ರಾಜಕೀಯ
ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಜೀವನ ಮತ್ತು ಪ್ರಮುಖ ಘಟನೆಗಳು
ಹಲವು ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಶನಿವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 66 ವರ್ಷದ ಜೇಟ್ಲಿ ಬಿಜೆಪಿಯ ಹಿರಿಯ ಮುಖಂಡರು. ತಳಹಂತದಿಂದಲೂ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಮೂಲತ: ವಕೀಲರಾಗಿದ್ದ ಜೇಟ್ಲಿ ತಮಗೆ ನೀಡಿದ ಹುದ್ದೆ ಹಾಗು ವೃತ್ತಿಗೆ ನ್ಯಾಯ ಒದಗಿಸಿದರು.
ವಕೀಲ ವೃತ್ತಿಯಿಂದ ಕೇಂದ್ರದ ಉನ್ನತ ಖಾತೆಗಳನ್ನು ಅಲಂಕರಿಸಿದ ಅರುಣ್ ಜೇಟ್ಲಿ ಬಹುಮುಖ ವ್ಯಕ್ತಿತ್ವ ಉಳ್ಳವರು. 28, ಡಿಸೆಬರ್ 1952ರಲ್ಲಿ ದೆಹಲಿಯಲ್ಲಿ ಜನಿಸಿದ ಅರುಣ್ ಜೇಟ್ಲಿ, ಅವರ ತಂದೆ ಮಹಾರಾಜ್ ಕಿಶನ್ ಕೂಡ ವಕೀಲರಾಗಿದ್ದರು. ತಾಯಿ ರತನ್ ಪ್ರಭಾ ಅವರು ಮಗನಿಗೆ ಉತ್ತಮ ಸಂಸ್ಕಾರ ನೀಡಿ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿದರು.
ಎಬಿವಿಪಿ ಸೇರುವ ಮೂಲಕ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯರಾದರು. 1973ರಲ್ಲಿ ಜಯಪ್ರಕಾಶ್ ನಾರಾಯಣ ಮತ್ತು ರಾಜ್ ನರೈನ್ ಅವರು ಪ್ರಾರಂಭಿಸಿದ ಭ್ರಷ್ಟಾಚಾರದ ವಿರುದ್ಧ ಚಳುವಳಿಯಲ್ಲೂ ಕೂಡ ಪ್ರಮುಖ ಪಾತ್ರ ವಹಿಸಿದರು. 1982ರಲ್ಲಿ ಜಮ್ಮು ಮತ್ತು ಕಾಶ್ಮೀರದ ಆಗಿನ ಹಣಕಾಸು ಸಚಿವ ಗಿರ್ಧಾರಿಲಾಲ್ ದೋಗ್ರಾ ಅವರ ಪುತ್ರಿ ಸಂಗೀತಾ ಅವರನ್ನು ವಿವಾಹವಾದರು. ರೋಹನ್ ಮತ್ತು ಸೋನಾಲಿ ಇಬ್ಬರ ಮಕ್ಕಳ ಸುಂದರ ಕುಟುಂಬ ಇವರದ್ದಾಗಿತ್ತು.
ಹೋರಾಟ ಮನೋಭಾವದ ಜೇಟ್ಲಿ
ಅರುಣ್ ಜೇಟ್ಲಿ ಹೋರಾಟ ಮನೋಭಾವದವರು. ನಾಗರಿಕ ಹಕ್ಕುಗಳ ಸಮಿತಿಯಲ್ಲಿ ಸಕ್ರಿಯರಾದವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಸೇರಿದ್ದರು. ಜೈಲಿನಿಂದ ಹೊರ ಬಂದ ಮೇಲೆ ಜನಸಂಘ ಸೇರಿದರು.
1977ರಲ್ಲಿ ಕಾಂಗ್ರೆಸ್ ಪಕ್ಷ ಸೋಲುಂಡಾಗ ಲೋಕ್ ತಾಂತ್ರಿಕ ಯುವ ಮೋರ್ಚಾದ ಕನ್ವಿನರ್ ಆಗಿ ಜೇಟ್ಲಿ ಕಾರ್ಯನಿರ್ವಹಿಸಿದ್ದಾರೆ. ಎಬಿವಿಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ವಿದ್ಯಾರ್ಥಿ ಸಂಘಟನೆಯಲ್ಲಿ ಹಲವು ವಿದ್ಯಾರ್ಥಿ ಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಇನ್ನು ತಮ್ಮ ವಕೀಲಿ ವೃತ್ತಿಯಲ್ಲೂ ಕೂಡ ತಮ್ಮದೇ ಛಾಪು ಮೂಡಿಸಿದ ವ್ಯಕ್ತಿತ್ವ ಜೇಟ್ಲಿ ಅವರದ್ದು. ಸುಪ್ರಿಂ ಕೋರ್ಟ್ ಸೇರಿ ದೇಶದ ಹತ್ತು ಹಲವು ಕೋರ್ಟ್ ಗಳಲ್ಲಿ ಕಾನೂನು ಅಭ್ಯಾಸ ಮಾಡಿದ್ದಾರೆ. ಬೋಫೋರ್ಸ್ ಹಗರಣದ ತನಿಖೆಗಾಗಿ ಹಲವಾರು ದಾಖಲೆಗಳನ್ನು ಸಂಗ್ರಹಿಸಿದ್ದರು. ಇನ್ನು ಭಾರತದಲ್ಲಿನ ಭ್ರಷ್ಟಾಚಾರ ಮತ್ತು ಅಪರಾಧಕ್ಕೆ ಸಂಬಂಧಿಸಿದಂತೆ ಇಂಡೋ ಬ್ರಿಟೀಷ್ ಕಾನೂನು ವೇದಿಕೆಯ ಮುಂದೆ ಪ್ರಬಂಧ ಮಂಡಿಸುವ ಮೂಲಕ ಜನಮೆಚ್ಚುಗೆಯನ್ನು ಪಡೆದಿದ್ದರು. ಮಹಿಳಾ ಮೀಸಲಾತಿ ಮಸೂದೆಯಲ್ಲಿ ಜೇಟ್ಲಿ ಪಾತ್ರ ಪ್ರಮುಖವಾಗಿತ್ತು. ಸಂವಿಧಾನದ 84ನೇ ತಿದ್ದುಪಡಿಗಳನ್ನು 2026ವರೆಗೆ ಸ್ಥಗಿತಗೊಳಿಸುವ ಮೂಲಕ ದಿಟ್ಟತನ ಪ್ರದರ್ಶಿಸಿದ್ದರು.
ಪರಿಸರ ಸ್ನೇಹಿ ಜೇಟ್ಲಿ
ಅರುಣ್ ಜೇಟ್ಲಿ ವಕೀಲ ವೃತ್ತಿಯ ಜತೆಗೆ ಹಲವು ಖಾತೆಗಳಿಗೆ ನ್ಯಾಯಸಮ್ಮತವಾಗಿ ಆಡಳಿತ ನಡೆಸಿದವರು. ತಮ್ಮ ಅಧಿಕಾರದ ಅವಧಿಯಲ್ಲಿ ಪರಿಸರಕ್ಕೆ ಹಾನಿ ನೀಡುವ ಬಹುರಾಷ್ಟ್ರೀಯ ಕಂಪನಿ ವಿರುದ್ಧ ಸಮರ ಸಾರಿದ್ದರು. ಹೀಗಾಗಿ ಜೇಟ್ಲಿ ವ್ಯಕ್ತಿತ್ವ ಪರಿಸರ ಸ್ನೇಹಿಯಾಗಿತ್ತು.
ಜೇಟ್ಲಿ ಸಾಗಿ ಬಂದ ಹಾದಿ
ಎಬಿವಿಪಿ ಮೂಲಕ ವಿದ್ಯಾರ್ಥಿ ಸಂಘಟನೆಗೆ ಧುಮುಕಿ ಸಾಕಷ್ಟು ಹುದ್ದೆಗಳನ್ನು ನಿಭಾಯಿಸಿದರು. ನಂತರ ಜನಸಂಘ ಸೇರಿ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ನಂತರ ಬಿಜೆಪಿಯಲ್ಲಿಯೂ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು.
1990ರಲ್ಲಿ ದೆಹಲಿ ಹೈಕೋರ್ಟ್ ನಲ್ಲಿ ಹಿರಿಯ ವಕೀಲರಾಗಿಯೂ ಕಾರ್ಯನಿರ್ವಹಿಸಿದ್ದರು.
1999ರಲ್ಲಿ ವಾಜಪೇಯಿ ಸರ್ಕಾರದಲ್ಲಿ ರಾಜ್ಯ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ, 2000 ರಲ್ಲಿ ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರ ಖಾತೆಯನ್ನು ಹೆಚ್ಚುವರಿಯಾಗಿ ನಿಭಾಯಿಸಿದರು. ಇದೇ ಸಂದರ್ಭದಲ್ಲಿ ಸಾರಿಗೆ ವಿಭಾಗ ವಿಭಜನೆಯಾದ ನಂತರ ಪ್ರಥಮ ಬಂದರು ಸಚಿವರಾದ ಕೀರ್ತಿ ಜೇಟ್ಲಿ ಅವರಿಗೆ ಸಲ್ಲುತ್ತದೆ. ತಮ್ಮ ರಾಜಕೀಯ ಜೀವನದಲ್ಲಿ ಬಹುತೇಕ ನೇರ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಕಡಿಮೆ.
ಆದರೆ ಜೇಟ್ಲಿ ರಾಜಕೀಯ ಜೀವನದಲ್ಲಿ 2016 ನವಂಬರ್ 9ರಂದು 500, 1,000 ಮುಖಬೆಲೆಯ ನೋಟು ನಿಷೇಧದ ಸಂದರ್ಭದಲ್ಲಿ ಅರುಣ್ ಜೇಟ್ಲಿ ಹಣಕಾಸು ಸಚಿವರಾಗಿದ್ದರು. ಹೀಗಾಗಿ ನೋಟ್ ಬ್ಯಾನ್ ನಂತಹ ತೀರ್ಮಾನ ಸ್ವಪಕ್ಷದ ಸಮರ್ಥನೆಗೆ ಕಾರಣವಾದರೆ ವಿರೋಧ ಪಕ್ಷದ ತೀವ್ರ ವಿರೋಧಕ್ಕೆ ಕಾರಣವಾಯಿತು.
1998ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧಿವೇಶನಕ್ಕೆ ಭಾರತ ಸರ್ಕಾರ ಪರ ಪ್ರತಿನಿಧಿಯಾಗಿದ್ದರು. ರಾಜ್ಯ ಸಭೆಯ ಪ್ರತಿಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಪ್ರತಿಪಕ್ಷ ಸ್ಥಾನ ಅಲಂಕರಿಸುವ ಮೂಲಕ ವಕೀಲಿ ವೃತ್ತಿ ನಿಲ್ಲಿಸಿದರು.
2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಅನಾರೋಗ್ಯದ ಕಾರಣ ತಾವು ಸಕ್ರಿಯರಾಗದಿರುವ ಬಗ್ಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಹಲವು ತಿಂಗಳಿಂದ ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಏಮ್ಸ್ ನಲ್ಲಿ ಮೂತ್ರ ಪಿಂಡ ಕಸಿ ಮಾಡಿಸಿಕೊಂಡಿದ್ದರು. ಇನ್ನು ನ್ಯೂಯಾರ್ಕ್ ನಲ್ಲೂ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆ ಶನಿವಾರ ಕೊನೆಯುಸಿರೆಳೆದರು.
ಕೃಪೆ : ಡೆಮಾಕ್ರಟಿಕ್ ನ್ಯೂಸ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೇ. 56 ರಷ್ಟು ಗಣತಿ ನಮೂನೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್.ಐ.ಆರ್.ಕುರಿತು ಮಾಹಿತಿ ನೀಡಲು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಬಿಎಲ್‌ಒಗಳು ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಅರ್ಜಿಗಳನ್ನು ವಿತರಿಸಿ, ಸ್ವೀಕರಿಸುತ್ತಿದ್ದಾರೆ. ಶೇ. 91 ರಷ್ಟು ಜನರಿಗೆ ಫಾರಂ ಭರ್ತಿ ಮಾಡಲು ತಿಳಿಯದ ಕಾರಣ ಬಿಎಲ್‌ಒಗಳೇ ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದಾರೆ ಎಂದರು.
ಸಾರ್ವಜನಿಕರ ಅನುಕೂಲಕ್ಕಾಗಿ ದಾವಣಗೆರೆ ನಗರದಲ್ಲಿ 45 ಕೇಂದ್ರಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ತಾಲೂಕು ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಅನುಮಾನಗಳಿದ್ದಲ್ಲಿ ಸಾರ್ವಜನಿಕರು ಬಿಎಲ್‌ಒಗಳನ್ನು ಅಥವಾ ಚುನಾವಣಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನೋಡಲ್ ಅಧಿಕಾರಿಗಳು ಮತ್ತು ಸೂಪರ್‌ವೈಸರ್‌ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸದ್ಯಕ್ಕೆ ಸಾರ್ವಜನಿಕರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸುತ್ತಿಲ್ಲ. ಆಗಸ್ಟ್ 7 ರ ನಂತರ ಯಾರು ಯಾವ ದಾಖಲೆಗಳನ್ನು ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.
ವಿವಿಧ ತಾಂತ್ರಿಕ ಹಾಗೂ ನೈಜ ಕಾರಣಗಳಿಂದಾಗಿ ಒಟ್ಟು 17,499 ಮತದಾರರ ಗಣತಿ ನಮೂನೆಗಳು ವಾಪಸ್ ಬಂದಿಲ್ಲ. ಇದರಲ್ಲಿ ಪ್ರಮುಖವಾಗಿ 7,487 ಮರಣ ಪ್ರಕರಣಗಳು , 263 ವಿಳಾಸ ಪತ್ತೆಯಾಗದವರು , 6,677 ಶಾಶ್ವತವಾಗಿ ಸ್ಥಳಾಂತರಗೊಂಡವರು , 2,994 ದ್ವಿಪ್ರತಿ ದಾಖಲಾತಿ (Double Entry) ಹಾಗೂ 78 ಇತರೆ ಕಾರಣ ಎಂದು ತಿಳಿಸಿದರು.
1,200 ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಗುರುತಿಸಿ, ಅಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮತದಾರರ ಪರಿಷ್ಕರಣೆಯ ಕಾರ್ಯವಿಧಾನದ ಕುರಿತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆ ಯಲ್ಲಿ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸುವ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಜುಲೈ 29ರ ವರೆಗೆ ಮಾತ್ರ ಕಾಲಾವಕಾಶ ಇರುವುದರಿಂದ ಬಿಎಲ್‌ಒಗಳು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಅವರೊಂದಿಗೆ ಶಾಂತಿಯುತವಾಗಿ ವರ್ತಿಸಿ, ಸೂಕ್ತ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಒಂದು ವೇಳೆ ದ್ವಿಪ್ರತಿ (Double Entry) ಸೇರಿದಂತೆ ಯಾವುದೇ ತಪ್ಪು ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ನೀಡಿದಲ್ಲಿ, ಅಂತವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್ ಚುನಾವಣಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆ ನಡೆಸುವಂತೆ ದೂರು ನೀಡಿ 5 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತಾಗೆ ದೂರು ಸಲ್ಲಿಸಿದ್ದಾರೆ.
ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ವಿಭಾಗ-2 ರ ವ್ಯಾಪ್ತಿಗೆ ಒಳಪಡುವ ಮಾಯಕೊಂಡ, ಹೊನ್ನಾಳಿ, ಚನ್ನಗಿರಿ ಉಪ ವಿಭಾಗಗಳು ಹಾಗೂ ವಿಭಾಗ-2ರ ಕಛೇರಿಯ ವ್ಯಾಪ್ತಿಗೆ 2023-24 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾಗಿರುವ ಸ್ಥಳೀಯ ಶಾಸಕರ ಅನುದಾನದಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣವನ್ನು ಇಲಾಖೆಯ ವಾಹನಗಳ ಇಂಧನ ವೆಚ್ಚಕ್ಕೆಂದು ನಿಯಮಬಾಹಿರವಾಗಿ ದುರ್ಬಳಕೆ ಮಾಡಿಕೊಂಡಿರುವುದು ಮಾತ್ರವಲ್ಲದೆ, ಬಹುತೇಕ ಕಡೆಗಳಲ್ಲಿ ಯಾವುದೇ ಕಾಮಗಾರಿ ನಡೆಸದೆ ನಕಲಿ ಕಡತ ಸೃಷ್ಟಿಸಿ ಸ್ಥಳೀಯ ಶಾಸಕರ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ವಿಷಯವು ಅಧಿಕೃತ ಮೂಲಗಳಿಂದ ತಿಳಿದು ಬಂದ ಕಾರಣ ಮಾಹಿತಿಹಕ್ಕು ಅಡಿಯಲ್ಲಿ ಹಲವಾರು ಭಾರಿ ಅರ್ಜಿ ಸಲ್ಲಿಸಿ, ಮಾಹಿತಿ ಕೋರಿದಾಗಲೂ ನಿಯಮಬಾಹಿರವಾಗಿ ಹಿಂಬರಹ ನೀಡುತ್ತ ಬಂದಿರುತ್ತಾರೆ.
ಆದ ಕಾರಣ ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆಗೆ ಒಳಪಡಿಸಿ, ಕೈಗೊಂಡ ಕ್ರಮದ ವರದಿಯನ್ನು ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಐ.ಡಿ.ಎಲ್, ಬೆಂಗಳೂರು ಇವರಿಗೆ ದಿನಾಂಕ: 06-02-2026 ರಂದು ದೂರು ನೀಡಲಾಗಿತ್ತು. ಆದರೆ ದೂರು ನೀಡಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ದಿನಾಂಕ: 21-04-2026 ರಂದು ಜ್ಞಾಪನ ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ 2 ತಿಂಗಳು ಕಳೆದರೂ ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಆದ ಕಾರಣ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತ ಕಾಯ್ದೆಯ ಅನುಸಾರ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
ಸುದ್ದಿದಿನ,ಚಿತ್ರದುರ್ಗ:ಮಾಜಿ ರಾಜ್ಯಸಭಾ ಸದಸ್ಯರು ಹೆಚ್ ಹನುಮಂತಪ್ಪನವರು (95ವರ್ಷ) ವಯೋಸಹಜ ಅನಾರೋಗ್ಯದಿಂದ ದೈವಧೀನರಾಗಿದ್ದಾರೆ ಎಂದು ಪುತ್ರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೆಚ್ ಮೋಹನ್ ಅವರು ತಿಳಿಸಿದ್ದಾರೆ.
ಅಂತ್ಯಕ್ರಿಯೆಯನ್ನು ನಾಳೆ (ಸೋಮವಾರ) ಮಧ್ಯಾಹ್ನ 4:00 ಗಂಟೆಗೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆ ಮುಕ್ತಿದಾಮದಲ್ಲಿ ನೆರವೇರಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
-
ಅಂಕಣ5 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ4 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ2 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ7 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ

