Connect with us

ದಿನದ ಸುದ್ದಿ

ತುರ್ತುಪರಿಸ್ಥಿತಿಯ ಛಾಯೆಯೂ, ‘ಅರ್ನಾಬ್’ ಮಾಯೆಯೂ..!

Published

on

  • ನಾ ದಿವಾಕರ

“ಭೂತದ ಬಾಯಲ್ಲಿ ಭಗವದ್ಗೀತೆ,,,,” ಈ ಗಾದೆ ಮಾತಿಗೆ ಭಾರತವೇ ಜನ್ಮಭೂಮಿ. ಕರ್ಮಭೂಮಿಯೂ ಹೌದು. ಈ ಗಾದೆಯ ಅರ್ಥ ಏನು ಎಂದು ಕೇಳುವವರಿಗೆ ಭಾರತದ ರಾಜಕಾರಣಿಗಳ ಭಾಷಣ, ಹೇಳಿಕೆಗಳನ್ನು ಕೇಳುವಂತೆ ಸಲಹೆ ನೀಡಿದರೆ ಸಾಕು. ಅರ್ಥವಾಗಿಬಿಡುತ್ತದೆ. ಕಳೆದ ಆರು ವರ್ಷಗಳಲ್ಲಿ ಪ್ರಜಾತಂತ್ರ ಮೌಲ್ಯಗಳನ್ನು ಹಿಮಾಲಯದೆತ್ತರದಲ್ಲಿಟ್ಟು ವಿಶ್ವಮಾನ್ಯತೆ ಪಡೆದಿದ್ದ ಭಾರತದ ಆಡಳಿತ ವ್ಯವಸ್ಥೆ, ನ್ಯಾಯ ವ್ಯವಸ್ಥೆ ಮತ್ತು ಪ್ರಭುತ್ವಕ್ಕೆ ಇಂದು 1975ರ ಕರಾಳ ಛಾಯೆ ಆವರಿಸಿದಂತೆ ಕಾಣುತ್ತಿದೆ !!! ಈ ಹಿನ್ನೆಲೆಯಲ್ಲೇ ಮೇಲಿನ ಗಾದೆ ಮಾತು ಸಹ ನೆನಪಾಗುತ್ತಿದೆ.

ಜನಸಾಮಾನ್ಯರ ಪರಿಭಾಷೆಯಲ್ಲಿ ಬಚ್ಚಲುಬಾಯಿ ಎಂಬ ಪದವನ್ನು ಬಳಸುವುದನ್ನು ಕೇಳಿದ್ದೇವೆ. ಇತ್ತೀಚೆಗೆ ಈ ಬಚ್ಚಲು ಬಾಯಿ ಎಂಬ ಪದದ ಅರ್ಥವನ್ನೂ ನಮ್ಮ ರಾಜಕೀಯ ನಾಯಕರುಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಭಾರತ ಸ್ವಚ್ಚವಾಗುತ್ತಿದೆ ಆದರೆ ಅಧಿಕಾರ ರಾಜಕಾರಣದ ವಾರಸುದಾರರ, ಜನಪ್ರತಿನಿಧಿಗಳ ಬಚ್ಚಲು ಬಾಯಿ ಸಂಸ್ಕೃತಿಯಿಂದ ಸಮಸ್ತ ಭಾರತವೇ ಕೊಳಕು ಎನಿಸುತ್ತಿದೆ.

ಬಹುಶಃ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತವನ್ನು ಕೊಳಕು ಎಂದಾಗ ಇದೂ ಅವರ ಮನಸಿನಲ್ಲಿದ್ದಿರಬಹುದು ಈ ಹೊಲಸು ರಾಜಕಾರಣದ ಆಂತರಿಕ ಮಾಲಿನ್ಯವನ್ನು, ಬಾಹ್ಯ ಸ್ವರೂಪದ ತ್ಯಾಜ್ಯವನ್ನು ಹೊರಹಾಕಿ, ಪ್ರಜೆಗಳಲ್ಲಿ ಪ್ರಜಾತಂತ್ರ ಮೌಲ್ಯಗಳ ಬಗ್ಗೆ ಸುಪ್ರಜ್ಞೆ ಮೂಡಿಸುವ ಗುರುತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಡಿಜಿಟಲ್ ಯುಗದಲ್ಲಿ ಇದು ವಿದ್ಯುನ್ಮಾನ ಸುದ್ದಿಮನೆಗಳ ಆದ್ಯತೆಯೂ ಆಗಬೇಕಿದೆ.

ಇಂತಹ ಒಂದು ಪ್ರಯತ್ನಕ್ಕೆ ಅವಕಾಶವನ್ನೂ ನೀಡದಂತೆ ಮಾಧ್ಯಮ ಜಗತ್ತನ್ನೇ ಘನತ್ಯಾಜ್ಯ ಶಿಖರವನ್ನಾಗಿ ಮಾಡುವುದರಲ್ಲಿ ತಮ್ಮದೇ ಆದ ಕೊಡುಗೆ ಸಲ್ಲಿಸಿರುವ ಸುದ್ದಿವಾಹಿನಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ಇಂದು ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.

ಮುಂಜಾನೆಯ ಹೊತ್ತಿನಲ್ಲಿ, ಯಾವುದೇ ಪೂರ್ವ ಸೂಚನೆ ಇಲ್ಲದೆ, ಏಕಾಏಕಿ ಮನೆಗೆ ನುಗ್ಗಿ, ಮೂರು ವರ್ಷದ ಹಿಂದಿನ ಆತ್ಮಹತ್ಯೆ ಪ್ರಕರಣವೊಂದರ ಹಿನ್ನೆಲೆಯಲ್ಲಿ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿರುವ ರೀತಿ ಒಪ್ಪುವಂತಹುದಲ್ಲ.
ಟಿ ಆರ್ ಪಿ ಹಗರಣದಲ್ಲಿ ಗೋಸ್ವಾಮಿಯ ವಿರುದ್ಧ ಗುರುತರ ಆರೋಪಗಳು ಇರುವುದನ್ನೂ ಮರೆಯುವಂತಿಲ್ಲ. ಆದರೆ ಇಂದಿನ ಘಟನೆ ಮುಂಬೈ ಪೊಲೀಸರ ಉದ್ಧಟತನ, ಮಹಾರಾಷ್ಟ್ರ ಸರ್ಕಾರದ ಪ್ರಜಾತಂತ್ರ ವಿರೋಧಿ ಧೋರಣೆಯ ಸಂಕೇತ.

ನಿಜ, ಆದರೆ ಹೀಗೆ ಹೇಳುವ ನೈತಿಕ ಹಕ್ಕು ಮತ್ತು ಹೊಣೆಗಾರಿಕೆ ಇರುವ ರಾಜಕೀಯ ನಾಯಕರು ನಮ್ಮ ನಡುವೆ ಇದ್ದಾರೆಯೇ ? ಗೋಸ್ವಾಮಿಯ ಬಂಧನದ ನಂತರ ರಿಪಬ್ಲಿಕ್ ವಾಹಿನಿಯ ನಿರೂಪಕರು ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದುದನ್ನು ( ಸುದ್ದಿಮನೆಯ ಕೂಗುಮಾರಿ ಪರಿಭಾಷೆಯಲ್ಲಿ ಅರಚುತ್ತಿದ್ದುದು ಎಂದು ಓದಿಕೊಳ್ಳಬಹುದು) ಕಂಡು “ ಭೂತದ,,,,,” ಗಾದೆ ನೆನಪಾಯಿತು. ಈ ಗಾದೆಯ ಬಗ್ಗೆಯೇ ಅಸಹ್ಯ ಬರುವಂತಾಗಿದ್ದು ಕೆಲವು ಕೇಂದ್ರ ಬಿಜೆಪಿ ಸಚಿವರ ಟ್ವಿಟರ್ ಸಂದೇಶಗಳನ್ನು ಕಂಡು.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ “ ಹಿರಿಯ ಪತ್ರಕರ್ತ ಅರ್ನಾಬ್ ಗೋಸ್ವಾಮಿಯ ಬಂಧನ ಖಂಡನಾರ್ಹವಾಗಿದ್ದು, ಚಿಂತೆಗೀಡುಮಾಡುವ ವಿಚಾರವಾಗಿದೆ. ನಾವು 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೆವು ”
ಕೇಂದ್ರ ಗೃಹ ಸಚಿವ ಅಮಿತ್‍ಶಾ “ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಪ್ರಜಾತಂತ್ರಕ್ಕೆ ಅವಮಾನ ಮಾಡಿವೆ.

ರಿಪಬ್ಲಿಕ್ ಟಿವಿ ವಿರುದ್ಧ ಅಧಿಕಾರ ದುರುಪಯೋಗ ಮಾಡಿದೆ. ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭದ ಮೇಲೆ ಆಕ್ರಮಣ ನಡೆಸುವ ಮೂಲಕ ತುರ್ತುಪರಿಸ್ಥಿತಿಯನ್ನು ನೆನಪಿಸಿದೆ ”. ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಪ್ರಕಾಶ್ ಜಾವಢೇಕರ್ “ ಮಹಾರಾಷ್ಟ್ರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದಿರುವ ಆಕ್ರಮಣವನ್ನು ನಾವು ಖಂಡಿಸುತ್ತೇವೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇದೇ ರೀತಿ ನಡೆಯುತ್ತಿದ್ದುದನ್ನು ಇದು ನೆನಪಿಸುತ್ತದೆ.”

ಈ ಮೂರೂ ಅಣಿಮುತ್ತುಗಳನ್ನು ಕೇಳಿಸಿಕೊಳ್ಳುವ ಕಿವಿಗಳೇ ಧನ್ಯ ಅಲ್ಲವೇ ? ನಿಜ, ಮಹಾರಾಷ್ಟ್ರ ಪೊಲೀಸರ ನಡೆ ಅಕ್ಷಮ್ಯ, ಸರ್ಕಾರದ ಧೋರಣೆ ಖಂಡನಾರ್ಹ ಆದರೆ ಶಿವಸೇನೆ ಪಳಗಿರುವ ಗರಡಿಯಲ್ಲೇ ಈ ಮೂವರೂ ನಾಯಕರು ಪಳಗಿರುವುದಲ್ಲವೇ ? ಅರ್ನಾಬ್ ಗೋಸ್ವಾಮಿಯ ವಿರುದ್ಧ ಗಂಭೀರ ಆರೋಪಗಳು ಇದ್ದುದೇ ಆದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಇದು ಶಿವಸೇನೆಯ ಸಂಸ್ಕೃತಿಗೆ ಹೊರತಾದದ್ದು ಎನ್ನುವುದನ್ನು ಬಿಜೆಪಿ ನಾಯಕರು ಮರೆತಿದ್ದಾರೆಯೇ ? ಇಂದು ಶಿವಸೇನೆ ಕಾಂಗ್ರೆಸ್ ಬಾಹುಗಳಲ್ಲಿದೆ. ಆದರೆ ಹುಟ್ಟಿದ ದಿನದಿಂದಲೂ ಬೆಳೆದಿದ್ದು ಸಂಘಪರಿವಾರದ ಮಡಿಲಲ್ಲೇ ಅಲ್ಲವೇ ?

ಈ ಗೋಸುಂಬೆಗಳನ್ನು ಬದಿಗಿಟ್ಟು ಭಾರತದ ಪ್ರಸ್ತುತ ಸನ್ನಿವೇಶವನ್ನು ಒಮ್ಮೆ ಗಮನಿಸೋಣ. ಇತ್ತೀಚೆಗೆ ತಾನೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗನ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ಪವರ್ ಟಿವಿ ವಾಹಿನಿಯನ್ನು ಮಾನ್ಯ ಮುಖ್ಯಮಂತ್ರಿಯವರು ಮುಚ್ಚಿಸಿಬಿಟ್ಟರು. ಈಗ ಮತ್ತೊಂದು ಹೆಸರಿನಲ್ಲಿ ಆರಂಭವಾಗಿದ್ದರೂ ಬಾಯಿ ಮುಚ್ಚಿಸಿದಂತೆ ಕಾಣುತ್ತಿದೆ.

ಮಾಧ್ಯಮ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಇವೆಲ್ಲವನ್ನೂ ಗೌರವಿಸುತ್ತಲೇ ಅರ್ನಾಬ್ ಅವರನ್ನು ಬಂಧಿಸಿದ ರೀತಿಯನ್ನು ಖಂಡಿಸೋಣ. ಆದರೆ ದೇಶಾದ್ಯಂತ ಪತ್ರಕರ್ತರ ವಿರುದ್ಧ ರಣಬೇಟೆಯಾಡಿದ ಕೇಂದ್ರ ಸರ್ಕಾರದ ಕ್ರಮಗಳನ್ನು ಮೇಜು ಕುಟ್ಟಿ ಸ್ವಾಗತಿಸುತ್ತಾ ಭಟ್ಟಂಗಿಯಂತೆ ಪ್ರಭುತ್ವದ ಹೆಜ್ಜೆಗೆ ಗೆಜ್ಜೆಯಾಗಿ, ತಮ್ಮ ಪತ್ರಿಕಾ ವೃತ್ತಿಧರ್ಮವನ್ನೂ ಮರೆತು ವರ್ತಿಸಿದ ಅರ್ನಾಬ್ ಗೋಸ್ವಾಮಿಯಾಗಲೀ ಅಥವಾ ಇತರ ಬಿಜೆಪಿ ನಾಯಕರಾಗಲೀ ಈ ಪ್ರಕರಣದ ಬಗ್ಗೆ ಕನಿಷ್ಟ ಮಾತನಾಡುವ ನೈತಿಕತೆಯನ್ನು ಉಳಿಸಿಕೊಂಡಿದ್ದಾರೆಯೇ ? ನಮ್ಮನ್ನೇ ಪ್ರಶ್ನಿಸಿಕೊಳ್ಳೋಣ.

ಅರ್ನಾಬ್ ಗೋಸ್ವಾಮಿಯನ್ನು ಮೂರು ವರ್ಷದ ಹಿಂದಿನ ಆತ್ಮಹತ್ಯೆಯ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿಸಿರುವುದೇ ಮಹಾರಾಷ್ಟ್ರ ಸರ್ಕಾರದ ಘೋರ ಅಪರಾಧ ಎಂದಾದರೆ, ಸುಮ್ಮನೆ ಗುಜರಾತ್‍ನ ಹಿರಿಯ ಅಧಿಕಾರಿ ಸಂಜೀವ್ ಭಟ್ ಅವರನ್ನು ನೆನೆಯಿರಿ. ಮೂವತ್ತು ವರ್ಷದ ಹಿಂದಿನ , ಮುಚ್ಚಿಹೋಗಿದ್ದ ಪ್ರಕರಣದ ಕಡತವನ್ನು ಹೆಕ್ಕಿ ತೆಗೆದು ಅವರನ್ನು ಬಂಧಿಸಿದಾಗ ಭಾರತದ ಎಷ್ಟು ಸುದ್ದಿಮನೆಗಳು ವಿರೋಧಿಸಿದ್ದವು ? ಮಾನ್ಯ ಗೋಸ್ವಾಮಿ ಎಲ್ಲಿದ್ದರು ಸ್ವಾಮಿ ? ಭಾರತದ ಜನಸಾಮಾನ್ಯರು ಮಾಸ್ಕ್ ಧರಿಸುತ್ತಿರುವುದು ಕೊರೋನಾ ಬಂದ ನಂತರ. ಭಾರತದ ಬಹುತೇಕ ಸುದ್ದಿಮಾಧ್ಯಮಗಳು 2014ರಿಂದಲೇ ಮಾಸ್ಕ್ ಧರಿಸಲಾರಂಭಿಸಿವೆ.

ಸ್ವತಂತ್ರ ಭಾರತದ ಕಾನೂನು ವ್ಯವಸ್ಥೆಯಲ್ಲಿ ಎಫ್‍ಐಆರ್ ಎಂಬ ಪದ ಜನಸಾಮಾನ್ಯರ ಅರಿವಿಗೆ ನಿಲುಕದಷ್ಟು ಅಪರೂಪವಾಗಿತ್ತು. ಯಾವುದೋ ಗಂಭೀರ ಅಪರಾಧಗಳಲ್ಲಿ ಮಾತ್ರ ಈ ಪದ ಕೇಳಿಬರುತ್ತಿತ್ತು. ಆದರೆ ಕಳೆದ ಆರು ವರ್ಷಗಳಲ್ಲಿ ಎಫ್‍ಐಆರ್ ಎನ್ನುವುದು ಸಂತೆಯಲ್ಲಿನ ಸರಕಿನಂತೆ ಕಾಣುತ್ತಿದೆ.

ದೇಶದ್ರೋಹದ ಆರೋಪ ಮತ್ತು ಎಫ್‍ಐಆರ್ ಅಧಿಕಾರಸ್ಥರ ಬತ್ತಳಿಕೆಯಲ್ಲಿರುವ ಸುಲಭ ಅಸ್ತ್ರಗಳಾಗಿರುವುದರಿಂದಲೇ ಕೊರೋನಾ ಸಂದರ್ಭದಲ್ಲೇ 55 ಪತ್ರಕರ್ತರ ವಿರುದ್ಧ 22 ಎಫ್‍ಐಆರ್ ದಾಖಲಿಸಲಾಗಿದೆ. ಮಾರ್ಚ್ 25 ರಿಂದ ಜೂನ್ 30ರ ಅವಧಿಯಲ್ಲಿ ಕೋವಿದ್19 ವರದಿಗಳಿಗೆ ಸಂಬಂಧಪಟ್ಟಂತೆ ಇಷ್ಟು ಎಫ್‍ಐಆರ್‍ ಗಳನ್ನು ಪತ್ರಕರ್ತರ ವಿರುದ್ಧ ದಾಖಲಿಸಲಾಗಿದೆ.

ದ ವೈರ್ ಪತ್ರಿಕೆಯ ಸಿದ್ಧಾರ್ಥ ವರದರಾಜನ್, ವಿನೋದ್ ದುವಾ, ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆಯ ಮಾಜಿ ನಿರ್ದೇಶಕ ಮತ್ತು ಅಂಕಣಕಾರ ಆಕರ್ ಪಟೇಲ್, ಸ್ಕ್ರೋಲ್ ಪತ್ರಿಕೆಯ ಸುಪ್ರಿಯಾ ಶರ್ಮ ಇವರು ಕೇಂದ್ರ ಸರ್ಕಾರದ ಪ್ರಹಾರಕ್ಕೆ ಬಲಿಯಾಗುತ್ತಿದ್ದಾರೆ. ಸುಪ್ರಿಯಾ ಶರ್ಮ ಅವರ ಅಪರಾಧ ಏನು ಗೊತ್ತೇ ? ಪ್ರಧಾನಮಂತ್ರಿ ಮೋದಿ ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ದತ್ತುಪಡೆದಿರುವ ವಾರಣಾಸಿಯ ದೊಹಾರಿ ಗ್ರಾಮದಲ್ಲಿನ ಜನಜೀವನವನ್ನು ತೆರೆದಿಟ್ಟಿದ್ದು. ಉತ್ತರಪ್ರದೇಶದಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ವರದಿ ಮಾಡಿದ್ದ ಪವನ್ ಕುಮಾರ್ ಜೈಸ್ವಾಲ್ ಮತ್ತೋರ್ವ ಎಫ್‍ಐಆರ್ ಬಲಿ.

ಕೊರೋನಾ ಸಂದರ್ಭದಲ್ಲಿ ಮಹಾರಾಷ್ಟ್ರದ ವಲಸೆ ಕಾರ್ಮಿಕರ ಸಮಸ್ಯೆಗೆ ಕೋಮು ಬಣ್ಣ ನೀಡಿದ್ದ ಅರ್ನಾಬ್ ವಿರುದ್ಧ ದಾಖಲಿಸಿದ್ದ ಎಫ್‍ಐಆರ್ ಮುಂಬೈ ಹೈಕೋರ್ಟ್ ಕೃಪೆಯಿಂದ ರದ್ದಾಗಿದೆ. ಸೂಫಿ ಸಂತ ಮೊಯಿನುದ್ದಿನ್ ಕ್ರಿಸ್ಟಿಯನ್ನು ದರೋಡೆಕೋರ ಎಂದು ಅವಮಾನಿಸಿದ ಅಮೀಶ್ ದೇವಗನ್ ಸಹ ಕೋರ್ಟ್ ಕೃಪೆಗೆ ಪಾತ್ರರಾಗಿದ್ದಾರೆ. ಆದರೆ ತಮ್ಮ ಪತ್ರಿಕಾ ಧರ್ಮ ಪಾಲಿಸುತ್ತಾ ಜನಸಾಮಾನ್ಯರಿಗೆ ಸತ್ಯ ಹೇಳುವ ಆಕರ್ ಪಟೇಲ್, ವಿನೋದ್ ದುವಾ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ.

ಅರ್ನಾಬ್ ಗೋಸ್ವಾಮಿ ಬಂಧನದ ವೈಖರಿಯನ್ನು ಖಂಡಿಸೋಣ. ಬಂಧನಕ್ಕೆ ಕಾರಣಗಳಿದ್ದರೆ ಬಿಡುಗಡೆಗೂ ಕಾರಣಗಳಿರುತ್ತವೆ. ಎಲ್ಲವೂ ಅಧಿಕಾರ ಪೀಠದ ಕೃಪೆಯನ್ನು ಆಧರಿಸಿರುತ್ತದೆ. ಯಾವುದೇ ಆರೋಪ ಇಲ್ಲದೆ, ವಾರಂಟ್ ಇಲ್ಲದೆ, ಏಕಾಏಕಿ ಬಂಧಿಸುವುದು ಘೋರ ಅಪರಾಧವೇನೋ ಹೌದು. ಇದು ಕಾನೂನು, ಸಂವಿಧಾನ, ಪೊಲೀಸ್ ನಿಯಮಾವಳಿ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡುವವರಿಗೆ ಅನ್ವಯಿಸುವ ಮಾತು.

ಭೀಮಾ ಕೊರೆಗಾಂವ್ ಪ್ರಕರಣದ ಹಿನ್ನೆಲೆಯಲ್ಲಿ ಆನಂದ್ ತೇಲ್ತುಂಬ್ಡೆಯವರನ್ನು ಬಂಧಿಸಿದ ರೀತಿ ಜಗಜ್ಜಾಹೀರಾಗಿದೆ. ಈ ಬಂಧನದ ಸಮಯದಲ್ಲಿ ಗೋಸ್ವಾಮಿಯವರ ಕೂಗುಮಾರಿ ಸುದ್ದಿವಾಚನವನ್ನು ಪ್ರಜ್ಞೆ ಇರುವವರು ಮರೆತಿರಲಾರರು. ಇತ್ತೀಚೆಗೆ 83ರ ವೃದ್ಧ, ಸಾಮಾಜಿಕ ಕಾರ್ಯಕರ್ತರಾದ ಸ್ಟಾನ್ ಸ್ವಾಮಿಯವರನ್ನು ಬಂಧಿಸಿದಾಗ, ಸುಧಾ ಭರದ್ವಾಜ್, ವರಾವರರಾವ್, ಉಮರ್ ಖಲೀದ್, ಗರ್ಭಿಣಿ ಮಹಿಳೆ ಸಫೂರ ಜರ್ಗರ್ ಅವರನ್ನು ಬಂಧಿಸಿದಾಗ ಗೋಸ್ವಾಮಿಯಾಗಲೀ, ತುರ್ತುಪರಿಸ್ಥಿತಿಯಲ್ಲಿ ಹೋರಾಡಿದ, ಇಂದಿನ ಟ್ವಿಟರ್ ವೀರರಾಗಲೀ ಖಂಡಿಸಿದ್ದರೇ ? ಪ್ರಭುತ್ವ ಅಥವಾ ಆಡಳಿತ ವ್ಯವಸ್ಥೆಯ ಒಂದು ಅಂಗ ಯಾರನ್ನೋ ನಗರ ನಕ್ಸಲರು ಎಂದು ಹೇಳಿಬಿಟ್ಟರೆ ಅವರನ್ನು ಯಾವ ಹೊತ್ತಿನಲ್ಲಾದರೂ, ಯಾವ ರೀತಿಯಲ್ಲಾದರೂ ಬಂಧಿಸಬಹುದು ಎಂದು ಸಂವಿಧಾನದಲ್ಲಿ ಹೇಳಲಾಗಿದೆಯೇ ?

ಇದು ವ್ಯಕ್ತಿ ಅಥವಾ ಸಂಸ್ಥೆಯ ಪ್ರಶ್ನೆಯಲ್ಲ. ಮೌಲ್ಯಗಳ ಪ್ರಶ್ನೆ. ಗೋಸ್ವಾಮಿ ಯಾವ ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ, ಪ್ರತಿನಿಧಿಸುತ್ತಿದ್ದಾರೆ ? ಇವರನ್ನೇ ಅನುಕರಿಸಿ, ಅನುಸರಿಸುವ ಕನ್ನಡದ ಕೂಗುಮಾರಿ ಸುದ್ದಿಮನೆಗಳು ಯಾವ ಸಂಸ್ಕೃತಿಯನ್ನು ಅನುಸರಿಸುತ್ತಿವೆ ? ತುರ್ತುಪರಿಸ್ಥಿತಿಯಲ್ಲಿ ತಾವು ಪ್ರಜಾತಂತ್ರದ ಉಳಿವಿಗಾಗಿ ನಡೆಸಿದ ಹೋರಾಟವನ್ನು ಹೆಮ್ಮೆಯಿಂದ ನೆನೆಯುವ ಸಚಿವರು, ರಾಜಕೀಯ ನಾಯಕರು ಯಾವ ಸಂಸ್ಕೃತಿ ಅನುಸರಿಸುತ್ತಿದ್ದಾರೆ ?

ಓರ್ವ ಗೋಸ್ವಾಮಿಯ ಬಂಧನದಿಂದ ತುರ್ತುಪರಿಸ್ಥಿತಿಯ ಛಾಯೆ ಕವಿದಂತೆ ಭಾವಿಸುವ ಕೇಂದ್ರ ಸಚಿವರಿಗೆ ಒಂದು ವರ್ಷದ ಕಾಲ ಗೃಹಬಂಧನದಲ್ಲಿದ್ದ ಕಾಶ್ಮೀರದ ಸಮಸ್ತ ಜನತೆ ಹೇಗೆ ಕಂಡಿದ್ದರು ? ಯಾವುದೇ ಅಪರಾಧ ಮಾಡದಿದ್ದರೂ ಸೆರೆಮನೆಯಲ್ಲಿರುವ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹೇಗೆ ಕಾಣುತ್ತಿದ್ದಾರೆ ?

ನಡೆದಾಡುವ ಸ್ಥಿತಿಯಲ್ಲೂ ಇಲ್ಲದ ಸಾಯಿಬಾಬಾ ಅವರಂತಹ ವಿದ್ವಾಂಸರನ್ನು ಉಗ್ರಗಾಮಿ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಿ, ಜಾಮೀನು ಸಹ ನೀಡದೆ ಇರುವ ಆಡಳಿತ ವ್ಯವಸ್ಥೆಗೆ ಮತ್ತು ಅಧಿಕಾರಪೀಠದ ವಾರಸುದಾರರಿಗೆ ಗೋಸ್ವಾಮಿಯ ಬಂಧನ ತುರ್ತುಪರಿಸ್ಥಿತಿಯನ್ನು ನೆನಪಿಸುವುದೆಂದರೆ, ಭಾರತ ಮೌಲಿಕವಾಗಿ, ನೈತಿಕವಾಗಿ ಹಾದಿ ತಪ್ಪಿದೆ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ.

“ ಬಂಧಿಸಲಿ ಬಿಡಿ, ತಪ್ಪು ಮಾಡದಿದ್ದರೆ ಬಿಡುಗಡೆಯಾಗುತ್ತಾರೆ,,,,,” ಮಧ್ಯಮ ವರ್ಗಗಳ ಹಿತವಲಯದಲ್ಲಿ, ಬೌದ್ಧಿಕ ವಲಯದಲ್ಲಿ, ಬುದ್ಧಿಜೀವಿಗಳಲ್ಲದವರಲ್ಲಿ ಮತ್ತು ವಂದಿಮಾಗಧ ಸುದ್ದಿಮನೆಗಳಲ್ಲಿ ಕೇಳಿಬರುವ ಈ ಹೇಳಿಕೆ ಅರ್ನಾಬ್ ಗೋಸ್ವಾಮಿಗೂ ಅನ್ವಯಿಸುತ್ತದೆ. ಅವರಿಗೆ ಪ್ರಭುತ್ವವೂ ನೆರವಾಗಬಹುದು, ನ್ಯಾಯಾಂಗವೂ ನೆರವಾಗಬಹುದು.

ಇಂದಿನ ಭಾರತ ಕೇವಲ ಸಾಂವಿಧಾನಿಕ ಮೌಲ್ಯಗಳನ್ನು ಮಾತ್ರ ಕಳೆದುಕೊಳ್ಳುತ್ತಿಲ್ಲ, ಪ್ರಜಾತಂತ್ರ ಮೌಲ್ಯಗಳನ್ನೂ ಕಳೆದುಕೊಂಡಿದೆ. ಈ ಪ್ರಜ್ಞೆ ತಮ್ಮೊಳಗಿದ್ದು, ತಾವು ಪ್ರತಿನಿಧಿಸುವ “ಪತ್ರಿಕೋದ್ಯಮ ಅಥವಾ ಮಾಧ್ಯಮ ” ಎನ್ನುವ ಮೌಲ್ಯಯುತ ಸ್ತಂಭಕ್ಕೆ ಬದ್ಧತೆಯಿಂದ ನಡೆದುಕೊಂಡಿದ್ದರೆ ಬಹುಶಃ ಅರ್ನಾಬ್ ಗೋಸ್ವಾಮಿ ಜನತೆಯ ಅನುಕಂಪಕ್ಕೆ ಅರ್ಹರಾಗುತ್ತಿದ್ದರೇನೋ !

ನೆನ್ನೆ ಬಿಜೆಪಿ-ಶಿವಸೇನೆ ಮಾಡಿರುವುದನ್ನೇ ಇಂದು ಶಿವಸೇನೆ-ಕಾಂಗ್ರೆಸ್ ಸರ್ಕಾರ ಮಾಡಿದೆ. ಇದು ಒಂದು ಸರ್ಕಾರ ಅಥವಾ ಒಬ್ಬ ಮುಖ್ಯಮಂತ್ರಿಯ ಪ್ರಶ್ನೆಯಲ್ಲ.. ಮೌಲ್ಯಗಳ ಪ್ರಶ್ನೆ. ಮೌಲ್ಯ ಎಂದರೇನು ? ಇದು ಇಂದಿನ ಸಂದರ್ಭದಲ್ಲಿ ಕಾಡಬೇಕಾದ ಗಹನವಾದ ಪ್ರಶ್ನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಡಿ.ಇಡಿ ವಿಶೇಷ ಶಿಕ್ಷಣ ಕೋರ್ಸ್ ತರಬೇತಿ : ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆಯ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‍ಸಿ) ಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ನಂತರ ಉದ್ಯೋಗ ಆಧಾರಿತ ವಿಶೇಷ ಶಿಕ್ಷಣದಲ್ಲಿ ಶಿಕ್ಷಕರ ತರಬೇತಿ ಕೋರ್ಸ್‍ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕೋರ್ಸ್‍ಗಳು : ಡಿ. ಇಡಿ. ವಿಶೇಷ ಶಿಕ್ಷಣ (ಐಡಿಡಿ), ಡಿ.ಇಡಿ.ವಿಶೇಷ ಶಿಕ್ಷಣ (ಹೆಚ್‍ಐ) ತರಬೇತಿ ಕೋರ್ಸ್ ಆಗಿದ್ದು, 2 ವರ್ಷ (ಪೂರ್ಣ ಸಮಯ) ತರಬೇತಿಯ ಅವಧಿ ನಿಗದಿಪಡಿಸಲಾಗಿದೆ. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು.

ಅಥವಾ ಯಾವುದೇ ಕೇಂದ್ರ ಮತ್ತು ರಾಜ್ಯ ಪರೀಕ್ಷಾ ಮಂಡಳಿಯಿಂದ ಮಾನ್ಯತೆ ಪಡೆದ ಸ್ಟ್ರೀಮ್‍ನಲ್ಲಿ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು. ಎಸ್.ಸಿ., ಎಸ್.ಟಿ, ಒಬಿಸಿ, ವಿಕಲಚೇತನ. ಇಡಬ್ಲ್ಯೂಎಸ್ ವರ್ಗಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ಅನ್ವಯವಾಗುತ್ತದೆ.

ಅರ್ಜಿಯನ್ನು https://rciapproval.org/rci admission/ ಆನ್‍ಲೈನ್ ಮೂಲಕ ವೆಬ್‍ಸೈಟ್‍ನಲ್ಲಿ ಸಲ್ಲಿಸಬಹುದು. ಆನ್‍ಲೈನ್ ನೊಂದಾಣಿಗಾಗಿ ನ.11 ಕೊನೆಯ ದಿನಾಂಕವಾಗಿರುತ್ತದೆ. ಪ್ರವೇಶ ಪ್ರಕ್ರಿಯೆ ನ.16 ರಿಂದ ಆರಂಭವಾಗಲಿದೆ. ಸಂಯುಕ್ತ ಪ್ರಾದೇಶಿಕ ಕೇಂದ್ರ, ದಾವಣಗೆರೆಯ ಕೇಂದ್ರದ ಕೋಡ್ ಕೆಕೆ044 ಆಗಿದೆ. ಅರ್ಜಿ ಶುಲ್ಕ ರೂ. ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 500. ಒಬಿಸಿ (ಸೀಲ್), ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇಡಬ್ಲ್ಯೂಎಸ್ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ ರೂ 350 ನಿಗದಿಪಡಿಸಲಾಗಿದೆ. ವಿವಿಧ ಪೇ ಆ್ಯಪ್ ಗಳ ಯುಪಿಐ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08192-233464/465, 8746043062, 8610660894 ಮತ್ತು 9490020080 ಅಥವಾ ಇ-ಮೇಲ್- [email protected], ವೆಬ್‍ಸೈಟ್ https://crcdvg.nic.in ಗೆ ಸಂಪರ್ಕಿಸಬಹುದು ಎಂದು ದಾವಣಗೆರೆಯ ಕೇಂದ್ರದ ಡೈರೆಕ್ಟ್‍ರ್ ಇನ್ ಚಾರ್ಜ್ ಅಧಿಕಾರಿ ಡಾ.ಜ್ಞಾನವೆಲ್.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕರ ನೇಮಕ : ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕೆಲವು ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 10 ಮೇಲ್ವಿಚಾರಕರ ಸ್ಥಾನಗಳಿಗೆ ಗೌರವ ಸಂಭಾವನೆ ಆಧಾರದ ಮೇಲೆ ಹಾಗೂ ನಿಗದಿಪಡಿಸಿದ ಮೀಸಲಾತಿಗನುಸಾರ ನೇಮಕಾತಿ ಮಾಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ನೇಮಕಾತಿ ಮಾಡಿಕೊಳ್ಳಲಾಗುತ್ತಿರುವ ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ನಿಗದಿಪಡಿಸಿರುವ ಮೀಸಲಾತಿ ವಿವರ ಇಂತಿದೆ. ದಾವಣಗೆರೆ ತಾಲ್ಲೂಕಿನ ಬೇತೂರು-2ಎ (ಮಹಿಳೆ), ಗೊಲ್ಲರಹಳ್ಳಿ- 3ಬಿ (ಮಹಿಳೆ), ಕೈದಾಳೆ- ಪ.ಜಾತಿ, ಕಕ್ಕರಗೊಳ್ಳ- ಸಾಮಾನ್ಯ ಅಭ್ಯರ್ಥಿ, ಮತ್ತಿ- ಸಾಮಾನ್ಯ (ಮಹಿಳೆ). ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿ- ಸಾಮಾನ್ಯ (ಗ್ರಾಮೀಣ ಅಭ್ಯರ್ಥಿ). ಚನ್ನಗಿರಿ ತಾಲ್ಲೂಕು ಹಿರೇಮಳಲಿ-ಸಾಮಾನ್ಯ (ಮಾಜಿ ಸೈನಿಕ), ಕೋಗಲೂರು- ಪ.ಪಂಗಡ, ರಾಜಗೊಂಡನಹಳ್ಳಿ-ಪ್ರವರ್ಗ-1. ನ್ಯಾಮತಿ ತಾಲ್ಲೂಕಿನ ಒಡೆಯರಹೊತ್ತೂರು ಗ್ರಾ.ಪಂ. ಗ್ರಂಥಾಲಯ- ಸಾಮಾನ್ಯ (ಗ್ರಾಮೀಣ ಅಭ್ಯರ್ಥಿ).

ಅರ್ಜಿ ಸಲ್ಲಿಸಲು ಕನಿಷ್ಟ ಎಸ್‍ಎಸ್‍ಎಲ್‍ಸಿ ಉತ್ತೀರ್ಣವಾಗಿರಬೇಕು. ಅಲ್ಲದೆ ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದವರಾಗಿರಬೇಕು, ಈ ಕುರಿತು ತಹಸಿಲ್ದಾರರಿಂದ ಪಡೆದ ರಹವಾಸಿ ಪ್ರಮಾಣಪತ್ರ ಹಾಗೂ ಸ್ಥಳೀಯ ಮತದಾರರ ಪಟ್ಟಿಯ ಭಾಗದ ಪ್ರತಿ ಸಲ್ಲಿಸಬೇಕು. ನಿಗದಿಪಡಿಸಿದ ಮೀಸಲಾತಿಗೆ ಅನುಗುಣವಾಗಿ ಮಾತ್ರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.

ವಯಸ್ಕರ ಶಿಕ್ಷಣದಡಿ ಮುಂದುವರಿಕಾ ಕಲಿಕಾ ಕೇಂದ್ರಗಳ ಪ್ರೇರಕ, ಉಪಪ್ರೇರಕ ಅಥವಾ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಸೇವಾ ಪ್ರಮಾಣಪತ್ರ ಸಲ್ಲಿಸಿದಲ್ಲಿ ಆದ್ಯತೆ ನೀಡಲಾಗುವುದು ಅಲ್ಲದೆ ಗ್ರಂಥಾಲಯ ವಿಜ್ಞಾನ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ಸೇವಾ ಪ್ರಮಾಣಪತ್ರ ಅಥವಾ ಗ್ರಂಥಾಲಯ ವಿಜ್ಞಾನ ತರಬೇತಿ ಪಡೆಯದ ಅಭ್ಯರ್ಥಿಗಳು ಇಲ್ಲದಿದ್ದಲ್ಲಿ ಎಸ್‍ಎಸ್‍ಎಲ್‍ಸಿ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ನಿಗದಿತ ಅರ್ಜಿ ನಮೂನೆಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಪಿಡಿಒ ಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಮೀಸಲಾತಿ ಪ್ರಮಾಣ ಪತ್ರ, ರಹವಾಸಿ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆ ಲಗತ್ತಿಸಿ, ಆಯಾ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಅಥವಾ ಪಿಡಿಒ ಅವರಿಗೆ ನವೆಂಬರ್ 11 ರ ಒಳಗಾಗಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಯನ್ನು ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಎಸ್‍ಬಿಎಂ ಕಟ್ಟಡ, ನಿಟ್ಟುವಳ್ಳಿ ಹೊಸ ಬಡಾವಣೆ, ದಾವಣಗೆರೆ ಇವರಿಂದ ಪಡೆಯಬಹುದು ಎಂದು ಮುಖ್ಯ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಹುಜನರು ನಂಬಿರುವ ‘ಕತ್ತೆ ಕಥೆ’..!

Published

on

  • ಪರಶುರಾಮ್. ಎ

ಕತ್ತೆ ಕಥೆ ಇದೇನು ಪಂಚತಂತ್ರ ಕತೆಯೊ ಅಥವಾ ನೀತಿಕತೆಯೋ ಅಲ್ಲ. ನಿಮ್ಮಗಳ ನಿಜ ಜೀವನದಲ್ಲಿ ನೀವುಗಳೇ ನಂಬಿರುವ ಕಥೆಯಿದು. ನಿಮ್ಮ ಇಡೀ ಜೀವನದಲ್ಲಿ ಹಾಸು ಹೊಕ್ಕಾಗಿರುವ ದಿನನಿತ್ಯ ಕೈಮುಗಿದು ಮೂರ್ಖರಾಗಿರುವ ಮೂರ್ಖರನ್ನಾಗಿಸಿರುವ ಕತೆ. ಬಹುಶಃ ಈ ಕಥೆಯಲ್ಲಿ ನೀವುಗಳೇ ನಿಮ್ಮ ನಂಬಕೆಗಳೇ ಪ್ರಧಾನ ಆಗಿವೆ.

ನಂಬಿಕೆ, ಭಕ್ತಿ, ಮೌಲ್ಯಗಳನ್ನು ಬಂಡವಾಳವಾಗಿಸಿಕೊಂಡಿರುವವರೇ ಈ ಕಥೆಯ ಸೃಷ್ಟಿಕರ್ತರು. ಯಾವುದೋ ಒಂದು ಕಾಲದಲ್ಲಿ ಹುಟ್ಟಿರಬಹುದಾದ ಈ ಕಥೆ ಇನ್ನೂ ನಿಮ್ಮನ್ನು ಬಂಧನದಲ್ಲಿ ಇಟ್ಟಿದೆ ಎಂದರೆ ಅದಿನ್ನೆಂತಹ ಕ್ರೂರ ಲಾಭಕೋರ ವ್ಯವಸ್ಥೆ ಇರಬಹುದು ನೀವೇ ಊಹಿಸಿ ಯೋಚಿಸಿ! ಈ ಕಥೆ ಬಗ್ಗೆ ಈಗಾಗಲೇ ಕನ್ನಡದ ಲೇಖಕರು ಭಾಷಣಕಾರರು ಬಹುಜನರಿಗೆ ತಿಳಿಸಿ ಎಚ್ಚರಿಸುತಿದ್ದರು ಬಹುಜನರು ಇನ್ನೂ ಅದೇ ಕುತಂತ್ರ ಷಡ್ಯಂತ್ರಗಳಿಗೆ ಬಲಿಯಾಗಿರುವುದು ಸಮಾಜದ ಅಧೋಗತಿಗೆ ಒಂದು ಕಾರಣವು ಹೌದು. ತಮ್ಮನ್ನು ತಾವು ಶೋಷಿಸಿಕೊಳ್ಳುವುದು ಮತಿಹೀನ ಕೃತ್ಯ ಅಜ್ಞಾನ ಮೌಢ್ಯ ಪ್ರದರ್ಶನವಾಗಿದೆ.

ಡಾ.ಸಿದ್ದಲಿಂಗಯ್ಯ ನವರ “ಕತ್ತೆ ಮತ್ತು ಧರ್ಮ” ಕವನದಲ್ಲಿದೆ ನಾನು ಹೇಳಲು ಹೊರಟ ಸಾರಾಂಶ. (ಬಹುಜನರು ಕತ್ತೆ ಮತ್ತು ಧರ್ಮ ಕವನ ಓದಿ) ನಾನು ಇಲ್ಲಿ ಅದರ ಸಣ್ಣ ಸಾರಾಂಶ ಮಾತ್ರ ಉದಾಹರಿಸುವೆ. ಸಿದ್ದಯ್ಯನೆಂಬ ಅಗಸನಿಗೆ ಕತ್ತೆ ಎಂಬುದು ಜೊತೆಗಾರ, ಅದರೊಂದಿಗೆ ಅಪಾರ ಸ್ನೇಹ ಮಮತೆ ಹೊಂದಿದವನು ಈತ. ಎಷ್ಟರಮಟ್ಟಿಗೆ ಎಂದರೆ ಜನಗಳು ಕತ್ತೆಯನ್ನು ಸಿದ್ದಯ್ಯನ ಸಾಕುಮಗಳು ಅನ್ನುವಷ್ಟು ಪ್ರೀತಿ ಒಬ್ಬರಿಗೊಬ್ಬರಿಗೆ.

ಇಂಥ ತನ್ನ ನೆಚ್ಚಿನ ಕತ್ತೆ ಒಂದು ದಿನ ಇದ್ದಕ್ಕಿದ್ದಂತೆ ಕೊನೆಯುಸಿರೆಳೆದು ಮಲಗಿತು. ದಾರಿಯ ಮೂಲೆಯಲ್ಲಿ ಒಂದು ಕಡೆ ಮಣ್ಣು ಮಾಡಿ ಸಮಾಧಿಗೆ ನಮಿಸಿ ಪೂಜಿಸಿ ನೊಂದ ಸಿದ್ದಯ್ಯ ದೇಶಾಂತರ ಹೊರಟು ಹೋದ. ವ್ಯಾಪಾರಕ್ಕೆ ಅದೇ ದಾರಿಯಲ್ಲಿ ಹೊರಟಿದ್ದ ಜಯಶೆಟ್ಟಿ ಎಂಬುವನು ಅಗಸನ ಪೂಜೆ ನೋಡಿ ಯಾವುದೊ ಮಹಾತ್ಮರ ಸನ್ನಿಧಿಯೆಂದುಕೊಂಡು ಕೈ ಮುಗಿದು ತನ್ನ ವ್ಯಾಪಾರಕ್ಕೆ ಮರಳಿದ.

ಶೆಟ್ಟಿಗೆ ಅವತ್ತು ಲಾಭದ ಮೇಲೆ ಲಾಭ ವ್ಯಾಪಾರ ‘ದಿಲ್ಕುಷ್’ ಆಗಿ ಸಮಾಧಿಗೆ ದೇವರಕಂಬ ಎಣ್ಣೆ ತಂದುಕೊಟ್ಟ. ಈ ಸುದ್ದಿ ಇಡೀ ಊರಿಗೆ ಹರಡಿ ಕೆಲವೇ ದಿನಗಳಲ್ಲಿ ಭಕ್ತರು ಹೆಚ್ಚಾಗಿ ಅಲ್ಲೊಂದು ದೇವಾಲಯ ನಿರ್ಮಾಣವಾಗಿ ಪರಿಷೆ ನಡೆಯೊ ಮಟ್ಟಿಗೆ ಬೆಳೆದಿರುತ್ತೆ. ಆ ದೇವಾಲಯದ ಮುಂದೆ ಭಿಕ್ಷುಕರು ಸಣ್ಣ ಸಣ್ಣ ಅಂಗಡಿಗಳು ಜನಗಳು ವೈದಿಕರು, ದಾನ ನೀಡಲು ಸಾಹುಕಾರರು ಎಲ್ಲರೂ ಸೇರಿರುತ್ತಾರೆ.

ಈ ಸುದ್ದಿ ಅರಮನೆಯ ತಲುಪಿ ರಾಜ ರಾಣಿ ಈ ದೇವಾಲಯ(ಅಲ್ಲಲ್ಲ ಕತ್ತೆ ಸಮಾಧಿ) ನೋಡಲು ಬಯಸಿ ಹೊರಟು ಬರುತ್ತಾರೆ. ವರ್ಷ ಕಳೆದ ನಂತರ ಅಗಸ ಸಿದ್ದಯ್ಯ ತಾನು ಮಾಡಿದ ಕತ್ತೆ ಸಮಾಧಿ ಹುಡುಕಿ ಕಾಣಲು ಬರುತ್ತಾನೆ ಆದರೆ ತಳವಾರರು ಅವನನ್ನು ಕತ್ತು ಹಿಡಿದು ಆಚೆ ತಳ್ಳುತ್ತಾರೆ ಇದಿಷ್ಟು ಕವನದ ಸಾರಾಂಶ.

ಈ ಕವನದಲ್ಲಿ ಬಹುಜನರು ನಂಬಿರಬಹುದಾದ ಅನೇಕ ಮೌಢ್ಯಗಳನ್ನು ಹೊತ್ತಿವೆ. ಜ್ಞಾನದ ಮಾರ್ಗವು ಸಹ ಇದೆ. ನಮಗೆಲ್ಲರಿಗೂ ಗೊತ್ತು ಸಿಂಧೂ ಬಯಲಿನ ನಾಗರೀಕತೆಯಿಂದಲೂ ಇಲ್ಲಿನ ಮೂಲನಿವಾಸಿ ತಳಸಮುದಾಯದ “ಬಹುಜನರು” ಪ್ರಾಣಿ- ಪಕ್ಷಿ. ನಾಯಿ. ಪಶುಸಂಗೋಪನೆ, ಕಾಡು ಪ್ರಾಣಿಗಳ ಬೇಟೆಯಲ್ಲಿ ಬಹು ಪ್ರಸಿದ್ಧರು ನಿಷ್ಣತೆಯುಳ್ಳವರು ಕೂಡಾ.

ಅವು ತಮ್ಮ ಜೀವನದ ಅವಿಭಾಜ್ಯ ಅಂಗವೇನೊ ಎಂಬ ಮಟ್ಟಿಗೆ ಸಹ ಪಳಗಿಸಿ ಸಾಕುತ್ತಿದ್ದರು. ಹೀಗೆಯೇ ಸಿದ್ದಯ್ಯನೆಂಬ ಅಗಸ ತನ್ನ ಕತ್ತೆ ಸಾಕಿದ್ದು ಅದು ಸತ್ತ ನಂತರ ಅದರ ಗುರುತಿಗೆ ಮಣ್ಣು ಮಾಡಿ ಧನ್ಯವಾದಕ್ಕಾಗಿ ಪೂಜೆ ಸಲ್ಲಿಸುವುದು ಸಹ ಈ ನೆಲದ ನೈಜ ಸಂಸ್ಕೃತಿಗಳ ಬಿಂಬವೇ ಅಗಿದೆ.

ಈಗಲೂ ಕೂಡ ನಾವುಗಳು ಸತ್ತವರ ಸಮಾಧಿ ಮೇಲೆ ತುಳಸಿ ಗಿಡ ವಿವಿಧ ಸಸಿ ನೆಟ್ಟು ಪೋಷಿಸುವುದು ಕಾಣಬಹುದು.(ಬೆಂಕಿಯಲ್ಲಿ ದೇಹ ಸುಟ್ಟು ಅದರ ಅಸ್ಥಿಯನ್ನು ನೀರಿನಲ್ಲಿ ಬಿಟ್ಟು ಗುರುತೇ ಇಲ್ಲದಂತೆ ಸಂಬಂಧ ಕಡಿದು ಕೊಳ್ಳುವುದು ಕುತಂತ್ರಿ ಆರ್ಯರ ಸಂಸ್ಕೃತಿಯಾಗಿದೆ ನೆನಪಿರಲಿ).

ಮಹಾನವಮಿ ಅಥವಾ ಮಾರ್ನಾಮಿ ಹಬ್ಬದ ಸಂದರ್ಭದಲ್ಲಿ ತೀರಿ ಹೋದ ಹಿರಿಯರಿಗೆ – ವ್ಯಕ್ತಿಗಳಿಗೆ ಎಡೆ ಇಡುವುದು ಈ ನೆಲ ಮೂಲದ ಸಂಸ್ಕೃತಿ, ಪಿಂಡ ಪ್ರದಾನವಲ್ಲ. ಆದರೆ ಈ ಕುತಂತ್ರಕ್ಕೂ ಬಹುಜನರು ಬಲಿಯಾಗಿದ್ದಾರೆ. ಕತ್ತೆ ಸಮಾಧಿಗೆ ಪೂಜೆ ಸಲ್ಲಿಸುವಾಗ ಜಯಶೆಟ್ಟಿ ಎಂಬುವ ವ್ಯಾಪಾರಸ್ಥ ನೋಡಿ ಕೈಮುಗಿದು ಹೋದ ನಂತರ ಲಾಭವಾಯಿತು ಎಂಬುದು ಇಲ್ಲಿ ಬೇರೆಯವರು ಯಾರು ಏನು ಮಾಡುತ್ತಿದ್ದಾರೆ ತಾನು ಅವರಂತೆ ಅನುಕರಿಸುವುದು ಸಾಬೀತಾಗುತ್ತದೆ.

ಆಗಲೇ ಹೇಳಿದಂತೆ ನಮ್ಮದಲ್ಲದ ಪಿಂಡ ಪ್ರದಾನವೂ ಸಹ. ನಿಮಗೆ ಗೊತ್ತಿರಲಿ ಧ್ಯಾನ ಯೋಗ ಪ್ರಾರ್ಥನೆ ವಿವಿಧ ಚಟುವಟಿಕೆ ಯಿಂದ ಮನಸ್ಸು ಉಲ್ಲಾಸಿತಗೊಂಡು ಪಾಸಿಟಿವ್ ನಿಂದ ಆ ದಿನದ ಚಟುವಟಿಕೆಯ ಎಲ್ಲದರ ಮೇಲೂ ಪ್ರಭಾವ ಬೀರುತ್ತದೆ. ಶೆಟ್ಟಿಗೆ ಇಲ್ಲಾಗಿದ್ದು ಅದೇ. ನಂತರ ತನ್ನ ಸ್ವಪ್ರಯತ್ನ ಸ್ವಂತ ಶಕ್ತಿ ಮರೆತವನೊಬ್ಬ ಸಮಾಧಿಯ ಬಗ್ಗೆ ದೊಡ್ಡ ಪುಕಾರು ಮಾಡಿ ಮೌಢ್ಯ ಪ್ರಸಾರದಲ್ಲಿ ತೊಡಗಿದ.

ಅಲ್ಲೊಂದು ಜಾತ್ರೆ ಪೂಜೆ ನಡೆಯುತ್ತದೆ. ದಾನ ವ್ಯವಹಾರ ಆಗುವಂತೆ ಮಾಡುವಲ್ಲಿ ತಾನು ತೊಡಗಿಸಿಕೊಂಡ. ಇಂತದ್ದೇ ಪರಿಸ್ಥಿತಿ ಈಗಲೂ ಕಾಣಬಹುದು. ವರ್ಷ ಕಳೆದ ನಂತರ ಕತ್ತೆ ಸಮಾಧಿಯ ಜಾಗ ಹುಡುಕಿ ಸತ್ಯ ಅರಿತಿದ್ದ ಸಿದ್ದಯ್ಯ ಅಲ್ಲಿಗೆ ಬಂದ. ತಳವಾರ್ರು ಅವನನ್ನು ಕತ್ತು ಹಿಡಿದು ಆಚೆ ತಳ್ಳಿ ದೇವಾಲಯದ ಹತ್ತಿರವು ಬಿಟ್ಟು ಕೊಳ್ಳಲಿಲ್ಲ.

ಇದು ಈಗಲೂ ಸತ್ಯ ಬೇಕಾದರೆ ನೋಡಿ ದೇವಸ್ಥಾನದಲ್ಲಿ ಇರುವ ಸತ್ಯವನ್ನು ವಿವಿಧ ಸಂಶೋಧಕರು, ಲೇಖಕರು ಮೌಢ್ಯಭಂಜಕರು ಅದನ್ನು ಬಯಲಿಗೆಳೆಯುವರು ಎಂಬ ಭಯ ಆ ವರ್ಗಕ್ಕಿದೆ. ಅದಕ್ಕೆ ಆಳುವ ಜನರ ಸಹಕಾರವು ಸಿಗುತ್ತದೆ. ಕತ್ತೆ ಸಮಾಧಿ ಎಲ್ಲಿಯಾದರೂ ಪವಾಡ ಸೃಷ್ಟಿಸಲು ಸಾಧ್ಯವ? ಇಂತಹ ಅದೆಷ್ಟೋ ನಿರ್ವೀರ್ಯ ಕತ್ತೆಯ ಸಮಾಧಿಗಳು ಓಣಿ ಓಣಿಗಳಲ್ಲಿ ರಸ್ತೆ ರಸ್ತೆಯಲ್ಲಿ ಸಿಗುತ್ತವೆ.

ಅದೆಲ್ಲವೂ ದೇವಾಲಯವೆಂಬ ಮೌಢ್ಯದ ಆಸ್ಥಾನಗಳೆಂದು ತಿಳಿದಿರಲಿ. ಇನ್ನೂ ಕರ್ನಾಟಕದ ವಾಗ್ಮಿಗಳಾದ ಗುರುರಾಜ ಕರ್ಜಗಿಯವರು ಕರುಣಾಳು ಬಾ ಬೆಳಕೆ 2ನೇ ಸಂಪುಟದಲ್ಲಿ ಉಲ್ಲೇಖಿಸಿರುವಂತೆ ‘ಸಮಾಧಿಯ ಮಹಿಮೆ’ ಎಂಬ ಲೇಖನ ಸಹ ಇದೇ ಕತೆಯ ತಿರುಳು ಹೊಂದಿದೆ. ಗುರುಕುಲದಲ್ಲಿ ಲೋಕ ಜ್ಞಾನ ವ್ಯವಹಾರ ಜ್ಞಾನವಿಲ್ಲದ ದಡ್ಡ ವಿದ್ಯಾರ್ಥಿಯೊಬ್ಬನಿಗೆ ಬರಗಾಲ ಬಂದಾಗ ಗುರುಗಳು ಆತನಿಗೆ ಒಂದು ಕತ್ತೆಯನ್ನು ನೀಡಿ ನಿನ್ನ ಜೀವನ ನೀನು ನೋಡಿಕೊ ಎಂದು ಕಳುಹಿಸಿ ಕೊಡುವರು.

ಮುಂದೊಂದು ದಿನ ಆ ಕತ್ತೆ ಸತ್ತಾಗ ಅದನ್ನು ಮಣ್ಣು ಮಾಡಿ ಸಮಾಧಿಗೆ ತನಗೆ ತಿಳಿದಂತೆ ದಿನನಿತ್ಯ ಪೂಜೆ ಸಲ್ಲಿಸುತ್ತಿರುತ್ತಾನೆ. ಈ ದಡ್ಡ ವಿದ್ಯಾರ್ಥಿಯ ಕತ್ತೆ ಸಮಾಧಿ ಮುಂದೆ ಅದೊಂದು ಜಾಗೃತ ಸ್ಥಾನವೆಂಬಂತೆ ಪ್ರಚಲಿತಗೊಂಡು ಹರಕೆ ಹೊತ್ತು ಜನ ಬಂದರು. ಈತನ ಆದಾಯ ಹೆಚ್ಚಿತು. ಸಮಾಧಿಗೊಂದು ದೇವಾಲಯ ಶಿಷ್ಯನಿಗೆ ಒಂದು ಕೊಠಡಿ ಆಯಿತು.

ಶಿಷ್ಯನ ಗುರುಗಳು ಭೇಟಿಯಾಗಿ ಅದು ಯಾವ ಮಹಾತ್ಮನ ಕಂಡು ನಿನ್ನ ಜೀವನ ಉದ್ದರಿಸಿಕೊಂಡೆ ಎಂದು ಪ್ರಶ್ನಿಸಿದಾಗ ಶಿಷ್ಯ ನೀವು ಕೊಟ್ಟ ಕತ್ತೆಯೇ ನನ್ನ ಪಾಲಿನ ಮಹಾತ್ಮ: ಅದರ ಸಮಾಧಿಯೇ ಈ ದೇವಾಲಯ. ಅದ ನಂಬಿದ ಮೂರ್ಖ ಮಂದಿಗಳ ಭಕ್ತಿಯೇ ಇಂದಿನ ನನ್ನ ಆದಾಯ ಎಂದು ಹೇಳಿ ಬೆರಗಾಗಿಸಿದ್ದ. ಒಟ್ಟಾರೆ ಈ ಮೇಲಿನ ಎರಡೂ ಕತೆಗಳು ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡ ವರ್ಗವೊಂದು ಅದರ ಹೆಸರಿನಲ್ಲಿ ವ್ಯವಹಾರಕ್ಕಿಳಿದು ಪೂಜೆ ಪುರಸ್ಕಾರ ಜಾತ್ರೆ ಹೋಮ ಹವನ ಅರ್ಚನೆ ದಕ್ಷಿಣೆ ಅಂಗಡಿ ಇತರೆ ಎಲ್ಲರಿಂದಲೂ ಲಾಭಗಳನ್ನು ಪಡೆಯುತ್ತ ಬಂದರು.

ತಮ್ಮ ಬುದ್ದಿ ಸಾಮರ್ಥ್ಯ ಮರೆತು ಸತ್ಯವನ್ನರಿಯದ ಗೋಜಿಗೆ, ಸತ್ಯ ಮಾರ್ಗಕ್ಕೆ ಹೋಗದೇ ತಮ್ಮನ್ನು ತಾವೇ ಶೋಷಣೆಗೆ ಒಡ್ಡಿ ಬಹುಜನರು ಪ್ರಜ್ಞಾಹೀನ ಸ್ಥಿತಿಯ ತಲುಪಿದರು. ಮೌಢ್ಯಕ್ಕೆ ಬಲಿಯಾದರು. ಇಂತಹ ವರ್ಣ ರಂಜಿತ ಕತೆಗಳನ್ನು ಈಗಲೂ ಹಲವಾರು ದೇವರು ನಂಬಿ ನಿಮಗೆ ಒಳ್ಳೆಯದಾಗುತ್ತೆ, ನಾನು ಹೇಳೊದು ಕೇಳಿ: ಹೇಳಿದಂತೆ ಮಾಡಿ ನಿಮ್ಮ ಭವಿಷ್ಯ ಸರಿ ಹೋಗುತ್ತೆ ಎಂದು ಬೊಬ್ಬೆ ಇಡುವವರೇ ಹೆಚ್ಚು. ಇಂತಹವರ ಮದ್ಯದಲ್ಲಿ ಸತ್ಯ ನುಡಿಯುವ ಬಹುಜನರಿಗೆ ವೈಚಾರಿಕತೆ ಬಿತ್ತುವ ಸತ್ಯ ಮಾರ್ಗಕ್ಕೆ ಮಾರ್ಗದರ್ಶನ ನೀಡುವ ಶ್ರೀನಿಜಗುಣಾನಂದ ಸ್ವಾಮಿಗಳೇ ನಮ್ಮೆಲ್ಲರಿಗೂ ಆದರ್ಶ.

ನಿಜಗುಣ ಸ್ವಾಮಿಗಳು ವಿವಿಧ ವೇದಿಕೆಯಲ್ಲಿ ಈ ಮೇಲಿನ ಕತೆಯನ್ನು ಉದಾಹರಿಸಿ ಜನರನ್ನು ಮೌಢ್ಯದಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದ್ದಾರೆ. ಜನರಿಗೆ ತಿಳಿ ಹೇಳಿ ಜ್ಞಾನ ಹಂಚುತ್ತಿದ್ದಾರೆ. ನಮಗೆ ಆದರ್ಶವಾಗಬೇಕಾದವರು ನಿಜಗುಣ ಸ್ವಾಮೀಜಿಗಳೆ ಹೊರತು ಬ್ರಹ್ಮಾಂಡ ಅಂಡ ಪಿಂಡ ದಿನ ವಾರ ವರ್ಷ ಭವಿಷ್ಯ ನುಡಿವ, ಸ್ತ್ರೀವಶ, ಧನಪ್ರಾಪ್ತಿ ಅತ್ತೆ ಸೊಸೆ ಕಿತ್ತಾಟ ಕೋರ್ಟ್ ಕೇಸ್ ಈಡೇರಿಸಿ ಕೊಡುವೆನೆಂಬ ಸಾಧು ಗುರೂಜಿಗಳಲ್ಲ. ನಿಮ್ಮನ್ನು ಮೌಢ್ಯದಿಂದ ಬಿಡುಗಡೆಗೊಳಿಸಿ ಸನ್ಮಾರ್ಗದಲ್ಲಿ ಕೊಂಡೊಯ್ಯುವವರ ಬಳಿ ಸಾಗಿ. ಮೌಢ್ಯದ ಬಾವಿಗೆ ಹಾಕುವವರೆಡೆಯಲ್ಲ. ಈ ಕತ್ತೆ ಕಥೆ ನಿಮಗೆ ಸತ್ಯವನ್ನು ತಿಳಿಯಲು ಸಾಧ್ಯವಾಯಿತು ಎಂದು ಭಾವಿಸಿ ಕುವೆಂಪುರವರ ಈ ಸಾಲು

ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನ್ನು ಗುರುವನು ಮಾಡಿ
ಬಡವರ ಹಣವನು ಕಾಣಿಕೆ ನೀಡಿ
ಧರ್ಮವ ಮೆರೆದರು ನೋಡಯ್ಯ

ಪವಾಡ – ಮೂಢನಂಬಿಕೆಗಳು, ದುರ್ಬಲತೆ ಮತ್ತು ಮೃತ್ಯುವಿನ ಸಂಕೇತಗಳು ಅವುಗಳ ಬಗ್ಗೆ ಎಚ್ಚರಿಕೆಯಿಂದಿರಿ”

ಸ್ವಾಮಿ ವಿವೇಕಾನಂದರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending