Connect with us

ರಾಜಕೀಯ

ದೇವೇಗೌಡರ ಅರೋಪ , “ಐ ಡೋಂಟ್ ಕೇರ್” ಅಂದ್ರು ಸಿದ್ದರಾಮಯ್ಯ : ಸುದ್ದಿಗೋಷ್ಠಿಯ ಡೀಟೇಲ್ಸ್ ಇಲ್ಲಿದೆ ಓದಿ..!

Published

on

  • ಹೆಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಆರೋಪಿಸಿರುವ ಹಿನ್ನೆಲೆಯಲ್ಲಿ ‌ಮಾಜಿ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಶುಕ್ರವಾರ (ಇಂದು) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಿದ್ದರಾಮಯ್ಯರ ಮಾತುಗಳು ಈ ಕೆಳಗಿನಂತಿವೆ.

ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಎಚ್.ಡಿ.ದೇವೇಗೌಡರು ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ನನ್ನ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾರೆ. ಅವುಗಳಿಗೆ ಪ್ರತಿಕ್ರಿಯಿಸುವುದು ಬೇಡ ಎಂದು ಸುಮ್ಮನಿದ್ದೆ. ಆದರೆ ಇದು ಗಂಭೀರ ಸ್ವರೂಪದ ಆರೋಪಗಳಾಗಿರುವುದರಿಂದ ಮೌನಕ್ಕೆ ಬೇರೆ ಅರ್ಥ ಬರಬಹುದೆಂಬ ಕಾರಣಕ್ಕೆ ಕೆಲವು ವಿಷಯಗಳನ್ನು ಸಾರ್ವಜನಿಕರ ಗಮನಕ್ಕೆ ತರುವುದು ಅನಿವಾರ್ಯವಾಗಿದೆ.

ವರ್ತಮಾನದಲ್ಲಿ ನಮ್ಮ ದೊಡ್ಡ ಶತ್ರು ಕೋಮುವಾದಿ ಬಿಜೆಪಿ. ಅದು ಅಧಿಕಾರದ ಸೊಕ್ಕಿನಿಂದ ಜಾತ್ಯತೀತ ಶಕ್ತಿಗಳನ್ನು ನಾಶ ಮಾಡಲು ಹೊರಟಿರುವ ಈ ಹೊತ್ತಿನಲ್ಲಿ ಜಾತ್ಯತೀತ ಶಕ್ತಿಗಳೆಲ್ಲ ಒಗ್ಗಟ್ಟಿನಿಂದ ಎದುರಿಸಬೇಕು ಎನ್ನುವುದು ನನ್ನ ನಿಲುವು ಕೂಡಾ. ಆದರೆ ಜಾತ್ಯತೀತರೆಂದು ಹೇಳಿಕೊಳ್ಳುವವರು ಪರೋಕ್ಷವಾಗಿ ಕೋಮುವಾದಿ ಶಕ್ತಿಗಳಿಗೆ ನೆರವಾಗುತ್ತಿರುವ ಪ್ರಯತ್ನ ಮಾಡುತ್ತಿರುವಾಗ ಅದನ್ನು ಕೂಡಾ ನಾವು ಖಂಡಿಸಬೇಕಾಗುತ್ತದೆ, ಅವರ ಸಂಚುಗಳನ್ನು ಬಯಲುಮಾಡಬೇಕಾಗುತ್ತದೆ.

ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾನು ಕಾರಣ ಎಂದು ದೇವೇಗೌಡರು ಆರೋಪಿಸಿದ್ದಾರೆ. ಈ ರೀತಿಯ ಆರೋಪಗಳಿಂದ ಯಾರಿಗೆ, ಯಾವ ಪಕ್ಷಕ್ಕೆ ಖುಷಿಯಾಗುತ್ತದೆ ಎನ್ನುವುದು ಸಾಮಾನ್ಯ ಮನುಷ್ಯರಿಗೂ ತಿಳಿಯುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನ್ನ ವಿರೋಧಿಗಳನ್ನು ಹತ್ತಿಕ್ಕಲು ಮಾಡುತ್ತಿರುವ ಪ್ರಯತ್ನಗಳನ್ನು ಕಂಡು ದೇವೇಗೌಡರು ಹೆದರಿರುವಂತೆ ಕಾಣಿಸುತ್ತಿದೆ. ಇದಕ್ಕಾಗಿ ಅವರನ್ನು ಖುಷಿಪಡಿಸಲು ನನ್ನ ಮೇಲೆ ಈ ರೀತಿಯ ಆಧಾರರಹಿತ ಆರೋಪ ಮಾಡಿದ್ದಾರೆ ಎನ್ನುವುದು ಸ್ಪಷ್ಷವಾಗುತ್ತದೆ.

ಕಳೆದ ಐದು ವರ್ಷಗಳಲ್ಲಿ ಬಿಜೆಪಿ ತನ್ನ ನಿಯಂತ್ರಣದಲ್ಲಿರುವ ಸಿಬಿಐ,ಇಡಿ ಮತ್ತು ಐಟಿ ಇಲಾಖೆಗಳನ್ನು ಛೂಬಿಟ್ಟು ವಿರೋಧ ಪಕ್ಷಗಳ ನಾಯಕರನ್ನು ಬೆದರಿಸುವ ಪ್ರಯತ್ನ ಮಾಡುತ್ತಾ ಬಂದಿರುವುದನ್ನು ದೇಶ ಕಂಡಿದೆ. ಇತ್ತೀಚೆಗೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲದ ಪೋನ್ ಕದ್ದಾಲಿಕೆಯನ್ನು ಸಿಬಿಐಗೆ ಒಪ್ಪಿಸುವ ನಿರ್ಧಾರ ಪ್ರಕಟಿಸಿದ ಕೂಡಲೇ ಗೌಡರು ಯಾಕೋ ಚಿಂತಾಕ್ರಾಂತರಾದಂತೆ ಕಾಣಿಸುತ್ತಿದೆ. ಯಡಿಯೂರಪ್ಪನವರು ದೆಹಲಿಗೆ ಹೋಗಿ ಬಂದಮರುದಿನವೇ ಪೋನ್ ಕದ್ದಾಲಿಕೆಯನ್ನು ಸಿಬಿಐಗೆ ಒಪ್ಪಿಸುತ್ತಿದ್ದೇವೆ ಎಂದು ಪ್ರಕಟಿಸಿದ ನಂತರವೂ, ಗೌಡರಿಗೆ ಮಾತ್ರ ಈ ನಿರ್ಧಾರದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕೈವಾಡ ಕಾಣಿಸುತ್ತಿಲ್ಲವಂತೆ. ಗೌಡರು ಯಾರನ್ನು ಖುಷಿಪಡಿಸಲು ಈ ರೀತಿ ಅಮಾಯಕರಂತೆ ಮಾತನಾಡುತ್ತಿದ್ದಾರೆ?

ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿ ನಾನು ವಿರೋಧಪಕ್ಷ ನಾಯಕರಾಗುವ ಉದ್ದೇಶದಿಂದ ಸಮ್ಮಿಶ್ರ ಸರ್ಕಾರವನ್ನು ನಾನು ಉರುಳಿಸಿದೆ ಎಂದು ಗೌಡರು ಆರೋಪಿಸಿದ್ದಾರೆ. ತಾವು ಮುಖ್ಯಮಂತ್ರಿಯಾಗಲು ಒಂದು ಸರ್ಕಾರವನ್ನು ಉರುಳಿಸುವುದನ್ನು ನಾವು-ನೀವೆಲ್ಲ ಕೇಳಿದ್ದೇವೆ. ಆದರೆ ವಿರೋಧ ಪಕ್ಷದ ನಾಯಕನಾಗಲು ಸರ್ಕಾರವನ್ನು ಉರುಳಿಸುವುದನ್ನು ನಾನೆಂದೂ ಕೇಳಿಲ್ಲ. ಇಂತಹದ್ದೊಂದು ಕಲ್ಪನಾ ವಿಲಾಸದಲ್ಲಿ ತೇಲಾಡುವಂತೆ ಮಾಡಲು ದೇವೇಗೌಡರಿಂದ ಮಾತ್ರ ಸಾಧ್ಯ. ಗೌಡರ ಎಲ್ಲ ಆರೋಪಗಳಿಗೆ ಉತ್ತರಿಸಲು ನಾನು ಹೋಗುವುದಿಲ್ಲ. ಆದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವುದು ನನ್ನ ಉದ್ದೇಶವಾಗಿತ್ತು ಎಂಬ ಕಪೋಲಕಲ್ಪಿತ, ನಿರಾಧಾರವಾದ ಆರೋಪದ ಬಗ್ಗೆ ಪ್ರತಿಕ್ರಿಯಿಸಲೇಬೇಕಾಗಿದೆ.

ಸಮ್ಮಿಶ್ರ ಸರ್ಕಾರದ ಪತನಕ್ಕೆ ಎಚ್.ಡಿ.ದೇವೇಗೌಡರು ಮತ್ತು ಅವರ ಆದೇಶದಂತೆಯೇ ಕೆಲಸ ಮಾಡುತ್ತಿದ್ದ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಕಾರಣ. ಜೆಡಿಎಸ್ ಜೊತೆ ಮೈತ್ರಿಗೆ ನನ್ನ ಸಹಮತ ಇರಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಯಾಕೆಂದರೆ ದೇವೇಗೌಡರ ರಾಜಕೀಯದ ಆಟಗಳನ್ನೆಲ್ಲ ನೋಡಿ ಅನುಭವಿಸಿದವನು ನಾನು. ನನ್ನಂತೆಯೇ ಬಹುತೇಕ ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ಜೊತೆ ಮೈತ್ರಿ ಅಷ್ಟೊಂದು ಇಷ್ಟ ಇರಲಿಲ್ಲ. ಆದರೆ ಪಕ್ಷದ ಹೈಕಮಾಂಡ್ ಆದೇಶಕ್ಕೆ ಶಿರಬಾಗಿ ನಾವು ಒಪ್ಪಿಕೊಂಡೆವು. ಕುಮಾರಸ್ವಾಮಿ ಸರ್ಕಾರಕ್ಕೆ ಸಂಪೂರ್ಣ ಸಹಕಾರವನ್ನೂ ನೀಡಿದೆವು. ಸರ್ಕಾರಕ್ಕೆ ಯಾವುದಾದರೂ ರೀತಿಯ ಕಿರುಕುಳ ನೀಡಿದ್ದಕ್ಕೆ ಒಂದೇ ಒಂದು ಉದಾಹರಣೆ ಅವರು ಕೊಡಲಿ. ಆದರೆ ಕುಮಾರಸ್ವಾಮಿಯವರು ನಮ್ಮೆಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾದರು. ಸಮನ್ವಯ ಸಮಿತಿಯಲ್ಲಿ ಕೈಗೊಂಡ ನಿರ್ಧಾರಗಳನ್ನು ಕೂಡಾ ಕುಮಾರಸ್ವಾಮಿ ಜಾರಿ ಮಾಡಲಿಲ್ಲ. ಮೈತ್ರಿ ಧರ್ಮಕ್ಕೆ ಕಟ್ಟುಬಿದ್ದು ನಾವು ಬಹಿರಂಗವಾಗಿ ಪ್ರತಿಕ್ರಿಯಿಸಲು ಹೋಗಲಿಲ್ಲ. ನಮ್ಮದೇ ಪಕ್ಷದಲ್ಲಿದ್ದ ಎಚ್.ವಿಶ್ವನಾಥ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಅವರ ಮೂಲಕ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿಸಿದರು. ಈಗ ಅದೇ ವಿಶ್ವನಾಥ್ ಅಪ್ಪ ಮತ್ತು ಮಕ್ಕಳ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ.

ಇವತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ ಅದಕ್ಕೆ ದೇವೇಗೌಡ ಮತ್ತು ಅವರ ಮಗ ಕುಮಾರಸ್ವಾಮಿಯವರು ಕೂಡಿ ಮಾಡಿದ್ದ ಕಪಟನಾಟಕವೇ ಮೂಲ ಕಾರಣ. ಕುಮಾರಸ್ವಾಮಿಯವರು ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ದ್ರೋಹ ಬಗೆದು ರಾತೋರಾತ್ರಿ ಜೆಡಿಎಸ್ ಶಾಸಕರ ಜೊತೆಗೂಡಿ ಹೋಗಿ ಬಿಜೆಪಿಗೆ ಶರಣಾದರಲ್ಲಾ, ಅದೇ ದಿನ ರಾಜ್ಯದಲ್ಲಿ ಬಿಜೆಪಿ ಒಂದು ಕಾಲು ಊರಿತ್ತು. ಆಗಲೂ ದೇವೇಗೌಡರು ತಮ್ಮ ಮಗನ ನಡವಳಿಕೆಯನ್ನು ದೂರಲಿಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡಿದ್ದರು. ಆಗಲೂ ಮಾಧ್ಯಮದವರ ಮುಂದೆ ಬಂದು ಮಗ ನನ್ನ ಮಾತು ಕೇಳಲಿಲ್ಲ ಎಂದು ಬಹಿರಂಗವಾಗಿ ಕಣ್ಣೀರು ಹಾಕಿದ್ದರು. ಒಳಗಿಂದೊಳಗೆ ಕುಮಾರಸ್ವಾಮಿಯವರಿಗೆ ಎಲ್ಲ ರೀತಿಯ ಬೆಂಬಲ ನೀಡಿದ್ದರು.

ಬೆಂಬಲಿಸಿದ ಪಕ್ಷಕ್ಕೆ ದ್ರೋಹ ಬಗೆಯುವುದು ದೇವೇಗೌಡ ಮತ್ತು ಕುಮಾರಸ್ವಾಮಿಯವರ ಹುಟ್ಟುಗುಣ. ರಾಮಕೃಷ್ಣ ಹೆಗಡೆಯವರನ್ನು ಹಣಿಯಲು ಯತ್ನಿಸಿದವರು ಯಾರು? ತಾನೇ ಮುಖ್ಯಮಂತ್ರಿ ಮಾಡಿದ ಜೆ.ಎಚ್.ಪಟೇಲ್ ಅವರಿಗೆ ಕಿರುಕುಳ ಕೊಟ್ಟವರು ಯಾರು? ಎಸ್.ಆರ್.ಬೊಮ್ಮಾಯಿ ಸರ್ಕಾರವನ್ನು ಉರುಳಿಸಿದವರು ಯಾರು? 20-20 ತಿಂಗಳ ಅಧಿಕಾರ ಹಂಚಿಕೆಯ ಒಪ್ಪಂದ ಮಾಡಿಕೊಂಡ ಎಚ್ .ಡಿ. ಕುಮಾರಸ್ವಾಮಿ, ತನ್ನ ಅಧಿಕಾರವಧಿ ಮುಗಿದ ನಂತರ ವಚನ ಪಾಲನೆ ಮಾಡದೆ ದ್ರೋಹ ಬಗೆದರು. ಆಗ ಮಗನನ್ನು ವಚನಭ್ರಷ್ಟರಾಗಿ ಮಾಡಿದವರು ಇದೇ ದೇವೇಗೌಡರು. ಆ ವಚನಭ್ರಷ್ಟತೆಯ ಒಂದೇ ಕಾರಣಕ್ಕಾಗಿ ಸಿಡಿದೆದ್ದ ರಾಜ್ಯದ ಜನ ಯಡಿಯೂರಪ್ಪನವರನ್ನು ಬೆಂಬಲಿಸಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದರು. ರಾಜ್ಯದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲು ಮತ್ತು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಕಾರಣಕರ್ತರಾದ ದೇವೇಗೌಡರು ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ, ನರೇಂದ್ರಮೋದಿಯವರು ಮತ್ತೆ ಪ್ರಧಾನಿಯಾಗಿದ್ದಾರೆ, ಕೋಮುವಾದಿ ಪಕ್ಷ ಮತ್ತೆ ಅಧಿಕಾರ ಹಿಡಿದಿದೆ ಎನ್ನುವುದಕ್ಕೆ ದೇವೇಗೌಡರಿಗೆ ಬೇಸರ ಇಲ್ಲ. ಅವರ ಚಿಂತೆ ತಮ್ಮ ಮತ್ತು ತಮ್ಮ ಮೊಮ್ಮಗನ ಸೋಲು ಮಾತ್ರ. ಸೋತಿರುವುದು ದೇವೇಗೌಡ ಮತ್ತು ನಿಖಿಲ್ ಕುಮಾರಸ್ವಾಮಿ ಮಾತ್ರವಲ್ಲ. ರಾಜ್ಯದ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಸೋತಿದ್ದಾರೆ. ಆ ಎಲ್ಲ ಅಭ್ಯರ್ಥಿಗಳ ಸೋಲು ಗೌಡರನ್ನು ಕಾಡುವುದಿಲ್ಲ. ಜೆಡಿಎಸ್ ಪಕ್ಷದ ಮತದಾರರಿರುವ ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಯಾರು ಕಾರಣ? ಅಲ್ಲಿನ ಜೆಡಿಎಸ್ ಮತದಾರರೆಲ್ಲ ಈ ಬಾರಿ ಯಾರಿಗೆ ಮತ ಹಾಕಿದ್ದಾರೆ? ಅವರೆಲ್ಲ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಹೇಳಿದವರು ಯಾರು? ಈ ಪ್ರಶ್ನೆಗಳಿಗೂ ಗೌಡರು ಉತ್ತರ ನೀಡಬೇಕಲ್ಲಾ?

ಮೊದಲ ಒಪ್ಪಂದದ ಪ್ರಕಾರ ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಬೇಕಿತ್ತು. ಯಾಕೆ ಅಲ್ಲಿಂದ ಹೋಗಿ ತುಮಕೂರಿನಲ್ಲಿ ಸ್ಪರ್ಧಿಸಿದರು? ತಮ್ಮ ಪಕ್ಷಕ್ಕೆ ಎಂಟು ಕ್ಷೇತ್ರಗಳು ಬೇಕೇಬೇಕು ಎಂದು ಹಠ ಹಿಡಿದಿದ್ದು ತಾವು ಗೆಲ್ಲಲ್ಲಿಕ್ಕೋ? ಇಲ್ಲವೇ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿಕ್ಕೋ? ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಗೆ ನೆಟ್ಟಗೆ ಪಕ್ಷದ ಕಚೇರಿ ಇಲ್ಲ, ಅಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಪಕ್ಷಾಂತರ ಮಾಡಿಸಿ ಟಿಕೆಟ್ ಕೊಟ್ಟದ್ದು ತಮ್ಮ ಪಕ್ಷ ಗೆಲ್ಲಲ್ಲಿಕ್ಕೋ? ಇಲ್ಲವೇ ಶೋಭಾ ಕರಂದ್ಲಾಜೆಯವರನ್ನು ಗೆಲ್ಲಿಸಲಿಕ್ಕೋ? ಕಾರವಾರ, ವಿಜಯಪುರ ಕ್ಷೇತ್ರಗಳಲ್ಲಿ ತಮ್ಮ ಪಕ್ಷಕ್ಕೆ ಯಾವುದೇ ನೆಲೆ ಇಲ್ಲದೆ ಇದ್ದರೂ ದುರ್ಬಲ ಅಭ್ಯರ್ಥಿಗಳನ್ನು ಹಾಕಿ ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಟ್ಟಿದ್ದು ಯಾರು?
ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆಂದು ತಮ್ಮ ಆತ್ಮ ಮುಟ್ಟಿಕೊಂಡು ಹೇಳಲಿ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಲ್ಲ ಎಂದು ಜಿ.ಟಿ.ದೇವೇಗೌಡರು ಬಹಿರಂಗವಾಗಿ ಹೇಳಿದ್ದಾರಲ್ಲಾ? ದೇವೇಗೌಡರು ಯಾರ ವಿರುದ್ಧ ಕ್ರಮ ಕೈಗೊಂಡಿದ್ದಾರೆ?

ನಾನು ಜೆಡಿಎಸ್ ಪಕ್ಷದಲ್ಲಿದ್ದವನು, ದೇವೇಗೌಡರ ರಾಜಕೀಯವನ್ನು ಹತ್ತಿರದಿಂದ ನೋಡಿದವನು. ಅವರ ನಡೆ-ನುಡಿಗಳನ್ನು, ಸಂಚು-ಹುನ್ನಾರಗಳನ್ನು ನನಗಿಂತ ಚೆನ್ನಾಗಿ ಉಳಿದವರು ಅರ್ಥಮಾಡಿಕೊಳ್ಳಲಾರರು. ಲೋಕಸಭಾ ಚುನಾವಣೆಯಲ್ಲಿ ಹೀಗೆಯೇ ಆಗುತ್ತೆ ಎಂದು ನನಗೆ ಗೊತ್ತಿತ್ತು. ಆದರೆ ಪಕ್ಷದ ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಬೇಕಾಯಿತು. ಈ ಫಲಿತಾಂಶದ ನಿರೀಕ್ಷೆ ಇತ್ತು.

ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ನಾನು ಜೆಡಿಎಸ್ ವಿರುದ್ಧ ದೇವೇಗೌಡರ ವಿರುದ್ಧ ಮಾತನಾಡಿದ್ದೇನೆ, ರಾಹುಲ್ ಗಾಂಧಿಯವರಿಂದಲೂ ಮಾತನಾಡಿಸಿದ್ದೇನೆ ಎಂದು ದೇವೇಗೌಡರು ಆರೋಪ ಮಾಡಿದ್ದಾರೆ. ಆ ಚುನಾವಣೆಯಲ್ಲಿ ದೇವೇಗೌಡರು, ಕುಮಾರಸ್ವಾಮಿಯವರು ಕಾಂಗ್ರೆಸ್ ಪರವಾಗಿ ಮಾತನಾಡಿದ್ದಾರೆಯೇ? ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಎದುರಾಳಿಯೇ ಜೆಡಿಎಸ್. ಚುನಾವಣಾ ಪ್ರಚಾರದ ಕಾಲದಲ್ಲಿ ಜೆಡಿಎಸ್ ವಿರುದ್ದ ಮಾತನಾಡದೆ ಮತ್ತೆ ಯಾರ ವಿರುದ್ಧ ಮಾತನಾಡಬೇಕು?

ನಾನು ಒಕ್ಕಲಿಗ ವಿರೋಧಿ ಎಂಬಂತೆ ದೇವೇಗೌಡರು ಮತ್ತು ಅವರ ಕುಟುಂಬ ಅಪಪ್ರಚಾರ ಮಾಡುತ್ತಾ ಬಂದಿದೆ. ನಾನು ಒಕ್ಕಲಿಗ ಸಮುದಾಯದ ವಿರೋಧಿ ಅಲ್ಲ. ಜೆಡಿಎಸ್ ನಲ್ಲಿ ಒಕ್ಕಲಿಗ ನಾಯಕರ ಜೊತೆಯಲ್ಲಿಯೇ ರಾಜಕೀಯ ಮಾಡುತ್ತಾ ಬಂದವನು. ಈಗಲೂ ನನ್ನ ಬಹಳಷ್ಟು ಸ್ನೇಹಿತರು ಒಕ್ಕಲಿಗ ಸಮುದಾಯವರೇ ಆಗಿದ್ದಾರೆ. ದೇವೇಗೌಡರು ನನ್ನನ್ನು ಜೆಡಿಎಸ್ ನಿಂದ ಉಚ್ಚಾಟನೆ ಮಾಡಿದ ನಂತರ ಆ ಪಕ್ಷವನ್ನು ವಿರೋಧಿಸುತ್ತಾ ಬಂದಿದ್ದೇನೆ. ಜೆಡಿಎಸ್ ಎನ್ನುವುದು ಒಕ್ಕಲಿಗರ ಪಕ್ಷವೇ? ಜೆಡಿಎಸ್ ವಿರೋಧಿಸಿದರೆ, ದೇವೇಗೌಡರನ್ನು ವಿರೋಧಿಸಿದರೆ ನಾನು ಹೇಗೆ ಒಕ್ಕಲಿಗ ವಿರೋಧಿಯಾಗುತ್ತೇನೆ?
ತಮ್ಮ ವಿರೋಧಿಗಳನ್ನು ಒಕ್ಕಲಿಗ ವಿರೋಧಿ ಎಂದು ಸುಳ್ಳು ಆರೋಪ ಮಾಡುವ ದೇವೇಗೌಡರು ತಮ್ಮ ಮಕ್ಕಳನ್ನು ಹೊರತುಪಡಿಸಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ? ದೇವೇಗೌಡರು ರಾಜಕೀಯವಾಗಿ ನಾಶಮಾಡಿದವರ ಪಟ್ಟಿಯಲ್ಲಿ ಶೇಕಡಾ 90ರಷ್ಟು ಮಂದಿ ಒಕ್ಕಲಿಗರೇ ಆಗಿದ್ದಾರೆ. ಇದಕ್ಕೆಲ್ಲ ಗೌಡರು ಉತ್ತರ ಕೊಡುವುದಿಲ್ಲ. ಹೆಚ್ಚಿನ ಮಾಹಿತಿಬೇಕಾದರೆ ಈಗ ಬಿಜೆಪಿಯಲ್ಲಿರುವ ಬಚ್ಚೇಗೌಡರನ್ನು ಕೇಳಿ, ಅವರು ವಿವರವಾಗಿ ಹೇಳ್ತಾರೆ.
ಒಕ್ಕಲಿಗರಲ್ಲಿ ಯಾರಾದರೂ ಮುಖ್ಯಮಂತ್ರಿಯಾಗಿದ್ದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ ಅವರಿಂದ ಹಿಡಿದು ಈಗಿನ ಡಿ.ಕೆ.ಶಿವಕುಮಾರ್, ಕೃಷ್ಣಬೈರೇಗೌಡರ ವರೆಗೆ ಒಕ್ಕಲಿಗ ನಾಯಕರಿಗೆ ಅವಕಾಶ ನೀಡಿ ಬೆಳೆಸಿದ್ದು ಕಾಂಗ್ರೆಸ್ ಪಕ್ಷ. ದೇವೇಗೌಡರು ತಮ್ಮ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ?

1996ರಲ್ಲಿ, 2004ರಲ್ಲಿ ಏನಾಯಿತು ಎನ್ನುವುದನ್ನು ಹಿಂದೆ ಬಹಳಷ್ಟು ಬಾರಿ ಹೇಳಿದ್ದೇನೆ. ನಾನು ಮುಖ್ಯಮಂತ್ರಿಯಾಗದಂತೆ ಮಾಡಲು ದೇವೇಗೌಡರು ಮತ್ತು ಕುಮಾರ ಸ್ವಾಮಿಯವರು ಏನೆಲ್ಲಾ ಮಾಡಿದರು ಎನ್ನುವುದು ರಾಜ್ಯದ ಜನರಿಗೆ ತಿಳಿದಿದೆ. ವಿಧಾನಸಭೆಯಲ್ಲಿಯೇ ಈ ಬಗ್ಗೆ ಮಾತನಾಡಿದ್ದೇನೆ, ಕುಮಾರಸ್ವಾಮಿವಯರೇ ಇದನ್ನೆಲ್ಲ ಒಪ್ಪಿಕೊಂಡಿದ್ದಾರೆ. ಇದು ವಿಧಾನಸಭೆಯ ದಾಖಲೆಯಲ್ಲಿಯೇ ಇದೆ. ಈಗ ದೇವೇಗೌಡರು ಇದ್ದಕ್ಕಿದ್ದ ಹಾಗೆ ನನ್ನ ಮೇಲೆ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡಲು ಕಾರಣಗಳೇನು ಎನ್ನುವುದು ತಿಳಿಯದಷ್ಟು ನಾನು ದಡ್ಡನಲ್ಲ. ಇದರ ಹಿಂದೆ ಗೌಡರ ಜೊತೆ ಯಾರೆಲ್ಲ ಷಾಮೀಲಾಗಿದ್ದಾರೆ ಎನ್ನುವುದು ತಿಳಿದಿದೆ. ಅದಕ್ಕೆಲ್ಲ ಮುಂದೆ ಉತ್ತರ ಕೊಡ್ತೇನೆ.

ನಾನೇನಾದರೂ ವಿರೋಧಪಕ್ಷದ ನಾಯಕನಾಗಿಬಿಟ್ಟರೆ ಹೇಗೆ ಎಂಬ ಚಿಂತೆ ಕಾಡುತ್ತಿರುವ ಕಾರಣಕ್ಕಾಗಿಯೇ ದೇವೇಗೌಡರು ಈಗ ಹೊಸ ನಾಟಕ ಶುರು ಮಾಡಿದ್ದಾರೆ. ಈ ಹೊಸ ನಾಟಕದ ಮೂಲ ಉದ್ದೇಶವೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಶಮಾಡಿ, ಆ ಸ್ಥಾನದಲ್ಲಿ ತಮ್ಮ ಪಕ್ಷವನ್ನು ಬೆಳೆಸುವುದು. ಇದೆಲ್ಲ ದೇವೇಗೌಡರಿಗೆ ಹೊಸದೇನಲ್ಲ. ಪ್ರಧಾನಿ ಮಾಡಲು ಬೆಂಬಲಿಸಿದ ಪಕ್ಷಕ್ಕೆ ದ್ರೋಹ ಬಗೆದವರು ದೇವೇಗೌಡರು. ಆಗಿನ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸರಿಯವರ ವಿರುದ್ಧದ ಹಳೆಪ್ರಕರಣವನ್ನು ಹುಡುಕಿ ಅವರನ್ನೇ ಜೈಲಿಗೆ ಕಳುಹಿಸುವ ಸಂಚು ಮಾಡಿದವರು ದೇವೇಗೌಡರು. ಆದ್ದರಿಂದ ನಂಬಿದವರಿಗೆ ಕೈಕೊಡುವುದು, ವಿರೋಧಿಗಳ ಮೇಲೆ ಸುಳ್ಳು ಆರೋಪ ಮಾಡುವುದು, ರಾಜಕೀಯ ಲಾಭಕ್ಕಾಗಿ, ಅನುಕಂಪ ಗಿಟ್ಟಿಸಿಕೊಳ್ಳಲು ಅಳುವುದು, ಕೊರಗುವುದು ಇವೆಲ್ಲ ದೇವೇಗೌಡರ ಹಳೆ ಗಿಮಿಕ್ ಗಳು. ಇದನ್ನೆಲ್ಲ ರಾಜ್ಯದ ಜನ ನೋಡುತ್ತಾ ಬಂದಿದ್ದಾರೆ.

ಹಿಂದೆ – ಮುಂದೆ ರಾಜಕೀಯ ಮಾಡುವ ಅಭ್ಯಾಸ ನನಗಿಲ್ಲ. ನೇರ ರಾಜಕಾರಣ ಮಾಡುತ್ತೇನೆ. ತಾತ, ಮೊಮ್ಮಕ್ಕಳು ಸೇರಿ ಇಡೀ ಕುಟುಂಬವೇ ಚುನಾವಣೆಗೆ ನಿಂತಿದ್ದರಿಂದ ಅವರು ಸೋತಿದ್ದು. ಈಗ ನನ್ನ ಮೇಲೆ ಸುಮ್ಮನೆ ಗೂಬೆ ಕೂರಿಸುತ್ತಿದ್ದಾರೆ. ಲಿಂಗಾಯತ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ ಹೀಗೆ ನನ್ನನ್ನು ತಪ್ಪಾಗಿ ಬಿಂಬಿಸಿದ್ದೆ ಹೆಚ್ಚು. 5 ವರ್ಷದ ನನ್ನ ಕಾರ್ಯಕ್ರಮ ಎಲ್ಲ ಜಾತಿ, ಧರ್ಮಗಳನ್ನು ಮೀರಿ ವಿಸ್ತರಿಸಿದೆ. ನನಗೆ ಸರ್ಟಿಫಿಕೇಟ್ ಕೊಡುವುದು ಜನರೇ ಹೊರತು, ದೇವೇಗೌಡರಲ್ಲ.
ಬಿಜೆಪಿಯನ್ನು ಮೆಚ್ಚಿಸಲು ದೇವೇಗೌಡರು ನನ್ನ ಮೇಲೆ ಸುಳ್ಳು ಆರೋಪ ಮಾಡಿರಬಹುದು.

ಐ ಡೋಂಟ್ ಕೇರ್!!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

AI ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಪ್ರಕಟ

Published

on

ಸುದ್ದಿದಿನಡೆಸ್ಕ್:ಕೃತಕ ಬುದ್ಧಿಮತ್ತೆ ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಟೈಮ್ ಪತ್ರಿಕೆ ಪ್ರಕಟಿಸಿದ್ದು, ಅದರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸ್ಥಾನ ಪಡೆದಿದ್ದಾರೆ.

ಅಶ್ವಿನಿ ವೈಷ್ಣವ್ ಅವರನ್ನು ಶಾರ್ಪರ್ ವರ್ಗದಲ್ಲಿ ಹೆಸರಿಸಲಾಗಿದ್ದು, ಅವರ ನಾಯಕತ್ವದಲ್ಲಿ ಮುಂದಿನ 5 ವರ್ಷಗಳಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರದ ಮೊದಲ 5 ದೇಶಗಳಲ್ಲಿ ಭಾರತ ಸ್ಥಾನ ಪಡೆಯುವ ಆಶಯದಲ್ಲಿದೆ ಎಂದು ಟೈಮ್ ಮ್ಯಾಗ್‌ಜೀನ್ ಬರೆದಿದೆ.

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿಸುವ ಪ್ರಯತ್ನದಲ್ಲಿ ಸಚಿವರು ನಿರ್ವಹಿಸಿದ ಮಹತ್ವದ ಪಾತ್ರದ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಅವರ ಹೆಸರು ನಮೂದಿತವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ ನೀಡಿದ ಇನ್ಫೋಸೀಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಸಿಇಓಗಳಾದ ಗೂಗಲ್‌ನ ಸುಂದರ್ ಪಿಚಾಯಿ, ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲಾ, ಓಪನ್‌ಎಐ ನ ಸ್ಯಾಮ್ ಅಲ್ಟ್‌ಮನ್, ಮೆಟಾದ ಮಾರ್ಕ್ ಝುಕೇರ್‌ಬರ್ಗ್ ಟೈಮ್ ಪ್ರಕಟಿಸಿದ ಪಟ್ಟಿಯಲ್ಲಿ ಸೇರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಜಧಾನಿಯಲ್ಲಿ ಅಪಾಯಕಾರಿ ಮರಗಳನ್ನು ಕತ್ತರಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ರಾಜಧಾನಿ ಬೆಂಗಳೂರಿನಲ್ಲಿ 15 ದಿನದೊಳಗೆ ಗುಂಡಿ ಮುಚ್ಚುವಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಸೂಚಿಸಿದ್ದಾರೆ.

ವಿದೇಶ ಪ್ರವಾಸಕ್ಕೂ ಮುನ್ನ ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಂದು ಸಭೆ ನಡೆಸಿದ ಅವರು ಸರಿಯಾಗಿ ಕಾರ್ಯನಿವಹಿಸದ ಅಧಿಕಾರಿಗಳನ್ನು ಅಮಾನತುಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ಸೆಪ್ಟಂಬರ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ತಿಳಿಸಿದ ಅವರು, ಅಪಾಯಕಾರಿ ಮರಗಳಿದ್ದರೆ, ಕತ್ತರಿಸುವಂತೆ ಸೂಚಿಸಿದ್ದಾರೆ.

ಯಾವುದೇ ದೂರು ಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮೌನೀಶ್ ಮೌದ್ಗೀಲ್, ಬಿಎಂಆರ್ಡಿಎ ಆಯುಕ್ತ, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಹದಾಯಿ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ಮಹದಾಯಿ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆಯ ಹಿನ್ನಡೆಗೆ ಕಾಂಗ್ರೆಸ್ ಕಾರಣ ಎಂದು ದೂರಿದ್ದಾರೆ. ಜುಲೈನಲ್ಲಿ ನಡೆದ ಸಭೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ ಅವರು, ರಾಜ್ಯದ ಜನರ ಹಿತ ಕಾಪಾಡಲು ಬದ್ಧ ಎಂದು ಹೇಳಿದ್ದಾರೆ. ಮಹದಾಯಿ ಕೇವಲ ಗೋವಾ ಸಂಬಂಧಿ ಯೋಜನೆ ಅಲ್ಲ. ಅಲ್ಲಿ ಹುಲಿ ಸಂರಕ್ಷಿತ ಪ್ರದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending