Connect with us

ಬಹಿರಂಗ

‘ಸ್ವಾಭಿಮಾನ’ ಕುರಿತು ಅಂಬೇಡ್ಕರರ ಆತ್ಮಕತೆಯ ಪುಟಗಳಿಂದ..!

Published

on

 

ರಘೋತ್ತಮ ಹೊ.ಬ

ಎಲ್ಲಿ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆಯೋ ಅಲ್ಲಿ ನಿಮ್ಮ ಚಪ್ಪಲಿಯನ್ನು ಸಹ ಬಿಡಬೇಡಿ” Self respect ಅಥವಾ ಸ್ವಾಭಿಮಾನಕ್ಕೆ ಸಂಬಂಧಿಸಿದಂತೆ ಅಂಬೇಡ್ಕರರ ಶ್ರೇಷ್ಠ ನುಡಿಗಳಿವು. ಬಹುಶಃ ವ್ಯಕ್ತಿಗೌರವ ಅಥವಾ ಸ್ವಾಭಿಮಾನದ ಬಗ್ಗೆ ಅಂಬೇಡ್ಕರರು ತಲೆಕೆಡಿಸಿಕೊಂಡಷ್ಟು ಈ ವಿಶ್ವದಲ್ಲಿ ಯಾರೂ ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ಅದರಲ್ಲೂ ದಲಿತರ ಸ್ವಾಭಿಮಾನದ ಪ್ರಶ್ನೆ? ಹಾಗೆಯೇ ದಲಿತ ಮಹಿಳೆಯ ಸ್ವಾಭಿಮಾನದ ಪ್ರಶ್ನೆ? ಇಂತಹ ಪ್ರಶ್ನೆಗಳಿಗೆ ಉತ್ತರ  ಹುಡುಕುವುದರಲ್ಲಿಯೇ, ಶೋಷಿತರಿಗೆ ಸ್ವಾಭಿಮಾನದ ಪಾಠ ಕಲಿಸುವುದರಲ್ಲಿಯೇ, ಆತ್ಮಗೌರವ ತಂದುಕೊಡುವುದರಲ್ಲಿಯೇ ಅಂಬೇಡ್ಕರ್‍ರವರು ತಮ್ಮ ಜೀವನವಿಡೀ ಶ್ರಮಿಸಿದರು. ಒಂದರ್ಥದಲ್ಲಿ ಅವರು ಸ್ವಾಭಿಮಾನದ ಕಿಡಿ.

ಕಿಡಿ ಅಥವಾ ಕೋಪ, ಹಾಗೆಂದಾಕ್ಷಣ ಅಂಬೇಡ್ಕರರು ಇದ್ದಕ್ಕಿದ್ದ ಹಾಗೆಯೇ ದಲಿತರ ಸ್ವಾಭಿಮಾನದ ಬಗ್ಗೆ ಈ ಪರಿ ತಲೆಕೆಡಿಸಿಕೊಂಡರೆ ಅಥವಾ  ಯಾರದೋ  ಮೇಲಿನ ದ್ವೇಷಕ್ಕೆ  ಹಾಗೆ  ನಿರ್ಧಾರಕ್ಕೆ ಬಂದರೆ? ಖಂಡಿತ ಇಲ್ಲ. ಹಾಗಿದ್ದರೆ? 1935 ಅಕ್ಟೋಬರ್ 13ರಂದು ನಾಸಿಕ್‍ನ ಈಯೋಲಾ ಎಂಬಲ್ಲಿ ಅಂಬೇಡ್ಕರರು  ಕೇಳುವ ಪ್ರಶ್ನೆಗಳನ್ನು ನೋಡಿ.

  1. ಈ ಭಾರತದಲ್ಲಿ ನೀವೊಬ್ಬರೇ(ದಲಿತರು) ಯಾಕೆ ಶೋಷಣೆಗೊಳಗಾಗುತ್ತಿದ್ದೀರಿ?
  2. ಹಿಂದೂ ಧರ್ಮ ನಿಮಗೆ ಕರುಣೆ ತೋರಿಸುತ್ತಿಲ್ಲವೇಕೆ?
  3. ಹಿಂದುತ್ವದಲ್ಲಿ ನಿಮಗೆ ಸಮಾನತೆ ಇದೆಯೇ?
  4. ಹಿಂದುತ್ವದಲ್ಲಿ ನಿಮಗೆ ಸ್ವಾತಂತ್ರ್ಯವಿದೆಯೇ?

ಬಹುಶಃ ಈ ಪ್ರಶ್ನೆಗಳು ಹಿಂದೂಗಳಿಗೆ ಎಲ್‍ಕೆಜಿ ಮಕ್ಕಳ ಪ್ರಶ್ನೆಗಳ ಹಾಗೆ  ಕಾಣಬಹುದು. ಆದರೆ ಶೋಷಿತರಿಗೆ? ಅವು ಅಂಬೇಡ್ಕರರ ಸ್ವಾಭಿಮಾನದ ಕಿಡಿಯ ಸಣ್ಣ ಕಣಗಳಂತೆ ಕಂಡರೆ ಅತಿಶಯೋಕ್ತಿಯೇನಲ್ಲ. ಯಾಕೆಂದರೆ  ಅಂಬೇಡ್ಕರರಿಂದ ಇಂತಹ ಪ್ರಶ್ನೆಗಳನ್ನು ಎದುರಿಸಿದ  ಯಾವುದೇ ದಲಿತನಾದರೂ “ತನ್ನೊಬ್ಬನ ಮೇಲೆ  ಯಾಕೆ  ದೌರ್ಜನ್ಯ ನಡೆಯುತ್ತಿದೆ? ಯಾಕೆಂದರೆ  ನಾನು ಕೀಳು ಜಾತಿಯವನು. ಹಿಂದೂಗಳೆಲ್ಲ ನಮಗೆ ಕರುಣೆ  ತೋರಿಸುತ್ತಿಲ್ಲ, ಯಾಕೆಂದರೆ ನಾವು ಕರುಣೆಗೆ ಅರ್ಹರಲ್ಲ.  ಹಿಂದೂಗಳೆಲ್ಲ ನಮಗೆ ಸಮಾನತೆ ನೀಡುತ್ತಿಲ್ಲ, ಯಾಕೆಂದರೆ ನಾವು ಸಮಾನತೆಗೆ ಅರ್ಹರಲ್ಲ.  ಹಿಂದುತ್ವದಲ್ಲಿ ನಮಗೆ ಸ್ವಾತಂತ್ರ್ಯವಿಲ್ಲ, ಯಾಕೆಂದರೆ ನಾವು ಸ್ವಾತಂತ್ರ್ಯಕ್ಕೂ ಕೂಡ ಅರ್ಹರಲ್ಲ” ಎಂದುಕೊಳ್ಳುತ್ತಾನೆಯೇ? ಖಂಡಿತ ಇಲ್ಲ. ಬದಲಿಗೆ ಆತ  ಅಂಬೇಡ್ಕರರ ಪ್ರಶ್ನೆಗಳ ಬಗ್ಗೆ ಗಹನವಾಗಿ ಚಿಂತಿಸುತ್ತಾನೆ. ನಾನು ಯಾರು? ನಾನೇಕೆ ಹೀಗಾದೆ? ನನ್ನ ಹೀನಾಯ ಸ್ಥಿತಿಗೆ ಕಾರಣರಾರು? ಎಂದು ತನ್ನನ್ನೆ ತಾನು ಪ್ರಶ್ನಿಸಿಕೊಳ್ಳುತ್ತಾನೆ. ಒಮ್ಮೆ ಆತ ಪ್ರಶ್ನಿಸಿಕೊಳ್ಳಲು  ಪ್ರಾರಂಭಿಸಿದನೆಂದರೆ  ಮುಗಿಯಿತು ಆತ ಸ್ವಾಭಿಮಾನಿಯಾದನೆಂದೇ ಅರ್ಥ. ಅಂದಹಾಗೆ ಅಂಬೇಡ್ಕರರು ಬಯಸಿದ್ದು ಇದನ್ನೆ!

ಹಾಗೆ ಹೇಳುವುದಾದರೆ ಸ್ವಾಭಿಮಾನಕ್ಕೆ ಸಂಬಂಧಿಸಿದಂತೆ ಅಂಬೇಡ್ಕರರ ಪ್ರಶ್ನೆ ಇಲ್ಲಿಗೇ ಮುಗಿಯುವುದಿಲ್ಲ. ಅವರ ಆತ್ಮಕತೆಯ ಪುಟಗಳತ್ತ ಚಿತ್ತಹರಿಸುವುದಾದರೆ, ಅಂಬೇಡ್ಕರರು  1936 ಮೇ 17ರಂದು ಥಾಣೆ ಜಿಲ್ಲೆಯ ಕಲ್ಯಾಣ್ ಎಂಬಲ್ಲಿ ತನ್ನ  ಸ್ವಾಭಿಮಾನವನ್ನು ಕೆಣಕಿದ ಬಾಲ್ಯದ ಕೆಟ್ಟ ಘಟನೆಯನ್ನು ಹೀಗೆ ವಿವರಿಸುತ್ತಾರೆ2 “ನಾನು ಇಂಧೋರ್ ಸಮೀಪದ ಮಹೌ ಎಂಬಲ್ಲಿ ಹುಟ್ಟಿದೆ. ನನ್ನ ತಂದೆ ಮಹೌನಲ್ಲಿ ಸೇನೆಯ ಸುಬೇದಾರ್ ಹುದ್ದೆಯಲ್ಲಿದ್ದರು. ನಾವು ಅಲ್ಲಿದ್ದಷ್ಟು ದಿನ ಅಂದರೆ ಸೇನೆಯ ಕ್ವಾರ್ಟರ್ಸ್‍ನ ಕಾರ್ಯಸ್ಥಾನದಲ್ಲಿಷ್ಟೂ ದಿನ ನಮಗೆ ಅಸ್ಪøಶ್ಯತೆಯ  ಗಂಧ ಗಾಳಿಯು ತಿಳಿದಿರಲಿಲ್ಲ. ಆದರೆ  ನನ್ನ ತಂದೆ  ಸೇನೆಯಿಂದ ನಿವೃತ್ತರಾಗಿ ಸತಾರಕ್ಕೆ ಬಂದಾಗ ನನಗೆ ಅಸ್ಪøಶ್ಯತೆಯ ಪ್ರಥಮ ಅನುಭವವಾಯಿತು.

ಮುಖ್ಯವಾಗಿ ಅದು ಕ್ಷೌರಕ್ಕೆ ಸಂಬಂಧಪಟ್ಟಂತೆ. ಯಾಕೆಂದರೆ  ಸತಾರದಲ್ಲಿ  ಅಷ್ಟೊಂದು ಕ್ಷೌರಿಕರಿದ್ದರೂ ಯಾವುದೇ ಕ್ಷೌರಿಕನೂ ನಮ್ಮ ತಲೆಕೂದಲು ಕತ್ತರಿಸಲು ಮುಂದೆ ಬರುತ್ತಿರಲಿಲ್ಲ.  ಈ ಕಾರಣಕ್ಕಾಗಿ ದುರಂತವೆಂದರೆ ನಮ್ಮ ಹಿರಿಯ ಅಕ್ಕನೇ  ನಮ್ಮನ್ನು ಮನೆಯ  ಹೊರಗಡೆ ಕೂರಿಸಿ  ನಮ್ಮ ತಲೆಗೂದಲನ್ನು ಕತ್ತರಿಸಬೇಕಾಗುತ್ತಿತ್ತು! ಒಂದರ್ಥದಲಿ ಇದು ನನ್ನನ್ನು ವಿಚಲಿತಗೊಳಿಸಿತು. ಯಾಕೆ ಹೀಗೆ ಇಷ್ಟೊಂದು ಕ್ಷೌರಿಕರಿದ್ದರೂ ನಮ್ಮ ಕೂದಲನ್ನು ಕತ್ತರಿಸಲು ಅವರು ಮುಂದೆ ಬರುತ್ತಿಲ್ಲವೇಕೆ? ಎಂಬ ಪ್ರಶ್ನೆ ನನ್ನನ್ನು ಪದೇ ಪದೇ ಕಾಡತೊಡಗಿತು”.

ಮತ್ತೊಂದು ಘಟನೆ : “ನಮ್ಮ ತಂದೆ ಗೋರೆಗಾಂವ್‍ನಲ್ಲಿರಬೇಕಾದರೆ ಅವರು ಒಮ್ಮೆ ನಮ್ಮನ್ನು  ಗೋರೆಗಾಂವ್‍ಗೆ ಬನ್ನಿ ಎಂದು ಕರೆದರು. ಹಾಗೆಯೇ ಪ್ರಯಾಣದ ಖರ್ಚಿಗೆ  ಎಂದು ಅವರು ಸ್ವಲ್ಪ ಹಣವನ್ನೂ ಕಳುಹಿಸಿದ್ದರು. ಆ ಹಣದಿಂದ  ಹೊಸಬಟ್ಟೆ ಖರೀದಿಸಿ, ರೈಲಿನಲ್ಲಿ ಪಯಣಿಸುವ ಕನಸು ಕಾಣುತ್ತಾ  ಖುಷಿಯಿಂದ ನಾನು, ನನ್ನ ಸಹೋದರ ಮತ್ತು  ನನ್ನ ಅಕ್ಕನ ಮಗಳು ಮೂವರು ಗೋರೆಗಾಂವ್‍ನತ್ತ ಹೊರಟೆವು.  ಹಾಗೆಯೇ ನಾವು ಬರುವುದಾಗಿ ಅದಾಗಲೇ ನಮ್ಮ ತಂದೆಯವರಿಗೆ ಪತ್ರವೊಂದನ್ನು ಸಹ ಕಳುಹಿಸಿದ್ದೆವು. ಆದರೆ ಅದು ಅವರಿಗೆ  ತಲುಪಿರಲಿಲ್ಲ.

ಆ ಕಾರಣಕ್ಕಾಗಿ ನಾವು ಗೋರೆಗಾಂವ್ ತಲುಪಿದಾಗ  ನಮ್ಮ ತಂದೆಯವರು ಕಳುಹಿಸಿರಬಹುದೆನ್ನುವ ಸೇವಕನಿಗಾಗಿ ನಾವು ಹುಡುಕಿದರೂ ಆತ ನಮಗೆ ಕಾಣಲಿಲ್ಲ. ವಿಧಿಯಿಲ್ಲದೆ  ಮುಕ್ಕಾಲು ಗಂಟೆ ನಾವು ಸ್ಟೇಷನ್‍ನಲ್ಲಿಯೇ ಕಳೆದೆವು. ಯಾರಾದರೂ ಬರಬಹುದು ನಮ್ಮನ್ನು ಕರೆದುಕೊಂಡು ಹೋಗಬಹುದು ಎಂದು ಕಾಯುತ್ತಾ  ಕುಳಿತೆವು. ಅದೇ ಸಮಯಕ್ಕೆ ಅಲ್ಲಿಗೆ ಬಂದ  ಸ್ಟೇಷನ್ ಮಾಸ್ಟರ್ ’ನೀವು ಯಾರಿಗಾಗಿ ಕಾಯುತ್ತಿದ್ದೀರಿ? ಯಾವ ಜಾತಿ? ಎಲ್ಲಿಗೆ ಹೋಗಬೇಕು?’ ಎಂದೆಲ್ಲ ಕೇಳಿದ. ನಾನು ಅವನಿಗೆ ‘ನಾವು ಮಹಾರ್ ಜಾತಿಗೆ ಸೇರಿದವರು’ ಎಂದು ನೇರವಾಗಿಯೇ ಹೇಳಿದೆ. ನಾನು ಹಾಗೆನ್ನುತ್ತಲೇ ಆತ ಆಘಾತಕ್ಕೊಳಗಾದ! ತಕ್ಷಣ ನಮ್ಮಿಂದ ಐದು ಹೆಜ್ಜೆ ಹಿಂದೆ ಸರಿದ! ಆದರೆ ನಾವು ಉತ್ತಮವಾಗಿ ಡ್ರೆಸ್ ಮಾಡಿಕೊಂಡಿದ್ದನ್ನು ನೋಡಿ ಉತ್ತಮ ಕುಲಕ್ಕೆ ಸೇರಿದವರಿರಬಹುದೆಂದುಕೊಂಡು ಎತ್ತಿನಗಾಡಿಯೊಂದನ್ನು ವ್ಯವಸ್ಥೆ ಮಾಡುವುದಾಗಿ ಹೇಳಿದ.

ಆದರೆ ನಾವು ಮಹಾರ್ ಜಾತಿಯವರಾಗಿದ್ದರಿಂದ ಯಾವುದೇ ಎತ್ತಿನಗಾಡಿಯವನು ನಮ್ಮನ್ನು ಕೂರಿಸಿಕೊಂಡು ಹೋಗಲು ಮುಂದೆ ಬರಲಿಲ್ಲ. ಕಡೆಗೂ ಒಬ್ಬ ಒಪ್ಪಿಕೊಂಡನಾದರೂ  ಆತನ ಕಂಡೀಷನ್ ಏನೆಂದರೆ ‘ನಾನು ಗಾಡಿ ಚಲಾಯಿಸುವುದಿಲ್ಲ. ನಿಮ್ಮಲ್ಲೆ ಯಾರಾದರೊಬ್ಬರು ಗಾಡಿ  ಚಲಾಯಿಸಿ. ನಾನು ನಿಮ್ಮ ಜೊತೆ ಬರುತ್ತೇನೆ’ ಎಂಬುದಾಗಿತ್ತು! ಅಂದಹಾಗೆ ಆತ ಹಾಗೆ ಬರುತ್ತೇನೆ ಎಂದಾಗ ಸಮಯ ಸಂಜೆ ಏಳು ಗಂಟೆಯಾಗಿತ್ತು. ಹಾಗೆಯೇ ಮಿಲಿಟರಿ  ಏರಿಯಾದವನಾದ್ದರಿಂದ ನನಗೆ ಗಾಡಿ ಚಲಾಯಿಸುವುದು  ಕಷ್ಟವೇನಿರಲಿಲ್ಲ. ಅವನ ಕಂಡೀಷನ್‍ಗೆ ಒಪ್ಪಿಕೊಂಡು  ನಾನು ಮತ್ತು ಉಳಿದ ಮಕ್ಕಳೆಲ್ಲ ಗಾಡಿಯಲ್ಲಿ ಗೋರೆಗಾಂವ್ ಕಡೆ ಹೊರಟೆವು”.

“ಸ್ವಲ್ಪ ದೂರ ಹೋದನಂತರ ಒಂದು ಊರಿನ ಹೊರಗಡೆ ಒಂದು ಕೊಳ ಕಂಡೆವು. ‘ಮುಂದೆ ಎಲ್ಲಿಯೂ ನಿಮಗೆ ನೀರು ಸಿಗುವ ಸಾಧ್ಯತೆ ಇಲ್ಲವಾದ್ದರಿಂದ ನೀವು ಇಲ್ಲಿಯೇ ನಿಮ್ಮ ಊಟವನ್ನು ಮಾಡಬಹುದು’ ಎಂದು  ಗಾಡಿಯವನು ನಮಗೆ ಸೂಚಿಸಿದ. ಅವನು ಹೇಳಿದ ಹಾಗೆ ಗಾಡಿಯಿಂದ ಇಳಿದ ನಾವು, ಅಲ್ಲಿಯೇ ನಾವು ತಂದಿದ್ದ ಬುತ್ತಿಯನ್ನು ತಿಂದು ಕೆಸರು ಕೆಸರಾದ ಗಬ್ಬುನಾರುತ್ತಿದ್ದ ಆ ಕೊಳದ ನೀರನ್ನೆ ಕುಡಿದೆವು. ಗಾಡಿಯವ ಗ್ರಾಮದ ಒಳಕ್ಕೆ ಹೋಗಿ ಅಚ್ಚುಕಟ್ಟಾಗಿ ತನ್ನ ಊಟ ಮುಗಿಸಿ ಮತ್ತೆ  ನಮ್ಮ ಬಳಿ ಬಂದ”!

“ಇತ್ತ ನಮ್ಮ ಪ್ರಯಾಣ ಮುಂದುವರಿದ ಹಾಗೇ  ಕತ್ತಲು ಹೆಚ್ಚಾಗತೊಡಗಿತ್ತು. ಯಾವುದೇ ಬೀದಿ ದೀಪವಾಗಲೀ ಬೆಳಕಿನ ಸಣ್ಣ ತುಣುಕಾಗಲೀ ನಮಗೆ ಕಾಣಲಿಲ್ಲ. ಈ ಕಾರಣಕ್ಕಾಗಿ  ಭಯಗೊಂಡ ನಾವು ಕತ್ತಲೆ ಮತ್ತು ಒಂಟಿತನದಿಂದಾಗಿ ಹೆದರಿ ಜೋರಾಗಿ ಅಳಲಾರಂಭಿಸಿದೆವು. ಅಷ್ಟೊತ್ತಿಗಾಗಲೇ ಅರ್ಧರಾತ್ರಿಯಾಗಿತ್ತು. ಆ ಸಂದರ್ಭದಲ್ಲಿ  ನಾವು ಎಂತಹ ಸ್ಥಿತಿ ತಲುಪಿದ್ದೆವೆಂದರೆ ‘ನಾವು, ನಮ್ಮಪ್ಪರಾಣೆಗೂ ಗೋರೆಗಾಂವ್ ತಲುಪುವುದಿಲ್ಲ’ ಎಂದು ಹತಾಶೆಗೊಂಡೆವು. ಹಾಗೆ ಮುನ್ನಡೆಯುತ್ತಲೇ ನಾವು ಒಂದು ಚೆಕ್‍ಪೋಸ್ಟ್ ತಲುಪಿದೆವು. ಚೆಕ್‍ಪೋಸ್ಟ್‍ನ ಕಾವಲುಗಾರನನ್ನು ನಾನು ‘ಇಲ್ಲಿ ಎಲ್ಲಾದರೂ, ತಿನ್ನಲು ಏನಾದರೂ ಸಿಗುತ್ತದೆಯಾ?’ ಎಂದು ಕೇಳಿದೆ. ಕಾವಲುಗಾರ ಪರ್ಷಿಯನ್ ಭಾಷೆ ಮಾತನಾಡುತ್ತಿದ್ದನಾದ್ದರಿಂದ ಅವನ ಜೊತೆ ಪರ್ಷಿಯನ್ ಭಾಷೆಯಲ್ಲಿಯೇ ಮಾತನಾಡಿದೆ. ನಮ್ಮ ಹಿನ್ನೆಲೆ ತಿಳಿದ ಆತ ಕೂಡ ಅಷ್ಟೆ, ಅಷ್ಟೆ ಕ್ರೂರವಾಗಿ ಉತ್ತರಿಸಿದ ಹಾಗೂ ಸಮೀಪದಲ್ಲಿ ಬೆಟ್ಟವೊಂದಿದೆ ಅಲ್ಲಿ ನಿಮಗೆ ಏನಾದರೂ ಸಿಗುತ್ತದೆಂಬಂತೆ ಸಮೀಪದಲ್ಲೇ ಇದ್ದ ಬೆಟ್ಟದತ್ತ ಕೈತೋರಿಸಿದ.

ವಿಧಿಯಿಲ್ಲದೆ ಹೇಗೋ ಆ ರಾತ್ರಿಯನ್ನು ನಾವು ಅಲ್ಲೇ ಆ ಬೆಟ್ಟದ ಪಕ್ಕದಲ್ಲಿಯೇ ಇದ್ದ ಕೊರಕಲೊಂದರಲ್ಲಿ ಕಳೆದೆವು! ಹಾಗೆಯೇ ಬೆಳಿಗ್ಗೆಯಾದದ್ದೆ ತಡ ಗೋರೆಗಾಂವ್‍ನತ್ತ ಮತ್ತೆ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ಹೀಗೆ ಸಾಗಿದ ನಮ್ಮ ಪ್ರಯಾಣ ಕೊನೆಗೊಂಡದ್ದು ಮಧ್ಯಾಹ್ನಕ್ಕೆ. ಏಕೆಂದರೆ ಆ ದಿನ ನಾವು ಗೋರೆಗಾಂವ್ ತಲುಪಿದಾಗ ಮಧ್ಯಾಹ್ನವಾಗಿತ್ತು. ಅದೂ ವಿಪರೀತ ಸುಸ್ತಾಗಿದ್ದೆವು. ಒಂದರ್ಥದಲ್ಲಿ ಅರ್ಧ ಸತ್ತಿದ್ದೆವು ಎಂದರೆ ಅತಿಶಯೋಕ್ತಿಯೆನಲ್ಲ”!”

ಮರದಡಿಯಲ್ಲಿ ಗಳಗಳನೆ ಅತ್ತದ್ದು4! “ಮೂರನೆಯ ಘಟನೆಯೊಂದನ್ನು ಇಲ್ಲಿ ಹೇಳಲೇ ಬೇಕು. ಅದು ನಾನು ಬರೋಡ ರಾಜ್ಯದಲ್ಲಿ ಹುದ್ದೆಯಲ್ಲಿದ್ದ ಸಂದರ್ಭ. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳುವಾಗ ಬರೋಡ ರಾಜ್ಯದಿಂದ ನಾನು ವಿದ್ಯಾರ್ಥಿ ವೇತನ ಪಡೆದಿದ್ದೆ. ಆ ಸಂಧರ್ಭದಲ್ಲಿ ಆದ ಒಪ್ಪಂದದಂತೆ ಇಂಗ್ಲೆಂಡಿನಿಂದ ಹಿಂದಿರುಗಿ ಬಂದಾಗ ಒಪ್ಪಂದದಂತೆ ಬರೋಡ ಸಂಸ್ಥಾನದಲ್ಲಿ ಅಧಿಕಾರಿಯಾಗಿ ಉದ್ಯೋಗಕ್ಕೆ ಸೇರಿಕೊಂಡೆ. ದುರಂತವೆಂದರೆ ಆ ಸಂದರ್ಭದಲ್ಲಿ ಬರೋಡದಲ್ಲಿ ನನಗೆ ಉಳಿದುಕೊಳ್ಳಲು ಒಂದು ಮನೆ ಕೂಡ ಸಿಗಲಿಲ್ಲ. ಬರೋಡದಂಥ ಆ ಮಹಾನಗರದಲ್ಲಿ ಒಬ್ಬ ಹಿಂದೂವಿರಬಹುದು, ಮುಸಲ್ಮಾನನಿರಬಹುದು ಯಾರೊಬ್ಬರೂ ನನಗೆ ಬಾಡಿಗೆಗೆ ಮನೆ ಕೊಡಲು ಮುಂದೆಬರಲಿಲ್ಲ. ಕಡೆಗೆ ನಾನು ಪಾರ್ಸಿ ಧರ್ಮಛತ್ರವೊಂದರಲ್ಲಿ ಉಳಿದುಕೊಳ್ಳಲು ನಿರ್ಧರಿಸಿದೆ.ಅಮೆರಿಕಾ ಮತ್ತು ಇಂಗ್ಲೆಂಡಿನಿಂದ ಹಿಂದಿರುಗಿ ಬಂದಿದ್ದವನಾದ್ದರಿಂದ ನನ್ನ ಮೈ ಬಣ್ಣ ಸುಂದರವಾಗಿತ್ತು! ಹಾಗೆಯೇ ಆಕರ್ಷಕ ವ್ಯಕ್ತಿತ್ವ ಕೂಡ ನನ್ನದಾಗಿತ್ತು. ಆ ಕಾರಣಕ್ಕಾಗಿ ನನಗೆ ನಾನೇ ಒಂದು ಪಾರ್ಸಿ ಹೆಸರನ್ನು ಇಟ್ಟುಕೊಂಡು ಆ ಧರ್ಮಛತ್ರದಲ್ಲಿ ವಾಸಿಸಲು ಪ್ರಾರಂಭಿಸಿದೆ!

ಅಂದಹಾಗೆ ಆಗ ನಾನು ಇಟ್ಟುಕೊಂಡ ಹೆಸರು ‘ಅಡಲ್ಜಿ ಸೊರಾಬ್ಜಿ’ ಎಂಬುದಾಗಿತ್ತು! ನನ್ನನ್ನು ಪಾರ್ಸಿ ಎಂದು ನಂಬಿದ  ಆ ಧರ್ಮಛತ್ರದ  ಪಾರ್ಸಿ ಜನಾಂಗದ ಮ್ಯಾನೇಜರ್  ನನಗೆ ದಿನವೊಂದಕ್ಕೆ 2ರೂ ಬಾಡಿಗೆಯಂತೆ ಮನೆ ನೀಡಿದ. ಆದರೆ ಸತ್ಯ ಗೊತ್ತಾಗಲೇಬೇಕಲ್ಲವೆ? ಯಾಕೆಂದÀರೆ ಬರೋಡದ ರಾಜಶ್ರೇಷ್ಠ ಗಾಯಕವಾಡ ಮಹಾರಾಜರು ತನ್ನ ಆಸ್ಥಾನದಲ್ಲಿ ಮಹಾರ್ ಹುಡುಗನೊಬ್ಬನನ್ನು ಅಧಿಕಾರಿಯಾಗಿ ನೇಮಿಸಿಕೊಂಡಿರುವ ಸುದ್ದಿ ಅದಾಗಲೇ ಕಾಡ್ಗಿಚ್ಚಿನಂತೆ ಹರಡಿತ್ತು! ಮತ್ತು ನಾನು ಪಾರ್ಸಿ ಧರ್ಮಛತ್ರವೊಂದರಲ್ಲಿ ಸುಳ್ಳು ಹೆಸರಿನಲ್ಲಿ ಉಳಿದುಕೊಂಡಿದ್ದು  ಕೂಡ ಅನುಮಾನಕ್ಕೆ ಕಾರಣವಾಗಿತ್ತು. ಕಡೆಗೂ ನನ್ನ ಗುಟ್ಟು ಹೊರಬಿತ್ತು”.

“ಏಕೆಂದರೆ ಅಲ್ಲಿ ನಾನು ಉಳಿದುಕೊಂಡಿದÀ್ದ ಎರಡನೇ ದಿನ ನಾನು ತಿಂಡಿ ತಿಂದು ಕಛೇರಿಗೆ ತೆರಳಲು  ಪ್ರಾರಂಭಿಸುತ್ತಿದ್ದಂತೆ ದೊಣ್ಣೆಗಳನ್ನು ಹಿಡಿದಿದ್ದ ಹದಿನೈದರಿಂದ ಇಪ್ಪತ್ತು ಜನರಷ್ಟಿದ್ದ ಪಾರ್ಸಿ ಜನರ ಗುಂಪೊಂದು ನನ್ನ ಮೇಲೆ ಧಾಳಿ ಮಾಡಿತು. ನನ್ನನ್ನು ಕೊಲ್ಲುವುದಾಗಿ ಕೂಗಾಡಿದ ಆ ಗುಂಪು ನಾನು ಯಾರೆಂದು ಪ್ರಶ್ನಿಸಿತು.  ನಾನು ಸಾವಧಾನವಾಗಿ ’ನಾನೊಬ್ಬ ಹಿಂದೂ’ ಎಂದು ಉತ್ತರಿಸಿದೆ. ಆದರೆ ನನ್ನ ಉತ್ತರದಿಂದ ತೃಪ್ತರಾಗದ ಉದ್ರಿಕ್ತ ಆ ಗುಂಪು ನನ್ನ ಮೇಲೆ ಬೈಗುಳಗಳ ಸುರಿಮಳೆಯನ್ನೇ ಸುರಿಸಿತು ಮತ್ತು ನನ್ನನ್ನು ತಕ್ಷಣವೇ ಕೊಠಡಿ ಖಾಲಿ ಮಾಡುವಂತೆ ಆ ಗುಂಪು ಕೂಗಿ ಹೇಳಿತು. ನಿಜಕ್ಕೂ ಹೇಳುವುದಾದರೆ ನನ್ನ ದೃಢಮನಸ್ಸು ಮತ್ತು ನಾನು ಗಳಿಸಿದ ಜ್ಞಾನ ಆ ಸಂದರ್ಭವನ್ನು ನಾನು ಧೈರ್ಯದಿಂದ ಎದುರಿಸಲು ನನಗೆ ಬಲ ನೀಡಿತು ಎನ್ನಬಹುದು.

ಏಕೆಂದರೆ ನಮ್ರತೆಯಿಂದ ಆ ಗುಂಪನ್ನು ನಾನು ನನಗೆ ಎಂಟು ಗಂಟೆಗಳ ಕಾಲಾವಕಾಶ ನೀಡಬೇಕೆಂದು ಕೇಳಿಕೊಂಡೆ.  ಹಾಗೆಯೇ ಆ ದಿನ ಪೂರ್ತಿ ನಾನು ಉಳಿದುಕೊಳ್ಳಲು ಮನೆಯೊಂದನ್ನು ಹುಡುಕುವಲ್ಲಿಯೇ ಕಳೆದೆ. ಆದರೆ ‘ನನ್ನ ತಲೆಯನ್ನು ಅಡಗಿಸಿಕೊಳ್ಳಲು’’ಸ್ಥಳವೊಂದನ್ನು ಪಡೆಯುವಲ್ಲಿ ಕಡೆಗೂ ನಾನು ವಿಫಲನಾದೆ! ನನ್ನ ಬಹುತೇಕ ಸ್ನೇಹಿತರನ್ನು ಈ ಸಂದರ್ಭದಲ್ಲಿ ನಾನು ಸಂಪರ್ಕಿಸಿದೆ. ಆದರೆ ಅವರೆಲ್ಲರೂ ನನ್ನ ಬೇಡಿಕೆಗೆ ನಕಾರಾತ್ಮಕವಾಗಿ ಉತ್ತರ ನೀಡಿದರು. ನನಗೆ ವಸತಿ  ಒದಗಿಸಿಕೊಡುವಲ್ಲಿ  ತಮ್ಮ ಅಸಹಾಯಕತೆಯನ್ನು ಅವರು ಪ್ರದರ್ಶಿಸಿದರು. ನಾನು ತೀವ್ರವಾಗಿ ನಿರಾಶಗೊಂಡೆ ಮತ್ತು ಒಂದರ್ಥದಲಿ ಹತಾಶನಾದೆ.

ಮುಂದೇನು ಮಾಡಲಿ? ನನಗೆ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ. ನಿರಾಶ ಮತ್ತು ಹತಾಶ ಮನಸ್ಥಿತಿಯಲ್ಲಿ  ಒಂದೆಡೆ  ಮರದ ನೆರಳಲ್ಲಿ ಕುಳಿತೆ. ನನ್ನ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ದುಖಃ ತಡೆಯಲಾರದೆ ಗಳಗಳನೆ ಅತ್ತೆ. ಕಡೆಗೆ ಮನೆ ದೊರೆಯುವ ಯಾವ  ಭರವಸೆಯೂ ಇಲ್ಲದೆ, ಪರ್ಯಾಯ ಮಾರ್ಗವಿಲ್ಲದೆ ಕೆಲಸ ಬಿಡಲು ನಿರ್ಧರಿಸಿದೆ ಮತ್ತು ನನ್ನ ಹುದ್ದೆಗೆ ರಾಜೀನಾಮೆ ಇತ್ತು ಆ ರಾತ್ರಿಯೇ ರೈಲಿನಲ್ಲಿ ವಾಪಸ್ ಮುಂಬೈಗೆ ಪ್ರಯಾಣ ಬೆಳೆಸಿದೆ”.

ಪರಮಶ್ರೇಷ್ಠ, ಅಪ್ಪಟ ಸ್ವಾಭಿಮಾನಿ ಎದುರಿಸಿದ  ಘೋರ ಕ್ಷಣಗಳಿವು. ಯಾವ ಜ್ಞಾನಿ ವಿದೇಶಗಳಿಂದ ಸಾಲು ಸಾಲು ಪದವಿಗಳಿಸಿ  ಜ್ಞಾನದ ಹೊರೆಯನ್ನೇ ಹೊತ್ತುತಂದನೋ  ಅಂತಹ  ವಿಶ್ವಜ್ಞಾನಿಗೆ  ಭಾರತದಲ್ಲಿ ಸಂದ ಮರ್ಯಾದೆಯಿದು! ಹಾಗೆಯೇ ಜಾತಿಯ ಕೂಪಕ್ಕೆ ಸಿಕ್ಕು ಸಮಾಜ ತಲುಪಿರುವ ದಯನೀಯ  ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಇದು. ಅಂಬೇಡ್ಕರ್‍ರಂತಹ ಮಹಾನ್ ಜ್ಞಾನಿಗೇ  ಈ ಸಮಾಜ ಮನೆ ಕೊಡಲು ನಿರಾಕರಿಸಿತೆಂದರೆ ಇನ್ನು ನಮ್ಮಂತಹ ಸಾಮಾನ್ಯ ಅಸ್ಪøಶ್ಯರ ಪಾಡೇನಾಗಬೇಡ! ಅದೂ ಅಂಬೇಡ್ಕರರು  ಈ ಜಾತಿವಾದಿಗಳಿಗೋಸ್ಕರ  ತಮ್ಮ  ಹೆಸರನ್ನು ’ಅಡಲ್ಜಿ ಸೊರಾಬ್ಜಿ’ ಎಂದು ಸುಳ್ಳು ಕೂಡ ಹೇಳಬೇಕಾಯ್ತು!

ಅಂದಹಾಗೆ ಈಗ ಬೇರೆ ಏನು? ದಲಿತರಿಗೆ ಮೇಲ್ಜಾತಿಗಳವರು ಮನೆಕೊಡುತ್ತಾರೆಯೇ?  ಖಂಡಿತ ಇಲ್ಲ. ಅದೂ ಕೊಟ್ಟರೂ  ದಲಿತರು ಸುಳ್ಳು ಜಾತಿ ಹೇಳಬೇಕಷ್ಟೆ. ಮಹದೇವಯ್ಯ ಎಂಬ ತಮ್ಮ ಹೆಸರನ್ನು  ಮಹದೇವೇಗೌಡ, ಮಹದೇವಪ್ಪ, ಮಹದೇವಾಚಾರ್, ಮಹದೇವ ಶೆಟ್ಟಿ ಹೀಗೆ ಬದಲಿಸಿಕೊಂಡು ಸುಳ್ಳು ಹೇಳಬೇಕಷ್ಟೆ! ಅಕಸ್ಮಾತ್  ಮೇಲ್ಜಾತಿ ಜನರಿಗೆ  ಇವರ ಒರಿಜಿನಲ್ ಜಾತಿ ಗೊತ್ತಾದರೆ? ಇವರ ಪರಿಸ್ಥಿತಿ ಅಂಬೇಡ್ಕರರಿಗಿಂತೇನು ಭಿನ್ನವಾಗಿರಲಿಕ್ಕಿಲ್ಲ. ಒಂದಂತು ನಿಜ, ಸ್ವಾಭಿಮಾನದ ಜ್ಯೋತಿ ಎದುರಿಸಿದ ಕಷ್ಟದ ಕ್ಷಣಗಳವು.

ಗೋರೆಗಾಂವ್‍ಗೆ ಹೋಗುವಾಗ ಆ ಕಾಡುಗತ್ತಲಲ್ಲಿ  ಬಾಬಾಸಾಹೇಬರ  ಆ ಸುಂದರ ದೇಹ, ಮಗುವಿನ ಮನಸ್ಸು ಅದೆಷ್ಟು ನೊಂದಿರಬೇಡ? ನೀರು ಆಹಾರ ಇಲ್ಲದೆ ಅದೆಷ್ಟು ದಣಿದಿರಬೇಡ? ಹಿಂದೂ ಜಾತಿವ್ಯವಸ್ಥೆ ಕಂಡರೆ  ಸಿಟ್ಟು ಬರುವುದು  ಈ ಕಾರಣಕ್ಕೆ.  ಮೇಲು-ಕೀಳು ವ್ಯವಸ್ಥೆ  ಸೃಷ್ಟಿಸಿ, ಸ್ಪøಶ್ಯ-ಅಸ್ಪøಶ್ಯ ಎಂಬ ಅಂತರ ಸೃಷ್ಟಿಸಿ  ತಮ್ಮೊಳಗೇ ಇರುವ  ಕೆಲವರನ್ನು  ಪ್ರಾಣಿಗಳಿಗಿಂತ ಹೀನಾಯವಾಗಿ  ಕಂಡು ನಿರಂತರ ದೌರ್ಜನ್ಯ  ಎಸಗುತ್ತಿರುವ ಅಮಾನವೀಯ ಸಂಸ್ಕøತಿಯದು. ಇಂತಹ ಅಮಾನವೀಯ ಸಂಸ್ಕøತಿಯು ಮಾನವೀಯತೆಯ  ಸಾಕಾರದಂತಿರುವ ಅಂಬೇಡ್ಕರರ ವಿರುದ್ಧ  ನಡೆಸಿರುವ ದೌರ್ಜನ್ಯವಿದೆಯಲ್ಲಾ ಅದು ಎಂದೂ ಕ್ಷಮಿಸಲಾರದಂಥದ್ದು. ಶೋಷಿತ ಸಮುದಾಯ, ತನ್ನ ನಾಯಕನಿಗೆ  ಅಪಮಾನ  ಎಸಗಿರುವ ಆ ಅನಾಗರೀಕ ಸಮಾಜವನ್ನು ಎಂದಿಗೂ ಕ್ಷಮಿಸುವುದಿಲ್ಲ. ಕ್ಷಮಿಸಲೂ ಬಾರದು.

ಹಾಗಿದ್ದರೆ ಆ ಅನಾಗರೀಕ ಸಮಾಜಕ್ಕೆ,  ಅದು ಎಸಗಿರುವ ಪಾಪಕ್ಕೆ ಶಿಕ್ಷೆ? ಶೋಷಿತರು ಸ್ವಾಭಿಮಾನಿಗಳಾಗುವುದು. ಅಂಬೇಡ್ಕರರ  ಮಾರ್ಗದಲ್ಲಿ ಉತ್ತಮ ಶಿಕ್ಷಣ ಪಡೆದು  ಶೋಷಿತ ಸಮುದಾಯಗಳು  ಸ್ವಾಭಿಮಾನದ  ಮೇರು ಪರ್ವತಗಳಾಗುವುದು. ಯಾಕೆಂದರೆ ನಮ್ಮನ್ನು ಕಂಡರೆ ಆಗದವರ ಎದುರಲ್ಲಿ ನಾವು ಇನ್ನೂ ಉತ್ತಮ ಮಟ್ಟದಲ್ಲಿ  ಬದುಕುವುದಿದೆಯಲ್ಲಾ, ಅವರಿಗಿಂತ ಎಲ್ಲದರಲ್ಲೂ ಒಂದು ಕೈ ಮೇಲೆನಿಸಿಕೊಳ್ಳುವುದಿದೆಯಲ್ಲಾ ದೌರ್ಜನ್ಯಕೋರರನ್ನು ಅದಕ್ಕಿಂತ ಮಾನಸಿಕವಾಗಿ ಕುಗ್ಗಿಸುವ ಅಂಶ ಬೇರೊಂದಿರಲಿಕ್ಕಿಲ್ಲ. ಅವರು ಕುಗ್ಗಿದರೆಂದರೆ ಅಂಬೇಡ್ಕರ್ ಗೆದ್ದರೆಂದೇ ಅರ್ಥ. ಈ ನಿಟ್ಟಿನಲಿ ಶೋಷಿತ ಸಮುದಾಯ ಎಚ್ಚೆತ್ತುಕೊಳ್ಳಲಿ. ತನ್ನ ಎದೆಯಲ್ಲಿ ಅಂಬೇಡ್ಕರರ ಸ್ವಾಭಿಮಾನದ ಕೆಚ್ಚನ್ನು ತುಂಬಿಕೊಳ್ಳಲಿ. ತನ್ಮೂಲಕ  ದೌರ್ಜನ್ಯಕೋರರಿಗೆ ತಕ್ಕ ಉತ್ತರ ನೀಡಲಿ.

ಆಕರ ಗ್ರಂಥಗಳು

  1. Dr.Babasaheb Ambedkar writings and speeches (vol.17. part III, P.120,123,124,127)
  2. Ibid,P.108 
  3. Ibid,P.108 
  4. Ibid,P.109, 110

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ಅಂತರಂಗ1 day ago

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

~ ಯೋಗೇಶ್ ಮಾಸ್ಟರ್ ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು. ಈಗ...

ದಿನದ ಸುದ್ದಿ3 days ago

ವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ

ಸುದ್ದಿದಿನ,ಬೆಂಗಳೂರು:ಕೋಡಿಪಾಳ್ಯದಲ್ಲಿರುವ ವಿಶ್ವ ವೆಂಕಟೇಶ್ವರ ವಿದ್ಯಾಧಾನ ಕೇಂದ್ರದ ವಿರುದ್ಧ ಪಕ್ಕದಲ್ಲಿರುವ ವಿಠಲ ರುಕ್ಮಿಣಿ ಮಠದಿಂದ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿ ಸಂಸ್ಥೆಯ ಹೆಸರಿಗೆ ಧಕ್ಕೆ ತರುವ ಹುನ್ನಾರ ಕಳೆದ 3...

ದಿನದ ಸುದ್ದಿ6 days ago

ಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಸುದ್ದಿದಿನ,ದಾವಣಗೆರೆ: ಅಪರೂಪದ ಲಿವರ್ (ಯಕೃತ್ತಿನ) ಟ್ಯೂಮರ್ನಿಂದ ಬಳಲುತ್ತಿದ್ದ 56 ವರ್ಷದ ಮಹಿಳೆಗೆ ಇಲ್ಲಿನ ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ....

ಅಂತರಂಗ6 days ago

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

~ಯೋಗೇಶ್ ಮಾಸ್ಟರ್, ಚಿಂತಕರು ಆಪ್ತ ಸಮಾಲೋಚಕ ಮತ್ತು ಮನೋವೈದ್ಯ ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ...

ದಿನದ ಸುದ್ದಿ1 week ago

ಶಿಕ್ಷಣ ಸಂಸ್ಥೆಗಳು ವೈಚಾರಿಕತೆ ; ವೈಜ್ಞಾನಿಕತೆಯ ಬೆಳಕು ಚೆಲ್ಲುವ ದೀಪಗಳಾಗಲಿ

ಸುದ್ದಿದಿನ,ಚನ್ನಗಿರಿ: ಪಟ್ಟಣದ ಬಸವ ಚೇತನ ಎಜುಕೇರ್ ಪ್ರಿ – ಪ್ರೈಮರಿ ಸ್ಕೂಲ್ ನಲ್ಲಿ “ಬಂಧುತ್ವ ಫೌಂಡೇಶನ್ ‘ ವತಿಯಿಂದ ಇಂದು ಶ್ರಾವಣಮಾಸದ ನಾಗರ ಪಂಚಮಿ ಪ್ರಯುಕ್ತ ”...

ಅಂತರಂಗ1 week ago

ದಿಮಾಗಿ ನಕ್ಸಲ್-ನಗರ ನಕ್ಸಲ್

~ರಹಮತ್ ತರೀಕೆರೆ, ಚಿಂತಕರು ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ...

ದಿನದ ಸುದ್ದಿ1 week ago

ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ: ವಿವಿಐಎಸ್‌ನಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ

ಸುದ್ದಿದಿನ,ಬೆಂಗಳೂರು: ವಿಶ್ವ ವೆಂಕಟೇಶ್ವರ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ “ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ” ಎಂಬ ಆಶಯದೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಟ್ಟಾ ಬಾಲಾಜಿ ಬಾಬು...

ದಿನದ ಸುದ್ದಿ1 week ago

ಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ

ಸುದ್ದಿದಿನ,ಚಿತ್ರದುರ್ಗ : ಸ್ವಾತಂತ್ರ್ಯವೆಂದರೆ ಕೇವಲ ಹಕ್ಕುಗಳ ಅನುಭವವಲ್ಲ, ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಸಹ ಹೌದು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸದಾ ಸ್ಮರಿಸಬೇಕು....

ದಿನದ ಸುದ್ದಿ1 week ago

ನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ

ಸುದ್ದಿದಿನ,ದಾವಣಗೆರೆ: ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ, ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನವಿಲೇಹಾಳು ಗ್ರಾಮದಲ್ಲಿ ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು...

ದಿನದ ಸುದ್ದಿ2 weeks ago

ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ

ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ...

Trending