Connect with us

ದಿನದ ಸುದ್ದಿ

ಆತ್ಮಕತೆ | ಹಾಸ್ಟೆಲ್‌ನಲ್ಲಿ ಜಾತಿ ಜಗಳ

Published

on

ಸಾಂದರ್ಭಿಕ ಚಿತ್ರ
  • ರುದ್ರಪ್ಪ ಹನಗವಾಡಿ

ನಾನು ಮೈಸೂರಿಗೆ ಬಂದು ಮಹಾರಾಜ ಕಾಲೇಜ್ ಹಾಸ್ಟೆಲ್ ಸೇರಿಕೊಂಡಾಗ ತಡವಾಗಿ ಸೇರಿಕೊಂಡವರಿಗೆ ಎರಡು ಮೂರು ಜನರಿರುವ ರೂಂಗಳನ್ನು ಅಲಾಟ್ ಮಾಡುತ್ತಿದ್ದರು. ನಮಗೆ ರೂಂ ನಂ. ಎ4 ಎಂಬಲ್ಲಿ ನಾಲ್ಕು ಜನರಿಗೆ ನಾನು ಮತ್ತು ಎಲ್. ರವೀಂದ್ರ, ಎರಡನೇ ಬಿ.ಎ.ಯವರಾಗಿದ್ದವರು.

ವೈ. ಮಹೇಶ ಮೊದಲ ಬಿ.ಎ. ಮತ್ತು ಪಿಯುಸಿಗೆ ಸೇರಿದ್ದ ಮುರಳೀಧರ ಇದ್ದೆವು. ರವೀಂದ್ರ ಸದಾ ಹಿಂದಿ ಹಾಡಿನ ಭಕ್ತನಾಗಿದ್ದು ರಾಜೇಶ್ ಖನ್ನಾನ ಹೇರ್ ಸ್ಟೈಲ್‌ನಲ್ಲಿ ಟಾಕುಟೀಕಾಗಿ ತರಗತಿಗೆ ಬರುತ್ತಿದ್ದ. ಮುರಳಿ ಹತ್ತಿರದ ಇಲವಾಲ ಊರಿನವನಾಗಿದ್ದರಿಂದ ದಿನವೂ ಅವರ ಊರಿನಿಂದ ಪರಿಚಯಸ್ಥರು ಬಂದು ಸಂಜೆ ವೇಳೆಯಲ್ಲಿ ಹೊರಗೆ ಹೋಗುತ್ತಿದ್ದ. ನಾನು ಮತ್ತು ಮಹೇಶ ಇಬ್ಬರೇ ಒಬ್ಬರಿಗೊಬ್ಬರು ಹತ್ತಿರವಾಗಿದ್ದೆವು. ಸಭೆ ಸಮಾರಂಭಗಳಿಗೆ ಮತ್ತು ಸಮಾಜವಾದಿ ಯುವ ಜನ ಸಭಾ ಕೆಲಸಗಳಿಗೆ ಜೊತೆಯಲ್ಲಿಯೇ ಹೋಗುತ್ತಿದ್ದೆವು.

ಮಹಾರಾಜ ಕಾಲೇಜ್ ಹಾಸ್ಟೆಲ್‌ವೊಂದು ಸಾರ್ವಜನಿಕ ಹಾಸ್ಟೆಲ್ ಆಗಿದ್ದು ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೆ ಅವಕಾಶವಿತ್ತಾದರೂ, ಸ್ಥಳೀಯ ಒಕ್ಕಲಿಗ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇರುತ್ತಿತ್ತು. ಪರಿಶಿಷ್ಟ ಜಾತಿ / ಪಂಗಡಗಳಿಗೆ ಸಾಕಷ್ಟು ವಿದ್ಯಾರ್ಥಿಗಳಿದ್ದರೂ ಯಾರೂ ತಮ್ಮ ಜಾತಿ ಗುಂಪುಗಳಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ನಾನು ವಿಶೇಷವಾಗಿ 300 ಕಿ.ಮೀ. ದೂರದಿಂದ ಬಂದವನಾಗಿ ನನಗೆ ಪರಿಚಿತರು, ಜಾತಿಗರು ಯಾರೂ ಗೊತ್ತಿರಲಿಲ್ಲ.

ನನ್ನ ರೂಮ್‌ಮೇಟ್‌ಗಳಲ್ಲಿ ಮಹೇಶ ಮತ್ತು ಮುರಳಿ ಒಕ್ಕಲಿಗರಾಗಿದ್ದರು. ರವೀಂದ್ರ ಕೂಡ ಪರಿಶಿಷ್ಟ ಜಾತಿಯವನಾಗಿದ್ದರೂ ಅವರ ತಂದೆ ಆಗಿನ ಕಾಲದ ಅರಣ್ಯ ಇಲಾಖೆಯಲ್ಲಿ ಆರ್.ಎಫ್.ಓ. ಆಗಿದ್ದರಿಂದ ಅವನ ಸಾಮಾಜಿಕ ಹಿನ್ನೆಲೆ ಗೊತ್ತಾಗುತ್ತಿರಲಿಲ್ಲ. ನಾನು ದಾವಣಗೆರೆ ಕಡೆಯವ ಮತ್ತು ಹೆಸರು ರುದ್ರಪ್ಪ ಎಂಬೀ ಕಾರಣದಿಂದ ಯಾರೋ ಲಿಂಗಾಯತರವನಿರಬೇಕೆಂದು ನನ್ನ ಬಗ್ಗೆ ಏನೂ ತಿಳಿಯದವರು ಭಾವಿಸಿದ್ದರು.

ಮಹಾರಾಜಾ ಕಾಲೇಜ್ ಹಾಸ್ಟೆಲ್‌ನಲ್ಲಿನ ಊಟ ಬಹಳ ಅದ್ದೂರಿಯಾಗಿಯೇ ಇರುತ್ತಿತ್ತು. ಬೆಳಿಗ್ಗೆ ಕಾಫಿ, ಟೀ ನಂತರ 9 ರಿಂದ 11 ಗಂಟೆಯವರೆಗೆ ಊಟ, ಮಧ್ಯಾಹ್ನ 1 ರಿಂದ 2ಕ್ಕೆ ತಿಂಡಿ, ರಾತ್ರಿಗೆ 8 ರಿಂದ ಊಟವಿರುತ್ತಿತ್ತು. ಮಾಂಸಹಾರಕ್ಕೆ ಪ್ರತ್ಯೇಕವಾದ ಮೆಸ್ ಇದ್ದು, ಅಲ್ಲಿ ವಾರದಲ್ಲಿ 5 ದಿನಗಳು ಮಾಂಸಾಹಾರ ಇರುತ್ತಿತ್ತು. ಸಸ್ಯಾಹಾರಿ ಮೆಸ್‌ನಲ್ಲಿ ಮಜ್ಜಿಗೆ ಹುಳಿ, ತೊವೆ, ತುಪ್ಪ, ಮೊಸರು, ಬಾಳೆಹಣ್ಣುಗಳಿರುತ್ತಿದ್ದವು. ವಾರದ ಮತ್ತು ತಿಂಗಳ ಕೊನೆಯಲ್ಲಿ ವಿಶೇಷವಾದ ಊಟಗಳು ಇರುತ್ತಿದ್ದವು. ಅದಕ್ಕಾಗಿ ಹೊರಗಿನ ಸ್ನೇಹಿತರನ್ನು ಆಹ್ವಾನಿಸಬಹುದಿತ್ತು.

ಇಂತಹ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿಗಳು ಮೈಸೂರಿನ ಅಶೋಕಪುರಂ ಗೆಳೆಯರನ್ನು ಆಹ್ವಾನಿಸಿದ್ದರು. ಒಕ್ಕಲಿಗ ವಿದ್ಯಾರ್ಥಿಗಳೂ ಕೂಡ ಕೆ.ಜಿ. ಕೊಪ್ಪಲ ವಿದ್ಯಾರ್ಥಿಸ್ನೇಹಿತರನ್ನು ಆಹ್ವಾನಿಸಿದ್ದರು. ಊಟದ ಹಾಲ್‌ನಲ್ಲಿ ಮೊದಲ ಬ್ಯಾಚ್‌ನಲ್ಲಿಯೇ ಊಟ ಮಾಡುವ ಧಾವಂತದಲ್ಲಿ ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗ ವಿದ್ಯಾರ್ಥಿಗಳಲ್ಲಿ ಊಟಕ್ಕೆ ಕೂರುವ ಸೀಟಿನ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿತ್ತು. ಊಟದ ಸೀಟಿಗಾಗಿ ಆದ ಗಲಾಟೆ ಅಲ್ಲಿಗೆ ಮುಗಿಯದೆ ಹೊರಗಿನ ರೌಡಿಗಳನ್ನು ಕರೆತಂದು ಎಸ್.ಸಿ. ವಿದ್ಯಾರ್ಥಿಗಳಲ್ಲಿ ಒಬ್ಬೊಬ್ಬರನ್ನೂ ಗುರುತಿಸುತ್ತಾ ಥಳಿಸಿದರು.

ಎಸ್.ಸಿ. ಹುಡುಗರನ್ನು ಕಂಡರೆ ಜಾತಿವಾದಿ ಕೆಲವು ಒಕ್ಕಲಿಗ ವಿದ್ಯಾರ್ಥಿಗಳು ತಾವು ಪ್ರತಿ ತಿಂಗಳೂ ಹಣ ಪಾವತಿಸುತ್ತಿದ್ದು, ಎಸ್.ಸಿ. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬಂದ ಹಣದಲ್ಲಿ ಬಿಟ್ಟಿ ಕೂಳು ತಿಂದು ಕೊಬ್ಬಿದ್ದಾರೆ ಎನ್ನುವ ಧೋರಣೆ ಅವರಲ್ಲಿತ್ತು. ಬಳೆ ಶ್ರೀನಿವಾಸ, ನಂಜಪ್ಪ ಮತ್ತು ಗೋವಿಂದ ಎಂಬ ಮೂವರು ಕಾಲೇಜಿನ ವಿದ್ಯಾರ್ಥಿಗಳಾಗಿದ್ದರೂ, ರೌಡಿಗಳಂತೆ ವರ್ತಿಸುತ್ತಿದ್ದರು. ಮೈಸೂರು ಜಿಲ್ಲೆಯ ಹತ್ತಿರದ ಹಳ್ಳಿಗರಾಗಿದ್ದರಿಂದ ಸದಾ ವಿದ್ಯಾರ್ಥಿಗಳಲ್ಲದವರ ಜೊತೆ ಹಾಸ್ಟೆಲ್ ಒಳಗೆ ಇದ್ದ ಸೋಮಾರಿ ಕಟ್ಟೆಯಲ್ಲಿ ಕೂತು ಹರಟುತ್ತಿದ್ದರು.

ಈ ರೀತಿ ಕರೆತಂದ ರೌಡಿಗಳಲ್ಲಿ ಒಬ್ಬ ನನ್ನನ್ನು ಹೊಡೆಯಲು ಬಂದು ಇನ್ನೇನು ಏಟು ಕೊಡುವುದರಲ್ಲಿದ್ದ. ಅಷ್ಟರಲ್ಲೇ ಅಲ್ಲಿದ್ದ ಗೋವಿಂದ `ಲೇ ಅವನು ಎಸ್.ಸಿ. ಅಲ್ಲ, ಲಿಂಗಾಯತ ಬಿಡ್ರೊ’ ಎಂದು ಕೂಗಿದ. ಹಾಗಾಗಿ ನಾನು ಏಟು ಬೀಳುವುದನ್ನು ತಪ್ಪಿಸಿಕೊಂಡು ರೂಮ್‌ಗೆ ಹೋಗಿ ಬಚಾವಾಗಿದ್ದೆ. ನಂತರದ ದಿನಗಳಲ್ಲಿ ನನ್ನ ಜಾತಿ ಅವನಿಗೆ ತಿಳಿದು ತನ್ನ ಅಂದಿನ ದಿನದ ತಪ್ಪಿನ ಅರಿವಾಗಿತ್ತು.

ಇದೆಲ್ಲ ಆಗಿ ಕೆಲವು ದಿನಗಳಲ್ಲಿ ಮಳವಳ್ಳಿ ತಾಲ್ಲೂಕಿನ ದಲಿತರಾಗಿದ್ದ ರಾಜಕಾರಣಿ ಮಾಜಿ ಮಂತ್ರಿ ಮಲ್ಲಿಕಾರ್ಜುನ ಸ್ವಾಮಿ ಆಗ ಸಿಂಡಿಕೇಟ್ ಸದಸ್ಯರಾಗಿದ್ದು, ಕಾಲೇಜ್ ಹಾಸ್ಟೆಲ್‌ನಲ್ಲಿದ್ದ ವಿಶೇಷವಾಗಿ ಏಟು ತಿಂದಿದ್ದ ಹುಡುಗರನ್ನು ನೋಡಲು ವಾರ್ಡನ್ ಶಿವಲಿಂಗಯ್ಯನವರ ಜೊತೆ ಬಂದಿದ್ದರು. ಆಗ ನನ್ನನ್ನು ಸಹ ಕರೆಸಿ ವಿಚಾರಿಸಿ ಚೆನ್ನಾಗಿ ಓದುವ ಬಗ್ಗೆ ಬುದ್ಧಿ ಮಾತು ಹೇಳಿದ್ದರು. ಆದರೆ ನಮ್ಮ ರೂಮ್‌ನಲ್ಲಿ ಮಹೇಶನಾಗಲೀ ಮುರಳಿಯಾಗಲೀ ಜಾತಿಕೂಪದ ಜಗಳಗಳಿಂದ ದೂರ ಇದ್ದರು. ಮತ್ತೆ ನಾನು ಎಂ.ಎ.ನಲ್ಲಿ ಗಂಗೋತ್ರಿಯ ಪಿ.ಜಿ. ಹಾಸ್ಟೆಲ್ ಸೇರಿದಾಗ ಅಲ್ಲಿಯೂ ಒಕ್ಕಲಿಗ ವಿದ್ಯಾರ್ಥಿಗಳಲ್ಲಿನ ಕೆಲವರು ದಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಬ್ರಾಹ್ಮಣರೆಂದು ಹಂಗಿಸುತ್ತಿದ್ದರು.

ನಾನೊಮ್ಮೆ ಬೀರು ಬಾಟಲಿಯಲ್ಲಿ ಕುಡಿಯಲು ನೀರು ತುಂಬಿಕೊಳ್ಳಲು ಹೋಗುವಾಗ `ಇವರಿಗೆ ಬಿಟ್ಟಿ ಊಟದ ಜೊತೆ ಸರ್ಕಾರ ಬೀರು ಕೂಡ ಕೊಡುತ್ತದೆ ನೋಡ್ರೋ ಎಂದು ವ್ಯಂಗ್ಯವಾಗಿ ಮಾತಾಡುತ್ತಿದ್ದನ್ನು ನಾನು ಮಹದೇವನಿಗೆ ಹೇಳಿದ್ದೆ. ಅವನು ಮುಂದೊAದು ದಿನ ಪೂರ್ಣಚಂದ್ರ ತೇಜಸ್ವಿ ಅವರಿಗೆ ತಿಳಿಸಿದ ಕಾರಣ ಅವರು ಹಾಸ್ಟೆಲ್‌ನಲ್ಲಿದ್ದ ಕೆಲವು ಒಕ್ಕಲಿಗ ಹುಡುಗರನ್ನು ಕರೆಸಿ ಚೆನ್ನಾಗಿ ಬೈದು ಕಳಿಸಿದ್ದರಂತೆ. ಆ ನಂತರದ ದಿನಗಳಲ್ಲಿ ಅವರೆಲ್ಲ ನಮ್ಮನ್ನು ಕಂಡರೆ ಕೃತಕ ಗೌರವ ತೋರುತ್ತಿದ್ದರು. ನಂತರ ಎಂ.ಎ. ಮುಗಿಯುವವರೆಗೆ ಮತ್ತಾವ ಜಾತಿ ಜಗಳದ ಸೋಂಕು ಹಾಸ್ಟೆಲ್‌ನಲ್ಲಿ ಮರುಕಳಿಸಲಿಲ್ಲ.

ಮೈಸೂರಿನಲ್ಲಿ ಓದಲು ಮಹಾರಾಜಾ ಕಾಲೇಜು ನಂತರ ಗಂಗೋತ್ರಿಯಲ್ಲಿ ಎಂ.ಎ. ಮಾಡಲು ಸಿಕ್ಕ ಅವಕಾಶದ ಜೊತೆಗೆ ಸಿಕ್ಕ ಹಾಸ್ಟೆಲ್ ಸೌಲಭ್ಯಗಳು, ಜೊತೆಗೆ ಅನೇಕ ಹಿನ್ನೆಲೆಯ ಸ್ನೇಹಿತರ ಬಳಗ ದೊರಕಲು ಅವಕಾಶವಾಯಿತು. ಶೈಕ್ಷಣಿಕ ಶಿಕ್ಷಣದ ಜೊತೆಗೆ ಹಲವು ಹಿನ್ನೆಲೆಯ ವಿದ್ಯಾರ್ಥಿಗಳ ಪರಿಚಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬಹುದೊಡ್ಡ ಬುನಾದಿಯಾಯಿತು. ಅದಕ್ಕೆಲ್ಲ ಕಾರಣರಾದವರನ್ನು ಸದಾ ನೆನೆಯದಿರಲಾರೆ.

ಮುಂದುವರಿಯುವುದು…

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

Published

on

ಸುದ್ದಿದಿನ,ದಾವಣಗೆರೆ:ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಏಪ್ರಿಲ್ 24 ಮತ್ತು 25 ರಂದು ಆಯೋಜಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ತರಬೇತಿಯು ದಾವಣಗೆರೆ ಜಿಲ್ಲೆಯ ರೈತಿಗೆ ಮಾತ್ರ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆಸ್ತಿ ಕಲಹವೇ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆಗೆ ಕಾರಣವಾಯ್ತಾ..?

Published

on

ಸುದ್ದಿದಿನಡೆಸ್ಕ್:ಭಾನುವಾರ ಹತ್ಯೆಯಾದ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಹಿಂದೆ ಆಸ್ತಿ ಕಲಹವಿರಬಹುದು ಎಂಬ ಆರೋಪಗಳು ಕೇಳಿ ಬರುತ್ತಿವೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೋಟ್ಯಂತರ ಮೌಲ್ಯದ ಭೂಮಿಯನ್ನು ಖರೀದಿ ಮಾಡಿದ್ದ ಅವರು ಅದನ್ನು ತಮ್ಮ ಸಹೋದರಿಯರ ಹೆಸರಿನಲ್ಲಿ ನೋಂದಾಯಿಸಿದ್ದರು. ಇದಕ್ಕೆ ಪತ್ನಿ ಪಲ್ಲವಿಯವರ ಆಕ್ಷೇಪ ಇತ್ತು ಎನ್ನಲಾಗುತ್ತಿದೆ.

ಆದರೆ ಆಸ್ತಿ ವಿವಾದವೇ ಎಲ್ಲದಕ್ಕೂ ಕಾರಣವಾಯ್ತಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಓಂ ಪ್ರಕಾಶ್ ಅವರು 2017 ರಲ್ಲಿ ನಿವೃತ್ತಿಗೊಂಡಿದ್ದರು. ನಿವೃತ್ತಿಗೂ ಮೊದಲು ಹಾಗೂ ನಂತರದಲ್ಲಿ ಅವರು ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಸ್ತಿ ಖರೀದಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಳ್ಳಾರಿ ಪೊಲೀಸ್ ಅಧಿಕಾರಿಗಳ ಪಡಿತರ ಅಕ್ಕಿ ಕಳ್ಳಾಟ : ಠಾಣೆ ಮುಂದೆ ಇದ್ದ ಲಾರಿ ಮಾಯ ; ಈ ಸ್ಟೋರಿ ಓದಿ..!

Published

on

  • ಗಿರೀಶ್ ಕುಮಾರ್ ಗೌಡ,ಬಳ್ಳಾರಿ

ಸುದ್ದಿದಿನಡೆಸ್ಕ್:ಗಣಿನಾಡು ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ರಾತ್ರಿ ವೇಳೆ ಜಿಲ್ಲೆಯಿಂದ ಬೇರೆ ಬೇರೆ ರಾಜ್ಯಗಳಿಗೆ ಲಾರಿಗಳಲ್ಲಿ ಕಳ್ಳತನದ ಮೂಲಕ ಸಾಗಾಟ ಮಾಡುತ್ತಿರುವ ಅಂಶಗಳು ಬೆಳಕಿಗೆ ಬಂದಿವೆ.
ಅದರಲ್ಲಿ 10 ಲಕ್ಷ ಮೌಲ್ಯದ ಅನುಮಾನ ಪಡಿತರ ಅಕ್ಕಿ ಲಾರಿ, ಮದ್ಯ ರಾತ್ರಿಯಿಂದ ಬೆಳಿಗ್ಗೆ 9ಗಂಟೆವರೆಗೆ ಇದ್ದ ಲಾರಿ ನಂತರ ಇಲ್ಲದೆ ಇರೋದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಳ್ಳಾರಿ ನಗರದಲ್ಲಿ ಕೆಲ ದಿನಗಳ ಹಿಂದೆ ( ರಾತ್ರಿ 2.30 ಗಂಟೆ) ಸಮಯದಲ್ಲಿ 10 ಲಕ್ಷ ರೂಪಾಯಿ ಮೌಲ್ಯದ ಪಡಿತರ ಅಕ್ಕಿ ವಾಹನವನ್ನು ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯ ಪೊಲೀಸ ಅಧಿಕಾರಿಗಳು ತಪಾಸಣೆ ಮಾಡಿ ಠಾಣೆಗೆ ತಂದು ನಿಲ್ಲಿಸಿಕೊಂಡಿದ್ದರು.

ರಾಯಚೂರುನಿಂದ ಛತ್ತೀಸ್ಗಢದ ವರೆಗೆ ಪಡಿತರ ಅಕ್ಕಿ ಸಾಗಾಟ

ರಾಯಚೂರದಿಂದ ಛತ್ತೀಸ್ಗಢಕ್ಕೆ ಸಾಗಣೆಯ ಮಾಡುತ್ತಿದ್ದ ವಾಹನವಾಗಿತ್ತು ವಾಹನಕ್ಕೆ ಆರ್.ಕೆ ಎಂಟರ್ಪ್ರೈಸಸ್ ರಾಯಚೂರು,ಬಳ್ಳಾರಿ ಎಂದು ಬಿಲ್ ಹಾಕಿ ರಾಯಚೂರುದಿಂದ ಛತ್ತೀಸ್ ಗಡಿಗೆ ಅಕ್ಕಿ ಸರಬರಾಜು ಮಾಡುತ್ತಿದ್ದ ಮತ್ತೊಂದು ಬಿಲ್ ಹಾಕಿ ಕಳಿಸಲಾಗಿತ್ತು. ಈ ವಾಹನಕ್ಕೆ ಬಳ್ಳಾರಿಯ ಹವಂಬಾವಿ ಪ್ರದೇಶದಲ್ಲಿ ಕಳಸಾಗಣಿಕೆ ಪಡಿತರ ಅಕ್ಕಿಯನ್ನು ತುಂಬಿದ್ದಾರೆ. ಇದಕ್ಕೆ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಕೆಲ ಸಿಬ್ಬಂದಿಗಳು ಮಾತ್ರ ಇದೆ ಎನ್ನುವ ಆರೋಪ ಇದೆ.

ಮಧ್ಯರಾತ್ರಿದಿಂದ ಬೆಳಿಗ್ಗೆ 9 ಗಂಟೆಗೆ ಠಾಣೆಯಲ್ಲಿ ಲಾರಿ ವಾಹನವನ್ನು ಇಟ್ಟುಕೊಂಡು ಎಲ್ಲವೂ ಸರಿ ಇದ್ದಾವೆ ಎಂದು ಗಾಡಿಯನ್ನು ಬಿಟ್ಟು ಕಳಿಸಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಸಾರ್ವಜನಿಕ‌ ಪ್ರಶ್ನೆ.

ಈ ಠಾಣೆಗೆ ನೂತನವಾಗಿ ಬಂದಿರುವ ಪೊಲೀಸ್ ಅಧಿಕಾರಿ ತೋರಣಗಲ್ಲು, ಸಂಡೂರು, ಲೋಕಾಯುಕ್ತದಲ್ಲಿ ಸೇವೆ ಸಲ್ಲಿಸಿ ಬಳ್ಳಾರಿ ಎಪಿಎಂಸಿ ಠಾಣಿಗೆ ವರ್ಗಾವಣೆ ಆಗಿರುವ ರಫೀಕ್ ಅವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಸಾರ್ವಜನಿಕರು.

ಈಗಾಗಲೇ ಪಡಿತರ ಕಳಸಾಗಾಣಿಕೆ ದಂದೆ ನಡೆಯುತ್ತಿದ್ದು ಕಣ್ಣಿಗೆ ಕಂಡು ಕಾಣದಂತೆ ನಡೆಯುತ್ತದೆ ಇಂತಹ ಸಂದರ್ಭದಲ್ಲಿ ರಾಯಚೂರಿನಿಂದ ಛತ್ತೀಸ್ಗಢ ಗೆ ಬಿಲ್, ಬಳ್ಳಾರಿಯಲ್ಲಿ ಅಕ್ಕಿ, ಪೊಲೀಸ್ ಠಾಣೆಯಲ್ಲಿ ಗಾಡಿ,ಯಾವುದೇ ಪ್ರಕರಣ ಇಲ್ಲದೆ ಬಿಟ್ಟು ಕಳಿಸಿರುವುದು ಆಶ್ಚರ್ಯವಾಗಿದೆ. ಇನ್ನು ಈ ವಿಚಾರವಾಗಿ ಅಧಿಕಾರಿಗಳಿಗೆ ಕೇಳಿದರೆ ಇಲ್ಲ ನಮಗೆ ಗೊತ್ತಿಲ್ಲ ಎನ್ನುವ ಬೇಜವಾಬ್ದಾರಿ ಮಾತನಾಡುತ್ತಾರೆ.

ಲಾರಿ ಬಿಲ್ ಚೆಕ್ ಮಾಡಿದ್ದು ಯಾರು ?

ಗಣಿನಾಡು ಬಳ್ಳಾರಿ ನಗರದಲ್ಲಿ ಪೊಲೀಸರು ಲಾರಿ ಬಿಲ್ ಗಳು ಮದ್ಯರಾತ್ರಿ ಚೆಕ್ ಮಾಡಿದ್ದು ಯಾರು, ಸಾಧಾರಣ ಟೈಮ್ ನಲ್ಲಿ ಬಂದು ನೋಡಲು ಬರದೇ ಇರುವ ಅಧಿಕಾರಿಗಳು ಮದ್ಯ ರಾತ್ರಿ ಬಂದು ನೋಡಿರಬಹುದಾ. ಈಗಲೇ ರಫೀಕ್ ಅವರ ಮೇಲೆ ಕೆಲ ಸಿಬ್ಬಂದಿ ಮೇಲೆ ಆರೋಪ ಇವೆ. ಅಕ್ರಮ ಚಟವಟೆಕೆಗಳಿಗೆ ನಿರ್ದೇಶಕ ಕೀರ್ತಿ ಇದೇ ಲೋಕಾಯುಕ್ತ ಸಮಯದಲ್ಲಿ ಬಹುತೇಕ ಬಹಳ ಸಮಸ್ಯೆಗಳನ್ನು ಮಾಡಿದ್ದನ್ನು ನೊಂದವರು ತಿಳಿಸಿದ್ದಾರೆ.

“ಸಚಿವ ಸಂತೋಷ ಲಾಡ್ ಹೆಸರು ಹೇಳುವ ರಫೀಕ್”
ಠಾಣೆಯ ಅಧಿಕಾರಿ ರಫೀಕ್ ಪದೇ ಪದೇ ಸಚಿವ ಸಂತೋಷ್ ಲಾಡ್ ಹೆಸರು ಹೇಳಿಕೊಂಡು ಬಂದಿದ್ದಾನೆ ಎನ್ನುವ ಆರೋಪ ಸಹ ಇದೆ. ಈ ಅಕ್ರಮ ಅಕ್ಕಿ ಪಡಿತರದಲ್ಲಿ ಪೊಲೀಸ್ ಠಾಣೆಗೆ ಮಾಮೂಲು ಸಹ ಇದೆ ಎನ್ನುವ ಮಾಹಿತಿ ಸಹ ಇದೆ.

ಎಸ್ಪಿ ಅವರ ಕ್ರಮ ಯಾವಾಗ ?

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೋಭಾರಾಣಿ ಅವರು ಯಾವ ? ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ. ಜಿಲ್ಲೆಗೆ ಬಳ್ಳಾರಿ ಪೊಲೀಸ್ ವರಿಷ್ಟಾಧಿಕಾರಿ ಅಧಿಕಾರ ಸ್ವೀಕರಿದ ನಂತರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆವೇ ಎನ್ನುವ ಅನುಮಾನ ಸಹ ಇದೆ ಎನ್ನುವ ಮಾತು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.

ಒಟ್ಟಾರೆಯಾಗಿ ಸಿಎಂ ಸಿದ್ದರಾಮಯ್ಯ ಬಡವರಿಗೆ ನೀಡುವ ಪಡಿತರ ಅಕ್ಕಿ ಕಳ್ಳರ ಪಾಲಾಗುತ್ತಿದೆ, ಇನ್ನು ಪಡಿತರ ಅಕ್ಕಿಯ ವಿತರಕರು 1 ಕಿಲೋಗ್ರಾಂ ಗೆ 10 ರಿಂದ 12 ರೂಪಾಯಿ ಕೊಂಡುಕೊಳ್ಳುತ್ತಾರೆ ಎನ್ನುವ ಮಾಹಿತಿ ಸಹ ಇದೆ. ಇವರ ವಿರುದ್ಧ ಹಾಗೂ ಪಡಿತರ ಅಕ್ಕಿ ಮಾರಾಟ ಮಾಡುವ ಸಾರ್ವಜನಿಕರ ಮೇಲೆ ಕ್ರಮ ತೆಗೆದುಕೊಳ್ಳಬೇಕಿದೆ‌.

ಒಟ್ಟಾರೆಯಾಗಿ ಬಳ್ಳಾರಿ ಜಿಲ್ಲೆಯ ವಿವಿಧ ಠಾಣೆ ವ್ಯಾಪ್ತಿ ಅಧಿಕಾರಿಗಳಿಗೆ ಎಸ್ಪಿ ಅವರು ಯಾವ ರೀತಿ ಕ್ರಮ ತೆಗೆದುಕೊಳ್ಳುವರು ಕಾದು ನೋಡೊಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending