ಅಂತರಂಗ
ರಾಜಶೇಖರ್ ಜತೆ ಒಂದು ದಿನ
- ರಹಮತ್ ತರೀಕೆರೆ, ಚಿಂತಕರು
ಖುಶವಂತ ಸಿಂಗರ `ಟ್ರೈನ್ ಟು ಪಾಕಿಸ್ತಾನ್’ ಕೃತಿ ಕುರಿತ ಸಂವಾದ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ಹೋದವನು, ಮಾರನೇ ದಿನ ಜಿ. ರಾಜಶೇಖರ್ ಅವರ ಮನೆಗೆ ಹೋದೆ. ಭೇಟಿಯ ನೆಪದಲ್ಲಿ ಅವರ ಸಂದರ್ಶನವನ್ನೂ ಮಾಡಬೇಕಿತ್ತು. ನಮ್ಮಿಬ್ಬರ ಭೇಟಿಗೆ ಗೆಳೆಯರಾದ ಫಣಿರಾಜ್ ಹಾಗೂ ಸಂವರ್ತ ಸಾಹಿಲ್, ಪೂರ್ವಭಾವಿ ಭೂಮಿಕೆ ಕಲ್ಪಿಸಿದ್ದರು. ನಾನು ಹೋದ ದಿನ ಉಡುಪಿಯಲ್ಲಿ ಆಗಸಕ್ಕೆ ಹುಚ್ಚು ಹಿಡಿದಂತೆ ಪ್ರಳಯಕಾಲದ ಮಳೆ. ಬಳ್ಳಾರಿಯ ಬಿಸಿಲಿನಿಂದ ಹೋಗಿದ್ದ ನಾನು ಥಂಡಿಗೆ ಥರಥರಿಸುತ್ತಿದ್ದೆ. ಆಟೊದಲ್ಲಿ ಇರುವಾಗಲೇ ಇರಿಸಲು ಬಡಿದು ಅರ್ಧ ಒದ್ದೆಯಾಗಿದ್ದೆ; ಆಟೊ ಇಳಿದು, ಗೇಟುತೆಗೆದು ಮನೆಬಾಗಿಲಿಗೆ ಹೋಗುವಷ್ಟರಲ್ಲಿ ಇನ್ನರ್ಧ ತೊಯ್ದುಹೋದೆ.
ರಾಜಶೇಖರ್ ಅವರ ಮನೆ, ಉಡುಪಿಯ ದಕ್ಷಿಣದಿಕ್ಕಿನ ಅಂಚಿನಲ್ಲಿರುವ ಕೊಳಂಬೆ ಪ್ರದೇಶದಲ್ಲಿದೆ; ನೀರು ಜುಳುಜುಳಿಸುವ ತೋಡುಗಳೂ ಹಸಿರುಹೊಮ್ಮಿಸುವ ಭತ್ತದ ಗದ್ದೆಗಳೂ ಕಂಗು-ತೆಂಗಿನ ತೋಟಗಳೂ ಅದನ್ನು ಸುತ್ತುವರೆದಿವೆ. ಹಾಡುಹಗಲೇ ಜೀರುಂಡೆಯ ಜೀಕಾರವೂ ನವಿಲಿನ ಪರಾಕೂ ಅಲ್ಲಿ ಕೇಳಿಸುತ್ತದೆ. ಕಾಂಪೌಂಡಿನ ಗೋಡೆಯ ಮೇಲೆ ಹಸಿರುಪಾಚಿ ಹಬ್ಬಿಕೊಂಡು ನಡುನಡುವೆ ಫರ್ನ್ ಸಸ್ಯಗಳು ಬೆಳೆದಿವೆ; ಇನ್ನು ಕಾಂಪೌಂಡಿನೊಳಗೆ ಬೆಳೆದಿದ್ದ ಹೂಗಿಡಗಳ ಹಳುವಿನಲ್ಲಂತೂ, ಒಂದು ಹುಲಿ ಆರಾಮಾಗಿ ಅಜ್ಞಾತವಾಸ ಮಾಡಬಹುದಿತ್ತು. ನಾನು ಸೋಜಿಗದಿಂದ ಅವನ್ನೆಲ್ಲ ನೋಡುವಾಗ, ರಾಜಶೇಖರ್ ಸಂಕೋಚ ಬೆರೆತ ಅಭಿಮಾನದಿಂದ “ಇದು ಆರ್ಡರ್ ಇನ್ ಡಿಸ್ಆ ರ್ಡರ್” ಎಂದು ವರ್ಣಿಸಿದರು.
ಅದೊಂದು ಚಿಕ್ಕಮನೆ; ಹಾಲಿನ ಮೂಲೆಯಲ್ಲಿ ಮೇಜು; ಬಗಲಿಗೇ ಒಟ್ಟಿದ ಪುಸ್ತಕರಾಶಿ. ಇನ್ನೊಂದು ಮೂಲೆಯ ಗೂಡಿನಲ್ಲಿ ಆಂಜನೇಯನ ಚಿತ್ರಪಟ. ಅದರ ಮುಂದೆ ಅವರ ಹೆಂಡತಿ ಸುಮತಿ, ಪೂಜೆ ಮಾಡಿದ ಕುರುಹು. ಅದನ್ನು ನೋಡುತ್ತ ನನಗೆ ಕಾರಂತರ`ಅಳಿದಮೇಲೆ’ ನೆನಪಾಯಿತು. ಅದು ರಾಜಶೇಖರ್ ಬಹಳ ಆಸ್ಥೆಯಿಂದ ಮತ್ತೆಮತ್ತೆ ವಿಶ್ಲೇಷಣೆ ಮಾಡಿರುವ ಕಾದಂಬರಿ. ‘ನಾವು ವೈಯಕ್ತಿಕವಾಗಿ ನಾಸ್ತಿಕರಾಗಿರಬಹುದು. ಆದರೆ ಇಂಟಿಗ್ರಿಟಿಯುಳ್ಳ ಆಸ್ತಿಕರ ಶ್ರದ್ಧೆಯನ್ನು ಗೌರವಿಸುವುದು ಒಂದು ದೊಡ್ಡಮೌಲ್ಯ’ ಎಂದು ಪ್ರತಿಪಾದಿಸುವ ಕೃತಿ.
ನಮ್ಮ ಮಾತುಕತೆಯದ್ದಕ್ಕೂ ಸೋನೆ ಶೃತಿ ಹಿಡಿದಿತ್ತು. ಸುಮತಿಯವರು ನನಗೆ ಬಿಸಿಬಿಸಿ ಅನ್ನ ಸಾರು, ಹುರಿದ ಹಪ್ಪಳ, ಕುಂದಾಪುರ ಕಡೆಯ ಉಪ್ಪಿನಕಾಯಿಯ ಊಟ ಬಡಿಸಿದರು; ನಡುನಡುವೆ ರಾಜಶೇಖರ್ `ನಮ್ಮನೇಲಿ ಯಾರಿಗೂ ಒಳ್ಳೇ ಟೀ ಮಾಡೋಕೆ ಬರೋಲ್ಲಾರಿ; ನಾನೇ ಮಾಡಬೇಕು. ಅಣ್ಣನಿಗೆ (ಮಗ ವಿಷ್ಣುವಿಗೆ ಅವರು ಕರೆಯುವುದು ಹಾಗೆ.) ಈಗ ಟೀಬೇಕು’ ಎಂದು ಎದ್ದುಹೋಗಿ, ಕೈಯಾರೆ ಟೀಮಾಡಿ ತರುತ್ತಿದ್ದರು; ಅವರ ಕೈಚಹ ಕುಡಿಯಲು `ಅಪ್ಪ ಟೀ ಚೆಂದ ಮಾಡ್ತಾರೆ’ ಎಂದು ವಿಷ್ಣು ಕಣ್ಣುಮಿಟುಕಿಸಿ ಪುಸಲಾಯಿಸುತ್ತಿದ್ದರು.
ನಾನು ರಾಜಶೇಖರ್ ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹತ್ತಾರು ಸಲ ಕಂಡಿದ್ದೇನೆ. ಯಾವಾಗಲೂ ಅವರ ಚಹರೆ ಸರಿಸುಮಾರು ಒಂದೇ ತರಹ; ಹೇಗೆಂದರೆ-ತುಸು ಬಿಗಿದುಕೊಂಡ ಮುಖ; ಹಳೇಮಾದರಿಯ ದಪ್ಪ ಫ್ರೇಮಿನ ಕನ್ನಡಕದೊಳಗೆ ತೀಕ್ಷ್ಣನೋಟ ಹರಿಸುವ ಗಾಬರಿಗೊಂಡಂತೆ ತೋರುವ ಕಣ್ಣು; ಸರಿಯಾಗಿ ಬಾಚದ ತಲೆಗೂದಲು; ಕಪ್ಪು ಚೌಕಳಿಯ ಶರ್ಟು. ಆರ್ಡರ್ ಇನ್ ಡಿಸಾರ್ಡರ್. ಹಾಲಿನ ಇನ್ನೊಂದು ಭಾಗದಲ್ಲಿ ಅವರು ಹೆಂಡತಿ ಜತೆ ತೆಗೆಸಿಕೊಂಡ ಎರಡು ಚಿತ್ರಪಟಗಳಿದ್ದವು. ಒಂದು-ಮದುವೆಯಾದ ಹೊಸತರಲ್ಲಿ ತೆಗೆಸುಕೊಂಡಿದ್ದು. ನಗುಮುಖದ ಯುವಕನ ಸೌಮ್ಯತೆ ಲಾಸ್ಯವಾಡುತ್ತಿದೆ. ಇನ್ನೊಂದು-ನಿವೃತ್ತಿಯ ದಿನ ತಾಂತ್ರಿಕ ಕಾರಣಕ್ಕೆ ತೆಗೆಸಿಕೊಂಡಿದ್ದಿರಬೇಕು- ನೆರಿಗೆ ಸಡಿಲಗೊಂಡಿರದ ಬಿಗುಮುಖ ಗುರುಗುಟ್ಟುತಿದೆ.
ರಾಜಶೇಖರರ ಮುಖದ ಚಿಂತನಶೀಲ ಗಾಂಭೀರ್ಯಕ್ಕೆ ಅವರ ಸ್ವಭಾವದಲ್ಲಿ ಅರ್ಧ ಕಾರಣವಿದ್ದರೆ, ಅವರ ಹೆಚ್ಚಿನ ಕಾರ್ಯಕ್ರಮಗಳೆಲ್ಲ ಪ್ರತಿಭಟನೆಗೆ ಸಂಬಂಧಿಸಿದವೇ ಆಗಿರುವುದು ಇನ್ನರ್ಧ ಕಾರಣ. ಅವರ ನನ್ನ ಮೊದಲ ಭೇಟಿ ನೆನಪಾಗುತ್ತಿದೆ. ಮಡಿಕೇರಿಯಲ್ಲಿ ಪಟ್ಟಾಭಿರಾಮ ಸೋಮಯಾಜಿಯವರು ಸಂಘಟಿಸಿದ್ದ ಕಾರ್ಯಕ್ರಮವದು. ರಾಜಶೇಖರ ಅವರನ್ನು ಮೊದಲ ಸಲ ಕಾಣುವ ಪುಳಕದಲ್ಲಿ ನಾನು ಭೇಟಿಯಾದೆ. ಅವರು ಕೈಕುಲುಕಿ ನಿರ್ಭಾವುಕವಾಗಿ `ಹ್ಞಾ! ಯಾವಾಗ ಬಂದ್ರಿ?’ ಎಂಬ ವಾಕ್ಯಬಿಟ್ಟರೆ ಹೆಚ್ಚೇನೂ ಆಡಲಿಲ್ಲ. ನನಗೆ ತುಸು ನಿರಾಶೆಯಾಗಿತ್ತು. ಬಹುಶಃ ಅವರು ಅಂದಿನ ಕಾರ್ಯಕ್ರಮದ ಬಗ್ಗೆ ತವಕಿತರಾಗಿದ್ದರು. ಕಾರಣ, ಕಾರ್ಯಕ್ರಮ ತಡೆಯಲು ಎದುರಾಳಿಗಳು ಭಯಂಕರ ತಯಾರಿ ಮಾಡಿಕೊಂಡಿದ್ದರಿಂದ, ವಾತಾವರಣ ಬಿಗುವಾಗಿತ್ತು. ಪೋಲಿಸರ ಸಂಖ್ಯೆ ನಮ್ಮನ್ನು ಮೀರಿಸುವಷ್ಟಿತ್ತು. ರಾಜಶೇಖರರ ಆತಂಕ ನಿಜವಾಗುವಂತೆ ಅಂದಿನ ಕಾರ್ಯಕ್ರಮ ನಡೆಯಲಿಲ್ಲ. ನಾವೆಲ್ಲ ಪೆಟ್ಟುತಿನ್ನದೇ ಮರಳಿದ್ದೇ ದೊಡ್ಡ ಸಂಗತಿ.
ನಾನು ಮಾತುಕತೆಗೆ ಮನೆಗೆ ಹೋದ ದಿನ ಅವರು, ಕರಿಬಿಳಿಯ ಉದ್ದಗೆರೆಯಿರುವ ಅಂಗಿ ಹಾಗೂ ಆಗಸನೀಲಿಯ ಚೌಕುಳಿಲುಂಗಿ ಧರಿಸಿದ್ದರು. ವಯಸ್ಸಿನ ಕಾರಣದಿಂದ ದೇಹ ನಸುಬಾಗಿತ್ತು. ಆದರೆ ಲವಲವಿಕೆಯಿತ್ತು. ನಾಲ್ಕೈದು ತಾಸು ಕಾಲ, ಸಾಹಿತ್ಯದ ಬಗ್ಗೆ, ಭಾರತದ ರಾಜಕೀಯ ವಿದ್ಯಮಾನಗಳ ಬಗ್ಗೆ, ಒಳನೋಟಗಳಿಂದ ಕೂಡಿದ ಮಾತುಕತೆಯನ್ನು ನಡೆಸಿಕೊಟ್ಟರು. ನಾನು ಕಳೆದ ೨೫ ವರುಷಗಳಲ್ಲಿ ಮಾಡಿದ ಅತ್ಯತ್ತಮ ಸಂದರ್ಶನವದು. ಇದು ‘ನ್ಯಾಯ ನಿಷ್ಠುರಿಗಳ ಜತೆಯಲ್ಲಿ’ ಸಂಪುಟದಲ್ಲಿ ಅಚ್ಚಾಯಿತು.
ಎದುರು ನಾನೊಬ್ಬನೇ ಇದ್ದರೂ, ರಾಜಶೇಖರ್ ದೊಡ್ಡಸಭೆಯನ್ನು ಸಂಬೋಧಿಸುವಂತೆ ಏರುದನಿಯಲ್ಲಿ ಮಾತಾಡುತ್ತಿದ್ದರು; ಮತೀಯ ರಾಜಕಾರಣದ ಚರ್ಚೆ ಬಂದಾಗಲೆಲ್ಲ ಉದ್ವಿಗ್ನತೆಯಿಂದ ಅವರ ದನಿ ವ್ಯಗ್ರಗೊಳ್ಳುತ್ತಿತ್ತು. ಆದರೆ ಹುಟ್ಟೂರಾದ ಗುಂಡ್ಮಿ, ತಮ್ಮ ಬಾಲ್ಯ, ತಾಯಿ, ತಂದೆ, ಅಲ್ಲಿನ ಪರಿಸರ, ಅಡುಗೆ ಇತ್ಯಾದಿ ವಿಷಯ ಬಂದಾಗ, ದನಿ ಮೃದುಗೊಂಡು ಆಪ್ತತೆ ತನ್ಮಯತೆ ಪಡೆಯುತ್ತಿತ್ತು-ಕುವೆಂಪು ಮಲೆನಾಡಿನ ವಿಷಯ ಬಂದರೆ ಭಾವುಕರಾಗುವ ಹಾಗೆ. ಬದುಕಿನ ಸಣ್ಣಸಂಗತಿಗಳಿಗೆ ಮಿಡಿಯುವ ಅವರ ಆಸ್ಥೆ ಮತ್ತು ಜೀವನ ಪ್ರೀತಿಗಳು, ಅವರಲ್ಲಿರುವ ಪ್ರತಿರೋಧ ಪ್ರಜ್ಞೆಯಷ್ಟೇ ತೀವ್ರವಾಗಿದ್ದವು.
ರಾಜಶೇಖರ್ ಆದಿನ ಒಳ್ಳೇ ಮೂಡಲ್ಲಿದ್ದರು. ಅವರಲ್ಲಿರುವ ಹಾಸ್ಯಪ್ರಜ್ಞೆ ಸುಳಿಸುಳಿಯಾಗಿ ಹೊರಹೊಮ್ಮುತಿತ್ತು. ಅವರು ಸಾಮಾನ್ಯವಾಗಿ ಉಡುಪಿ ಬಿಟ್ಟು ಹೆಚ್ಚು ಹೊರ ಹೋದವರಲ್ಲ. ಉಡುಪಿಯ ಜತೆ ಅವರಿಗೆ ಆಪ್ತವಾದ ಗಾಢವಾದ ನಂಟಿತ್ತು. ಹಿಂದೊಮ್ಮೆ ನನ್ನ ಗುರುಗಳಾದ ಪುಣೇಕರ್ ಅವರು ಉಡುಪಿಯಲ್ಲಿ ವಾಸವಿದ್ದ ವಿಷಯ ಪ್ರಸ್ತಾಪಕ್ಕೆ ಬಂತು. ಆಗ ರಾಜಶೇಖರ್ ಹೇಳಿದರು: “ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದು ಗೊತ್ತಲ್ಲ? ಅವರಿದ್ದ ಮನೆಯಲ್ಲಿಯೇ ಅಡಿಗರು ಇದ್ರು. ಅದೊಂದು ಹಳೇ ಕಾಲದ ಮನೆ. ಅದರ ಎದುರು ಒಂದಿಷ್ಟು ಖಾಲಿ ಜಾಗ ಇತ್ತು. ಅದನ್ನು ಹಾಗೇ ಹಾಳು ಬಿಟ್ಟಿದ್ರು. ಪುಣೇಕರ್ ಆಗಲಿ, ಅವರ ನಂತರ ಬಂದ ಅಡಿಗರಾಗಲಿ, ಇವರಿಬ್ಬರಿಗಿಂತ ಮೊದಲಿದ್ದ ವಿ.ಎಂ.ಇನಾಂದಾರ್ ಆಗಲಿ, ಮೂರೂ ಪುಣ್ಯಾತ್ಮರು ಒಂದು ಗಿಡಾನೂ ಅಲ್ಲಿ ನೆಡಲಿಲ್ಲ. ಆ ಮನೆಗೊಂದು ಮೊಗಸಾಲೆ ಇತ್ತು. ಅಲ್ಲಿ ಈ ಮೂವರು ಸಂಜೆ ವಿರಾಜಮಾನರಾಗಿರುತ್ತಿದ್ದರು. ಅಡಿಗರಂತೂ ಒಂದಾದ ಮೇಲೊಂದು ಸಿಗರೇಟ್ ಸುಡ್ತಾ ಇದ್ದರು.” ಮಾತಿನ ಮಧ್ಯೆ ಕೆಲವು ಪತ್ರಿಕೆಗಳ ವಿಷಯ ನುಸುಳಿತು. “ನಾನು ಅವನ್ನು ಓದುವುದಿಲ್ಲ” ಎಂದೆ. ಅವರು ತುಸು ಅಸೂಯೆಯಿಂದ “ನೀವು ಅದೃಷ್ಟವಂತರು ಕಂಡ್ರಿ. ದಾರೀಲಿ ನಡೀವಾಗ ಸೈಡಲ್ಲಿ ಬಿದ್ದಿರೋ ಮಲಕ್ಕೆ ಬೇಡವೆಂದೂ ನಮ್ಮ ದೃಷ್ಟಿಹೋಗುತ್ತೆ” ಎಂದು ಸ್ವಗೇಲಿ ಮಾಡಿಕೊಂಡರು.
ರಾಜಶೇಖರ್ ಗೆ, ಸಾಹಿತ್ಯ ಕ್ಷೇತ್ರದಾಚೆ ಇರುವ ಸಾರ್ವಜನಿಕ ವ್ಯಕ್ತಿಗಳ ಬರೆಹ-ಮಾತುಗಾರಿಕೆ ಬಗ್ಗೆ ಬಹಳ ಆಸಕ್ತಿಯಿತ್ತು “ನೀವು ಗದುಗಿನ ತೋಂಟದಾರ್ಯ ಸ್ವಾಮಿಗಳ ಭಾಷಣದಿಂದ, ಅದರಲ್ಲೂ ಅವರ ಕನ್ನಡದಿಂದ ಬಹಳ ಪ್ರಭಾವಿತರಾಗಿದ್ದಿರಿ ಅಂತ ಕೇಳೀದೀನಿ. ಯಾವ ಸನ್ನಿವೇಶ ಅದು?” ಎಂದು ಕೇಳಿದೆ. “ ತೋಂಟದಾರ್ಯ ಸ್ವಾಮಿಗಳೂ, ನಿಡುಮಾಮಿಡಿ ಸ್ವಾಮಿಯವರೂ ಮತ್ತು ನಾನೂ, ಮಂಗಳೂರಿನ ಕೋಮು ಸೌಹಾರ್ದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿದ್ದೆವು. ಇಬ್ಬರದೂ ಒಂದು ಜುಗಲಬಂದಿ ನಡೀತು ಸ್ವಲ್ಪಹೊತ್ತು-‘ಎಷ್ಟು ಸೊಗಸಾಗಿ ಮಾತಾಡಿದಿರಿ ತಾವು’ ಅಂತ ಒಬ್ಬರು. ‘ಇಲ್ಲಿಲ್ಲ. ತಾವು ತುಂಬ ಚೆನ್ನಾಗಿ ಮಾತಾಡಿದಿರಿ’ ಅಂತ ಇನ್ನೊಬ್ಬರು. ಅದರೆ ಇಬ್ಬರೂ ಸೊಗಸಾಗಿ ಮಾತಾಡಿದ್ದರು. ಗದುಗಿನ ಸ್ವಾಮಿಗಳಂತೂ ಬಹಳ ಸಹಜವಾಗಿ ಮಾತಾಡಿದ್ದರು” ಎಂದು ಸಂತೋಷದಲ್ಲಿ ನೆನೆದರು.
ಹಳೇ ಉಡುಪಿ ಶಹರಿನ ಚಹರೆ ಚರ್ಚೆಗೆ ಬಂತು. ಆಗ ರಾಜಶೇಖರ್ ಬನ್ನಂಜೆಯಲ್ಲಿದ್ದ ಒಂದು ಗುಡಿಯನ್ನು ನೆನೆಸಿಕೊಂಡು ನುಡಿದರು: “ಅಲ್ಲೊಂದು ಬಹಳ ಸುಂದರವಾದ ದೇವಸ್ಥಾನ ಇತ್ತು. ಸರಳವಾದ ಜಾಮಿಟ್ರಿಕಲ್ ಆದ ವಾಸ್ತು ಅದು. ಈಗ ಆ ಟೆಂಪಲ್ನ ವರಿಗೆ ಬುದ್ಧಿ ಬಂದು, ಅದರ ಮೂಲ ಆಕೃತಿ ಮರವೆ ಆಗುವ ಹಾಗೆ ಸುತ್ತ ಒಂದು ತಗಡಿನ ಚಪ್ಪರ ಎಬ್ಬಿಸಿ, ಅದರ ಎದುರುಗಡೆ ಶಿಲೆಯ ಕಾಂಕ್ರೀಟಿನಲ್ಲಿ ಏನೆಲ್ಲವನ್ನು ಮಾಡಬಹುದೊ ಅದನ್ನೆಲ್ಲ ಮಾಡಿದಾರೆ” ಎಂದರು. ಮಸೀದಿ ಕೆಡವಿ ಗುಡಿ ಕಟ್ಟುವುದನ್ನು ಸಾಂಸ್ಕøತಿಕ ಅಪಚಾರವೆಂದು ಭಾವಿಸಿರುವ ಚಿಂತಕನಿಗೆ, ತನ್ನೂರಿನ ಗುಡಿಯ ವಾಸ್ತುವಿನ ಬಗ್ಗೆ ಇದ್ದ ಆಸಕ್ತಿ ಪ್ರೀತಿ ಸೋಜಿಗ ಹುಟ್ಟಿಸಿತು. ಚಿಕ್ಕಮಗಳೂರಿನಲ್ಲಿ ನಡೆದ ಬಾಬಾಬುಡನಗಿರಿ ಕುರಿತ ಕಾರ್ಯಕ್ರಮದಲ್ಲಿ, ಶಬನಂ ವೀರಮಾನ್ವಿ ಹಾಡಿದ ಕಬೀರ್ ಭಜನನ್ನು ಕೇಳಿ ಅವರು `ಹಾ! ಎಂಥಾ ಎನರ್ಜಿ ಮತ್ತು ತನ್ಮಯಗೊಳಿಸುವ ಶಕ್ತಿಯಿದೆ ಈ ಕಂಠಕ್ಕೆ’ ಎಂದು ಆನಂದಪಟ್ಟಿದ್ದನ್ನು ನೆನೆಸಿಕೊಂಡೆ.
ನಾಸ್ತಿಕರು ಅಥವಾ ಕೋಮುವಾದ ಮೂಲಭೂತವಾದ ವಿರೋಧ ಮಾಡುವವರು, ಜನತೆಯ ಧಾರ್ಮಿಕ ಲೋಕಗಳ ಬಗ್ಗೆ ಗೌರವವುಳ್ಳವರು; ಅಲ್ಲಿರುವ ಕಲೆ ಸೌಂದರ್ಯಗಳ ಬಗ್ಗೆ ಪ್ರೀತಿಯುಳ್ಳವರು- ಎಂದರೆ ಕೆಲವರು ನಂಬುವುದಿಲ್ಲ. ಶಕ್ತಿ ರಾಜಕಾರಣವು ಧರ್ಮವನ್ನು ತನ್ನ ಹತ್ಯಾರದಂತೆ ಬಳಸುವುದನ್ನು ವಿರೋಧಿಸುವುದು ಬೇರೆ: ನಿತ್ಯ ಜೀವನದಲ್ಲಿ ಸಾಮಾನ್ಯ ಜನ ಬದುಕುವ ಧರ್ಮವನ್ನು ಮನ್ನಿಸುವುದು ಬೇರೆ ಎಂದರೆ, ಅವರಿಗೆ ಅರ್ಥವಾಗುವುದಿಲ್ಲ. ಅರ್ಥವಾಗುವ ಕೆಲವರು ಇವುಗಳ ನಡುವಿನ ಫರಕನ್ನು ಉದ್ದೇಶಪೂರ್ವಕವಾಗಿ ಮರೆಯಿಸಿ, ‘ವಿಚಾರವಾದಿ’ ‘ಬುದ್ಧಿಜೀವಿ’ ಲೇಖಕರು’ ಎಂಬುವರನ್ನು ‘ಸಮಾಜದ ಕ್ಷೇಮಕ್ಕಾಗಿ ನಿವಾರಿಸಬೇಕಾದ ಪೀಡೆಗಳು’ ಎಂಬ ಗೊಂದಲದ ಸನ್ನಿವೇಶವನ್ನು ನಿರ್ಮಾಣ ಮಾಡಿರುವರು.
ಈ ಸನ್ನಿವೇಶವೇ ಲೇಖಕರ ಹತ್ಯೆಗಳಿಗೂ ಕಾರಣವಾಗುತ್ತಿದೆ. ಆದರೆ ನಿಜವಾದ ವಿಚಾರವಾದವು, ಧರ್ಮದ ಹೆಸರಲ್ಲಿರುವ ಮತೀಯ ರಾಜಕಾರಣವನ್ನು ನಿರಾಕರಿಸುತ್ತಲೇ, ಪರಂಪರೆಯಿಂದ ಬಂದ ಜೀವನ ಕ್ರಮಗಳ ಬಗ್ಗೆ, ಅದು ಸೃಷ್ಟಿಮಾಡಿರುವ ಅಡುಗೆ, ವಾಸ್ತು, ಇತ್ಯಾದಿ ಕ್ಷೇತ್ರಗಳಲ್ಲಿರುವ ಕುಶಲತೆ ಬಗ್ಗೆ ಅಪಾರ ಶ್ರದ್ಧೆ ತೋರುತ್ತದೆ. ಇದು ಕಾರಂತ ಕುವೆಂಪು ಅವರಿಂದ ಕನ್ನಡದಲ್ಲಿ ಹರಿದು ಬಂದಿರುವ ಪರಂಪರೆ. ಲೋಹಿಯಾ ಅವರು ಮಹಾನ್ ವಿಚಾರವಾದಿ. ಆದರೆ ಅವರ `ರಾಮಕೃಷ್ಣಶಿವ’ ಲೇಖನ ಸಾಂಸ್ಕøತಿಕ ಆಸ್ಥೆಯಿರುವ ಮನಸ್ಸು ಮಾತ್ರ ಬರೆಯುವಂಥದ್ದು. ರಾಜಶೇಖರ್ ಇಂಥಾ ಪರಂಪರೆಗೆ ಸೇರಿದ ಚಿಂತಕರು.
ರಾಜಶೇಖರ್ ಜೀವವಿಮಾ ಕಛೇರಿಯಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದವರು. ಕಳೆದ ದಶಕದಿಂದ ಕೋಮಸೌಹಾರ್ದ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಅವರು, ಜೀವಮಾನ ಉದ್ದಕ್ಕೂ ಬೇರೆಬೇರೆ ಜನಪರ ಚಳುವಳಿಗಳ ಭಾಗವಾದವರು; ಸಾವಿರಾರು ಬೀದಿಭಾಷಣಗಳನ್ನು ಮಾಡಿದವರು. ಅವರ ವಿಮರ್ಶೆ ಓದುವುದು ಮತ್ತು ಭಾಷಣ ಕೇಳುವುದು ಎಂದರೆ, ಸಾಹಿತ್ಯವನ್ನೂ ಅದರ ಘನತೆಯಲ್ಲಿ, ಸಮಾಜವನ್ನು ಅದರ ಸಂಕೀರ್ಣತೆಯಲ್ಲಿ, ಅರಿಯುವ ಕ್ರಮವೇ ಆಗಿದೆ. ಅವರ ಚಿಂತನೆ ಮತ್ತು ಭಾಷೆಗಳಲ್ಲಿರುವ ತೀಕ್ಷ್ಣತೆಗೂ ವ್ಯಕ್ತಿತ್ವದಲ್ಲಿರುವ ತಳಮಳಿಕೆಗೂ ಕಾರಣ, ಅವರ ಸೂಕ್ಷ್ಮಸಂವೇದನೆ ಮಾತ್ರವಲ್ಲ, ಹಾಲಿ ಕರಾವಳಿ ಕರ್ನಾಟಕದ ಪ್ರಕ್ಷುಬ್ಧ ಸನ್ನಿವೇಶ ಕೂಡ.
ಮಾತುಕತೆಯಲ್ಲಿ ನಾನು ಕೇಳುತ್ತಿದ್ದ ಪ್ರಶ್ನೆಗಳಿಗೆ ಅವರು ಬಹಳ ಸಲ `ನನಗೆ ಗೊತ್ತಿಲ್ಲ’ ಎಂದು ವಿವರಣೆ ಶುರುಮಾಡುತ್ತಿದ್ದರು. ಆದರೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಅವರಷ್ಟು ಓದಿದವರು ಕನ್ನಡದಲ್ಲಿ ಕಡಿಮೆ. ಅವರಷ್ಟು ಆಳವಾದ ವ್ಯಾಪಕವಾದ ಓದನ್ನು ವಿಶ್ವವಿದ್ಯಾಲಯಗಳಲ್ಲಿರುವ ನಾವು ಮಾಡಿದ್ದರೆ, ನಮ್ಮ ವಿದ್ಯಾರ್ಥಿಗಳು ಏನೇನಾಗಿರುತ್ತಿದ್ದರೊ? ಆ ದಿನದ ಮಾತುಕತೆಯಲ್ಲಿ ನನಗೆ ಅವರು ಆಂಗ್ಲ ಶಿಕ್ಷಕರಾಗಿದ್ದ ಸಂಗತಿ ಆಕಸ್ಮಿಕವಾಗಿ ತಿಳಿಯಿತು. ಅವರ ಇಂಗ್ಲೀಶ್ ಓದು ಕೂಡ ವ್ಯಾಪಕ.
ಅವರೊಬ್ಬ ಅದ್ಭುತ ಕನ್ನಡ ಗದ್ಯಕಾರ. ಕನ್ನಡದಲ್ಲಿ ಅವರಂತೆ ಮುಕ್ಕಾಗದ ನೈತಿಕ ಪ್ರಜ್ಞೆ ಮತ್ತು ಧೀಮಂತಿಕೆಯುಳ್ಳ ಚಿಂತಕರು ವಿರಳ. ಕನ್ನಡ ಬರೆಹದಲ್ಲಿರುವ ಜಡತೆ ಮತ್ತು ಲಯಗೇಡಿತನ ಕಂಡಾಗಲೆಲ್ಲ ಹರಿಹಾಯುತ್ತಿದ್ದ ಲಂಕೇಶ್, ತಮ್ಮ ಸಾಯುವ ಕೊನೆಯ ಕ್ಷಣಗಳಲ್ಲಿ ಬರೆದ ಟಿಪ್ಪಣಿ, ರಾಜಶೇಖರ ಅವರ ಪ್ರಾಂಜಲವಾದ ಕನ್ನಡವನ್ನು ಕುರಿತಾಗಿತ್ತು. ಬಾಳಿಡೀ ಪ್ರತಿರೋಧ ಮತ್ತು ಆಕ್ಟಿವಿಸಂನಿಂದ ಜಗಜಗಿಸಿದ ರಾಜಶೇಖರ್ ಅವರಲ್ಲಿ, ಮತೀಯವಾದವು ದೇಶವನ್ನು ಈ ಪರಿಯಲ್ಲಿ ಆವರಿಸಿಕೊಂಡಿರುವ ಬಗ್ಗೆ ನಿರಾಶೆಯಿತ್ತು; ಅವರು ಮತ್ತಷ್ಟು ಹತಾಶೆಯ ಗಳಿಗೆಗಳಿಗೆ ತಮ್ಮನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ ಎಂದೂ ಅನಿಸಿತು. ಒಳ್ಳೆಯ ಮಾತುಗಾರರಾದ ಅವರು, ಮಾತು ಮತ್ತು ಬರೆಹದ ನಿಷ್ಫಲತೆಯನ್ನೂ ಅರಿತವರು. ಸದ್ಯದ ಚಾರಿತ್ರಿಕ ಸನ್ನಿವೇಶವೇ ಅವರ ಬರೆಹ ಮತ್ತು ಮಾತಿಗೆ ತೀವ್ರತೆಯನ್ನೂ ವಿಷಾದದ ಗುಣವನ್ನೂ ತಂದುಕೊಟ್ಟಂತೆ ತೋರಿತು.
“ನೀವು ಅಷ್ಟೊಂದು ಬೀದಿಭಾಷಣ ಮಾಡಿದವರು. ಆದರೆ ಸೆಮಿನಾರುಗಳಲ್ಲಿ ಬರಕೊಂಡು ಬಂದು ಮಾತಾಡ್ತೀರಲ್ಲ, ಯಾಕೆ?” ಎಂದೆ. “ಎಕ್ಸಟೆಂಪರ್ ಮಾತಾಡೋ ಧೈರ್ಯವೇ ಇಲ್ಲ ನನಗೆ. ಮೈಕ್ ಮುಂದೆ ನಿಂತು ಮಾತಾಡುವಾಗ ಯೋಚನೆ ಮಾಡಿಕೊಂಡು ಬಂದಿದ್ದ ಮಾತೆಲ್ಲ ಮರೆತೇ ಹೋಗುತ್ತೆ. ನನಗೆ ಅಲ್ಲಲ್ಲೇ ನಿಂತುಗೊಂಡು ಸೃಷ್ಟಿ ಮಾತಾಡೋವಷ್ಟು ಸೃಜನಶೀಲತೆ ಇಲ್ಲ. ಕಿ.ರಂ. ಮಾಡ್ತಿದ್ದರಂತೆ ಅದನ್ನ. ಕಿ.ರಂ. ಭಾಷಣ ಮಾಡೋಕೆ ಪುಟಗಟ್ಟಲೆ ನೋಟ್ಸ್ ಮಾಡ್ಕೊಂಡು ಹೋಗ್ತಾರೆ. ಮೈಕ್ ಮುಂದೆ ನಿಂತುಕೊಳ್ತಾರೆ.
ಆಮೇಲೆ ಅದನ್ನು ನೋಡೋದೇ ಇಲ್ಲವಂತೆ. ಮಾಡ್ಕೊಂಡಿರೋ ನೋಟ್ಸೇ ಬೇರೆ; ಎದುರುಗಡೆ ಬಂದು ಹೇಳೋದೇ ಬೇರೆ. ಆ ತರಹದ ಕುಶಲತೆ ನನ್ನ ಹತ್ತರ ಇಲ್ಲ. ಮಾತಿಗೆ ತಡವರಿಸೋದೇ ಜಾಸ್ತಿ. ಸುಮಾರಷ್ಟು ಡಿಸಾಸ್ಟರಸ್ ಎಕ್ಸ್ ಪೀರಿಯನ್ಸ್ ಆಗಿವೆ ನನಗೆ” ಎಂದರು. “ನೀವು ಮೇನ್ ಸ್ಟ್ರೀಂ ಪತ್ರಿಕೆಗಳಲ್ಲಿ ಯಾಕೆ ಬರೆಯೋಲ್ಲ?” ಎಂದೆ. “ನಾನು ಬರೆದಿದ್ದನ್ನು ಅವರು ಹಾಕುವುದಿಲ್ಲ. ನಾನು ಹಿಂದೆ ಬರೆಯುತ್ತಿದ್ದುದು `ಲಂಕೇಶ್ ಪತ್ರಿಕೆ’ಗೆ; ನಂತರ ‘ಗೌರಿಲಂಕೇಶ್’ಗೆ. ಈಗ ಎರಡೂ ಇಲ್ಲ. ನನಗೆ ಬರೆಸುವವರ ಪ್ರಚೋದನೆಯೇ ಇಲ್ಲವಾಗಿದೆ” ಎಂದು ಜವಾಬಿಸಿದರು.
ಹೊರಡುವಾಗ ಅವರ ಜತೆ ನಿಂತು ಫೋಟೊ ತೆಗೆಸಿಕೊಂಡೆ. ಅವರನ್ನು ನಗಿಸಬೇಕೆಂದು ನಾನೂ ವಿಷ್ಣುವೂ ಯತ್ನಿಸಿದೆವು. ತುಸುವೇ ತುಟಿ ಅರಳಿಸಿದರು. ಆಹೊತ್ತಿಗೆ ಮಳೆನಿಂತಿತ್ತು. ಆಗಸ ಹೊರಪಾಗಿತ್ತು. ಬರುತ್ತ ಅವರ ಕಾನನ ಸದೃಶ ಹಿತ್ತಲಿನಿಂದ ಒಂದು ಹೂಗಿಡದ ಸಸಿಯನ್ನು ಹಿಡಿದುಕೊಂಡು ಬಂದೆ.
ತಲ್ಲೂರು ಪ್ರತಿಷ್ಠಾನದ ಉಪನ್ಯಾಸ ಮಾಲೆಯಲ್ಲಿ, ‘ಬಹುತ್ವದ ಬಹುಮುಖಗಳು’ ವಿಷಯ ಕುರಿತು ಮಾತಾಡಲು ಉಡುಪಿಗೆ ಹೋಗಿದ್ದೆ. ಅಲ್ಲಿಗೆ ಹೋದಾಗಲೆಲ್ಲ ನನ್ನ ಪ್ರಿಯ ಚಿಂತಕರಾದ ಜಿ.ರಾಜಶೇಖರ ಅವರನ್ನು ಕಾಣುವ, ಚರ್ಚಿಸುವ ಇರಾದೆಯೂ ಇರುತ್ತಿತ್ತು. ನನ್ನ ಉಪನ್ಯಾಸವನ್ನು ಅವರಿಗೆ ಅರ್ಪಿಸಿ ಮಾತಾಡಿದೆ. ಮಾತು ಮುಗಿಯುವಾಗ ಅವರೇ ಸಭಾಂಗಣಕ್ಕೆ ಬಂದರು. ನನ್ನ ಓದು ಬರೆಹಗಳ ಮೇಲೆ ತುಂಬ ಪ್ರಭಾವ ಬೀರಿದ ಅವರನ್ನು ಈ ಹಿಂದೆ ಮುಖಾಮುಖಿ ಮಾಡುವಾಗೆಲ್ಲ, ಗುರುವಿನ ಮುಂದೆ ಕೂತಾಗಿನ ಆದರ ಅಳುಕು ವಿಸ್ಮಯ. ಈಗ ಒಂದು ಮಗುವಿನ ಮುಂದೆ ಕೂತಂತಾಯಿತು. ಎದೆ ಭಾರವಾಗಿಸುವ ರೂಪಾಂತರ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


