Connect with us

ಸಿನಿ ಸುದ್ದಿ

EXCLUSIVE INTERVIEW | ‘ಶಬ್ಧ ಗಾರುಡಿಗ ಟಗರು ಮಾಸ್ತಿ’ ಮನದಾಳ

Published

on

” ಚಿಟ್ಟೆ…ಅಂಕಲ್ ನಾ ಹೊಡಿತೀನಿ…ಹೇ ಬಿಡು ಸುಬ್ಬಿ…ಬೆಳಗ್ಗೆ ಹಾಲು ತುಪ್ಪ ಬಿಡೋದ್ರೊಳಗೆ ಅಂಕಲ್ ನಾ ಹೊಡಿತೀನಿ; ಅಂಕಲ್ ನಾ ಹೊಡಿತೀನಿ”. ” ನಿಂದು ಒಂದ್ ಜನ್ಮ, ನಿಮ್ಗೂ ಒಂದ್ ಜನ್ಮದಿನ ಬೇರೆ ಕೇಡು”. ” ಮೀಸೆ, ಗಡ್ಡ, ಬಿಟ್ಟೋರ್ನೆಲ್ಲ ಗಂಡ್ಸು ಅನ್ನೋದಾದ್ರೆ ಕರಡಿ ಎಲ್ಲಕ್ಕಿಂತ ದೊಡ್ ಗಂಡ್ಸು”. ” ನಾವು ಮ್ಯಾಚ್ನಲ್ಲಿ ಸೋಲಲ್ಲ, ಅಕಸ್ಮಾತ್ ಸೋತ್ರೂ..ಮ್ಯಾನ್ ಆಫ್ ದಿ ಮ್ಯಾಚ್ ನಮ್ದೆ”. ಸುಕ್ಕಾ ಸೂರಿಯವರ ‘ಟಗರು’ ಸಿನೆಮಾದ ಇಂಥ ಸಂಭಾಷಣೆಯ ಜಂಗಮ ಭಾವ, ನೋಡುಗನ ಎದೆಯಲ್ಲಿ ಸ್ಥಾವರಗೊಳ್ಳುವಂತೆ ಮಾಡಿ, ತಮ್ಮ ರೋಚಕ, ರಂಜನೀಯ, ಕಿಲಾಡಿತನದ ಮಾತುಗಳ ಮೂಲಕ ಕನ್ನಡಿಗರ ಮನೆಮಾತಾಗಿದ್ದಾರೆ ಸಂಭಾಷಣಾಕಾರ ಮಂಜು ಮಾಸ್ತಿ. ಇವರು ಮಾಸ್ತಿ ಎಂತಲೇ ಚಂದನವನದಲ್ಲಿ ಚಿರಪರಿಚಿತ.

‘ಶಬ್ದದೊಳಗೆ ನಿಶ್ಯಬ್ದ ; ನಿಶ್ಯಬ್ದದೊಳಗೆ ಶಬ್ದ’ ಹುಡುಕುತ್ತಾ..ಕತೆಗಾರನಾಗಿ, ಸಂಭಾಷಣಾಕಾರನಾಗಿ, ನಟನಾಗಿ, ಒಬ್ಬ ಒಳ್ಳೆಯ ಓದುಗನಾಗಿ ಎಲ್ಲರ ಚಿತ್ತ ತನ್ನತ್ತ ಹೇಗೆ ಸೆಳೆಯ ಬೇಕು ಎಂಬ ಚಾಲಾಕಿತನದ ಶಬ್ದಮಾಂತ್ರಿಕ ಮಾಸ್ತಿ ಅವರು, ನಿಜಕ್ಕೂ ಒಬ್ಬ ಬರಹಗಾರ ತಮ್ಮ ಬರವಣಿಗೆಯನ್ನ ಪಾಲಿಶ್ ಮಾಡಿಕೊಳ್ಳ ಬೇಕಾದಾಗ, ತಾನು ಬದುಕುತ್ತಿರುವ ಸಮಾಜದೊಟ್ಟಿಗೆ ಹೇಗೆಲ್ಲಾ ಸಂಪರ್ಕವಿಟ್ಟುಕೊಳ್ಳಬೇಕು, ದೈನಂದಿನ ಜೀವನದ ಸಂಗತಿಗಳನ್ನು ತನ್ನ ಕುತೂಹಲದ ಕಣ್ಣಿನ್ನಿಂದ ಹೇಗೆಲ್ಲಾ ನೋಡ ಬಹುದು ಎಂಬುದಕ್ಕೆ ಟಗರು ಸಿನೆಮಾದ ಸಂಭಾಷಣೆಯೇ ಸಾಕ್ಷಿ. ಶಬ್ದಗಾರುಡಿಗ ನಂತೆ ಕಾಣುವ ಈ ಮಾಸ್ತಿ ನಿಜಕ್ಕೂ ಕನ್ನಡದ ಆಸ್ತಿಯೇ. ಏಕೆಂದರೆ ಇವರೊಳಗಿರುವ ಒಬ್ಬ ಸಹೃದಯನೇ ಇವರನ್ನ ಬೆಳೆಸಿದೆ, ಮುಂದೆಯೂ ಬೆಳೆಸುತ್ತದೆ ಎಂಬುದು ನಮ್ಮ ಮನದ‌ ಸೂಕ್ಷ ಗ್ರಹಿಸಿದ್ದು. ಇಂತಹ ಒಬ್ಬ ‘ಸೂಕ್ಷ್ಮಜ್ಞ’ನೊಂದಿಗೆ ಸುದ್ದಿದಿನ ತನ್ನ ಮಾತು-ಕತೆಯಲ್ಲಿ ಮಾತನಾಡಿಸಿದಾಗ ಅವರು ಎದೆ ತುಂಬಿ ಮಾತನಾಡಿದ್ದಾರೆ‌. ಅದರ ಅಕ್ಷರ ರೂಪ‌ ಇಲ್ಲಿದೆ.

ಟಗರು ಮಾಸ್ತಿ ಮನದಾಳ

ಬಾಲ್ಯದಿಂದಲೂ ಸಾಹಿತ್ಯದ ಓದು, ಬರವಣಿಗೆಯಲ್ಲಿ ತೊಡಗಿಸಿಕೊಂಡು,‌ಬರವಣಿಗೆಯಲ್ಲಿಯೇ ಬದುಕು ಕಾಣಬೇಕು ಎಂಬ ಕನಸಿದ್ದರೂ ಅದು ಅಸಾಧ್ಯವೇನೋ ಎಂಬ ಅಪನಂಬಿಕೆ ನನ್ನನ್ನು ಕಾಡಿದ್ದು ಸತ್ಯ. ಆದರೆ ಸಿನೆಮಾರಂಗಕ್ಕೆ ಬಂದಮೇಲೆ ಬರಹಗಾರನಿಗಿರುವ ಶಕ್ತಿ ಎಂಥದ್ದು ಅನ್ನೋದು ನನಗೆ ಮನವರಿಕೆಯಾಗಿದೆ. ಅದರಲ್ಲೂ ಸೂರಿ ಸರ್ ‘ಟಗರು’ ಸಿನೆಮಾ ನನ್ನನ್ನು ಈ ಮಟ್ಟಿಗೆ ಗುರುತಿಸುವಂತೆ ಮಾಡಿದ ಮೇಲಂತೂ ಬರವಣಿಗೆಯೇ ನನ್ನ ಜೀವಾಳ,ಜೀವನ ಆಗಿಬಿಟ್ಟಿದೆ.

ಅಂದಹಾಗೆ ನಾನು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕೆ.ಉಪ್ಪಾರಹಳ್ಳಿ ಎಂಬ ಗ್ರಾಮದವನು. ನಮ್ಮದು ಮಿಡಲ್ ಕ್ಲಾಸ್ ಫ್ಯಾಮಿಲಿ. ತುಂಬಾ ಕಷ್ಟಗಳ ಜೊತೆಗೆ ಬೆಳೆದವನು. ಆ ಕಷ್ಟಗಳನ್ನೇ ನನ್ನ ಜೀವನೋತ್ಸಾಹವಾಗಿ ಪ್ರೀತಿಯಿಂದ ಬದುಕುತ್ತಾ ಬಂದೆ. ನನ್ನ ಕಡು ಕಷ್ಟಗಳೇ ನನ್ನ ಒಬ್ಬ ಬರಹಗಾರನಾಗಿ ಮಾಡಿದವು ಅಂದ್ರೆ ತಪ್ಪಾಗಲಾರದು. ನನ್ನ ಆ ದಿನಗಳ ‘ನೆನಪಿನ ಬುತ್ತಿ’ ಯನ್ನೇ ಬರವಣಿಯ ಮೂಲವಾಗಿಸಿಕೊಂಡು ಬರೆಯಲು ಹೊರಟೆ. ಪ್ರೈಮರಿ ಶಾಲೆಯಿಂದಲೂ ನಾನು ಬಾಲಮಿತ್ರ, ಚಂದಮಾಮ, ಕಾಮಿಕ್ಸ್ ಬುಕ್, ಜನಪದ ಕತೆಗಳು, ಪಂಚತಂತ್ರ ಕತೆಗಳನ್ನು ನಾನು ಅಚ್ಚುಕಟ್ಟಾಗಿ ಓದಿಕೊಂಡು ಬಂದೆ. ಆ ಕತೆಗಳ ಮೂಲ ಆಶಯ ‘ನೀತಿ’ ಹೇಳುವುದೇ ಆಗಿದ್ದರಿಂದ ಅವು ನನ್ನನ್ನು ಆವಾಹಿಸಿಕೊಂಡು ಬಿಟ್ಟವು. ಹಾಗೇ ಶಾಲೆಯಲ್ಲಿ ಮೇಷ್ಟ್ರುಗಳು ಹೇಳುತ್ತಿದ್ದ ಕತೆಗಳು ನನ್ನನ್ನ ತುಂಬಾ ಕಾಡಿದವು. ನಮ್ಮ ಮೇಷ್ಟುಗಳು ತುಂಬಾ ವಿಶಿಷ್ಟವಾಗಿ ಕತೆಹೇಳುವ ಪರಿಯೇ ನನ್ನ ಕುತೂಹಲವನ್ನು ಕೆರಳಿಸುತ್ತಿದ್ದವು.ನಾನು ಕತೆಗಳನ್ನು ಮಂತ್ರ ಮುಗ್ಧನಾಗಿ ಕೇಳುತ್ತಿದ್ದೆ.

ನಮ್ಮ ಮನೆಯಲ್ಲಿ‌ ಆಗಾಗ ನಮಗೆ ಕಾಸುಕೊಟ್ಟು ಟೆಂಟ್ ಗಳಲ್ಲಿ‌ ಸಿನೆಮಾ ನೋಡಲು ಕಳುಹಿಸುತ್ತಿದ್ದರು. ಟೆಂಟ್ ಒಳಗೆ ಕೂತು ನೋಡುವ ಸಿನೆಮಾಗಳು ನನಗೆ ಮಾಯಾಲೋಕದಂತೆ ಭಾಸವಾಗುತ್ತಿತ್ತು. ಸಿನೆಮಾ ನೋಡಿ ಬಂದಾಗಿನ ಖುಷಿ ಹೇಳಲು ನನಗೆ ಪದಗಳೇ ಸಾಲುತ್ತಿರಲಿಲ್ಲ. ಅಷ್ಟೊಂದು ಆಳವಾಗಿ ಇಳಿದು ಹೋಗಿಬಿಡ್ತಾಇದ್ದೆ ಸಿನೆಮಾಗಳನ್ನ‌ ನೋಡಿ. ಈಗ ವಿದೇಶಕ್ಕೆ ಹೋಗಿಬಂದಾಗ ಆಗುವಂತಹ ಖುಷಿ , ಆಗ ಸಿನೆಮಾ ನೋಡಿದಾಗ ಆಗ್ತಾ ಇತ್ತು. ಸಿನೆಮಾ ಪರದೆಯೊಳಗೆ ಕಾಣುವ ದೃಶ್ಯಗಳು ನನ್ನನ್ನ ಮೈಮರೆಸುತ್ತಿದ್ದವು. ಆಗ ಅಂಥಹ ಸಿನೆಮಾಗಳು ಬರ್ತಾ ಇದ್ವು ಬಿಡಿ (ಈಗಲೂ ಬರ್ತಾ ಇದಾವೆ) . ಹೀಗೆ ಸಿನೆಮಾಗಳು ನನ್ನ ಕಾಡಿದ್ದರಿಂದ ಸಿನೆಮಾವನ್ನ ಆರಾಧಿಸುತ್ತಾ ಬಂದೆ. ಕೆಲವು ನನ್ನ ಸ್ನೇಹಿತರು ಸಿನೆಮಾ‌ ನೋಡಿ ಬಂದು ಅಭಿನಯದ ಮೂಲಕ ರೋಚಕವಾಗಿ ಸಿನೆಮಾ‌ ಕತೆ ಹೇಳ್ತಾ ಇದ್ರು, ಅವರು ಹೇಳೋ ಕತೆಗಳನ್ನ ತದೇಕ ಚಿತ್ತದಿಂದ ಕೇಳ್ತಾ, ನೋಡ್ತಾ ಇದ್ದೆ. ಈ ಸಂಗತಿಗಳೂ ಕೂಡಾ ನನ್ನ ಸಿನೆಮಾ ಮೇಲಿನ ಪ್ರೀತಿಯನ್ನ ಹೆಚ್ಚಿಸ್ತಾ ಬಂದ್ವು. ಜೊತೆಗೆ ಅಪರೂಪಕ್ಕೊಮ್ಮೆ ನನಗೆ ಮನೇಲಿ ಹೊಸ ಪುಸ್ತಕ ಕೊಡಿಸ್ತಾ ಇದ್ರು, ನಾನು ಆ ಪುಸ್ತಕದ ಪುಟಗಳನ್ನ ತಿರುವಿಹಾಕಿ ಹಾಳೆಗಳ ವಾಸನೆಯನ್ನ ಗ್ರಹಿಸ್ತಾ ಇದ್ದೆ. ಬಹುಶಃ ಹಾಳೆಗಳ ಅಕ್ಷರದ ಇಂಕು ಹಾಗೂ ಹಾಳೆಗಳ ಪರಿಮಳವೇ ಕತೆಗಳನ್ನ ಓದಿ ಆಸ್ವಾದಿಸುವ ಹುಚ್ಚು ಬಿಡಿಸಿ ಬಿಟ್ಟವು. ಒಟ್ಟಾರೆ ಕನ್ನಡ ಮೀಡಿಯಂ, ಸರ್ಕಾರಿ ಶಾಲೆಗಳೇ ನನ್ನ ಬರವಣಿಗೆಯ ಶಕ್ತಿ ಎಂದರೆ ಅತಿಶಯೋಕ್ತಿಯಾಗಲಾರದು.

ನಮ್ಮ ಊರಿಗೆ ತೆಲುಗು ಭಾಷೆಯ ಪ್ರಭಾವ ಹೆಚ್ಚು, ನಾನು ಅದರ ಪ್ರಭಾವಕ್ಕೆ ಬಲಿಯಾಗಲಿಲ್ಲ. ತೆಲುಗು ಸಿನೆಮಾಗಳು ತುಂಬಾ ಪ್ರದರ್ಶನ ಕಾಣ್ತಾಇದ್ವು ಆಗ. ತೆಲುಗಿನ ಹಲವು ಸಿನೆಮಾಗಳು ಕ್ರೈಂ ಮತ್ತು ಸೆಕ್ಸ್ ಅನ್ನ ವೈಭವೀಕರಿಸಿ ಸಹಜತೆಯೇ ಕಾಣೆಯಾಗಿದ್ದುದರಿಂದ ನಾನು ಅಂಥಹ ಸಿನೆಮಾಗಳನ್ನು ವಿರೋಧಿಸುತ್ತಾ ಬಂದೆ. ತೆಲುಗಿನ ಅಂತಹ ಸಿನೆಮಾಗಳು ಕನ್ನಡ ಸಿನೆಮಾಗಳ‌ ಮೇಲೂ ಪ್ರಭಾವ ಬೀರಿದವು. ಆದರೆ ಅವ್ಯಾವೂ ಅಷ್ಟು ಹಿಟ್ ಆಗಲಿಲ್ಲ, ಜನರು ಅಂಥಹ ಸಿನೆಮಾಗಳನ್ನ ತಿರಸ್ಕರಿಸಿದ್ರೂ ಕೂಡಾ. ಏಕಂದ್ರೆ ಅವು ನಮ್ಮ ಕನ್ನಡದ ನೆಲಕ್ಕೆ ಒಗ್ಗುವಂತವಲ್ಲ. ನಮ್ಮ ನೆಲದಗುಣವಿರುವ ಕನ್ನಡ ಸಿನೆಮಾಗಳು ಅಮ್ಮ ಮಾಡಿದ ಅಡುಗೆ ತರ, ತುಂಬಾ ರುಚಿ ಹಾಗೂ ದೇಹಕ್ಕೆ ಒಳ್ಳೆಯದು.ಹಾಗಾಗಿ ಕನ್ನಡ ಸಿನೆಮಾರಂಗಕ್ಕೆ ಹೇಗಾದ್ರೂ ಬರಬೇಕು ಅನ್ನೋತುಡಿತ ನನ್ನಲ್ಲಿ ಹೆಚ್ಚಾಗ್ತಾ ಬಂತು. ನನಗೆ ಸಿನೆಮಾದ ಹಿನ್ನೆಲೆಯಿಲ್ಲದಿದ್ದರೂ ನನಗೆ ಸಿನೆಮಾ ಮೇಲಿರುವ ಪ್ರೀತಿಯೇ ನನ್ನ ಸಿನೆಮಾ ಹಿನ್ನೆಲೆ.

ನನ್ನ ಸಿನೆಮಾ ಎಂಟ್ರಿ

ಸಿನೆಮಾದಲ್ಲಿ ಹೇಗಾದರೂ ಕೆಲಸ ಮಾಡ್ಬೇಕು ಅನ್ನೋ ಹಂಬಲದಿಂದ ತುಂಬಾ ಸೈಕಲ್ ಹೊಡೆದೆ. ಆದ್ರೆ ಯಾವ ಅವಕಾಶಗಳೂ ನನಗೆ ದಕ್ಕಲಿಲ್ಲ. ಆದ್ರೆ ಒಮ್ಮೆ ನಮ್ಮ ಮನೆಯ ಹತ್ತಿರದಲ್ಲಿ ತುಷಾರ್ ರಂಗನಾಥ್ (ಗುಲಾಮ, ಕಂಠೀರವ ಸಿನೆಮಾ ನಿರ್ದೇಶಕ) ಸಿನೆಮಾದಲ್ಲಿ ಕೆಲಸ ಮಾಡ್ತಾರೆ ಅಂತ ಗೊತ್ತಿತ್ತು. ಅವರನ್ನ ಹೇಗೋ ಕಷ್ಟಪಟ್ಟು ಪರಿಚಯ ಮಾಡ್ಕೊಂಡೆ. ಈ ಸಮಯದಲ್ಲಿ ಅವರು ಸಾಧುಕೂಕಿಲಾ ನಿರ್ದೇಶನದ, ದರ್ಶನ್ ಅಭಿನಯದ ‘ಸುಂಟರಗಾಳಿ’ ಸಿನೆಮಾಗೆ ಸಹ ನಿರ್ದೇಶಕ ನಾಗಿ ಕೆಲಸ ಮಾಡ್ತಿದ್ರು. ಈ ಸಿನೆಮಾ ‘ಚಿತ್ರಕತೆ’ ಯ ಬಗ್ಗೆ ಚರ್ಚೆ ಮಾಡೋದಿಕ್ಕಾಗಿ ನನ್ನ ಕರ್ಕೊಂಡ್ ಹೋದ್ರು. ಸುಂಟರಗಾಳಿ ಸಿನೆಮಾದಲ್ಲಿ ದರ್ಶನ್ ಅವರು ಹೇಗೆ ಎಂಟ್ರಿ ಆಗ್ಬೇಕು ಅನ್ನೋ ದೃಶ್ಯದ ಬಗ್ಗೆ ಚರ್ಚೆ ನಡೀತಾ ಇತ್ತು, ಆಗ ನನಗೆ ತೋಚಿದ, ಪಕ್ಕಾ ಮಾಸ್ ಆಗಿ ಇರೋ ಒಂದ್ ದೃಶ್ಯಾನ ವಿವರಿಸ್ತಾ ಹೋದೇ, ಆಗ ಎಲ್ರೂ ಖುಷಿಯಿಂದ ಒಪ್ಪೊಂಡ್ರು. ಅವತ್ತೇ ನನ್ನ ಸಿನೆಮಾದ ಎಂಟ್ರಿಯೂ ಆಗೋಯ್ತು. ತುಂಬಾನೆ ಖುಷಿಕೊಡೋ ಸಂಗತಿ ನನಗದು.

ಸೂರಿ – ಭಟ್ಟರ ಸಹವಾಸ

ಸುಂಟರಗಾಳಿ‌ ಸಿನೆಮಾಗೆ ಸೂರಿ ಸರ್ ಕೂಡ ಸಹ ನಿರ್ದೇಶಕರಾಗಿ ಕೆಲಸ ಮಾಡ್ತಿದ್ರು. ತುಷಾರ್ ರಂಗನಾಥ್ ಕಡೆಯಿಂದ ಅವರ ಪರಿಚಯವಾಯ್ತು. ನಂತರ ಅದೇ ಸಮಯದಲ್ಲಿ ಸೂರಿ ಸರ್ ಹಾಗೂ ಯೋಗರಾಜ್ ಭಟ್ ಸರ್ ಬಿ.ಸುರೇಶ್ ಅವರ ನಿರ್ದೇಶನದ ‘ಸಾಧನೆ’ ಎಂಬ ಧಾರಾವಾಹಿಯಲ್ಲಿ ಕೆಲಸ ಮಾಡ್ತಿದ್ರು. ಸಾಧನೆ ಧಾರಾವಾಹಿಯ ಸೆಟ್ ಗೆ ನನ್ನನ್ನೂ ಕೂಡ ಕರೆದುಕೊಂಡು ಹೋಗ್ತಾದ್ರು ತುಷಾರ್ ರಂಗನಾಥ್. ಆಗ ಅವರ ಜೊತೆ ಸಿನೆಮಾಗೆ ಸಂಭಂದಿಸಿದ ವಿಷಯಗಳನ್ನ ಚರ್ಚೆ ಮಾಡ್ತಾ ಅವರೊಳಗೆ ನನ್ನೊಬ್ಬನನ್ನಾಗಿ ಮಾಡ್ಕೊಂಡ್ರು ಸೂರಿ ಸರ್ ಹಾಗೂ ಭಟ್ ಸರ್. ಹಾಗೇ ಇನ್ನೊಂದ್ ವಿಷಯ ಹೇಳಲೇ ಬೇಕು ನಾನು. ಮುಂಗಾರು ಮಳೆ ಸಿನೆಮಾ ಮಾಡಿ‌ ಭಟ್ ಸರ್ ಒಂದ್ ಟ್ರೆಂಡ್ ಸೆಟ್ ಮಾಡಿದ್ರು,ಹಾಗೆ ಸಿನೆಮಾ ಒಳ್ಳೆಯ ಲಾಭವನ್ನ ನಿರ್ಮಾಪಕರಿಗೆ ತಂದು ಕೊಡ್ತು. ಆಗ ಇನ್ಫೋಸಿಸ್ ನ ನಾರಾಯಾಣ ಮೂರ್ತಿಯವರು ಭಟ್ ಸರ್ ಅವರನ್ನ ಕರೆಸಿ ಹೇಳಿದ್ರಂತೆ, ” ಕನ್ನಡ‌‌ದಲ್ಲಿ‌ ಇಂತಹ ಒಂದು ಒಳ್ಳೆಯ ಸಿನೆಮಾ ಕೋಟಿಗಟ್ಟಲೆ ಹಣ ಮಾಡೋದು ಅಂದ್ರೆ ಸುಮ್ನೆ ಮಾತಲ್ಲ, ನಾವು ಏನೆಲ್ಲಾ ಮಾಡ್ತೀವಿ‌, ಅದ್ರೆ ಒಂದ್ ಸಿನೆಮಾ ಮಾಡಿ ನೀವು ಎಲ್ಲರೀತಿಯಿಂದಲೂ ಯಶಸ್ಸುಗಳಿಸಿದರ ಬಗ್ಗೆ ತುಂಬಾ ಹೆಮ್ಮೆ‌ಯಿಂದ ಹೇಳಿದ್ರಂತೆ, ಅಂತಹ ಭಟ್ ಸರ್ ಗೆ ನಾನು ಕತೆ ಹೇಳಿದ್ದು ತುಂಬಾ ಖುಷಿಕೊಡ್ತು. ಅದೇ ಕನ್ನಡಕ್ಕಿರುವ ತಾಕತ್ತು ಅಂತಾನೂ ನಂಗೆ ಅರಿವಾಯ್ತು.

ಕತೆಗಾರನಾಗಿ

ನಾನು ಒಂದಷ್ಟು ಕತೆಗಳನ್ನ ಬರೆದೆ. ಅದರಲ್ಲಿ‌ ಬಾಲ್ ಪೆನ್ ಅನ್ನೋ ಕತೆಯನ್ನ ಪತ್ರಕರ್ತ ರವಿಬೆಳೆಗೆರೆಯವರು ಕೇಳಿ ತುಂಬಾ ಇಷ್ಟ ಪಟ್ರು. ನಂತರ ಅವರ ಮಗಳು, ನಟ ಶ್ರೀನಗರ‌ ಕಿಟ್ಟಿ ಅವರ ಪತ್ನಿ ಭಾವನಾ ಬೆಳಗೆರೆಯವರು ನಿರ್ಮಾಣ ಮಾಡಿದ್ರು. ಸಿನೆಮಾಗೆ ಒಳ್ಳೆಯ ಹೆಸರೂ ಬಂತು. ಹಾಗೆ ತುಂಬಾ ಕತೆಗಳನ್ನ ಬರೆದೆ. ಸಿನೆಮಾಗೆ ಆಗದೇ ಇರೋ‌ ಕತೆಗಳು ಇವೆ. ಅವನ್ನೆಲ್ಲಾ ಸೇರಿಸಿ ಒಂದು ಪುಸ್ತಕ ಮಾಡುವ ಯೋಚನೆಯೂ ಇದೆ. ಸಿನೆಮಾ ಬರವಣಿಗೆಯಲ್ಲಿ ಸಧ್ಯಕ್ಕೆ ಹೆಚ್ಚು ತೊಡಗಿಸಿಕೊಂಡಿರೋದ್ರಿಂದ ಪುಸ್ತಕ ಬರೋದು ಸ್ವಲ್ಪ‌ ತಡವಾಗಬಹುದು.

ಸಂಭಾಷಣಾಕಾರನಾಗಿ

ಸೂರಿ ಸರ್ ನಿರ್ದೇಶನದ ಜಂಗ್ಲಿ, ಜಾಕಿ, ಕೆಂಡಸಂಪಿಗೆ ಸಿನೆಮಾಗಳ‌ ಕತೆ, ಚಿತ್ರಕತೆ ಸಂಭಾಷಣೆಯ ಚರ್ಚೆಗಳಲ್ಲಿ ನನ್ನನ್ನೂ ತೊಡಗಿಸಿಕೊಂಡರು. ನಂತರ ಕಡ್ಡಿ ಪುಡಿ ಸಿನೆಮಾಗೆ ನಾನು ಮತ್ತು ಸೂರಿ ಸರ್ ಸಂಭಾಷಣೆ ಬರೆದ್ವಿ. ಕಡ್ಡಿಪುಡಿ ಸಿನೆಮಾದಲ್ಲಿನ ಸಂಭಾಷಣೆ ಸೂರಿ ಸರ್ ಕೈಚಳಕವೇ ಹೆಚ್ಚು, ಆದ್ರೂ ನನಗೂ ಕ್ರೆಡಿಟ್ ಕೊಟ್ರು ಸೂರಿ ಸರ್. ನಂತರ, ಕಾಲೇಜ್ ಕುಮಾರ್ ಎಂಬ ಸಿನೆಮಾಗೆ ಸಂಭಾಷಣೆ ಬರೆದೆ. ನಂತರ ‘ಟಗರು’ ಸಿನೆಮಾಗೆ ಸಂಭಾಷಣೆ ಬರೆಯುವ ಜವಾಬ್ದಾರಿಯನ್ನ ಕೊಟ್ರು ಸೂರಿ ಸರ್. ಅವರು ನನ್ನ ಮೇಲಿಟ್ಟು ಹೊರಿಸಿದ ಜವಾಬ್ದಾರಿಯನ್ನ ಸ್ಬಲ್ಪ ಮಟ್ಟಿಗೆ ನಿಭಾಯಿಸಿದ್ದೇನೆ ಅನ್ಸುತ್ತೆ. ಯಾಕಂದ್ರೆ ಸೂರಿ ಸರ್ ನನ್ನಿಂದ ಅಷ್ಟು ಕೆಲಸ ತೆಗೆಸಿದ್ರು ಅಂತ ಹೇಳೋಕೆ ನಂಗೆ ಹೆಮ್ಮೆ ಆಗುತ್ತೆ. ಹಾಗೇ ಸೂರಿ ಸರ್ ಮುಂದಿನ ಸಿನೆಮಾ ,’ಪಾಪ್ ಕಾರ್ನ್ ಮಂಕಿ ಟೈಗರ್’ ಸಿನೆಮಾಗೆ ಸಂಭಾಷಣೆ ಬರೆಯೋಕೆ ಮತ್ತೆ ಅವಕಾಶ ಮಾಡಿಕೊಟ್ಟಿದ್ದಾರೆ. ಟಗರು ಸಿನೆಮಾ ನೋಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ‘ಭೈರವ ಗೀತಾ’ ಸಿನೆಮಾಗೆ ಸಂಭಾಷಣೆ (ಕನ್ನಡ ಅವತರಿಣಿಕೆಗೆ) ಬರಯೋದಿಕ್ಕೆ ಅವಕಾಶ ಸಿಕ್ಕಿದೆ. ಅವಕಾಶ ಸಿಕ್ಕಿದ್ದರಲ್ಲಿ ನಟ ಧನಂಜಯ್ ಪಾತ್ರವೂ ದೊಡ್ಡದಿದೆ. ಧನಂಜಯ್ ಗೆ ಒಂದು ಸಲಾಮ್ ಹೇಳಲು ಈ ಸಮಯದಲ್ಲಿ‌ ಇಷ್ಟ ಪಡ್ತೇನೆ. ಇತ್ತೀಚಿಗೆ ಬಿಡುಗಡೆಯಾದ ‘ ಕಟ್ಟುಕತೆ’ ಸಿನೆಮಾಗೂ ಸಂಭಾಷಣೆ ಬರೆದಿದ್ದೇನೆ. ಹಾಗೆ ನೀನಾಸಂ‌ ಸತೀಶ್ ಅಭಿನಯದ ಅಯ್ಯೋಗ್ಯ ಸಿನೆಮಾ, ದುನಿಯಾ ವಿಜಯ್ ಅವರ ಕುಸ್ತಿ, ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ತಂಗಿ ಮಗನ ‘ಅಖಿಲ್’ ಎಂಬ ಸಿನೆಮಾಕ್ಕೆ ಸಂಭಾಷಣೆ ಬರೆದಿದ್ದೇನೆ. ಸಿನೆಮಾ‌‌ ನಿರ್ದೇಶನ ಮಾಡೋ ಆಸೆ ಇದೆ ಬರವಣಿಗೆಯ ಒತ್ತಡದಲ್ಲಿ ಅದು ಸಾಧ್ಯ ಆಗ್ತಾ ಇಲ್ಲ. ಮುಂದೊಂದು ದಿನ ನಿರ್ದೇಶಕನಾಗಿ ನಿಮ್ಮ ಮುಂದೆ ಬರ್ತೇನೆ.

ನಟನಾಗಿ

ನಾನು ಕೆಲಸ ಮಾಡಿರೋ‌ ಸಿನೆಮಾಗಳಲ್ಲೇ ಚಿಕ್ಕ- ಪುಟ್ಟ ಪಾತ್ರಗಳನ್ನ ಮಾಡ್ತಾ ಬಂದಿದೀನಿ. ಕಡ್ಡಿಪುಡಿ, ಕೆಂಡಸಂಪಿಗೆ, ಹಾಗೇ ಯೋಗರಾಜ್ ಭಟ್ ನಿರ್ದೇಶನ ‘ಪಂಚತಂತ್ರ’ ಸಿನೆಮಾದಲ್ಲೂ ಅಭಿನಯಿಸಿದ್ದೇನೆ.

ನನ್ನಿಷ್ಟದ‌ ಸಿನೆಮಾ-ನಿರ್ದೇಶಕ-ಸಂಭಾಷಣಾಕಾರ

ನನಗೆ ವೈಯಕ್ತಿಕವಾಗಿ ಇಷ್ಟವಾಗುವ ಸಿನೆಮಾಗಳು ತುಂಬಾ ಇದಾವೆ. ಅದ್ರಲ್ಲಿ ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ತೆರೆಕಂಡು ಜನಮಾನಸದಲ್ಲಿ ಉಳಿದ, ಎದ್ದೇಳು ಮಂಜುನಾಥ ಹಾಗೂ ತಿಥಿ ಸಿನೆಮಾ. ನನಗೆ ಕೆಲಸ ಕಲಿಸಿಕೊಟ್ಟ ಸೂರಿ ಸರ್ ಹಾಗೂ ಯೋಗರಾಜ್ ಭಟ್ ಸರ್, ಅವರಿಬ್ಬರೂ ನನ್ನ ಗುರು ಸಮಾನರು. ಸೂರಿ ಸರ್ ಇಂದ ಶಿಸ್ತು, ಭಟ್ ಸರ್ ಇಂದ ಶ್ರದ್ಧೆ ಕಲಿತೆ. ಹಾಗೇ ತೆಲುಗು‌ ಸಿನೆಮಾ‌ ಸಂಭಾಷಣಾಕಾರರಾದ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಕನ್ನಡದಲ್ಲಿ‌ ಪ್ರಶಾಂತ್ ರಾಜಪ್ಪ ನನಗೆ ತುಂಬಾ ಕಾಡಿರೋ ಸಂಭಾಷಣಾಕಾರರು.

ಕನ್ನಡದಲ್ಲಿ‌ ತುಂಬಾ ಒಳ್ಳೆಯ ಕತೆಗಳು ಇದಾವೆ. ಕತೆಗಾರರೂ ಇದ್ದಾರೆ. ಅವರನ್ನ ಗುರುತಿಸಿ ಒಂದು ಅವಕಾಶಮಾಡಿಕೊಟ್ಟರೆ ನಮ್ಮ ಕನ್ನಡ ಸಿನೆಮಾರಂಗ ಇನ್ನೂ ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಯವೇ ಇಲ್ಲ.

ಕನ್ನಡವೇ ಸತ್ಯ ; ಕನ್ನಡವೇ ನಿತ್ಯ
ಇಂತಿ‌ ನಿಮ್ಮ ಮಾಸ್ತಿ

ಅಂಕಣ

ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ

Published

on

ವಿದ್ಯಾನಾಯ್ಕ್ ಅರೇಹಳ್ಳಿ

ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.

ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.

ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.

ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ನಾಯಕ ನಟನಾಗಿ ​ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.

ಇನ್ನು 2022ರಲ್ಲಿ ​ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ​ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪರಿಶ್ರಮ ಮತ್ತು ಫಿಟ್ನೆಸ್

ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್‌ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.

ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್

ಕುಚುಕು ನಾಯಕ ನಟ ಚೌಹಾಣ್

ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
​ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ

ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.

ಬಂಜಾರ ಹವೇಲಿಯ ಹರಿಕಾರ

ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.

​ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.

ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು

Published

on

ಸುದ್ದಿದಿನ ಡೆಸ್ಕ್:ಆರಂಭಿಕ ಜೀವನ – 1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಕಾಲೇಜು ದಿನಗಳಿಂದಲೇ ಕಲೆಯತ್ತ ಒಲವು ಹೊಂದಿದ್ದರು.

ಚಲನಚಿತ್ರ ರಂಗ – 2005ರಲ್ಲಿ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಅವರು, 2007ರಲ್ಲಿ ಪುನೀತ್ ರಾಜ್‌ಕುಮಾರ್ ಅವರ ‘ಮಿಲನ’ ಚಿತ್ರದಲ್ಲಿ ಹೇಮಂತ್ ಎಂಬ ವಿಲನ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದರು.

ಇತ್ತೀಚಿನ ಜನಪ್ರಿಯತೆ – ‘ಲವ್ ಮಾಕ್ಟೇಲ್’ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟ-ನಿರ್ಮಾಪಕರಾಗಿ ದೊಡ್ಡ ಹೆಸರು ಮಾಡಿದ್ದರು.

ದಿಲೀಪ್ ರಾಜ್ ಅವರ ಸಾವು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟ. ಇವರ ಈ ಹಠಾತ್ ನಿಧನವು ಒತ್ತಡದ ಜೀವನಶೈಲಿ ಮತ್ತು ಆರೋಗ್ಯದ ಕಡೆಗೆ ನಾವು ನೀಡಬೇಕಾದ ಹೆಚ್ಚಿನ ಗಮನದ ಬಗ್ಗೆ ಎಚ್ಚರಿಕೆ ನೀಡುವಂತಿದೆ.

Continue Reading

ದಿನದ ಸುದ್ದಿ

ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು

Published

on

ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್‌ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!

ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್‌ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;

ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್‌ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.

ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್‌ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.

ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್‌ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ವಸತಿ ಯೋಜನೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ. ಈ...

ದಿನದ ಸುದ್ದಿ2 days ago

10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..

1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ...

ದಿನದ ಸುದ್ದಿ2 days ago

ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುವಲ್ಲಿ ದೇಶದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶಿಯ ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯವನ್ನು ಸುಧಾರಿಸಲು ಭಾರತ ಸರ್ಕಾರದ...

ದಿನದ ಸುದ್ದಿ2 days ago

ಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ 12 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ....

ದಿನದ ಸುದ್ದಿ2 days ago

ಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಕೃಷಿ ಇಲಾಖೆ ಹಾಗೂ ಆತ್ಮ (ATMA) ಯೋಜನೆಯಡಿ 2026-27ನೇ ಸಾಲಿನ ವಿವಿಧ ಕೃಷಿ ಪ್ರಶಸ್ತಿಗಳಿಗಾಗಿ ದಾವಣಗೆರೆ ಜಿಲ್ಲೆಯ ಅರ್ಹ ಹಾಗೂ ಆಸಕ್ತ ರೈತ ಮತ್ತು ರೈತ...

ಅಂಕಣ4 days ago

ಕವಿತೆ | ದೇವರ ಹೂವು

~ ಡಾ. ಸಿ.ಬಿ.ಐನಳ್ಳಿ ಊಟ ಮಾಟ ವೇಷ ಭಾಷೆ ಪ್ರಾರ್ಥನೆ ಬೇರೆ ಬೇರೆ ಪವಿತ್ರಪಠ್ಯ ಅವನದೊಂದು ನನ್ನದಿನ್ನೊಂದಂತೆ ನದಿ ದಂಡೆಯ ಮೇಲೆ ನೋಟ ಬೆರೆತು ಮಾತು ಮರೆತು...

ದಿನದ ಸುದ್ದಿ4 days ago

ಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ

ಸುದ್ದಿದಿನ,ಚಿತ್ರದುರ್ಗ:ಜಿಲ್ಲೆಯ ಬ್ಯಾಂಕ್ ಕಾಲೋನಿಯ ಸ್ಪೀಚ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಎರಡು ಅವಧಿಗೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಹೆಚ್.ರಾಮಚಂದ್ರಪ್ಪ (59 ವರ್ಷ) ಶನಿವಾರ ಬೆಳಗ್ಗೆ...

ದಿನದ ಸುದ್ದಿ4 days ago

ಆಶ್ರಯ ಯೋಜನೆ – ಆವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ : 2025-26 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಲು ಜೂನ್‌ 30...

ದಿನದ ಸುದ್ದಿ6 days ago

ಗರಿಕೆ ಹುಲ್ಲಿನ ಜ್ಯೂಸ್‌ನಲ್ಲಿದೆ ರಕ್ತದ ಕ್ಯಾನ್ಸರ್ ಗುಣಪಡಿಸುವ ಶಕ್ತಿ

ಗಿರೀಶ್ ಮುತ್ತು ಗರಿಕೆ ಹುಲ್ಲಿನ ರಸದ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಿನೊಡಾನ್ ಡ್ಯಾಕ್ಟಿಲಾನ್ ಪ್ರೊಟೀನ್ ಎಂಬ ಅಂಶವಿದ್ದು, ಇದು ರೋಗನಿರೋಧಕ ಶಕ್ತಿ ಹೆಚ್ಚಲು...

ದಿನದ ಸುದ್ದಿ7 days ago

ಬಡವರ ಕಲ್ಯಾಣವೇ ನಮ್ಮ ಆಡಳಿತದ ಕೇಂದ್ರಬಿಂದು : ಸಿಎಂ ಡಿಕೆಶಿ

ಸುದ್ದಿದಿನ,ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಜನಪರ ಆಡಳಿತಕ್ಕೆ ಆದ್ಯತೆ ನೀಡುವುದಾಗಿ ಘೋಷಿಸಿದ್ದು, ಯುವಕರು, ವಿದ್ಯಾರ್ಥಿಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ...

Trending