯಯುತ ಮತ್ತು ನ್ಯಾಯ ಸಮ್ಮತವಾದ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ” ಎಂಬದು. ಅಂಬೇಡ್ಕರ್ ರವರ ಈ ಕಾಠಿಣ್ಯ, ಗಾಂಧಿಯವರ ಸ್ವಯಂ ಪ್ರೇರಿತ ಹಠ. ಭಾರತವನ್ನು ಅಂದು ನಿತ್ರಾಣಗೊಳಿಸಿತ್ತು.
ಮಹಾದೇವ ದೇಸಾಯಿ ಹೇಳುವಂತೆ ಸೆಪ್ಟಂಬರ್ 22 ಮಧ್ಯಾಹ್ನ ಅಂಬೇಡ್ಕರ್ ಗಾಂಧಿಯಜೀಯವರನ್ನು ಭೇಟಿಯಾಗಿ, “ನಾನು ನನ್ನ ಸಮುದಾಯಕ್ಕೆ ರಾಜಕೀಯ ಅಧಿಕಾರವನ್ನು ಬಯಸುತ್ತೇನೆ ಅದು ನಮ್ಮ ಉಳಿವಿಗೆ ಅನಿವಾರ್ಯವಾಗಿದೆ” ಉಪವಾಸವನ್ನು ಕೈ ಬಿಡಿ” ಎಂದರು. ಚರ್ಚೆ ಕಗ್ಗಂಟಾಗಿ ಸೆಪ್ಟೆಂಬರ್ 23 ಕ್ಕೆ ಮಾತುಕತೆ ಮುಂದುವರಿಯಿತು. ಮತ್ತೇ 24 ಕ್ಕೆ. ಅಂದು ಸಂಜೆ 5 ಗಂಟೆಗೆ 23 ಜನರು ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ವಿಶ್ವಾಸ ಅರ್ಹತೆಗಾಗಿ ರಾಜಾಜಿ ತಮ್ಮ ಒಂದು “ಫೌಂಟೆನ್ ಪೆನ್ನ” ನ್ನು ಅಂಬೇಡ್ಕರ್ ಅವರ ಜತೆ ವಿನಿಮಯ ಮಾಡಿಕೊಂಡಿದ್ದರು. ಇದು ಹೊರಗಿನ ಮರ್ಮಾಘಾತ. ಈ ಒಳಗಿನ ಮರ್ಮಾಘಾತದಬಗ್ಗೆ ಹೇಳಲೇ ಬೇಕು.
ಈ ದಕ್ಷಿಣ ಭಾರತದ ಅಸ್ಪೃಶ್ಯ ರಾಜಕಾರಣಿ
“ಎ ಸಿ ರಾಜನ್” ಅವರು ಅಂಬೇಡ್ಕರ್ ಅವರು ದುಂಡುಮೇಜಿನ ಸಭೆಯಲ್ಲಿ ಚರ್ಚಿಸಲು ಅಸ್ಪೃಶ್ಯರ ಪ್ರತಿನಿಧಿ ಎನ್ನುವುದನ್ನು ನಿರಾಕರಿಸಿದ್ದರು. ಮತ್ತು ಬಾಪೂ ರವರ ಕಡೆ ಕೈ ಎತ್ತಿದ್ದರು. ಪೂನಾ ಒಪ್ಪಂದದ ಬಿಕ್ಕಟ್ಟಿನ ಸಮಯದಲ್ಲಿ ಅಂಬೇಡ್ಕರವರನ್ನು ಪ್ರತ್ಯೇಕೀಕರಿಸಿ ಚರ್ಚೆಮಾಡಲು ಸಿದ್ಧಗೊಂಡಿದ್ದರು.
“ಪಲ್ ವಂಕರ್ ಬಾಲೂ” ದೇಶದ ಮೊದಲ ದಲಿತ ಕ್ರಿಕೆಟಿಗ ಕೂಡ ಅಂಬೇಡ್ಕರವರಿಗೆ 24ವರ್ಷ ದೊಡ್ಡವರಾಗಿದ್ದು ಅಂಬೇಡ್ಕರರ ಸ್ನೇಹ ಜೀವಿಯಾಗಿದ್ದರು. ಆದರೆ ಈ ಸಂದರ್ಭದಲ್ಲಿ ಗಾಂಧೀಜಿಯವರ ಪಾಳಯದಲ್ಲಿ ಪಳಗಿದರು. ಅವರು ಗಾಂಧಿಜೀಯವರ ಅನುಯಾಯಿಗಳಾಗಿ, ಅಂಬೇಡ್ಕರವರ ನಿಲುವುಗಳನ್ನು ಹೆಜ್ಜೆಹೆಜ್ಜೆಗೂ ನಿರಾಕರಿಸಿದರು. ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ವಾಗುವ ವಿಚಾರದಲ್ಲಿಯೂ ಕಠೋರ ವಿರೋಧವನ್ನು ವ್ಯಕ್ತಪಡಿಸಿದ್ದರು. ಮುಂದೆ ಅಂಬೇಡ್ಕರ್ ಅವರ ವಿರುದ್ಧ ಚುನಾವಣೆಗೆ ನಿಂತು ಸೋತದ್ದು ಬೇರೆ ವಿಚಾರ ಆದರೆ ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದದ್ದು ಒಂದು ಐತಿಹಾಸಿಕ ಹೋರಾಟದಲ್ಲಿ ಅಂಬೇಡ್ಕರ್ ಅವರ ನಿಲುವು ಮತ್ತು ಕಾಠಿಣ್ಯಗಳನ್ನು.
ಗಾಂಧೀಜಿಯವರ ಪ್ರಕಾರ ಪ್ರತ್ಯೇಕ ಮತದಾನ ಪದ್ಧತಿ ಸಮಸ್ಯೆಯನ್ನು ಉತ್ತಮಕ್ಕಿಂತ ಕೆಟ್ಟದ್ದಾಗಿಸುತ್ತದೆ. ಇದು ಪ್ರತಿ ಹಳ್ಳಿಯಲ್ಲಿ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸ್ಥಳಿಯ ಸಂಘರ್ಷಕ್ಕೆ ಕಾರಣವಾಗುತ್ತಿದೆ.ಎಂಬುದು.
1931 ಅ 14 ಅಂಬೇಡ್ಕರವರು ಗಾಂಧಿಯವರನ್ನು ಮೊಟ್ಟ ಮೊದಲನೆ ಬಾರಿಗೆ ಭೇಟಿಯಾಗಿ ಪ್ರತ್ಯೇಕ ಮತದಾನದ ಹಕ್ಕುಗಳ ಬಗ್ಗೆ ಚರ್ಚಿಸಿದ್ದರು. ನಂತರ ಗಾಂಧೀಜಿ ನವೆಂಬರ್ 13 ತಮ್ಮ ಭಾಷಣದಲ್ಲಿ ನಾನು ಪ್ರತ್ತೇಕ ಪ್ರಾತಿನಿಧ್ಯವನ್ನು ವಿರೋಧಿಸುವ ಏಕೈಕ ವ್ಯಕ್ತಿಯಾಗಿದ್ದೇನೆ ಎಂದು ಒಂದು ವರ್ಷದ ಹಿಂದೆಯೇ ಹೇಳಿದ್ದರು. ಈ ಉಪವಾಸ ಒಂದು ವರ್ಷ ಪೂರ್ವ ನಿಯೋಜಿತ ಕಾರ್ಯಕ್ರಮ ದಂತೆ ಕಾಣುತ್ತದೆ ಅಲ್ಲವೆ? ಇದು ಹಠಾತ್ತಾಗಿ ಆಗಿಂದಾಗೆ ಸೃಷ್ಟಿಯಾದ ಯೋಜನೆ ಅಲ್ಲ.
ಇಡೀ ಪೂನಾ ಒಪ್ಪಂದಕ್ಕೆ ಸಾಕ್ಷಿಯಾದ ಘಟನೆಗಳನ್ನಾಧರಿಸಿ ಮಹಾದೇವ ರಾನಡೆ ಹೇಳುವಂತೆ ” ಅವರಿಗೆ ಬೇಕಿರುವುದು ಯಾವುದೋ ಒಂದು ಇತ್ಯಾರ್ಥ; ಅವರು ಆದರ್ಶ ಪರಿಹಾರಕ್ಕಾಗಿ ಕಾಯಲು ಸಿದ್ಧರಿಲ್ಲ. ಗಾಂಧೀಜಿ ಯವರ ಜೀವ ಉಳಿಸುವ ಉತ್ಸಾಹದಲ್ಲಿ ಈ ಸಹಿ ಹಾಕಿದರು.
ಅಂಬೇಡ್ಕರ್ ಜೀ ನಮ್ಮ ತಂದೆ ‘ಮುಳುಗುತ್ತಿದ್ದಾರೆ’ ಅವರ ಪ್ರಾಣ ಉಳಿಸಿ” ಎಂದು ಅಂಬೇಡ್ಕರ್ ರವರ ಮುಂದೆ ಕಣ್ಣೀರುಡುತ್ತದ್ದ ದೇವದಾಸ್ ಗಾಂಧಿ ಅವರ ಮುಖದಲ್ಲಿ ಮಾತ್ರ ಮಂದಹಾಸವಿತ್ತು.
ಹೊ! ಗಾಂಧಿಯವರು ಒಪ್ಪಂದಕ್ಕೆ ಸಹಿ ಹಾಕಿದರಾ?, ಒಂದು ಅಂತಿಮ ಪದ; ಅದು ಗಾಂಧಿಯಲ್ಲ. ಅವರ ಮಗ ದೇವದಾಸ್ ಗಾಂಧಿ.
ಸುಪರ್ಣ ಗುಪ್ತಾ ‘ ಅಂಬೇಡ್ಕರ್ ರವರು ಶೋಷಿತರ ವಿಮೋಚನೆಗಾಗಿ ಹಕ್ಕು ಆಧಾರಿತ ವಿಧಾನಕ್ಕೆ ಆದ್ಯತೆ ನೀಡಿದರು. ಗಾಂಧಿಜೀಯವರು ಅಧ್ಯಾತ್ಮ ಮತ್ತು ನಂಬಿಕೆ ವಿಧಾನಕ್ಕೆ ಮಾನ್ಯತೆ ನೀಡಿದರು. ಅಂಬೇಡ್ಕರರಿಗಿಂತ ಭಿನ್ನವಾಗಿ ಶೋಷಕರ ಮನಸ್ಥಿತಿಯನ್ನು ಬದಲಾಯಿಸಿದಾಗ ಮಾತ್ರ, ಯಾವುದೇ ಶೋಷಣೆಯನ್ನು ಸರಿಪಡಿಸಬಹುದು ಎಂದು ಗಾಂಧಿಜೀ ಭಾವಿಸಿದ್ದರು’. ಎನ್ನುತ್ತಾರೆ. ಇದು ಈ ನೆಲದಲ್ಲಿ ಅಸಂಭವ. ಕಾರಣ ಇಲ್ಲಿನ ಜಾತಿ ವ್ಯವಸ್ಥೆ ಒಂದು ಮಾನಸಿಕ ಸ್ಥಿತಿಯಾಗಿದೆ. ಅದು ಸಾವಿರಾರು ವರ್ಷಗಳು ತನ್ನ ಬೇರನ್ನು ತಾನೇ, ತನ್ನ ಮೆದುಳಿಗೆ ಎಣೆದುಕೊಂಡಿದೆ. ಇದನ್ನು ನಂಬಿಕೆ ಮಾತ್ರದಿಂದಲೇ ಬಿಡಿಸುವುದು ಕಷ್ಟ.
ಈ ಸತ್ಯ ಗಾಂಧೀಜಿಯವರ ಅರಿವಿಗೆ ಬಂದಿದ್ದೆ ಅವರು
ಅಸ್ಪೃಶ್ಯತೆಯ ವಿರುದ್ದ 1933 ನವೆಂಬರ್ ನಿಂದ 1934 ರ ಆಗಸ್ಟ್ ವರೆಗೆ 12500 km ಭಾರತದಾದ್ಯಂತ ಪ್ರವಾಸ ಕೈಗೊಂಡಾಗ. 800000 ಗಳನ್ನು ಹರಿಜನ ನಿಧಿಗೆ ಸಂಗ್ರಹಿಸಲು ಮೇಲ್ವರ್ಗದ ಜನರ ಬಳಿ ತೆರಳಿದಾಗ. ಕೊನೆ ಕೊನೆಗೆ ಶ್ರೀರಂಗಂ ತಂಜಾವೂರಿನ ಇತರ ದೇವಾಲಯಗಳಲ್ಲಿ ಅಸ್ಪೃಶ್ಯತಾಚರಣೆಯನ್ನು ಮನಗಂಡು ತಾವೇ ದೇವಾಲಗಳಿಗೇ ಹೋಗುವುದನ್ನು ನಿಷೇಧಿಸಿಕೊಂಡಾಗ. ಹರಿಜನ ಸೇವಕ ಸಂಘ ಹರಿಜನ ಪತ್ರಿಕೆ ಇಲ್ಲಿ ಹುಟ್ಟಿಕೊಂಡವು. ಪ್ರತಿ ಹಳ್ಳಿಗಳಲ್ಲಿ ರಾಮಮಂದಿರ ಭಜನೆಗಳು ಆರಂಭವಾದವು. ಇದು
ಈಗ ಈ ಜನರ ಬದುಕಿನ ಭಾಗವಾಗಿ ಬಿಟ್ಟಿದೆ.
ಲೂಯಿ ಫಿಷರ್ “ಗಾಂಧೀಜಿಗೆ ದ್ವೇಷ, ಅಸೂಯೆ, ವಿಷ, ಅಸಮಧಾನವಿಲ್ಲ. ಅವರನ್ನು ಜೈಲಿಗೆ ಹಾಕಿದ ವೈಸ್ ರಾಯ್ ಗಳ ಜೊತೆ ಅವರು ಸ್ನೇಹಿತರಾಗಿದ್ದರು. ಅವರು ವ್ಯವಸ್ಥೆಯನ್ನು ವಿರೋಧಿಸಿದರು ಆದರೆ ವ್ಯಕ್ತಿಯನ್ನಲ್ಲಾ.
ಎಂದು ಯಾರು ಏನೇ ಹೇಳಿದರು,
ಅಂಬೇಡ್ಕರ್ ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಗಾಂಧೀಜಿಯವರನ್ನು ನಾನು “ಮಹಾತ್ಮ” ಎಂದು ಒಪ್ಪಲಾರೆ ಎಂದರು.
ಅಂಬೇಡ್ಕರ್ ರ ಈ ನೋವಿಗೆ ಪಟೇಲರ ಈ ಮಾತನಲ್ಲಿ ಉತ್ತರ ಸಿಗಬಹುದೇನೊ ಪಟೇಲರು “ಈ ಗಾಂಧಿಜೀ ಏಕೆ ಉಪವಾಸ ಮಾಡುತ್ತಿದ್ದಾರೆ ?” ಎಂದು ಗೊಂದಲಕ್ಕೀಡಾದರು. ಎದುರಿನಲ್ಲಿದ್ದವರು “ಅಸ್ಪೃಶ್ಯರನ್ನು ಎದುರಿಸಲು ಇನ್ಯಾವುದೇ ಮಾರ್ಗಗಳಿಲ್ಲವಲ್ಲಾ ಆ ಕಾರಣಕ್ಕಿರಬಹುದೇನೊ…? ಎಂದರು.
ಕೊನೆಯದಾಗಿ ಈ ಮಾತು
ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ವಿಶ್ವಾಸ ಕ್ಕೆ ದ್ರೋಹ ಮಾಡುವುದಿಲ್ಲ” ಎಂದರಲ್ಲಾ ಡಾ. ಅಂಬೇಡ್ಕರ್ ಈ ಎಳೆಯನ್ನು ಇಡಿದು ಈ ಪೀಳಿಗೆ ಯಾಕೆ ಬದುಕುವ ಪ್ರಯತ್ನ ಮಾಡುತ್ತಿಲ್ಲಾ….? (ಬರಹ-ಮಲ್ಕುಂಡಿ ಮಹದೇವ ಸ್ವಾಮಿ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಮೆಚ್ಚುಗೆ ಪಡೆದ ಕತೆ | ಸಮಾಧಿ
~ಟಿ.ಆರ್. ಪ್ರಕಾಶ ಭಾಗವತ, ಶಿರಸಿ
ಬರೋಬ್ಬರಿ ನಾಲ್ಕು ಎಕರೆ ಅಡಿಕೆ ತೋಟ ಸಮಾಧಿಯಾಗಿತ್ತು! ಆ ವರ್ಷದ ಮಳೆಗೆ ಅದೇನು ಆವೇಶ ಬಂದಿತ್ತೋ… ಕೇರಳ ರಾಜ್ಯದ ಕೆಲವೆಡೆ ಭಯಂಕರ ಭೂಕುಸಿತವಾದ ಸುದ್ದಿಯಾಗಿ ವಾರ ಕಳೆದಿರಲಿಲ್ಲ; ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಉತ್ತರಕನ್ನಡ, ಶಿಕಾರಿಪುರ ಹೀಗೆ ಕೆಲವೆಡೆಯೂ ಭೂಕುಸಿತದ ಭಯಾನಕ ಸುದ್ದಿಗಳು ಬರತೊಡಗಿತ್ತು. ಸುದ್ದಿ ವಾಹಿನಿಗಳು “ತಾವೇ ಮೊದಲು… ತಮ್ಮಲ್ಲೇ ಮೊದಲು” ಅನ್ನುತ್ತ ಗ್ರೌಂಡ್ ಝೀರೋದ ರಿಪೋರ್ಟ ಕೊಡುವಾಗ ಒಂದಷ್ಟು ಘಟನೆಯ ವಿಡಿಯೋಗಳು ಇನ್ನಷ್ಟು ಗ್ರಾಫಿಕ್ಸ್ ಗಳನ್ನು ಸೇರಿಸಿ ಸುದ್ದಿಯ ಭಯಾನಕತೆಯನ್ನು ಉಲ್ಬಣಿಸುತ್ತ ಉಣಿಸುತ್ತಿದ್ದರೆ, ಗುಡ್ಡಗಳ ಕಣಿವೆ ಕಿಬ್ಬುಗಳಲ್ಲಿ ಲಾಗಾಯ್ತಿನಿಂದ ಬದುಕು ಕಟ್ಟಿಕೊಂಡವರಿಗೆ ದಿನೇ ದಿನೇ ಅಷ್ಟಷ್ಟೇ ಉಸಿರುಗಟ್ಟತೊಡಗಿತ್ತು!
ತಿಂಗಳು ಕಳೆದರೂ ಬಾನ ಬೆಳಕು ಬಿಟ್ಟುಕೊಡದ ಕಾರ್ಮೋಡ ಸುರಿಸಿದ ಮಳೆ ಹಿಂದಿನೆಲ್ಲ ದಾಖಲೆಗಳನ್ನು ಮುರಿದಿತ್ತು. ಮುರಿದುಕೊಂಡು ಬಿದ್ದ ಮಳೆಗೆ ಮುರಿದ ಮನೆಗಳು, ಮನಸ್ಸುಗಳು ಕೊನೆಗೆ ಬದುಕೂ ಕೂಡ ಕೋಡಿಬಿದ್ದು, ಧುಮ್ಮಿಕ್ಕಿ ಬಂದ ಕೆನ್ನೀರಿಗೆ ಕೊಚ್ಚಿಹೋಗುತ್ತಿತ್ತು. ಅನಾಮತ್ತಾಗಿ ಸರಿದ ಗುಡ್ಡಗಳು, ಅದೆಷ್ಟು ಜನರ ಉಸಿರುಗಟ್ಟಿಸಿತ್ತೋ..! ವಾರ್ತೆ ನೋಡಿದವ ಅದೇ ಗುಂಗಿನಲ್ಲಿ ರಾತ್ರಿ ಮಲಗಿದ್ದ ಅಪ್ಪ. ನಡುರಾತ್ರಿ ಸರಿದೆರಡು ತಾಸು ಕಳೆದಿರಬಹುದು, ದಿಂಬಿನಡಿ ಭೂಮಿ ಬಿರಿದ ಶಬ್ಧವಾಯ್ತು ಅನ್ನುತ್ತ ತಡಬಡಿಸಿ ಎದ್ದವ, ನಮ್ಮನ್ನೆಲ್ಲ ಕೂಗಿ ಕರೆಯುತ್ತ ಅಂಗಳಕ್ಕೋಡಿಸಿದ. ಗಾಢ ನಿದ್ರೆಯಲ್ಲಿದ್ದ ಅಮ್ಮ, “ಅಷ್ಟು ಲಾಯ್ಕ್ ನಿದ್ರೆ ಬಂದಾಗ ಸತ್ರೂ ಗೊತ್ತಾಗದಿಲ್ಯಾಗಿತ್ತು… ಅದೆಂತಾ ನಮ್ನಿ ಕೂಗಿ ಎಬ್ಬಿಸಿದ್ರಪಾ…”ಅನ್ನುತ್ತ ಕಣ್ಣುಜ್ಜಿಕೊಂಡು ಹೆಜ್ಜೆ ಕಿತ್ತಿಡುತ್ತ ಅಂಗಳಕ್ಕೋಡಿ ಕಟ್ಟೆಯ ಮೇಲೆ ಕುಂತಳು. ಧಾರಾಕಾರ ಸುರಿಯುತ್ತಿದ್ದ ಮಳೆ ತುಸು ಬಿಡುವು ಕೊಟ್ಟಿತ್ತು. ತೆಂಗು, ಅಡಿಕೆ ಮರಗಳಿಂದ ಬುಡದ ಬಾಳೆ ಎಲೆಗಳ ಮೇಲೆ ಬೀಳುತ್ತಿದ್ದ ಹನಿಗಳ ತಾಳಕ್ಕೆ, ಜೀರುಂಡೆಗಳ ಸಂವಾದಿನಿ ನಮ್ಮನ್ನು ಅಣಕಿಸುವಂತಿತ್ತು. ಜೊತೆಗೆ, ಆ ನಡುರಾತ್ರಿ ಅಪ್ಪನ ಆತಂಕದ ಸುತ್ತ ಕವಿದ ಭಯಾನಕ ಕತ್ತಲು ನಮ್ಮಲ್ಲಿ ಇನ್ನಷ್ಟು ಭೀತಿಯನ್ನು ಉಂಟುಮಾಡಿತ್ತು!
“ಸುತ್ತಮುತ್ತ ಎಲ್ಲೋ.. ಭೂಮಿ ಬಾಯಿಬಿಟ್ದಂತೂ ಖರೆ…” ಅಪ್ಪ ಅವನಷ್ಟಕ್ಕೆ ಹಲುಬಿದ. “ನಿಮಗೆ ವಾರ್ತೆ ನೋಡಿದ್ದು ಹೆಚ್ಚಾಗಿಪ್ಪು… ಕಾಡಲ್ಲಿ ಎಲ್ಲೊ ದೊಡ್ಡ ಮರ ಮುರದು ಬಿದ್ದಿಪ್ಪು… ಅಷ್ಟೆಯಾ” ಅನ್ನುತ್ತಿದ್ದಂತೆ ಅಮ್ಮನತ್ತ ಕೈ ತೋರಿ ತಡೆದ ಅಪ್ಪ, ತೋಟದ ಕಡೆ ಕಿವಿ ಕೊಟ್ಟು ಆಲಿಸತೊಡಗಿದ. ಕೆಲ ಸಮಯ ಹಾಗೇ ನಿಂತಿದ್ದ ಅಪ್ಪನಲ್ಲಿ “ಮತ್ತೆ ಬ್ಯಾಟ್ರಿ ತಗಂಡು ತೋಟಕ್ಕೆ ಹೋಪುದ್ ಬ್ಯಾಡ ಈಗ! ಎಂತಾ ಆಯ್ದಿಲ್ಲೆ… ಬೆಳಗೆ ನೋಡುವ” ಅಂದ ಅಮ್ಮ ಬಿರಿಬಿರಿನೆ ಮನೆ ಹೊಕ್ಕೇ ಬಿಟ್ಟಳು. ಆ ರಾತ್ರಿ ಅಪ್ಪನ ನಿದ್ರೆ ಹಾರಿಹೋಗಿತ್ತು. ಬೆಳಗಾಗುವ ತನಕ ಒಂದಾದ ಮೇಲೊಂದು ಕವಳ ಜಗಿಯುತ್ತಲೇ ಕುಳಿತಿದ್ದವ ನಸುಕು ಇಣುಕುತ್ತಿದ್ದಂತೇ ತೋಟದೆಡೆ ಧಾವಿಸಿದ್ದ.
ಅಷ್ಟು ಹೊತ್ತಾದರೂ ಮರಳಿ ಬರಲೆ ಇಲ್ಲ ಅಪ್ಪ. ಆತಂಕದಿಂದಲೆ ಅಮ್ಮ ತೋಟದೆಡೆ ಓಡಿದ್ದಳು. ದೂರದಲ್ಲಿ ಅಪ್ಪ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದ. ಅಮ್ಮ ಧಾವಿಸಿ ಅಪ್ಪನ ಬೆನ್ನು ಸವರಿದಳು. ಎದುರು ಬಟಾ ಬಯಲಾದಂತೆ! ಬಾನು ಕಾಣತೊಡಗಿತ್ತು! ತಲೆ ಎತ್ತಿ ನೋಡಿದ ಅಮ್ಮ, “ರೀ… ನಮ್ಮ ತೋಟ ಎಲ್ರೀ..!?” ಅನ್ನುತ್ತಲೇ ಎದುರಿನ ದೃಶ್ಯ ಕಂಡು ಎದೆ ಹಿಡಿದುಕೊಂಡು “ಅಯ್ಯೋ ಭಗವಂತ…!!” ಕಿರುಚಿಕೊಂಡಳು! ಮುಂದಿನ ತಗ್ಗಿನಲ್ಲಿ ನಾಲ್ಕು ಎಕರೆ ಫಲ ಭರಿತ ಅಡಿಕೆ ತೋಟ ಸಂಪೂರ್ಣ ಮಾಯವಾಗಿತ್ತು. ಇವರಿದ್ದ ದಿಬ್ಬದ ಇನ್ನೊಂದೆಡೆಯ ಕಾಡಿನ ಗರ್ಭವೇ ಪಾತವಾದ ಹಾಗೆ ಕೆಂಜವಳು ಕಾರಿದ ಮಣ್ಣು ಜಾರುತ್ತ, ಕದಡುತ್ತ, ಆ ಪ್ರದೇಶವನ್ನೆಲ್ಲ ಆಪೋಶನ ಮಾಡಿತ್ತು. ಬಾನೆತ್ತರಕೂ ನಿಂತು ಬಿಸಿಲಿಗೆ ತಡೆಗೋಡೆಯಂತಿದ್ದ ಆ ಕಾಡು, ಕದಡಿದ ಪರಿ ಭೀಭತ್ಸವಾಗಿತ್ತು! ಪ್ರಕೃತಿಯ ಕ್ರೌರ್ಯದ ಕೆಂಜರುಗಿನಿಂದ ಒಂದೊಂದು ಅಡಿಕೆ ಮರ,ಗಿಡಗಳನ್ನೂ ಹೊಸಕಿ ಕೊಂದ ಗುಡ್ಡದ ಮಣ್ಣು ರಕ್ತದಲ್ಲಿ ಕಲಸಿದಂತಾಗಿತ್ತು!! ತಮ್ಮ ಹರಯವನ್ನೆಲ್ಲ ಎರೆದು ನೆಟ್ಟು ಬೆವರುಣಿಸಿ ಬೆಳೆಸಿದ ಅಡಿಕೆ ತೋಟವೆ ಅವರ ಬದುಕು! ಅವರ ಸಾಧನೆ! ಒಂದಿರುಳು ಕಳೆಯುವದರೊಳಗೆ ಬಯಲಾದ ದಿಗ್ಭ್ರಮೆ ಅವರನ್ನು ಆವರಿಸಿತ್ತು. ಉಸಿರಾಟವನ್ನೂ ಮರೆತವರಂತೆ ಶೂನ್ಯದ ವಶವಾಗಿಹೋಗಿದ್ದರು!!
ಕಾಲಡಿಯ ನೆಲ ಕುಸಿಯುವುದೆಂದರೆ… ನಂಬಿದ ನೆಲವೇ ಬದುಕನ್ನು ಕಸಿದುಕೊಳ್ಳುವುದೆಂದೇ ಅರ್ಥ? ಅಪ್ಪ ಹೇಳುತ್ತಿದ್ದ; “ಅಡಿಕೆ ಮರಗಳೂ ಕೂಡ ನಮ್ಮ ಬದುಕಿನ ಆಸರೆಯೆ…, ಹಾಗಾಗಿ ಅವೂ ನಮ್ಮ ಮಕ್ಕಳಂತೆಯೇ..!” ಎಸ್ಎಸ್ಎಲ್ಸಿ ಪರೀಕ್ಷೆಗೂ ಮುನ್ನ ತಂದೆಯನ್ನು ಕಳಕೊಂಡಾಗ ಒಟ್ಟಿಗೇ ಶಿಕ್ಷಣಕ್ಕೂ ಎಳ್ಳು ನೀರು ಬಿಟ್ಟವ ಅಪ್ಪ. ಅಜ್ಜ ಮಾಡಿದ ಭೂಮಿಯನ್ನು ನೆಚ್ಚಿಕೊಂಡ. ಕರೆದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತ, ಹೋದಲ್ಲಿ ಬೇಡಿ ಪಡೆದ ಅಡಿಕೆಗಳನ್ನು ನಾಟಿಮಾಡಿ ಗಿಡವಾಗಿಸುತ್ತ… ನೋಡ ನೋಡುತ್ತ ನಾಲ್ಕು ಎಕರೆಗೂ ತೋಟ ಮಾಡಿಬಿಟ್ಟಿದ್ದ. ಹೊಸದಾಗಿ ಫಸಲು ಕಾಣಿಸುವ ಹೊತ್ತಿಗೆ, ಸೋದರ ಸಂಬಂಧಿ ನೆಂಟಸ್ತಿಕೆ ಕುದುರಿಸಿ ಲಗ್ನ ಮಾಡಿಸಿದ್ದ. ಹಿಂಗಾರದ ಹೊಡೆಯುಬ್ಬಿ ಅರಳುವ ಹೊತ್ತಿಗೆ ಅಮ್ಮ ಹೊಟ್ಟೆಯೊಳಗೆ ನನ್ನಿಟ್ಟುಕೊಂಡು ಸಂಭ್ರಮಿಸಿದ್ದಳು. ಅಪ್ಪನ ಬದುಕು ಸುಂದರ ಚಿತ್ರವಾಗಿ ಬಣ್ಣ ತುಂಬಿಕೊಳ್ಳತೊಡಗಿತ್ತು.
*
ಹಲವು ಪತ್ರಿಕೆಗಳು ಭೂಕುಸಿತದ ಸಚಿತ್ರ ವರದಿ ಪ್ರಕಟಿಸಿದವು. ಸರಕಾರಿ ವಾಹನಗಳು ಓಡಾಡಿದವು. ಅಧಿಕಾರಿಗಳು ನಷ್ಟವನ್ನು ಅಂದಾಜಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಯಥೇಚ್ಛವಾಗಿ ಸಾಂತ್ವನವನ್ನು ಹೇಳಿದರು. ಪರಿಹಾರದ ಭರವಸೆ ನೀಡಿ ಹೋದರು. ನೆಂಟರಿಷ್ಟರು ಧಾವಿಸಿ ಮೈಮುಟ್ಟಿ “ ಹೋಗಿದ್ದು ತೋಟ ಮಾರಾಯ… ಅಂಥ ತೋಟ ಇನ್ನೂ ನಾಲ್ಕು ಮಾಡ್ಲಕ್ಕು.. ಕೊಡಗಿನ ಹಾಗೆ ಮನೆ ಮೇಲೆ ಗುಡ್ಡ ಬಂದಿದ್ರೆ…!?” ಪರಿಶ್ರಮವನ್ನೆ ತಪವಾಗಿಸಿಕೊಂಡವನ ಸ್ಥೈರ್ಯವನ್ನೂ ಸಹ ಜನರ ಹಗುರವಾದ ಮಾತುಗಳ ಜರುಗು ಅಡಗಿಸತೊಡಗಿತ್ತು!. ಅಂತೂ ಇದೇ ರೀತಿ ತಿಂಗಳು ದಾಟಿತ್ತು.
ಅಪ್ಪ, ತಹಶೀಲ್ದಾರರ ಕಛೇರಿಗೆ ಅಲೆದಾಡುತ್ತಿದ್ದ. ಅಂದಾಜು ಪತ್ರಿಕೆಯಲ್ಲಿ ಮಾರುಕಟ್ಟೆ ಮೌಲ್ಯದಂತೆ ಮೂರು ಕೋಟಿಯ ನಷ್ಟ! ಕನಿಷ್ಟ ಎರಡು ಕೋಟಿಯಾದರೂ ಪರಿಹಾರ ಬಂದೇ ಬರುತ್ತದೆ ಎನ್ನುವ ಆಶ್ವಾಸನೆ! ತಹಶೀಲ್ದಾರು ತುಂಬಾ ಬ್ಯೂಸಿ. ಎಲ್ಲ ಕಡೆ ಒಂದಿಲ್ಲೊಂದು ಪ್ರಕೃತಿ ವಿಕೋಪ. ಪ್ರವಾಹ. ಮಳೆಗಾಲದಲ್ಲಿ ಅಧಿಕಾರಿಗಳನ್ನು ಭೇಟಿಮಾಡುವುದೇ ಹರ ಸಾಹಸ. ಪಟ್ಟು ಬಿಡದ ಅಪ್ಪ, ಪರಿಹಾರ ಕಾಣುವ ಹಠತೊಟ್ಟಿದ್ದ. ಆ ದಿನ ಅಂತೂ ತಹಶೀಲ್ದಾರರ ಭೇಟಿಯಾಗಿತ್ತು. “ಮುಖ್ಯಮಂತ್ರಿಗಳ ಪೃಕೃತಿ ವಿಕೋಪ ನಿಧಿ” ಅಲ್ಲಿ ಮೊತ್ತ ಹೆಚ್ಚೋದಿಲ್ಲ… ಫಲಾನುಭವಿಗಳು ಹೆಚ್ಚಾದಷ್ಟೂ ಬರುವ ಪರಿಹಾರ ಕಡಿಮೆಯೇ ಆಗೋದು…. ನೋಡೋಣ ನಿಮ್ಮದನ್ನ ಸ್ಪೆಶಲ್ ಕೇಸ್ ಅಂತ ಕನ್ಸಿಡರ್ ಮಾಡಿ ಕಳಿಸಿದ್ದೀನಿ…. ಎರಡು ಕೋಟಿಯಾದರೂ ಬರಬೇಕು” ಅಂದು ಕಳುಹಿಸಿದ್ದರು. ಆ ದಿನ ಅಪ್ಪ ಕೊಂಚ ಸಮಾಧಾನದಲ್ಲಿದ್ದ. ಆದರೆ, ಆಗಲೇ ಊರು ಬಿಡುವ ನಿರ್ಣಯ ಮಾಡಿದ್ದ!
“ಗುಡ್ಡದ ಕೃಷಿ ಮಾಡಿದವರಿಗೆ ಕಣಿವೆಯ ಕೃಷಿ ಸಾಧ್ಯವಿಲ್ಲ…. ಬಯಲು ಕೃಷಿಮಾಡಿದವರಿಗೆ ಗುಡ್ಡವು, ಕಣಿವೆಯೂ ಒಗ್ಗೋದಿಲ್ಲ” ಅನ್ನುವುದು ಅವರವರ ಕೃಷಿ ಬದುಕಿನ ಪಾಠ. ಹೀಗಾಗಿ, ಉಳಿದ ಯಾವ ಉದ್ಯೋಗವನ್ನೂ ತಿಳಿಯದ ಅಪ್ಪ, ಮತ್ತೆ ತೋಟವನ್ನೇ ಮಾಡುವುದಕ್ಕೆ ಯೋಚಿಸತೊಡಗಿದ್ದ. ವೃದ್ದಾಪ್ಯದ ಬಾಲ್ಯಾವಸ್ಥೆಯಲ್ಲಿದ್ದ ಅಪ್ಪನಿಗೆ ಆ ಧೈರ್ಯ ಹೇಗೆ ಬರತೊಡಗಿತು? ಶ್ರಮವೇ ಜೀವನವಾದವನ ಸ್ಥೈರ್ಯವನ್ನು ಸಮಾಧಿ ಮಾಡುವುದಕ್ಕೆ ಇಂತಹ ಭೂಕುಸಿತದಿಂದಲೂ ಸಾಧ್ಯವಾಗಲಿಲ್ಲ! ಮತ್ತೊಮ್ಮೆ ತೋಟ ಮಾಡುವ ನಿರ್ಧಾರ, ಆಘಾತವನ್ನು ಮರೆಸುವ ಪ್ರಯತ್ನವೂ ಆದೀತು! “ಇನ್ನು ಈ ವಯಸ್ಸಿಗೆ ತೋಟ ಗೀಟ ಬ್ಯಾಡ… ಪರಿಹಾರ ಬಂದರೆ ಬಡ್ಡಿಗಿಟ್ಟು ಜೀವನ ಮಾಡುವ…ಸಾಕು” ಅಮ್ಮ ಅಭಿಪ್ರಾಯಿಸಿದ್ದಳು.
*
ಫಸ್ಟ್ ಪಿಯುಸಿಯಲ್ಲಿ 97% ಮಾಡಿದ್ದ ನನ್ನನ್ನು ಅಪ್ಪ ಪುಟ್ಟ ಮಗುವಿನಂತೆ ಮುದ್ದಾಡಿದ್ದ. ನನ್ನ ಓದಿನ ಬಗ್ಗೆ ಅಮ್ಮ ಅಷ್ಟು ಆಸಕ್ತಿ ತೋರಿಸುತ್ತಿರಲಿಲ್ಲ. ಮನೆ, ಹೊಲ ನೋಡಿಕೊಂಡು ಮಗ ಜೊತೆಗಿರಲಿ ಅನ್ನೋದು ಅವಳ ಆಸೆ. ಆದರೆ ಅಪ್ಪ, ಸರ್ವಸ್ವವನ್ನೂ ಧಾರೆ ಎರೆಯಲು ಸಿದ್ಧವಾಗಿದ್ದ. ತನ್ನ ಹಾಗೆ ಕೃಷಿ ನಂಬಿ, ಆರಕ್ಕೇರದ ಮೂರಕ್ಕಿಳಿಯದ ತ್ರಿಶಂಕು ಸ್ಥಿತಿ ಮಗನಿಗೆ ಬೇಡ ಅನ್ನುತ್ತಿದ್ದ. ಕೃಷಿಯನ್ನು ನಂಬಿದ ತನಗೆ ಈ ನಾಲ್ಕು ಎಕರೆಯೇ ಆಸ್ತಿ; ಉನ್ನತವಾಗಿ ಓದಿದವನಿಗೆ ಇಡೀ ಪ್ರಪಂಚವೇ ಆಸ್ತಿ: ಅನ್ನುತ್ತಿದ್ದ. ಅಪ್ಪ ಆಡುತ್ತಿದ್ದ ಮಾತುಗಳೇ ಹಾಗೆ; ನಾನು ಇನ್ನಷ್ಟು ಮೋಟಿವೇಟ್ ಆಗುತ್ತಿದ್ದೆ. ಆದರೆ, ಸೆಕೆಂಡ್ ಪಿಯು ಆರಂಭವಾಗಿ ಇನ್ನೂ ನಾಲ್ಕು ತಿಂಗಳು ಕಳೆದಿರಲಿಲ್ಲ…, ಕುಟುಂಬ ತಲ್ಲಣಿಸಿಹೋಗಿತ್ತು!
ಅಪ್ಪ, ಆದಾಯವೇ ಇಲ್ಲದ ಕುಟುಂಬದ ಯಜಮಾನನಾಗಿದ್ದ. ಕೂಡಿಟ್ಟ ಹಣ ದಿನೇ ದಿನೇ ಕರಗುತ್ತಿತ್ತು. ನನ್ನ ಓದಿಗೆ ಲ್ಯಾಪ್ಟಾಪ್ ಬೇಕಿತ್ತು. ಆದರೆ, ಅಪ್ಪನ ಪರಿಸ್ಥಿತಿ ಕಣ್ಣೆದುರಿತ್ತು; ಕೇಳುವ ಧೈರ್ಯವಾಗುತ್ತಿರಲಿಲ್ಲ. ಅಪ್ಪ, ದಿನಬೆಳಗಾದರೆ ಪರಿಹಾರಕ್ಕಾಗಿ ಅಲೆದಾಡುತ್ತಿದ್ದ. ಮನೆಗೆ ಮರಳುವಾಗ ಅಪ್ಪನ ಮುಖ ಬಾಡಿರುತ್ತಿತ್ತು. ನನ್ನ ಕರುಳು ಚುರ್ ಅನ್ನುತ್ತಿತ್ತು. ಆದರೆ, ಕೇಳುವುದೇನನ್ನು? ಎಲ್ಲವೂ ತಿಳಿದ ಸಂಗತಿಯೆ. ಮನೆಯಲ್ಲಿ ಮಾತು ಕಡಿಮೆಯಾಗತೊಡಗಿತ್ತು. ನಿಟ್ಟುಸಿರು ಹೆಚ್ಚಾಗುತ್ತಿತ್ತು. ಹಸಿದು ಬಂದ ಅಪ್ಪನಿಗೆ ಊಟ ಬಡಿಸುವಾಗ ಅಮ್ಮ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಿದ್ದುದನ್ನು ಅದೆಷ್ಟು ಬಾರಿ ನೋಡಿದ್ದೆನೋ! ಮಾತನಾಡಲು ಬಾಯ್ತೆರೆದರೆ, ಮೊದಲಾಗಿ ಕಣ್ಣೀರು ಇಳಿಯುವುದನ್ನು ಅದೆಷ್ಟು ಸಲ ಕಂಡಿದ್ದೆನೋ! ಇಪ್ಪತ್ತು ವರ್ಷ ಅಮ್ಮನ ಕಣ್ಣಲ್ಲಿ ನೀರೂರದಂತೆ ನೋಡಿಕೊಂಡ ಅಪ್ಪನೆದುರು ಅಳು ನುಂಗಿ ನಡೆವ ಅಮ್ಮ, ಮರೆಯಲ್ಲಿ ಮುಖಕ್ಕೆ ಸೆರಗೊತ್ತಿ ಬಿಕ್ಕುತ್ತಿದ್ದಳು. ಅಪ್ಪನ ಸ್ಥಿತಿಯೂ ಅದಕ್ಕೆ ಹೊರತಾಗಿರಲಿಲ್ಲ! ಸದಾ ಪ್ರೀತಿ ವಿಶ್ವಾಸದ ಮಾತುಗಳೇ ಮುಂದಾಗಿದ್ದ ಮನೆಯಲ್ಲಿ ನೀರವ ಮೌನ ಆವರಿಸಿತ್ತು. ಅಂತಹ ಸ್ಥಿತಿಯಲ್ಲಿ ಓದುವುದಕ್ಕಿಂತ ಎಲ್ಲಿಯಾದರೂ ಕೆಲಸ ಹುಡುಕಿ ಅಪ್ಪನಿಗೆ ನೆರವಾಗುವ ಯೋಚನೆಯಾಗುತ್ತಿತ್ತು.
ಭೂಕುಸಿತವಾಗಿ ಆರು ತಿಂಗಳಾದರೂ ಪರಿಹಾರ ಕೈ ಸೇರಲಿಲ್ಲ. ನನ್ನ ಮೊದಲ ಸೆಮಿಸ್ಟರ್ ರಿಸಲ್ಟ್ ಬಂದಿತ್ತು. ಅಪ್ಪ ವಿಚಾರಿಸಿದ. ಮಾರ್ಕ್ಸ್ಕಾರ್ಡ ತೋರಿಸಿದೆ. ನೋಡಿದವ ಒಂದೂ ಮಾತನಾಡದೆ ನಿರ್ಭಾವದಿಂದ ನನ್ನ ಮುಖ ನೋಡಿ ನಿಟ್ಟುಸಿರಿಟ್ಟ. “ಅಪ್ಪ, ಏನಾದ್ರೂ ಹೇಳು” ಅಂದೆ. “ಹೇಳೋದೇನು ಮಗನೆ… ನೀನೂ ಮನೆ ಸದಸ್ಯ. ನಡೆದ ಘಟನೆ ನಿನ್ನ ಮನಸ್ಸನ್ನೂ ಹಾಳು ಮಾಡಿದ್ದು ಸಹಜ…” ಅನ್ನುತ್ತ ಕಣ್ಣೊರೆಸಿಕೊಂಡ. “ಅಪ್ಪ, ಎಲ್ಲಾದ್ರೂ ಕೆಲಸಕ್ಕೆ ಸೇರ್ತೆ” ಅಂದೆ. ಅಪ್ಪನ ಗಂಟಲುಬ್ಬಿತು. ತುಟಿ ಅದುರತೊಡಗಿತು. “ಮಗಾ, ಒಂದು ಆಸ್ತಿ ಮಣ್ಣಾತು… ನಮಗಿರೋ ಇನ್ನೊಂದು ಆಸ್ತಿ ನೀನು. ನಿನ್ನ ಭವಿಷ್ಯಕ್ಕೆ ಮಣ್ಣು ಮುಚ್ಚದೆ ಇರಲಿ” ಗದ್ಗದಿಸಿದ. ಆ ಕ್ಷಣಕ್ಕೆ ಅಪ್ಪನನ್ನು ತಬ್ಬಿ ಸಂತೈಸಿದ್ದೆ. ಅಪ್ಪ ಮಗನಾಗಿದ್ದ!
ತುಂಬಿನಿಂತ ಕಣ್ಣುಗಳಿಂದ ಅಪ್ಪನ ಅಂಜಲಿಯನ್ನು ಅಮ್ಮ ತನ್ನ ಒಡವೆಗಳಿಂದ ತುಂಬಿಸಿದ್ದಳು. ಹೇಗೂ ಎರಡು ಕೋಟಿ ಪರಿಹಾರ ಬಂದೇ ಬರುತ್ತದೆ ಅನ್ನುವ ವಿಶ್ವಾಸ ಅಪ್ಪನಿಗಿತ್ತು. “ಜೀವ ಉಳಿದ್ರೆ ಜೀವನ; ಜಾರೋ ಗುಡ್ಡ, ಮನೆ ಮೇಲೆ ಬರೋತನ್ಕ ಕಾಯೋದ್ ಹ್ಯಾಗೆ?” ಅನ್ನುತ್ತಿದ್ದವ ಬೇರೆಡೆ ಜಮೀನು ಮನೆ ಖರೀದಿಸಿಯೇ ಬಿಟ್ಟ! ಅಪ್ಪ, ಮೊದಲ ಸಲ ಸಾಲಗಾರನಾದ. ನಾನು ಸಿಇಟಿ ಬರೆದು ಎಜ್ಯುಕೇಶನ್ ಲೋನ್ ದೊರೆತು ಎಂಜಿನೀಯರಿಂಗ್ ಸೇರಿಕೊಂಡೆ.
ಗುರುತು ಪರಿಚಯವಿಲ್ಲದ ಊರ ಹೊಸ ಜಮೀನಿನ ಒಂದೆಕರೆ ಅಡಿಕೆ ಕೊಯ್ಲು ಮಾಡಿದ್ದ ಅಪ್ಪ. ಬಂದ ಆದಾಯದಲ್ಲಿ ಬಹುಪಾಲು ಸಾಲಕ್ಕೆ ಹೋಗಿತ್ತು. ಇನ್ನು ತೋಟ ಗೇಯಿಸೋದು ಹೇಗೆ…, ಸಂಸಾರ ಮತ್ತವನ ಅಲೆದಾಟಗಳ ಖರ್ಚು ನಿಭಾಯಿಸೋದು ಹೇಗೆ? ಅಮ್ಮನಿಗೂ ಗುಟ್ಟು ಕೊಡದ ಅಪ್ಪ, ಕರೆದಲ್ಲಿ ಕೂಲಿ ಕೆಲಸಕ್ಕೆ ಹೋಗತೊಡಗಿದ್ದ. ಆಘಾತಕ್ಕೆ ಜಗ್ಗಲಿಲ್ಲ.., ಕಷ್ಟಕ್ಕೆ ಬಗ್ಗಲಿಲ್ಲ.. ಅಪ್ಪ, ಎಂದೂ ಬದುಕಿಗೆ ಬೆನ್ನು ತೋರಿದವನೇ ಅಲ್ಲ…! ಆದರೆ, ನಾನು ಡಾಕ್ಟರ್ ಆಗಬೇಕೆಂದು ಕನಸುಕಂಡಿದ್ದ; ಅದು ನನ್ನಿಂದಾಗಲಿಲ್ಲ, ನೀಟ್ ಅಂಕ ಬರಲಿಲ್ಲ. ಡೊನೇಶನ್ ಸೀಟ್ ಸಾಧ್ಯವೇ ಇರಲಿಲ್ಲ, ಬೇಡವೆಂದೆ. ಅಪ್ಪ ಅದೆಲ್ಲವನ್ನೂ ತನ್ನ ಹೆಗಲಿಗೇರಿಸಿಕೊಂಡು ಖಿನ್ನನಾದ.
ಭೂಕುಸಿತವಾಗಿ ವರ್ಷ ಕಳೆದರೂ ಪರಿಹಾರವಿಲ್ಲ. ಅಪ್ಪ ಸೋಲತೊಡಗಿದ್ದು ಅವನ ನಡುಗುವ ಧ್ವನಿಯಿಂದ ಅರ್ಥವಾಗುತ್ತಿತ್ತು. ದೂರದಿಂದಲೆ ಧೈರ್ಯ ತುಂಬುತ್ತಿದ್ದೆ. ಮೊದಮೊದಲು ಪ್ರತಿದಿನ ಫೋನಿಗೆ ಬರುತ್ತಿದ್ದ ಅಪ್ಪ, ಕೊನೆ ಕೊನೆಗೆ ವಾರಕ್ಕೊಮ್ಮೆಯೂ ಮಾತನಾಡದವನಾದ. ಅಪ್ಪ ಖಿನ್ನತೆಗೆ ಜಾರುತ್ತಿರುವುದನ್ನು ಅಮ್ಮನಲ್ಲಿ ಹೇಳಿದಾಗಲೆಲ್ಲ ಅವಳು ಅಳುತ್ತಿದ್ದಳು. “ಅಪ್ಪ, ಇನ್ನು ಕೇವಲ ಮೂರು ವರ್ಷ… ಹೇಗಾದ್ರೂ ಸಹಿಸು” ಅಂದಿದ್ದೆ. “ಹುಂ..” ಅನ್ನುವಾಗ ಕಣ್ಣೀರು ಅಪ್ಪನ ಗಂಟಲು ಕಟ್ಟಿತ್ತು.
ಆ ದಿನ, “ಮಗಾ, ಪರಿಹಾರ ಬಂತೂ ಅಂತಾತು. ಏಳು ದಿನದೊಳಗೆ ಬ್ಯಾಂಕ್ ಡಿಟೇಲ್ಸ್ ಕೊಡುಲೆ ನೋಟೀಸ್ ಮಾಡಿದ್ದ” ಅಪ್ಪ ಅವನಾಗಿ ಖುಷಿಯಿಂದ ಫೋನ್ ಮಾಡಿದ್ದ. ಲ್ಯಾಬ್ ನಲ್ಲಿದ್ದ ನನ್ನ ಸಂತೋಷಕ್ಕೆ ಪಾರವಿರಲಿಲ್ಲ. ಸಂಜೆ ತುಂಬ ಹೊತ್ತು ಅಪ್ಪನೊಂದಿಗೆ ಮಾತನಾಡಿದ್ದೆ. ಇನ್ನು ಕಷ್ಟದ ದಿನಗಳು ಕಳೆಯಿತು ಅಂದುಕೊಂಡೆವು. ಅಮ್ಮನ ಒಡವೆ ಬಿಡಿಸಿಕೊಳ್ಳುವುದು, ಇರುವಲ್ಲಿಯೇ ಪುಟ್ಟದೊಂದು ಮನೆ ಕಟ್ಟುವುದು, ನನ್ನ ಮದುವೆ ಮಾಡುವ ತನಕದ ಆಸೆಗಳನ್ನೆಲ್ಲ ಅಪ್ಪ ಹೇಳಿಕೊಂಡ. ಪರಿಹಾರದ ಮೊತ್ತದ ಮೇಲೆ ನನಗೆ ಅನುಮಾನವಿದ್ದರೂ ಅಪ್ಪ ಸಂತೋಷದಿಂದ ಮಾತನಾಡಲಿ ಎಂದು ಕೇಳಿಸಿಕೊಂಡೆ. ಮಾರನೆಯ ದಿನವೇ ಅಪ್ಪ ಬ್ಯಾಂಕ್ ಡಿಟೇಲ್ಸ್ ಕೊಟ್ಟು ಬಂದಿದ್ದ.
ತಿಂಗಳಾಗಿತ್ತು. ತುಂಬ ಗಾಬರಿಗೊಂಡು ಅಮ್ಮ ಫೋನ್ ಮಾಡಿದ್ದಳು. ಎಕರೆಗೆ ಹತ್ತು ಲಕ್ಷದಂತೆ ಪರಿಹಾರ ಜಮಾ ಆಗಿದ್ದನ್ನು ತಿಳಿದ ಅಪ್ಪ ತಹಶೀಲ್ದಾರರೆದುರು ಆವೇಶಗೊಂಡು ಮಾತನಾಡಿದ್ದಕ್ಕೆ ಆತಂಕಿತಳಾಗಿದ್ದಳು. ತಹಶೀಲ್ದಾರರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರೂ ಅಪ್ಪನ ಆವೇಶ ಇಳಿಯದೆ ಅಲ್ಲೇ ಕುಸಿದು ಬಿದ್ದು, ಸಧ್ಯ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ ಎಂದೂ ಅಮ್ಮ ತಿಳಿಸಿದ್ದಳು. ನನ್ನ ಊಹೆ ತಪ್ಪಾಗಲಿಲ್ಲ. ಅಪ್ಪ ಕನಸು ಕಾಣುತ್ತಿರುವುದನ್ನು ಅಂದೇ ಎಚ್ಚರಿಸಬೇಕಿತ್ತು ಅನ್ನಿಸಿತು. ಇನ್ನೇನೋ.. ಅನ್ನುವ ಗಾಬರಿಯಲ್ಲಿ ಬಸ್ ಬುಕ್ ಮಾಡಿ ಮನೆಗೆ ಹೊರಟಿದ್ದೆ.
ಕತ್ತಲು ಹರಿಯುವ ಮುನ್ನವೆ ಮನೆಯಲ್ಲಿದ್ದೆ. ಅಪ್ಪ ಮಲಗಿದ್ದ. ಪಕ್ಕ ಕುಳಿತು ಕೈ ಹಿಡಿದುಕೊಂಡೆ. ನಿಧಾನವಾಗಿ ಕಣ್ತೆರೆದ ಅಪ್ಪ ನನ್ನತ್ತ ನೋಡಿದ. ಕ್ಷಣವೆ ಕಣ್ಣಾಲಿಗಳು ತುಂಬಿ ಉರುಳಿದ ಎರಡು ಹನಿಗಳನ್ನು ದಿಂಬು ನುಂಗಿತು. ಎದೆ ಬಿಗಿದಂತಾಯಿತು. ಸಂಕಟ. ಕುಳಿತುಕೊಳ್ಳುವ ಪ್ರಯತ್ನಮಾಡಿದ ಅಪ್ಪನ ಬೆನ್ನಿಗೆ ಕೈ ಇಟ್ಟೆ. ಆ ಕ್ಷಣದಲ್ಲಿ ಅಪ್ಪನಿಗೆ ಧೈರ್ಯತುಂಬುವ ಅಗತ್ಯವಿತ್ತು. ಆದರೆ, ಅಪ್ಪ ಆಗಲೆ ಎಲ್ಲವನ್ನೂ ಯೋಚಿಸಿಯಾಗಿತ್ತು. ಹೇಳಿದ: “ಮಗಾ, ಇನ್ನು ಮೈಮೇಲೆ ಸಾಲ ಇಟ್ಗಂಬಲಾಗ… ಮುಕ್ತಿ ಪಡೀತೆ”
ಅಪ್ಪ ಸುಧಾರಿಸಿಕೊಳ್ಳುತ್ತಿದ್ದ. ತಿಂಗಳು ಕಳೆದೊಂದುದಿನ ಅಪ್ಪ ಫೋನ್ ಮಾಡಿ, “ಮಗಾ, ಋಣಮುಕ್ತನಾದೆ” ಅಂದ. ಪರಿಹಾರದ ಮೊತ್ತವನ್ನೆಲ್ಲ ಜಮೀನು ಖರೀದಿಸಿದ ಸಾಲಕ್ಕೆ ಜಮಾ ಕೊಟ್ಟಿದ್ದ. ಅಮ್ಮನ ಒಡವೆ ಬಿಡಿಸಿಕೊಳ್ಳೋದು ಬಾಕಿ ಇದೆ ಅಂದಿದ್ದ. ಅದಕ್ಕೆ ಐದು ಲಕ್ಷ ಬೇಕಿತ್ತು. ಆ ಬಗ್ಗೆ ಚಿಂತಿಸೋದು ಬೇಡ.. ಅದು ನನ್ನ ಹೆಗಲಿಗಿರಲಿ ಅಂತ ವಿಶ್ವಾಸ ತೋರಿದ್ದೆ. ಮೂರು ವರ್ಷ ಹೇಗೋ ಬಡ್ಡಿ ಕಟ್ಟಿಕೊಂಡರಾಯ್ತು ಅಂದಿದ್ದೆ. “ಆ ಭಾರ ನಿನ್ನದಲ್ಲ ಮಗಾ..” ಅಂದವ ಫೋನ್ ಕಟ್ ಮಾಡಿದ್ದ.
ಅಷ್ಟೆ. ಸೆಕೆಂಡ್ ಸೆಮಿಸ್ಟರ್ ಎಕ್ಸಾಮ್ ಮುಗಿಸಿ ಹಾಸ್ಟೆಲ್ಲಿಗೆ ಬಂದು ರಿಲ್ಯಾಕ್ಸ್ ಆಗಿದ್ದೆ. ಅನ್ನೌನ್ ನಂಬರಿನ ಕಾಲ್ ರಿಂಗುಣಿಸಿತು. ರಿಸೀವ್ ಮಾಡಿದರೆ, ಎದೆಯೊಡೆದ ಸುದ್ದಿ! ಅಪ್ಪ ಇನ್ನಿಲ್ಲ! ಆತ್ಮಹತ್ಯೆ ಮಾಡಕೊಂಡಿದ್ದ!! ನಂಬಲಾಗಲಿಲ್ಲ.., ವಿಚಾರಿಸಿದರೆ ಫೋನ್ ಮಾಡಿದವ ದೂರದ ಸಂಬಂಧಿ. ಅಮ್ಮ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ! ಗುಡ್ಡದ ಮಣ್ಣೊಳಗೆ ಸಿಲುಕಿ ಉಸಿರುಗಟ್ಟಿದಂತಾಗಿತ್ತು. ಅಪ್ಪ ಅನುಭವಿಸಿದ ಅಂಥದೇ ಶೂನ್ಯದ ವಶವಗಾಗಿ ಹೋಗಿದ್ದೆ!!
ಕ್ಷಣವೂ ತಡಮಾಡದೆ ಉಟ್ಟ ಬಟ್ಟೆಯಲ್ಲಿ ಬಸ್ ಹತ್ತಿದೆ. ಅಂತರಂಗ ವಿಹ್ವಲಗೊಂಡಿತ್ತು. ಆಳದಲ್ಲಿ ತಡೆಯಲಾಗದ ಸಂಕಟ! ಅದೆಷ್ಟು ಆಲೋಚನೆಗಳು..! ಪ್ರಾರ್ಥನೆಗಳು..! ಉಮ್ಮಳಿಸುವ ದುಃಖಕ್ಕೆ ಸುತ್ತ ಮುತ್ತಲ ಪ್ರಪಂಚವೇ ಕಾಣುತ್ತಿರಲಿಲ್ಲ!! ಕ್ಷಣ ಕ್ಷಣಕ್ಕೂ ಹೆತ್ತವರಿಂದ ಅದೆಷ್ಟು ದೂರವಿದ್ದೇನೆ ಅನ್ನುವ ಅನುಭವ, ಸಾಗದ ದಾರಿ! ಅಂತೂ ಬಸ್ ಇಳಿದವನೇ.. ದಾರಿಯನ್ನೇ ನೋಡದೆ ಮನೆಯತ್ತ ಓಡಿದೆ. ನಿಶ್ಚಲ ಅಪ್ಪನ ಪಕ್ಕ ನಿರ್ಭಾವುಕಳಾಗಿ ಕುಳಿತಿದ್ದ ಅಮ್ಮ ನನ್ನ ಕಂಡೊಡನೆ ಓಡಿ ಬಂದು ಬಿಗಿದಪ್ಪಿ ಕಣ್ಣೀರಿನ ಪ್ರವಾಹದಲ್ಲಿ ತೊಯಿಸಿಬಿಟ್ಟಿದ್ದಳು!
ಎಲ್ಲ ಮುಗಿಯಿತೆನ್ನುವ ಭಾವದಲ್ಲಿದ್ದಾಗಲೆ, ಐಓ ಬಂದು ಅಪ್ಪನ ಕಿಸೆಯಲ್ಲಿದ್ದ ಮುಚ್ಚಿದ ಲಕೋಟೆಯನ್ನು ನನಗೆ ಕೊಟ್ಟು, ನೋಡೋದಕ್ಕೆ ಹೇಳಿದರು. ಲಕೋಟೆಯ ಮೇಲೆ ನನ್ನ ಹೆಸರಿತ್ತು ಮತ್ತು ನಾನೇ ನೋಡಬೇಕೆನ್ನುವ ಅಪೇಕ್ಷೆ ಇತ್ತು. ನುಗ್ಗಿ ಬಂದ ಶೋಕವನ್ನು ತಡೆದು ಓಪನ್ ಮಾಡಿದೆ. ನನಗಾಗಿ ಬರೆದ ಪತ್ರ. ಅದು ಡೆತ್ ನೋಟ್ ಕೂಡ ಆಗಿತ್ತು. ಕೆಲವೇ ಶಬ್ದಗಳ ಬರಹವಿತ್ತು.
ಮಗನೆ,
ನನ್ನ ಸಾವಿಗೆ ನಾನು ಕಾರಣನಲ್ಲ; ಸರ್ಕಾರ ಕಾರಣ! ನೆಲವನ್ನು ನಂಬಿ ನಿಂತ ನಮ್ಮ ತೋಟವನ್ನ ನೆಲವೇ ನುಂಗಿತು… ಪರಿಹಾರದ ಭರವಸೆಯಲ್ಲಿ ಸರ್ಕಾರವನ್ನು ನಂಬಿದ್ದ ನನ್ನನ್ನು ಸರ್ಕಾರವೇ ನುಂಗಿತು.
ನನ್ನ ಬದುಕಿಗೆದುರಾದ ಆಘಾತಗಳನ್ನು ಎದುರಿಸಿ ನಿಲ್ಲುವಷ್ಟು ನನ್ನ ಜೀವನವಿರಲಿಲ್ಲ.. ಸೋತೆ! ನನ್ನಂತೆ ನೀನಾಗಬೇಡ. ಎದುರಾಗುವ ಸಮಸ್ಯೆಗಳಿಗಿಂತ ಬದುಕನ್ನು ದೊಡ್ಡದಾಗಿ ನೀನೇ ರೂಪಿಸಿಕೊಳ್ಳಬೇಕು.
ಅಂತಹ ವಿಕೋಪಕ್ಕೆ ಸಿಗದ ಪರಿಹಾರ ರೈತನ ಆತ್ಮಹತ್ಯೆಗೆ ಸಿಗುತ್ತದೆ. ನನ್ನ ಸಾವಿಗೆ ಸರ್ಕಾರ ಐದು ಲಕ್ಷ ಕೊಡಬಹುದು. ಕೊಟ್ಟಲ್ಲಿ ಅಮ್ಮನ ಒಡವೆಗಳನ್ನು ಬಿಡಿಸು. ನನಗಾಗಿ ವ್ಯಥೆ ಬೇಡ. ನಿನ್ನಮ್ಮನಿಗೆ ನೀನೇ ಆಸರೆ.
ವಿದಾಯ….
*
ಮೂರು ವರ್ಷ ಕಳೆದಿದೆ. ತೋಟದ ಮಧ್ಯದಲ್ಲಿ ಅಪ್ಪನ ನೆನಪಿನ ಸಮಾಧಿ ಕಟ್ಟೆಯ ಮೇಲೆ ನನ್ನ ಮೊದಲ ಸ್ಯಾಲರಿಯಿಡುತ್ತಿದ್ದಂತೆ ನೆನಪುಗಳು ದಟ್ಟೈಸಿತ್ತು. ಹಾಗೆ… ಕಟ್ಟೆಯ ಮೇಲೆ ಕೈ ಇಟ್ಟು ತಲೆಯಾನಿಸಿದೆ. ಅಪ್ಪನ ಮಡಿಲ ಅನುಭವ!
***
-ಟಿ.ಆರ್. ಪ್ರಕಾಶ ಭಾಗವತ, ಶಿರಸಿ. 9902720407, 7019360579

ಅಂತರಂಗ
ದೇವನಗರಿ ಸುದ್ದಿದಿನ ವಿಶೇಷಾಂಕ; ಗೋವರ್ಧನರ ಆಸಕ್ತಿ ಹಾಗು ಅಕ್ಷರ ಪ್ರೀತಿಯ ಪ್ರತಿಬಿಂಬ
ಸುದ್ದಿದಿನ ಪತ್ರಿಕೆ ಗೋವರ್ಧನರಿಗೆ ಪ್ರೀತಿಯ ಮಗು. ಅದಕ್ಕೀಗ ಐದು ವರ್ಷ. ಅನ್ನುವ ಭಾವದಲ್ಲಿ ನನಗೆ ಅನ್ನಿಸಿದ್ದನ್ನು ಹೇಳಬೇಕಾದ ಒಂದು ವಾಕ್ಯ; “ಹೆತ್ತಪ್ಪನ ಖುಶಿ, ಪತ್ರಿಕೆಯ ವಿಶೇಷಾಂಕದ ತುಂಬ ಬೆಳಕಿನ ಬೀಜ ಬಿತ್ತಿದೆ.”
ಅಕ್ಷರ ಕೃಷಿ ಕೂಡ ಸುಲಭದ್ದಲ್ಲ. ಅದರಲ್ಲಿಯೂ “ಬೆಳೆಯಬೇಕು” ಮತ್ತು “ಬೆಳೆಸಬೇಕು” ಅನ್ನುವ ಹೃದಯವಂತಿಕೆ ಕಾಣಸಿಗುವುದು ಅಪರೂಪ. ಜಿಲ್ಲಾ ಮಟ್ಟದ ಪತ್ರಿಕೆ ರಾಜ್ಯ ಸ್ತರೀಯ ದೀಪಾವಳಿ ವಿಶೇಷಾಂಕ ಪ್ರಕಟಿಸುವ ಮತ್ತು ಕಥೆ-ಕವಿತೆಗಳಿಗೆ ರಾಜ್ಯ ಮಟ್ಟದ ಸ್ಪರ್ಧೆ ಏರ್ಪಡಿಸಿ ನಿರ್ವಹಿಸಿದ್ದು ಕೂಡ ಅಷ್ಟೇ ಅಪರೂಪ.
ಪತ್ರಿಕೋದ್ಯಮವೆಂದರೆ, ಮೈಮೇಲೆ ಚೇಳುಗಳನ್ನು ಬಿಟ್ಟುಕೊಳ್ಳುವ ವ್ಯಸನ! ಆಗಾಗ ಕುಟುಕುವ ನಂಜುಣ್ಣುತ್ತಲೆ ವಿಷಕಂಠನಂತೆ ಸ್ಥಿತಪ್ರಜ್ಞನಾಗಿ ದುಡಿಯುವ ಸಂಪಾದಕನ ಹೊಣೆ ಸಣ್ಣದಲ್ಲ! ಬೆರಳ ತುದಿಯಿಂದ ಜಗವ ತೆರೆಯುವ ಈ ಕಾಲದಲ್ಲಿ ದಿನ ಪತ್ರಿಕೆ ನಡೆಸುವುದು ತುಂಬ ಸಾಹಸದ ಕೆಲಸ. ಅದನ್ನು ತಪವೆಂದುಕೊಂಡರೂ ಪರಿತಾಪ ತಪ್ಪಿದ್ದಲ್ಲ! ಹೀಗಿರುವಾಗ, ಜಿಲ್ಲಾ ಪತ್ರಿಕೆಯೊಂದು ತನ್ನ ಐದನೇ ವರ್ಷದಲ್ಲಿ ಇಂಥದೊಂದು ಜಿಗಿತ ಪ್ರದರ್ಶಿಸುತ್ತಿರುವುದು ಅಸಾಮಾನ್ಯ ಸಂಗತಿ! ಸಂಪಾದಕರ ಎದೆಗಾರಿಕೆಗೆ ಮೆಚ್ಚಲೇ ಬೇಕು!
ಉತ್ತರಕನ್ನಡ ಜಿಲ್ಲೆಯಲ್ಲಿ “ಸುದ್ದಿದಿನ” ಸುದ್ದಿಮಾಡಿದ್ದು ಪ್ರಾಯಶಹ ಈ ಕಥಾ ಸ್ಪರ್ಧೆಯಿಂದಲೇ. ರಾಜ್ಯ ಮಟ್ಟದಲ್ಲಿ ಕೂಡ ಪತ್ರಿಕೆಯ ಹೆಸರು ಪ್ರಚಲಿತವಾಗಿದೆ ಅನ್ನುವುದು ನನ್ನ ಭಾವನೆ. ಕಥಾ ಸ್ಪರ್ಧೆಗೆ ಕಥೆ ಕಳುಹಿಸಿದ್ದ ನನಗೆ ನಾಲ್ಕನೆಯ ಬಹುಮಾನ ಬಂತು. ಅದು ನನಗೂ ಸಮಾಧಾನಕರವೆನ್ನಿಸಿದ್ದು, ತೀರ್ಪುಗಾರರ ಮೊದಲ ಮೂರು ಕಥೆಗಳನ್ನು ಓದಿದಾಗ! ಬಹುಶಹ ಕವಿತೆಗಳನ್ನು ಕಳುಹಿದವರ ಅನುಭವವೂ ಹೀಗೆಯೇ ಇರಬೇಕು. ಆಯ್ಕೆಯಾದ ಕವಿತೆಗಳಲ್ಲಿ ಹೊಸತನವಿದೆ, ಚಿಂತನೆ ಇದೆ. ಇಲ್ಲಿ ಸ್ಪರ್ಧೆ ಯುದ್ಧವಾಗಿಲ್ಲ ಅನ್ನುವುದು ಸ್ಪಷ್ಟ! ಈ ನೆಲೆಯಲ್ಲಿ ತೀರ್ಪುಗಾರರೂ ಕೂಡ ಅಭಿನಂದನಾರ್ಹರು. ಅನೇಕ ಸಂದರ್ಭಗಳಲ್ಲಿ ಇದಕ್ಕೆ ವ್ಯತಿರಿಕ್ತ ಅನುಭವವಾಗುವುದಿದೆ. ತತ್ವ ಮತ್ತು ಸತ್ವಾಧಾರಿತ ನಿಲುಮೆಯ ಸಂಪಾದಕರಿದ್ದರೆ ಮಾತ್ರವೇ ಸ್ಪರ್ಧೆಗಳು ನ್ಯಾಯಯುತವಾಗಿರುತ್ತವೆ. ಇಲ್ಲಿ ಅಂತಹ ಸುಹೃದ ಅನುಭವ ನನಗಂತೂ ಆಗಿದೆ.
ವಿಶೇಷಾಂಕ ಕೈಸೇರಿದ ದಿನದಿಂದ ಮೂರ್ನಾಲ್ಕು ದಿನ ಅದರಲ್ಲಿಯೇ ಮುಳುಗಿದ್ದೆ. ಅಷ್ಟರ ಮಟ್ಟಿಗೆ ಅದು ನನ್ನನ್ನು ಹಿಡಿದಿಟ್ಟುಕೊಂಡಿತು. ವರ್ತಮಾನದ ಓದುಗ ವಲಯ ಇಷ್ಟಪಡುವಂತಹ ಸಂಗತಿಗಳನ್ನೇ ಪಾಕಗೊಳಿಸಿ ಬಡಿಸಿದ ಮೃಷ್ಟಾನ್ನದಂತೆ ಲೇಖನಗಳು, ಸಂದರ್ಶನಗಳು, ವ್ಯಕ್ತಿ ಪರಿಚಯಗಳು, ವೈಚಾರಿಕ ಪ್ರಬಂಧಗಳು ನಡುನಡುವೆ ಕವಿತೆಗಳು ಎಲ್ಲವೂ ಮುದನೀಡುವಂತಿದ್ದರೆ ಇಡೀ ವಿಶೇಷಾಂಕದ ಮುನ್ನುಡಿಯಂತಿರುವ ಸಂಪಾದಕೀಯ ಒಂದಂಗುಲ ಮೇಲೆನ್ನಿಸಿ ಆಪ್ತವೆನ್ನಿಸಿತು.
ಗೋವರ್ಧನ ಗಿರಿಯವರ ಆಸಕ್ತಿ ಮತ್ತು ಧೋರಣೆಯಲ್ಲಿ ಸ್ಪಷ್ಟತೆಯಿದೆ. ಅವುಗಳ ನಿರ್ವಹಣೆ ಉತ್ತುಂಗವಾಗಿದೆ. ಸಂಪಾದಕರ ಅಂತರಂಗವನ್ನು ಬಹಿರಂಗಗೊಳಿಸಿದ ಭಾವಕ್ಕೆ ತಲೆ ತೂಗಿದೆ. ಅವರ ಕ್ಷಮತೆ, ಹೊತ್ತ ಹೊಣೆಗಾರಿಕೆ, ಸಂಚಿಕೆಯ ಪ್ರತಿ ಪುಟಗಳಲ್ಲಿ ಪ್ರತಿ ಅಕ್ಷರಗಳಲ್ಲಿಯೂ ಕಾಣಿಸಿದೆ. ಪತ್ರಿಕೋದ್ಯಮದೆಡೆ ಅವರಿಗೆ ಗಂಭೀರತೆ ಇದೆ. “ದೇವನಗರಿ ಸುದ್ದಿದಿನ” ಪತ್ರಿಕೆ, ಸಮಾಜದೆದುರಿನ ಕನ್ನಡಿಯಾಗಬೇಕು ಅನ್ನುವ ಅವರ ಹಂಬಲದಲ್ಲಿ ಪ್ರಾಮಾಣಿಕತೆಯಿದೆ. ಆ ನೆಲೆಯಲ್ಲಿಯೇ ವಿಶೇಷಾಂಕದ ಒಂದೊಂದೂ ಪುಟವನ್ನೂ ಅವರು ಅಳೆದು ತೂಗಿ ಕಾಳಜಿಯಿಂದ ಓದುಗರಿಗೊಪ್ಪಿಸಿದ್ದಾರೆ. ಅವರವರ ಆಸಕ್ತಿಗಳಿಗೆ ಒಂದಿಲ್ಲೊಂದು ಓದಿನ ಸಖ್ಯವನ್ನು ಹೊತ್ತಿಗೆ ಒದಗಿಸಿದೆ.
ಇನ್ನು, ಕಿರೀಟದೊಳಗಿನ ಮುತ್ತುಗಳಂತೆ ಪ್ರಕಾಶಿಸುವ ಚಿತ್ರಗಳು ಸಂಚಿಕೆಗೆ ಇನ್ನಷ್ಟು ಮೆರಗು ನೀಡಿವೆ. ಮುಖಪುಟದ ರೂಪದರ್ಶಿಯ ಸಹಜ ಸೌಂದರ್ಯ ಕಣ್ಣೆಳೆಯುವಂತೆ, ವಿಶೇಷಾಂಕ ಇಡೀಯಾಗಿ ಮನಸ್ಸನ್ನು ಮುಟ್ಟಿದೆ ಅನ್ನುವಲ್ಲಿ ಅನುಮಾನವಿಲ್ಲ. ಒಟ್ಟಾರೆಯಾಗಿ ಗೋವರ್ಧನರ ಶ್ರಮ ಮತ್ತು ಸಮಯ ಇಲ್ಲಿ ಸಾರ್ಥಕವಾಗಿದೆ.
ಅಭಿನಂದನೆಗಳು ಗೋವರ್ಧನ ಗಿರಿ ಹಾಗೂ ಅವರ ತಂಡಕ್ಕೆ.
–ಟಿ.ಆರ್. ಪ್ರಕಾಶ ಭಾಗವತ, ಶಿರಸಿ. 9902720407, 7019360579

ಅಂತರಂಗ
ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ದೇವನಗರಿ ಸುದ್ದಿದಿನ ಕನ್ನಡ ದಿನಪತ್ರಿಕೆ, ಏಕಾಂತಗಿರಿ ಟ್ರಸ್ಟ್, ದಾವಣಗೆರೆ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ‘ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪ್ರಶಸ್ತಿ–2026’ ಘೋಷಿಸಲಾಗಿದ್ದು, ಅರ್ಹ ಬರಹಗಾರರಿಂದ ಕಾದಂಬರಿ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚಿಂತನೆ, ಸೃಜನಶೀಲತೆ ಹಾಗೂ ವಿಭಿನ್ನ ಕಥನ ಸಾಧ್ಯತೆಗಳನ್ನು ಹೊಂದಿರುವ ಕಾದಂಬರಿಕಾರರನ್ನು ಪರಿಚಯಿಸುವ ಆಶಯದೊಂದಿಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಇದುವರೆಗೆ ಯಾವುದೇ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದ ಬರಹಗಾರರಿಗೆ ತಮ್ಮ ಸೃಜನಶೀಲತೆಯನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಲು ಇದು ಉತ್ತಮ ವೇದಿಕೆಯಾಗಲಿದೆ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿರುವ ಬರಹಗಾರರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಸ್ಪರ್ಧೆಗೆ ಸಲ್ಲಿಸುವ ಕಾದಂಬರಿಯು ಸಂಪೂರ್ಣ ಸ್ವತಂತ್ರ ಹಾಗೂ ಲೇಖಕರ ಸ್ವಂತ ರಚನೆಯಾಗಿರಬೇಕು. ಕಾದಂಬರಿಯ ಯಾವುದೇ ಭಾಗವು ಈ ಮೊದಲು ಯಾವುದೇ ಮಾಧ್ಯಮಗಳಲ್ಲಿ ಪ್ರಕಟವಾಗಿರಬಾರದು ಅಥವಾ ಪ್ರಸಾರವಾಗಿರಬಾರದು. ಈಗಾಗಲೇ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವ ಕಾದಂಬರಿಗಳನ್ನು ಪರಿಗಣಿಸಲಾಗುವುದಿಲ್ಲ. ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ.
ಹಸ್ತಪ್ರತಿಯನ್ನು A4 ಅಳತೆಯ ಹಾಳೆಯಲ್ಲಿ ನುಡಿ ಅಥವಾ ಯುನಿಕೋಡ್ ಕನ್ನಡ ಫಾಂಟ್ ಬಳಸಿ, 12 ಪಾಯಿಂಟ್ ಅಕ್ಷರ ಗಾತ್ರದಲ್ಲಿ ಸ್ಪಷ್ಟವಾಗಿ ಟೈಪ್ ಮಾಡಿರಬೇಕು. ಕಾದಂಬರಿಯು ಕನಿಷ್ಠ 120 ಪುಟಗಳಿಗಿಂತ ಕಡಿಮೆ ಇರಬಾರದು. ಹಸ್ತಪ್ರತಿಯ ಮೊದಲ ಪುಟದಲ್ಲಿ ಕಾದಂಬರಿಯ ಶೀರ್ಷಿಕೆಯನ್ನು ಮಾತ್ರ ನಮೂದಿಸಬೇಕು. ಲೇಖಕರ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಹಾಗೂ ಕಾದಂಬರಿಯ ಸಂಕ್ಷಿಪ್ತ ಪರಿಚಯವನ್ನು ಪ್ರತ್ಯೇಕ ಲಕೋಟೆಯಲ್ಲಿ ಕಳುಹಿಸಬೇಕು. ಕೃತಿಯು ಸ್ವತಂತ್ರ ರಚನೆಯಾಗಿದ್ದು, ಈ ಮೊದಲು ಪ್ರಕಟವಾಗಿಲ್ಲ ಎಂಬ ಸ್ವಯಂ ದೃಢೀಕರಣ ಪತ್ರವನ್ನೂ ಲಗತ್ತಿಸುವುದು ಕಡ್ಡಾಯವಾಗಿದೆ.
ಕೃತಿಗಳ ಆಯ್ಕೆಯಲ್ಲಿ ಸಾಹಿತ್ಯಕ ಗುಣಮಟ್ಟ, ಭಾಷಾ ಸೊಗಸು, ಕಥನ ತಂತ್ರ, ಸೃಜನಶೀಲತೆ, ವೈಚಾರಿಕತೆ ಹಾಗೂ ಸಾಮಾಜಿಕ ಪ್ರಸ್ತುತತೆಗೆ ಆದ್ಯತೆ ನೀಡಲಾಗುವುದು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದು, ಸಲ್ಲಿಸಿದ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ.
ಆಯ್ಕೆಯಾಗುವ ಕಾದಂಬರಿಗೆ ₹10,000 ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಆಸಕ್ತರು ತಮ್ಮ ಹಸ್ತಪ್ರತಿಗಳನ್ನು ಡಿಸೆಂಬರ್ 30, 2026ರೊಳಗೆ ಕಳುಹಿಸಬೇಕು.
ಹಸ್ತಪ್ರತಿಗಳನ್ನು ‘ಸಂಪಾದಕರು, ದೇವನಗರಿ ಸುದ್ದಿದಿನ–ಕನ್ನಡ ದಿನಪತ್ರಿಕೆ, #3231/01, ಸಂಜೀವ ಸದನ, 11ನೇ ಮುಖ್ಯ ರಸ್ತೆ, 4ನೇ ಅಡ್ಡರಸ್ತೆ, ಎಂ.ಸಿ.ಸಿ. ಬಿ ಬ್ಲಾಕ್, ದಾವಣಗೆರೆ–577004’ ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9980346243 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ | ವಾಟ್ಸಾಪ್ | 9980346243




