Connect with us

ನೆಲದನಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ಸೋಶಿಯಲ್ ಫಿಲಾಸಫಿ

Published

on

ರತ ಖಂಡವು ಕಂಡ ಮಹಾನ್ ದಾರ್ಶನಿಕರಾದ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಸರ್ಕಾರವು ಆಚರಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಈ ಮಹಾನ್ ಧಾರ್ಮಿಕ ಚಿಂತಕ, ಸಮಾಜ ಸುಧಾರಕರಿಗೆ ಖಂಡಿತವಾಗಿಯೂ ಇದು ಗೌರವ ಸಲ್ಲಿಸುವ ಕೆಲಸ. ಆದರೆ ದುರದೃಷ್ಟವಶಾತ್ ಪರಿಸ್ಥಿತಿ ಹೇಗಾಗಿದೆಯೆಂದರೆ ಸರ್ಕಾರಗಳು ಜಯಂತಿಗಳನ್ನು ಆಚರಿಸುವುದು ಎಂದರೆ ಆಯಾ ಮಹಾನ್ ವ್ಯಕ್ತಿಗಳು ಹುಟ್ಟಿದ ಜಾತಿಗಳನ್ನು ತುಷ್ಟೀಕರಣ ಮಾಡಲು ಮಾತ್ರ ಎಂಬಂತಾಗಿದೆ. ಬಸವ ಜಯಂತಿ ಲಿಂಗಾಯತರಿಗೆ, ವಾಲ್ಮೀಕಿ ಜಯಂತಿ ವಾಲ್ಮೀಕಿ ನಾಯಕರಿಗೆ, ಕನಕ ಜಯಂತಿ ಕುರುಬರಿಗೆ, ಕೆಂಪೇಗೌಡ ಜಯಂತಿ ಒಕ್ಕಲಿಗ ಗೌಡರಿಗೆ, ಅಂಬೇಡ್ಕರ್ ಜಯಂತಿ ದಲಿತರಿಗೆ, ಟಿಪ್ಪೂ ಜಯಂತಿ ಮುಸ್ಲಿಮರಿಗೆ ಹಾಗೂ ನಾರಾಯಣ ಗುರುಗಳ ಜಯಂತಿ ಈಡಿಗ, ಬಿಲ್ಲವ ದೀವರಿಗೆ… ಹೀಗೆ ಜಯಂತಿಗಳು ಜಾತಿಗಳಿಗೆ ಸೀಮಿತಗೊಂಡಿರುವುದು ನಾವಿರುವ ಕಾಲದ ವಿಪರ‍್ಯಾಸವೂ ಹೌದು ನಮ್ಮ ಸಮಾಜದ ಅನಾರೋಗ್ಯದ ಸ್ಥಿತಿಯೂ ಹೌದು.

ಯಾಕೆ ಈ ಮಾತನ್ನು ಹೇಳಬೇಕಾಯಿತೆಂದರೆ ಮೇಲೆ ಹೇಳಿದ ಮಹಾನ್ ವ್ಯಕ್ತಿಗಳೆಲ್ಲರೂ ತಮ್ಮ ಬದುಕಿನಲ್ಲಿ ಶ್ರಮಿಸಿದ್ದು ಜಾತಿ-ಮತ-ಲಿಂಗ ಬೇಧಗಳನ್ನು ದೂರ ಮಾಡಿ ಮನುಷ್ಯರೆಲ್ಲರೂ ಒಂದೇ ಆಗಿ ಬಾಳಬೇಕಾದ ಒಂದು ಸಮಾಜದ ಸಾಕಾರಕ್ಕಾಗಿ ಎಂಬುದು ಎಲ್ಲರೂ ಬಲ್ಲ ಸಂಗತಿ. ಇದಕ್ಕೆ ನಾರಾಯಣ ಗುರುಗಳೂ ಹೊರತಲ್ಲ. 19ನೆಯ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಬದುಕಿ ಹೋದ ಮಹಾನ್ ಸಂತರಾದ ನಾರಾಯಣ ಗುರುಗಳ ಬದುಕು ಮತ್ತು ಅವರು ತಮ್ಮ ಅನುಯಾಯಿಗೊಳಗೂಡಿ ಕೈಕೊಂಡಿದ್ದಂತಹ ಕೈಂಕರ್ಯಗಳನ್ನು ನೋಡಿದಾಗ ಈ ಸತ್ಯ ತಿಳಿಯುತ್ತದೆ. ಇಂದು ಆಚರಿಸಲಾಗುತ್ತಿರುವ ನಾರಾಯಣ ಗುರುಗಳ ಜಯಂತಿಯ ಸಂದರ್ಭದಲ್ಲಿ ಅವರ ಬದುಕು, ತಮ್ಮ ಪ್ರಯತ್ನಗಳಿಂದ ಸಮಾಜದಲ್ಲಿ ಉಂಟು ಮಾಡಿದ ಬದಲಾವಣೆ ಹಾಗೂ ಅವರು ಪ್ರತಿಪಾದಿಸಿದ ಸೋಶಿಯಲ್ ಫಿಲಾಸಫಿಯ ಸ್ಥೂಲ ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶವಾಗಿದೆ.

ನಾರಾಯಣ ಗುರುಗಳು ಕೇರಳದ ತಿರುವನಂತಪುರದಿಂದ ಉತ್ತರಕ್ಕೆ ಏಳು ಮೈಲಿ ದೂರದಲ್ಲಿರುವ ಚೆಂಬಳಾಂತಿ ಎಂಬ ಹಳ್ಳಿಯ ಮಧ್ಯಮ ವರ್ಗದ ದಂಪತಿಗಳಾದ ಮಾಡನಾಶಾನ್ ಮತ್ತು ಕುಟ್ಟಿಯಮ್ಮರ ನಾಲ್ಕನೆಯ ಮಗನಾಗಿ 1854ರ ಆಗಸ್ಟ್ 20ರಂದು ಜನಿಸಿದರು. ಅಂದು ’ಅಸ್ಪೃಶ್ಯ’ ಎಂದು ಪರಿಗಣಿಸಲ್ಪಟ್ಟಿದ್ದ ಈಳವ ಸಮುದಾಯದ (ಕರ್ನಾಟಕದಲ್ಲಿರುವ ಬಿಲ್ಲವ, ನಾಮಧಾರಿ, ಹಳೇಪೈಕ ಯಾ ದೀವರು ಸಮುದಾಯಗಳು ಮತ್ತು ಈಳವರ ಮೂಲಗಳು ಒಂದೇ ಎಂದು ಮಾನವ ಶಾಸ್ತ್ರಜ್ಞ ಎಡ್ಗರ್ ಥರ‍್ಸ್ಟ್‌ನ್ ದಾಖಲಿಸಿದ್ದಾರೆ) ಈ ದಂಪತಿಗಳು ರೈತರಾಗಿದ್ದರಲ್ಲದೇ ಆಯುರ್ವೇದ ವೈದ್ಯ ಅಥವಾ ನಾಟಿ ವೈದ್ಯ ಬಲ್ಲವರಾಗಿದ್ದರು. ಕೆಲ ಕಾಲ ಊರಿನ ಶಾಲೆಯಲ್ಲಿ ಮೇಸ್ಟ್ರಾಗಿದ್ದರಿಂದ ಅವರಿಗೆ ಆಶಾನ್ (ಅಂದರೆ ಮೇಸ್ಟ್ರು ಎಂದು) ಎಂಬ ಉಪನಾಮವೂ ಸೇರಿಕೊಂಡಿತ್ತು. ಇಂತಹ ಕುಟುಂಬದಲ್ಲಿ ಜನಿಸಿದ ನಾರಾಯಣ ( ಅವರ ಬಾಲ್ಯದಲ್ಲಿ ಎಲ್ಲರೂ ಪ್ರೀತಿಯಿಂದ ’ನಾಣೂ’ ಎಂದೇ ಕರೆಯುತ್ತಿದ್ದರು) ಮುಂದೆ ಇಡೀ ಕೇರಳದ ಲಕ್ಷಾಂತರ ಜನರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನೇ ತರುತ್ತಾನೆಂದು ಯಾರೂ ಊಹಿಸಿರಲಿಲ್ಲ. ನಾರಾಯಣ ಗುರುಗಳು ಜನಿಸಿದ 19ನೆ ಶತಮಾನದ ಆದಿಯಲ್ಲಿ ಕೇರಳದಲ್ಲಿದ್ದ ಜಾತಿ ವ್ಯವಸ್ಥೆ ಎಂತಹ ಅಸಹ್ಯಕರವಾಗಿತ್ತು ಎಂದರೆ ಆ ಸಂದರ್ಭದಲ್ಲಿ ಒಮ್ಮೆ ಕೇರಳವನ್ನು ಸಂದರ್ಶಿಸಿದ ಸ್ವಾಮಿ ವಿವೇಕಾನಂದರು ಈ ಕೇರಳವು ಜಾತಿ ಜಾತಿಗಳ ಕಿತ್ತಾಟದಿಂದಾಗಿ ಒಂದು ಹುಚ್ಚಾಸ್ಪತ್ರೆ (ಮೆಂಟಲ್ ಅಸಿಲಮ್) ಆಗಿಬಿಟ್ಟಿದೆ ಎಂದು ಉದ್ಘರಿಸಿದ್ದರು. ಇಡೀ ಕೇರಳವು ಕೂಪ ಮಂಡೂಕಗಳಾಗಿದ್ದ ಜಾತಿಗಳಿಂದಾಗಿ, ಗಾಢಾಂಧಕಾರ ಆವರಿಸಿಕೊಂಡಿತ್ತು.

ಇಂತಹ ಪರಿಸ್ಥಿತಿ ಉದ್ಭವಿಸಿದ್ದದಾದರೂ ಹೇಗೆ?

ಕೇರಳದಲ್ಲಿ ಕ್ರಿ.ಶ. 5ನೇ ಶತಮಾನದ ನಂತರದಲ್ಲಿ ಉತ್ತರ ಭಾರತದಿಂದ ಬ್ರಾಹ್ಮಣರ ಪ್ರವೇಶವಾಗುತ್ತದೆ. ಅದುವರೆಗೂ ಅಲ್ಲಿ ನಾನಾ ವೃತ್ತಿಗಳಲ್ಲಿ ತೊಡಗಿಕೊಂಡಿದ್ದ ಜಾತಿಗಳು ಇದ್ದವೇ ವಿನಃ ಅವುಗಳ ನಡುವೆ ಏಣಿಶ್ರೇಣಿ, ತಾರತಮ್ಯಗಳು ಇರಲಿಲ್ಲ. ಕೆಲವು ಕುಲಗಳು ಆಳ್ವಿಕೆ ನಡೆಸುತ್ತಿದ್ದರು. ಪುಲಯ ಮತ್ತು ಪರಯ ಎಂದು ಕರೆಯಲಾಗುವ ಹೊಲೆಯ ಸಮುದಾಯಗಳು ಕೃಷಿ ಸಮುದಾಯಗಳಾಗಿದ್ದವು. ಈಳವರು, ನಾಯರ್ ಮುಂತಾದವರು ಕೃಷಿಯೊಂದಿಗೆ ವ್ಯಾಪಾರ, ವೈದ್ಯ ವೃತ್ತಿಗಳ ಜೊತೆಗೆ ಸೇನೆಯಲ್ಲಿ ಸೇನಾನಿಗಳಾಗಿ ತೊಡಗಿದ್ದರು. ಯಾವಾಗ ತಮ್ಮನ್ನು ನಂಬೂದರಿಗಳು ಎಂದು ಹೇಳಿಕೊಂಡ ಬ್ರಾಹ್ಮಣರು ನೆಲೆಯೂರಿದರೋ ಆಗ ಇಡೀ ಸಾಮಾಜಿಕ ವ್ಯವಸ್ಥೆಯೇ ವಿರೂಪಗೊಂಡಿತು. ತಾವು ’ಚಂದ್ರ ವಂಶ’, ’ಸೂರ್ಯ ವಂಶ’ ಹಾಗೂ ’ಅಗ್ನಿ ವಂಶದವರು’ ಎಂದೂ, ಬ್ರಹ್ಮನ ಮುಖದಿಂದ ಹುಟ್ಟಿದವರೆಂದೂ ಹೇಳುತ್ತಾ, ರಾಜರನ್ನು ಹೊಗಳಿ ಅಟ್ಟಕ್ಕೇರಿಸಿ ತಾವು ಪರಮ ’ಜ್ಞಾನಿ’ಗಳು ಎಂದು ಹೇಳುತ್ತಾ, ಜನರಿಗೆ ಅರ್ಥವಾಗದ ಸೊ ಕಾಲ್ಡ್ ದೇವಭಾಷೆ ಸಂಸ್ಕೃತ ಶ್ಲೋಕಗಳನ್ನು ಉಚ್ಛರಿಸುತ್ತಾ ರಾಜರನ್ನೂ, ಜನರನ್ನೂ ಮಂಗ ಮಾಡುತ್ತಾ ತಾವು ಸಮಾಜದ ಉಚ್ಛ ಹಂತದಲ್ಲಿ ಸ್ಥಾನ ಪಡೆಯುತ್ತಾ ಹೋದರು.

ರಾಜರು ನೀಡುವ ಉಂಬಳಿಗಳಿಂದಾಗಿ ಉಳುಮೆ ಮಾಡುವ ಭೂಮಿಯೆಲ್ಲಾ ನಂಬೂದರಿಗಳ ಪಾಲಾಯಿತು. ಬರಬರುತ್ತಾ ಬರಿ ಕೈಯಲ್ಲಿ ಬಂದವರು ರಾಜರ ಸಮಕ್ಕೆ ನಿಂತರಲ್ಲದೇ ತಾವೂ ರಾಜ್ಯಾಡಳಿತ ನಡೆಸಲು ಆರಂಭಿಸಿದರು. ಪರಿಣಾಮವಾಗಿ ಈ ಮೊದಲಿನ ಬಹುತೇಕ ಕೃಷಿಕರು ತಮ್ಮ ನೆಲ ಕಳೆದುಕೊಂಡು ’ಅಸ್ಪೃಶ್ಯತೆ’ಗೆ ನೂಕಲ್ಪಟ್ಟರು. ಈ ಹಂತದಲ್ಲಿ ಮಲಬಾರ್ ಪ್ರಾಂತ್ಯದ ಎಲ್ಲಾ ಭೂಮಾಲೀಕರೂ ನಂಬೂದರಿಗಳೇ ಆಗಿದ್ದರು. ಇವರು ಸಮಾಜದಲ್ಲಿ ವರ್ಣಾಶ್ರಮ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಹೇರಿದರು. ಕ್ಷತ್ರಿಯರು, ಬ್ರಾಹ್ಮಣರಲ್ಲದೇ ನಾಯರ್‌ಗಳನ್ನು ತಮಗಿಂತ ಕೆಳಗಿರಿಸಿಕೊಂಡರೂ, ಕೆಲವು ಅನುಕೂಲ ನೀಡಿ ಮಿಕ್ಕ ಜಾತಿಗಳಿಗಿಂತ ಮೇಲಿರಿಸಿಕೊಂಡರು. ಬ್ರಾಹ್ಮಣ ದಂಪತಿಗಳ ಮೊದಲ ಮಗನಿಗೆ ಮಾತ್ರ ಬ್ರಾಹ್ಮಣ ಕನ್ಯೆ, ನಂತರದ ಗಂಡು ಮಕ್ಕಳಿಗೆ ನಾಯರ್ ಕನ್ಯೆಯನ್ನು ತಂದುಕೊಂಡರೂ ಇವರಿಗೆ ಹುಟ್ಟುವ ಮಕ್ಕಳಿಗೆ ಯಾವುದೇ ಆಸ್ತಿ ಮತ್ತಿತರ ಹಕ್ಕಿಲ್ಲದಂತೆ ನೋಡಿಕೊಂಡರು. ಇಂತಹ ಒಂದು ಏರ್ಪಾಡಿನ ಮೂಲಕ ಕ್ಷತ್ರಿಯರು, ಬ್ರಾಹ್ಮಣರು ಹಾಗೂ ನಾಯರ್‌ಗಳನ್ನೊಳಗೊಂಡಂತೆ ’ಸವರ್ಣೀಯ’ರು ಎಂದು ಕರೆದುಕೊಂಡ ಒಂದು ಪಂಗಡವೂ, ಈಳವ, ತೀಯ ಮತ್ತು ಹೊಲೆಯ ಜಾತಿಗೆ ಸೇರಿದವರನ್ನು ’ಅವರ್ಣೀಯ’ರೆಂದು ಕರೆದು ಮತ್ತೊಂದು ಪಂಗಡವೂ ಉಂಟಾಗಿ ಸಮಾಜ ಇಬ್ಭಾಗವಾಯಿತು. ’ಅಸ್ಪೃಶ್ಯ’ ಅವರ್ಣೀಯರ ಬದುಕು ಪಾತಾಳಕ್ಕೆ ನೂಕಲ್ಪಟ್ಟಿತು. ಇವರು ಸವರ್ಣೀಯ ವ್ಯಕ್ತಿಗಳೆದುರು ಹೀನಾಯವಾಗಿ ಬದುಕಬೇಕಾಯಿತು. ಹಗಲಿನ ಇಳಿಹೊತ್ತಿನಲ್ಲಿ ಈಳವರಾಗಲೀ, ಹೊಲೆಯರಾಗಲೀ ಅವರ್ಣೀಯರಿಗೆ ಕಾಣಿಸಿಕೊಳ್ಳುವಂತಿಲ್ಲ.

ಯಾಕೆಂದರೆ ಇವರ ನೆರಳು ಬಿದ್ದು ಮೈಲಿಗೆಯಾಗಿಬಿಡುತ್ತದೆ! ಅವರ್ಣೀಯ ಮಹಿಳೆಯರು ಕುಪ್ಪಸ ಧರಿಸುವಂತಿಲ್ಲ. ಅವರ್ಣೀಯರ ಮೇಲೆ ಹೇರಲಾಗಿದ್ದ ಸುಮಾರು 200 ತರದ ವಿವಿಧ ತೆರಿಗೆಗಳಲ್ಲಿ ಈಳವ ಹೆಣ್ಣು ಮಕ್ಕಳ ಮೊಲೆಗಳ ಗಾತ್ರವನ್ನಾಧರಿಸಿದ ತೆರಿಗೆಯೂ ಇತ್ತು. ಮೊಲೆಗಳು ದೊಡ್ಡದಿದ್ದರೆ ಹೆಚ್ಚು ತೆರಿಗೆಯನ್ನು ಬ್ರಾಹ್ಮಣ ಭೂಮಾಲೀಕರಿಗೆ ಪಾವತಿಸಬೇಕು! ತಪ್ಪಿದರೆ ಕಠಿಣ ಶಿಕ್ಷೆ. ಕೆಲವೊಮ್ಮೆ ಮರಣ ದಂಡಣೆಯೂ ಆದೀತು! ಈ ಮೊಲೆಗಳ ಮೇಲಿನ ಕ್ರೂರವಾದ ತೆರಿಗೆಯನ್ನು ಪ್ರತಿರೋಧಿಸುವ ಸಲುವಾಗಿ 19ನೆಯ ಶತಮಾನದ ಆದಿಯಲ್ಲಿ ತಿರುವಾಂಕೂರಿನ ಚೆರ್ತಳ ಎಂಬ ಊರಿನ ಈಳವರ ಬಡ ಕುಡುಂಬವೊಂದರ ಹುಡುಗಿ, ನಂಗೇಲಾ ಎಂಬಾಕೆ ತನ್ನ ಮೊಲೆಗಳನ್ನೇ ಕತ್ತರಿಸಿ ಹಾಕಿ ಬಾಳೆ ಎಲೆಯ ಮೇಲಿಟ್ಟು ತೆರಿಗೆ ವಸೂಲಿಗೆ ಬಂದವರಿಗೆ ಅರ್ಪಿಸಿ, ತಾನು ರಕ್ತಸ್ರಾವದಿಂದ ಸಾವನ್ನಪ್ಪಿದ್ದ ಹೃದಯ ವಿದ್ರಾವಕ ಘಟನೆಯೂ ನಡೆದಿತ್ತು. ನೇಕಾರರು ಬಟ್ಟೆ ನೇಯ್ದರೆ ತೆರಿಗೆ. ಬೆಸ್ತರು ಮೀನು ಹಿಡಿದರೆ ತೆರಿಗೆ, ಗಾಣಿಗರು ಎಣ್ಣೆ ತೆಗೆದರೆ ತೆರಿಗೆ, ರೈತರು ಹೆಂಡ ಇಳಿಸಿದರೆ ತೆರಿಗೆ… ಹೀಗೆ ತೆರಿಗೆಯ ವಿಷವರ್ತುಲದಿಂದ ಯಾರೂ ಏಳಿಗೆಯಾಗದಂತೆ ಬ್ರಾಹ್ಮಣ ಭೂಮಾಲೀಕರು ಜನರನ್ನು ನಿರ್ಬಂಧಿಸಿಟ್ಟಿದ್ದರು. ಇನ್ನು ಅವರ್ಣೀಯ ಜಾತಿಗಳ ಜನರು ಸವರ್ಣೀಯರೆದುರು ಮಾತಾಡುವಾಗ ನಾನು ಎಂದು ಬಳಸಬೇಕಾದೆಡೆಯಲ್ಲೆಲ್ಲಾ ’ನಿಮ್ಮ ಗುಲಾಮ ಎಂದೇ ಬಳಸಬೇಕಾಗಿತ್ತು. ಒಬ್ಬ ಚೋಟುದ್ದದ ಬ್ರಾಹ್ಮಣ ಬಾಲಕನಿಗೂ ಒಬ್ಬ ವಯಸ್ಸಾದ ಈಳವ ಅಥವಾ ಪರಯನಾದವನು ‘ದಣೇರಾ’ ಎಂದೇ ಕರೆಯಬೇಕಾಗಿತ್ತು! ಇಷ್ಟೇ ಅಲ್ಲ. ಬ್ರಾಹ್ಮಣರು ಸ್ಥಾಪಿಸಿದ್ದ ದೇವಸ್ಥಾನಗಳ ಒಳಗೆ ಅವರ್ಣೀಯರಿಗೆ ಪ್ರವೇಶವಿರಲಿಲ್ಲ. 8 ನೇ ಶತಮಾನದ ಅದ್ವೈತವಾದಿ ಶಂಕರಾಚಾರ್ಯ ಸ್ಥಾಪಿಸಿದ್ದ ವೈಕಂನ ಶಿವಾಲಯದ ಮುಂಭಾಗದ ರಸ್ತೆಯಲ್ಲೂ ಇವರಿಗೆ ಪ್ರವೇಶ ನಿಷೇಧಿಸಿ ದೊಡ್ಡ ಬೋರ್ಡ್ ಹಾಕಿದ್ದರು. ಸ್ವತಃ ಶಂಕರಾಚಾರ್ಯರೇ ಈ ರೀತಿಯಾಗಿ ಆದೇಶಿಸಿದ್ದಾರೆಂದು ಹೇಳುತ್ತಿದ್ದರು. ಸುಮಾರು ಐದನೇ ನೇ ಶತಮಾನದಿಂದ 19ನೇ ಶತಮಾನದವರೆಗಿನ 1400 ವರ್ಷಗಳ ಅವಧಿಯಲ್ಲಿ ಕೇರಳ ರಾಜ್ಯವು ಬ್ರಾಹ್ಮಣಶಾಹಿಯ ಕಪಿಮುಷ್ಠಿಯಲಿ ಜಾತಿಭೇಧದ ಕೆಸರಿನಲ್ಲಿ ಹೂತು, ಅಲ್ಲಿನ ತಳ ಸಮುದಾಯಗಳು ಮೇಲೇಳದ ಸ್ಥಿತಿಯಲ್ಲಿ ಇದ್ದವು. ಆದರೆ ತುಳಿಸಿಕೊಂಡ ಸಮುದಾಯಗಳೂ ಆಗಾಗ ಪ್ರತಿರೋಧ ತೋರುತ್ತಲೇ ಇದ್ದವು.

ಅಂತಹ ಪ್ರತಿರೋಧ ಎದುರಾದಾಗಲೇಲ್ಲಾ ಅದನ್ನು ಬರ್ಬರವಾಗಿ ಹತ್ತಿಕ್ಕುವ ಕೆಲಸ ನಡೆಯುತ್ತಿತ್ತು. ಉದಾಹರಣೆಗೆ ೧೮೦೦ರಲ್ಲಿ ವೈಕಂ ದೇವಾಲಯದ ರಸ್ತೆಯಲ್ಲಿ ನಿರ್ಭಂಧ ಮುರಿದು ಒಳ ಪ್ರವೇಶಿಸಲು ಯತ್ನಿಸಿದ 200 ಈಳವ ಯುವಕರ ಮೇಲೆ ಕುದುರೆ ಮೇಲಿಂದ ಬಂದ ಬ್ರಾಹ್ಮಣ ದಿವಾನನು ಮನಸಿಗೆ ಬಂದಂತೆ ಖಡ್ಗ ಬೀಸಿ ಅನೇಕರ ಪ್ರಾಣವನ್ನೇ ತೆಗೆದಿದ್ದ. ಇದು ಈಳವರಲ್ಲಿ ಭಯಭೀತಿಯನ್ನೇ ಸೃಷ್ಟಿಸಿತ್ತು.
ಈ ಮಟ್ಟಿಗಿನ ದಮನ, ದೌರ್ಜನ್ಯಗಳು ತಾಂಡವವಾಡುತ್ತಿದ್ದಾಗ ಈ ಸಮುದಾಯಗಳ ಪಾಲಿಗೆ ಆಶಾಕಿರಣವಾಗಿ ಮೂಡಿ ಬಂದವರೇ ನಾರಾಯಣ ಗುರು. ಕೌಟುಂಬಿಕ ಹಿನ್ನೆಲೆ ಉತ್ತಮವಾಗಿದ್ದ ಕಾರಣ ನಾಣುಗೆ ಉತ್ತಮ ಶಿಕ್ಷಣವೂ ದೊರೆಯಿತು. ಸಂಸ್ಕೃತ ಭಾಷೆಯನ್ನೂ ಬಹುಬೇಗನೆ ಕಲಿತು ಲೀಲಾಜಾಲವಾಗಿ ಸಂಸ್ಕೃತ ಮತ್ತು ಮಲೆಯಾಳಂನಲ್ಲಿ ಕಾವ್ಯ ರಚಿಸಲೂ ತೊಡಗಿದ್ದರು. ಇದೇ ಹೊತ್ತಿನಲ್ಲಿ ಬಾಲಕ ನಾಣು ತುಳಿತಕ್ಕೊಳಗಾದವರನ್ನು ನೋಡಿ ಅನುಕಂಪ ಬೆಳೆಸಿಕೊಳ್ಳುವ ಅತ್ಯಂತ ಸಹೃದಯಿ ವಿದ್ಯಾರ್ಥಿಯಾಗಿಯೂ ಬೆಳೆಯತೊಡಗಿದ್ದ. ತನ್ನ ಈಳವ ಸಮುದಾಯದ ಮೇಲಿನ ಬ್ರಾಹ್ಮಣ ಮತ್ತು ನಾಯರ್‌ಗಳ ದೌರ್ಜನ್ಯ ಅವನನ್ನು ಎಷ್ಟು ಕಾಡುತ್ತದೆಯೋ, ತನ್ನ ಸಮುದಾಯದವರು ತಮಗಿಂತ ಕೆಳಸ್ತರದ ಹೊಲೆಯರನ್ನು, ಪರರನ್ನು, ನಾಯಡಿಗಳನ್ನು ಕಂಡರೆ ಮೈಲಿಗೆ ಎಂದು ಮೈಲಿ ದೂರ ಓಡುವುದೂ ಬಾಲಕ ನಾಣುವನ್ನು ಇನ್ನಿಲ್ಲದಂತೆ ಕಾಡುತ್ತಿತ್ತು. ನಾಣು ಎಂತಹ ಕಿಡಿಗೇಡಿಯೆಂದರೆ ಬೇಕೆಂದರೇ ಹೊಲೆಯರನ್ನು ಮುಟ್ಟಿಸಿಕೊಂಡು ತನ್ನವರ ಬಳಿ ಬಂದು ನಿಲ್ಲುತ್ತಿದ್ದ. ಒಮ್ಮೆ ಹೊಲೆಯರ ಗುಡಿಸಿಲೊಂದರಳಗೆ ನುಗ್ಗಿ, ಉಕ್ಕಿ ಹೋಗುತ್ತಿದ್ದ ಅನ್ನದ ಪಾತ್ರೆಯನ್ನು ಇಳಿಸಿ ಬಂದಾಗ ಕುಟ್ಟಿ ಅಮ್ಮನೇ ‘ಹೊಲೆಯರ ಮನೆಗೆ ಹೋಗಿ ಮೈಲಿಗೆಯಾದೆಯಲ್ಲ’ ಎಂದಿದ್ದಕ್ಕೆ ಆ ಕೂಡಲೇ ನಾಣು ಓಡಿ ಬಂದು ತನ್ನ ಅಮ್ಮನನ್ನು ತಬ್ಬಿಕೊಂಡು, ‘ಈಗ ನೀನೂ ಮೈಲಿಗೆಯಾದೆ ನೋಡು’ ಎಂದು ಹೇಳಿ ನಗಲು ತೊಡಗಿದ್ದನಂತೆ.

ಇನ್ನೊಂದು ಘಟನೆ

ವಿದ್ಯಾರ್ಥಿಯಾಗಿದ್ದ ನಾಣು ಒಬ್ಬ ಹೊಲೆಯ ಜಾತಿಯ ಹುಡುಗಿಯ ಹಿಂದೆ ಯಾವಾಗಲೂ ಹೋಗುತ್ತಿದ್ದುದನ್ನು ಕಂಡು ಸಹಪಾಠಿಗಳಿಗೆ ಒಂಥರಾ ಗುಮಾನಿಯಾಗಿತ್ತು, ಒಂಥರದ ಅಸಮಧಾನವೂ ಆಗಿತ್ತು. ಒಂದು ದಿನ ’ನೋಡೇ ಬಿಡೋಣ’ ಎಂದು ಅವರೆಲ್ಲಾ ನಾಣುವನ್ನು ಫಾಲೋ ಮಾಡುತ್ತಾರೆ. ನಾಣು ಆ ಹುಡುಗಿಯೊಂದಿಗೆ ಸೀದಾ ಅವಳ ಮನೆಯೊಳಕ್ಕೆ ಹೋಗುತ್ತಾನೆ. ಒಳಗೆ ಏನು ನಡೆಯುತ್ತಿದೆ ಎಂಬ ಕುತೂಹಲದಿಂದ ಸಹಪಾಠಿಗಳು ಇಣುಕಿ ನೋಡಿದರೆ ಅಲ್ಲಿ ಕಂಡಿದ್ದೇನು? ತೀವ್ರ ಕುಷ್ಠ ರೋಗದಿಂದ ಬಳಲುತ್ತಾ ಮಲಗಿರುವ ಆ ಹೊಲೆಯರ ಹುಡುಗಿಯ ತಂದೆಯ ಮೈಯನ್ನು ಸ್ವಚ್ಛಗೊಳಿಸಿ, ಶುಷ್ರೂಷೆ ಮಾಡುತ್ತಿರುವ ’ವೈದ್ಯ’ ನಾಣು! ತಮ್ಮ ತಂದೆ ಮತ್ತು ಮಾವನಿಂದ ಕಲಿತುಕೊಂಡಿದ್ದ ಆಯುರ್ವೆದ ವಿದ್ಯೆಯ ಸಹಾಯದಿಂದ ನಾಣು ಅನಾರೋಗ್ಯ ಪೀಡಿತರಿಗೆ ಜಾತಿ-ಕುಲ ಭೇಧವಿಲ್ಲದೇ ಆರೈಕೆ ಮಾಡುತ್ತಿದ್ದ.

ಇಂತಹ ನಾಣು ಕ್ರಮೇಣ ಧಾರ್ಮಿಕ ತತ್ವಚಿಂತನೆಯಲ್ಲಿ ತೊಡಗಿದ. ವೇದಾಂತ, ಉಪನಿಷತ್ತುಗಳನ್ನೋದುತ್ತಾ ಅದ್ವೈತ ತತ್ವದಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾ ಹೋದ. ಕೊನೆಗೆ ತನ್ನ ಹೆಂಡತಿಗೆ ತನ್ನ ಬದುಕಿನ ಉದ್ದೇಶವನ್ನು ತಿಳಿಸಿ, ಒಪ್ಪಿಸಿ ಸಂಸಾರದ ಬಂಧನಗಳನ್ನೆಲ್ಲಾ ಕಳಚಿಕೊಂಡು ಯೋಗಿಯಾಗಿ, ಅವಧೂತನಾಗಿ ಕಾಡು ಮೇಡು, ಗವಿಗಳಲ್ಲಿ ಅಲೆದು, ವರ್ಷಗಟ್ಟಲೆ ಆಳವಾದ ಚಿಂತನೆ, ಅಧ್ಯಯನ ನಡೆಸುತ್ತಾ, ಇದುವರೆಗೆ ನಾಣುವಾಗಿದ್ದ ನಾರಾಯಣನು ಮುಂದೆ ಗುರುವಾಗಿ ಜನರೆದುರು ಕಾಣಿಸಿಕೊಳ್ಳುತ್ತಾರೆ. ಇವರಲ್ಲಿದ್ದ ಆಧ್ಯಾತ್ಮಿಕ ತಿಳುವಳಿಕೆ, ಅಗಾಧ ಜ್ಞಾನ ಮತ್ತು ಖಾಯಿಲೆಗಳನ್ನು ವಾಸಿ ಮಾಡುವ ಶಕ್ತಿ ಕಂಡ ಜನರು ಇವರ ಮೇಲೆ ಭಕ್ತಿ, ಗೌರವ ತೋರತೊಡಗುತ್ತಾರೆ. ತಮ್ಮ ಕಷ್ಟ ಕೋಟಲೆಗಳನ್ನು ಹೇಳಿಕೊಂಡು ಸಾಂತ್ವನ, ಪರಿಹಾರಗಳನ್ನು ಪಡೆಯತೊಡಗುತ್ತಾರೆ. ಈ ಹೊತ್ತಿಗಾಗಲೇ ಸಮಾಜದಲ್ಲಿರುವ ತನ್ನ ’ಅಸ್ಪೃಷ್ಯ’ ಸಮುದಾಯಗಳ ಸ್ಥಿತಿಯ ಸಂಪೂರ್ಣ ಅರಿವಿದ್ದ ನಾರಾಯಣ ಗುರುಗಳು ಈ ಜನರ ಬದುಕಿನಲ್ಲಿ ಹೊಸ ಅರಿವು ಮೂಡಿಡುವ ನಿಟ್ಟಿನಲ್ಲಿ ಕಾರ್ಯತತ್ಪರರಾಗುತ್ತಾರೆ. ಈ ನಿಟ್ಟಿನಲ್ಲಿ ಅವರು ಮಾಡುವ ಮೊದಲ ಕೆಲಸವೆಂದರೆ ಧಾರ್ಮಿಕ ಕ್ರಾಂತಿ!
‘ಗುರುಗಳೇ ನಮ್ಮನ್ನು ದೇವಸ್ಥಾನಗಳ ಒಳಗೆ ಬಿಡುತ್ತಿಲ್ಲ. ನಾವು ದೇವರನ್ನು ಕಾಣುವುದು ಬೇಡವೇ?’ ಎಂದು ತನ್ನ ಬಳಿ ತೋಡಿಕೊಂಡ ’ಅಸ್ಪೃಶ್ಯ’ ಜನರಿಗೆ ಗುರು ದೇವರನ್ನು ತೋರುತ್ತಾರೆ. ಅದೂ ಗುರುಗಳು ತೋರಿದೆಡೆಯಲ್ಲಿ ಈ ಜನರೇ ಕಟ್ಟಿಕೊಳ್ಳುವ ದೇವಸ್ಥಾನಗಳಲ್ಲಿ. ಮತ್ತು ಪರಿಪಾಠ ಎಂದರೆ ಬ್ರಾಹ್ಮಣರು ಮಾತ್ರವೇ ದೇವರನ್ನು ಸ್ಥಾಪಿಸಲು ಸಾಧ್ಯ, ಅವರು ಮಾತ್ರವೇ ದೇವಸ್ಥಾನಗಳನ್ನು ಕಟ್ಟಿ ಪೂಜಾರಿಕೆ ನಡೆಸಲು ಸಾಧ್ಯ ಎಂಬುದು ಅದುವರೆಗೆ ಇದ್ದ ಬಲವಾದ ನಂಬಿಕೆ. ಆದರೆ ಗುರುಗಳು ಮುಂದೆ ಕೈಕೊಂಡ ಕೆಲಸಗಳು ಈ ನಂಬಿಕೆಯನ್ನು ಬುಡಮೇಲು ಮಾಡುತ್ತವೆ.

ನಾರಾಯಣ ಗುರುಗಳು 1888ರಲ್ಲಿ ಅರವೀಪ್ಪುರಂನಲ್ಲಿ ಮೊದಲ ದೇವಸ್ಥಾನವೊಂದನ್ನು ಭಕ್ತರ ಮೂಲಕ ನಿರ್ಮಿಸುತ್ತಾರೆ. ಅದು ತೀರಾ ಸರಳವಾದ ಒಂದು ಸಣ್ಣ ಮಂಟಪದಂತಹ ದೇಗುಲವಾಗಿತ್ತು. ದೇಗುಲವೇನೋ ನಿರ್ಮಾಣವಾಯಿತು. ಆದರೆ ದೇವರ ಮೂರ್ತಿ ಎಲ್ಲಿ ಎಂಬ ಪ್ರಶ್ನೆ ಎದುರಾಯಿತು. ಇದಕ್ಕಾಗಿ ಒಂದರೆಕ್ಷಣ ಯೋಚಿಸಿ, ಪಕ್ಕದಲ್ಲಿಯೇ ಇದ್ದ ಹೊಳೆಯಲ್ಲಿ ಒಂದು ಮುಳುಗು ಹಾಕಿದ ಗುರುಗಳು ಸುಮಾರು ಹೊತ್ತಿನ ನಂತರ ಒಂದು ಲಿಂಗದಾಕಾರದ ಕಲ್ಲನ್ನು ಎತ್ತಿಕೊಂಡು ಬಂದು ಅಲ್ಲಿ ಇಟ್ಟರು. ’ಇವನೇ ನಿಮ್ಮ ಶಿವ’ ಎಂದರು. ಅಲ್ಲಿಗೆ ದೇವರೂ ಬಂದಾಯಿತು! ಹೀಗೆ ಕೇರಳದಾದ್ಯಂತ, ನೆರೆಯ ಶ್ರೀಲಂಕಾ ಮತ್ತು ಕರ್ನಾಟಕದಲ್ಲಿಯೂ ಸೇರಿದಂತೆ 39 ದೇವಸ್ಥಾನಗಳನ್ನು ಸ್ಥಾಪಿಸಿ ’ ನಡೆಯಿರಿ ಈಗ ನಿಮ್ಮ ದೇವರನ್ನು ನೀವೇ ಪೂಜಿಸಿಕೊಳ್ಳಿ’ ಎಂದರು. ಇದರಿಂದ ಪುರೋಹಿತಿಕೆ ನಡೆಸುತ್ತಿದ್ದವರಿಗೆ ಇನ್ನಿಲ್ಲದ ಕೋಪ ಬಂದಿತು. ಬಾರದೇ ಇರುತ್ತದೆಯೇ? ‘ಅರೇ, ದೇವರನ್ನು ಗುತ್ತಿಗೆ ಹಿಡಿದ ನಮ್ಮ ದೈವದತ್ತ ಅಧಿಕಾರವನ್ನೇ ಧಿಕ್ಕರಿಸಿ ಕೀಳು ಜನರಿಗಾಗಿ ದೇವರನ್ನು ಸ್ಥಾಪಿಸುತ್ತಿರುವ ನಿನ್ನಿಂದಾಗಿ ನಮ್ಮ ಶಿವ ಮೈಲಿಗೆಯಾಗಿಬಿಟ್ಟ, ನೀನು ದೇವರನ್ನೇ ಮಲಿನಗೊಳಿಸಿದೆ’ ಎಂದು ಬುಸುಗುಡಹತ್ತಿದ ನಂಬೂದರಿ ಬ್ರಾಹ್ಮಣರಿಗೆ, ನಾರಾಯಣ ಗುರುಗಳು ’ನೋಡಿ, ನಾನು ಸ್ಥಾಪಿಸಿದ ಈ ಶಿವ ನಂಬೂದರಿಗಳ ಶಿವನಲ್ಲ. ಇವನು ಈಳವರ ಶಿವ. ಮೈಲಿಗೆಯಾದ ಜನರಿಗೆ ಮೈಲಿಗೆಯಾದ ಶಿವನೇ ಇರಲಿ, ನಿಮಗೇನೂ ಸಮಸ್ಯೆ ಇಲ್ಲವಲ್ಲ’ ಎಂದು ಶಾಂತವಾಗಿಯೇ ಉತ್ತರಿಸಿ ಬಾಯಿ ಮುಚ್ಚಿಸಿದರು. ಹೀಗೆ ನಾರಾಯಣ ಗುರುಗಳು ನಡೆಸಿದ ದೇವಸ್ಥಾನಗಳ ಸ್ಥಾಪನೆ ಆ ಕಾಲಕ್ಕೆ, ದೇವರಲ್ಲಿ ನಂಬಿಕೆ ಇರಿಸಿದ್ದ ಜನರ ಪಾಲಿಗೆ ದೊಡ್ಡ ಕ್ರಾಂತಿಕಾರಿ ನಡೆಯೇ ಆಗಿತ್ತು. ಮತ್ತೆ ಇಲ್ಲಿ ಯಾವುದೇ ದುಬಾರಿ ಹೋಮ, ಹವನಗಳಿಗೆ ಅವಕಾಶವಿರಲಿಲ್ಲ.
ಈ ಹೊತ್ತಿಗೆ ನಾರಾಯಣ ಗುರುಗಳ ಧಾರ್ಮಿಕ ಸುಧಾರಣಾ ಕೆಲಸವನ್ನು ಕಂಡು, ಇವರ ಸಮಾಜ ಬದ್ಧತೆಗೆ ಹಾಗೂ ಆಧ್ಯಾತ್ಮಿಕ ಚಿಂತನೆಗೆ ಮಾರು ಹೋಗಿ ಇವರೊಂದಿಗೆ ಡಾ.ಪಲ್ಪು, ಕುಮಾರನ್ ಆಶಾನ್, ಟಿ.ಕೆ.ಮಾಧವನ್ ಮತ್ತು ಸಹೋದರನ್ ಅಯ್ಯಪ್ಪನ್ ಮೊದಲಾದ ನಾಯಕರು ಸೇರಿಕೊಳ್ಳುತ್ತಾರೆ. ಇವರೆಲ್ಲರ ಸಂಗಮ ಹಾಗೂ ಸಮಷ್ಟಿ ಕಾರ್ಯಗಳಿಂದ ನಾರಾಯಣ ಗುರುಗಳು ಆರಂಭಿಸಿದ ಚಳುವಳಿ ವ್ಯಾಪಕತೆಯನ್ನೂ ಪಡೆಯಿತಲ್ಲದೇ ಅಸಂಖ್ಯ ಶೋಷಿತರ ಬದುಕಿನಲ್ಲಿ ಅಭೂತಪೂರ್ವ ಬದಲಾವಣೆಗೆ ನಾಂದಿ ಹಾಡಿತು.

ಡಾ. ಪಲ್ಪು ಆರ್ಥಿಕವಾಗಿ ಕೊಂಚ ಉತ್ತಮ ಮಟ್ಟದ ಈಳವ ಕುಟುಂಬದಿಂದ ಬಂದಿದ್ದು ಆ ಕಾಲದಲ್ಲೇ ಮೆಡಿಕಲ್ ಓದಿ, ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ಆದರೂ ಸಹ ಅವರಿಗೆ ಕೇರಳದಲ್ಲಿ ’ಅಸ್ಪೃಶ್ಯ ಈಳವ ಜಾತಿಯವನು’ ಎಂಬ ಕಾರಣಕ್ಕೆ ವೈದ್ಯರಾಗಲು ಅವಕಾಶ ನೀಡಿರಲಿಲ್ಲ. ನಂತರ ಅವರು ಮದ್ರಾಸ್ ಮೆಡಿಕಲ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇರಿ ಮೈಸೂರಿನಲ್ಲಿ ನಿಯೋಜಿಸಲ್ಪಟ್ಟಿದ್ದರು. ತನ್ನಂತವರಿಗೇ ಇಂತಹ ತಾರತಮ್ಯ ಎಸಗುವಾಗ ಇನ್ನು ಸಾಮಾನ್ಯ ಈಳವರ ಸ್ಥಿತಿ ಏನಾಗಬಾರದು ಎಂದು ಚಿಂತಿತರಾಗಿದ್ದ ಡಾ.ಪಲ್ಪು ಇದಕ್ಕೇನಾದರೂ ಪರಿಹಾರ ಕಂಡುಕೊಳ್ಳುವ ಯೋಚನೆಯಲ್ಲಿದ್ದರು. ಸ್ವಲ್ಪ ಸಮಯದಲ್ಲಿ ಅವರು ಮೈಸೂರಿನ ಅರಸರೊಂದಿಗೆ ಸಖ್ಯ ಬೆಳೆಸಿಕೊಂಡು ಅವರ ಆಪ್ತ ಸಲಹೆಗಾರರೂ ಆಗಿದ್ದರು. ಇದೇ ಸಮಯದಲ್ಲಿ ಮೈಸೂರಿಗೆ ಬಂದಿದ್ದ ಸ್ವಾಮಿ ವಿವೇಕಾನಂದರೊಂದಿಗೆ ಡಾ. ಪಲ್ಪುರವರು ಕೇರಳದಲ್ಲಿರುವ ಜಾತಿ ವೈಷಮ್ಯವನ್ನು ಪ್ರಸ್ತಾಪಿಸಿದಾಗ ವಿವೇಕಾನಂದರು, ’ಇದಕ್ಕೆ ಒಂದು ಆಧ್ಯಾತ್ಮಿಕ ಸುಧಾರಣಾ ಚಳುವಳಿಯ ಜೊತೆಯಲ್ಲಿ ನೀವು ಕೆಲಸ ಮಾಡಬೇಕಾಗುತ್ತದೆ. ಆ ಮೂಲಕವೇ ಇತರೆ ಕ್ಷೇತ್ರಗಳಲ್ಲಿ ಬದಲಾವಣೆ ತರಲು ಸಾಧ್ಯ’ ಎಂಬ ಸಲಹೆ ನೀಡಿದ್ದರು. ಈ ಸಲಹೆಯನ್ನಾಧರಿಸಿ ಡಾ.ಪಲ್ಪು ಅವರು ಅರಸಿಕೊಂಡು ಹೋದಾಗ ಸಿಕ್ಕಿದ್ದೇ ನಾರಾಯಣ ಗುರುಗಳು. ಡಾ.ಪಲ್ಪು ಅವರ ಭೇಟಿಯು ನಾರಾಯಣ ಗುರುಗಳಿಗೂ ಆನೆ ಬಲವನ್ನು ತಂದಿತೆಂದೇ ಹೇಳಬೇಕು. ಗುರುಗಳು ಮತ್ತು ಡಾ. ಪಲ್ಪು ಅವರು ಕೇರಳದ ಸಾಮಾಜಿಕ ಪರಿಸ್ಥಿತಿಯನ್ನು ಆಳವಾಗಿ ಚರ್ಚಿಸಿ ತಮ್ಮ ಈಳವ ಸಮಾಜದ ಜೊತೆಗೆ ಇಡೀ ಸಮಾಜದಲ್ಲಿ ಸುಧಾರಣೆಗಳಿಗೆ ತರಬೇಕಾದ ಸೂಕ್ತ ರೂಪುರೇಷೆಯೊಂದನ್ನು ಸಿದ್ಧಪಡಿಸಿದರು. ಇದರ ಫಲವಾಗಿ 1903ಲ್ಲಿ ಅಸ್ತಿತ್ವಕ್ಕೆ ಬಂದದ್ದೇ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ಅಥವಾ SNDPಯೋಗಂ ಸಂಸ್ಥೆ. ಅಂದಿನ ಬ್ರಿಟಿಷರ ಕಂಪನಿ ಕಾಯ್ದೆಯಡಿ ಒಂದು ಉದ್ಯಮ ಕಂಪನಿಯಾಗಿ ಈ ಸಂಸ್ಥೆ ಸ್ವತಃ ಗುರುಗಳ ಅಧ್ಯಕ್ಷತೆಯೊಂದಿಗೆ ಆರಂಭಗೊಂಡಿತು. ಈ ಹೊತ್ತಿಗೆ ವಿದ್ಯಾರ್ಥಿ ಜೀವನದಲ್ಲಿಯೇ ಕಾವ್ಯ ರಚನೆಗೆ ತೊಡಗಿ ಅಸಾಧಾರಣ ಪ್ರತಿಭೆ ತೋರಿದ್ದ ಕವಿ ಕುಮಾರನ್ ಆಶಾನ್ ಅವರನ್ನೂ ಮೈಸೂರಿನ ದಿವಾನರ ಸಹಾದೊಂದಿಗೆ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಡಾ.ಪಲ್ಪು ನೆರವಾಗಿದ್ದರು. ಡಾ. ಪಲ್ಪು ಮತ್ತು ಕುಮಾರನ್ ಆಶಾನ್ ಎಸ್‌ಎನ್‌ಡಿಪಿಯ ಆರಂಭದ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದರು.

ಗುರುಗಳು ನಡೆಸಿದ ಶಿಕ್ಷಣ ಕ್ರಾಂತಿ !

ಮುಂದೆ ಹಲವಾರು ವರ್ಷಗಳ ಕಾಲ ನಾರಾಯಣ ಗುರುಗಳು ನಡೆಸಿದ ಸುಧಾರಣಾ ಕಾರ್ಯಗಳು SNDP ಮುಖಾಂತರವೇ ನಡೆದವು. ಮುಖ್ಯವಾಗಿ ಎಲ್ಲೆಲ್ಲಿ ದೇವಸ್ಥಾನಗಳನ್ನು ಸ್ಥಾಪಿಸಲಾಗುತ್ತದೆಯೋ ಅಲ್ಲಿ ಗ್ರಂಥಾಲಯಗಳಿರಬೇಕು, ಹತ್ತಿರದಲ್ಲಿ ಶಾಲೆಗಳನ್ನು ತೆರೆಯಬೇಕು. ಜ್ಞಾನಾರ್ಜನೆಗೆ ಅವಕಾಶವಿರಬೇಕು. ಆದ್ಯಾತ್ಮಿಕ ತಿಳಿವಳಿಕೆ ನೀಡಬೇಕು. ಜನರನ್ನು ಕಂದಾಚಾರಗಳಿಂದ ಹೊರತರಬೇಕು. ಮದುವೆಗಳನ್ನು ಸರಳವಾಗಿ ನಡೆಸಲು ಪ್ರೇರೇಪಿಸಬೇಕು, ಮುಂತಾಗಿ ಅನೇಕ ಸುಧಾರಣಾ ಕಾರ್ಯಕ್ರಮಗಳನ್ನು ಇದರ ವತಿಯಿಂದ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸರ್ಕಾರ ನಡೆಸುತ್ತಿದ್ದ ಶಾಲೆಗಳಲ್ಲಿ ಈಳವರಿಗಾಗಲೀ ಹೊಲೆಯರಿಗಾಗಲೀ ಪ್ರವೇಶ ನೀಡುತ್ತಿರಲಿಲ್ಲ. ಈ ತಾರತಮ್ಯದ ವಿರುದ್ಧವೂ ಜಾಗೃತಿ ಮೂಡಿಸಿ ಸರ್ಕಾರಿ ಶಾಲೆಗಳಿಗೆ ಈ ಜನರು ಪ್ರವೇಶ ಪಡೆಯುವಂತೆ ಮಾಡುವಲ್ಲಿ ಸಫಲವಾಗುತ್ತದೆ ಧರ್ಮ ಪರಿಪಾಲನ ಸಂಸ್ಥೆ. ಈ ಸಂದರ್ಭದಲ್ಲಿಯೇ ಜನರನ್ನು ಶಿಕ್ಷಣ ಮತ್ತು ಉದ್ದಿಮೆಗಳತ್ತ ಮುಖ ಮಾಡುವಂತೆ ಹುರಿದುಂಬಿಸಲು ಗುರುಗಳು ನೀಡಿದ ಘೋಷಣೆ – “ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಮತ್ತು ಉದ್ದಿಮೆಯಿಂದ ಆರ್ಥಿಕ ಸ್ವಾವಲಂಬಿಗಳಾಗಿ” ಈ ಘೋಷಣೆ ಸೂಜಿಗಲ್ಲಿನಂತೆ ಜನರನ್ನು ಸೆಳೆಯಿತು. SNDP ಯ ಬೆಂಬಲವೂ ಸೇರಿಕೊಂಡು ಸಹಸ್ರ ಸಹಸ್ರ ಸಂಖ್ಯೆಯ ಈಳವರು, ಹೊಲೆಯರು, ತೀಯರು ಮೊದಲಾದ ಎಲ್ಲಾ ಶಿಕ್ಷಣ ವಂಚಿತರಾರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸತೊಡಗಿದರು, ವಯಸ್ಕರಿಗಾಗಿ ಗುರುಗಳು ರಾತ್ರಿ ಶಾಲೆಗಳನ್ನೂ ನಡೆಸಿದರು. ಶಿವಗಿರಿಯಲ್ಲಿ ಕುರುಬರ ಮಕ್ಕಳಿಗಾಗಿ, ಚೆಂಬಳಾಂತಿಯಲ್ಲಿ ಹೊಲೆಯರ ಮಕ್ಕಳಿಗಾಗಿ ಮತ್ತು ವೆಟ್ಟೂರಿನಲ್ಲಿ ಪರಯ ಜಾತಿಯ ಮಕ್ಕಳಿಗಾಗಿ… ಹೀಗೆ 42 ಕಡೆಗಳಲ್ಲಿ ರಾತ್ರಿ ಶಾಲೆಗಳನ್ನು ತೆರೆದರು. ಎಲ್ಲದರ ಪರಿಣಾಮವಾಗಿ ಒಂದು ಶಿಕ್ಷಣ ಕ್ರಾಂತಿಯೇ ನಡೆದು ಹೋಯಿತು. ಆರ್ಥಿಕವಾಗಿ, ಸಾಮಾಜಿಕವಾಗಿ ತುಳಿಯುವ ಮೂಲಕ ಶತ ಶತಮಾನಗಳಿಂದ ಯಾವ ಜನರನ್ನು ಕಾಲ ಕಸಕ್ಕಿಂತ ಕಡೆಯಾಗಿ, ವಿದ್ಯೆಯ ಹತ್ತಿರವೂ ಸುಳಿಯದಂತೆ ಮಾಡಲಾಗಿತ್ತೋ ಆ ಸಮುದಾಯಗಳ ಜನರು ನಾರಾಯಣ ಗುರುಗಳ ಈ ಶೈಕ್ಷಣಿಕ ಕಾರ್ಯಕ್ರಮಗಳಿಂದ ಜ್ಞಾನಾರ್ಜನೆಯಲ್ಲಿ ತೊಡಗಿದ್ದರು. ಹೀಗೆ ಜ್ಞಾನ ಪಡೆದುಕೊಂಡವರಲ್ಲಿ ಎಷ್ಟೋ ಜನರು ನಾರಾಯಣ ಗುರುಗಳ ಅನುಯಾಯಿಗಳೂ ಆಗಿ ಅವರ ಸಾಮಾಜಿಕ ಸುಧಾರಣೆಯ ಕೆಲಸದಲ್ಲಿ ಭಾಗಿಯಾದರು. ಈಳವ ಸಮಾಜದಲ್ಲಿ ಕೆಲವರು ಹೆಂಡ ಇಳಿಸುವ ಕೆಲಸವನ್ನೂ ಮಾಡುತ್ತಿದ್ದುದರಿಂದ ಅದರ ಸಾಮಾಜಿಕ ಪರಿಣಾಮವನ್ನು ಮನಗಂಡು ಆ ಕೆಲಸವನ್ನು ಬಿಡುವಂತೆ ತಿಳಿಸಿದರು.

ಪರ್ಯಾಯವಾಗಿ ಅನೇಕ ಬಗೆಯ ಸ್ವಯಂ ಉದ್ಯೋಗಗಳನ್ನು ನಡೆಸಲು ಪ್ರೇರೇಪಿಸಿದರು. ತೆಂಗಿನ ನಾರಿನ ಕೈಗಾರಿಕೆ, ಗುಡಿ ಕೈಗಾರಿಕೆಗಳ ತರಬೇತಿಗಳನ್ನು ವೈತ್ತಿಪರ ಶಿಕ್ಷಣವಾಗಿ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನೀಡಿದರು. ಈ ಎಲ್ಲಾ ಕೆಲಸಗಳಿಗೆ ಪೂರಕವಾಗಿ ಸಂಸ್ಥೆ ನಡೆಸುತ್ತಿದ್ದ, ಸ್ವಾಮಿ ವಿವೇಕಾನಂದರ ಸ್ಮರಣಾರ್ಥದ ’ವಿವೇಕೋದಯಂ’ ಎಂಬ ಹೆಸರಿನ ಪತ್ರಿಕೆ ತಳ ಸಮುದಾಯಗಳಲ್ಲಿ ವೈಚಾರಿಕ ಜಾಗೃತಿಯ ದೊಂದಿಯಾಗಿ ಕೆಲಸ ಮಾಡಿತು. ಈ ಹೊತ್ತಿಗಾಗಲೇ ಕೇರಳದ ಸಾಹಿತ್ಯ ವಲಯದಲ್ಲಿ ಅಪಾರ ಹೆಸರು ಗಳಿಸಿದ್ದ ’ಕ್ರಾಂತಿ ಕವಿ’ ಕುಮಾರನ್ ಆಶಾನ್ ಈ ಪತ್ರಿಕೆಯ ಸಂಪಾದಕರೂ ಆಗಿದ್ದರು ಪರಿಣಾಮವಾಗಿ ಈಳವ ಸಮುದಾಯ ಮತ್ತು ಇತರ ತಳ ಸಮುದಾಯಗಳು ಎಸ್‌ಎನ್‌ಡಿಪಿಯ ಸಮರ್ಥ ನಾಯಕತ್ವದಲ್ಲಿ ಎಚ್ಚೆತ್ತುಕೊಳ್ಳಲು ಸಾಧ್ಯವಾಯಿತು. ಕುಮಾರನ್ ಆಶಾನ್ ಅವರು ರಚಿಸಿದ ’ದುರವಸ್ಥ’, ’ಚಾಂಡಾಲ ಬಿಕ್ಕುಣಿ’, ’ಕರುಣಾ’ ಮೊದಲಾದ ಖಂಡಕಾವ್ಯಗಳು ಮಲಯಾಳ ಸಾಹಿತ್ಯದಲ್ಲೇ ಸಂಚಲನ ಮೂಡಿಸಿದ್ದವು. ಆ ಕಾಲದ ಕೇರಳದ ಜಾತಿ ಅಸ್ಪೃಶ್ಯತೆ, ಬೌದ್ಧ ತತ್ವಗಳೇ ಆಶಾನರ ಸಾಹಿತ್ಯ ರಚನೆಗಳ ವಸ್ತು ವಿಷಯಗಳಾಗಿ ಅಪಾರ ಜನಮನ್ನಣೆ ಗಳಿಸಿದ್ದವು.
ಈ ಸಮಯಕ್ಕೆ ಒಂದು ಘಟನೆ ನಡೆಯಿತು. ಕೊಟ್ಟಾಯಂ ತಾಲ್ಲೂಕಿನ ವೈಕಂನಲ್ಲಿರುವ ಶಿವ ದೇವಾಲಯ ಎದುರಿನ ರಸ್ತೆಯಲ್ಲಿ ನಾರಾಯಣ ಗುರುಗಳು ಹಾಗೂ ಕುಮಾರನ್ ಆಶಾನ್ ನಡೆದು ಬರುವಾಗ ಅವರನ್ನು ಬ್ರಾಹ್ಮಣರು ನಿರ್ಬಂಧಿಸಿ, ’ನೀವು ಇಲ್ಲಿ ಬರುವಂತಿಲ್ಲ. ಇದು ಸವರ್ಣೀಯರಿಗೆ ಮಾತ್ರ ಅವಕಾಶವಿರುವ ಮಾರ್ಗ’ ಎಂದು ಅಪಮಾನಿಸಿ ಕಳಿಸಿದರು. ಇದೇ ಶಿವಾಲಯದ ಪ್ರವೇಶದ ವಿಷಯದಲ್ಲಿ ನೂರು ವರ್ಷಗಳ ಹಿಂದೆ ಈಳವ ಯುವಕರ ಮಾರಣ ಹೋಮವೂ ನಡೆದಿತ್ತಲ್ಲ. ಈ ಸಲ ತಮ್ಮ ಗುರುಗಳಿಗೇ ಆದ ಅಪಮಾನವನ್ನು ಸಹಿಸಿ ಸುಮ್ಮನಿರಲು ಈಳವರು ಮತ್ತು ಹೊಲೆಯರು ಸಿದ್ಧರಿರಲಿಲ್ಲ. ನಂತರ ಈ ಬಗ್ಗೆ ಕುಮಾರನ್ ಆಶಾನ್ ಧ್ವನಿ ಎತ್ತಿದರೂ ಅದಕ್ಕೆ ಸಮಾಧಾನಕರವಾದ ಪ್ರತಿಕ್ರಿಯೆ ದೊರೆಯಲಿಲ್ಲ. ಆಗ ಇದನ್ನೊಂದು ಗಂಭೀರ ವಿಷಯವಾಗಿ ಕೈಗೆತ್ತಿಕೊಂಡು ಬೃಹತ್ ಚಳುವಳಿ ನಡೆಸುವ ಇಂಗಿತ ವ್ಯಕ್ತಪಡಿಸಿದ್ದು ನಾರಾಯಣ ಗುರುಗಳ ಮತ್ತೊಬ್ಬ ಅನುಯಾಯಿ ಟಿ.ಕೆ.ಮಾಧವನ್. ಗುರುಗಳೊಂದಿಗೆ ಸುಧೀರ್ಘ ಮಾತುಕತೆ ನಡೆಸಿ ಅವರ ಮಾರ್ಗದರ್ಶನದೊಂದಿಗೆ ಐತಿಹಾಸಿಕ ವೈಕಂ ಸತ್ಯಾಗ್ರಹ ಚಳುವಳಿ ಆರಂಭವಾಗಿಯೇ ಬಿಟ್ಟಿತು. ಈ ಹೊತ್ತಿಗಗಲೇ ಎಸ್‌ಎನ್‌ಡಿಪಿಯ ಅಸಂಖ್ಯ ಸಂಸ್ಥೆಯ ಮೂಲಕ ಸುಸಂಘಟಿತರಾಗಿದ್ದ ಈಳವರು ಮತ್ತು ಹೊಲೆಯರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಈ ’ದೇವಸ್ಥಾನ ಪ್ರವೇಶ’ ಸತ್ಯಾಗ್ರಹದಲ್ಲಿ ಧುಮುಕತೊಡಗಿದರು. ಇದನ್ನು ಕೇವಲ ಕೇರಳಕ್ಕೆ ಸೀಮಿತಗೊಳಿಸದೇ ಹಾಗೂ ಕೇವಲ ರಸ್ತೆ ಮತ್ತು ದೇವಸ್ಥಾನ ಪ್ರವೇಶಕ್ಕೆ ಮಾತ್ರ ಸೀಮಿತಗೊಳಿಸದೇ ಕೇರಳದ ಒಟ್ಟಾರೆ ಜಾತಿ ತಾರತಮ್ಯದ ವ್ಯವಸ್ಥೆಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ದೃಷ್ಟಿಯಿಂದ ಮಾಧವನ್ ಅವರು ಯೋಚಿಸಿ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮಹಾತ್ಮಾ ಗಾಂಧೀಜಿಯರನ್ನೂ ಚಳವಳಿಯಲ್ಲಿ ಭಾಗವಹಿಸುವಂತೆ ಕೇಳಿಕೊಂಡರು. ಇದುವರೆಗೆ ನಾರಾಯಣ ಗುರುಗಳ ಮುಂದಾಳತ್ವದಲ್ಲಿ ರಾಜ್ಯದಲ್ಲಿ ನಡೆದಿರುವ ಶೈಕ್ಷಣಿಕ ಕ್ರಾಂತಿಯನ್ನೂ ವಿವರಿಸಿದು. ಕೊನೆಗೆ ಈ ಚಳವಳಿಯ ಮಹತ್ವ ಗ್ರಹಿಸಿದ ಗಾಂಧೀಜಿ ಅದಕ್ಕೆ ಸಮ್ಮಿತಿಸಿ ತಮ್ಮ ಅನುಯಾಯಿ ಕಾಂಗ್ರೆಸಿಗರು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಿದರಲ್ಲದೇ ತಾವೇ ಖುದ್ದಾಗಿಯೂ ನಾರಾಯಣ ಗುರುಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. 1924ರ ಮಾರ್ಚ್ 30ರಂದು ಆರಂಭಗೊಂಡ ಸತ್ಯಾಗ್ರಹ ವರ್ಷ ಕಾಲ ನಡೆಯಿತು. ಈ ಸಂದರ್ಭದಲ್ಲಿ ಸತ್ಯಾಗ್ರಹಿಗಳು ನಿರಶನ ನಡೆಸುತ್ತಿದ್ದಾಗ, ನಾರಾಯಣ ಗುರುಗಳು, ‘ಯಾಕೆ ಉಪವಾಸ ಮಾಡುತ್ತೀರಿ. ಉಪವಾಸದಿಂದ ಬಳಲ ಬೇಡಿ. ದೇವಸ್ಥಾನದ ಹಾಕಿರುವ ಬಾಗಿಲುಗಳನ್ನು ಎಗರಿಕೊಂಡು ದೇವಸ್ಥಾನದ ಒಳ ಪ್ರವೇಶಿಸಿ, ಅಲ್ಲಿ ಪ್ರಸಾದ ನೀಡುವ ಸಾಲಿನಲ್ಲಿ ಸವರ್ಣೀಯರೊಂದಿಗೆ ಕುಳಿತುಕೊಳ್ಳಿ, ಹಿಂದೆ ಮುಂದೆ ನೋಡದೇ ಧೈರ್ಯದಿಂದ ಮುನ್ನುಗ್ಗಿ ಆದರೆ ಹಿಂಸೆಗೆ ಮಾತ್ರ ಇಳಿಯಬೇಡಿ’ಎಂದು ನಾರಾಯಣ ಗುರುಗಳು ನೀಡಿದ್ದ ಹೇಳಿಕೆಯನ್ನು ಹಿಂಸೆಗೆ ಪ್ರಚೋದನೆ ಎಂದು ಗಾಂಧೀಜಿಯವರು ತಪ್ಪಾಗಿ ಭಾವಿಸಿ ಸಣ್ಣ ಭಿನ್ನಾಭಿಪ್ರಾಯವೂ ಇಬ್ಬರ ನಡುವೆ ಬಂದಿತ್ತಾದರೂ ಅದು ಬಹು ಕಾಲ ಉಳಿಯಲಿಲ್ಲ. ಸತ್ಯಾಗ್ರಹಕ್ಕೆ ಕೇರಳದಿಂದಾಚೆಯಿಂದಲೂ ಹರಿದು ಬರತೊಡಗಿದ ಬೆಂಬಲವನ್ನು ಗಾಂಧೀಜಿಯವರು ನಿರಾಕರಿಸಲು ಮನವಿ ಮಾಡಿದರು. ಈ ಹೊತ್ತಿಗೆ ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿಗೆ ಮುನ್ನುಡಿ ಬರೆದಿದ್ದ ಪರೆಯಾರ್ ರಾಮಸ್ವಾಮಿಯವರು ಗಾಂಧೀಜಿಯವರ ಮನವಿಯನ್ನು ಮೀರಿಯೂ, ಬಂದು ವೈಕಂ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾಧವನ್ ಅವರೊಂದಿಗೆ ಜೈಲನ್ನೂ ಸೇರಿದರು. ಹೀಗೆ ಎರಡು ಸಲ ಇದರಲ್ಲಿ ಜೈಲು ಸೇರಿದ ಪೆರಿಯಾರ್ ಅವರನ್ನು ’ವೈಕಂ ವೀರನ್ ಎಂದು ಮುಂದೆ ಗೌರವಿಸಲಾಯಿತು ಕೂಡಾ. ಗಾಂಧೀಜಿಯವರು ಈ ಸತ್ಯಾಗ್ರಹ ಸವರ್ಣೀಯರಲ್ಲಿ ಬದಲಾವಣೆ ತರಲಿ ಎಂಬ ಆಶಯದಿಂದ ಸವರ್ಣ ಜಾಥಾಕ್ಕೆ ಕರೆ ನೀಡಿದರು. ಇದಕ್ಕೆ ಓಗೊಟ್ಟು ನಾಯರ್ ಜಾತಿಯ ಸಾವಿರಾರು ಜನರು ತಮ್ಮ ಜಾತಿ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಗೆ ನಡೆಸಿ ಈಳವ-ಹೊಲೆಯರ ಹೋರಾಟಕ್ಕೆ ಬೆಂಬಲಿಸಿದರು.

ನಂಬೂದರಿಪಾದ್‌ರಂತರಹ ಬ್ರಾಹ್ಮಣರೂ ಪಾಲ್ಗೊಂಡರು. ಆದರೆ ಈ ನಡುವೆ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಗಾಂಧೀಜಿಯವರು ಮಾತುಕತೆ ನಡೆಸಲು ಹೋದಾಗ ಮಾತ್ರ ನಂಬೂದರಿ ಬ್ರಾಹ್ಮಣರು ಗಾಂಧೀಜಿ ಬೇಕಾದರೆ ಇಲ್ಲಿಗೇ ಬರಲಿ ಎಂದು ತನ್ನ ಮನೆಗೆ ಕರೆಸಿಕೊಂಡು ಒಳ ಕರೆಯದೇ, ಕೀಳು ಜಾತಿಯವರನ್ನು ಮುಟ್ಟಿ ಗಾಂಧೀಜಿ ಕೂಡಾ ಮಲಿನವಾಗಿದ್ದಾರೆಂದು ಹೇಳಿ ಮನೆಯ ಅಂಗಳದಲ್ಲೇ ಕೂರಿಸಿ ಮಾತಾಡಿದ್ದರು. ಈ ಮಾತುಕತೆಯಲ್ಲಿ ಗಾಂಧೀಜಿಯವರ ಯಾವ ಸಂಧಾನ ಪ್ರಸ್ತಾಪಗಳಿಗೂ ಸೊಪ್ಪು ಹಾಕದೇ ಅಪಮಾನಿಸಿ ಕಳಿಸಿದ್ದರು. ಆದರೆ ಚಳುವಳಿ ದಿನೇ ದಿನೇ ಬಲಗೊಳ್ಳುತ್ತಾ, ಮಾಧವನ್ ಅವರ ಸಂಘಟನಾ ಶಕ್ತಿ, ನಾರಾಯಣ ಗುರುಗಳ ಹತ್ತಿರದ ಮಾರ್ಗದರ್ಶನ, ಮಹಾತ್ಮಾ ಗಾಂಧಿ, ಪೆರಿಯಾರ್ ಅಂತವರ ಪಾಲ್ಗೊಳ್ಳುವಿಕೆಯಿಂದ ಬಲ ಪಡೆದುಕೊಂಡಿತು. ದಿವಾನನಾಗಿದ್ದ ರಾಘವ ಐಯರ್‌ನ ಅಸಡ್ಡಾಳತನತನದ ಹೊರತಾಗಿಯೂ 1925ರಲ್ಲಿ ಆಡಳಿತ ವರ್ಗ ತಲೆಬಾಗಲೇ ಬೇಕಾಯಿತು. 1931ರಲ್ಲಿ ಗುರುವಯೂರಿನಲ್ಲಿಯೂ ಇದೇ ಬಗೆಯ ಚಳವಳಿ ನಡೆಯಿತು. ಎಲ್ಲದರ ಪರಿಣಾಮವಾಗಿ ಮುಂದೆ 1936ರಲ್ಲಿ ತಿರುವಾಂಕೂರಿನ ರಾಜನು, ಇಡೀ ರಾಜ್ಯದಲ್ಲಿ ಯಾವುದೇ ದೇವಸ್ಥಾನಗಳಿಗೆ ಯಾವುದೇ ಜಾತಿಯವರು ಭೇಧವಿಲ್ಲದೇ ಪ್ರವೇಶಿಸಬಹುದು ಎಂದು ಘೋಷಣೆ ಹೊರಡಿಸಿದನು. ಇಂತಹ ಒಂದು ಘೋಷಣೆ ದೇಶದ ಇತಿಹಾಸದಲ್ಲಿಯೇ ಮೊದಲನೆಯದಾಗಿತ್ತು. ವೈಕಂ ಸತ್ಯಾಗ್ರಹದ ಮೂಲಕ ಟಿ.ಕೆ.ಮಾಧವನ್ ಎಷ್ಟು ದೊಡ್ಡ ನಾಯಕರಾದರೆಂದರೆ ಅಲ್ಲಿಂದ ಅವರನ್ನು ’ಈಳವರ ರಾಜಕೀಯ ಪಿತಾಮಹ’ ಎಂದೇ ಕರೆಯಲಾಗುತ್ತಿದೆ. ಮಾತ್ರವಲ್ಲ ಈ ಮೊದಲು ಮೇಲ್ಜಾತಿ ಭೂಮಾಲೀಕರ ಪಕ್ಷವಾಗಿದ್ದ ಕಾಂಗ್ರೆಸ್ ಕೇರಳದಲ್ಲಿ, ಈ ಅಸ್ಪೃಷ್ಯತೆ ಹೋರಾಟದ ಮೂಲಕ ದೊಡ್ಡ ಸಂಖ್ಯೆಯ ಈಳವ, ಹೊಲೆಯ, ಪರಯ ಮುಂತಾದ ಸಮುದಾಯಗಳ ಬೆಂಬಲದೊಂದಿಗೆ ಮಾಸ್ ಪಕ್ಷವಾಗಿ ಬೆಂಬಲ ಪಡೆದು ತನ್ನ ನೆಲೆ ಕಂಡುಕೊಂಡಿತು.

ನಾರಾಯಣ ಗುರುಗಳು ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾಗಿ ಕಾಣಿಸಿಕೊಂಡರೂ ತಮ್ಮ ಚಿಂತನೆ ಮತ್ತು ಕೆಲಸಗಳ ಮೂಲಕ ತಾವೊಬ್ಬ ಅದ್ವಿತೀಯ ಸಮಾಜ ಸುಧಾರಕೆಂಬುದನ್ನು ಸಾಧಿಸಿ ತೋರಿಸಿದರು. ಕುಸಿದು ಕುಳಿತಿದ್ದ ಜನತೆಯಲ್ಲಿ ಸ್ವಾಭಿಮಾನ ತುಂಬಿದರು, ಅರಿವಿನ ಬೆಳಕು ತೋರಿದರು. ಅವರು ಮಲಯಾಳಂ ಮತ್ತು ಸಂಸ್ಕೃತಗಳಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಆತ್ಮೋಪದೇಶ ಶತಕಂ, ದರ್ಶನ ಮಾಲಾ, ವೇದಾಂತ ಸೂತ್ರಗಳಂತಹ ಆಧ್ಯಾತ್ಮಿಕತೆ ಬೋಧೆಯ ಕೃತಿಗಳೊಂದಿಗೆ ’ಜಾತಿ ನಿರ್ಣಯ’, ’ಜಾತಿ ಲಕ್ಷಣ’ದಂತಹ ಅವರ ಬರೆಹಗಳು ಗುರುಗಳ ಸಾಮಾಜಿಕ ದೃಷ್ಟಿಕೋನವನ್ನು ಸ್ಪಷ್ಟವಾಗಿ ತೋರಿಸುತ್ತವೆ. ಎಲ್ಲಾ ಧರ್ಮಗಳ ಗುರಿಯೂ ಒಂದೇ. ಬೇರೆ ಬೇರೆ ದಿಕ್ಕಿನಿಂದ ಹರಿಯುವ ಎಲ್ಲಾ ನದಿಗಳೂ ಸಮುದ್ರವನ್ನೇ ಸೇರುವುದು ಹೀಗಾಗಿ ’ಮನುಷ್ಯನಾದವನಿಗೆ ಇರುವುದು ಒಂದೇ ಧರ್ಮ’ ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳು ತಮ್ಮ ‘ಆತ್ಮೋಪದೇಶ ಶತಕಂ’ ಕೃತಿಯಲ್ಲಿ ಹೀಗೆ ಹೇಳಿದ್ದಾರೆ:
“ಯಾವ ಧರ್ಮವೂ ಯಾವ ಮತ್ತೊಂದು ಧರ್ಮವನ್ನೂ ಹೊಡೆದಾಡುವ ಮೂಲಕ ಸೋಲಿಸಲು ಸಾಧ್ಯವಿಲ್ಲ. ಈ ಸತ್ಯ ತಿಳಿಯದೇ ಹೋದವರು ಮಾತ್ರವೇ ಮತ್ತೊಂದು ಧರ್ಮದ ವಿರುದ್ಧ ವಾದಿಸುತ್ತಾರೆ. ಅಂತವರು ಹಗೆತನ ಬೆಳೆಸಿಕೊಂಡು ವಿನಾಕಾರಣ ಹೊಡೆದಾಡಿ ಕೊನೆಗೆ ನಿಷ್ಫಲವಾಗಿ ನಾಶವಾಗುತ್ತಾರೆ. ಇದನ್ನು ಎಲ್ಲರೂ ಅರಿಯಬೇಕು”. ಇಂತಹ ಮಾನವೀಯ ಚಿಂತನೆಯಿದ್ದ ಗುರುಗಳು 1924ರಲ್ಲಿ ಅಲವಾಯಿನಲ್ಲಿರುವ ತಮ್ಮ ಅದ್ವೈತ ಆಶ್ರಮದಲ್ಲಿ ಧರ್ಮ ಸಮ್ಮೇಳನವನ್ನು ಆಯೋಜಿಸಿದರು. ಈ ಧರ್ಮ ಸಮ್ಮೇಳನಕ್ಕೆ ಹಿಂದೂ, ಕ್ರೈಸ್ತ, ಮುಸ್ಲಿಂ, ಬೌದ್ಧ, ಪಾರ್ಸಿ ಧರ್ಮಗಳ ಗುರುಗಳು, ಸ್ವಾಮೀಜಿಗಳು ಮತ್ತು ಆಧ್ಯಾತ್ಮಿಕ ಚಿಂತಕರುಗಳನ್ನು ಆಹ್ವಾನಿಸುತ್ತಾರೆ. ಈ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಅವರು ಬರೆದಿದ್ದ ಒಕ್ಕಣೆ ಹೀಗಿತ್ತು; *”ಮತ್ತೊಬ್ಬರಿಂದ ತಿಳಿದುಕೊಳ್ಳಲು ಹಾಗೂ ಮತ್ತೊಬ್ಬರಿಗೆ ತಿಳಿಸಲು. ವಾದಿಸಿ ಅಳಿಯಲು ಅಲ್ಲ”* ಭಾರತದ ಇತಿಹಾಸದಲ್ಲೇ ಇಂತಹ ಒಂದು ಧರ್ಮ ಸಮ್ಮೇಳನ ಈ ಹಿಂದೆ ನಡೆದಿರಲಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.
ಸ್ವತಃ ಜಾತಿ ಭೇದಕ್ಕೆ ತುತ್ತಾಗಿದ್ದ ನಾರಾಯಣ ಗುರುಗಳ ಫಿಲಾಸಫಿಯಲ್ಲಿ ಮುಖ್ಯವಾದದ್ದು ಜಾತಿ ತಾರತಮ್ಯದ ವಿರುದ್ಧದ ಚಿಂತನೆ. ಬಾಲ್ಯದಿಂದಲೂ ಜಾತಿ ತಾರತಮ್ಯಕ್ಕೆ ಪ್ರತಿರೋಧ ಒಡ್ಡುತ್ತಲೇ ಬಂದಿದ್ದ ಗುರುಗಳು ತಮ್ಮ ವೇದ ಉಪನಿಷತ್ತುಗಳ ಆಳವಾದ ಅಧ್ಯಯನದ ಮೂಲಕ ಅನುಸರಿಸಿದ ಅದ್ವೈತ ಮಾರ್ಗವನ್ನೂ ಇದೇ ಜಾತಿ ತಾರತಮ್ಯ ವಿರೋಧಿ ನೆಲೆಯಲ್ಲಿಯೇ ಕಟ್ಟಿಕೊಂಡರೆಂಬುದು ವಿಶೇಷವಾದುದು. ಎಂಟನೇ ಶತಮಾನದಲ್ಲಿ ಇದೇ ನೆಲದಲ್ಲಿ ಹುಟ್ಟಿದ್ದ ಆದಿ ಶಂಕರರು ಇದೇ ಅದ್ವೈತ ಬೋಧಿಸಿ ಅಂತಿವಾಗಿ ಅವರ ಚಿಂತನೆಗಳು ಧಾರ್ಮಿಕ ಅಸಹಿಷ್ಣುತೆಯನ್ನೂ, ಜಾತಿ ತಾರತಮ್ಯವನ್ನೂ ನೆಲೆಗೊಳಿಸಿದ್ದರೆ ಅದೇ ಅದ್ವೈತದ ಮೂಲಕ ’ಅಸ್ಪೃಶ್ಯ’ನಾಗಿದ್ದ ನಾರಾಯಣ ಗುರು ಜಾತಿಭೇಧ ಹೊಡೆದು ಹಾಕಲು ಶ್ರಮಿಸಿದ ಪರಿ ಅನನ್ಯವಾದುದು. ಹೀಗೆಂದೇ ಅವರು ತಮ್ಮ ’ಜಾತಿ ನಿರ್ಣಯಂ’ ನಲ್ಲಿ ಹೀಗೆನ್ನುತ್ತಾರೆ.

ಮಾನವ ಪ್ರಬೇಧದಲ್ಲಿ
ಒಬ್ಬ ಬ್ರಾಹ್ಮಣ ಹುಟ್ಟುತ್ತಾನೆ
ಒಬ್ಬ ಪರಯನೂ ಹುಟ್ಟುತ್ತಾನೆ. ಹಾಗಿದ್ದರೆ ಜಾತಿ ಭಿನ್ನತೆ ಎಲ್ಲಿ?
ಮನುಷ್ಯ ಜೀವಿಗಳಲ್ಲಿ?
ಪರಯ ಮಹಿಳೆಯ ಗರ್ಭದಲ್ಲಿ
ಮಹಾನ್ ಋಷಿ ಪರಾಷರ ಜನಿಸಿದ್ದ
ವೇದಗಳ ರಹಸ್ಯಗಳನ್ನು
ಚಿಕ್ಕ ವಚನಗಳಲ್ಲಿ ಹೇಳಿದ ಋಷಿಯೂ
ಬೆಸ್ತನ ಮಗಳೊಬ್ಬನ ಮಗನೇ
ಮನುಷ್ಯ ಪ್ರಬೇಧದೊಳಗೆ
ಮನುಷ್ಯ ಮನುಷ್ಯನ ನಡುವೆ ಭೇಧವೆಲ್ಲಿ?
ತೋರಿಕೆಯ ಭಿನ್ನತೆ
ವ್ಯಕ್ತಿ ವ್ಯಕ್ತಿ ನಡುವೆ ಮಾತ್ರವೇ”.

ಒಂದು ತತ್ವ ದರ್ಶನವಾಗಿ ಅದ್ವೈತವು ಭಾವನಾವಾದಿ ದರ್ಶನ ಮತ್ತು ವೇದಗಳ ಪ್ರಾಮಣ್ಯವನ್ನು ಎತ್ತಿ ಹಿಡಿಯುವ ದರ್ಶನ. ವೇದಪ್ರಾಮಣ್ಯವನ್ನು ಒಪ್ಪದ ಸಾಂಖ್ಯ, ಲೋಕಾಯತದಂತಹ ದರ್ಶನಗಳೂ ಭಾರತದಲ್ಲಿದ್ದವು. ಆದರೆ ’ಆತ್ಮ ಪರಮಾತ್ಮ ಒಂದೇ’ ಎಂದೆನ್ನುವ ಆಸ್ತಿಕವಾದಿ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುತ್ತಲೇ ಈ ಮಾನವ ಸಮಾಜದ ವಾಸ್ತವಿಕ ಜ್ವಲಂತ ಸಮಸ್ಯೆಗಳಿಗೆ ಬೆನ್ನು ತೋರದೇ, ತಮ್ಮ ಆಧ್ಯಾತ್ಮಿಕ, ಧಾರ್ಮಿಕ ಕೆಲಸಗಳ ಪರಿಧಿಯೊಳಗೆ ಅವುಗಳನ್ನೂ ತಂದುಕೊಂಡು ಒಂದು ಸಾಮಾಜಿಕ ಫಿಲಾಸಫಿಯನ್ನು ಮಾದರಿಯಾಗಿ ಮುಂದಿಟ್ಟ ಮಹಾನ್ ಸಾಧನೆ ನಾರಾಯಣ ಗುರುಗಳದ್ದು. ಬುದ್ಧ, ಬಸವ, ವಿವೇಕಾನಂದ, ಬಾಬಾಸಾಹೇಬ್ ಅಂಬೇಡ್ಕರ್, ಕುವೆಂಪು ಮೊದಲಾದವರೆಲ್ಲರೂ ಇದೇ ಸಾಲಿನಲ್ಲಿ ನಿಲ್ಲುವವರು. ನಾರಾಯಣ ಗುರುಗಳ ಈ ಪ್ರಯತ್ನದಲ್ಲಿ ಕೈ ಜೋಡಿಸಿದ ಮತೊಬ್ಬ ಅನುಯಾಯಿ ಹಾಗೂ ಅಪ್ರತಿಮ ಚಿಂತಕ ಸಹೋದರನ್ ಅಯ್ಯಪ್ಪನ್ ಕುಡಾ ಈಳವನಾಗಿದ್ದು ಸಾಮಾಜಿಕ ಏಣಿಶ್ರೇಣಿಯಲ್ಲಿ ಅವರಿಗಿಂತ ಕೆಳಗಿರುವ ಹೊಲೆಯ, ಪರಯ ಮುಂತಾದವರ ಏಳಿಗೆಗೆ ಪ್ರಯತ್ನ ಪಡುತ್ತಿದ್ದರು. ಇದಕ್ಕಾಗಿ ’ಸಹೋದರನ್ ಸಂಘಟನ್’ (ಸೋದರ ಸಂಘ) ಎಂಬ ಸಂಘಟನೆ ಕಟ್ಟಿಕೊಂಡು ಅಂತರ್ಜಾತಿ ಮದುವೆಗಳನ್ನು ಮಾಡಿಸುತ್ತಾ, ಸಹಪಂಕ್ತಿ ಭೋಜನಗಳನ್ನು ಏರ್ಪಡಿಸುತ್ತಾ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಸಹೋದರತೆ ಮೂಡಿಸಲು ಯತ್ನಿಸುತ್ತಾ ತೊಡಗಿಸಿಕೊಂಡಿದ್ದ ಸಹೋದರನ್ ಐಯಪ್ಪನ್ ಕೊಚಿನ್ ಪ್ರದೇಶದ ಈಳವರ ಮೊದಲ ಪದವೀಧರನಾಗಿದ್ದರು. ಅಸ್ಪೃಷ್ಯ ಎಂದೆನಿಸಿಕೊಂಡಿದ್ದ ಎಲ್ಲಾ ಜಾತಿಯವರೂ ಒಂದಾಗಿ ಅಣ್ಣ ತಮ್ಮಂದಿರಂತೆ ಬಾಳಬೇಕು ಎಂಬುದು ಅವರ ಹೆಬ್ಬಯಕೆ. ಆದರೆ ಒಂದು ಹಂತದಲ್ಲಿ ತನ್ನ ಈಳವ ಸಮುದಾಯದಿಂದಲೇ ಇವರ ಪ್ರಯತ್ನಗಳಿಗೆ ವಿರೋಧ ವ್ಯಕ್ತವಾಗುತ್ತದೆ. ಆಗ ಅಯ್ಯಪ್ಪನ್ ನೇರವಾಗಿ ನಾರಾಯಣ ಗುರುಗಳ ಬಳಿ ಧಾವಿಸಿ ತನ್ನ ನೋವನ್ನು ಹೇಳಿಕೊಳ್ಳುತ್ತಾರೆ. ಆಗ ತಾವೂ ನೊಂದುಕೊಂಡ ಗುರುಗಳು ಐಯಪ್ಪನ್ ಅವರನ್ನು ಸನಿಹ ಕರೆದು, ಸಮಾಧಾನಿಸಿ, ಲಿಖಿತ ರೂಪದಲ್ಲಿ ನೀಡಿದ ಒಂದು ಸಂದೇಶದಲ್ಲಿ ಸಹೋದರ ಐಯಪ್ಪನ್ ನಡೆಸಿಕೊಂಡು ಬಂದ ಕೆಲಸಗಳಿಗೆ ತಮ್ಮ ಬೆಂಬಲ ನೀಡುತ್ತಾರೆ. ಅವರು ನೀಡಿದ ಆ ಸಂದೇಶದಲ್ಲಿ, “ಧರ್ಮ, ಭಾಷೆ, ಸಂಪ್ರದಾಯ, ಜಾತಿ, ಉಡುಗೆತೊಡುಗೆ ಏನೇ ಇರಲಿ ಎಲ್ಲರೂ ಮನುಷ್ಯ ಜೀವಿಗಳೇ ಆಗಿರುವುದರಿಂದ ಅಂತರ್ಜಾತಿ, ಅಂತರ್‌ಧರ್ಮ ಮದುವೆಗಳಿಗೆ ವಿರೋಧವಿರಕೂಡದು” ಎಂದಿರುತ್ತದೆ. ಗುರುಗಳು ನೀಡಿದ ಈ ಸಂದೇಶವು ಮುಂದೆ ಬಹು ಪ್ರಖ್ಯಾತವಾಗಿ ಗುರುಗಳ ಹಲವು ವಿಶ್ವ ಸಂದೇಶಗಳಲ್ಲಿ ಒಂದಾಯಿತು . ಈ ಸಂದೇಶ ನೀಡಿದ ಗುರುಗಳು ಐಯಪ್ಪನ್‌ನನ್ನುದ್ದೇಶಿಸಿ, ಐಯಪ್ಪನ್, ನೀನು ಏಸು ಕ್ರಿಸ್ತನಂತೆ ಸಹನೆಯನ್ನು ಗಳಿಸಿಕೊಳ್ಳಬೇಕು ಎಂದರು. ಸಹೋದರನ್ ಐಯಪ್ಪನ್ ಇದನ್ನು ಶಿರಸಾವಹಿಸ ಪಾಲಿಸಿದ್ದಲ್ಲೇ ಮುಂದೆ ಕೇರಳದ ಎಡಪಂಥೀಯ ಚಳುವಳಿಗೆ ಬುನಾದಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಈ ರೀತಿಯಲ್ಲಿ ಸಮಾಜದ ತುಳಿತಕ್ಕೊಳಗಾದ ಜನವರ್ಗಗಳ ಪರವಾಗಿ ತಮ್ಮ ಬದುಕಿನಿಡೀ ಚಿಂತಿಸಿ, ವ್ಯಕ್ತಿಯೊಳಗಿನ ಶಕ್ತಿಯಾಗಿ, ಒಂದು ಸಂಘಟನೆಯಾಗಿ, ಚಳುವಳಿಯೇ ಆಗಿ ಜೀವಿಸಿದ ನಾರಾಯಣ ಗುರುಗಳ ಪ್ರಯತ್ನಗಳೆಲ್ಲವೂ ಅವರ ಜೀವಿತಾವಧಿಯಲ್ಲೇ ಫಲ ನೀಡಲಿಲ್ಲ. 1928ರ ಸೆಪ್ಟೆಂಬರ್ 20ರಂದು ಗುರುಗಳು ಸಮಾಧಿ ಸ್ಥಿತಿ ತಲುಪಿದರು. ಅವರು ನಡೆಸಿಕೊಂಡು ಬಂದ ಚಳುವಳಿ ಮುಂದುವರೆಯಿತು, ಅವರು ಜಾಗೃತಗೊಳಿಸಿದ ಪ್ರಜ್ಞೆ ಕೇರಳ ಸಮಾಜವನ್ನು ವಿವೇಕಾನಂದರು ಹೇಳಿದ್ದ ’ಹುಚ್ಚಾಸ್ಪತ್ರೆ’ಯ ಸ್ಥಿತಿಯಿಂದ ನಾಗರಿಕ, ಸುಶಿಕ್ಷಿತ ಸಮಾಜವಾಗಿ ಪರಿವರ್ತಿಸಲು ಕಾರಣವಾಯಿತು. ಕೇರಳದ ನೆಲದಲ್ಲಿ ರಾಷ್ಟ್ರೀಯ ಚಳುವಳಿಯ ಕಾವು ಕಾಂಗ್ರೆಸ್ ನೇತೃತ್ವದಲ್ಲಿ ಬಲ ಪಡೆಯಲು ಹಾಗೂ ಕಮ್ಯುನಿಷ್ಟ್ ಪಕ್ಷವು ಬಹುಸಂಖ್ಯಾತ ಈಳವ ಮತ್ತಿತರ ’ಅಸ್ಪೃಶ್ಯ’ರೆಂದು ಮೂಲೆಗುಂಪಾಗಿದ್ದ ಸಮುದಾಯಗಳ ಮತ್ತು ಮುಸ್ಲಿಂ, ಕ್ರೈಸ್ತ ಧರ್ಮೀಯರ ಬೆಂಬಲ ಪಡೆಯಲು ’ನಾರಾಯಣ ಗುರು’ ಮೂಡಿಸಿದ ಜಾಗೃತಿ ಅಡಿಗಲ್ಲಾಯಿತು. ಗುರುಗಳ ಹಲವು ಅನುಯಾಯಿಗಳು – ಅವರಲ್ಲಿ ಬ್ರಾಹ್ಮಣ, ನಾಯರ್, ಈಳವ, ಪರಹ, ಮುಂತಾದ ಹಲವು ಜಾತಿ ಮತಗಳವರೂ ಇದ್ದಾರೆ – ಗುರುಗಳ ಆಧ್ಯಾತ್ಮಿಕ ಚಿಂತನಗಳನ್ನು ಮುಂದೆ ಕೊಂಡಯ್ದರು. ಇವರಲ್ಲಿ ಡಾ.ಪಲ್ಪು ಅವರ ಹಿರಿಮಗ ನಟರಾಜ ಗುರುಗಳೂ ಒಬ್ಬ ಪ್ರಮುಖ ಆಧ್ಯಾತ್ಮಿಕ ಚಿಂತಕರಾಗಿದ್ದರು.
ನಾರಾಯಣ ಗುರುಗಳು ತಮ್ಮ ಬದುಕು, ಸಂಘಟನೆ, ಕೆಲಸಗಳ ಮೂಲಕ ಪ್ರತಿಪಾದಿಸಿ ಸಾಮಾಜಿಕ ಫಿಲಾಸಫಿಯನ್ನು ಅರ್ಥಮಾಡಿಕೊಳ್ಳಬೇಕಾದ ಜರೂರು ಇಂದು ಪ್ರತಿಯೊಬ್ಬರಿಗೂ ಇದೆ. ಧರ್ಮ ಧರ್ಮಗಳ ನಡುವೆ ನಂಜು ಸಾಧಿಸುವ, ಜಾತಿ ಜಾತಿಗಳ ನಡುವೆ ಸಾಮರಸ್ಯ ಸ್ಥಾಪಿಸದೇ ಮತ್ತಷ್ಟು ಕಂದಕವನ್ನೇ ತೋಡುತ್ತಿರುವ ರಾಜಕಾರಣಗಳ ಇಂದಿನ ಕಾಲದಲ್ಲಿ ಗುರುಗಳ ಈ ’ಮನುಷ್ಯ ಧರ್ಮ, ಮನುಷ್ಯ ಜಾತಿಯ ಫಿಲಾಸಫಿಗೆ ಮಹತ್ವದ ಸ್ಥಾನವಿದೆ.

(-ಹರ್ಷಕುಮಾರ್ ಕುಗ್ವೆ, ಪತ್ರಕರ್ತರು, ಉಡುಪಿ)

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ

Published

on

ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.

ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ

ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.

ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.

‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.

‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.

ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ

ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.

ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ9 hours ago

ದಾವಣಗೆರೆ | ಇಂದು ಕರೆಂಟ್ ಇರಲ್ಲ

ಸುದ್ದಿದಿನ,ದಾವಣಗೆರೆ:ಬೆಸ್ಕಾಂ ಜಗಳೂರು ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಜಂಗಲ್ ಕಟಿಂಗ್ ಮತ್ತು ಫೀಡರ್‌ಗಳ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 26 ರಂದು ಬೆಳಿಗ್ಗೆ 09-00 ರಿಂದ ಸಂಜೆ 05-00...

ದಿನದ ಸುದ್ದಿ3 days ago

ಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ:ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ದೂರು ನೀಡಿ ನಿಗಧಿತ ಅವಧಿ...

ದಿನದ ಸುದ್ದಿ4 days ago

ಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?

ಗಿರೀಶ್ ಬಳ್ಳಾರಿ ಸುದ್ದಿದಿನ,ಬಳ್ಳಾರಿ:ನಗರದ ಗಾಂಧಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯ ನಂತರ ಕೊಂಡಯ್ಯ ಫ್ಯಾಕ್ಟರಿಯ ಹುಸೇನ್ ನಗರದ ಜಾಲಿ ಬೇಲಿಯ ಒಳಭಾಗದಲ್ಲಿ ಅಕ್ರಮವಾಗಿ...

ದಿನದ ಸುದ್ದಿ4 days ago

ಪಂಚಪಾಡಿ ಪದ್ಧತಿಯಲ್ಲಿ ವಿದ್ಯಾಭ್ಯಾಸ | ತ್ಯಾವಣಿಗೆಯ ಮಂದಾರ ಶಾಲೆಯಲ್ಲಿ ಪ್ರವೇಶ ಪ್ರಾರಂಭ

~ವಿದ್ಯಾನಾಯ್ಕ್ ಅರೇಹಳ್ಳಿ ಸುದ್ದಿದಿನ,ದಾವಣಗೆರೆ:ಚನ್ನಗಿರಿ ತಾಲೂಕು ವ್ಯಾಪ್ತಿಯ ತ್ಯಾವಣಿಗೆ ಗ್ರಾಮದಲ್ಲಿ ಪಂಚಪಾಡಿ ಮತ್ತು ಆಧುನಿಕ ಪದ್ಧತಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಒಂದು ವಿನೂತನ ಕಾರ್ಯಕ್ಕೆ ಮುಂದಡಿ ಇಟ್ಟಿದ್ದಾರೆ. ಪಂಚಪಾಡಿ...

ಅಂಕಣ4 days ago

ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ

ವಿದ್ಯಾನಾಯ್ಕ್ ಅರೇಹಳ್ಳಿ ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ....

ದಿನದ ಸುದ್ದಿ5 days ago

ಕೀಲು ಮತ್ತು ಮೂಳೆ ಚಿಕಿತ್ಸೆ ; ರೋಬೋಟಿಕ್ ಮತ್ತು ಮಿನಿಮಲಿ ಇನ್ನೇಸಿವ್ ಸರ್ಜರಿಗಳಲ್ಲಿ‌ ಮಹತ್ವದ ಬದಲಾವಣೆ : ಡಾ.ಲೋಕೇಶ್ ಎ. ವೀರಪ್ಪ

ಸುದ್ದಿದಿನ,ದಾವಣಗೆರೆ:ವಯೋಸಹಜವಾಗಿ ಕಂಡುಬರುವ ಮೊಣಕಾಲು, ಸೊಂಟ, ಭುಜ ಮತ್ತು ಕ್ರೀಡಾ ಸಂಬಂಧಿತ ಸಂಧಿ ಸಮಸ್ಯೆಗಳಿಗೆ ಸಮಯೋಚಿತ ಚಿಕಿತ್ಸೆ ಮತ್ತು ನೂತನ ಶಸ್ತ್ರಚಿಕಿತ್ಸಾ ತಂತ್ರಜ್ಞಾನಗಳು ಹೇಗೆ ಸಹಾಯವಾಗುತ್ತಿವೆ ಹಾಗೂ ಈ...

ದಿನದ ಸುದ್ದಿ5 days ago

ದಾವಣಗೆರೆ | ಇದೇ 22 ರಂದು ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026 ಕಾರ್ಯಕ್ರಮ

ಸುದ್ದಿದಿನ,ದಾವಣಗೆರೆ:ಬೆಂಗಳೂರಿನ ಜಿಎಂಕೆ ಎಡು ಟೆಕ್ ರಾಜ್ಯದ ಸಮಸ್ತ ಖಾಸಗಿ ಅನುದಾನರಹಿತ ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಣ ಕ್ಷೇತ್ರದ ಆಸಕ್ತರಿಗಾಗಿ ನಾಳೆ (ಮೇ22) ರಂದು...

ದಿನದ ಸುದ್ದಿ7 days ago

ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ...

ದಿನದ ಸುದ್ದಿ1 week ago

ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಯುವಜನತೆಗೆ ಪ್ರೇರಣೆ ; ವಿಶ್ವನಾಥ.ಡಿ. ಅರ್

ಸುದ್ದಿದಿನ,ಬನ್ನಿಕೋಡು:ಮಾ.ಸ.ಬ. ಕಾಲೇಜ್, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್‌.ಎಸ್‌.ಎಸ್‌. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ....

ದಿನದ ಸುದ್ದಿ1 week ago

ಲೋಕಾಯುಕ್ತ ಪೋಲಿಸ್ ಇನ್ಸ್‌ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು

ಸುದ್ದಿದಿನ,ಬನ್ನಿಕೋಡು: ಮಾ.ಸ.ಬ. ಕಾಲೇಜು, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್‌.ಎಸ್‌.ಎಸ್‌. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಅಧ್ಯಕ್ಷತೆಯನ್ನು ಮಾ.ಸ.ಬ. ಕಾಲೇಜಿನ ವಾಣಿಜ್ಯ...

Trending