Connect with us

ಬಹಿರಂಗ

ಲಸಿಕೋತ್ಸವ ಮರೆತುಬಿಡಿ ; ನೀತಿಯೇ ನಿಷ್ಪ್ರಯೋಜಕವಾಗಿದೆ

Published

on

  • ಮೂಲ : ಪಾರ್ಥ ಮುಖೋಪಾಧ್ಯಾಯ, ಅನುವಾದ : ನಾ ದಿವಾಕರ

ಕೇಂದ್ರದ ಲಸಿಕೆ ನೀತಿಯನ್ನು ಕುರಿತು ದ ಹಿಂದೂ ಪತ್ರಿಕೆಯ ಲೇಖನದ ಅನುವಾದ – ಓದಿ

ಕೋವಿದ್ 19 ನಿರ್ವಹಣೆಯನ್ನು ಕುರಿತು ಸುಪ್ರೀಂಕೋರ್ಟ್ ಸ್ವಪ್ರೇರಣೆಯ ಮೊಕದ್ದಮೆಯನ್ನು ಕೈಗೆತ್ತಿಕೊಂಡ ನಂತರ, ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮೇ 9ರಂದು ಸಲ್ಲಿಸಿದ ಪ್ರಮಾಣಪತ್ರದಲ್ಲಿ ತನ್ನ ಲಸಿಕೆ ನೀತಿಯನ್ನು ಪರಿಷ್ಕರಿಸಿ, ಜಾರಿಯಲ್ಲಿರಿಸಲು ಅನುಮತಿ ಕೋರಿದೆ.

ನ್ಯಾಯಮೂರ್ತಿ ಹೋಮ್ಸ್ ಅವರ ಮಾತುಗಳಲ್ಲೇ ಹೇಳುವುದಾದರೆ ಈಗ ಸುಪ್ರೀಂಕೋರ್ಟ್ “ ಯಂತ್ರದ ಕೀಲುಗಳನ್ನು ಚಾಲ್ತಿಯಲ್ಲಿಡಲು ಯಂತ್ರವನ್ನು ಚಾಲನೆಯಲ್ಲಿ ಇಡಬೇಕಿದೆ. ” ಈ ಸಂದರ್ಭದಲ್ಲಿ ಲಸಿಕೋತ್ಸವದ ಮುಂದುವರಿಕೆಯೂ ಅಪ್ರಸ್ತುತ ಎನಿಸುತ್ತದೆ.. ಏಕೆಂದರೆ ಈ ಯಂತ್ರವೇ ನಿಷ್ಪ್ರಯೋಜಕವಾಗಿದ್ದು ಕೈಬಿಡಬೇಕಿದೆ. ಕೇಂದ್ರ ಸರ್ಕಾರ ಕೂಡಲೇ ತನ್ನ ಲಸಿಕೆಯ ನೀತಿಯನ್ನು ಪರಿಷ್ಕರಿಸುವುದೇ ಅಲ್ಲದೆ ಎಲ್ಲ ರಾಜ್ಯಗಳಿಗೂ ಸಮಾನ ಹಂಚಿಕೆ ಮಾಡುವಂತಹ ಹೊಸ ಲಸಿಕೆ ನೀತಿಯನ್ನು ಈ ಕೂಡಲೇ ಜಾರಿಗೊಳಿಸಬೇಕಿದೆ.

ನೀತಿ ಪರಿಷ್ಕರಣೆ ಏಕೆ ಬೇಕು ?

45 ವರ್ಷಕ್ಕೂ ಮೇಲ್ಪಟ್ಟವರಿಗೆ ಆದ್ಯತೆಯ ಮೇಲೆ ಲಸಿಕೆಯನ್ನು ನೀಡುವ ನೀತಿಯನ್ನು ಬದಿಗಿರಿಸಿ ಎಲ್ಲ ವಯಸ್ಕರಿಗೂ ಲಸಿಕೆ ನೀಡಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರಗಳು ಕೋರಿಕೆ ಸಲ್ಲಿಸಿರುವುದೇ ಮತಿಹೀನ ಕ್ರಮ. ಆದರೆ ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರವನ್ನು ನೋಡಿದರೆ, ಸರ್ಕಾರ ಬಹಳ ನಾಜೂಕಾಗಿ ತನ್ನ ಅಭಿಪ್ರಾಯವನ್ನು ಸಲ್ಲಿಸಿರುವಂತೆ ತೋರುತ್ತದೆ.

ಉದಾರವಾಗಿ ಸಮಸ್ತ ವಯಸ್ಕರಿಗೂ ಲಸಿಕೆ ನೀಡುವ ಹೊಸ ನೀತಿಯನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಪ್ರಮಾಣಪತ್ರದಲ್ಲೇ ಮೂರು ಕಾರಣಗಳನ್ನು ಗುರುತಿಸಬಹುದು.

ಮೊದಲನೆಯದಾಗಿ, ಇದು ಯಾವುದೇ ರೀತಿಯಲ್ಲಿ ಸಮರ್ಥನೀಯವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಸರಿಸುತ್ತಿರುವ ನೀತಿಗೆ ವ್ಯತಿರಿಕ್ತವಾದುದು. ಮತ್ತು ಕಟು ಶಬ್ದಗಳಲ್ಲಿ ಹೇಳುವುದಾದರೆ ಇದು ಅವಿವೇಕದ ಕ್ರಮ.

ಎರಡನೆಯದಾಗಿ, ಆಂತರಿಕವಾಗಿ ನೋಡಿದಾಗಲೂ ಇದು ಅಸಂಬದ್ಧ ಎನಿಸುವುದೇ ಅಲ್ಲದೆ ಅಸಂಗತವಾದುದೂ ಹೌದು. ಪ್ರತಿಯೊಂದು ರಾಜ್ಯಕ್ಕೆ ಒದಗಿಸುವ ಲಸಿಕೆಯ ಪ್ರಮಾಣ ಮತ್ತು ದರ ಎರಡನ್ನೂ ಕೇಂದ್ರವೇ ನಿಯಂತ್ರಿಸುತ್ತಲೇ ಉದಾರ ನೀತಿಯನ್ನು ಪ್ರತಿಪಾದಿಸುವುದೇ ಅಸಂಬದ್ಧತೆಗೆ ಸಾಕ್ಷಿ. ಹಾಗಾಗಿಯೇ ಪ್ರಸ್ತುತ ಸಂದರ್ಭದಲ್ಲಿ ಈ ಉದಾರ ನೀತಿಯು ಸಮಂಜಸವಾಗಿ ಕಂಡುಬರುತ್ತಿಲ್ಲ. ಲಸಿಕೆಯ ಎರಡನೆ ಡೋಸ್ ನೀಡದಿರುವ ರಾಜ್ಯಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಕೇಂದ್ರ ಸರ್ಕಾರ ಎಚ್ಚರಿಕೆ ನೀಡುತ್ತಿದೆ.

ಮೂರನೆಯ ಕಾರಣವೆಂದರೆ, ತನ್ನ ಪ್ರಮಾಣ ಪತ್ರದಲ್ಲಿ ಕೇಂದ್ರ ಸರ್ಕಾರ ತನ್ನ ಎದುರಿರುವ ಸಮಸ್ಯೆಯನ್ನು ನೇರವಾಗಿ ಪ್ರಸ್ತಾಪಿಸುವ ಬದಲು ಕಾನೂನು ಕೈಚಳಕ ತೋರಿಸುವ ಮೂಲಕ ತನ್ನ ವಾದವನ್ನು ಸಮರ್ಥಿಸಿಕೊಳ್ಳುತ್ತಿದೆ.

ಈ ಮುನ್ನ ಪೈಪೋಟಿಯ ಮಾರುಕಟ್ಟೆಯಲ್ಲಿ ಹಲವು ಉತ್ಪಾದಕರು ರೆಮಿಡಿಸಿವಿರ್ ಔಷಧಿಯನ್ನು ತಯಾರಿಸುತ್ತಿದ್ದರು. ಈಗ ಯಾವ ಉತ್ಪಾದಕ ಕಂಪನಿಯು ರೆಮಿಡಿಸಿವಿರ್ ಮಾತ್ರೆಗಳನ್ನು ಉತ್ಪಾದಿಸಬೇಕು ಎಂದು ನಿರ್ಧರಿಸುವುದರಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ. ಹಾಗೆಯೇ ಯಾವ ರಾಜ್ಯಕ್ಕೆ ಎಷ್ಟು ಸರಬರಾಜು ಮಾಡಬೇಕು, ಯಾವ ದರ ನಿಗದಿಪಡಿಸಬೇಕು ಎಂದು ನಿಗದಿಪಡಿಸಲು ಯೋಚಿಸುತ್ತಿದೆ.

ಮತ್ತೊಂದೆಡೆ ಸದ್ಯಕ್ಕೆ ಎರಡೇ ಪೂರೈಕೆದಾರರನ್ನು ಹೊಂದಿರುವ ಲಸಿಕೆಯನ್ನು ನಿಯಂತ್ರಣಮುಕ್ತವಾಗಿ ಸರಬರಾಜು ಮಾಡಲು ಯೋಚಿಸುತ್ತಿದೆ. ಇದೇ ಸಂದರ್ಭದಲ್ಲಿ 18 ರಿಂದ 45 ವರ್ಷದ ವಯಸ್ಕರನ್ನು ಲಸಿಕೆಯ ಯೋಜನೆಯಲ್ಲಿ ಸೇರ್ಪಡಿಸುವ ಮೂಲಕ ಈಗಾಗಲೇ ಲಸಿಕೆ ಪಡೆಯಲು ಕಾಯುತ್ತಿರುವ 20 ಕೋಟಿ ಜನತೆಗೆ ಇನ್ನೂ 60 ಕೋಟಿ ಜನರನ್ನು ಸೇರಿಸಲಾಗಿದೆ. ಈ ಸಂದರ್ಭದಲ್ಲಿ ವಿಭಿನ್ನ ದರಗಳನ್ನು ವಿಧಿಸುವ ಮೂಲಕ ಮಾರುಕಟ್ಟೆ ಪೈಪೋಟಿಯನ್ನು ಉತ್ತೇಜಿಸುವುದು ಸಮರ್ಥನೀಯವಲ್ಲ.

ಇತರ ಎಲ್ಲ ದೇಶಗಳಲ್ಲೂ ರಾಷ್ಟ್ರೀಯ ಸರ್ಕಾರವೇ ಲಸಿಕೆಯನ್ನು ಖರೀದಿಸುತ್ತಿದೆ. ಇಂಡೋನೇಷಿಯಾ ಮತ್ತು ಫಿಲಿಪೈನ್ಸ್ ದೇಶಗಳಲ್ಲಿ ಮಾತ್ರ ಕಾರ್ಪೋರೇಟ್ ಉದ್ದಿಮೆಗಳು ತಮ್ಮ ಸಿಬ್ಬಂದಿ ವರ್ಗದವರಿಗೆ ನೀಡಲು ಲಸಿಕೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಖರೀದಿಸಲು ಅವಕಾಶ ನೀಡಲಾಗುತ್ತಿದೆ.

ಲಸಿಕೆಯ ಉತ್ಪಾದನೆಯ ಹಂತದಲ್ಲಿ ಪುಣೆಯಲ್ಲಿರುವ ಐಸಿಎಂಆರ್-ಎನ್‍ಐವಿ ಸಂಸ್ಥೆಯ ಆಶ್ರಯದಲ್ಲಿಯೇ ಹೆಚ್ಚಿನ ಯಶಸ್ಸು ಸಾಧಿಸಲಾಗಿದೆ ಎಂಬ ಅರಿವಿದ್ದರೂ, ಕೋವ್ಯಾಕ್ಸಿನ್ ಲಸಿಕೆಗೆ ಹೆಚ್ಚಿನ ಉತ್ಪಾದನೆಯ ಪರವಾನಗಿ ಏಕೆ ನೀಡಲಾಗಿಲ್ಲ ಎನ್ನುವ ಪ್ರಶ್ನೆ, ಬಹುಶಃ ಪ್ರಶ್ನೆಯಾಗಿಯೇ ಉಳಿಯಲಿದೆ.

ರಾಜ್ಯಗಳು ತೆರಬೇಕಾಗುವ ಹೆಚ್ಚಿನ ದರ

ತನ್ನ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರವು, “ ಕೇಂದ್ರ ಸರ್ಕಾರ ಬೃಹತ್ ಪ್ರಮಾಣದ ವ್ಯಾಪಕವಾದ ಲಸಿಕಾ ಯೋಜನೆಯನ್ನು ಹಮ್ಮಿಕೊಂಡಿರುವುದರಿಂದ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗಿಂತಲೂ ಕೇಂದ್ರವೇ ಹೆಚ್ಚಿನ ಪ್ರಮಾಣದ ಲಸಿಕೆಗಳಿಗಾಗಿ ಬೇಡಿಕೆಯನ್ನು ಸಲ್ಲಿಸುತ್ತದೆ.

ಈ ವಾಸ್ತವ ಸನ್ನಿವೇಶವೇ ದರ ನಿಗದಿಯ ಮಾತುಕತೆಗಳಲ್ಲೂ ಬಿಂಬಿತವಾಗುತ್ತದೆ ,,,,, ” ಎಂದು ಹೇಳುತ್ತದೆ. ಅಂದರೆ ರಾಜ್ಯ ಸರ್ಕಾರ ಅಥವಾ ಖಾಸಗಿ ಆಸ್ಪತ್ರೆಗಳಿಗಿಂತಲೂ ಕಡಿಮೆ ದರದಲ್ಲಿ ಕೇಂದ್ರ ಲಸಿಕೆ ಖರೀದಿಸಬಹುದು ಎಂದರ್ಥ. ಹಾಗಾದಲ್ಲಿ ಏಪ್ರಿಲ್ 30ರವರೆಗೂ ಮಾಡಿದಂತೆ ಕೇಂದ್ರ ಸರ್ಕಾರವೇ ಏಕೆ ಲಸಿಕೆ ಖರೀದಿಸಿ ವಿತರಣೆ ಮಾಡಬಾರದು ?

ಮತ್ತೊಂದು ನಿಯಮದ ಅನುಸಾರ, 45 ವರ್ಷಕ್ಕೆ ಮೇಲ್ಪಟ್ಟವರಿಗಾಗಿ ಖರೀದಿಸುವ ಲಸಿಕೆಯಲ್ಲಿ ಶೇ 50ರಷ್ಟನ್ನು ಕೇಂದ್ರ ಸರ್ಕಾರವೇ ಖರೀದಿಸಿ ರಾಜ್ಯಗಳಿಗೆ ಹಂಚುತ್ತದೆ. ರಾಜ್ಯ ಸರ್ಕಾರಗಳು ಒಟ್ಟು ಉತ್ಪಾದನೆಯಾಗುವ ಲಸಿಕೆಯಲ್ಲಿ ಶೇ 25ರಷ್ಟನ್ನು ಖರೀದಿಸಿ ಬಳಸಬೇಕಾಗುತ್ತದೆ. ರಾಜ್ಯಗಳಿಗೆ ಎಷ್ಟು ಪ್ರಮಾಣದ ಲಸಿಕೆ ಪೂರೈಸಲಾಗುತ್ತದೆ ಎನ್ನುವುದನ್ನು ಪ್ರತಿಯೊಂದು ರಾಜ್ಯಕ್ಕೂ ಮುಂಚಿತವಾಗಿಯೇ ತಿಳಿಸಲಾಗಿರುತ್ತದೆ,,, ಎಂದೂ ಹೇಳಲಾಗಿದೆ.

“ ಲಸಿಕೆ ಉತ್ಪಾದಕ ಕಂಪನಿಗಳೊಡನೆ ಅನೌಪಚಾರಿಕ ಮಾತುಕತೆಗಳನ್ನು ನಡೆಸುವ ಮೂಲಕ ಎಲ್ಲ ರಾಜ್ಯಗಳಿಗೂ ಸಮಾನ ಬೆಲೆಯಲ್ಲಿ ವಿತರಿಸಲು ಸೂಚಿಸಲಾಗಿದೆ,,,” ಎಂದೂ ಹೇಳಲಾಗಿದೆ. ಅಂದರೆ ಕೇಂದ್ರ ಸರ್ಕಾರ ಲಸಿಕೆಯ ಪ್ರಮಾಣ ಮತ್ತು ದರ ಎರಡನ್ನೂ ನಿರ್ಧರಿಸಿದೆ ಎಂದರೆ ಇದು ಉದಾರ ನೀತಿ ಎನಿಸಿಕೊಳ್ಳುವುದಿಲ್ಲ.

ಪ್ರತಿಯೊಂದು ರಾಜ್ಯದಲ್ಲಿ ಲಭಿಸುವ ಉಳಿದ ಶೇ 25ರಷ್ಟು ಲಸಿಕೆಗಳು ಖಾಸಗಿ ಕ್ಷೇತ್ರ ಮತ್ತು ಲಸಿಕೆ ಉತ್ಪಾದಕರ ನಡುವೆ ಏರ್ಪಟ್ಟ ಒಪ್ಪಂದಗಳಿಗೆ ಅನುಗುಣವಾಗಿ, ಖಾಸಗಿ ಆಸ್ಪತ್ರೆಗಳಿಗೆ ಲಭಿಸುತ್ತವೆ. ಇಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ ಈ ಒಪ್ಪಂದಗಳು ರಾಜ್ಯಮಟ್ಟದಲ್ಲಿ ನಡೆಯದೆ ಕಾರ್ಪೋರೇಟ್ ಮಟ್ಟದಲ್ಲಿ ನಡೆಯುವುದರಿಂದ ಖಾಸಗಿ ಕ್ಷೇತ್ರದ ಲಕ್ಷಣವನ್ನು ಹೇಗೆ ನಿಷ್ಕರ್ಷೆ ಮಾಡಲು ಸಾಧ್ಯ ? ಒಂದು ವೇಳೆ ಖಾಸಗಿ ಕ್ಷೇತ್ರ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಸಾಧ್ಯವಾಗದಿದ್ದರೆ ಏನಾಗುತ್ತದೆ ?

ಈ ಪ್ರಶ್ನೆಗಳ ನಡುವೆಯೇ ಗಮನಿಸಬೇಕಾದ ಅಂಶ ಎಂದರೆ ಕೋವಿನ್ ವೆಬ್ ತಾಣಗಳ ಸಂಖ್ಯೆಯಲ್ಲಿ ಖಾಸಗಿ ಕ್ಷೇತ್ರದ ಪ್ರಮಾಣ ಮೊದಲು ಶೇ 10ರಷ್ಟಿದ್ದುದು ಈಗ ಶೇ 3ರಷ್ಟಾಗಿದೆ. ಕೆಲವು ದಿನಗಳ ಹಿಂದೆ ಬಿಹಾರದಲ್ಲಿ ಒಂಬತ್ತು, ಚಂದಿಘಡದಲ್ಲಿ 32 ಮತ್ತು ಅನರುಣಾಚಲ ಪ್ರದೇಶದಲ್ಲಿ ಒಂದೂ ತಾಣ ಇರಲಿಲ್ಲ. ಖಾಸಗಿ ಕ್ಷೇತ್ರದ ಅಸ್ತಿತ್ವ ನಗರ ಪ್ರದೇಶಗಳಲ್ಲೇ ಹೆಚ್ಚಿರುವುದರಿಂದ ವಿತರಣೆಯೂ ನಗರ ಕೇಂದ್ರಿತವೇ ಆಗಿರುತ್ತದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ಶೂನ್ಯ ವೆಚ್ಚದಲ್ಲಿ ಸಂಪೂರ್ಣ ಉತ್ಪಾದನೆಯನ್ನು ಮಾಡುವ ಬದಲು, ರಾಜ್ಯಗಳು ಉತ್ಪಾದನೆಯ ಶೇ 25ರಷ್ಟನ್ನು ದುಪ್ಪಟ್ಟು ದರ ಅಥವಾ ಇನ್ನೂ ಹೆಚ್ಚಿನ ಬೆಲೆ ಕೊಟ್ಟು ಖರೀದಿಸಬೇಕಿದೆ. ಉಳಿದ ಕಾಲು ಭಾಗವನ್ನು ಖಾಸಗಿ ಕ್ಷೇತ್ರವು, ಮೊದಲಿಗಿಂತಲೂ ಹತ್ತು ಪಟ್ಟು ಹೆಚ್ಚಿನ ಬೆಲೆ ನೀಡಿ ಆಕ್ರಮಿಸುತ್ತದೆ. ಎಲ್ಲರಿಗೂ ಲಸಿಕೆ ನೀಡುವ ಘೋಷಣೆ ಮಾಡಿದ ರಾಜ್ಯಗಳಿಗೆ ತಮ್ಮ ಘೋಷಣೆ ಇಷ್ಟು ದುಬಾರಿಯಾದೀತು ಎಂಬ ಊಹೆಯೂ ಇರಲಿಕ್ಕಿಲ್ಲ.

ಕೇಂದ್ರದ ಕಳಪೆ ಸಾಧನೆ

ಆದರೆ ರಾಜ್ಯಗಳು ಇತರ ಮೂಲಗಳಿಂದ ಲಸಿಕೆಯನ್ನು ಪಡೆಯಬಹುದೇ ? ಈಗಾಗಲೇ ಜಾಗತಿಕ ಟೆಂಡರ್ ಮೂಲಕ ಖರೀದಿಸಲು ಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಮಾಣ ಪತ್ರದಲ್ಲಿ “ ಈಗ ಸದ್ಯಕ್ಕೆ ಇತರ ದೇಶಗಳಿಂದ ಇತರ ಲಸಿಕೆಗಳನ್ನು ಖರೀದಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದಾಗಿರುತ್ತದೆ,,,, ಕಳೆದ ವರ್ಷದ ಕೊನೆಯ ತ್ರೈಮಾಸಿಕದಿಂದಲೇ ಈ ಕುರಿತು ಮಾತುಕತೆಗಳು ನಡೆಯುತ್ತಿವೆ,,,,ಸದ್ಯದ ಪರಿಸ್ಥಿತಿಯಲ್ಲಿ ಸಮರೋಪಾದಿಯಲ್ಲಿ ಈ ಪ್ರಯತ್ನಗಳು ನಡೆಯುತ್ತಿದ್ದು ರಾಜತಾಂತ್ರಿಕ ಮಾರ್ಗಗಳನ್ನೂ ಒಳಗೊಂಡಂತೆ ಎಲ್ಲ ಸಂಪನ್ಮೂಲಗಳನ್ನೂ ಬಳಸಿಕೊಂಡು ಮಾತುಕತೆಗಳನ್ನು ನಡೆಸಲಾಗುತ್ತಿದೆ ” ಎಂದು ಹೇಳುತ್ತದೆ.

ಇದರ ಅರ್ಥ ಏನೆಂದರೆ ಕಳೆದ ಆರು ತಿಂಗಳಿನಿಂದಲೂ ಕೇಂದ್ರ ಸರ್ಕಾರ ಈ ಪ್ರಯತ್ನ ನಡೆಸುತ್ತಿದೆ ಆದರೆ ಶೂನ್ಯ ಸಾಧನೆ ಎಂದಷ್ಟೆ. ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಗಳನ್ನು ಸುಂದರ ಭ್ರಮೆಗೊಳಪಡಿಸಲಾಗುತ್ತಿದೆ ಎನ್ನಬಹುದು ಅಥವಾ ರಾಜ್ಯ ಸರ್ಕಾರಗಳು ಅಷ್ಟೊಂದು ಅಮಾಯಕ ಎಂದು ಹೇಳಲಾಗದಿದ್ದರೆ, ಈ ಸರ್ಕಾರಗಳ ಜಾಗತಿಕ ಟೆಂಡರ್ ಗಳು ಕೇವಲ ನಾಮಕಾವಸ್ಥೆ ಎನ್ನಬಹುದು.

ಅಂತಿಮವಾಗಿ, ಮನೆಮನೆಗೆ ತಲುಪಿ ಲಸಿಕೆ ನೀಡುವ ಯೋಜನೆಯ ಬಗ್ಗೆ ಪ್ರಮಾಣಪತ್ರದಲ್ಲಿ ಕಾನೂನು ಕೈಚಳಕವನ್ನು ಸ್ಪಷ್ಟವಾಗಿ ಗುರುತಿಸಬಹುದು. ಇದು ಕಷ್ಟ ಸಾಧ್ಯ ಎನ್ನುವುದು ನಿರ್ವಿವಾದ ಅಂಶ. ಆದರೆ ಜನರು ಲಸಿಕೆಯನ್ನು ಸುಲಭವಾಗಿ ಪಡೆಯುವಂತೆ ಮಾಡಲು ಪ್ರತಿಯೊಂದು ಬ್ಲಾಕ್‍ಗಳಲ್ಲೂ, ಸಮುದಾಯ ಕೇಂದ್ರಗಳಲ್ಲಿ, ಕೋವಿದ್ ನಿಯಮಗಳನ್ನು ಪಾಲಿಸುವುದರ ಮೂಲಕವೇ ಅನುಕೂಲ ಮಾಡಿಕೊಡುವ ಉತ್ಸಾಹ ತೋರಬಹುದಿತ್ತು.

ಬದಲಾಗಿ, ಮನೆಮನೆಗೆ ಲಸಿಕೆ ತಲುಪಿಸುವ ಅನಗತ್ಯ ಕ್ರಮವನ್ನು ಅಲ್ಲಗಳೆಯುತ್ತಲೇ, ಈ ಪ್ರಮಾಣ ಪತ್ರದಲ್ಲಿ ಸರ್ಕಾರವು “ ಕೇಂದ್ರ ಸರ್ಕಾರವು ತನ್ನ ನೀತಿಯನ್ನು ಪರಿಷ್ಕರಿಸಿ ಶೇ 100ರಷ್ಟು ಲಸಿಕೆಯನ್ನು ತಾನೇ ಖರೀದಿಸಿ ರಾಜ್ಯಗಳಿಗೆ ಸಮನಾಗಿ ಹಂಚುತ್ತದೆಯೇ ” ಎಂಬ ನ್ನು ಒಮ್ಮೆಲೇ ನಿರಾಕರಿಸಿದೆ. ಈ ನಿರಾಕರಣೆಯನ್ನೂ ನಯವಾಗಿಯೇ ಸೂಚಿಸಲಾಗಿದ್ದು “ ಈ ಪ್ರಶ್ನೆಗೆ ಉತ್ತರವನ್ನು ಈ ಮೇಲೆ ಉಲ್ಲೇಖಿಸಲಾಗಿದೆ ” ಎಂದು ಹೇಳುತ್ತದೆ. ಮೇಲಿನ ಯಾವ ಪುಟದಲ್ಲೂ ಈ ನಿಟ್ಟಿನಲ್ಲಿ ಉತ್ತರ ದೊರೆಯುವುದಿಲ್ಲ !

ಈ ರೀತಿಯ ಸಮಾನ ಹಂಚಿಕೆಗೆ ಅಗತ್ಯವಾದ ನಂಬಿಕೆ ಮತ್ತು ವಿಶ್ವಾಸ ಕೇಂದ್ರ ಮತ್ತು ರಾಜ್ಯಗಳ ನಡುವೆ ಉಳಿದಿಲ್ಲವೇ? ಹಾಗಿದ್ದಲ್ಲಿ ಈ ಅಪನಂಬಿಕೆಯನ್ನು ಇನ್ನೂ ಹೆಚ್ಚು ಮಾಡಿ ವಿಘಟನೆಯತ್ತ ಸಾಗುವುದಕ್ಕಿಂತಲೂ, ವಿಶ್ವಾಸವನ್ನು ಗಳಿಸುವುದು ಆದ್ಯತೆಯಾಗಬೇಕು.

ಈ ಹಿನ್ನೆಲೆಯಲ್ಲಿ ನೋಡಿದಾಗ ಕೇಂದ್ರ ಸರ್ಕಾರದ ಉದಾರ ಲಸಿಕೆ ನೀತಿ ಸಾಧಿಸಿರುವುದಾದರೂ ಏನು ? ಲಸಿಕೆ ಉತ್ಪಾದಿಸುವ ಕಂಪನಿಯ ಆದಾಯವನ್ನು ಹೆಚ್ಚಿಸಿದೆಯಷ್ಟೆ. ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯ ಪಾವತಿಸಬೇಕಿರುವ ದರದಲ್ಲಿ ಕೋವ್ಯಾಕ್ಸಿನ್‍ಗೆ ಒಂದು ಡೋಸ್‍ಗೆ 477 ರೂ, ಕೋವಿಷೀಲ್ಡ್ ಒಂದು ಡೋಸ್‍ಗೆ 302 ನಿಗದಿಪಡಿಸುವ ಮೂಲಕ ಕಂಪನಿಗಳ ಆದಾಯ ಹೆಚ್ಚಿಸಲಾಗಿದೆ.

ಸರಾಸರಿ ಹೊರೆಯ ಆಧಾರದಲ್ಲಿ ದರವನ್ನು ನಿಗದಿಪಡಿಸುವಾಗ, ಲಸಿಕೆ ಪೂರೈಕೆಯನ್ನು ಕೇಂದ್ರಕ್ಕೆ ಶೇ 50, ರಾಜ್ಯಗಳಿಗೆ ಶೇ 25 ಮತ್ತು ಖಾಸಗಿ ಕ್ಷೇತ್ರಕ್ಕೆ ಶೇ 25 ಎಂದು ನಿಗದಿಪಡಿಸಿ ಲೆಕ್ಕ ಮಾಡಲಾಗುತ್ತದೆ ಎಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.

ಇದನ್ನೂ ಓದಿ |ಕೊರೋನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ : ಸಿಎಂ ಯಡಿಯೂರಪ್ಪ

ಉತ್ಪಾದಕ ಕಂಪನಿಗಳು ಕೋವ್ಯಾಕ್ಸಿನ್ ಮತ್ತು ಕೋವಿಷೀಲ್ಡ್ ಎರಡನ್ನೂ ಕೇಂದ್ರ ಸರ್ಕಾರಕ್ಕೆ 154 ರೂನಂತೆ ಪೂರೈಕೆ ಮಾಡಬೇಕು. ಕೋವ್ಯಾಕ್ಸಿನ್ ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ 400 ರೂನಂತೆ ಮತ್ತು ಖಾಸಗಿ ಕ್ಷೇತ್ರಕ್ಕೆ 1200 ರೂನಂತೆ, ಕೋವಿಷೀಲ್ಡ್ ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ 300 ರೂನಂತೆ, ಖಾಸಗಿ ಕ್ಷೇತ್ರಕ್ಕೆ 600 ರೂನಂತೆ ಪೂರೈಸಬೇಕು ಎಂದು ನಿಗದಿಪಡಿಸಲಾಗಿದೆ.

ಈ ಬೆಲೆಗಳು ಸ್ವಾಭಾವಿಕವಾಗಿಯೇ ಹೆಚ್ಚಾಗಿ ಕಾಣುತ್ತದೆ. ಈ ಕಂಪನಿಗಳ ಆದಾಯವನ್ನು ಹೆಚ್ಚಿಸಬೇಕಾದರೆ ಕೇಂದ್ರ ಸರ್ಕಾರಕ್ಕೆ ನಿಗದಿಯಾಗಿರುವ 154 ರೂಗಳನ್ನು ಮತ್ತಷ್ಟು ಹೆಚ್ಚಿಸಬೇಕಾಗುತ್ತದೆ. ಇದರಿಂದ ಉತ್ಪಾದಕರು ಜಾಗತಿಕವಾಗಿ ಮಾರಾಟ ಮಾಡಲು ಹೆಚ್ಚಿನ ಉತ್ಪಾದನೆ ಮಾಡಬಹುದು ಮತ್ತು ಅಂತರಿಕವಾಗಿಯೂ ಶೇ 100ರಷ್ಟು ಬೇಡಿಕೆಯನ್ನು ಪೂರೈಸಲೂಬಹುದು.

ಈ ಹೊಸ ಜಟಿಲ ನೀತಿಗಳ ಹೊರತಾಗಿಯೂ ರಾಜ್ಯ ಸರ್ಕಾರಗಳು ಹೆಚ್ಚಿನ ಹೊರೆಯನ್ನು ಭರಿಸಲು ಸಾಧ್ಯವಾಗುತ್ತದೆ. ಕಳೆದ ವರ್ಷ ಮೂಲ ಸೌಕರ್ಯಗಳಿಗಾಗಿ ಕೇಂದ್ರ ವಿತ್ತಸಚಿವಾಲಯ ಘೋಷಿಸಿದ ಬಡ್ಡಿ ರಹಿತ ಸಾಲಗಳನ್ನು ಐವತ್ತು ವರ್ಷಗಳ ಅವಧಿಗಾಗಿ ರಾಜ್ಯ ಸರ್ಕಾರಗಳಿಗೆ ನೀಡುವುದರ ಮೂಲಕ ಕೇಂದ್ರ ಸರ್ಕಾರ ಈ ಹೊರೆಯನ್ನು ನೀಗಿಸಲು ನೆರವಾಗಬಹುದು.

ಲಸಿಕೆಯನ್ನು ಖಾಸಗಿ ಕ್ಷೇತ್ರಗಳ ಮೂಲಕ, ಕಾರ್ಪೋರೇಟ್ ಕ್ಷೇತ್ರದ ಮೂಲಕ ಪಡೆಯುವ ಸಾಮರ್ಥ್ಯ ಇದ್ದವರು ಮುಂದುವರೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವರು ಸ್ಪಷ್ಟವಾಗಿ ಹೇಳಿದ್ದಾಗಿದೆ. ಈ ನೀತಿಯನ್ನು ಒಪ್ಪಿಕೊಳ್ಳುವುದೇ ಆದರೆ, ಪೂರೈಕೆಯ ಪ್ರಮಾಣವನ್ನು ನಂಬಲು ಸಾಧ್ಯವಾಗುವುದಿಲ್ಲ.

ಲಸಿಕೆಗಳು ದುಬಾರಿಯಾಗುತ್ತವೆ. ಇದರಿಂದ ವಿವಿಧ ರಾಜ್ಯಗಳಿಗೆ ಹೆಚ್ಚಿನ ಹೊರೆಯಾಗುವುದೇ ಅಲ್ಲದೆ, ಬಡ ಜನತೆ ಲಸಿಕೆಗಾಗಿ ನಿಲ್ಲುವ ಸಾಲುಗಳ ಅಂಚಿಗೆ ತಳ್ಳಲ್ಪಡುತ್ತಾರೆ. ಅಲ್ಲವೇ ? ಅಂದರೆ ಲಸಿಕೆಯ ವಿತರಣೆಯನ್ನೇ ಅರ್ಧದಷ್ಟು ಕಡಿಮೆ ಮಾಡುವ ಮೂಲಕ ದುರ್ಬಲ ವರ್ಗಗಳಿಗೆ ಲಸಿಕೆ ನೀಡುವುದೂ ವಿಳಂಬ ಮಾಡಲಾಗುತ್ತದೆ ಅಲ್ಲವೇ ? ಹಾಗಾದರೆ ಈ ಹೊಸ ನೀತಿಯನ್ನು ತಿರಸ್ಕರಿಸುವುದೇ ವಿವೇಕಯುತ ಕ್ರಮ.

( ಲೇಖಕರು ಕೇಂದ್ರೀಯ ಕಾರ್ಯನೀತಿ ಸಂಶೋಧನಾ ಸಂಸ್ಥೆಯ ಹಿರಿಯ ಸದಸ್ಯರು )

ಕೃಪೆ : Thepolitic

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ಕ್ಷೌರ ಮಾಡಿಸಿಕೊಳ್ಳುವಾಗ ಅಸ್ಪೃಶ್ಯತಾಚರಣೆ ಮತ್ತು ಪರಿಹಾರ

Published

on

ಸಾಂದರ್ಭಿಕ ಚಿತ್ರ
  • ರಘೋತ್ತಮ ಹೊ.ಬ

ಕ್ಷೌರ ಮಾಡಿಸಿಕೊಳ್ಳಲು ಬಂದ ದಲಿತ ಯುವಕರ ಮೇಲೆ ಹಲ್ಲೆ: ಮನನೊಂದ ಯುವಕರಿಂದ ಆತ್ಮಹತ್ಯೆ ಯತ್ನ ಎಂಬ ಸುದ್ದಿ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿದೆ. ಇದಕ್ಕೆ ಪರಿಹಾರ?

ಪರಿಹಾರವನ್ನು ವಯಕ್ತಿಕ ನೆನಪುಗಳ ಮೂಲಕವೇ ನಾನು ಬಿಚ್ಚಿಡಲು ಯತ್ನಿಸುವುದಾದರೆ, ಬಾಲ್ಯದಲ್ಲಿ ನಮ್ಮ ಊರಿನಲ್ಲಿ ವಿಶೇಷವಾಗಿ ನಮ್ಮ ಬೀದಿಯಲ್ಲಿ ನಮಗೆ ಕೂದಲು ಕತ್ತರಿಸುವ ಸಮಸ್ಯೆಯೇ ಇರಲಿಲ್ಲ! ಅಸ್ಪೃಶ್ಯತೆ ಅದು ಇದು ಏನೂ ಇರಲಿಲ್ಲ! ಕಾರಣ ನಮ್ಮದೆ ಸಮುದಾಯದ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದ ಅಜ್ಜ ರತ್ನಯ್ಯ ಕೂದಲು ಕತ್ತರಿಸುವ, ಕ್ಷೌರ ಮಾಡುವ ವೃತ್ತಿ ಮಾಡುತ್ತಿದ್ದರು.

ಸುಮಾರು ಅರೆ ಬರೆ ಶೈಲಿಯಲ್ಲಿ ಕೂದಲು ಕತ್ತರಿಸುತ್ತಿದ್ದ ಅವರ ಬಳಿ ಬಾಲಕರಾದ ನಮಗೆ ಹೇರ್ ಕಟಿಂಗ್ ಮಾಡಿಸಿಕೊಳ್ಳುವುದು ಕೆಲವೊಮ್ಮೆ ಹಿಂಸೆ ಎನಿಸುತ್ತಿತ್ತು. ಆದರೆ ನಮ್ಮ ಅಪ್ಪನಿಗೆ, ಬೀದಿಯ ಇತರರಿಗೆ ಅದೇ ಒಂದು ರೀತಿಯ ವರದಾನವಾಗಿತ್ತು. ಪರಿಣಾಮ ಕ್ಷೌರ ವೃತ್ತಿಗೆ ಸಂಬಂಧಿಸಿದ ಅಸ್ಪೃಶ್ಯತೆ ಒಂದು ದಿನವೂ ನಮಗೆ ಕಾಡಲಿಲ್ಲ!

ಇವರಲ್ಲದೆ ಮತ್ತೊಬ್ಬ ಅಣ್ಣ ನಮ್ಮ ಪಕ್ಕದ ಊರಿಂದ ಬರುತ್ತಿದ್ದ ನಮ್ಮದೆ ಸಮುದಾಯದ ಸಿದ್ದಣ್ಣ ಹೇರ್ ಕಟಿಂಗ್ ಉಪಕರಣಗಳ ಸಮೇತ ವಾರಕ್ಕೊಮ್ಮೆ ಹಾಜರಾಗುತ್ತಿದ್ದ. ಸಿದ್ದಣ್ಣ ಯಾರದ್ದಾದರೂ ಜಗುಲಿ ಮೇಲೆ ಕುಳಿತುಕೊಂಡರೆಂದರೆ ಸಾಕು ಅದೇ ಆವತ್ತಿನ ಕಟಿಂಗ್ ಶಾಪ್ ಆಗುತ್ತಿತ್ತು.

ಅಲ್ಲದೇ ಸಿದ್ದಣ್ಣ ತಮ್ಮ ಸ್ವಂತ ಊರಿನಲ್ಲೂ ತನ್ನದೆ ಸ್ವಂತ ಒಂದು ಹೇರ್ ಕಟಿಂಗ್ ಶಾಪ್ ಇಟ್ಟುಕೊಂಡಿದ್ದರಿಂದ ನಮಗೆ ಹಬ್ಬ ಹರಿದಿನಗಳಲ್ಲಿಯೂ ಸಮಸ್ಯೆ ಆಗುತ್ತಿರಲಿಲ್ಲ. ಸುಮಾರು 3 ಕಿ.ಮೀ ದೂರದಲ್ಲಿ ಇದ್ದ ಸಿದ್ದಣ್ಣನ ಆ ಶಾಪ್ ಗೆ ಒಮ್ಮೆ ಅಪ್ಪ ಸೈಕಲ್ ನಲ್ಲಿ ಕೂರಿಸಿಕೊಂಡು ಹೋಗಿ ನನಗೆ ಹೇರ್ ಕಟಿಂಗ್ ಮಾಡಿಸಿದ ನೆನಪು ನನಗೆ ಈಗಲೂ ಹಚ್ಚಹಸಿರಾಗಿದೆ.

ಆದ್ದರಿಂದ ಶೋಷಿತ ಸಮುದಾಯಗಳ ಜನರು ಇತರೆ ಜನಾಂಗಗಳ ಅಂಗಡಿಗಳಿಗೆ ಹೋಗಿ ಅವರು ಕಟಿಂಗ್ ಮಾಡಲಿಲ್ಲ, ಇವರು ನೀರು ಕೊಡಲಿಲ್ಲ, ದೇವಾಲಯ ಪ್ರವೇಶ ಕೊಡಲಿಲ್ಲ ಎಂದು ಹಲುಬುವ ಬದಲು ತಮ್ಮದೇ ಸ್ವಂತ ಹೇರ್ ಕಟಿಂಗ್ ಸೆಲೂನ್ ಗಳನ್ನು ತೆರೆಯಬೇಕು. ಆ ಮೂಲಕ ಸಮುದಾಯದ ಒಬ್ಬ ವ್ಯಕ್ತಿಗೆ ಒಂದು ಊರಿನಲ್ಲಿ ಒಂದು ಉದ್ಯೋಗ ಸಿಕ್ಕಂತೆ ಆಗುತ್ತದೆ ಅಸ್ಪೃಶ್ಯತೆ ಕೂಡ ತಪ್ಪುತ್ತದೆ.

ಸಮುದಾಯದ ಎಲ್ಲಾ ಸದಸ್ಯರು ಅಲ್ಲಿಯೇ ಕಟಿಂಗ್ ಮಾಡಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಹಾಗೆ ಸಂಬಂಧಿಸಿದ ಆ ಹೇರ್ ಕಟಿಂಗ್ ಶಾಪ್ ತೆರೆಯುವ ವ್ಯಕ್ತಿ ಅದನ್ನು ಪಾರ್ಟಟೈಂ ಉದ್ಯೋಗದ ರೀತಿ ಮಾಡಿಕೊಂಡರೂ ಸರಿಯೇ. ಈ ದಿಸೆಯಲ್ಲಿ ಶೋಷಿತ ಸಮುದಾಯಗಳ ಮಹಿಳೆಯರು ಕೂಡ ತಮ್ಮದೇ ಸ್ವಂತ ಬ್ಯೂಟಿ ಪಾರ್ಲರ್ ಗಳನ್ನು ತೆಗೆಯುವುದು ಉಚಿತ ಮುಖ್ಯವಾಗಿ ಸ್ವಯಂ ಉದ್ಯೋಗದ ದೃಷ್ಟಿಯಲ್ಲಿ.

ಒಟ್ಟಾರೆ ಹೇರ್ ಕಟಿಂಗ್ ಶಾಪ್ ಗೆ ಸಂಬಂಧಿಸಿದ ಅಸ್ಪೃಶ್ಯತೆಯ ಹಿನ್ನೆಲೆಯಲ್ಲಿ ಶೋಷಿತ ಸಮಯ ಜನರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಬದಲಿಗೆ ಅದನ್ನೇ ಒಂದು ಚಾಲೆಂಜ್ ಆಗಿ ತೆಗೆದುಕೊಂಡು ತಾವೇ ಆ ವೃತ್ತಿಗೆ ಇಳಿಯಬೇಕು. ಆ ಮೂಲಕ ಅಸ್ಪೃಶ್ಯತೆಯಿಂದ ತಪ್ಪಿಸಿಕೊಳ್ಳಬೇಕು, ಅಲ್ಲದೇ ಸ್ವಯಂ ಉದ್ಯೋಗದ ದಾರಿಯಾಗಿಯೂ ಅದನ್ನು ಕಂಡುಕೊಳ್ಳಬೇಕು ಅಥವಾ ಕಂಡುಕೊಳ್ಳಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ : ಪಿಎಸ್ಐ ಅರ್ಜುನ್ ಶಿಕ್ಷೆಗೆ ಆಗ್ರಹ

Published

on

ದಲಿತ ಯುವಕ ಪುನೀತ್ | ಪಿಎಸ್ಐ ಅರ್ಜುನ್
  • ನಾಗರಾಜ್ ಹೆತ್ತೂರು

ಕೋವಿಡ್ ನಡುವೆ ಇಡೀ ರಾಜ್ಯವೇ ಬೆಚ್ಚಿ ಬಿಳಿಸುವ ಅಮಾನವೀಯ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದು ಹೋಯ್ತು. ಪುನೀತ್ ಎಂಬ ಇಪ್ಪತ್ತೆರಡು ವಯಸ್ಸಿನ ಯುವಕನ ಬಾಯಿಗೆ ಮೂತ್ರ ಕುಡಿಸಿ ಕೊನೆಗೆ ನೆಲಕ್ಕೆ ಸುರಿದಿದ್ದ ಮೂತ್ರವನ್ನು ನಾಲಗೆಯಿಂದ ನೆಕ್ಕಿಸಿದ ಗೋಣಿಬೀಡಿದ ಪಿಎಸ್ಐ ಅರ್ಜುನ್ ಎಂಬಾತ ತನ್ನ ವಿಕೃತಿಯನ್ನು ಮರೆದ.

ನಿಜ, ಕೋವಿಡ್ ಇಲ್ಲದಿದ್ದರೆ ಇಡೀ ರಾಜ್ಯಕ್ಕೆ ರಾಜ್ಯವೇ ಈ ಘಟನೆಯನ್ನು ಖಂಡಿಸುತ್ತಿತ್ತು. ನಾನು ಪುನೀತ್ ಪರ `am stand with puneeth ‘ ಎಂದು ಜನ ದಂಗೆ ಏಳುತ್ತಿದ್ದರು ಮೂಡಿಗೆರೆ, ಕಿರಗುಂದ ಚಲೋಗಳು ನಡೆಯುತ್ತಿದ್ದವು.

ಇಂತಹುದೊಂದು ಅಮಾನವೀಯ ಕೃತ್ಯ ನಡೆದರೂ ಅರ್ಜುನ್ ಎಂಬ ಪಿಎಸ್ಐ ಗೆ ಯಾವ ಶಿಕ್ಷೆಯೂ ಆಗಿಲ್ಲ. ಜನರ ಕೋಪ, ಆಕ್ರೋಶ ಶಮನಗೊಳಿಸಲು ಆತನನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿಕೊಂಡಿರುವ ಇಲಾಖೆ ಮುಖ್ಯಸ್ಥರು ಕೇವಲ ಕಣ್ಣು ಒರೆಸುವ ಕೆಲಸ ಮಾಡಿದ್ದಾರೆ. ಮೂತ್ರ ಕುಡಿಸಿದಂತ ಅತ್ಯಂತ ಅಮಾನವೀಯ ಪ್ರಕರಣ ನಡೆದರೂ ಮಾನವ ಹಕ್ಕು ಆಯೋಗ ತುಟಿ ಬಿಚ್ಚಿಲ್ಲ…

ಇಡೀ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದ್ದು ಇದರ ಸಂಪೂರ್ಣ ಡೀಟೆಲ್ ಸ್ಟೋರಿಯನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ‘ಭೀಮ ವಿಜಯ ‘ಮಾಡುತ್ತಿದೆ.

ಈತನ ಹೆಸರು ಪುನೀತ್ 22 ವರ್ಷದ ಸ್ತುರದ್ರೂಪಿ ಯುವಕ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದವನು. ಐಟಿಐ ಮಾಡಿಕೊಂಡು ಹೊರಗುತ್ತಿಗೆಯಲ್ಲಿ ಕಂಪ್ಯೂಟರ್ ಕೆಲಸ ಮಾಡಿಕೊಂಡಿರುತ್ತಾನೆ.

ಇದೇ ಗ್ರಾಮದ ಗಂಡ ಹೆಂಡತಿ ವಿಚಾರಕ್ಕೆ ಸಂಬಂಧಪಟ್ಟಂತೆ ಜಗಳವೊಂದು ನಡೆಯಿತು. ಆರು ತಿಂಗಳ ಹಿಂದೆ ಪುನೀತ್ ಕಾಣೆಯಾದ ಹೆಂಗಸಿನ ನಂಬರ್ ಗೆ ಕರೆ ಮಾಡಿರುತ್ತಾನೆ. ಈ ವಿಚಾರ ಅವರ ಮನೆಗೂ ಗೊತ್ತಾಗಿ ಕರೆಸಿ ಮದುವೆಯಾದ ಹೆಣ್ಣುಮಕ್ಕಳಿಗೆ ಕರೆ ಮಾಡಬಾರದೆಂದು ಬುದ್ದಿ ಹೇಳಿ ಕಳಿಸುತ್ತಾರೆ.

ಇದೀಗ ಆ ಹೆಣ್ಣುಮಗಳು ಪಕ್ಕದ ಮನೆಯಾತನೊಂದಿಗೆ ಓಡಿ ಹೋಗಿದ್ದು ಇದರಲ್ಲಿ ಪುನೀತನ ಕೈವಾಡ ಇರಬಹುದೆಂಬ ಶಂಕೆಯಿಂದ ಕೆಲವರು ಆತನ ಮನೆ ಮುಂದೆ ಬಂದು ಜಗಳ ಮಾಡುತ್ತಾರೆ. ಈ ಬಗ್ಗೆ ಮಾಹಿತಿಯೇ ಇಲ್ಲದ ಪುನೀತ್ ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಎಷ್ಟೇ ಹೇಳಿದರೂ ಜನರು ಒಪ್ಪದಿದ್ದಾಗ ಹೆದರಿದ ಆತ 112 ಪೊಲೀಸರಿಗೆ ಕರೆ ಮಾಡಿ ನಮಗೆ ರಕ್ಷಣೆ ನೀಡುವಂತೆ ಮನವಿ ಮಾಡುತ್ತಾನೆ. ಇದಾದ ನಂತರ ವಿಚಾರಿಸಿದ ಪೊಲೀಸರು ರಕ್ಷಣೆ ಮಾಡುವ ಸಲುವಾಗಿ ಪೊಲೀಸ್ ಠಾಣೆಗೆ ಈತನನ್ನು ಜೀಪಿಗೆ ಕೂರಿಸಿಕೊಳ್ಳುತ್ತಾರೆ.ಅಷ್ಟರಲ್ಲಿ ಪಿಎಸ್ಐ ಅರ್ಜುನ್ ಕೂಡ ಅಲ್ಲಿಗೆ ಬರುತ್ತಾರೆ.

ಈ ನಡುವೆ ಈತನ ಮೇಲೆ ಯಾರೂ ದೂರು ನೀಡದಿರುವುದರಿಂದ ಈತನ ಪಾತ್ರ ಏನೂ ಇಲ್ಲ ಎಂದು ಹೇಳುತ್ತಾರೆ. ಆದರೆ ಅಲ್ಲಿನ ಕೆಲ ಪೊಲೀಸರು “ಸಾರ್ ಈತನದ್ದು ಕೈವಾಡ ಇದೆ . ಅವರು ಓಡಿ ಹೋಗಲು ಈತನೇ ಕಾರಣ ’’ ಎಂದು ಪಿಎಸ್ಐ ಗೆ ಕಿವಿ ಚುಚ್ಚುತ್ತಾರೆ

ಅವರ ಮಾತು ನಂಬಿದ ಪಿಎಸ್ ಐ ` ಗಾಡಿ ಹತ್ತು ಸೂಳೆ ಮಗನೇ’ ಎಂದು ಗಾಡಿ ಹತ್ತಿಸಿಕೊಂಡು ಹೊರಡುತ್ತಾರೆ. ಮಾರ್ಗ ಮದ್ಯೆ 112 ನಿಂದ ತಮ್ಮ ಜೀಪಿಗೆ ಆತನನ್ನು ತುಂಬಿಕೊಳ್ಳುತ್ತಾರೆ. ಅಲ್ಲಿ ಏನೇನು ನಡೆಯಿತು ಎಂಬುದನ್ನು ಪುನೀತ್ ಬಾಯಿಯಿಂದ ಕೇಳೋಣ

ಗೋಣಿ ಬೀಡಿನ ಠಾಣೆಯಲ್ಲಿ ನರಕ ದರ್ಶನ ತೋರಿಸಿದ ಅರ್ಜುನ್

`ನಾನು ಪೊಲೀಸ್ ವಾಹನದಿಂದ ಕೆಳಗೊಳಿದ ತಕ್ಷಣ ಠಾಣೆಯ ಮೇಲಿನ ಕೋಣೆಯೊಂದಕ್ಕೆ ಕರೆದುಕೊಂಡು ಹೋದರು ನನ್ನ ಮೇಲೆ ದೂರಿಲ್ಲ ಎಂದು ಬೇಡಿಕೊಂಡರೂ ಕೇಳಲಿಲ್ಲ. ಬಟ್ಟೆ ಬಿಚ್ಚು ಸೂಳೆ ಮಗನೇ ಎಂದು ಬೈದರು. ನನ್ನ ಕೈ ಕಾಲು ಕಂಬಕ್ಕೆ ಕಟ್ಟಿ ನೇತು ಹಾಕಿದರು. ಮಧ್ಯೆ ಕಬ್ಬಿಣದ ರಾಡು ಇಟ್ಟರು. ಮುಂಗಾಲಿಗೆ, ಅಂಗಾಲಿಗೆ ಹೊಡೆದರು.

ಸುಮಾರು 2 ಗಂಟೆ ಹಿಂಸೆ ಕೊಟ್ಟರು. `ಸಾರ್ ನಾನೇನಾದ್ರೂ ಇದರಲ್ಲಿ ಇದ್ದೀನಿ ಎಂದರೆ ಸತ್ತು ಹೋಗುತ್ತೇನೆ ಅವರನ್ನು ಕರೆಸಿ ಒಂದು ಮಾತು ಕೇಳಿ ಎಂದು ಅತ್ತು ಬೇಡಿಕೊಂಡೆ….ಅವರ ಮನ ಕರಗಲಿಲ್ಲ. ಬದಲಾಗಿ `ನೀನೇ ಮಾಡಿರುವುದು ಎಂದು ಒಪ್ಪಿಕೋ’ ಎಂದು ಮತ್ತೆ ಹೊಡೆದರು ಕೊನೆಗೆ ಇವರ ಹೊಡೆತ, ಹಿಂಸೆ ಹೆಚ್ಚಾದಾಗ ಸಾಯಿಸುತ್ತಾರೆ ಎಂದು ಹೆದರಿ ಒಪ್ಪಿಕೊಂಡೆ .

ಆಗ ಸ್ವಲ್ಪ ಹೊತ್ತು ಸುಮ್ಮನಾದರು. ಗಂಟಲು ಒಣಗಿ ಹೋಗಿತ್ತು ಉಸಿರಾಡಲು ಕಷ್ಟ ಆಗುತ್ತಿತ್ತು ಬಾಯಾರಿಕೆ ಆಗುತ್ತಿದೆ ನೀರು ಕೊಡಿ ಎಂದು ಬೇಡಿಕೊಂಡೆ. ಅಲ್ಲೇ ಇದ್ದ ಪೊಲೀಸನಿಂದ ಖಾಲಿ ಬಾಟಲ್ ನಲ್ಲಿ ಉಳಿದಿದ್ದ ಎರಡೇ ಹನಿ ಹಾಕಿದರು. `ಚೆನ್ನಾಗಿದ್ದೀಯಾ’ ಎಂದು ಅಣಕಿಸಿ ಕೇಳಿದರು .

ನಾನು ನೇತಾಡುತ್ತಲೇ ಇದ್ದೆ. ನೀನು ಅಪ್ಪನಿಗೆ ಹುಟ್ಟಿದ್ದೀಯಾ..? ಎಂದು ಕೇಳಿದರು. ಹೌದು ಎಂದೆ. ಇದಕ್ಕೆ ಗ್ಯಾರಂಟಿ ಏನು..? ಎಂದರು… ಯಾವ ಜಾತಿ..?ಎಂದರು ಎಸ್ಸಿ ಎಂದಿದ್ದಕ್ಕೆ ಮತ್ತೆ ಹೊಡೆದರು. ನಿಮ್ಮದು ಇದೇ ಕೆಲಸ ಸೋಳೆ ಮಕ್ಕಳ ಎಂದು ಪಾದಕ್ಕೆ ಹೊಡೆದರು. ಕೊನೆಗೆ ಬಾಯಿ ಸಂಪೂರ್ಣ ಒಣಗಿದ್ದರಿಂದ ತಡೆಯದೇ ನೀರು ಬೇಕೇ ಬೇಕು ಎಂದು ಎಂದೆ.

ಚೇತನ ಎಂಬುವನಿಂದ ಉಚ್ಚೆ ಕುಡಿಸಿದ ಪಾಪಿ ಅರ್ಜುನ

`ಬಾಯಾರಿಕೆ ತಡೆಯದೆ ಸಾಯುವಂತಾಗುತ್ತಿತ್ತು. ನೀರು ಬೇಕೇ ಬೇಕೆಂದು ಅಂಗಲಾಚಿದೆ. ನನ್ನ ಇರಿಸಿಕೊಂಡಿದ್ದ ಕೋಣೆಯಲ್ಲಿ ಕಳ್ಳತನದ ಆರೋಪದಲ್ಲಿ ಚೇತನ್ ಎಂಬುವನನ್ನು ಕರೆದು ಕೂರಿಸಿಕೊಂಡಿದ್ದರು. ಆತನನ್ನು ಕರೆದ ಅರ್ಜುನ್ ` ಈತನಿಗೆ ನೀರು ಬೇಕೆಂತೆ ಉಚ್ಚೆ ಹೂಯ್ಯೋ ‘ ಎಂದರು ಆತ ಹಿಂಜರಿದ. ಆದರೆ ಆತನಿಗೆ ಭಯ ಹುಟ್ಟಿಸಿ ನಿನಗೂ ಇದೇ ರೀತಿ ಮಾಡುತ್ತೇನೆಂದು ಹೆದರಿಸಿದರು.

ಆಗ ನನ್ನ ಬಳಿ ಬಂದ ಆತ ಜಿಪ್ಪು ಬಿಚ್ಚು ನನ್ನ ಬಾಯಿಗೆ ಮೂತ್ರ ಮಾಡಿದ. ನಾನು ತಲೆ ಎತ್ತಿ ಬೇಡ ಎಂದರೂ ಬಿಡದ ಪಿಎಸ್ಐ ಉಚ್ಚೆ ಹೂಯಿಸಿದರು. ನನಗೆ ಆಗಲೇ ಸಾವು ಬರಬಾರದೆ ಅನಿಸಿತು. ಹೊಡೆದ ಹೊಡೆತಕ್ಕೆ ಕೈಕಾಲುಗಳು ಸಂಪೂರ್ಣ ಬಿದ್ದು ಹೋಗಿದ್ದವು. ನಂತರ ಕೆಲವರು ಕೆಳಗೆ ಇಳಿಸಿದರು. ಆಗಲೂ ಬಿಡದ ಅರ್ಜುನ್ ಅಲ್ಲಿ ಬಿದ್ದಿದ್ದ ಮೂತ್ರವನ್ನು ನಾಲಿಗೆಯಿಂದ ನೆಕ್ಕಿಸಿದರು.

ನಾನು ಇಲ್ಲಿದ್ದೇನೆಂದು ಯಾರಿಗೂ ಗೊತ್ತಿರಲಿಲ್ಲ . 5.30 ಕ್ಕೆ ನನ್ನ ಮಾವ ಬಂದಿದ್ದರೂ ನನ್ನ ಭೇಟಿಯಾಗಲು ಬಿಟ್ಟಿರಲಿಲ್ಲ. ರಾತ್ರಿ 10 ಗಂಟೆಗೆ ಬರಲು ಹೇಳಿದ್ದರು. ಕೊನೆಗೆ 10.30 ಕ್ಕೆ ಮಾವ ಬಂದರು. ನನ್ನ ಸ್ಥಿತಿ ನೋಡಿ ಅತ್ತರು. ಅವರೊಂದಿಗೆ ಬೈಕಲ್ಲಿ ಬರುತ್ತಾ ನಡೆದಿದ್ದೆಲ್ಲವನ್ನೂ ಹೇಳಿದೆ. ಆದರೆ ಅಪ್ಪ ಅಮ್ಮನಿಗೆ ವಿಚಾರ ಹೇಳಿರಲಿಲ್ಲ.

ಮತ್ತೆ ಟಾರ್ಚರ್ ಶುರುವಾಯ್ತು

ಅದಾಗಿ ಮತ್ತೆ ಅರ್ಜುನ್ ಅವರೇ ಕರೆ ಮಾಡಿ ನೀನೇ ಅವರನ್ನು ಎಲ್ಲಿಗೆ ಕಳಿಸಿದ್ದೀಯಾ ಕರೆದುಕೊಂಡು ಬಾ ಎಂದು ಹೆದರಿಸಿದರು. ಆಗ ಭಯ ಇನ್ನೂ ಶುರುವಾಯ್ತು . ಸಾಯಬೇಕೆನಿಸಿತು. ಕೊನೆಗೆ ಮಾವನಿಗೆ ಹೇಳಿದೆ. ನಂತರ ಗೊತ್ತಿರುವ ಪತ್ರಕರ್ತರ ಮೂಲಕ ಎಸ್ಪಿ, ಐಡಿ, ಡಿಐಜಿ , ಎಸ್ಪಿ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದೆವು. ಮಾಧ್ಯಮಗಳಲ್ಲಿ ಸುದ್ದಿ ಬಂತು. ಘಟನೆ ಬಗ್ಗೆ ನಮ್ಮ ಎಂಎಲ್ ಎ ಎಂಪಿ ಕುಮಾರಸ್ವಾಮಿ, ಮೋಟಮ್ಮ ಮೊದಲಾದವರು ವಿಚಾರಿಸಿಕೊಂಡರು.

ದಲಿತ ಸಂಘಟನೆಗಳೆಲ್ಲ ನಮ್ಮ ಪರ ಬಂದರು. ಈ ನಡುವೆ ಈ ಬಗ್ಗೆ ತನಿಖೆ ನಡೆಸುವಂತೆ ಡಿವೈಎಸ್ಪಿಗೆ ವಹಿಸಲಾಗಿದ್ದು ಅವರು ಬಂದು ನನ್ನ ಹೇಳಿಕೆ ತೆಗೆದುಕೊಂಡಿದ್ದಾರೆ. ಮೂತ್ರ ಕುಡಿಸಿದ ಚೇತನ್ ನಾಪತ್ತೆಯಾಗಿದ್ದಾನೆ. ಆತನಿಗೆ ಹಣ ಮತ್ತು ಬೆದರಿಕೆ ಹಾಕಿ ಎಲ್ಲೋ ಬಚ್ಚಿಡಲಾಗಿದೆ. ಆತ ಯಾರ ಕೈಗೂ ಸಿಗುತ್ತಿಲ್ಲ.

ಕೆಲವು ಪೊಲೀಸರು ಹಾಗೂ ಕೆಲ ಮುಖಂಡರು ನನ್ನ ಮನೆಗೆ ಬಂದಿದ್ದರು ಎರಡು ಲಕ್ಷ ಹಣ ಕೊಡುತ್ತೇವೆ , ಕೆಲಸ ಕೊಡಿಸುತ್ತೇವೆ ರಾಜಿ ಮಾಡಿಕೋ ಎಂದರು. ನಾನು ಒಪ್ಪಿಕೊಳ್ಳಲಿಲ್ಲ. ನನಗೆ ಅವನ ಮೇಲೆ ವಯಕ್ತಿಕ ದ್ವೇಷ ಇಲ್ಲ ನನಗೆ ಆದ ಅವಮಾನ ಯಾರಿಗೂ ಆಗಬಾರದು. ಆತನನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಆದರೆ ಆತನ ಅಮಾನತ್ತು ಆಗಬೇಕು ನನಗೆ ನ್ಯಾಯ ಬೇಕು ಇಷ್ಟೆ ನಾನು ಕೇಳಿಕೊಳ್ಲುವುದು ಎನ್ನುತ್ತಾನೆ ಪುನೀತ್ .

ನಿಜ ಕೋವಿಡ್ ಸಂದರ್ಭದಲ್ಲಿ ಯಾರೂ ಪ್ರಶ್ನಿಸುವುದಿಲ್ಲ ಎನ್ನುವ ಕಾರಣಕ್ಕೆ ಇಂತಹ ಪ್ರಕರಣಗಳು ಮುಚ್ಚಿ ಹೋಗಬಾರದು ನಿಜವಾಗಿಯೂ ಮನುಷ್ಯತ್ವ , ಮಾನವೀಯತೆ ಯನ್ನೆ ಬೆಚ್ಚಿ ಬೀಳಿಸುವ ಪ್ರಕರಣ. ಒಬ್ಬ ಯುವಕನ ಮೇಲೆ ಯಾವ ದೂರು ಇಲ್ಲದೆ ಆತನನ್ನು ನೇತು ಹಾಕಿ ಮೂತ್ರ ಕುಡಿಸುತ್ತಾರೆಂದರೆ ಇಡೀ ಮಾನವ ಕುಲವೇ ತಲೆ ತಗ್ಗಿಸುವಂತದ್ದು.

ಅರ್ಜುನ್ ಎಂಬ ವಿಕೃತ ಸಬ್ ಇನ್ಸ್ ಪೆಕ್ಟರ್ ತಲೆ ದಂಡವಾಗಲೇಬೇಕು . ಪುನೀತ್ ಎಂಬ ಯುವಕನ ಪರ ನಾಡಿನ ಜನತೆ ನಿಲ್ಲೋಣ. ಪುನೀತ್ ಅವರ ದೂರವಾಣಿ ಸಂಖ್ಯೆ : 63614 70284

ಕೃಪೆ : ಭೀಮ ವಿಜಯ ಪತ್ರಿಕೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಪರಿಸರ ವಿಜ್ಞಾನ ಎನ್ನುವುದು ಖಾಯಂ ಆರ್ಥಿಕತೆ

Published

on

ಸುಂದರ್ ಲಾಲ್ ಬಹುಗುಣ
  • ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು

ಮೇಲಿನ ಘೋಷಣೆ ಪ್ರಸಿದ್ಧ ಪರಿಸರವಾದಿ ಸುಂದರಲಾಲ್ ಬಹುಗುಣ ಅವರದ್ದು. ತೊಂಬತ್ತ್ನಾಲ್ಕು ವರ್ಷದ ಅವರು ಶುಕ್ರವಾರ ಋಷಿಕೇಶ್ ನ ಎಐಐಎಂಎಸ್ ಆಸ್ಪತ್ರೆಯಲ್ಲಿ ಕೋವಿಡ್ ಗೆ ಬಲಿಯಾದರು.

ಈಗಿನ ಉತ್ತರಖಾಂಡದ ತೆಹರಿಯ ಬಳಿಯ ಮರೋಡ ಎಂಬ ಹಳ್ಳಿಯೊಂದರಲ್ಲಿ 1927ರಲ್ಲಿ ಜನಿಸಿದ ಸುಂದರಲಾಲ್ ಬಹುಗುಣ ಗಾಂಧೀವಾದಿಗಳಾಗಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದರು. ಬ್ರಿಟೀಶರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.

ಅವರು ಅಸ್ಪರ್ಶ್ಯತೆ ವಿರುದ್ಧ ಹೋರಾಡುತ್ತಲೇ, 1965-1970ರ ಅವಧಿಯಲ್ಲಿ ಮಹಿಳೆಯರನ್ನು ಸಂಘಟಿಸಿ ಪಾನನಿರೋಧ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವಿಮಲಾರನ್ನು ತಮ್ಮ ಬಾಳಸಂಗಾತಿಯನ್ನಾಗಿ ಮಾಡಿಕೊಂಡಾಗ ಅವರು ವಿಧಿಸಿದ ಒಂದು ಷರತ್ತು- ಗ್ರಾಮೀಣ ಪ್ರದೇಶದ ಒಂದು ಹಳ್ಳಿಯಲ್ಲಿ ಆಶ್ರಮವನ್ನು ಕಟ್ಟಿ, ಅದರಲ್ಲೇ ನೆಲಸಬೇಕೆಂಬುದಾಗಿತ್ತು!

1970ರಲ್ಲಿ ಗರ್ವಾಲ್ ಹಿಮಾಲಯದ ಅಲಕಾನಂದ ನದಿಯಲ್ಲಿ ಪ್ರವಾಹವಾಗಿ ಅನೇಕ ಹಳ್ಳಿಗಳು, ಸೇತುವೆಗಳು, ರಸ್ತೆಗಳು ಕೊಚ್ಚಿಕೊಂಡು ಹೋದವು. ಆ ಪ್ರದೇಶದಲ್ಲಿ ಸಿವಿಲ್ ಇಂಜಿನಿಯರಿಂಗ್ ಗೆ ಸಂಬಂಧಿಸಿದ ಅನೇಕ ನಿರ್ಮಾಣ ಕಾರ್ಯಗಳು ಜರಗುತ್ತಿದ್ದವು.

ನಂತರ ಭೂಕುಸಿತಗಳು ಹೆಚ್ಚಿದವು. ಅಲ್ಲದೆ, ದೊಡ್ಡ ಕಂಟ್ರಾಕ್ಟುದಾರರಿಗೆ ಅರಣ್ಯ ಪ್ರದೇಶಗಳಲ್ಲಿ ಮರಮಟ್ಟು(ಚೌಬೀನೆ)ಗಳಿಗಾಗಿ ಮರಗಳನ್ನು ಕಡಿಯುವ ಪರವಾನಗಿಯನ್ನು ನೀಡಲಾಗಿತ್ತು. ಇದರ ವಿರುದ್ಧ ಕ್ರಮೇಣ ಚಂಡಿಪ್ರಸಾದ್ ಭಟ್ಟ್ ಮುಂತಾದ ಪರಿಸರವಾದಿಗಳು ಹೋರಾಟದಲ್ಲಿ ತೊಡಗಿದರು. ಕ್ರಮೇಣ ಈ ಚಳವಳಿ ಕಾವನ್ನು ಪಡೆದುಕೊಂಡಿತು.

ಲೇಖಕ : ಮ ಶ್ರೀ ಮುರಳಿ ಕೃಷ್ಣ

ನಂತರ ಮಾರ್ಚಿ 1974ರಲ್ಲಿ ರೇಣಿ ಹಳ್ಳಿಯಲ್ಲಿ (ಇದರ ಸಮೀಪವೇ ಕಳೆದ ವರ್ಷ ಹಿಮನದಿ(ಗ್ಲೇಷಿಯರ್) ಸ್ಪೋಟಿಸಿದ್ದು), ಕಂಟ್ರಾಕ್ಟುದಾರರ ಕೆಲಸಗಾರರು ಮರಗಳನ್ನು ಕಡಿಯಲು ಶುರುಮಾಡಿದಾಗ, ಒಬ್ಬ ಹುಡುಗಿ ಆ ಗ್ರಾಮದ ಮಹಿಳಾ ದಳದ ಮುಖ್ಯಸ್ಥೆ ಗೌರಾ ದೇವಿಗೆ ಈ ವಿಷಯವನ್ನು ತಿಳಿಸಿದಳು. ಗೌರಾ ದೇವಿ ಸುಮಾರು 25 ಮಹಿಳೆಯರನ್ನು ಸಂಘಟಿಸಿ, ಮರಗಳ ಕಡಿಯುವ ಪ್ರದೇಶಕ್ಕೆ ತೆರಳಿದರು.

ಆಗ ಕೆಲಸಗಾರರು ಬಂದೂಕುಗಳನ್ನು ತಮ್ಮತ್ತ ಗುರಿಮಾಡಿದಾಗ, ಅಲ್ಲಿ ನೆರೆದಿದ್ದ ಮಹಿಳೆಯರು ಮರಗಳನ್ನು ಅಪ್ಪಿಕೊಂಡರು. ‘ ಚಿಪ್ಕೊ ‘ ಎಂದರೆ ‘ ಅಪ್ಪಿಕೊ ‘ ಎಂದರ್ಥ. ತರುವಾಯ ಈ ಚಳವಳಿ ವಿಸ್ತೃತ ರೂಪವನ್ನು ಪಡೆಯಿತು. ಇದರ ಮುಂಚೂಣಿಯಲ್ಲಿದ್ದರು ಸುಂದರಲಾಲ್ ಬಹುಗುಣ, ಚಂಡಿಪ್ರಸಾದ್ ಭಟ್ಟ್, ಗೌರಾ ದೇವಿ, ಸುದೇಶ ದೇವಿ ಮತ್ತಿತರ ಕೆಲವು ಮಹಿಳೆಯರು. ಒಂದರ್ಥದಲ್ಲಿ, ಇದು ಎಕೊ-ಫೆಮನಿಸಂನ ಪ್ರಾರಂಭಿಕ ನಡೆ ಎನ್ನಬಹುದು.

‘ ಚಿಪ್ಕೊ ‘ ಚಳವಳಿಯನ್ನು ವಿಸ್ತರಿಸುತ್ತ 1980ರ ದಶಕದ ಆದಿಯಲ್ಲಿ ಸುಂದರಲಾಲ್ ಬಹುಗುಣರು ಹಿಮಾಲಯದಲ್ಲಿ ಸುಮಾರು 5,000 ಕಿಮಿ ಪಾದಯಾತ್ರೆಯನ್ನು ನಡೆಸಿದರು. ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಭೇಟಿ ಮಾಡಿದರು. ಇದರ ಪರಿಣಾಮವಾಗಿ, ಪ್ರಧಾನಿಯವರು 15 ವರ್ಷಗಳ ಕಾಲ ಮರ ಕಡಿಯುವುದನ್ನು ನಿಷೇಧಿಸಿದರು.

ಇಂತಹ ಚಳವಳಿಯ ನಡುವೆಯೇ, 1978ರಲ್ಲೇ ತೆಹರಿ ಅಣೆಕಟ್ಟಿನ ಯೋಜನೆಯ ಕಾಮಗಾರಿ ಕೆಲಸಗಳು ಪ್ರಾರಂಭವಾದವು. ಇದರ ವಿರುದ್ಧ ಸುಂದರಲಾಲ್ ಬಹುಗುಣ ಮತ್ತು ಇತರ ಪರಿಸರ ಹೋರಾಟಗಾರರು ತಮ್ಮ ದನಿಯನ್ನು ಎತ್ತಿದರು. ಅಹಿಂಸಾತ್ಮಕ ಹೋರಾಟಗಳನ್ನು ಹಮ್ಮಿಕೊಂಡರು. ಭಾಗೀರಥಿ ನದಿಯ ದಡದಲ್ಲಿ ಸುಂದರಲಾಲ್ ಬಹುಗುಣರು ಅನೇಕ ಬಾರಿ ಉಪವಾಸದ ಸತ್ಯಾಗ್ರಹದಲ್ಲಿ ನಿರತರಾದರು.

1995ರಲ್ಲಿ ಅಂದಿನ ಪ್ರಧಾನಿ ಪಿ ವಿ ನರಸಿಂಹ ರಾವ್ ನೀಡಿದ ಪರಾಮರ್ಶೆ ಸಮಿತಿಯ ರಚನೆಯ ಆಶ್ವಾಸನೆಯ ಮೇರೆಗೆ ಅವರು ತಮ್ಮ 45 ದಿನಗಳ ಉಪವಾಸವನ್ನು ಕೊನೆಗೊಳಿಸಿದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿಯ ರಾಜಘಾಟ್ನಲ್ಲಿ 74 ದಿನಗಳ ಕಾಲ ನಿರಶನವನ್ನು ನಡೆಸಿದ್ದರು.

ಕೊನೆಗೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಹತ್ತು ವರ್ಷಗಳ ಕಾಲ ಕೇಸು ಜರುಗಿತು. ಆದರೂ 2001ರಲ್ಲಿ ಅಣೆಕಟ್ಟಿನ ಕಾರ್ಯ ಮುಂದುವರೆಯಿತು. ಸುಂದರಲಾಲ್ ಬಹುಗುಣರು ದಸ್ತಗಿರಿಗೆ ಒಳಗಾದರು. ತೆಹರಿ ಸಮೀಪವಿದ್ದ ಅವರ ನಿವಾಸವೂ ಮುಳುಗಡೆಯಾಯಿತು.

‘ ಚಿಪ್ಕೊ’ ಆಂದೋಳನದಿಂದ ಪ್ರಭಾವಿತಗೊಂಡ ಪಾಂಡುರಂಗ ಹೆಗಡೆ 1980ರ ದಶಕದಲ್ಲಿ ‘ ಅಪ್ಪಿಕೊ ‘ ಚಳವಳಿಯನ್ನು ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಶುರುಮಾಡಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ಇತರ ಕೆಲವು ಸಂದರ್ಭಗಳಲ್ಲಿ ಸುಂದರಲಾಲ್ ಬಹುಗುಣರು ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಅವರು ಪದ್ಮವಿಭೂಷಣ, ರೈಟ್ ಲೈವ್ಲಿಹುಡ್ ಮತ್ತು ಇತರ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರಿಗೆ ಅಂತಿಮ ನಮನಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending