ನೆಲದನಿ
ಲೈಂಗಿಕ ಶಿಲ್ಪಗಳ ಹಿಂದಿನ ತತ್ವ ಏನು..?
ಶಿವಮೊಗ್ಗ ಜಿಲ್ಲೆಯ ಉಳವಿಯ (ನಮ್ಮೂರಿನಿಂದ 25 ಕಿಲೋಮೀಟರ್ ದೂರದಲ್ಲಿರುವ) ಕೆರೆ ಏರಿಯೊಂದರ ಮೇಲೆ ಬೈಕಿನಲ್ಲಿ ಹೋಗುತ್ತಿರುವಾಗ ನನ್ನನ್ನು ಗಕ್ಕನೆ ನಿಲ್ಲಿಸುವಂತೆ ಮಾಡಿದ್ದು ಈ ಕಲ್ಲಿನ ಕೆತ್ತನೆಗಳು. ಇದನ್ನು ನೋಡಿ ಕೆಲವರು ನಾಚಿಕೆ ಪಟ್ಡುಕೊಳ್ಳಬಹುದು, ಲೇವಡಿ ಮಾಡಬಹುದು ಅಥವಾ ಇಂತಹ erotic ಲೈಂಗಿಕ ಶಿಲ್ಪಗಳ ಅರ್ಥ ಏನು ಎಂದೂ ತಲೆ ಕೆಡಿಸಿಕೊಳ್ಳಬಹುದು. ಗಂಭೀರವಾಗಿ ಅವಲೋಕಿಸಿದರೆ ಈ ದೇಶದ ಮೂಲ ಸಂಸ್ಕೃತಿ ಮತ್ತು ಮೂಲ ಧರ್ಮ ಇವುಗಳಲ್ಲಿದೆ.
ಪುರುಷ ತನ್ನ ಲಿಂಗವನ್ನು ಹಿಡಿದುಕೊಂಡಿರುವ ಮತ್ತು ಮಹಿಳೆ ಅದನ್ನು ಹೊತ್ತುಕೊಂಡಿರುವ ಒಂದು ಶಿಲ್ಪ, ಹಾಗೂ ಮಹಿಳೆ ತನ್ನ ಯೋನಿಯನ್ನು ಹಿಡಿದುಕೊಂಡಿರುವ ಮತ್ತೊಂದು ಶಿಲ್ಪ ಸೂಚಿಸುವುದು ದ್ರಾವಿಡ ಮತ್ತು ದ್ರಾವಿಡ ಪೂರ್ವ ಸಮುದಾಯಗಳ ಫಲವಂತಿಕೆಯ ಆಚರಣೆ (fertility cult) ಯನ್ನು ಜಗತ್ತಿನಲ್ಲಿ ಇಂದು ಇರುವ ವೈದಿಕ, ಇಸ್ಲಾಂ, ಪಾರ್ಸಿ, ಕ್ರೈಸ್ತ ಮೊದಲಾದ ಯಾವುದೇ ಮತಧರ್ಮ ಹುಟ್ಟುವುದಕ್ಕೆ ಮೊದಲು ವ್ಯಾಪಕವಾಗಿ ಇದ್ದ ಆಚರಣೆ ಇದು. ಭಾರತದ ಮಟ್ಟಿಗೆ ಆರ್ಯರು ಇಲ್ಲಿಗೆ ಕಾಲಿಡುವ ಮುನ್ನ ದ್ರಾವಿಡ ಸಮುದಾಯಗಳು ಎಲ್ಲೆಡೆ ಪಾಲಿಸುತ್ತಿದ್ದ “ಧರ್ಮ” ಇದು. ಇದೇ ಆಚರಣೆಗಳು ಮುಂದೆ ವ್ಯವಸ್ಥಿತ ರೂಪ ಪಡೆದು ತಾಂತ್ರಿಕ ಪಂಥದ ಏಳಿಗೆಗೆ ಅನುವು ಮಾಡಿಕೊಟ್ಟವು ಎಂದು ಮಾನವಶಾಸ್ತ್ರಜ್ಞರು, ಸಂಸ್ಕೃತಿ ಚಿಂತಕರು ಶೋಧಿಸಿದ್ದಾರೆ.
ಕರ್ನಾಟಕದಲ್ಲಿಯೇ ಅನೇಕ ಕಡೆಗಳಲ್ಲಿ ಲಜ್ಜಾ ಗೌರಿಯ ವಿಗ್ರಹಗಳು ದೊರೆತಿವೆ. ಲಜ್ಜಾಗೌರಿಯ ಮುಖವು ಅರಳಿದ ಕಮಲವನ್ನು ಹೊಂದಿದ್ದು ಯೋನಿ ಮೇಲ್ಮುಖವಾಗಿರುತ್ತದೆ. ಇದೂ ಸಹ ಫಲವಂತಿಕೆ ಪಂಥದ ಪೂಜಾ ಸಾಧನವೇ ಆಗಿದೆ. ಈ ಕೆತ್ತನೆಗಳಲ್ಲಿನ ಮೂಲ ತಿಳುವಳಿಕೆಯ ಸಾರ ಇಷ್ಟೇ. ಸಕಲ ಜೀವ ಜಂತುಗಳ ಸಂತಾನೋತ್ಪತ್ತಿಗೆ ಕಾರಣವಾಗುವ ಸ್ತ್ರೀ ಪುರುಷ ಜನನಾಂಗಗಳೇ ಪೂಜನೀಯವಾದವು. ಮುಂದೆ ಶೈವ ಪಂಥವು ಸ್ವೀಕರಿಸಿದ ಲಿಂಗವೂ ಸ್ತ್ರೀ-ಪುರುಷ ಸಮಾಗಮ ತತ್ವವನ್ನೇ ಸಾಂಕೇತಿಕಗೊಳಿಸಿಕೊಂಡದ್ದು. ಈ ಬಗ್ಗೆ ಸಂಸ್ಕೃತಿ ಚಿಂತಕರಾದ ಡಾ.ಲಕ್ಷ್ಮೀಪತಿ ಕೋಲಾರ ಅವರು, ಲಾಗಾಯ್ತಿನ ಲಿಂಗ ಪುರಾಣ ಲೇಖನದಲ್ಲಿ”ವೇದದಲ್ಲೆಲ್ಲೂ ‘ಶಿವ’ ಎಂಬ ಪದದ ಪ್ರಯೋಗವೂ ಆಗಿಲ್ಲ ಎಂಬುದನ್ನು ಶಂ.ಭಾ. ಜೋಶಿಯವರು ತಮ್ಮ ಶಿವ ರಹಸ್ಯ ದಲ್ಲಿ ದಾಖಲಿಸಿದ್ದಾರೆ. ವೈದಿಕ ಸಾಹಿತ್ಯದಲ್ಲಿ ಮೊದಲು ಶಿವ ಎಂಬ ನಾಮದ ಪ್ರಯೋಗವಾಗಿರುವುದು ಶ್ವೇತಾಶ್ವತೋಪನಿಷತ್ತಿನಲ್ಲೇ! ದ್ರಾವಿಡ ಭಾಷಾ ವಿಜ್ಞಾನಿಗಳು ಈಗಾಗಲೇ ದೃಢಪಡಿಸಿರುವಂತೆ ‘ಶಿವ’ ಮತ್ತು ‘ಲಿಂಗ’ ಶಬ್ದಗಳು ಸಂಸ್ಕೃತ ಭಾಷೆಯದ್ದಲ್ಲವೇ ಅಲ್ಲ…..” ಎನ್ನುತ್ತಾರೆ.
ಅಲ್ಲ ದ್ಚೈತ ಹಾಗೂ ಅದ್ವೈತ ಚಿಂತನೆಗಳ ಮೂಲವೂ ಸಹ ಈ ಸ್ತ್ರೀ ಪುರುಷ ಸಂಯೋಗದ ಫಲವಂತಿಕೆ ಪಂಥದಲ್ಲಿಯೇ ಇದ್ದವು ಎನ್ನಲಾಗುತ್ತದೆ. ಹೆಣ್ಣು ಗಂಡಿನ ಮಿಲನದ ಸರಳ ಸುಂದರ ಅದ್ವೈತ ತತ್ವವನ್ನು ಮುಂದೆ ಎಂಟನೇ ಶತಮಾನದಲ್ಲಿ ಜನವಿರೊಧಿ ಸಿದ್ಧಾಂತವಾಗಿಸಲಾಯಿತು ಎನ್ನಲಾಗುತ್ತದೆ. ಈ ಬಗ್ಗೆ ಲಕ್ಷ್ಮೀಪತಿ ಅವರು ಅದೇ ಲೇಖನದಲ್ಲಿ ಹೀಗ ಬರೆಯುತ್ತಾರೆ. “ಹೆಣ್ಣು- ಗಂಡುಗಳು ದ್ವೈತವಾಗಿದ್ದು, ಅವರ ಸಮಾಗಮದಿಂ ಸೃಷ್ಟಿಕ್ರಿಯೆ ನಡೆದು, ಅಲ್ಲಿ ಹುಟ್ಟುವ ಹೊಸ ಜೀವ ಅವರಿಂದ ಬೇರೆಯಲ್ಲವಾಗಿ ಅದು ಅದ್ವೈತ. ಇದು ಜೇನು ಕುರುಬರ ಅಣಪೆ ನೂರಾಳೊಡೆಯನ ಪರಿಕಲ್ಪನೆಯ ಹಿಂದಿರುವ ಆದಿಮವಾದ, ಸರಳ ಅದ್ವೈತ ತತ್ವ. ಜೇನು ಕುರುಬರಲ್ಲಿನ ಈ ಸೃಷ್ಟಿ ಕ್ರಿಯೆಯನ್ನಾಧರಿಸಿದ ಅದ್ವೈತ ತತ್ವವನ್ನೇ ವೈದಿಕ ಪೂರ್ವದ ಅಥವ ದ್ರಾವಿಡರ ತಂತ್ರ ಪಂಥವು ತಂತ್ರಾಕೃತಿಗಳ ಮೂಲಕವೇ ಹಿಡಿದಿಟ್ಟಿತು.
ಉದಾಹರಣೆಗೆ ಸರಳವಾಗಿ ಹೀಗೆ ವಿವರಿಸಬಹುದು
ಮೇಲ್ಮುಖವಾದ ತ್ರಿಕೋನವು ಪುರುಷ ಲಿಂಗದ ಸಂಕೇತವಾದರೆ ಕೆಳಮುಖವಾದ ತ್ರಿಕೋನವು ಸ್ತ್ರೀಲಿಂಗದ ಸಂಕೇತವೆಂದುಕೊಳ್ಳೋಣ. ಹೆಣ್ಣು ಗಂಡುಗಳು ಪ್ರತ್ಯೇಕವಾಗಿರುವವರೆಗೂ ಈ ತ್ರಿಕೋನಗಳು ಬೇರೆ ಬೇರೆಯೇ ಆಗಿ ದ್ವೈತವನ್ನು ಹೇಳುತ್ತವೆ. ಹೆಣ್ಣು- ಗಂಡುಗಳು ಸಮಾಗಮಗೊಂಡಾಗ ಎರಡು ತ್ರಿಕೋನಗಳೂ ಹೀಗ ಬೆಳೆದುಕೊಂಡು ಆರು ತ್ರಿಕೋನಗಳನ್ನು ಸೃಷ್ಟಿಸುತ್ತವೆ. ಈ ಹೊಸದಾದ ಆರು ತ್ರಿಕೋನಗಳೂ ಮೂಲದ ಹೆಣ್ಣು ಗಂಡುಗಳ ಎರಡು ತ್ರಿಕೋನಗಳಿಂದ ಹೊರತಾದುದಲ್ಲವಾದ್ದರಿಂದ ಅದು ಅದ್ವೈತವನ್ನು ಸಾರುತ್ತದೆ. ಮನುಷ್ಯ ಮೂರು ಸಂದರ್ಭಗಳಲ್ಲಿ ತುರಿಯಾವಸ್ಥೆಯನ್ನು (orgasm) ತಲುಪುತ್ತಾನೆಂದು ಶೈವ ತತ್ಬ ಹೇಳುತ್ತದೆ. ಅದು ಹೆಣ್ಣು ಗಂಡಿನ ಸಮಾಗಮ, ಸಂಗೀತ ಹಾಗೂ ನೃತ್ಯದ ತಲ್ಲೀನತೆಗಳಲ್ಲಿ. ಹಾಗಾಗಿ ಇದೇ ತಂತ್ರಾಕೃತಿಯನ್ನು
ಕೊಂಚ ಬದಲಿಸಿ ಢಮರುಗವನ್ನು ಸೃಷ್ಟಿಸಿ ಹೆಣ್ಣು ತ್ರಿಕೋನದಿಂದ ಶಕ್ತಿ ಮತ್ತು ಪುರುಷ ತ್ರಿಕೋನದಿಂದ ಶಿವನನ್ನು ಇರಿಸಿ ಶಿವ ಶಕ್ತಿಯರ ಸಮಾಗಮದಲ್ಲಿ ನಾದೋತ್ಪತ್ತಿಯ ತತ್ವವನ್ನು ವಿವರಿಸುತ್ತದೆ. ಇದು ದ್ರಾವಿಡ ಪೂರ್ವ ಬುಡಮಟ್ಟುಗಳ phallic cult ನಿಂದ ಎತ್ತಿ ವಿವರಿಸಿದ diagrammatic ಅದ್ವೈತವಾಗಿದೆ. ಈ ಮೂಲ ಅದ್ವೈತವನ್ನು ಸೃಷ್ಟಿಶೀಲ ನೆಲೆಯಿಂದ ಪಲ್ಲಟಗೊಳಿಸಿ ಪರ- ಬ್ರಹ್ಮ- ಆತ್ಮ- ಪರಮಾತ್ಮದ ವೈದಿಕೋಪನಿಷತ್ತಿನ ವಂಚ ಜಾಲದಲ್ಲಿ ಸಂಕೀರ್ಣಗೊಳಿಸಿ ಜನಸಾಮಾನ್ಯರಿಗೆ ಎಟುಕದಂತೆ ಜಟಿಲ ತತ್ವವನ್ನಾಗಿಸಿದ್ದೊಂದು ಪಿತೂರಿಯೂ ಆಗಿದೆ. ಈ ವಂಚಕ ಚರಿತ್ರೆಯ ವಿವರಣೆಯೂ ಮತ್ತೊಂದು ಅಧ್ಯಾಯವಾಗಬಲ್ಲದು” ಎನ್ನುತ್ತಾರೆ.
ಇಂದಿನ ಕಾಲದಲ್ಲಿ ಹಾಸ್ಯ ಎನಿಸುವ, ವಿಚಿತ್ರ ಎನಿಸುವ ಜನಪದರ ಎಷ್ಟೋ ಆಚರಣೆಗಳಲ್ಲಿ, ನಂಬಿಕೆಗಳಲ್ಲಿ ಇತಿಹಾಸದ ಸತ್ಯಗಳು ಹುದುಗಿ ಹೋಗಿರುತ್ತವೆ. ಅವುಗಳನ್ನು ಎತ್ತಿ ತೆಗೆದು ಜನರಿಗೆ ವಿವರಿಸುವ ಜರೂರು ಇಂದು ಎದುರಾಗಿದೆ.. ಬದುಕಿನ ಪ್ರತಿ ಕ್ಷಣವೂ ವೈದಿಕಗೊಳ್ಳುತ್ತಿರುವ ಕೇಡುಗಾಲದಲ್ಲಿರುವ ನಾವು ಸಂಸ್ಕೃತಿಯ ಮಹಾ ಮರೆವಿನಿಂದ ಹೊರಬರಲೇಬೇಕಾಗಿದೆ.
(ಲೇಖಕರು- ಹರ್ಷಕುಮಾರ್ ಕುಗ್ವೆ, ಪತ್ರಕರ್ತರು, ಉಡುಪಿ)

ಅಂತರಂಗ
ಕ್ರೈಸ್ ಇಲಾಖೆಯ ನೇಮಕಾತಿ ಪರೀಕ್ಷೆ: ಶೇ. 49.69ರಷ್ಟು ಅಭ್ಯರ್ಥಿಗಳು ಹಾಜರು
ಸುದ್ದಿದಿನ,ದಾವಣಗೆರೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ಕ್ರೈಸ್ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ಸಂಸ್ಥೆಯ ಉಳಿಕೆ ಮೂಲ ವೃಂದ ಮತ್ತು ಕಾರಾಗೃಹ ಇಲಾಖೆಯ ಕಲ್ಯಾಣ ಕರ್ನಾಟಕ ವೃಂದದ ಜೈಲರ್, ವಾರ್ಡರ್ ( ವೀಕ್ಷಕರು ), ವಾರ್ಡರ್ ಕಮ್ ನರ್ಸಿಂಗ್, ದ್ವಿತೀಯ ದರ್ಜೆ ಭೋದಕರು -2, ಹುದ್ದೆಗಳ ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ನವೆಂಬರ್ 28 ರಂದು ದಾವಣಗೆರೆ ನಗರದ ಒಟ್ಟು 05 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು.
ಪರೀಕ್ಷೆ ಬರೆಯಲು ಒಟ್ಟು 2998 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 1490 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1508 ಅಭ್ಯರ್ಥಿಗಳು ಗೈರುಹಾಜರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ. ಎಂ ಅವರು ತಿಳಿಸಿದ್ದಾರೆ.

ಅಂತರಂಗ
ಕವಿತೆ | ಬಿಡಿಸಿಕೊಳ್ಳುತ್ತದೊಂದು ಚಿತ್ರ
~ರಮ್ಯ ಕೆ.ಜಿ.ಮೂರ್ನಾಡು
ಕುಂಚ ತಾಕುವ ಮೊದಲೇ
ಮೂಡುತ್ತದೊಂದು ಚಿತ್ರ!
ಎದೆನೆತ್ತರು ನಡುಗಿ
ಪ್ರವಾಹದಂತೆ ತೆರೆದುಕೊಂಡ
ಬ್ರಹ್ಮಾಂಡದಲಿ ಗಡಿ ಮರೆತ
ಗೆರೆಗಳು ಕ್ಯಾನ್ವಾಸಿಂದಾಚೆ
ಅಲೆದು ಜೀವದ್ರವ್ಯಗಳಲಿ
ಈಜಿ ಮೂಲೆಗಳ ತುದಿ ಮುಟ್ಟಿ
ಬರೆಯುತ್ತದೆ ಬೆರಳ
ಗುರುತಿನ ಇತಿಹಾಸನು…
ಖಾಲಿತನಗಳಲಿ ಉಸಿರಾಡುವ
ಮೌನ-ಮಾತುಗಳ ವೇಗವನು
ಅಣಕಿಸುವಾಗ ತೂರುವ
ಬೆಳಕು ಸರಿದೂಗಿಸುತ್ತದೆ
ಒಡಕುಗಳ…
ಅಳಿಸಿದ ಮುಖಗಳು ಬಣ್ಣಗಳ
ಎರಕ ಹೊಮ್ಮಿಸಿಕೊಂಡು
ಬದಲಿಸುತ್ತವೆ ಬಣ್ಣಾ!
ಪದರುಗಳಾಗಿ ತೆರೆದುಕೊಳ್ಳುವ ಚಿತ್ರ
ನೆರಳಿನಲಿ ಸರಿದಾಡುವ
ಆತ್ಮದಂತೆ ಕಲೆಗಳ
ಉಳಿಸಿಬಿಡುತ್ತದೆ ಪೂರ್ತಿಯಾಗದ
ಆಕಾರದೊಳಗೆ ಚಿತ್ರಕಾರನೇ
ಲಯವಾಗುತ್ತಿರುವಾಗ
‘ಬಿಡಿಸಿ’ಕೊಳ್ಳುತ್ತದೆ ಚಿತ್ರ
ಗೆರೆಗಳಿಂದ ಬಣ್ಣಗಳಿಂದ
ಹಾಳೆಗಳಿಂದ ಚೌಕಟ್ಟಿನಿಂದ.

ಅಂತರಂಗ
ಸಂತೆಬೆನ್ನೂರು ಫೈಜ್ನಟ್ರಾಜ್ ಕೃತಿಗೆ ಸೇಡಂ ನ ಅಮ್ಮ ಪ್ರಶಸ್ತಿ ಪ್ರದಾನ
ಸುದ್ದಿದಿನ ಡೆಸ್ಕ್ : ಸೇಡಂನ ಸಾಹಿತ್ಯಿಕ, ಸಾಂಸ್ಕೃತಿಕ ಹಿರಿಮೆಗೆ ಅಮ್ಮ ಪ್ರಶಸ್ತಿ ಮಹತ್ವದ ಕೊಡುಗೆ ನೀಡಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಗೂ ತೆರಳಿದಾಗ ಸಾಹಿತ್ಯಿಕರು, ಕವಿಗಳು ಹಾಗೂ ರಾಜಕಾರಣಿಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸೇಡಂ ಎಂದಾಕ್ಷಣ ಬಸವರಾಜ ಪಾಟೀಲ್ ಸೇಡಂ ಹಾಗೂ ಅಮ್ಮ ಪ್ರಶಸ್ತಿ ನೆನಪಾಗುತ್ತದೆ. ಇದು ಸೇಡಂಗೆ ಗೌರವದ ಕಿರೀಟವಾಗಿದೆ ಎಂದು ಸೇಡಂ ನ ಮಾಜಿ ಶಾಸಕರಾದ ರಾಜಕುಮಾರ ತೇಲ್ಕೂರ ಹೇಳಿದರು.
ತಾಯಿಯ ಪ್ರೀತಿ, ತ್ಯಾಗ, ಬಲಿದಾನ, ದೇಶಪ್ರೇಮ ಹಾಗೂ ಬದುಕಿನ ಮೌಲ್ಯಗಳನ್ನು ನೆನಪಿಸುವ ಉದ್ದೇಶದಿಂದ 26 ವರ್ಷಗಳಿಂದ ಪ್ರಶಸ್ತಿ ನೀಡುತ್ತಿರುವ ಸಂಸ್ಥಾಪಕ ಮಹಿಪಾಲರೆಡ್ಡಿ ಮುನ್ನೂರು ಅವರ ಕಾರ್ಯ ಶ್ಲಾಘನೀಯ. ಪ್ರಶಸ್ತಿ ಯನ್ನು ಹಣದ ಮೌಲ್ಯದಲ್ಲಿ ಅಳೆಯಲು ಸಾಧ್ಯವಿಲ್ಲ ಎಂದರು.
ಹಿರಿಯ ಸಾಹಿತಿ ಸಂಗಮೇಶ ಬಾದವಾಡಗಿ ಮಾತನಾಡಿ, ಪ್ರಶಸ್ತಿ ಆಯ್ಕೆಯಲ್ಲಿ ಪಾರದರ್ಶಕತೆ ಹಾಗೂ ಶಿಫಾರಸಿಗೆ ಅವಕಾಶವಿಲ್ಲದಿರುವುದರಿಂದ ಅಮ್ಮ ಪ್ರಶಸ್ತಿ ಕನ್ನಡ ಸಾಹಿತ್ಯ ವಲಯದಲ್ಲಿ ತನ್ನದೇ ಮಹತ್ವ ಗಳಿಸಿದೆ ಎಂದರು.
ಹಿರಿಯ ಪತ್ರಕರ್ತ ಟಿ.ವಿ. ಶಿವಾನಂದನ್ ಮಾತನಾಡಿ, ಎಲ್ಲರ ಅಮ್ಮನ ಅಂತಃಕರಣದಿಂದ ಹುಟ್ಟಿದ ಈ ಪ್ರಶಸ್ತಿ ತನ್ನದೇ ಮೌಲ್ಯ ಹೊಂದಿದೆ ಎಂದರು.
ಈ ಬಾರಿ ಪ್ರಶಸ್ತಿಗೆ ಹತ್ತು ಜನ ಭಾಜನರಾಗಿದ್ದರು. ಅದರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದ ಕನ್ನಡ ಉಪನ್ಯಾಸಕರಾದ ಸಂತೆಬೆನ್ನೂರು ಫೈಜ್ನಟ್ರಾಜ್ ಕೂಡ ಒಬ್ಬರು.
ಅವರ ದ್ರೌಪದಿಯ ವಾಷಿಂಗ್ ಮಿಷನ್ ಕವನ ಸಂಕಲನಕ್ಕೆ ಅಮ್ಮ ಪ್ರಶಸ್ತಿ ಲಭಿಸಿದೆ ಇವರ ಜೊತೆಯಲ್ಲಿ ಉಳಿದ ಸಾಧಕರಿಗೂ ಅಮ್ಮ ಪ್ರಶಸ್ತಿ ಪ್ರದಾನಿಸಲಾಯಿತು.ಮಾತೋಶ್ರೀ ಪ್ರತಿಷ್ಟಾನದ ವತಿಯಿಂದ ನೀಡುವ ಈ ಪ್ರಶಸ್ತಿ ನೀಡುವ ಸಂಸ್ಥಾಪಕ ಮಹಿಪಾಲರೆಡ್ಡಿ ಅವರ ಕಾರ್ಯ ಶ್ಲಾಘನೀಯ. ಪ್ರಶಸ್ತಿ ಯನ್ನು ಹಣದ ಮೌಲ್ಯದಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ಸಂಚಾಲಕಿ ಚಂದ್ರಕಲಾ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಅಮ್ಮ ಪ್ರಶಸ್ತಿ ಕೇವಲ ವ್ಯಕ್ತಿಯ ಸಾಧನೆಗೆ ನೀಡುವ ಗೌರವವಲ್ಲ; ತಾಯಿಯ ಪ್ರೀತಿ, ತ್ಯಾಗ ಮತ್ತು ಅಂತಃಕರಣಕ್ಕೆ ಸಲ್ಲಿಸುವ ಗೌರವವಾಗಿದೆ. 26 ವರ್ಷಗಳಿಂದ ನಿರಂತರವಾಗಿ ಪ್ರಶಸ್ತಿ ನೀಡುತ್ತಿರುವುದು ಸೇಡಂನ ಸಾಹಿತ್ಯಿಕ ಹಿರಿಮೆಗೆ ಹೆಮ್ಮೆಯ ಸಂಗತಿಯಾಗಿದೆ. ಎಂದು ಪ್ರಸಯೋಜಕರಾದ ಮಹಿಪಾಲ ರೆಡ್ಡಿ ಹೇಳಿದರು.
ಸಂತೆಬೆನ್ನೂರು ಫೈಜ್ನಟ್ರಾಜ್ ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯ ಜೊತೆಗೆ ನಾಡಿನ ಪ್ರತಿಷ್ಠಿತ ಹಲವಾರು ಪ್ರಶಸ್ತಿಗಳನ್ನು ಸಾಹಿತ್ಯ ಸೇವೆಗೆ ಪಡೆದಿದ್ದಾರೆ
ಕಥೆ, ಕವನ, ಪ್ರಬಂಧ, ಆಧುನಿಕ ವಚನ ಮುಂತಾದ ಪ್ರಕಾರ ಗಳಲ್ಲಿ ಹದಿನೈದಕ್ಕೂ ಹೆಚ್ಚು ಕೃತಿ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ
ಇವರಿಗೆ ಈ ಅಮ್ಮ ಪ್ರಶಸ್ತಿ ಗೆ ಕವಿ ಸನಾವುಲ್ಲಾ ನವಿಲೇಹಾಳು, ಕತೆಗಾರ ಇಂದ್ರಕುಮಾರ್, ಕವಿ ಫಕ್ಕಿತೇಶ ಅದಾಪುರ ಮುಂತಾದವರು ಅಭಿನಂದನೆ ತಿಳಿಸಿದ್ದಾರೆ.

-
ದಿನದ ಸುದ್ದಿ4 days agoನೀತಿ ಸಂಹಿತೆ ಉಲ್ಲಘನೆ, ಬೋಧನೆ ಶೂನ್ಯ ; ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಲೇಪಾಕ್ಷ ವಿರುದ್ಧ ದೂರು
-
ದಿನದ ಸುದ್ದಿ4 days agoಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಕಲಿ ಬಿಲ್ಲುಗಳ ಹಾವಳಿ | ಕೆ.ಟಿ.ಪಿ.ಪಿ ನಿಯಮ ಉಲ್ಲಂಘನೆ ; ಜಂಟಿ ನಿರ್ದೇಶಕ ಸೇರಿ 4 ಜನ ಪ್ರಾಂಶುಪಾಲರ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಮಂಗಳೂರು | ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಕೆ.ಆರ್ ಕವಿತಾ ವಿರುದ್ಧ ಲೋಕಾಗೆ ದೂರು
-
ಅಂತರಂಗ7 days agoಕವಿತೆ | ಒಂಟಿಯಾನದ ಸರಕು
-
ದಿನದ ಸುದ್ದಿ17 hours agoವಂಚನೆ | ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯತ್ವದಿಂದ ಎಸ್.ಸುರೇಶ್ ವಜಾ
-
ದಿನದ ಸುದ್ದಿ3 days agoಚನ್ನಗಿರಿ | ಕೊರಟಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ | ಪಿ.ಡಿ.ಓ ಶಿವಕುಮಾರ, ಇ.ಒ ಪ್ರಕಾಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoರಕ್ತದಾನದಿಂದ ಜೀವ ಉಳಿಸಿ, ಶ್ರವಣ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ : ಯೋಗೀಶ್ ಸಹ್ಯಾದ್ರಿ
-
ದಿನದ ಸುದ್ದಿ20 hours agoದಾವಣಗೆರೆ | ಸ್ಮಾರ್ಟ್ ಟಿ.ವಿ ಖರೀದಿಯಲ್ಲಿ ಅವ್ಯವಹಾರ ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿ.ಡಿ ರಾಜನಾಯ್ಕ ಸೇರಿ 5 ಜನ ಸಿ.ಡಿ.ಪಿ.ಒ ಗಳ ವಿರುದ್ಧ ಲೋಕಾಗೆ ದೂರು

